ಭಾನುವಾರ, ಏಪ್ರಿಲ್ 10, 2022

ತಮಿಳು ಅಸ್ಮಿತೆ ಮತ್ತು ವ್ಯಂಗ್ಯಚಿತ್ರ

ಡಾ.ಜೆ.ಬಾಲಕೃಷ್ಣ
j.balakrishna@gmail.com

1964ರ ಜನವರಿಯ 25ನೇ ತಾರೀಕಿನ ಮುಂಜಾನೆಯ ದಿನ. ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಚಿನ್ನಸಾಮಿ ಎಂಬಾತ ತನ್ನ ಕೈಯಲ್ಲಿ ಕ್ಯಾನ್ ಒಂದನ್ನು ಹಿಡಿದು ತನ್ನ ವಯಸ್ಸಾದ ತಾಯಿ, ಯುವ ಪತ್ನಿ ಹಾಗೂ ಎಳೆಯ ಕೂಸೊಂದನ್ನು ಬಿಟ್ಟು ರೈಲ್ವೇ ನಿಲ್ದಾಣದೆಡೆಗೆ ಹೊರಟ. ಅಲ್ಲಿ ರೈಲ್ವೇ ನಿಲ್ದಾಣ ತಲುಪಿದ ಕೂಡಲೇ ಕೈಯಲ್ಲಿದ್ದ ಕ್ಯಾನಿನ ಸೀಮೆ ಎಣ್ಣೆ ತನ್ನ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಜೋರಾಗಿ, `ಇಂತಿ ಒಳಿಕಾ! ತಮಿಳ್ ವಾಳ್ಕಾ!' (ಹಿಂದಿ ನಾಶವಾಗಲಿ, ತಮಿಳು ಬಾಳಲಿ) ಎಂದು ಜೋರಾಗಿ ಕೂಗಿ ಆತ್ಮಾಹುತಿ ಮಾಡಿಕೊಂಡ. ತಮಿಳು ಭಾಷಾಭಿಮಾನದ ಹೆಸರಲ್ಲಿ ತಮಿಳುನಾಡಿನಲ್ಲಿ ಈ ರೀತಿಯ ಹಲವರು ಆತ್ಮಾಹುತಿಗಳಾಗಿವೆ.

1930ರ ದಶಕದಿಂದಲೂ ದಕ್ಷಿಣ ಭಾರತ ಅದರಲ್ಲೂ ಪ್ರಮುಖವಾಗಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರೋಧವಿದೆ. ಬ್ರಿಟಿಷರು ಇಂಗ್ಲಿಷ್ ಭಾಷೆಯನ್ನು ತನ್ನ ಅಧಿಕೃತ ಭಾಷೆಯನ್ನಾಗಿ ಮಾಡಿಕೊಂಡಿತ್ತು. 1937ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಮೊಟ್ಟ ಮೊದಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರದ ಸಿ.ರಾಜಗೋಪಾಲಾಚಾರಿ(ರಾಜಾಜಿ)ಯವರು ಶಾಲೆಗಳಲ್ಲಿ ಕಡ್ಡಾಯ ಹಿಂದಿ ಬೋಧನೆಯ ಆದೇಶ ಹೊರಡಿಸಿದಾಗ ಪೆರಿಯಾರ್ ಇ.ವಿ.ರಾಮಸಾಮಿಯವರು ವಿರೋಧಿಸಿದರು ಹಾಗೂ ವಿರೋಧ ಪಕ್ಷವಾಗಿದ್ದ ಜಸ್ಟೀಸ್ ಪಕ್ಷವು ಸಹ ವಿರೋಧಿಸಿತು. ಈ ವಿರೋಧ, ಪ್ರತಿಭಟನೆ ಹಾಗೂ ಹರತಾಳಗಳು ಮೂರುವರ್ಷಗಳ ಕಾಲ ನಡೆದವು. ರಾಜಾಜಿಯವರ ಈ ಹಿಂದಿ `ವ್ಯಾಮೋಹ'ವನ್ನು ವಿರೋಧಿಸಿ ಸಹ ಹಲವಾರು ಪ್ರತಿಭಟನೆಗಳಾದುವು ಮತ್ತು ಲೇಖನ, ಬರಹಗಳ ಜೊತೆಗೆ ವ್ಯಂಗ್ಯಚಿತ್ರಗಳೂ ಪ್ರಕಟವಾದುವು. 1937`ಕುಟಿ ಅರಕು' ಪತ್ರಿಕೆಯಲ್ಲಿ ಪ್ರಕಟವಾದ `ರಾಜಗೋಪಾಲಾಚಾರಿಯವರ ಸಾಹಸ: ತಮಿಳುತಾಯಿಯ ಮಾನಭಂಗ' ವ್ಯಂಗ್ಯಚಿತ್ರದಲ್ಲಿ `ತುಂಬಿದ ಸಭೆ'ಯಲ್ಲಿ ರಾಜಗೋಪಾಲಾಚಾರಿಯವರು ತಮಿಳುತಾಯಿಯ ವಸ್ತ್ರಾಪಹರಣ ಮಾಡುತ್ತಿದ್ದಾರೆ.

 

ಚಿತ್ರ 1:1937`ಕುಟಿ ಅರಕು' ಪತ್ರಿಕೆಯಲ್ಲಿ ಪ್ರಕಟವಾದ `ರಾಜಗೋಪಾಲಾಚಾರಿಯವರ ಸಾಹಸ: ತಮಿಳುತಾಯಿಯ ಮಾನಭಂಗ' ವ್ಯಂಗ್ಯಚಿತ್ರ

1938ರ ಮೇ 1938`ವಿಟುತಲೈ' ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ರಾಜಗೋಪಾಲಾಚಾರಿಯವರು ತಮಿಳುತಾಯಿಯ ಎದೆಗೆ ಚೂರಿ ಹಾಕುತ್ತಿದ್ದಾರೆ ಹಾಗೂ ತಮಿಳುತಾಯಿಯ ಕೈಯಲ್ಲಿ ಪ್ರಖ್ಯಾತ ತಮಿಳು ಪ್ರಾಚೀನ ಕೃತಿಗಳಾದ `ತೊಳಕೊಪ್ಪೀಯಂ' ಮತ್ತು `ಸಿಲಪ್ಪದಿಕಾರಂ' ಪುಸ್ತಕಗಳಿವೆ.  ರಾಜಗೋಪಾಲಾಚಾರಿಯವರ ಈ `ತಮಿಳು ವ್ಯಾಮೋಹ'ದ ಬಗೆಗಿನ ಜನರ ಸಿಟ್ಟು ಎಷ್ಟಿತ್ತೆಂಬುದನ್ನು ಈ ಮೂಲಕ ತಿಳಿಯಬಹುದು.

 

ಚಿತ್ರ 2: ತಮಿಳುತಾಯಿಯ ಎದೆಗೆ ಚೂರಿ ಹಾಕುತ್ತಿರುವ ರಾಜಗೋಪಾಲಾಚಾರಿ, 1938ರ ಮೇ 1938`ವಿಟುತಲೈ' ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರ

ಸರ್ಕಾರವು ತನ್ನ ಪಟ್ಟು ಸಡಿಲಿಸದೆ ಪ್ರತಿಭಟನಾಕಾರರ ಮೇಲೆ ಹರಿಹಾಯ್ದು ಹೆಂಗಸರು, ಮಕ್ಕಳನ್ನೊಳಗೊಂಡಂತೆ 1198 ಜನರನ್ನು ಬಂಧಿಸಿದರು ಹಾಗೂ ಇಬ್ಬರು ಪ್ರತಿಭಟನಾಕಾರರು ಪ್ರಾಣ ಸಹ ತ್ಯಜಿಸಿದರು. 1939ರಲ್ಲಿ ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಿದ ನಂತರ ಮದ್ರಾಸಿನ ಬ್ರಿಟಿಶ್ ಗವರ್ನರ್ ಲಾರ್ಡ್ ಎರ್‍ಸ್ಕಿನ್ ಕಡ್ಡಾಯ ಹಿಂದಿ ಬೋಧನೆಯ ಆದೇಶವನ್ನು ಹಿಂಪಡೆದರು.

ಭಾರತ ಸ್ವಾತಂತ್ರ್ಯ ಪಡೆದ ನಂತರ ಭಾರತದ ಸಂವಿಧಾನ ರಚನೆಯ ಸಮಯದಲ್ಲಿ ಈ ಸಮಸ್ಯೆ ಪುನಃ ತಲೆ ಎತ್ತಿತು. ಪೆರಿಯಾರ್ ಮತ್ತು ಅವರ ದ್ರಾವಿಡರ್ ಕಳಗಮ್ ಈ ಪ್ರತಿಭಟನೆಗಳ ಮುಂಚೂಣಿಯಲ್ಲಿದ್ದವು. ಭಾರತದ ಸಂವಿಧಾನ ರಚನೆಯ ಸಮಯದಲ್ಲಿ ಸಂವಿಧಾನ ಸಭೆಯು (The Constituent Assembly) ಗಾಢ ಭಿನ್ನಾಭಿಪ್ರಾಯಗಳನ್ನು ಹೊಂದಿತ್ತು- ಕೆಲವರು ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕೆಂದರೆ, ಇನ್ನು ಕೆಲವರು ಅದನ್ನು ವಿರೋಧಿಸಿದರು. ಕೊನೆಗೆ ಸುದೀರ್ಘ ಚರ್ಚೆಯ ನಂತರ ಹಿಂದಿಗೆ `ರಾಷ್ಟ್ರ ಭಾಷೆ' ಎನ್ನುವ ಹೆಸರು ಕೊಡುವ ಬದಲು ಅದನ್ನು ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳೊಂದಿಗೆ ಅಧಿಕೃತ ಭಾಷೆಯೆಂದು ಪರಿಗಣಿಸಲಾಯಿತು ಹಾಗೂ ಇನ್ನು ಹದಿನೈದು ವರ್ಷಗಳ ಸಮಯದಲ್ಲಿ ಇಂಗ್ಲಿಷನ್ನು ಸಂಪೂರ್ಣ ತೊಡಗಿಸಿ ಹಿಂದಿಯನ್ನು ಕೇಂದ್ರ ಮತ್ತು ರಾಜ್ಯಗಳ ನಡುವಿನ ಏಕೈಕ ಸಂಪರ್ಕ ಭಾಷೆಯನ್ನಾಗಿ ಪರಿಗಣಿಸಲು ನಿರ್ಧರಿಸಿತು. ಹೊಸ ಸಂವಿಧಾನ 26ನೇ ಜನವರಿ 1950ರಂದು ಜಾರಿಗೆ ಬಂದಿತು.

ಹದಿನೈದು ವರ್ಷಗಳ ನಂತರ 1965ರಲ್ಲಿ ಭಾರತ ಸರ್ಕಾರ ಹಿಂದಿಯನ್ನು ಏಕೈಕ ಅಧಿಕೃತ ಭಾಷೆಯನ್ನಾಗಿಸುವ ಪ್ರಯತ್ನ ಮಾಡಿದಾಗ ಹಿಂದಿ ಮಾತೃ ಭಾಷೆಯಾಗಿರದ ಹಲವಾರು ರಾಜ್ಯಗಳು ಇಂಗ್ಲಿಷನ್ನೇ ಮುಂದುವರಿಸುವ ಇಚ್ಛೆ ತೋರಿ ಸರ್ಕಾರದ ಪ್ರಯತ್ನವನ್ನು ವಿರೋಧಿಸಿದವು. ತಮಿಳುನಾಡಿನ ದ್ರಾವಿಡರ್ ಕಳಗಂನಿಂದ 1949ರಲ್ಲಿ ವಿಭಜಿತವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿ.ಎಂ.ಕೆ.) ಈ ವಿರೋಧದ ಮುಂಚೂಣಿಯಲ್ಲಿತ್ತು. ಡಿ.ಎಂ.ಕೆ. ನಾಯಕರಾದ ಸಿ.ಎನ್.ಅಣ್ಣಾದುರೈರವರು ಹಿಂದಿ ಹೇರಿಕೆಯನ್ನು ಪ್ರತಿಭಟಿಸಿ ಪ್ರಧಾನ ಮಂತ್ರಿಗಳಿಗೆ ಪತ್ರವೊಂದನ್ನು ಬರೆದರು. ತಮಿಳು ಸಂಸ್ಕøತಿ ಅಕಾಡೆಮಿಯು 1956ರಲ್ಲಿಯೇ ಇಂಗ್ಲಿಷ್ ಕೇಂದ್ರದ ಅಧಿಕೃತ ಭಾಷೆಯಾಗಿರಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹಾಗೂ ಒಂದು ರಾಜ್ಯ ಸರ್ಕಾರ ಮತ್ತು ಇತರ ರಾಜ್ಯ ಸರ್ಕಾರಗಳ ನಡುವಿನ ಸಂಪರ್ಕ ಭಾಷೆಯಾಗಿರಬೇಕುಎಂಬ ಠರಾವೊಂದನ್ನು ಹೊರಡಿಸಿತ್ತು. ಅಣ್ಣಾದುರೈ, `ಪೆರಿಯಾರ್ಇ.ವಿ. ರಾಮಸ್ವಾಮಿ ಮತ್ತು ಸಿ.ರಾಜಗೋಪಾಲಾಚಾರಿಯವರು ಆ ಠರಾವಿಗೆ ಸಹಿ ಮಾಡಿದ್ದರು. ಈ ಹಿಂದೆ ಹಿಂದಿಯ ಬೆಂಬಲಕ್ಕಿದ್ದ ಹಾಗೂ ವ್ಯಂಗ್ಯಚಿತ್ರಗಳಲ್ಲಿ ವಿಡಂಬನೆಗೊಳಗಾಗಿದ್ದ ಸಿ.ರಾಜಗೋಪಾಲಾಚಾರಿಯವರಿಗೆ ಈಗ ಮನಬದಲಾಗಿತ್ತು ಹಾಗೂ ಅವರೂ ಸಹ ಹಿಂದಿ ಹೇರಿಕೆಯನ್ನು ವಿರೋಧಿಸತೊಡಗಿದ್ದರು.

ಹಿಂದಿ ವಿರೋಧಿಸುವವರ ಆತಂಕ ಕಡಿಮೆ ಮಾಡಲು ಪ್ರಧಾನಿ ಜವಹರಲಾಲ್ ನೆಹರೂರವರು 1963ರ ಅಧಿಕೃತ ಭಾಷೆಗಳ ಅಧಿನಿಯಮವನ್ನು ಜಾರಿಗೆ ತಂದರು ಹಾಗೂ ಅದರ ಅನ್ವಯ 1965ರ ನಂತರವೂ ಇಂಗ್ಲಿಷ್ ಅಧಿಕೃತ ಭಾಷೆಯಾಗಿರುವುದು ಖಾತರಿಯಾಗಿತ್ತು. ಆದರೆ ಅಧಿನಿಯಮದ ಪಠ್ಯ `ಹಿಂದಿಯೊಂದಿಗೆ ಇಂಗ್ಲಿಷನ್ನು ಬಳಸಬಹುದುಎಂಬುದು ಡಿ.ಎಂ.ಕೆ.ಯನ್ನು ತೃಪ್ತಿಪಡಿಸಲಿಲ್ಲ ಹಾಗೂ ನೆಹರೂರವರ ಭರವಸೆಯನ್ನು ಮುಂದಿನ ಆಡಳಿತಗಾರರು ಮುಂದುವರಿಸದೇ ಇರಬಹುದು ಎಂಬ ಆತಂಕವನ್ನು ಅವರು ಹೊಂದಿದ್ದರು.

1965ರ ಜನವರಿ 26 ಹತ್ತಿರ ಬಂದಂತೆ ಹಿಂದಿ ವಿರೋಧಿಗಳು ಕಾರ್ಯಪ್ರವೃತ್ತರಾಗತೊಡಗಿದರು. ನೆಹರೂರವರ ಮಾತಿನ ಮೇಲೆ ಅಲ್ಪಸ್ವಲ್ಪ ನಂಬಿಕೆ ಇಟ್ಟರೂ ಪ್ರಬಲವಾಗಿ ಹಿಂದಿ ಪ್ರತಿಪಾದಕರಾಗಿದ್ದ ಹೊಸ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಹಾಗೂ ಅವರ ಹಿರಿಯ ಕ್ಯಾಬಿನೆಟ್ ಸಹೋದ್ಯೋಗಿಗಳಾಗಿದ್ದ ಮೊರಾರ್ಜಿ ದೇಸಾಯ್ ಮತ್ತು ಗುಲ್ಜಾರಿಲಾಲ್ ನಂದಾರವರನ್ನು ನಂಬುವಂತಿರಲಿಲ್ಲ. ಜನವರಿ 26ಕ್ಕೆ ಹತ್ತು ದಿನಗಳಿರುವಂತೆಯೇ ಅಣ್ಣಾದುರೈರವರು ಪ್ರಧಾನಿ ಶಾಸ್ತ್ರಿಯವರಿಗೆ ಪತ್ರವೊಂದನ್ನು ಬರೆದು ಹಿಂದಿ ಹೇರಿಕೆಯ ದಿನವನ್ನು `ಶೋಕಾಚರಣೆಯ ದಿನವನ್ನಾಗಿ ಆಚರಿಸುವುದಾಗಿ ಬರೆದರು. ಅದೇ ಪತ್ರದಲ್ಲಿ ಕುತೂಹಲಕರವಾದ ಮತ್ತೊಂದು ಕೋರಿಕೆಯ ಅಂಶವನ್ನೂ ಸೇರಿಸಿದರು. ಆ ಕೋರಿಕೆ ಏನೆಂದರೆ, ಹಿಂದಿ ಹೇರಿಕೆಯ ದಿನವನ್ನು ಒಂದು ವಾರ ಮುಂದೂಡುವುದಾಗಿತ್ತು. ಇದರಿಂದ ಡಿ.ಎಂ.ಕೆ. ಉತ್ಸಾಹದಿಂದ ರಾಷ್ಟ್ರದ ಗಣರಾಜ್ಯೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವೆಂದು ಅವರು ತಿಳಿಸಿದರು. ಈ ಹಿಂದೆ ಡಿ.ಎಂ.ಕೆ. `ಪ್ರತ್ಯೇಕತಾವಾದಿಯಾಗಿದ್ದು ಪ್ರತ್ಯೇಕ ದ್ರಾವಿಡ ನಾಡು ಬೇಕೆಂಬ ಬೇಡಿಕೆ ಇಟ್ಟಿತ್ತು. ಕ್ರಮೇಣ ಅದು ತನ್ನ ಬೇಡಿಕೆ ಕುಗ್ಗಿಸಿ ತಮಿಳುನಾಡಿಗೆ ಹೆಚ್ಚಿನ ಸ್ವಾಯತ್ತತೆ ಕೋರಿತು. 1963ರಲ್ಲಿ ನಡೆದ ಪಕ್ಷದ ಸಮಾವೇಶವೊಂದರಲ್ಲಿ ಅದು ಸಂಪೂರ್ಣವಾಗಿ ತನ್ನ ಪ್ರತ್ಯೇಕತಾವಾದವನ್ನು ಅಧಿಕೃತವಾಗಿ ತ್ಯಜಿಸಿತು. ಈಗ ಅಣ್ಣಾದುರೈರವರು ಪ್ರಧಾನಿಗಳಿಗೆ ಪತ್ರ ಬರೆದು ಗಣರಾಜ್ಯೋತ್ಸವದಲ್ಲಿ ಡಿ.ಎಂ.ಕೆ. ಪಾಲ್ಗೊಳ್ಳುವುದಾಗಿ ಪತ್ರ ಬರೆದು ಅವರ ಪಕ್ಷವೂ ಸಹ ರಾಷ್ಟ್ರ ಪ್ರೇಮ ಹೊಂದಿದೆಯೆಂಬ ಸೂಚನೆ ನೀಡಿದ್ದರು. 1965ರ ಜನವರಿ 19`ಮುರಸೋಳಿ' ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ತಮಿಳುತಾಯಿ ಕಣ್ಣಿರು ಹಾಕುತ್ತಿದ್ದಾರೆ ಆದರೆ `ರಾಜಕಾರಣಿಗಳು ಹಾಗೂ ಬಾಡಿಗೆ ಬಂಟರು' ಮಚ್ಚುಕತ್ತಿಗಳನ್ನು ಹಿಡಿದು, `ದುಃಖಪಟ್ಟರೆ ಕೈ ಕತ್ತರಿಸುತ್ತೇವೆ, ಕಾಲು ಮುರಿತೇವೆ' ಎನ್ನುತ್ತಿದ್ದರೆ, ಬಂದೂಕು ಹಿಡಿದಾತ, `ದುಃಖ ಪಡಬೇಡ, ದುಃಖ ಪಟ್ಟರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಹೆದರಿಸುತ್ತಿದ್ದಾರೆ.

 

ಚಿತ್ರ 3: `ರಾಜಕಾರಣಿಗಳು ಹಾಗೂ ಬಾಡಿಗೆ ಬಂಟರು': ಕಣ್ಣೀರು ಹಾಕುತ್ತಿರುವ ತಮಿಳುತಾಯಿ - 1965ರಲ್ಲಿ `ಮುರಸೋಳಿ' ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರ

`ನೀವು ತಮಿಳೇ ಮಾತನಾಡಲಿ ಅಥವಾ ಇಂಗ್ಲಿಷ್ ಮಾತನಾಡಲಿ, ಉತ್ತಮ ಭಾರತೀಯರಾಗಲು ಸಾಧ್ಯಎಂದರು ಅಣ್ಣಾದುರೈ. ಸಾಧ್ಯವಿಲ್ಲ ಎಂದಿತು ಕೇಂದ್ರ ಸರ್ಕಾರ. ಹಿಂದಿ ಮಾತನಾಡುವವರು ಹಾಗೂ ಬರೆಯುವವರು ಮಾತ್ರ ಉತ್ತಮ ದೇಶಪ್ರೇಮಿಗಳಾಗಲು ಸಾಧ್ಯ ಎಂದಿತು ಅದು. ಲಾಲ್ ಬಹದ್ದೂರ್ ಶಾಸ್ತ್ರಿಯವರು 26ರ ಜನವರಿ ಹಿಂದಿಯನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಜಾರಿಗೊಳಿಸಲು ಬದ್ಧವಾಗಿರುವುದಾಗಿ ತಿಳಿಸಿದರು. ಹಿಂದಿ ಪ್ರತಿರೋಧ ತೀವ್ರವಾಯಿತು.

ಇಡೀ ಮದ್ರಾಸ್ ರಾಜ್ಯ ಹಿಂದಿ ವಿರೋಧಿ ಪ್ರತಿಭಟನೆಗಳಿಂದ ಭುಗಿಲೆದ್ದಿತು. ಪ್ರದರ್ಶನ, ಧರಣಿ, ಮುಷ್ಕರ, ಬಹಿಷ್ಕಾರಗಳು ಎಲ್ಲೆಡೆ ನಡೆದವು. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳನ್ನು ಬಹಿಷ್ಕರಿಸಿದರು. ಹಿಂದಿ `ಕರಾಳ ದೇವತೆ'ಯ ಪ್ರತಿಕೃತಿಯನ್ನು ಹಳ್ಳಿ ಹಳ್ಳಿಗಳಲ್ಲೂ ಬೆಂಕಿಯಿಟ್ಟು ಸುಟ್ಟರು. ರೈಲ್ವೇ ನಿಲ್ದಾಣ ಮತ್ತು ಅಂಚೆ ಕಚೇರಿಗಳಲ್ಲಿ ಹಿಂದಿ ಲಿಪಿಗಳಿಗೆ ಕಪ್ಪು ಮಸಿ ಬಳಿದರು. ಹಲವಾರು ಮಂದಿ ಆತ್ಮಾಹುತಿ ಮಾಡಿಕೊಂಡರು. ಈ ಆತ್ಮಾಹುತಿಗಳು ತಮಿಳುನಾಡಿನ ಜನರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿದವು, ಇದರಿಂದ ಮತ್ತಷ್ಟು ಮುಷ್ಕರ, ಪ್ರತಿಭಟನೆಗಳು, ಘರ್ಷಣೆಗಳು ನಡೆದವು. ಈ ಪ್ರತಿಭಟನೆಗಳ ತೀವ್ರತೆ ಹಿಂದಿ ವಿರೋಧಿ ಹೋರಾಟದ ನಾಯಕರಿಗೇ ಅಚ್ಚರಿ ತರಿಸುವಂತಿತ್ತು. ಕೇಂದ್ರವೂ ಬೆಚ್ಚಿಬಿದ್ದಿತು. ಆಡಳಿತ ಕಾಂಗ್ರೆಸ್ ಪಕ್ಷದಲ್ಲೂ ಸಹ ಬಿರುಕು ಕಾಣಿಸಿಕೊಳ್ಳಲಾರಂಭಿಸಿತು. ಜನವರಿಯ ಕೊನೆಯ ದಿನ ಬೆಂಗಳೂರಿನಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರು ಸಭೆ ನಡೆಸಿ ಹಿಂದಿ ಭಾಷಿಕವಲ್ಲದ ಪ್ರದೇಶಗಳಲ್ಲಿ ಹಿಂದಿ ಹೇರದಂತೆ ಕೇಂದ್ರಕ್ಕೆ ಮೊರೆಯಿಟ್ಟಿತು. ಇದರಿಂದ ದೇಶದ ಏಕತೆಗೇ ಹಾನಿಯಾಗುವುದಾಗಿ ಸಹ ತಿಳಿಸಿದರು. ಈ ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರಲ್ಲಿ ಪ್ರಮುಖರಾದವರು ಮೈಸೂರಿನ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ, ಬಂಗಾಳ ಕಾಂಗ್ರೆಸ್ಸಿನ ಅತುಲ್ಯ ಘೋಷ್, ಹಿರಿಯ ಕೇಂದ್ರ ಸಚಿವರಾದ ಸಂಜೀವ ರೆಡ್ಡಿ, ಕಾಂಗ್ರೆಸ್ ಅಧ್ಯಕ್ಷರಾದ ಕೆ.ಕಾಮರಾಜ್ ಮುಂತಾದವರು. ಆದರೆ ಅದೇ ದಿನ ತಿರುಪತಿಯಲ್ಲಿದ್ದ ಹಿರಿಯ ಹುದ್ದೆಯ ಕ್ಯಾಬಿನೆಟ್ ಸಚಿವರಾಗಿದ್ದ ಮೊರಾರ್ಜಿ ದೇಸಾಯಿರವರು, `ಹಿಂದಿ ಕಲಿಯುವುದರಿಂದ ತಮಿಳರು ಭಾರತದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಬಲ್ಲರು, ಮದ್ರಾಸಿನ ಕಾಂಗ್ರೆಸ್ ನಾಯಕರು ತಮಿಳರು ಮಾಡುತ್ತಿರುವ ತಪ್ಪನ್ನು (ಹಿಂದಿ ವಿರೋಧಿಸುತ್ತಿರುವುದನ್ನು) ಜನರಿಗೆ ಮನದಟ್ಟು ಮಾಡಿ ಅವರ ಮನವೊಲಿಸಬೇಕು' ಎಂಬ ಹೇಳಿಕೆ ನೀಡಿದರು. ಅಷ್ಟೇ ಅಲ್ಲ, ಅವರು 1950ರಲ್ಲೇ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿಬಿಟ್ಟಿದ್ದರೆ ಈ ರೀತಿಯ ಹಿಂದಿ ವಿರೋಧ ಭಾವನೆ ಇಷ್ಟು ಸಬಲಗೊಳ್ಳುತ್ತಿರಲಿಲ್ಲ ಎಂದೂ ಹೇಳಿದರು.

ಇಂತಹ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಿದವರು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು. ಮೊರಾರ್ಜಿ ದೇಸಾಯಿಯಂತಹ ಹಿಂದಿ ಅಂದಾಭಿಮಾನಿಗಳ ಕಡೆಗೆ ಅವರ ಒಲವಿದ್ದರೂ, ಪ್ರಧಾನಿಯಾದುದರಿಂದ ಅವರು ವಿರೋಧದ ದನಿಗಳನ್ನೂ ಆಲಿಸಬೇಕಿತ್ತು. ಅಷ್ಟಲ್ಲದೆ ಮದ್ರಾಸಿನ ಇಬ್ಬರು ಕೇಂದ್ರ ಸಚಿವರು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿ ತಮ್ಮ ಸಚಿವ ಸ್ಥಾನಗಳಿಗೆ ಫೆಬ್ರವರಿ 11ರಂದು ರಾಜೀನಾಮೆ ನೀಡಿದರು. ಅದೇ ದಿನ ಪ್ರಧಾನಿಗಳು ಆಲ್ ಇಂಡಿಯಾ ರೇಡಿಯೋನಲ್ಲಿ `ದುರಂತದ ಘಟನೆ'ಗಳಿಗೆ ತಮ್ಮ ಆತಂಕ ಮತ್ತು ಆಘಾತವನ್ನು ವ್ಯಕ್ತಪಡಿಸಿದರು. ಅಷ್ಟಲ್ಲದೆ ತಮಿಳರ ಮನದಲ್ಲಿ ಉಂಟಾಗಿರುವ ಯಾವುದೇ `ತಪ್ಪು ಕಲ್ಪನೆ' ಹೋಗಲಾಡಿಸಲು ಅವರು ನೆಹರೂರವರ ಜನರು ಬಯಸುವವರೆಗೂ ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ಮುಂದುವರಿಸುವ ಭರವಸೆಯನ್ನು ತಾವೂ ಸಹ ಸಂಪೂರ್ಣವಾಗಿ ಗೌರವಿಸುವುದಾಗಿ ತಿಳಿಸಿದರು. ಅದರ ಜೊತೆಗೆ ಜನರಿಗೆ ನಾಲ್ಕು ಹೆಚ್ಚಿನ ಭರವಸೆಗಳನ್ನು ಸಹ ನೀಡಿದರು:

ಮೊದಲನೆಯದು, ಪ್ರತಿಯೊಂದು ರಾಜ್ಯವೂ ತಾನು ಬಯಸುವ ಭಾಷೆಯಲ್ಲಿ (ಅದು ಆ ರಾಜ್ಯದ ಪ್ರದೇಶಿಕ ಭಾಷೆಯೂ ಆಗಿರಬಹುದು) ಅಥವಾ ಇಂಗ್ಲಿಷಿನಲ್ಲಿ ವ್ಯವಹರಿಸುವ ಅನಿರ್ಬಂಧಿತ ಮತ್ತು ಸಂಪೂರ್ಣ ಸ್ವಾತಂತ್ರ್ಯ ಹೊಂದಿರುತ್ತದೆ.

ಎರಡನೆಯದು, ಒಂದು ರಾಜ್ಯವು ಮತ್ತೊಂದು ರಾಜ್ಯದೊಂದಿಗೆ ವ್ಯವಹರಿಸುವಾಗ ಅದರ ಸಂವಹನವನ್ನು ಇಂಗ್ಲಿಷಿನಲ್ಲಿ ಅಥವಾ ಅದರ ದೃಢೀಕೃತ ಇಂಗ್ಲಿಷ್ ಅನುವಾದದಲ್ಲಿ ನಡೆಸಬಹುದು.

ಮೂರನೆಯದು, ಹಿಂದಿಯೇತರ ರಾಜ್ಯಗಳು ಕೇಂದ್ರ ಸರ್ಕಾರದೊಂದಿಗೆ ನಡೆಸುವ ಸಂವಹನವು ಇಂಗ್ಲಿಷಿನಲ್ಲಿರುತ್ತದೆ ಹಾಗೂ ಈ ವ್ಯವಸ್ಥೆಯಲ್ಲಿ ಹಿಂದಿಯೇತರ ರಾಜ್ಯಗಳ ಸಮ್ಮತಿಯಿಲ್ಲದೆ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ.

ನಾಲ್ಕನೆಯದು, ಕೇಂದ್ರ ಸರ್ಕಾರವು ತನ್ನ ಮಟ್ಟದಲ್ಲಿ ತನ್ನ ವ್ಯವಹಾರಗಳನ್ನು ಇಂಗ್ಲಿಷಿನಲ್ಲಿ ನಡೆಸುವುದನ್ನು ಮುಂದುವರಿಸುವುದು.

ನಂತರ, ಶಾಸ್ತ್ರಿಯವರು ಮತ್ತೊಂದು ಪ್ರಮುಖ ಐದನೇ ಭರವಸೆಯನ್ನು ಸಹ ಸೇರಿಸಿದರು ಅಖಿಲ ಭಾರತ ನಾಗರಿಕಾ ಸೇವಾ ಪರೀಕ್ಷೆಗಳನ್ನು ಈ ಹಿಂದಿನಂತೆ ಇಂಗ್ಲಿಷಿನಲ್ಲೇ ನಡೆಸುವುದನ್ನು ಮುಂದುವರಿಸಲಾಗುವುದು (ಹಿಂದಿ ಭಾಷಾಭಿಮಾನಿಗಳು ಅದನ್ನು ಹಿಂದಿಯಲ್ಲಿ ನಡೆಸಲು ಒತ್ತಡ ಹೇರುತ್ತಿದ್ದರು).

ಪ್ರಧಾನಿಗಳ ಈ ಭರವಸೆಗಳು ಹಿಂದಿ ವಿರೋಧಿ ಆಂದೋಳನವನ್ನು ಶಮನಗೊಳಿಸಿತು ಹಾಗೂ ದೇಶದ ಐಕ್ಯತೆಯನ್ನು ಕಾಪಾಡಿತು. ಆದರೆ ಅಷ್ಟೊತ್ತಿಗಾಗಲೇ ತಮಿಳುನಾಡಿನ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿತ್ತು. ಕಾಂಗ್ರೆಸ್ ಪಕ್ಷದ ಹಿಂದಿ ಪ್ರೇಮ ತಮಿಳುನಾಡಿನಲ್ಲಿ ಅದರ ಅಸ್ತಿತ್ವಕ್ಕೆ ಮುಳುವಾಗಿತ್ತು. 1965ರ ಜನವರಿ-ಫೆಬ್ರವರಿ ಹಿಂದಿ ವಿರೋಧಿ ಆಂದೋಲನ ಮದ್ರಾಸ್ ರಾಜಕೀಯದಲ್ಲಿ ಡಿ.ಎಂ.ಕೆ. ಪಕ್ಷವನ್ನು ಪ್ರಮುಖ ಹಾಗೂ ಸದೃಢಗೊಳಿಸಿತು. ಎರಡು ವರ್ಷಗಳ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಅಣ್ಣಾದುರೈರವರ ನಾಯಕತ್ವದಲ್ಲಿ ಡಿ.ಎಂ.ಕೆ. ಪಕ್ಷ ಸುಲಭವಾಗಿ ಜಯಗಳಿಸಿತು, ಕಾಂಗ್ರೆಸ್ ಹೇಳಹೆಸರಿಲ್ಲದೆ ಮದ್ರಾಸಿನಲ್ಲಿ ನಾಮಾವಶೇಷವಾಯಿತು. ಇಂದಿಗೂ ತಮಿಳುನಾಡಿನಲ್ಲಿ ಕಾಂಗ್ರೆಸ್ ಹೆಣಗಾಡುತ್ತಿದೆ.

ಶ್ರೀಮತಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು 1967ರಲ್ಲಿ ಅಧಿಕೃತ ಭಾಷಾ ಅಧಿನಿಯಮದಲ್ಲಿ ತಿದ್ದುಪಡಿ ಮಾಡಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಬಳಸುವುದನ್ನು ಹಾಗೂ `ದ್ವಿಭಾಷಿಕತೆ ಕಾರ್ಯನೀತಿ' ನಿರಂತರವಾಗಿರುವುದನ್ನು  ಖಾತರಿಪಡಿಸಿದರು. ಆದರೂ 1968ರಲ್ಲಿ, 1986ರಲ್ಲಿ, 2014ರಲ್ಲಿ ಹಾಗೂ 2019ರಲ್ಲಿ ಹಿಂದಿ ವಿರೋಧಿ ಆಂದೋಲನಗಳು ತಮಿಳುನಾಡಿನಲ್ಲಿ ನಡೆದವು ಹಾಗೂ ಇಂದಿಗೂ ಬೂದಿಮುಚ್ಚಿದ ಕೆಂಡದಂತೆ ಆಗಾಗ ಹೊಗೆಯಾಡುತ್ತಲೇ ಇದೆ.

ಹಿಂದಿ ವಿರೋಧವೇಕೆ?

ಭಾರತ ಬಹುಭಾಷೆಗಳ ಹಾಗೂ ಬಹುಸಂಸ್ಕøತಿಗಳ ದೇಶ. ಭಾರತದಲ್ಲಿ ಪ್ರಮುಖ ನಾಲ್ಕು ಭಾಷಾ ಗುಂಪುಗಳನ್ನು ಗುರುತಿಸಬಹುದು – (1) ಇಂಡೋ-ಆರ್ಯನ್ (ಹಿಂದಿ, ಉರ್ದು, ಮರಾಠಿ, ಪಂಜಾಬಿ, ಗುಜರಾತಿ, ಬಂಗಾಲಿ, ಅಸ್ಸಾಮಿ ಮುಂತಾದುವು), (2) ದ್ರಾವಿಡ (ತಮಿಳು, ಕನ್ನಡ, ತೆಲುಗು, ಮಲಯಾಳಂ ಮುಂತಾದುವು), (3) ಟಿಬೆಟೊ-ಬರ್ಮನ್ (ಲಡಾಖ್ ಮತ್ತು ಈಶಾನ್ಯ ಭಾರತದ ಬಹುಪಾಲು ಭಾಷೆಗಳು ಮತ್ತು (4) ಆಸ್ಟ್ರೋಏಷಿಯಾಟಿಕ್ (ಮುಂಡಾ, ಖಾಸಿ ಮುಂತಾದವು) ಭಾಷೆಗಳು. ಇಂಡೋ-ಆರ್ಯನ್ ಭಾಷೆಗಳು ಮೂಲಭೂತವಾಗಿ ಸಂಸ್ಕøತ ಮತ್ತು ಪ್ರಾಕೃತದಿಂದ ರೂಪುಗೊಂಡವು ಹಾಗೂ ಇಸ್ಲಾಮಿಕ್ ಪ್ರಭಾವದಿಂದಾಗಿ ಅರಾಬಿಕ್ ಹಾಗೂ ಪರ್ಷಿಯನ್ ಪದಗಳು ಅವುಗಳೊಂದಿಗೆ ಸಮ್ಮಿಳಿತಗೊಂಡವು. ಅದಾದ ನಂತರ ಯೂರೋಪಿಯನ್ ವಸಾಹತುಶಾಹಿಯಿಂದಾಗಿ ಯೂರೋಪಿಯನ್ ಪದಗಳು ಸಹ ಸೇರಿಕೊಂಡವು. ದ್ರಾವಿಡ ಭಾಷೆಗಳು ಹಳೆಯ ತಮಿಳಿನಿಂದ ಟಿಸಿಲೊಡೆದಿದ್ದರೂ ಅವುಗಳಲ್ಲಿ ಸಂಸ್ಕø, ಅರಾಬಿಕ್, ಪರ್ಷಿಯನ್, ಯೂರೋಪಿಯನ್ ಭಾಷೆಯ ಪದಗಳೂ ಸಹ ಕಾಲಕ್ರಮೇಣ ಸೇರಿಕೊಂಡಿವೆ. ಇಂದು ನಾವು ದಿನನಿತ್ಯ ಬಳಸುವ ದ್ರಾವಿಡ ಮೂಲದ ಭಾಷೆಗಳಲ್ಲಿ ಹೇರಳವಾಗಿ ಸಂಸ್ಕøತದ ಪದಗಳಿವೆ.

ಕಳೆದ ಶತಮಾನದ ಪ್ರಾರಂಭದಿಂದಲೂ ಶೈವಪಂಥದ ಅನುಯಾಯಿಗಳಿಗೆ ಸಂಕೀರ್ಣ ಸವಾಲುಗಳು ಎದುರಾಗಿದ್ದವು.  ವಸಾಹತುಶಾಹಿಯ ನಿರೂಪಣೆಗಳಲ್ಲಿನ ದ್ರಾವಿಡ ಆಚರಣೆಗಳ ವಿಡಂಬನೆಯನ್ನು ಸರಿಪಡಿಸುವುದು ಅಂತಹ ಒಂದು ಸವಾಲಾಗಿದ್ದರೆ, ಮತ್ತೊಂದೆಡೆ ಅದೇ ನಿರೂಪಣೆಗಳಲ್ಲಿನ ಸರಕು ನವ ಹಿಂದೂಧರ್ಮದ ಮತ್ತು ಅದರ ಬಳುವಳಿಯಾದ ಭಾರತೀಯ ರಾಷ್ಟ್ರೀಯವಾದವನ್ನು ಎದುರಿಸಲು ಸಹಕಾರಿಯಾಗುವಂತಿತ್ತು. ಅಂತಹ ಸರಕುಗಳು ಯಾವುವೆಂದರೆ ದ್ರಾವಿಡ ಸಂಸ್ಕøತಿ ಮತ್ತು ಧರ್ಮ ಆರ್ಯನ್ನರು ವಲಸೆ ಬರುವುದಕ್ಕಿಂತಲೂ ಪ್ರಾಚೀನವಾದುದು ಹಾಗೂ ದ್ರಾವಿಡ ಸಂಸ್ಕøತಿ ಈ ಹಿಂದೆ ಇಡೀ ಭಾರತ ಉಪಖಂಡವೆಲ್ಲಾ ವ್ಯಾಪಿಸಿತ್ತು; ತಮಿಳು ಮಾತನಾಡುವ ಬ್ರಾಹ್ಮಣರು ಯಾವುದೇ ರೀತಿಯಲ್ಲಿ ಈ ದ್ರಾವಿಡ ಸಂಸ್ಕøತಿಯ ಭಾಗವಾಗಿರಲಿಲ್ಲ; ಆರ್ಯನ್ನರ ಧಮನಕ ಜಾತಿ ವ್ಯವಸ್ಥೆಯು ಪ್ರಾಚೀನ ತಮಿಳು ಸಮಾಜದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಿರಲಿಲ್ಲ ಹಾಗೂ ಆಗಿನ ತಮಿಳು ಸಮಾಜ ಸಮಾನತೆಯನ್ನು ಹೊಂದಿತ್ತು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಶಿವ ಒಬ್ಬ ದ್ರಾವಿಡ ದೈವ ಎನ್ನುವುದು.

ತಮಿಳುನಾಡಿನಲ್ಲಿ ಹಿಂದಿಯ ಮೇಲಿನ ವಿರೋಧ ಬ್ರಾಹ್ಮಣ ವಿರೋಧಿ ಸ್ವಾಭಿಮಾನ ಆಂದೋಳನದಿಂದ ಪ್ರಾರಂಭವಾಯಿತು. ಅಲ್ಪಸಂಖ್ಯಾತ ಬ್ರಾಹ್ಮಣರು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳ ಮೇಲೆ ಹೊಂದಿರುವ ಪ್ರಬಲ ಹಿಡಿತವನ್ನು ವಿರೋಧಿಸಿ ಪೆರಿಯಾರ್ ರಾಮಸ್ವಾಮಿಯವರು ಜಸ್ಟೀಸ್ ಪಾರ್ಟಿಯ ಮಿತ್ರರೊಂದಿಗೆ ಪ್ರತ್ಯೇಕ ತಮಿಳು ಅಸ್ಮಿತೆಗಾಗಿ ಆಂದೋಳನ ಪ್ರಾರಂಭಿಸಿದರು. ಬ್ರಾಹ್ಮಣರು ತಮ್ಮ ಎಲ್ಲ ಆಚಾರ, ಆಚರಣೆ, ಪೂಜೆ ಪುನಸ್ಕಾರಗಳಲ್ಲಿ ಸಂಸ್ಕøತವನ್ನು ಬಳಸುತ್ತಿದ್ದುದರಿಂದ ಕ್ರಮೇಣ ಬ್ರಾಹ್ಮಣ ವಿರೋಧ ಹಿಂದಿ ವಿರೋಧವಾಗಿ ರೂಪುಗೊಂಡಿತು ಹಾಗೂ ಬ್ರಾಹ್ಮಣರು ಉತ್ತರ ಭಾರತದ ಹಿಂದಿ ಮಾತನಾಡುವ ಏಜೆಂಟರಂತೆ ಕಂಡುಬಂದರು. ತಮಿಳು ರಾಷ್ಟ್ರೀಯವಾದಿಗಳು ತಮ್ಮ ಭಾಷೆ ಮತ್ತು ಚರಿತ್ರೆ ವಿಶಿಷ್ಟ ಹಾಗೂ ಅತ್ಯಂತ ಪ್ರಾಚೀನವಾದುದೆಂದು ತಮಿಳು ಮತ್ತು ಸಂಸ್ಕøತದ ನಡುವೆ ಯಾವುದೇ ಸಂಬಂಧವಿಲ್ಲವೆಂದು ವಾದಿಸಿದರು. ಹಾಗಾಗಿ ಹಿಂದಿ ಹೇರಿಕೆ ಒಂದು ಪ್ರಬಲ ರಾಜಕೀಯ ವಿಷಯವಾಯಿತು ಹಾಗೂ ಇಂದಿಗೂ ಅದು ಮುಂದುವರಿದಿದೆ.

***

`ಕಲಾವಿದ' ಕರುಣಾನಿದಿ

ಡಿ.ಎಂ.ಕೆ. ಪಕ್ಷದ `ಕಲಾವಿದ' ಕರುಣಾನಿಧಿಯವರು (1924-2018) ತಮಿಳುನಾಡಿನ ಅತಿ ದೀರ್ಘಕಾಲ ಮುಖ್ಯಮಂತ್ರಿಗಳಾಗಿದ್ದವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ತಮ್ಮ ಹೈಸ್ಕೂಲು ದಿನಗಳಲ್ಲಿ ಹಿಂದಿ ವಿರೋಧಿ ಚಳುವಳಿಗಳಲ್ಲಿ ಭಾಗವಹಿಸಿದರು. 1938ರಲ್ಲಿ ತಿರುಚಿರಾಪಳ್ಳಿಯಿಂದ ಮದ್ರಾಸಿಗೆ ಹೊರಟ `ತಮಿಳು ಬ್ರಿಗೇಡ್' ಮೆರವಣಿಗೆ ಕಂಡು ಹಾಗೂ ದಳಮುತ್ತು, ನಟರಾಜನ್ ಮತ್ತು ಸ್ಟ್ಯಾಲಿನ್ ಜಗದೀಶನ್ ಮುಂತಾದ ಯುವಕರು ತಮಿಳಿಗಾಗಿ ಪ್ರಾಣತೆತ್ತುದನ್ನು ಕಂಡು ಪ್ರಭಾವಿತರಾದ ಅವರು ತಮ್ಮ ಸಹಪಾಠಿ ಗೆಳೆಯರನ್ನು ಸೇರಿಸಿಕೊಂಡು ಪ್ರತಿ ದಿನ ಸಂಜೆ ತಿರುವರೂರಿನಲ್ಲಿ ತಮಿಳುತಾಯಿಯ ಎದೆಗೆ ಚೂರಿ ಇರಿಯುತ್ತಿರುವ ರಾಜಗೋಪಾಲಾಚಾರಿಯವರ ವ್ಯಂಗ್ಯಚಿತ್ರದ ದೊಡ್ಡ ಪೋಸ್ಟರ್ ಗಾಡಿಯಲ್ಲಿ ಇರಿಸಿಕೊಂಡು ಹಿಂದಿ ವಿರೋಧಿ ಘೋಷಣೆ ಕೂಗುತ್ತಾ ಕರಪತ್ರ ಹಂಚುತ್ತಾ ಮೆರವಣಿಗೆ ಹೋಗುತ್ತಿದ್ದರು. ಅಷ್ಟಲ್ಲದೆ ಆಗಲೇ ಅವರಲ್ಲಿ ಕವಿಯಾಗುವ ಸೂಚನೆಗಳಿದ್ದು ತಮ್ಮ ಗೆಳೆಯರೊಂದಿಗೆ ತಾವೇ ಬರೆದ, `ಎಲ್ಲರೂ ಒಟ್ಟಿಗೆ ಯುದ್ಧಕ್ಕೆ ಹೋಗೋಣ! ಹಿಂದಿಯೆಂಬ ರಕ್ಕಸಿಯನ್ನು ಹಿಂದಕ್ಕೆ ಓಡಿಸೋಣ' ಎಂಬ ಹಾಡಿನ ಸಾಲುಗಳನ್ನು ಹಾಡುತ್ತಿದ್ದರು.

ಕರುಣಾನಿಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ, `ನನ್ನ ತಾಯಿ, ತಂದೆ, ಪತ್ನಿಯರು ಮತ್ತು ಮಕ್ಕಳು, ಸೋದರ, ಸೋದರಿಯರು ನನ್ನೊಂದಿಗೆ ಒಂದು ಕುಟುಂಬವಾಗಿ ಇರುತ್ತಾರೋ ಅಥವಾ ಇಲ್ಲವೋ ತಿಳಿದಿಲ್ಲ ಆದರೆ ಈ (ದ್ರಾವಿಡ) ಆಂದೋಲನ ನನ್ನ ಕುಟುಂಬವಾಗಿದೆ ಹಾಗೂ ನಾನು ಅದರ ಭಾಗವಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಅವರ ಎರಡನೇ ಮದುವೆ ನಡೆದದ್ದು 15ನೇ ಸೆಪ್ಟೆಂಬರ್ 1948ರಂದು. ಆ ದಿನ ಬಂಧುಬಳಗದವರೆಲ್ಲಾ ಅವರ ಮನೆಗೆ ಬಂದಿದ್ದರು ಹಾಗೂ ಬಾಗಿಲಿನಲ್ಲಿಯೇ ಕರುಣಾನಿಧಿಯವರು ಎಲ್ಲರನ್ನೂ ಸ್ವಾಗತಿಸುತ್ತಿದ್ದರು. ಆ ಸಮಯದಲ್ಲಿ ಪೆರಿಯಾರ್ ರಾಮಸ್ವಾಮಿಯವರು ಹಿಂದಿ ವಿರೋಧಿ ಆಂದೋಲನವನ್ನು ಪುನಶ್ಚೈತನ್ಯಗೊಳಿಸುವ ಕರೆ ನೀಡಿದ್ದು ಪ್ರತಿಭಟನಾಕಾರರು ಸ್ಥಳೀಯ ಶಾಲೆಯೊಂದರ ಬಳಿ ಧರಣಿ ಹೂಡಲು ಅವರ ಮನೆಯ ಮುಂದೆ ಮೆರವಣಿಗೆ ಹೊರಟರು. ಕರುಣಾನಿಧಿಯವರು ತಮ್ಮ ಮದುವೆ ಸ್ವಲ್ಪ ಸಮಯದಲ್ಲೇ ನಡೆಯಬೇಕಿದ್ದರೂ ಆ ಮೆರವಣಿಗೆ ಸೇರಿಕೊಂಡು `ಇಂತಿ ಒಳಿಕಾ! ತಮಿಳ್ ವಾಳ್ಕಾ!' (ಹಿಂದಿ ನಾಶವಾಗಲಿ, ತಮಿಳು ಬಾಳಲಿ) ಘೋಷಣೆ ಕೂಗಿಕೊಂಡು ಶಾಲೆಯ ಬಳಿಗೆ ಹೊರಟರು. ಅಲ್ಲಿ ಘರ್ಷಣೆ ನಡೆದು ಪೋಲೀಸರು ಬಹಳಷ್ಟು ಜನರನ್ನು ಅರೆಸ್ಟು ಮಾಡಿದರು. ಅದೃಷ್ಟವಶಾತ್ ಕರುಣಾನಿಧಿಯವರು ಪೋಲೀಸರ ಕೈಗೆ ಸಿಕ್ಕಿ ಬೀಳಲಿಲ್ಲ, ಅಲ್ಲಿಂದ ಮನೆಗೆ ಹಿಂದಿರುಗಿ ತಮ್ಮ ಮನೆಯಲ್ಲಿ ಕಾಯುತ್ತಿದ್ದ ಮದುವೆ ಹೆಣ್ಣಿನೊಂದಿಗೆ ತಮ್ಮ ಮದುವೆ ಶಾಸ್ತ್ರ ಮುಗಿಸಿದರು. ತಮಿಳು ಪರ ಹೋರಾಟಗಳಲ್ಲಿ ಕರುಣಾನಿಧಿಯವರು ಹಲವಾರು ಬಾರಿ ಸೆರೆಮನೆವಾಸ ಅನುಭವಿಸಿದರು.

***

ಶ್ರೀಲಂಕಾದಲ್ಲಿ ತಮಿಳರ ಹೋರಾಟ

ಶ್ರೀಲಂಕಾದಲ್ಲಿ 20ನೇ ಶತಮಾನದ ಕೊನೆಯ ಎರಡು ಮತ್ತು 21ನೇ ಶತಮಾನದ ಮೊದಲ ದಶಕಗಳಲ್ಲಿ ನಡೆದ ಸಿಂಹಳೀ ಮತ್ತು ತಮಿಳರ ನಡುವೆ ನಡೆದ ಜನಾಂಗೀಯ ಘರ್ಷಣೆ, ಹಿಂಸೆಗಳ ಮೂಲವನ್ನು ಭಾಷಾ ಸಂಘರ್ಷದಲ್ಲಿ ಅರಸಬಹುದು. ಶ್ರೀಲಂಕಾದ ಒಟ್ಟು ಜನಸಂಖ್ಯೆಯಲ್ಲಿ ಶೇ.75ರಷ್ಟು ಸಿಂಹಳೀಯರು ಹಾಗೂ ಶೇ.24ರಷ್ಟು ತಮಿಳು ಭಾಷಿಕರಿದ್ದಾರೆ. ಈ ತಮಿಳು ಭಾಷಿಕರಲ್ಲಿ ಶೇ.11ರಷ್ಟು ಶ್ರೀಲಂಕಾ ತಮಿಳರು (ಅಂದರೆ ಸುಮಾರು ಸಾವಿರ ವರ್ಷಗಳ ಹಿಂದೆ ದಕ್ಷಿಣ ಭಾರತದಿಂದ ವಲಸೆ ಹೋದವರು), ಶೇ.9ರಷ್ಟು ಸಿಂಹಳೀ ಮೂರ್‍ಗಳು (ಹದಿನಾರನೇ ಶತಮಾನದಲ್ಲಿ ಪೋರ್ಚುಗೀಸರು ಮುಸಲ್ಮಾನರಿಗೆ ಕೊಟ್ಟ ಹೆಸರು ಹಾಗೂ ಇವರಲ್ಲಿ ಬಹುಪಾಲು ಮೂರರು ತಮಿಳು ಮಾತನಾಡುತ್ತಾರೆ), ಶೇ.4ರಷ್ಟು ಭಾರತೀಯ ತಮಿಳರು (ಹತ್ತೊಂಭತ್ತನೇ ಶತಮಾನದಿಂದೀಚೆಗೆ ಭಾರತದಿಂದ ವಲಸೆ ಹೋದ ತಮಿಳರು) ಹಾಗೂ ಇತರ ಸಣ್ಣ ಸಮುದಾಯಗಳಾದಂತಹ ಮಲಯರು, ಬರ್ಗರ್‍ಗಳು ಮತ್ತು ಇತರರು. 1956ರಲ್ಲಿ ಶ್ರೀಲಂಕಾ ಅಧಿಕೃತ ಭಾಷಾ ಅಧಿನಿಯಮ 33 ಜಾರಿಗೊಳಿಸಿತು ಹಾಗೂ ಅದರನ್ವಯ ಬ್ರಿಟಿಷ್ ವಸಾಹತು ಆಡಳಿತ ಹೇರಿದ್ದ ಹಾಗೂ ಅದುವರೆಗೆ ಅಧಿಕೃತ ಭಾಷೆಯಾಗಿದ್ದ ಇಂಗ್ಲಿಷ್ ಬದಲಿಗೆ ಸಿಂಹಳ ಅಧಿಕೃತ ಭಾಷೆಯಾಯಿತು. ಇದರಿಂದ ತಮಿಳರು ಉದ್ಯೋಗಾವಕಾಶ ಕಳೆದುಕೊಳ್ಳುವುದರಲ್ಲದೆ ತಮ್ಮ ತಾಯ್ನಾಡಾದ ಶ್ರೀಲಂಕಾದಲ್ಲಿಯೇ ಎರಡನೇ ದರ್ಜೆ ನಾಗರಿಕರಾಗಿ ಬಾಳಬೇಕಾಗುತ್ತದೆಂಬ ಆತಂಕ ಮತ್ತು ಅಸಮಾಧಾನ ವ್ಯಕ್ತಪಡಿಸಿದರು. 1958ರಲ್ಲಿ ಶ್ರೀಲಂಕಾ ಸರ್ಕಾರ ತಮಿಳು ಭಾಷಾ (ವಿಶೇಷ ಉಪಬಂಧಗಳು) ಅಧಿನಿಯಮ ಹೊರಡಿಸಿ ಅದರನ್ವಯ ತಮಿಳರು ಪ್ರಧಾನವಾಗಿರುವ ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ತಮಿಳು ಅಧಿಕೃತ ಭಾಷೆ ಎಂದು ಘೋಷಿಸಿದರು. 1978ರ ಸಂವಿಧಾನದ ಅನುಚ್ಛೇದ 18198713ನೇ ತಿದ್ದುಪಡಿ, `ಶ್ರೀಲಂಕಾದ ಅಧಿಕೃತ ಭಾಷೆ ಸಿಂಹಳ' ಆದರೆ `ತಮಿಳು ಸಹ ಒಂದು ಅಧಿಕೃತ ಭಾಷೆ ಹಾಗೂ ಇಂಗ್ಲಿಷ್ ಸಂಪರ್ಕ ಭಾಷೆಯಾಗಿ ಇರುತ್ತದೆ' ಎಂದು ಘೋಷಿಸಿತು. ಇದು ಸಿಂಹಳ ಮತ್ತು ತಮಿಳು ಎರಡೂ ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಘೋಷಿಸಿದ್ದರೂ, ಅದರ ವಾಕ್ಯ ರಚನೆಯಿಂದಾಗಿ ತಮಿಳನ್ನು ಎರಡನೇ ದರ್ಜೆಗೆ ಇಳಿಸಲಾಗಿದೆ ಎಂಬ ಭಾವನೆ ತಮಿಳರಲ್ಲಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ 1988ರಲ್ಲಿ ಸಂವಿಧಾನದ 16ನೇ ತಿದ್ದುಪಡಿ `ಸಿಂಹಳ ಮತ್ತು ತಮಿಳು ಇಡೀ ಶ್ರೀಲಂಕಾದಲ್ಲಿ ಆಡಳಿತದ ಭಾಷೆಯಾಗಿರುತ್ತದೆ' ಎಂದು ಘೋಷಿಸಿ ತಮಿಳರ ಮನಸ್ಸಿನಲ್ಲಿದ್ದ ದ್ವಂದ್ವವನ್ನು ದೂರ ಮಾಡಿತ್ತು. ಆದರೆ ಭಾಷೆಯ ವಿಷಯದಲ್ಲಿ ಪ್ರಾರಂಭವಾದ ತಗಾದೆ ಶ್ರೀಲಂಕಾದ ರಾಜಕಾರಣಿಗಳ, ಆಡಳಿತಗಾರರ ಆಡಳಿತಾತ್ಮಕ ವಿಷಯಗಳ ಜೊತೆಗೆ ಧಾರ್ಮಿಕ ವಿಷಯಗಳೂ ಸೇರಿ ಶ್ರೀಲಂಕಾದ ತಮಿಳರು ತಮಗೆ ಪ್ರತ್ಯೇಕ `ತಮಿಳು ಈಳಂ' ಬೇಕೆಂದು ಸಶಸ್ತ್ರ ಹೋರಾಟ ನಡೆಸಿದ್ದು ಈಗ ಚರಿತ್ರೆಯಾಗಿದೆ.

 

ಚಿತ್ರ: `ಸಿಂಹಳ ಮಾತ್ರ' ಎನ್ನುತ್ತಿರುವ ಶ್ರೀಲಂಕಾದ ಲಾಂಛನ ಸಿಂಹ; ಆಬ್ರೆ ಕೊಲ್ಲೆಟ್‍ರವರ 1958ರ ವ್ಯಂಗ್ಯಚಿತ್ರ

***

`ಇಂಗ್ಲಿಷ್ ಸಹ ಓದಲು ಬರುವುದಿಲ್ಲ?'- ವ್ಯಂಗ್ಯಚಿತ್ರ ವಿವಾದ

ಎನ್.ಸಿ.ಇ.ಆರ್.ಟಿ. ಪಠ್ಯಪುಸ್ತಕದಲ್ಲಿ ಪ್ರಕಟಿಸಿದ್ದ ಸಂವಿಧಾನ ರಚನೆಯ ಕುರಿತ ಅಂಬೇಡ್ಕರ್ ವ್ಯಂಗ್ಯಚಿತ್ರ ಉಂಟುಮಾಡಿದ್ದ ವಿವಾದ ಮರೆಯಾಗುತ್ತಿರುವಂತೆ 2012ರಲ್ಲಿ ಮತ್ತೊಂದು ಅದೇ ರೀತಿಯ ವ್ಯಂಗ್ಯಚಿತ್ರ ವಿವಾದವನ್ನು ಡಿ.ಎಂ.ಕೆ. ಪಕ್ಷ ಲೋಕಸಭೆಯಲ್ಲಿ ಎಬ್ಬಿಸಿತು. 1965ರಲ್ಲಿ ತಮಿಳುನಾಡಿನ ಹಿಂದಿ ವಿರೋಧಿ ಆಂದೋಲನಗಳ ಸಮಯದಲ್ಲಿ ಪ್ರಕಟವಾಗಿದ್ದ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್‍ರವರ ವ್ಯಂಗ್ಯಚಿತ್ರವೊಂದು ಎನ್.ಸಿ.ಇ.ಆರ್.ಟಿ. 12ನೇ ತರಗತಿಯ ಪಠ್ಯಪುಸ್ತಕದಲ್ಲಿ ಬಳಸಿಕೊಳ್ಳಲಾಗಿತ್ತು. ಆ ವ್ಯಂಗ್ಯಚಿತ್ರದಲ್ಲಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಹಿಂದಿಯನ್ನು ಹೇರುವುದಿಲ್ಲ, ಇಂಗ್ಲಿಷ್ ಆಡಳಿತ ಭಾಷೆಯಾಗಿ ಮುಂದುವರಿಯುವುದೆಂಬ ಆಶ್ವಾಸನೆಗಳನ್ನು ಇಂಗ್ಲಿಷ್ ಫಲಕದಲ್ಲಿ ಬರೆಯಲಾಗಿದ್ದರೂ ವಿದ್ಯಾರ್ಥಿಯೊಬ್ಬ ತನ್ನ ಮುಷ್ಕರ ಇನ್ನೂ ಮುಂದುವರಿಸಿ ಎರಡೂ ಕೈಗಳಲ್ಲಿ ಕಲ್ಲುಗಳನ್ನೆತ್ತಿರುವುದನ್ನು ನೋಡಿ ರಾಜಗೋಪಾಲಾಚಾರಿ ಮುಂತಾದವರು, `ಈ ಹುಡುಗನಿಗೆ ಇಂಗ್ಲಿಷ್ ಸಹ ಓದಲು ಬರುವುದಿಲ್ಲ?' ಎನ್ನುತ್ತಿದ್ದಾರೆ. `1938 ಮತ್ತು 1965ರ ಹಿಂದಿ ವಿರೋಧಿ ಹೋರಾಟಗಳು ಡಿ.ಎಂ.ಕೆ. ಪಕ್ಷದ ಹೆಮ್ಮೆಯ ಕ್ಷಣಗಳಾಗಿವೆ. ಈ ವ್ಯಂಗ್ಯಚಿತ್ರ ಅಂತಹ ಹೋರಾಟವನ್ನು ಲೇವಡಿ ಮಾಡುತ್ತಿದ್ದು ಅದು ತಮಿಳರ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡುತ್ತಿದೆ. ಆದುದರಿಂದ ಕೇಂದ್ರ ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ ತಮಿಳರ ಅನಿಸಿಕೆಗಳನ್ನು ಗೌರವಿಸಿ ಆ ವ್ಯಂಗ್ಯಚಿತ್ರವನ್ನು ಪಠ್ಯಪುಸ್ತಕದಿಂದ ತೆಗೆಯಬೇಕು' ಎಂದು ಎಂ.ಕರುಣಾನಿಧಿ ಒತ್ತಾಯಿಸಿದರು. ಕರುಣಾನಿಧಿಯವರ ಬೇಡಿಕೆಗೆ ಎಂ.ಡಿ.ಎಂ.ಕೆ.ಯ ವೈಕೊ ಮತ್ತು ದ್ರಾವಿಡರ್ ಕಳಗಂನ ನಾಯಕ ಕೆ.ವೀರಮಣಿ ಸಹ ತಮ್ಮ ಬೆಂಬಲ ಸೂಚಿಸಿದರು. ಅಷ್ಟಲ್ಲದೆ ವೈಕೋರವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾದ ಕಪಿಲ್ ಸಿಬಲ್‍ರವರಿಗೆ ವ್ಯಂಗ್ಯಚಿತ್ರ ತೆಗೆಯುವಂತೆ ಒತ್ತಾಯಿಸಿ ಪತ್ರ ಬರೆದರು ಹಾಗೂ ಈ ಕುರಿತು ಪ್ರತಿಭಟನೆ ಸಹ ನಡೆಸಿದರು. ವೀರಮಣಿಯವರು ವ್ಯಂಗ್ಯಚಿತ್ರವನ್ನಷ್ಟೇ ಅಲ್ಲ ಕಪಿಲ್ ಸಿಬಲ್‍ರವರನ್ನು ಸಹ ಸಚಿವ ಸ್ಥಾನದಿಂದ ತೆಗೆಯಬೇಕೆಂದು ಒತ್ತಾಯಿಸಿದರು.

 

ಚಿತ್ರ: ವಿವಾದ ಉಂಟುಮಾಡಿದ ಆರ್.ಕೆ.ಲಕ್ಷ್ಮಣ್‍ರವರ ವ್ಯಂಗ್ಯಚಿತ್ರ

***

`ಒಂದು ರಾಷ್ಟ್ರ, ಒಂದು ಭಾಷೆ’ - ಬಿ.ಜೆ.ಪಿ. ಸರ್ಕಾರದ ಅಜೆಂಡಾ

ಆಗಸ್ಟ್ 2020ರ ಒಂದು ದಿನ ಮದ್ರಾಸಿಗೆ ವಿಮಾನದಲ್ಲಿ ಬಂದ ಎಂ.ಕರುಣಾನಿಧಿಯವರ ಪುತ್ರಿ ಹಾಗೂ ಡಿ.ಎಂ.ಕೆ. ಸಂಸದೆ ಕನಿಮೋಳಿಯವರನ್ನು ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಅಧಿಕಾರಿಯೊಬ್ಬರು ಹಿಂದಿಯಲ್ಲಿ ಮಾತನಾಡಿಸಿದಾಗ ಕನಿಮೋಳಿಯವರು ತಮಿಳು ಅಥವಾ ಇಂಗ್ಲಿಷ್‍ನಲ್ಲಿ ಮಾತನಾಡುವಂತೆ ತಿಳಿಸಿದರು. ಆಗ ಆ ಸುರಕ್ಷತಾ ಅಧಿಕಾರಿ, `ಹಿಂದಿ ಬರುವುದಿಲ್ಲ ಎನ್ನುತ್ತೀರಾ, ನೀವು ಭಾರತೀಯರೆ?' ಎಂದು ಕೇಳಿದರು. ಅದನ್ನು ಟ್ವೀಟ್ ಮಾಡಿದ ಕನಿಮೋಳಿಯವರು `ನನಗೆ ಹಿಂದಿ ಬರುತ್ತದೋ ಇಲ್ಲವೋ ಎನ್ನುವುದು ಪ್ರಶ್ನೆಯಲ್ಲ, ಆದರೆ ಹಿಂದಿ ಕಲಿತಿದ್ದವರು ಮಾತ್ರ ಭಾರತೀಯರೆನ್ನುವುದು ನಾಚಿಕೆಗೇಡು' ಎಂದರು. `ಭಾರತೀಯರಾಗಲು ಹಿಂದಿ ಮಾನದಂಡವೆ? ಇದು ಇಂಡಿಯಾನಾ ಅಥವಾ ಹಿಂದಿಯಾನಾ?' ಎಂದು ಡಿ.ಎಂ.ಕೆ. ನಾಯಕ (ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿ) ಸ್ಟ್ಯಾಲಿನ್ ಕೇಳಿದರು. ಕನಿಮೋಳಿಯವರ ಈ ಘಟನೆ ದೇಶದಲ್ಲೆಲ್ಲಾ ಸುದ್ದಿ ಮಾಡಿದ ಮೇಲೆ ಸಿ.ಐ.ಎಸ್.ಎಫ್.ನ ಸುರಕ್ಷತಾ ಅಧಿಕಾರಿಗಳು ನಂತರ ಕ್ಷಮೆ ಕೋರಿದರು.

 

ಚಿತ್ರ: `ಕ್ಷಮಿಸಿ, ಭಾರತಮಾತೆಗೆ ಹಿಂದಿ ಮಾತ್ರ ಅರ್ಥವಾಗುತ್ತದೆ

ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಒತ್ತಾಯಪೂರ್ವಕವಾಗಿ ಹೇರಲಾಗುವುದಿಲ್ಲವೆಂದು ಪ್ರಧಾನಿಯಾಗಿದ್ದ ನೆಹರೂರವರು ಆಶ್ವಾಸನೆ ನೀಡಿದ್ದರೂ ಸಹ ಕೇಂದ್ರ ಸರ್ಕಾರಗಳು ಒಂದಲ್ಲ ಒಂದು ರೀತಿಯಲ್ಲಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುತ್ತಲೇ ಇವೆ. ಆದರೆ 2014ರ ನಂತರ ಅಧಿಕಾರಕ್ಕೆ ಬಂದಿರುವ ಬಿ.ಜೆ.ಪಿ. ಸರ್ಕಾರ ಹಿಂದಿ ಹೇರಿಕೆಯ ಬಗ್ಗೆ ಯಾವುದೇ ಸಂಕೋಚವನ್ನು ವ್ಯಕ್ತಪಡಿಸುತ್ತಿಲ್ಲ. ಮೊದಲಿನಿಂದಲೂ ಬಿ.ಜೆ.ಪಿ. ಇಂಗ್ಲಿಷ್ ವಿರೋಧಿ ಹಾಗೂ ಹಿಂದಿ ಪರವೆಂಬುದಾಗಿ ಘೋಷಿಸಿಕೊಂಡಿದೆ. ಬಿ.ಜೆ.ಪಿ ತನ್ನ ಮಾತೃ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದಿನಿಂದಲೂ ಪ್ರತಿಪಾದಿಸುತ್ತಿರುವ `ಒಂದು ರಾಷ್ಟ್ರ, ಒಂದು ಭಾಷೆಎಂಬ ಕಾರ್ಯನೀತಿಯನ್ನು ಮುಂದುವರಿಸುತ್ತಿದೆ ಅಷ್ಟೆ.

ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಅಧಿಕಾರ ವಹಿಸಿಕೊಂಡ ಕೂಡಲೇ ಎಲ್ಲ ಸಚಿವಾಲಯಗಳು, ಇಲಾಖೆಗಳು, ನಿಗಮಗಳು ಮತ್ತು ಬ್ಯಾಂಕ್‍ಗಳು ಹಿಂದಿಯಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಾಗೂ ಅನಿಸಿಕೆಗಳನ್ನು ಹಾಕಬೇಕೆಂಬ ಆದೇಶ ಹೊರಡಿಸಿತು. ಆ ಸಮಯದಲ್ಲಿ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಯಿತು. ಚುನಾವಣೆಯಲ್ಲಿ ಮೋದಿಯನ್ನು ಹೊಗಳಿದ್ದ ಎಂ.ಡಿ.ಎಂ.ಕೆ. ವೈಕೊ ಕೇಂದ್ರಕ್ಕೆ ಎಚ್ಚರಿಕೆ ನೀಡಿದರು, `ನಿದ್ರಿಸುವ ಹುಲಿಯನ್ನು ಎಬ್ಬಿಸಬೇಡಿ. ಹಿಂದಿ ಹೇರಿಕೆ ರಾಷ್ಟ್ರೀಯ ಐಕ್ಯತೆಗೆ ಅಪಾಯಕಾರಿಯಾದುದು' ಎಂದರು. ಡಿ.ಎಂ.ಕೆ. ನಾಯಕ ಕರುಣಾನಿಧಿಯವರು, `ಎಲ್ಲಾ ಹಿಂದಿಯೇತರ ರಾಜ್ಯಗಳ ಜನರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಕಾಣುತ್ತಿದ್ದೀರಿ, ಭಾಷಾ ಯುದ್ಧರಂಗಗಳು ಇನ್ನೂ ಆದ್ರ್ರವಾಗಿವೆ' ಎಂಬ ಎಚ್ಚರಿಕೆ ನೀಡಿದರು. ಇವ್ಯಾವುವೂ ಬಿ.ಜೆ.ಪಿ.ಯನ್ನು ತಮ್ಮ ಹಿಂದಿ ಅಜೆಂಡಾದಿಂದ ಹಿಂದೆ ಸರಿಸಲಿಲ್ಲ. 2019ರಲ್ಲಿ ಬಿ.ಜೆ.ಪಿ. ಪುನಃ ಚುನಾಯಿತವಾಗುತ್ತಿರುವಂತೆ ಹೊಸ ಶಿಕ್ಷಣ ನೀತಿ 2019 ಬಿಡುಗಡೆ ಮಾಡಿತು. ಅದರಲ್ಲಿ ಎಲ್ಲ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಕಲಿಸುವುದು ಕಡ್ಡಾಯವಾಗಿತ್ತು. ಇದನ್ನು ತಮಿಳುನಾಡು, ಕರ್ನಾಟಕ ಹಾಗೂ ಮಹಾರಾಷ್ಟ್ರಗಳು ವಿರೋಧಿಸಿದವು. ತಮಿಳುನಾಡಿನಲ್ಲಿ ಬಿ.ಜೆ.ಪಿ. ಜೊತೆ ಕೈಗೂಡಿಸಿದ್ದ ಎ.ಐ.ಡಿ.ಎಂ.ಕೆ. ಸಹ ಇದನ್ನು ವಿರೋಧಿಸಿತು ಹಾಗೂ ತಮಿಳುನಾಡು ಎರಡು-ಭಾಷಾ ಕಾರ್ಯನೀತಿಯನ್ನು ಮುಂದುವರಿಸುವುದಾಗಿ ಹೇಳಿತು. ದಕ್ಷಿಣ ಭಾರತದಲ್ಲಿ ಕರ್ನಾಟಕವೊಂದನ್ನು ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಬಿ.ಜೆ.ಪಿ.ಗೆ ಕಾಲೂರಲು ಸಾಧ್ಯವಾಗದಿರುವುದರಿಂದ ಹೊಸ ಶಿಕ್ಷಣ ನೀತಿಯ ಮೂಲಕ ಹಿಂದಿ ಹೇರಿಕೆ ತನಗೇ ಮುಳುವಾಗಬಹುದೆಂದೋ ಏನೋ ಹೊಸ ಶಿಕ್ಷಣ ನೀತಿಯಲ್ಲಿನ ಹಿಂದಿ ಕಡ್ಡಾಯ ಕಲಿಕೆಯನ್ನು ತೆಗೆದು ವಿದ್ಯಾರ್ಥಿ ತನ್ನ ಆಸಕ್ತಿಯ ಯಾವುದಾದರೂ ಮೂರು ಭಾಷೆ ಕಲಿಯಬಹುದೆಂದು ಬದಲಾಯಿಸಿತು.

 

ಚಿತ್ರ: ಹಿಂದಿ ಹೇರಿಕೆ - ಬಾಲಾರವರ ವ್ಯಂಗ್ಯಚಿತ್ರ

ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳ ದೂರದರ್ಶನದ ಚಾನೆಲ್‍ಗಳಲ್ಲಿ ಹಾಗೂ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿಯೂ ಸಹ ಸಂಸ್ಕøತ ಮತ್ತು ಹಿಂದಿ ಕಾರ್ಯಕ್ರಮಗಳನ್ನು ನಿಧಾನವಾಗಿ ಜಾರಿಗೊಳಿಸುತ್ತಿದೆ. ತಮಿಳುನಾಡಿನ ಸಚಿವ, ಸಂಸದರು ಸರ್ಕಾರಕ್ಕೆ ಇಂಗ್ಲಿಷ್‍ನಲ್ಲಿ ಪತ್ರ ಬರೆದರೆ ಅಧಿಕೃತ ಭಾಷೆಗಳ (ಸರ್ಕಾರದ ಅಧಿಕೃತ ಉದ್ದೇಶಗಳ ಬಳಕೆಗಾಗಿ) ನಿಯಮ, 1976ರನ್ನು ಉಲ್ಲಂಘಿಸಿ ತಮಿಳಿನಲ್ಲಿ ಮಾತ್ರ ಉತ್ತರ ಬರೆಯುತ್ತಿದೆ. ಈ ನಿಯಮಗಳನ್ವಯ ಕೇಂದ್ರ ಸರ್ಕಾರದ ಕಚೇರಿಗಳ ಹೊರತು ರಾಜ್ಯ ಸರ್ಕಾರ ಮುಂತಾದವುಗಳಿಗೆ ಕೇಂದ್ರ ಸರ್ಕಾರ ಬರೆಯುವ ಪತ್ರಗಳು ಹಿಂದಿಯಲ್ಲಿದ್ದಲ್ಲಿ ಅದರ ಅಧಿಕೃತ ಇಂಗ್ಲಿಷ್ ಅನುವಾದವಿರಬೇಕು. ಪ್ರಸ್ತುತ ಕೇಂದ್ರದಲ್ಲಿನ ಬಿ.ಜೆ.ಪಿ. ಸರ್ಕಾರ ಅದನ್ನು ತಿಳಿದೂ ಉಲ್ಲಂಘಿಸುತ್ತಿದೆ. ಅವರ ಹಲವಾರು ಅಜೆಂಡಾಗಳಲ್ಲಿ ಇಂದಲ್ಲ ನಾಳೆ `ಒಂದು ರಾಷ್ಟ್ರ, ಒಂದು ಭಾಷೆಯನ್ನು ಸಾಕಾರಗೊಳಿಸುವುದೂ ಒಂದು.

(ವ್ಯಂಗ್ಯಚಿತ್ರ ಕೃಪೆ: ಅಣ್ಣಾ ಅರಿವಾಲಯಂ ಗ್ರಂಥಾಲಯ, ಚೆನ್ನೈ; ಪೆರಿಯಾರ್ ಗ್ರಂಥಾಲಯ, ಚೆನ್ನೈ; ವ್ಯಂಗ್ಯಚಿತ್ರಕಾರ ಬಾಲ)

***

ಆಕರ ಗ್ರಂಥಗಳು:

1.     Sumathi Ramaswamy, Passions of the Tongue - Language Devotion in Tamil India, 1891–1970, University of California, 1997.

2.     Robert N. Kearney, Language and the Rise of Tamil Separatism in Sri Lanka, Asian Survey, Vol. 18, No. 5 (May, 1978), pp. 521-534.

3.     Ramachandra Guha, Hindi Against India, The Hindu, 16, 2005.


ಈ ಲೇಖನ ಈದಿನ ವೆಬ್‌ ತಾಣದಲ್ಲೂ ಲಭ್ಯವಿದೆ:

https://www.eedina.com/opinion/tamil-entity-and-cartoons-2718.html

1 ಕಾಮೆಂಟ್‌:

ಅನಾಮಧೇಯ ಹೇಳಿದರು...

Very well researched updated article.Thanks Balu. This must reach all our political parties and public figures in Karnataka