ಮುದ್ರಣ ಮಾಧ್ಯಮದಲ್ಲಿನ ಮೊದಲನೆಯ ವಿಶ್ವಯುದ್ಧದ ಘಟನೆಗಳನ್ನು ಸ್ಮರಿಸಿಕೊಳ್ಳುವಾಗ ವ್ಯಂಗ್ಯಚಿತ್ರಕಾರರ ಪಾತ್ರವನ್ನೂ ಸ್ಮರಿಸಿಕೊಳ್ಳಬೇಕಾದುದು ಮುಖ್ಯವಾದುದು. ಶತ್ರುಗಳ ವಿಫಲತೆಗಳನ್ನು ವ್ಯಂಗ್ಯವಾಡುವ ಹಾಗೂ ಪ್ರಬಲ ನಾಯಕರ ನಿರ್ಧಾರಗಳನ್ನು ಲೇವಡಿ ಮಾಡುವಂತಹ ವ್ಯಂಗ್ಯಚಿತ್ರಗಳು ಯುದ್ಧಭೂಮಿಯಲ್ಲಿ ಜರ್ಮನ್ ಮತ್ತು ಬ್ರಿಟಿಷ್ ಸೈನಿಕರ ನಡುವೆ ಹರಿದಾಡುತ್ತಿದ್ದವು. ಮೊದಲ ವಿಶ್ವಯುದ್ಧದಲ್ಲಿ ದೃಶ್ಯ ಕಲೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿತ್ತು. ಎರಡನೇ ವಿಶ್ವಯುದ್ಧದ ಹೊತ್ತಿಗೆ ಶತ್ರುಗಳನ್ನು `ಸದೆಬಡಿಯಲು' ಸರ್ಕಾರಗಳೇ ವ್ಯಂಗ್ಯಚಿತ್ರಕಾರರನ್ನು ನೇಮಿಸಿಕೊಳ್ಳಲಾರಂಭಿಸಿದವು.
ವ್ಯಂಗ್ಯಚಿತ್ರಕಾರ ಬೆನ್ ಜೆನ್ನಿಂಗ್ಸ್ ಹೇಳುವಂತೆ, ವ್ಯಂಗ್ಯಚಿತ್ರಗಳು ಸರ್ವಾಧಿಕಾರ ಬಯಸುವವರಿಗೆ ಅವರೂ ಕೇವಲ ಮನುಷ್ಯರಷ್ಟೇ ಎನ್ನುವುದನ್ನು ನೆನಪಿಸುವ ಶಕ್ತಿ ಹೊಂದಿವೆ. ದುರಂತವೆಂದರೆ ಬಹಳಷ್ಟು ರಾಷ್ಟ್ರ ನಾಯಕರಿಗೆ ಆ ರೀತಿ ನೆನಪಿಸುವುದು ಬೇಕಿಲ್ಲ. ವಿರೋಧ ಪಕ್ಷಗಳು ಇಲ್ಲದಿರುವ ದೇಶಗಳಲ್ಲಿ ವ್ಯಂಗ್ಯಚಿತ್ರಗಳೇ ವಿರೋಧ ಪಕ್ಷಗಳಾಗಬಲ್ಲವು, ಅಕ್ಷರಗಳು ನೀಡಲಾಗದ ಹೊಡೆತವನ್ನು ವ್ಯಂಗ್ಯಚಿತ್ರಗಳು ನೀಡುತ್ತವೆ. ವ್ಯಂಗ್ಯಚಿತ್ರಗಳು ಒಂದು ರೀತಿಯಲ್ಲಿ ಎಲ್ಲರನ್ನೂ ಸಮಾನಗೊಳಿಸುವಂಥವು, ಸರ್ವಾಧಿಕಾರ ಹೊಂದಿ ತಾವು ಮಹಾನ್ ಬಲಾಢ್ಯರೆಂಬ ಭ್ರಮೆಯಲ್ಲಿರುವವರನ್ನು ಸಾಮಾನ್ಯ ಮನುಷ್ಯನ ಮಟ್ಟಕ್ಕೆ ತಂದುಬಿಡಬಲ್ಲವು. ಸಾಂಪ್ರದಾಯಕ ಟೀಕೆಗಳು ರಾಜಕಾರಣಿಗಳನ್ನು ಗಡಸು ಮನೋಭಾವದವರೆಂದು, ಸ್ವಾರ್ಥಿಗಳೆಂದು, ಅಧಿಕಾರ ಲಾಲಸೆ ಹೊಂದಿದವರೆಂದು ಅಥವಾ ನಿರ್ದಯಿಗಳೆಂದು ಬಿಂಬಿಸಬಹುದು, ಆದರೆ ಅವರು ವ್ಯಂಗ್ಯಚಿತ್ರಕಾರರ ಕೈಯಲ್ಲಿ ದಡ್ಡ ಅಥವಾ ತಮಾಷೆಯ ವ್ಯಕ್ತಿಗಳಾಗಿ ಬಿಂಬಿಸುವುದನ್ನು ಸಹಿಸುವುದಿಲ್ಲ. ಚೀನಾದ ಮಾವೊ ಒಮ್ಮೆ, ಒಂದು ಡಜನ್ ಕಲಾವಿದರು ಸಾವಿರ ಸೈನಿಕರ ಬೆಟಾಲಿಯನ್ ಸೈನಿಕರಿಗಿಂತ ಹೆಚ್ಚು ಶಕ್ತಿಶಾಲಿಗಳು ಏಕೆಂದರೆ, ಸೈನಿಕರು ಜನರ ನಡತೆಯನ್ನು ಬದಲಿಸಬಲ್ಲರು ಆದರೆ ಕಲಾವಿದರು ಜನರ ಮನಸ್ಸನ್ನೇ ಬದಲಿಸಬಲ್ಲರು ಎಂದು ಹೇಳಿದ್ದನಂತೆ.
ವ್ಯಂಗ್ಯವನ್ನು ಅಥವಾ ವ್ಯಂಗ್ಯಚಿತ್ರಗಳನ್ನು ಕಂಡು ಹೆದರುವ ಸರ್ವಾಧಿಕಾರಿ ಧೋರಣೆಯ ನಾಯಕರು ಚರಿತ್ರೆಯುದ್ಧಕ್ಕೂ ತಮ್ಮಂತಹವರನ್ನು ವಿರೋಧಿಸಲು, ಪ್ರತಿಭಟಿಸಲು ಕಲೆ, ವ್ಯಂಗ್ಯಚಿತ್ರ, ವ್ಯಂಗ್ಯರೇಖಾ ಚಿತ್ರಗಳನ್ನು ಜನ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆಂಬುದನ್ನು ಅರಿತುಕೊಳ್ಳಬೇಕು. ಅಂಥವುಗಳನ್ನು ನಿಷೇಧಿಸಿದ್ದೇ ಆದಲ್ಲಿ ಜನರಲ್ಲಿ ಅವುಗಳ ಬಗ್ಗೆ ಕುತೂಹಲ ಹೆಚ್ಚುತ್ತದೆಯೇ ವಿನಃ ಅದು ದಮನಗೊಳ್ಳುವುದಿಲ್ಲ. ನಿಷೇಧ ಅಂತಹ ಕಲೆಗೆ ಇನ್ನೂ ನಿಗೂಢತೆಯ ಲೇಪ ಹಚ್ಚಿ ಅದನ್ನು ಹೆಚ್ಚು ಶಕ್ತಗೊಳಿಸುತ್ತದೆ. ಇಂದು ಇಪ್ಪತ್ತೊಂದನೆಯ ಶತಮಾನದಲ್ಲಿ ತಮಾಷೆ ಹಾಗೂ ಲೇವಡಿಯನ್ನು ಪ್ರತಿಭಟನೆಯ ಅಸ್ತ್ರವನ್ನಾಗಿ ಹೆಚ್ಚು ಹೆಚ್ಚು ಬಳಸಲಾಗುತ್ತಿದೆ. ಅದು ಮಾನಸಿಕವಾಗಿ ಹೆಚ್ಚು ಪರಿಣಾಮಕಾರಿಯಾದುದು ಏಕೆಂದರೆ ಅದು ಹೆದರಿಕೆಯನ್ನು ತೊಲಗಿಸಿ ಆತ್ಮವಿಶ್ವಾಸ ನೀಡಬಲ್ಲದು ಎನ್ನುತ್ತಾರೆ ಮನೋವಿಜ್ಞಾನಿಗಳು. ಅಂತಹ ಪ್ರತಿಭಟನೆಯನ್ನು LAUGHTIVISM ಎನ್ನುತ್ತಾರೆ. ದೈಹಿಕ ಆಕ್ರಮಣಕ್ಕಿಂತ ಈ ರೀತಿಯ ಪರೋಕ್ಷ `ಕಲಾ ಆಕ್ರಮಣ' ಸರ್ವಾಧಿಕಾರಿಗಳಲ್ಲಿ ಹೆದರಿಕೆ ಹುಟ್ಟಿಸುತ್ತದೆ.
ಅಡಾಲ್ಫ್ ಹಿಟ್ಲರ್
ಜಗತ್ತಿನ ಕುಖ್ಯಾತ ಸರ್ವಾಧಿಕಾರಿಗಳ ಪಟ್ಟಿಯಲ್ಲಿ ಬಹುಶಃ ಮೊದಲನೆಯ ಹೆಸರು ಜರ್ಮನಿಯ ಅಡಾಲ್ಫ್ ಹಿಟ್ಲರ್‍ನದು. ಹಿಟ್ಲರ್ 1933ರಿಂದ 1945ರವರೆಗೆ ನಾತ್ಸಿ ಜರ್ಮನಿಯ ಚಾನ್ಸಲರ್ ಹಾಗೂ ನಾಯಕನಾಗಿದ್ದ. ಆತನ ಸರ್ವಾಧಿಕಾರದ ಧೋರಣೆಗಳಿಂದಾಗಿಯೇ ಎರಡನೇ ವಿಶ್ವಯುದ್ಧಕ್ಕೆ ಕಾರಣನಾದ ಹಾಗೂ ಆ ಯುದ್ಧದಲ್ಲಿ ಸುಮಾರು 11 ದಶಲಕ್ಷ ಜನರ ಪ್ರಾಣಹಾನಿಯಾಗಿದ್ದಲ್ಲದೆ ಆರ್ಯರೇ ಅತ್ಯುತ್ತಮ ಜನಾಂಗ ಹಾಗೂ ಯೆಹೂದಿಗಳು ಮತ್ತು ಇತರರು ತಮಗಿಂತ ಕೀಳೆಂದು ಪರಿಗಣಿಸಿದ ಆತ ಅಂಥವರು ಬದುಕಲೇ ಅರ್ಹರಲ್ಲವೆಂದು ನಂಬಿ ಯೂರೋಪಿನ ಸುಮಾರು 6 ದಶಲಕ್ಷ ಯೆಹೂದಿಗಳ ಮಾರಣ ಹೋಮಕ್ಕೂ ಕಾರಣನಾದ. ತೀರಾ ಸಾಮಾನ್ಯನಾಗಿದ್ದ ಹಿಟ್ಲರ್ ಇಡೀ ಜಗತ್ತೇ ದ್ವೇಷಿಸುವಂತಹ ಕಟುಕ ಹಾಗೂ ಕ್ರೂರಿಯಾದ. ಆದರೆ ಅವನು ತನ್ನ ಸರ್ವಾಧಿಕಾರತ್ವದ ಶಿಖರದಲ್ಲಿದ್ದಾಗಲೂ ವ್ಯಂಗ್ಯಚಿತ್ರಕಾರರ ವಿಡಂಬನೆಯ ವಸ್ತುವಾಗಿದ್ದ, ಅವರ ವ್ಯಂಗ್ಯಚಿತ್ರಗಳಲ್ಲಿ ದಡ್ಡನಾಗಿ ಚಿತ್ರಿತವಾಗಿದ್ದ. ಈ ಜಗತ್ತಿನಲ್ಲಿ ಆರ್ಯರೇ ಅತ್ಯುತ್ತಮ ಜನಾಂಗವೆಂದು ನಂಬಿ ಯೆಹೂದಿಗಳನ್ನು ಹಾಗೂ ಇತರ ಜನಾಂಗಗಳನ್ನು ದ್ವೇಷಿಸುತ್ತಿದ್ದ ಹಾಗೆಯೇ ವ್ಯಂಗ್ಯಚಿತ್ರಕಾರರನ್ನು ಹಿಟ್ಲರ್ ದ್ವೇಷಿಸುತ್ತಿದ್ದ. ತಾನು ಜಗತ್ತಿನ ಸಾರ್ವಭೌಮನಾಗಬೇಕೆಂದು ಕನಸು ಕಾಣುತ್ತಿದ್ದವನನ್ನು ವ್ಯಂಗ್ಯಚಿತ್ರಕಾರರು ಯಕಶ್ಚಿತ್ ಸಾಧಾರಣ ಮನುಷ್ಯನಂತೆ ಚಿತ್ರಿಸುತ್ತಿದ್ದುದರಿಂದ ಅವನು ಕೊಲ್ಲಬೇಕೆಂದು ಮಾಡಿಕೊಂಡಿದ್ದ ಹಲವಾರು ದೇಶದ ನಾಯಕರ ಜೊತೆಗೆ ಹಲವಾರು ವ್ಯಂಗ್ಯಚಿತ್ರಕಾರರೂ ಇದ್ದರು.
ಹಿಟ್ಲರ್ ಹುಟ್ಟಿದ್ದು 20ನೇ ಏಪ್ರಿಲ್ 1889ರಂದು ಆಸ್ಟ್ರಿಯಾದ ಬ್ರೌನೊದಲ್ಲಿ. ತನ್ನಂತೆ ತನ್ನ ಮಗ ಹಿಟ್ಲರ್ ಸಹ ಸರ್ಕಾರಿ ನೌಕರನಾಗಬೇಕೆಂದು ಆತನ ತಂದೆ ಬಯಸಿದರೆ ಓದಿನಲ್ಲಿ ಆಸಕ್ತಿ ತೋರದ ಆತ ಚಿತ್ರ ಕಲಾವಿದನಾಗಲು ಬಯಸಿದ. ಅದರಂತೆ ಆಸ್ಟ್ರಿಯಾದ ವಿಯೆನ್ನಾಗೆ ಹೋದ ಹಿಟ್ಲರ್ ಅಲ್ಲಿನ ಅಕಾಡೆಮಿ ಆಫ್ ಫೈನ್ ಆಟ್ರ್ಸ್‍ನ ಪ್ರವೇಶ ಪರೀಕ್ಷೆಯಲ್ಲಿ ಎರಡು ಸಾರಿ ಅನುತ್ತೀರ್ಣನಾದ ಕಾರಣ ಆ ಕನಸೂ ಸಹ ಕೈಗೂಡಲಿಲ್ಲ. ಬಡತನದಲ್ಲಿದ್ದ ಆತ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ಸಣ್ಣ ಕೋಣೆಯೊಂದನ್ನು ಬಾಡಿಗೆಗೆ ಪಡೆದ ಹಾಗೂ ಕೆಲವೊಮ್ಮೆ ಪಾರ್ಕ್‍ನ ಬೆಂಚುಗಳ ಮೇಲೆ ಮಲಗುತ್ತಿದ್ದ, ಕೆಲವೊಮ್ಮೆ ಅವರಿವರು ನೀಡುತ್ತಿದ್ದ ಆಹಾರವನ್ನು ಸೇವಿಸುತ್ತಿದ್ದ. ಹಿಟ್ಲರ್ ಜರ್ಮನ್ ಭಾಷೆ ಮಾತನಾಡುವ ಆಸ್ಟ್ರಿಯಾದವನಾಗಿದ್ದ ಹಾಗೂ ತನ್ನನ್ನು ಒಬ್ಬ ಜರ್ಮನ್ ಎಂದೇ ಪರಿಗಣಿಸಿದ್ದ. ಆ ಸಮಯದಲ್ಲಿಯೇ ಆತನಲ್ಲಿ ಜರ್ಮನೇತರರ ಬಗ್ಗೆ ದ್ವೇಷ ಮೂಡಲು ಪ್ರಾರಂಭಿಸಿತು. ಆಗಲೇ ಯೂರೋಪಿನ ಎಂಟು ಭಾಷೆಗಳನ್ನು ಅಧಿಕೃತವಾಗಿ ಪರಿಗಣಿಸಿದ್ದ ಆಸ್ಟ್ರಿಯಾದ ಸರ್ಕಾರವನ್ನು ಲೇವಡಿ ಮಾಡಿದನಲ್ಲದೆ ಯಾವ ಸರ್ಕಾರ ಎಲ್ಲಾ ಜನಾಂಗಗಳನ್ನೂ ಸಮಾನವೆಂದು ಪರಿಗಣಿಸುತ್ತದೋ ಅಂತಹ ಸರ್ಕಾರ ಹೆಚ್ಚು ಉಳಿಯುವುದಿಲ್ಲ ಎಂದೂ ಹೇಳುತ್ತಿದ್ದ. 1913ರಲ್ಲಿ ಜರ್ಮನಿಯ ಮ್ಯೂನಿಕ್‍ಗೆ ಹೋದ ಹಿಟ್ಲರ್ 1914ರಲ್ಲಿ ಮೊದಲನೇ ವಿಶ್ವಯುದ್ಧ ಪ್ರಾರಂಭವಾದಾಗ ಸ್ವತಃ ಜರ್ಮನ್ ಸೇನೆಗೆ ಸೇರಿಕೊಂಡ ಮತ್ತು ಅವನ ಶೌರ್ಯಕ್ಕಾಗಿ ಎರಡು ಸಾರಿ ಪದಕ ಸ್ವೀಕರಿಸಿದ ಆತ ಕಾರ್ಪೊರಲ್ ಹುದ್ದೆಯನ್ನೂ ಗಳಿಸಿದ.
ಮೊದಲ ವಿಶ್ವಯುದ್ಧ ಮುಗಿದಾಗ ಜರ್ಮನಿಯ ಚಿತ್ರಣವೇ ಬದಲಾಗಿತ್ತು. ಹಿಟ್ಲರ್ ವಿಷಾನಿಲಕ್ಕೆ ಬಲಿಯಾಗಿ ತಾತ್ಕಾಲಿಕ ಕುರುಡಿಗೆ ಬಲಿಯಾಗಿದ್ದ. ಯುದ್ಧದ ಅಂತ್ಯಕ್ಕೆ ಕಾರಣವಾದ ವರ್ಸಾಯಿಲ್ಲ ಒಪ್ಪಂದದಿಂದ ಜರ್ಮನಿ ತನ್ನ ಬಹಳಷ್ಟು ಭೂಭಾಗವನ್ನು ಕಳೆದುಕೊಂಡಿದ್ದಲ್ಲದೆ ಬೃಹತ್ತ ಮೊತ್ತದ ನಷ್ಟಭರ್ತಿ ಪರಿಹಾರ ಕಟ್ಟಿಕೊಡಬೇಕಾಗಿದ್ದುದರಿಂದ ದೇಶವೇ ದಿವಾಳಿಯಾಯಿತು ಹಾಗೂ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದರು.
1920ರಲ್ಲಿ ಹಿಟ್ಲರ್ ನಾತ್ಸಿಗಳೆಂದು ಕರೆಯಲ್ಪಡುವ ನ್ಯಾಶನಲ್ ಸೋಷಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ ಸೇರಿಕೊಂಡ. ಯೂರೋಪಿನಲ್ಲಿ ಚದುರಿಹೋಗಿರುವ ಎಲ್ಲಾ ಜರ್ಮನ್ನರೂ ಒಂದಾಗಲು ಮತ್ತು ವರ್ಸಾಯಿಲ್ ಒಪ್ಪಂದವನ್ನು ಧಿಕ್ಕರಿಸಲು ಆ ಪಕ್ಷ ಕರೆನೀಡಿತು. ಹಿಟ್ಲರ್ ತನ್ನ ವಾಕ್ಚಾತುರ್ಯದಿಂದ ಪಕ್ಷದ ಸದಸ್ಯತ್ವವನ್ನು ಹೆಚ್ಚಿಸಿದ ಮತ್ತು ನಾತ್ಸಿ ಪಕ್ಷದ ನಾಯಕನೂ ಆದ. ‘ಕಂದು ಶರ್ಟ್‍ನವರು’ ಎಂದು ಕರೆಯಲ್ಪಡುವ ಪ್ರತ್ಯೇಕ ಆಕ್ರಮಣಾ ದಳವೊಂದರ ಸೈನ್ಯವನ್ನು ನಾತ್ಸಿ ಪಕ್ಷದಲ್ಲಿ ನಿರ್ಮಿಸಿದ ಮತ್ತು 1923ರ ನವೆಂಬರ್ 9ರಂದು 2000 ಸೈನಿಕರ ದಳದೊಂದಿಗೆ ಬವೇರಿಯನ್ ಸರ್ಕಾರ ಉರುಳಿಸಲು ಪ್ರಯತ್ನಿಸಿ ವಿಫಲನಾಗಿ ಸೆರೆಸಿಕ್ಕು ದೇಶದ್ರೋಹದ ಆಪಾದನೆಯ ಮೇಲೆ ಐದು ವರ್ಷದ ಸೆರೆಮನೆ ವಾಸದ ಶಿಕ್ಷೆ ವಿಧಿಸಿದರು. ಆಗ ಸೆರೆಮನೆಯಲ್ಲಿಯೇ ಆತನ ಪ್ರಖ್ಯಾತ ಕೃತಿ `ಮೈನ್ ಕಾಂಫ್’ (ನನ್ನ ಹೋರಾಟ) ರಚಿಸಿದ. ಆದರೆ ಒಂಭತ್ತು ತಿಂಗಳಿನಲ್ಲಿಯೇ ಬಿಡುಗಡೆ ಹೊಂದಿ ಪುನಃ ತನ್ನ ಪಕ್ಷದ ನಿರ್ಮಾಣದಲ್ಲಿ ತೊಡಗಿದ ಮತ್ತು ಶುಟ್ಜ್‍ಸ್ಟಾಫೆಲ್ ಅಥವಾ `ಎಸ್.ಎಸ್.’ ಎಂಬ ಕುಖ್ಯಾತ ಆಕ್ರಮಣಾ ದಳವೊಂದರ ನಿರ್ಮಾಣ ಮಾಡಿದ.
ಚಿತ್ರ 1: ‘ಹಿಟ್ಲರ್- ನಮ್ಮ ಕೊನೆಯ ಭರವಸೆ’. ಆರ್ಥಿಕ ದುರ್ಭಲತೆ ಹಾಗೂ ನಿರುದ್ಯೋಗದಿಂದ ಬಳಲಿದ ಜರ್ಮನಿಗೆ ಆಶಾಕಿರಣದಂತೆ ಬಂದ ಹಿಟ್ಲರ್. 1932ರಲ್ಲಿ ಪ್ರಕಟವಾದ ಹ್ಯಾನ್ಸ್ ಸ್ಕ್ವಿಟ್ಜರ್ ನ ಚಿತ್ರ.
1930ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜರ್ಮನಿ ಸಂಕಷ್ಠಕ್ಕೀಡಾಯಿತು. ಜರ್ಮನಿ ಇನ್ನೂ ಮೊದಲ ವಿಶ್ವಯುದ್ಧದ ಹಾನಿಯಿಂದಲೇ ಚೇತರಿಸಿಕೊಂಡಿರಲಿಲ್ಲ ಹಾಗೂ ದೇಶದ ಆಗಿನ ಸಾಲದ ಮರುಪಾವತಿ ಇನ್ನೂ ಬಾಕಿಯಿತ್ತು. ಆ ಸಾಲ ಮರುಪಾವತಿಸುವ ವಿರುದ್ಧ ಹಿಟ್ಲರ್ ಪ್ರತಿಭಟಿಸಿದ. 1932ರಲ್ಲಿ ‘ಹಿಟ್ಲರ್- ನಮ್ಮ ಕೊನೆಯ ಭರವಸೆ’ ಎಂಬ ಹ್ಯಾನ್ಸ್ ಸ್ಕ್ವಿಟ್ಜರ್ ರಚನೆಯ ಚಿತ್ರದಲ್ಲಿ (ಚಿತ್ರ 1) ಆರ್ಥಿಕ ದುರ್ಬಲತೆ ಹಾಗೂ ನಿರುದ್ಯೋಗದಿಂದ ಬಳಲಿದ ಜರ್ಮನಿಗೆ ಹಿಟ್ಲರ್ ಆಶಾಕಿರಣದಂತೆ ಕಂಡುಬಂದಿದ್ದ.
ಚಿತ್ರ 2: `ಬಂಡವಾಳಶಾಹಿಯ ಸಂರಕ್ಷಕ ದೇವತೆ ಮಾರ್ಕ್ಸ್ ವಾದ’ - 1932ರ ನಾತ್ಸಿ ಪೋಸ್ಟರ್
ಒಂದರಲ್ಲಿ ವ್ಯಂಗ್ಯಚಿತ್ರದಲ್ಲಿ ಸಿರಿವಂತ ಯೆಹೂದಿಯನ್ನು ಕಮ್ಯೂನಿಸ್ಟ್ ದೇವತೆ ಕೈ
ಹಿಡಿದುಕೊಂಡು ನಡೆದೊಯ್ಯುತ್ತಿತ್ತು ಹಾಗೂ ಅವರಿಂದ ಜರ್ಮನಿಯನ್ನು ಮುಕ್ತಗೊಳಿಸಲು
ನಾತ್ಸಿ ಪಕ್ಷಕ್ಕೆ ಮತನೀಡುವಂತೆ ಕೋರಲಾಗಿತ್ತು.
ಜರ್ಮನಿಯಲ್ಲಿನ ಯೆಹೂದಿಗಳು ಹಾಗೂ ಕಮ್ಯೂನಿಸ್ಟರೇ ದೇಶದ ಅವನತಿಗೆ ಕಾರಣವೆಂದು ಘೋಷಿಸಿದ ಹಾಗೂ ಮೊದಲ ವಿಶ್ವಯುದ್ಧದಲ್ಲಿ ಜರ್ಮನಿ ಸೋಲಲು ಅವರೇ ಕಾರಣವೆಂದು ಹೇಳಿದ. ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಜರ್ಮನಿಯನ್ನು ಯೆಹೂದಿಗಳಿಂದ ಹಾಗೂ ಕಮ್ಯೂನಿಸ್ಟರಿಂದ ಮುಕ್ತಗೊಳಿಸುವುದಾಗಿ ಹಾಗೂ ಜರ್ಮನ್ ಮಾತನಾಡುವ ಪ್ರಾಂತ್ಯಗಳೆಲ್ಲವನ್ನೂ ಜರ್ಮನಿಗೆ ಸೇರಿಸುವುದಾಗಿ ಹೇಳಿದ. 1932ರ ನಾತ್ಸಿ ಪೋಸ್ಟರ್ ಒಂದರಲ್ಲಿ `ಬಂಡವಾಳಶಾಹಿಯ ಸಂರಕ್ಷಕ ದೇವತೆ ಮಾಕ್ಸ್‍ವಾದ’ ಎಂಬ ಶೀರ್ಷಿಕೆಯ ವ್ಯಂಗ್ಯಚಿತ್ರದಲ್ಲಿ (ಚಿತ್ರ 2) ಸಿರಿವಂತ ಯೆಹೂದಿಯನ್ನು ಕಮ್ಯೂನಿಸ್ಟ್ ದೇವತೆ ಕೈ ಹಿಡಿದುಕೊಂಡು ನಡೆದೊಯ್ಯುತ್ತಿತ್ತು ಹಾಗೂ ಅವರಿಂದ ಜರ್ಮನಿಯನ್ನು ಮುಕ್ತಗೊಳಿಸಲು ನಾತ್ಸಿ ಪಕ್ಷಕ್ಕೆ ಮತನೀಡುವಂತೆ ಕೋರಲಾಗಿತ್ತು.
ಚಿತ್ರ 3: `ನಾಟ್ ದ ಮೋಸ್ಟ್ ಕಂಫರ್ಟಬಲ್ ಸೀಟ್’ - ಆಗ ಜರ್ಮನಿ ಎದುರಿಸುತ್ತಿದ್ದ ಸಮಸ್ಯೆಗಳನ್ನು ಹಿಟ್ಲರ್ ಎದುರಿಸಲು ಸಾಧ್ಯವಿಲ್ಲ ಎಂಬ ಹೊರಜಗತ್ತಿನ ಅನಿಸಿಕೆಯಂತೆ ಅಮೆರಿಕದ ಮಾರ್ಚ್ 1933ರ ಚಿಕಾಗೊ ಡೈಲಿ ನ್ಯೂಸ್‍ನಲ್ಲಿ ಪ್ರಕಟವಾದ ವ್ಯಂಗ್ಯಚಿತ್ರ.
1932ರ ಚುನಾವಣೆಯಲ್ಲಿ ನಾತ್ಸಿ ಪಕ್ಷಕ್ಕೆ ಶೇ.40ರಷ್ಟು ಮತ ದೊರಕಿತು ಹಾಗೂ ಜರ್ಮನಿಯಲ್ಲಿ ಅತಿ ಹೆಚ್ಚು ಮತ ಗಳಿಸಿದ ಪಕ್ಷವಾಗಿ ಅಧಿಕಾರಕ್ಕೆ ಬಂದಿತು. 1933ರ ಜನವರಿ 30ರಂದು ಅಧ್ಯಕ್ಷ ಪಾಲ್ ವಾನ್ ಹಿಂಡನ್‍ಬರ್ಗ್‍ರವರು ಹಿಟ್ಲರ್‍ನನ್ನು ಜರ್ಮನಿಯ ಚಾನ್ಸಲರ್ ಆಗಿ ನೇಮಿಸಿದರು. ಆಗ ಜರ್ಮನಿ ಎದುರಿಸುತ್ತಿದ್ದ ಸಮಸ್ಯೆಗಳನ್ನು ಹಿಟ್ಲರ್ ಎದುರಿಸಲು ಸಾಧ್ಯವಿಲ್ಲ ಎಂಬುದು ಹೊರಜಗತ್ತಿನ ಅನಿಸಿಕೆಯಾಗಿತ್ತು. ಅಮೆರಿಕದ ಮಾರ್ಚ್ 1933ರ ಚಿಕಾಗೊ ಡೈಲಿ ನ್ಯೂಸ್‍ನಲ್ಲಿ ಪ್ರಕಟವಾದ `ನಾಟ್ ದ ಮೋಸ್ಟ್ ಕಂಫರ್ಟಬಲ್ ಸೀಟ್’ (ಅತಿ ಆರಾಮದಾಯಕ ಸ್ಥಾನವಲ್ಲ) ಎನ್ನುವ ವ್ಯಂಗ್ಯಚಿತ್ರದಲ್ಲಿ (ಚಿತ್ರ 3) ಹಿಟ್ಲರ್‍ನನ್ನು ಚಾನ್ಸಲರ್ ಕಿರೀಟದ ಮೊನಚು ತುದಿಯ ಮೇಲೆ ಕಷ್ಟದಲ್ಲಿ ಕುಳಿತಿರುವವನಂತೆ ತೋರಿಸಲಾಗಿದೆ. ಆದರೆ ಹೊರಜಗತ್ತು ಊಹಿಸಿದಂತವನಾಗಿರಲಿಲ್ಲ ಹಿಟ್ಲರ್. ಥರ್ಡ್ ರೀಚ್ ಎಂದು ಕರೆಯಲ್ಪಡುತ್ತಿದ್ದ ಅವನ ಸರ್ಕಾರದಲ್ಲಿ ಸ್ವಾತಂತ್ರ್ಯಕ್ಕೆ ಅವಕಾಶವೇ ಇರಲಿಲ್ಲ.
ಚಿತ್ರ 4: ಹಿಟ್ಲರ್ ಭವಿಷ್ಯದ ಕ್ರೌರ್ಯವನ್ನು ಮನಗಂಡಂತೆ 1933ರ ಏಪ್ರಿಲ್ 5ರಂದು
ನ್ಯೂಯಾರ್ಕ್‍ನ ‘ದ ನೇಶನ್’ ಪತ್ರಿಕೆಯಲ್ಲಿ ಪ್ರಕಟವಾದ ಜಾರ್ಜ್ ಎಂಬಾತನ ವ್ಯಂಗ್ಯಚಿತ್ರ.
ಅಧಿಕಾರ ದೊರೆತ ಕೂಡಲೇ ಸರ್ವಾಧಿಕಾರತ್ವದ ಕಡೆಗೆ ಹೆಜ್ಜೆಯಿಟ್ಟ ಹಾಗೂ ತನ್ನನ್ನು ತಾನೇ ‘ಫ್ಯೂರರ್’ (ನಾಯಕ) ಎಂದು ಕರೆದುಕೊಂಡ. ಹಿಟ್ಲರ್‍ನ ಭವಿಷ್ಯದ ಕ್ರೌರ್ಯವನ್ನು ಮನಗಂಡಂತೆ 1933ರ ಏಪ್ರಿಲ್ 5ರಂದು ನ್ಯೂಯಾರ್ಕ್‍ನ ‘ದ ನೇಶನ್’ ಪತ್ರಿಕೆಯಲ್ಲಿ ಪ್ರಕಟವಾದ ಜಾರ್ಜ್ ಎಂಬಾತನ ವ್ಯಂಗ್ಯಚಿತ್ರದಲ್ಲಿ (ಚಿತ್ರ 4) ಹಿಟ್ಲರನ ಮುಖವಾಡದ ಹಿಂದೆ ಸ್ವಸ್ತಿಕ್ ರೂಪದ ಬೀಸುಗತ್ತಿ ಹಿಡಿದ ಸಾವಿನ ಸಾವಿನ ದೂತ ಅಸ್ಥಿಪಂಜರದ ಸೈನ್ಯವನ್ನು ಮುನ್ನಡೆಸುತ್ತಿದ್ದಾನೆ.
ಚಿತ್ರ 5: `ಚೇಂಜಿಂಗ್ ಡೈರೆಕ್ಷನ್ಸ್’ - ಜರ್ಮನಿಯೆಂಬ ಟ್ರೈನನ್ನು ಶಾಂತಿಯೆಡೆಗೆ
ಕರೆದೊಯ್ಯಬೇಕಾದ ಹಿಟ್ಲರ್ ಶಾಂತಿಯೆಡೆಗಿನ ಹಳಿಯನ್ನು ಬದಲಿಸಿ ಯುದ್ಧ, ಕೊಲೆ, ಹಿಂಸೆ,
ಯಾತನೆ ಮತ್ತು ವಿನಾಶದೆಡೆಗೆ ಕೊಂಡೊಯ್ಯುತ್ತಿದ್ದಾನೆ; 1933ರ ಎಚ್.ವೋಲ್ಫ್‍ರವರ
ವ್ಯಂಗ್ಯಚಿತ್ರ.
ಜರ್ಮನಿಯೆಂಬ ಟ್ರೈನನ್ನು ಶಾಂತಿಯೆಡೆಗೆ ಕರೆದೊಯ್ಯಬೇಕಾದ ಹಿಟ್ಲರ್ ಶಾಂತಿಯೆಡೆಗಿನ ಹಳಿಯನ್ನು ಬದಲಿಸಿ ಯುದ್ಧ, ಕೊಲೆ, ಹಿಂಸೆ, ಯಾತನೆ ಮತ್ತು ವಿನಾಶದೆಡೆಗೆ ಕೊಂಡೊಯ್ಯುತ್ತಿದ್ದಾನೆಂಬುದನ್ನು 1933ರ `ಚೇಂಜಿಂಗ್ ಡೈರೆಕ್ಷನ್ಸ್’ ಎಂಬ ಎಚ್.ವೋಲ್ಫ್‍ರವರ ವ್ಯಂಗ್ಯಚಿತ್ರ (ಚಿತ್ರ 5) ತೋರಿಸುತ್ತದೆ.
ಚಿತ್ರ 6: ‘ಡೆ ಕಂಪ್ಯಾನನ್’ (ಗೆಳೆಯರು) – 1933ರ ಡಚ್ ಪತ್ರಿಕೆಯೊಂದರಲ್ಲಿ ಪ್ರಕಟವಾದ
ವ್ಯಂಗ್ಯಚಿತ್ರದಲ್ಲಿ ಹಿಟ್ಲರ್‍ನ ಗೆಳೆಯ ಸಾವಿನ ದೂತನಾಗಿದ್ದಾನೆ ಹಾಗೂ ಆ ಗೆಳೆಯರು
ಸಂತೋಷದಿಂದಿದ್ದಾರೆ. ಹಿನ್ನೆಲೆಯಲ್ಲಿ ಶವಗಳು ಮರದಿಂದ ನೇತಾಡುತ್ತಿವೆ, ನೆಲದ ಮೇಲೆ
ಬಿದ್ದಿವೆ. ಆದರೆ ಸಾವಿನ ದೂತನ ಕೈಯಲ್ಲಿ ‘ಜೆಲ್ಫ್‍ಮೂರ್ಡ್’ (ಆತ್ಮಹತ್ಯೆ) ಎಂಬ ಬರಹವೂ
ಇದೆ.
ಅದೇ ವರ್ಷ ಡಚ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ‘ಡೆ ಕಂಪ್ಯಾನನ್’ (ಗೆಳೆಯರು) ಎಂಬ ವ್ಯಂಗ್ಯಚಿತ್ರದಲ್ಲಿ (ಚಿತ್ರ 6) ಹಿಟ್ಲರ್‍ನ ಗೆಳೆಯ ಸಾವಿನ ದೂತನಾಗಿದ್ದಾನೆ ಹಾಗೂ ಆ ಗೆಳೆಯರು ಸಂತೋಷದಿಂದಿದ್ದಾರೆ. ಹಿನ್ನೆಲೆಯಲ್ಲಿ ಶವಗಳು ಮರದಿಂದ ನೇತಾಡುತ್ತಿವೆ, ನೆಲದ ಮೇಲೆ ಬಿದ್ದಿವೆ. ಆದರೆ ಹಿಟ್ಲರನಿಗೆ ತಿಳಿಯದಂತೆ ಸಾವಿನ ದೂತನ ಕೈಯಲ್ಲಿ ‘ಜೆಲ್ಫ್‍ಮೂರ್ಡ್’ (ಆತ್ಮಹತ್ಯೆ) ಎಂಬ ಬರಹವೂ ಇದೆ.
ಹಿಟ್ಲರನ ಸರ್ಕಾರ ಜನರ ಬದುಕಿನ ಪ್ರತಿಯೊಂದು ಅಂಶವನ್ನೂ ನಿಯಂತ್ರಿಸಲು ಪ್ರಯತ್ನಿಸಿತು. ಆರ್ಯರ ಜನಾಂಗವೇ ಅತ್ಯುತ್ತಮವಾದುದೆಂಬುದನ್ನು ಸಾರುವ ಎಲ್ಲ ರೀತಿಯ ಪ್ರಚಾರವನ್ನು ಮಾಡಿತು. ಅದ್ಭುತ ಭಾಷಣ ಕಲೆ ಹೊಂದಿದ್ದ ಹಿಟ್ಲರನ ಮಾತುಗಳನ್ನು ಜರ್ಮನ್ನರು ಸುಲಭವಾಗಿ ನಂಬಿದರು. ಇಡೀ ಜಗತ್ತನ್ನೇ ಯೆಹೂದಿಗಳಿಂದ, ಜಿಪ್ಸೀಗಳಿಂದ, ಕರಿಯರಿಂದ, ಅಂಗವಿಕಲರು ಹಾಗೂ ಮಾನಸಿಕ ಅಸ್ವಸ್ಥರಿಂದ ಮುಕ್ತವಾಗಿಸಬೇಕೆಂಬುದು ಅವನ ಕನಸಾಗಿತ್ತು. ಅವನ ಯೋಜನೆಗೆ ಅವನು ‘ಅಂತಿಮ ಪರಿಹಾರ’ ಎಂಬ ಹೆಸರನ್ನು ಕೊಟ್ಟಿದ್ದ. ಜರ್ಮನ್ ಭಾಷಿಕರಿರುವ ಎಲ್ಲ ರಾಷ್ಟ್ರಗಳನ್ನೂ ಜರ್ಮನಿಗೆ ಸೇರಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಮೊದಲಿಗೆ ಆಸ್ಟ್ರಿಯಾ ನಂತರ ಜೆಕೊಸ್ಲೊವೇಕಿಯಾ ವಶಪಡಿಸಿಕೊಂಡ. ಆನಂತರ 1939ರಲ್ಲಿ ಹಿಟ್ಲರ್ ಪೋಲೆಂಡಿನ ಮೇಲೆ ಮಾಡಿದ ಆಕ್ರಮಣವೇ ಎರಡನೇ ವಿಶ್ವಯುದ್ಧಕ್ಕೆ ನಾಂದಿಯಾಯಿತು. ಆ ಸಮಯದ ಹೊತ್ತಿಗೆ ಹಿಟ್ಲರ್ ಜರ್ಮನಿ, ಪೋಲೆಂಡ್ ಮತ್ತು ರಷ್ಯಾಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಯೆಹೂದಿಗಳ `ನಿರ್ಮೂಲನಾ ಕ್ಯಾಂಪ್’ಗಳ ಸ್ಥಾಪನೆ ಪ್ರಾರಂಭವಾಗಿತ್ತು. ಯೆಹೂದಿಗಳನ್ನೆಲ್ಲಾ ‘ಕಾನ್ಸಂಟ್ರೇಶನ್ ಕ್ಯಾಂಪ್’ಗಳಿಗೆ ಸಾಗಿಸಿ ಹಸಿವಿನಿಂದ, ದುಡಿತದಿಂದ, ವಿಷಾನಿಲದಿಂದ ಹಾಗೂ ಗುಂಡುಹಾರಿಸಿ ಲಕ್ಷೋಪಾದಿಯಲ್ಲಿ ಕೊಂದುಹಾಕಿದ.
ಹಿಟ್ಲರ್ ಒಬ್ಬ ಸಸ್ಯಾಹಾರಿಯಾಗಿದ್ದ. ಆತನಿಗೆ ಪ್ರಾಣಿ ಪಕ್ಷಿಗಳ ಬಗ್ಗೆ ಕನಿಕರವಿದೆ ಆದರೆ, ಯೆಹೂದಿಗಳ ಕುರಿತಂತೆ ಅವನ ನಡವಳಿಕೆ ಹೇಗಿದೆ ಎಂಬುದನ್ನು ತೋರಿಸುವ ವ್ಯಂಗ್ಯಚಿತ್ರದಲ್ಲಿ ಹಿಟ್ಲರ್ ದಿಂಬಿನ ಮೇಲೆ ನಿಂತಿರುವ ಕುರಿಯೊಂದರ ತಲೆಯನ್ನು ಕರುಣೆಯಿಂದ ತಡವುತ್ತಿದ್ದರೆ ಮನೆಯವರನ್ನು ಕೊಂದು ಕೈಕಟ್ಟಿ ಹಾಕಿರುವ ಹೆಣ್ಣಿನ ಹಣೆಗೆ ಪಿಸ್ತೂಲು ಹಿಡಿದಿದ್ದಾನೆ, ಮೈಮೇಲೆ ತಲೆಬುರುಡೆಗಳನ್ನು ಕಟ್ಟಿಕೊಂಡಿದ್ದಾನೆ (ಚಿತ್ರ 7).
ಚಿತ್ರ 7: ಸಸ್ಯಾಹಾರಿ ಹಿಟ್ಲರ್ - ಸಸ್ಯಾಹಾರಿ ಹಿಟ್ಲರ್ ಪ್ರಾಣಿ ಪಕ್ಷಿಗಳ ಬಗ್ಗೆ ಕನಿಕರ ಹೊಂದಿದ್ದ, ಆದರೆ ಯೆಹೂದಿಗಳ ಕುರಿತಂತೆ?
ಪಾಲ್ ಜೋಸೆಫ್ ಗೋಬೆಲ್ಸ್ ಎಂಬಾತ ಹಿಟ್ಲರ್‍ನ ಆಪ್ತ ಹಾಗೂ ಹಿಟ್ಲರ್‍ನ ಸರ್ಕಾರದಲ್ಲಿ ಪ್ರಚಾರ ಸಚಿವನಾಗಿದ್ದ. ಆತನೂ ಅತ್ಯಂತ ಯೆಹೂದಿ ದ್ವೇಷಿಯಾಗಿದ್ದು ಮಹಾನ್ ಭಾಷಣಕಾರನಾಗಿದ್ದ. ಆತನ ಕೆಲಸ ಹಿಟ್ಲರನ ಕುರಿತು, ಆತನ ‘ಸಾಮಥ್ರ್ಯ’ದ ಕುರಿತು ಪ್ರಚಾರ ಮಾಡುವುದೇ ಆಗಿತ್ತು. ಇಂಗ್ಲೆಂಡಿನ ಡೇವಿಡ್ ಲೋ ಎಂಬ ವ್ಯಂಗ್ಯಚಿತ್ರಕಾರನ ಸಣಕಲು ಹಿಟ್ಲರ್‍ನನ್ನು ಅತ್ಯಂತ ಬಲಶಾಲಿಯಾಗಿ ಚಿತ್ರಿಸುತ್ತಿರುವ ವ್ಯಂಗ್ಯಚಿತ್ರ (ಚಿತ್ರ 8) ಗೋಬೆಲ್ಸ್‍ನ ಕೆಲಸವೇನೆಂಬುದನ್ನು ತೋರಿಸುತ್ತದೆ.
ಚಿತ್ರ 8: ಪ್ರಚಾರ ಸಚಿವ ಪಾಲ್ ಜೋಸೆಫ್ ಗೋಬೆಲ್ಸ್ ಹಿಟ್ಲರ್‍ನನ್ನು ಹೊರಜಗತ್ತಿಗೆ ಪರಿಚಯಿಸುತ್ತಿರುವುದು. ಇಂಗ್ಲೆಂಡಿನ ಡೇವಿಡ್ ಲೋ ವ್ಯಂಗ್ಯಚಿತ್ರ.
ಮೂಲತಃ ನ್ಯೂಜಿಲೆಂಡ್‍ನವನಾದ ಡೇವಿಡ್ ಲೋ ಇಂಗ್ಲೆಂಡಿನ ಪ್ರಖ್ಯಾತ ವ್ಯಂಗ್ಯಚಿತ್ರಕಾರ. ‘ಎಲ್ಲಾ ಸರ್ವಾಧಿಕಾರಿಗಳೂ ಮೂರ್ಖರು’ ಎಂದ ಆತ ಲಂಡನ್ನಿನ ‘ಈವನಿಂಗ್ ಸ್ಟ್ಯಾಂಡರ್ಡ್’ ಪತ್ರಿಕೆಗೆ ಹಿಟ್ಲರ್ ಮತ್ತು ಇಟಲಿಯ ಸರ್ವಾಧಿಕಾರ ಮುಸೊಲಿನಿಯ ಬಗ್ಗೆ ನೂರಾರು ವ್ಯಂಗ್ಯಚಿತ್ರಗಳನ್ನು ಬರೆದ. ಹಿಟ್ಲರ್‍ನನ್ನು ಅತ್ಯಂತ ಕ್ರೂರಿ ಎಂದು ಹಲವಾರು ವ್ಯಂಗ್ಯಚಿತ್ರಕಾರರು ಚಿತ್ರಿಸುತ್ತಿದ್ದರೆ ಡೇವಿಡ್ ಲೋ ಹಿಟ್ಲರ್‍ನನ್ನು ಮುದ್ದಿನಿಂದ ಹಾಳಾದ ಮಗುವಿನಂತೆ, ಅತ್ಯಂತ ದುರ್ಬಲ ಹಾಗೂ ದಡ್ಡನಂತೆ ಚಿತ್ರಿಸುತ್ತಿದ್ದ. ಪ್ರತಿದಿನ ಲೋನ ವ್ಯಂಗ್ಯಚಿತ್ರಗಳನ್ನು ನೋಡಿ ಹಿಟ್ಲರ್ ಉರಿದುಬೀಳುತ್ತಿದ್ದನಂತೆ, ಅವನನ್ನು ಶಪಿಸುತ್ತಿದ್ದನಂತೆ. ತಾನು ಕೊಲ್ಲಬೇಕೆಂದು ಮಾಡಿಕೊಂಡಿದ್ದ ಪಟ್ಟಿಯಲ್ಲಿ ಡೇವಿಡ್ ಲೋನ ಹೆಸರನ್ನು ಸಹ ಸೇರಿಸಿದ್ದ. ಜರ್ಮನಿಯೊಂದಿಗೆ ಶಾಂತಿ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದ ಬ್ರಿಟಿಷ್ ಸರ್ಕಾರ ಸಹ ‘ಈವನಿಂಗ್ ಸ್ಟ್ಯಾಂಡರ್ಡ್’ ಪತ್ರಿಕೆಯ ಬಿಸಿನೆಸ್ ಮ್ಯಾನೇಜರ್ ಮೈಕೆಲ್ ವಾರ್ಡೆಲ್‍ರವರನ್ನು ಕೋರಿ ಹಿಟ್ಲರ್‍ನ ವ್ಯಂಗ್ಯಚಿತ್ರಗಳನ್ನು ಬರೆಯದಿರುವಂತೆ ಡೇವಿಡ್ ಲೋನನ್ನು ಕೋರಿಕೊಳ್ಳುವಂತೆ ಹೇಳಿದರು. ಆದರೆ ಲೋ ಆ ಕೋರಿಕೆಯನ್ನು ನಿರಾಕರಿಸಿದ. ಆದರೆ ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಸ್ವತಃ ಲೋನನ್ನು ಭೇಟಿ ಮಾಡಿ `ಬ್ರಿಟನ್ ಮತ್ತು ಜರ್ಮನಿಯ ನಡುವೆ ನಡೆಯಬಹುದಾದ ಯುದ್ಧವನ್ನು ನಿನ್ನಿಂದ ಮಾತ್ರ ತಡೆಯಲು ಸಾಧ್ಯ. ನೀನು ಹಿಟ್ಲರ್‍ನನ್ನು ಲೇವಡಿ ಮಾಡುವುದನ್ನು ನಿಲ್ಲಿಸಿದರೆ ಎರಡು ದೇಶಗಳ ನಡುವೆ ಶಾಂತಿ ಇರಲು ಸಾಧ್ಯ’ ಎಂದು ಕೇಳಿಕೊಂಡಾಗ ಲೋ ಒಪ್ಪಿಕೊಂಡ. ಡೇವಿಡ್ ಲೋ ಸ್ವತಃ ಹೇಳಿರುವಂತೆ, `ಆತ ವಿದೇಶಾಂಗ ಕಾರ್ಯದರ್ಶಿ ಅಲ್ಲದೆ, ನಾನೇನು ಮಾಡಲು ಸಾಧ್ಯ? ಮತ್ತೊಂದು ಯುದ್ಧಕ್ಕೆ ನಾನು ಕಾರಣನಾಗಬಾರದಲ್ಲವೆ, ಪತ್ರಕರ್ತನಾಗಿ ನಾನು ನನ್ನದೇ ಮಾಧ್ಯಮದಲ್ಲಿ ಸತ್ಯವನ್ನೇ ಹೇಳಬೇಕು. ಆಯಿತು ಲೇವಡಿಯನ್ನು ಕೊಂಚ ಹಗುರಗೊಳಿಸುತ್ತೇನೆ ಎಂದು ಹೇಳಿದೆ’ ಎಂದ. ತನ್ನನ್ನು ಲೇವಡಿ ಮಾಡುವ ವ್ಯಂಗ್ಯಚಿತ್ರಗಳ ಕುರಿತು ಸಿಕ್ಕಾಪಟ್ಟೆ ಸಿಟ್ಟಾಗುವ ಹಿಟ್ಲರ್‍ನ ನಡವಳಿಕೆಯ ಕುರಿತು ಡೇವಿಡ್ ಲೋ ತನ್ನದೇ ವಿವರಣೆ ಹೊಂದಿದ್ದ: ‘ಯಾವುದೇ ಸರ್ವಾಧಿಕಾರಿ ತಾನು ರಕ್ತದ ಮಡುವಿನಲ್ಲಿ ನಡೆಯುತ್ತಿರುವಂತೆ, ತಾನು ರಕ್ತಪಾತ ಮಾಡುತ್ತಿರುವಂತಹ ಚಿತ್ರಗಳನ್ನು ನೋಡಿದಲ್ಲಿ ಅವನಿಗೆ ಮುಜುಗರ ಅಥವಾ ಸಿಟ್ಟು ಬರುವುದಿಲ್ಲ. ಅಧಿಕಾರ ಬಯಸುವ ಸರ್ವಾಧಿಕಾರಿ ತನ್ನ ಶಕ್ತಿ, ವರ್ಚಸ್ಸು ಹೆಚ್ಚಿಸಿಕೊಳ್ಳಲು ಹಾಗೂ ಹೆದರಿಕೆ ಹುಟ್ಟಿಸಲು ಅಂತಹ ಚಿತ್ರಗಳ ಸಹಾಯಕಾರಿಯಾಗುವುದು ಎಂದುಕೊಳ್ಳುತ್ತಾನೆ. ಆದರೆ ತನ್ನನ್ನು ದುರ್ಬಲ ಹಾಗೂ ದಡ್ಡನಂತೆ ಚಿತ್ರಿಸುವ ಚಿತ್ರಗಳನ್ನು ಆತ ಸಹಿಸಲಾರ, ಏಕೆಂದರೆ ಅಂಥವು ಆತನಿಗೆ ಹೆಚ್ಚು ಹಾನಿ ಮಾಡುತ್ತವೆ.’ ಡೇವಿಡ್ ಲೋನ ವ್ಯಂಗ್ಯಚಿತ್ರಗಳು ಹಿಟ್ಲರ್‍ನನ್ನು ಎಷ್ಟು ಕಾಡಿದ್ದವೆಂದರೆ, ಆ ವ್ಯಂಗ್ಯಚಿತ್ರಗಳನ್ನು ಒಂದೊಂದಾಗಿ ನಿರಾಕರಿಸಿ, ಹಿಟ್ಲರ್ ಆ ರೀತಿಯವನಲ್ಲ, ಅದಕ್ಕೆ ಕಾರಣಗಳು ಬೇರೆಯವೇ ಇವೆ ಎನ್ನುವಂತಹ ವಿವರಣೆಗಳನ್ನುಳ್ಳ ಒಂದು ಪ್ರತ್ಯುತ್ತರ ಪುಸ್ತಕವನ್ನೇ (Hitler in der Karikatur der Welt: Tet gegen Tinte - Hitler in the World's Cartoons: Facts Versus Ink) ಹಿಟ್ಲರ್ ಪ್ರಕಟಿಸಿದ. ಹಿಟ್ಲರ್ ಮತ್ತು ಮುಸೊಲಿನಿ ಯುದ್ಧದಲ್ಲಿ ಸೋತು ಮಕ್ಕಳಂತೆ ಅಳುತ್ತಿರುವುದರ ವ್ಯಂಗ್ಯಚಿತ್ರ ಬರೆದ ಲೋ ಆ ಚಿತ್ರದಲ್ಲಿ ತನ್ನನ್ನೂ ರಚಿಸಿಕೊಂಡಿದ್ದಾನೆ (ಚಿತ್ರ 9).
ಚಿತ್ರ 9: ಹಿಟ್ಲರ್ ಮತ್ತು ಮುಸೊಲಿನಿ ಯುದ್ಧದಲ್ಲಿ ಸೋತು ಮಕ್ಕಳಂತೆ ಅಳುತ್ತಿರುವುದರ
ವ್ಯಂಗ್ಯಚಿತ್ರ ಬರೆದ ಲೋ ಆ ಚಿತ್ರದಲ್ಲಿ ತನ್ನನ್ನೂ ರಚಿಸಿಕೊಂಡಿದ್ದಾನೆ.
ಹಿಟ್ಲರ್ ಮತ್ತು ರಷ್ಯಾದ ಸ್ಟ್ಯಾಲಿನ್ ಒಬ್ಬರನ್ನು ಮತ್ತೊಬ್ಬರು ಮೀರಿಸುವ ಸರ್ವಾಧಿಕಾರಿಗಳು ಎನ್ನುವುದನ್ನು ತೋರಿಸಲು ಅವರು ಭೇಟಿಯಾದಾಗ ಪರಸ್ಪರ ಪರಿಚಯ ಮಾಡಿಕೊಳ್ಳುವ 20ನೇ ಸೆಪ್ಟೆಂಬರ್ 1939ರಂದು ಪ್ರಕಟವಾದ ಅದ್ಭುತ ವ್ಯಂಗ್ಯಚಿತ್ರವೊಂದನ್ನು ಡೇವಿಡ್ ಲೋ ರಚಿಸಿದ್ದಾನೆ (ಚಿತ್ರ 10).
ಚಿತ್ರ 10: `ಜಗತ್ತಿನ ಅತ್ಯಂತ ನೀಚ ಮತ್ತು ಕಟುಕರು’ - ಹಿಟ್ಲರ್ ಮತ್ತು ರಷ್ಯಾದ
ಸ್ಟ್ಯಾಲಿನ್ ಅತ್ಯಂತ `ಸಭ್ಯತೆ’ಯಿಂದ ಪರಸ್ಪರ ಪರಿಚಯ ಮಾಡಿಕೊಳ್ಳುತ್ತಿರುವುದು - 20ನೇ
ಸೆಪ್ಟೆಂಬರ್ 1939ರಂದು ಪ್ರಕಟವಾದ ಡೇವಿಡ್ ಲೋ ವ್ಯಂಗ್ಯಚಿತ್ರ.
ಹಿಟ್ಲರ್ ಕುರಿತಂತೆ ಅವನ ಸಮಯದಲ್ಲಿ ಜಗತ್ತಿನಾದ್ಯಂತ ಸಾವಿರಾರು ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. ಎಷ್ಟೋ ಜನ ವ್ಯಂಗ್ಯಚಿತ್ರಕಾರರು ನಾತ್ಸಿಗಳಿಗೆ ಹೆದರಿ ಜರ್ಮನಿ ಬಿಟ್ಟು ಬೇರೆ ದೇಶಗಳಿಗೆ ಹೊರಟು ಹೋದರು.
ಚಿತ್ರ 11: ಹಿಟ್ಲರ್ ಹಾಗೂ ಯುದ್ಧದ ಭಯಾನಕತೆಯ ಬಗೆಗೆ ಹಲವಾರು ವ್ಯಂಗ್ಯಚಿತ್ರಗಳನ್ನು ಬರೆದಿದ್ದ ಹಾಗೂ 1944ರಲ್ಲಿ ನಾತ್ಸಿಗಳಿಂದ ಅರೆಸ್ಟ್ ಆಗಿ ಮರಣದಂಡನೆ ಶಿಕ್ಷೆಗೊಳಗಾದ ವ್ಯಂಗ್ಯಚಿತ್ರಕಾರ ಎರಿಕ್ ಓಸರ್‍ನ ವ್ಯಂಗ್ಯಚಿತ್ರ. ಆದರೆ ಆತ ವಿಚಾರಣೆಯ ಹಿಂದಿನ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡ.
ಎರಿಕ್ ಓಸರ್ ಎಂಬ ವ್ಯಂಗ್ಯಚಿತ್ರಕಾರ ಹಿಟ್ಲರ್, ಗೋಬೆಲ್ಸ್ ಬಗೆಗೆ ಹಾಗೂ ಯುದ್ಧದ ಭಯಾನಕತೆಯ ಬಗೆಗೆ ಹಲವಾರು ವ್ಯಂಗ್ಯಚಿತ್ರಗಳನ್ನು ಬರೆದಿದ್ದ (ಚಿತ್ರ 11 – 1932ರಲ್ಲಿ ‘ವೋರ್ಟ್‍ವಾಟ್ರ್ಸ್’ನಲ್ಲಿ ಪ್ರಕಟವಾದ ವ್ಯಂಗ್ಯಚಿತ್ರ). 1944ರಲ್ಲಿ ಹಿಟ್ಲರ್ ಆತನನ್ನು ಅರೆಸ್ಟ್ ಮಾಡಿಸಿ ಮರಣದಂಡನೆ ವಿಧಿಸಿದ. ಆದರೆ ಓಸರ್ ಅವರ ಕಣ್ಣು ತಪ್ಪಿಸಿ ವಿಚಾರಣೆಯ ಹಿಂದಿನ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡ. ಆಗ ಆತನ ವಯಸ್ಸು ನಲ್ವತ್ತೊಂದು ವರ್ಷಗಳು ಮಾತ್ರ.
ಚಿತ್ರ 12: `ಬಿತ್ತನೆ’ - 1939ರ ಏಪ್ರಿಲ್ 29ರ ಫ್ರೆಂಚ್ ಪತ್ರಿಕೆ ‘ಲೆ ರೈರ್’
ಪತ್ರಿಕೆಯಲ್ಲಿ ಪ್ರಕಟವಾದ ಪಾಲ್ ಆಡ್ರ್ನರ್‍ರವರ ವ್ಯಂಗ್ಯಚಿತ್ರದಲ್ಲಿ ಹಿಟ್ಲರ್ ಮತ್ತು
ಮುಸೊಲಿನಿ ಯೂರೋಪ್‍ನಲ್ಲೆಲ್ಲಾ ಬಂದೂಕು, ಟ್ಯಾಂಕ್, ಗುಂಡುಗಳ ಬಿತ್ತನೆ
ಮಾಡುತ್ತಿದ್ದಾರೆ.
1939ರ ಏಪ್ರಿಲ್ 29ರ ಫ್ರೆಂಚ್ ಪತ್ರಿಕೆ ‘ಲೆ ರೈರ್’ ಪತ್ರಿಕೆಯಲ್ಲಿ ಪ್ರಕಟವಾದ ಪಾಲ್ ಆಡ್ರ್ನರ್‍ರವರ ವ್ಯಂಗ್ಯಚಿತ್ರದಲ್ಲಿ ಹಿಟ್ಲರ್ ಮತ್ತು ಮುಸೊಲಿನಿ ಯೂರೋಪ್‍ನಲ್ಲೆಲ್ಲಾ ಬಂದೂಕು, ಟ್ಯಾಂಕ್, ಗುಂಡುಗಳ ಬಿತ್ತನೆ ಮಾಡುತ್ತಿದ್ದಾರೆ. ಇನ್ನು ಅವರ ಫಸಲು ಏನು ಪಡೆಯಬಹುದು? ಎನ್ನುವ ಪ್ರಶ್ನೆಯಿದೆ ಆ ವ್ಯಂಗ್ಯಚಿತ್ರದಲ್ಲಿ (ಚಿತ್ರ 12). ಹಲವಾರು ಯೂರೋಪಿಯನ್ ರಾಷ್ಟ್ರಗಳ ಒಕ್ಕೂಟವು ಹಿಟ್ಲರ್‍ನನ್ನು 1945ರಲ್ಲಿ ಸಂಪೂರ್ಣ ತಡೆಯುವ ಹೊತ್ತಿಗೆ 12 ದಶಲಕ್ಷ ಜನ ಪ್ರಾಣ ತೆತ್ತಿದ್ದರು. ಬಂಕರ್ ಒಂದರಲ್ಲಿ ಅಡಗಿದ್ದ ಹಿಟ್ಲರ್ ತನಗೆ ಬೇರೆ ದಾರಿಯಿಲ್ಲವೆಂದು ಅರಿವಾದಾಗ 30ನೇ ಏಪ್ರಿಲ್ 1945ರಂದು ತನ್ನ ಪಿಸ್ತೂಲಿನಿಂದ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ವ್ಯಂಗ್ಯಚಿತ್ರಕಾರರು ಹಿಟ್ಲರ್ ಸತ್ತನಂತರವೂ ಅವನನ್ನು ಬಿಡಲಿಲ್ಲ. ‘ಬಿತ್ತಿದ್ದನ್ನು ನೀನು ಪಡೆಯುತ್ತೀಯೆ’ ಎನ್ನುವ ಶೀರ್ಷಿಕೆಯ ವಿಕ್ಟರ್ ಡೆನಿಯ ವ್ಯಂಗ್ಯಚಿತ್ರವುಳ್ಳ ಪೋಸ್ಟರ್ (ಚಿತ್ರ 13) ರಷಿಯಾದಲ್ಲಿ ಪ್ರಕಟವಾಯಿತು.
ಚಿತ್ರ 13: ‘ಬಿತ್ತಿದ್ದನ್ನು ನೀನು ಪಡೆಯುತ್ತೀಯೆ’ ಎನ್ನುವ ಶೀರ್ಷಿಕೆಯ ವಿಕ್ಟರ್
ಡೆನಿಯ ವ್ಯಂಗ್ಯಚಿತ್ರವುಳ್ಳ ಪೋಸ್ಟರ್ ರಷಿಯಾದಲ್ಲಿ ಹಿಟ್ಲರ್ ಸತ್ತಾಗ ಪ್ರಕಟವಾಯಿತು.
ರಷಿಯನ್ನರು ಅವನನ್ನು ಹೂಳುವ ಸ್ಥಳ ಸ್ಮಾರಕವಾಗಿಬಿಡಬಹುದೆಂದು ಅವನ ದೇಹವನ್ನು ರಷಿಯಾಕ್ಕೆ ಕೊಂಡೊಯ್ದರು. ಈಗಲೂ ವ್ಯಂಗ್ಯಚಿತ್ರಗಳಲ್ಲಿ ಹಲವಾರು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾನೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನೂ ಸಹ ಹಿಟ್ಲರ್ ರೂಪದಲ್ಲಿ ತೋರಿಸುವ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಿವೆ.
2 ಕಾಮೆಂಟ್‌ಗಳು:
ಚೆನ್ನಾಗಿ ಪರಿಶೀಲಿಸಿ ಬರೆದಿದ್ದೀರಿ, ವಂದನೆ
Great work
ಕಾಮೆಂಟ್ ಪೋಸ್ಟ್ ಮಾಡಿ