Monday, April 06, 2020

ನನ್ನ `ಮಳೆಬಿಲ್ಲ ನೆರಳು' ವಿಜ್ಞಾನ ಲೇಖನಗಳ ಸಂಕಲನದ ಪಿ.ಡಿ.ಎಫ್. ಡೌನ್ ಲೋಡ್ ಲಭ್ಯವಿದೆ

2010ರಲ್ಲಿ ಪ್ರಕಟವಾದ ನನ್ನ `ಮಳೆಬಿಲ್ಲ ನೆರಳು' ವಿಜ್ಞಾನ ಲೇಖನಗಳ ಸಂಕಲನದ ಪಿ.ಡಿ.ಎಫ್. ಡೌನ್ ಲೋಡ್  ಲಭ್ಯವಿದೆ. ಈ ಕೃತಿಗೆ 2011ರ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ `ಶ್ರೇಷ್ಠ ಕೃತಿ' ಪ್ರಶಸ್ತಿ ಲಭಿಸಿದೆ.

ಮುನ್ನುಡಿಯಿಂದ

ಮೇಲುನೋಟಕ್ಕೆ ವಿಜ್ಞಾನದ ಲೇಖನಗಳು ಎಂಬಂತೆ ತೋರಿದರೂ ಸೂಕ್ಷ್ಮ ಮತ್ತು ಸಮಗ್ರ, ವೈಯುಕ್ತಿಕ ಮತ್ತು ಸಾಮಾಜಿಕ ಸ್ಥಳೀಯ ಮತ್ತು ಜಾಗತಿಕ ಎಂಬ ಧ್ರುವೀಕರಣವಿಲ್ಲದ ಅಖಂಡ ಗ್ರಹಿಕೆ ಮತ್ತು ಸಂಕೀರ್ಣ ನೇಯ್ಗೆಯ ಮೂಲಕ ಕೇವಲ ಮಾಹಿತಿಯ ತಂತ್ರಜ್ಞಾನವಾಗುಳಿಯದೆ, ಸಂಸ್ಕøತಿ ಚಿಂತನೆಯ ನಿಜೋದಯವಾಗಿ ಸ್ಥಿತ್ಯಂತರಗೊಂಡಿರುವ ಇಲ್ಲಿನ ಬರೆಹಗಳನ್ನು `ನಿರಂಕುಶ ಸಾಹಿತ್ಯ’ವೆಂದೇ ಕರೆಯಲಿಚ್ಛಿಸುತ್ತೇನೆ.

ವಿಜ್ಞಾನ ಸಾಹಿತ್ಯ- ವಿಚಾರ ಸಾಹಿತ್ಯ- ಪ್ರಬಂಧ ಸಾಹಿತ್ಯ- ಅಂಕಣ ಬರೆಹಗಳೆಂಬ ಜಾತಿಪದ್ಧತಿಯನ್ನು ಹೋಲುವ ವಿಭಾಗ ಕ್ರಮ ಮತ್ತು ಗುಂಪುಗಾರಿಕೆಯಲ್ಲಿ ಕಳೆದುಹೋಗಿರುವವರ ಮಧ್ಯೆ, ಇವನ್ನೆಲ್ಲ ಮೀರಿದಂತೆ ಸುಲಲಿತವಾದ `ತೇಜಸ್ವಿ’ ಶೈಲಿಯಲ್ಲಿ ಕನ್ನಡದ ಓದನ್ನು ರೂಪಿಸುತ್ತಿರುವ ಗೆಳೆಯ ಬಾಲು ಅವರ ಬಹುತೇಕ ಲೇಖನಗಳು ಮೂಡಲಸೀಮೆಯ ಮುಂಗೋಳಿಯ ಕೂಗಿನಂತೆ, ಮುಂಬೆಳಕಿನ ಕಿರಣಗಳಂತೆ ಪ್ರಕಟಗೊಂಡಿರುವುದನ್ನು ಗಮನಿಸಬೇಕಾಗಿದೆ. ಕೃಷಿ ಋಷಿ ಫುಕುವೊಕ ಮತ್ತು ಸ್ಟೀಫನ್ ಹಾಕಿಂಗ್ ಅವರನ್ನು ಕನ್ನಡಕ್ಕೆ ಮೊದಲು ಪರಿಚಯಿಸಿದ ಬಾಲು ಬಹುಮುಖ ಪ್ರತಿಭಾವಂತ: ಕೃಷಿವಿಜ್ಞಾನದ ವಿದ್ಯಾರ್ಥಿ, ಕವಿ, ಕತೆಗಾರ, ಸಂಸ್ಕøತಿ ಚಿಂತಕ, ಅನುವಾದಕ ಮತ್ತು ಚಾರಣಿಗ.

ಮಾನವ ಕೇಂದ್ರಿತವಾದ ಎಲ್ಲ ಬಗೆಯ ರಚನೆಗಳನ್ನು ನಿರಾಕರಿಸುತ್ತಾ, ಉಳ್ಳವರು ಹುಟ್ಟುಹಾಕಿದ ಸುಳ್ಳು ಸೃಷ್ಟಿಯ “ಸಚರಾಚರವೆಲ್ಲ” ರಚನೆಗೆ ಬಾರದಂದು ನಮ್ಮನ್ನು ಕರೆದೊಯ್ಯುವ ಇಲ್ಲಿನ ಬರೆಹಗಳು ಅಪರಿಮಿತದ ಕತ್ತಲೆಯೊಳಗೆ ಈಜುತ್ತಿರುವ ವಿಪರೀತದ ಬೆಳಕಿನ ಹುಳುಗಳಾಗಿ ಕಾಣುತ್ತವೆ.                                                                                                                                                                          ಪ್ರೊ. ವಿ.ಚಂದ್ರಶೇಖರ ನಂಗಲಿಪ್ರತಿ ಪ್ರಬಂಧದಲ್ಲಿಯೂ ಓದುಗನನ್ನು ತನ್ನದೆ ಅವಲೋಕನೆಯತ್ತ ನೂಕಿ, ಆ ಪ್ರಬಂಧ ರಚನೆಯಲ್ಲಿಯೇ ತಾನೂ ಒಂದು ಪಾತ್ರವಾಗುವಂತೆ ಪ್ರೇರೇಪಿಸುತ್ತಾರೆ. ಇದು ಬಾಲು ಅವರ ಲೇಖನಗಳ ಅನನ್ಯತೆ.  ಬಹುಶಃ ಈ ವಿಭಿನ್ನತೆಗೆ ಕಾರಣ- ‘ವಿಜ್ಞಾನದಲ್ಲಿ ರಹಸ್ಯ ಬಗೆದಷ್ಟೂ ನಿಗೂಢ ಹೆಚ್ಚುತ್ತಾ ಹೋಗುತ್ತದೆ. ಆ ನಿಗೂಢದ ಬೆಡಗೇ ಜೀವನ ಪ್ರೀತಿಯ ಮೂಲ ಸೆಲೆ’ ಎಂಬ ಅವರ ನಂಬಿಕೆ. ಈ ನಂಬಿಕೆಯಿಂದಲೇ ಬರೆಯುವ ಅವರು ತಮ್ಮೆಲ್ಲ ಲೇಖನಗಳಲ್ಲೂ, ವಿಜ್ಞಾನವನ್ನು ಓದುಗನ ಆಂತರ್ಯದ ಸಮೀಪಕ್ಕೆ ತಂದಿಡುವ ಕುಶಲತೆಯನ್ನು ಅಳವಡಿಸಿ ಕೊಂಡಿರುವುದು ವಿಶೇಷ.

ಬಾಲು ಅವರನ್ನು ಕಾಡುವ ವಿಜ್ಞಾನದ ವಿಷಯಗಳು ವೈವಿಧ್ಯಮಯವೂ ವಿಸ್ತಾರವೂ ಆಗಿದ್ದು, ಅವುಗಳನ್ನು ಅವರು ಪರಿಶೋಧಿಸುವ ಆಳವೂ ಸಹ ಇಂಪ್ರೆಸಿವ್ ಅಗಿದೆ. ಹಾಗೆಂದೆ ಅವರು ಮನುಕುಲದ ಮುತ್ತಾತನ ಮುತ್ತಾತನ ....ಮುತ್ತಾತನ ಜೀವನ ಹೇಗಿತ್ತು ಎಂದು ಪರಿಚಯಿಸುವಷ್ಟೇ ಗಾಢವಾಗಿ, ಓದುಗನು ತಾನು ರಾತ್ರಿ ಕಂಡ ಕನಸಿನ ಅರ್ಥವನ್ನು ವೈಜ್ಞಾನಿಕ ಹಿನ್ನೆಲೆಯಿಂದ ತಾನೆ ಹುಡುಕಿಕೊಳ್ಳುವಂತೆ ಪ್ರೇರೇಪಿಸುತ್ತಾರೆ.

                                                                                                  ಡಾ. ಗಣೇಶಯ್ಯ, ಕೆ.ಎನ್.ಕೃತಿಯಲ್ಲಿನ ಲೇಖನಗಳು

1. ಮಳೆಬಿಲ್ಲ ನೆರಳ ಅನ್ವೇಷಣೆಯೆ?

2. ಕನಸೆಂಬ ಮಾಯಾಲೋಕ

3. ನಿಗೂಢಗಳನ್ನು ಉಳಿಸಿ ಹೋದ ನಿಯಾಂಡರ್ತಲ್ ಮಾನವ

4. ಮನಸ್ಸಿಗೇ ಮೂಗುದಾರ - ಒಂದು ಜಾಗತಿಕ ಪಿತೂರಿ

5. ಕಾಲಗರ್ಭದ ಕತ್ತಲ ಸಾಮ್ರಾಜ್ಯದ ಅದ್ಭುತ ಮೀನು: ಸೀಲಾಕ್ಯಾಂತ್

6. ಅಣ್ವಸ್ತ್ರ ಯುದ್ಧ - ಮನುಕುಲದ ಚರಮಗೀತೆ?

7. ಜೇಡ

8. ಕಾಮ’ನಬಿಲ್ಲಿನ ಅನಾವರಣ

9. ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ ‘ಅಮರ’ ಕತೆ

10. ಅನ್ಯಗ್ರಹ ಜೀವಿಗಳಿವೆಯೆ?

11.ಮರಗಳಿಗೂ ಮನಸ್ಸಿದೆಯೆ?

12. ಡಾಲ್ಫಿನ್: ಮಾನವನ `ಬೌದ್ಧಿಕ’ ಸಮಜೀವಿ

13. ಮತ್ತೆ ಹುಟ್ಟಿ ಬರಲಿದೆಯೆ ವೂಲಿ ಮ್ಯಾಮತ್?

14. ಪ್ರಾಣಿಗಳು ಭೂಕಂಪದ ಮುನ್ಸೂಚನೆ ನೀಡಬಲ್ಲವೆ?

15. ಗಾಂಧಿ ಮತ್ತು ಪರಿಸರ ಪ್ರಜ್ಞೆ

16. ಕೃಷಿ ಋಷಿ ಫುಕುವೊಕ

17. ಆಧುನಿಕ ಕೃಷಿ ಮತ್ತು ಪರಿಸರ


ಡೌನ್ ಲೋಡ್ ಲಿಂಕ್ ಇಲ್ಲಿದೆ:
https://archive.org/download/malebillaneralujbalakrishna.pdf/Malebilla%20Neralu%20-J%20Balakrishna.pdf.pdf

No comments: