ಸೋಮವಾರ, ಆಗಸ್ಟ್ 10, 2015

ಮುಲ್ಲಾ ನಸ್ರುದ್ದೀನ್ ಕತೆಗಳ 41ನೇ ಕಂತು

ಆಗಸ್ಟ್ 2015ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 41ನೇ ಕಂತು


ನಿರ್ಗತಿಕರು
ನಸ್ರುದ್ದೀನ್ ನಮಾಜಿಗೆಂದು ಮಸೀದಿಗೆ ಹೋಗಿದ್ದ. ನಮಾಜು ಮಾಡುತ್ತಿದ್ದ ವಿದ್ವಾಂಸ ಮೌಲ್ವಿಯೊಬ್ಬ ದೇವರಿಗೆ ಪ್ರಾರ್ಥನೆ ಮಾಡುತ್ತಾ, `ಹೋ ದೇವರೇ, ನಾನು ಎಷ್ಟು ವಿದ್ವಾಂಸನಾದರೇನು? ನಾನು ನಿನ್ನ ಮುಂದೆ ನಿರ್ಗತಿಕ’ ಎಂದು ಪ್ರಾರ್ಥಿಸಿ ಮುಂಡಿಯೂರಿದ.
ಅದಾದ ನಂತರ ಅಲ್ಲೇ ಇದ್ದ ಅತ್ಯಂತ ಸಿರಿವಂತನೊಬ್ಬ, `ಹೋ ದೇವರೇ, ನಾನು ಎಷ್ಟು ಸಿರಿವಂತನಾದರೇನು? ನಾನು ನಿನ್ನ ಮುಂದೆ ನಿರ್ಗತಿಕ’ ಎಂದು ಪ್ರಾರ್ಥಿಸಿ ಅವನೂ ಮುಂಡಿಯೂರಿದ.
ಪಕ್ಕದಲ್ಲೇ ಇದ್ದ ನಸ್ರುದ್ದೀನ್ ತಾನು ನಿಜವಾಗಿಯೂ ನಿರ್ಗತಿಕನಾಗಿದ್ದ. ಅವನೂ ಸಹ, `ಹೋ ದೇವರೇ, ನಾನೂ ನಿರ್ಗತಿಕ’ ಎಂದು ಮಂಡಿಯೂರಿದ.
ಅದನ್ನು ನೋಡಿದ ಸಿರಿವಂತ ಪಕ್ಕದಲ್ಲಿದ್ದ ಮೌಲ್ವಿಗೆ ತಿವಿಯುತ್ತಾ, `ನೋಡು ಅವನಿಗೆಷ್ಟು ಧಿಮಾಕು! ಅವನನ್ನೂ ನಮ್ಮ ಸಮಕ್ಕೆ ಹೋಲಿಸಿಕೊಳ್ಳುತ್ತಿದ್ದಾನೆ!’ ಎಂದು ಗೊಣಗಿದ.

ಕಾಳು ಮತ್ತು ಕೋಳಿ
ಮುಲ್ಲಾ ನಸ್ರುದ್ದೀನನಿಗೆ ವಿಚಿತ್ರದ ಮಾನಸಿಕ ಕಾಯಿಲೆಯಿತ್ತು. ಆತ ತಾನೊಂದು ಧಾನ್ಯದ ಕಾಳು ಎಂದುಕೊಂಡಿದ್ದ ಹಾಗೂ ಅದನ್ನೇ ಹೇಳಿಕೊಂಡು ಚಡಪಡಿಸುತ್ತಿದ್ದ. ಅವನ ಕಾಟ, ಹಿಂಸೆ ತಡೆಯಲಾಗದೆ ಫಾತಿಮಾ ಅವನನ್ನು ಹುಚ್ಚಾಸ್ಪತ್ರೆಗೆ ಸೇರಿಸಿದಳು. ಅಲ್ಲಿ ವೈದ್ಯರು ಅವನನ್ನು ಪರಿಶೀಲಿಸಿ, ಸಲಹೆ, ಚಿಕಿತ್ಸೆ ನೀಡಿದರು ಹಾಗೂ ಅವನೊಂದು ಧಾನ್ಯದ ಕಾಳಲ್ಲ ಬದಲಿಗೆ ಎಲ್ಲರಂತೆ ಅವನೂ ಒಬ್ಬ ಮನುಷ್ಯ ಎನ್ನುವ ಭಾವನೆ ಬರುವಂತೆ ಮಾಡಿದರು. ಕೊನೆಗೊಂದು ದಿನ ಅವನು ಎಲ್ಲ ರೀತಿಯಲ್ಲೂ ಸರಿಹೋಗಿದ್ದಾನೆ ಎಂದನ್ನಿಸಿದಾಗ ಅವನನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ಅವನನ್ನು ಮನೆಗೆ ವಾಪಸ್ಸು ಕರೆದೊಯ್ಯಲು ಅವನ ಪತ್ನಿ ಫಾತಿಮಾ ಸಹ ಬಂದಳು. ಆಸ್ಪತ್ರೆಯಿಂದ ಹೊರಗೆ ಹೋದ ನಸ್ರುದ್ದೀನ್ ಪುನಃ ಏದುಸಿರಿಡುತ್ತಾ ವೈದ್ಯರ ಬಳಿ ಓಡಿ ಬಂದ. 
`ಡಾಕ್ಟರೇ, ಹೊರಗೊಂದು ಕೋಳಿಯಿದೆ. ಅದು ನನ್ನನ್ನು ತಿಂದುಬಿಡಬಹುದೆಂಬ ಹೆದರಿಕೆಯಾಗುತ್ತಿದೆ’ ಎಂದ ನಸ್ರುದ್ದೀನ್.
`ಕೋಳಿಯಿದ್ದರೆ ಇರಲೀ ಬಿಡು. ನೀನೊಂದು ಕಾಳಲ್ಲ ಹಾಗೂ ಅದು ನಿನ್ನನ್ನು ತಿನ್ನಲು ಸಾಧ್ಯವಿಲ್ಲ ಎಂದು ನಿನಗೆ ತಿಳಿದಿದೆ ತಾನೆ?’ ಹೇಳಿದರು ವೈದ್ಯರು.
`ಹೌದು ನನಗೇನೋ ತಿಳಿದಿದೆ, ಆದರೆ ಆ ವಿಷಯ ಆ ಕೋಳಿಗೆ ತಿಳಿದಿರಬೇಕಲ್ಲಾ?’ ಹೇಳಿದ ಹೆದರಿಕೊಂಡ ನಸ್ರುದ್ದೀನ್.

ಉಚಿತ ಸೇವೆ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಕೂತು ಮಾತನಾಡುತ್ತಿದ್ದರು. ನಸ್ರುದ್ದೀನ್ ತನ್ನ ಹಲವಾರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದ. ಅವನ್ನೆಲ್ಲಾ ಕೇಳಿಸಿಕೊಂಡ ಅಬ್ದುಲ್ಲಾ,
`ನಸ್ರುದ್ದೀನ್ ನಿನ್ನಲ್ಲಿ ನಿನಗೇ ತಿಳಿಯದಂತೆ ಹಲವಾರು ಮಾನಸಿಕ ಸಮಸ್ಯೆಗಳಿರುವಂತಿದೆ. ನೀನ್ಯಾಕೆ ಒಬ್ಬ ಮನೋವೈದ್ಯರಲ್ಲಿಗೆ ಹೋಗಿ ಸಲಹೆ ಪಡೆಯಬಾರದು?’ ಎಂದು ಕೇಳಿದ.
`ಹೌದೆ? ಮನೋವೈದ್ಯರು ಏನು ಮಾಡುತ್ತಾರೆ?’ ಕೇಳಿದ ನಸ್ರುದ್ದೀನ್.
`ಅವರು ನಿನ್ನ ಸಮಸ್ಯೆಗಳನ್ನೆಲ್ಲಾ ಕೇಳಿಸಿಕೊಂಡು, ಅವುಗಳನ್ನು ವಿಶ್ಲೇಷಿಸಿ, ಅವು ಏನೆಂಬುದನ್ನು ಗುರುತಿಸುತ್ತಾರೆ’ ಹೇಳಿದ ಅಬ್ದುಲ್ಲಾ.
`ಅದಕ್ಕಾಗಿ ಅವರಿಗೆ ಎಷ್ಟು ಶುಲ್ಕ ಕೊಡಬೇಕು?’ ಕೇಳಿದ ನಸ್ರುದ್ದೀನ್.
`ಅದಕ್ಕೆ ಒಟ್ಟು ಐದಾರು ಸಾವಿರ ಖರ್ಚಾಗಬಹುದು’ ಹೇಳಿದ ಅಬ್ದುಲ್ಲಾ.
`ಅಬ್ಬಾ! ಅಷ್ಟು ದುಬಾರಿಯೇ? ಆ ಕೆಲಸವನ್ನು ನನಗೆ ನನ್ನ ಹೆಂಡತಿ ಫಾತಿಮಾ ದಿನಾ ನನಗೆ ಉಚಿತವಾಗಿಯೇ ಮಾಡುತ್ತಿದ್ದಾಳೆ?’ ಹೇಳಿದ ನಸ್ರುದ್ದೀನ್.

ಅಚ್ಚೇ ದಿನ್!
ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಸಮಯದಲ್ಲೇ ಅಬ್ದುಲ್ಲಾ ಹೊರದೇಶಕ್ಕೆ ಉದ್ಯೋಗಕ್ಕೆ ಹೋಗಬೇಕಾಯಿತು. ಅವನಿಗೆ ಬರುವ ಪತ್ರಗಳನ್ನೆಲ್ಲಾ ಯಾರೋ ಒಡೆದು ಓದುತ್ತಿದ್ದಾರೆ ಎನ್ನಿಸಿತು. ಅದರಿಂದಾಗಿ ಅವನು ಗೆಳೆಯ ನಸ್ರುದ್ದೀನನಿಗೆ ಸಂಕೇತವೊಂದನ್ನು ನೀಡಿದ. ಅವನು ಪತ್ರದಲ್ಲಿ ಏನಾದರೂ ಸತ್ಯ ಬರೆಯಬೇಕಾದರೆ ನೀಲಿ ಇಂಕ್ ಬಳಸಲು ಹಾಗೂ ಸುಳ್ಳು ಬರೆಯಬೇಕಾದರೆ ಕೆಂಪು ಇಂಕ್ ಪೆನ್ನಿನಿಂದ ಬರೆಯಲು ತಿಳಿಸಿದ. ಹೊಸ ಸರ್ಕಾರ ಬಂದ ಮೇಲೆ ಭಾರತದಲ್ಲಿ ಬದುಕು ಹೇಗೆ ನಡೆಯುತ್ತಿದೆ ಎಂದು ಅಬ್ದುಲ್ಲಾ ಕೇಳಿದ್ದಕ್ಕೆ ಪ್ರತ್ಯುತ್ತರವಾಗಿ ನಸ್ರುದ್ದೀನ್ ಪತ್ರವೊಂದನ್ನು ಬರೆದ:
`ಭಾರತ ಅದ್ಭುತವಾಗಿ ರೂಪಾಂತರವಾಗಿದೆ. ಎಲ್ಲೆಲ್ಲೂ ಸುಭಿಕ್ಷತೆ ತಾಂಡವವಾಡುತ್ತಿದೆ. ರಾಜಕಾರಣಿಗಳೆಲ್ಲಾ ಅನವಶ್ಯಕ ವಿವಾದಾಸ್ಪದ ಮಾತುಗಳನ್ನಾಡದೆ ತಮ್ಮ ತಮ್ಮ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಅರ್ಧಕ್ಕರ್ಧ ಕಡಿಮೆಯಾಗಿದೆ. ಎಲ್ಲ ನಾಗರಿಕರ ಖಾತೆಗಳಿಗೆ ಕಪ್ಪು ಹಣ ತಲಾ ಹದಿನೈದು ಲಕ್ಷ ಜಮಾ ಆಗಿದೆ. ನಿನ್ನ ಖಾತೆಗೂ ಹದಿನೈದು ಲಕ್ಷ ಬಂದಿದೆ’ ಎಂದು ನೀಲಿ ಇಂಕಿನ ಪೆನ್ನಿನಲ್ಲಿ ಬರೆದಿದ್ದ.
`ವಾಹ್, ಭಾರತ ನಿಜವಾಗಿಯೂ ಬದಲಾಗಿದೆ’ ಎಂದುಕೊಂಡ ಅಬ್ದುಲ್ಲಾ ಹಾಗೆಯೇ ಪತ್ರ ಓದುವುದನ್ನು ಮುಂದುವರಿಸಿದ. 
`ಅದೆಲ್ಲಾ ಸರಿ, ಕೆಂಪು ಇಂಕಿನ ಪೆನ್ ಸಿಗಲಿಲ್ಲಾ ಹಾಗಾಗಿ ಈ ಪತ್ರವನ್ನು ನಾನು ನೀಲಿ ಇಂಕಿನ ಪೆನ್ನಿನಿಂದ ಬರೆದಿದ್ದೇನೆ. ನಾನು ಅದನ್ನು ಕೆಂಪು ಇಂಕಿನಿಂದ ಬರೆಯಬೇಕಾಗಿತ್ತು...’ ಎಂದು ನಸ್ರುದ್ದೀನ್ ಪತ್ರವನ್ನು ಮುಗಿಸಿದ್ದ.

ಭಾವೀ ಅಳಿಯ-1
ನಸ್ರುದ್ದೀನ್ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದ.  ಆ ಹುಡುಗಿ ಒಂದು ದಿನ ತನ್ನ ತಂದೆಯನ್ನು ಮದುವೆಗೆ ಒಪ್ಪಿಸುವಂತೆ ಕೇಳಿ ನಸ್ರುದ್ದೀನನನ್ನು ತನ್ನ ಮನೆಗೆ ಕರೆದೊಯ್ದಳು. ಆ ದಿನ ನಸ್ರುದ್ದೀನ್ ಎಲೆ ಅಡಿಕೆ ಹಾಕಿದ್ದ.
ಹುಡುಗಿಯ ತಂದೆ: ನೀನೇನಾ ನಸ್ರುದ್ದೀನ್? ನಿನ್ನ ಬಗ್ಗೆ ನನ್ನ ಮಗಳು ಬಹಳಷ್ಟು ಹೇಳಿದ್ದಾಳೆ. ನಿನಗೆ ಎಲೆಅಡಿಕೆ ಹಾಕುವ ಅಭ್ಯಾಸ ಇದೆಯೆ?
ನಸ್ರುದ್ದೀನ್: ಸಿಗರೇಟು ಸೇದಿದಾಗ ಅಥವಾ ಮದ್ಯಪಾನ ಮಾಡಿದಾಗ ಮಾತ್ರ ಎಲೆ ಅಡಿಕೆ ಹಾಕುತ್ತೇನೆ. ನನಗೇನೂ ಅಂಥ ಕೆಟ್ಟ ಅಭ್ಯಾಸಗಳಿಲ್ಲ.
ಹುಡುಗಿಯ ತಂದೆ: ಅಂದರೆ ನಿನಗೆ ಸಿಗರೇಟು ಸೇದುವ ಮತ್ತು ಮದ್ಯಪಾನ ಮಾಡುವ ಅಭ್ಯಾಸ ಸಹ ಇದೆಯನ್ನು!
ನಸ್ರುದ್ದೀನ್: ಇಲ್ಲ, ಯಾವಾಗಲೂ ಸಿಗರೇಟು ಅಥವಾ ಮದ್ಯಪಾನ ಮಾಡುವುದಿಲ್ಲ. ಗೆಳೆಯರ ಜೊತೆ ಜೂಜಾಡುವಾಗ ಮಾತ್ರ ಅಂಥವನ್ನೆಲ್ಲಾ ಮಾಡುತ್ತೇನೆ ಅಷ್ಟೆ.
ಹುಡುಗಿಯ ತಂದೆ: ಜೂಜಾಡುವ ಅಭ್ಯಾಸ ಎಂದಿನಿಂದ ಇದೆ?
ನಸ್ರುದ್ದೀನ್: ಮೊದಲಿನಿಂದ ಇರಲಿಲ್ಲ. ನಾನು ಸೆರೆಮನೆಯಿಂದ ವಾಪಸ್ಸು ಬಂದಾಗ ಗೆಳೆಯರ ಸಹವಾಸದಿಂದ ಅದು ಶುರುವಾಯಿತು ಅಷ್ಟೆ. ಯೋಚಿಸಬೇಡಿ, ನಿಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.
ಹುಡುಗಿಯ ತಂದೆ: ನೀನು ಸೆರೆಮನೆಗೂ ಹೋಗಿದ್ದೆಯಾ!
ನಸ್ರುದ್ದೀನ್: ಒಂದೇ ಒಂದು ಸಾರಿ ನಾನು ಸೆರೆಮನೆಗೆ ಹೋಗಬೇಕಾಯ್ತು, ಅದೂ ನಾನೊಮ್ಮೆ ಕೊಲೆ ಮಾಡಿದಾಗ.
ಹುಡುಗಿಯ ತಂದೆ (ಹೌಹಾರಿ): ನೀನು ಕೊಲೆಗಡುಕನೆ?!
ನಸ್ರುದ್ದೀನ್: ಅದೊಮ್ಮೆ ಸಿಟ್ಟಿನಿಂದ ನಡೆದುಹೋಯಿತು. ನಾನೊಮ್ಮೆ ಹುಡುಗಿಯನ್ನು ಕೇಳಲು ಆಕೆಯ ತಂದೆಯ ಬಳಿ ಹೋಗಿದ್ದೆ, ಆತ ತನ್ನ ಮಗಳನ್ನು ಕೊಡಲು ನನಗೆ ನಿರಾಕರಿಸಿದ. ಆಗ ವಿಪರೀತ ಸಿಟ್ಟಿನಿಂದ, ನನ್ನ ನಿಯಂತ್ರಣ ತಪ್ಪಿ ಆತನ ಕೊಲೆ ನಡೆದುಹೋಯಿತು.
ಹುಡುಗಿಯ ತಂದೆ: ವಾಹ್! ನೀನು ಅದ್ಭುತ ನಡತೆಯ ಯುವಕ. ನನ್ನ ಮಗಳಿಗೆ ತಕ್ಕವನಾದವನು ನೀನು. ಮದುವೆ ಯಾವಾಗ ಇಟ್ಟುಕೊಳ್ಳೋಣ?

ಭಾವೀ ಅಳಿಯ-2
ನಸ್ರುದ್ದೀನನಿಗೆ ಮದುವೆ ವಯಸ್ಸಿನ ಮಗಳೊಬ್ಬಳಿದ್ದಳು. ಒಂದು ದಿನ ಆಕೆ ತಾನು ಪ್ರೀತಿಸುತ್ತಿರುವ ಹುಡುಗನನ್ನು ಮನೆಗೆ ಕರೆದುಕೊಂಡು ಬಂದು ತನ್ನ ತಂದೆಗೆ ಪರಿಚಯಿಸಿದಳು.
`ಏನು ಉದ್ಯೋಗ ಮಾಡುತ್ತಿದ್ದೀಯ?’ ಕೇಳಿದ ಭಾವೀ ಅಳಿಯನ್ನನು ನಸ್ರುದ್ದೀನ್.
`ನಾನೊಬ್ಬ ಸಾಹಿತಿ’ ಹೇಳಿದ ಯುವಕ.
ನಸ್ರುದ್ದೀನ್: `ಅದು ಸರಿ. ಹೊಟ್ಟೆಗೆ, ಬಟ್ಟೆಗೆ ಹೇಗೆ ಸಂಪಾದಿಸುತ್ತೀಯಾ?’
ಭಾವೀ ಅಳಿಯ: `ಅದೆಲ್ಲವನ್ನೂ ದೇವರು ಕೊಡುತ್ತಾನೆ.’
ನಸ್ರುದ್ದೀನ್: `ನನ್ನ ಮಗಳಿಗೆ ಒಳ್ಳೆಯ ಮನೆ, ಉತ್ತಮ ವಸ್ತ್ರ, ಉತ್ತಮ ಬದುಕು ಎಲ್ಲಾ ಕೊಡಲು ನಿನ್ನಿಂದ ಸಾಧ್ಯವೆ? ಮುಂದೆ ಮಕ್ಕಳನ್ನು ಹೇಗೆ ಸಾಕುತ್ತೀಯಾ?’
ಭಾವೀ ಅಳಿಯ: `ನನಗೆ ಚಿಂತೆಯಿಲ್ಲ. ಅದೆಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ.’
ಅಷ್ಟರಲ್ಲಿ ಹೊರಗೆ ಹೋಗಿದ್ದ ನಸ್ರುದ್ದೀನನ ಹೆಂಡತಿ ಫಾತಿಮಾ ಬಂದಳು. ನಸ್ರುದ್ದೀನನನ್ನು ಒಳಕ್ಕೆ ಕರೆದು `ಹೇಗಿದ್ದಾನೆ ನಮ್ಮ ಭಾವೀ ಅಳಿಯ?’ ಎಂದು ಕೇಳಿದಳು.
`ಅವನೊಬ್ಬ ಅವಿವೇಕಿ. ಅವನಿಗೆ ಒಳ್ಳೇ ಉದ್ಯೋಗವಿಲ್ಲ, ಭವಿಷ್ಯದ ಯೋಜನೆಯಿಲ್ಲ. ಆದರೆ ಒಳ್ಳೇ ವಿಷಯವೆಂದರೆ, ನನ್ನನ್ನು ದೇವರು ಎಂದುಕೊಂಡಿದ್ದಾನೆ’ ಎಂದ ನಸ್ರುದ್ದೀನ್.

ಕೊನೆಯ ಆಸೆ
ನ್ಯಾಯಾಧೀಶ ನಸ್ರುದ್ದೀನ್ ಸಾಯುವ ಸ್ಥಿತಿಯಲ್ಲಿದ್ದ. ಆತನ ಪ್ರಾಣ ಈಗಲೋ ಆಗಲೋ ಎನ್ನುವಂತಿತ್ತು. ಆತನ ಹೆಂಡತಿ, ಮಕ್ಕಳು ಹಾಗೂ ಇತರರು ಆತನ ಕೊನೆಯ ಆಸೆ ಏನಾದರೂ ಇದೆಯಾ ಎಂದು ಕೇಳಿದರು. `ಹೌದು’ ಎಂದು ತಲೆಯಾಡಿಸಿದ ನಸ್ರುದ್ದೀನ್ ಆ ಊರಿನ ಜನಪ್ರಿಯ ಇಬ್ಬರು ರಾಜಕಾರಣಿಗಳ ಹೆಸರು ಹೇಳಿ ಸಾಯುವ ಮೊದಲು ಅವರಿಬ್ಬರನ್ನು ನೋಡಬೇಕೆಂದು ಹೇಳಿದ. ಆ ಇಬ್ಬರು ರಾಜಕಾರಣಿಗಳಿಗೂ ಸುದ್ದಿ ಹೋಯಿತು. ಅತ್ಯಂತ ಜನಪ್ರಿಯ ನ್ಯಾಯಾಧೀಶನಾಗಿದ್ದ ನಸ್ರುದ್ದೀನ್ ತನ್ನ ಕೊನೆಗಳಿಗೆಯಲ್ಲಿ ಅವರನ್ನು ಭೇಟಿಯಾಗಲು ತಿಳಿಸಿರುವುದು ಅವರಿಗೆ ಸಂತೋಷವಾಯಿತು ಹಾಗೂ ತಮ್ಮ ಘನತೆಯ ಕುರಿತಂತೆ ಅವರಲ್ಲಿ ಅಹಂ ಸಹ ಬಂದಿತು. ತಿಳಿಸಿದ ಸಮಯಕ್ಕೆ ಸರಿಯಾಗಿ ಆ ಇಬ್ಬರು ರಾಜಕಾರಣಿಗಳು ಬಂದರು. ಹಾಸಿಗೆಯಲ್ಲಿದ್ದ ನಸ್ರುದ್ದೀನ್ ಅವರಿಬ್ಬರನ್ನು ಹಾಸಿಗೆಯ ಎಡಬದಿಗೆ ಒಬ್ಬರನ್ನು ಹಾಗೂ ಬಲಬದಿಗೆ ಒಬ್ಬರನ್ನು ಬರಲು ಹೇಳಿ ಅವರ ಕೈಗಳನ್ನು ಹಿಡಿದುಕೊಂಡ. ಆ ರಾಜಕಾರಣಿಗಳಲ್ಲೊಬ್ಬ ತನ್ನ ಅಹಂಕಾರದಿಂದ,
`ನಸ್ರುದ್ದೀನ್ ಸಾಹೇಬರೇ, ತಾವು ತಮ್ಮ ಕೊನೆಗಳಿಗೆಯಲ್ಲಿ ನಮ್ಮನ್ನು ಭೇಟಿಯಾಗಬೇಕೆಂದು ತಿಳಿಸಿದಿರಂತೆ? ಅದಕ್ಕೇನೋ ಮಹತ್ವದ ಕಾರಣವಿರಲೇಬೇಕಲ್ಲವೆ?’ ಎಂದು ಕೇಳಿದ.
ಹೌದೆಂದು ತಲೆಯಾಡಿಸಿದ ನಸ್ರುದ್ದೀನ್, `ನನಗೆ ಯೇಸು ಕ್ರಿಸ್ತನಂತೆ ಸಾಯುವ ಆಸೆ ಇದೆ’ ಎಂದ. ಆ ಇಬ್ಬರೂ ರಾಜಕಾರಣಿಗಳು ಇನ್ನೂ ಅಹಂಕಾರದಿಂದ ಬೀಗಿಹೋದರು.
`ನನ್ನ ಪ್ರಾಣ ಹೋಗುವಾಗ ನನ್ನ ಎರಡೂ ಬದಿಯಲ್ಲಿ ನೀವಿರಲೆಂದು ನಿಮ್ಮನ್ನು ಕರೆಸಿದೆ ಏಕೆಂದರೆ, ಯೇಸು ಕ್ರಿಸ್ತ ಸಾಯುವಾಗ ಆತನ ಎರಡೂ ಬದಿಯಲ್ಲಿ ಇಬ್ಬರು ಕಳ್ಳರಿದ್ದರು’ ಎಂದು ಹೇಳಿದ ನಸ್ರುದ್ದೀನ್ ಕಣ್ಣುಮುಚ್ಚಿದ.

ನಲವತ್ತು ಕಳ್ಳರು!
ನಸ್ರುದ್ದೀನ್ ಗಡಂಗಿನಲ್ಲಿ ಕೂತಿದ್ದ. ಪಕ್ಕದ ಮೇಜಿನಲ್ಲಿ ಇಬ್ಬರು ಕೂತಿದ್ದು ಪರಸ್ಪರ ತಮ್ಮಲ್ಲೇ ಜೋರಾಗಿ ಮಾತನಾಡಿಕೊಳ್ಳುತ್ತಿದ್ದರು. ಅವರಲ್ಲೊಬ್ಬ ಹೇಳಿದ,
`ನನ್ನ ಹೆಂಡತಿ ಬಸುರಾಗಿದ್ದಾಗ ಎರಡು ಕನಸು ಕಾದಂಬರಿ ಓದುತ್ತಿದ್ದಳು. ಅವಳಿಗೆ ಅವಳಿ ಜವಳಿ ಇಬ್ಬರು ಮಕ್ಕಳು ಹುಟ್ಟಿದವು’ ಎಂದ.
`ನನ್ನ ಹೆಂಡತಿ ಬಸುರಾಗಿದ್ದಾಗ ಮೂರು ದಾರಿಗಳು ಕಾದಂಬರಿ ಓದುತ್ತಿದ್ದಳು. ಅವಳಿಗೆ ತ್ರಿವಳಿ ಮಕ್ಕಳು ಹುಟ್ಟಿದವು’ ಎಂದ ಮತ್ತೊಬ್ಬಾತ. 
ಅದನ್ನು ಕೇಳಿಸಿಕೊಂಡ ನಸ್ರುದ್ದೀನ್ ತಡಬಡಾಯಿಸಿ ಗಾಭರಿಯಿಂದ ಎದ್ದ. ಅದನ್ನು ಕಂಡ ಅವರು, `ಏಕೆ? ಏನಾಯಿತು?’ ಎಂದು ಕೇಳಿದರು.
`ನನ್ನ ಹೆಂಡತಿಯೂ ಬಸುರಾಗಿದ್ದಾಳೆ ಹಾಗೂ ಅವಳು ಆಲಿಬಾಬ ಮತ್ತು ನಲ್ವತ್ತು ಕಳ್ಳರು ಪುಸ್ತಕ ಓದುತ್ತಿದ್ದಾಳೆ!  ತಕ್ಷಣ ಮನೆಗೆ ಹೋಗಿ ಆ ಪುಸ್ತಕ ಸುಟ್ಟುಹಾಕಿ ಬರುತ್ತೇನೆ’ ಎಂದು ಮನೆಗೆ ಓಡಿದ.


ಹೋತ
ಮುಲ್ಲಾ ನಸ್ರುದ್ದೀನನದು ಧರ್ಮ ಪ್ರವಚನದಲ್ಲಿ ಎತ್ತಿದ ಕೈ. ಜನ ಮಂತ್ರಮುಗ್ಧವಾಗುವಂತೆ ಬೋಧಿಸುತ್ತಿದ್ದ. ಒಂದು ದಿನ ಆತ ಧರ್ಮ ಪ್ರವಚನ ಮಾಡಲು ಪ್ರಾರಂಭಿಸುತ್ತಿರುವಂತೆ ಒಬ್ಬ ಮಹಿಳೆ ಅಳಲು ಶುರುಮಾಡುತ್ತಿದ್ದಳು. ಒಂದೆರಡು ದಿನ ಆಕೆಯನ್ನು ಗಮನಿಸಿದ ನಸ್ರುದ್ದೀನ್, ತನ್ನ ಧರ್ಮಪ್ರವಚನದ ಪ್ರಭಾವದಿಂದಲೇ ಆಕೆ ಮಂತ್ರಮುಗ್ಧಳಾಗಿ ಸಂತೋಷದ ಕಣ್ಣೀರು ಹಾಕುತ್ತಿದ್ದಾಳೆ ಎಂದುಕೊಂಡ. ಆದರೂ ಒಂದು ದಿನ, `ಸಹೋದರಿ! ನಾವು ದೇವರ ಹೆಸರು ಹೇಳುವಷ್ಟರಲ್ಲಿ ನಿನ್ನಲ್ಲಿ ಸಂತೋಷದ ಅಶ್ರುಧಾರೆ ಹರಿಯುತ್ತದೆ. ನಿನ್ನ ಗಾಢ ಅನುಭವವನ್ನು ಸಭಿಕರ ಮುಂದೆ ನೀನು ಏಕೆ ಹಂಚಿಕೊಳ್ಳಬಾರದು?’ ಎಂದು ಕೇಳಿದ. ಆಕೆ ಸಂಕೋಚದಿಂದಲೇ ಬೇಡವೆಂದಳು. `ಇಲ್ಲ, ನೀನು ಸಭಿಕರ ಮುಂದೆ ನಿನ್ನ ಕಣ್ಣೀರಿಗೆ ಕಾರಣವೇನೆಂಬುದನ್ನು ಹೇಳಲೇಬೇಕು. ಅದರಿಂದ ಜನರಿಗೆ ನನ್ನ ಭಾಷಣದ ಪ್ರಭಾವವೇನೆಂಬುದು ತಿಳಿಯುತ್ತದೆ’ ಎಂದು ಒತ್ತಾಯಿಸಿದ. ಆಕೆ ಕೊನೆಗೆ ಮಣಿದು ವೇದಿಕೆ ಹತ್ತಿದಳು.
`ನನ್ನ ಕಣ್ಣೀರಿನ ನಿಜವಾದ ಕಾರಣವೇನೆಂಬುದನ್ನು ಹೇಳುತ್ತೇನೆ. ನನ್ನಲ್ಲಿ ಅತ್ಯಂತ ಸುಂದರವಾದ ಹೋತವೊಂದಿತ್ತು. ಕಳೆದ ವಾರ ಮೇಯಲು ಹೋದ ಅದು ಎಲ್ಲೋ ಕಳೆದುಹೋಯಿತು ಅಥವಾ ಯಾರಾದರೂ ಕದ್ದಿರಬೇಕು. ಎಷ್ಟು ಹುಡುಕಿದರೂ ಸಿಗಲಿಲ್ಲ. ಅದನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದ ನನಗೆ ಅದನ್ನು ಮರೆಯಲೇ ಆಗುತ್ತಿಲ್ಲ. ನನಗೆ ಮುಲ್ಲಾ ನಸ್ರುದ್ದೀನರ ಗಡ್ಡವನ್ನು ನೋಡಿದಾಗಲೆಲ್ಲಾ ನನ್ನ ಹೋತ ನೆನಪಾಗುತ್ತದೆ. ಅದಕ್ಕೇ ಅದರ ನೆನಪಲ್ಲಿ ಕಣ್ಣೀರು ಹಾಕುತ್ತಿದ್ದೆ... ನನಗೆ ಅವರ ಧರ್ಮಪ್ರವಚನದ ಒಂದು ಮಾತೂ ಅರ್ಥವಾಗುತ್ತಿರಲಿಲ್ಲ...’ ಎಂದಳು.

j.balakrishna@gmail.com

1 ಕಾಮೆಂಟ್‌:

ಶ್ರೀಕರ್ ಹೇಳಿದರು...

ಭಾವೀ ಅಳಿಯ-1 ಯಲ್ಲಿ ಶೋಲೆಯ ಈ ದೃಶ್ಯದ ಸ್ಪೂರ್ತಿಯಿದೆ - https://youtu.be/EVvHVS8kTzE?t=150