Sunday, January 20, 2013

ರೇಪ್ ಆಫ್ ನಾನ್ ಕಿಂಗ್ - `ಸಿನಿಮಾದ ಕನ್ನಡಿಯಲ್ಲಿ ವಾಸ್ತವದ ಪ್ರತಿಬಿಂಬ'

`ಸಿನಿಮಾದ ಕನ್ನಡಿಯಲ್ಲಿ ವಾಸ್ತವದ ಪ್ರತಿಬಿಂಬ'  ಪ್ರಜಾವಾಣಿ- ಸಾಪ್ತಾಹಿಕ ಪುರವಣಿ- 20-01-2013ರಂದು ಪ್ರಕಟವಾದ ನನ್ನ ಲೇಖನ


ದೆಹಲಿಯಲ್ಲಿ ಬಸ್ಸೊಂದರಲ್ಲಿ ವಿದ್ಯಾರ್ಥಿಯೊಬ್ಬಳ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿ, ಕಬ್ಬಿಣದ ಸರಳಿನಿಂದ ಹೊಡೆದು ಎಸೆದ ಸುದ್ದಿ ಮನಸ್ಸಿನಲ್ಲಿ ಉಂಟುಮಾಡಿದ ತಳಮಳ ಇನ್ನೂ ಕಡಿಮೆಯಾಗಿರಲಿಲ್ಲ. `ಮನುಷ್ಯನಲ್ಲಿ ಇಷ್ಟೊಂದು ಕ್ರೌರ್ಯ ಇರಲು ಸಾಧ್ಯವೆ?' ಎನ್ನುವ ಗುಂಗಿನಲ್ಲಿರುವಾಗಲೇ 5ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಿದ ಲು ಶ್ವಾನ್‌ನ `ಸಿಟಿ ಆಫ್ ಲೈಫ್ ಅಂಡ್ ಡೆತ್' ಸಿನಿಮಾ ಮನಸ್ಸನ್ನು ಮತ್ತಷ್ಟು ಖಿನ್ನವಾಗಿಸಿತು. ಸಿನಿಮಾದ ಹಲವಾರು ಪಾತ್ರಗಳು ಕಾಲ್ಪನಿಕವಾದರೂ ಚಿತ್ರದ ಕತೆ, ನಡೆದ ಘಟನೆಗಳು ಕಾಲ್ಪನಿಕವಲ್ಲ. ಈ ಚಲನಚಿತ್ರ ಕಪ್ಪು ಬಿಳುಪಿನಲ್ಲಿರುವುದು ಒಂದು ರೀತಿಯಲ್ಲಿ ಸಮಾಧಾನಕರ. ಏಕೆಂದರೆ ರಕ್ತದ ಕೆಂಪು ನಮ್ಮ ಮುಖಗಳಿಗೆ ರಾಚುವುದಿಲ್ಲ. ಸಿನಿಮಾದ ಪಾತ್ರಗಳ ಮುಖಗಳು ಬಹುಶಃ ನೆನಪುಳಿಯುವವರೆಗೂ ಕಾಡುತ್ತಲೇ ಇರುತ್ತವೆ. ಆ ಮುಖಗಳು ಜಪಾನಿ ಸೈನಿಕರಿಂದ ಚಿತ್ರಹಿಂಸೆಗೊಳಗಾಗಿ ಸತ್ತ ಸಾವಿರಾರು ಚೀನಿ ಸೈನಿಕರು ಮತ್ತು ನಾಗರಿಕರ ಮುಖಗಳ ಪ್ರತಿಫಲನಗಳಾಗಿವೆ.
`ರೇಪ್ ಆಫ್ ನಾನ್‌ಜಿಂಗ್' (ಮೊದಲಿನ ಹೆಸರು ನಾನ್‌ಕಿಂಗ್) ಎಂದು ಕರೆಸಿಕೊಳ್ಳುವ ಈ ಘಟನೆ ನಡೆದದ್ದು 1937ರ ಡಿಸೆಂಬರ್‌ನಲ್ಲಿ. ಎರಡನೆಯ ವಿಶ್ವಯುದ್ಧ ಸಂದರ್ಭದಲ್ಲಿ, ಜಪಾನ್-ಚೀನಾ ಯುದ್ಧದಲ್ಲಿ ಜಪಾನಿನ ಇಂಪೀರಿಯಲ್ ಸೈನ್ಯ ಶಾಂಘಾಯ್‌ನಲ್ಲಿ ಚೀನಿಯರ ತೀವ್ರ ವಿರೋಧ ಎದುರಿಸಿತು. ಇಡೀ ಚೀನಾವನ್ನು ಮೂರೇ ತಿಂಗಳುಗಳಲ್ಲಿ ಗೆದ್ದು ಬಿಡುವೆವು ಎಂದು ಜಪಾನೀಯರು ಕೊಚ್ಚಿಕೊಳ್ಳುತ್ತಿದ್ದರು. ಆದರೆ ಚೀನಿಯರ ತೀವ್ರ ವಿರೋಧ ಅವರನ್ನು ರೊಚ್ಚಿಗೆಬ್ಬಿಸಿತು. ಕೊನೆಗೂ ಶಾಂಘಾಯ್ ಗೆದ್ದ ಜಪಾನೀ ಸೇನೆಯ ಸುಮಾರು ಐವತ್ತು ಸಾವಿರ ಸೈನಿಕರು ಆಗಿನ ಚೀನಾದ ರಾಜಧಾನಿಯಾಗಿದ್ದ ನಾನ್‌ಕಿಂಗ್ ಮೇಲೆ ದಾಳಿಮಾಡಿ ಅದನ್ನು ವಶಪಡಿಸಿಕೊಂಡರು. ಆಗ ನಾನ್‌ಕಿಂಗ್ ಪ್ರವೇಶಿಸಿದ ಸೈನಿಕರಿಗೆ- `ಎಲ್ಲರನ್ನೂ ಕೊಲ್ಲಿ, ಎಲ್ಲವನ್ನೂ ಲೂಟಿ ಮಾಡಿ, ಎಲ್ಲವನ್ನೂ ಸುಟ್ಟುಹಾಕಿ' ಎಂಬ ಆದೇಶ ನೀಡಲಾಗಿತ್ತು. ಅಲ್ಲಿನ ಚೀನೀ ಸೈನಿಕರು ಜಪಾನ್ ಸೈನಿಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅವರ ಸೇನೆ ವ್ಯವಸ್ಥಿತವಾಗಿರಲಿಲ್ಲ. ಹಲವು ಸೇನಾ ನಾಯಕರು ಸೈನಿಕರನ್ನು ಮಧ್ಯದಲ್ಲೇ ಬಿಟ್ಟು ಪಲಾಯನಗೈದಿದ್ದರು. ತೊಂಬತ್ತು ಸಾವಿರ ಚೀನಿ ಸೈನಿಕರು ಶರಣಾದರು.
ಜಪಾನಿಯರಿಗೆ ಶರಣು ಎನ್ನುವುದು ಊಹಿಸಲಾಗದ ಹೇಡಿತನ ಹಾಗೂ ಅವರಿಗೆ ಬಾಲ್ಯದಿಂದಲೂ ಕಲಿಸಿದ್ದ ಸೈನಿಕ ಶಿಸ್ತಿಗೆ ವಿರುದ್ಧವಾದುದು. ಅಂತಹ ಸೈನಿಕರಿಗೆ ಬದುಕುವ ಅರ್ಹತೆ ಇಲ್ಲವೆಂಬುದು ಅವರ ನಂಬಿಕೆಯಾಗಿತ್ತು. ಶರಣಾರ್ಥಿಗಳನ್ನು ಕೊಲ್ಲಲು ಅವರಿಗೆ ಆದೇಶ ಸಿಕ್ಕಿತ್ತು. ಕೊಲ್ಲುವುದಷ್ಟೇ ಅಲ್ಲ ಮುಂದಿನ ಯುದ್ಧಗಳಿಗೆ ತಮ್ಮ ಮನಸ್ಸನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಆದಷ್ಟು ಚಿತ್ರಹಿಂಸೆ ಕೊಟ್ಟು ಕೊಲ್ಲಲು ನಿರ್ದೇಶನ ನೀಡಲಾಗಿತ್ತು. ಯುದ್ಧಕೈದಿಗಳನ್ನು ಟ್ರಕ್‌ಗಳಲ್ಲಿ ನಾನ್‌ಕಿಂಗ್ ನಗರದ ಹೊರವಲಯಗಳಿಗೆ ಸಾಗಿಸಲಾಯಿತು. ಅಲ್ಲಿ ಅವರನ್ನು ಅತ್ಯಂತ ಬರ್ಬರವಾಗಿ ಕೊಂದರು. ಕೆಲವರನ್ನು ಸಾಲಾಗಿ ನಿಲ್ಲಿಸಿ ಮೆಷಿನ್ ಗನ್‌ನಿಂದ ಗುಂಡಿಕ್ಕಿ ಕೊಂದರು, ಹಲವರನ್ನು ಜೀವಂತ ಬೆಂಕಿಹಚ್ಚಿ ಕೊಂದರು. ಇನ್ನು ಕೆಲವರನ್ನು ಅವರಿಂದಲೇ ದೊಡ್ಡ ಹಳ್ಳಗಳನ್ನು ಅಗೆಸಿ ಅವುಗಳಲ್ಲಿ ಜೀವಂತ ಹೂತರು. ಕತ್ತರಿಸಿದ ಚೀನಿ ಸೈನಿಕರ ತಲೆಗಳನ್ನು ಕೈಯಲ್ಲಿ ಹಿಡಿದು, ತುಂಡರಿಸಿದ ದೇಹಗಳ ಮೇಲೆ ಕಾಲುಗಳನ್ನು ಇರಿಸಿ ಫೋಟೊ ತೆಗೆಸಿಕೊಂಡರು. ಆರು ವಾರಗಳ ಕಾಲ ನಡೆದ ಹಿಂಸಾಚಾರದಲ್ಲಿ ನಾನ್‌ಕಿಂಗ್ ನಗರದಲ್ಲಿದ್ದ ಆರು ಲಕ್ಷ ಸೈನಿಕರು ಮತ್ತು ನಾಗರಿಕರಲ್ಲಿ ಮೂರು ಲಕ್ಷ ಮಂದಿಯನ್ನು ಜಪಾನ್ ಸೈನಿಕರು ಕೊಂದುಹಾಕಿದರು. ಕ್ರೌರ್ಯದ ಪರಾಕಾಷ್ಠೆ ಎಷ್ಟು ತಲುಪಿತ್ತೆಂದರೆ ಇಬ್ಬರು ಸೇನಾಧಿಕಾರಿಗಳಲ್ಲಿ ತಲಾ ನೂರು ಜನರ ತಲೆಗಳನ್ನು ಯಾರು ಮೊದಲು ಕತ್ತಿಯಿಂದ ಕತ್ತರಿಸುವರೆಂಬ ಪಂದ್ಯ ಏರ್ಪಟ್ಟಿತ್ತಂತೆ. ಯುದ್ಧದ ನಂತರ `ಜಪಾನ್ ಅಡ್‌ವರ್ಟೈಸರ್' ಪತ್ರಿಕೆಯಲ್ಲಿ ಈ ಸುದ್ದಿ ರೋಚಕವಾಗಿ, ಆ ಇಬ್ಬರು ಸೇನಾಧಿಕಾರಿಗಳು ಹೀರೋಗಳೆಂಬಂತೆ ಪ್ರಕಟವಾಗಿತ್ತು. ಸದ್ಯ ಈ ದೃಶ್ಯಗಳು ಸಿನೆಮಾದಲ್ಲಿಲ್ಲ. ಆದರೂ ಕಡಿಮೆ ಮಾತಿನಲ್ಲಿ ಮತ್ತು ದೃಶ್ಯದಲ್ಲೇ ನಿರ್ದೇಶಕ ಭೀಕರತೆಯನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾನೆ.
ನಾನ್‌ಕಿಂಗ್‌ನಲ್ಲಿ ನಡೆದ ಕೃತ್ಯಗಳ ಬಗೆಗೆ ಅದರಲ್ಲಿ ಬದುಕುಳಿದವರನ್ನು ಸಂದರ್ಶಿಸಿ, ದಾಖಲೆಗಳನ್ನು ಪರಾಮರ್ಶಿಸಿ ಚೀನಿ-ಅಮೆರಿಕನ್ ಲೇಖಕಿ ಐರಿಸ್ ಚಾಂಗ್ ಎಂಬಾಕೆ ತನ್ನ ಕೃತಿ `ರೇಪ್ ಆಫ್ ನಾನ್‌ಕಿಂಗ್'ನಲ್ಲಿ- `ನಾನ್‌ಕಿಂಗ್‌ನಲ್ಲಿ ಸತ್ತ ಜನರ ಸಂಖ್ಯೆಗಿಂತ ಅಲ್ಲಿ ಅವರನ್ನು ಎಷ್ಟು ಕ್ರೂರ ಮತ್ತು ಬರ್ಬರವಾಗಿ ಕೊಲ್ಲಲಾಯಿತು ಎನ್ನುವುದರಿಂದಾಗಿ ನೆನಪಿನಲ್ಲಿ ಉಳಿಯುತ್ತದೆ. ಚೀನಿಯರನ್ನು ಬಾಯೊನೆಟ್ ಅಭ್ಯಾಸಗಳಿಗಾಗಿ ಬಳಸಿಕೊಳ್ಳಲಾಯಿತು, ಸ್ಪರ್ಧೆಗಳಲ್ಲಿ ಅವರ ತಲೆಗಳನ್ನು ಕತ್ತರಿಸಲಾಯಿತು. ಸುಮಾರು 20000-80000 ಚೀನಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಯಿತು. ಕೆಲವು ಸೈನಿಕರು ಅತ್ಯಾಚಾರದ ನಂತರ ಆ ಮಹಿಳೆಯರ ಹೊಟ್ಟೆಗಳನ್ನು ಸೀಳಿದರು, ಮೊಲೆಗಳನ್ನು ಕತ್ತರಿಸಿದರು, ಮೊಳೆ ಬಡಿದು ಗೋಡೆಗಳಿಗೆ ಜೀವಂತ ನೇತುಹಾಕಿದರು. ಜನರನ್ನು ಜೀವಂತ ಹೂತು ಹಾಕುವುದು, ಜನನಾಂಗಗಳನ್ನು ಕತ್ತರಿಸುವುದು, ಜನರನ್ನು ಬೆಂಕಿಯಲ್ಲಿ ಸುಡುವುದು ದಿನನಿತ್ಯದ ಅಭ್ಯಾಸವಾಗಿತ್ತು. ಜನರನ್ನು ಮಣ್ಣಿನೊಳಕ್ಕೆ ಸೊಂಟದವರೆಗೆ ಹೂತು ಜರ್ಮನ್ ಶೆಫರ್ಡ್ ನಾಯಿಗಳಿಂದ ದಾಳಿ ಮಾಡಿಸುವುದು ಸೇರಿದಂತೆ ಹಿಂಸೆಯ ವಿವಿಧ ಕೃತ್ಯಗಳನ್ನು ಎಸಗಲಾಯಿತು. ಈ ಹಿಂಸೆಯನ್ನು ನೋಡಲಾಗದೆ ಆ ನಗರದಲ್ಲಿದ್ದ ನಾತ್ಸಿಗಳು ಸಹ ತತ್ತರಿಸಿಹೋದರು' ಎಂದು ಬರೆದಿದ್ದಾರೆ.
ದಾಳಿಕೋರ ಸೈನಿಕರು ಗರ್ಭಿಣಿ ಮಹಿಳೆಯರನ್ನು ಸಹ ಬಿಡಲಿಲ್ಲ. ಅವರ ಮೇಲೂ ಅತ್ಯಾಚಾರ ಮಾಡಿ, ಆ ನಂತರ ಹೊಟ್ಟೆ ಬಗೆದು ಭ್ರೂಣಗಳನ್ನು ಬಾಯೊನೆಟ್‌ನಲ್ಲಿ ಚುಚ್ಚಿ ಎತ್ತಿ ಹಿಡಿದು ಮೆರೆದಾಡಿದರು. ಗರ್ಭಿಣಿ ಹೆಂಗಸರನ್ನು ಕೊಲ್ಲುವುದೆಂದರೆ ಒಂದೇ ಏಟಿಗೆ ಎರಡು ಹಕ್ಕಿ ಕೊಂದಂತೆ ಎಂದು ಸೈನಿಕರು ಹೇಳಿಕೊಂಡಿದ್ದಿದೆ. ಈ ಸಾಮೂಹಿಕ ಅತ್ಯಾಚಾರಗಳಿಂದ ತತ್ತರಿಸಿದ ಜಪಾನಿ ಸರ್ಕಾರವೇ ಅದಕ್ಕೊಂದು ವಿಲಕ್ಷಣ ಪರಿಹಾರ ಹುಡುಕಿತು. ತನ್ನ ಸೈನಿಕರು ನಡೆಸುವ ಅತ್ಯಾಚಾರ ಹೊರಜಗತ್ತಿಗೆ ತಿಳಿಯಬಾರದೆಂದು ಹಾಗೂ ಬಳಲಿದ್ದ ಹಾಗೂ ಮನೆಗಳಿಂದ ಬಹಳ ದಿನಗಳು ದೂರವಿದ್ದ ಜಪಾನಿ ಸೈನಿಕರನ್ನು `ತಣಿಸಲು', `ಸಾಂತ್ವನ ಗೃಹ'ಗಳೆಂಬ (Comfort Homes) ಮಿಲಿಟರಿ ವೇಶ್ಯಾಗೃಹಗಳನ್ನು ಸ್ಥಾಪಿಸಿದರು. ನೂರಾರು ಮಹಿಳೆಯರನ್ನು `ಸಾಂತ್ವನ ಮಹಿಳೆಯರು' ಎಂದು ಕರೆದು ಬಂಧಿಸಿ ಅವರ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದರು. ಆ ಹಿಂಸೆಗೆ ಎಷ್ಟೋ ಜನ ಮಹಿಳೆಯರು ತತ್ತರಿಸಿ ಸತ್ತೇಹೋದರು, ಹಲವಾರು ಹುಚ್ಚರಾದರು. ಆ ರೀತಿ ಸತ್ತ ಮಹಿಳೆಯರನ್ನು ಕೈಗಾಡಿಗಳಲ್ಲಿ ತುಂಬಿಕೊಂಡು ಹೋಗುವ ಸಿನಿಮಾದಲ್ಲಿನ ದೃಶ್ಯ ಘೋರವಾದುದು.
ದಾರಿಯಲ್ಲಿ ಎದುರಾದವರನ್ನು ಮೋಜಿಗಾಗಿ ಕೊಲ್ಲುತ್ತಿದ್ದರು. ಮನೆಗಳಿಗೆ ಬೆಂಕಿ ಹಚ್ಚಿ ಅವರು ತಪ್ಪಿಸಿಕೊಳ್ಳಲು ಮಹಡಿಯಿಂದ ಹಾರಿ ಸಾಯುತ್ತಿದ್ದರೆ ಅವರನ್ನು ನೋಡಿ ಕೇಕೆ ಹಾಕಿ ನಗುತ್ತಿದ್ದರು. ಇಡೀ ನಗರ ಶವಗಳಿಂದ ತುಂಬಿ ಹೋಗಿತ್ತು, ನೆತ್ತರಮಯವಾಗಿತ್ತು. ಆ ನಂತರ ನೋವುಂಡ ಜನರನ್ನು ಸುಮ್ಮನಾಗಿಸಲು ನಗರದಲ್ಲಿ ಇರುವವರೆಲ್ಲರಿಗೂ- ಚಿಕ್ಕವರು ದೊಡ್ಡವರೆನ್ನದೆ- ಅಫೀಮು, ಹೆರಾಯಿನ್ ಮುಂತಾದ ಮಾದಕ ವಸ್ತುಗಳನ್ನು ನೀಡಲಾಯಿತು.
ಜಪಾನಿ ಸೈನಿಕರ ಕ್ರೌರ್ಯದ ವಿವರಗಳು ಜಪಾನಿನ ಪತ್ರಿಕೆಗಳಲ್ಲಿ, ಅಮೆರಿಕಾ ಹಾಗೂ ಇತರ ಯೂರೋಪಿನ ಪತ್ರಿಕೆಗಳಲ್ಲಿ ಪ್ರಕಟವಾದವು. ಜಪಾನಿಯರಂತೂ ಈ ವಿವರಗಳು ತಮ್ಮ ಸೈನಿಕರ ವೀರಾವೇಶವೆಂಬಂತೆ ಕೊಂಡಾಡಿದರು. ಅಮೆರಿಕದಲ್ಲಿ ನ್ಯೂಯಾರ್ಕ್ ಟೈಮ್ಸ, ರೀಡರ್ಸ್ ಡೈಜೆಸ್ಟ್ ಹಾಗೂ ಟೈಮ್ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಅಮೆರಿಕದ ಜನ ನಂಬಲಿಲ್ಲ, ಉತ್ಪ್ರೇಕ್ಷೆ ಇರಬಹುದೆಂದುಕೊಂಡರು. ಆ ರೀತಿಯ ಕ್ರೌರ್ಯ ಇರಲು ಸಾಧ್ಯವೇ ಇಲ್ಲ, ಅದೆಲ್ಲಾ ಕಟ್ಟುಕತೆ ಎಂದರು. ಆಗ ಅಮೆರಿಕನ್ನರಿಗೆ ಏಷಿಯಾದ ಬಗೆಗೆ ಹಾಗೂ ಅಲ್ಲಿ ನಡೆಯುವ ಘಟನೆಗಳ ಬಗೆಗೆ ಅಷ್ಟೊಂದು ಆಸಕ್ತಿಯೂ ಇರಲಿಲ್ಲ. ಅವರೆಲ್ಲರ ಆಸಕ್ತಿ ಜರ್ಮನಿ ಮತ್ತು ಹಿಟ್ಲರ್‌ನ ಬಗೆಗಿತ್ತು.
ನಾನ್‌ಕಿಂಗ್‌ನಲ್ಲಿ ಸುಮಾರು 20 ಅಮೆರಿಕನ್ ಮತ್ತು ಯೂರೋಪಿನ ಕ್ರೈಸ್ತ ಪ್ರಚಾರಕರು, ವೈದ್ಯರು ಮತ್ತು ಉದ್ಯಮಿಗಳಿದ್ದರು. ಅವರೆಲ್ಲರೂ ಸೇರಿ ನಗರದ ಮಧ್ಯಭಾಗದಲ್ಲಿ ಎರಡೂವರೆ ಚದರ ಮೈಲಿಯ `ಅಂತರರಾಷ್ಟ್ರೀಯ ಸುರಕ್ಷತಾ ವಲಯ'ವೊಂದನ್ನು ಸ್ಥಾಪಿಸಿದರು. ಆ ಪ್ರದೇಶದಲ್ಲಿ ಸುಮಾರು ಮೂರು ಲಕ್ಷ ಚೀನಿಯರು ರಕ್ಷಣೆ ಪಡೆದರೆಂಬ ಅಂದಾಜಿದೆ. ಆ ಪ್ರದೇಶ ತಲುಪಲು ವಿಫಲರಾದವರೆಲ್ಲಾ ಜಪಾನಿ ಸೈನಿಕರ ಕೈಗೆ ಸಿಕ್ಕಿ ಸತ್ತುಹೋದರು. ಚೀನಿಯರ ರಕ್ಷಣೆಗೆ ನಿಂತ ಆ ಯೂರೋಪಿಯನ್ನರಲ್ಲಿ ಪ್ರಮುಖನಾದವನು ಜಾನ್ ರಬೆ ಎಂಬ ಜರ್ಮನ್ ನಾತ್ಸಿ. ಆತ ಜರ್ಮನಿಗೆ ಹಿಂದಿರುಗಿದ ನಂತರ ಹಿಟ್ಲರ್‌ನಿಗೆ ನಾನ್‌ಕಿಂಗ್‌ನಲ್ಲಿನ ಭೀಭತ್ಸ ಕೃತ್ಯಗಳ ಬಗೆಗೆ ವರದಿ ಮಾಡಿದರೂ ಜಪಾನ್‌ನೊಂದಿಗಿನ ಸಂಬಂಧ ಹದಗೆಡುತ್ತದೆನ್ನುವ ಕಾರಣದಿಂದಾಗಿ ಹಿಟ್ಲರ್ ಏನೂ ಮಾಡಲಿಲ್ಲ. ಆದರೆ ಅದೇ ಸಮಯದಲ್ಲಿ ಜರ್ಮನಿ ಮತ್ತಿತರ ಯೂರೋಪಿಯನ್ ರಾಷ್ಟ್ರಗಳಲ್ಲಿ ಯೆಹೂದಿಗಳನ್ನು ಹಿಟ್ಲರ್ ಕೊಲ್ಲುತ್ತಿದ್ದುದು ಬೇರೆ ಮಾತು. ನಾನ್‌ಕಿಂಗ್‌ನಲ್ಲಿದ್ದ ಒಬ್ಬ ಯುರೋಪಿಗ ತನ್ನ ದಿನಚರಿಯಲ್ಲಿ `ನಾನ್‌ಕಿಂಗ್ ಭೂಮಿಯ ಮೇಲಿನ ನರಕ' ಎಂದು ಬಣ್ಣಿಸಿದ್ದರೆ, ಮತ್ತೊಬ್ಬಾತ `ಈ ಆಧುನಿಕ ಜಗತ್ತಿನಲ್ಲಿ ಅಂತಹ ಕ್ರೂರ ಜನರಿದ್ದಾರೆಂದು ಊಹಿಸಿಕೊಳ್ಳುವುದೇ ಕಷ್ಟ' ಎಂದು ಬರೆದಿದ್ದ.
ಹಲವಾರು ಜಪಾನಿ ಸೈನಿಕರು ತಾವೆಸಗಿದ ಕೃತ್ಯಗಳನ್ನು ಒಪ್ಪಿಕೊಂಡಿದ್ದಾರೆ. ಆ ಕ್ಷಣದಲ್ಲಿ ಅವರ ಮನಸ್ಸಿನಲ್ಲಿ ಯಾವುದೇ ತಪ್ಪು ಮಾಡುತ್ತಿರುವ, ಮತ್ತೊಬ್ಬರಿಗೆ ಹಿಂಸೆ ಕೊಡುತ್ತಿದ್ದೇವೆ ಎನ್ನುವ ಭಾವನೆ ಇರಲೇ ಇಲ್ಲ ಎಂದಿದ್ದಾರೆ. 19ನೇ ಶತಮಾನದವರೆಗೂ ಜಪಾನ್‌ನಲ್ಲಿ ಊಳಿಗಮಾನ್ಯ ಪದ್ಧತಿಯಿತ್ತು. ಯೂರೋಪಿನ ಕೈಗಾರಿಕಾ ಕ್ರಾಂತಿ ಜಪಾನ್ ಪ್ರವೇಶಿಸಿರಲಿಲ್ಲ. 1868ರಲ್ಲಿ ಶೋಗನ್ ಆಳ್ವಿಕೆಯನ್ನು ಕೊನೆಗಾಣಿಸಿ ಮೀಜಿ ಚಕ್ರವರ್ತಿಯ ನಾಯಕತ್ವದಲ್ಲಿ ಹೊಸ ಸಾಮ್ರಾಜ್ಯಶಾಹಿ ಸರ್ಕಾರ ಆರಂಭವಾಯಿತು. ಈ ಆಡಳಿತ ಒಂದೇ ತಲೆಮಾರಿನಲ್ಲಿ ಅತ್ಯಂತ ಬಲಿಷ್ಠವಾಗಿದ್ದಲ್ಲದೆ ರಷ್ಯಾ, ಕೊರಿಯಾ, ಮಂಚೂರಿಯಾಗಳಲ್ಲೆಲ್ಲಾ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ಸೂರ್ಯದೇವರ ಆರಾಧಕರಾಗಿದ್ದ ಅವರು ಇಡೀ ಜಗತ್ತಿನಲ್ಲಿ ಜಪಾನಿಯರೇ ಸರ್ವಶ್ರೇಷ್ಠರೆಂದು ಭಾವಿಸಿದ್ದರು ಹಾಗೂ ಇತರರೆಲ್ಲಾ ನಿಕೃಷ್ಟರು, ಬದುಕುವ ಅರ್ಹತೆ ಇಲ್ಲದವರು ಎಂದೇ ನಂಬಿದ್ದರು. ಜಪಾನಿನ ಯುದ್ಧ ಸಂಹಿತೆಯ ಪ್ರಕಾರ ಯುದ್ಧದಲ್ಲಿ ಶರಣಾಗುವುದು ಊಹಿಸಿಕೊಳ್ಳಲೂ ಸಾಧ್ಯವಾಗದಂತಹ ಅಪಮಾನ; ಆ ರೀತಿ ಶರಣಾದ ಶತ್ರು ಸೈನಿಕರನ್ನು ಸಹ ಅದೇ ರೀತಿ ನಡೆಸಿಕೊಳ್ಳುತ್ತಿದ್ದರು. ಯುದ್ಧ ಕೈದಿಗಳನ್ನು ಹಾಗೂ ಶತ್ರು ದೇಶಗಳ ನಾಗರಿಕರನ್ನು ರಕ್ಷಿಸುವ ಕಟ್ಟಲೆಗಳನ್ನು ನಿರ್ದೇಶಿಸುವ ಜಿನೀವಾ ಮತ್ತು ಹೇಗ್ ಸಂಹಿತೆಗಳನ್ನು ಸಹ ಅವರು ಧಿಕ್ಕರಿಸಿದ್ದರು. ಜಪಾನಿಯರನ್ನು ಬಾಲ್ಯದಿಂದಲೇ ಅತ್ಯಂತ ಶಿಸ್ತಿನಿಂದ ಬೆಳೆಸುವ ಪರಿಪಾಠವೂ ಈ ರೀತಿಯ ಕ್ರೌರ್ಯಕ್ಕೆ ಕಾರಣವೆಂದಿದ್ದಾರೆ ಕೆಲವರು. ಜಪಾನಿ ಶಾಲೆಯ ಪ್ರಾಣಿಶಾಸ್ತ್ರದ ತರಗತಿಯಲ್ಲಿ ಬಾಲಕನೊಬ್ಬ ಕಪ್ಪೆಯನ್ನು `ಡಿಸೆಕ್ಟ್' ಮಾಡಲು ಅಳುಕಿದಾಗ ಅವನ ಉಪಾಧ್ಯಾಯ, `ಕಪ್ಪೆಯನ್ನು ಕತ್ತರಿಸಲು ಹೆದರಿಕೊಂಡರೆ ಹೇಗೆ? ನೀನು ದೊಡ್ಡವನಾದ ಮೇಲೆ ಮುನ್ನೂರು ಚೀನಿಯರನ್ನು ಕತ್ತರಿಸಬೇಕೆಂಬುದು ನೆನಪಿರಲಿ' ಎಂದು ಗದರಿಸಿದ್ದನಂತೆ.
ಎರಡನೇ ವಿಶ್ವಯುದ್ಧದ ನಂತರ ನಾನ್‌ಕಿಂಗ್ ಹೆಚ್ಚು ಸುದ್ದಿಯಾಗಲಿಲ್ಲ. ಜಪಾನ್‌ನೊಂದಿಗೆ ಉತ್ತಮ ಸಂಬಂಧ ಮುಂದುವರೆಸುವ ಉತ್ಸಾಹದಲ್ಲಿದ್ದ ಚೀನಿಯರು ಈ ವಿಷಯವನ್ನು ಕೆದಕಲಿಲ್ಲ. ನಾನ್‌ಕಿಂಗ್‌ನಲ್ಲಿ ಜಪಾನಿಯರು ಚೀನಿಯರನ್ನು ಕೊಂದ ಸಂಖ್ಯೆ (ಸುಮಾರು 3 ಲಕ್ಷ) ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಅಮೆರಿಕದ ಅಣುಬಾಂಬ್‌ನಿಂದಾಗಿ ಸತ್ತವರ ಸಂಖ್ಯೆಗಿಂತ (ಅನುಕ್ರಮವಾಗಿ ಸುಮಾರು 1.40 ಲಕ್ಷ ಮತ್ತು 70 ಸಾವಿರ) ಹೆಚ್ಚಾಗಿತ್ತು. ಜರ್ಮನಿಯ ನಾತ್ಸಿಗಳಿಗೆ ಬಲಿಯಾದ ಯೆಹೂದಿಯರಂತೆ ಚೀನಿ ಬಲಿಪಶುಗಳು ಜಗತ್ತಿನ ಕಣ್ಣಿಗೆ ಬೀಳಲಿಲ್ಲ, ಏಕೆಂದರೆ ಬಲಿಪಶುಗಳೇ ಮೌನವಾಗಿದ್ದರು. ಆ ಮೌನಕ್ಕೆ ಅಮೆರಿಕವೂ ಕಾರಣವಾಗಿತ್ತು. ಶೀತಲ ಯುದ್ಧದ ಸಮಯದಲ್ಲಿ ರಷ್ಯಾ ಮತ್ತು ಚೀನಾದಲ್ಲಿ ಕಮ್ಯೂನಿಸಂ ಬಲವಾಗುತ್ತಿದ್ದುದರಿಂದ ಅಮೆರಿಕಾ ತನ್ನ ಹಿಂದಿನ ಶತ್ರುವಾಗಿದ್ದ ಜಪಾನ್‌ನ ಗೆಳೆತನ ಬಯಸುತ್ತಿತ್ತು.
ಕ್ರೌರ್ಯದ ಅತಿರೇಕಗಳ ನಡುವೆಯೂ ಕಡೊಕಾವ ಎನ್ನುವ ಜಪಾನಿ ಸೈನಿಕನಲ್ಲಿ ಮಾನವೀಯತೆ ಅಂಕುರಗೊಂಡು, `ಸಾವಿಗಿಂತ ಬದುಕೇ ಕೆಲವೊಮ್ಮೆ ಕಷ್ಟಕರ' ಎಂದು ಹೇಳುವ ಆತ, ಇಬ್ಬರು ಚೀನಿಯರನ್ನು ಬಿಡುಗಡೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಲಕ್ಷಾಂತರ ಜನರನ್ನು ಅತ್ಯಂತ ಹಿಂಸೆಯಿಂದ ಕೊಂದಿದ್ದರೂ ಜಪಾನಿಯರಲ್ಲಿ ಮಾನವೀಯತೆ ಇನ್ನೂ ಇತ್ತು ಎನ್ನುವುದನ್ನು ಧ್ವನಿಸುವಂತಿರುವ ಈ ದೃಶ್ಯಕ್ಕೆ ಚೀನಿಯರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ವಿಪರ್ಯಾಸಗಳು ಸಮಕಾಲೀನ ಬದುಕಿನಲ್ಲೂ ಕಂಡುಬರುತ್ತಿರುತ್ತವೆ. ದೆಹಲಿಯ ಬಸ್ಸಿನಲ್ಲಿ ಅತ್ಯಾಚಾರ ಮಾಡಿ, ನತದೃಷ್ಟ ಹೆಣ್ಣುಮಗಳನ್ನು ಬರ್ಬರವಾಗಿ ಹಿಂಸೆಗೈದ ಒಬ್ಬಿಬ್ಬರು ಪಶ್ಚಾತ್ತಾಪ ಪಡುತ್ತಾ ತಮಗೆ ಮರಣದಂಡನೆ ವಿಧಿಸುವಂತೆ ಕೇಳಿಕೊಂಡಿದ್ದಾರೆ ಎನ್ನುವ ವದಂತಿಗಳಿವೆ. ಇಂಥ ಕೊಲೆಗಡುಕರಿಗೆ `ಪಾಪಪ್ರಜ್ಞೆ' ಇದೆ ಎನ್ನುವುದಾದರೆ ಅದರ ಹೊರೆಯಿಂದ ತಪ್ಪಿಸಿಕೊಳ್ಳಲು ಪಶ್ಚಾತ್ತಾಪ ಬಹಳ ಸುಲಭದ ದಾರಿಯಲ್ಲವೆ?      
j.balakrishna@gmail.com

No comments: