ಸೋಮವಾರ, ಏಪ್ರಿಲ್ 27, 2020

ನನ್ನ ಕೃತಿಗಳ ಪಿ.ಡಿ.ಎಫ್. ಡೌನ್ ಲೋಡ್ ಲಿಂಕ್ ಗಳು


ಇಂದು ವಿಶ್ವ ಪುಸ್ತಕ ದಿನಾಚರಣೆ. ನಾನು ಈಗಾಗಲೇ ನಿಮ್ಮೊಂದಿಗೆ ನನ್ನ ಕೃತಿಗಳನ್ನು ಪಿ.ಡಿ.ಎಫ್. ಮಾಡಿ ಎಲ್ಲರಿಗೂ ಸುಲಭವಾಗಿ ಸಿಗಲೆಂದು ಸಾಫ್ಟ್ ಪ್ರತಿಗಳನ್ನು ಬಿಡಿಬಿಡಿಯಾಗಿ ಹಂಚಿದ್ದೇನೆ. ಈಗ ಮತ್ತೊಮ್ಮೆ ಅವುಗಳ ಲಿಂಕ್ ಗಳನ್ನು ಒಂದೇ ಕಡೆ ನೀಡುತ್ತಿದ್ದೇನೆ. __/\__
1. ಪುಟ್ಟ ರಾಜಕುಮಾರ (ಅನುವಾದ)
2. ಮಳೆಬಿಲ್ಲ ನೆರಳು (ಜನಪ್ರಿಯ ವಿಜ್ಞಾನ ಲೇಖನಗಳ ಸಂಕಲನ)
3. ಮಾತಾಹರಿ
4. ನೀನೆಂಬ ನಾನು- ಸೂಫಿ ಎಂಬ ಮಾನಸಿಕ ಅವಸ್ಥೆ ಹಾಗೂ ಸೂಫಿ ಕತೆಗಳು
5. ನೆನಪುಗಳಿಗೇಕೆ ಸಾವಿಲ್ಲ (ಕಥಾ ಸಂಕಲನ)
6. ಬೊಕಾಷಿಯೋನ ರಸಿಕತೆಗಳು (ಅನುವಾದ)
7. ಮಿಥುನ- ಲೈಂಗಿಕ ಮನೋವಿಜ್ಞಾನದ ಬರೆಹಗಳು
8. ಕನಸೆಂಬ ಮಾಯಾಲೋಕ (ಕನಸುಗಳು ಹಾಗೂ ಅವುಗಳ ಹಿಂದಿನ ವೈಜ್ಞಾನಿಕ ಮಾಹಿತಿ)
https://archive.org/download/KannadaEbook-KanasembaMayaloka/KanasembaMayaloka.pdf
ಗೆಳೆಯ ಲಕ್ಷ್ಮೀಪತಿ ಕೋಲಾರ ಅವರ ಕವನ ಸಂಕಲನಗಳು
1. ನೀಲಿತತ್ತಿ
2. ನವಿಲು ಕಿನ್ನರಿ

ಗುರುವಾರ, ಏಪ್ರಿಲ್ 16, 2020

ಉಚಿತ ಡೌನ್ಲೋಡ್ ಗೆ ಹಂಚಿಕೊಳ್ಳುತ್ತಿರುವ ನನ್ನ ಮತ್ತೊಂದು ಅನುವಾದಿತ ಪುಸ್ತಕ `ಪುಟ್ಟ ರಾಜಕುಮಾರ'.


`ಪುಟ್ಟ ರಾಜಕುಮಾರ


https://archive.org/download/puttarajakumarajbalakrishna/Putta%20Rajakumara-%20J%20Balakrishna.pdf
 
ಈ ದಿನ ನಾನು ನಿಮ್ಮೊಂದಿಗೆ ಪಿ.ಡಿ.ಎಫ್. ರೂಪದಲ್ಲಿ ಉಚಿತ ಡೌನ್ಲೋಡ್ ಗೆ ಹಂಚಿಕೊಳ್ಳುತ್ತಿರುವ ನನ್ನ ಮತ್ತೊಂದು ಅನುವಾದಿತ ಪುಸ್ತಕ `ಪುಟ್ಟ ರಾಜಕುಮಾರ'. ವಿಶಿಷ್ಟ ಕಥಾವಸ್ತು ಹೊಂದಿರುವ ಪುಟ್ಟ ರಾಜಕುಮಾರ ಒಂದು ಪ್ರಖ್ಯಾತ ಪುಸ್ತಕ. ಫ್ರೆಂಚ್ ಭಾಷೆಯಲ್ಲಿ (‘ ಪತಿ ಪ್ರಿನ್ಸ್) 1943ರಲ್ಲಿ ಮೊದಲು ಪ್ರಕಟವಾದ ಪುಸ್ತಕ ಈಗಾಗಲೇ ವಿಶ್ವದ 361 ಭಾಷೆಗಳಿಗೆ ಅನುವಾದಗೊಂಡಿದೆ; 140 ಮಿಲಿಯನ್ ಗೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಮಕ್ಕಳಿಗಾಗಿ ಬರೆದ ಪುಸ್ತಕಕ್ಕೆ ಚಿತ್ರಗಳು ಬೇಕಿದ್ದುದರಿಂದ, ತನ್ನ ಕಲ್ಪನೆಗಳ ಸರಳತೆಯನ್ನು ಚಿತ್ರಿಸುವರ್ಯಾರೂ ಸಿಗದಿದ್ದುದರಿಂದ ಚಿತ್ರಗಳನ್ನು ತಾನೇ ಬಿಡಿಸಿದ. ಆದರೆ ಪುಸ್ತಕ ನಿಜವಾಗಿಯೂ ಮಕ್ಕಳ ಪುಸ್ತಕವೆ? ಅಥವಾ ದೊಡ್ಡವರಿಗಾಗಿ ಬರೆದ ಮಕ್ಕಳ ಕತೆಯೆ? ಸೇಂತ್ ಎಕ್ಸೂಪರಿಯೇ ಹೇಳಿದಂತೆ, ‘ಎಲ್ಲಾ ದೊಡ್ಡವರು ಮೊದಲು ಮಕ್ಕಳಾಗಿದ್ದವರೆ. ಆದರೆ, ಅದನ್ನು ನೆನೆಪಿನಲ್ಲಿಟ್ಟುಕೊಳ್ಳುವವರು ಕೆಲವರು ಮಾತ್ರ. ಸುಖಸಂತೋಷದ ಬದುಕಿನ ಅವಶ್ಯಕತೆಗಳು ತೀರಾ ಸರಳವಾದುವು ಹಾಗೂ ನಿಸ್ವಾರ್ಥತೆಯೇ ಸಿರಿಸಂಪತ್ತು ಎಂಬ ಸಂದೇಶವನ್ನುಪುಟ್ಟ ರಾಜಕುಮಾರ ಸಾರುತ್ತಾನೆ.
          ಪುಟ್ಟ ರಾಜಕುಮಾರ ಪುಸ್ತಕವನ್ನು ನಾವು ಮಕ್ಕಳ ಅಥವಾ ದೊಡ್ಡವರ ಪುಸ್ತಕ- ಏನೆಂದೇ ಪರಿಗಣಿಸಿದರೂ ಕತೆಯಲ್ಲಿ ಕೇಂದ್ರಿತವಾಗಿರುವ ಸಾವು, ಕೆಡುಕು ಹಾಗೂ ಹತಾಶೆಯ ಪ್ರತಿಮೆಗಳು ಓದಿದ ನಂತರವೂ ನಮ್ಮನ್ನು ಕಾಡುತ್ತಿರುತ್ತವೆ. ಕತೆಯ ಯಾವುದೇ ಪಾತ್ರವೂ ಸಂತೋಷವಾಗಿಲ್ಲ.  ಸೇಂತ್-ಎಕ್ಸ್, ಒಂಟಿತನ ಕಾಡಲು ನಾವು ಒಂಟಿಯಾಗಿರಬೇಕಿಲ್ಲ, ಇತರರ ನಡುವೆಯೂ ನಮ್ಮನ್ನು ಒಂಟಿತನ ಕಾಡುತ್ತದೆ ಎಂಬುದನ್ನು ಒತ್ತಿ ಹೇಳುತ್ತಾರೆ. ಮನುಷ್ಯ ಸಂಪರ್ಕ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ರೊಯ್ಯೆಂದು ಹಾದು ಹೋಗುವ `ಎಕ್ಸ್ಪ್ರೆಸ್ ಟ್ರೈನಿನ' ಹಾಗೆ ಕ್ಷಣಿಕವಾದದ್ದು. ಕೊನೆಗೆ ಯಾರನ್ನಾದರೂ ಗೆಳೆಯರನ್ನಾಗಿ ಮಾಡಿಕೊಂಡ ನಂತರವೂ ಪುಟ್ಟ ರಾಜಕುಮಾರ ಹೊರಡಲೇಬೇಕಾಗುತ್ತದೆ. ನರಿಯಂತಹ ಪಾತ್ರ ಸಾಂಗತ್ಯಕ್ಕಾಗಿ ಹತಾಶತೆಯಿಂದ ತನ್ನನ್ನು ತಾನೇ `ಪಳಗಿಸಿಕೊಳ್ಳಲು' ಮುಂದಾಗುತ್ತದೆ.
          ಮಕ್ಕಳು ಯಶಸ್ವಿಯಾಗುವ ಹಲವಾರು ಸನ್ನಿವೇಶಗಳಲ್ಲಿ ದೊಡ್ಡವರು ಸೋಲುತ್ತಾರೆ. ಪ್ರಪಂಚದಲ್ಲಿನ ಎಲ್ಲ ಕೆಡುಕಿಗೂ ದೊಡ್ಡವರೇ ಕಾರಣ- ಅದು ನಕ್ಷತ್ರಗಳನ್ನು ಹೊಂದುವುದಾಗಬಹುದು, ಕುಡುಕರಾಗುವುದಾಗಬಹುದು, ಇಲಿಗಳಿಗೆ ಮರಣದಂಡನೆ ವಿಧಿಸುವುದಾಗಬಹುದು ಅಥವಾ `ಕೆಡಕನ್ನುಂಟುಮಾಡುವ' ಆನೆಹುಣಿಸೆ ಮರಗಳನ್ನು ಬೆಳೆಯಲು ಬಿಡುವುದಾಗಬಹುದು. ದೊಡ್ಡವರು ತಮ್ಮ ಹೃದಯವಂತಿಕೆಯಿಂದ ಜಗತ್ತನ್ನು ನೋಡಲು ಸಾಧ್ಯವಾಗದೆ ಅಂಕಿಅಂಶಗಳ ಮೂಲಕ ನೋಡುವುದು ಅವರನ್ನು ಬಲವಂತದ ಒಂಟಿತನಕ್ಕೆ ದೂಡುತ್ತದೆ. ಪುಟ್ಟ ರಾಜಕುಮಾರ ತನ್ನ ಕ್ಷುದ್ರಗ್ರಹದಲ್ಲಿ  ಒಬ್ಬನೇ ಇದ್ದರೂ ಅವನಿಗೆ ತಾನು ಒಬ್ಬಂಟಿ ಎನ್ನಿಸಿರುವುದೇ ಇಲ್ಲ. ಆದರೆ, ಎಂದು ದೊಡ್ಡವರ ಜಗತ್ತಿಗೆ ಕಾಲಿಡುತ್ತಾನೆಯೋ ಅಂದೇ ಅವನಿಗೆ ಒಂಟಿತನ ಕಾಡತೊಡಗುತ್ತದೆ.
          ಆನೆಹುಣಿಸೆ ಮರಗಳ ಮೂಲಕ ಸೇಂತ್-ಎಕ್ಸೂಪರಿ ನಾತ್ಸಿಗಳ ದೌರ್ಜನ್ಯವನ್ನು ಸೂಚ್ಯವಾಗಿ ತೋರಿಸುತ್ತಾನೆಂದು ಕೆಲವು ವಿಮರ್ಶಕರು ಹೇಳುತ್ತಾರೆ. ತಮ್ಮ ಸೋಮಾರಿತನದಿಂದ ಆನೆಹುಣಿಸೆ ಮರಗಳನ್ನು ಬೆಳೆಯಲು ಬಿಡುವುದರಿಂದಾಗುವ ಅನಾಹುತಗಳಿಗೆ ಅವರೇ ಹೊಣೆಗಾರರಾಗಬೇಕೆನ್ನುವ ಪುಟ್ಟ ರಾಜಕುಮಾರ ತಾನೆಂದೂ ಸೋಮಾರಿಯಲ್ಲ. ಕೆಟ್ಟ ಬೀಜದ ಸಸಿಗಳನ್ನು ಕಿತ್ತೆಸೆದು ತನ್ನ ಪುಟ್ಟ ಗ್ರಹವನ್ನು ಸ್ವಚ್ಛವಾಗಿಟ್ಟುಕೊಂಡಿರುತ್ತಾನೆ.
          ಭರವಸೆ, ಸಾಂತ್ವನ ಹಾಗೂ ಪ್ರೀತಿಯ ಸಂದೇಶವನ್ನು ಸಾರಲು ಯತ್ನಿಸುವ ಸೇಂತ್-ಎಕ್ಸೂಪರಿಯ ಪ್ರಯತ್ನವೇ ಪುಸ್ತಕದ ಜೀವಾಳ. ಗುಲಾಬಿಯ ಬಗೆಗಿನ ರಾಜಕುಮಾರನ ಅನನ್ಯ ಪ್ರೇಮ ಆತನನ್ನು ಬದುಕಿನ ಅದೃಶ್ಯ ಸೌಂದರ್ಯವನ್ನು ಕಾಣುವಂತೆ ಮಾಡುತ್ತದೆ. ತನ್ನ ಪ್ರೀತಿಯಿಂದ ತನ್ನ ಅಸ್ತಿತ್ವದ ನಿರಾಕಾರ ಸತ್ಯವನ್ನು ಕಾಣುತ್ತಾನೆ. ಸತ್ಯವನ್ನು ಆತ ಕಣ್ಣಿಂದ ಕಾಣುವುದಿಲ್ಲ, ಬದಲಿಗೆ ಹೃದಯದಿಂದ ಕಾಣುತ್ತಾನೆ. ಕತೆಯಲ್ಲಿನ ಪೈಲಟ್ ಹಾಗೂ ಪುಟ್ಟರಾಜಕುಮಾರ ಇಚ್ಛಾ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತಾರೆ- ಕಾಗದದ ಮೇಲಿನ ಚಿತ್ರಗಳು ಜೀವ ಪಡೆಯುತ್ತವೆ ಹಾಗೂ ಏನೂ ಇಲ್ಲದ ಮರುಭೂಮಿಯಲ್ಲಿ ನೀರಿನ ಬಾವಿ ಕಾಣಿಸಿಕೊಳ್ಳುತ್ತದೆ. ಅವರ ಪ್ರಯಾಣದಲ್ಲಿ ಸತ್ಯದ ಮುಗ್ಧತೆ ಜ್ಞಾನೋದಯದ ಬೆಳಕು ಕಾಣತೊಡಗುತ್ತದೆ.
          ಸ್ವತಃ ಸೇಂತ್-ಎಕ್ಸೂಪರಿಯೇ, ` ಪುಸ್ತಕದಲ್ಲಿನ ಚಿತ್ರಗಳು ಬಾಲ್ಯದ ಮುಗ್ಧತೆಯನ್ನು ಸೆರೆಹಿಡಿಯಲು ಯತ್ನಿಸಿವೆ, ಪಠ್ಯದಷ್ಟೇ ಪ್ರಾಮುಖ್ಯತೆ ಚಿತ್ರಗಳಿಗಿವೆ' ಎನ್ನುತ್ತಾನೆ. ಕತೆಯಲ್ಲಿನ ವೃತ್ತಾಂತಕಾರ ತನ್ನ ಮಾತುಗಳಿಗಿಂತ ಚಿತ್ರಗಳೇ ಉತ್ತಮವಾಗಿ ಮಾತನಾಡುತ್ತವೆ ಎನ್ನುತ್ತಾನೆ. ಅಲ್ಲದೆ ಆತ ಮಕ್ಕಳ ಹಾಗೂ ದೊಡ್ಡವರ ಜಗತ್ತುಗಳು ಬೇರೆ ಬೇರೆ ಎಂದೂ ಗುರುತಿಸುತ್ತಾನೆ. ಮಕ್ಕಳ ಕಲ್ಪನಾಲೋಕವನ್ನು ಬೇಧಿಸಲು ಹಾಗೂ ಅದನ್ನು ಅರ್ಥೈಸಿಕೊಳ್ಳಲು ದೊಡ್ಡವರು ಪ್ರಯತ್ನಿಸುವುದೇ ಇಲ್ಲ. ದೊಡ್ಡವರ ಕೆಲಸಕಾರ್ಯಗಳೆಲ್ಲಾ ಅವರಿಗೆ `ಬಹಳ ಮುಖ್ಯವಾದ ವಿಚಾರಗಳು'. ಅವರು ಎಲ್ಲವನ್ನೂ ಅಂಕಿಸಂಖ್ಯೆಗಳ ಮೂಲಕ ಹಾಗೂ ಹಣದ ಮೌಲ್ಯದ ಮೂಲಕವೇ ನೋಡಲು ಪ್ರಯತ್ನಿಸುತ್ತಾರೆ. ಆದ್ದರಿಂದಲೇ ಲೇಖಕನಾದ ಸೇಂತ್-ಎಕ್ಸೂಪರಿ, `ಎಲ್ಲಾ ದೊಡ್ಡವರು ಮೊದಲು ಮಕ್ಕಳಾಗಿದ್ದವರೆ. ಆದರೆ ಅದನ್ನು ನೆನಪಿನಲ್ಲಿಟ್ಟುಕೊಳ್ಳುವವರು ಕೆಲವರು ಮಾತ್ರ; ಎಂದಿದ್ದಾನೆ.
ಆಂತ್ವಾನ್ ಸೇಂತ್-ಎಕ್ಸೂಪರಿ
          ಆಂತ್ವಾನ್ ಸೇಂತ್-ಎಕ್ಸೂಪರಿ (29.6.1900 - 31.7.1944) ಉತ್ತಮ ಬರಹಗಾರನಾಗಿರುವಂತೆ ಅತ್ಯುತ್ತಮ ಪೈಲಟ್ ಸಹ ಆಗಿದ್ದನು. ಫ್ರಾನ್ಸ್ನವನಾದ ಈತ ಸಾಹಸ ಮತ್ತು ಅಪಾಂವನ್ನು ಕವಿದೃಷ್ಟಿಯಲ್ಲಿ ಕಂಡವನು. ಆದರೆ ಆತ ಪೈಲಟ್ ಆಗಬೇಕೆಂದುಕೊಂಡಿದ್ದವನಲ್ಲ. ಮೊದಲ ವಿಶ್ವಯುದ್ಧದ ಸಮಯದಲ್ಲಿ ಯುವಕನಾಗಿದ್ದ ಈತನನ್ನು ಮಿಲಿಟರಿಗೆ ಸೇರುವಂತೆ ಆದೇಶಿಸಿ ಅಲ್ಲಿ ವಾಯುಪಡೆಗೆ ಸೇವೆ ಸಲ್ಲಿಸುವಂತೆ ಹೇಳಲಾಯಿತು. ಅಲ್ಲಿ ವಿಮಾನ ಮತ್ತು ವಿಮಾನಚಾಲನೆಯಲ್ಲಿ ಮೂಡಿದ ಆಸಕ್ತಿ ಅದನ್ನೇ ಆತನ ಬದುಕಾಗುವಂತೆ ಮಾಡಿತು.
          ವಿಮಾನಚಾಲನೆಯಲ್ಲಿ ಸೇಂಟ್-ಎಕ್ಸ್ ಒಬ್ಬ ಹೀರೋ ಆಗಿದ್ದ. ಆಫ್ರಿಕಾದ ಕಷ್ಟಕರ ಹಾಗೂ ಅಪಾಯಕರ ಪ್ರದೇಶಗಳಲ್ಲೂ ಆತನ ಸಾಹಸಮಯ ವಿಮಾನಚಾಲನೆ ಆತನ ಸಹ-ಪೈಲಟ್ಗಳೂ ಸಹ ಬೆರಗಾಗುವ ಹಾಗಿತ್ತು. 1929ರಲ್ಲಿ ಅತ ಟೌಲೋಸ್ನಲ್ಲಿನ ಕಾಂಪೇನಿ ಲೇಟೆಕೋರೆ ಸೇರಿಕೊಂಡು ವಾಯುವ್ಯ ಆಫ್ರಿಕ, ದಕ್ಷಿಣ ಅಟ್ಲಾಂಟಿಕ್ ಮತ್ತು ದಕ್ಷಿಣ ಅಮೆರಿಕಗಳಲ್ಲಿ ವಿಮಾನ ಅಂಚೆಸೇವೆಯಲ್ಲಿ ತೊಡಗಿದ. ಆಗ ಮೆರಿಟರೇನಿಯನ್ ದಾಟಿದಲ್ಲಿ ಎಲ್ಲವೂ ಶತ್ರುಪ್ರದೇಶವೇ. ದಾರಿಯಲ್ಲಿನ ಮೊರೊಕ್ಕೊ, ರಿಯೋ ಡೆ ಓರೋ ಮತ್ತು ಮಾರಿಷಿಯಾನಿಯಾಗಳಲ್ಲೆಲ್ಲ ಅಂಚೆಚೀಲ ತಲುಪಿಸುವ/ ಸಂಗ್ರಹಿಸುವ ಕಾರ್ಯ ಅಪಾಯಕಾರಿಯಾಗಿತ್ತು. ಈತನ ಸಾಹಸ ಮನೋಭಾವವನ್ನು ಕಂಡು ಆತನನ್ನು ಮಾರಿಷಿಯಾನಿಯದಲ್ಲಿನ ಶತ್ರುಗಳ ನಡುವಿನ ಕ್ಯಾಂಪ್ ಜ್ಯೂಬಿಗೆ ವರ್ಗಾಯಿಸಲಾಯಿತು. ಇಲ್ಲಿ ಆತನ ಕೆಲಸವಿಷ್ಟೆ: ಮರಳುಗಾಡಿನಲ್ಲಿ ಬಿದ್ದಿರುವ ಪೈಲಟ್ಗಳನ್ನು ನೂರಾರು ಕಿಲೋಮೀಟರ್ ವಿಸ್ತಾರದ ಪ್ರದೇಶದಲ್ಲಿ ಹುಡುಕಿ ಎರಡು ದಿನಗಳಲ್ಲಿ ರಕ್ಷಿಸಿ ಕ್ಯಾಂಪಿಗೆ ತರಬೇಕು. ಇಲ್ಲದಿದ್ದಲ್ಲಿ ಪೈಲಟ್ಗಳು ಶತ್ರುಗಳಿಂದ ಬದುಕಿ ಉಳಿಯುತ್ತಿರಲಿಲ್ಲ.
          ಕ್ಯಾಂಪ್ನಲ್ಲಿನ ತನ್ನ ಬದುಕಿನ ಬಗ್ಗೆ 1927ರಲ್ಲಿ ಒಮ್ಮೆ ತನ್ನ ತಾಯಿಗೆ ಪತ್ರ ಬರೆದಿದ್ದ: ‘ಆಫ್ರಿಕಾದ ದುರ್ಗಮ ಪ್ರದೇಶದಲ್ಲಿ, ಸ್ಪ್ಯಾನಿಷ್ ಸಹಾರಾದ ನಡುವೆ ನನ್ನದು ಎಂತಹ ಸಂನ್ಯಾಸಿಯ ಬದುಕು! ಸಮುದ್ರ ತೀರದಲ್ಲಿನ ಕೋಟೆ, ಪಾಳು ಮನೆ - ಇಷ್ಟೇ ನನ್ನ ಸುತ್ತಮುತ್ತ. ಎಂಟು ದಿನಕ್ಕೊಮ್ಮೆ ಒಂದು ವಿಮಾನ ಬಂದುಹೋಗುತ್ತದೆ. ಎಂಟುದಿನಗಳ ನಡುವೆ, ಬರೇ ನಿಶ್ಶಬ್ದ ..........’
          1940ರಲ್ಲಿ ಫ್ರಾನ್ಸ್ ಪತನದ ನಂತರ ಉತ್ತರ ಅಮೆರಿಕಕ್ಕೆ ತಪ್ಪಿಸಿಕೊಂಡು ಹೋದ ಸೇಂತ್- ಎಕ್ಸ್ 1943ರಲ್ಲಿ ಉತ್ತರ ಆಫ್ರಿಕಾದ ವಾಯುಪಡೆಗೆ ಸೇರಿಕೊಂಡ. ‘ಪುಟ್ಟ ರಾಜಕುಮಾರಪ್ರಕಟಗೊಂಡ ಮರುವರ್ಷ, ಅಂದರೆ 1944 ಸೇಂತ್ ಎಕ್ಸೂಪರಿ ಇದ್ದ ವಿಮಾನ ಕಣ್ಮರೆಯಾಯಿತು. ಎಕ್ಸೂಪರಿ ಸತ್ತ ಅರವತ್ತು ವರ್ಷಗಳ ನಂತರ 2004ರಲ್ಲಿ ಮೆಡಿಟರೇನಿಯನ್ ಸಮುದ್ರದ ಮಾರ್ಸೀಲ್ ತೀರದ ಬಳಿ ಆತನ ವಿಮಾನದ ಅವಶೇಷಗಳ ಸಿಕ್ಕಿವೆ. 1998ರಲ್ಲೇ ಮೀನುಗಾರರಿಗೆ ಸೇಂತ್- ಎಕ್ಸೂಪರಿಯ ಹೆಂಡತಿಯ ಹೆಸರು ಕೆತ್ತಿದ್ದ ಕಡಗವೊಂದು ಸಿಕ್ಕಿತ್ತು. ಆತನ ವಿಮಾನದ ಮೇಲೆ ಯಾವುದೇ ಬಂದೂಕದಿಂದ ಗುಂಡು ಹೊಡೆದ ಗುರುತುಗಳಿರಲಿಲ್ಲ. ಸೇಂತ್ ಶತ್ರುದಾಳಿಗೆ ಬಲಿಯಾದನೋ ಅಥವಾ ಅವಘಡಕ್ಕೀಡಾದನೋ ತಿಳಿದಿಲ್ಲ.
ಇಂದು ಜಗತ್ತಿನಲ್ಲಿ ಪುಟ್ಟ ರಾಜಕುಮಾರ ಕೃತಿಯ ಎಲ್ಲ ಭಾಷೆಗಳ ಆವೃತ್ತಿಗಳನ್ನು ಯೂರೋಪಿನಲ್ಲಿ ಬಹಳಷ್ಟು ಜನ ಸಂಗ್ರಹಿಸುತ್ತಿದ್ದಾರೆ. ಕೆಲವರು ಅದೇ ಪುಸ್ತಕದ್ದೇ ಎಲ್ಲಾ ಭಾಷೆಗಳ ಗ್ರಂಥಾಲಯವನ್ನು ಹೊಂದಿದ್ದಾರೆ. ನನ್ನ ಕೃತಿ ಪ್ರಕಟವಾದ ಮೇಲೆ ಬಹಳಷ್ಟು ಜನ ನನ್ನ ಬ್ಲಾಗ್ ನ ಮೂಲಕ ಅದನ್ನು ತಿಳಿದು ನನ್ನಿಂದ ತರಿಸಿಕೊಂಡಿದ್ದಾರೆ.
                                                                                                 ಡಾ.ಜೆ.ಬಾಲಕೃಷ್ಣ

https://archive.org/download/puttarajakumarajbalakrishna/Putta%20Rajakumara-%20J%20Balakrishna.pdf