ಗುರುವಾರ, ಜೂನ್ 10, 2021

ಇಲ್ಲದವರು - ಕತೆ

 40 ವರ್ಷಗಳ ಹಿಂದೆ 1982ರಲ್ಲಿ ನನ್ನ ಪದವಿ ಮುಗಿದಿದ್ದ ಸಮಯದಲ್ಲಿ ಬರೆದ ಕತೆ. ನಾವು ವಿದ್ಯಾರ್ಥಿಗಳು ಹೊರತಂದಿದ್ದ ನಮ್ಮ ಸಹಪಾಠಿಗಳ ನೆನಪಿನ ಸ್ಮರಣಸಂಚಿಕೆ ʻಸ್ಮೃತಿʼಯಲ್ಲಿ ಪ್ರಕಟಿಸಿದ್ದೆ (ನಾನೇ ಅದರ ಸಂಪಾದಕನಾಗಿದ್ದೆ).




ಇಲ್ಲದವರು

ಇದೇನಿದು?........ ಎಲ್ಲಿ ಬಿದ್ದಿದ್ದೀನಿ ನಾನು..? ಅಬ್ಬಾ...! ಕೆನ್ನೆ ಏನು ನೋಯುತ್ತೆ.... ಹೋ, ಊದಿಕೊಂಡು ಬಿಟ್ಟಿದೆ! ಅವನೇನು ಮನುಷ್ಯಾನೋ, ರಾಕ್ಷಸಾನೋ? ಅದಿರಲಿ, ನಾನು ಎಲ್ಲಿದೀನಿ? ಒಂದೂ ತಿಳಿತಾನೇ ಇಲ್ಲವಲ್ಲ, ಹೋ, ಅದೇನು ಜನಾ ಹಾಗೆ ನುಗ್ಗುತಾ ಇದಾರಲ್ಲ..? ಅದೇನು ನೋಡೋಣ...... ಇದೇನಿದಿ ಜನಾ ನುಗ್ತಾ ಇರೋದಾ ಅಥವಾ ಅವರನ್ನು ಯಾರಾದರೂ ತಳ್ತಾ ಇದಾರಾ? ಎಲ್ಲಾ ಎಲ್ಲಿಗೆ ಹೋಗ್ತಾ ಇದಾರೆ? ಅದೇನು...? ಸುರಂಗಾನಾ? ಜನಾ ಹಾಗೆ ಒಬ್ಬರ ಮೇಲೊಬ್ಬರು ಬಿದ್ದು ಹೋಗ್ತಾ ಇದ್ದಾರಲ್ಲಾ...... ಹೇ.... ಹೇ.... ರೀ ಸ್ವಾಮಿ, ಏನು ದನಾ ಬಿದ್ದ ಹಾಗೆ ಮೇಲೆ ಬಿಳ್ತೀರಲ್ಲ? ಯಾಕ್‌ ಹಾಗೆ ತಳ್ತೀರಾ....? ನಿಮಗೇನು ಮರ್ಯಾದೆ ಇಲ್ಲವೇನು?... ಅಯ್ಯೋ, ಇದೇನಿದು ಹೀಗೆ ಸುರಂಗದೊಳಕ್ಕೆ ತಳ್ತಾ ಇದ್ದಾರಲ್ಲ! ಅಬ್ಬಾ, ಅಬ್ಬಾ... ಏನು ಜನ! ಏನು ಕತೆ! ಅಯ್ಯೋ ಕೊನೆಗೂ ಒಳಕ್ಕೆ ತಳ್ಳಿಕೊಂಡೇ ಬಂದುಬಿಟ್ಟರಲ್ಲ? ಮೊದಲೇ ಈ ಕೆನ್ನೆ ಬೇರೆ ನೋಯ್ತಾ ಇದೆ, ಅದರಲ್ಲಿ ಈ ಜನಗಳ ತಳ್ಳಾಟ ಬೇರೆ. ಎಂಥ ಕತ್ತಲು ಈ ಸುರಂಗದಲ್ಲಿ! ಇನ್ನೂ ಜನ ಬರ್ತಾನೇ ಇದ್ದಾರೆ..... ಭಯಂಕರ ಸೆಖೆ.....ದಾಹ ಬೇರೆ. ಕತ್ತಲಲ್ಲಿ ಏನೂ ಸರಿಯಾಗಿ ಕಾಣ್ತಾನೇ ಇಲ್ಲವಲ್ಲಾ..... ಅಲ್ಲೆಲ್ಲೋ ಜಾಗ ಇರೋ ಹಾಗಿದೆ... ಅಬ್ಬಾ! ಸುಸ್ತಾಗಿದೆ... ಅಲ್ಲಾದ್ರೂ ಹೋಗಿ ಕೂತುಕೊಳ್ಳೋಣ.... ಏನು ಮಾತು, ಏನು ಗಲಾಟೆ ಈ ಜನದ್ದು. ಉಸ್ಸಪ್ಪ! ಯಾರದು ಅಲ್ಲಿ.. ಕೂತಿರೋದು? ಎಲ್ಲೋ ನೋಡಿದ ಹಾಗಿದೆಯೆಲ್ಲಾ..... ಕತ್ತಲಲ್ಲಿ ಸರಿಯಾಗಿ ಕಾಣ್ತಾನೇ ಇಲ್ಲ. ಹೋ.... ಮಾಧು....... ಏಯ್‌ ಮಾಧು ಬಾರೋ ಇಲ್ಲಿ.... ಏನೋ ಇದೆಲ್ಲಾ? ಯಾಕ್‌ ಜನ ಹೀಗೆ ಕತ್ತಲು ಸುರಂಗದೊಳಕ್ಕೆ ಬರ್ತಾ ಇದಾರೆ? ಅವರೆಲ್ಲಾ ಬರ್ತಾ ಇದಾರಾ ಅಥವಾ ಅವರನ್ನೆಲ್ಲಾ ತಳ್ತಾ ಇದಾರಾ? ಅದಿರ್ಲಿ ಹೇಗಿದೀಯಾ? ನಿನ್ನ ನೋಡಿ ಎಷ್ಟು ವರ್ಷ ಆಗಿತ್ತು? ಏನ್ಸಮಾಚಾರ? ಏನು ಇದೆಲ್ಲಾ? ಏನೆಂದೆ?.... ನಿನಗೂ ಅರ್ಥ ಆಗ್ತಾ ಇಲ್ಲ ಅಂದೆಯಾ? ಅಬ್ಬಾ ಏನು ಗಲಾಟೆ, ಮಾತಾಡೋದೆ ಸರಿಯಾಗಿ ಕೇಳಿಸ್ತಾ ಇಲ್ಲ. ಇಲ್ಲೇ ಕೂತ್ಕೋ... ಹೋಗ್ಲಿ  ಮಾತಾದ್ರೂ ಆಡೋಣ, ಇನ್ನೇನು ಕೆಲ್ಸ. ಅಂದಹಾಗೆ ಈಗ ಏನು ಮಾಡ್ತಾ ಇದೀಯಾ? ಏನಾದ್ರೂ ಕೆಲ್ಸಗಿಲ್ಸ ಸಿಕ್ಕಿದೆಯೇನು? ಏನಂದೆ? ಜೋರಾಗಿ ಮಾತಾಡೋ! ಏನೂ ಇಲ್ವಾ? ನಿರುದೋಗಿ ಅನ್ನು ನನ್ನ ಹಾಗೆ, ನನಗೂ ಅಷ್ಟೇ ಕಣೋ, ಕೆಲ್ಸಾನೂ ಇಲ್ಲ, ಗಿಲ್ಸಾನೂ ಇಲ್ಲ, ಹೀಗೆ ಭಿಕಾರಿ ಹಾಗೆ ಅಲೆದಾಡೋದೇ ಕೆಲ್ಸ. ಏನು ಮಾಡೋಣ ಈಗ ಈ ಗಲಾಟೆಯಲ್ಲಿ, ಈ ಕತ್ತಲಲ್ಲಿ? ಏನಂದೆ? ಕತೆ ಹೇಳು ಅಂದೆಯಾ? ಒಳ್ಳೇವ್ನು ನೀನು, ಒಳ್ಳೇ ಸಣ್ಣ ಮಕ್ಕಳ ಥರ ಕೇಳ್ತೀಯಲ್ಲಾ ಕತೆ ಹೇಳು ಅಂತಾ? ನನಗ್ಯಾವ ಕತೆ ಬರುತ್ತೆ ಹೇಳು? ಏನು, ಇಷ್ಟು ದಿನದ್ದು ನನ್ನದೇ ಕತೆ ಹೇಳು ಅಂದೆಯಾ? ಒಳ್ಳೇ ವಿಚಿತ್ರ ಕತೆ ಮಾರಾಯಾ ಅದು, ಹ್ಹೂಂ, ಹೋಗ್ಲಿ ಸಮಯ ಕಳೀಲಿಕ್ಕೆ ಅದಾದ್ರೂ ಹೇಳ್ತೀನಿ... ನನ್ನ ಕತೆ... ಎಲ್ಲಿಂದ ಶುರು ಮಾಡಲಿ? ನಾವಿಬ್ರೂ ಕಾಲೇಜು ಮುಗಿಸೋವರ್ಗೂ ಜೊತೇಲೇ ಇದ್ವಿ....ಹ್ಹೂಂ ಅಲ್ಲಿಂದ್ಲೇ ನನ್ನ ಕತೆ ಶುರುವಾಗಿದ್ದು... ಇದೇನಿದು ಜನಾ ಎಲ್ಲಾ ನಿಶ್ಶಬ್ದ ಆಗಿಬಿಟ್ರು..... ಎಲ್ಲರೂ ನನ್ನ ಕತೆ ಕೇಳಿಸಿಕೊಳ್ಳುವವರಂತೆ.... ಇರ್ಲಿ ಬಿಡು, ನಾನು ಕಿರುಚಿಕೊಂಡು ಕತೆ ಹೇಳೋದು ತಪ್ಪಿತು, ಬಹುಶಃ ಇಂಥ ಕತೆ ಇನ್ಯಾರ ಜೀವನದಲ್ಲೂ ನಡೆದಿದೆ ಅನ್ಸುತ್ತೆ. ಏನಾಯ್ತು ಗೊತ್ತಾ? ನಾನು ಡಿಗ್ರಿ ಮುಗಿಸಿದೆ ಖುಷಿಯಾಗಿ, ಯಾವ್ದಾದ್ರೂ ಕೆಲಸಕ್ಕೆ ಸೇರಿಕೊಂಡು, ಮದುವೆ ಮಾಡಿಕೊಂಡು ಮಜವಾಗಿ ಇರಬಹುದು ಅಂತ..... ಉದ್ಯೋಗಕ್ಕೆ ಅಲೆದಾಡಿ ಅಲೆದಾಡಿ... ಅಪ್ಲಿಕೇಶನ್‌ ಹಾಕಿ ಹಾಕಿ ಸುಸ್ತಾಯಿತು. ಇಂಟರ್‌ ವ್ಯೂ ಮೇಲೆ ಇಂಟರ್‌ ವ್ಯೂ.... ಕೆಲಸ ಮಾತ್ರ ಇಲ್ಲ. ಈ ಕಾಲದಲ್ಲಿ ನಮ್ಮಂತಾವ್ರು ಬದುಕೋದೇ ಕಷ್ಟ, ಏನಂತೀಯಾ? ಹಣ ಇರ್ಬೇಕು, ಇಲ್ಲಾಂದ್ರೆ ರಾಜಕೀಯ ಗೊತ್ತಿರ್ಬೇಕು. ಬರ್ತಾ ಬರ್ತಾ ಪೈಸೆ ಸಿಕ್ಕೋದೂ ಕಷ್ಟ ಆಯ್ತು. ಮನೇವ್ರು ತಾನೆ ಎಷ್ಟು ದಿನ ಅಂತ ಕೊಡ್ತಾರೆ ಹೇಳು? ನಾನು ಅವರಿಗೆ ಭಾರ ಆಗಿದೀನಿ ಅನ್ನಿಸ್ತು. ಹೀಗೇ ಇರ್ಬೇಕಾದ್ರೆ ಏನಾಯ್ತು ಗೊತ್ತಾ, ಮನೇವ್ರು ನನ್ನ ಮರೆತು ಹೋಗಿದಾರೆ ಅಂತ ಅನ್ನಿಸ್ತಾ ಇತ್ತು. ರಾತ್ರಿ ಮನೆಗೆ ಹೋಗದೆ ಬೆಳಿಗ್ಗೆ ಹೋದ್ರೆ ಮೊದಲಿನಂತೆ ಹೆದರ್ಕೊಂಡು, ಎಲ್ಲಿ ಹೋಗಿದ್ದೆ? ಯಾಕ್‌ ಹೋಗಿದ್ದೆ? ಅಂತೆಲ್ಲಾ ಕೇಳ್ತಾನೇ ಇರಲಿಲ್ಲ. ಮನೆಗೆ ಲೇಟಾಗಿ ಹೋದ್ರೆ ನನಗಾಗಿ ಊಟಾನೂ ಉಳಿಸ್ತಾ ಇರಲಿಲ್ಲ. ಊಟಕ್ಕೆ ಕೂತ ತಕ್ಷಣ ಅಮ್ಮಾನೋ ಇಲ್ಲಾ ತಂಗೀನೋ ಬಂದು ಊಟ ಬಡಿಸ್ತಾ ಇದ್ದಂತವ್ರು ನಾನು ಕರೆದ್ರೂ ಸಹ ಬಂದು ಮಾತಾಡಿಸ್ತಾ ಇರಲಿಲ್ಲ. ಬ್ರತಾ ಬ್ರತಾ ಏನಾಯ್ತು ಅಂದ್ರೆ, ಒಂದಿವ್ಸ ನಾನು ಎದುರಿಗಿದ್ದರೂ ಸಹ ನಾನಿದ್ದೇನೆ ಅಂತ ಅವರಿಗೆ ಅನ್ನಿಸಲೇ ಇಲ್ಲ. ನನಗೆ ಹೆದರಿಕೆ ಆಯ್ತು. ನನ್ನ ಭೌತಿಕ ಅಸ್ತಿತ್ವದ ಬಗ್ಗೇನೇ ಸಂಶಯ ಬಂತು. ಓಡಿ ಹೋಗಿ ಕನ್ನಡಿಯಲ್ಲಿ ನೋಡ್ಕೋತೀನಿ, ನಾನಂದುಕೊಂಡ ಹಾಗೆ ನಾನು ಕನ್ನಡಿಯಲ್ಲಿ ಕಾಣಿಸಲೇ ಇಲ್ಲ. ಯಾಕ್‌ ಹೀಗಾಗೋಯ್ತು? ಛೇ! ನಾನು ಈ ಜಗತ್ತಿನ ಕಣ್ಣಿಗೆ ಕಾಣಿಸ್ತಾನೇ ಇಲ್ವಲ್ಲ ಅಂತಹ ಯೋಚನೆ ಮಾಡ್ತಾ ಇರೋವಾಗ ನನ್ನ ಹುಡುಗಿ ನೆನಪಾದಳು, ಅದೇ ನಿನಗೂ ಗೊತ್ತಲ್ಲ.... ನಮ್ಮ ಕ್ಲಾಸಲ್ಲೇ ಇದ್ಳು ನೋಡು, ತೆಳ್ಳಗೆ, ಕೋಲು ಮುಖದವಳು..... ಹಾ, ಅವಳೇ... ನಾವಿಬ್ರು ಮದ್ವೆ ಮಾಡ್ಕೋಬೇಕು ಅಂತ ಅಂದ್ಕೊಂಡಿದ್ವಿ. ಹೋಗ್ಲಿ ಅವಳ ಕಣ್ಣಿಗಾದ್ರೂ ಕಾಣ್ತೀನೋ ಇಲ್ವೋ ನೋಡೋಣ ಅಂತ ಅವಳ ಮನೆಗೆ ಹೋಗಿ ನೋಡ್ತೀನಿ.... ಉಹ್ಹೂಂ... ಅವಳ ಕಣ್ಣಿಗೂ ನಾನು ಕಾಣಿಸ್ಲೇ ಇಲ್ಲ. ಅವಳ ಮನೆಯಲ್ಲಿ ಅವಳನ್ನು ನೋಡಲು ಯಾರೋ ಗಂಡು ಬಂದಿದ್ದು ಎರಡೂ ಮನೆಯವರು ಮದುವೆಯ ಬಗ್ಗೆ ಮಾತನಾಡುತ್ತಿದ್ದರು. ಅವನು ಒಳ್ಳೇ ಸಾಹುಕಾರರ ಹುಡುಗ ಇದ್ದ ಹಾಗಿದ್ದ. ಮುಂದಿನ ತಿಂಗಳೇ ಮದುವೆ ಎನ್ನುತ್ತಿದ್ದರು. ನನ್ನ ಎದೆ ಧಸಕ್ಕೆಂತು. ಮತ್ತೆ ಯೋಚನೆ ಮಾಡ್ದೆ, ಹೋಗ್ಲಿ ಬಿಡು ಅವನ್ನೇ ಮದ್ವೆ ಆಗ್ಲಿ, ನನ್ನನ್ನೇ ಸಾಕಿಕೊಳ್ಳಲು ತಾಕತ್ತಿಲ್ಲದ ನನ್ನನ್ನ ಮದ್ವೆ ಆಗಿ ಅವಳು ತಾನೆ ಹೇಗೆ ಬದುಕೋದು? ಹಾಗೆಂದು ಯೋಚನೆ ಮಾಡಿ ಅಲ್ಲಿಂದ ಬಂದುಬಿಟ್ಟೆ. ಏನಂದೆ, ನಿನಗೇನೂ ಅನ್ನಿಸ್ಲೇ ಇಲ್ಲ ಅಂದ್ಯಾ? ಬಿಡು ಮಾರಾಯಾ.... ಏನನ್ಸುತ್ತೆ, ಅವಳು ಒಳ್ಳೇ ಕೆಲಸ ಮಾಡ್ತಾ ಇದಾಳೆ ಅನ್ನಿಸ್ತು.

ಹೀಗೆ ಜಗತ್ತಿಗೆ ಇಲ್ಲದವನಾಗಿ, ನನ್ನ ಅಸ್ತಿತ್ವದ ಅರಿವು ನನಗೆ ಮಾತ್ರ ಗೊತ್ತಿದ್ದು ಬದುಕ್ತಾ ಇರೋವಾಗ ಒಂದಿವ್ಸ ಅದ್ಯಾವುದೋ ಇಂಟರ್‌ ವ್ಯೂ ಬಂತು. ನಾನು ಆಶಾವಾದಿ ನೋಡು, ಒಂದು ಇಂಟರ್‌ ವ್ಯೂ ಸಹ ಮಿಸ್‌ ಮಾಡ್ತಾ ಇರಲಿಲ್ಲ. ನಾನು ಅಲ್ಲಿ ಸಹ ಯಾರ ಕಣ್ಣಿಗೂ ಕಾಣಿಸೋದಿಲ್ಲ ಅಂದುಕೊಂಡಿದ್ದೆ, ಆದ್ರೆ ಅಲ್ಲಿ ಹಾಗಾಗಲಿಲ್ಲ. ಇಂಟರ್‌ ವ್ಯೂನಲ್ಲಿ ಅದೇ ಮಾಮೂಲಿ ಪ್ರಶ್ನೆಗಳು.... ನಿನ್ನ ಮೂಗ್ಯಾಕೆ ಮೊಂಡ? ನಿನ್ನ ಕಿವಿ ಯಾಕೆ ಅಗಲ? ನಿನ್ನ ಕೂದಲ್ಯಾಕೆ ಗುಂಗುರು?... ಇದೇ ಪ್ರಶ್ನೆಗಳು. ನನಗೆ ರೇಗಿತು ನೋಡು, ಪ್ರತಿ ಇಂಟರ್‌ ವ್ಯೂನಲ್ಲೂ ರೇಗ್ತಾ ಇತ್ತು. ಆದ್ರೆ ಈ ಸಾರಿ ಏನಾದ್ರೂ ಮಾಡ್ಲೇಬೇಕು ಅಂತ ಮೇಲೆದ್ದು ಅವನ ಕಪಾಳಕ್ಕೆ ಬಾರಿಸಿದೆ. ಆಶ್ಚರ್ಯ ಮಾರಾಯಾ, ಒಳ್ಳೆ ಗಾಳಿಯಲ್ಲಿ ಬೀಸಿದ ಹಾಗಾಯ್ತು... ಅವನಿಗೇನೂ ಆಗಲೇ ಇಲ್ಲ. ಆಗ ನಮ್ಮಂತಾವ್ರ ಕೈಗಳು ಅಷ್ಟು ದೊಡ್ಡ ಮನುಷ್ಯರವರೆಗೂ ಹೋಗಲ್ಲ ಅಂತ ಅನ್ನಿಸ್ತು. ಅಲ್ಲೇ ಟೇಬಲ್‌ ಮೇಲಿದ್ದ ಪೇಪರ್‌ ವೇಟ್‌ ನಿಂದ ಅವನ ಮೂಗನ್ನು ಜಜ್ಜಿ ಬಿಡಬೇಕು ಅಂತ ಸಿಟ್ಟಿನಿಂದ ಅದನ್ನು ಎತ್ಕೊಳ್ಳೋಕೆ ಹೋದ್ರೆ.... ಅಬ್ಬಾ! ಎಂಥ ತೂಕ ಅಂತೀಯಾ ಆ ಪೇಪರ್‌ ವೇಟ್! ನನ್ನ ಕೈಲಿ ಅದನ್ನು ಎತ್ತೋಕೆ ಆಗ್ಲೇ ಇಲ್ಲ, ಆಗ ಅವನಿಗನ್ನಿಸಿತು, ಹೋ ಇವನೇನೋ ಮಾಡ್ತಾನೆ ಅಂತ, ತಕ್ಷಣ ನನ್ನ ಕಪಾಳಕ್ಕೆ ಬಾರಿಸಿದ. ಅಬ್ಬಾ! ಎಂಥಾ ಏಟು ಅಂತೀಯಾ! ಅಂಥ ಏಟು ನನ್ನ ಜೀವನದಲ್ಲೇ ತಿಂದಿರಲಿಲ್ಲ. ಕೆನ್ನೆ ಊದಿಕೊಂಡು ಹೋಯ್ತು. ತಲೆ ಸುತ್ತಿಬಂದು ಕಣ್ಣು ಕಪ್ಪಾಯಿತು. ಜ್ಞಾನ ತಪ್ಪಿ ಅಲ್ಲೇ ಬಿದ್ದೆ.

ಮತ್ತೆ ಎಚ್ಚರಾಗಿ ನೋಡ್ತೀನಿ, ಈ ಸುರಂಗದಾಚೇ ಬಿದ್ದಿದ್ದೆ... ಜನ ಎಲ್ಲಾ ತಳ್ಳಿ ಬಿಟ್ರು.. ಇಲ್ಲಿಗೆ ಈ ಕತ್ತಲ ಸುರಂಗದೊಳಕ್ಕೆ ಬಂದು ಬಿಟ್ಟೆ. ಆಮೇಲೆ ಎಲ್ಲಾ ನಿನಗೇ ತಿಳಿದಿದೆಯಲ್ಲಾ.... ಇಷ್ಟೇ ನನ್ನ ಕತೆ. ಏನಂದೆ? ಈ ಕತೆ ನಿನ್ನ ಕತೆ ಅಂದೆಯಾ, ಹಾಗಾದ್ರೆ ನಿನ್ನ ಜೀವನದಲ್ಲೂ ಹೀಗೇ ನಡೆದಿದೆ ಅನ್ನು. ಹೇ, ಅದ್ಯಾಕೆ ಇಷ್ಟೊತ್ತು ನಿಶ್ಶಬ್ದವಾಗಿದ್ದ ಜನ ಈಗ ಗಲಾಟೆ ಮಾಡ್ತಾ ಇದ್ದಾರೆ? ಕೇಳಿಸ್ಕೊಂಡ್ಯಾ ಜನ ಎಲ್ಲಾ ಏನು ಹೇಳ್ತಾ ಇದಾರೆ, ಈ ಕತೆ ನನ್ನದು, ಈ ಕತೆ ನನ್ನದು ಅಂತ ಕೂಗ್ತಾ ಇದ್ದಾರಲ್ಲ..... ಇಲ್ರಪ್ಪ, ಇಷ್ಟುತ್ತು ಹೇಳಿದ ಕತೆ ನನ್ನದು, ಸ್ವಂತ ನನ್ನ ಜೀವನದಲ್ಲಿ ನಡೆದದ್ದು. ಈ ಕತೆ ನನ್ನದು..... ಅಯ್ಯೋ, ಈ ಜನ ಕೇಳ್ತಾ ಇಲ್ಲವಲ್ಲ.... ಹೋಗ್ಲೀ ನಡೀ ನಾವೂ ಹೋಗಿ ಅವರೊಟ್ಟಿಗೇ ಕೂಗೋಣ.... ನಾವೆಲ್ಲಾ ಒಂದೇ ದೇಶದ ಪ್ರಜೆಗಳಲ್ವೆ?

 

3 ಕಾಮೆಂಟ್‌ಗಳು:

Unknown ಹೇಳಿದರು...

Very nicely written Balu

Bunde & His Friends ಹೇಳಿದರು...

ನಲವತ್ತು ವರ್ಷದ ಹಿಂದೆಯೇ ನಿಮ್ಮೊಳೊಗೊಬ್ಬ ಕಥೆಗಾರನಿದ್ದ ಬಾಳು.... ಅವನಿನ್ನೂ ಬದುಕಿದ್ದಾನೆ-ಇಂಥ ಹಲವು ಕಥೆಗಳನ್ನು ಹೇಳಲು,ಹಂಚಿಕೊಳ್ಳಲು...ಇಂದಿಗೂ ಪ್ರಸ್ತುತ... ಇಂದಿಗೂ ಹೆಚ್ಚು ಪ್ರಸ್ತುತವೇನೋ? ಚಿಕ್ಕ, ಚಂದದ ಕಥೆ...

Girish Babu ಹೇಳಿದರು...

ಪದವಿ ಮುಗಿಸಿದ ನಂತರ ಕೆಲಸ ಸಿಗುವವರೆಗಿನ ಅವಧಿ ಭಯಾನಕವಾದದ್ದು. ಆ ತುಮುಲಗಳನ್ನು ಅನುಭವಿಸಿದವರಿಗೆ ಅದರ ಹೊಡೆತ ಚೆನ್ನಾಗಿ ನೆನಪಿರುತ್ತದೆ. ಈ ಅವಧಿಯಲ್ಲಿ ತಮ್ಮವರಿಂದಲೇ ಅಸಡ್ಡೆಗೆ ಒಳಗಾಗುವುದು ಬಹಳ ಹಿಂಸೆಯ ವಿಷಯ. ಈ ಕಥೆ ನನ್ನ ನಿರುದ್ಯೋಗ ಅವಧಿಯ ಅನೇಕ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಅದಕ್ಕಾಗಿ ಡಾಕ್ಟರ್ ಬಾಲಕೃಷ್ಣ ಅವರಿಗೆ ಧನ್ಯವಾದಗಳು