ನೋಟು ಅಮಾನ್ಯೀಕರಣ
ಕುರಿತಾದ ನವೆಂಬರ್ 2017ರ `ಸಂವಾದ'ದ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ `ನೋಟು ಅಮಾನ್ಯೀಕರಣ ಮತ್ತು
ವ್ಯಂಗ್ಯಚಿತ್ರಗಳು' ಕುರಿತಾದ ನನ್ನ ಲೇಖನ. ಈ ಲೇಖನದಲ್ಲಿ ಬಳಸಿಕೊಳ್ಳಲು ಅನುಮತಿಸಿದ ಎಲ್ಲ ವ್ಯಂಗ್ಯಚಿತ್ರಕಾರ
ಗೆಳೆಯರಿಗೆ ಧನ್ಯವಾದಗಳು.
`ಅಚ್ಚೇ ದಿನ್' ತರುತ್ತೇವೆಂದು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರು ರೂ.500 ಮತ್ತು ರೂ.1000 ನೋಟುಗಳ ಅಮಾನ್ಯೀಕರಣವನ್ನು 8ನೇ ನವೆಂಬರ್ 2016ರ ರಾತ್ರಿ ಘೋಷಿಸಿದ ನಂತರದ ಒಂದೆರಡು ತಿಂಗಳುಗಳು ಭಾರತೀಯರಿಗೆ ಅತ್ಯಂತ `ಯಾತನಾ ದಿನ'ಗಳಾಗಿದ್ದಂತು ನಿಜ. ಆದರೆ ಅಚ್ಚೇ ದಿನ್ ಬಂದದ್ದು ವ್ಯಂಗ್ಯಚಿತ್ರಕಾರರಿಗೆ. ಏಕೆಂದರೆ ಇದ್ದುದನ್ನು ಇದ್ದಂತೆ ಹೇಳುವವರು, ನೋವಿನಲ್ಲೂ ನಗುವನ್ನು ಕಾಣುವವರು, ಸರ್ಕಾರವನ್ನು ಅದರ ಕಾರ್ಯನೀತಿಗಳನ್ನು ನೇರವಾಗಿ ಟೀಕಿಸಬಲ್ಲವರು ಅವರು ಮಾತ್ರ. ನೋಟು ಅಮಾನ್ಯೀಕರಣದ ನಂತರ ಜನ ಒಂದೊಂದು ರೂಪಾಯಿಗೂ ತೊಳಲಾಡುತ್ತಿದ್ದಾಗ, ಗಂಟೆಗಟ್ಟಲೆ (ಕೆಲವೆಡೆ ದಿನಗಟ್ಟಲೆ) ಬ್ಯಾಂಕುಗಳ ಮುಂದೆ, ಎ.ಟಿ.ಎಂ.ಗಳ ಮುಂದೆ ಕ್ಯೂ ನಿಂತು ಜನ ಪರಿತಪಿಸುತ್ತಿದ್ದಾಗ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬ್ಯಾಂಕುಗಳಲ್ಲಿ ತಮ್ಮ ಹಣವಿದ್ದರೂ ಅದನ್ನು ಪಡೆಯಲು ಸಾಧ್ಯವಾಗದಿದ್ದಾಗ, ಬ್ಯಾಂಕುಗಳ ಮುಂದೆ ಕ್ಯೂ ನಿಂತು ಬಳಲಿ ಹಲವಾರು ಜನ ಪ್ರಾಣ ಬಿಟ್ಟಾಗಲೂ ನಿರ್ದಯಿ ಸರ್ಕಾರ ತನ್ನ `ಕ್ಯಾಡ್ಮೀನ್ ವಿಕ್ಟರಿ'ಯ (ಗ್ರೀಕ್ ಪುರಾಣದ ಕತೆಯಿಂದ = ಸರ್ವನಾಶದ ಮೂಲಕ ಗೆಲುವು ಪಡೆಯುವುದು ಎಂದರ್ಥ) ನಗೆ ಬೀರುತ್ತಿದ್ದಾಗ ಸರ್ಕಾರದ ಈ ಹುಚ್ಚು ಪ್ರಯತ್ನ ವ್ಯಂಗ್ಯಚಿತ್ರಕಾರರಿಗೆ ಅತ್ಯಂತ ಆಪ್ತ ವಿಷಯವಾಯಿತು. ಅಮಾನ್ಯೀಕರಣದ ಬಗೆಗೆ ಸಾವಿರಾರು ವ್ಯಂಗ್ಯಚಿತ್ರಗಳು ಪ್ರಕಟವಾದವು. ಭಾರತದ ಪತ್ರಿಕೆಗಳ ಜೊತೆಗೆ ವಿದೇಶಿ ಪತ್ರಿಕೆಗಳು ಹಾಗೂ ವಿದೇಶಿ ವ್ಯಂಗ್ಯಚಿತ್ರಕಾರರು ಸಹ ಭಾರತದ ನೋಟು ಅಮಾನ್ಯೀಕರಣ ಕುರಿತಂತೆ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದರು. ಕರ್ನಾಟಕದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯರವರು ತಮ್ಮ ಅಮಾನ್ಯೀಕರಣದ ವ್ಯಂಗ್ಯಚಿತ್ರಗಳ `ರುಪಿ ಅರ್ ನಾಟ್ ರುಪಿ' (ಖuಠಿee oಡಿ ಓoಣ ಖuಠಿee) ಸಂಕಲನವೊಂದನ್ನು ತಂದರು. ಅಮಾನ್ಯೀಕರಣದ ವ್ಯಂಗ್ಯಚಿತ್ರಗಳ ಪ್ರದರ್ಶನ ಕೇರಳ, ಜಮ್ಮು ಮುಂತಾದೆಡೆ ನಡೆಯಿತು.
ವಿಶ್ವದ ಮೊಟ್ಟಮೊದಲ ರಾಜಕೀಯ ವ್ಯಂಗ್ಯಚಿತ್ರವೆಂದು ಕರೆಯಲ್ಪಡುವ ಹಾಗೂ ವ್ಯಂಗ್ಯಚಿತ್ರಗಳಿಗೆ `ಕಾರ್ಟೂನ್' ಎಂದು ಹೆಸರು ಬರಲು ಕಾರಣವಾದ `ಸಬ್ಸ್ಟೆನ್ಸ್ ಅಂಡ್ ಶ್ಯಾಡೊ' ಎಂಬ ವ್ಯಂಗ್ಯಚಿತ್ರ ಸಹ ಸರ್ಕಾರದ ಆರ್ಥಿಕ ವ್ಯವಸ್ಥೆಯ ಒಂದು ದುಸ್ಸಾಹಸದ ಪರಿಣಾಮವಾಗಿ ರೂಪುಗೊಂಡ ವ್ಯಂಗ್ಯಚಿತ್ರವಾಗಿದೆ. 15ನೇ ಜುಲೈ 1843ರ `ಪಂಚ್' ಪತ್ರಿಕೆಯಲ್ಲಿ ಪ್ರಕಟವಾದ ಜಾನ್ ಲೀಚ್ರವರ `ಸಬ್ಸ್ಟೆನ್ಸ್ ಅಂಡ್ ಶ್ಯಾಡೊ' ವ್ಯಂಗ್ಯಚಿತ್ರವನ್ನು ಜಗತ್ತಿನ ಮೊಟ್ಟಮೊದಲ ರಾಜಕೀಯ ವ್ಯಂಗ್ಯಚಿತ್ರ ಎಂದೂ ಸಹ ಗುರುತಿಸುತ್ತಾರೆ ಹಾಗೂ ಅಂಥವುಗಳಿಗೆ ಆಗಿನಿಂದಲೇ ಕಾರ್ಟೂನ್ ಎನ್ನುವ ಹೆಸರು ಸಹ ಬಂದಿತು. 1840ರ ದಶಕ ಬ್ರಿಟನ್ನಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತ್ಯಂತ ದುಸ್ತರದ ದಶಕವಾಗಿತ್ತು. ಅದನ್ನು `ಹಂಗ್ರಿ ಫಾರ್ಟೀಸ್' (ಹಸಿದ ನಲವತ್ತರ ದಶಕ) ಎಂದೂ ಕರೆಯುತ್ತಾರೆ. ಜನರ ಬಳಿ ಹಣವಿಲ್ಲದೆ, ಉದ್ಯೋಗಗಳಿಲ್ಲದೆ ತತ್ತರಿಸುತ್ತಿರುವಾಗ ಬ್ರಿಟನ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡಿನಲ್ಲಿ ರೋಗದಿಂದಾಗಿ ಆಲೂಗೆಡ್ಡೆ ಬೆಳೆ ಸಂಪೂರ್ಣ ನಾಶವಾಗಿ ಲಕ್ಷಾಂತರ ಜನ ಪ್ರಾಣ ಬಿಟ್ಟರು. ಆಗಿನ ಬ್ರಿಟನ್ ಪಾರ್ಲಿಮೆಂಟ್ `ಮೆಕ್ಕೆಜೋಳದ ಕಾನೂನು' (ಕಾರ್ನ್ ಲಾ) ತಂದಿತು. ಅದರಿಂದಾಗಿ ಆಹಾರ ಧಾನ್ಯಗಳ ಬೆಲೆ ವಿಪರೀತ ಹೆಚ್ಚಾಯಿತು. ಜನ ಹಣವಿಲ್ಲದೆ, ಆಹಾರ ಧಾನ್ಯಗಳನ್ನು ದುಬಾರಿ ಬೆಲೆಗೆ ಕೊಳ್ಳಲಾಗದೆ ಹತಾಶರಾಗಿ ಸಾಯುತ್ತಿರುವಾಗ ಅದೇ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಅರಮನೆಯ ಕುದುರೆ ಲಾಯಗಳ ನಿರ್ವಹಣೆಗೆ, ರಾಜಕುಮಾರಿಯ ಮದುವೆಗೆ ಇತ್ಯಾದಿಗಳಿಗೆ ಲಕ್ಷಾಂತರ ಪೌಂಡ್ಗಳನ್ನು ಸರ್ಕಾರದ ವತಿಯಿಂದ ವೆಚ್ಚ ಮಾಡಿತು. ಅದೇ ಸಮಯದಲ್ಲಿ ಪಾರ್ಲಿಮೆಂಟ್ನ ವೆಸ್ಟ್ ಮಿನಿಸ್ಟರ್ ಹಾಲ್ನಲ್ಲಿ ಪ್ರದರ್ಶಿಸಲು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿತು. ಆ ಚಿತ್ರಗಳ ವಿಷಯಗಳು ಬ್ರಿಟಿಷ್ ಚರಿತ್ರೆ, ಸ್ಪೆನ್ಸರ್, ಶೇಕ್ಸ್ಪಿಯರ್ ಅಥವಾ ಮಿಲ್ಟನ್ ಕುರಿತಾಗಿರಬೇಕೆಂದು ಹೇಳಿತು. `ಸಬ್ಸ್ಟೆನ್ಸ್ ಅಂಡ್ ಶ್ಯಾಡೊ' ಎಂಬ ವ್ಯಂಗ್ಯಚಿತ್ರ ಅದೇ ವಿಷಯ ಕುರಿತಾಗಿದೆ.
01: 1843ರಲ್ಲಿ `ಪಂಚ್' ಪತ್ರಿಕೆಯಲ್ಲಿ ಪ್ರಕಟವಾದ ಬ್ರಿಟನ್ನಿನ ಸರ್ಕಾರದ ಆರ್ಥಿಕ ದುಸ್ಸಾಹಸವನ್ನು ಲೇವಡಿ ಮಾಡುವ ವ್ಯಂಗ್ಯಚಿತ್ರ `ಸಬ್ಸ್ಟೆನ್ಸ್ ಅಂಡ್ ಶ್ಯಾಡೊ'. ಇದನ್ನು ಜಗತ್ತಿನ ಮೊಟ್ಟಮೊದಲ ರಾಜಕೀಯ ವ್ಯಂಗ್ಯಚಿತ್ರವೆನ್ನುತ್ತಾರೆ ಹಾಗೂ ವ್ಯಂಗ್ಯಚಿತ್ರಗಳಿಗೆ `ಕಾರ್ಟೂನ್' ಎಂಬ ಹೆಸರು ಬಂದದ್ದು ಈ ವ್ಯಂಗ್ಯಚಿತ್ರದಿಂದಲೆ.
ಹಸಿವಿನಿಂದ ನಲುಗಿರುವ ಮಕ್ಕಳು, ಅಂಗವಿಕಲರು, ತಾಯಿಯರು, ವೃದ್ಧರು ವೆಸ್ಟ್ಮಿನಿಸ್ಟರ್ನಲ್ಲಿ ಪ್ರದರ್ಶಿಸಿರುವ ರಾಜವೈಭೋಗದ, ತಮ್ಮ ಬದುಕಿಗೆ ಏನೇನೂ ಅರ್ಥ ಕೊಡದ ಚಿತ್ರಗಳ ಪ್ರದರ್ಶನವನ್ನು ಆ ವ್ಯಂಗ್ಯಚಿತ್ರದಲ್ಲಿ ನೋಡುತ್ತಿದ್ದಾರೆ. 1843ರಲ್ಲಿ ಈ ವ್ಯಂಗ್ಯಚಿತ್ರ ಪ್ರಕಟವಾದ ನಂತರ ಈ ರೀತಿಯ ಲೇವಡಿ ಮಾಡುವ ಚಿತ್ರಗಳಿಗೆ `ಕಾರ್ಟೂನ್' ಎಂಬ ಹೆಸರು ಬಂದಿತು.
ಪ್ರಧಾನಿ ಮೋದಿಯವರು ನಡೆಸಿದ ನೋಟು ಅಮಾನ್ಯೀಕರಣ ಸಹ ಇಂಥದೇ ಒಂದು ಆರ್ಥಿಕ ದುಸ್ಸಾಹಸವಾಗಿದೆ. 38 ವರ್ಷಗಳ ಹಿಂದೆಯೇ 1978ರ ಜನವರಿ 16ರಂದು ಭಾರತದಲ್ಲಿ ತುರ್ತುಪರಿಸ್ಥಿತಿಯ ನಂತರದ ಜನತಾ ಪಕ್ಷದ ಸರ್ಕಾರದ ಪ್ರಧಾನಿಗಳಾಗಿದ್ದ ಮೊರಾರ್ಜಿ ದೇಸಾಯಿರವರು ಭ್ರಷ್ಟಾಚಾರ ಮತ್ತು ಕಪ್ಪುಹಣದ ನಿರ್ಮೂಲನಕ್ಕೆ ರೂ.1,000, ರೂ,5,000 ಮತ್ತು ರೂ.10,000 ನೋಟುಗಳ ಅಮಾನ್ಯೀಕರಣ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದರು. ಆಗ `ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಪ್ರಕಟವಾದ ಆರ್.ಕೆ.ಲಕ್ಷ್ಮಣ್ರವರ ವ್ಯಂಗ್ಯಚಿತ್ರ ಅದರಿಂದಾಗಿ ಎಷ್ಟು ಕಪ್ಪು ಹಣ ದೊರಕಿರಬಹುದು ಎಂಬುದನ್ನು ತೋರಿಸುತ್ತದೆ.
02: 1978ರಲ್ಲಿ ಜನತಾ ಪಕ್ಷದ ಪ್ರಧಾನಿ ಮೊರಾರ್ಜಿ ದೇಸಾಯಿರವರು ರೂ.1,000, ರೂ,5,000 ಮತ್ತು ರೂ.10,000 ನೋಟುಗಳ ಅಮಾನ್ಯೀಕರಣ ಮಾಡಲು ಪ್ರಯತ್ನಿಸಿ ವಿಫಲರಾದಾಗ `ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಪ್ರಕಟವಾದ ಆರ್.ಕೆ.ಲಕ್ಷ್ಮಣ್ರವರ ವ್ಯಂಗ್ಯಚಿತ್ರ.
ಆ ವ್ಯಂಗ್ಯಚಿತ್ರ ಈಗಿನ ನೋಟು ಅಮಾನ್ಯೀಕರಣದ ಫಲಿತಾಂಶಕ್ಕೂ ಸರಿಹೊಂದುವಂಥದು. ಆಗಲೂ ಅಷ್ಟೆ ಕಪ್ಪುಹಣವೆಂಬ ದೈತ್ಯ ಹುಲಿಯನ್ನು ಹಿಡಿಯಲು ಇಲಿಯ ಬೋನು ಬಳಸಿ ಅದರ ಬಾಲದ ತುದಿಯನ್ನು ಮಾತ್ರ ಬೋನಿನೊಳಗೆ ಹಿಡಿದಿರುವ ಪ್ರಧಾನಿ ಮೊರಾರ್ಜಿ ದೇಸಾಯಿ `ಹಾ, ಪ್ರಾರಂಭವೊಂದನ್ನು ಮಾಡಿದ್ದೇವೆ' ಎನ್ನುತ್ತಿದ್ದಾರೆ.
ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಕೊನೆಗೆ ಶೇ.99ರಷ್ಟು ಹಳೆಯ ಅಮಾನ್ಯೀಕರಿಸಿದ ನೋಟುಗಳನ್ನು ಜನ ಹಿಂದಿರುಗಿಸಿದ್ದಾರೆ ಎಂದು ತನ್ನ ವರದಿಯಲ್ಲಿ ತಿಳಿಸಿದಾಗ ಪ್ರಧಾನಿ ಮೋದಿಯವರ ಈ ಪ್ರಯತ್ನ ಬೆಟ್ಟ ಅಗೆದು ಇಲಿ ಹಿಡಿದಂತಾಗಿತ್ತು. ಅದನ್ನೇ ಪರೇಶ್ರವರ ವ್ಯಂಗ್ಯಚಿತ್ರ ಹೇಳುತ್ತದೆ. ಆದರೆ ಆ ಇಲಿಯನ್ನು ಒಡೆಯಲು ಭಾರತದ ಆರ್ಥಿಕತೆಯೆಂಬ ಸದೃಢ ಕಟ್ಟಡವನ್ನು ಒಡೆದು ಛಿದ್ರ ಮಾಡಬೇಕಾಯಿತು. ಅದರಿಂದ ಭಾರತದ ಆರ್ಥಿಕತೆಯ ಮೇಲೆ ಉಂಟಾದ ಪರಿಣಾಮದಿಂದ ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆಂಬುದು ಆರ್ಥಿಕ ತಜ್ಞರ ಅನಿಸಿಕೆ.
`ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಪಿ.ಮಹಮ್ಮದ್ರವರ ವ್ಯಂಗ್ಯಚಿತ್ರ ಬೆಟ್ಟ ಅಗೆದು ಸಿಕ್ಕ ಇಲಿ ಹೆಗ್ಗಣವಾಗಿದ್ದು ಅದು ಜಿ.ಡಿ.ಪಿ. ಕುಸಿತ, ಉದ್ಯೋಗ ನಷ್ಟ ಇತ್ಯಾದಿಗಳನ್ನು ಪ್ರತಿನಿಧಿಸುತ್ತಿದೆ.
04: `ಬೆಟ್ಟ ಅಗೆದು ಇಲಿ ಹಿಡಿದಂತೆ' - ಪಿ.ಮಹಮ್ಮದ್ರವರ ವ್ಯಂಗ್ಯಚಿತ್ರ
ದಿನೇಶ್ ಕುಕ್ಕುಜಡ್ಕರವರ ವ್ಯಂಗ್ಯಚಿತ್ರದಲ್ಲಿ ಕಪ್ಪುಹಣವೆಂಬ ಹಲ್ಲಿ ಹಿಡಿಯಲು ಹೋದ ಪ್ರಧಾನಿ ಮೋದಿ ಮತ್ತು ವಿತ್ತ ಸಚಿವ ಜೇಟ್ಲಿರವರಿಗೆ ಆ ಹಲ್ಲಿ ತನ್ನ ಬಾಲ ಉದುರಿಸಿಹೋಗಿರುವುದು ಅವರ ಪ್ರಯತ್ನ ಮತ್ತು ಫಲಿತಾಂಶವನ್ನು ಸೂಕ್ತವಾಗಿ ತೋರಿಸಿದೆ.
05: `ಹಾ ಕಪ್ಪು ಹಣ ಸಿಕ್ಕಿತು!' - ದಿನೇಶ್ ಕುಕ್ಕುಜಡ್ಕರವರ ವ್ಯಂಗ್ಯಚಿತ್ರ
ಬ್ಯಾಂಕುಗಳ ತಮ್ಮ ಖಾತೆಗಳಲ್ಲಿ ಹಣವಿದ್ದರೂ ಪಡೆಯಲಾಗದಂತಹ ಸ್ಥಿತಿಯಲ್ಲಿ ಸಾಮಾನ್ಯ ಜನರಿದ್ದರೆ, ಅಲ್ಲಲ್ಲಿ ರಾಜಕಾರಣಿಗಳ, ಅಧಿಕಾರಿಗಳ ಬಳಿ ಕೋಟಿಗಟ್ಟಲೆ ಹೊಸ ನೋಟುಗಳು ದೊರಕುತ್ತಿದ್ದುದು ವರದಿಯಾಗುತ್ತಿತ್ತು ಹಾಗೂ ಇದರಿಂದ ಸರ್ಕಾರದ ಈ `ಬೆಟ್ಟ ಅಗೆದು ಇಲಿ ಹಿಡಿಯುವ ಪ್ರಯತ್ನ' ಎಷ್ಟು ಪ್ರಾಮಾಣಿಕವಾದುದು ಎಂಬ ಸಂಶಯ ಜನರಲ್ಲಿ ಬರುತ್ತಿದ್ದುದು ಅಸಹಜವೇನಲ್ಲ.
06: ಬ್ಯಾಂಕ್ ಖಾತೆಗಳಲ್ಲಿನ ನಮ್ಮದೇ ಹಣ ಕನ್ನಡಿಯೊಳಗಿನ ಗಂಟು – ಜೆ.ಬಾಲಕೃಷ್ಣರವರ ವ್ಯಂಗ್ಯಚಿತ್ರ
ಅದೇ ಸಮಯದಲ್ಲಿ ಕೋಟಿಗಟ್ಟಲೆ ಹಣ ಖರ್ಚುಮಾಡಿ `ಗಣಿ ಧಣಿ' ರೆಡ್ಡಿಯವರು ತಮ್ಮ ಮಗಳ ಮದುವೆ ಅದ್ದೂರಿಯಾಗಿ ನಡೆಸಿದಾಗ ಅವರು ಅಷ್ಟೊಂದು ಹಣ ಖರ್ಚು ಮಾಡಿದುದರ ಬಗ್ಗೆ ಜನ ತಲೆ ಕೆಡಿಸಿಕೊಳ್ಳಲಿಲ್ಲ, ಅವರಿಗೆ ಅಷ್ಟೊಂದು ಹೊಸ ನಗದು ಹಣ (ಮದುವೆಯಲ್ಲಿ ಎಲ್ಲವೂ ಚೆಕ್ಕ ಹಾಗೂ ಡಿ.ಡಿ. ಮೂಲಕ ವ್ಯವಹಾರ ನಡೆಸುವುದು ಸಾಧ್ಯವಿಲ್ಲ) ಹೇಗೆ ದೊರಕಿತು ಎಂದಷ್ಟೇ ಜನ ಅಚ್ಚರಿಗೊಂಡರು. ಆಗ ಪ್ರಕಟಗೊಂಡ ಸತೀಶ್ ಆಚಾರ್ಯರವರ ವ್ಯಂಗ್ಯಚಿತ್ರ ಸೂಜಿಯ ದಾರದ ಕಿಂಡಿಯಲ್ಲಿ ಆನೆಯೆಂಬ ರೆಡ್ಡಿ ಸರಾಗವಾಗಿ ನುಸುಳಿಕೊಂಡು ಹೋಗಿರುವುದನ್ನು ತೋರಿಸುತ್ತದೆ.
07: ಜನ ಒಂದೊಂದು ರೂಪಾಯಿಗೂ ತೊಳಲಾಡುತ್ತಿರುವಾಗ ಕೋಟಿಗಟ್ಟಲೆ ಹಣ ಖರ್ಚುಮಾಡಿ ನಡೆದ ಜನಾರ್ಧನ ರೆಡ್ಡಿಯವರ ಮಗಳ ವೈಭವದ ಮದುವೆ: ನೋಟು ಅಮಾನ್ಯೀಕರಣದ ಸೂಜಿಕಣ್ಣಲ್ಲೂ ಸರಾಗವಾಗಿ ನುಸುಳಿದ ರೆಡ್ಡಿ - ಸತೀಶ್ ಆಚಾರ್ಯರವರ ವ್ಯಂಗ್ಯಚಿತ್ರ.
ಬ್ಯಾಂಕಿನಲ್ಲಿನ ತಮ್ಮದೇ ಖಾತೆಯ ಹಣವನ್ನು ದರೋಡೆ ಮಾಡಿಕೊಂಡು ಹೋಗುವಂತಹ ವಿಪರ್ಯಾಸದ ಈ ಲೇಖನದ ಲೇಖಕರ ವ್ಯಂಗ್ಯಚಿತ್ರ `ಪ್ರಜಾವಾಣಿ'ಯ ಮೆಟ್ರೋದಲ್ಲಿ ಪ್ರಕಟವಾಯಿತು.
08: ನಮ್ಮದೇ ಖಾತೆಗಳಲ್ಲಿನ ನಮ್ಮದೇ ಹಣವನ್ನು ದರೋಡೆ ಮಾಡಬೇಕಾದ ಪರಿಸ್ಥಿತಿ- ಜೆ.ಬಾಲಕೃಷ್ಣರವರ ವ್ಯಂಗ್ಯಚಿತ್ರ.
ಕಪ್ಪು ಹಣದ ಮೇಲಿನ `ಸರ್ಜಿಕಲ್ ಸ್ಟ್ರೈಕ್' ಎಂದ ಸರ್ಕಾರದ ಹೇಳಿಕೆ ಮತ್ತು ಕೃತ್ಯವನ್ನು ಭಾರತೀಯ ಕಾರ್ಪೊರೇಟ್ಗಳು ಮತ್ತು ನೆನೆಗುದಿಗೆ ಬಿದ್ದಿರುವ ಹಿಂದಿನ ಅವ್ಯವಹಾರಗಳಾದ ವಾದ್ರಾ ಭೂ ಅವ್ಯವಹಾರ, ಕಾಮನ್ವೆಲ್ತ್ ಹಗರಣ, ಕೋಲ್ಗೇಟ್, 2ಜಿ ಹಗರಣ ಮುಂದಾದವುಗಳ ಪ್ರತಿನಿಧಿಗಳು ಹೊಟ್ಟೆ ಬಿರಿಯುತ್ತಿರುವಂತೆ ನಗುತ್ತಿರುವುದು, ಲೇವಡಿ ಮಾಡುತ್ತಿರುವುದನ್ನು ಸಂದೀಪ್ ಅಧ್ವರ್ಯುರವರ ವ್ಯಂಗ್ಯಚಿತ್ರ ಹೇಳುತ್ತದೆ ಹಾಗೂ ಭಾರತದ ಕಾರ್ಪೊರೇಟ್ ಕಪ್ಪುಹಣದ ರಾಶಿಯ ಮೇಲೆ ಕೂತು ನಗುತ್ತಾ ರಾಜಕೀಯ ಪಕ್ಷಗಳಿಗೆ ತಮ್ಮ ದೇಣಿಗೆ ಮುಂದುವರಿಸಿರುವುದು ಆದರೆ ತೊಂದರೆಗೊಳಗಾಗಿರುವವರ ಜನಸಾಮಾನ್ಯರು ಮಾತ್ರ ಎನ್ನುವುದು ಪರೇಶ್ರವರ ವ್ಯಂಗ್ಯಚಿತ್ರದಲ್ಲಿದೆ.
09: ಕಪ್ಪುಹಣ ಹೊರಗೆ ಬರುತ್ತದೆಂಬ ಪ್ರಧಾನಿಯ ಹೇಳಿಕೆಯ ಲೇವಡಿ- ಸಂದೀಪ್ ಅಧ್ವರ್ಯುರವರ ವ್ಯಂಗ್ಯಚಿತ್ರ
10: ಜನಸಾಮಾನ್ಯರ ಮೇಲೆ ಸರ್ಜಿಕಲ್ ಸ್ಟ್ರೈಕ್ - ಪರೇಶ್ರವರ ವ್ಯಂಗ್ಯಚಿತ್ರ
ಕಪ್ಪುಹಣವನ್ನು ತೊಡಗಿಸಿ ಎಲ್ಲರೂ ನಗದುರಹಿತ ವ್ಯವಹಾರ ನಡೆಸಬೇಕೆಂದು ಪ್ರಧಾನಿ ಹೇಳಿಕೆ ಕೊಟ್ಟಾಗ ಡಿ.ಎನ್.ಎ. ಪತ್ರಿಕೆಯಲ್ಲಿ ಪ್ರಕಟವಾದ ಮಂಜುಳ್ರವರ ವ್ಯಂಗ್ಯಚಿತ್ರದಲ್ಲಿ ಹಳ್ಳಿಯ ಬಡವ್ಯಕ್ತಿಯೊಬ್ಬ `ನಾವು ದಶಕಗಳಿಂದಲೇ ನಗದುರಹಿತವಾಗಿ ಬದುಕುತ್ತಿದ್ದೇವೆ' ಎಂದು ಪ್ರಧಾನಿಗೆ ಹೇಳುತ್ತಿರುವುದು ವಾಸ್ತವಿಕ ಕಟುಸತ್ಯವೂ ಆಗಿದೆ.
11: `ನಾವು ಹಲವಾರು ದಶಕಗಳಿಂದಲೇ ನಗದುರಹಿತವಾಗಿಯೇ ಬದುಕುತ್ತಿದ್ದೇವೆ ಸ್ವಾಮಿ' – ಮಂಜುಳ್ರವರ ವ್ಯಂಗ್ಯಚಿತ್ರ
ಈ ಹೊಸ ಡಿಜಿಟೈಜೇಶನ್ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಿದಾಗ ಬಿಕ್ಷುಕರೂ ಸಹ ಪೇಟಿಎಂ ಮತ್ತು ಕಾರ್ಡ್ಗಳನ್ನು ಸ್ವೀಕರಿಸುತ್ತೇವೆ ಎನ್ನುವ ಹಲವಾರು ವ್ಯಂಗ್ಯಚಿತ್ರಗಳು ಪ್ರಕಟವಾದವು.
12. ಬಿಕ್ಷೆ ಪೇಟಿಎಂ ಮೂಲಕ ಮಾತ್ರ
ಇಂದು, ಮೋದಿ ಸರ್ಕಾರದ ಆರ್ಥಿಕ ದುಸ್ಸಾಹಸವಾದ ನೋಟು ಅಮಾನ್ಯೀಕರಣವಾದ ಒಂದು ವರ್ಷದ ನಂತರ ಆರ್ಥಿಕ ಸ್ಥಿತಿ, ಅಭಿವೃದ್ಧಿ ಕುಂಠಿತವಾಗಿರುವುದರ ಜೊತೆಗೆ ಸರ್ಕಾರಕ್ಕೆ, ಜನಗಳಿಗೆ ಅಪಾರ ನಷ್ಟ ಹಾಗೂ ವಿಪರೀತ ಕಷ್ಟ ಉಂಟಾಗಿದ್ದು ಡಿಜಿಟೈಜೇಶನ್ ಸಹ ಇಚ್ಛಿತ ಪರಿಣಾಮ ಕಂಡಿಲ್ಲ. ವ್ಯವಹಾರಗಳು ಮೊದಲಿನಂತೆ ಹೆಚ್ಚಾಗಿ ನಗದಿನಲ್ಲೇ ನಡೆಯುತ್ತಿವೆ.
13: `ಕಪ್ಪು ಪಕ್ಷಿಯ ಕಣ್ಣು ಮಾತ್ರ ಕಾಣುತ್ತಿದೆ' - ಸುರೇಂದ್ರರವರ ವ್ಯಂಗ್ಯಚಿತ್ರ
ನೋಟು ಅಮಾನ್ಯೀಕರಣದ ಒಟ್ಟಾರೆ ಫಲಿತಾಂಶವನ್ನು `ದ ಹಿಂದೂ' ಪತ್ರಿಕೆಯ ಸುರೇಂದ್ರರವರ ವ್ಯಂಗ್ಯಚಿತ್ರ ತೋರಿಸುತ್ತದೆ. ದ್ರೋಣ ಮೋದಿ ತನ್ನ ಶಿಷ್ಯನಾದ ಜೇಟ್ಲಿಗೆ ಬಿಲ್ಲು ಬಾಣ ಬಿಡುವುದನ್ನು ಕಲಿಸಿಕೊಡುತ್ತಿದ್ದು ಕಪ್ಪುಪಕ್ಷಿಯ (ಕಪ್ಪುಹಣ) ಕಣ್ಣು ಮಾತ್ರ ಕಾಣುತ್ತಿದೆ ಎಂದು ಹೇಳಿ ಬಿಟ್ಟ ಬಾಣ ಕಪ್ಪು ಪಕ್ಷಿಗೆ ತಗುಲದೆ ಜನಸಾಮಾನ್ಯನ ಬೆನ್ನಿಗೆ ತಾಗಿರುವುದು ಸತ್ಯ ಅಲ್ಲವೆ?
2 ಕಾಮೆಂಟ್ಗಳು:
ಉತ್ತಮ ಲೇಖನ-ಎಸ್.ಎನ್.ಲಕ್ಷ್ಮೀನಾರಾಯಣ
ನೋಟು ಅಮಾನ್ಯೀಕರಣದ ವ್ಯಂಗ ಚಿತ್ರ ಸಂಗ್ರಹ ಮತ್ತು ಬರಹ ಚೆನ್ನಾಗಿದೆ. ಅಮಾನ್ಯೀಕರಣ ಬೇಕಿತ್ತಾದರೂ,ಸರಿಯಾದ ವ್ಯವಸ್ಥೆ ಮತ್ತು ಪಾರದರ್ಶಕವಾಗಿ ಆಗಲಿಲ್ಲ ಅನಿಸಿದೆ.
ಕಾಮೆಂಟ್ ಪೋಸ್ಟ್ ಮಾಡಿ