ಸೋಮವಾರ, ನವೆಂಬರ್ 08, 2021

ನೆಲೆ ಮತ್ತು ಸಂಸ್ಕೃತಿಯ ನಡುವಿನ ಸಂಘರ್ಷದಲ್ಲಿ ಅಸ್ಮಿತೆಯ ಅನ್ವೇಷಕ ಅಬ್ದುಲ್ ರಜಾಕ್ ಗುರ್ನಾ

 
ನವೆಂಬರ್‌ 2021ರ ʻಸಂವಾದʼ ಪತ್ರಿಕೆಯಲ್ಲಿ ಪ್ರಕಟವಾಗಿರುವ 2021ರ ಸಾಹಿತ್ಯ ಕ್ಷೇತ್ರದ ನೋಬೆಲ್‌ ಪ್ರಶಸ್ತಿ ಪಡೆದ ಅಬ್ದುಲ್‌ ರಜಾಕ್‌ ಗುರ್ನಾರವರ ಪರಿಚಯ.


ನೆಲೆ ಮತ್ತು ಸಂಸ್ಕøತಿಯ ನಡುವಿನ ಸಂಘರ್ಷದಲ್ಲಿ ಅಸ್ಮಿತೆಯ ಅನ್ವೇಷಕ  ಅಬ್ದುಲ್ ರಜಾಕ್ ಗುರ್ನಾ

ಆಫ್ರಿಕಾದ ತಾಂಜಾನಿಯಾ ಮೂಲದ, ಈಗ ಬ್ರಿಟಿಷ್ ನಾಗರಕರಾಗಿರುವ ಅಬ್ದುಲ್ ರಜಾಕ್ ಗುರ್ನಾರವರಿಗೆ 2021ರ ಸಾಹಿತ್ಯಕ್ಕಾಗಿ ನೀಡುವ ನೊಬೆಲ್ ಪ್ರಶಸ್ತಿ ಅವರ "ವಸಾಹತುಶಾಹಿಯ ಪರಿಣಾಮಗಳ ಹಾಗೂ ಸಂಸ್ಕøತಿ ಹಾಗೂ ಭೂಖಂಡಗಳ ನಡುವಿನ ಕಂದಕದಲ್ಲಿ ಸಿಕ್ಕಿಬಿದ್ದ ನಿರಾಶ್ರಿತರ ಅವಸ್ಥೆಯ ಅದ್ಭುತ ಚಿತ್ರಣಕ್ಕಾಗಿ" ಲಭಿಸಿದೆ. 1901ರಿಂದ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಶರೀರಕ್ರಿಯಾಶಾಸ್ತ್ರ ಅಥವಾ ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿ ಕ್ಷೇತ್ರಗಳ ಸಾಧಕರಿಗೆ ನೊಬೆಲ್ ಪ್ರಶಸ್ತಿ ನೀಡುತ್ತಿರುವ ಸ್ವೀಡನ್ನಿನ ನೊಬೆಲ್ ಪ್ರತಿಷ್ಠಾನ ಸಾಹಿತ್ಯ ಕ್ಷೇತ್ರದಲ್ಲಿ ಇದುವರೆಗೆ ಆಫ್ರಿಕಾ ಮೂಲದ ಕರಿಯರಿಗೆ ನಾಲ್ಕು ಪ್ರಶಸ್ತಿಗಳನ್ನು ಮಾತ್ರ ನೀಡಿದೆ. 1986ರಲ್ಲಿ ನೈಜೀರಿಯಾದ ವೋಲೆ ಸೋಯಿಂಕಾ ಸಾಹಿತ್ಯ ಕ್ಷೇತ್ರದಲ್ಲಿ ಮೊದಲಿಗೆ ನೊಬೆಲ್ ಪ್ರಶಸ್ತಿ ಪಡೆದರು, 1992ರಲ್ಲಿ ಡೆರೆಕ್ ವಾಲ್ಕಾಟ್, 1993ರಲ್ಲಿ ಟೋನಿ ಮೋರಿಸನ್ ಹಾಗೂ ಈ ವರ್ಷ ಅಬ್ದುಲ್‍ರಜಾಕ್ ಗುರ್ನಾ.

ಅಬ್ದುಲ್ ರಜಾಕ್ ಗುರ್ನಾರವರು 1948ರಲ್ಲಿ ಪೂರ್ವ ಆಫ್ರಿಕಾದ ಕಡಲಿನ ಜಾಂಜೀಬಾರ್ ದ್ವೀಪದಲ್ಲಿ ಜನಿಸಿದರು. 1963ರಲ್ಲಿ ಜಾಂಜೀಬಾರ್ ಬ್ರಿಟಿಷ್ ವಸಾಹತು ಆಡಳಿತದಿಂದ ಸ್ವಾತಂತ್ರ್ಯ ಪಡೆದನಂತರ ಆಂತರಿಕ ದಂಗೆಗಳಾಗಿ ಅರಬ್ ಮೂಲದ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾದಾಗ 18 ವರ್ಷದ ಗುರ್ನಾ 1968ರಲ್ಲಿ ಇಂಗ್ಲೆಂಡ್‍ಗೆ ವಲಸೆ ಹೋಗಿ ಅಲ್ಲಿಯೇ ತಮ್ಮ ವಿದ್ಯಾಭ್ಯಾಸ ನಡೆಸಿದರು. ಅಲ್ಲಿ ತಮ್ಮ ಸ್ಥಳಾಂತರದ ಅಸಹನೀಯ ಹಿಂಸೆಯ ಅನುಭವಗಳ ಹಿನ್ನೆಲೆಯಲ್ಲಿ ಬರೆಯತೊಡಗಿದರು. ಅವರ ಮಾತೃಭಾಷೆ ಸ್ವಾಹಿಲಿಯಾದರೂ ಇಂಗ್ಲಿಷ್ ಅವರ ಸಾಹಿತ್ಯಿಕ ಭಾಷೆಯಾಯಿತು. "ಜಗತ್ತಿನಲ್ಲಿ ನೆಲೆಯಿಲ್ಲದವನಂತಾಗುವ ವಿಚಾರ ಮತ್ತು ಅನುಭವವೇ ನನ್ನನ್ನು ಬರೆಯಲು ಪ್ರೇರೇಪಿಸಿತು' ಎಂದಿದ್ದಾರೆ. ಪೂರ್ವ ಆಫ್ರಿಕಾದಿಂದ ಯೂರೋಪಿಗೆ ಅಥವಾ ಆಫ್ರಿಕಾದೊಳಗೇ ಆಗಲಿ ವಲಸೆ ಮತ್ತು ಸ್ಥಳಾಂತರವು ಹಾಗೂ ಅಪರಿಚಿತ ಸ್ಥಳಗಳಲ್ಲಿ ಸ್ವಂತ ಚಹರೆಯ ಅನ್ವೇಷಣೆ ಗುರ್ನಾರವರ ಕಾದಂಬರಿಗಳಲ್ಲಿ ಕೇಂದ್ರ ವಸ್ತುವಾಗಿವೆ. 1987ರಿಂದ ಹತ್ತು ಕಾದಂಬರಿಗಳನ್ನು ಹಾಗೂ ಹಲವಾರು ಕತೆ, ಪ್ರಬಂಧಗಳನ್ನು ರಚಿಸಿದ್ದಾರೆ.

ಅವರ ಮೊದಲ ಮೂರು ಕಾದಂಬರಿಗಳು, ಮೆಮೊರಿ ಆಫ್ ಡಿಪಾರ್ಚರ್ (1987), ಪಿಲಿಗ್ರಿಮ್ಸ್ ವೇ (1988) ಮತ್ತು ಡಾಟ್ಟಿ (1990) ಪ್ರಸ್ತುತ ಬ್ರಿಟನ್ ನಲ್ಲಿನ ವಲಸೆ ಬಂದವರ ಅನುಭವಗಳನ್ನು ಬಹು ಆಯಾಮಗಳಲ್ಲಿ ದಾಖಲಿಸುತ್ತವೆ. ಅವರ ನಾಲ್ಕನೇ ಕಾದಂಬರಿ, ಪ್ಯಾರಾಡೈಸ್ (1994) ಮೊದಲ ವಿಶ್ವಯುದ್ಧದ ಸಮಯದ ವಸಾಹತು ಪೂರ್ವ ಆಫ್ರಿಕಾದ ಕತೆಯನ್ನೊಳಗೊಂಡಿದ್ದು ಆ ಕಾದಂಬರಿ ಬುಕರ್ ಬಹುಮಾನಕ್ಕಾಗಿ ನಾಮಕರಣಗೊಂಡಿತ್ತು.

ಅಬ್ದುಲ್ ರಜಾಕ್ ಗುರ್ನಾರವರ ಬರೆಹಗಳಲ್ಲಿ ವ್ಯಕ್ತಿಯೊಬ್ಬನ ಅಸ್ಮಿತೆ ಮತ್ತು ವಲಸೆಗಳಿಂದಾಗುವ ಸ್ಥಳಾಂತರಗಳು ಹಾಗೂ ಅವು ವಸಾಹತುಶಾಹಿ ಮತ್ತು ಗುಲಾಮಗಿರಿಯಿಂದ ಅವು ಹೇಗೆ ಪ್ರಭಾವಿತವಾಗುತ್ತವೆ ಎನ್ನುವುದು ಪ್ರಮುಖವಾಗಿ ಕಂಡುಬರುತ್ತದೆ. ಗುರ್ನಾರವರ ಕತೆ-ಕಾದಂಬರಿಗಳ ಪಾತ್ರಗಳು ತಮ್ಮ ಹೊಸ ಪರಿಸರಗಳಲ್ಲಿ ನಿರಂತರವಾಗಿ ಹೊಸ ಚಹರೆಗಳನ್ನು ತಮಗಾಗಿ ಅನ್ವೇಷಿಸುತ್ತಿರುತ್ತವೆ. ಅವು ನಿರಂತರವಾಗಿ ತಮ್ಮ ಹೊಸ ಬದುಕಿನ ಹಾಗೂ ಗತದ ತಮ್ಮ ಅಸ್ತಿತ್ವಗಳ ನಡುವಿನ ತಾಕಲಾಟಕ್ಕೆ ಒಳಗಾಗಿರುತ್ತವೆ. ಹೊಸ ಭೌಗೋಳಿಕ ಮತ್ತು ಸಾಮಾಜಿಕ ಪರಿಸರಕ್ಕೆ ವಲಸೆ ಹೋಗುವುದರಿಂದ ಉಂಟಾಗುವ ಆಘಾತಕಾರಿ ಪರಿಣಾಮಗಳು ಅವರ ಕೃತಿಗಳಲ್ಲಿ ಕಂಡುಬರುತ್ತದೆ. ಅವರ ಪಾತ್ರಗಳ ಹಾಗೆಯೇ ಅವರೂ ಸಹ ತಮ್ಮ ಹುಟ್ಟಿದ ನಾಡಾದ ಜಾಂಜೀಬಾರ್‍ನಿಂದ ಬ್ರಿಟನ್‍ಗೆ ವಲಸೆ ಬಂದವರು. ಗುರ್ನಾರವರ ಕಾದಂಬರಿಗಳಲ್ಲಿನ ನಾಯಕ ಪಾತ್ರಗಳು ಸಂಸ್ಕøತಿ ಮತ್ತು ಅಪರಿಚಿತ ನಾಡಿನಲ್ಲಿ ಬದುಕು ಅರಸುವ ಪ್ರಯತ್ನಗಳಲ್ಲಿ ತುಮುಲ, ಕೀಳರಿಮೆ ಮತ್ತು ಸಂಘರ್ಷಕ್ಕೊಳಗಾಗುತ್ತವೆ. `ನನ್ನನ್ನೇ ನಾನು ಅವಲೋಕಿಸಿಕೊಳ್ಳಬಲ್ಲ ವಿಧಾನವೊಂದಿದೆ ಹಾಗೂ ಅದನ್ನು ನಾನು ಪರಿಗಣಿಸಿಯೇ ಇರುತ್ತೇನೆ ಎಂಬುದು ನನ್ನ ಓದುಗರಿಗೆ ತಿಳಿದಿರುತ್ತದೆ' ಎನ್ನುವ ಅರಿವು ಪರದೇಶವೊಂದಕ್ಕೆ ವಲಸೆ ಬಂದ ಗುರ್ನಾರವರಿಗೆ ತಿಳಿದಿತ್ತು. `ಸಂಸ್ಕೃತಿ ಅಥವಾ ಜನಾಂಗೀಯ ಅರಿವು, ಭಿನ್ನಭೇದಗಳಿಂದ ಮುಕ್ತರಾಗಿರುವ, ದಿನನಿತ್ಯದ ಜಂಜಾಟದ ಸಾಮಾನ್ಯ ಓದುಗರನ್ನು ನಾನು ಪ್ರತಿನಿಧಿಸುತ್ತಿದ್ದೇನೆ ಎನ್ನುವುದು ನನಗೆ ತಿಳಿದಿತ್ತು ನಾನು ಬರೆಯುವ ಮುನ್ನ ಬಹಳಷ್ಟು ಆಲೋಚಿಸುತ್ತಿದ್ದೆ - ಎಷ್ಟನ್ನು ಹೇಳಬೇಕು, ಅದರ ಬಗ್ಗೆ ನನ್ನ ಅರಿವು ಎಷ್ಟಿದೆ, ನನ್ನ ನಿರೂಪಣೆ ಸುಲಭ ಗ್ರಹಿಕೆಗೆ ದಕ್ಕುತ್ತದೆಯೆ..... ಈ ಎಲ್ಲವನ್ನೂ ತಲೆಯಲ್ಲಿ ತುಂಬಿಕೊಂಡು ಕಾಲ್ಪನಿಕ ಕಥನ ರಚಿಸುವುದಾದರೂ ಹೇಗೆ ಎನ್ನುವುದು ಕಾಡುತ್ತಿತ್ತು' ಎಂದಿದ್ದಾರೆ.

ಗುರ್ನಾರವರ ಎಲ್ಲ ಕತೆ-ಕಾದಂಬರಿಗಳ ವಸ್ತುಗಳೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿರುವ, ಅಪರಿಚಿತ ನಾಡಲ್ಲಿ ಸ್ವಂತ ಚಹರೆಗಳ ಅನ್ವೇಷಣೆಯಾಗಿವೆ. `ನಾನು ನನ್ನದೇ ಸ್ವಂತ ಅನುಭವಗಳನ್ನು ಮಾತ್ರ ದಾಖಲಿಸುತ್ತಿಲ್ಲ, ಬದಲಿಗೆ ಅದು ಈಗಿನ ಸಮಯದ ನಮ್ಮೆಲ್ಲರ ಕತೆಗಳೂ ಆಗಿವೆ. ಸ್ವಂತ ನೆಲೆಯಿಂದ ದೂರ ಪ್ರಯಾಣಿಸುವುದು ಒಂದು ರೀತಿಯ ಅಂತರ ಮತ್ತು ಹೊಸ ದೃಷ್ಟಿಕೋನವನ್ನು ನೀಡುತ್ತದೆ ಹಾಗೂ ಒಂದು ರೀತಿಯ ವಿಸ್ತಾರದ ಮತ್ತು ಹರವಿನ ನೋಟವನ್ನು ಹಾಗೂ ಸ್ವಾತಂತ್ರ್ಯವನ್ನೂ ಸಹ ನೀಡುತ್ತದೆ. ಅದು ಸ್ಮರಣಶಕ್ತಿಯನ್ನು ಹಾಗೂ ಮೆಲುಕು ಹಾಕುವ ಸಾಮಥ್ರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ - ಅದೇ ಲೇಖಕನೊಬ್ಬನ ಫಲವತ್ತಾದ ಭೂಮಿ. ಆ ಕ್ಷಣದ ವಿಚಿತ್ರ ಭಾವನೆ ನಾನು ಯಾವುದೇ ಮುಂದಾಲೋಚನೆಯಿಲ್ಲದೆ ಬಿಟ್ಟುಬಂದ ಬದುಕಿನ, ಜನರ, ಸ್ಥಳದ ಹಾಗೂ ಅಸ್ತಿತ್ವದ ನೆನಪು ಮತ್ತು ಅವುಗಳನ್ನು ನಾನು ಶಾಶ್ವತವಾಗಿ ಕಳೆದುಕೊಂಡ ಭಾವನೆಗಳನ್ನು ಗಾಢವಾಗಿ ತೀವ್ರಗೊಳಿಸಿ ಘಾಸಿಗೊಳಿಸಿದವು'. ಅದೇ ಭಾವನೆ ಅವರ ಕಾದಂಬರಿಗಳಲ್ಲಿನ ಪಾತ್ರಗಳೂ ಸಹ ವ್ಯಕ್ತಪಡಿಸುತ್ತವೆ - ತಮ್ಮ ಗತದ ಕಹಿ ಬದುಕನ್ನು ಹಾಗೂ ನಾಡನ್ನು, ಬಂಧು ಬಾಂಧವರನ್ನು ಬಿಟ್ಟುಬಂದಿರುವ ಪಾಪಪ್ರಜ್ಞೆ ಅವುಗಳಲ್ಲಿ ಕಂಡುಬರುತ್ತವೆ. ಎಷ್ಟೋ ಸಾರಿ, ಆ ರೀತಿ ವಲಸೆ ಬಂದ ಆ ಪಾತ್ರಗಳಿಗೆ ತಮ್ಮ ಗತದ ಕುಟುಂಬಗಳ ನೆನಪುಗಳನ್ನೇ ಅಳಿಸಿಹಾಕುತ್ತವೆ. ಜನಾಂಗೀಯ, ದಾರ್ಮಿಕ, ನೈತಿಕ ಅಥವಾ ಸಾಮಾಜಿಕ ವಿಭಿನ್ನತೆಯ ಹಿನ್ನೆಲೆಗಳಿಂದ ಹೊರಗಿನವನಾಗಿರುವ ಅವಸ್ಥೆ ಅಬ್ದುಲ್ ರಜಾಕ್ ಗುರ್ನಾರವರ ಕಾದಂಬರಿಗಳಲ್ಲಿ ಅತ್ಯಂತ ಪ್ರಬಲ ಕೇಂದ್ರ ವಸ್ತುವಾಗಿದೆ.

ಗುರ್ನಾರವರಿಗೆ ನೊಬೆಲ್ ದೊರೆತಿರುವುದು ಸ್ವೀಡಿಷ್ ಅಕಾಡೆಮಿಯಲ್ಲಿನ `ಪ್ರಗತಿ'ಯ ಸೂಚಕವೆಂದೂ ಹೇಳಲಾಗುತ್ತಿದೆ, ಏಕೆಂದರೆ ಅದು ಇದುವರೆಗೆ ಅದರ ಪ್ರಶಸ್ತಿಗಳು ಬಿಳಿಯರ ಹಾಗೂ ಪುರುಷರ ಪರವಾಗಿವೆ ಎಂಬ ಆರೋಪವೂ ಇದೆ. ಸಾಹಿತ್ಯಕ್ಕೆ 1993ರಲ್ಲಿ ಟೋನಿ ಮೋರಿಸನ್ ಪ್ರಶಸ್ತಿ ಪಡೆದ 28 ವರ್ಷಗಳ ನಂತರ ಅಬ್ದುಲ್‍ರಜಾಕ್ ಗುರ್ನಾರವರಿಗೆ ನೊಬೆಲ್ ದೊರೆತಿದೆ.

                                                                  - ಜೆ.ಬಾಲಕೃಷ್ಣ

2 ಕಾಮೆಂಟ್‌ಗಳು:

Bunde & His Friends ಹೇಳಿದರು...

ಥ್ಯಾಂಕ್ಯೂ ಬಾಲು....ಅಬ್ದುಲ್ ರಜಾಕ್ ಗುರ್ನಾರವರ ಬಗೆಗಿನ ಪರಿಚಯ ಲೇಖನ ಚೆನ್ನಾಗಿ ಮೂಡಿಬಂದಿದೆ... ಅವರ ಬರಹಗಳನ್ನು ಓದಬೇಕೆಂಬ ಆಸಕ್ತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ...

Unknown ಹೇಳಿದರು...

ಗುರ್ನಾರವರ ಬರಹಗಳ ಬಗ್ಗೆ ತಮ್ಮ ಲೇಖನ ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು.