ಆಗಸ್ಟ್ ʻಹೊಸತುʼ ಸಂಚಿಕೆಯಲ್ಲಿ ಪ್ರಕಟವಾಗಿರುವ ನನ್ನ ಲೇಖನ:
ಇಸ್ಲಾಮಿಕ್ ವಿಜ್ಞಾನದ ಸುವರ್ಣ ಯುಗ ಮತ್ತು ಅನುವಾದ ಆಂದೋಲನ.
ಈ ಲೇಖನಕ್ಕೆ 2021-22ರ ಸಾಲಿನ ಶ್ರೀ ಸಿ.ವಿ.ರಾಜಗೋಪಾಲ ಇವರ ಸ್ಮರಣಾರ್ಥ ನೀಡುವ ಅತ್ಯುತ್ತಮ ಲೇಖನ ಬಹುಮಾನ ಬಂದಿದೆಯೆಂದು ತಿಳಿಸಲು ಸಂತೋಷವಾಗುತ್ತದೆ.
ಜಗತ್ತಿನ ಇಸ್ಲಾಂ ಆಳ್ವಿಕೆಯಲ್ಲಿ ಅಬ್ಬಾಸಿದ್ ಖಲೀಫರ ಆಳ್ವಿಕೆಯನ್ನು ಇಸ್ಲಾಂ ಜಗತ್ತಿನ ವಿಜ್ಞಾನದ ದೃಷ್ಟಿಯಿಂದ ಬಹಳ ಪ್ರಮುಖವೆಂದು ಪರಿಗಣಿಸಲಾಗಿದೆ. ಅಬ್ಬಾಸಿದ್ ಖಲೀಫರ ಆಳ್ವಿಕೆಯ (ಕ್ರಿ.ಶ. 750 – 1258) ಪ್ರಾರಂಭವನ್ನು ಅರಾಬಿಕ್ ವಿಜ್ಞಾನದ ಸುವರ್ಣ ಯುಗ ಎನ್ನುತ್ತಾರೆ. ಗಣಿತಶಾಸ್ತ್ರ, ಖಗೋಳಶಾಸ್ತ್ರ, ಭೌತಶಾಸ್ತ್ರ ಮತ್ತು ಇಂಜಿನಿಯರಿಂಗ್, ರಾಸಾಯನಶಾಸ್ತ್ರದ ವಾಣಿಜ್ಯೀಕರಣ, ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಗತಿ ಮತ್ತು ತತ್ವಶಾಸ್ತ್ರ ಸಮೃದ್ಧವಾಗಿ ಮೊದಲಿಗೆ ಬಾಗ್ದಾದ್ ನಲ್ಲಿ ಬೆಳೆಯಿತು, ನಂತರ ಇಸ್ಲಾಮಿಕ್ ಸಾಮ್ರಾಜ್ಯದ ಇತರೆಡೆಗೆ ಪಸರಿಸಿತು. ಆಗ ಬಾಗ್ದಾದ್ ಜ್ಞಾನದ ಮತ್ತು ಕಲಿಕೆಯ ಕೇಂದ್ರವಾಗಿತ್ತು. ಈ ಎಲ್ಲವೂ ಸಾಧ್ಯವಾದುದು ಬೃಹತ್ ಪ್ರಮಾಣದಲ್ಲಿ ನಡೆದ ಅನುವಾದ ಆಂದೋಲನ - ಈ ಆಂದೋಲನ ಸುಮಾರು ಎರಡು ಶತಮಾನಗಳ ಕಾಲ ಯಶಸ್ವಿಯಾಗಿ ನಡೆಯಿತು ಹಾಗೂ ಈ ಅವಧಿಯಲ್ಲಿ ಗ್ರೀಕರ, ಪರ್ಷಿಯನ್ನರ ಮತ್ತು ಭಾರತೀಯರ ಪ್ರಾಚೀನ ನಾಗರಿಕತೆಗಳ ಜ್ಞಾನ ಭಂಡಾರ ಅರಾಬಿಕ್ ಗೆ ಅನುವಾದಗೊಂಡಿತು ಹಾಗೂ ಇಸ್ಲಾಮಿಕ್ ಸಾಮ್ರಾಜ್ಯದಲ್ಲಿ ವಿದ್ವತ್ತಿನ ಸಂಸ್ಕೃತಿ ನೆಲೆಗೊಂಡಿತು.
ಅಬ್ಬಾಸಿದ್ ರ ಬೃಹತ್ ಪ್ರಮಾಣದ ಅನುವಾದ ಆಂದೋಲನಕ್ಕೆ ಪ್ರೋತ್ಸಾಹ ನೀಡಿದ್ದುದರ ಪರಿಣಾಮವಾಗಿ ವಿಶ್ವದ ಎಲ್ಲ ಜ್ಞಾನವನ್ನು ಒಂದೇ ಸೂರಿನಡಿ ತರಲು ಸಾಧ್ಯವಾಯಿತು. ಈ ಬೃಹತ್ ಪ್ರಮಾಣದಲ್ಲಿ ಅನುವಾದ ಆಂದೋಲನ ನಡೆಯಲು ಹಲವಾರು ಕಾರಣಗಳಿವೆ. ಅನುವಾದ ಆಂದೋಲನದ ಪ್ರಾರಂಭವು ಅಬ್ಬಾಸಿದ್ ರವರ ಆಗಮನದೊಂದಿಗೇ ಪ್ರಾರಂಭವಾಗಿರುವುದರಿಂದ ಅಲ್ಲಿನ ಈ ಹಿಂದಿನ ಪರ್ಷಿಯನ್ ಸಸೇನಿಯನ್ನರು, ಬೈಜಾಂಟೈನ್ನರು ಮತ್ತು ಡಮಾಸ್ಕಸ್ನರ ಮುಸಲ್ಮಾನ ಉಮಯ್ಯಾದರಿಗಿಂತ ಅಬ್ಬಾಸಿದ್ ಮನಸ್ಥಿತಿಯಲ್ಲಿ ವಿಶೇಷವಾದದ್ದೇನಿತ್ತು ಎನ್ನುವುದನ್ನು ಅರಿಯಲು ವಿಜ್ಞಾನ ಚರಿತ್ರಕಾರರು ಯತ್ನಿಸಿದ್ದಾರೆ. ಈ ಎಲ್ಲ ಸಾಮ್ರಾಜ್ಯಗಳೂ ಸೈನ್ಯಬಲದಲ್ಲಿ ಅತಿ ಶಕ್ತಿಶಾಲಿಯಾಗಿದ್ದರೂ ಅವು ಕ್ರೈಸ್ತಮತ ಪ್ರಾರಂಭಗೊಂಡಾಗಿನ ಮೊದಲ ಶತಮಾನಗಳಲ್ಲಿದ್ದ ಅಲೆಕ್ಸಾಂಡ್ರಿಯಾದ ಹಿಂದಿನ ಬೌದ್ಧಿಕ ವೈಭವವನ್ನು ಪುನಶ್ಚೈತನ್ಯಗೊಳಿಸುವ ಯಾವುದೇ ಇಚ್ಛೆಯನ್ನು ತೋರಿಸಿರಲಿಲ್ಲ.
ಅಬ್ಬಾಸಿದ್ ರ ಆಗಮನದೊಂದಿಗೆ ಅವೆಲ್ಲವೂ ಬದಲಾದವು. ಅನುವಾದ ಆಂದೋಲನವು ಎಂಟನೇ ಶತಮಾನದ ಮಧ್ಯಭಾಗದಲ್ಲಿ ಪ್ರಾರಂಭವಾಯಿತು ಹಾಗೂ ಕೆಲವೇ ಸಮಯದಲ್ಲಿ ಖಲೀಫರ ಪ್ರೀತಿಯ ಪ್ರಾಯೋಜನೆ ಎಂಬ ಕಾರಣಕ್ಕಷ್ಟೇ ಅಲ್ಲ ಬಾಗ್ದಾದ್ ನ ಅಬ್ಬಾಸಿದ್ ಸಮಾಜದ ಎಲ್ಲ ಹಂತಗಳ ಬಹಳಷ್ಟು ಜನರು ವಿಜ್ಞಾನ ಪಠ್ಯಗಳ ಅನುವಾದ ಕಾರ್ಯದಲ್ಲಿ ತೊಡಗಿದರು. ಬಹಳಷ್ಟು ಸಿರಿವಂತ ಪೋಷಕರು ಈ ಆಂದೋಲನಕ್ಕಾಗಿ ಹಣ ಮುಡಿಪಾಗಿಟ್ಟರು ಹಾಗೂ ಸ್ವಲ್ಪ ಸಮಯದಲ್ಲೇ ಅನುವಾದ ಒಂದು ಲಾಭದಾಯಕ ಉದ್ದಿಮೆಯ ರೂಪ ತಳೆಯಿತು. ಈ ಪೋಷಕರು ಈ ಆಂದೋಲನಕ್ಕೆ ಬೆಂಬಲ ನೀಡಲು ಅದರಲ್ಲಿ ಅವರ ಸ್ವಾರ್ಥವೂ ಇತ್ತು. ಈ ಅನುವಾದಗಳಿಂದ ಅವರಿಗೆ ಕೃಷಿ, ಇಂಜಿನಿಯರಿಂಗ್ ತಂತ್ರಜ್ಞಾನದ ಹಾಗೂ ಔಷಧ ಕ್ಷೇತ್ರದಲ್ಲಿ ಅವರಿಗೆ ಪ್ರಾಯೋಗಿಕ ಲಾಭಗಳು ದೊರೆತರೆ ಮತ್ತೊಂದೆಡೆ ಈ ರೀತಿಯ ಸಾಂಸ್ಕೃತಿಕ ಚಟುವಟಿಕೆಯ ಪೋಷಣೆಯು ಅವರಿಗೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ತಂದುಕೊಡಲಾರಂಭಿಸಿದವು. ಹಾಗಾಗಿ ಈ ಚಟುವಟಿಕೆಯಲ್ಲಿ ಬಹಳಷ್ಟು ಜನರು ತಮ್ಮನ್ನು ತಾವು ತೊಡಗಿಸಿಕೊಂಡರು. ನಂತರದ ವಿಜ್ಞಾನದ ಸುವರ್ಣ ಯುಗಕ್ಕೆ ಕಾರಣವಾಗುವಂತೆ ಅನುವಾದ ಆಂದೋಲನವು ಒಂದು ಪ್ರತ್ಯೇಕ ಪ್ರಕ್ರಿಯೆಯಾಗಿರಲಿಲ್ಲ, ಬದಲಿಗೆ ಅದನ್ನು ವಿಜ್ಞಾನ ಸುವರ್ಣ ಯುಗದ ಪ್ರಾರಂಭದ ಅವಧಿಯ ಒಂದು ಸಮಗ್ರ ಭಾಗವೆಂದೇ ಪರಿಗಣಿಸಬೇಕು. ಅದು ಪ್ರಾರಂಭವಾದಮೇಲೆ, ಕ್ಷಿಪ್ರವಾಗಿ ವಿಸ್ತೃತ ಜ್ಞಾನಾನ್ವೇಷಣೆಯ ಭಾಗವಾಯಿತು. ಒಂಭತ್ತನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಅದು ಮೂಲ ವೈಜ್ಞಾನಿಕ ಮತ್ತು ದಾರ್ಶನಿಕ ವಿದ್ವತ್ತಿನ ಹೊಸ ಸಂಪ್ರದಾಯವಾಗಿ ವಿಕಸನಗೊಂಡಿತು ಹಾಗೂ ಇದು ಇನ್ನೂ ಹೆಚ್ಚಿನ ಪ್ರಮಾಣದ ಹಾಗೂ ಗುಣಮಟ್ಟದ ಅನುವಾದಗಳ ಬೇಡಿಕೆಯನ್ನು ಹುಟ್ಟುಹಾಕಿತು.
ಈ ವಿಸ್ಮಯಕಾರಿ ಹಾಗೂ ಪ್ರಮುಖ ಗ್ರೀಕೊ-ಅರಾಬಿಕ್ ವಿಜ್ಞಾನ ಪಠ್ಯ ಅನುವಾದ ಆಂದೋಲನವು ಜಗತ್ತಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಹೊರ ಜಗತ್ತಿಗೆ ಪರಿಚಯವಾಗಿಲ್ಲದಿದ್ದರೂ ಅದನ್ನು ಚರಿತ್ರೆಯ ಒಂದು ಮಹತ್ತರ ಘಟ್ಟವೆಂದೇ ಪರಿಗಣಿಸಲಾಗಿದೆ. ಇಸ್ಲಾಮಿಕ್ ಜಗತ್ತಿನಲ್ಲಿ ವಿಜ್ಞಾನ ಪಠ್ಯ ಅನುವಾದ ಚಟುವಟಿಕೆ ಪ್ರಾರಂಭವಾಗಲು ಕಾರಣಗಳಾದರೂ ಏನು?
13ನೇ ಶತಮಾನದ ಹಸ್ತಪ್ರತಿಯೊಂದರಲ್ಲಿ ಅಲ್-ವಸಿತಿ ಎಂಬಾತ ಬರೆದಿರುವ ಚಿತ್ರ: ಬಾಗ್ದಾದ್ ನ ಗ್ರಂಥಾಲಯವೊಂದರಲ್ಲಿ ನಡೆಯುತ್ತಿರುವ ವಿದ್ವತ್ತಿನ ಸಂವಾದ.
ಅನುವಾದ ಆಂದೋಲನಕ್ಕೆ ಕಾರಣವಾದ ಮೂರು ಹೆಚ್ಚು ಪ್ರಚಲಿತದಲ್ಲಿರುವ ಕಾರಣಗಳನ್ನು ವಿದ್ವಾಂಸರು ನೀಡುತ್ತಾರೆ. ಅಲ್-ಮಾಮೂನ್ ಎಂಬ ಅಬ್ಬಾಸಿದ್ ಖಲೀಫನಿಗೆ ಅರಿಸ್ಟಾಟಲ್ ಕುರಿತು ಕನಸೊಂದು ಬಿದ್ದು ಆತನಲ್ಲಿ ತಕ್ಷಣವೇ ಗ್ರೀಕ್ ವಿದ್ವತ್ತಿನ ಕುರಿತಂತೆ ಜ್ಞಾನೋದಯವಾಗಿ ಅದನ್ನು ಪಡೆದುಕೊಳ್ಳುವ ಜೀವನಪರ್ಯಂತದ ಅಭಿಲಾಷೆ ಹುಟ್ಟಿತು, ಅದರಿಂದಾಗಿಯೆ ಅನುವಾದಗಳು ಪ್ರಾರಂಭವಾಯಿತು ಎನ್ನುವುದು ಮೊದಲ ಕಾರಣ. ಆದರೆ, ಅನುವಾದ ಆಂದೋಲನ ಇನ್ನೂ ಹಿಂದೆಯೇ ಅಂದರೆ, ಅಲ್-ಮಾಮೂನನ ಮುತ್ತಾತ ಮತ್ತು ಬಾಗ್ದಾದ್ ನ ಸಂಸ್ಥಾಪಕ ಅಲ್-ಮನ್ಸೂರ್ ಅವಧಿಯಲ್ಲಿಯೇ ಪ್ರಾರಂಭವಾಗಿತ್ತು ಹಾಗೂ ಅಲ್-ಮಾಮೂನ್ ಅರಿಸ್ಟಾಟಲ್ ಕನಸುಕಾಣುವ ಹೊತ್ತಿಗೆ ಅನುವಾದ ಕಾರ್ಯಗಳು ಉತ್ತುಂಗದಲ್ಲಿತ್ತು ಎನ್ನಲಾಗಿದೆ. ಆ ಕನಸಿನ ಘಟನೆ ನಿಜವಾಗಿದ್ದಲ್ಲಿ, ಆತ ಭಾಗವಾಗಿದ್ದ ಆಗಿನ ಸಾಂಸ್ಕೃತಿಕ ವಾತಾವರಣದ ಸಂದರ್ಭಾನುಸಾರವಾಗಿಯೇ ಇತ್ತು. ಹಾಗಾಗಿ ಖಲೀಫ ಅಲ್-ಮಾಮೂನ್ ಕನಸು ಕಂಡಿದ್ದು ಆಗ ನಡೆಯುತ್ತಿದ್ದ ಅನುವಾದ ಆಂದೋಲನ ಮತ್ತು ಬೌದ್ಧಿಕ ಪರಿಸರದ ಫಲಿತಾಂಶವಾಗಿಯೇ ಹೊರತು ಕನಸಿನಿಂದಾಗಿ ಅನುವಾದ ಆಂದೋಲನ ಪ್ರಾರಂಭವಾದದ್ದಲ್ಲ ಎನ್ನುತ್ತಾರೆ ಈ ಕುರಿತು ಅಧ್ಯಯನ ನಡೆಸಿರುವ ಭೌತಶಾಸ್ತ್ರದ ಸೈದ್ಧಾಂತಿಕ ವಿಜ್ಞಾನಿ ಜಿಮ್ ಅಲ್-ಖಲೀಲಿ.
ಈ ಆಂದೋಲನಕ್ಕೆ ಧನಸಹಾಯ ಬಾಗ್ದಾದ್ ನ ಸಮಾಜದಿಂದಲೇ ಒದಗಿಬಂದಿತು. ಈ ಆಂದೋಲನದಲ್ಲಿ ಖಲೀಫರೊಂದಿಗೆ ಅವರ ಆಸ್ಥಾನದವರು, ಸೈನ್ಯದ ನಾಯಕರು, ಸರ್ಕಾರದ ಅಧಿಕಾರಿಗಳು, ಆಡಳಿತಗಾರರು ಹಾಗೂ ತಾವೇ ಅನುವಾದಕರಾಗಿ ಅದರ ಮೂಲಕ ಸಿರಿವಂತರಾಗಿದ್ದ ಆಗಿನ ಪ್ರಮುಖ ವಿದ್ವಾಂಸರೂ ಸಹ ತೊಡಗಿಕೊಂಡಿದ್ದರು. ಅಲ್-ಮಾಮೂನ್ ನ ರಾಜ್ಯಭಾರದ ಸಮಯದಲ್ಲಿ ಅಂತಹ ಪ್ರಖ್ಯಾತ ವಿದ್ವಾಂಸ - ಹುನಾಯ್ನ್ ಇಬನ್ ಇಶಾಖ್ ನಂಥವರು ಒಂಟಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ, ಬದಲಿಗೆ ವಿದ್ಯಾರ್ಥಿಗಳ, ಅನುವಾದಕರ ಮತ್ತು ಲಿಪಿಕಾರರ ತಂಡಗಳನ್ನೇ ರಚಿಸಿಕೊಂಡಿದ್ದರು.
ಖಲೀಫರ ಪೋಷಣೆ ಮತ್ತು ಪ್ರೋತ್ಸಾಹ ಇಲ್ಲದಿದ್ದಲ್ಲಿ ಬಾಗ್ದಾದ್ ನಲ್ಲಿ ಪ್ರಾರಂಭವಾದ ಅನುವಾದ ಆಂದೋಲನ ಆ ರೀತಿಯ ಬೃಹತ್ ಪ್ರಮಾಣದಲ್ಲಿ ನಡೆಯುತ್ತಲೇ ಇರಲಿಲ್ಲ. ವಿದ್ವತ್ತಿಗಾಗಿ ಪ್ರಾರಂಭದ ಖಲೀಫರ ಉತ್ಸಾಹ ಮತ್ತು ಬದ್ಧತೆ ಈ ವಿಸ್ತೃತ ಬೌದ್ಧಿಕ ಆಂದೋಲನದ ಕೇವಲ ಭಾಗವಾಗಿತ್ತಷ್ಟೆ.
ಅನುವಾದ ಆಂದೋಲನದ ಪ್ರಾರಂಭಕ್ಕೆ ಪ್ರಚಲಿತದಲ್ಲಿರುವ ಎರಡನೇ ಕಾರಣವೆಂದರೆ ಇಸ್ಲಾಂನ ಹರಡುವಿಕೆ; ಏಕೆಂದರೆ ಜ್ಞಾನ ಮತ್ತು ಜ್ಞಾನೋದಯವನ್ನು ಅರಸುವುದು ಎಲ್ಲ ಮುಸಲ್ಮಾನರ ಧಾರ್ಮಿಕ ಕರ್ತವ್ಯವಾಗಿರುವುದರಿಂದ ಇದು ತನ್ನಂತಾನೇ ವಿಜ್ಞಾನ ಮತ್ತು ತತ್ವಶಾಸ್ತ್ರದ ಧರ್ಮಾತೀತ ಗ್ರೀಕ್ ಪಠ್ಯಗಳನ್ನು ಅರಸಿ ಅರಾಬಿಕ್ ಗೆ ಅನುವಾದಿಸುವಂತೆ ಮಾಡಿತು. ಜಗತ್ತಿನ ಕುರಿತು ಅನ್ವೇಷಣೆ ಮತ್ತು ಕುತೂಹಲದ ಮನೋಭಾವವನ್ನು ಕ್ರೈಸ್ತ ಮತ್ತು ಜುದಾಯಿಸಂಗಿಂತ ಇಸ್ಲಾಂ ಹೆಚ್ಚು ಉತ್ತೇಜಿಸುತ್ತದೆ ಎನ್ನುವುದು ನಿಜವಾಗಿದ್ದರೂ ಸಹ ಅನುವಾದ ಆಂದೋಲನವು ಈ ಹಿಂದಿನ ಉಮಯ್ಯಾದರ ಆಳ್ವಿಕೆಯ ಅವಧಿಯಲ್ಲಿ ಏಕೆ ಪ್ರಾರಂಭವಾಗಲಿಲ್ಲ ಎನ್ನುವ ಪ್ರಶ್ನೆ ಉಳಿದೇ ಇದೆ ಎನ್ನುತ್ತಾರೆ ಜಿಮ್ ಅಲ್ ಖಲೀಲಿ.
ಅಲ್ಲದೆ, ಅನುವಾದ ಆಂದೋಲನವು ಎಲ್ಲ ಧಾರ್ಮಿಕ ಮಿತಿಗಳನ್ನು ಮೀರಿದುದು. ಬಹಳಷ್ಟು ಅನುವಾದಕರು ಕ್ರೈಸ್ತ ಧರ್ಮದವರಾಗಿದ್ದು ಅನುವಾದ ಆಂದೋಲನದ ಹಿಂದಿನ ಪ್ರೇರಣೆಯು ಕುರಾನ್ ನ ಅಥವಾ ಪ್ರವಾದಿಯ ಬೋಧನೆಯಂತೆ (ಹಾದಿತ್) ಧಾರ್ಮಿಕತೆ ಆಧಾರವಾಗಿದ್ದುದಾದಲ್ಲಿ ಅವರು ಅಂತಹ ಪ್ರಮುಖ ಪಾತ್ರ ವಹಿಸುತ್ತಿರಲಿಲ್ಲ. ಈ ಆಂದೋಲನದ ಬಹುಮುಖ್ಯ ಪೋಷಣೆಯೂ ಸಹ ಮುಸಲ್ಮಾನೇತರರನ್ನೂ ಒಳಗೊಳ್ಳುವಂಥದ್ದಾಗಿತ್ತು. ಕುರಾನ್ ಮತ್ತು ಹಾದಿತ್ ನ ಬೋಧನೆಯು ಧರ್ಮಶಾಸ್ತ್ರ, ತತ್ವಶಾಸ್ತ್ರ ಮತ್ತು ವಿಜ್ಞಾನಗಳ ಮೂಲ ಚಿಂತನೆಗಳ ಅಭಿವೃದ್ಧಿಗಾಗಿ ಜ್ಞಾನಾನ್ವೇಷಣೆಗೆ ಒತ್ತು ನೀಡಿದ್ದುದು ನಿಜ. ಆದರೆ, ಇವೆಲ್ಲವೂ ಅನುವಾದ ಆಂದೋಲನದ ನಂತರದ ಹಂತದಲ್ಲಿ ಪ್ರಾರಂಭವಾಯಿತು.
ಇದು ಈ ಆಂದೋಲನದ ಉಗಮಕ್ಕೆ ಕಾರಣವಾದ ಹೆಚ್ಚು ಪ್ರಚಲಿತದಲ್ಲಿರುವ ಮೂರನೇ ಕಾರಣದೆಡೆಗೆ ಒಯ್ಯುತ್ತದೆ; ಅದೆಂದರೆ ಈ ಹಿಂದೆ ಬೈಜಾಂಟಿನ್ ಸಾಮ್ರಾಜ್ಯದ ಭಾಗವಾಗಿದ್ದ ಭೂ ಭಾಗದಲ್ಲಿ ವಾಸಿಸುತ್ತಿದ್ದ ಗ್ರೀಕ್ ಮಾತನಾಡುವ ಕ್ರೈಸ್ತರು ಗ್ರೀಕ್ ವಿಜ್ಞಾನವನ್ನು ಹೆಚ್ಚು ಅರಿತವರಾಗಿದ್ದರು ಹಾಗೂ ಅವರು ಅಬ್ಬಾಸಿದ್ ರಿಗೆ ಈ ಜ್ಞಾನವನ್ನು ಹಂಚಿ ಅವರಲ್ಲಿ ಕುತೂಹಲ ಮತ್ತು ಜ್ಞಾನದ ಅನ್ವೇಷಣೆಯ ಕಿಡಿ ಹೊತ್ತಿಸಿದರು ಎಂಬುದು. ಆದರೆ ವಾಸ್ತವ ಇದಕ್ಕಿಂತ ಭಿನ್ನವಾದುದು ಎನ್ನುತ್ತಾರೆ ಜಿಮ್ ಅಲ್ ಖಲೀಲಿ. ಉತ್ತರ ಸಿರಿಯಾದ ಬೈಜಾಂಟಿನ್ ಕೇಂದ್ರಗಳಾಗಿದ್ದ ಆಂಟಿಯೋಕ್ ಮತ್ತು ಎಡೆಸ್ಸಾಗಳಲ್ಲಿ ಗ್ರೀಕೊ-ಸಿರಿಯಾಕ್ (ಅರಾಬಿಕ್ ಮತ್ತು ಹೀಬ್ರೂ ಬಾಷೆಗಳಾಗಿ ವಿಕಾಸ ಹೊಂದಿದ ಪ್ರಾಚೀನ ಸೆಮಿಟಿಕ್ ಭಾಷೆ) ಅನುವಾದ ಆಂದೋಲನ ಈಗಾಗಲೇ ನಡೆಯುತ್ತಿದ್ದಿತು ಹಾಗೂ ಅರಿಸ್ಟಾಟಲ್ ಮತ್ತು ಪ್ಲಾಟೊರಂತಹ ಗ್ರೀಕ್ ತತ್ವಜ್ಞಾನಿಗಳ ಹಾಗೂ ಕೆಲವು ವೈದ್ಯಕೀಯ ಮತ್ತು ಖಗೋಳವಿಜ್ಞಾನ ಪಠ್ಯಗಳ ಅಧ್ಯಯನ ನಡೆಯುತ್ತಿತ್ತು. ಆದರೆ, ಈ ಅನುವಾದಗಳು ನಂತರ ಬಂದಂತಹ ಅನುವಾದಗಳಂತೆ ಉತ್ತಮ ಗುಣಮಟ್ಟದ್ದಾಗಿರಲಿಲ್ಲವಲ್ಲದೆ ಬೌದ್ಧಿಕ ಅರಿವಿನ ಗಾಢತೆ, ನಿಖರತೆ ಹೊಂದಿರಲಿಲ್ಲ.
ಆ ಪ್ರದೇಶದಲ್ಲೆಲ್ಲಾ ಇಸ್ಲಾಂ ಪಸರಿಸಿದಂತೆ ವಿವಿಧ ಪಂಗಡಗಳು ಹಾಗೂ ಬಣಗಳ ನಡುವಿನ ಪ್ರಾದೇಶಿಕ, ರಾಜಕೀಯ ಮತ್ತು ಧಾರ್ಮಿಕ ವ್ಯತ್ಯಾಸದ ಬಿರುಕುಗಳು ಕ್ಷೀಣವಾಗತೊಡಗಿದವು. ಹಾಗಾಗಿ, ಕ್ರೈಸ್ತ ಶ್ರದ್ಧಾಭಂಜಕತನ, ಕರೈಟ್ ವಿರುದ್ಧ ತಾಲ್ಮುದ್ ಜುದಾಯಿಸಂ ಹಾಗೂ ಇಸ್ಲಾಂ ಧರ್ಮದೊಳಗಿನ ಪಂಗಡ ಕಲಹಗಳು ಮುಂದುವರಿದರೂ ಸಹ ಕ್ರೈಸ್ತ ಮತ್ತು ಯೆಹೂದಿ ವಿದ್ವಾಂಸರು ಈಗ ತಮ್ಮ ಜ್ಞಾನ, ವಿದ್ವತ್ತನ್ನು ಹೆಚ್ಚು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಯಿತು. ಪ್ರಾರಂಭಿಕ ಇಸ್ಲಾಂ ಇತರ ಧರ್ಮಗಳಿಗೆ ಈ ರೀತಿಯ ಮುಕ್ತತೆಯನ್ನು ಹೊಂದಿದ್ದರೂ ಸಹ ಉಮಯ್ಯಾದ್ ಆಡಳಿತದ ನೂರು ವರ್ಷಗಳಲ್ಲಿ ಅತ್ಯಂತ ಕಡಿಮೆ ಅನುವಾದಗಳು ನಡೆದದ್ದು ಏಕೆ ಹಾಗೂ ಅಬ್ಬಾಸಿದ್ ರ ಪ್ರವೇಶದ ನಂತರ ಬಹಳಷ್ಟು ಪ್ರಭಾವಿ ಮತ್ತು ಕೌಶಲ್ಯಯುತ ಕ್ರೈಸ್ತ ಹಾಗೂ ಯೆಹೂದಿ ಅನುವಾದಕರು ಬಾಗ್ದಾದ್ ಗೆ ಹೆಸರು ಹಾಗೂ ಹಣ ಗಳಿಸಲು ಪ್ರಯಾಣಿಸಿದ ಸಮಯದಲ್ಲಿ ಅನುವಾದಗಳ ಸಂಖ್ಯೆಯಲ್ಲಿ ಏಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಯಿತು ಎಂಬುದಕ್ಕೆ ಅದು ಉತ್ತರ ನೀಡುವುದಿಲ್ಲ.
ಹಾಗಾದರೆ ಇಸ್ಲಾಮಿಕ್ ಜಗತ್ತಿನಲ್ಲಿ ಪ್ರಾಚೀನ ಗ್ರೀಕ್ ವಿಜ್ಞಾನ ಮತ್ತು ತತ್ವಶಾಸ್ತ್ರ ಅನುವಾದ ಆಂದೋಲನಕ್ಕೆ ಕಾರಣ ಇಸ್ಲಾಂನ ಹರಡುವಿಕೆ, ಜ್ಞಾನೋದಯಗೊಂಡ ಖಲೀಫರು ಅಥವಾ ಕ್ರೈಸ್ತ ವಿದ್ವಾಂಸರು ಅಲ್ಲವೆಂದಾಯಿತು. ಅಲ್-ಮಾಮೂನ್ ಗೆ ಅರಿಸ್ಟಾಟಲ್ ಕುರಿತು ಮೊದಲಿಗೆ ತಿಳಿದಿದ್ದಾರೂ ಹೇಗೆ? ಅಥವಾ ಇನ್ನೂ ಸಾಮಾನ್ಯವಾಗಿ ಹೇಳುವುದಾದಲ್ಲಿ ಮರಳುಗಾಡಿನ ಅನಾಗರಿಕ ಅಲೆಮಾರಿ ಅರಬ್ಬರಿಗೆ ಇದ್ದಕ್ಕಿದ್ದಂತೆ ಗ್ರೀಕ್ ತತ್ವಶಾಸ್ತ್ರದ ಬಗ್ಗೆ ಆಸಕ್ತಿ ಬಂದಿದ್ದಾದರೂ ಹೇಗೆ? ಅನುವಾದ ಆಂದೋಲನದ ಪ್ರಾರಂಭದ ನಂತರದವರೆಗೂ ಅವರಿಗೆ ಆಸಕ್ತಿ ಇದ್ದಿರಲಿಲ್ಲ ಎಂಬುದೇ ಉತ್ತರ. ಆನಂತರವೇ ನಾವು ಗಾಲೆನ್ನರ ವೈದ್ಯಕೀಯ ಪಠ್ಯಗಳ, ಅರಿಸ್ಟಾಟಲ್ಲರ ತತ್ವಶಾಸ್ತ್ರದ, ಯೂಕ್ಲಿಡ್ಡರ ಜ್ಯಾಮಿತಿಯ ಮತ್ತು ಟೊಲೆಮಿಯ ಖಗೋಳ ವಿಜ್ಞಾನದ ಅನುವಾದಗಳನ್ನು ಕಾಣುತ್ತೇವೆ. ಗ್ರೀಕ್ ಪಠ್ಯವೊಂದು ಮೊದಲಿಗೆ ಸಿರಿಯಾಕ್ ಭಾಷೆಗೆ ಅನುವಾದಗೊಂಡು ನಂತರ ಸಿರಿಯಾಕ್ ನಿಂದ ಅರಾಬಿಕ್ ಗೆ ಅನುವಾದಗೊಳ್ಳುತ್ತಿತ್ತು. ಕ್ರಮೇಣ ಹೆಚ್ಚು ನಿಖರ ಅನುವಾದಗಳನ್ನು ಮೂಲ ಪಠ್ಯಗಳಲ್ಲಿನ ವೈಜ್ಞಾನಿಕ ಮಾಹಿತಿ ಅರಿತುಕೊಳ್ಳುವ ಪ್ರಕ್ರಿಯೆ ಸುಧಾರಿಸಿದಂತೆ ಎಚ್ಚರಿಕೆಯಿಂದ ನೇರವಾಗಿ ಗ್ರೀಕ್ ಭಾಷೆಯಿಂದ ಅರಾಬಿಕ್ ಭಾಷೆಗೆ ಮಾಡಲಾಯಿತು.
ಅರಬ್ ಖಗೋಳಶಾಸ್ತ್ರ
ಹಾಗಾದರೆ ಅನುವಾದ ಆಂದೋಲನದ ನಿಜವಾದ ಕಾರಣಗಳೇನು? ಅಬ್ಬಾಸಿದ್ ರ ಆಗಮನದ ಮೊದಲು ಚರಿತ್ರಕಾರರು ಹೇಳುವಂತೆ `ಅನುವಾದ ಚಟುವಟಿಕೆಗಳು' ಒಂದು ಆಂದೋಲನದ ರೀತಿಯಲ್ಲಿಲ್ಲದೆ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದವು. ಇವು ಸಸೇನಿಯನ್ ಸಾಮ್ರಾಜ್ಯದಲ್ಲಿ ಭಾರತೀಯ ಖಗೋಳ ವಿಜ್ಞಾನ ಮತ್ತು ವೈದ್ಯಕೀಯ ಪಠ್ಯಗಳ ಪಹ್ಲವಿ ಭಾಷೆಗೆ ಹಾಗೂ ಬೈಜಾಂಟಿನ್, ಸಸೇನಿಯನ್ ಹಾಗೂ ಉಮಯ್ಯಾದ್ ಸಾಮ್ರಾಜ್ಯಗಳಲ್ಲಿ ಗ್ರೀಕ್ ನಿಂದ ಸಿರಿಯಾಕ್ ಭಾಷೆಗಳಿಗೆ ನಡೆಯುತ್ತಿದ್ದ ಅನುವಾದಗಳಾಗಿದ್ದವು. ಆಗ, ಕ್ರಿ.ಶ.754ರ ಖಲೀಫ ಅಲ್-ಮನ್ಸೂರ್ ಅವಧಿಯಲ್ಲಿ ಇದ್ದಕ್ಕಿದ್ದಂತೆ ಕ್ಷಿಪ್ರ ಹಾಗೂ ಮಹತ್ತರ ಬದಲಾವಣೆಗಳು ಕಾಣತೊಡಗಿದವು. ಅನುವಾದ ಆಂದೋಲನದ ಪ್ರಾರಂಭಕ್ಕೆ ಮೂರು ಪ್ರಮುಖ ಅಂಶಗಳು ಕಾರಣವಾಗಿರಬಹುದು. ಈ ಮೂರೂ ಘಟನೆಗಳು ಒಮ್ಮೆಲೇ ನಡೆದಿಲ್ಲ ಹಾಗೂ ಏನು ನಡೆಯುತೆಂಬುದನ್ನು ಈ ಘಟನೆಗಳು ಪ್ರತ್ಯೇಕವಾಗಿ ಸಹ ವಿವರಣೆ ನೀಡುವುದಿಲ್ಲ. ಆದರೆ ಒಟ್ಟಾಗಿ ಅವುಗಳ ಮೂಲಕ ಈ ಕಾರಣಗಳ ಹಿನ್ನೆಲೆಯನ್ನು ಕಂಡುಕೊಳ್ಳಲು ಪ್ರಯತ್ನಿಸಬಹುದು.
ಉಮಯ್ಯಾದ್ ಸಾಮ್ರಾಜ್ಯದ ರಾಜಧಾನಿ ಡಮಾಸ್ಕಸ್ ಆಗಿದ್ದು ಅದು ಗ್ರೀಕ್ ಭಾಷೆ ಮಾತನಾಡುತ್ತಿದ್ದ ಬೈಜಾಂಟಿನ್ ಸಾಮ್ರಾಜ್ಯದ ಭಾಗವಾಗಿದ್ದರೆ, ಅಬ್ಬಾಸಿದ್ ರು ತಮ್ಮ ಕಾರ್ಯಚಟುವಟಿಕೆಗಳನ್ನು ಸಸೇನಿಯನ್ನರ ಪರ್ಷಿಯನ್ ಸಾಮ್ರಾಜ್ಯದ ಭಾಗವಾಗಿದ್ದ ಇನ್ನೂ ಪೂರ್ವಕ್ಕೆ ಸೀಮಿತಗೊಳಿಸಿಕೊಂಡಿದ್ದರು. ಇದು ಆಕಸ್ಮಿಕವಾಗೇನೂ ಇರಲಿಲ್ಲ. ಶಕ್ತಿಶಾಲಿ ಪರ್ಷಿಯನ್ ಪಂಗಡಗಳಾದಂತಹ ಬಾರ್ಮಾಕೀಗಳು ಮತ್ತು ನಾಬಖ್ತರು ಅವರು ಅಧಿಕಾರಕ್ಕೆ ಬರಲು ಸಹಾಯ ಮಾಡಿದ್ದರು ಹಾಗೂ ಹಲವಾರು ತಲೆಮಾರುಗಳವರೆಗೆ ಆಡಳಿತದಲ್ಲಿ ಅವರು ತಮ್ಮ ಪ್ರಭಾವ ಉಳಿಸಿಕೊಂಡಿದ್ದರು. ಅಬ್ಬಾಸಿದ್ ರಿಗೂ ಸಹ ಈ ಪರ್ಷಿಯನ್ ಪಂಗಡಗಳ ಬೆಂಬಲ ಅವಶ್ಯಕವಿತ್ತು ಹಾಗೂ ಅವರು ಅರಬ್ ಮತ್ತು ಪರ್ಷಿಯನ್ ಸಂಸ್ಕೃತಿ ಮತ್ತು ಅಸ್ಮಿತೆಗಳ ಅಂತರಮಿಶ್ರಣವನ್ನು ಪ್ರೋತ್ಸಾಹಿಸುತ್ತಿದ್ದರು.
ಆದರೆ ಆಗ ಸಾಮ್ರಾಜ್ಯದ ಅಧಿಕೃತ ಭಾಷೆ ಅರಾಬಿಕ್ ಆಗಿದ್ದಿತು ಹಾಗೂ ಅವರಿಗೆ ಪಹ್ಲವಿ ಪಠ್ಯಗಳನ್ನು ಅರಾಬಿಕ್ ಭಾಷೆಗೆ ಅನುವಾದಿಸುವ ತುರ್ತು ಅವಶ್ಯಕತೆಯಿತ್ತು, ಹಾಗಾಗಿ ಅಂತಹ ಪ್ರಾಯೋಜನೆಗಳಿಗೆ ಖಲೀಫರ ಬೆಂಬಲ ದೊರಕಿತು. ಈ ಕೆಲವು ಪಠ್ಯಗಳ ಮೂಲ ಪರ್ಷಿಯನ್ ಆಗಿತ್ತು; ಇನ್ನು ಕೆಲವು ವೈದ್ಯಕೀಯ, ಗಣಿತಶಾಸ್ತ್ರದ ಮತ್ತು ಖಗೋಳವಿಜ್ಞಾನದ ಪಠ್ಯಗಳನ್ನು ಮೂಲ ಗ್ರೀಕ್ ಹಾಗೂ ಭಾರತೀಯ ಭಾಷೆಗಳಿಂದ ಪಹ್ಲವಿಗೆ ಅನುವಾದಿಸಲಾಗಿತ್ತು ಮತ್ತು ಅವು ಗೊಂಡೇಶಪುರದಂತಹ (ಅರಾಬಿಕ್ ನಲ್ಲಿ ಗೊಂಡೇಶಪುರವನ್ನು ಜುಂದಾಯ್ ಸಾಬೂರ್ ಎಂದು ಕರೆಯಲಾಗುತ್ತಿತ್ತು) ನಗರಗಳಲ್ಲಿ ಬಳಕೆಯಲ್ಲಿತ್ತು. ಹಾಗಾಗಿ ಅನುವಾದ ಆಂದೋಲನದ ಮೊದಲ ಮತ್ತು ಅತಿ ಮುಖ್ಯವಾದ ಕಾರಣವೆಂದರೆ ಪರ್ಷಿಯನ್ ಸಂಸ್ಕೃತಿಯ ಬಗೆಗಿದ್ದ ಅಬ್ಬಾಸಿದ್ ರ ವ್ಯಾಮೋಹ. ಇದಕ್ಕೆ ಉದಾಹರಣೆಯಾಗಿ ಒಬ್ಬ ಅನುವಾದಕನನ್ನು ಉದಾಹರಿಸುತ್ತಾರೆ. ಒಮ್ಮೆ ಆ ಅನುವಾದಕನನ್ನು ಅರಾಬಿಕ್ ಗೆ ಅನುವಾದಿಸಲು ಆತ ಏಕೆ ಪರ್ಷಿಯನ್ ಪುಸ್ತಕಗಳನ್ನು ಅರಸುತ್ತಿದ್ದಾನೆಂದು ಕೇಳಿದಾಗ ಆತ, ‘ನಮ್ಮಲ್ಲಿ (ಅರಬ್ಬರಲ್ಲಿ) ಪದಸಂಪತ್ತಿದೆ, ಆದರೆ ಅವರಲ್ಲಿ (ಪರ್ಷಿಯನ್ನರಲ್ಲಿ) ಎಲ್ಲ ವಿಚಾರಗಳಿವೆ' ಎಂದಿದ್ದನಂತೆ. ಅನುವಾದದ ಈ ಅವಶ್ಯಕತೆ ಪ್ರಾರಂಭದಲ್ಲಿ ಸಂಪೂರ್ಣವಾಗಿ ಪ್ರಾಯೋಗಿಕ ಉದ್ದೇಶಗಳಿಗಾಗಿತ್ತು; ಅದು ಉಪಯೋಗಕರ ಹಾಗೂ ಅವಶ್ಯಕವೆಂದು ಪರಿಗಣಿಸಲಾಗಿತ್ತು.
ಅನುವಾದ ಆಂದೋಲನ ಪ್ರಾರಂಭವಾಗಲು ಕಾರಣವಾದ ಎರಡನೆಯ ಅಂಶವನ್ನೀಗ ಗಮನಿಸೋಣ: ಅದು ಜ್ಯೋತಿಷ್ಯಶಾಸ್ತ್ರದ ಬಗೆಗಿನ ವ್ಯಾಮೋಹ. ಜೊರೋಸ್ಟ್ರಿಯನ್ ಐತಿಹ್ಯಗಳ ಆಧಾರಿತವಾದ ಸಸೇನಿಯನ್ ವಿಚಾರಧಾರೆ ಖಲೀಫ ಅಲ್-ಮನ್ಸೂರ್ ರವರಿಗೆ ಹೆಚ್ಚು ಆಕರ್ಷಕವಾಗಿ ಕಂಡಿತು ಹಾಗೂ ಅದರ ಮೂಲಕ ಆತ ಜ್ಯೋತಿಷ್ಯಶಾಸ್ತ್ರದ ಬಗೆಗೆ ವೈಯಕ್ತಿಕ ಆಸಕ್ತಿ ಬೆಳೆಸಿಕೊಂಡ. ಅಲ್ಲದೆ ಆತನಿಗೆ ಪ್ರಭಾವೀ ಪರ್ಷಿಯನ್ ರಾಜಮನೆತನಗಳ ಬೆಂಬಲ ಅವಶ್ಯಕವಿತ್ತು ಹಾಗೂ ಅವರಲ್ಲಿನ ಬಹುಪಾಲು ಜನ ಇನ್ನೂ ಜೊರೋಸ್ಟ್ರಿಯನ್ ಧರ್ಮದ ಅನುಯಾಯಿಗಳಾಗಿದ್ದರು ಮತ್ತು ಇಸ್ಲಾಂಗೆ ಮತಾಂತರ ಹೊಂದಿರಲಿಲ್ಲ. ಜ್ಯೋತಿಷ್ಯಶಾಸ್ತ್ರದ ಬಗೆಗಿನ ಆತನ ಆಸಕ್ತಿ ಸ್ವಯಂಪ್ರೇರಿತ ಮತ್ತು ಪ್ರಾಮಾಣಿಕವಾದದ್ದೆಂಬುದಾಗಿ ಅನ್ನಿಸಿದರೂ ಅದು ಒಂದು ಚತುರ ರಾಜಕೀಯ ಉದ್ದೇಶವನ್ನೂ ಸಹ ಹೊಂದಿತ್ತು. ಖಗೋಳಶಾಸ್ತ್ರಕ್ಕೆ ವಿರುದ್ಧವಾಗಿ ಜ್ಯೋತಿಷ್ಯಶಾಸ್ತ್ರ ಪರ್ಷಿಯನ್ ಸಂಸ್ಕೃತಿಯ ಭಾಗವಾಗಿದ್ದು ಪರ್ಷಿಯನ್ನರ ದಿನನಿತ್ಯದ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿತ್ತು. ಇದು ಅರಬ್ಬರ ಬದುಕಿನಲ್ಲಿ ಭವಿಷ್ಯವನ್ನು ನುಡಿಯುವ, ದೈವೀಕರಣಗೊಳ್ಳುವ ನಂಬಿಕೆಗಳಾಗಿದ್ದು ಇಸ್ಲಾಂ ಬೋಧನೆಗೆ ವಿರುದ್ಧವಾದದ್ದಾಗಿತ್ತು. ಆದರೆ ಅಬ್ಬಾಸಿದ್ ರ ಮೇಲೆ ಸಸೇನಿಯನ್ ಸಂಸ್ಕೃತಿ ಅದೆಷ್ಟು ಗಹನ ಪರಿಣಾಮ ಬೀರಿತೆಂದರೆ ಜ್ಯೋತಿಷ್ಯಶಾಸ್ತ್ರ ಎಂಟನೇ ಶತಮಾನದ ಉತ್ತರಾರ್ಧದಲ್ಲಿ ಮರುಜೀವ ಪಡೆಯತೊಡಗಿತು. ಖಲೀಫರ ಆಸ್ಥಾನದಲ್ಲಿ ಜಾತಕ ಬರೆಸಿಕೊಳ್ಳುವುದು, ಸಲಹೆ ಪಡೆಯುವುದು ಹಾಗೂ ಖಲೀಫರ ಸಾಧನೆಗಳನ್ನು ವೈಭವೀಕರಿಸಲು ಜ್ಯೋತಿಷಿಗಳನ್ನು ನೇಮಿಸಿಕೊಳ್ಳಲಾಯಿತು. ಅಲ್-ಮನ್ಸೂರ್ ತನ್ನ ಹೊಸ ರಾಜಧಾನಿಯ ನಿರ್ಮಾಣಕ್ಕಾಗಿ ಸೂಕ್ತ ದಿನವನ್ನು ನಿಗದಿಪಡಿಸಲು ಮೂವರು ಜ್ಯೋತಿಷಿಗಳನ್ನು ನೇಮಿಸಿಕೊಂಡಿದ್ದ ಎಂಬುದಾಗಿ ಚರಿತ್ರೆ ತಿಳಿಸುತ್ತದೆ.
ಹಾಗಾಗಿ ಪಹ್ಲವಿ ಭಾಷೆಯಿಂದ ಅರಾಬಿಕ್ ಗೆ ವ್ಯವಸ್ಥಿತವಾಗಿ ಅನುವಾದಗೊಂಡ ಮೊದಲ ‘ವೈಜ್ಞಾನಿಕ' ವಿಷಯ ಜ್ಯೋತಿಷ್ಯಶಾಸ್ತ್ರ ಎಂಬುದರಲ್ಲಿ ಅಚ್ಚರಿಯೇನಿಲ್ಲ. ಈ ರೀತಿ ಅನುವಾದಗೊಂಡ ಮೊದಲ ಪಠ್ಯ ಪ್ರವಾದಿ ಜೊರೋಸ್ಟರ್ ರವರ ಐದು ಭಾಗಗಳ ಜ್ಯೋತಿಷ್ಯಶಾಸ್ತ್ರ ಕೃತಿ `ದ ಬುಕ್ ಆಫ್ ನೇಟಿವಿಟೀಸ್’. ಇದು ಕ್ರಿ.ಶ. 747ರಿಂದ 754ರ ನಡುವೆ ಅನುವಾದಗೊಂಡಿತು. ಜಾತಕ, ಕುಂಡಲಿಗಳನ್ನು ಬರೆಯಲು ನಕ್ಷತ್ರಗಳ ಸ್ಥಾನಗಳನ್ನು ಗುರುತಿಸುವ ಕಲೆಯಾದ ಜ್ಯೋತಿಷ್ಯಶಾಸ್ತ್ರ ಆಗ ಜ್ಞಾನದ ಶಾಖೆಯೆಂದು ಪರಿಗಣಿಸಿ ಸ್ವೀಕೃತಗೊಂಡಿತ್ತು. ಆಗ `ಇಲ್ಮ್ ಅಲ್-ನುಜುಮ್’ (ನಕ್ಷತ್ರಗಳ ವಿಜ್ಞಾನ) ಎಂದು ಪ್ರಖ್ಯಾತವಾಗಿದ್ದ ಅದನ್ನು ಗಣಿತಶಾಸ್ತ್ರ ಮತ್ತು ಖಗೋಳಶಾಸ್ತ್ರಗಳಿಗೆ (ಇಲ್ಮ್ ಅಲ್-ಫಲಕ್) ಸರಿಸಮಾನವಾಗಿ ಪರಿಗಣಿಸಲಾಗುತ್ತಿತ್ತು ಮತ್ತು ಖಗೋಳಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದವರು ನಕ್ಷತ್ರಗಳ ನಕ್ಷೆಗಳ ಮತ್ತು ಗಣಿತಶಾಸ್ತ್ರದ ಕೋಷ್ಟಕಗಳ ಪರಾಮರ್ಶನೆ ನಡೆಸುತ್ತಿದ್ದರು. ಅಬ್ಬಾಸಿದ್ ರ ಈ ಜ್ಯೋತಿಷ್ಯಶಾಸ್ತ್ರದಲ್ಲಿನ ಪ್ರಾರಂಭಿಕ ಆಸಕ್ತಿ ಅವರು ಪಹ್ಲವಿ ಅಥವಾ ಭಾರತೀಯ ಗಣಿತಶಾಸ್ತ್ರಜ್ಞರ ಮತ್ತು ಖಗೋಳಶಾಸ್ತ್ರಜ್ಞರ ಭಾಷೆಯಾಗಿದ್ದ ಸಂಸ್ಕೃತದಲ್ಲಿ ಲಭ್ಯವಿರುವ ಖಗೋಳವಿಜ್ಞಾನದ ಪಠ್ಯಗಳನ್ನು ಅರಸುವಂತೆ ಮಾಡಿತು.
ಬಾಗ್ದಾದ್ ನ `ಜ್ಞಾನದ ಮನೆ' – ಗ್ರಂಥಾಲಯ, ಕಲಾವಿದನೊಬ್ಬನ ಕಲ್ಪನೆ
ಮುಸ್ಲಿಂ ಜಗತ್ತಿನ ಮೊಟ್ಟಮೊದಲ ಖಗೋಳದ ಮಾದರಿ (ಅಸ್ಟ್ರೋಲೇಬ್) ನಿರ್ಮಿಸಿದ ಅಲ್-ಫಜಾರಿ ಎಂಬ ಜ್ಯೋತಿಷಿ ಅಲ್-ಮನ್ಸೂರ್ನೋ ಸಲಹೆಗಾರನಾಗಿದ್ದ ಹಾಗೂ ಆತ ಹಲವಾರು ಖಗೋಳವಿಜ್ಞಾನದ ಪಠ್ಯಗಳನ್ನು ಸಂಸ್ಕೃತದಿಂದ ಅರಾಬಿಕ್ ಗೆ ಅನುವಾದಿಸಿದ್ದಾನೆ. ಭಾರತದ ಮಹಾನ್ ಗಣಿತಶಾಸ್ತ್ರಜ್ಞ ಮತ್ತು ಖಗೋಳವಿಜ್ಞಾನಿ ಬ್ರಹ್ಮಗುಪ್ತ (ಕ್ರಿ.ಶ. 598-668) ರಚಿಸಿದ್ದ `ಸಿದ್ಧಾಂತ’ವನ್ನು ಸಹ ಸಂಸ್ಕೃತದಿಂದ ಅರಾಬಿಕ್ ಗೆ ಮೊಟ್ಟಮೊದಲಿಗೆ ಅನುವಾದಿಸಿದ ಕೀರ್ತಿ ಸಹ ಈತನಿಗೇ ಸಲ್ಲುತ್ತದೆ. ಅಬ್ಬಾಸಿದ್ ರಿಗೆ ಹಿಂದೂ ಖಗೋಳ ವಿಜ್ಞಾನದ ಪರಿಚಯವಾದದ್ದು ಇದೇ ಮೊಟ್ಟಮೊದಲಿಗೆ ಎನ್ನಲಾಗುತ್ತದೆ ಆದರೆ ಅಲ್-ಫಜಾರಿ ಎನ್ನುವ ಹೆಸರಿನ ಹಲವಾರು ವಿದ್ವಾಂಸರು ಅದೇ ಸಮಯದಲ್ಲಿ ಇದ್ದುದರಿಂದ ಅದರ ನಿಖರ ದಿನಾಂಕಗಳ ಬಗ್ಗೆ ಗೊಂದಲವಿದೆ.
`ಸಿದ್ಧಾಂತ’ ಎನ್ನುವುದು `ತತ್ವ' ಅಥವಾ `ಸಂಪ್ರದಾಯ' ಎನ್ನುವುದರ ಸಂಸ್ಕೃತ ಪದ. ಅದನ್ನು ಆಗ ಭಾರತೀಯ ಗಣಿತಶಾಸ್ತ್ರಜ್ಞರ ಸಂಪ್ರದಾಯದಂತೆ ಪದ್ಯ ರೂಪದಲ್ಲೇ ಬರೆಯಲಾಗಿತ್ತು. ಆದರೆ ಬ್ರಹ್ಮಗುಪ್ತ ಅದರಲ್ಲಿನ ಹಲವಾರು ಗಣಿತ ಪ್ರಮೇಯಗಳಿಗೆ ಯಾವುದೇ ಆಧಾರ ನೀಡಿರಲಿಲ್ಲ. ಇದರ ಅರಾಬಿಕ್ ಅನುವಾದವನ್ನು `ಸಿಂಧ್ ಹಿಂದ್’ ಎಂದು ಕರೆಯಲಾಗಿದ್ದು ಇದು ಟೊಲೆಮಿಯ `ಆಲ್ಮಾಜೆಸ್ಟ್’ ಮತ್ತು ಯೂಕ್ಲಿಡ್ ನ `ಎಲಿಮೆಂಟ್ಸ್’ನೊಂದಿಗೆ ಬಾಗ್ದಾದ್ ನ ವಿದ್ವಾಂಸರ ಮೇಲೆ ಮಹತ್ತರ ಪರಿಣಾಮ ಬೀರಿತ್ತು. ಬ್ರಹ್ಮಗುಪ್ತನ ಸಿದ್ಧಾಂತವು ಮೂಲದಲ್ಲಿ ಸಂಸ್ಕೃತದಿಂದ ಪಹ್ಲವಿಗೆ ಬಹುಶಃ ಸಸಾನಿಡ್ ವಿದ್ವಾಂಸರಿದ್ದ ಪರ್ಷಿಯನ್ ನಗರವಾದ ಗೊಂಡೇಶಪುರದಲ್ಲಿ ಅನುವಾದಗೊಂಡಿರಬಹುದೆಂದು ಹೇಳಲಾಗುತ್ತದೆ. ಆ ಕೃತಿಯಲ್ಲಿ ಕೋಷ್ಟಕಗಳು, ನಕ್ಷತ್ರಗಳ ನಕ್ಷೆಗಳಷ್ಟೇ ಅಲ್ಲದೆ ಗಣಿತ ಹಾಗೂ ಪ್ರಾರಂಭಿಕ ತ್ರಿಕೋನಮಿತಿಯನ್ನೂ ಒಳಗೊಂಡಿತ್ತು. ಆದರೆ ಅದರಲ್ಲಿನ ವಿಷಯದ ಅಸ್ಪಷ್ಟತೆಗೆ ಅದು ಪ್ರಖ್ಯಾತವಾಗಿದ್ದು ಅದರ ಗ್ರಹಿಕೆ ಸುಲಭವಾಗಿರಲಿಲ್ಲ.
`ಸಿದ್ಧಾಂತ' ಮುಸ್ಲಿಂ ಜಗತ್ತಿಗೆ ಪರಿಚಯವಾದದ್ದರ ಬಗ್ಗೆಯೂ ಒಂದು ಕತೆಯಿದ್ದು ಅದು `ಸಿಂಧ್ ಹಿಂದ್’ ಅನುವಾದವನ್ನು ಅಲ್-ಮನ್ಸೂರ್ ನ ಸಮಯಕ್ಕೇ ಕೊಂಡೊಯ್ಯುವುದಲ್ಲದೆ ಅದರ ಅಸ್ಪಷ್ಟತೆಗೆ ಕಾರಣವನ್ನೂ ಕೊಡುತ್ತದೆ. ಆ ಕತೆ ಹೇಗೆ ಅರಬ್ಬರು ಇಸ್ಲಾಂನ ಪ್ರಾರಂಭಿಕ ದಿನಗಳಲ್ಲಿ ಸಿಂಧ್ ಪ್ರದೇಶವನ್ನು (ಈಗ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತ್ಯ) ಮೊದಲಿಗೆ ಜಯಿಸಿ ಅಲ್ಲಿ ನೆಲೆಸಿದರು ಎಂದು ಹೇಳುತ್ತದೆ. ಅಬ್ಬಾಸಿದ್ ರು ಅಧಿಕಾರಕ್ಕೆ ಬಂದಾಗ ಈ ಅವಕಾಶವನ್ನು ಕಂಡು ಅಲ್ಲಿ ನೆಲೆಸಿದ್ದ ಅರಬ್ಬರು ತಮ್ಮನ್ನು ತಾವೇ ಸ್ವತಂತ್ರರೆಂದು ಘೋಷಿಸಿಕೊಂಡರು. ಆದರೆ ಇದನ್ನು ಸಹಿಸದ ಅಲ್-ಮನ್ಸೂರ್ ತನ್ನ ಸೇನೆಯನ್ನು ಕಳುಹಿಸಿ ದಂಗೆಯನ್ನು ಅಡಗಿಸಿ ಸಿಂಧ್ ಪ್ರದೇಶವನ್ನು ತನ್ನ ಅಧಿಕಾರದ ವ್ಯಾಪ್ತಿಗೇ ಸೇರಿಸಿಕೊಂಡ. ಆತನ ವಿಜಯದ ನಂತರ ಸೋತ ಸಿಂಧ್ ಪ್ರದೇಶದಿಂದ ನಿಯೋಗವೊಂದು ಬಾಗ್ದಾದ್ ಗೆ ಬಂದಿತು. ಆ ನಿಯೋಗದಲ್ಲಿ ಕಂಖಾ ಎಂಬ ಭಾರತೀಯ ಮುನಿಯೂ ಇದ್ದನಂತೆ. ಆದರೆ ಆತನಿಗೆ ಅರಾಬಿಕ್ ಅಥವಾ ಪರ್ಷಿಯನ್ ಭಾಷೆ ಬರುತ್ತಿರಲಿಲ್ಲ. ಆತ ತನ್ನ ಸಂಸ್ಕøತ ಭಾಷಣದಲ್ಲಿ ಭಾರತೀಯ ಖಗೋಳವಿಜ್ಞಾನದ ಮತ್ತು ಗಣಿತಶಾಸ್ತ್ರದ ಅದ್ಭುತ ಸಾಧನೆಗಳನ್ನು ತಿಳಿಸಿದನಂತೆ. ಆತನ ಮಾತುಗಳನ್ನು ಅನುವಾದಕನೊಬ್ಬ ಮೊದಲಿಗೆ ಪರ್ಷಿಯನ್ ಭಾಷೆಗೆ ಹಾಗೂ ಮತ್ತೊಬ್ಬ ಅನುವಾದಕ ಪರ್ಷಿಯನ್ ನಿಂದ ಅರಾಬಿಕ್ ಭಾಷೆಗೆ ಅನುವಾದಿಸಿದರಂತೆ. ಈ ಅನುವಾದದ ಅನುವಾದ ಪ್ರಕ್ರಿಯೆಯಲ್ಲಿ ದೊರಕಿದ ಅಂತಿಮ ಮಾಹಿತಿ ಬಹಳಷ್ಟು ಅಸ್ಪಷ್ಟವಾಗಿತ್ತು ಎನ್ನಲಾಗಿದೆ. ಆ ಕಂಖಾ ಮುನಿ ತನ್ನ ಮಾತಿನಲ್ಲಿ ವಿವರಣೆ ನೀಡುತ್ತಿದ್ದುದು ಬ್ರಹ್ಮಗುಪ್ತನ `ಸಿದ್ಧಾಂತ’ದ ಕುರಿತು ಎನ್ನಲಾಗಿದೆ.
13ನೇ ಶತಮಾನದಲ್ಲಿ ಅಲ್-ಮುಬಾಶಿರ್ ರಚಿಸಿರುವ `ಕಿತಾಬ್ ಮುಖ್ತರ್ ಅಲ್-ಹಿಕಮ್
ವಾ-ಮಹಸಿನ್ ಅಲ್-ಖಿಲಂ' ಪುಸ್ತಕದಲ್ಲಿನ ಒಂದು ಚಿತ್ರ: ಸಾಕ್ರೆಟಿಸ್ ಮತ್ತು ಆತನ
ವಿದ್ಯಾರ್ಥಿಗಳು. ನಂತರ ಇಸ್ಲಾಮಿಕ್ ವಿದ್ವಾಂಸರಲ್ಲಿ ಮಹಾನ್ ವಿದ್ವಾಂಸನಾದ ಅಲ್-ಬಿರೂನಿ ಹನ್ನೊಂದನೇ ಶತಮಾನದಲ್ಲಿ ಈ ಕತೆಯನ್ನು ಕಟ್ಟುಕತೆಯೆಂದು ಹೇಳಿ ಅಲ್-ಮನ್ಸೂರ್ ಬರುವ ಹೊತ್ತಿಗೆ ಗೊಂಡೇಶಪುರದಲ್ಲಿ `ಸಿಂಧ್ ಹಿಂದ್’ನ ಪರ್ಷಿಯನ್ ಆವೃತ್ತಿ ಬಳಕೆಯಲ್ಲಿತ್ತು ಎಂದಿದ್ದಾನೆ. ಹಾಗಾಗಿ ಈ ಕತೆಯಲ್ಲಿನ ಸಾಧ್ಯವಿರಬಹುದಾದ ಸತ್ಯಾಂಶವೆಂದರೆ `ಸಿದ್ಧಾಂತ’ವು ಅರಬ್ಬರಿಗೆ ತಲುಪುವ ಮೊದಲೇ ಎರಡು ಅನುವಾದಗಳನ್ನು ಕಂಡಿದೆಯೆಂಬುದು.
ಒಂಭತ್ತನೆಯ ಶತಮಾನದ ಹೊತ್ತಿಗೆ ಇಸ್ಲಾಮಿಕ್ ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳಲ್ಲಿ ಹೊಸ ಆತ್ಮವಿಶ್ವಾಸ ಕಂಡುಬರಲು ಪ್ರಾರಂಭವಾಗಿ ಅವರಲ್ಲಿ ಜಗತ್ತಿನ ಕುರಿತು ಹೊಸ ವೈಚಾರಿಕ ಮತ್ತು ವೈಜ್ಞಾನಿಕ ತಿಳಿವಳಿಕೆಯಿಂದಾಗಿ ಜ್ಯೋತಿಷ್ಯಶಾಸ್ತ್ರವು ವೈಜ್ಞಾನಿಕವಲ್ಲ ಹಾಗೂ ಅದನ್ನು ನಿಜವಾದ ವಿಜ್ಞಾನಗಳಾದ ಗಣಿತಶಾಸ್ತ್ರ ಹಾಗೂ ಖಗೋಳಶಾಸ್ತ್ರದ ಜೊತೆಗೆ ಇರಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸತೊಡಗಿದರು. ಆದರೆ ಗಣಿತಶಾಸ್ತ್ರಜ್ಞ ಅಲ್-ಖ್ವರಿಜ್ಮಿಯನ್ನೊಳಗೊಂಡಂತೆ ಹಲವರು ಅದನ್ನು ಒಪ್ಪಲು ಸಿದ್ಧರಿರಲಿಲ್ಲ. ಹಾಗಾಗಿ ಹಲವಾರು ಶತಮಾನಗಳ ನಂತರವೂ ಜ್ಯೋತಿಷಿಗಳು ವೈಜ್ಞಾನಿಕ ತಿಳಿವಳಿಕೆಯಿಲ್ಲದ ರಾಜ ಮಹಾರಾಜರುಗಳ ಮನವೊಲಿಸಿ ತಮ್ಮದೇ ಖಗೋಳ ವಿಜ್ಞಾನದ ಪ್ರಾಯೋಜನೆಗಳಿಗೆ ಧನಸಹಾಯ ಪಡೆಯುವುದನ್ನು ಮುಂದುವರಿಸಿದರು. ಅಂತಹ ವಿದ್ವಾಂಸರಲ್ಲೊಬ್ಬ ಪರ್ಷಿಯಾದ ಅಲ್-ತೂಸಿ. ಹದಿಮೂರನೇ ಶತಮಾನದ ಮಧ್ಯದಲ್ಲಿ ಆತ ಖಗೋಳ ವಿಜ್ಞಾನದಲ್ಲಿ ತನ್ನ ಹುಸಿ ಆಸಕ್ತಿ ಪ್ರದರ್ಶಿಸಿ ಮಂಗೋಲ್ ದೊರೆ ಹುಲಾಗು ಖಾನ್ ನ ಮನವೊಲಿಸಿ ಪರ್ಷಿಯಾದ ವಾಯುವ್ಯ ಪ್ರದೇಶದಲ್ಲಿರುವ ಮರಾಘದಲ್ಲಿ ಒಂದು ಹೊಸ ಖಗೋಳ ವೀಕ್ಷಣಾಲಯ ಸ್ಥಾಪನೆಗೆ ಧನಸಹಾಯ ಪಡೆದ.
ಆದರೆ ಎಂಟನೇ ಶತಮಾನದಲ್ಲಿ ಜ್ಯೋತಿಷ್ಯಶಾಸ್ತ್ರದ ಬಗೆಗಿನ ಇದ್ದ ಅತಿಹೆಚ್ಚು ಆಸಕ್ತಿಯಿಂದಾಗಿ ಪ್ರಮುಖವಾಗಿ ಗ್ರೀಕ್ ಭಾಷೆಯಲ್ಲಿದ್ದ ಇತರ ವಿಜ್ಞಾನಗಳನ್ನೂ ಸಹ ಅನುವಾದಿಸಲು ಇತರ ಆಸಕ್ತರು ಉತ್ಸುಕತೆ ತೋರಿದರು.
ಅನುವಾದ ಆಂದೋಲನ ನೆಲೆಗೊಳ್ಳಲು ಮತ್ತು ಮತ್ತಷ್ಟು ಕ್ಷಿಪ್ರಗೊಳ್ಳಲು ಕಾರಣವಾದ ಮೂರನೇ ಅಂಶವೆಂದರೆ ಉಗಮಗೊಳ್ಳುತ್ತಿರುವ ತಂತ್ರಜ್ಞಾನಗಳ ಬಳಕೆಯ ಹಲವಾರು ಸಾಧ್ಯತೆಗಳು. ಜ್ಯಾಮಿತಿಯಂತಹ ವಿಷಯದ ಜ್ಞಾನವು 6 ಕಲ್ಲಿನ ಕಮಾನು ಸೇತುವೆಗಳ, ನೀರೆತ್ತುವ ಚಕ್ರಗಳ ಹಾಗೂ ಕಾಲುವೆಗಳ ನಿರ್ಮಾಣದಲ್ಲಿ ಬಳಕೆಯಾಗುತ್ತಿತ್ತು; ಸಮಯದ ನಿರ್ವಹಣೆಗೆ ಚಂದ್ರನ ವಿವಿಧ ಹಂತಗಳ ಮುನ್ಸೂಚನೆಗೆ ನಿಖರ ಖಗೋಳ ಮಾಹಿತಿ ಅವಶ್ಯಕವಿತ್ತು ಮತ್ತು ಲೆಕ್ಕಗಳ ನಿರ್ವಹಣೆಗೆ ಗಣಿತಶಾಸ್ತ್ರದ ಅರಿವು ಅತ್ಯಗತ್ಯವಾಗಿತ್ತು. ಈ ಎಲ್ಲವೂ ಅನುವಾದ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿವೆ ನಿಜ, ಆದರೆ ಈ ಜ್ಞಾನ ಮೊದಲ ನಾಗರಿಕತೆಗಳಿಗೂ ಅಷ್ಟೇ ಅವಶ್ಯಕವಿತ್ತು, ಹಾಗಾಗಿ ಅನುವಾದದ ಪ್ರಮಾಣದಲ್ಲಿ ಇದ್ದಕ್ಕಿದ್ದಂತೆ ಆದ ಹೆಚ್ಚಳವನ್ನು ಈ ಅಂಶಗಳು ವಿವರಿಸುವುದಿಲ್ಲ. ಆದರೆ ವಿಶೇಷವಾಗಿ ಆಗ ಆಗಮಿಸಿದ ಒಂದು ಹೊಸ ತಂತ್ರಜ್ಞಾನ ಈ ಎಲ್ಲವನ್ನೂ ಬದಲಾಯಿಸಿತು.
ಅಬ್ಬಾಸಿದ್ ಸಾಮ್ರಾಜ್ಯದಲ್ಲಿ ಮೊಟ್ಟಮೊದಲ ಕಾಗದ ಕಾರ್ಖಾನೆ ಮಧ್ಯ ಏಷ್ಯಾದ ಚೀನಾ ಮತ್ತು ಪಶ್ಚಿಮದ ನಡುವಿನ ರೇಷ್ಮೆ ಹಾದಿಯಲ್ಲಿನ ಸಮರಕಾಂಡ್ ನಲ್ಲಿ ನಿರ್ಮಿತವಾಯಿತು. ಇಸ್ಲಾಮಿಕ್ ವಿಜಯದ ಹಲವಾರು ಶತಮಾನಗಳ ಮೊದಲೇ ಸಮರಕಾಂಡ್ ಪರ್ಷಿಯನ್ ಸಾಮ್ರಾಜ್ಯದಲ್ಲಿ ಬಹು ಪ್ರಖ್ಯಾತ ನಗರವಾಗಿತ್ತು ಹಾಗೂ ಮಧ್ಯಯುಗದವರೆಗೂ ಕಲಿಕೆಯ ಹಾಗೂ ವಿದ್ವತ್ತಿನ ಕೇಂದ್ರವಾಗಿ ಮುಂದುವರಿಯಿತು. ಮುಸಲ್ಮಾನ ಸೈನ್ಯವು ಕ್ರಿ.ಶ. 751ರಲ್ಲಿ ಈಗಿನ ಕಿರ್ಗಿಸ್ತಾನ್ ದಲ್ಲಿನ ಸಮರಕಾಂಡ್ ನ ವಾಯುವ್ಯ ದಿಕ್ಕಿನಲ್ಲಿರುವ ತಲಾಸ್ ನದಿಯ ದಂಡೆಯ ಮೇಲೆ ಚೀನಿಯರನ್ನು ಸೋಲಿಸಿತು. ಅಬ್ಬಾಸಿದ್ ರ ಈ ವಿಜಯವು ಚೀನಿ ಟಾಂಗ್ ಸಾಮ್ರಾಜ್ಯದ ಪಶ್ಚಿಮ ಗಡಿಯನ್ನೂ ಹಾಗೂ ಇಸ್ಲಾಮಿಕ್ ಸಾಮ್ರಾಜ್ಯದ ಪೂರ್ವ ದಿಕ್ಕಿನಲ್ಲಿ ಏಷ್ಯಾ ಗಡಿಯನ್ನೂ ಗುರುತಿಸುತ್ತದೆ. ಇಲ್ಲಿ ಮುಖ್ಯವಾದುದೇನೆಂದರೆ, ಸೆರೆ ಸಿಕ್ಕ ಹಲವಾರು ಚೀನಿ ಕೈದಿಗಳಿಗೆ ಕಾಗದ ತಯಾರಿಕೆಯ ತಂತ್ರಜ್ಞಾನದ ಅರಿವಿತ್ತು - ಏಕೆಂದರೆ ಕ್ರಿ.ಶ. ಎರಡನೇ ಶತಮಾನದಲ್ಲೇ ಚೀನಿಯರು ಕಾಗದ ತಯಾರಿಕೆ ಕಂಡುಹಿಡಿದಿದ್ದರು. ಅಂತಹ ಚೀನಿ ಕೈದಿಗಳನ್ನು ಸಮರಕಾಂಡ್ ಗೆ ಕರೆದೊಯ್ಯಲಾಯಿತು. ಅಲ್ಲಿ ಅಗಸೆ, ಸೆಣಬಿನಂತಹ ಕಚ್ಚಾ ವಸ್ತುಗಳು ಹೇರಳವಾಗಿ ದೊರೆಯುತ್ತಿದ್ದುದರಿಂದ ಈ ಕೈದಿಗಳ ಜ್ಞಾನವನ್ನು ಬಳಸಿಕೊಂಡು ಇಸ್ಲಾಂ ಜಗತ್ತಿನ ಮೊಟ್ಟಮೊದಲ ಕಾಗದ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. (ಆದರೆ ಆಧುನಿಕ ಜಗತ್ತಿನಲ್ಲಿ ಹದಿನೆಂಟನೇ ಶತಮಾನದ ಕೊನೆಯ ದಶಕದಲ್ಲಿ ಬಾಗ್ದಾದ್ ನಲ್ಲಿ ಮೊದಲ ಕಾಗದ ಕಾರ್ಖಾನೆ ಸ್ಥಾಪಿತವಾಯಿತು).
ಆಲ್ಜೀಬ್ರಾದ (ಬೀಜಗಣಿತ) ಪಿತಾಮಹ ಮಹಮ್ಮದ್ ಇಬನ್ ಮೂಸಾ ಅಲ್-ಖ್ವರಿಜ್ಮಿ.
ಇದಕ್ಕೆ ಸಮಾನಾಂತರವಾಗಿ ಪುಸ್ತಕ ಉತ್ಪಾದನೆ, ಬಣ್ಣ, ಶಾಯಿಗಳು, ಅಂಟು, ಚರ್ಮದ ಮತ್ತು ಪುಸ್ತಕ ಹೊಲಿಯುವ ಮುಂತಾದ ತಂತ್ರಜ್ಞಾನಗಳು ಸಹ ಅಲ್ಪಾವಧಿಯಲ್ಲಿಯೇ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದಿದವು. ಆಗ ಬರೆಯಲು ಬಳಸುತ್ತಿದ್ದ ಪಪೈರಸ್ ಹಾಗೂ ಪಾರ್ಚ್ ಮೆಂಟ್ ಗಿಂತ ಕಾಗದ ಕಡಿಮೆ ಬೆಲೆಯಲ್ಲಿ ದೊರಕತೊಡಗಿತು ಹಾಗೂ ಬರವಣಿಗೆಯಲ್ಲಿ ತೊಡಗುತ್ತಿದ್ದ ತಂಡಗಳಿಂದಾಗಿ ಪುಸ್ತಕವೊಂದರ ಹಲವಾರು ಪ್ರತಿಗಳು ಕೂಡಲೇ ಸಿದ್ಧವಾಗುತ್ತಿದ್ದವು.
ಇದಕ್ಕೆ ಮೊದಲು ಕೋಡೆಕ್ಸ್(ಹಾಳೆಗಳನ್ನು ಬಂಧಿಸಿಡುತ್ತಿದ್ದ ಮರದ ಕವಚ)ಗಳನ್ನು ಬದಲಿಸಿ ಸ್ಕ್ರೋಲ್ ಗಳನ್ನು ಬಳಸಲಾಗುತ್ತಿತ್ತು. ರೋಮನ್ನರು ಮತ್ತು ಹೆಲ್ಲೆನಿಸ್ಟಿಕ್ ಗ್ರೀಕರು ಕೋಡೆಕ್ಸ್ ಗಳನ್ನು ಬಳಸುತ್ತಿದ್ದರು ಹಾಗೂ ಅವು ಸಾಮಾನ್ಯವಾಗಿ ಪಪೈರಸ್ ಮತ್ತು ಪಾರ್ಚ್ ಮೆಂಟ್ ಗಳಿಂದ ತಯಾರಿಸಲಾಗುತ್ತಿತ್ತು. ಪ್ರವಾದಿ ಮಹಮ್ಮದ್ ರವರ ಜೀವಿತಾವಧಿಯಲ್ಲಿಯೇ ಕುರಾನ್ ಪುಟಗಳನ್ನು ಮರದ ಹಲಗೆಯ ನಡುವೆ ಕೋಡೆಕ್ಸ್ ರೀತಿ ಇಡಲಾಗಿತ್ತು ಎನ್ನಲಾಗಿದೆ. ಹಾಗಾಗಿ ಅನುವಾದ ಆಂದೋಲನದ ಪ್ರಾರಂಭಕ್ಕೆ ಪರ್ಷಿಯನ್ ಸಂಸ್ಕೃತಿ ಹಾಗೂ ವಿಶೇಷವಾಗಿ ಜ್ಯೋತಿಷ್ಯಶಾಸ್ತ್ರದ ಬಗೆಗಿನ ಅಬ್ಬಾಸಿದ್ ರ ಒಲವು ಕಾರಣವೆನ್ನಬಹುದು ಮತ್ತು ಅದಕ್ಕೆ ಚೀನಿಯರಿಂದ ಕಲಿತ ಕಾಗದ ತಯಾರಿಕಾ ತಂತ್ರಜ್ಞಾನವು ಪೂರಕವಾಯಿತೆನ್ನಬಹುದು. ಅದು ಪ್ರಾರಂಭವಾದನಂತರ ಪ್ರಾಚೀನ ಪಠ್ಯಗಳನ್ನು ಅನುವಾದಿಸಬೇಕೆಂಬ ಹಂಬಲ ವೈಜ್ಞಾನಿಕ ಪ್ರಗತಿಯ ಸುವರ್ಣ ಯುಗವನ್ನೇ ಪ್ರಾರಂಭಿಸಿತು.
ಹರೂನ್ ಅಲ್-ರಶೀದ್ ರಾಜ್ಯಾಡಳಿತದ ಅವಧಿಯಲ್ಲಿ (ಕ್ರಿ.ಶ. 786-809) ಅತಿ ಹೆಚ್ಚು ಸಂಖ್ಯೆಯ ಅನುವಾದಗಳು ನಡೆದವು. ವೈದ್ಯಕೀಯ, ಖಗೋಳವಿಜ್ಞಾನ ಮತ್ತು ಗಣಿತಶಾಸ್ತ್ರದ ಪಠ್ಯಗಳನ್ನು ಗ್ರೀಕ್, ಸಿರಿಯಾಕ್, ಪರ್ಷಿಯನ್ ಮತ್ತು ಭಾರತೀಯ ಭಾಷೆಗಳಿಂದ ಅನುವಾದಿಸಲಾಯಿತು. ಈ ಪ್ರಾರಂಭಿಕ ಹಂತದಲ್ಲಿ ವಿದ್ವಾಂಸರು ಅನುವಾದಕ್ಕಾಗಿ ತಾವು ತೆಗೆದುಕೊಳ್ಳುತ್ತಿದ್ದ ಪಠ್ಯಗಳನ್ನು ಅತಿ ಎಚ್ಚರಿಕೆಯಿಂದ ಆಯ್ದುಕೊಳ್ಳುತ್ತಿದ್ದರು. ವಿದ್ವತ್ತಿನ ಯಾವುದೇ ಹೊಸ ವೈಜ್ಞಾನಿಕ ಕೃತಿಯು ಈ ಹಿಂದೆ ಇದ್ದ ಅದೇ ವಿಷಯದ ಕೃತಿಗಿಂತ ಹೆಚ್ಚಿನ ಮಾಹಿತಿ ಅಥವಾ ಹೊಸ ವಿಷಯಗಳನ್ನು ನೀಡುವಲ್ಲಿ ಆ ಹೊಸ ಕೃತಿಯ ಪ್ರಾಮುಖ್ಯತೆ ಇರುತ್ತಿತ್ತು. ಆಗ ಇದ್ದ ಬಹಳಷ್ಟು ಪರ್ಷಿಯನ್ ವೈಜ್ಞಾನಿಕ ಕೃತಿಗಳು ಮೂಲ ಗ್ರೀಕ್ ನಿಂದ ಅನುವಾದವಾದ ಕೃತಿಗಳೆಂಬುದನ್ನು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಹಾಗಾಗಿ ವಿದ್ವಾಂಸರು ಗ್ರೀಕ್ ನ ಮೂಲ ಕೃತಿಗಳನ್ನೇ ಅರಸತೊಡಗಿದರು. ಅಷ್ಟೊತ್ತಿಗಾಗಲೆ ಅನುವಾದ ಆಂದೋಲನದ ಇಸ್ಲಾಮಿಕ್ ವಿದ್ವಾಂಸರು ಮತ್ತು ಅವರ ಪೋಷಕರು ಸಂಪೂರ್ಣ ಪ್ರಾಯೋಗಿಕ ವಿಷಯಗಳಾದಂತಹ ಜ್ಯೋತಿಷ್ಯಶಾಸ್ತ್ರ, ಔಷಧ ಮತ್ತು ಕೃಷಿಯ ವಿಷಯಗಳಿಂದ ತಮ್ಮ ಆಸಕ್ತಿ, ಒಲವನ್ನು ಗಣಿತಶಾಸ್ತ್ರ ಹಾಗೂ ಖಗೋಳಶಾಸ್ತ್ರದೆಡೆಗೆ ತಿರುಗಿಸಿದ್ದರು. ಆಗ ಅನುವಾದಕ್ಕೊಳಗಾದ ವಿಷಯಗಳಲ್ಲಿ ತತ್ವಶಾಸ್ತ್ರವಿರಲಿಲ್ಲ. ನಂತರದ ಹಂತದ ಅನುವಾದ ಕಾರ್ಯಗಳಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ನಿಂದ ಅರಾಬಿಕ್ ಗೆ ತತ್ವಶಾಸ್ತ್ರದ ಪಠ್ಯಗಳ ಅನುವಾದ ಪ್ರಾರಂಭವಾಯಿತು ಏಕೆಂದರೆ ಅವರಿಗೆ ಇಬ್ಬರು ಗ್ರೀಕ್ ನ ಪ್ರಖ್ಯಾತ ತತ್ವಜ್ಞಾನಿಗಳಾದ ಪ್ಲಾಟೊ ಮತ್ತು ಅರಿಸ್ಟಾಟಲ್ ರವರ ಮಹಾನ್ ಕೃತಿಗಳನ್ನು ಅರ್ಥೈಸಿಕೊಳ್ಳುವ ಇಚ್ಛೆಯಿದ್ದಿತು. ಬಾಗ್ದಾದ್ ನ ಅನುವಾದ ಆಂದೋಲನದಲ್ಲಿ ಅಲ್ಲಿನ ಇಸ್ಲಾಮಿಕ್ ವಿದ್ವಾಂಸರಿಗೆ ಈ ಕ್ಷೇತ್ರದಲ್ಲಿ ಆಸಕ್ತಿ ತೀರಾ ತಡವಾಗಿ ಬರಲು ಮತಧರ್ಮಶಾಸ್ತ್ರವೂ ಕಾರಣವೆನ್ನಬಹುದು. ಮತಧರ್ಮಶಾಸ್ತ್ರದ ಕುರಿತ ಚರ್ಚೆಗಳಲ್ಲಿ ತರ್ಕ ಮತ್ತು ವಿಚಾರಗಳನ್ನು ಮಂಡಿಸುವ ಕೌಶಲ್ಯದಲ್ಲಿ ಕ್ರೈಸ್ತ ಮತ್ತು ಯೆಹೂದಿ ವಿದ್ವಾಂಸರು ಮುಸಲ್ಮಾನ ವಿದ್ವಾಂಸರಿಗಿಂತ ಒಂದು ಹೆಜ್ಜೆ ಮುಂದಿರುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಅವರು ಅರಿಸ್ಟಾಟಲ್ ಮತ್ತು ಪ್ಲಾಟೊರ ವಿಚಾರಧಾರೆಗಳನ್ನು ಮನನ ಮಾಡಿದ್ದರು ಮತ್ತು ತರ್ಕದ ವಿಚಾರದ ತಕರಾರುಗಳಲ್ಲಿ ಹೆಚ್ಚು ಅನುಭವ ಪಡೆದವರಾಗಿದ್ದರು.
ಬಾಗ್ದಾದ್ ನ ಬೌದ್ಧಿಕ ಸಂಸ್ಕೃತಿಗೆ ಅತ್ಯಮೂಲ್ಯ ಕೊಡುಗೆ ನೀಡಿದ ಬಹಳಷ್ಟು ಯೆಹೂದಿ ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳ ಕೃತಿಗಳು ಹೀಬ್ರೂ ಭಾಷೆಯಲ್ಲಿರದೆ ಅರಾಬಿಕ್ ಭಾಷೆಯಲ್ಲಿಯೇ ಇದ್ದವು. ಬಾಗ್ದಾದ್ ನ ಸಲ್ ರಬ್ಬಾನ್ ಅಲ್- ತಬರಿಯ ಕೊಡುಗೆ ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಆತ ಟೊಲೆಮಿಯ ಆಲ್ಮಾಜೆಸ್ಟ್ ಕೃತಿಯನ್ನು ಅರಾಬಿಕ್ ಭಾಷೆಗೆ ಅನುವಾದ ಮಾಡಿದವರಲ್ಲಿ ಮೊದಲನೆಯವನೆಂದು ಹೇಳಲಾಗುತ್ತದೆ. ಸಲ್ ರಬ್ಬಾನ್ ಅಲ್- ತಬರಿಯ ಒಬ್ಬ ಖಗೋಳ ವಿಜ್ಞಾನಿ ಹಾಗೂ ವೈದ್ಯನಾಗಿದ್ದು ಆತನ ಹೆಸರಿನ ಅರ್ಥ `ತಬರಿಸ್ತಾನದ ರಬ್ಬೈನ ಮಗ' ಎಂದು. ತಬರಿಸ್ತಾನ ಉತ್ತರ ಇರಾನ್ ನ ಪ್ರಾಂತ್ಯವಾಗಿದ್ದು ಆತ ಅಲ್-ರಶೀದ್ ರ ಸಮಯದಲ್ಲಿ ಬಾಗ್ದಾದ್ ಗೆ ಬಂದು ನೆಲೆಸಿದ. ಆತನ ಮಗ ಆಲಿ (ಕ್ರಿ.ಶ.. 838-70) ಇಸ್ಲಾಂಗೆ ಮತಾಂತರ ಹೊಂದಿದ ಹಾಗೂ ವೈದ್ಯಕೀಯ ಮತ್ತು ಔಷಧಶಾಸ್ತ್ರದ ಮೊಟ್ಟ ಮೊದಲ ಅರಾಬಿಕ್ ವಿಶ್ವಕೋಶವನ್ನು ರಚಿಸಿದ ಹಾಗೂ ಮಹಮ್ಮದ್ ಇಬನ್ ಜಕರಿಯ್ಯ ಅಲ್-ರಾಜಿ ಎಂಬ ಬಾಲಕನಿಗೆ ವಿದ್ಯಾಭ್ಯಾಸ ನೀಡಿದ. ಆ ಬಾಲಕ ಮುಂದೆ ಅತ್ಯಂತ ಪ್ರಸಿದ್ಧ ಹಾಗೂ ಮಹಾನ್ ವೈದ್ಯನಾದ.
ಪರ್ಷಿಯನ್ನರ ಸಂಸ್ಕೃತಿಯ ಬಗೆಗೆ ಅಬ್ಬಾಸಿದ್ ರ ಎಷ್ಟೇ ವ್ಯಾಮೋಹ ಇದ್ದರೂ ಹಾಗೂ ಭಾರತೀಯ ವಿಜ್ಞಾನದ ಬಗೆಗೆ ಮತ್ತು ಪೂರ್ವ ಸಂಸ್ಕೃತಿಯ ಬಗೆಗೆ ಅವರ ಸಂಬಂಧ ಏನೇ ಇದ್ದರೂ ಅನುವಾದ ಆಂದೋಲನದ ಮೂಲ ಗ್ರೀಕ್ ವಿಜ್ಞಾನದ ತಳಹದಿಯ ಮೇಲೆಯೇ ನಿರ್ಮಾಣವಾಗಿದೆ ಎನ್ನುತ್ತಾರೆ ಕೆಲವು ಚರಿತ್ರಕಾರರು. ಕೆಲವು ಹಂತದವರೆಗೆ ಇದು ನಿಜವೂ ಹೌದು. ಇಸ್ಲಾಂನ ಆರಂಭಕ್ಕೂ ಹಲವು ಶತಮಾನಗಳ ಮೊದಲೇ ಸಾಮ್ರಾಟ ಅಲೆಕ್ಸಾಂಡರ್ ನ ಸಾಮ್ರಾಜ್ಯ ಪೂರ್ವದಲ್ಲಿ ಭಾರತದವರೆಗೆ ವಿಸ್ತರಿತವಾಗಿದ್ದು ಗ್ರೀಕ್ ವಿಜ್ಞಾನದ ಫಲಿತಗಳು ತನ್ನ ತಾಯ್ನಾಡಿನಿಂದ ಬಹುದೂರದವರೆಗೂ ತಲುಪಿದ್ದವು, ಅಲ್ಲದೆ ಸಾಗರದ ವ್ಯಾಪಾರದ ಹಾದಿಯ ಮೂಲಕವೂ ಈಜಿಪ್ಟ್ ನಿಂದ ಸಹ ಈ ರೀತಿಯ ಜ್ಞಾನ ಪ್ರಸರಣೆ ನಡೆದಿತ್ತು. ಈ ರೀತಿಯ ಜ್ಞಾನ ಪ್ರಸರಣೆ ಒಂದು ರೀತಿಯಲ್ಲಿ ಮೂಲದ ಗ್ರೀಕ್ ನಿಂದ ಭಾರತಕ್ಕೆ ತಲುಪಿ ಅಲ್ಲಿಂದ ಹಿಂತಿರುಗಿ ಬಾಗ್ದಾದ್ ನ ಅಬ್ಬಾಸಿದ್ ರನ್ನು ತಲುಪಿದೆ ಎಂದು ಹೇಳಬಹುದು. ಇಸ್ಲಾಂನ ಆಗಮನಕ್ಕೆ ಹಲವಾರು ಶತಮಾನಗಳ ಮೊದಲೇ ಮಹಾನ್ ಕ್ರೈಸ್ತ ನಗರಗಳಾದ ಆಂಟಿಯೋಕ್ ಮತ್ತು ಎಡೆಸ್ಸಾಗಳಲ್ಲಿ ಗ್ರೀಕ್ ನಿಂದ ಸಿರಿಯಾಕ್ ಭಾಷೆಗಳಿಗೆ ಸ್ವಲ್ಪ ಮಟ್ಟಿಗೆ ಅನುವಾದ ಕಾರ್ಯಗಳು ನಡೆಯುತ್ತಿದ್ದು ಅಲ್ಲಿಂದಲೂ ಬಹಳಷ್ಟು ಗ್ರೀಕ್ ಜ್ಞಾನವು ಅರಾಬಿಕ್ ಜಗತ್ತಿಗೆ ತಲುಪಿದೆ.
ವೈದ್ಯಕೀಯ ಮತ್ತು ತತ್ವಶಾಸ್ತ್ರ ಕ್ಷೇತ್ರಗಳಲ್ಲಿ ಹಿಪೊಕ್ರೇಟ್ಸ್, ಗ್ಯಾಲೆನ್, ಪ್ಲಾಟೊ ಮತ್ತು ಅರಿಸ್ಟಾಟಲ್ ರಿಗೆ ಆಕರ ವ್ಯಕ್ತಿಗಳಿರಲಿಲ್ಲ ಆದರೆ ಅರಬ್ಬರಿಗೆ ತಾವು ಪಡೆದ ಎಲ್ಲ ಜ್ಞಾನಕ್ಕೆ ಆಕರ ವ್ಯಕ್ತಿಗಳಾಗಿ ಗ್ರೀಕರಿದ್ದರು. ಜ್ಯಾಮಿತಿಯಲ್ಲಿಯೂ ಸಹ ಆಗ ಭಾರತೀಯರು ಮತ್ತು ಪರ್ಷಿಯನ್ನರು ತಜ್ಞತೆ ಹೊಂದಿದ್ದರು. ಇಸ್ಲಾಮಿಕ್ ಅನುವಾದ ಆಂದೋಲನದ ಸಮಯದಲ್ಲಿ ಅರಾಬಿಕ್ ವಿಜ್ಞಾನದ ಅಭಿವೃದ್ಧಿಯಲ್ಲಿ ಅವರ ಕೊಡುಗೆಯನ್ನು ಸಂಪೂರ್ಣವಾಗಿ ನಿರಾಕರಿಸಲಾಗದು. ಅರಬ್ ಜಗತ್ತಿಗೆ ಭಾರತೀಯ ಗಣಿತಶಾಸ್ತ್ರ ಅವರಿಗೆ ಪರಿಚಯವಾಗದಿದ್ದಲ್ಲಿ ಅವರಲ್ಲಿ ದಶಮಾಂಶ ಪದ್ಧತಿಯ ಅಥವಾ ಖಗೋಳವಿಜ್ಞಾನದಲ್ಲಿ ಬಹಳಷ್ಟು ಉಪಯುಕ್ತವೆನ್ನಿಸಿದ ತ್ರಿಕೋನಮಿತಿ ಪರಿಚಯವಾಗುತ್ತಿರಲಿಲ್ಲ. ಅದೇ ರೀತಿ, ಅರಾಬಿಕ್ ಖಗೋಳಶಾಸ್ತ್ರವನ್ನು ಪರ್ಷಿಯನ್ ವೀಕ್ಷಣಾಲಯಗಳ ಮುಂದುವರಿಕೆ ಎನ್ನುತ್ತಾರೆ ಹಾಗೂ ಪರ್ಷಿಯನ್ ಖಗೋಳಶಾಸ್ತ್ರದ ಸಾಧನೆ ಭಾರತೀಯ ಗಣಿತಶಾಸ್ತ್ರವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ.
ಪರ್ಷಿಯನ್ ಸಂಸ್ಕೃತಿ ಮತ್ತು ಚರಿತ್ರೆಗೆ ಪೂರಕವೆನ್ನಿಸುವ ಬದಲಿ ಹಾಗೂ ದೋಷಪೂರಿತ ಆದರೆ ಕುತೂಹಲಕರ ಐತಿಹ್ಯವೊಂದು ಪ್ರಚಲಿತದಲ್ಲಿದ್ದು ಅದನ್ನು ಇಲ್ಲಿ ನೆನೆಸಿಕೊಳ್ಳಬಹುದು. ಕ್ರಿ.ಪೂ. 333ರಲ್ಲಿ ಸಾಮ್ರಾಟ ಅಲೆಕ್ಸಾಂಡರ್ ಪರ್ಷಿಯಾದ ಕೊನೆಯ ರಾಜ 3ನೇ ಡೇರಿಯಸ್ ನನ್ನು ಸೋಲಿಸಿ ಪರ್ಷಿಯನ್ ಸಾಮ್ರಾಜ್ಯವನ್ನು ಗೆದ್ದು ಅದರ ರಾಜಧಾನಿ ಪರ್ಸೆಪೊಲಿಸ್ ಗೆ ಹೋದಾಗ ಅಲ್ಲಿ ಪರ್ಷಿಯನ್ನರು ದೈವಿಕ ಮೂಲದ್ದೆಂದು ಪರಿಗಣಿಸಿದ್ದ ಪ್ರವಾದಿ ಜೊರೋಸ್ಟರ್ ಸ್ವತಃ ನೀಡಿದನೆಂದು ನಂಬಲಾದ ಹಲವಾರು ವಿಜ್ಞಾನಗಳ ಮತ್ತು ಜ್ಞಾನ ಶಾಖೆಗಳ ಭಂಡಾರವನ್ನೇ ಕಂಡನು. ಅಲೆಕ್ಸಾಂಡರ್ ಆ ಎಲ್ಲ ಪಠ್ಯಗಳನ್ನು ಪರ್ಷಿಯನ್ ನಿಂದ ಗ್ರೀಕ್ ಭಾಷೆಗೆ ಅನುವಾದಿಸುವಂತೆ ಆದೇಶಿಸಿ ನಂತರ ಆ ಮೂಲ ಪಠ್ಯಗಳನ್ನು ನಾಶಗೊಳಿಸಿದನಂತೆ. ನೂರಾರು ವರ್ಷಗಳ ನಂತರ ಸಸೇನಿಯನ್ ರಾಜರು ಆ ಎಲ್ಲ ಗ್ರೀಕ್ ಪಠ್ಯಗಳ ಸಂಗ್ರಹವನ್ನು ಪರ್ಷಿಯನ್ ಭಾಷೆಗೆ ಮರು ಅನುವಾದಿಸುತ್ತಾರೆ. ಹಾಗಾಗಿ ಗ್ರೀಕರು ಕದ್ದಿದ್ದ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರದ ತಮ್ಮದೇ ಪರ್ಷಿಯನ್ ಜ್ಞಾನವನ್ನು ತಾವು ಪುನಃ ಪಡೆದು ಬಳಸಿಕೊಳ್ಳಲು ತಮಗೆ ಎಲ್ಲ ಹಕ್ಕು ಇದೆಯೆಂದು ಪರ್ಷಿಯನ್ನರು ಸಮರ್ಥಿಸಿಕೊಂಡರು.
ವಿದ್ವಾಂಸ ಮತ್ತು ಕವಿಯಾಗಿ ಅಲ್-ರಶೀದ್ ಒಬ್ಬ ಕಲಾಪೋಷಕನಾಗಿದ್ದ ಹಾಗೂ ಅವನ ಆಡಳಿತದಲ್ಲಿ ಮುಸಲ್ಮಾನ ವಿದ್ವಾಂಸರು ಗ್ರೀಕರ ಮತ್ತು ಭಾರತೀಯರ ಮಹಾನ್ ಕೃತಿಗಳನ್ನು ಮನನಮಾಡಿ ಆ ಜ್ಞಾನವನ್ನು ಅರಾಬಿಕ್ ಸಂಸ್ಕೃತಿಗೆ ಅಳವಡಿಸಿಕೊಳ್ಳಲು ಪ್ರಯತ್ನಿಸಿದರು. ಬಾಗ್ದಾದ್ ನ ಅಲ್-ರಶೀದ್ ನ ಆಸ್ಥಾನದಲ್ಲಿ ದೇಶ ವಿದೇಶಗಳ ಕಲಾವಿದರು, ಸಂಗೀತಕಾರರು, ಕವಿ ಹಾಗೂ ಧರ್ಮಶಾಸ್ತ್ರಜ್ಞರಿಂದ ಕಿಕ್ಕಿರಿದಿರುತ್ತಿತ್ತು. ಆದರೆ ಆತನ ಸೇನಾಧಿಕಾರಿ ಮತ್ತು ಬಾಲಕ ಮಾಮೂನ್ ನ ಗುರುವಾಗಿದ್ದ ವಜೀರ ಜಾಫರ್ ಅಲ್-ಬಾರ್ಮಾಕಿ ಪ್ರಾರಂಭದ ಬಹಳಷ್ಟು ಅನುವಾದ ಚಟುವಟಿಕೆಗಳ ಮೇಲುಸ್ತುವಾರಿ ವಹಿಸಿದ್ದ. ಅಬ್ಬಾಸಿದ್ ರು ಅಧಿಕಾರಕ್ಕೆ ಬರಲು ಬೆಂಬಲ ಹಾಗೂ ನೆರವು ನೀಡುತ್ತಿದ್ದ ಬಾರ್ಮಾಕಿಗಳ ನಿಷ್ಠೆಗೆ ಪ್ರತಿಫಲವಾಗಿ ಅವರಿಗೆ ಮಹಾನ್ ವಜೀರರ ಹುದ್ದೆಯನ್ನು ಆನುವಂಶಿಕವಾಗಿ ನೀಡಲಾಗಿತ್ತು ಹಾಗೂ ಅವರು ಸಾಮ್ರಾಜ್ಯದ ದಿನನಿತ್ಯದ ಆಡಳಿತದಲ್ಲಿ ಬಹಳಷ್ಟು ನಿಯಂತ್ರಣ ಹೊಂದಿದ್ದರು. ಅವರೂ ಸಹ ಅನುವಾದ ಆಂದೋಲನದ ಬೆಂಬಲಿಗರಾಗಿದ್ದರು ಮತ್ತು ಪರ್ಷಿಯನ್ ಸಾಂಸ್ಕೃತಿಕ ವೈಭವವನ್ನು ಖಲೀಫರ ಆಸ್ಥಾನದಲ್ಲೂ ಸಜ್ಜುಗೊಳಿಸುವ ಕಾರ್ಯ ನಡೆಸುತ್ತಿದ್ದರು.
ಅನುವಾದ ಆಂದೋಲನಕ್ಕೆ ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಿದ್ದ ಮತ್ತೊಂದು ಪ್ರಮುಖ ಪರ್ಷಿಯನ್ ಕುಟುಂಬವೆಂದರೆ ಬುಖ್ತೀಶುಗಳು. ಈ ಕುಟುಂಬದ ಹಲವಾರು ಸದಸ್ಯರು ವೈದ್ಯಕೀಯ ಪಠ್ಯಗಳನ್ನು ಅರಾಬಿಕ್ ಗೆ ಅನುವಾದಿಸಲು ವೈಯಕ್ತಿಕವಾಗಿ ಕಾರಣಕಾರ್ತರಾದರು. ಅಬ್ಬಾಸಿದ್ ರ ಆಗಮನಕ್ಕೂ ಮೊದಲೇ ಪರ್ಷಿಯನ್ ವೈದ್ಯರಿಗೆ ಹಿಪೊಕ್ರೇಟ್ಸ್ ಮತ್ತು ಗಾಲೆನ್ ರ ವೈದ್ಯಕೀಯ ಪಠ್ಯಗಳ ಅರಿವಿತ್ತು ಹಾಗೂ ಅವರ ಬೋಧನೆಗಳನ್ನು ಗೊಂಡೇಶಪುರದಲ್ಲಿ ಅನುಸರಿಸಲಾಗುತ್ತಿತ್ತು. ವೈದ್ಯಕೀಯ ಪಠ್ಯಗಳ ವಿಷಯದಲ್ಲಿ ಕ್ರೈಸ್ತ ವೈದ್ಯ ಮತ್ತು ಅನುವಾದಕ ಹುನಾಯ್ನ್ ಇಬನ್ ಇಶಾಖ್ ಆ ಸಮಯದ ಅತ್ಯಂತ ಪ್ರಖ್ಯಾತ ಮತ್ತು ಅತಿ ಹೆಚ್ಚಿನ ಪ್ರಮಾಣದ ಅನುವಾದಕನೆಂದು ಹೆಸರುವಾಸಿಯಾದ.
ಬಾಗ್ದಾದ್ ನ ಉದಾರ ಕೊಡುಗೆಯ ಲಾಭ ಪಡೆದವರಲ್ಲಿ ವಾಯುವ್ಯ ಮೆಸಪೊಟೇಮಿಯಾದಲ್ಲಿನ (ಈಗಿನ ಟರ್ಕಿ) ಹಾರನ್ ನಗರದ ಸ್ಥಾಪಿತ ಧರ್ಮಗಳಲ್ಲಿ ನಂಬಿಕೆ ಇಲ್ಲದ ತಾಬಿತ್ ಇಬನ್ ಖುರ್ರಾ (ಕ್ರಿ.ಶ.. 836-901) ಎಂಬ ವಿದ್ವಾಂಸ. ಈತ ಮಾರುಕಟ್ಟೆಯಲ್ಲಿ ಹಣಬದಲಿಸುವ ವ್ಯವಹಾರ ನಡೆಸುತ್ತಿದ್ದು ನಂತರ ತತ್ವಶಾಸ್ತ್ರವನ್ನು ಕಂಡುಕೊಂಡವನು. ತಾಬಿತ್ ಯೂಕ್ಲಿಡ್, ಆರ್ಕಿಮಿಡೀಸ್, ಅಪೊಲ್ಲೋನಿಯಸ್ ಮತ್ತು ಟೊಲೆಮಿಯ ಗಣಿತಶಾಸ್ತ್ರ ಪಠ್ಯಗಳನ್ನು ಅನುವಾದಿಸಿದ. ಅರಿಸ್ಟಾಟಲ್ ಕೃತಿಗಳ ಸಾರಾಂಶಗಳನ್ನು ಸಹ ಸಿದ್ಧಗೊಳಿಸಿದ. ಆತ ಸ್ವತಃ ಪ್ರತಿಭಾವಂತ ಗಣಿತಶಾಸ್ತ್ರಜ್ಞನಾಗಿದ್ದು ಜ್ಯಾಮಿತಿ, ಸಂಖ್ಯಾಶಾಸ್ತ್ರ, ಮ್ಯಾಜಿಕ್ ಚೌಕಗಳು ಮತ್ತು ಸಂಖ್ಯಾ ಸಿದ್ಧಾಂತಗಳ ಮೂಲ ಪಠ್ಯಗಳನ್ನು ರಚಿಸಿದ್ದಾನೆ. ತನ್ನ ಬದುಕಿನ ಕೊನೆಯಲ್ಲಿ ಖಗೋಳಶಾಸ್ತ್ರವನ್ನು ಸಹ ಕಲಿತು ಅಬ್ಬಾಸಿದ್ ಖಲೀಫ ಅಲ್-ಮುತಾದಿದ್ ರವರ ಆಸ್ಥಾನ ಖಗೋಳಶಾಸ್ತ್ರಜ್ಞನಾಗಿ ನೇಮಕಗೊಳ್ಳುತ್ತಾನೆ. ಆತನ ಮೂಲ ಕೃತಿಗಳು ಲ್ಯಾಟಿನ್ ಭಾಷೆಗೆ ಅನುವಾದಗೊಂಡು ಪಶ್ಚಿಮದಲ್ಲಿ ಹೆಚ್ಚು ಪ್ರಭಾವಿಯಾಗಿದ್ದವು.
ಒಂಭತ್ತನೇ ಶತಮಾನದ ಬಾಗ್ದಾದ್ನನಲ್ಲಿದ್ದ ಮತ್ತೊಬ್ಬ ಅನುವಾದಕನೆಂದರೆ ಕ್ರೈಸ್ತನಾಗಿದ್ದ ಖುಸ್ತಾ ಇಬನ್ ಲುಕ್ಕಾ (ಮರಣ ಕ್ರಿ.ಶ. 912). ಇತರ ಹಲವಾರು ಪ್ರಮುಖ ಅನುವಾದಕರಂತೆ ಈತನೂ ಬಹುವಿಷಯ ತಜ್ಞನಾಗಿದ್ದು ಗಣಿತಶಾಸ್ತ್ರ, ವೈದ್ಯಕೀಯ, ಖಗೋಳಶಾಸ್ತ್ರ ಮತ್ತು ತತ್ವಶಾಸ್ತ್ರಗಳಲ್ಲಿ ಪಾಂಡಿತ್ಯ ಗಳಿಸಿದ್ದ. ಆತ ಮೂಲತಃ ಲೆಬನಾನ್ ನಲ್ಲಿನ ಬೆಕಾ ಕಣಿವೆಯ ಬಾಲ್ಬೆಕ್ (ಹೀಲಿಯೊಪೊಲಿಸ್) ನಗರದಿಂದ ಬಂದವನಾಗಿದ್ದ. ಹುನಾಯ್ನ್ ಇಬನ್ ಇಶಾಕ್ನಂತೆ ಆತನನ್ನೂ ಇಸ್ಲಾಂಗೆ ಮತಾಂತರ ಹೊಂದುವಂತೆ ಒತ್ತಾಯಿಸಲಾಯಿತು, ಆದರೆ ಆತ ಮತಾಂತರ ಹೊಂದಲಿಲ್ಲ. ಆತ ಗ್ರೀಕ್ ನಿಂದ ಅರಾಬಿಕ್ ಗೆ ಅನುವಾದಿಸಿದ ಕೃತಿಗಳಲ್ಲಿ ಗಣಿತಶಾಸ್ತ್ರಜ್ಞ ಡಯೋಫಾಂಟಸ್, ಅರಿಸ್ಟಾರ್ಕಸ್ (ಸೌರವ್ಯೂಹದ ಸೂರ್ಯಕೇಂದ್ರಿತ ಮಾದರಿಯನ್ನು ಮೊದಲಿಗೆ ಪ್ರಸ್ತಾವಿಸಿದ ಖಗೋಳವಿಜ್ಞಾನಿ) ಹಾಗೂ ಗ್ಯಾಲೆನ್ನರ ಕೃತಿಗಳು ಇದ್ದವು. ಖುಸ್ತಾ ವೈದ್ಯಕೀಯ ಹಾಗೂ ಜ್ಯಾಮಿತಿಯ ಹಲವಾರು ಮೂಲ ಕೃತಿಗಳನ್ನು ಹಾಗೂ ದೂರದರ್ಶಕ ಕಂಡುಹಿಡಿಯುವ ಮೊದಲು ಇದ್ದ ಅತ್ಯಂತ ಪ್ರಮುಖ ಉಪಕರಣವಾದ ಅಸ್ಟ್ರೋಲೇಬ್ ಕುರಿತಂತೆ ಪ್ರಬಂಧವನ್ನು ಸಹ ರಚಿಸಿದ್ದ.
ಅರಬ್ ವಿದ್ವತ್ತು ಒಂಭತ್ತನೇ ಶತಮಾನದ ಮೊದಲರ್ಧದಲ್ಲಿ ಹೆಚ್ಚಿನ ಉತ್ಸುಕತೆಯಿಂದ ಪ್ರಾರಂಭವಾಯಿತು ಹಾಗೂ ಖಗೋಳಶಾಸ್ತ್ರ, ಭೂವಿಜ್ಞಾನ, ಗಣಿತಶಾಸ್ತ್ರ ಮತ್ತು ವೈದ್ಯಕೀಯ ಶಾಸ್ತ್ರಗಳಲ್ಲಿ ಬಹಳಷ್ಟು ಮೂಲಕೃತಿಗಳು ರಚಿತವಾದುದರಿಂದ ಈ ವಿಷಯಗಳಲ್ಲಿ ಮೂಲ ಸಂಶೋಧನೆಗಳನ್ನು ಸಹ ಕೈಗೊಳ್ಳಲಾಯಿತು. ಇದರಿಂದಾಗಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ಹೆಚ್ಚು ಹೆಚ್ಚು ಪಠ್ಯಗಳ ಅನುವಾದ ಮಾಡಬೇಕಾಯಿತು ಅಥವಾ ಅರಾಬಿಕ್ ಗೆ ಈಗಾಗಲೇ ಅನುವಾದವಾಗಿದ್ದ ಪಠ್ಯಗಳ ಹೆಚ್ಚಿನ ನಿಖರ ಮರುಅನುವಾದವೂ ಅವಶ್ಯಕವಾಯಿತು. ಈ ಪಠ್ಯಗಳಿಂದ ಪಡೆದ ಜ್ಞಾನವು ಹಲವಾರು ಮಂದಿಯನ್ನು ಈ ವಿಷಯಗಳ ಕುರಿತು ತಮ್ಮ ಬದುಕನ್ನೇ ಮುಡಿಪಾಗಿಡಲು ಪ್ರೇರಣೆಯಾಯಿತು. ಉದಾಹರಣೆಗೆ, ಅಲ್-ಮಾಮೂನ್ ನ ಬಾಗ್ದಾದ್ ನಲ್ಲಿ ಪ್ರತಿಯೊಬ್ಬ ವಿದ್ವಾಂಸ ತನ್ನ ಶಿಕ್ಷಣದಲ್ಲಿ ಟೊಲೆಮಿಯ ಆಲ್ಮಾಜೆಸ್ಟ್ ಅಧ್ಯಯನ ಮಾಡಲೇಬೇಕಾಗಿತ್ತು ಹಾಗೂ ಈ ಪ್ರಮುಖ ಪಠ್ಯದಿಂದ ಪಡೆದ ಜ್ಞಾನವೇ ಅಲ್-ಮಾಮೂನ್ ನ ಆಡಳಿತದ ಸಮಯದಲ್ಲಿ ಇಸ್ಲಾಮಿಕ್ ಸಾಮ್ರಾಜ್ಯದ ಬಾಗ್ದಾದ್ ಮತ್ತು ಡಮಾಸ್ಕಸ್ ಗಳಲ್ಲಿ ಮೊದಲ ವೀಕ್ಷಣಾಲಯಗಳ ನಿರ್ಮಾಣಕ್ಕೆ ಕಾರಣವಾಯಿತು. ಟೊಲೆಮಿಯ ತಾರಾ ನಕ್ಷೆಗಳ ನಿಖರತೆಯನ್ನು ವ್ಯವಸ್ಥಿತವಾಗಿ ಪರೀಕ್ಷಿಸಲು ಸಾಧ್ಯವಾಗುವಂತೆ ಆತ ಖಗೋಳವಿಜ್ಞಾನಿಗಳನ್ನು ನೇಮಿಸಿಕೊಂಡ. ಇದು ಏಳು ಶತಮಾನಗಳ ಅರಾಬಿಕ್ ಖಗೋಳಶಾಸ್ತ್ರದ ಯುಗವನ್ನು ಪ್ರಾರಂಭಿಸಿತು ಹಾಗೂ ಇದು ಗ್ರೀಕರಿಂದ ಯೂರೋಪಿನ ಕೋಪರ್ನಿಕನ್ ಆಂದೋಲನಕ್ಕೆ ಜ್ಞಾನ ಸೇತುವೆಯಾಯಿತು ತನ್ಮೂಲಕ ಆಧುನಿಕ ಖಗೋಳಶಾಸ್ತ್ರದ ಪ್ರಾರಂಭಕ್ಕೆ ಕಾರಣವಾಯಿತು.
ಹಲವಾರು ಪ್ರಮುಖ ಗ್ರೀಕ್ ಪಠ್ಯಗಳು ಅರಾಬಿಕ್ ಗೆ ಹಲವಾರು ಬಾರಿ ಅನುವಾದಗೊಂಡವು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಯೂಕ್ಲಿಡ್ ನ `ಎಲಿಮೆಂಟ್ಸ್’ ಹಾಗೂ ಇದು ಇಸ್ಲಾಮಿಕ್ ಗಣಿತಶಾಸ್ತ್ರದ ಮೇಲೆ ಗಾಢ ಪರಿಣಾಮ ಬೀರಿದೆ. ಇದನ್ನು ಅಲ್-ರಶೀದ್ ನ ರಾಜ್ಯಾಡಳಿತನ ಸಮಯದಲ್ಲಿ ಒಂಭತ್ತನೆಯ ಶತಮಾನದ ಪ್ರಾರಂಭದಲ್ಲಿ ಮೊದಲಿಗೆ ಅನುವಾದಿಸಿದವನು ಅಲ್-ಹಜ್ಜಾಜ್ ಇಬನ್ ಯೂಸುಫ್. ಇದೇ ವ್ಯಕ್ತಿ ಪುನಃ ಅಲ್-ಮಾಮೂನ್ ಗಾಗಿ ಅದೇ ಪಠ್ಯದ ಮತ್ತೊಂದು ಹೊಸ ಅನುವಾದವನ್ನು ಮಾಡಿಕೊಟ್ಟ. ಆ ಪಠ್ಯವನ್ನು ಹುನಾಯ್ನ್ ಇಬನ್ ಇಶಾಖ್ ಸಹ ಅನುವಾದಿಸಿದ್ದ ಹಾಗೂ ಆತನ ಆವೃತ್ತಿಯನ್ನು ನಂತರ ತಾಬಿತ್ ಇಬನ್ ಖುರ್ರಾ ಪರಿಷ್ಕರಿಸಿದ್ದ. ಖಗೋಳಶಾಸ್ತ್ರಜ್ಞ ಅಲ್-ತೂಸಿ ನಾಲ್ಕು ಶತಮಾನಗಳ ನಂತರ ಆ ಕೃತಿಯನ್ನು ಮತ್ತೊಮ್ಮೆ ಪರಿಷ್ಕರಿಸಿದ. ಈ ನಂತರದ ಆವೃತ್ತಿಯ ಲ್ಯಾಟಿನ್ ಅನುವಾದಗಳ ಮೂಲಕ ಬಹುಶಃ ಯೂರೋಪಿಗೆ ಮೊದಲು ಪರಿಚಯಿಸಲ್ಪಟ್ಟಿತು. ಕೆಲವು ಚರಿತ್ರಕಾರರು ಹೇಳುವಂತೆ `ಎಲಿಮೆಂಟ್ಸ್’ ಕುರಿತಂತೆ ಖಲೀಫ ಅಲ್-ಮನ್ಸೂರ್ ಕ್ರೈಸ್ತ ಧರ್ಮಪ್ರಚಾರಕರಿಂದ ಕೇಳಿದ್ದ ಹಾಗೂ ಅದರ ಒಂದು ಪ್ರತಿ ನೀಡುವಂತೆ ಬೈಜಾಂಟಿನ್ ಸಾಮ್ರಾಟನನ್ನು ಕೇಳಿದ್ದ. ಆದರೆ ಅಲ್-ಮನ್ಸೂರ್ ಗಾಗಿ ಮಾಡಿದ `ಎಲಿಮೆಂಟ್ಸ್’ ಕೃತಿಯ ಅನುವಾದದ ಗುಣಮಟ್ಟ ಹಾಗೂ ಅದು ಎಷ್ಟರ ಮಟ್ಟಿಗೆ ಅಬ್ಬಾಸಿದ್ ಗಣಿತಶಾಸ್ತ್ರಜ್ಞರಿಗೆ ಉಪಯುಕ್ತವಾಗಿತ್ತು ಎನ್ನುವುದು ಚರ್ಚಾಸ್ಪದವಾಗಿದೆ.
ಅನುವಾದ ಆಂದೋಲನ ಅಂತಿಮವಾಗಿ ಹತ್ತನೇ ಶತಮಾನದ ಉತ್ತರಾರ್ಧದಲ್ಲಿ ಕೊನೆಗೊಂಡಿತು. ಅದಕ್ಕೆ ವಿದ್ವತ್ತಿನಲ್ಲಿ ರಾಜರು ಹಾಗೂ ವಿದ್ವಾಂಸರು ಆಸಕ್ತಿ ಕಳೆದುಕೊಂಡಿದ್ದು ಕಾರಣವಲ್ಲ, ಆದರೆ ಇನ್ನು ಅದರ ಅವಶ್ಯಕತೆ ಇಲ್ಲವೆನ್ನುವ ಹಂತವನ್ನು ಸಹಜವಾಗಿ ತಲುಪಿತ್ತು. ಬಹುಪಾಲು ಎಲ್ಲ ಮಹಾನ್ ಕೃತಿಗಳನ್ನು ಅನುವಾದಿಸಲಾಗಿತ್ತು, ಮರುಅನುವಾದಿಸಲಾಗಿತ್ತು, ಅವುಗಳ ಅಧ್ಯಯನ ಮಾಡಲಾಗಿತ್ತು, ಅವುಗಳ ಮೇಲೆ ಟಿಪ್ಪಣಿಗಳನ್ನು ಬರೆಯಲಾಗಿತ್ತು ಹಾಗೂ ಆ ಸಮಯದ ಹೊತ್ತಿಗೆ ಸಾಕಷ್ಟು ಮೂಲ ಅರಾಬಿಕ್ ಕೃತಿಗಳು ರಚಿತವಾಗಿದ್ದವು ಮತ್ತು ಅವು ವಿಜ್ಞಾನವನ್ನು ಮುಂದಕ್ಕೆ ಕೊಂಡೊಯ್ಯಲು ಶಕ್ತವಾಗಿದ್ದವು. ಟೊಲೆಮಿಯ ಆಲ್ಮಾಜೆಸ್ಟ್ ಒಳಗೊಂಡಂತೆ ಹಲವಾರು ಮಹಾನ್ ಗ್ರೀಕ್ ಪಠ್ಯಗಳು ತಮ್ಮ ಉತ್ಕೃಷ್ಟತೆಯನ್ನು ಉಳಿಸಿಕೊಂಡಿರಲಿಲ್ಲ, ಏಕೆಂದರೆ ಇನ್ನೂ ಹೆಚ್ಚಿನ ವಿದ್ವತ್ತಿನ ಹಲವಾರು ಖಗೋಳಶಾಸ್ತ್ರದ ಕೃತಿಗಳು ಅಷ್ಟೊತ್ತಿಗೆ ಪ್ರಕಟವಾಗಿದ್ದವು. ಆ ಸಮಯದ ಹೊತ್ತಿಗೆ ಬಾಗ್ದಾದ್ನನ ವಿದ್ವತ್ತಿನ ವಲಯದಲ್ಲಿ ವೈಜ್ಞಾನಿಕ ಮನೋಭಾವ ತಳವೂರಿತ್ತು. ಕ್ರಮೇಣ ಈ ಸುವರ್ಣ `ವೈಜ್ಞಾನಿಕ ವಿಚಾರ ಯುಗ’ ಕೊನೆಗೊಳ್ಳಲು ಹಲವಾರು ಕಾರಣಗಳು ಕಂಡುಬರುತ್ತವೆ ಹಾಗೂ ಬಹಳಷ್ಟು ಅಸ್ಪಷ್ಟವಾಗಿವೆ ಸಹ. ಬಹಳಷ್ಟು ಚರಿತ್ರೆಕಾರರು ಈಗ ಈ ಕಾರಣಗಳ ಕುರಿತು ಬಹಳಷ್ಟು ಚರ್ಚಿಸುತ್ತಿದ್ದಾರೆ ಹಾಗೂ ತಡವಾಗಿಯಾದರೂ ತೀರಾ ಸರಳಗೊಳಿಸಿದ್ದ ಇತಿಹಾಸವನ್ನು ಪುನರ್ರಳಚಿಸುವ ಪ್ರಯತ್ನ ಮಾಡುತ್ತಿದ್ದಾರೆ.
*****
ಆಲ್ಜೀಬ್ರಾ ಮತ್ತು ಅಲ್ಗಾರಿಥಂ
ಇಂದು ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್ನೆಟ್ ನಮ್ಮ ಬದುಕನ್ನೇ ಬದಲಾಯಿಸಿದೆ. ಗುಂಡಿಯೊಂದನ್ನು ಒತ್ತಿ ಗೂಗಲ್ ಮೂಲಕ ನಮಗೆ ಬೇಕಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು, ಹಣದ ವ್ಯವಹಾರ ನಡೆಸಬಹುದು, ದೂರದ ದೇಶದಲ್ಲಿರುವವರೊಂದಿಗೆ ವೀಡಿಯೋ ಸಂವಾದ ನಡೆಸಬಹುದು... ಈ ರೀತಿಯ ಸಾಧ್ಯತೆಗಳು ನೂರಾರು. ಈ ಕಾರ್ಯಗಳಿಗೆ ಕಂಪ್ಯೂಟರ್ ವಿಜ್ಞಾನಿಗಳು ಮತ್ತು ತಜ್ಞರು ಅಲ್ಗಾರಿಥಂ ಎಂದು ಕರೆಯಲ್ಪಡುವ ಕೆಲವು ನಿಯಮಗಳನ್ನು, ವಿಧಾನಗಳನ್ನು ಬಳಸುತ್ತಾರೆ. ಅಲ್ಗಾರಿಥಂ ಎಂದರೆ ಅವು ಕೆಲವು ಸರಣಿ ನಿರ್ದೇಶನಗಳಾಗಿದ್ದು ಕಂಪ್ಯೂಟರ್ ಸಮಸ್ಯೆಯೊಂದನ್ನು ಹೇಗೆ ಪರಿಹರಿಸಬೇಕೆಂಬ ಸೂಚನೆಗಳನ್ನು ನೀಡುತ್ತವೆ. ಇಂದು ನಮ್ಮ ಬದುಕಿನಲ್ಲಿ ಅವು ಬಹಳ ಮುಖ್ಯವಾಗಿದ್ದು ಫೇಸ್ಬುಕ್ ನಲ್ಲಿ ನಿಮ್ಮ ನಡತೆಯನ್ನು ಗಮನಿಸಿ ನಿಮಗೆ ಸೂಕ್ತವಾಗುವ ಜಾಹೀರಾತುಗಳನ್ನು ನೀಡುವಲ್ಲಿ, ಹಣಕಾಸು ಸಲಹೆ ನೀಡುವಲ್ಲಿ, ಅಮೆಜಾನ್ ಅಥವಾ ನೆಟ್ ಫ್ಲಿಕ್ಸ್ ನಲ್ಲಿ ನೀವು ಒಂದು ಸಿನೆಮಾ ನೋಡಿದರೆ ಅದು ನಿಮಗೆ ಇಷ್ಟವೆಂದು ತಿಳಿದು ಅದೇ ರೀತಿಯ ಸಿನೆಮಾ ನೋಡಲು ಸಲಹೆ ನೀಡುವಲ್ಲಿ ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತದೆ. ಕಳೆದ ಕೆಲವು ಚುನಾವಣೆಗಳಿಂದ ಕೆಲವು ರಾಜಕಾರಣಿಗಳು ಇವುಗಳನ್ನು ಬಳಸಿಕೊಂಡು ತಮ್ಮ ಚುನಾವಣೆಗೆ ನಿಮ್ಮ ಮನಸ್ಸಿನ ಮೇಲೆ ನಿಮಗರಿವಾಗದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಭಾವ ಬೀರುವ ಪ್ರಯತ್ನಗಳನ್ನು ಮಾಡಿದ್ದಾರೆ. ಇವು ಕೆಲವು ಉದಾಹರಣೆಗಳಷ್ಟೇ, ಇದರ ಸಾಧ್ಯತೆಗಳು ಅಪರಿಮಿತ.
ತನ್ನ ಹುಟಿದ ಊರಾದ ಉಜ್ಬೇಕಿಸ್ತಾನದ ಖಿವಾದಲ್ಲಿ ಅಲ್-ಖ್ವರಿಜ್ಮಿಯ ಪುತ್ಥಳಿ.
ಎಲ್ಲರೂ ಶಾಲಾ ಕಾಲೇಜುಗಳಲ್ಲಿ ಆಲ್ಜೀಬ್ರಾ ಎಂಬ ಗಣಿತಶಾಸ್ತ್ರವನ್ನು ವ್ಯಾಸಂಗ ಮಾಡಿಯೇ ಇರುತ್ತಾರೆ. ಈ ಆಲ್ಜೀಬ್ರಾ ಮತ್ತು ಆಲ್ಗಾರಿಥಂ ಎಂಬ ಪದಗಳು ಹೇಗೆ ಬಳಕೆಗೆ ಬಂದವೆಂಬುದು ತಿಳಿದಿದೆಯೆ? ಇದು 9ನೇ ಶತಮಾನದ ಒಬ್ಬ ಇಸ್ಲಾಮಿಕ್ ವಿದ್ವಾಂಸನಾದ ಮುಹಮ್ಮದ್ ಇಬನ್ ಮೂಸಾ ಅಲ್-ಖ್ವಾರಿಜ್ಮಿ ಎಂಬುವವನ ಹೆಸರಿನಿಂದ ಬಂದಿದೆ. ಈತ ಹುಟ್ಟಿದ್ದು ಈಗಿನ ಉಜ್ಬೇಕಿಸ್ತಾನದಲ್ಲಿರುವ ಹಾಗೂ ಪರ್ಷಿಯಾದ ಆಳ್ವಿಕೆಯಲ್ಲಿದ್ದ ಖ್ವಾರಿಜ್ಮ್ ಎಂಬ ಊರಿನಲ್ಲಿ ಕ್ರಿ.ಶ.780ರ ಆಸುಪಾಸಿನಲ್ಲಿ. ಅಬ್ಬಾಸಿದ್ ಸಾಮ್ರಾಜ್ಯದಲ್ಲಿದ್ದ ಪರ್ಷಿಯಾದ ಗಣಿತಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ ಮತ್ತು ಭೂಗೋಳ ಶಾಸ್ತ್ರಜ್ಞ ಹಾಗೂ ಗಣಿತಶಾಸ್ತ್ರದ ಹಲವಾರು ಶಾಖೆಗಳ ಮೂಲಭೂತ ಪರಿಕಲ್ಪನೆಗಳನ್ನು ಕಂಡುಹಿಡಿದಾತ.
ಲ್ಯಾಟಿನ್ ಭಾಷೆಯಲ್ಲಿ ಆತನ ಹೆಸರು ಅಲ್ಗಾಸರಿತ್ಮಿ ಎಂದು ಹಾಗೂ ಅದರಿಂದ ಅಲ್ಗಾರಿಥಂ ಪದ ಹಾಗೂ ಅಲ್-ಜಬರ್ ನಿಂದ ಅಲ್ಜೀಬ್ರಾ ಪದಗಳು ರಚಿತವಾಗಿವೆ. ಅಲ್-ಜಬರ್ ಎನ್ನುವುದು ಆತ ಗಣಿತಶಾಸ್ತ್ರದ ಲೀನಿಯರ್ ಮತ್ತು ಕ್ವಾಡ್ರಾಟಿಕ್ ಸಮೀಕರಣಗಳಿಗೆ ಉತ್ತರ ಕಂಡುಕೊಳ್ಳುವ ಎರಡು ವಿಧಾನಗಳಲ್ಲೊಂದಾಗಿತ್ತು ಹಾಗೂ ಅಲ್ಜೀಬ್ರಾ ಪದ ಆತನ ಪ್ರಖ್ಯಾತ ಪುಸ್ತಕ `ಅಲ್ ಜಬರ್ ವಾ ಅಲ್ ಮುಖಾಬಿಲಾ’ನಿಂದ ಬಂದಿದೆ. ಇಂದು ಡಿಜಿಟ್ ಅರ್ಥ ಕೊಡುವ ಸ್ಪ್ಯಾನಿಶ್ ಪದ ಗ್ವಾರಿಸ್ಮೊ ಮತ್ತು ಪೋರ್ಚುಗೀಸ್ ಅಲ್ಗಾರಿಸ್ಮೊ ಪದಗಳಿಗೂ ಸಹ ಆ ವಿದ್ವಾಂಸ ಅಲ್-ಖ್ವಾರಿಜ್ಮಿ ಹೆಸರೇ ಕಾರಣವಾಗಿದೆ. ಅಲ್-ಖ್ವಾರಿಜ್ಮಿ ಗಣಿತಶಾಸ್ತ್ರದಲ್ಲಿ ಅಲ್ಗಾರಿಥಂನ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ. ಆತ ಕಾಲಸೂಚಿಗಳನ್ನೊಳಗೊಂಡ, ಸೂರ್ಯ, ಚಂದ್ರನ ಮತ್ತು ಆಗ ತಿಳಿದಿದ್ದ ಇತರ 5 ಗ್ರಹಗಳ ಸ್ಥಾನಗಳನ್ನು ಲೆಕ್ಕಾಚಾರ ಹಾಕುವ ಬಹುಮುಖ್ಯ ಖಗೋಳಶಾಸ್ತ್ರದ ಕೃತಿ `ಜಿಜ್ ಅಲ್-ಸಿಂದ್ಹಿಂ ದ್’ ಆಗಾಗಲೇ ಇದ್ದ ಗ್ರೀಕ್, ಪರ್ಷಿಯನ್ ಮತ್ತು ಹಿಂದೂ ಆಕರಗ್ರಂಥಗಳನ್ನು ಆಧರಿಸಿ ರಚಿಸಿದ. ಭಾರತದ ಆವಿಷ್ಕಾರವಾದ ಸೊನ್ನೆಯನ್ನು ಪಶ್ಚಿಮ ಜಗತ್ತಿಗೆ ಪರಿಚಯಿಸಿದ. ಸೊನ್ನೆ ಯೂರೋಪಿಗೆ ಪರಿಚಯವಾಗದಿದ್ದಲ್ಲಿ ಗಣಿತಶಾಸ್ತ್ರದಲ್ಲಿ ಅಷ್ಟೊಂದು ಪ್ರಗತಿ, ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ. ಆತನ ಕೃತಿಗಳು ಆಗಲೇ ಇತರ ಯೂರೋಪಿಯನ್ ಭಾಷೆಗಳಿಗೆ ಮತ್ತು ಚೀನಿ ಭಾಷೆಗೆ ಅನುವಾದಗೊಂಡವು. ಭಾರತೀಯ ಮತ್ತು ಹೆಲೆನಿಸ್ಟಿಕ್ ವಿದ್ವಾಂಸರ ಈ ಹಿಂದೆ ರಚಿಸಿದ್ದ ಅಸ್ಟ್ರೋಲೇಬ್ ಅಥವಾ `ಸೂರ್ಯ ಗಡಿಯಾರ’ಗಳಲ್ಲಿ ಮತ್ತಷ್ಟು ಬಹುಮುಖ್ಯ ಸುಧಾರಣೆ ಮಾಡಿ ಅವುಗಳನ್ನು ಭೂಮಿಯಲ್ಲಿ ಯಾವ ಸ್ಥಳದಿಂದಲಾದರೂ ಬಳಸಲು ಸಾಧ್ಯವಾಗುವಂತೆ ಮಾಡಿದ. ಅವುಗಳನ್ನು ಮಸೀದಿಗಳಲ್ಲಿ ಇರಿಸಿ ಪ್ರಾರ್ಥನೆಯ ಸಮಯವನ್ನು ನಿಗದಿಪಡಿಸಿಕೊಳ್ಳುತ್ತಿದ್ದರು. ಮುಹಮ್ಮದ್ ಇಬನ್ ಮೂಸಾ ಅಲ್-ಖ್ವಾರಿಜ್ಮಿಯನ್ನು ಪ್ರಾರಂಭಿಕ ಇಸ್ಲಾಮಿಕ್ ಜಗತ್ತಿನಲ್ಲಿ ವೈಜ್ಞಾನಿಕ ಸಂಸ್ಕøತಿಯ ಅಡಿಪಾಯ ಹಾಕಿದವರಲ್ಲಿ ಅತಿ ಮುಖ್ಯನಾದವನೆಂದು ಪರಿಗಣಿಸಲಾಗಿದೆ. ಚಂದ್ರನ ಮೇಲಿನ ಕುಳಿಯೊಂದಕ್ಕೆ ಆತನ ಹೆಸರನ್ನು ಇಡಲಾಗಿದೆ. ಆತ ಕ್ರಿ.ಶ.850ರಲ್ಲಿ ಆಗ ಜ್ಞಾನದ ಮತ್ತು ಕಲಿಕೆಯ ಕೇಂದ್ರವಾಗಿದ್ದ ಬಾಗ್ದಾದ್ ನಲ್ಲಿ ತನ್ನ 70ನೇ ವಯಸ್ಸಿನಲ್ಲಿ ತೀರಿಕೊಂಡ.
(ಚಿತ್ರಗಳ ಕೃಪೆ: ವಿಕಿಪೀಡಿಯಾ ಮತ್ತು ಅಂತರ್ಜಾಲ)
ಡಾ.ಜೆ.ಬಾಲಕೃಷ್ಣ
j.balakrishna@gmail.com
References:
1. Jim Al-Khalili, Pathfinders- The Golden Age of Arabic Science, Penguin Books, 2010
2. D. Hussein Abdo Rababah, The Translation Movement in the Arab World: From the Pre-Islamic Era Until the end of Umayyad Dynasty (Before 610-750 A. D.), International Journal of Language and Linguistics 2015; 3(3): 122-131 Published online May 4, 2015
3. Jonathan Lyons, The House of wisdom – How the Arabs Transformed Western Civilization, Bloomsbury Press, New York.
3. Peter Adamson, Arabic translators did far more than just preserve Greek philosophy, Philosophy in the Islamic World (2016), Oxford University Press.
4. John Willinsky, The Translation Movements of Islamic Learning in The Intellectual Properties of Learning: A Prehistory from Saint Jerome to John Locke, University of Chicago Press, 2018.
5. Hala Khalidi , Basma Ahmad Sedki Dajani, Facets from the Translation Movement in Classic Arab Culture, Procedia - Social and Behavioral Sciences, 205 ( 2015 ) 569 – 576