ಈ ವಾರದ (4/6/2020) `ಸುಧಾ'ದಲ್ಲಿ 1918ರ ಸ್ಪ್ಯಾನಿಶ್ ಫ್ಲೂ ಮತ್ತು
ವ್ಯಂಗ್ಯಚಿತ್ರಗಳು ಲೇಖನ ಪ್ರಕಟವಾಗಿದೆ. ಆ ಲೇಖನ ಓದಲು ನನ್ನ ಬ್ಲಾಗ್ `ಅಂತರಗಂಗೆ'ಯಲ್ಲೂ ಲಭ್ಯವಿದೆ.
ಇಂದು ಕೋವಿಡ್ ಅಥವಾ ಕೊರೊನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಮಾನವ ನಾಗರಿಕತೆಯ ಸಾಮಾಜಿಕ ಹಾಗೂ ಆರ್ಥಿಕ ಸಂರಚನೆಗಳ ದಿಕ್ಕುಗೆಡಿಸಿದೆ. ತಾನು ಅತ್ಯಂತ ಬುದ್ಧಿವಂತ ಹಾಗೂ ಪ್ರಕೃತಿಯನ್ನೇ ಜಯಿಸಿರುವೆನೆಂಬ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ತನ್ನನ್ನು ಮೀರಿಸುವವರು ಯಾರೂ ಇಲ್ಲವೆಂಬ ಮಾನವನ ಅಹಂಗೆ ಬಲವಾದ ಪೆಟ್ಟು ಬಿದ್ದಿದೆ. ಆದರೆ ಈ ರೀತಿ ರೋಗಾಣುಗಳು ಮಾನವನ ತಂಡೋಪತಂಡ ಸಾವನ್ನು ಅರಸಿಬಂದಿರುವುದು ಇದೇ ಮೊದಲಲ್ಲ. ಮಾನವ ತನ್ನ ಚರಿತ್ರೆಯನ್ನು ದಾಖಲಿಸಲು ಆರಂಭಿಸಿದಂದಿನಿಂದ, ಅಂದರೆ ಸುಮಾರು 2000 ವರ್ಷಗಳಿಂದೀಚೆಗೆ ಈ ರೀತಿಯ ರೋಗಗಳಿಗೆ ಬಲಿಯಾಗುತ್ತ ಬಂದಿರುವುದನ್ನು ಮಾನವ ದಾಖಲಿಸುತ್ತಾ ಬಂದಿದ್ದಾನೆ.
6ನೇ ಶತಮಾನದಲ್ಲಿಯೇ ಈ ರೀತಿಯ ರೋಗವೊಂದು ಕಾಡಿತ್ತೆಂದು ದಾಖಲೆಗಳು ಹೇಳುತ್ತವೆ. ಅದನ್ನು `ಜಸ್ಟೀನಿಯನ್ ಪ್ಲೇಗ್’ ಎನ್ನುತ್ತಾರೆ ಹಾಗೂ ಅದು ಏಷಿಯಾ, ಉತ್ತರ ಆಫ್ರಿಕಾ, ಅರೇಬಿಯಾ ಮತ್ತು ಯೂರೋಪುಗಳಿಗೆ ಹರಡಿ 30ರಿಂದ 50 ದಶಲಕ್ಷ ಜನರನ್ನು (ಆಗಿನ ಜನಸಂಖ್ಯೆಯ ಅರ್ಧದಷ್ಟು) ಕೊಂದುಹಾಕಿತ್ತಂತೆ.
ಯೂರೋಪನ್ನು 1347ರಲ್ಲಿ ಕಾಡಿದ `ಬ್ಲಾಕ್ ಡೆತ್’ ಅಥವಾ ಮಾರಕ ಪ್ಲೇಗ್ ರೋಗಕ್ಕೆ ಸುಮಾರು 50 ದಶಲಕ್ಷ ಜನ ಪ್ರಾಣ ಬಿಟ್ಟಿದ್ದರು. 80 ದಶಲಕ್ಷಗಳಷ್ಟಿದ್ದ ಯೂರೋಪಿನ ಜನಸಂಖ್ಯೆ 30 ದಶಲಕ್ಷಗಳಿಗೆ ಇಳಿಯಿತು! ಈ ರೀತಿಯ ಒಂದು `ಘಟನೆ’ಗೆ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಜನ ಪ್ರಾಣ ತೆತ್ತದ್ದು ಮಾನವನ ಚರಿತ್ರೆಯಲ್ಲೇ ಇರಲಿಲ್ಲ. ಸತ್ತವರನ್ನು ಹೂಳಲು ಬದುಕಿರುವವರ ಸಂಖ್ಯೆ ಸಾಕಾಗುತ್ತಿರಲಿಲ್ಲವಂತೆ! ಈ ಭಯಾನಕ ಪ್ಲೇಗ್ ಉಂಟಾಗಲು ಕಾರಣವೇನೆಂಬುದು ಯಾರಿಗೂ ತಿಳಿದಿಲ್ಲ. ದೇವರ ಶಾಪವೇ ಇದಕ್ಕೆ ಕಾರಣವೆಂದು ಆ ಮಧ್ಯಕಾಲೀನ ಜನ ನಂಬಿದ್ದರು. ಆದರೆ ಆ ಪ್ಲೇಗ್ ಜನಸಾಮಾನ್ಯರು, ರಾಜರು, ಮಂತ್ರಿಗಳು, ಪುರೋಹಿತರು ಎಂಬ ಭೇದ ತೋರದೆ ಎಲ್ಲರನ್ನೂ ಬಲಿತೆಗೆದುಕೊಂಡಿತು.
ಜರ್ಮನ್ ಮಾತನಾಡುವ ಪ್ರದೇಶಗಳಲ್ಲಿ, ರೈನ್ ನದಿಯ ಫ್ರಾನ್ಸ್‍ನಲ್ಲಿ, ಸ್ಪೇನಿನ ಕೆಲವು ಭಾಗಗಳಲ್ಲಿ ಸರ್ಕಾರಗಳು, ಬಿಷಪ್‍ಗಳು, ಪವಿತ್ರ ರೋಮನ್ ದೊರೆಗಳು ಯೆಹೂದಿಗಳೇ ಈ ರೋಗವನ್ನು ಆಹಾರ ಮತ್ತು ನೀರನ್ನು ವಿಷದಿಂದ ಕಲುಷಿತಗೊಳಿಸಿ ಹರಡುತ್ತಿದ್ದಾರೆಂದು ಆರೋಪಿಸಿ ಅವರನ್ನು ಗಂಡು, ಹೆಣ್ಣು, ಮಕ್ಕಳೆನ್ನದೆ ಸಾವಿರಾರು ಸಂಖ್ಯೆಯಲ್ಲಿ ಕೊಂದುಹಾಕಿದರು.
ಈ ರೋಗ ಬಂದವರಿಗೆ ತೊಡೆಸಂದಿ, ಕಂಕುಳು ಹಾಗೂ ಕುತ್ತಿಗೆಗಳಲ್ಲಿ ಗಂಟುಗಳುಂಟಾಗುತ್ತಿದ್ದವು. ಮೈಮೇಲೆಲ್ಲಾ ಕಪ್ಪು ಮಚ್ಚೆಗಳಾಗುತ್ತಿದ್ದವು. ಈ ರೀತಿಯ ಚಿಹ್ನೆಗಳುಂಟಾದ ಕೆಲವೇ ದಿನಗಳಲ್ಲಿ ಜನ ಸಾಯುತ್ತಿದ್ದರು. ದೇವರಿಗೆ ಪ್ರಾರ್ಥನೆ, ಮೆರವಣಿಗೆಗಳನ್ನು ಮಾಡುತ್ತಿದ್ದರು. ರೋಗಿಗಳ ಬಳಿ ಇದ್ದರೆ ತಮಗೂ ಬರುವುದೆಂದು ಜನ ತಮ್ಮ ಅಮ್ಮ, ಅಪ್ಪಂದಿರನ್ನು, ಸಹೋದರ, ಸಹೋದರಿಯರನ್ನು, ಬಂಧುಗಳನ್ನು ಬಿಟ್ಟು ದೂರ ಓಡಿಹೋಗುತ್ತಿದ್ದರು. ಅಂತಹ ಸನ್ನಿವೇಶದಲ್ಲಿಯೇ ಇಟಲಿಯ ಜೇವಾನ್ನಿ ಬೊಕಾಷಿಯೋ ತನ್ನ ಅದ್ವಿತೀಯ ಕೃತಿ `ಡೆಕಮೆರಾನ್’ ಬರೆದದ್ದು. ಆ ಕೃತಿಯ ಪ್ರಾರಂಭದಲ್ಲಿ ಫ್ಲಾರೆನ್ಸ್‍ನಲ್ಲಿ ಜನ ಪ್ಲೇಗ್‍ನಿಂದ ಸಾಯುತ್ತಿರುವಾಗ ಹತ್ತು ಜನ ಯುವಕ ಯುವತಿಯರು ಎಲ್ಲರಿಂದ ದೂರ ಹೋಗಿ ಒಬ್ಬರು ದಿನಕ್ಕೊಂದು ಕತೆಯಂತೆ ಹೇಳುತ್ತಾರೆ. ಆ ಸಂಗ್ರಹವೇ `ಡೆಕಮೆರಾನ್’.
ಪ್ಲೇಗ್‍ಗೆ ಯರ್ಸೀನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾ ಕಾರಣವೆಂದು 1894ರಲ್ಲಿ ಹಾಂಗ್‍ಕಾಂಗ್‍ನಲ್ಲಿ ಕಂಡುಹಿಡಿಯಲಾಯಿತು ಹಾಗೂ ಅವುಗಳನ್ನು ಇಲಿಗಳ ಮೇಲಿನ ಚಿಗಟಗಳು ಹರಡುತ್ತವೆಂಬುದನ್ನು ಸಹ ವಿಜ್ಞಾನಿಗಳು ಕಂಡುಹಿಡಿದರು. ಇಂದಿಗೂ ಈ ರೋಗಕಾರಕ ಬ್ಯಾಕ್ಟೀರಿಯಾ ಸುಮಾರು 200 ಇಲಿಗಳ ಪ್ರಭೇದಗಳಲ್ಲಿ ವಾಸಿಸುತ್ತದೆ. ಪ್ಲೇಗ್ ಇಂದೂ ಸಹ ದಾಳಿ ಮಾಡಬಹುದು. ಆದರೆ ಇಂದಿನ ಆಧುನಿಕ ಆಂಟಿಬಯಾಟಿಕ್ ಅಥವಾ ಜೈವಿಕ ನಿರೋಧಕ ಔಷಧಗಳು ಪ್ಲೇಗನ್ನು ಯಶಸ್ವಿಯಾಗಿ ವಾಸಿಮಾಡಬಲ್ಲವು. ಆದರೆ ಸೂಕ್ಷ್ಮಜೀವಿ ರೋಗಾಣುಗಳು ಉತ್ಪರಿವರ್ತನೆ (ಮ್ಯುಟೇಶನ್) ಹೊಂದಿ ಅಂತಹ ಔಷಧಗಳಿಗೆ ನಿರೋಧಕತೆಯನ್ನು ಪಡೆಯುತ್ತಿವೆ, ಅದು ಬೇರೆ ಮಾತು. ಆದರೆ 14ನೇ ಶತಮಾನದ `ಬ್ಲಾಕ್ ಡೆತ್’ ಬಹುಶಃ ಬುಬೋನಿಕ್, ನ್ಯುಮೋನಿಕ್ ಮತ್ತು ಸೆಪ್ಟಿಸೀಮಿಕ್ ಪ್ಲೇಗ್‍ನಿಂದ ಉಂಟಾಗಿರಬಹುದೆನ್ನುತ್ತಾರೆ.
ಆ `ಬ್ಲಾಕ್ ಡೆತ್’ ಸಮಯದಲ್ಲಿ ಯೂರೋಪಿನಲ್ಲಿ ಸಾವಿನ ದೂತನಿಗೆ ಒಂದು ರೂಪ ಕೊಡಲಾಯಿತು. ಪ್ರತಿಯೊಂದು ಸಂಸ್ಕøತಿ-ಧರ್ಮದಲ್ಲಿಯೂ ಸಾವನ್ನು ಪ್ರತಿನಿಧಿಸಲು ವ್ಯಕ್ತಿರೂಪ ಕೊಟ್ಟಿದ್ದಾರೆ. ಆಗ ಯೂರೋಪಿನಲ್ಲಿ ಜನ್ಮ ತಳೆದದ್ದೇ `ಗ್ರಿಮ್ ರೀಪರ್’; ಗ್ರಿಮ್ ಎಂದರೆ ಕಠಿಣ, ನಿರ್ದಯ, ಕ್ರೂರ ಹಾಗೂ ರೀಪರ್ ಎಂದರೆ ಕೊಯಿಲು ಮಾಡುವವ. ಗ್ರಿಮ್ ರೀಪರ್ ಅಸ್ಥಿಪಂಜರದ ದೇಹ ಹೊಂದಿದ್ದು, ಕಪ್ಪನೆ ಹೊದಿಕೆಯ ವಸ್ತ್ರ ಧರಿಸಿರುತ್ತಾನೆ ಮತ್ತು ಕೈಯಲ್ಲಿ ಉದ್ದನೆ ಕೋಲಿನ ಕುಡುಗೋಲು ಹಿಡಿದಿರುತ್ತಾನೆ. ಗ್ರಿಮ್ ರೀಪರ್ ಆತ್ಮಗಳನ್ನು ಕೊಯಿಲು ಮಾಡುವವನು. ಅಂದಿನಿಂದ ಪಾಶ್ಚಿಮಾತ್ಯ ಸಂಸ್ಕøತಿಯಲ್ಲಿ ಸಾವನ್ನು ಪ್ರತಿನಿಧಿಸಲು ಗ್ರಿಮ್ ರೀಪರ್‍ನ ಚಿತ್ರವನ್ನು ಬಳಸುತ್ತಾರೆ. ಐರ್ಲೆಂಡಿನಲ್ಲಿ 1918ರ ನವೆಂಬರ್ 2ರ ಐರಿಷ್ ವೀಕ್ಲಿ ಇಂಡಿಪೆಂಡೆಂಟ್ ಪತ್ರಿಕೆಯಲ್ಲಿ ಪ್ರಕಟವಾದ ಗಾರ್ಡನ್ ಬ್ರೂಸ್ಟರ್‍ನ ವ್ಯಂಗ್ಯಚಿತ್ರದಲ್ಲಿ ಆಗ ಕಾಡುತ್ತಿದ್ದ `ಸ್ಪ್ಯಾನಿಶ್ ಫ್ಲೂ’ವನ್ನು ಗ್ರಿಮ್ ರೀಪರ್‍ನ ತರಹ ತೋರಿಸಿ ಅವನು ಊರಿನ ಕಡೆಗೆ ಬರುತ್ತಿರುವ ಶತ್ರುವನ್ನಾಗಿ `ದ ಪಾಸಿಂಗ್ ಎನಿಮಿ’ ಎಂಬ ಶೀರ್ಷಿಕೆಯಡಿಯಲ್ಲಿ ತೋರಿಸಿದೆ ಹಾಗೂ ಅವನ ಆತ್ಮಗಳನ್ನು ಕೊಯಿಲು ಮಾಡುವ ಕುಡುಗೋಲಿನ ಮೇಲೆ `ಇನ್‍ಫ್ಲುಯೆಂಜಾ’ ಎಂದು ಬರೆದಿದೆ.
ಚರಿತ್ರೆಯ ಎಲ್ಲ ಘಟ್ಟಗಳನ್ನು ಚರಿತ್ರಕಾರರು ದಾಖಲಿಸುವಂತೆ ವ್ಯಂಗ್ಯಚಿತ್ರಕಾರರು ಸಹ ಆಯಾ ಕಾಲದ ಘಟನೆಗಳನ್ನು ತಮ್ಮದೇ ದೃಷ್ಟಿಕೋನದಿಂದ ದಾಖಲಿಸುತ್ತಾ ಹೋಗುತ್ತಾರೆ. ಇಂದು ಕೊರೋನಾ ಕಾಣಿಸಿಕೊಂಡ ಸಮಯದಲ್ಲಿ ಪ್ರತಿ ದಿನ ಜಗತ್ತಿನಲ್ಲಿ ಸಾವಿರಾರು ವ್ಯಂಗ್ಯಚಿತ್ರಗಳು ಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. 1989ರ ರಷಿಯನ್ ಫ್ಲೂ ಅವಧಿಯ ಸಮಯದಿಂದಲೇ ವ್ಯಂಗ್ಯಚಿತ್ರಗಳು ಪ್ರಕಟವಾಗತೊಡಗಿವೆ.
ಹತ್ತೊಂಭತ್ತನೇ ಶತಮಾನದ ಕೊನೆಯ ಭಾಗದಲ್ಲಿ (1889-90) ಏಷಿಯಾಟಿಕ್ ಫ್ಲೂ ಅಥವಾ ರಷಿಯನ್ ಫ್ಲೂ ಜಗತ್ತಿನಲ್ಲೆಲ್ಲಾ 10 ಲಕ್ಷಕ್ಕೂ ಹೆಚ್ಚಿನ ಜನರನ್ನು ಬಲಿತೆಗೆದುಕೊಂಡಿತ್ತು. ಆಗಿನ ರಷಿಯನ್ ಸಾಮ್ರಾಜ್ಯದ ಬುಖಾರದಲ್ಲಿ ಕಾಣಿಸಿಕೊಂಡ ಈ ಫ್ಲೂ ಆಗಿನ ರೈಲು ರಸ್ತೆಗಳು ಹಾಗೂ ಹಡಗು ದೋಣಿಗಳ ಪ್ರವಾಸದಿಂದಾಗಿ ಕೇವಲ ಆರು ದಿನಗಳಲ್ಲಿ ಯೂರೋಪಿನ 19 ರಾಷ್ಟ್ರಗಳಿಗೆ ಹರಡಿತು. ಆ ಸಮಯದಲ್ಲಿ ಅದು ಸೋಂಕಿನ ಮೂಲಕ ಹರಡುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಹಾಗೂ ಅದರ ಚಿಕಿತ್ಸೆಯ ಬಗ್ಗೆಯೂ ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಸಾಕಷ್ಟು ಚರ್ಚೆ ನಡೆಯಿತು.
1890ರ ಜನವರಿ 12ರ ಫ್ರಾನ್ಸ್‍ನ ಪ್ಯಾರಿಸ್ಸಿನ ವಿನೋದ ಪತ್ರಿಕೆ ‘ಲ ಗ್ರೆಲೊ’ ಪತ್ರಿಕೆಯ ಮುಖಪುಟದಲ್ಲಿ ಪೆಪಿನ್ ಎಡ್ವರ್ಡ್ ಗಿಲೋಮಿನ್‍ರವರ ‘ಎಲ್ಲರೂ ಇನಫ್ಲುಯೆಂಜಾದಿಂದ ನರಳುತ್ತಿದ್ದಾರೆ’ ಎಂಬ ಶೀರ್ಷಿಕೆಯ ಮರದಚ್ಚಿನ ವ್ಯಂಗ್ಯಚಿತ್ರವೊಂದು ಪ್ರಕಟವಾಯಿತು. ಅದರಲ್ಲಿ ಫ್ಲೂನಿಂದ ನರಳುತ್ತಿರುವ ರೋಗಿಯೊಬ್ಬನನ್ನು ವೈದ್ಯನೊಬ್ಬ ಹಿಡಿದುಕೊಂಡು ತನ್ನ ಕೈಯಲ್ಲಿ ಕಾಗದವೊಂದನ್ನು ಹಿಡಿದುಕೊಂಡಿದ್ದಾನೆ. ಅವರ ಮುಂದೆ ಸಾವನ್ನು ಸಂಕೇತಿಸುವ ಮೂರು ಅಸ್ಥಿಪಂಜರಗಳು ಸಂಗೀತ ನುಡಿಸುತ್ತಿವೆ ಹಾಗೂ ಅವರ ಸುತ್ತಲೂ ರಾಜಕಾರಣಿಗಳು, ಔಷಧದ ಕಂಪೆನಿಗಳು ತಮ್ಮ ಮೇಲೆ ಔಷಧಗಳ ಹೆಸರುಗಳನ್ನು (ಕ್ವಿನೈನ್, ಆಂಟಿ ಪೈರಿನ್) ಬರೆದುಕೊಂಡು ನರ್ತಿಸುತ್ತಿದ್ದಾರೆ.
1891ರ ಬ್ರಿಟಿಷ್ ಪತ್ರಿಕೆ `ಪಂಚ್’ನಲ್ಲಿ ಜೆ.ಲೀಚ್‍ರವರು `ರಷಿಯನ್ ಫ್ಲೂ’ನಿಂದ ನರಳುತ್ತಿರುವ ಮಿಸ್ಟರ್ ಪಂಚ್ ಬೆಂಕಿಯ ಮುಂದೆ ಕೂತು ಗಂಜಿ ತಿನ್ನುತ್ತಿರುವ ವ್ಯಂಗ್ಯಚಿತ್ರ ಬರೆದು `ಫ್ಲೂ ಹೊಂದಿದ್ದು ವಿಡಂಬನೆ ಹೊಂದಿರುವುದು ತಮಾಷೆಯಲ್ಲ’ ಎನ್ನುವ ಶೀರ್ಷಿಕೆ ನೀಡಿದ್ದರು.
ನಮ್ಮ ಸ್ಮರಣೆಗೆ ತೀರಾ ಹತ್ತಿರವಾಗಿರುವುದೆಂದರೆ 1918ರಲ್ಲಿ ಇಡೀ ಜಗತ್ತಿನ ಮೇಲೆ ದಾಳಿ ಮಾಡಿದ ಅತಿ ಭಯಾನಕ ವೈರಸ್ ರೋಗ `ಸ್ಪಾನಿಶ್ ಫ್ಲೂ’. ಅದು 50 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತು, ಭಾರತದಲ್ಲಿಯೇ ಸುಮಾರು 20 ಲಕ್ಷ ಜನರು ಆ ಫ್ಲೂಗೆ ಪ್ರಾಣ ತೆತ್ತರು.
ಮೊದಲ ವಿಶ್ವಯುದ್ಧ ಅಂತ್ಯಗೊಳ್ಳುತ್ತಿದ್ದ ಸಮಯವದು. ಈ ಫ್ಲೂನಿಂದಾಗಿ ಉಂಟಾಗುತ್ತಿದ್ದ ಸಾವುನೋವುಗಳನ್ನು ಯುದ್ಧಕಾಲದ ಸೆನ್ಸಾರಿನಿಂದಾಗಿ ಪತ್ರಿಕೆಗಳು ಇಂಗ್ಲೆಂಡ್ ಮತ್ತು ಯೂರೋಪಿನಲ್ಲಿ ಹೆಚ್ಚು ಪ್ರಕಟಿಸುತ್ತಿರಲಿಲ್ಲ. ಆದರೆ ಯುದ್ಧದಲ್ಲಿ ತಟಸ್ಥವಾಗಿದ್ದ ಸ್ಪೇನ್ ತನ್ನಲ್ಲಿ ಫ್ಲೂನಿಂದ ಉಂಟಾದ ಎಲ್ಲ ಸಾವು ನೋವುಗಳನ್ನು ಪ್ರಕಟಿಸುತ್ತಿತ್ತು. ಅಷ್ಟಲ್ಲದೆ ಸ್ಪೇನಿನ ರಾಜ 13ನೇ ಆಲ್ಫಾಂಸೊ ಮತ್ತು ಆತನ ಮಂತ್ರಿ ಮಂಡಲದ ಹಲವರನ್ನು ಈ ಫ್ಲೂ ಕಾಡಿತ್ತು. ಸ್ಪೇನ್ ಮೊದಲ ವಿಶ್ವಯುದ್ಧದಲ್ಲಿ ತಟಸ್ಥವಾಗಿದ್ದರೂ ಅದು ಜರ್ಮನ್ನರ ಪರ ಇದೆಯೆಂಬ ವದಂತಿಗಳಿದ್ದವು. ಬ್ರಿಟಿಷ್ ಮೆಡಿಕಲ್ ಜರ್ನಲ್ ಈ ಫ್ಲೂ ಸ್ಪೇನ್‍ನಲ್ಲಿ ಮೊದಲು ದಾಖಲಾಗಿದೆ ಎಂದು ವರದಿಮಾಡಿ ಅದನ್ನು `ಸ್ಪ್ಯಾನಿಶ್ ಫ್ಲೂ’ ಎಂದು ಕರೆಯಿತು (ಇತ್ತೀಚೆಗೆ ಅಮೆರಿಕದ ಪ್ರೆಸಿಡೆಂಟ್ ಕೊರೊನಾ ವೈರಸ್ ಅನ್ನು `ಚೀನಿ ವೈರಸ್’ ಎಂದು ಕರೆದರು. ಅದನ್ನು ಚೀನಾ ಸಹ ಪ್ರತಿಭಟಿಸಿದೆ). ಅದನ್ನು ನಿರಾಕರಿಸಿ ಸ್ಪೇನ್‍ನವರು ಪ್ರತಿಭಟಿಸಿದರು. ಜರ್ಮನ್ನರು ಅಮೆರಿಕದ ಪೂರ್ವ ಕಡಲ ತೀರದಲ್ಲಿ ತಮ್ಮ ಸಬ್‍ಮರೀನ್‍ಗಳಲ್ಲಿ ಈ ರೋಗಾಣುಗಳನ್ನು ಅಮೆರಿಕಕ್ಕೆ ತಂದು ಹರಡಿದ್ದಾರೆಂದು ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿತು. ಜರ್ಮನಿಯ ಬಾಯರ್ ಔಷಧ ಕಂಪೆನಿಯು ತನ್ನ ಆಸ್ಪಿರಿನ್ ಮಾತ್ರೆಗಳ ಮೂಲಕ ಈ ಫ್ಲೂ ಹರಡುತ್ತಿದೆಯೆಂಬ ವದಂತಿಗಳೂ ಹರಡಿದ್ದವು.
ಆ ಸಮಯದಲ್ಲಿ (ಅಕ್ಟೋಬರ್ 10, 1918) ಬ್ರೆಜಿಲ್‍ನ `ಎ ಕ್ಯಾರೆಟ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ, `ಸ್ಪ್ಯಾನಿಶ್ ಫ್ಲೂವನ್ನು ಜರ್ಮನಿಯೇ ಹುಟ್ಟುಹಾಕಿ ತಮ್ಮ ಸಬ್‍ಮರೀನ್‍ಗಳಲ್ಲಿ ರೋಗಕಾರಕವನ್ನು ಸೀಸೆಗಳಲ್ಲಿ ತುಂಬಿ ಎಲ್ಲೆಡೆ ಕಡಲತೀರಗಳಲ್ಲಿ ಎಸೆದು ಅವುಗಳನ್ನು ತೆರೆದವರ ಮೂಲಕ ರೋಗವನ್ನು ಎಲ್ಲೆಡೆ ಹರಡುತ್ತಿದೆ, ಅದರ ಮೂಲಕ ಯುದ್ಧದಲ್ಲಿ ತಟಸ್ಥರಾಗಿರುವವರು ರೋಗದಿಂದ ನರಳಿ ತಟಸ್ಥರಾಗಿಯೇ ಉಳಿಯಲಿ ಎಂಬ ಹುನ್ನಾರ ಹೊಂದಿದೆ’ ಎಂಬ ತಪ್ಪು ವದಂತಿಯನ್ನೇ ಪ್ರಕಟಿಸಿತು. ಅದರೊಂದಿಗೆ ಪ್ರಕಟವಾದ `ಬ್ಯಾಸಿಲ್ಲೋ ಮರೈನ್’ ಎಂಬ ವ್ಯಂಗ್ಯಚಿತ್ರದಲ್ಲಿ ಸಾವಿನ ದೂತ ಅಸ್ಥಿಪಂಜರದಂತೆ ಸಬ್‍ಮರೀನ್‍ನಲ್ಲಿ ಕೂತಿದ್ದು ಅದರ ಮೇಲೆ ಸಂಖ್ಯೆ 13ರ (ಅವರ ನಂಬಿಕೆಯಂತೆ 13 ಅಶುಭ ಸಂಖ್ಯೆ) ಅಡಿಯಲ್ಲಿ ಸ್ಪ್ಯಾನಿಶ್ ಫ್ಲೂ ಎಂದು ಬರೆದಿದೆ ಹಾಗೂ ಆ ದೂತನ ಹಿಂದೆ ರೋಗಕಾರಕ ಹೊಂದಿರುವ ದೊಡ್ಡ ಸಿರಿಂಜ್ ಇದೆ.
.ಈ `ಸ್ಪ್ಯಾನಿಶ್ ಫ್ಲೂ’ ಮೊದಲಿಗೆ ಎಲ್ಲಿ ಕಾಣಿಸಿಕೊಂಡದ್ದು ಎನ್ನುವುದು ನಿಖರವಾಗಿ ತಿಳಿದಿಲ್ಲ, ಆದರೆ ಸ್ಪೇನ್‍ನಿಂದ ಮಾತ್ರ ಅಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಮೊದಲ ವಿಶ್ವಯುದ್ಧದ ಸಮಯದಲ್ಲಿ ನೈರ್ಮಲ್ಯತೆ ಇಲ್ಲದೆ ಸೈನಿಕರು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದರು. ಕೆಲವು ಅಧ್ಯಯನಗಳು ಹೇಳುವಂತೆ ಕೊರೋನಾ ವೈರಸ್‍ನಂತೆ ಇದೂ ಸಹ ಚೀನಾದಲ್ಲಿ ಪಕ್ಷಿಗಳಿಂದ ಮನುಷ್ಯರಿಗೆ ಹರಡಿ ಅಲ್ಲಿಂದ ವಲಸೆ ಬಂದ ಕೆಲಸಗಾರರ ಮೂಲಕ ಇದು ಅಮೆರಿಕಾದಲ್ಲಿನ ವಿಶ್ವಯುದ್ಧದ ಸೈನಿಕರ ಕ್ಯಾಂಪುಗಳಲ್ಲಿ ಕಾನ್ಸಾಸ್‍ನಲ್ಲಿ 1918ರ ವಸಂತದಲ್ಲಿ ಕಾಣಿಸಿಕೊಂಡು ಅಲ್ಲಿಂದ ಸೈನಿಕರ ಹಡಗು, ರೈಲು ಪ್ರಯಾಣಗಳ ಮೂಲಕ ಯೂರೋಪ್ ಹಾಗೂ ಇತರೆಡೆಗೆ ಹರಡಿತು.
ಜಗತ್ತಿನ ಹಲವಾರು ಪ್ರಮುಖ ವ್ಯಕ್ತಿಗಳನ್ನು ಸಹ ಈ ಫ್ಲೂ ಕಾಡಿತು. ಕೆಲವರು ಅದಕ್ಕೆ ಬಲಿಯಾದರೆ ಇತರರು ಬದುಕುಳಿದರು. ಬದುಕುಳಿದವರಲ್ಲಿ ಪ್ರಮುಖರಾದವರೆಂದರೆ ಅಮೆರಿಕದ ಪ್ರೆಸಿಡೆಂಟ್ ವುಡ್‍ರೋ ವಿಲ್ಸನ್, ಬ್ರಿಟಿಷ್ ಪ್ರೈಮ್ ಮಿನಿಸ್ಟರ್ ಡೇವಿಡ್ ಲಾಯ್ಡ್ ಜಾರ್ಜ್ (ಕಾಕತಾಳೀಯವೆಂಬಂತೆ ಈಗಿನ ಬ್ರಿಟಿಷ್ ಪ್ರೈಮ್ ಮಿನಿಸ್ಟರ್ ಬೋರಿಸ್ ಜಾನ್ಸನ್ ಸಹ ಕೊರೊನಾ ಸೋಂಕಿಗೊಳಗಾಗಿ ಗುಣಹೊಂದಿದ್ದಾರೆ), ಲೇಖಕ ಜಾನ್ ಸ್ಟೀನ್‍ಬೆಕ್, ನಟಿ ಲಿಲಿಯನ್ ಗಿಶ್, ವಾಲ್ಟ್ ಡಿಸ್ನಿ ಮುಂತಾದವರು. ಭಾರತದಲ್ಲಿ ಮಹಾತ್ಮ ಗಾಂಧಿಯವರನ್ನೂ ಸಹ ಈ ಫ್ಲೂ ಕಾಡಿತ್ತು.
ಸೋಂಕು ರೋಗಗಳ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಳ್ಳುತ್ತಿದ್ದ ಕಾಲವದು. ಮಧ್ಯಕಾಲೀನದ ಬ್ಲಾಕ್ ಡೆತ್ ಅವಧಿಯಿಂದ ಹತ್ತೊಂಭತ್ತನೇ ಶತಮಾನದವರೆಗೂ ಸೋಂಕು ಹಾಗೂ ಸಾಂಕ್ರಾಮಿಕ ರೋಗಗಳನ್ನು ದೈವದ ಶಾಪವೆಂದೇ ತಿಳಿದಿದ್ದರು. 17ನೇ ಶತಮಾನದಲ್ಲಿಯೇ ಬ್ಯಾಕ್ಟೀರಿಯಾಗಳನ್ನು ಕಂಡುಹಿಡಿದಿದ್ದರೂ 1850ರಲ್ಲಿ ಫ್ರೆಂಚ್ ಜೀವಶಾಸ್ತ್ರಜ್ಞ ಲೂಯಿ ಪಾಶ್ಚರ್ ಸೂಕ್ಷ್ಮಜೀವಿಗಳು ಮತ್ತು ರೋಗಗಳ ನಡುವೆ ಇರುವ ಸಂಬಂಧವನ್ನು ಕಂಡುಹಿಡಿದನು ಹಾಗೂ ಕೆಲವು ದಶಕಗಳ ನಂತರ ಜರ್ಮನ್ ಸೂಕ್ಷ್ಮಜೀವಿಶಾಸ್ತ್ರಜ್ಞ ರಾಬರ್ಟ್ ಕೋಚ್ ಆಧುನಿಕ ಸೋಂಕು ರೋಗಗಳ `ಸೂಕ್ಷ್ಮಾಣುಜೀವಿ ಸಿದ್ಧಾಂತ’ದ ಪರಿಕಲ್ಪನೆಯನ್ನು ಜನರ ಮುಂದಿಟ್ಟ. 20ನೇ ಶತಮಾನದ ಹೊತ್ತಿಗೆ ಜನರು ಆ ಸಿದ್ಧಾಂತವನ್ನು ಒಪ್ಪಿಕೊಂಡು ತಾವು ಅನುಭವಿಸುತ್ತಿದ್ದ ಕಾಲರಾ, ಟೈಫಾಯ್ಡ್, ಕ್ಷಯರೋಗ ಮುಂತಾದವುಗಳ ಅನುಭವಗಳಿಂದ ತಮ್ಮ ಬದುಕಿನಲ್ಲಿ ನೈರ್ಮಲ್ಯತೆ ಮತ್ತು ಸ್ವಚ್ಛತೆಯನ್ನು ರೂಢಿಸಿಕೊಳ್ಳುತ್ತಿದ್ದರು. ರಷಿಯನ್ ಫ್ಲೂ ಸಮಯದಲ್ಲಿಯೇ ಡಾ.ರಾಬರ್ಟ್ ಕೋಚ್‍ರವರ ವಿದ್ಯಾರ್ಥಿಯಾಗಿದ್ದ ರಿಚರ್ಡ್ ಫೀಫರ್ ಆ ಫ್ಲೂಗೆ ಕಾರಣವಾದ ಬ್ಯಾಕ್ಟೀರಿಯಾ ಕಂಡು ಹಿಡಿದಿರುವುದಾಗಿ ಘೋಷಿಸಿದ್ದ. ಆದರೆ ಅದು ಬ್ಯಾಕ್ಟೀರಿಯಾ ಆಗಿರಲಿಲ್ಲ ಮತ್ತು ವೈರಸ್‍ಗಳ ಬಗೆಗೆ ಜನರಿಗೆ ಅಷ್ಟೊಂದು ಮಾಹಿತಿಯೂ ಇರಲಿಲ್ಲ. ಅಲ್ಲದೆ ಬ್ಯಾಕ್ಟೀರಿಯಾಗಳಿಗಿಂತ ವೈರಸ್‍ಗಳು ತೀರಾ ಸಣ್ಣದಾಗಿದ್ದು ಆಗಿನ ಸೂಕ್ಷ್ಮದರ್ಶಕಗಳಲ್ಲಿ ಅವು ಸುಲಭವಾಗಿ ಕಾಣುತ್ತಿರಲಿಲ್ಲ. ಅವುಗಳನ್ನು ನೋಡದೆ ವಿಜ್ಞಾನಿಗಳು ಅವುಗಳ ರಚನೆ, ಕಾರ್ಯಗಳ ಬಗೆಗೆ- ಅವು ಜೀವಿಗಳೇ ಅಥವಾ ವಿಷಕಾರಿ ರಾಸಾಯನಿಕಗಳೇ ಇತ್ಯಾದಿ ಕುರಿತು ಚರ್ಚೆ ನಡೆಸುತ್ತಿದ್ದರು. ಹಾಗಾಗಿ ಆಗಿನ ವ್ಯಂಗ್ಯಚಿತ್ರಕಾರರು ಫ್ಲೂ ಉಂಟುಮಾಡುವ ಜೀವಿಯನ್ನು ಕೀಟದ ಹಾಗೆ ಅಥವಾ ಮತ್ತಾವುದೋ ಅವರ್ಣನೀಯ ಜೀವಿಯ ಹಾಗೆ ಚಿತ್ರಿಸಿದ್ದಾರೆ.
1918ರ ಜೂನ್ 7ರಂದು ಸ್ಪೇನ್‍ನ `ಎಲ್ ಸೋಲ್’ ಪತ್ರಿಕೆಯಲ್ಲಿ ಪ್ರಕಟವಾದ ಲೂಯಿಸ್ ಬಗೇರಿಯಾರವರ ವ್ಯಂಗ್ಯಚಿತ್ರದಲ್ಲಿ ವಿಚಿತ್ರ ರೂಪ ಹೊಂದಿರುವ ರೋಗಾಣುವಿಗೆ ಜೀವಶಾಸ್ತ್ರಜ್ಞರು ಕೈ ಮುಗಿಯುತ್ತಾ `ಹೋ ಮಹಾತ್ಮನೇ, ನೀನು ಯಾರೆಂದು ಹೇಳು!’ ಎನ್ನುತ್ತಿದ್ದಾರೆ.
ಅದೇ ಸಮಯದಲ್ಲಿ `ಲಂಡನ್ನಿನ ಆಸ್ಪತ್ರೆಯೊಂದರಲ್ಲಿ ಇನ್‍ಫ್ಲುಯೆಂಜಾ ಬ್ಯಾಸಿಲಸ್ ಕಂಡುಹಿಡಿಯಲಾಗಿದೆ’ ಎಂಬ ಸುದ್ದಿ ಬ್ರಿಟನ್ನಿನಲ್ಲಿ ಪ್ರಕಟವಾದಾಗ `ಪಂಚ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರವೊಂದರಲ್ಲಿ ವೈದ್ಯರು, ದಾದಿಯರು ಹಾಗೂ ಇತರರು ಆ `ಬ್ಯಾಸಿಲಸ್’ ಅನ್ನು ರೋಗಿಗಳ ಮಂಚಗಳ ಕೆಳಗೆ ಇದೆಯೇನೋ ಎಂಬಂತೆ ನೋಡುತ್ತಿದ್ದರೆ, ಕೆಲವರು ಕೈಗಳಲ್ಲಿ ದೊಣ್ಣೆ ಹಿಡಿದು, ತೋಳು ಮಡಚಿ ಆ `ಬ್ಯಾಸಿಲಸ್’ ಇಲಿಯೋ, ಹೆಗ್ಗಣವೋ ಎಂಬಂತೆ ಅದು ಹೊರಗೆ ಬಂದರೆ ಹೊಡೆಯಲು ಸಿದ್ಧವಾಗಿರುವಂತಿದ್ದಾರೆ. ಆ ವ್ಯಂಗ್ಯಚಿತ್ರವನ್ನು ಇಟಲಿಯ ಟ್ಯೂರಿನ್‍ನಲ್ಲಿನ `ಲಾ ಸ್ಟಾಂಪ’ ಪತ್ರಿಕೆಯು ಮರುಮುದ್ರಿಸಿದೆ.
ಸ್ಪೇನ್‍ನ ಒಂದು ಪ್ರಖ್ಯಾತ ಹಾಗೂ ಜನಪ್ರಿಯ ವ್ಯಕ್ತಿ ಪಾತ್ರ ಡಾನ್ ಜ್ವಾನ್ ಎಂಬುವನದು. ಆ ಪಾತ್ರ ಮೊದಲಿಗೆ ರಚಿತವಾದದ್ದು 1630ರಲ್ಲಿ ಒಂದು ನಾಟಕದ ಮೂಲಕ. ಅವನೊಬ್ಬ ಕಚ್ಚೆಹರುಕ, ಸಿಕ್ಕ ಸಿಕ್ಕ ಹೆಣ್ಣುಗಳ ಹಿಂದೆ ಹೋಗುವವನು ಹಾಗೂ ತನ್ನ ‘ಸಾಹಸ’ಗಳ ಬಗ್ಗೆ ಮತ್ತಷ್ಟು ಉತ್ಪ್ರೇಕ್ಷೆಯಿಂದ ಎಲ್ಲರ ಬಳಿಯೂ ಕೊಚ್ಚಿಕೊಳ್ಳುವವನು. ಅಂತಹ ವ್ಯಕ್ತಿತ್ವ ಹೊಂದಿರುವವರನ್ನು ಮನೋವೈದ್ಯದಲ್ಲಿ ‘ಡಾನ್ ಜ್ವಾನಿಸಂ’ ವ್ಯಕ್ತಿತ್ವ ಇದೆ ಎನ್ನುತ್ತಾರೆ. ಡಾನ್ ಹೆಣ್ಣುಗಳನ್ನು ಅರಸಿ ಮನೆಗಳ ಮಾಳಿಗೆ, ಗೋಡೆಗಳನ್ನೆಲ್ಲಾ ಸರಾಗವಾಗಿ ಹತ್ತುವ ಸಾಹಸ ಮಾಡುವವನು. ಅಲ್ಲದೆ ಅವನ ವ್ಯಕ್ತಿತ್ವ ಅವರ್ಣನೀಯವಾದದ್ದು ಮತ್ತು ಅನಿರೀಕ್ಷಿತವಾದದ್ದು. ‘ಸ್ಪಾನಿಶ್ ಫ್ಲೂ’ ಕಾಡುತ್ತಿದ್ದ ಸ್ಪೇನ್‍ನವರಿಗೆ ಅದಕ್ಕೆ ಕಾರಣ ಒಂದು ರೋಗಾಣು ಎಂದಾಗ ಅವರಿಗೆ ನೆನಪಾದದ್ದು ಡಾನ್ ಜಾó್ವನ್.
1918ರ ಜೂನ್‍ನಲ್ಲಿ ಸ್ಪ್ಯಾನಿಶ್ ಪತ್ರಿಕೆಯೊಂದು ಫ್ಲೂ ಬಗ್ಗೆ ವಿವರಣೆ ನೀಡಿ ಅದರ ಸೋಂಕಿಗೆ ಕಾರಣವಾಗಿರುವುದು ಫೀಫರ್ ಬ್ಯಾಸಿಲಸ್ ರೋಗಾಣು (ಆಗ ಫ್ಲೂಗೆ ಕಾರಣ ವೈರಸ್, ಬ್ಯಾಕ್ಟೀರಿಯಾ ಅಲ್ಲ ಎನ್ನುವುದು ತಿಳಿದಿರಲಿಲ್ಲ) ಹಾಗೂ ಅದು ಎಷ್ಟು ಸಣ್ಣದಾಗಿದೆಯೆಂದರೆ ಅದನ್ನು ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದು ಎಂದು ವರದಿ ಮಾಡಿತು. ಆಗ ಜೂನ್ 6, 1918ರ `ಎಲ್ ಇಂಪಾರ್ಸಿಯಲ್’ ಪತ್ರಿಕೆಯಲ್ಲಿ ಸಾಲ್ವಡಾರ್ ಬಾಟ್ರ್ಲೋಜಿ ಎಂಬಾತನ ‘ಜಂಬಕೋರ ಸೂಕ್ಷ್ಮಾಣು’ ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು. ಆ ಚಿತ್ರದಲ್ಲಿ ರೋಗಾಣು ಡಾನ್ ಜ್ವಾನ್‍ನಂತೆ ಕೋಟು ಧರಿಸಿತ್ತು ಹಾಗೂ ಅದರ ಕೆಳಗೆ ನಾಟಕವೊಂದರಲ್ಲಿ ಅವನು ಹೇಳುವಂತೆ, `ನಾನು ಅರಮನೆಗಳ ಗೋಡೆಗಳನ್ನು ಹತ್ತಿದೆ, ಮನೆಗಳ ಮೇಲಿಳಿದೆ’ ಎಂಬ ವಾಕ್ಯವಿತ್ತು. ಆಗ ‘ಸ್ಪ್ಯಾನಿಶ್ ಫ್ಲೂ’ ಸಹ ರಾಜಮನೆತನದವರು, ಮಂತ್ರಿಗಳು ಹಾಗೂ ಜನಸಾಮಾನ್ಯರ ನಡುವೆ ಭೇದ ತೋರದೆ ಎಲ್ಲರನ್ನೂ ಕಾಡುತ್ತಿತ್ತು.
ಮಾರಕ ಫ್ಲೂ ಉಂಟುಮಾಡುತ್ತಿರುವ ರೋಗಾಣುವಿನ ಲಿಂಗದ ಬಗ್ಗೆ, ಅಂದರೆ ಅದು ಹೆಣ್ಣೋ, ಗಂಡೋ ಎನ್ನುವುದನ್ನು ತೀರ್ಮಾನಿಸಲು ಸ್ಪೇನ್‍ನವರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ 1918ರ ನವೆಂಬರ್ 15ರ `ಎಲ್’ಎಸ್ಕ್ವೆಲ್ಲಾ ಡೆ ಲ ಟೊರ್ರಾಕ್ಸ’ ಪತ್ರಿಕೆಯಲ್ಲಿ ಪ್ರಕಟವಾದ `ಅತಿಯಾದ ಗೌರವ’ ಶೀರ್ಷಿಕೆಯ ವ್ಯಂಗ್ಯಚಿತ್ರದಲ್ಲಿ ರೋಗಾಣು ತಲೆಬುರುಡೆಯ ರುಂಡ, ಹೆಣ್ಣಿನ ಸ್ತನ, ಬಾಲ, ಗಡ್ಡ ಹೊಂದಿದ್ದು ಒಂದು ಕೈಯಲ್ಲಿ ಸಾವಿನ ಕುಡುಗೋಲು ಹಾಗೂ ಮತ್ತೊಂದು ಕೈಯಲ್ಲಿ `ಫ್ಲು’ ಎಂದು ಬರೆದಿರುವ ಚೀಲ ಹಿಡಿದಿದೆ. ಅದರ ಎದುರಿಗೆ ನಿಂತಿರುವ ವೈದ್ಯರು, ಇತರ ಸರ್ಕಾರಿ ಅಧಿಕಾರಿಗಳು, `ಮಿಸ್ಟರ್ ಸೂಕ್ಷ್ಮಾಣುಜೀವಿ, ನಾವು ನಿನ್ನನ್ನು ಒದ್ದೋಡಿಸುವುದಿಲ್ಲ, ನೀನೇ ನಿನ್ನಷ್ಟಕ್ಕೆ ಬಿಟ್ಟು ಹೊರಡುತ್ತೀಯೆ’ ಎನ್ನುತ್ತಿದ್ದಾರೆ. ಅದೇ ಪತ್ರಿಕೆಯ 1919ರ ಫೆಬ್ರವರಿ 28ರಂದು ಪ್ರಕಟವಾದ `ದ ಫ್ಲು’ ಶೀರ್ಷಿಕೆಯ ವ್ಯಂಗ್ಯಚಿತ್ರದಲ್ಲಿ ಅದೇ ರೋಗಾಣು ಮಂಗನ ಮುಖ, ರೆಕ್ಕೆ, ಬಾಲ ಹಾಗೂ ಹೆಣ್ಣಿನ ಸ್ತನ ಮತ್ತು ಪುರುಷ ಜನನೇಂದ್ರಿಯಗಳನ್ನು ಹೊಂದಿರುವ ಜೀವಿಯಾಗಿದೆ.
ಬ್ರಿಟನ್ ಮತ್ತು ಯೂರೋಪಿನವರು ಕಾಡಿದ ಇನ್‍ಫ್ಲುಯೆಂಜಾ ಜ್ವರವನ್ನು `ಸ್ಪ್ಯಾನಿಶ್ ಫ್ಲೂ’ ಎಂದು ಕರೆದಾಗ ಸ್ಪೇನ್‍ನವರು ಪ್ರತಿಭಟಿಸಿದರೆಂದು ಈಗಾಗಲೇ ಹೇಳಿದೆ. ಏಕೆಂದರೆ ಸ್ಪೇನ್‍ಗೆ ಬರುವ ಮೊದಲೇ ಆ ಜ್ವರ ಬ್ರಿಟನ್ ಮತ್ತು ಯೂರೋಪುಗಳಲ್ಲಿ ದಾಂಧಲೆ ಎಬ್ಬಿಸಿತ್ತು. ಸ್ಪೇನ್‍ನವರು ಆ ಫ್ಲೂ ಉಂಟುಮಾಡುವ ರೋಗಾಣುವನ್ನು ಅಷ್ಟೊತ್ತಿಗಾಗಲೇ ತಮ್ಮ ನಾಡಿನ ಮೆಚ್ಚಿನ ಪಾತ್ರವಾದ ಡಾನ್ ಜ್ವಾನ್‍ನೊಂದಿಗೆ ಹೋಲಿಸಿ ರೂಪಕಗಳನ್ನು ರಚಿಸಿದ್ದರು. 1918ರ ಮಾರ್ಚ್‍ನಲ್ಲಿ ಡಾನ್ ಜ್ವಾನ್ ಕುರಿತ ಹೋಸೆ ಸೆರ್ರಾನೊ ರಚಿತ `ಲಾ ಕ್ಯಾನ್ಸಿಯೋನ್ ಡೆಲ್ ಒಲ್ವಿಡೊ’ ಎಂಬ ನೃತ್ಯ/ಸಂಗೀತ ನಾಟಕ ಮ್ಯಾಡ್ರಿಡ್‍ನಲ್ಲಿ ಮೊದಲ ಬಾರಿಗೆ ಪ್ರದರ್ಶಿತವಾಯಿತು. ಅದು ಹೆಚ್ಚು ಜನಪ್ರಿಯವೂ ಆಯಿತು. ಅದರಲ್ಲಿನ `ನೇಪಲ್ಸ್ ಸೋಲ್ಜರ್’ ಎಂಬ ಹಾಡು ಹೆಚ್ಚು ಜನಪ್ರಿಯವಾಗಿ ಸ್ಪೇನ್‍ನವರು ಆ ಹಾಡನ್ನು ಗುನುಗುನಿಸತೊಡಗಿದರು. ಆ ಹಾಡು ಆಗ ಫ್ಲೂನಂತೆ ಎಲ್ಲರಿಗೂ ಸಾಂಕ್ರಾಮಿಕವಾಗಿ ಬಾಯಿಂದ ಬಾಯಿಗೆ ಹಬ್ಬುತ್ತಿದ್ದುದರಿಂದ ಅವರು ಆ ಫ್ಲೂಗೆ `ನೇಪಲ್ಸ್ ಸೋಲ್ಜರ್’ (ನೇಪಲ್ಸ್ ಸೈನಿಕ) ಎಂದೇ ಹೆಸರಿಟ್ಟರು, ವ್ಯಂಗ್ಯಚಿತ್ರಕಾರರು ಅದಕ್ಕೊಂದು ರೂಪ ಸಹ ಕೊಟ್ಟರು. ಆ ಚಿತ್ರವು ಪತ್ರಿಕೆಗಳಲ್ಲಿ ಸಂಪಾದಕೀಯ ವ್ಯಂಗ್ಯಚಿತ್ರಗಳಾಗಿ, ಜಾಹೀರಾತುಗಳಲ್ಲಿ, ಪೋಸ್ಟರ್‍ಗಳಲ್ಲಿ ಪ್ರಕಟಿತವಾಗತೊಡಗಿತು. ಅಷ್ಟೊತ್ತಿಗಾಗಲೇ ಆ ಫ್ಲೂ ಗಾಳಿಯಲ್ಲಿ ಹರಡುತ್ತದೆ ಎನ್ನುವುದು ಜನರಿಗೆ ತಿಳಿದಿತ್ತು. 1918ರ ಜೂನ್ 9ರಂದು ಬ್ಲಾಂಕೊ ವೈ ನೆಗ್ರೊ ಪತ್ರಿಕೆಯಲ್ಲಿ ಪ್ರಕಟವಾದ ಮ್ಯಾನ್ಯುಯೆಲ್ ಟೋವರ್ ಸೀಲ್ಸ್‍ರವರ ವ್ಯಂಗ್ಯಚಿತ್ರದಲ್ಲಿ ರಸ್ತೆ ಬದಿಯಲ್ಲಿ ಇಬ್ಬರು ಬಡವರು/ಬಿಕ್ಷುಕರು ಗಿಟಾರ್ ನುಡಿಸುತ್ತಾ ನೇಪಲ್ಸ್ ಸೋಲ್ಜರ್ ಹಾಡನ್ನು ಹಾಡುತ್ತಿದ್ದರೆ ಒಬ್ಬ ಕೋಟು ಟೊಪ್ಪಿಗೆ ಧರಿಸಿರುವ ಸಿರಿವಂತೆ `ಆ ಹಾಡು ಕೇಳಿದರೇ ರೋಗ ಹರಡುತ್ತದೆ’ ಎನ್ನುತ್ತಾ ಅವರಿಂದ ದೂರ ಓಡುತ್ತಿದ್ದಾನೆ.
ನೇಪಲ್ಸ್ ಸೋಲ್ಜರನಿಗೆ ಸೈನಿಕನ ಧಿರಿಸು, ಟೊಪ್ಪಿಗೆ, ಬೂಟುಗಳನ್ನು ಧರಿಸಿರುವ ರೂಪ ನೀಡಿಯಾಗಿತ್ತು. 1918ರ ಸೆಪ್ಟೆಂಬರ್ 25ರ `ಎಲ್ ಫಿಗಾರೊ’ ಪತ್ರಿಕೆಯಲ್ಲಿ ಪ್ರಕಟವಾದ ಲೊರೆಂಜೊ ಅಗುರೆರವರ `ಇತ್ತೀಚಿನ ಸುದ್ದಿ’ ಶೀರ್ಷಿಕೆಯ ವ್ಯಂಗ್ಯಚಿತ್ರದಲ್ಲಿ ಅಸ್ಥಿಪಂಜರದ ದೇಹವುಳ್ಳ, ಸೈನಿಕರ ಧಿರಿಸು ಧರಿಸಿರುವ ನೇಪಲ್ಸ್ ಸೋಲ್ಜರ್ ಪೈಪ್ ಸೇದುತ್ತಾ ಸ್ಮಶಾನದ ಮೇಲೆ ಪ್ರಶಾಂತವಾಗಿ ವಿರಮಿಸುತ್ತಾ ಕೂತು ಪತ್ರಿಕೆ ಓದುತ್ತಿದ್ದಾನೆ. ಅವನ ಆಗಮನದಿಂದಾಗಿ ಈಗಾಗಲೇ ಸ್ಪೇನ್‍ನ ನಗರಗಳು ಸ್ಮಶಾನಗಳಾಗಿವೆ. ಆ ನಗರಗಳ ಹೆಸರುಗಳ ಫಲಕಗಳು ಸಮಾಧಿಯ ಬಳಿ ಕಾಣುತ್ತಿವೆ. ಅವನು ತನ್ನಿಂದಾಗಿ ಎಷ್ಟೊಂದು ಸಾವುನೋವುಗಳುಂಟಾಗಿವೆ ಎನ್ನುವುದನ್ನೇ ಓದುತ್ತಿರಬಹುದು ಎನ್ನುವಂತಿದೆ ಆ ವ್ಯಂಗ್ಯಚಿತ್ರ.
ಫ್ಲೂ ಗಾಳಿಯಲ್ಲಿ, ಉಸಿರಾಟ, ಎಂಜಲು ಮುಂತಾದವುಗಳಿಂದ ಹರಡುತ್ತದೆನ್ನುವುದು ಅಷ್ಟೊತ್ತಿಗೆ ಎಲ್ಲರ ಅರಿವಿಗೆ ಬಂದಿದ್ದುದರಿಂದ ಮಾಸ್ಕ್ ಅಥವಾ ಮುಖಗವುಸು ಧರಿಸುವುದನ್ನು ಬಹಳಷ್ಟು ದೇಶಗಳು ಕಡ್ಡಾಯಗೊಳಿಸಿದವು. 1918ರ ಅಕ್ಟೋಬರ್ 26ರಂದು ಕೆನಡಾದ `ಕ್ಯಾಲ್ಗರಿ ಹೆರಾಲ್ಡ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ಮಾಸ್ಕ್ ಧರಿಸುವುದರಿಂದ ಆಗುವ `ಅನಾಹುತ-ತೊಂದರೆ’ಗಳನ್ನು ನೀಡಲಾಗಿತ್ತು. ಅದರಲ್ಲಿ ಮಾಸ್ಕ್ ಧರಿಸಿರುವ ಪ್ರೇಮಿಗಳು ಮುತ್ತುಕೊಡಲು ಹೆಣಗುತ್ತಿರುವುದು, ಗೌರವಾನ್ವಿತ ಹುಡುಗಿ ಬರ್ಟಿ ಮನೆಗೆ ಹಾಲು ಕೊಡಲು ಬಂದ ಮಾಸ್ಕ್ ಧರಿಸಿದವನನ್ನು ತನ್ನ ಪ್ರೇಮಿ ಎಂದುಕೊಂಡಿರುವುದು, ಮನೆಗೆ ಬಂದಿರುವ ಹೊಸ ಅಡುಗೆಯವಳು ಮಾಸ್ಕ್ ಧರಿಸಿ ಬಂದ ಮನೆಯ ಯಜಮಾನನನ್ನು ಕಳ್ಳನೆಂದುಕೊಂಡು ಲಟ್ಟಣಿಗೆಯಿಂದ ಹೊಡೆದಿರುವುದು ಇವೇ ಮುಂತಾದವುಗಳ ಚಿತ್ರಣವನ್ನು ನೀಡಲಾಗಿತ್ತು.
ಅಮೆರಿಕದ ಉತ್ತರ ಕೆರೋಲಿನಾದ ಸರ್ಕಾರದ ಆರೋಗ್ಯ ಬುಲೆಟಿನ್‍ನಲ್ಲಿ ಎರಡು ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿತು. ಮೊದಲನೆಯದರಲ್ಲಿ, 1000 ಉತ್ತರ ಕೆರೋಲಿನಾದವರು ಜರ್ಮನಿಯವರ ಗುಂಡೇಟಿಗೆ ಸತ್ತರೆಂದು ತಿಳಿಸಿದರೆ ಎರಡನೆಯ ವ್ಯಂಗ್ಯಚಿತ್ರದಲ್ಲಿ 13644 ಉತ್ತರ ಕೆರೋಲಿನಾದವರು `ಎಂಜಲು ಜನ್ಯ’ ರೋಗವಾದ ಇನ್‍ಫ್ಲುಯೆಂಜಾಗೆ ಸತ್ತಿದ್ದಾರೆಂದು ತಿಳಿಸಿ ಯುದ್ಧಕ್ಕಿಂತ ಈ ರೋಗ ಎಷ್ಟು ಮಾರಕ ಎಂಬ ಸಂದೇಶವನ್ನು ನೀಡಲು ಪ್ರಯತ್ನಿಸಿತ್ತು.
ಈಗ ಕೊರೋನಾ ದೂರವಿಡಲು ಸಾಮಾಜಿಕ ಅಂತರ, ದೈಹಿಕ ಅಂತರ ಕಾಪಾಡಿಕೊಳ್ಳುವಂತೆ, ಮನೆಯಿಂದ ಹೊರಬರದಂತೆ ಹಾಗೂ ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸದಂತೆ ತೆಗೆದುಕೊಳ್ಳುತ್ತಿರುವ ಕ್ರಮಗಳಂತೆ 1918ರ ಫ್ಲೂ ಹಾವಳಿಯ ಸಮಯದಲ್ಲೂ ಕೈಗೊಳ್ಳಲಾಗಿತ್ತು. 1918ರ ಅಕ್ಟೋಬರ್‍ನಲ್ಲಿ ಇಲ್ಲಿನಾಯ್ ರಾಜ್ಯ ಆರೋಗ್ಯ ಇಲಾಖೆಯ ಪೋಸ್ಟರ್‍ನಲ್ಲಿ ಪ್ರಕಟಿಸಿದ ವ್ಯಂಗ್ಯಚಿತ್ರದಲ್ಲಿ ವ್ಯಕ್ತಿಯೊಬ್ಬ ತನ್ನ ಎದೆಯ ಮೇಲೆ ಫಲಕವೊಂದನ್ನು ಧರಿಸಿದ್ದು ಅದರಲ್ಲಿ `ನನ್ನ ಮುಖಕ್ಕೆ ನಿನ್ನ ಮುಖ ಹತ್ತಿರ ತಂದು ಮಾತನಾಡಬೇಡ, ಕೈ ಕುಲುಕಬೇಡ, ಕೆಮ್ಮುವುದು, ಸೀನುವುದು ಹಾಗೂ ಉಗಿಯುವುದನ್ನು ನಿನ್ನ ಕರವಸ್ತ್ರದಲ್ಲಿ ಮಾಡು ಹಾಗೂ ನಿನಗೆ ನೆಗಡಿಯಾಗಿದ್ದಲ್ಲಿ ಮನೆಯಲ್ಲೇ ಇರು, ಹೊರಗೆ ಬರಬೇಡ’ ಎಂದು ಬರೆದಿದೆ.
1918ರ ಅಕ್ಟೋಬರ್‍ನ ನ್ಯೂ ಯಾರ್ಕ್ ವಲ್ರ್ಡ್ ಪತ್ರಿಕೆಯಲ್ಲಿ ಮಾರೀಸ್ ಕೆಟೆನ್ ಬರೆದ `ಹೌ ಟು ಗೆಟ್ ಎ ಸೀಟ್’ (ಸೀಟ್ ಪಡೆಯುವುದು ಹೇಗೆ) ಎಂಬ ವ್ಯಂಗ್ಯಚಿತ್ರದಲ್ಲಿ ಅಜ್ಜನೊಬ್ಬ ಮೆಟ್ರೋ ಟ್ರೈನಿನಲ್ಲಿ ಪ್ರಯಾಣಿಸುವಾಗ ಸೀಟ್ ಇಲ್ಲದೆ ನಿಂತಿರುತ್ತಾನೆ. ಆತ ಜೋರಾಗಿ ಸೀನಿದ ತಕ್ಷಣ ಎಲ್ಲರೂ `ಆತನಿಗೆ ಸ್ಪ್ಯಾನಿಶ್ ಫ್ಲೂ ಇದೆ’ ಎಂದು ಹೇಳಿ ಕುಳಿತಿದ್ದ ಸೀಟುಗಳನ್ನು ಬಿಟ್ಟು ದೂರ ಹೋಗುತ್ತಾರೆ. ಅಲ್ಲಿ ಕೂತ ಅಜ್ಜ, `ಇದು ನನಗೊಂದು ವರದಾನ, ನಾನು ಬೇಕಾದಾಗ ಸೀನಬಹುದು’ ಎನ್ನುತ್ತಾನೆ.
ಈಗಲೂ ನಮ್ಮಲ್ಲಿ ಬಹಳಷ್ಟು ಜನ ಕೊರೋನಾ ಜ್ವರವನ್ನು ಗೋಮೂತ್ರ ಕುಡಿಯುವುದರಿಂದ, ಈರುಳ್ಳಿ, ಬೆಳ್ಳುಳ್ಳಿ ತಿನ್ನುವುದರಿಂದ ವಾಸಿ ಮಾಡಿಕೊಳ್ಳಬಹುದೆಂದು ನಂಬಿದ್ದಾರೆ. ಕೆಲವರು ಸಾರ್ವಜನಿಕವಾಗಿ ಗೋಮೂತ್ರ ಸಹ ಕುಡಿದರು. 1918ರ ಫ್ಲೂ ಸಮಯದಲ್ಲಿ ಅದರ ರೋಗಾಣು ಸಹ ಯಾವುದೆಂದು ಸರಿಯಾಗಿ ತಿಳಿದಿರಲಿಲ್ಲ. ಹಾಗಾಗಿ ಅದರ ಚಿಕಿತ್ಸೆ ಸಹ ಬಹಳ ಕಷ್ಟವಾಗಿತ್ತು. ಆಗಲೂ ಕೆಲವರು ಈರುಳ್ಳಿ, ಬೆಳ್ಳುಳ್ಳಿ ತಿಂದರೆ ವಾಸಿಯಾಗುತ್ತದೆಂದು ನಂಬಿದ್ದರು. ಬಸ್ಸಿನಲ್ಲಿ ಪ್ರಯಾಣಿಸುವಾಗ ಅವುಗಳನ್ನು ಅತಿಯಾಗಿ ತಿಂದ ವ್ಯಕ್ತಿಯೊಬ್ಬನ ಪಕ್ಕದಲ್ಲಿ ಕೂತವರು ಆತನಿಂದ ಹೊರಸೂಸುವ ವಾಸನೆಗೆ ದೂರ ದೂರ ಸರಿಯುವ ವ್ಯಂಗ್ಯಚಿತ್ರವೊಂದನ್ನು 1918ರ ನವೆಂಬರ್ 10ರಂದು ಚಿಕಾಗೊ ಟ್ರಿಬ್ಯೂನ್‍ನಲ್ಲಿ ಫ್ರಾಂಕ್ ಕಿಂಗ್ ಬರೆದಿದ್ದರು.
ಇಂದು ವಿಜ್ಞಾನ ಬಹಳಷ್ಟು ಮುಂದುವರಿದಿದೆ. ಕೊರೊನಾ ವೈರಸ್‍ಗೆ ಲಸಿಕೆ ಇಂದಲ್ಲ ನಾಳೆ ಕಂಡುಹಿಡಿಯುತ್ತಾರೆ. ಅದುವರೆಗೂ ನಾವು 1918ರ ಫ್ಲೂ ಸಮಯದಲ್ಲಿ ಕೈಗೊಂಡಂತೆ ಸಾಮಾಜಿಕ ಅಂತರ, ನೈರ್ಮಲ್ಯತೆ, ಇತ್ಯಾದಿ ಅಂಶಗಳನ್ನು ಅನುಸರಿಸಲೇ ಬೇಕು. ಆಗ 1918ರಲ್ಲಿ ಫ್ಲೂಗೆ ಲಕ್ಷಾಂತರ ಜನ ಬಲಿಯಾಗುತ್ತಿದ್ದರು. ಅದಕ್ಕೆ ಸೂಕ್ತ ಚಿಕಿತ್ಸೆ ಇಲ್ಲದೆ ಇಡೀ ವೈದ್ಯಕೀಯ ಜಗತ್ತು ತಲ್ಲಣಗೊಂಡಿತ್ತು. ಹಲವಾರು ಔಷಧ ಚಿಕಿತ್ಸೆಗಳ ಬಗೆಗೆ ಬಹಳಷ್ಟು ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಅವುಗಳ ಕುರಿತು ವೈದ್ಯರಿಗೇ ಒಮ್ಮತವಿರಲಿಲ್ಲ. 1918ರ ಅಕ್ಟೋಬರ್ 5ರಂದು ಬ್ರೆಜಿಲ್‍ನ ಫಾನ್ ಫಾನ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ವ್ಯಕ್ತಿಯೊಬ್ಬ ವೈದ್ಯರೊಬ್ಬರನ್ನು, `ನೋಡಿ ಡಾಕ್ಟರ್, ಸ್ಪ್ಯಾನಿಶ್ ಫ್ಲೂ ಬರದಂತೆ ತಡೆಯುವ ಯಾವ ವಿಧಾನವೂ ಇಲ್ಲವೆ?’ ಎಂದು ಕೇಳುತ್ತಿದ್ದಾನೆ. ಅದಕ್ಕೆ ವೈದ್ಯರು, `ಖಂಡಿತಾ ಇದೆ. ಅದರಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದೆಂದರೆ, ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸುವುದು’ ಎನ್ನುತ್ತಾರೆ. ಇಂದು ಬಹುಶಃ ನಾವು ಕೊರೋನಾ ಕುರಿತಂತೆ `ರಂಜಕ ಮತ್ತು ಭೀಭತ್ಸ’ ಚಿತ್ರಣ ನೀಡುವ ದೂರದರ್ಶನ ಚಾನಲ್‍ಗಳನ್ನು ನೋಡುವುದನ್ನು ಹಾಗೂ ಸುಳ್ಳು ಸುದ್ದಿ ಹಬ್ಬಿಸುವ ವಾಟ್ಸಪ್ ಸಂದೇಶಗಳನ್ನು ಓದುವುದನ್ನು ನಿಲ್ಲಿಸಿದರೆ ಕೊರೋನಾ ದೂರವಿಡಬಹುದೇನೋ!
*******
`ಕ್ವಾರಂಟೈನ್’ ಎನ್ನುವ ಪದ ಮೊಟ್ಟಮೊದಲಿಗೆ 15ನೇ ಶತಮಾನದ ಪ್ರಾರಂಭದಲ್ಲಿ ಇಟಲಿಯ ವೆನೀಸ್‍ನಲ್ಲಿ ಬಳಕೆಗೆ ಬಂದಿತು. ಕ್ವಾರಂಟೈನ್ ಎಂದರೆ ರೋಗಬಂದವರನ್ನು ನಲವತ್ತು ದಿನಗಳ ಕಾಲ ಇತರರಿಗೆ ಅದು ಹರಡದಂತೆ ಪ್ರತ್ಯೇಕವಾಗಿರಿಸುವುದು ಎಂದರ್ಥ.
1 ಕಾಮೆಂಟ್:
ಸರ್ ಸೊಗಸಾದ ಬರಹ, ಎಷ್ಟೊಂದು ಅದ್ಯಯನ ಮಾಡಿದ್ದೀರಿ ಹ್ಯಾಟ್ಸ್ ಆಫ್ ಸರ್
ಕಾಮೆಂಟ್ ಪೋಸ್ಟ್ ಮಾಡಿ