21/2/2019ರ `ಸುಧಾ'ದಲ್ಲಿ ಪ್ರಕಟವಾಗಿರುವ ನನ್ನ ಚಿತ್ರ- ಲೇಖನ:
ನಾವು ಪೋರ್ಚುಗಲ್ ಮತ್ತು ಸ್ಪೇನ್ ಪ್ರವಾಸ ಹೊರಟಿದ್ದೆವು. ನಮ್ಮ ಪ್ರವಾಸ ಪೋರ್ಚುಗಲ್ ರಾಜಧಾನಿ ಲಿಸ್ಬನ್ನಿಂದ ಆರಂಭವಾಗುತ್ತಿತ್ತು. ಲಿಸ್ಬನ್ನ ವಿಮಾನ ನಿಲ್ದಾಣದಿಂದ ಹೊರಬಂದೊಡನೆಯೇ ಪಕ್ಕದಲ್ಲಿ ಮೆಟ್ರೋ ಸ್ಟೇಶನ್ ಇದ್ದು ಅಲ್ಲಿಂದ ನಾವು ಹೋಗಬೇಕಾಗಿದ್ದ ಹೋಟೆಲಿಗೆ ಹೊರಡಲು ಏರ್ಪೋರ್ಟ್ ಮೆಟ್ರೋ ಸ್ಟೇಶನ್ ಪ್ರವೇಶಿಸಿದೆವು. ಎಲಿವೇಟರ್ ಇಳಿದು ಕಾರಿಡಾರ್ ಪ್ರವೇಶಿಸುತ್ತಿರುವಂತೆಯೇ ವ್ಯಂಗ್ಯಚಿತ್ರಕಾರನಾಗಿರುವ ನನಗೆ ಅಚ್ಚರಿ ಕಾದಿತ್ತು. ಕಾರಿಡಾರ್ನ ಎರಡೂ ಬದಿಯಲ್ಲಿ ಕಪ್ಪುಬಿಳುಪಿನ ಕ್ಯಾರಿಕೇಚರ್(ವ್ಯಂಗ್ಯ ಭಾವಚಿತ್ರಗಳು)ಗಳಿದ್ದವು. ನಾನು ಮೆಟ್ರೋ ಸ್ಟೇಶನ್ ಮತ್ತು ಇತರೆಡೆಗಳಲ್ಲಿ ಹಲವಾರು ರೀತಿಯ ಕಲಾಕೃತಿಗಳನ್ನು ನೋಡಿದ್ದೇನೆ. ಆದರೆ ಈ ರೀತಿಯ `ಶಾಶ್ವತ' ವ್ಯಂಗ್ಯಚಿತ್ರಗಳನ್ನು ನೋಡಿದ್ದು ಇದು ಮೊದಲಬಾರಿ. ವ್ಯಂಗ್ಯಚಿತ್ರಕಾರರನ್ನೂ ಇತರ ಕಲಾವಿದರಂತೆ ಗುರುತಿಸಿ, ವ್ಯಂಗ್ಯಚಿತ್ರ ಕಲೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಹೆಮ್ಮೆಯಿಂದ ಪ್ರದರ್ಶಿಸಿ ಇತರ ಕಲೆಗಳ ಗೌರವ ಸ್ಥಾನ ಕೊಡುವಂತೆ ಕೊಟ್ಟಿರುವುದು ಕಂಡು ಸಂತೋಷವಾಯಿತು.
ಚಿತ್ರ 01: ಲಿಸ್ಬನ್ನ ಏರ್ಪೋರ್ಟ್ ಮೆಟ್ರೋ ಸ್ಟೇಶನ್ನಿನ ಗೋಡೆಯ ಮೇಲಿನ
ವ್ಯಂಗ್ಯಚಿತ್ರಗಳು. ಬಲಭಾಗದಿಂದ ಮೊದಲ ವ್ಯಂಗ್ಯಚಿತ್ರ ಪೋರ್ಚುಗಲ್ನ ಪ್ರಖ್ಯಾತ
ವಾಸ್ತುಶಿಲ್ಪಿ ಕ್ಯಾಸಿಯಾನೊ ಬ್ರಾಂಕೋರವರದು.
ಇದೇ ರೀತಿ ವ್ಯಂಗ್ಯಚಿತ್ರಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಗೌರವ ನೀಡುವ ಕಾರ್ಯ ಇತರ ದೇಶಗಳಲ್ಲೂ ಅನುಸರಿಸಲಾಗುತ್ತಿದೆ. ಮಲೇಷಿಯಾದ ಪೀನಾಂಗ್ ದ್ವೀಪದಲ್ಲಿನ ಜಾರ್ಜ್ಟೌನ್ ವಿಶ್ವಸಂಸ್ಥೆಯ ಯುನೆಸ್ಕೊ ಪಾರಂಪರಿಕ ಸ್ಥಳವೆಂದು ಗುರುತಿಸಲ್ಪಟ್ಟಿದ್ದು ಅದರ ನೆನಪಿಗಾಗಿ ಅದರ ಪ್ರಮುಖ ರಸ್ತೆಗಳಲ್ಲಿ ಆ ಊರಿನ, ರಸ್ತೆಯ ಮಾಹಿತಿಯನ್ನು ನೀಡುವ ಕಬ್ಬಿಣದ ಸರಳುಗಳಿಂದ ನಿರ್ಮಿಸಿದ 53 ವ್ಯಂಗ್ಯಚಿತ್ರಗಳನ್ನು ನಾಡಿನ ಹೆಸರಾಂತ ವ್ಯಂಗ್ಯಚಿತ್ರಕಾರರಿಂದ ರಚಿಸಿ ಸ್ಥಾಪಿಸಿದ್ದಾರೆ.
ಚಿತ್ರ 02: ಪ್ರಖ್ಯಾತ ಸಂಗೀತ ರಚನೆಕಾರ, ನಿರ್ವಾಹಕ ಮತ್ತು ಸಂಗೀತತಜ್ಞ ಲೋಪೆಸ್ ಗ್ರಾಕಾ. ಈತ ಪೋರ್ಚುಗೀಸ್ ಕಮ್ಯೂನಿಸ್ಟ್ ಪಕ್ಷದ ಸದಸ್ಯನಾಗಿದ್ದ ಮತ್ತು ಸಲಾಜಾರ್ನ ಎಸ್ಟಾಡೊ ನೋವೋ ಆಡಳಿತದ ಕಟ್ಟಾ ವಿರೋಧಿಯಾಗಿದ್ದ.
ಲಿಸ್ಬನ್ನ ಏರ್ಪೋರ್ಟ್ ಮೆಟ್ರೋ ಸ್ಟೇಶನ್ನಲ್ಲಿಯೂ 52 ವ್ಯಂಗ್ಯ ಭಾವಚಿತ್ರಗಳಿದ್ದು ಅವುಗಳನ್ನು ವ್ಯಂಗ್ಯಚಿತ್ರಕಾರ ಆಂಟೋನಿಯೋ ಮೊರೆರಾ ಆಂಟ್ಯೂನ್ಸ್ ರಚಿಸಿ ಅಮೃತಶಿಲೆಯಲ್ಲಿ ಲೇಸರ್ ಬಳಸಿ ಕತ್ತರಿಸುವ ಮೂಲಕ ನಿರ್ಮಿಸಿದ್ದಾರೆ. ಅವುಗಳನ್ನು ಜುಲೈ 17, 2012ರಂದು ಸಾರ್ವಜನಿಕ ವೀಕ್ಷಣೆಗೆ ಉದ್ಘಾಟಿಸಲಾಯಿತು.
ಚಿತ್ರ 03: ಪೋರ್ಚುಗಲ್ನ ಬಹುಮುಖ ಪ್ರತಿಭೆಯ ಕಲಾವಿದ ಜೋಸ್ ಹಕ್ರ್ಯುಲಾನೊ ಕಾರ್ವಾಲಿಸ್. ಈತ ಚಿತ್ರ ಕಲಾವಿದÀ, ವಿನ್ಯಾಸಕಾರ, ವ್ಯಂಗ್ಯಚಿತ್ರಕಾರ, ಕಾಮಿಕ್ ಪುಸ್ತಕ ಕಲಾವಿದ ಮತ್ತು ಗ್ರಾಫಿಕ್ ಕಲಾವಿದನಾಗಿದ್ದ. ಅಷ್ಟಲ್ಲದೆ ಫೋಟೋಗ್ರಫಿ, ವೇದಿಕೆ ವಿನ್ಯಾಸ ಮತ್ತು ಸಿನೆಮಾಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದ.
ಆಂಟೋನಿಯೋ ಪೋರ್ಚುಗಲ್ನ ಪ್ರಖ್ಯಾತ ವ್ಯಂಗ್ಯಚಿತ್ರಕಾರ. ಈ ಮೆಟ್ರೋ ಸ್ಟೇಶನ್ನಲ್ಲಿ ಸ್ಥಾಪಿಸಲು ಪೋರ್ಚುಗಲ್ನ ಇಪ್ಪತ್ತನೇ ಶತಮಾನದ ಪ್ರಖ್ಯಾತ ಕಲೆ ಮತ್ತು ಸಂಗೀತ ಕಲಾವಿದರ, ನಟರ, ರಾಜಕಾರಣಿಗಳ, ಕ್ರೀಡಾಪಟುಗಳ, ವೈದ್ಯರ, ಲೋಕೋಪಕಾರಿ ಮುಂತಾದವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಆಯ್ಕೆಯ ಮಾನದಂಡಗಳೇನು ಎನ್ನುವುದು ಆಂಟೋನಿಯೋಗೆ ಮಾತ್ರ ತಿಳಿದಿದೆ ಹಾಗೂ ಮೇಲ್ನೋಟಕ್ಕೆ ಕಾಣುವಂತೆ ಅವರಲ್ಲಿ ಬಹುಪಾಲು ಜನರು ಪೋರ್ಚುಗಲ್ನ ಹಿಂದಿನ ಕಮ್ಯೂನಿಸ್ಟ್ ವಿರೋಧಿ ಆಂಟೋನಿಯೋ ಸಾಲಜಾರ್ನ ಎಸ್ಟಡೋ ನೋವೋ ಆಡಳಿತದ ವಿರೋಧಿಗಳೂ, ಟೀಕಿಸುವವರೂ ಆಗಿದ್ದರು. ಅವುಗಳಲ್ಲಿ ಸಾಹಿತಿಗಳಾದ ಜೋಸ್ ಸರಮಗೊ, ಎಕಾ ದ ಕ್ವೆರೋಸ್, ಸೋಫಿಯಾದ ಮೆಲೊ ಬ್ರೆಯ್ನೆರ್, ವ್ಯಂಗ್ಯಚಿತ್ರಕಾರರಾದ ರೆಫೆಲ್ ಬೊರ್ಡಾಲೊ, ಸ್ಟುವರ್ಟ್ ಕರ್ವಾಲೇಸ್, ನಟರಾದ ಆಂಟೋನಿಯೋ ಸಿಲ್ವಾ, ವಾಸ್ಕೊ ಸಂತಾನ, ಸಂಗೀತಗಾರರಾದ ಕಾರ್ಲೋಸ್ ಪೆರೇಡ್ಸ್, ಮರಿಯಾ ಪೈರ್ಸ್, ವೈದ್ಯಕೀಯ ಕ್ಷೇತ್ರದಲ್ಲಿ ನೋಬೆಲ್ ಬಹುಮಾನ ಪಡೆದ ಎಗಾಸ್ ಮೋನಿಜ್, ಫುಟ್ಬಾಲ್ ಕ್ರೀಡಾಪಟು ಯೂಸೆಬಿಯೊ ಮುಂತಾದವರಿದ್ದಾರೆ.
ಚಿತ್ರ 04: ಪೋರ್ಚುಗಲ್ನ ಪ್ರಖ್ಯಾತ ಸಾಹಿತಿ ಸೋಫಿಯಾ ಡಿ ಮೆಲ್ಲೋ ಬ್ರೆಯ್ನೆರ್. ಪಾರ್ಲಿಮೆಂಟ್ ಆಕೆಯನ್ನು ಅತ್ಯುನ್ನತ ರಾಷ್ಟ್ರೀಯ ಪ್ಯಾಂಥಿಯಾನ್ ಸನ್ಮಾನ ನೀಡಿ ಗೌರವಿಸಿತ್ತು.
`ಸಾಧಾರಣವಾಗಿ ಕಾಗದದ ಮೇಲೆ ವ್ಯಂಗ್ಯಚಿತ್ರ ರಚಿಸುವ ನನಗೆ ಈ ರೀತಿ ಮೊದಲ ಬಾರಿಗೆ ಅವುಗಳನ್ನು ಅಮೃತಶಿಲೆಯ ಮೇಲೆ ಲೇಸರ್ ಕಿರಣ ಬಳಸಿ ಬರೆಯುವುದು ಒಂದು ಅಸಾಧಾರಣ ಸವಾಲಾಗಿತ್ತು’ ಎನ್ನುತ್ತಾರೆ ವ್ಯಂಗ್ಯಚಿತ್ರಕಾರ ಆಂಟೋನಿಯೊ. ಇಂದು ಲಿಸ್ಬನ್ನಿನ ಏರ್ಪೋರ್ಟ್ ಮೆಟ್ರೋದಲ್ಲಿರುವ ಆ ವ್ಯಂಗ್ಯ ಭಾವಚಿತ್ರಗಳು ಅಲ್ಲಿ ಹಾದುಹೋಗುವ ಸಾವಿರಾರು ಯಾತ್ರಿಕರಿಗೆ ಪೋರ್ಚುಗಲ್ನ ಇಪ್ಪತ್ತನೇ ಶತಮಾನದ ಅದ್ವಿತೀಯ ವ್ಯಕ್ತಿಗಳನ್ನು ಅಲ್ಲಿನ ಸಂಸ್ಕøತಿಯನ್ನು ವಿಶಿಷ್ಟ ರೀತಿಯಲ್ಲಿ ರಂಜಿಸುವುದರ ಮೂಲಕ ಪರಿಚಯಿಸುತ್ತಿದೆ.
ಚಿತ್ರಗಳು
ಆಂಟೋನಿಯೋ ಮೊರೇರಾ ಆಂಟ್ಯೂನ್ಸ್
ಲಿಸ್ಬನ್ನ ಏರ್ಪೋರ್ಟ್ ಮೆಟ್ರೋದಲ್ಲಿ ವ್ಯಂಗ್ಯಚಿತ್ರಗಳನ್ನು ರಚಿಸಿರುವ ಆಂಟೋನಿಯೋ ಮೊರೇರಾ ಆಂಟ್ಯೂನ್ಸ್ ತಮ್ಮ ವೃತ್ತಿಜೀವನವನ್ನು 1974ರಲ್ಲಿ ಲಿಸ್ಬನ್ನ ದಿನಪತ್ರಿಕೆ `ರಿಪಬ್ಲಿಕಾ'ದಲ್ಲಿ ಪ್ರಾರಂಭಿಸಿದರು. ಅದೇ ವರ್ಷ ವಾರಪತ್ರಿಕೆ `ಎಕ್ಸ್ಪ್ರೆಸ್ಸೊ'ದಲ್ಲೂ ಸಹ ವ್ಯಂಗ್ಯಚಿತ್ರಗಳನ್ನು ನಿಯತವಾಗಿ ಬರೆಯುವ ಒಪ್ಪಂದ ಮಾಡಿಕೊಂಡರು. ಅವರು ತಮ್ಮ ವ್ಯಂಗ್ಯಚಿತ್ರ ಕಲೆಗಾಗಿ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು ವಿಶ್ವದಾದ್ಯಂತ ನೂರಾರು ಪ್ರದರ್ಶನಗಳನ್ನು ಮಾಡಿದ್ದಾರೆ.
ಚಿತ್ರಗಳು
ಆಂಟೋನಿಯೋ ಮೊರೇರಾ ಆಂಟ್ಯೂನ್ಸ್
ಲಿಸ್ಬನ್ನ ಏರ್ಪೋರ್ಟ್ ಮೆಟ್ರೋದಲ್ಲಿ ವ್ಯಂಗ್ಯಚಿತ್ರಗಳನ್ನು ರಚಿಸಿರುವ ಆಂಟೋನಿಯೋ ಮೊರೇರಾ ಆಂಟ್ಯೂನ್ಸ್ ತಮ್ಮ ವೃತ್ತಿಜೀವನವನ್ನು 1974ರಲ್ಲಿ ಲಿಸ್ಬನ್ನ ದಿನಪತ್ರಿಕೆ `ರಿಪಬ್ಲಿಕಾ'ದಲ್ಲಿ ಪ್ರಾರಂಭಿಸಿದರು. ಅದೇ ವರ್ಷ ವಾರಪತ್ರಿಕೆ `ಎಕ್ಸ್ಪ್ರೆಸ್ಸೊ'ದಲ್ಲೂ ಸಹ ವ್ಯಂಗ್ಯಚಿತ್ರಗಳನ್ನು ನಿಯತವಾಗಿ ಬರೆಯುವ ಒಪ್ಪಂದ ಮಾಡಿಕೊಂಡರು. ಅವರು ತಮ್ಮ ವ್ಯಂಗ್ಯಚಿತ್ರ ಕಲೆಗಾಗಿ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು ವಿಶ್ವದಾದ್ಯಂತ ನೂರಾರು ಪ್ರದರ್ಶನಗಳನ್ನು ಮಾಡಿದ್ದಾರೆ.
ಚಿತ್ರ 05: ಮೆಟ್ರೋ ಸ್ಟೇಶನ್ನಿನಲ್ಲಿ ತನ್ನ ಕಲಾಕೃತಿಯೊಂದಿಗೆ ವ್ಯಂಗ್ಯಚಿತ್ರಕಾರ ಆಂಟೋನಿಯೊ.
ಆಂಟೋನಿಯೊ 1992ರಲ್ಲಿ ಪೋಪ್ ಎರಡನೇ ಜಾನ್ ಪಾಲ್ರವರ ವ್ಯಂಗ್ಯಚಿತ್ರ ರಚಿಸಿ ವಿವಾದಕ್ಕೂ ಕಾರಣರಾಗಿದ್ದರು. ಆ ಸಮಯದಲ್ಲಿ ಏಡ್ಸ್ ಕಾಯಿಲೆ ವ್ಯಾಪಕವಾಗಿದ್ದು ಪೋಪ್ ಎರಡನೇ ಜಾನ್ ಪಾಲ್ರವರು ಉಗಾಂಡಾದ ರಾಜಧಾನಿ ಕಂಪಾಲಾಕ್ಕೆ ಭೇಟಿ ನೀಡಿದ್ದಾಗ ಏಡ್ಸ್ನಿಂದ ರಕ್ಷಿಸಿಕೊಳ್ಳಲು ಕ್ರೈಸ್ತ ಧರ್ಮದಲ್ಲಿ ಕಾಂಡೊಮ್ ಬಳಸಲು ಅವಕಾಶವಿಲ್ಲವೆಂದೂ, ಏಡ್ಸ್ ವೈರಸ್ ಹರಡುವುದನ್ನು ತಡೆಯಲು ಲೈಂಗಿಕ ಕ್ರಿಯೆಯಿಂದಲೇ ದೂರವಿರಬೇಕೆಂದು ಹೇಳಿದ್ದಾಗ ಪೋಪ್ ಎರಡನೇ ಜಾನ್ ಪಾಲ್ರವರ ಮೂಗಿಗೆ ಕಾಂಡೊಮ್ ಧರಿಸಿರುವಂತೆ ವ್ಯಂಗ್ಯಚಿತ್ರ ರಚಿಸಿದ್ದರು.
ಆ ವ್ಯಂಗ್ಯಚಿತ್ರ ಪೋರ್ಚುಗಲ್ನಲ್ಲಿ ಬಹಳಷ್ಟು ವಿವಾದಕ್ಕೆ ಕಾರಣವಾಯಿತು ಹಾಗೂ ಸಂಪ್ರದಾಯವಾದಿಗಳೆಲ್ಲ ಅದನ್ನು ಪ್ರತಿಭಟಿಸಿ ಸುಮಾರು ಇಪ್ಪತ್ತು ಸಾವಿರ ಜನ ಸಹಿ ಮಾಡಿ ಆ ವ್ಯಂಗ್ಯಚಿತ್ರ ನಿಷೇಧಿಸಲು ಒತ್ತಾಯಿಸಿದರು. ಆ ವ್ಯಂಗ್ಯಚಿತ್ರ ಕುರಿತು ಪಾರ್ಲಿಮೆಂಟ್ನಲ್ಲೂ ಚರ್ಚೆಗೊಳಗಾಯಿತು. ಆ ವ್ಯಂಗ್ಯಚಿತ್ರ ನಿಷೇಧಕ್ಕೂ ಒಳಗಾಗಲಿಲ್ಲ ಹಾಗೂ ವ್ಯಂಗ್ಯಚಿತ್ರಕಾರನನ್ನೂ ಬಹಿಷ್ಕರಿಸಲಿಲ್ಲ. ಬದಲಿಗೆ ಏರ್ಪೋರ್ಟ್ ಮೆಟ್ರೋ ನಿಲ್ದಾಣದಲ್ಲಿ ಶಾಶ್ವತ ವ್ಯಂಗ್ಯಚಿತ್ರಗಳನ್ನು ರಚಿಸಲು ಆಂಟೋನಿಯೋರವರನ್ನೇ ಸರ್ಕಾರವು ಆಹ್ವಾನಿಸಿತು.
ಚಿತ್ರ 06: ವಿವಾದಕ್ಕೊಳಗಾದ ಪೋಪ್ ಎರಡನೇ ಜಾನ್ ಪಾಲ್ರವರ ವ್ಯಂಗ್ಯಚಿತ್ರ
`ವ್ಯಂಗ್ಯಚಿತ್ರಕಾರ ಈ ರೀತಿಯ ಯಾವುದೇ ಒತ್ತಡಗಳಿಗೆ ಮಣಿಯಬಾರದು ಹಾಗೂ ಈ ರೀತಿಯ ಘಟನೆಗಳು ವೃತ್ತಿ ಸಂಬಂಧಿ ಸಹಜ ಅಪಾಯಗಳು. ವ್ಯಂಗ್ಯಚಿತ್ರಕಾರನ ವೃತ್ತಿಯೇ ಅಪಾಯಗಳಿಂದ ಕೂಡಿರುವಂಥದು. ನಾವೇ ಅಪಾಯಗಳನ್ನು ರಚಿಸುತ್ತೇವೆ ಹಾಗೂ ಅವುಗಳನ್ನು ಎದುರಿಸುತ್ತೇವೆ. ಹೆದರಿಕೆ ಇದ್ದೇ ಇರುತ್ತದೆ ನಿಜ, ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಲು ಹೋರಾಡಲೇ ಬೇಕು' ಎನ್ನುತ್ತಾರೆ ವಿಶ್ವ ಪತ್ರಿಕಾ ವ್ಯಂಗ್ಯಚಿತ್ರ ಸಂಘದ ಸಂಸ್ಥಾಪಕರೂ ಹಾಗೂ ಪ್ರಸ್ತುತ ಅಧ್ಯಕ್ಷರೂ ಆಗಿರುವ ಆಂಟೋನಿಯೊ.
ಕ್ಯಾರಿಕೇಚರ್
ಕ್ಯಾರಿಕೇಚರ್ ಅಥವಾ ವ್ಯಂಗ್ಯ ಭಾವಚಿತ್ರ ಎನ್ನುವುದು ವ್ಯಕ್ತಿಯೊಬ್ಬನ ಕೆಲವು ಲಕ್ಷಣಗಳನ್ನು ಉತ್ಪ್ರೇಕ್ಷೆಗೊಳಿಸಿರುವ ಆದರೆ ನೋಡಿದಾಕ್ಷಣ ಅದೇ ವ್ಯಕ್ತಿಯದೇ ಚಿತ್ರವೆಂದು ಗುರುತಿಸಿರುವಂತೆ ರಚಿಸಿರುವ ಚಿತ್ರ. ಸಾಧಾರಣವಾಗಿ ವ್ಯಂಗ್ಯಚಿತ್ರಗಳಂತೆ ಕ್ಯಾರಿಕೇಚರ್ ಸಹ ನೋಡಿದಾಕ್ಷಣ ನಗು ತರಿಸುತ್ತವೆ. ಕ್ಯಾರಿಕೇಚರ್ ಕಲೆ 16- 17ನೇ ಶತಮಾನದಲ್ಲಿ ಒಂದು ಕಲಾ ಪ್ರಕಾರವಾಗಿ ಹೆಚ್ಚು ಜನಪ್ರಿಯವಾಯಿತು. ಅವು ಇಂದಿಗೂ ಅಷ್ಟೇ ಜನಪ್ರಿಯವಾಗಿವೆ. ಅಂದು ಕಲಾವಿದರು ಇದ್ದಿಲು, ಪೆನ್ಸಿಲ್, ಬಣ್ಣಗಳನ್ನು ಬಳಸಿ ಕ್ಯಾರಿಕೇಚರ್ ಬಳಸುತ್ತಿದ್ದರೆ ಇಂದು ಬಹಳಷ್ಟು ಕಲಾವಿದರು ಡಿಜಿಟಲ್ ಮಾಧ್ಯಮಗಳನ್ನು ಹಾಗೂ ತಂತ್ರಾಂಶಗಳನ್ನು ಬಳಸುತ್ತಿದ್ದಾರೆ.
ಕ್ಯಾರಿಕೇಚರ್ನ ಮೂಲವನ್ನು ಲಿಯೊನಾರ್ಡೊ ಡಾ ವಿಂಚಿಯ ಕಲಾನೇಷ್ವಣೆಯಲ್ಲಿ ಅರಸುತ್ತಾರೆ. ಡಾ ವಿಂಚಿಯ ತತ್ವ ಮತ್ತು ವಿಧಾನಗಳನ್ನು ವಿರೋಧಿಸಿದ ಕೆಲವು ಕಲಾವಿದರು ಕ್ಯಾರಿಕೇಚರ್ಗಳನ್ನು `ಪ್ರತಿರೋಧ ಕಲೆ' ಎಂದೂ ಸಹ ಕರೆದರು. ವ್ಯಂಗ್ಯ ಭಾವಚಿತ್ರಕಾರರು ಮೊದಲಿನಿಂದಲೂ ತಮ್ಮ ಕುಂಚ, ಬಣ್ಣಗಳಿಂದ ಬರಹಗಾರರಿಗಿಂತ ಹೆಚ್ಚು ಪ್ರಭಾವ ಬೀರುವಂಥವರಾಗಿದ್ದರು. ಏಕೆಂದರೆ ಆಗ ಅಕ್ಷರಸ್ಥರು ಕಡಿಮೆ ಇದ್ದು ಓದುವವರನ್ನು ಮಾತ್ರ ತಲುಪುತ್ತಿದ್ದ ಬರಹಗಳಿಗಿಂತ ಎಲ್ಲರನ್ನೂ ತಲುಪಬಲ್ಲಂತಹ ಕ್ಯಾರಿಕೇಚರ್ಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತಿದ್ದವು. ಫ್ರಾನ್ಸ್ನ ನೆಪೋಲಿಯನ್ ಬೋನಾಪಾರ್ಟೆಯ ಹಲವಾರು ಕ್ಯಾರಿಕೇಚರ್ಗಳನ್ನು ರಚಿಸಿದ ಬ್ರಿಟಿಷ್ ಕಲಾವಿದ ಜೇಮ್ಸ್ ಗಿಲ್ರೇ (1756-1815) ಕುರಿತಂತೆ, `ನನ್ನ ಅವನತಿಗೆ ಯೂರೋಪಿನ್ ಎಲ್ಲಾ ಸೈನ್ಯಗಳು ಮಾಡುವ ಹಾನಿಗಿಂತ ಹೆಚ್ಚು ಹಾನಿಯನ್ನು ಗಿಲ್ರೇ ಮಾಡಿದ್ದಾನೆ' ಎಂದ್ದಿದ್ದನಂತೆ.
j.balakrishna@gmail.com
Cartoon of Pope John Paul and Photo of Antonio Morera Antunes used with the Antonio's permission.
5 ಕಾಮೆಂಟ್ಗಳು:
Good Article....
ಸರ್ ಅದ್ಬುತ ಮಾಹಿತಿಪೂರ್ಣ ಬರಹ
Very well written papa!
ಈ ಮಾಹಿತಿ ತುಂಬ ಚೆನ್ನಾಗಿದೆ....
Excellent Article.
ಕಾಮೆಂಟ್ ಪೋಸ್ಟ್ ಮಾಡಿ