ಸೋಮವಾರ, ಡಿಸೆಂಬರ್ 18, 2017

ಸೂಸಾನ್ ಸೊಂತಾಗ್ - ದ ಡಾರ್ಕ್ ಲೇಡಿ ಆಫ್ ಅಮೆರಿಕನ್ ಲೆಟರ್ಸ್




ಕನ್ನಡ ಪುಸ್ತಕ ಪ್ರಾಧಿಕಾರದ ಪತ್ರಿಕೆ 'ಪುಸ್ತಕ ಲೋಕ'ದ ಏಪ್ರಿಲ್-ಜೂನ್ 2014 ಸಂಚಿಕೆಯಲ್ಲಿ ಪ್ರಕಟವಾದ ನನ್ನ ಲೇಖನ
ಸೂಸಾನ್ ಸೊಂತಾಗ್








ಅಮೆರಿಕದ ಖ್ಯಾತ ಸಾಹಿತಿ, ಮಾನವತಾವಾದಿ ಮತ್ತು ಬುದ್ಧಿಜೀವಿ ಸೂಸಾನ್ ಸೊಂತಾಗ್ 1933ರ ಜನವರಿ 16ರಂದು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು ಹಾಗೂ ಆಕೆ ಬೆಳೆದದ್ದು ಟಕ್ಸನ್ ಮತ್ತು ಲಾಸ್‍ಏಂಜಲ್ಸ್‍ಗಳಲ್ಲಿ. ಆಕೆಯ ತಾಯಿ ಒಬ್ಬ ಮದ್ಯಪಾನ ವ್ಯಸನಿ ಶಾಲಾ ಅಧ್ಯಾಪಕಿ ಹಾಗೂ ತಂದೆ ಫರ್ ವ್ಯಾಪಾರಿ. ಆಕೆಗೆ 5 ವರ್ಷವಿದ್ದಾಗ ಆಕೆಯ ತಂದೆ ಜಪಾನ್ ಆಕ್ರಮಣದ ಸಮಯದಲ್ಲಿ ಚೀನಾದಲ್ಲಿ ಕ್ಷಯರೋಗಕ್ಕೆ ತುತ್ತಾಗಿ ತೀರಿಕೊಂಡರು. 
ಸೊಂತಾಗ್ ಒಬ್ಬ ಪುಸ್ತಕ ಪ್ರೇಮಿ. ಆಕೆಗೆ ಮೂರು ವರ್ಷ ವಯಸ್ಸಾಗಿದ್ದಾಗಲೇ ಓದಲು ಪ್ರಾರಂಭಿಸಿದಳು. ತನಗೆ 6 ವರ್ಷ ವಯಸ್ಸಾಗಿದ್ದಾಗ `ಮೇಡಮ್ ಕ್ಯೂರಿಕೃತಿ ಓದಿ ಅದರಿಂದ ಪ್ರಭಾವಿತಳಾಗಿದ್ದಳು. ವಿಕ್ಟರ್ ಹ್ಯೂಗೋನ `ಲೆ ಮಿಸರಬಲ್ಸ್ಓದಿ ಕಣ್ಣೀರು ಸುರಿಸಿದ್ದಳು. ಆಕೆಗೆ ಸಿಗುತ್ತಿದ್ದ ಅಲ್ಪಸ್ವಲ್ಪ ಕಿಸೆ ಹಣದಿಂದ ಪುಸ್ತಕಗಳನ್ನು ಕೊಳ್ಳುತ್ತಿದ್ದಳು. ಆಕೆಗೆ 8-9 ವರ್ಷವಾಗಿದ್ದಾಗ ಹಾಸಿಗೆಯ ಮೇಲೆ ಮಲಗಿ ಪುಸ್ತಕದ ಕಪಾಟಿನೆಡೆಗೆ ಅದನ್ನು ಅತ್ಯಮೂಲ್ಯ ಆಸ್ತಿ ಎಂಬಂತೆ ನೋಡುತ್ತ ಮಲಗಿರುತ್ತಿದ್ದಳು. `ಆ ರೀತಿ ನೋಡುವುದೆಂದರೆ ನನ್ನ 50 ಗೆಳೆಯರೆಡೆಗೆ ನೋಡುವುದಾಗಿತ್ತು. ಪ್ರತಿಯೊಂದು ಪುಸ್ತಕವೂ ಕನ್ನಡಿಯೊಳಕ್ಕೆ ಪ್ರವೇಶಿಸಿದಂತೆ. ಅವು ನನ್ನನ್ನು ಯಾವುದೋ ಲೋಕಕ್ಕೆ ಕರೆದೊಯ್ದುಬಿಡುತ್ತಿದ್ದವು. ಪ್ರತಿಯೊಂದೂ ಒಂದು ಹೊಸ ಸಾಮ್ರಾಜ್ಯಕ್ಕೆ ಪ್ರವೇಶ ನೀಡುವ ಬಾಗಿಲುಗಳಾಗಿದ್ದವುಎಂದು ಆಕೆ ಹೇಳಿದ್ದಾಳೆ. ಜ್ಯಾಕ್ ಲಂಡನ್‍ರ `ಮಾರ್ಟಿನ್ ಈಡನ್ಓದಿದ ಆಕೆ ತಾನೂ ಸಹ ಲೇಖಕಿಯಾಗಬೇಕೆಂದು ನಿರ್ಧರಿಸಿದಳು. `ನನ್ನ ಬಾಲ್ಯವನ್ನು ಸಾಹಿತ್ಯದ ಆನಂದಪರವಶತೆಯ ಉನ್ಮಾದದಲ್ಲಿ ಕಳೆದೆಎಂದು ಆಕೆ ಪತ್ರಿಕೆಯೊಂದರಲ್ಲಿ ಹೇಳಿಕೊಂಡಿದ್ದಾರೆ. ಆಕೆ ಶಾಲೆ ಮುಗಿದನಂತರ ಹಾಲಿವುಡ್ ಬೌಲೆವಾರ್ಡ್‍ನಲ್ಲಿನ ಪಿಕ್‍ವಿಕ್ ಪುಸ್ತಕಮಳಿಗೆಗೆ ಹೋಗಿ ನಿಂತುಕೊಂಡೇ ಎಷ್ಟೋ ಪುಸ್ತಕಗಳನ್ನು ಓದಿದ್ದಾಳೆ. ಹಣವಿದ್ದಾಗ ಅವುಗಳನ್ನು ಕೊಂಡು ಓದಿದ್ದಾಳೆ, ಇಲ್ಲದಿದ್ದಾಗ ಅವುಗಳನ್ನು ಕದ್ದೂ ಸಹ ತಂದಿದ್ದಾಳೆ. ತನ್ನ ಹದಿನೈದನೇ ವಯಸ್ಸಿನಲ್ಲಿ ಹಾಲಿವುಡ್ ಬೌಲೆವಾರ್ಡ್ ಮತ್ತು ಹೈಲ್ಯಾಂಡ್ ಅವೆನ್ಯೂಗಳಲ್ಲಿನ ಅಂತರರಾಷ್ಟ್ರೀಯ ನಿಯತಕಾಲಿಕೆಗಳ ಮತ್ತು ವಾರ್ತಾಪತ್ರಗಳ ಮಳಿಗೆಗಳಲ್ಲಿ ಆಕೆ ಸಾಹಿತ್ಯ ಪತ್ರಿಕೆಗಳ ಜಗತ್ತನ್ನು ಕಂಡುಕೊಂಡಳು. ತನ್ನ ಹದಿನೈದನೇ ವಯಸ್ಸಿನಲ್ಲಿ ಆಕೆ `ಪಾರ್ಟಿಸಾನ್ ರಿವ್ಯೂಸಾಹಿತ್ಯ ಪತ್ರಿಕೆ ಕೊಂಡಳು. ಆದರೆ ಅದು ಆ ಎಳೆಯ ಮನಸ್ಸಿಗೆ ಅಭೇದ್ಯವಾಗಿತ್ತು. ಆದರೂ ಅದರಲ್ಲಿ ಪ್ರಮುಖ ವಿಚಾರಗಳಿವೆ, ಅವನ್ನು ಹೇಗಾದರೂ ತಿಳಿದುಕೊಳ್ಳಲೇಬೇಕೆಂದು ಆಕೆ ಶತಾಯಗತಾಯ ಪ್ರಯತ್ನಿಸಿದಳು.
                ತನ್ನ 26ನೇ ವಯಸ್ಸಿಗೆ ಆಕೆ ನ್ಯೂಯಾರ್ಕ್ ನಗರದಲ್ಲಿ ನೆಲೆಸಿ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಬೋಧನೆ ಆರಂಭಿಸಿದಳು. ಪಾರ್ಟಿಯೊಂದರಲ್ಲಿ ಆಕೆ `ಪಾರ್ಟಿಸಾನ್ ರಿವ್ಯೂಪತ್ರಿಕೆಯ ಪ್ರಖ್ಯಾತ ಸಂಸ್ಥಾಪಕ ಸಂಪಾದಕರಲ್ಲೊಬ್ಬರಾದ ವಿಲಿಯಂ ಫಿಲಿಪ್ಸ್‍ರನ್ನು ಭೇಟಿಯಾಗಿ ಅವರ ಪರಿಚಯವಾದನಂತರ ಆಕೆ ಆ ಪತ್ರಿಕೆಯಲ್ಲಿ ಆಲ್ಬರ್ಟ್ ಕಾಮೂ, ಸಿಮೋನ್ ವೀಲ್, ಜೀನ್-ಲೂಕ್ ಗೊಡಾರ್ಡ್, ಕೆನೆತ್ ಆಂಗರ್, ಜಾಸ್ಪರ್ ಜಾನ್ಸ್ ಮುಂತಾದವರ ಬಗ್ಗೆ ಪ್ರಬಂಧಗಳನ್ನು ಬರೆದಳು. ನ್ಯೂಯಾರ್ಕ್ ಟೈಮ್ಸ್‍ನ ಸಂಸ್ಥಾಪಕರಲ್ಲೊಬ್ಬರಾದ ಎಲಿಜಬೆತ್ ಹಾರ್ಡ್‍ವಿಕ್ ಸೊಂತಾಗ್‍ರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಆಕೆಯನ್ನು, `ಅತ್ಯಂತ ಸುಂದರ, ವಿಕಸನಶೀಲ ಮತ್ತು ವಿಶಿಷ್ಟ ಪ್ರತಿಭೆಯೆಂದು ವಿವರಿಸಿದರು. `ಆಕೆಯ ಪ್ರತಿಯೊಂದು ಪ್ರಬಂಧದಲ್ಲೂ ಅತ್ಯದ್ಭುತ ಪ್ರಭಾವವಿದೆ- ಒಂದು ರೀತಿಯ ಆತಂಕ ಹುಟ್ಟಿಸುವಂಥದ್ದಾದರೂ ಸುಕೋಮಲ ಅಧಿಕಾರದ ಪ್ರಭಾವವಿದೆ. ಆಕೆಯ ಬರಹಗಳ ಶೈಲಿಯಲ್ಲಿ ಊಹಾತ್ಮಕತೆ ಕಂಡುಬಂದರೂ ಅದರಲ್ಲಿ ನಿಷ್ಠೆಯಿದೆ ಹಾಗೂ ದರ್ಪದ ಲವಲೇಶವೂ ಇಲ್ಲ. ಅಲ್ಲದೆ ಅದು ಕೊನೆಯಲ್ಲಿ ತನ್ನ ಅನ್ವೇಷಣೆಯ ಕುತೂಹಲದಿಂದ ದೂರವೂ ಇರುವುದಿಲ್ಲಎಂದೂ ಹೇಳಿದ್ದಾರೆ.
ಆಕೆ 1957ರಲ್ಲಿ ಆಕ್ಸಫರ್ಡ್ ವಿಶ್ವವಿದ್ಯಾನಿಲಯದಿಂದ ಅಲ್ಲಿ ಆಕೆಗೆ ಹೊಂದಲಿಲ್ಲವಾದ ಕಾರಣ ಪ್ಯಾರಿಸ್ ವಿಶ್ವವಿದ್ಯಾನಿಲಯಕ್ಕೆ ವರ್ಗಾವಣೆ ಪಡೆದುಕೊಂಡಳು. ಆಕೆಯೇ ಹೇಳಿಕೊಂಡಂತೆ ಪ್ಯಾರಿಸ್ಸಿನ ಆ ದಿನಗಳೇ ಆಕೆಯ ಬದುಕಿನ ಬಹು ಮುಖ್ಯವಾದ ಘಟ್ಟವಾಗಿತ್ತು. ಆಕೆಗೆ ಅಲ್ಲಿ ಹಲವಾರು ಪ್ರಖ್ಯಾತ ಕಲಾವಿದರ, ಶಿಕ್ಷಣ ತಜ್ಞರ ಮತ್ತು ಬುದ್ಧಿಜೀವಿಗಳ ಒಟನಾಟ ದೊರಕಿತು. ಅಲ್ಲಿಂದಲೇ ಆಕೆಗೆ ಫ್ರಾನ್ಸ್‍ನ ಸಂಸ್ಕೃತಿಯೊಂದಿಗಿನ ಸುದೀರ್ಘ ಸಂಬಂಧಕ್ಕೆ ಬುನಾದಿಯಾಯಿತು.
                ಆಕೆ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿದ್ದಾಗ ಆಕೆಗೆ 17 ವರ್ಷ ವಯಸ್ಸು. ತನ್ನ ಹತ್ತು ದಿನದ ಗೆಳೆಯ ಫಿಲಿಪ್ ರೀಫ್‍ನನ್ನು ಮದುವೆಯಾದಳು. ಆಕೆಯ ಮಗ ಡೇವಿಡ್ ರೀಫ್ ಆಕೆಗೆ 19 ವರ್ಷವಾಗಿದ್ದಾಗ ಹುಟ್ಟಿದ. ಆ ಸಮಯದಲ್ಲಿಯೇ ತತ್ವಜ್ಞಾನಿ ಹರ್ಬರ್ಟ್ ಮಾಕ್ರ್ಯೂಸ್ ತನ್ನ ಕೃತಿ `ಎರೋಸ್ ಅಂಡ್ ಸಿವಿಲೈಜೇಶನ್ರಚನೆಯ ಸಮಯದಲ್ಲಿ ಅವರೊಂದಿಗೆ ಒಂದು ವರ್ಷ ವಾಸಿಸಿದ್ದರು. ಸೊಂತಾಗ್ ಮತ್ತು ರೀಫ್‍ರವರ ದಾಂಪತ್ಯ ಎಂಟು ವರ್ಷಗಳವರೆಗಿತ್ತು. ಆ ಸಮಯದಲ್ಲಿ ಅವರು ಒಟ್ಟಿಗೇ `ಫ್ರಾಯ್ಡ್: ದ ಮೈಂಡ್ ಆಫ್ ದ ಮಾರಲಿಸ್ಟ್ಕೃತಿಯನ್ನು ರಚಿಸಿದರು. 1959ರಲ್ಲಿ ಅವರ ವಿವಾಹ ವಿಚ್ಛೇದನದ ಸಮಯದಲ್ಲಿನ ಒಪ್ಪಂದದಂತೆ ಆ ಕೃತಿ ಪ್ರಕಟವಾದಾಗ ಅದರಲ್ಲಿ ಸೊಂತಾಗ್‍ಳ ಹೆಸರನ್ನು ಕೈಬಿಡಲಾಯಿತು. ಆ ದಂಪತಿಗಳ ಮಗ ಡೇವಿಡ್ ರೀಫ್ ಮುಂದೆ ಸ್ವತಃ ಬರಹಗಾರ ಮತ್ತು ಸಂಪಾದಕನಾದ. ತನ್ನ ತಾಯಿಯ ಕೃತಿಗಳನ್ನು ಫರಾರ್, ಸ್ಟ್ರಾಸ್ ಅಂಡ್ ಗಿರೋ ಪ್ರಕಾಶನದಲ್ಲಿ ಸ್ವತಃ ತಾನೇ ಸಂಪಾದಿಸಿದ. ಸೊಂತಾಗ್ ತನ್ನ ಕೃತಿ `ಎಗೇನ್‍ಸ್ಟ್ ಇಂಟರ್‍ಪ್ರಿಟೇಶನ್’ (1966) ಪ್ರಕಟಣೆಯಿಂದ `ದ ಡಾರ್ಕ್ ಲೇಡಿ ಆಫ್ ಅಮೆರಿಕನ್ ಲೆಟರ್ಸ್ಎಂದು ಪ್ರಖ್ಯಾತಳಾದಳು.
               
ಸಾಹಿತ್ಯ ಬದುಕು
ಸೊಂತಾಗ್‍ರ ಬರೆಯುವ ಮತ್ತು ಚರ್ಚಿಸುವ ವಿಷಯಗಳು ವಿಸ್ತøತವಾಗಿದ್ದವು. ಆಕೆಯ ಸಾಹಿತ್ಯ ಬದುಕು ಪ್ರಾರಂಭವಾದದ್ದು ಕಾಲ್ಪನಿಕ ಕಥನ ಸಾಹಿತ್ಯದ ರಚನೆಯಿಂದ. 1960ರಿಂದ 1964ರವರೆಗೆ ಸಾರಾ ಲಾರೆನ್ಸ್ ಕಾಲೇಜ್, ನ್ಯೂಯಾರ್ಕ್‍ನ ಸಿಟಿ ಯೂನಿವರ್ಸಿಟಿ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯಗಳಲ್ಲಿ ತತ್ವಶಾಸ್ತ್ರ ಮತ್ತು ಮತಧರ್ಮಶಾಸ್ತ್ರ ಬೋಧಿಸಿದ ನಂತರ ಆಕೆ ಶಿಕ್ಷಣ ಕ್ಷೇತ್ರಕ್ಕೆ ವಿದಾಯ ಹೇಳಿ ಸಂಪೂರ್ಣ ಬರವಣಿಗೆಯಲ್ಲಿ ತೊಡಗಿದರು. ತನಗೆ 30 ವರ್ಷ ವಯಸ್ಸಾಗಿದ್ದಾಗ ಅಕೆಯ ಮೊದಲ ಕೃತಿ, ಒಂದು ಪ್ರಾಯೋಗಿಕ ಕಾದಂಬರಿ `ದ ಬೆನೆಫ್ಯಾಕ್ಟರ್’ (1963) ಪ್ರಕಟವಾಯಿತು ಹಾಗೂ ಅದಾದನಂತರ 1967ರಲ್ಲಿ ಮತ್ತೊಂದು ಕಾದಂಬರಿ `ದ ಡೆತ್ ಕಿಟ್ಪ್ರಕಟವಾಯಿತು. 1986ರ ನವೆಂಬರ್‍ನಲ್ಲಿ ಪ್ರಕಟವಾದ ಏಡ್ಸ್ ಬಗೆಗಿನ ಆಕೆಯ ಸಣ್ಣ ಕತೆ `ದ ವೇ ವಿ ಲೀವ್ ನೌಅತ್ಯಂತ ಮೆಚ್ಚುಗೆ ಗಳಿಸಿತು. 1992ರಲ್ಲಿ ಪ್ರಕಟವಾದ ಆಕೆಯ ಕಾದಂಬರಿ `ದ ವಾಲ್ಕೆನೊ ಲವರ್ಸಹ ಅತ್ಯಂತ ಜನಪ್ರಿಯವಾಯಿತು. ಆಕೆಯ ಕೊನೆಯ ಕಾದಂಬರಿ `ಇನ್ ಅಮೆರಿಕಾ’ 2000ದಲ್ಲಿ ಆಕೆಗೆ 67 ವರ್ಷ ವಯಸ್ಸಾಗಿದ್ದಾಗ ಪ್ರಕಟವಾಯಿತು.
                ಆಕೆಗೆ ಅತ್ಯಂತ ಜನಪ್ರಿಯತೆ ಮತ್ತು `ಕುಖ್ಯಾತಿತಂದು ಕೊಟ್ಟಿದ್ದು ಆಕೆಯ ಪ್ರಬಂಧಗಳು. ಆಕೆ `ಮೇಲ್ದರ್ಜೆಯಮತ್ತು `ಕೆಳದರ್ಜೆಯಕಲೆಗಳು ಒಂದುಗೂಡುವ ಬಗ್ಗೆ, ಕಲೆಯ ಪ್ರಕಾರ/ ವಸ್ತು ದ್ವಿಭಜನೆಯ ಬಗ್ಗೆ ಹೆಚ್ಚು ಹೆಚ್ಚು ಬರೆದಳು. ಆಕೆಯ ಪ್ರಖ್ಯಾತ ಪ್ರಬಂಧ 1964`ನೋಟ್ಸ್ ಆನ್ `ಕ್ಯಾಂಪ್ಅತ್ಯುತ್ತಮ ಕಲೆಯನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಬದಲಿ ಸೂಕ್ಷ್ಮತೆಯೊಂದಿಗೆ ಪರಿಶೀಲಿಸುವುದರ ಬಗ್ಗೆ ತಿಳಿಸಿತು.
1995ರಲ್ಲಿ ಪ್ಯಾರಿಸ್ ರಿವ್ಯೂ ಪತ್ರಿಕೆಯ ಸಂದರ್ಶನವೊಂದರಲ್ಲಿ ಸಾಹಿತ್ಯದ ಉದ್ದೇಶವೇನೆಂದು ಆಕೆಯನ್ನು ಕೇಳಲಾಗಿತ್ತು. ಅದಕ್ಕೆ ಆಕೆ, `ಉತ್ತಮ ಕಾದಂಬರಿಯನ್ನು ಓದುವುದೆಂದರೆ ಹೃದಯಕ್ಕೆ ಶಿಕ್ಷಣ ನೀಡಿದಂತೆ. ಅದು ನಿಮ್ಮ ಮಾನವ ಸಾಧ್ಯತೆಗಳ ಕಲ್ಪನೆಯನ್ನು, ಮಾನವ ಪ್ರಕೃತಿಯನ್ನು ಮತ್ತು ಜಗತ್ತಿನ ಪರಿಕಲ್ಪನೆಯನ್ನು ಮತ್ತಷ್ಟು ವಿಸ್ತಾರಗೊಳಿಸುತ್ತದೆ. ನಮ್ಮಲ್ಲಿ ಒಂದು ಆಂತರಿಕ ಜಗತ್ತನ್ನೇ ಸೃಷ್ಟಿಮಾಡುವ ಸಾಮಥ್ರ್ಯ ಅದಕ್ಕಿದೆಎಂದಿದ್ದಳು. ತನ್ನ ಸಾಹಿತ್ಯ ಅನ್ವೇಷಣೆಗಳ ನಕ್ಷೆಯನ್ನು ಆಕೆಯೇ ಸಿದ್ಧಪಡಿಸಿಕೊಳ್ಳುತ್ತಿದ್ದಳು. ಹೆನ್ರಿ ಜೇಮ್ಸ್ ಒಮ್ಮೆ ಹೇಳಿದ್ದಂತೆ ಯಾವ ಮಾತು ಅಕೆಯ ಕೊನೆಯ ಮಾತಾಗಿರಲಿಲ್ಲ, ಏಕೆಂದರೆ ಆಕೆಗೆ ಅದರ ಬಗ್ಗೆ ಹೇಳಲು ಇನ್ನೂ ಮತ್ತಷ್ಟು ಇರುತ್ತಿತ್ತು.

ಒಂದು ಹೊಸ ದೃಶ್ಯ ಸಂಕೇತ
ಆಧುನಿಕ ಜಗತ್ತಿನಲ್ಲಿ ಸ್ಥಿರ ಚಿತ್ರದ ಕ್ಯಾಮೆರಾವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವಂತೆ ಮಾಡಿದುದು 1977ರಲ್ಲಿ ಪ್ರಕಟವಾದ ಆಕೆಯ ಪ್ರಬಂಧ `ಆನ್ ಫೋಟೋಗ್ರಫಿ’. ಆಕೆಯ ಪ್ರಕಾರ ಫೋಟೋಗ್ರಫಿ ಕಲೆಯೂ ಸಹ ಚಿತ್ರ ಕಲೆಯಂತೆ ಜಗತ್ತನ್ನು ವ್ಯಾಖ್ಯಾನಿಸುವ ಮಾಧ್ಯಮವಾಗಿದೆ ಹಾಗೂ ಕ್ಯಾಮೆರಾಗಳನ್ನು `ಸಮೂಹ ಕಲಾ ಪ್ರಕಾರವಾಗಿ ಉತ್ಪಾದಿಸಲಾಗುತ್ತಿದೆ. ಆಕೆಯ ಪ್ರಕಾರ ಬಂದೂಕು ಮತ್ತು ಕಾರುಗಳಂತೆ ಕ್ಯಾಮೆರಾ ಸಹ ಶಿಶ್ನ ಸಂಕೇತ ಹಾಗೂ ಅವು ಭ್ರಮಾಲೋಕದ ಯಂತ್ರಗಳು. ಸೊಂತಾಗ್‍ರವರಿಗೆ ಒಂದು ಫೋಟೊ ಅತ್ಯಮೂಲ್ಯವಾದದ್ದು ಏಕೆಂದರೆ ಅದು ಮಾಹಿತಿ ಕೊಡುತ್ತದೆ ಆದರೆ ಯಾವುದೇ ಒಂದು ನೈತಿಕ ನಿಲುವನ್ನು ಅದು ಒತ್ತಿ ಹೇಳುವುದಿಲ್ಲ. ಹೇಗೆ ಆಧುನಿಕ ತಂತ್ರಜ್ಞಾನದ ವಿಕಾಸ ನೋಡುಗನನ್ನು ಬದಲಾಯಿಸಿದೆ ಎಂದು ಈ ಪ್ರಬಂಧದಲ್ಲಿ ಹೇಳುತ್ತಾರೆ. ಅದನ್ನು ಅವರ ಒಂದು ಹೊಸ ದೃಶ್ಯ ಸಂಕೇತವೆಂದು ಹೇಳುತ್ತಾರೆ. ಆಧುನಿಕ ಫೋಟೋಗ್ರಫಿ ತನ್ನ ಸುಗಮತೆ ಮತ್ತು ಸೌಲಭ್ಯದಿಂದಾಗಿ ರಾಶಿ ರಾಶಿ ದೃಶ್ಯ ವಸ್ತುವನ್ನು ಸೃಷ್ಟಿಸಿದೆ. ಇಂದು ಕ್ಯಾಮೆರಾವನ್ನು ಯಾರು ಬೇಕಾದರೂ ಕೊಳ್ಳಬಹುದಾದ್ದರಿಂದ ಹಾಗೂ ಫೋಟೋಗಳನ್ನು ಸುಲಭವಾಗಿ ಪಡೆಯಬಹುದಾದ್ದರಿಂಧ `ಇಂದು ನಾವು ಯಾವುದನ್ನು ಬೇಕಾದರೂ ಫೋಟೋ ತೆಗೆಯಬಹುದಾಗಿದೆ’. ಅದರಿಂದಾಗಿ ನಮ್ಮ ಸುತ್ತಲೂ ವಸ್ತುಗಳ, ಸ್ಥಳಗಳ ಮತ್ತು ಜನರ ರಾಶಿ ರಾಶಿ ಫೋಟೋಗಳಿವೆ- ಅವು ನಮ್ಮ ಅಸ್ತಿತ್ವಕ್ಕೆ ಅವಶ್ಯಕವಲ್ಲದಿದ್ದರೂ  ಸಹ. ಅಲ್ಲದೆ ನಮಗೆ ಯಾವುದನ್ನು ನೋಡುವ ಹಕ್ಕಿದೆ, ಯಾವುದನ್ನು ನೋಡಲು ಬಯಸುತ್ತೇವೆ ಅಥವಾ ಯಾವುದನ್ನು ನೋಡಲೇ ಬೇಕಾಗಿದೆ ಎನ್ನುವ ನಿರೀಕ್ಷೆಯ ಮೇಲೆ ಇದು ಮಹತ್ತರ ಪರಿಣಾಮ ಬೀರಿದೆ. ನಮ್ಮ ಸುತ್ತಮುತ್ತಲಿದ್ದವನ್ನಷ್ಟೇ ನೋಡಲು ಸಾಧ್ಯವಿದ್ದ ಕಾಲದಿಂದ ಇಂದು ನಾವು ಏನು ಬೇಕಾದರೂ ನೋಡಬಹುದಾಗಿದೆ. `ಈ ಹೊಸ ದೃಶ್ಯ ಸಂಕೇತವನ್ನು ನಮಗೆ ಕಲಿಸಿದ ಫೋಟೋಗಳು ಯಾವುದು ನೋಡವಂಥದು ಹಾಗೂ ಯಾವುದನ್ನು ಗಮನಿಸಲು ನಮಗೆ ಹಕ್ಕಿದೆ ಎನ್ನುವ ನಮ್ಮ ನಂಬಿಕೆಯನ್ನು ವಿಸ್ತೃತಗೊಳಿಸಿದೆಎನ್ನುತ್ತಾರೆ ಆಕೆ ಹಾಗೂ ಇದನ್ನು ಆಕೆ `ನೋಟದ ನೈತಿಕತೆಎಂದು ಕರೆಯುತ್ತಾರೆ. ಸೊಂತಾಗ್‍ರ ಪ್ರಕಾರ ಫೋಟೋಗ್ರಫಿ ಮನುಷ್ಯನ ಸೂಕ್ಷ್ಮಸಂವೇದನೆಗಳನ್ನು ಮೊಂಡಾಗಿಸುತ್ತವೆ. ಅವರು ಅವರದೇ ಉದಾಹರಣೆ ಕೊಡುತ್ತಾ ಆಕೆಗೆ ಹನ್ನೆರಡು ವರ್ಷ ವಯಸ್ಸಾಗಿದ್ದಾಗ ಜರ್ಮನಿಯ ಯೆಹೂದಿಗಳ ನರಮೇಧದ ಕ್ಯಾಂಪ್‍ಗಳ ಫೋಟೋಗಳನ್ನು ನೋಡಿ ಆಕೆ ಅದೆಷ್ಟು ಯಾತನೆಗೊಳಗಾದಳೆಂದರೆ, ಅದಾದ ನಂತರ ಆ ತರಹದ ಫೋಟೋಗಳನ್ನು ನೋಡಿದಾಗ ಆಕೆ ಅಷ್ಟೊಂದು ಹಿಂಸೆ ಪಡುತ್ತಿರಲಿಲ್ಲ, ಏಕೆಂದರೆ ಆ ಮೊದಲು ಕಂಡ ಚಿತ್ರಗಳು ಆಕೆಯಲ್ಲಿ `ಚಿತ್ರ ಅರಿವಳಿಕೆ’ (‘Images anesthesize’) ಉಂಟುಮಾಡಿದ್ದವು. ಆಕೆಯ ಪ್ರಕಾರ ಒಬ್ಬ ವ್ಯಕ್ತಿಯ ಫೋಟೋ ತೆಗೆಯುವುದೆಂದರೆ ಆ ವ್ಯಕ್ತಿಯ ನಶ್ವರತೆ, ಭೇದ್ಯತೆ ಹಾಗೂ ರೂಪಾಂತರ ಸಾಧ್ಯತೆಗಳಲ್ಲಿ ಭಾಗವಹಿಸಿದಂತೆ. ಫೋಟೋಗಳು ವೀಡಿಯೋಗಳಿಗಿಂತ ಹೆಚ್ಚು ನೆನಪಿನಲ್ಲಿರಿಸಿಕೊಳ್ಳಬೇಕಾದುವು ಏಕೆಂದರೆ ಫೋಟೋಗಳು ಆ ಕ್ಷಣದ ಸಮಯವನ್ನು ಅಲ್ಲಿಯೇ ನಿಲ್ಲಿಸಿ ತಮ್ಮಲ್ಲಿ ಸೆರೆಹಿಡಿದಿರುತ್ತವೆ. ಅವರ ಕೊನೆಯ ಪ್ರಬಂಧ `ರಿಗಾರ್ಡಿಂಗ್ ದ ಪೇನ್ ಆಫ್ ಅಧರ್ಸ್ನಲ್ಲಿ ಆಕೆ ಕಲೆ ಮತ್ತು ಫೋಟೋಗ್ರಫಿಯನ್ನು ನೈತಿಕತೆಯ ದೃಷ್ಟಿಯಿಂದ ಮರುಪರಿಶೀಲಿಸಿದ್ದಾರೆ. ಅದರಲ್ಲಿ ಸಂಸ್ಕøತಿಯ ಸಂಘರ್ಷಗಳ ಮೇಲೆ ಮಾಧ್ಯಮಗಳು ಹೇಗೆ ಪ್ರಭಾವ ಬೀರುತ್ತವೆಂಬುದನ್ನು ತಿಳಿಸಿದೆ.
                ಸರಯೇವೊ- ಬೋಸ್ನಿಯಾ ಮತ್ತು ಹರ್ಜ್‍ಗೋವಿನ ಯುದ್ಧದ ಸಮಯದಲ್ಲಿ ಆಕೆ ಸರಯೇವೋದಲ್ಲಿದ್ದು ಸ್ಯಾಮ್ಯುಯೆಲ್ ಬೆಕೆಟ್‍ನ `ವೇಟಿಂಗ್ ಫಾರ್ ಗೋಡಾಟ್ನಿರ್ದೇಶನ ಮಾಡುತ್ತಿದ್ದು ಅದಾದ ನಂತರ ಫೋಟೋಗ್ರಫಿ ಬಗೆಗಿನ ತಮ್ಮ ಅಭಿಪ್ರಾಯವನ್ನು ಕೊಂಚ ಬದಲಿಸುವ `ಲುಕಿಂಗ್ ಅಟ್ ವಾರ್: ಫೋಟೋಗ್ರಫೀಸ್ ವ್ಯೂ ಆಫ್ ಡಿವಾಸ್ಟೇಶನ್ ಅಂಡ್ ಡೆತ್ಲೇಖನ ಬರೆದರು. ಅದು ಡಿಸೆಂಬರ್ 9, 2002`ದ ನ್ಯೂಯಾರ್ಕರ್ನಲ್ಲಿ ಪ್ರಕಟವಾಯಿತು. ಚಿತ್ರಗಳಿಂದ ವಿಶೇಷವಾಗಿ ಫೋಟೋಗಳಿಂದ ನಮ್ಮ ನೆನಪಿನ ಮೇಲೆ ಉಂಟಾಗುವ ಪರಿಣಾಮಗಳನ್ನು ಆಕೆ ಹೇಳುತ್ತ, `ಜನ ಫೋಟೋಗಳ ಮೂಲಕ ನೆನಪಿನಲ್ಲಿರಿಸಿಕೊಳ್ಳುತ್ತಾರೆ ಎಂದರ್ಥವಲ್ಲ... ಅಂದರೆ ಅವರು ಫೋಟೋಗಳನ್ನು ಮಾತ್ರ ನೆನಪಿನಲ್ಲಿರಿಸಿಕೊಳ್ಳುತ್ತಾರೆ. ಫೋಟೋದಲ್ಲಿನ ಚಿತ್ರ ಅರಿವಿನ ಮತ್ತು ಸ್ಮರಣೆಯ ಇತರ ರೂಪಗಳನ್ನು ಮಸಕುಮಾಡಿಬಿಡುತ್ತದೆ... ನೆನಪಿಸಿಕೊಳ್ಳುವುದು ಎಂದರೆ ಯಾವುದೋ ಘಟನೆಯನ್ನು ನೆನಪಿಸಿಕೊಳ್ಳುವುದಾಗಿರುವುದಿಲ್ಲ.. ಯಾವುದೋ ಚಿತ್ರವನ್ನು ನೆನಪಿಸಿಕೊಳ್ಳುವುದಾಗಿರುತ್ತದೆ.

ಸಾಮಾಜಿಕ ಚಳುವಳಿಗಳು
1989ರಲ್ಲಿ ಇರಾನಿನ ಅಯಾತೊಲ್ಲಾ ಖೊಮೇನಿ ಸಾಲ್ಮನ್ ರಶ್ದಿಯ ಮೇಲೆ ಆತನ ಕೃತಿ `ದ ಸಟಾನಿಕ್ ವರ್ಸಸ್ನಿಂದಾಗಿ ಫತ್ವಾ ಹೊರಡಿಸಿದಾಗ ಸೊಂತಾಗ್ ಅಂತರರಾಷ್ಟ್ರೀಯ ಪೆನ್ ಬರಹಗಾರರ ಒಕ್ಕೂಟದ (International PEN writers' organization) ಅಮೆರಿಕದ ಶಾಖೆಯ ಪೆನ್ ಅಮೆರಿಕನ್ ಕೇಂದ್ರದ ಅಧ್ಯಕ್ಷರಾಗಿದ್ದರು. ಇಡೀ ಅಮೆರಿಕದ ಬರಹಗಾರರನ್ನು ರಶ್ದಿಯ ಬೆಂಬಲಕ್ಕಾಗಿ ಹುರಿದುಂಬಿಸಲು ಸೊಂತಾಗ್ ಕಾರಣರಾಗಿದ್ದರು.
                2001ರ ಸೆಪ್ಟೆಂಬರ್ 11ರಂದು ನಡೆದ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ ಭಯೋತ್ಪಾದಕರ ವಿಮಾನ ದಾಳಿಯ ಬಗೆಗಿನ ಆಕೆಯ ಮಾತುಗಳು (ಅವು ಸೆಪ್ಟೆಂಬರ್ 24, 2001`ದ ನ್ಯೂ ಯಾರ್ಕರ್ಪತ್ರಿಕೆಯಲ್ಲಿ ಪ್ರಕಟವಾಗಿದ್ದವು) ದೊಡ್ಡ ವಿವಾದವನ್ನೇ ಹುಟ್ಟುಹಾಕಿದವು. ಆ ದಾಳಿಯ ಬಗ್ಗೆ ಆಕೆ, `ಈ ದಾಳಿ `ನಾಗರಿಕತೆಯ ಮೇಲೆ ಅಥವಾ `ಸ್ವಾತಂತ್ರ್ಯದ ಮೇಲೆ ಅಥವಾ `ಮಾನವೀಯತೆಯ ಮೇಲೆ ಅಥವಾ `ಮುಕ್ತ ಜಗತ್ತಿನಮೇಲೆ ನಡೆಸಿದ `ಹೇಡಿತನದ ದಾಳಿಯಲ್ಲ ಎಂದು ಎಲ್ಲಿ ಒಪ್ಪಿಕೊಳ್ಳಲಾಗಿದೆ? ಬದಲಿಗೆ ಅದು ವಿಶ್ವದ ಸ್ವ-ಘೋಷಿತ ಸೂಪರ್‍ಪವರ್ ಮೇಲೆ ಅಮೆರಿಕದ ನಿರ್ದಿಷ್ಟ ಸಂಬಂಧಗಳು ಹಾಗೂ ಕ್ರಮಗಳ ಪರಿಣಾಮವಾಗಿ ನಡೆಸಿದ ದಾಳಿಯಾಗಿದೆ. ಇರಾಕ್‍ನಲ್ಲಿ ಅಮೆರಿಕಾ ನಡೆಸುತ್ತಿರುವ ಬಾಂಬ್ ದಾಳಿಯ ಬಗ್ಗೆ ಎಷ್ಟು ಜನರಿಗೆ ತಿಳಿದಿದೆ? `ಹೇಡಿಎನ್ನುವ ಪದವನ್ನು ಇಲ್ಲಿ ಸೂಕ್ತವಾಗಿ ಬಳಸಬಹುದಾದಲ್ಲಿ ಅದನ್ನು ದೂರದ ಮರೆಯಿಂದ ಕೊಲ್ಲುವವರಿಗೆ, ಆಕಾಶದಿಂದ ಬಾಂಬ್‍ಗಳಿಂದ ಕೊಲ್ಲುವವರಿಗೆ ಬಳಸಬಹುದೇ ಹೊರತು ಇತರರನ್ನು ಕೊಲ್ಲಲು ತಾವೂ ಸಾಯಲು ಸಿದ್ಧರಿರುವಂಥವರಿಗಲ್ಲ. ಧೈರ್ಯದ (ನೈತಿಕವಾಗಿ ಅದೊಂದು ತಟಸ್ಥ ಗುಣ) ಬಗ್ಗೆ ಹೇಳುವುದಾದಲ್ಲಿ, ಮಂಗಳವಾರ ದಾಳಿ ನಡೆಸಿದವರು ಖಂಡಿತಾ ಹೇಡಿಗಳಲ್ಲಎಂದು ಬರೆದಿದ್ದರು.
ಮೊದಲಿನಿಂದಲೂ ವಿಯೆಟ್ನಾಮ್ ಯುದ್ಧವನ್ನು ಅತ್ಯಂತ ಭಾವುಕಳಾಗಿ ವಿರೋಧಿಸುತ್ತಿದ್ದ ಆಕೆ ತನ್ನ ರಾಜಕೀಯ ಚಿಂತನೆಗಳಿಗಾಗಿ ಶ್ಲಾಘನೆ ಹಾಗೂ ದೋಷಾರೋಪಣೆ ಎರಡಕ್ಕೂ ಒಳಗಾಗಿದ್ದಳು. 1967ರಲ್ಲಿ ಆಕೆ ಪಾರ್ಟಿಸಾನ್ ರಿವ್ಯೂ ಸಿಂಪೋಸಿಯಂನಲ್ಲಿ `ಅಮೆರಿಕಾ ನರಮೇಧದ ತಳಹದಿಯ ಮೇಲೆ, ಸ್ಥಳೀಯ, ತಾಂತ್ರಿಕವಾಗಿ ಹಿಂದುಳಿದ, ಸವರ್ಣೀಯ ಸಮುದಾಯಗಳಿಂದ ಭೂಮಿಯನ್ನು ಕಿತ್ತುಕೊಳ್ಳಲು ಬಿಳಿಯ ಯೂರೋಪಿಯನ್ನರಿಗೆ ಎಲ್ಲ ಹಕ್ಕುಗಳೂ ಇವೆ ಎಂಬ ಊಹೆಯ ಮೇಲೆಯೇ ನಿರ್ಮಿತವಾಗಿದೆಎಂದು ಬರೆದಿದ್ದರು. ಅತ್ಯಂತ ಹತಾಶೆ ಹಾಗೂ ಸಿಟ್ಟಿನಿಂದ ಅಕೆ, `ವಾಸ್ತವಾಂಶವೇನೆಂದರೆ, ಮೊಜಾರ್ಟ್, ಪ್ಯಾಸ್ಕಲ್, ಬೂಲಿಯನ್ ಆಲ್ಜೀಬ್ರಾ, ಶೇಕ್ಸ್‍ಪಿಯರ್, ಪಾಲಿಮೆಂಟರಿ ಸರ್ಕಾರಗಳು, ಮಧ್ಯಯುಗದ ಚರ್ಚ್‍ಗಳು, ನ್ಯೂಟನ್, ಮಹಿಳಾ ವಿಮೋಚನೆ, ಕ್ಯಾಂಟ್, ಮಾಕ್ರ್ಸ್, ಬ್ಯಾಲೆ ಮುಂತಾದುವೆಲ್ಲಾ ಈ ಬಿಳಿ ನಾಗರಿಕತೆ ಜಗತ್ತಿಗೆ ತಂದಿರುವ ದುರಂತದಿಂದ ವಿಮುಕ್ತಿ ಕೊಡಿಸಲಾರವು. ಈ ಬಿಳಿ ಜನಾಂಗವೇ ಮಾನವ ಚರಿತ್ರೆಯ ಕ್ಯಾನ್ಸರ್ ಆಗಿದೆ; ಈ ಬಿಳಿ ಜನಾಂಗವೇ ತನ್ನ ವಿಚಾರಧಾರೆಗಳಿಂದ ತನ್ನ ಅನ್ವೇಷಣೆಗಳಿಂದ ಎಲ್ಲೆಲ್ಲಿ ತಾನು ಕಾಲಿಡುತ್ತದೆಯೋ ಅಲ್ಲೆಲ್ಲಾ ಸ್ವಾಯತ್ತ ನಾಗರಿಕತೆಗಳನ್ನು ನಾಶ ಮಾಡಿದೆ, ಭೂಮಿಯ ಪರಿಸರದಲ್ಲಿ ಅಸಮತೋಲನ ಉಂಟುಮಾಡಿದೆ, ಹಾಗೂ ಈಗ ಇಡೀ ಜಗತ್ತಿನ ಎಲ್ಲ ಜೀವರಾಶಿಗೂ ಕುತ್ತಾಗುವಂತೆ ಮಾಡಿದೆಎಂದು ಹೇಳಿದಳು. ಆದರೆ ಈ ಹೇಳಿಕೆಯಲ್ಲಿನ `ಬಿಳಿ ಜನಾಂಗವೇ ಮಾನವ ಚರಿತ್ರೆಯ ಕ್ಯಾನ್ಸರ್ ಆಗಿದೆಎನ್ನುವ ಮಾತಿನಿಂದ ಕ್ಯಾನ್ಸರ್ ರೋಗಿಗಳಿಗೆ ನೋವಾಗುತ್ತದೆಂದು ತಿಳಿದು ಆಕೆ ತನ್ನ ಮಾತಿಗೆ ಕ್ಷಮೆಯಾಚಿಸಿದಳು. ವಿಪರ್ಯಾಸವೆಂದರೆ ಆಕೆ ಕೊನೆಗೆ ಕ್ಯಾನ್ಸರ್ ಕಾಯಿಲೆಗೇ ತುತ್ತಾದಳು.
ಅಮೆರಿಕದ ಸರ್ವಾಧಿಕಾರತ್ವವನ್ನು ಪ್ರತಿಭಟಿಸಲು ಅದು ವಿಯೆಟ್ನಾಂ ಮೇಲೆ ತನ್ನ ಬಾಂಬ್ ದಾಳಿ ನಡೆಸುತಿರುವಂತೆಯೇ ವಿಯೆಟ್ನಾಂನ ಹನೋಯ್‍ಗೆ ಮೇ 1968ರಲ್ಲಿ ಭೇಟಿ ನೀಡಿದಳು. ಅದೇ ವರ್ಷ ಕ್ಯೂಬಾಗೆ ಭೇಟಿ ನೀಡಿ ಕ್ಯೂಬಾದ ಕ್ರಾಂತಿಗೆ ತನ್ನ ಬೆಂಬಲ ಸೂಚಿಸಿದಳು. ಅದೇ ರೀತಿ ಸಲಿಂಗಕಾಮಿಗಳ ಬಗೆಗಿನ ಫಿಡೆಲ್ ಕ್ಯಾಸ್ಟ್ರೋನ ಕಾರ್ಯನೀತಿಗಳನ್ನು ಧಿಕ್ಕರಿಸಿದಳು. ತನ್ನದೇ ವಿಚಾರಗಳಿಂದ ಆಕೆ ಬಲಪಂಥೀಯ ಮತ್ತು ಎಡಪಂಥೀಯರಿಬ್ಬರಿಗೂ ಕಿರಿಕಿರಿ ಉಂಟುಮಾಡುತ್ತಿದ್ದಳು. ಒಮ್ಮೆ ಆಕೆ ಕಮ್ಯೂನಿಸಂ ಅನ್ನು ಮಾನವೀಯ ಮುಖದ ಫ್ಯಾಸಿಸಂ ಎಂದು ಕರೆದಳು. ಸ್ಟ್ಯಾಲಿನ್‍ನ ಕ್ರೌರ್ಯವನ್ನು ವಿರೋಧಿಸದ ಕಮ್ಯೂನಿಸ್ಟರನ್ನು ತರಾಟೆಗೆ ತೆಗೆದುಕೊಂಡಳು. ಸರಯೇವೋದ ಮೇಲಿನ ಆಕ್ರಮಣವನ್ನು ತಡೆಯಲು ಹಾಗೂ ಬೋಸ್ನಿಯಾ ಮತ್ತು ಕೊಸೋವೊ ಮೇಲಿನ ಸರ್ಬಿಯಾದ ಆಕ್ರಮಣವನ್ನು ತಡೆಯಲು ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಮಧ್ಯೆ ಪ್ರವೇಶಿಸಬೇಕೆಂದು ಒತ್ತಾಯಿಸಿದಳು. ಸರಯೇವೋ ನಾಗರಿಕರಿಗೆ ತನ್ನ ಬೆಂಬಲ ಸೂಚಿಸಲು ಆಕೆ ಹನ್ನೆರಡಕ್ಕಿಂತಲೂ ಹೆಚ್ಚು ಸಾರಿ ಆ ದೇಶಕ್ಕೆ ಭೇಟಿ ನೀಡಿದಳು.
                ಆಕೆಯನ್ನು ಹಲವಾರು ದೇಶಗಳು ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸಿದವು. ಆಕೆಗೆ ಇಸ್ರೇಲ್‍ನ ಜೆರೂಸಲಂ ಪ್ರಶಸ್ತಿ, ಸ್ಪೇನ್‍ನ ಅಸ್ಟೂರಿಯಾಸ ಅವಾರ್ಡ್ ಫಾರ್ ದ ಆಟ್ರ್ಸ್ ಮತ್ತು ಜರ್ಮನಿಯ ಫ್ರೀಡೆನ್ಸ್‍ಪ್ರೀಸ್ (ಶಾಂತಿ ಪ್ರಶಸ್ತಿ) ಲಭಿಸಿದವು. ಜೆರೂಸಲೆಂನಲ್ಲಿ ಅಲ್ಲಿನ ಮೇಯರ್ ಯೆಹೂದ್ ಓಲ್ಮರ್ಟ್‍ರಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತ ಅಲ್ಲಿಯೇ ಪ್ಯಾಲೆಸ್ಟೆನಿಯರ ವಿರುದ್ಧದ ಇಸ್ರೇಲ್‍ನ ಕಾರ್ಯನೀತಿಯನ್ನು, ದಬ್ಬಾಳಿಕೆಯನ್ನು ಖಂಡಿಸಿದಳು.

ಕಲೆ ಮತ್ತು ವ್ಯಾಖ್ಯಾನ
ಕಲೆ ನಮ್ಮ ಮನಸ್ಸಿಗೆ ಮುದ ನೀಡುವ, ನಮಗೆ ಮಾಹಿತಿ ನೀಡುವ ಮತ್ತು ನಮ್ಮನ್ನು ರೂಪಾಂತರಿಸುವ ಸಾಮಥ್ರ್ಯವನ್ನು ಪಡೆದಿದೆಯೆಂದು ಆಕೆ ದೃಢವಾಗಿ ನಂಬಿದ್ದರು. `ನಾವಿರುವ ಈ ಸಂಸ್ಕೃತಿ ಬುದ್ಧಿಮತ್ತೆಯ ಔಚಿತ್ಯವನ್ನು ತೀರಾ ಗೌಣವಾಗಿ ಕಾಣುತ್ತದೆ ಅಥವಾ ಅದನ್ನು ಅಧಿಕಾರದ ಮತ್ತು ದಮನದ ಅಸ್ತ್ರವನ್ನಾಗಿ ಬಳಸುತ್ತದೆಎಂದು ಹೇಳಿದ್ದರು. ಕಲಾಪ್ರಕಾರಗಳ ಅಥವಾ ವಸ್ತುವಿಷಯಗಳ ನಡುವೆ ಕೃತಕ ಗಡಿಗಳನ್ನು ನಿರ್ಮಿಸಲಾಗಿದೆಯೆಂದು ಭಾವಿಸಿದ್ದ ಆಕೆ ಅಂತಹ ಎಲ್ಲೆಗಳನ್ನು ಧಿಕ್ಕರಿಸಿದಳು.
                `ಆಲೋಚನೆ ಮತ್ತು ಭಾವನೆಗಳು, ಪ್ರಜ್ಞೆ ಮತ್ತು ಸಂವೇದನೆಗಳು, ನೈತಿಕತೆ ಮತ್ತು ಸೌಂದರ್ಯಪ್ರಜ್ಞೆಗಳಂತಹ ವೈರುಧ್ಯಗಳನ್ನು ಪ್ರತಿಯೊಂದು ಮತ್ತೊಂದರ ಭಾಗವಾಗಿರುವಂತೆ- ವೆಲ್ವೆಟ್ ಬಟ್ಟೆಯ ನುಣುಪಿನ ಬದಿ ಒಂದೆಡೆಯಿದ್ದರೆ ಅದರ ಇನ್ನೊಂದು ಬದಿ ಒರಟಾಗಿದ್ದು ಎರಡು ರೀತಿಯ ಸ್ಪರ್ಶಾನುಭವಗಳನ್ನು ನೀಡುವಂತೆ ಎರಡು ರೀತಿಯ ಅನುಭವಗಳನ್ನು, ಎರಡು ರೀತಿಯ ಗ್ರಹಿಕೆಗಳನ್ನು ನೀಡುವಂತೆ ಅವುಗಳನ್ನು ನೋಡಬಹುದು ಎಂಬುದನ್ನು ಸೊಂತಾಗ್ ನಿರಂತರವಾಗಿ ಪರಿಶೀಲಿಸಿ ಪರೀಕ್ಷಿಸುತ್ತಿದ್ದರುಎಂದು ಲೇಖಕ ಜೊನಾಥನ್ ಕಾಟ್ ಹೇಳಿದ್ದಾರೆ. ಸ್ವತಃ ತಾನೇ ಹೇಳಿಕೊಂಡಂತೆ ಆಕೆ `ಸೌಂದರ್ಯಪ್ರಜ್ಞೆಯ ವ್ಯಾಮೋಹಿಮತ್ತು `ನೈತಿಕತೆಯ ಗೀಳು ಹಚ್ಚಿಕೊಂಡವಳುಹಾಗೂ ಸಾಂಪ್ರದಾಯಕ ಆಲೋಚನೆಗಳಿಗೆ ಸವಾಲೆಸೆಯುತ್ತಾ ಮುನ್ನಡೆದವಳು. `ಸಂಸ್ಕøತಿಯೆಂದರೆ ಒಂದು ಬಗೆಬಗೆಯ ರುಚಿಕರ ಹಬ್ಬದೂಟವಿದ್ದಂತೆ. ಎಷ್ಟು ಅಸ್ವಾದಿಸಿದರೂ ಸಾಲದುಎನ್ನುತ್ತಿದ್ದ ಆಕೆ, ಆಗಾಗ ಗಯಟೆ ಹೇಳಿದ್ದ, `ಎಲ್ಲವನ್ನೂ ತಿಳಿದಿರಬೇಕುಎಂಬ ಮಾತನ್ನು ಹೇಳುತ್ತಿದ್ದಳು. 
ಸೊಂತಾಗ್‍ರ ಚಿಂತನೆ ಮತ್ತು ಬರಹಗಳನ್ನು ಟೀಕಿಸಿದವರೂ ಇದ್ದಾರೆ. `ಆಕೆಯ ಬರಹಗಳಲ್ಲಿ ಅನವಶ್ಯಕ ಸಂಕೀರ್ಣತೆಯೇ ಹೆಚ್ಚಿದೆ ಹಾಗೂ ಭಂಡತನದ ವಿರೋಧಾಭಾಸಗಳೂ ಇವೆಎಂದರು ಜಾನ್ ಸಿಮನ್. `ಆಕೆಯ ಬರಹಗಳು ಶೈಕ್ಷಣಿಕ ಮತ್ತು ಪುಸ್ತಕಪಾಂಡಿತ್ಯದ, ಸತ್ವಹೀನ ಹಾಗೂ ಕಬ್ಬಿಣದ ಕಡಲೆಯಂತಹ ಬರಹಗಳುಎಂದರು ಗ್ರೆಯಿಲ್ ಮಾರ್ಕಸ್.

ಖಾಸಗಿ ಬದುಕು
ಸೊಂತಾಗ್ ತಮ್ಮ ಹದಿಹರೆಯದ ವಯಸ್ಸಿನಲ್ಲಿಯೇ ಹೆಂಗಸರ ಬಗ್ಗೆ ಆಕರ್ಷಿತರಾಗಿದ್ದರು. ಆಕೆಗೆ 15 ವರ್ಷ ವಯಸ್ಸಾಗಿದ್ದಾಗ ತಮ್ಮ ದಿನಚರಿಯಲ್ಲಿ, `ನನ್ನಲ್ಲಿ ಸಲಿಂಗಕಾಮದ ಭಾವನೆಗಳಿವೆ ಎಂದು ನನಗೀಗ ಅನ್ನಿಸುತ್ತಿದೆ (ಒಪ್ಪಿಕೊಳ್ಳಲಾಗದೇ ಇದನ್ನು ಬರೆಯುತ್ತಿದ್ದೇನೆ). ಆಕೆಗೆ ಹದಿನಾರು ವರ್ಷ ವಯಸ್ಸಾಗಿದ್ದಾಗ ಬೇರೊಬ್ಬ ಹೆಣ್ಣಿನೊಂದಿಗೆ ತನ್ನ ಮೊದಲ ಲೈಂಗಿಕಾನುಭವವಾಯಿತು: `ಬಹುಶಃ ನಾನಾಗ ಕುಡಿದಿದ್ದೆನನ್ನಿಸುತ್ತಿದೆ, ಆದರೆ ಎಚ್ ನನ್ನೊಂದಿಗೆ ಪ್ರೇಮ ಸಮಾಗಮದಲ್ಲಿ ತೊಡಗಿದಾಗ ಅದೆಷ್ಟು ಸುಂದರವಾಗಿತ್ತು.... ನಾವು ಹಾಸಿಗೆಗೆ ಹೋದಾಗ ಸಮಯ ನಾಲ್ಕು ಗಂಟೆಯಾಗಿತ್ತು. ನಾನು ಆಕೆಯನ್ನು ಬಯಸುತ್ತಿದ್ದೇನೆಂಬುದು ನನಗೆ ಪ್ರಜ್ಞಾಪೂರ್ವಕವಾಗಿ ತಿಳಿದಿತ್ತು, ಅದು ಆಕೆಗೂ ಸಹ ತಿಳಿದಿತ್ತು....
                ಸೂಸಾನ್ ಸೊಂತಾಗ್ ತನ್ನ ಉಭಯಲಿಂಗತ್ವದ ಬಗ್ಗೆ ಮುಕ್ತವಾಗಿಯೇ ಹೇಳಿಕೊಳ್ಳುತ್ತಿದ್ದರು. ಆಕೆಯ  ಬದುಕಿನಲ್ಲಿ ಒಟ್ಟು ಒಂಭತ್ತು ಪ್ರೇಮಿಗಳಿದ್ದರು. ಅದನ್ನು ಆಕೆಯೇ 2000ದಲ್ಲಿ `ದ ಗಾರ್ಡಿಯನ್ಪತ್ರಿಕೆಯ ಸಂದರ್ಶನವೊಂದರಲ್ಲಿ ತಿಳಿಸಿದ್ದಳು: `ನಾನು ವಯಸ್ಸಾಗುವುದರ ಬಗ್ಗೆ ಹೇಳಬೇಕೆ? ನಿಮಗೆ 45ರ ವಯಸ್ಸು ಮೀರಿದಂತೆ ನಿಮ್ಮ ಮೇಲಿನ ಗಂಡಸರ ಮೆಚ್ಚುಗೆ ಕಡಿಮೆಯಾಗುತ್ತದೆ. ಅಥವಾ ಅದನ್ನು ಮತ್ತೊಂದು ರೀತಿ ಹೇಳುವುದಾದಲ್ಲಿ, ನಾನು ಬಯಸುವ ಗಂಡಸು ನನ್ನನ್ನು ಮೆಚ್ಚುವುದಿಲ್ಲ. ನಾನೊಬ್ಬ ಯುವಕನನ್ನು ಬಯಸುತ್ತೇನೆ. ನಾನು ಸೌಂದರ್ಯವನ್ನು ಪ್ರೀತಿಸುತ್ತೇನೆ. ಅದರಲ್ಲಿ ಹೊಸತೇನಿದೆ? ತನ್ನ ಬದುಕಲ್ಲಿ ಐದು ಜನ ಹೆಂಗಸರು ಮತ್ತು ನಾಲ್ಕು ಜನ ಗಂಡಸರು ಬಂದು ಹೋಗಿದ್ದಾರೆ.ಆಕೆ ತನ್ನ ಕೊನೆಯ ದಿನಗಳಲ್ಲಿ ಆನ್ನಾ ಲೀಬೋವಿಟ್ಜ್ ಎಂಬ ಫೋಟೋಗ್ರಾಫರ್‍ಳೊಂದಿಗೆ ಸುದೀರ್ಘ ಸಂಬಂಧ ಇರಿಸಿಕೊಂಡಿದ್ದರು. ಪುಸ್ತಕವೊಂದರ ಮುಖಪುಟಕ್ಕೆ ಸೊಂತಾಗ್‍ರ ಫೋಟೋ ತೆಗೆಯಲು ಬಂದಾಗ ಆಕೆ ಅವರಿಗೆ ಪರಿಚಯವಾಗಿದ್ದಳು. ಅಬರಿಬ್ಬರೂ ಒಟ್ಟಿಗೆ ಬದುಕಲಿಲ್ಲವಾದರೂ ಇಬ್ಬರ ಮನೆಗಳು ಹತ್ತಿರದಲ್ಲೇ ಇದ್ದವು. ಸೊಂತಾಗ್‍ರ ಸಾವಿನ ನಂತರ ಆಕೆಯ ಮಗ ಡೇವಿಡ್ ರೀಫ್ ಸೊಂತಾಗ್‍ರ ಕೆಲವು ವಸ್ತುಗಳನ್ನು ನೆನಪಿಗಾಗಿ ಲೀಬೋವಿಟ್ಜ್‍ರಿಗೇ ಬಿಟ್ಟುಕೊಟ್ಟರು.

ಕಾಯಿಲೆ ಒಂದು ರೂಪಕದಂತೆ
1976ರಲ್ಲಿ ಸೊಂತಾಗ್‍ರವರಿಗೆ 43 ವರ್ಷ ವಯಸ್ಸಾಗಿದ್ದಾಗ ಆಕೆಗೆ ಎದೆ, ಲಿಂಫಾಟಿಕ್ ಸಿಸ್ಟಮ್ ಮತ್ತು ಕಾಲಿನಲ್ಲಿ ಕ್ಯಾನ್ಸರ್ ಇದೆಯೆಂದು ತಿಳಿಯಿತು. ವೈದ್ಯರು ಆಕೆ ಇನ್ನು ಐದು ವರ್ಷ ಮಾತ್ರ ಬದುಕಬಹುದೆಂದರು. ಶಸ್ತ್ರಚಿಕಿತ್ಸೆ ಮತ್ತು ಔಷಧ ಚಿಕಿತ್ಸೆಯ ನಂತರ ಆಕೆ ಕಾಯಿಲೆಯಿಂದ ಮುಕ್ತಳಾಗಿ ಚೇತರಿಸಿಕೊಂಡಳು. `ವೈದ್ಯರು ಸಾವಿನ ವಿಷಯ ತಿಳಿಸಿದಾಗ ನನ್ನ ಮೊದಲ ಪ್ರತಿಕ್ರಿಯೆ ಭಯ ಮತ್ತು ಶೋಕವಾಗಿತ್ತು. ಆದರೆ ನಾನು ಸಾಯುತ್ತೇನೆಂಬ ಭಾವನೆ ಬರುವುದು ತೀರಾ ಕೆಟ್ಟ ಅನಿಸಿಕೆಯೇನಲ್ಲ. ಇಲ್ಲಿ ಮುಖ್ಯವಾದ ವಿಷಯವೆಂದರೆ, ನಾವು ನಮ್ಮ ಬಗ್ಗೆ ಕನಿಕರಪಡುವುದನ್ನು ನಿಲ್ಲಿಸಬೇಕುಎಂದಿದ್ದಳು ಆಕೆ. ಆಕೆ ತನ್ನ ಕಾಯಿಲೆಯನ್ನೇ ಕಾರಣವಾಗಿಟ್ಟುಕೊಂಡು ಅದರ ಬಗ್ಗೆ ಬಹಳಷ್ಟು ಓದಿ ತಿಳಿದು `ಇಲ್‍ನೆಸ್ ಅಸ್ ಮೆಟಾಫರ್ಕೃತಿ ರಚಿಸಿದಳು. ಕ್ಷಯರೋಗ ಮತ್ತು ಕ್ಯಾನ್ಸರ್‍ಗಳನ್ನು ರೂಪಕಗಳನ್ನಾಗಿಸಿ ಆ ಕಾಯಿಲೆಗಳ ಕಾರಣಗಳನ್ನು ರೋಗಿಗಳಿಗೇ ಹೊರಿಸಿ ಅವರೇ ಅವುಗಳನ್ನು ತಮ್ಮ ಮೈಮೇಲೆಳೆದುಕೊಂಡಿದ್ದಾರೆ ಎನ್ನುವ ಭಾವನೆಗಳನ್ನು ಆಕೆ ಖಂಡಿಸಿದಳು. ಆಕೆಯ ಪ್ರಕಾರ ಕಾಯಿಲೆಎನ್ನುವುದು ಒಂದು ವಾಸ್ತವಾಂಶವೇ ಹೊರತು ಅದು ವಿಧಿಯಲ್ಲ. ಕೆಲ ವರ್ಷಗಳ ನಂತರ ಆಕೆ ತನ್ನ ಆಲೋಚನೆಗಳನ್ನು ಏಡ್ಸ್ ಕಾಯಿಲೆಗೂ ವಿಸ್ತರಿಸಿ `ಏಡ್ಸ್ ಅಂಡ್ ಇಟ್ಸ್ ಮೆಟಾಫರ್ಸ್ಕೃತಿ ರಚಿಸಿದಳು.
                 ಆಕೆಗೆ 70 ವರ್ಷ ವಯಸ್ಸಾಗಿದ್ದಾಗ ತನ್ನ ಕ್ಯಾನ್ಸರಿಗೆ ಆಕೆ ತಾನು ಮೊದಲು ತೆಗೆದುಕೊಂಡಿದ್ದ ಔಷಧಗಳಿಂದಾಗಿ ತೀವ್ರ ಮಾರಣಾಂತಿಕ ರಕ್ತ ಕ್ಯಾನ್ಸರ್ ಆದ ಮೈಲೋಡಿಸ್‍ಪ್ಲಾಸ್ಟಿಕ್ ಸಿಂಡ್ರೋಮ್ ಕಾಣಿಸಿಕೊಂಡಿತು. ಈ ಮೊದಲು ವೈದ್ಯರೇ ಹತಾಶೆ ವ್ಯಕ್ತಪಡಿಸಿದ್ದರೂ ಆಕೆ ಸಾವನ್ನು ಎರಡು ಸಾರಿ ಮೆಟ್ಟಿ ಮುನ್ನಡೆದಿದ್ದಳು. ಈ ಸಾರಿಯೂ ಅದನ್ನು ಧಿಕ್ಕರಿಸುವನೆಂಬ ಆದಮ್ಯ ಭರವಸೆ ಆಕೆಯಲ್ಲಿತ್ತು. ತನ್ನ ಸಾವನ್ನು ಮತ್ತಷ್ಟು ದಿನ ಮುಂದೂಡಲು ಸಾಧ್ಯವಾಗುವುದಾದರೆ ಅದು ಆಧುನಿಕ ವಿಜ್ಞಾನದಿಂದಲೇ ಹೊರತು ಮತ್ತಾವ ಮೂಢನಂಬಿಕೆಯಿಂದಲೂ ಸಾಧ್ಯವಿಲ್ಲವೆಂದು ಆಕೆ ನಂಬಿದ್ದಳು. ಗೆಳೆಯನೊಬ್ಬ ಯಾವುದೋ ಹರಳನ್ನು ಮನೆಯಲ್ಲಿಟ್ಟುಕೊಂಡಲ್ಲಿ ಅದೃಷ್ಟ ದೊರಕುವುದೆಂದು ತಿಳಿಸಿದಾಗ ಆಕೆ `ನಿನಗೆ ಅರ್ಥವಾಗುವುದಿಲ್ಲವೆ? ಈ ಕಾಯಿಲೆಗಳಲ್ಲಿ ಅದೃಷ್ಟದ ಪಾತ್ರವೇನೂ ಇಲ್ಲ!ಎಂದು ಅರಚಿದ್ದಳು. ತನ್ನ ಕಾಯಿಲೆಯ ಬಗ್ಗೆ ಇಂಟರ್‍ನೆಟ್‍ನಿಂದ ಸಾಕಷ್ಟು ಮಾಹಿತಿ ಕಲೆಹಾಕಿದಳು. ಆ ಕಾಯಿಲೆಯಿಂದ ಬದುಕುಳಿಯುವ ಸಾಧ್ಯತೆ ಶೇ.20 ಮಾತ್ರ ಎಂದು ತಿಳಿದು ಹತಾಶಳಾದಳು. ಅದರಲ್ಲೂ ಆಗ ಆಕೆಯ ವಯಸ್ಸು 70ರ ಗಡಿಯನ್ನು ದಾಟಿತ್ತು. ತನ್ನ ಜೀವನವೆಲ್ಲಾ ಎಂಥ ತೊಡಕುಗಳಿದ್ದರೂ ಅವುಗಳನ್ನು ಎದುರಿಸುತ್ತಾ ಮುನ್ನಡೆದಿದ್ದ ಆಕೆಗೆ ಸಾವು ಎದುರಾದಾಗ, `ಮೊಟ್ಟಮೊದಲ ಬಾರಿಗೆ ನಾನೊಬ್ಬ ವಿಶೇಷ ವ್ಯಕ್ತಿಯಲ್ಲಾ ಎಂದೆನ್ನಿಸುತ್ತಿದೆಎಂದಿದ್ದಳು. ಆ ಗಳಿಗೆಯಲ್ಲೂ ಅಬು ಗರೈಬ್ ಬಂದೀಖಾನೆಯಲ್ಲಿನ ಅಮೆರಿಕ ಖೈದಿಗಳಿಗೆ ಚಿತ್ರಹಿಂಸೆ ನೀಡುವುದನ್ನು ತೀವ್ರವಾಗಿ ಖಂಡಿಸಿ ಲೇಖನವೊಂದನ್ನು ಬರೆದಳು. ಆಕೆಯಲ್ಲಿನ ಜ್ಞಾನದ ಹಸಿವು ಬದುಕಿಗಾಗಿ ಆಕೆ ತಹತಹಿಸುವಂತೆ ಮಾಡುತ್ತಿತ್ತು. ಸೊಂತಾಗ್‍ಳ ಮಗ ಡೇವಿಡ್ ರೀಫ್, `ಆಕೆ ನೋಡಲು ಬಯಸದ, ಮಾಡಲು ಬಯಸದ ಅಥವಾ ತಿಳಿಯಲು ಬಯಸದ ವಿಷಯವೇ ಇರಲಿಲ್ಲ. ತನ್ನ ಬದುಕಿನ ಕೊನೆಯ ದಿನಗಳಲ್ಲೂ ಆಕೆ ತಾನು ಓದಬೇಕಾದ ಪುಸ್ತಕಗಳ, ಭೇಟಿ ನೀಡಬೇಕಾದ ಹೋಟೆಲುಗಳ, ನೋಡಬೇಕಾದ ಚಲನಚಿತ್ರಗಳ ಹಾಗೂ ಬರೆಯಬೇಕಾದ ಪ್ರಾಯೋಜನೆಗಳ ಬಗ್ಗೆ ಪಟ್ಟಿ ಮಾಡುತ್ತಿದ್ದಳುಎಂದು ಹೇಳಿದ್ದಾರೆ.
28ನೇ ಡಿಸೆಂಬರ್ 2004ರಂದು ನ್ಯೂಯಾರ್ಕ್ ನಗರದಲ್ಲಿ ಸೂಸಾನ್ ಸೊಂತಾಗ್ ಸತ್ತಾಗ ಆಕೆಗೆ 71 ವರ್ಷ ವಯಸ್ಸಾಗಿತ್ತು. ಆಕೆಯ ಮರಣಾನಂತರ ಆಕೆಯ ಹಸ್ತಪ್ರತಿಗಳು, ದಿನಚರಿಗಳು, ಪತ್ರಿಕೆಗಳು, ಪತ್ರಗಳು ಹಾಗೂ ಆಕೆಯ ಖಾಸಗಿ ಗ್ರಂಥಾಲಯದಲ್ಲಿದ್ದ 25000 ಗ್ರಂಥಗಳನ್ನು ಯು.ಸಿ.ಎಲ್.ಎ. ಗ್ರಂಥಾಲಯಕ್ಕೆ ನೀಡಲಾಯಿತು ಹಾಗೂ ಅವುಗಳನ್ನು ಚಾಲ್ರ್ಸ್ ಇ. ಯಂಗ್ ಸಂಶೋಧನಾ ಗ್ರಂಥಾಲಯದ ವಿಶೇಷ ಸಂಗ್ರಹಗಳ ವಿಭಾಗದಲ್ಲಿ ಇರಿಸಲಾಗಿದೆ. ಆಕೆಯ 17 ಕೃತಿಗಳು 32 ಭಾಷೆಗಳಿಗೆ ಅನುವಾದವಾಗಿವೆ. ಮಾನವ ಹಕ್ಕುಗಳ ಹುಟ್ಟು ಹೋರಾಟಗಾರ್ತಿಯಾಗಿದ್ದ ಆಕೆ ಅಮೆರಿಕ ಕಂಡ ಅತ್ಯಂತ ಪ್ರಭಾವೀ ಬುದ್ಧಿಜೀವಿ ಹಾಗೂ ಧೀಮಂತ ಸಾಂಸ್ಕøತಿಕ ಚೈತನ್ಯವಾಗಿದ್ದಳು.

ಸೂಸಾನ್ ಸೊಂತಾಗ್‍ರ ಕೃತಿಗಳು
ಕಾಲ್ಪನಿಕ ಕಥನ
ದ ಬೆನೆಫ್ಯಾಕ್ಟರ್- 1963
ಡೆತ್ ಕಿಟ್ – 1967
, ಎಟ್‍ಸೆಟೆರಾ (ಕಥಾ ಸಂಕಲನ) – 1977
ದ ವೇ ವಿ ಲೀವ್ ನೌ (ಸಣ್ಣ ಕತೆ) – 1991
ದ ವಾಲ್ಕೆನೋ ಲವರ್ – 1992
ಇನ್ ಅಮೆರಿಕಾ – 1999 (2000ದಲ್ಲಿ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ ಪಡೆಯಿತು)
ನಾಟಕಗಳು
ಎ ಪಾರ್ಸಿಫಲ್ (ಏಕಾಂಕ ನಾಟಕ) – 1991
ಅಲೀಸ್ ಇನ್ ಬೆಡ್ – 1993
ಲೇಡಿ ಫ್ರಂ ದ ಸೀ (ಹೆನ್ರಿಕ್ ಇಬ್ಸೆನ್‍ರ ಅದೇ ಹೆಸರಿನ ನಾಟಕದ ಅಳವಡಿಕೆ) – 1999

ವಿಚಾರ ಸಾಹಿತ್ಯ
ಪ್ರಬಂಧ ಸಂಗ್ರಹಗಳು
ಎಗೇನ್ಸ್ಟ್ ಇಂಟರ್‍ಪ್ರಿಟೇಶನ್ – 1966
ಸ್ಟೈಲ್ಸ್ ಆಫ್ ರ್ಯಾಡಿಕಲ್ ವಿಲ್ – 1969
ಅಂಡರ್ ದ ಸೈನ್ ಆಫ್ ಸ್ಯಾಟರ್ನ್ – 1980
ವೇರ್ ದ ಸ್ಟ್ರೆಸ್ ಫಾಲ್ಸ್ – 2001
ಅಟ್ ದ ಸೇಮ್ ಟೈಮ್: ಎಸ್ಸೇಸ್ ಅಂಡ್ ಸ್ಪೀಚಸ್ – 2007 (ಸಂ. ಪಾವ್ಲೊ ಡಿಲೊನಾರ್ಡೊ ಮತ್ತು ಆನ್ ಜಂಪ್, ಮುನ್ನುಡಿ ಡೇವಿಡ್ ರೀಫ್)
ಏಕವಿಷಯಕ ಪ್ರಬಂಧಗಳು
ಆನ್ ಫೋಟೋಗ್ರಫಿ – 1977
ಇಲ್‍ನೆಸ್ ಅಸ ಮೆಟಾಫರ್ – 1978
ಏಡ್ಸ್ ಅಂಡ್ ಇಟ್ಸ್ ಮೆಟಾಫರ್ಸ್ – 1988
ರಿಗಾರ್ಡಿಂಗ್ ದ ಪೇನ್ ಆಫ್ ಅದರ್ಸ್ - 2003
ನಿರ್ದೇಶಿಸಿದ ಚಲನ ಚಿತ್ರಗಳು
ಡ್ಯುಯೆಟ್ ಫಾರ್ ಕ್ಯಾನಿಬಾಲ್ಸ್ – 1969
ಬ್ರದರ್ ಕಾರ್ಲ್- 1971
ಪ್ರಾಮಿಸ್ಡ್ ಲ್ಯಾಂಡ್ಸ್ – 1974
ಅನ್‍ಗೈಡೆಡ್ ಟೂರ್ ಅಕಾ ಲೆಟರ್ ಫ್ರಂ ವೆನೀಸ್ – 1983

ಕನ್ನಡ ಪುಸ್ತಕ ಪ್ರಾಧಿಕಾರದ ಪತ್ರಿಕೆ `ಪುಸ್ತಕ ಲೋಕ’ದ ಏಪ್ರಿಲ್-ಜೂನ್, 2014ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಸೂಸಾನ್ ಸೊಂಟ್ಯಾಗ್ ರವರ ಕ್ಲಾಸಿಕ್ `Against Interpretation’ನ ನನ್ನ ಅನುವಾದದ ಲಿಂಕ್ ಇಲ್ಲಿದೆ:

https://antaragange.blogspot.com/2020/07/blog-post_11.html?m=1

ಕಾಮೆಂಟ್‌ಗಳಿಲ್ಲ: