ಸೋಮವಾರ, ಜೂನ್ 14, 2021

ರೋಸಾಲಿಂಡ್ ಫ್ರಾಂಕ್ಲಿನ್ - ಡಿ.ಎನ್.ಎ. ರಚನೆ ಸಂಶೋಧನೆಯ ದುರಂತ ನಾಯಕಿ


               ಏಪ್ರಿಲ್ 1953ರ ಪ್ರತಿಷ್ಠಿತ `ನೇಚರ್ಪತ್ರಿಕೆಯಲ್ಲಿ ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಬರೆದ ಒಂದು ಕಿರು ವೈಜ್ಞಾನಿಕ ಪ್ರಬಂಧ ಪ್ರಕಟವಾಯಿತು. ಆಧುನಿಕ ವೈಜ್ಞಾನಿಕ ಜಗತ್ತಿನಲ್ಲಿ ದೊಡ್ಡ ಕ್ರಾಂತಿಯುಂಟುಮಾಡಿದ ಈ ಪ್ರಬಂಧ ಎಲ್ಲ ಜೀವಿಗಳ ಜೀವಿಕೋಶಗಳಲ್ಲಿನ ಆನುವಂಶಿಕ ಧಾತುವಾದ ಡಿ.ಎನ್.ಎ.ನ (ಡಿಯಾಕ್ಸಿರೈಬೋಸ್ ನ್ಯೂಕ್ಲಿಯಿಕ್ ಆಮ್ಲ) ರಾಸಾಯನಿಕ ರಚನೆ ಎರಡು ಎಳೆಗಳ ಸುರುಳಿಯಾಕಾರವೆಂದು (`ಡಬಲ್ ಹೆಲಿಕ್ಸ್’) ಪ್ರಸ್ತಾವಿಸಿತ್ತು. ಇದು ಅದ್ಭುತ ಸಂಶೋಧನೆಯಾದ್ದರಿಂದ ವ್ಯಾಟ್ಸನ್ ಮತ್ತು ಕ್ರಿಕ್‍ರವರಿಗೆ ಹಾಗೂ ಮತ್ತೊಬ್ಬ ವಿಜ್ಞಾನಿ ಮೌರೀಸ್ ವಿಲ್ಕಿನ್ಸ್‍ರವರಿಗೆ 1962ರಲ್ಲಿ ನೋಬೆಲ್ ಪ್ರಶಸ್ತಿ ಸಹ ದೊರಕಿತು.

              ಆದರೆ ವ್ಯಾಟ್ಸನ್ ಮತ್ತು ಕ್ರಿಕ್‍ರವರು ತಮ್ಮ ಪ್ರಬಂಧಕ್ಕಾಗಿ ಡಿ.ಎನ್.ಎ. ಕುರಿತಂತೆ ಯಾವುದೇ ಪ್ರಯೋಗವನ್ನೂ ಮಾಡಿರಲಿಲ್ಲವೆಂಬುದನ್ನು ಜನ ಬಹಳ ಬೇಗ ಮರೆತರು. ಅವರು ತಮ್ಮ ಸಂಶೋಧನಾ ಪ್ರಬಂಧಕ್ಕೆ ಆಧಾರವಾಗಿದ್ದ ಪ್ರಯೋಗಗಳನ್ನೆಲ್ಲಾ ಹಿಂದಿನ ಮೂರು ವರ್ಷಗಳು ಕಿಂಗ್ಸ್ ಕಾಲೇಜಿನ ಮೆಡಿಕಲ್ ರೀಸರ್ಚ್ ಕೌನ್ಸಿಲ್ ಬಯೋಫಿಸಿಕ್ಸ್ ಘಟಕದ ಸ್ಟ್ರ್ಯಾಂಡ್ ಪ್ರಯೋಗಾಲಯದಲ್ಲಿ ನಡೆಸಲಾಗಿತ್ತು. ಆ ಬಹುಪಾಲು ಸಂಶೋಧನೆಯನ್ನು ನಡೆಸಿದ್ದುದು ರೋಸಾಲಿಂಡ್ ಫ್ರಾಂಕ್ಲಿನ್ ಎಂಬ ಮಹಿಳಾ ವಿಜ್ಞಾನಿ. ಡಿ.ಎನ್.ಎ. ರಾಸಾಯನಿಕ ರಚನೆ ಅರ್ಥಮಾಡಿಕೊಳ್ಳುವಲ್ಲಿ ಆಕೆಯ ಕೊಡುಗೆ ಮಹತ್ವದ್ದು. ಆಕೆಯ ಸಂಶೋಧನೆಗಳನ್ನು ಆಕೆಗೆ ತಿಳಿಸದೆ, ಆಕೆಯ ಅನುಮತಿಯಿಲ್ಲದೆ ವ್ಯಾಟ್ಸನ್ ಮತ್ತು ಕ್ರಿಕ್‍ರವರು ವಿಲ್ಕಿನ್ಸ್‍ರವರ ಸಹಾಯದಿಂದ ಬಳಸಿಕೊಂಡು ಡಿ.ಎನ್.ಎ. ರಾಸಾಯನಿಕ ರಚನೆ ಕಂಡುಹಿಡಿದ ಪ್ರಖ್ಯಾತ ವಿಜ್ಞಾನಿಗಳಾದರು. ಅವರು ನೋಬೆಲ್ ಪ್ರಶಸ್ತಿ ಪಡೆದಾಗ ರೋಸಾಲಿಂಡ್ ಫ್ರಾಂಕ್ಲಿನ್ ಅಂಡಾಶಯ ಕ್ಯಾನ್ಸರ್‍ನಿಂದ ತಮ್ಮ 37ನೇ ವಯಸ್ಸಿನಲ್ಲಿಯೇ ಜೀವತೆತ್ತು ನಾಲ್ಕು ವರ್ಷಗಳಾಗಿದ್ದವು. ದುರಂತವೆಂದರೆ ಇಂದು ಡಿ.ಎನ್.ಎ. ರಾಸಾಯನಿಕ ರಚನೆಯ ವಿಷಯ ಬಂದಾಗಲೆಲ್ಲಾ ವ್ಯಾಟ್ಸನ್ ಮತ್ತು ಕ್ರಿಕ್‍ರವರನ್ನು ನೆನಪಿಸಿಕೊಳ್ಳಲಾಗುತ್ತದೆ, ಆದರೆ ಕಿಂಗ್ಸ್ ಕಾಲೇಜಿನಲ್ಲಿ ನಡೆದ ಅದರ ಹಿಂದಿನ ಸಂಶೋಧನೆಗಳನ್ನು ಮತ್ತು ರೋಸಾಲಿಂಡ್ ಫ್ರಾಂಕ್ಲಿನ್‍ರವರ ಶ್ರಮವನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಡಿ.ಎನ್.ಎ. ರಾಸಾಯನಿಕ ರಚನೆಯ ಆವಿಷ್ಕಾರದ ಹಿಂದಿನ ಕತೆ ಹಲವಾರು ನೈತಿಕ ಪ್ರಶ್ನೆಗಳನ್ನು ಎದುರಿಗಿಡುತ್ತವೆ ಹಾಗೂ ಇದರ ಜೊತೆಗೆ ರೋಸಾಲಿಂಡ್ ಫ್ರಾಂಕ್ಲಿನ್ ಮಹಿಳೆಯಾಗಿದ್ದುದು ಮತ್ತೊಂದು.

              ರೋಸಾಲಿಂಡ್ ಫ್ರಾಂಕ್ಲಿನ್ 1951ರಲ್ಲಿ ಲಂಡನ್ನಿನ ಕಿಂಗ್ಸ್ ಕಾಲೇಜಿನ ಪ್ರೊಫೆಸರ್ ರ್ಯಾಂಡಲ್‍ರವರ ಪ್ರಯೋಗಾಲಯ ದಲ್ಲಿ ತಮ್ಮ ಸಂಶೋಧನೆ ಪ್ರಾರಂಭಿಸಿದರು. ಅದಕ್ಕೆ ಮೊದಲೇ ಆಕೆ ಹಲವಾರು ವರ್ಷಗಳು ಪ್ಯಾರಿಸ್‍ನಲ್ಲಿ ಕ್ಷ-ಕಿರಣ ವಿವರ್ತನೆ ತಂತ್ರಗಳಲ್ಲಿ (X-Ray Diffraction Techniques) ಪರಿಣತಿ ಪಡೆದದ್ದುದರಿಂದ ರ್ಯಾಂಡಲ್ ರವರು ಆಕೆಯನ್ನು ತಮ್ಮ ಪ್ರಯೋಗಾಲಯದಲ್ಲಿ ನೇಮಿಸಿ ಕೊಂಡಿದ್ದರು. ಆಕೆ ಅಲ್ಲಿ ಡಿ.ಎನ್.ಎ.ನ ಕ್ರಿಸ್ಟಲ್ ರಚನೆಯ ಬಗೆಗೆ ತಮ್ಮ ಸಂಶೋಧನೆಗಳನ್ನು ಪ್ರಾರಂಭಿಸಿದರು. ಅದೇ ಪ್ರಯೋಗಾಲಯದಲ್ಲಿ ಮೌರೀಸ್ ವಿಲ್ಕಿನ್ಸ್‍ರವರು ಈ ಮೊದಲೇ ಅಲ್ಲಿ ಡಿ.ಎನ್.ಎ. ಬಗೆಗೆ ಅಧ್ಯಯನಗಳನ್ನು ನಡೆಸುತ್ತಿದ್ದರು, ಆದರೆ ಅವರ ಸಂಶೋಧನೆ ಡಿ.ಎನ್.ಎ.ನ ಜೈವಿಕ-ಭೌತಿಕ ಮತ್ತು ಜೈವಿಕ-ರಾಸಾಯನಿಕಗಳ ವಿಶ್ಲೇಷಣೆಯ ಬಗೆಗಿತ್ತು. ಇಬ್ಬರ ಸಂಶೋಧನೆಯೂ ಡಿ.ಎನ್.ಎ. ಬಗೆಗೇ ಆದರೂ ಇಬ್ಬರದೂ ವಿಭಿನ್ನ ಅಧ್ಯಯನ ಗಳಾಗಿದ್ದವು. ಇಬ್ಬರೂ ಒಂದುಗೂಡಿ ಸಂಶೋಧನೆಗಳನ್ನು ಮಾಡಬೇಕಿತ್ತು, ಆದರೆ ಮೊದಲ ದಿನದಿಂದಲೂ ಅವರಿಬ್ಬರ ನಡುವೆ `ವೃತ್ತಿ ವೈಮನಸ್ಯಉಂಟಾಗಿತ್ತು. ವಿಲ್ಕಿನ್ಸ್ ಈ ಮೊದಲೇ ಆ ಪ್ರಯೋಗಾಲಯದಲ್ಲಿ ಇದ್ದುದರಿಂದ ಫ್ರಾಂಕ್ಲಿನ್ ಅಲ್ಲಿಗೆ ಬಂದು ಸೇರಿಕೊಂಡಾಗ ಆತ ಆಕೆಯನ್ನು ತನ್ನ ಸಂಶೋಧನೆಗೆ `ಸಹಾಯಕಿಎಂದು ಪರಿಗಣಿಸಿದ, ಆದರೆ ಫ್ರಾಂಕ್ಲಿನ್ ತಾನೂ ಸಹ ಆ ಪ್ರಯೋಗಾಲಯದ ಆತನಿಗೆ ಸಮನಾದ ಸಂಶೋಧಕಿ ಎಂದು ಭಾವಿಸಿದಳು. ಹಾಗಾಗಿ ಅವರಿಬ್ಬರ ನಡುವೆ ಸಂಶೋಧನೆಯ ಮಾತಿರಲಿ, ಬಹುಪಾಲು ಮಾತೇ ಇರಲಿಲ್ಲ.

              ಅದೇ ಸಮಯದಲ್ಲಿ ಅಮೆರಿಕದವನಾದ ಜೇಮ್ಸ್ ವ್ಯಾಟ್ಸನ್ ಕೇಂಬ್ರಿಡ್ಜ್‍ನ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ. ಆತನಿಗೆ ಮತ್ತೊಂದು ವಿಶ್ವವಿದ್ಯಾನಿಲಯದಲ್ಲಿ ಜೀವರಾಸಾಯನಶಾಸ್ತ್ರ ಅಧ್ಯಯನಕ್ಕೆ ಫೆಲೋಶಿಪ್ ದೊರೆತಿತ್ತು. ಆದರೆ ಆತ ಇಟಲಿಯಲ್ಲಿ ಡಿ.ಎನ್.ಎ. ಬಗೆಗೆ ವಿಲ್ಕಿನ್ಸ್ ನೀಡಿದ ಉಪನ್ಯಾಸವನ್ನು ಕೇಳಿ ತನ್ನ ಫೆಲೋಶಿಪ್‍ನ ಒಪ್ಪಂದವನ್ನು ಉಲ್ಲಂಘಿಸಿ ಕೇಂಬ್ರಿಡ್ಜ್‍ಗೆ ಹೋಗಿದ್ದ. ಅಲ್ಲಿ ಹಲವಾರು ತಿಂಗಳು ಕಳೆದನಂತರ ತನಗೆ ಫೆಲೋಶಿಪ್ ನೀಡಿದ್ದ ಸಮಿತಿಯನ್ನು ತಾನು ಈಗಾಗಲೇ ಕೇಂಬ್ರಿಡ್ಜ್‍ನಲ್ಲಿರುವುದರಿಂದ ಅಲ್ಲಿಗೆ ತನ್ನ ಫೆಲೋಶಿಪ್ ವರ್ಗಾಯಿಸಲು ಸಾಧ್ಯವೆ ಎಂದು ಕೇಳಿದ. ಅವರು ಅದನ್ನು ತಿರಸ್ಕರಿಸಿದರು, ಆದರೆ ಮತ್ತೊಂದು ಸಣ್ಣ ಆರ್ಥಿಕ ಸಹಾಯವನ್ನು ಒದಗಿಸಿದರು. ಹಾಗಾಗಿ ವ್ಯಾಟ್ಸನ್ ಕ್ಯಾವೆಂಡಿಷ್ ಪ್ರಯೋಗಾಲಯದ ಮತ್ತೊಬ್ಬ ಸದಸ್ಯ ಫ್ರಾನ್ಸಿಸ್ ಕ್ರಿಕ್‍ರವರೊಡನೆ ಡಿ.ಎನ್.ಎ. ರಚನೆಯ ಅನ್ವೇಷಣೆಯ ಸಂಶೋಧನೆ ಮುಂದುವರಿಸಿದರು.

ಅಲ್ಲಿ ವ್ಯಾಟ್ಸನ್ ಅಥವಾ ಕ್ರಿಕ್‍ರವರು ಡಿ.ಎನ್.ಎ. ಬಗೆಗೆ ಸಂಶೋಧನೆ ಮಾಡುವಂತಿರಲಿಲ್ಲ, ಏಕೆಂದರೆ ಈಗಾಗಲೇ ಕಿಂಗ್ಸ್ ಕಾಲೇಜಿನ ರ್ಯಾಂಡಲ್ ಪ್ರಯೋಗಾಲಯದಲ್ಲಿ ಅದರ ಬಗೆಗೆ ಈಗಾಗಲೇ ಸಂಶೋಧನೆಗಳು ನಡೆಯುತ್ತಿದ್ದು, ಒಂದೇ ವಿಷಯದ ಬಗೆಗೆ ಎರಡು ಪ್ರಯೋಗಾಲಯಗಳು ಸಂಶೋಧನೆ ನಡೆಸುವುದು ವ್ಯರ್ಥ ವೆಚ್ಚವೆಂದು ಭಾವಿಸಲಾಗುತ್ತಿತ್ತು. ಏಕೆಂದರೆ ಎರಡನೇ ಮಹಾಯುದ್ಧದ ನಂತರ ಯುದ್ಧದಿಂದಾಗಿ ಇಂಗ್ಲೆಂಡಿನ ಆರ್ಥಿಕತೆ ತೀರಾ ಸಂದಿಗ್ಧ ಸ್ಥಿತಿಯಲ್ಲಿತ್ತು. ಆದರೂ ಅವರು ತಮ್ಮ ಸಂಶೋಧನೆಗಳನ್ನು ಮುಂದುವರಿಸಿದರು.

ತಮ್ಮಲ್ಲಿದ್ದ ಸೀಮಿತ ಮಾಹಿತಿಯಿಂದ ವ್ಯಾಟ್ಸನ್ ಮತ್ತು ಕ್ರಿಕ್‍ರವರು ಡಿ.ಎನ್.ಎ. ರಚನೆಯ ಸಾಧ್ಯತೆಯನ್ನು ಕಂಡುಕೊಳ್ಳಲು ಅಣು ಮಾದರಿಗಳೊಂದಿಗೆ ಪ್ರಯತ್ನಿಸತೊಡಗಿದರು. ಫಾಸ್ಫೇಟ್ ಸಕ್ಕರೆಯ ಹಂದರದ ಹಾಗೂ ಒಳಭಾಗದಲ್ಲಿ ಹೊಂದಿರುವಂತೆ ಅವರು ಮೂರು ಎಳೆಗಳ ರಚನೆಯೊಂದನ್ನು ನಿರ್ಮಿಸಿದರು. ಅವರು ಅದನ್ನು ವಿಲ್ಕಿನ್ಸ್ ಮತ್ತು ಫ್ರಾಂಕ್ಲಿನ್‍ರವರಿಗೆ ಅದನ್ನು ತೋರಿಸಿದರು. ಅವರು ಕೂಡಲೇ ಪ್ರಸ್ತಾವಿತ ರಚನೆಯಲ್ಲಿನ ನ್ಯೂನತೆಗಳನ್ನು ತೋರಿಸಿಕೊಟ್ಟು ಆ ರಚನೆ ಸಾಧ್ಯವಾಗುವುದಿಲ್ಲವೆಂದರು. ಈ ವಿಫಲತೆಯು ಕ್ಯಾವೆಂಡಿಷ್ ಪ್ರಯೋಗಾಲಯದ ನಿರ್ದೇಶಕರಾದ ಲಾರೆನ್ಸ್ ಬ್ರ್ಯಾಗ್‍ರವರಿಗೆ ವ್ಯಾಟ್ಸನ್ ಮತ್ತು ಕ್ರಿಕ್‍ರವರ ಆ ಸಂಶೋಧನೆಯನ್ನು ನಿಲ್ಲಿಸಲು ಹೇಳಲು ಕಾರಣ ದೊರಕಿತು. ಆದರೂ ಅವರಿಬ್ಬರೂ ಅದರ ರಚನೆಯ ಬಗೆಗೆ ಯಾವುದೇ ಫಲಕಾಣದಿದ್ದರೂ ತಮ್ಮ ಆಲೋಚನೆಗಳನ್ನು ಮುಂದುವರಿಸಿದ್ದರು.

ಆದಾದ ಒಂದು ವರ್ಷಕ್ಕೂ ಹೆಚ್ಚಿನ ಸಮಯ ಕಳೆದನಂತರ ಅಮೆರಿಕದ ರಾಸಾಯನಶಾಸ್ತ್ರಜ್ಞ ಲಿನಸ್ ಪೌಲಿಂಗ್‍ರವರು ವ್ಯಾಟ್ಸನ್ ಮತ್ತು ಕ್ರಿಕ್‍ರವರ ಮೊದಲ ಪ್ರಯತ್ನದ ರೀತಿಯೇ ಇದ್ದ ಡಿ.ಎನ್.ಎ. ರಚನೆಯೊಂದನ್ನು ಪ್ರಸ್ತಾವಿಸಿದರು. ಇದರಿಂದಾಗಿ ಪುನಃ ಎಲ್ಲರ ಆಸಕ್ತಿ ಡಿ.ಎನ್.ಎ. ರಚನೆಯ ಆವಿಷ್ಕಾರದೆಡೆಗೆ ತಿರುಗಿತು. ಆಗ ವ್ಯಾಟ್ಸನ್‍ರವರು ಕಿಂಗ್ಸ್ ಕಾಲೇಜಿನ ವಿಲ್ಕಿನ್ಸ್‍ರವರನ್ನು ಭೇಟಿಯಾಗಲು ಹೋದರು. ಆಗ ವಿಲ್ಕಿನ್ಸ್‍ರವರು ವ್ಯಾಟ್ಸನ್‍ರವರಿಗೆ ರೋಸಲಿಂಡ್ ಫ್ರಾಂಕ್ಲಿನ್ ತೆಗೆದಿದ್ದ ಆಕೆಯ ಒಂದು ಅತ್ಯುತ್ತಮ ಕ್ಷ-ಕಿರಣದ ಫೋಟೋ ತೋರಿಸಿದರು. ಅದನ್ನು ನೋಡಿದ ವ್ಯಾಟ್ಸನ್‍ರವರಿಗೆ ಅದರ ಆಧಾರದ ಮೇಲೆ ಡಿ.ಎನ್.ಎ. ರಚನೆ ನಿರ್ಧರಿಸುವುದು ಸುಲಭವೆಂಬುದು ಹೊಳೆಯಿತು.

ವ್ಯಾಟ್ಸನ್‍ಗೆ ವಿಲ್ಕಿನ್ಸನ್ ತೋರಿಸಿದ ರೋಸಾಲಿಂಡ್ ಫ್ರಾಂಕ್ಲಿನ್ನರ ಕ್ಷ-ಕಿರಣ ಚಿತ್ರ.

ವ್ಯಾಟ್ಸನ್ ಕ್ಯಾವೆಂಡಿಷ್‍ಗೆ ಹಿಂದಿರುಗಿ ಕ್ರಿಕ್‍ರವರಿಗೆ ಫ್ರಾಂಕ್ಲಿನ್‍ರವರ ಫೋಟೋದ ಬಗ್ಗೆ ತಿಳಿಸಿ ಇಬ್ಬರೂ ತಮ್ಮ ಪ್ರಾಯೋಜನೆಯ ಬಗೆಗೆ ತೀವ್ರ ಅಧ್ಯಯನ ಪ್ರಾರಂಭಿಸಿದರು. ಕೊನೆಗೆ ವ್ಯಾಟ್ಸನ್‍ರವರಿಗೆ ಉತ್ತರ ಹೊಳೆಯಿತು- ಅಡೆನಿನ್ (A), ಥೈಮಿನ್ (T), ಗ್ವಾನಿನ್ (G) ಮತ್ತು ಸೈಟೋಸಿನ್ (C) ಪ್ರತ್ಯಾಮ್ಲಗಳನ್ನು ಜೋಡಿ ಮಾಡಿದಲ್ಲಿ ಅವು ಜಲಜನಕದ ಬಾಂಡ್‍ಗಳಿಂದ ಬಂಧಿತ ರಚನೆಯಾಗುತ್ತವೆ. ಅಂದರೆ ಅಡೆನಿನ್(A) ಥೈಮಿನ್(T)ನೊಂದಿಗೆ ಮತ್ತು ಗ್ವಾನಿನ್ (G) ಸೈಟೋಸಿನ್(C)ನೊಂದಿಗೆ. ಆತನಿಗೆ ಆ ಪ್ರತ್ಯಾಮ್ಲಗಳನ್ನು ಎರಡು ಎಳೆಯ ಫಾಸ್ಫೇಟ್ ಸಕ್ಕರೆಯ ಹಂದರದಲ್ಲಿ ನೂಲಿನ ಏಣಿಯಂತ ರಚನೆಯಲ್ಲಿ ಅಡ್ಡ ಕೋಲುಗಳ ಹಾಗೆ ಜೋಡಿಸಲು ಸಾಧ್ಯವಾಯಿತು.

ವ್ಯಾಟ್ಸನ್ ಮತ್ತು ಕ್ರಿಕ್‍ರವರು ತಮ್ಮ ಆವಿಷ್ಕಾರವನ್ನು ವೈಜ್ಞಾನಿಕ ಪತ್ರಿಕೆ `ನೇಚರ್ನಲ್ಲಿ ಏಪ್ರಿಲ್ 1953ರಂದು ಪ್ರಕಟಿಸಿದರು. ಅವರು ರೋಸಾಲಿಂಡ್ ಫ್ರಾಂಕ್ಲಿನ್‍ರವರಿಗೆ ಆಕೆಯ ಮಾಹಿತಿಯನ್ನು ಬಳಸಿಕೊಂಡಿರುವುದರ ಬಗೆಗೆ ತಿಳಿಸಲಿಲ್ಲ, ವಿಲ್ಕಿನ್ಸ್‍ರವರೂ ಸಹ ತಿಳಿಸಲಿಲ್ಲ. ಹಾಗಾಗಿ ಆಕೆಗೆ ಈ ವಿಜ್ಞಾನಿಗಳು ತನ್ನ ಮಾಹಿತಿಯನ್ನು ಬಳಸಿಕೊಂಡಿರುವ ವಿಷಯ ತಿಳಿಸಲೇ ಇಲ್ಲ. ಕೊನೆಗೆ ಆಕೆಗೆ ಆ ವಿಷಯ ತಿಳಿದರೂ ಸಹ ಈ ವಿಜ್ಞಾನಿಗಳು ಆಕೆಯ ಕೊಡುಗೆಯನ್ನು ಸ್ಮರಿಸಲೇ ಇಲ್ಲ.

ಫ್ರಾಂಕ್ಲಿನ್‍ರವರ ಕ್ಷ-ಕಿರಣ ಫೋಟೋಗ್ರಾಫ್ ನೋಡಿದ ನಂತರ ವ್ಯಾಟ್ಸನ್‍ರವರಿಗೆ ಡಿ.ಎನ್.ಎ. ಅಣು ಎರಡೆಳೆಯ ರಚನೆ ಹೊಂದಿದೆ ಎಂಬುದು ತಿಳಿದುಬಂದು. ಆಗ ಆತ ಹಲವಾರು ವಿಧಗಳಲ್ಲಿ ಮುಂದುವರಿಯಬಹುದಿತ್ತು. ಆತ ಕಿಂಗ್ಸ್ ಕಾಲೇಜ್‍ರವರೊಂದಿಗೆ ಜಂಟಿ ಪ್ರಾಯೋಜನೆಯ ಸಲಹೆ ನೀಡಬಹುದಿತ್ತು. ಆಗ ರೋಸಾಲಿಂಡ್ ಫ್ರಾಂಕ್ಲಿನ್ ಒಪ್ಪಿಕೊಳ್ಳುತ್ತಿದ್ದಳು ಎನ್ನುವುದು ಸಂಶಯಾಸ್ಪದ. ರೋಸಾಲಿಂಡ್ ಹಠಮಾರಿ ಎನ್ನುವುದು ಕೆಲವರ ಹೇಳಿಕೆ. ಆಕೆಯ ಬಹು ಮುಖ್ಯ ಫೋಟೋಗ್ರಾಫ್ ನೋಡಿದ ನಂತರ ವ್ಯಾಟ್ಸನ್ ಜಂಟಿ ಪ್ರಾಯೋಜನೆಗೆ ಸಲಹೆ ನೀಡುವುದು ಸಹ ನೈತಿಕವಾಗಿರುತ್ತಿರಲಿಲ್ಲ. ರೋಸಾಲಿಂಡ್ ತನ್ನ ಸಂಶೋಧನೆಯ ಅಹಳ ಮುಖ್ಯ ಫೋಟೋಗ್ರಾಫ್ ಯಾರೋ ತನಗರಿವಿಲ್ಲದಂತೆ ನೋಡಿದವರೊಂದಿಗೆ ಕೆಲಸ ಮಾಡಲು ಸಹ ಒಪ್ಪಿಕೊಳ್ಳುವುದು ಸಾಧ್ಯವಿರುತ್ತಿರಲಿಲ್ಲ. ಜಂಟಿ ಪ್ರಾಯೋಜನೆಗೆ ವ್ಯಾಟ್ಸನ್ ಸಲಹೆ ನೀಡಿದ್ದಲ್ಲಿ ಆತ ಮೂಲ ಸಂಶೋಧಕಿಯ ಅನುಮತಿಯಿಲ್ಲದೆ ಆಕೆಯ ಸಂಶೋಧನೆಯನ್ನು ಬಳಸಿಕೊಳ್ಳಲು ಜಂಟಿ ಸಂಶೋಧನೆಗೆ ಸಲಹೆ ಕೊಡುತ್ತಿದ್ದಾನೆನ್ನುವುದು ಎಲ್ಲರಿಗೂ ತಿಳಿದುಬಿಡುತ್ತಿತ್ತು. ಇದರಿಂದಾಗಿ ಆತನ ವಿಜ್ಞಾನಿಯ ಭವಿಷ್ಯಕ್ಕೆ ಧಕ್ಕೆ ಬರುತ್ತಿತ್ತು.

ಇಷ್ಟೆಲ್ಲಾ ಆದರೂ ವ್ಯಾಟ್ಸನ್ ಮತ್ತು ಕ್ರಿಕ್‍ರವರು ತಮ್ಮ ಸಂಶೋಧನೆಯನ್ನು ಮುಂದುವರಿಸಬಹುದಿತ್ತು. ಆದರೆ ತಮ್ಮ ಆವಿಷ್ಕಾರದ ಪ್ರಕಟಣೆಯಲ್ಲಿ ರೋಸಾಲಿಂಡ್‍ರವರ ಕೊಡುಗೆಯನ್ನು ಸ್ಮರಿಸಬಹುದಿತ್ತು. ಆದರೆ ಆ ಕಾರ್ಯದಲ್ಲಿ ಆಕೆಯ ಅಪ್ರಕಟಿತ ವೈಜ್ಞಾನಿಕ ಸಂಶೋಧನೆಯನ್ನು ಆಕೆಯ ಅನುಮತಿಯಿಲ್ಲದೆ ಬಳಸಿಕೊಂಡಿರುವುದಾಗಿ ಅವರು ಒಪ್ಪಿಕೊಂಡಂತೆ ಆಗುತ್ತಿತ್ತು. ಆ ರೀತಿ ಅವರು ಮಾಡಿದ್ದಿದ್ದರೆ ಬಹುಶಃ ಅದು ಅವರಿಗೆ ನೋಬೆಲ್ ಪ್ರಶಸ್ತಿ ತಂದುಕೊಡುವಲ್ಲಿ ತೊಡಕಾಗುತ್ತಿತ್ತು ಎನ್ನುವುದು ಅವರಿಗೆ ತಿಳಿದಿತ್ತು.

ವ್ಯಾಟ್ಸನ್‍ಗೆ ಇದ್ದ ಮತ್ತೊಂದು ಪ್ರಾಮಾಣಿಕ ಆಯ್ಕೆಯೆಂದರೆ, ಆತ ಡಿ.ಎನ್.ಎ. ಬಗೆಗಿನ ಕಾರ್ಯವನ್ನು ಸಂಪೂರ್ಣವಾಗಿ ನಿಲ್ಲಿಸುವುದು. ಏಕೆಂದರೆ, ರೋಸಾಲಿಂಡ್ ಫ್ರಾಂಕ್ಲಿನ್ ಜೀವನ ಚರಿತ್ರೆಯನ್ನು ಬರೆದಿರುವ ಸಾಯ್ರೆಯವರ ಪ್ರಕಾರ ಕ್ಯಾಂವೆಂಡಿಶ್ ಪ್ರಯೋಗಾಲಯ ಮತ್ತು ಕಿಂಗ್ಸ್ ಕಾಲೇಜುಗಳ ನಡುವಿದ್ದ ಅನೌಪಚಾರಿಕ ಒಪ್ಪಂದದ ಪ್ರಕಾರ ಡಿ.ಎನ್.ಎ. ಅಧ್ಯಯನ ಕಿಂಗ್ಸ್ ಕಾಲೇಜಿನ `ಆಸ್ತಿಯಾಗಿತ್ತು. ವ್ಯಾಟ್ಸನ್ ಅಥವಾ ಕ್ರಿಕ್ ಇಬ್ಬರೂ ಡಿ.ಎನ್.ಎ. ಕುರಿತು ಸಂಶೋಧನೆ ಮಾಡುವಂತಿರಲಿಲ್ಲ. ಆದರೆ ಮಹಾಭಿಲಾಷಿ ವ್ಯಾಟ್ಸನ್ ಈ ಆಯ್ಕೆಯ ಕಡೆಗೆ ಗಮನ ಹರಿಸುವಂಥವನಾಗಿರಲಿಲ್ಲ. ಅದರ ಬದಲಿಗೆ ವ್ಯಾಟ್ಸನ್ ಮತ್ತು ಕ್ರಿಕ್‍ರವರು ಡಿ.ಎನ್.ಎ. ಅಣು ರಚನೆಯ ಬಗೆಗಿನ ತಮ್ಮ ವರದಿಯನ್ನು ಪ್ರಕಟಿಸಿದರು ಹಾಗೂ ಅದರಲ್ಲಿ ಎಲ್ಲೂ ರೋಸಾಲಿಂಡ್ ಫ್ರಾಂಕ್ಲಿನ್ನಳ ಸಂಶೋಧನೆಯ ಕೊಡುಗೆಯ ಉಲ್ಲೇಖವೇ ಇರಲಿಲ್ಲ ಹಾಗಾಗಿ ಆಕೆ ತನಗೆ ಸಿಗಬೇಕಾದ ಗೌರವದಿಂದ ವಂಚಿತಳಾದಳು.

ಅಷ್ಟೇ ಅಲ್ಲ, ವ್ಯಾಟ್ಸನ್ ಬರೆದಿರುವ ತನ್ನ ಡಿ.ಎನ್.ಎ. `ಆವಿಷ್ಕಾರದ ಅನುಭವವಾದ `ದ ಡಬಲ್ ಹೆಲಿಕ್ಸ್ಕೃತಿಯಲ್ಲಿ ರೋಸಾಲಿಂಡ್ ಫ್ರಾಂಕ್ಲಿನ್ನಳ ಕೊಡುಗೆಯನ್ನು ಸ್ಮರಿಸದೇ ಇರುವುದಷ್ಟೇ ಅಲ್ಲ, ಆಕೆಯನ್ನು ತುಚ್ಛವಾಗಿ ಕಂಡಿದ್ದಾನೆ. ಇಡೀ ಪುಸ್ತಕದಲ್ಲಿ ಆತ ಆಕೆಯನ್ನು ಹೀನಾಯಗೈಯುವಂತೆ `ರೋಸಿಎಂದು ಕರೆದಿದ್ದಾನೆ ಹಾಗೂ ಆಕೆ ಡಿ.ಎನ್.ಎ.ನ ಸುರುಳಿ ರಚನೆಯನ್ನು ವಿರೋಧಿಸುತ್ತಿದ್ದಳು ಎಂದಿದ್ದಾನೆ. ಆಕೆ ಡಿ.ಎನ್.ಎ.ನ ಸುರುಳಿ ರಚನೆಯನ್ನು ವಿರೋಧಿಸಲು ಸಾಧ್ಯವೇ ಇರಲಿಲ್ಲ, ಏಕೆಂದರೆ ವ್ಯಾಟ್ಸನ್ ಮತ್ತು ಕ್ರಿಕ್‍ರವರು ಡಿ.ಎನ್.ಎ. ಅಣು ರಚನೆಯ ಬಗೆಗಿನ ತಮ್ಮ ವರದಿಯನ್ನು ಪ್ರಕಟಿಸಿದ ಎರಡು ವರ್ಷಗಳಿಗೂ ಮೊದಲೇ 1951ರ ನವೆಂಬರ್‍ನಲ್ಲಿ ಆಕೆ ಕಿಂಗ್ಸ್ ಕಾಲೇಜಿನಲ್ಲಿ ನೀಡಿದ ಉಪನ್ಯಾಸವೊಂದರಲ್ಲಿ ಡಿ.ಎನ್.ಎ. ಬಹುಶಃ ಸುರುಳಿ ಆಕಾರವಿದೆ ಹಾಗೂ ಹೊರಗಿನಿಂದ ಸಕ್ಕರೆ ಫಾಸ್ಫೇಟ್ ಆಧಾರವನ್ನು ಹೊಂದಿದೆ ಎಂದಿದ್ದರು.

ವ್ಯಾಟ್ಸನ್ ಹೇಗೆ ರೋಸಾಲಿಂಡ್ ಫ್ರಾಂಕ್ಲಿನ್‍ರವರ ಸಂಶೋಧನೆಯನ್ನು ಬಳಸಿಕೊಂಡು, ಅದನ್ನು ಸ್ಮರಿಸದೇ ತಾವು ಪ್ರಖ್ಯಾತರಾದರೋ ಅದೇ ರೀತಿ ಬ್ರಾಗ್ ಎಂಬ ವಿಜ್ಞಾನಿಯ ಮೇಲೆ ಅವರು ತಮ್ಮ ಸಂಶೋಧನೆಗಳನ್ನು ಬಳಸಿಕೊಳ್ಳುತ್ತಿದ್ದಾರೆಂದು ಹಾರಾಡಿದರು; ಅದು ಅವೈಜ್ಞಾನಿಕ ಮತ್ತು ಅನೈತಿಕ ಎಂದೆಲ್ಲಾ ಹೇಳಿದರು. ಈ ಎಲ್ಲವನ್ನೂ ತಮ್ಮ ಕೃತಿ `ದ ಡಬಲ್ ಹೆಲಿಕ್ಸ್ನಲ್ಲಿ ಬರೆದಿದ್ದು ಈ ಕೃತಿಯೇ ಅನೈತಿಕ ಎಂದು ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್ ಅದನ್ನು ಪ್ರಕಟಿಸಲು ತಿರಸ್ಕರಿಸಿತ್ತು.

ಆನ್ ಸಾಯ್ರೆ ಎಂಬ ಮಹಿಳೆ 1975ರಲ್ಲಿ `ರೋಸಾಲಿಂಡ್ ಫ್ರಾಂಕ್ಲಿನ್ ಅಂಡ್ ಡಿ.ಎನ್.ಎ.ಎನ್ನುವ ಪುಸ್ತಕ ಬರೆಯುವವರೆಗೂ ಡಿ.ಎನ್.ಎ. ರಚನೆ ಸಂಶೋಧನೆಯಲ್ಲಿ ರೋಸಾಲಿಂಡ್ ಫ್ರಾಂಕ್ಲಿನ್‍ಳ ಕೊಡುಗೆ ಏನೆಂಬುದು ಜಗತ್ತಿಗೆ ತಿಳಿದಿರಲಿಲ್ಲ. ಆಕೆ ರೋಸಾಲಿಂಡ್ ಫ್ರಾಂಕ್ಲಿನ್ನಳ ಬಗೆಗೆ ಮಾಹಿತಿ ಸಂಗ್ರಹಿಸುವಾಗ ಡಿ.ಎನ್.ಎ. ಕುರಿತಂತೆ ಹತ್ತು ಪುಸ್ತಕಗಳು ಸಿಕ್ಕರೆ ಅವುಗಳಲ್ಲಿನ ವಿಷಯ ಸೂಚಿಯಲ್ಲಿ ರೋಸಾಲಿಂಡ್ ಹೆಸರೇ ಇರಲಿಲ್ಲ. ಅವುಗಳಲ್ಲಿ ಒಂದು ರೋಸಾಲಿಂಡ್ ಬಗೆಗೆ ತುಚ್ಛವಾಗಿ ಬರೆದಿರುವ ವ್ಯಾಟ್ಸನ್ನರ `ದ ಡಬಲ್ ಹೆಲಿಕ್ಸ್’. ಆದರೆ ಅವುಗಳಲ್ಲಿ ಜಾನ್ ಗ್ರಿಬ್ಬಿನ್ನರ ಕೃತಿ ಇನ್ ಸರ್ಚ್ ಆಫ್ ಡಬಲ್ ಹೆಲಿಕ್ಸ್ಮಾತ್ರ ರೋಸಾಲಿಂಡ್‍ಗೆ ನ್ಯಾಯ ಸಲ್ಲಿಸಿತ್ತು.

ಇದೆಲ್ಲದರ ನಡುವೆ ದುರಂತವೆಂಬಂತೆ ರೋಸಾಲಿಂಡ್ ಫ್ರಾಂಕ್ಲಿನ್ ತನ್ನ 37ನೇ ವಯಸ್ಸಿನಲ್ಲಿಯೇ ಅಂಡಾಶಯ ಕ್ಯಾನ್ಸರ್‍ಗೆ ಬಲಿಯಾಗಿ 16ನೇ ಏಪ್ರಿಲ್ 1958ರಂದು ಸಾವಿಗೆ ಬಲಿಯಾದಳು. ಆಗಿನ್ನೂ ವ್ಯಾಟ್ಸನ್ ಮತ್ತು ಕ್ರಿಕ್‍ರವರಿಗೆ ನೋಬೆಲ್ ಪ್ರಶಸ್ತಿ ದೊರಕಿರಲಿಲ್ಲ. ಅಕಸ್ಮಾತ್ ಆಕೆ ಬದುಕಿದ್ದಿದ್ದಲ್ಲಿ ನೋಬೆಲ್‍ನವರು ಆಕೆಯ ಕೊಡುಗೆಯನ್ನೂ ಸ್ಮರಿಸುತ್ತಿದ್ದರೋ ಇಲ್ಲವೋ ಗೊತ್ತಿಲ್ಲ, ಏಕೆಂದರೆ ನೋಬೆಲ್ ಪ್ರಶಸ್ತಿ ಯಾರಿಗೂ ಮರಣೋತ್ತರ ನೀಡುವುದಿಲ್ಲ.

ಏನೇ ಆದರೂ ವಿಜ್ಞಾನಿ ರೋಸಾಲಿಂಡ್ ಫ್ರಾಂಕ್ಲಿನ್‍ಳನ್ನು ಅನೈತಿಕವಾಗಿ ನಡೆಸಿಕೊಳ್ಳಲಾಗಿದೆ, ಏಕೆಂದರೆ ಆಕೆ ಹೆಣ್ಣಾಗಿದ್ದಳು. ಅದು ಅನೈತಿಕವಷ್ಟೇ ಅಲ್ಲ ಅವೈಜ್ಞಾನಿಕವೂ ಹೌದು. ಆಕೆಯ ಅನುಮತಿಯಿಲ್ಲದೆ ವಿಲ್ಕಿನ್ಸ್ ಆಕೆಯ ಸಂಶೋಧನೆಯ ಫೋಟೋಗಳನ್ನು ವ್ಯಾಟ್ಸನ್‍ಗೆ ತೋರಿಸಿದ್ದು, ಆಕೆಗೆ ತಿಳಿಯದೆ, ಆಕೆಯ ಅನುಮತಿ ಪಡೆಯದೆ ಆಕೆಯ ಸಂಶೋಧನೆಗಳನ್ನು ವ್ಯಾಟ್ಸನ್ ಮತ್ತು ಕ್ರಿಕ್ ಬಳಸಿಕೊಂಡಿದ್ದು, ಆಕೆಯ ಕೊಡುಗೆಯನ್ನು ಸ್ಮರಿಸದೇ ಇರುವುದು, ನಂತರ ಅವರು ಆಕೆಯನ್ನು ಹೀನಾಯವಾಗಿ ಕಂಡು ತಮ್ಮನ್ನು ತಾವು ಸಮರ್ಥಿಸಿಕೊಂಡಿರುವುದು ಎಲ್ಲವೂ ಅನೈತಿಕವಾದುದು. ವ್ಯಾಟ್ಸನ್ ತಮ್ಮ ಕೃತಿಯಾದ `ದ ಡಬಲ್ ಹೆಲಿಕ್ಸ್ನಲ್ಲಿ ಫ್ರಾಂಕ್ಲಿನ್ ವಿಲ್ಕಿನ್ಸ್‍ರವರ ಕೇವಲ ಸಹಾಯಕಳಾಗಿದ್ದಳು, ಹಾಗಾಗಿ ಆಕೆಯ ಬಗ್ಗೆ ಹೆಚ್ಚೇನೂ ಗಮನ ಹರಿಸಬೇಕಾಗಿಲ್ಲ ಎಂದೂ ಹೇಳಿದ್ದಾರೆ. ಬಹುಶಃ ರೋಸಾಲಿಂಡ್ ಗಂಡಸಾಗಿದ್ದಿದ್ದಲ್ಲಿ ವ್ಯಾಟ್ಸನ್ ಅಷ್ಟು ಸುಲಭವಾಗಿ ಆಕೆಯ ಸಂಶೋಧನೆಯನ್ನು ಬಳಸಿಕೊಳ್ಳು ಸಾಧ್ಯವಾಗುತ್ತಿರಲಿಲ್ಲ, ಅಷ್ಟೇ ಅಲ್ಲ ಆ ನಂತರವೂ ಆಕೆಯ ಬಗೆಗೆ ತಮ್ಮ ಪುಸ್ತಕದಲ್ಲಿ ಕೀಳಾಗಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ.

ವ್ಯಾಟ್ಸನ್ ಮತ್ತು ಕ್ರಿಕ್‍ರವರು ಮಾತ್ರವಲ್ಲ ಇಂದು ವೈಜ್ಞಾನಿಕ ಸಮುದಾಯದಲ್ಲಿ ಬಹಳಷ್ಟು ಜನ ಮಹಿಳಾ ವಿಜ್ಞಾನಿಗಳ ಬಗೆಗೆ ಇದೇ ಭಾವನೆಯನ್ನೇ ಹೊಂದಿದ್ದಾರೆ. ಅಷ್ಟೇ ಅಲ್ಲ 1903ರಿಂದ 1963ರವರೆಗೆ ಒಬ್ಬ ಮಹಿಳಾ ವಿಜ್ಞಾನಿಗೂ ನೋಬೆಲ್ ಪ್ರಶಸ್ತಿ ದೊರಕಿಲ್ಲ. ಮಹಿಳೆಯರು ವಿಜ್ಞಾನಿಗಳಾಗಲು ಮನೆಯಲ್ಲಿಯೇ ಉತ್ತೇಜನ ದೊರಕುವುದಿಲ್ಲ. ಬಹುಶಃ ರೋಸಾಲಿಂಡ್ ಫ್ರಾಂಕ್ಲಿನ್ ತನ್ನ ವಿಭಾಗದಲ್ಲಿ ಒಬ್ಬಂಟಿಯಾಗಿದ್ದಳು. ಆಕೆಯ ತಂದೆ ಸಹ ಆಕೆಯ ಸಂಶೋಧನೆಗಳಿಗೆ ಅಂತಹ ಉತ್ತೇಜನ ನೀಡುತ್ತಿರಲಿಲ್ಲವಂತೆ. ಆಕೆ ತನ್ನ ತಂದೆ ಎಲ್ಲಿಸ್ ಫ್ರಾಂಕ್ಲಿನ್‍ಗೆ 1940ರಲ್ಲಿ ಬರೆದ ಪತ್ರವೊಂದರಲ್ಲಿ, `ವಿಜ್ಞಾನ ಮತ್ತು ದಿನನಿತ್ಯದ ಬದುಕನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಹಾಗೂ ಪ್ರತ್ಯೇಕಿಸಲೂ ಬಾರದು. ವಿಜ್ಞಾನ ನನಗೆ ಬದುಕಿನ ಬಗೆಗೆ ಭಾಗಶಃವಾದರೂ ವಿವರಣೆ ನೀಡುತ್ತದೆ. ವಿಜ್ಞಾನ ವಾಸ್ತವತೆ, ಅನುಭವ ಮತ್ತು ಪ್ರಯೋಗಾಧಾರಿತವಾದುದು... ಬದುಕಿನಲ್ಲಿ ಶ್ರದ್ಧೆ ಇರುಬೇಕು ನಿಜ, ನಾನೂ ಒಪ್ಪುತ್ತೇನೆ, ಆದರೆ ನಿಮ್ಮ ನಂಬಿಕೆಯ ಶ್ರದ್ಧೆಯನ್ನು ನಾನು ಒಪ್ಪುವುದಿಲ್ಲ... ಅಂದರೆ ಪುನರ್ಜನ್ಮದ ನಂಬಿಕೆ. ನನ್ನ ನಂಬಿಕೆಯಲ್ಲಿ ಶ್ರದ್ಧೆ ಎಂದರೆ, ನಮ್ಮೆಲ್ಲ ಪ್ರಯತ್ನವನ್ನೂ ಮಾಡಿದಲ್ಲಿ ಯಶಸ್ಸಿನ ಹತ್ತಿರ ಹತ್ತಿರ ತಲುಪುತ್ತೇವೆ ಹಾಗೂ ಕೊನೆಗೆ ನಮ್ಮ ಗುರಿಯನ್ನು (ಅಂದರೆ ಮಾನವರ, ಈಗಿನ ಮತ್ತು ಮುಂದಿನ ಪೀಳಿಗೆಯವರ ಒಳಿತು) ತಲುಪುತ್ತೇವೆಎಂದು ಬರೆದಿದ್ದಳು.

 

ಡಿ.ಎನ್.ಎ. ಎಂದರೇನು?

ಡಿಯಾಕ್ಸಿರೈಬೊನ್ಯೂಕ್ಲಿಯಿಕ್ ಆಮ್ಲ ಅಥವಾ ಡಿ.ಎನ್.ಎ. (DNA)ಒಂದು ಸಂಕೀರ್ಣ ಅಣುವಾಗಿದ್ದು ಅದರಲ್ಲಿ ಜೀವಿಯೊಂದನ್ನು ನಿರ್ಮಿಸುವ ಮತ್ತು ಅದನ್ನು ನಿರ್ವಹಿಸುವ ಎಲ್ಲ ಅಗತ್ಯ ಮಾಹಿತಿಯೂ ಇರುತ್ತದೆ.


ಡಿ.ಎನ್.ಎ. ರಚನೆ

ಎಲ್ಲ ಜೀವಿಗಳ ಜೀವಕೋಶಗಳಲ್ಲಿ (Cells) ಡಿ.ಎನ್.ಎ. ಇರುತ್ತದೆ ಮತ್ತು ಪ್ರತಿಯೊಂದು ಜೀವಕೋಶದಲ್ಲಿಯೂ ಜೀವಿಯೊಂದರ ಸಂಪೂರ್ಣ ಮಾಹಿತಿಯುಳ್ಳ ಡಿ.ಎನ್.ಎ.ನ ಸಂಪೂರ್ಣ ಸೆಟ್ ಇರುತ್ತದೆ. ಜೀವಿಯೊಂದರ ರಚನೆ ಮತ್ತು ಕಾರ್ಯವನ್ನು ಮಾತ್ರ ನಿರ್ದೇಶಿಸುವುದಷ್ಟೇ ಅದರ ಕಾರ್ಯವಲ್ಲ, ಅದು ಆನುವಂಶಿಕತೆಯ (Heredity) ವಾಹಕವೂ ಆಗಿವೆ. ಜೀವಕೋಶಗಳಲ್ಲಿನ ವರ್ಣತಂತುಗಳಲ್ಲಿರುವ ಇವು ತಂದೆಯ ಅರ್ಧ ಭಾಗ ಮತ್ತು ತಾಯಿಯ ಅರ್ಧ ಭಾಗ ಬೆರೆತು ಒಂದು ಹೊಸ ಸಂಪೂರ್ಣ ಡಿ.ಎನ್.ಎ. ಸೆಟ್ ಆಗುತ್ತದೆ. ಆ ಹೊಸ ಡಿ.ಎನ್.ಎ. ಹೊಂದಿರುವ ಒಂದು ಜೀವಕೋಶವು ವಿಭಜನೆಗೊಂಡು ಸಂಪೂರ್ಣ ಜೀವಿಯಾಗುತ್ತದೆ.

ಡಿ.ಎನ್.ಎ.ನಲ್ಲಿರುವ ಮಾಹಿತಿಯು ಅಡೆನಿನ್(A), ಥೈಮಿನ್ (T), ಗ್ವಾನಿನ್ (G) ಮತ್ತು ಸೈಟೋಸಿನ್ (C) ಪ್ರತ್ಯಾಮ್ಲಗಳ ಜೋಡಿಗಳ ಸರಣಿಗಳ ಮೂಲಕ ಅಡಕವಾಗಿರುತ್ತದೆ. ಅಡೆನಿನ್(A) ಥೈಮಿನ್ (T)ನೊಂದಿಗೆ ಮತ್ತು ಗ್ವಾನಿನ್ (G) ಸೈಟೋಸಿನ್(C)ನೊಂದಿಗೆ ಜೋಡಿಯಾಗಿರುತ್ತವೆ. ಆ ಪ್ರತ್ಯಾಮ್ಲಗಳನ್ನು ಎರಡು ಎಳೆಯ ಫಾಸ್ಫೇಟ್ ಸಕ್ಕರೆಯ ಹಂದರದಲ್ಲಿ ನೂಲಿನ ಏಣಿಯಂತ ರಚನೆಯಲ್ಲಿ ಅಡ್ಡ ಕೋಲುಗಳ ಹಾಗೆ ಜೋಡಿಸಲ್ಪಟ್ಟಿರುತ್ತವೆ.

 


ಈ ಲೇಖನ ನನ್ನ ಮೌನ ವಸಂತ - ಅದೃಶ್ಯವಾಗಿ ಅರಳಿದ ಮಹಿಳಾ ಕಥನಗಳು ಕೃತಿಯಲ್ಲಿದೆ. ಈ ಕೃತಿಗೆ ಬರೆದಿರುವ ಡಾ.ಎಚ್.ಎಸ್.ಅನುಪಮಾರವರ ಮುನ್ನುಡಿಯನ್ನು ʻಹೆಣ್ಣು ಲೋಕದ ಅನಂತ ಮುಖಗಳುʼ ಇಲ್ಲಿ ಓದಬಹುದು:

http://antaragange.blogspot.com/2020/08/blog-post_12.html

ಪುಸ್ತಕದ ಮುಖಬೆಲೆ ರೂ.130/- ರಿಯಾಯಿತಿ ಬೆಲೆಗಾಗಿ ಸಂಪರ್ಕಿಸಿ:

ಪುಸ್ತಕ ಪ್ರೀತಿ : 9945010606

 

 

 

ಕಾಮೆಂಟ್‌ಗಳಿಲ್ಲ: