`ಪ್ರಜಾವಾಣಿ'-
ಸಾಪ್ತಾಹಿಕ ಪುರವಣಿಯಲ್ಲಿ (ಭಾನುವಾರ, 20-10-2013) ಪ್ರಕಟವಾದ ನನ್ನ ಕತೆ.
ಅಪಘಾತ
ಚಿತ್ರ: ಮಂಜುನಾಥ್ ಎಸ್. ಶಿಂಧೆ
ಒಂದರೆಕ್ಷಣ
ನನಗೆ ಬಸ್ಸಿಂದ ಇಳಿದದ್ದೇ ತಿಳಿಯಲಿಲ್ಲ.
ಬಸ್ಸು ಸರಕ್ಕನೆ ಹಾದು ಹೋಯಿತು.
ಅದು ಹೋದ ರಭಸಕ್ಕೆ ಬೀಸಿದ
ಗಾಳಿ ನನ್ನನ್ನು ಜೋರಾಗಿ ತಳ್ಳಿ ಬೀಳಿಸುವ
ಹಾಗಿತ್ತು. ನನಗೆ ಬೆಚ್ಚಿಬೀಳಲೂ ಸಮಯವಿಲ್ಲವೆನ್ನಿಸಿತ್ತು.
ಒಂದೇ ಕ್ಷಣ... ಜಗತ್ತಿನ ಎಲ್ಲ
ಶಬ್ದಗಳನ್ನೂ ಬಸ್ಸು ತನ್ನ ಹಿಂದೆ
ಭರ್ರನೆ ತಿರುತಿರುಗಿ ದುಂಬಾಲು ಬೀಳುವಂತೆ ಹಿಂದೆಬಂದ
ಗಾಳಿಯಲ್ಲಿಯೇ ಕೊಂಡೊಯ್ಯಿತೇನೋ ಎನ್ನುವಂತಿತ್ತು ತಕ್ಷಣ ಗವ್ವನೆ ಕವಿದ
ಮೌನ.
ಫಳಾರನೆ
ಹಾದುಹೋದ ಬಸ್ಸಿನ ಮುಂಭಾಗದ ಬೆಳಕು
ಕಣ್ಣು ಕುರುಡಾಗಿಸಿತ್ತು. ಕತ್ತಲಲ್ಲಿ ಯಾವ ನೆರಳೂ ಕಾಣಿಸುತ್ತಿರಲಿಲ್ಲ.
ನನಗೆ ಯಾವ ದಿಕ್ಕಿನಲ್ಲಿ ನನ್ನೂರು
ಇದೆ ಎನ್ನುವುದು ತಿಳಿಯುತ್ತಲೇ ಇರಲಿಲ್ಲ. ಎಷ್ಟು ಹೊತ್ತು ಹಾಗೆ
ನಿಂತಿದ್ದೆನೋ ನನಗೆ ತಿಳಿಯಲೇ ಇಲ್ಲ,
ಏಕೆಂದರೆ ಸಮಯ ಸಹ ಕತ್ತಲಿಗೆ
ಅವಿತು ಕೂತಿರುವಂತೆ ಭಾಸವಾಗುತ್ತಿತ್ತು.
ನಿಧಾನವಾಗಿ
ಬೆಳದಿಂಗಳ ಬೆಳಕಿಗೆ ಕಣ್ಣು ಹೊಂದಿಕೊಂಡಿತು.
ಊರಕಡೆಗಿನ ಕಾಲು ಹಾದಿ ತನ್ನಂತಾನೇ
ತೆರೆದುಕೊಂಡಿತು. ನಾನು ಊರದಿಕ್ಕಿಗೇ ಮುಖಮಾಡಿ
ನಿಂತಿದ್ದೆ. ಎಡಗಡೆ ಸಿಮೆಂಟಿನಿಂದ ಮಾಡಿದ
ಫಲಕದ ಮೇಲೆ ‘ಘಟ್ಟ ೨.೦ ಕಿ.ಮೀ.’
ಎಂದು ಬರೆದು ಬಾಣದ ಗುರುತೊಂದು
ಇತ್ತು. ಊರಿನ ಕಡೆಗೆ ಹೆಜ್ಜೆ
ಹಾಕಿದೆ. ಈ ಕಾಲುಹಾದಿಯಲ್ಲಿ ನಡೆದು
ಇಪ್ಪತ್ತು ವರ್ಷಗಳಾಗಿವೆಯಲ್ಲವೆ! ಇಪ್ಪತ್ತು ವರ್ಷಗಳು! ಸಮಯ ಕಳೆದಿದ್ದೇ ತಿಳಿಯಲಿಲ್ಲ್ಲ.
ಬದುಕಲ್ಲಿ
ಏನೆಲ್ಲಾ ಬದಲಾವಣೆಗಳು ನಡೆದುಹೋದವು. ನಾನು ಮಾಡಿದ್ದು ಸರಿಯೋ
ತಪ್ಪೋ ಎಂಬುದರ ಬಗ್ಗೆ ಬಹಳಷ್ಟು
ಆಲೋಚಿಸಿದ್ದೇನೆ. ನನ್ನ ಮನಸ್ಸು ನನ್ನದೇ
ತಪ್ಪು ಎಂಬುದನ್ನು ನನಗೆ ಮನದಟ್ಟು ಮಾಡಿದೆ.
ಅಮ್ಮ ಮತ್ತು ಅಪ್ಪ ಈಗ
ನನ್ನನ್ನು ಕಂಡು ಏನು ಹೇಳಬಹುದು?
ಸುಮ್ಮನೆ ಹೋಗಿ ಎದುರಿಗೆ ನಿಂತರೆ
ಅಮ್ಮನಿಗೆ ತನ್ನ ಕರುಳಕುಡಿಯ ಗುರುತು
ಹತ್ತಬಹುದೆ? ನನ್ನನ್ನು ಕಂಡು ಸಂತೋಷ ಪಡುತ್ತಾಳೆಯೆ?
ಅಥವಾ ಅಳುತ್ತಾಳೆಯೆ? ಅಪ್ಪ ಏನನ್ನಬಹುದು? ತಮ್ಮ
ಶೇಖರ ಈಗ ಎಷ್ಟು ಬೆಳೆದಿರಬಹುದು?
ಆಗ ಅವನಿಗೆಷ್ಟು ವಯಸ್ಸು.... ಎರಡೋ ಮೂರೋ ವರ್ಷವಾಗಿರಬಹುದು.
ಅಥವಾ...
ಈ
ಇಪ್ಪತ್ತು ವರ್ಷಗಳಲ್ಲಿ ಏನೇನು ನಡೆದುಹೋಗಿರಬಹುದು! ಯಾರ್ಯಾರಿಗೆ ಸಾವು ಬಂದಿರಬಹುದು!
ಛೆ! ಹಾಗೆಂದುಕೊಳ್ಳುವುದು ಬೇಡ. ಹೆಜ್ಜೆ ಸವೆಯುತ್ತಲೇ
ಇಲ್ಲವೆನ್ನಿಸಿತು. ಅದ್ಯಾಕೋ ವಿಪರೀತದ ನಿಶ್ಶಬ್ದ
ಹೆದರಿಕೆ ಹುಟ್ಟಿಸುವಂತಿತ್ತು. ಹೆಜ್ಜೆಯ ಸದ್ದೂ ಕೇಳದಂಥ
ನಿಶ್ಶಬ್ದ!
ನನಗೆ
ಗೊತ್ತಿದೆ ನಾನು ಮಾಡಿದ್ದು ತಪ್ಪು
ಎಂದು. ಆದರೆ ಆ ಕ್ಷಣ
ಎಲ್ಲವನ್ನೂ ಬಿಟ್ಟು ಓಡಿಹೋಗಬೇಕೆನ್ನಿಸಿತ್ತು, ಇರುವುದು ಅದೊಂದೇ
ದಾರಿ ಎನ್ನಿಸಿತ್ತು. ಅದು ಸರಿಯಾದ ದಾರಿಯೇ?
ನನ್ನಲ್ಲಿ ಉತ್ತರವಿಲ್ಲ. ಹೆತ್ತವರನ್ನು ಬಿಟ್ಟು ಓಡಿಹೋದದ್ದು ಆಕ್ಷಮ್ಯ
ಅಪರಾಧವಲ್ಲವೆ? ನನ್ನ ಮೌನವೇ ಉತ್ತರ.
ಪ್ರಶ್ನೆಯೂ ನನ್ನದೆ, ಉತ್ತರವೂ ನನ್ನದೆ.
ಊರು
ಹತ್ತಿರವಾದಂತೆ ನಾನು ಓದಿದ ಶಾಲೆ
ಕಂಡಿತು. ನನಗರಿವಿಲ್ಲದೆ ನನ್ನ ಕಾಲುಗಳು ಶಾಲೆಯ
ಕಡೆಗೆ ಎಳೆದೊಯ್ದವು. ಅಲ್ಲೇ ನಿಂತು ಶಾಲೆಯ
ಕಡೆ ನೋಡಿದೆ. ನನ್ನ ಬದುಕಿನ
ಹಲವಾರು ಅದ್ಭುತ ಕ್ಷಣಗಳನ್ನು ಈ
ಶಾಲೆಯ ಅಂಗಳದಲ್ಲೇ ಕಳೆದಿರುವುದಲ್ಲವೆ? ಒಂದನೇ ತರಗತಿಯಿಂದ ಏಳನೇ
ತರಗತಿಯವರೆಗೂ ಇರುವ ಇವೇ ಒಂದೆರಡು
ಕಟ್ಟಡಗಳು ನನ್ನ ಎರಡನೇ ಮನೆಯಾಗಿದ್ದವು.
ಇವೇ ಮರಗಳಲ್ಲಲ್ಲವೇ ನಾವು ಮರಕೋತಿ ಆಟವಾಡುತ್ತಿದ್ದುದು.
ಅವೇ ಮರಗಳು ನನ್ನನ್ನು ಕೂಗಿ
ಕರೆಯುತ್ತಿರುವಂತೆ ಭಾಸವಾಯಿತು.
ಶಾಲೆಯ
ಅಂಗಳದ ಮಧ್ಯದಲ್ಲಿರುವ ಬಾವುಟ ಹಾರಿಸುವ ಕಂಬ.
ಅಲ್ಲೇ ಕೆಲಹೊತ್ತು ಕೂತುಕೊಳ್ಳಬೇಕೆನ್ನಿಸಿತು. ನನ್ನ ಸಹಪಾಠಿಗಳಾಗಿದ್ದ ಮಂಜ,
ಮುತ್ತ, ಮುನಿಸ್ವಾಮಿ ಎಲ್ಲಾ ಈಗ ಏನಾಗಿರಬಹುದು?
ಈಗವರು ಎದುರಿಗೆ ಸಿಕ್ಕರೂ ನನಗೆ
ಗುರುತು ಸಿಗುವುದಿಲ್ಲ. ನಮ್ಮ ಕ್ಲಾಸಿನಲ್ಲಿ ಇದ್ದವರೇ
ಆರೇಳು ಹುಡುಗಿಯರು. ಅವರ ಹೆಸರುಗಳನ್ನು ನೆನಪಿಸಿಕೊಳ್ಳಲು
ಪ್ರಯತ್ನಿಸಿದೆ... ಗೀತಾ, ಉಷಾ... ಉಹ್ಹೂಂ...
ಎಷ್ಟು ಪ್ರಯತ್ನಿಸಿದರೂ ಉಳಿದವರ ಹೆಸರುಗಳು ನೆನಪಾಗಲಿಲ್ಲ.
ಬೆಳಿಗ್ಗೆ
ಶಾಲೆ ಬೆಲ್ ಹೊಡೆಯುವ ಮೊದಲು
ಮತ್ತು ಸಂಜೆ ಬೆಲ್ ಹೊಡೆದಾಗ
ಇದ್ದಕ್ಕಿದ್ದಂತೆ ಯಾವುದೋ ಸದ್ದಿಗೆ ಹೆದರಿ
ಒಮ್ಮೆಲೇ ದೊಡ್ಡ ಮರವೊಂದರಿಂದ ಹಾರುವ
ಪಕ್ಷಿಗಳ ಬೆದರಿದ ಸದ್ದಿನಂತೆ ಇರುತ್ತಿದ್ದ
ಮಕ್ಕಳ ಚೀರಾಟದ ಶಬ್ದವನ್ನು ಮತ್ತೊಮ್ಮೆ
ಮನದಾಳದಿಂದ ಹೆಕ್ಕಿ ತೆಗೆದು ಕೇಳಲು
ಯತ್ನಿಸಿದೆ.
ಮಂಜ
ಈಗ ಏನಾಗಿರಬಹುದು? ಅವನೊಟ್ಟಿಗಿನ ಜಗಳವೇ ಈ ನನ್ನ
ಸ್ಥಿತಿಗೆ ಕಾರಣವಲ್ಲವೆ? ಯಾವುದೋ ಒಂದು ಸಣ್ಣ
ಕಾರಣ.... ನನ್ನ ಬದುಕನ್ನು ಬದಲಿಸಿದ
ಆ ಕಾರಣವೇ ಈಗ
ನೆನಪಿಲ್ಲ. ಮಂಜನೊಟ್ಟಿಗಿನ ಜಗಳ, ಆಮೇಲೆ ಕೈಕೈ
ಮಿಲಾಯಿಸಿ ಹೊಡೆದಾಟ.... ಯಾರ ಕೈ ಮೇಲಾಗಿತ್ತು?
ಯಾವುದೂ ನೆನಪಿಲ್ಲ. ಆದರೆ ಆ ಹೊಡೆದಾಟದಲ್ಲಿ
ಮಂಜ ಕೆಳಕ್ಕೆ ಬಿದ್ದು ಮುಖ
ಮುಸುಡಿ ಗಾಯ ಮಾಡಿಕೊಂಡಿದ್ದಂತೂ ನಿಜ.
ಆ
ದಿನ ರಾತ್ರಿ ಅವರಪ್ಪ ನನ್ನನ್ನು
ಹೊಡೆಯದೇ ಬಿಡುವುದಿಲ್ಲ ಎಂದು ಹೆದರಿ ಮನೆಬಿಟ್ಟು
ಓಡಿ ಹೋದೆನಲ್ಲಾ....! ಆ ನನ್ನ ಓಟ
ಇಪ್ಪತ್ತು ವರ್ಷಗಳ ನಂತರ ಈಗ
ಊರಿಗೆ ನನ್ನನ್ನು ವಾಪಸ್ಸು ಕರೆತಂದಿದೆ. ಅದ್ಯಾಕೋ
ಓಡಿಹೋದ ನನಗೆ ವಾಪಸ್ಸು ಬರಲೇ
ಬೇಕೆನ್ನಿಸಲಿಲ್ಲ. ಹೆತ್ತವರನ್ನು, ತಮ್ಮನನ್ನು ನೋಡಲು ಬರಲೇ ಇಲ್ಲ.
ನಾನು ಅತ್ಯಂತ ಕ್ರೂರಿ ಎನ್ನಿಸಿತು.
ನನಗರಿವಿಲ್ಲದೆ ಕಣ್ಣಲ್ಲಿ ನೀರಾಡತೊಡಗಿತು. ಹಾಗೆಯೇ ಕೂತವನು ಮೊಣಕಾಲುಗಳ
ನಡುವೆ ತಲೆಯನ್ನು ಹುದುಗಿಸಿದೆ. ಆ ದಿನ ರಾತ್ರಿಯೇಕೋ
ತೀರಾ ನಿಶ್ಶಬ್ದವೆನ್ನಿಸಿತು.
ಊರಿನೆಡೆಗೆ
ಹೆಜ್ಜೆ ಹಾಕಿದೆ. ಇಡೀ ಊರಿಗೆ
ಊರೇ ನಿದ್ರಿಸುತ್ತಿದೆ.
ಎಲ್ಲಿಯೂ
ಬೆಳಕಿಲ್ಲದಿದ್ದದ್ದು ನೋಡಿ ಕರೆಂಟ್ ಹೋಗಿರಬಹುದು
ಎನ್ನಿಸಿತು. ಆದರೆ ಬೆಳದಿಂಗಳು ಊರಿನ
ಮೇಲೆಲ್ಲಾ ಹಾಲು ಚೆಲ್ಲಿದಂತೆ ಭಾಸವಾಗುತ್ತಿತ್ತು.
ಆಗಸದಲ್ಲಿ ತಟ್ಟೆಯಗಲದ ಚಂದ್ರ ಹೊಳೆಯುತ್ತಿದ್ದ. ಅದೇ
ಊರು... ನಾನು ಹುಟ್ಟಿ ಬೆಳೆದ
ಊರು. ಇಪ್ಪತ್ತು ವರ್ಷಗಳ ನಂತರ ಊರಿಗೆ
ಹಿಂದಿರುಗುತ್ತಿರುವುದು ನನ್ನೆದೆ ಬಡಿತವನ್ನು ಹೆಚ್ಚಿಸಿದಂತಿತ್ತು.
ಎದೆಯ ಮೇಲೆ ಕೈಯಿಟ್ಟೆ. ಅದೂ
ಸಹ ರಾತ್ರಿಯ ನಿಶ್ಶಬ್ದಕ್ಕೆ ಹೆದರಿ
ತನ್ನ ಸದ್ದು ಅಡಗಿಸಿದಂತಿತ್ತು.
ಇಪ್ಪತ್ತು
ವರ್ಷಗಳಾದರೂ ಊರು ಏನೂ ಬದಲಾಗಿಲ್ಲ.
ನನ್ನ ನೆನಪಿನಲ್ಲಿರುವ ಊರು ಹಾಗೂ ಈಗಿರುವ
ಊರು ಎರಡೂ ಒಂದೇ ಆಗಿದೆ.
ನನ್ನ ನೆನಪೇ ನನ್ನೆದುರು ಚಾಪೆಯಂತೆ
ಬಿಡಿಸಿಕೊಂಡು ಹರಡುತ್ತಿದೆಯೇನೋ ಎನ್ನುವಂತಿತ್ತು. ಊರು ಪ್ರವೇಶಿಸಿದಂತೆ ಮೊದಲಿಗೆ
ಸಿಗುವುದು ಕಮ್ಮಾರರ ಓಣಿ. ಆ
ಓಣಿಯಲ್ಲಿ ಹಗಲೆಲ್ಲಾ ಕಬ್ಬಿಣ ಬಡಿಯುವ ಸದ್ದು
ಕೇಳುತ್ತಿರುತ್ತಿತ್ತು. ಈಗಲೂ ಆ ಶಬ್ದಗಳು
ಕಿವಿಗೆ ಕಟ್ಟಿದಂತಿದೆ. ಇಪ್ಪತ್ತು ವರ್ಷಗಳ ಹಿಂದೆಯೇ ಕಮ್ಮಾರ
ವೃತ್ತಿ ಮಾಡುವವರು ಕಡಿಮೆಯಾಗುತ್ತಿದ್ದರು.
ಈಗ
ಬಹುಶಃ ಯಾರೂ ಆ ಕಸುಬಿನಲ್ಲಿ
ಉಳಿದಿಲ್ಲವೆನ್ನಿಸುತ್ತದೆ. ಬೇರೆ ಉದ್ಯೋಗಗಳಲ್ಲಿ ಚದುರಿಹೋಗಿರುತ್ತಾರೆ.
ಕತ್ತಲಲ್ಲಿ ಯಾವುದಾದರೂ ನಾಯಿ ಗವ್ವನೆ ಬೊಗಳುತ್ತಾ
ಮೇಲೆರಗಬಹುದೆಂಬ ಅಂಜಿಕೆಯಾಯಿತು. ಆದರೆ ಯಾವ ನಾಯಿಯೂ
ಎದುರಿಗಾಗಲಿ, ಹಿಂದೆಯಾಗಲಿ ಬರಲಿಲ್ಲ. ಅವೂ ಸಹ ಕತ್ತಲ
ರಾತ್ರಿಗೆ ಹೆದರಿ ನಿದ್ರಿಸುತ್ತಿರಬಹುದೆನ್ನಿಸಿತು.
ಅದರ
ಮುಂದಿನ ಓಣಿಯಲ್ಲಿ ನಾಲ್ಕನೇ ಮನೆಯಲ್ಲವೇ ನನ್ನ
ಮನೆ. ಮನೆ ಹತ್ತಿರಾದಂತೆ ಮೈಯಲ್ಲಿ
ವಿಚಿತ್ರ ಅನುಭವ, ಹೊಟ್ಟೆಯಲ್ಲಿ ಅವರ್ಣನೀಯ
ತೊಳಲಾಟ ಉಂಟಾಗತೊಡಗಿತು. ಅಮ್ಮ ಅಪ್ಪನಿಗೆ ಹೇಳದೇ
ಬಂದು ಏಕಾಏಕಿ ಅವರ ಎದುರಿಗೆ
ನಿಂತು ಅವರಿಗೆ ಅಚ್ಚರಿಯುಂಟುಮಾಡಬೇಕೆಂದು ಹಾಗೆಯೇ ಬಂದುಬಿಟ್ಟಿದ್ದೆ.
ಅವರ ಎದುರಿಗೆ ನಿಂತಾಗ ಏನೆನ್ನಬಹುದು?
ಅದೂ ಈ ಸರಿ ರಾತ್ರಿಯಲ್ಲಿ?
ಯೋಚಿಸುತ್ತಾ ಬಂದವನು ಮನೆಯ ಎದುರಿಗೇ
ನಿಂತಿದ್ದೆ. ಮನೆಯಲ್ಲೇನು, ಇಡೀ ಊರಿನಲ್ಲಿಯೇ ಲೈಟ್ಗಳಿಲ್ಲ.
ಮನೆ
ಬದಲಾಗಿರಬಹುದೆಂದುಕೊಂಡಿದ್ದೆ.
ಏನೂ ಬದಲಾವಣೆಯಿಲ್ಲ. ಬದಲಾವಣೆ ಮಾಡಲು ಅಮ್ಮ
ಅಪ್ಪನ ಬಳಿ ಹಣವಿದೆಯೋ ಇಲ್ಲವೋ.
ಮನಸ್ಸಿಗೆ ಪಿಚ್ಚೆನ್ನಿಸಿತು. ದೊಡ್ಡ ಮಗನಾಗಿದ್ದ ನಾನು
ಅವರನ್ನು ಆ ರೀತಿ ಬಿಟ್ಟುಹೋಗಬಾರದಿತ್ತು
ಎನ್ನಿಸಿತು. ಒಂದೆರಡು ಕ್ಷಣ ಅಲ್ಲಿಯೇ
ನಿಂತಿದ್ದೆ, ಮನೆಯೊಳಗಿನಿಂದ ಏನಾದರೂ ಸದ್ದು ಬರಬಹುದೇನೋ
ಎಂದು. ಯಾವ ಶಬ್ದವೂ ಇಲ್ಲ.
ಎಲ್ಲರೂ ಗಾಢನಿದ್ರೆಯಲ್ಲಿರಬಹುದು. ಬೇಸಿಗೆಯಾಗಿದ್ದರೆ ಅಪ್ಪ ಹೊರಗೆ ಅಂಗಳದಲ್ಲಿ
ಮಲಗುತ್ತಿದ್ದರು. ಆ ದಿನಗಳಲ್ಲಿ ನಾವೂ
ಸಹ ಅಪ್ಪನ ಜೊತೆ ಮಲಗುತ್ತಿದ್ದೆವಲ್ಲವೆ?
ಆದರೆ ಬೆಳಗಿನ ಜಾವ ಮಂಜು
ಬೀಳುತ್ತದೆ ಮತ್ತು ಚಳಿಯಾಗುತ್ತದೆಂದು ನಮ್ಮನ್ನು
ಒಳಕ್ಕೆ ಎತ್ತುಕೊಂಡು ಹೋಗಿ ಮಲಗಿಸಿರುತ್ತಿದ್ದರು.
ಮನೆಯ
ಬಾಗಿಲ ಬಳಿಗೆ ಹೋಗಲು ಏಕೋ
ಅಳುಕೆನ್ನಿಸಿತು. ನಿಧಾನವಾಗಿ ಬಾಗಿಲ ಹತ್ತಿರ ಹೋಗಿ
ನಿಂತೆ. ಚಿಲಕ ತಟ್ಟಲು ಕೈ
ಚಾಚಿದೆ ಆದರೆ, ಕೈ ಏಕೋ
ಮುಂದಕ್ಕೇ ಹೋಗುತ್ತಿಲ್ಲ. ಅಮ್ಮನಿಗೆ ಏನು ಹೇಳಲಿ? ಕತ್ತಲಲ್ಲಿ
ನನ್ನನ್ನು ನೋಡಿ ಯಾರೋ ಅಪರಿಚಿತ
ಎಂದು ಕೂಗಿಕೊಳ್ಳುವರೆ? ಅಮ್ಮನನ್ನು ತಬ್ಬಿಕೊಂಡು ಅಳಬೇಕೆನ್ನಿಸಿತು. ನನ್ನ ಇಪ್ಪತ್ತು ವರ್ಷಗಳ
ದುಗುಡವನ್ನೆಲ್ಲಾ ಅತ್ತು ಅತ್ತು ಖಾಲಿ
ಮಾಡಿಕೊಳ್ಳಬೇಕು. ನನಗೂ ಈ ಬದುಕು
ಸಾಕಾಗಿದೆ. ಮನೆ ಬಿಟ್ಟುಹೋಗಿ ಈ
ಇಪ್ಪತ್ತು ವರ್ಷಗಳು ಒಂದೆಡೆ ನೆಲೆಯೂರಲಾಗದೆ
ದೇಶವೆಲ್ಲಾ ಅಲೆದಾಡಿದ್ದು ಸಾಕಾಗಿದೆ.
ಧೈರ್ಯ
ಮಾಡಿ ಚಿಲುಕ ಅಲುಗಾಡಿಸಿದೆ. ನನ್ನ
ಕೈ ದುರ್ಬಲವೆನ್ನಿಸಿ ಅದು ಸದ್ದೇ ಮಾಡಲಿಲ್ಲವೆನ್ನಿಸಿತು.
ಮತ್ತೊಮ್ಮೆ ಜೋರಾಗಿ ಅಲುಗಾಡಿಸಿದೆ. ಮನೆಯೊಳಗಿನಿಂದ
ಯಾರಾದರೂ ಮಿಸುಕಾಡುವ ಶಬ್ದ ಬರಬಹುದೆಂದು ಆಲಿಸಿದೆ.
ಯಾವ ಶಬ್ದವೂ ಬರಲಿಲ್ಲ. ಮತ್ತೊಮ್ಮೆ
ಇನ್ನೂ ಜೋರಾಗಿ ಚಿಲುಕ ತಟ್ಟಿದೆ.
ಯಾರೂ ಬರಲಿಲ್ಲ. ನನ್ನ ಒಣಗಿ ಹೋದ
ಗಂಟಲಿನಿಂದ ‘ಅಮ್ಮಾ’ಎಂದು ಕರೆದೆ.
ಧ್ವನಿ ಹೊರಡಲೇ ಇಲ್ಲವೆನ್ನಿಸಿತು. ಮತ್ತೊಮ್ಮೆ
ಸ್ವಲ್ಪ ಜೋರಾಗಿ ‘ಅಮ್ಮಾ’ಎಂದೆ.
ಯಾರೂ ಬರಲಿಲ್ಲ. ‘ಅಪ್ಪಾ’ ಎಂದು ಕರೆದೆ,
ಪುನಃ ಚಿಲುಕ ತಟ್ಟಿದೆ. ‘ಶೇಖರಾ’
ಎಂದು ತಮ್ಮನನ್ನು ಕರೆದೆ.
ಮನೆಯಲ್ಲಿ
ಯಾರೂ ಇದ್ದಂತಿರಲಿಲ್ಲ. ಅಂಗಳದಲ್ಲಿದ್ದ ಕಿಟಕಿ ತೆರೆದೇ ಇತ್ತು.
ಹೋಗಿ ಒಳಕ್ಕೆ ಇಣುಕಿದೆ. ಕತ್ತಲು
ಇದ್ದುದರಿಂದ ಏನೂ ಸರಿಯಾಗಿ ಕಾಣುತ್ತಲೇ
ಇರಲಿಲ್ಲ. ಕಿಟಕಿಯಿಂದ ‘ಅಮ್ಮಾ’ಎಂದು ಕರೆದೆ.
ಯಾವ ಶಬ್ದವೂ ಇಲ್ಲ. ಬಹುಶಃ
ಎಲ್ಲರೂ ಯಾವುದಾದರೂ ಊರಿಗೆ ಹೋಗಿರಬಹುದು ಎನ್ನಿಸಿತು.
ಯಾವ ಊರಿಗೆ ಹೋಗಿರಬಹುದು? ನನಗೆ
ಯಾರ್ಯಾರು ನೆಂಟರು ಇದ್ದರು
ಎನ್ನುವುದೇ ಮರೆತುಹೋಗಿದೆ. ಏನು ಮಾಡಬೇಕೆಂದು ತೋಚಲಿಲ್ಲ.
ಕಿಟಕಿಗೆ ಎರಡೂ ಕೈ ಆನಿಸಿ
ನಿಂತಿದ್ದ ನನ್ನ ಕಾಲಿಗೆ ಏನೋ
ಸಿಕ್ಕಂತಾಯಿತು. ಸ್ವಲ್ಪ ಹಿಂದಕ್ಕೆ ಸರಿದು
ಅದೇನೆಂದು ಬಗ್ಗಿ ನೋಡಿದೆ.
ಒಂದು
ಜೊತೆ ಹವಾಯಿ ಚಪ್ಪಲಿ. ಹಾವು
ತುಳಿದವನಂತೆ ಬೆಚ್ಚಿ ಹಿಂದಕ್ಕೆ ಸರಿದೆ.
ಬೆಳದಿಂಗಳ ಬೆಳಕಿನಲ್ಲಿ ಆ ಹವಾಯಿ ಚಪ್ಪಲಿಗಳು
ಸ್ಪಷ್ಟವಾಗಿ ಕಾಣುತ್ತಿದ್ದವು. ನನ್ನ ಮೈ ಬೆವರಿಟ್ಟಿತು.
ಆ ಹವಾಯಿ ಚಪ್ಪಲಿಗಳು....
ನನಗೆ ಚೆನ್ನಾಗಿ ನೆನಪಿದೆ ನಾನು ಚಿಕ್ಕವನಾಗಿದ್ದಾಗ
ನಾನು ತೊಡುತ್ತಿದ್ದ ಹವಾಯಿ ಚಪ್ಪಲಿಗಳು. ನೀಲಿ
ಪಟ್ಟಿಯ, ಹೆಬ್ಬೆರಳ ಜಾಗದಲ್ಲಿ ಸವೆದಿರುವ ನನ್ನ ಹವಾಯಿ ಚಪ್ಪಲಿಗಳು.
ಅದು ನನ್ನ ನೆನಪಿನಲ್ಲಿ ಉಳಿದಿರಲು
ಇನ್ನೂ ಒಂದು ಕಾರಣವಿದೆ.
ಇಪ್ಪತ್ತು
ವರ್ಷದ ಹಿಂದಿನ ಆ ರಾತ್ರಿ
ನೆನಪಾಯಿತು. ಆ ರಾತ್ರಿ ಎಲ್ಲರೂ
ಮಲಗಿದ್ದಾಗ ನಾನು ಮನೆ ಬಿಟ್ಟು
ಓಡಿಹೋಗಬೇಕೆಂದು ನಿರ್ಧಾರಮಾಡಿ ನಿಧಾನವಾಗಿ ಎದ್ದು ಮನೆಯಿಂದ ಹೊರಬಂದೆ.
ನನ್ನ ಈ ಹವಾಯಿ ಚಪ್ಪಲಿಗಳು
ಇಲ್ಲೇ ಈ ಕಿಟಕಿಯ ಬಳಿ
ಮನೆಯವರ ಇತರ ಚಪ್ಪಲಿಗಳ ಜೊತೆ
ಈಗ ಇರುವ ಸ್ಥಾನದಲ್ಲೇ ಇದ್ದವು.
ಚಪ್ಪಲಿಗಳನ್ನು ಕಾಲಿಗೇರಿಸಿದವನು ಅವು ಶಬ್ದ ಮಾಡಬಹುದೆಂದು
ಅವುಗಳನ್ನು ಅಲ್ಲೇ ಬಿಟ್ಟು ಅಲ್ಲಿಂದ
ಸದ್ದಿಲ್ಲದಂತೆ ನಡೆದು ಹೋಗಿದ್ದೆ. ರಾತ್ರಿ
ಅಷ್ಟು ಹೊತ್ತಿನಲ್ಲಿ ಯಾವುದೂ ಬಸ್ಸುಗಳಿಲ್ಲದ ಕಾರಣ
ಕೋಲಾರದವರೆಗೂ ನಡೆದೇ ಹೊರಟೆ. ಆ
ರೀತಿ ನಡೆಯುವಾಗ ಕಲ್ಲು ಮುಳ್ಳು ತಗುಲಿ
ಎಷ್ಟು ಸಾರಿ ಈ ಚಪ್ಪಲಿ
ನೆನಪಾಗಿಲ್ಲ! ನನ್ನ ಈ ಚಪ್ಪಲಿಯನ್ನು
ಅದೇಕೇ ಅದೇ ಸ್ಥಳದಲ್ಲಿ ಇಷ್ಟು
ವರ್ಷಗಳ ಕಾಲ ಬಿಟ್ಟಿದ್ದಾರೆ? ನಾನು
ಪುನಃ ಬಂದೇ ಬರುತ್ತೇನೆನ್ನುವ ಖಾತ್ರಿಯ
ಮೇಲೆಯೇ? ಅಥವಾ ಅವುಗಳನ್ನು ಕಂಡಾಗಲೆಲ್ಲಾ
ನನ್ನ ನೆನಪಾಗುತ್ತಿರಲಿ ಎಂದೇ? ಹಾಗೆಯೇ ಕೂತು
ಆ ಚಪ್ಪಲಿಗಳನ್ನು ಮತ್ತೊಮ್ಮೆ
ನೋಡಿದೆ. ಅವೇ ಚಪ್ಪಲಿಗಳು.
ತಲೆ
ಗಿರಗಿರನೆ ಸುತ್ತುತ್ತಿರುವಂತೆ ಭಾಸವಾಯಿತು. ಪಕ್ಕದಲ್ಲೇ ಇದ್ದ ಜಗುಲಿಯ ಮೇಲೆ
ಕೂತೆ. ಇದೇ ಜಗುಲಿಯ ಮೇಲೆ
ಅಪ್ಪನ ಬಹುಪಾಲು ಸಮಯ ಕಳೆಯುತ್ತಿತ್ತು.
ಊಟ ಆದ ತಕ್ಷಣ ಅಪ್ಪ
ಟವಲ್ಲು ಹಾಸಿ ಕೂತನೆಂದರೆ ಯಾರಾದರೂ
ಊರವರು ಸಹ ಬಂದು ಅವರ
ಜೊತೆಗೆ ಕೂತು ಅದೂ ಇದೂ
ಮಾತನಾಡುತ್ತಾ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದರು. ನನ್ನ
ತಲೆಯಲ್ಲಿ ವಿಚಿತ್ರ ಆಲೋಚನೆಗಳು ಬರತೊಡಗಿದ್ದವು.
ಅಮ್ಮ,
ಅಪ್ಪ, ಶೇಖರ ಎಲ್ಲರೂ ಎಲ್ಲಿಗೆ
ಹೋಗಿರಬಹುದು? ನನ್ನ ಇಪ್ಪತ್ತು ವರ್ಷಗಳ
ಹಿಂದಿನ ಚಪ್ಪಲಿಗಳು ಏಕೆ ಇನ್ನೂ ಅಲ್ಲೇ
ಇವೆ? ತಲೆ ಧಿಂ ಎಂದು
ಕಣ್ಣೆವೆಗಳು ಭಾರವೆನ್ನಿಸಿತು. ಹಾಗೆಯೇ ಜಗುಲಿಯ ಮೇಲೆ
ಮಲಗಿದೆ. ಇಲ್ಲೇ ಮಲಗಿರೋಣ, ಹೊರ
ಹೋಗಿರುವ ಅಮ್ಮ ಅಪ್ಪ ಅಷ್ಟರಲ್ಲಿ
ಬಂದರೂ ಬರಬಹುದು ಎಂದುಕೊಂಡು.
ಎಷ್ಟು
ಹೊತ್ತು ನಿದ್ರೆ ಮಾಡಿದೆನೋ ನನಗೇ
ತಿಳಿಯಲಿಲ್ಲ. ಯಾರೋ ತಲೆ ನೇವರಿಸಿದಂತೆ
ಭಾಸವಾಯಿತು, ‘ಚಂದ್ರೂ... ಚಂದ್ರೂ’ ಎಂದು ಪಿಸುಗುಟ್ಟಿದಂತೆ
ಅನ್ನಿಸಿತು. ನಿಧಾನವಾಗಿ ಕಣ್ಣು ತೆರೆದೆ. ಅವು
ತೆರೆದಂತೆ ಭಾರಕ್ಕೆ ಪುನಃ ಮುಚ್ಚಿಕೊಳ್ಳುವಂತೆ
ಭಾಸವಾಗುತ್ತಿತ್ತು. ಬಲವಂತವಾಗಿ ಎದ್ದು ಕೂತು ಕಣ್ಣುಜ್ಜಿ
ನೋಡಿದರೆ ಅಮ್ಮನೇ ನನ್ನ ತಲೆಯ
ಬಳಿ ಕುಳಿತಿದ್ದಳು. ಆಕಾಶದಲ್ಲಿ ಚಂದ್ರ ಇನ್ನೂ ಪ್ರಕಾಶವಾಗಿ
ಹೊಳೆಯುತ್ತಿತ್ತು. ಅಮ್ಮ ನನ್ನ ಕೈ
ಹಿಡಿದುಕೊಂಡಿದ್ದಳು.
ನನಗೆ
ಮಾತೇ ಹೊರಡಲಿಲ್ಲ. ಅಮ್ಮನೇ, ‘ಎಲ್ಲಿಗೆ ಹೋಗಿಬಿಟ್ಟಿದ್ದೆಯಪ್ಪಾ ಚಂದ್ರು’
ಎಂದಳು. ನನಗೇನು ಹೇಳಬೇಕೋ ತೋಚಲಿಲ್ಲ.
‘ಅಮ್ಮ ಅಪ್ಪ ಬೇಡವಾದರೆ ನಿನಗೆ?’
ಎಂದಳು ನನ್ನ ಮುಖವನ್ನು ಸವರುತ್ತಾ.
ಇಪ್ಪತ್ತು ವರ್ಷಗಳ ನನ್ನ ದುಗುಡ,
ದುಃಖ ಎಲ್ಲವನ್ನೂ ಒಮ್ಮೆಲೇ ಹೊರಹಾಕಬೇಕೆನ್ನಿಸಿತು. ಅಮ್ಮನನ್ನು
ಅಪ್ಪಿಕೊಂಡು ಜೋರಾಗಿ ಅತ್ತುಬಿಟ್ಟೆ. ಅಮ್ಮ
ನನ್ನ ತಲೆ ನೇವರಿಸುತ್ತಾ, ‘ಅಳಬೇಡ.
ನೀನು ವಾಪಸ್ಸು ಬಂದೆಯೆಲ್ಲಾ ಅಷ್ಟೇ
ಸಾಕು. ಅಮ್ಮ ಇನ್ನು ನಿನ್ನನ್ನು
ಬಿಡುವುದಿಲ್ಲ’ ಎಂದಳು. ಎಷ್ಟು ಹೊತ್ತು
ಕಣ್ಣೀರು ಹಾಕಿದೆನೋ ನನಗೆ ತಿಳಿದಿಲ್ಲ. ಸಮಯವೇ
ವಿಚಿತ್ರವಾಗಿ ವರ್ತಿಸತೊಡಗಿದೆ ಎನ್ನಿಸತೊಡಗಿತು. ಅಮ್ಮನನ್ನು ತಬ್ಬಿಕೊಂಡೇ ಇದ್ದೆ.
ಅತ್ತೂ
ಅತ್ತೂ ಬಳಲಿದ ನನಗೆ ಪುನಃ
ನಿದ್ರೆ ಆವರಿಸತೊಡಗಿತು. ‘ಅಮ್ಮ, ನಿದ್ರೆ ಬರುತ್ತಿದೆ.
ನಿನ್ನ ತೊಡೆಯ ಮೇಲೆ ಮಲಗಲೆ?’
ಅಮ್ಮನ ಮುಖ ನೋಡಿದೆ. ಬೆಳದಿಂಗಳ
ಬೆಳಕಲ್ಲಿ ಅಮ್ಮನ ಕಣ್ಣಲ್ಲೂ ನೀರು
ಸುರಿಯುತ್ತಿತ್ತು. ಇಪ್ಪತ್ತು ವರ್ಷಗಳ ನಂತರ ಅಮ್ಮ
ಹೇಗಾಗಿರಬಹುದೆಂದು ಹಲವಾರು ಊಹೆಗಳನ್ನು ಮಾಡಿದ್ದೆ.
ಕೂದಲು ಬೆಳ್ಳಗಾಗಿರಬಹುದು, ಮುಖ ಸುಕ್ಕುಗಟ್ಟಿರಬಹುದು....... ಆದರೆ ಅಮ್ಮನಲ್ಲಿ
ಯಾವ ಬದಲಾವಣೆಯೂ ಕಾಣಲಿಲ್ಲ. ಅದೇ ಅಮ್ಮ... ಇಪ್ಪತ್ತು
ವರ್ಷಗಳ ಹಿಂದಿನ ನನ್ನಮ್ಮ. ಅಮ್ಮ
ಜಗುಲಿಯ ಗೋಡೆಗೆ ಒರಗಿ ಕೂತರು.
ನಾನು
ಕೊಂಚ ಬದಿಗೆ ಸರಿದು ಆಕೆಯ
ತೊಡೆಯ ಮೇಲೆ ತಲೆಯಿಟ್ಟು ಮಲಗಿದೆ.
ಅಮ್ಮನ ಕೈ ನನ್ನ ತಲೆಯ
ಕೂದಲಿನಲ್ಲಿ ಆಡತೊಡಗಿತು. ಉಂಟಾದ ನಿರಾಳತೆಯಿಂದಾಗಿ ಹಾಗೂ
ಬಳಲಿಕೆಯಿಂದಾಗಿ ನಿದ್ರೆ ಇನ್ನೂ ಗಾಢವಾಗಿ
ಆವರಿಸಿತು.
ಎಚ್ಚೆತ್ತಾಗ
‘ಅಮ್ಮಾ’ ಎಂದು ಕರೆಯುತ್ತಾ ಎದ್ದು
ಕೂತೆ. ಯಾರೂ ಇರಲಿಲ್ಲ. ಅದೇ
ನೀರವ ಮೌನ. ಪುನಃ ‘ಅಮ್ಮಾ’
ಎಂದು ಜೋರಾಗಿ ಕರೆದೆ. ಯಾವ
ಉತ್ತರವೂ ಬರಲಿಲ್ಲ. ಅಮ್ಮ ಮನೆಯೊಳಕ್ಕೆ ಹೋಗಿರಬಹುದು
ಎಂದುಕೊಂಡು ಬಾಗಿಲು ತಳ್ಳಿದೆ. ಒಳಗಿನಿಂದ
ಚಿಲುಕ ಹಾಕಿದಂತಿತ್ತು. ಬಾಗಿಲು ತಟ್ಟಿದೆ.
ಪುನಃ
ಪುನಃ ‘ಅಮ್ಮಾ, ಅಮ್ಮಾ’ ಎಂದು
ಕರೆದೆ. ನಿಶ್ಶಬ್ದವೇ ಎಲ್ಲದಕ್ಕೂ ಉತ್ತರವಾಗಿತ್ತು. ಕಿಟಕಿಯ ಬಳಿ ನನ್ನ
ಬಾಲ್ಯದ ಹವಾಯಿ ಚಪ್ಪಲಿಗಳು ಅಲ್ಲೇ
ಬೆಳದಿಂಗಳ ಬೆಳಕಿನಲ್ಲಿ ಕಾಣುತ್ತಿದ್ದವು. ಒಂದರೆಕ್ಷಣ ನಾನೇ ಗಾಬರಿಗೊಂಡೆ. ಹಾಗಾದರೆ
ಅಮ್ಮನನ್ನು ಕಂಡದ್ದು ನಾನು ಕನಸಿನಲ್ಲಿಯೇ?
ಅದಕ್ಕೇ ಆಕೆ ನನ್ನ ಬಾಲ್ಯದ
ನೆನಪಿನ ರೂಪದಲ್ಲೇ ಇದ್ದಳೆ? ಅಮ್ಮನನ್ನು ಕಂಡದ್ದು
ನಾನು ಕನಸಿನಲ್ಲಿ ಎಂದು ತಿಳಿದು ದುಃಖ
ಉಮ್ಮಳಿಸಿ ಬಂತು. ಪುನಃ ಜಗುಲಿಗೆ
ಬಂದು ಕೂತೆ.
ಅದ್ಯಾಕೋ
ತೀರಾ ಬೇಸರವಾಗತೊಡಗಿತು. ಎದ್ದು ವಾಪಸ್ಸು ಹೊರಟುಬಿಡೋಣ
ಎನ್ನಿಸಿ ಎದ್ದು ನಿಂತೆ. ಇಪ್ಪತ್ತು
ವರ್ಷಗಳ ಹಿಂದೆ ಇಂಥದೇ ರಾತ್ರಿಯಲ್ಲಲ್ಲವೇ
ನಾನು ಮನೆ ಬಿಟ್ಟು ಓಡಿ
ಹೋದದ್ದು? ಆ ದಿನ ಮನೆಯಲ್ಲಿ
ಎಲ್ಲರೂ ಇದ್ದರು. ಅವರನ್ನೆಲ್ಲಾ ಬಿಟ್ಟು
ನಾನು ದೂರ ಹೊರಟುಹೋದೆ. ಈ
ದಿನ ನಾನು ವಾಪಸ್ಸು ಬಂದರೂ
ಯಾರೂ ಇಲ್ಲ. ಆದರೂ ನಾನು
ಬಿಟ್ಟು ಹೊರಡಲೇ ಬೇಕಾಗಿದೆ.
ತಲೆ
ತಗ್ಗಿಸಿ ಬಸ್ ಸ್ಟಾಪಿನೆಡೆಗೆ ಹೆಜ್ಜೆ
ಹಾಕಿದೆ. ಪುನಃ ಬಿಟ್ಟು ಹೊರಡುವುದು
ತೀರಾ ದುಃಖದ ಕಾರ್ಯವೆನ್ನಿಸುತ್ತಿತ್ತು. ಪುನಃ ನಾನು
ವಾಪಸ್ಸು ಬರುತ್ತೇನೆಯೆ? ಅಮ್ಮನನ್ನು ನಾನು ಕಂಡದ್ದು ಕನಸೋ,
ಭ್ರಮೆಯೋ ಒಂದೂ ತಿಳಿಯುತ್ತಿರಲಿಲ್ಲ. ಆದರೆ
ಅಮ್ಮನ ಮುಖ ಮಾತ್ರ ಸ್ಪಷ್ಟವಾಗಿ
ನೆನಪಿದೆ. ಆಕೆಯನ್ನು ಅಪ್ಪಿಕೊಂಡು ಅತ್ತದ್ದು ಖಂಡಿತಾ ವಾಸ್ತವ ಎನ್ನಿಸುತ್ತಿದೆ.
ಆಕೆಯನ್ನು ಅಪ್ಪಿಕೊಂಡು ಅತ್ತಾಗ, ಆಕೆ ತಲೆ
ನೇವರಿಸಿದಾಗ ಸಿಕ್ಕ ಸಾಂತ್ವನದ ಸುಖದಂತಹ
ಹಿತಕರ ಅನುಭವ ನಾನು ಬದುಕಿನಲ್ಲಿ
ಎಂದೂ ಅನುಭವಿಸಿರಲಿಲ್ಲ. ಇಪ್ಪತ್ತು ವರ್ಷಗಳಿಂದ ನಾನು ಆ ಸುಖದಿಂದ,
ಅಕ್ಕರೆಯಿಂದ ನಾನು ವಂಚಿತನಾಗಿದ್ದೆನಲ್ಲಾ....
ನನ್ನಷ್ಟಕ್ಕೆ
ನಾನೇ ಆಲೋಚಿಸುತ್ತಾ ಬಸ್ ಸ್ಟಾಪಿನ ಹತ್ತಿರ
ಹತ್ತಿರಕ್ಕೆ ಬಂದುಬಿಟ್ಟಿದ್ದೆ. ಯಾರೋ ಜನಗಳು ಮಾತನಾಡುತ್ತಿರುವ
ಸದ್ದು ಕೇಳಿಸಿತು. ಮಾತುಗಳು ಬಸ್ಸ್ಟಾಪಿನ
ಕಡೆಯಿಂದ ಬರುತ್ತಿದ್ದವು. ಯಾರೋ ಮಾತನಾಡಲು ಜನ
ಸಿಕ್ಕರಲ್ಲಾ ಅಷ್ಟೇ ಸಾಕು, ಅವರನ್ನೇ
ಊರಿನವರ ಬಗ್ಗೆ ನನ್ನ ಅಮ್ಮ
ಅಪ್ಪನ ಬಗ್ಗೆ ವಿಚಾರಿಸಬಹುದು ಎನ್ನುತ್ತ
ಸರಸರನೆ ಸದ್ದು ಬಂದ ಕಡೆಗೆ
ನಡೆದೆ. ‘ಯಾವುದೋ ಬಸ್ಸೋ ಲಾರಿಯೋ
ಹೊಡೆದುಕೊಂಡು ಹೋಗಿರಬೇಕು ಎನ್ನುತ್ತಿದ್ದದ್ದು ಕೇಳಿಸಿತು.‘ಯಾವ ಊರಿನವನೋ ಪಾಪ,
ಹೊಸಬನಂತಿದ್ದಾನೆ. ಪ್ರಾಣ ಹೋಗಿ ಎಷ್ಟೊತ್ತಾಗಿದೆಯೋ
ಏನೋ ಎಂದ ಮತ್ತೊಬ್ಬ. ಜನ
ಗುಂಪುಗೂಡಿದ್ದರು. ಅಲ್ಲೊಬ್ಬರು ಇಲ್ಲೊಬ್ಬರು ಟಾರ್ಚ್ ಹಿಡಿದುಕೊಂಡಿದ್ದರು. ಯಾವುದೋ
ಅಪಘಾತವಾಗಿರಬೇಕು ಎನ್ನಿಸಿತು. ಹಾಗೆಯೇ ಮುನ್ನಡೆದು ‘ಏನಾಗಿದೆ?
ಯಾರಿಗೆ ಆಕ್ಸಿಡೆಂಟ್ ಆಗಿದೆ?’ ಎಂದು ಕೇಳಿದೆ.
ಜನರೆಲ್ಲಾ ಅವರಷ್ಟಕ್ಕೆ ಅವರೇ ಮಾತನಾಡಿಕೊಳ್ಳುತ್ತಿದ್ದರು. ಅವರಿಗೆ ನನ್ನ
ಮಾತು ಕೇಳಿಸಲೇ ಇಲ್ಲ. ನಾನೇ
ಅವರ ನಡುವೆ ನುಗ್ಗಿ ಕೆಳಗೆ
ಬಿದ್ದಿರುವ ವ್ಯಕ್ತಿಯನ್ನು ನೋಡಿದೆ. ಪಕ್ಕದಲ್ಲಿದ್ದ ಒಬ್ಬಾತ
ತನ್ನ ಟಾರ್ಚ್ ಬೆಳಕನ್ನು ಆ
ವ್ಯಕ್ತಿಯ ಮುಖದ ಮೇಲೆ ಬಿಟ್ಟ.
ಕೆಳಗೆ ಬಿದ್ದಿದ್ದ ಶವ ನನ್ನದೇ ಆಗಿತ್ತು.
j.balakrishna@gmail.com
1 ಕಾಮೆಂಟ್:
ಈ ವಿಧಾನ ಅನುಸರಿಸಿ, ಅಂದರೆ ಸತ್ತ ವ್ಯಕ್ತಿಯೇ ಕಥೆಯನ್ನು ಹೇಳುವ, ಮುಂದುವರಿಸುವ ಅನೇಕ ಕಥೆಗಳನ್ನು ಓದಿದ್ದೇನೆ. ಆದರೆ ಇಲ್ಲಿ ಕುತೂಹಲ ಮತ್ತು ಸಂಬಂಧಗಳ ಸಹಜ ಗೊಂದಲಗಳನ್ನು ಕೊನೆ ತನಕ ಕಾದುಕೊಂಡಿರುವುದು ಚೆನ್ನಾಗಿದೆ
ಕಾಮೆಂಟ್ ಪೋಸ್ಟ್ ಮಾಡಿ