Translate

ಬುಧವಾರ, ಜುಲೈ 30, 2025

ಆತ್ಮಗಳೊಂದಿಗೆ ಸಂವಾದಿಸುವ ಕಲಾವಿದ - ವಿನ್ಸೆಂಟ್‌ ವ್ಯಾನ್ ಗೊ

ನನಗೆ ವಿನ್ಸೆಂಟ್‌ ವ್ಯಾನ್‌ ಗೋನ ಪರಿಚಯವಾದದ್ದು 1980ರಲ್ಲಿ ನಾನು ಬೆಂಗಳೂರು ಕೃಷಿ ವಿ.ವಿ. ವಿದ್ಯಾರ್ಥಿಯಾಗಿದ್ದಾಗ, ಕೃವಿವಿ ಗ್ರಂಥಾಲಯದಲ್ಲಿನ Irving Stoneನ Lust for Life ಕೃತಿಯ ಮೂಲಕ. ವಿನ್ಸೆಂಟ್‌ ನ ಬದುಕು ಹಾಗೂ ಕೃತಿಗಳು ನನ್ನನ್ನು ಅದೆಷ್ಟು ಗಾಢವಾಗಿ ಪ್ರಭಾವಿಸಿತೆಂದರೆ ಆ ನಂತರ ಅದೇ ಕೃತಿಯನ್ನು ಹಾಗೂ ಅದಕ್ಕಿಂತ ಮುಖ್ಯವಾದ Dear Theo ಎನ್ನುವ ವಿನ್ಸೆಂಟ್‌ ತನ್ನ ತಮ್ಮ ಥಿಯೋನಿಗೆ ಬರೆದ ಪತ್ರಗಳ ಸಂಕಲನಗಳನ್ನು, ಆತನ ಕೃತಿಗಳ ಸಂಕಲನಗಳನ್ನು (41 ವರ್ಷಗಳ ಹಿಂದೆ 1984ರಲ್ಲೇ) ಖರೀದಿಸಿದೆ. ಮನೆಯಲ್ಲಿ ಆತನ ಬಗ್ಗೆ ಓದಿದ ನನ್ನ ಮಗಳು ಆಮ್‌ ಸ್ಟರ್‌ ಡ್ಯಾಂನಲ್ಲಿನ ವಿನ್ಸೆಂಟ್‌ ವ್ಯಾನ್‌ ಗೋನ ಮ್ಯೂಸಿಯಂಗೆ ಹೋದಾಗ ಆತನ ಅಂಚೆಚೀಟಿಗಳನ್ನು ನನಗಾಗಿ ಖರೀದಿಸಿ ತಂದಳು. ವಿಶ್ವದ ಹಲವಾರು ಮ್ಯೂಸಿಯಂಗಳಲ್ಲಿ ವ್ಯಾನ್‌ ಗೋನ ಮೂಲ ಕಲಾಕೃತಿಗಳನ್ನು ನೋಡುವ ಅವಕಾಶ ಸಿಕ್ಕಿತು. 35 ವರ್ಷಗಳ ಹಿಂದೆ 1990ರಲ್ಲಿ ವಿನ್ಸೆಂಟ್‌ ವ್ಯಾನ್‌ ಗೋನ ಬದುಕಿನ ಬಗ್ಗೆ ಸುದ್ದಿ ಸಂಗಾತಿಯ ಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ:








ಆತ್ಮಗಳೊಂದಿಗೆ ಸಂವಾದಿಸುವ ಕಲಾವಿದ - ವಿನ್ಸೆಂಟ್‌ ವ್ಯಾನ್ ಗೊ

 ಜನವರಿ 1879ರಲ್ಲಿ ವಿನ್ಸೆಂಟ್ ವಿಲ್ಲೆಮ್‌ ವ್ಯಾನ್‌ ಗೊ ಬೆಲ್ಜಿಯಂನ ಬೋರಿನೇಜ್‌ಗೆ ಪಾದ್ರಿಯಾಗಿ ಬಂದಾಗ ತಾನೊಬ್ಬ ಚಿತ್ರಕಲಾವಿದನಾಗುತ್ತೇನೆ ಎಂದುಕೊಂಡಿರಲಿಲ್ಲ. ವಿನ್ಸೆಂಟ್‌ನ ಬದುಕು ಬದಲಾದದ್ದೇ ಬೆಳ್ಳಿಯಂನ ಕಲ್ಲಿದ್ದಲು ಗಣಿಗಳ ಜಿಲ್ಲೆಯಾದ ಬೋರಿನೇಜ್‌ನಲ್ಲಿ. ಮನುಷ್ಯನ ಬದುಕು ಎಷ್ಟರ ಮಟ್ಟಿಗೆ ದರಿದ್ರವಾಗಬಹುದೆಂದು ಅವನಿಗೆ ಅರಿವಾದದ್ದೇ ಅಲ್ಲಿ. ಒಪ್ಪತ್ತಿನ ಊಟಕ್ಕಾಗಿ ಅಲ್ಲಿನ ಜನ ಸಾವಿನ ಮನೆಗಳಾದ ಕಲ್ಲಿದ್ದಲ ಗಣಿಗಳಲ್ಲಿ ದನಗಳ ಹಾಗೆ ದುಡಿಯುತ್ತಿದ್ದರು. ಎಂಟೊಂಭತ್ತು ವರ್ಷ ವಯಸ್ಸಿನ ಮಕ್ಕಳೂ ಸಹ ದೊಡ್ಡವರ ಸಮಕ್ಕೆ ದುಡಿಯ ಬೇಕಾಗಿತ್ತು. ಅಲ್ಲಿನ ಮುರುಕಲು ಗುಡಿಸಲುಗಳಲ್ಲಿ ಕಲ್ಲಿದ್ದಲ ವಾಸನೆಯ ಜೊತೆಗೆ ಸಾವಿನ ವಾಸನೆಯೂ ಸಹ ದಟ್ಟವಾಗಿ ಹರಡಿಕೊಂಡಿತ್ತು. ಗಣಿಗಳಲ್ಲಿ ದಿನನಿತ್ಯ ಸಾವೆನ್ನುವುದು ಮಾಮೂಲಿನ ವಿಷಯವಾಗಿ ಹೋಗಿತ್ತು. ಅಲ್ಲಿನ ನೋವು ಮತ್ತು ಬಡತನದಿಂದ ಜರ್ಝರಿತ ಆತ್ಮಗಳಿಗೆ ಬೇಕಿರುವುದು ತನ್ನ ಒಣ ಮಾತಿನ ಉಪದೇಶವಲ್ಲ ಎಂದು ವಿನ್ಸೆಂಟ್‌ ಗೆ ಅರಿವಾಯಿತು. ತನ್ನ ಧಾರ್ಮಿಕ ಬೋಧನೆಯಿಂದ ಅವರ ಕಷ್ಟ ಬಡತನಗಳು ನೀಗುವುದಿಲ್ಲವೆಂದು ಅರಿತ ವಿನ್ಸೆಂಟ್ ಅಲ್ಲಿನ ಜನಗಳಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿದ. “ಬಡವರಿಗೆ ನಿನ್ನಲ್ಲಿರುವುದನ್ನು ಹಂಚಿಕೋ" ಎಂದು ಕ್ರಿಸ್ತ ಹೇಳಿದಂತೆ ತನ್ನಲ್ಲಿದ್ದುದನ್ನೆಲ್ಲಾ ಅಲ್ಲಿನ ಬಡವರಿಗೆ ಹಂಚಿದ. ತನಗಿದ್ದ ಒಳ್ಳೆಯ ಮನೆಯನ್ನೂ ಬಿಟ್ಟು ಅಲ್ಲಿನ ಜನಗಳ ಹಾಗೆ ಮುರುಕಲು ಗುಡಿಸಲಿನಲ್ಲಿ ವಾಸಿಸತೊಡಗಿದ. ಕಲ್ಲಿದ್ದಲ ಗಣಿಗಳೊಳಗೆ ಇಳಿದು ಅವರ ಸಾವು ನೋವಿನ ಸಮಯದಲ್ಲಿ ಸಹಾಯ ಮಾಡತೊಡಗಿದ. ಅವರ ಹಾಗೆ ಮಳೆ ಚಳಿಯಲ್ಲಿ ನರಳಿ ಖಾಯಿಲೆ ಬೀಳತೊಡಗಿದ. ಬೋರಿನೇಜ್‌ನ ಜನಗಳಿಗೆ ಧಾರ್ಮಿಕ ಬೋಧನೆ ಮಾಡಲು ಬಂದ ಪಾದ್ರಿ ತನ್ನ ಕೆಲಸವನ್ನೇ ಮರೆತ.


         ಅಲ್ಲಿಗೆ ಒಂದು ದಿನ ಚರ್ಚಿನ ಹಿರಿಯ ಪಾದ್ರಿಗಳು ಧಿಡೀರನೆ ಬಂದಾಗ ಅವರಿಗೆ ಕಲ್ಲಿದ್ದಲ ಮಸಿಯೇ ಬಣ್ಣವಾದ ಗಣಿ ಕೆಲಸಗಾರರ ಮಧ್ಯೆ ಪಾದ್ರಿ ವಿನ್ಸೆಂಟ್‌ನನ್ನು ಗುರ್ತಿಸುವುದೇ ಕಷ್ಟವಾಯಿತು. ಶುಭ್ರ ಬಟ್ಟೆ ಧರಿಸಿ ಎಲ್ಲರಿಂದ ದೂರ ವೇದಿಕೆಯ ಮೇಲೆ ನಿಂತು ಧರ್ಮ ಬೋಧಿಸುತ್ತಿರಬೇಕಾದ ಮನುಷ್ಯ ಹೀಗೆ ಗಲೀಜು ಜನಗಳ ನಡುವೆ ಮಾಸಲು ಬಟ್ಟೆ ಧರಿಸಿ ನಯ ವಿನಯಗಳಿಲ್ಲದೇ ಇರುವುದನ್ನು ಕಂಡು ಸಿಟ್ಟಾದ ಪಾದ್ರಿಗಳು ವಿನ್ಸೆಂಟ್ ಕ್ರಿಶ್ಚಿಯನ್ ಧರ್ಮಕ್ಕೇ ಅವಮಾನ ಮಾಡಿದವನೆಂದು ಕೂಡಲೇ ಕೆಲಸದಿಂದ ತೆಗೆದುಹಾಕಿದರು. ಅಲ್ಲಿನ ಜನಗಳ ಬಗೆಗಿನ ಹಿರಿಯ ಪಾದ್ರಿಗಳ ವರ್ತನೆ ಕಂಡು ವಿನ್ಸೆಂಟ್ ಅವರ ಮೇಲೆಯೇ ರೇಗಾಡಿದ.

         ಕೆಲಸ ಕಳೆದುಕೊಂಡ ವಿನ್ಸೆಂಟ್ ಹತಾಶನಾದ, ಏನು ಮಾಡಬೇಕೆಂದು ತೋಚಲಿಲ್ಲ. ಅವನ ದೇಹ ಮತ್ತು ಮನಸ್ಸೆರಡೂ ಶಿಥಿಲಗೊಂಡಿತ್ತು. ಬೋರಿನೇಜ್‌ನಲ್ಲಿ ಕಳಕೊಂಡ ದೇಹಸ್ವಾಸ್ಥ್ಯ ಅವನು ಮತ್ತೆಂದೂ ಸಂಪೂರ್ಣ ಮರಳಿ ಪಡೆಯಲಿಲ್ಲ. ಮೊದಲೇ ಬದುಕಿನಲ್ಲಿ ನೋವುಂಡ ನಿಸ್ಸಹಾಯಕ ಮನುಷ್ಯನಿಗೆ ಈ ಹತಾಶೆಯ ಆಘಾತ ತಡೆಯಲಾಗಲಿಲ್ಲ. ತನ್ನ ನೋವಿಗೆ, ಮಾನವೀಯ ಸ್ಪಂದನಗಳಿಗೆ ರೂಪವೊಂದು ಕೊಡಬೇಕೆಂದು ಚಿತ್ರಕಾರನಾಗಲು ನಿರ್ಧರಿಸಿದ.

         ಇಡೀ ಬದುಕೇ ಒಂಟಿತನದ ನೋವಿನಲ್ಲಿ, ಬಡತನದಲ್ಲಿ, ರೋಗರುಜಿನಗಳಲ್ಲಿ ನರಳಿದ ಆತ್ಮ ವಿನ್ಸೆಂಟ್‌ನದು. ಆತ ತನ್ನ ಚಿತ್ರಕಲೆಯಿಂದ ಸೌಂದರ್ಯದ ವ್ಯಾಖ್ಯಾನವನ್ನೇ ಬದಲಿಸಿದ. ವಿನ್ಸೆಂಟ್‌ ಬದುಕು ಮತ್ತು ಕಲೆಯನ್ನು ಬೇರ್ಪಡಿಸಿ ನೋಡುವುದು ಸಾಧ್ಯವೇ ಇಲ್ಲ. ಅವನ ಬದುಕನ್ನು, ಅವನು ಅನುಭವಿಸಿದ ಕಷ್ಟ ದು:ಖವನ್ನು ಅರಿತಲ್ಲಿ ಅವನ ಕಲಾಕೃತಿಗಳನ್ನು ಅರಿಯಲು ಸಾಧ್ಯ. ಅವನ ಮಾನವೀಯ ಅಂತಃಕರಣದ ಪ್ರತಿಫಲನವೇ ಅವನ ಕಲಾಕೃತಿಗಳು. ತನಗೆ ಸಮಯವೇ ಇಲ್ಲವೇನೋ ಎಂಬಂತೆ ಅಥವಾ ತನಗೆ ಸಾವು ಬಹಳ ಬೇಗ ಬರುವುದೆಂಬುವನ್ನು ಅರಿತೋ ಏನೋ ಆತುರ ಆತುರವಾಗಿ ಚಿತ್ರಗಳನ್ನು ರಚಿಸಿದ. ಕೇವಲ ಹತ್ತು ವರ್ಷಗಳಲ್ಲಿ 800ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿದ. ಸರಿಯಾಗಿ ನಿದ್ರಾಹಾರಗಳಿಲ್ಲದೆ, ಸತತವಾದ ಶ್ರಮದಿಂದ ಮಾನಸಿಕವಾಗಿ ಬಳಲಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ. ಅವನು ಸತ್ತಾಗ ಅವನಿಗೆ 37 ವರ್ಷ ವಯಸ್ಸು. ಜುಲೈ 29, 1990 ಕ್ಕೆ ವಿನ್ಸೆಂಟ್ ವಿಲ್ಲೆಮ್ ವ್ಯಾನ್‌ ಗೊ ಸತ್ತು ನೂರು ವರ್ಷಗಳಾಗುತ್ತವೆ.

         ವಿನ್ಸೆಂಟ್ ಹುಟ್ಟಿದ್ದು ನೆದರ್‌ಲ್ಯಾಂಡಿನ ಜುಂಡರ್ಟ್‌ ನಲ್ಲಿ (Zundert), ತಂದೆ ಪಾದ್ರಿಯಾದ ಥಿಯೋಡೋರಸ್ ವ್ಯಾನ್‌ ಗೊ ಮತ್ತು ತಾಯಿ ಕಾರ್ನೆಲಿಯಾ. ಚಿಕ್ಕಂದಿನಿಂದಲೂ ವಿನ್ಸೆಂಟ್ 'ವಿಚಿತ್ರ'ದ ಹುಡುಗನಾಗಿದ್ದ. ಹೊಲಗದ್ದೆಗಳಲ್ಲಿ ಒಂಟಿಯಾಗಿ ಅಲೆದಾಡುತ್ತಿದ್ದ. ತಮ್ಮ ಥಿಯೋನೊಂದಿಗಾಗಲಿ ಅಥವಾ ತನ್ನ ಮೂವರು ಪುಟ್ಟ ತಂಗಿಯರೊಂದಿಗಾಗಲಿ ಆಡುತ್ತಿರಲಿಲ್ಲ. ಸದಾ ಯಾವುದೋ ಕನಸಿನ ಲೋಕದಲ್ಲಿ ಮುಳುಗಿರುತ್ತಿದ್ದ.


         ಇಡೀ ಬದುಕೇ ಚಡಪಡಿಸುವ ಒಂಟಿ ಆತ್ಮವಾಗಿ ಬದುಕಿದ ವಿನ್ಸೆಂಟ್‌ನಿಗಿದ್ದ ಆತ್ಮೀಯ ಗೆಳೆಯ, ಮಾರ್ಗದರ್ಶಿ, ಆಸ್ತಿ ಎಲ್ಲವೂ ಅವನ ತಮ್ಮ ಥಿಯೋ ಮಾತ್ರ. ವಿನ್ಸೆಂಟ್ ಸಾಯುವವರೆಗೂ ಅವನಿಗೆ ಹಣ ಸಹಾಯದ ಜೊತೆಗೆ ಧೈರ್ಯ ಉತ್ಸಾಹಗಳನ್ನು ತುಂಬುತ್ತಿದ್ದವನು ಥಿಯೋ. ಏಕೆಂದರೆ ಅಣ್ಣ ವಿನ್ಸೆಂಟ್‌ನನ್ನು ಅರ್ಥ ಮಾಡಿಕೊಂಡವನು ಥಿಯೋ ಮಾತ್ರ, ವಿನ್ಸೆಂಟ್ ತನ್ನೆಲ್ಲ ನೋವು, ದುಃಖ, ಸಂತೋಷ, ಕನಸುಗಳನ್ನು ತನ್ನ ಸಾವಿರಾರು ಪತ್ರಗಳ ಮೂಲಕ ಥಿಯೋನಲ್ಲಿ ಹಂಚಿಕೊಂಡ. "ನಿನ್ನ ಬಿಟ್ಟರೆ ನನಗೆ, ಬೇರೆ ಗೆಳೆಯರಾರೂ ಇಲ್ಲ. ನನ್ನ ಅತ್ಯಂತ ನೋವಿನ ಸಮಯಗಳಲ್ಲಿ ನಿನ್ನ ಬಗ್ಗೆಯೇ ಯೋಚಿಸುತ್ತೇನೆ” ಎಂದು ಪತ್ರವೊಂದರಲ್ಲಿ ಬರೆದಿದ್ದ. ದಿನಾಲೂ 14ರಿಂದ 16 ಗಂಟೆಗಳ ಕಾಲ ಒಂದೇ ಸಮನೆ ಚಿತ್ರ ಬಿಡಿಸಿದ ನಂತರವೂ ಸಹ ಥಿಯೋನಿಗೆ ಪತ್ರ ಬರೆಯದೆ ಮಲಗುತ್ತಿರಲಿಲ್ಲ, ವಿನ್ಸೆಂಟ್‌ನ ಭಾವನೆಗಳ ಬಗ್ಗೆ, ಕನಸುಗಳ ಬಗ್ಗೆ, ಅವನ ಇಡೀ ಬದುಕಿನ ಬಗ್ಗೆಯೇ ನಮಗೆ ತಿಳಿಯುವುದು ಅವನ ಪತ್ರಗಳಿಂದ, ಆ ಪತ್ರಗಳೇ ಅವನ ದುರಂತ ಆತ್ಮಕತೆ. ವಿನ್ಸೆಂಟ್ ಕಳುಹಿಸುತ್ತಿದ್ದ ಚಿತ್ರಗಳನ್ನು ಜೋಪಾನವಾಗಿಡುತ್ತಿದ್ದ ಹಾಗೆ ಅವನ ಪತ್ರಗಳನ್ನೂ ಸಹ ಜೋಪಾನವಾಗಿ ಪೇರಿಸಿಡುತ್ತಿದ್ದ ಥಿಯೋ. 1927-29ರಲ್ಲಿ ಅಮೇರಿಕಾದಲ್ಲಿ ಆ ಪತ್ರಗಳನ್ನು ಸಂಪಾದಿಸಿ ಪ್ರಕಟಿಸಿದಾಗ 1670 ಪುಟಗಳ 3 ಸಂಪುಟಗಳಾಗಿತ್ತು. ಕಲಾ ಜಗತ್ತಿಗೆ ವಿನ್ಸೆಂಟ್‌ ಅತ್ಯದ್ಭುತ ಕಲಾಕೃತಿಗಳ ಕೊಡುಗೆ ಇರುವಂತೆ ಸಾಹಿತ್ಯ ಜಗತ್ತಿನಲ್ಲಿ ವಿನ್ಸೆಂಟ್‌ ಪತ್ರಗಳಿಗೆ ಅಂಥದ್ದೇ ಮಹತ್ವವಿದೆ.

         ವಿನ್ಸೆಂಟ್‌ನ ಬದುಕಿನಲ್ಲಿನ ನೋವು ಅವನಲ್ಲಿ ಹಲವಾರು ಬದಲಾವಣೆಗಳನ್ನು ತಂದಿತ್ತು. ಇತರರ ನೋವನ್ನು ತನ್ನದೇ ನೋವೆಂದುಕೊಳ್ಳುವಂತೆ ಮಾಡಿತ್ತು. ಅವನಿಗೆ ಬಡತನ, ದುಃಖ, ಕುರೂಪ, ಚಿತ್ರಕಲೆಗೆ ಮೆಚ್ಚಿನ ವಿಷಯಗಳಾಗಿದ್ದವು. “ನನ್ನನ್ನು ಆಕರ್ಷಿಸುವವರು ಕುರೂಪಿಗಳು, ವಯಸ್ಸಾದವರು, ಬಡವರು, ದುಃಖತಪ್ತರು ಹಾಗೂ ನೋವಿನ ಅನುಭವಗಳ ಮೂಲಕ ಆತ್ಮವನ್ನೂ ಮನಸ್ಸನ್ನೂ ಪಡಕೊಂಡವರು" ಎಂದಿದ್ದ.

          ಅವನ ಅತ್ಯುತ್ತಮ ಚಿತ್ರಗಳು ಕುಂಚದ ಒಂದೆರಡು ಹೊಡೆತಗಳಲ್ಲಿ ಮೂಡಿ ಬಂದಂಥವುಗಳಲ್ಲ. ಅವನ ನಿರಂತರ ಸತತ ಪ್ರಯತ್ನಗಳಿಂದ ಮೂಡಿ ಬಂದಂಥವು. ವಿನ್ಸೆಂಟ್ ತನ್ನ ಚಿತ್ರಗಳಲ್ಲಿ ವಾಸ್ತವತೆಗೆ ಬದ್ಧನಾಗಿದ್ದ. ಅವನ ದೃಷ್ಟಿಯಲ್ಲಿ ವಾಸ್ತವತೆ ಎಂದರೆ ಹೊರರೂಪವನ್ನೂ ಇದ್ದ ಹಾಗೇ ಕ್ಯಾನ್ವಾಸಿನ ಮೇಲೆ ಮೂಡಿಸುವುದಷ್ಟೇ ಅಲ್ಲ ರೂಪದ ಆತ್ಮವನ್ನೂ ಸಹ ತನ್ನ ಚಿತ್ರಗಳಲ್ಲಿ ಮೂಡಿಸುವುದಾಗಿತ್ತು. ''ಚಿತ್ರಕಲೆಯಲ್ಲಿ ಕಲಾವಿದನಿಗೆ ಪ್ರಾಮಾಣಿಕತೆ ಇರಬೇಕು, ಜನಗಳನ್ನು ಮೆಚ್ಚಿಸಲು ಬರೇ 'ಬಣ್ಣದ ಚಿತ್ರ'ಗಳನ್ನು ಬಿಡಿಸುವುದಲ್ಲ. ಕೆಲವೊಮ್ಮೆ ಅತಿಯಾಗಿ ಆಲೋಚನೆಗಳು ಕಾಡಿದಾಗ ನಾನೂ ಸಹ ಹಾಗೇ ಮಾಡಲೇ ಎಂದೆನ್ನಿಸುತ್ತದೆ. ಆದರೆ ತಕ್ಷಣ ಹೇಳುತ್ತೇನೆ, ಇಲ್ಲ... ಇಲ್ಲ, ನಾನು ನನ್ನ ಮನಸ್ಸಿಗೆ ಪ್ರಾಮಾಣಿಕವಾಗಿರಬೇಕು. ಚಿತ್ರ ಸುಂದರವಾಗಿಲ್ಲದಿದ್ದರೂ ಪರವಾಗಿಲ್ಲ, ಒರಟು ಒರಟಾಗಿದ್ದರೂ ಪರವಾಗಿಲ್ಲ, ಆದರೆ ಅದು ವಾಸ್ತವವಾಗಿರಬೇಕು'' ಎಂದು ಥಿಯೋನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದ. ಒಮ್ಮೆ ಆಂಟ್‌ವೆರ್ಪ್‌ ಅಕಾಡೆಮಿ ಆಫ್ ಆರ್ಟ್ ಶಾಲೆಯಲ್ಲಿ ವೀನಸ್ ದೇವತೆಯ ಚಿತ್ರ ಬಿಡಿಸು ಎಂದಾಗ, ಆ ಚಿತ್ರಕ್ಕೆ ದಪ್ಪನೇ ಸೊಂಟ ಮತ್ತು ಹಿಂಭಾಗ ಬಿಡಿಸಿದ್ದ. ಅದನ್ನು ಕಂಡು ಸಿಟ್ಟಾದ ಅಧ್ಯಾಪಕ ಆ ಚಿತ್ರವನ್ನೇ ಹರಿದು ಹಾಕಿದ. ವಿನ್ಸೆಂಟ್ ಅವನ ಮೇಲೆಯ ರೇಗಾಡಿ, "ಹೆಣ್ಣೆಂದರೆ ಅವಳಿಗೆ ಗರ್ಭದಲ್ಲಿ ಮಗು ಹೊರಲು ಸಾಧ್ಯವಾಗುವಂಥ ಸೊಂಟ ಮತ್ತು ಪೃಷ್ಠಭಾಗ ಇರಬೇಕು ಗೊತ್ತೇನು?" ಎಂದು ಕಿರುಚಾಡಿದ್ದ. ವಿನ್ಸೆಂಟ್‌ನ ಒಂದು ಅತ್ಯುತ್ತಮ ಚಿತ್ರವಾದ "ಆಲೂಗಡ್ಡೆ ತಿನ್ನುತ್ತಿರುವವರು" (The Potato Eaters) ಬಗ್ಗೆ ತಮ್ಮ ಥಿಯೋನಿಗೆ "ಚಿತ್ರದಲ್ಲಿ ಲಾಂದ್ರದ ಬೆಳಕಿನಡಿ ಆಲೂಗಡ್ಡೆ ತಿನ್ನುತ್ತಿರುವ ಆ ಮನುಷ್ಯರು ತಮ್ಮ ತಿನ್ನುತ್ತಿರುವ ಕೈಗಳಿಂದಲೇ ದುಡಿದು, ಭೂಮಿಯನ್ನೂ ಕೈಯಾರೆ ಅಗದು, ತಮ್ಮ ದೈಹಿಕ ಶ್ರಮದಿಂದ, ಪ್ರಾಮಾಣಿಕತೆಯಿಂದ ಗಳಿಸಿದ ಆಹಾರ ಅದು ಎನ್ನುವುದನ್ನು ತೋರಿಸುತ್ತದೆ'' ಎಂದು ಬರೆದಿದ್ದ.

 


         ವಿನ್ಸೆಂಟ್ ಜಪಾನಿನ ಕಲಾಕೃತಿಗಳ ಮೇಲಿನ ತನ್ನ ಆಸಕ್ತಿಯಿಂದಾಗಿ ದಕ್ಷಿಣ ಫ್ರಾನ್ಸಿನ ಅರ್ಲ್ಸ್‌ ಗೆ ತನ್ನ ಚಿತ್ರಕಲೆ ಮುಂದುವರಿಸಲು ಹೋಗಬೇಕೆಂದು ನಿರ್ಧರಿಸಿದ. ಅರ್ಲ್ ಜಪಾನ್ ಇದ್ದ ಹಾಗೆ ಇರಬಹುದೆಂದು ಊಹಿಸಿದ್ದ. 1888ರಲ್ಲಿ ಅರ್ಲ್ಸ್‌ ಗೆ ಹೋದ ನಂತರ ಅಲ್ಲಿ 'ಕಲಾವಿದರ ಕಾಲೋನಿʼಯೊಂದನ್ನು ಸ್ಥಾಪಿಸಬೇಕೆಂಬ ಕನಸು ಕಂಡ. 'ಕಾಲೋನಿ' ಆರಂಭಿಸಲು ಮೊಟ್ಟ ಮೊದಲಿಗೆ ಆತ್ಮೀಯ ಗೆಳೆಯ, ಚಿತ್ರಕಾರ ಪಾಲ್ ಗೊಗೇನ್‌ನನ್ನು ಜೊತೆಗಿರಲು ಆಮಂತ್ರಿಸಿದ. ಅಲ್ಲಿಗೆ ಗೊಗೇನ್ ಆಗಮಿಸಿ ವಿನ್ಸೆಂಟ್‌ ಜೊತೆ ಎರಡು ತಿಂಗಳು - ಚಿತ್ರಕಲೆಯಲ್ಲಿ ತೊಡಗಿದ್ದ. ಆದರೆ ಇಬ್ಬರದೂ ತದ್ವಿರುದ್ಧ ಗುಣಗಳು. ಕೊನೆಕೊನೆಗೆ ಗೊಗೇನ್‌ಗೆ ವಿನ್ಸೆಂಟ್‌ನ, ಎರ್ರಾಬಿರ್ರಿ ಪ್ರವೃತ್ತಿ, ಒರಟು ನಡುವಳಿಕೆ, ಅಶುಚಿ ඊළ ತಡೆಯಲಾಗಲಿಲ್ಲ. ಇಬ್ಬರಲ್ಲೂ ಜಗಳ ಆರಂಭವಾಯಿತು. ಸಿಟ್ಟು, ಮತ್ತು ಹತಾಶ ಅತಿರೇಕಕ್ಕೆ ಹೋಗಿ ಚಾಕುವಿನಿಂದ ಗೊಗೇನ್‌ನ ಮೇಲೆ ಆಕ್ರಮಣ ಮಾಡಲು ಯತ್ನಿಸಿದ. ವಿನ್ಸೆಂಟ್ ನನ್ನು ಒಂಟಿಯಾಗಿ ಬಿಟ್ಟರೆ ಸರಿ ಹೋಗಬಹುದೆಂದು ಗೊಗೇನ್ ದೂರ ಹೋದಾಗ ಅದೇ ಚಾಕುವಿನಿಂದ ತನ್ನ ಕಿವಿಯನ್ನೇ ಕತ್ತರಿಸಿಕೊಂಡ. ಅಷ್ಟಲ್ಲದೆ ಆ ಕಿವಿಯನ್ನು ಪೇಪರಿನಲ್ಲಿ ಸುತ್ತಿ "ನಿನ್ನ ಕಿವಿ ಎಷ್ಟು ಚೆನ್ನಾಗಿದೆ ನನಗೆ ಕೊಡು" ಎಂದು ತಮಾಷೆ ಮಾಡುತ್ತಿದ್ದ ವೇಶ್ಯೆಯೊಬ್ಬಳಿಗೆ ತೆಗೆದುಕೊಂಡು ಹೋಗಿ ಕೊಟ್ಟ, ಅವಳು ಪೇಪರ್ ಬಿಡಿಸಿ ನೋಡಿ ಕಿಟಾರನೆ ಕಿರುಚಿ ಓಡಿದ್ದಳು. ಅತೀವ ರಕ್ತಸ್ರಾವವಾಗಿ ಎಚ್ಚರ ತಪ್ಪಿ ಬಿದ್ದಿದ್ದ ವಿನ್ಸೆಂಟ್‌ನನ್ನು ಆಸ್ಪತ್ರೆಗೆ ಸೇರಿಸಿದರು. ಅಲ್ಲಿಂದ ಮನೆಗೆ ಬಂದ ನಂತರ ಸುತ್ತಮುತ್ತಲ ಜನ, ಸುಮ್ಮನಿರಲಿಲ್ಲ. ಎಲ್ಲರೂ ಅವನನ್ನು ಹುಚ್ಚನೆಂದು ಗೇಲಿ ಮಾಡುತ್ತಿದ್ದರು; ಮತ್ತೊಂದು ಕಿವಿಯನ್ನು ಕೊಯ್ದುಕೊಡೆಂದು ಗೋಳು ಹೊಯ್ದುಕೊಳ್ಳುತ್ತಿದ್ದರು. ಅಲ್ಲದೆ ಅಂಥ ಹುಚ್ಚನನ್ನು ತಮ್ಮ ನೆರೆಹೊರೆಯಲ್ಲಿ ಇರಗೊಡಬಾರದೆಂದು ಜನ ಗಲಾಟೆ ಮಾಡುತ್ತಿದ್ದರು.

 


(ಇಲ್ಲಿಯವರೆವಿಗೂ ವಿನ್ಸೆಂಟ್‌ನ ಬಗೆಗಿನ ಬಂದಿರುವ ಸಾಹಿತ್ಯದಲ್ಲೆಲ್ಲಾ ವಿನ್ಸೆಂಟ್‌ನಿಗೆ ಹುಚ್ಚು ಇತ್ತೆಂದೇ ಇದೆ. ಅಲ್ಲದೆ ವಿನ್ಸೆಂಟ್ ಸಹ ತಾನು ಮಾನಸಿಕವಾಗಿ ಅಸ್ವಸ್ಥನೆಂದೇ ನಂಬಿದ್ದ. ಆಗಾಗ ಮರು ಕಳಿಸುತ್ತಿದ್ದ 'ಫಿಟ್ಸ್'ನ ಹೆದರಿಕೆಯಿಂದಾಗಿ ಅವನಲ್ಲಿ ಆತ್ಮವಿಶ್ವಾಸವೇ ಕುಂದುತ್ತಾ ಬಂತು. ಆದ್ದರಿಂದ ತಾನೇ ಸ್ವತಃ 1889ರಲ್ಲಿ ಸೇಂಟ್‌ರೆಮಿಯಲ್ಲಿನ ಹುಚ್ಚಾಸ್ಪತ್ರೆಗೆ ದಾಖಲಾದ. ಆದರೆ ಇತ್ತೀಚಿಗೆ 'ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್' ಪತ್ರಿಕೆಯಲ್ಲಿ ಪ್ರಕಟವಾಗಿರುವಂತೆ ವಿನ್ಸೆಂಟ್‌ನಿಗೆ ಹುಚ್ಚೂ ಇರಲಿಲ್ಲ, ಯಾವುದೇ ಮಾನಸಿಕ ಅಸ್ವಾಸ್ಥವೂ ಇರಲಿಲ್ಲ. ಆತನಿಗೆ ಒಂದು ಸಾಮಾನ್ಯ ಒಳ ಕಿವಿಯ ಖಾಯಿಲೆ 'ಮೆನೀರಿ, ಖಾಯಿಲೆ' ಇತ್ತೆಂದು ಅದರಲ್ಲಿ ಹೇಳಿದೆ. ವಿನ್ಸೆಂಟ್‌ನ 796 ಪತ್ರಗಳನ್ನು ಅಭ್ಯಸಿಸಿದ ನಂತರ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಮೆನೀರಿ ಖಾಯಿಲೆ ಇರುವವರಿಗೆ ಒಳಕಿವಿಯಲ್ಲಿ ಅತಿಯಾದ ನೋವು, ಗುಂಯ್‌ಗುಡುವ ಶಬ್ದ, ಮಾತುಗಳನ್ನು ಕೇಳುತ್ತಿರುವಂಥ ಭ್ರಮೆ, ಎಚ್ಚರತಪ್ಪುವುದು ಆಗುತ್ತದೆಂದು ವಿಜ್ಞಾನಿಗಳು ಹೇಳಿದ್ದಾರೆ. ಇದೇ ಲಕ್ಷಣಗಳಿಂದಾಗಿ ವಿನ್ಸೆಂಟ್ ತನ್ನ ಕಿವಿ ಕತ್ತರಿಸಿಕೊಂಡ ಅಲ್ಲದೆ ಕೊನೆಗೆ ಆತ್ಮಹತ್ಯೆ ಸಹ ಮಾಡಿಕೊಂಡ ಎಂದು ವಿಜ್ಞಾನಿಗಳು ಹೇಳಿದ್ದಾರೆ).

          ಒಂದು ವರ್ಷದ ನಂತರ ಅವ‌ನಲ್ಲಿನ ಡಾಕ್ಟರ್ ಗ್ಯಾಷೆಯ ಬಳಿ ಇರುವಂತೆ ತಮ್ಮ ಥಿಯೋ ಮತ್ತು ಗೆಳೆಯರು ಸೂಚಿಸಿದರು. ಆವರ್ಸ್‌ ಗೆ ಬಂದ ನಂತರ ಒಂದು ದಿನ, 27ನೇ ಜುಲೈ 1890ರಂದು ಮತ್ತೊಂದು ʻತೀವ್ರ ಫಿಟ್ಸ್' ಬಂತು. ಪಿಸ್ತೂಲು ತೆಗೆದುಕೊಂಡು ನೇರ ಊರಹೊರಗಿನ ಹೊಲಗಳೆಡೆಗೆ ನಡೆದ. ಒಂದು ಹಾಳೆಯ ಮೇಲೆ ʻನಾನು ಹತಾಶನಾಗಿದ್ದೇನೆ. ನನ್ನ ಭವಿಷ್ಯವೆಲ್ಲಾ ಬರೇ ಶೂನ್ಯ, ನನಗೆ ಬೇರೆ ದಾರಿಯೇ ಇಲ್ಲʼ ಎಂದು ಗೀಚಿ ಪಿಸ್ತೂಲಿನಿಂದ ಹೊಟ್ಟೆಗೆ ಗುಂಡು ಹಾರಿಸಿಕೊಂಡ. ಅಲ್ಲಿಂದ ಸಂಜೆ ಕೋಣೆಗೆ ಹಿಂದಿರುಗಿ, ʻಒಬ್ಬ ಕಲಾವಿದನಿಗೆ ಸಾವಿನ ನೋವು ಅನುಭವಿಸುವುದು ಅಷ್ಟೇನೂ ಕಷ್ಟಕರವಲ್ಲʼ ಎಂದಿದ್ದ ವಿನ್ಸೆಂಟ್‌ ತನ್ನ ಹಾಸಿಗೆಯ ಮೇಲೆ ಪೈಪ್‌ ಸೇದುತ್ತಾ ನರಳುತ್ತಾ ಬಿದ್ದಿದ್ದ. ಆ ದಿನ ಭಾನುವಾರ, ವಿನ್ಸೆಂಟ್‌ನ ತಮ್ಮ ಥಿಯೋ ಅಂಗಡಿಯಲ್ಲಿರುವುದಿಲ್ಲವಾದ್ದರಿಂದ ಸುದ್ದಿ ಮುಟ್ಟಿಸಲು ಡಾಕ್ಟರ್ ಗ್ಯಾಷೆ ಅವನ ಮನೆ ವಿಳಾಸ ಕೇಳಿದರೆ ವಿನ್ಸೆಂಟ್ ಕೊಡಲಿಲ್ಲ. 'ಬೇಡ ಈ ದಿನ ಭಾನುವಾರ ರಜಾ ದಿನ, ಥಿಯೋ ಮನೆಯಲ್ಲಿ ಆರಾಮಾಗಿರುತ್ತಾನೆ. ಅವನಿಗೆ ತೊಂದರೆ ಕೊಡುವುದು ಬೇಡʼ, ಎಂದ. ಡಾಕ್ಟರ್ ಗ್ಯಾಷೆ ಅಂಗಡಿಗೇ ಸುದ್ದಿ ತಲುಪಿಸಿದ. ಮರುದಿನ ಥಿಯೋ ಅಂಗಡಿಗೆ ಬಂದ ಕೂಡಲೇ ಸುದ್ದಿ ತಿಳಿದು ಆವರ್ಸ್‌ ಗೆ ಓಡಿ ಬಂದ. ವಿನ್ಸೆಂಟ್ ಮೊದಲೇ ತುಂಬಾ ಕ್ಷೀಣವಾಗಿರುವುದರಿಂದ ಶಸ್ತ್ರಕ್ರಿಯೆ ಸಾಧ್ಯವಿಲ್ಲವೆಂದರು ಡಾಕ್ಟರ್ ಗ್ಯಾಷೆ. ಥಿಯೋ ಚಿಕ್ಕ ಮಗುವಿನ ಹಾಗೆ ಬಿಕ್ಕಿ ಬಿಕ್ಕಿ ಅತ್ತ.

          ಎರಡು ದಿನಗಳ ನಂತರ ವಿನ್ಸೆಂಟ್‌ನ ಇಡೀ ಬದುಕಿಗೇ ಆಧಾರಸ್ಥಂಭವಾಗಿದ್ದ ಥಿಯೋನ ಮಡಿಲಲ್ಲಿ ವಿನ್ಸೆಂಟ್ ಸತ್ತು ಹೋದ. ವಿನ್ಸೆಂಟ್ ಸತ್ತ ಆರು ತಿಂಗಳಿಗೇ ತನ್ನ ಮಡದಿ ಹಾಗೂ ಪುಟ್ಟ ಮಗನನ್ನು ಬಿಟ್ಟು ಥಿಯೋ ಸಹ ತೀರಿಕೊಂಡ. ತನ್ನ ಪುಟ್ಟ ಮಗನಿಗೆ ವಿನ್ಸೆಂಟ್ ವಿಲ್ಲೆಮ್ ವ್ಯಾನ್‌ ಗೊ ಎಂದೇ ಹೆಸರಿಟ್ಟಿದ್ದ ಥಿಯೋ!

 ಕಲಾವಿದನಾಗಬೇಕಾದರೆ ಮನುಷ್ಯನಿಗೆ ಪ್ರೀತಿ ಪ್ರೇಮ ಬೇಕು

 ವಿನ್ಸೆಂಟ್ ತನ್ನ ಹದಿನಾರನೇ ವಯಸ್ಸಿನಲ್ಲಿ ಶಾಲೆ ಬಿಟ್ಟು ಕಲಾಕೃತಿಗಳ ವ್ಯಾಪಾರಿಗಳಾದ ಗೂಪಿಲ್ ಮತ್ತು ಕಂಪೆನಿಯಲ್ಲಿ ಹೇಗ್, ಲಂಡನ್ ಮತ್ತು ಪ್ಯಾರಿಸ್ಸಿನಲ್ಲಿ ಕೆಲಸ ಮಾಡಿದ. ಅವನಿಗೆ ಬದುಕಿನಲ್ಲಿ ಮೊದಲಿಗೆ ನೋವಿನ ಹೊಡೆತ ಕೊಟ್ಟದ್ದು ಒಂದು ಪ್ರೇಮ ಪ್ರಕರಣ. ಅವನು ಲಂಡನಿನಲ್ಲಿದ್ದಾಗ ತಾನಿದ್ದ ಮನೆಯ ಒಡತಿಯ ಮಗಳಾದ ಉರ್ಸುಲಾ ಲೋಯರ್‌ಳನ್ನು ಅತಿಯಾಗಿ ಪ್ರೀತಿಸುತ್ತಿದ್ದ, ಇದು ಅವಳಿಗೆ ತಿಳಿದಿರಲಿಲ್ಲ. ಒಂದು ದಿನ ತನ್ನ ಸಹಜ ಪ್ರವೃತ್ತಿಯಾದ ಒರಟು ನಡವಳಿಕೆಯಿಂದ ಅವಳು ತನ್ನ ಪ್ರೇಮ ವ್ಯಕ್ತಪಡಿಸಿದಾಗ ಆ ಹುಡುಗಿ ಹೆದರಿ ಓಡಿ ಹೋದಳು. ಮನೆಯೊಡತಿ ವಿನ್ಸೆಂಟ್‌ ನನ್ನು ಮನೆ ಖಾಲಿ ಮಾಡಿಸಿದಳು. ಉರ್ಸುಲಾಳ ಮೇಲಿನ ಅವನ ಪ್ರೇಮ, ಅವಳ ನಿರಾಕರಣದಿಂದಾಗಿ ಅವನಿಗೆ ಕೆಲಸದಲ್ಲಿ ನಿರಾಸಕ್ತಿ ಉಂಟಾಯಿತು. ಅವನನ್ನು ಕೆಲಸದಿಂದ ತೆಗೆದು ಹಾಕಿದರು.

          ನಂತರ ಲಂಡನ್ನಿನ ರಾಮ್ಸ್‌ ಗೇಟ್‌ನ ಶಾಲೆಯೊಂದರಲ್ಲಿ ಸಂಬಳವಿಲ್ಲದ ಅಧ್ಯಾಪಕ ನಾಗಿ ಸೇರಿದ. ಆಗಲೂ ಅವನಿಗೆ ಉರ್ಸುಲಾಳನ್ನು ಮರೆಯಲು ಸಾಧ್ಯವಾಗಿರಲಿಲ್ಲ. ಪ್ರತೀ ಶನಿವಾರ ಸಂಜೆ ಶಾಲೆ ಮುಗಿದ ನಂತರ ರಾತ್ರಿಯೆಲ್ಲಾ ನಡೆದೇ ಲಂಡನ್ ಸೇರುತ್ತಿದ್ದ. ಅವನಲ್ಲಿ ಹಣವೇ ಇಲ್ಲದಿರುತ್ತಿದ್ದುದರಿಂದ ʻಲಂಡನ್ನಿನ ಚಳಿಯಲ್ಲಿ ಮಳೆಯಲ್ಲಿ ತೊಯ್ದು ನಡುಗುತ್ತಾ ರಸ್ತೆ ಬದಿಗಳಲ್ಲಿ ನಿಂತಿರುತ್ತಿದ್ದ. ಉರ್ಸುಲಾ ತನ್ನ ಮನೆಯಿಂದ ಹೊರಬರುವುದನ್ನೇ ಕಾಯುತ್ತಿದ್ದು ಅವಳು ಬಂದ ನಂತರ ಅವಳನ್ನು ದೂರದಿಂದಲೇ ನೋಡಿ ಲಂಡನ್ನಿಗೆ ನಡೆದೇ ವಾಪಸ್ಸು ಬರುತ್ತಿದ್ದ. ಎಷ್ಟೋ ತಿಂಗಳುಗಳು ಹೀಗೇ ನಡೆದವು.

          ನಂತರ ಆ ಶಾಲೆಯನ್ನು ಲಂಡನ್ನಿಗೆ ವರ್ಗಾಯಿಸಿದರು. ಅಲ್ಲಿ ಅವನಿಗೆ ಬಾಕಿ ಇರುವ ಶಾಲೆಯ ಫೀಸನ್ನು ವಸೂಲಿ ಮಾಡುವ ಕೆಲಸ ಒಪ್ಪಿಸಿದರು. ಫೀಸು ಬಾಕಿ ಇರುವ ಬಹಳಷ್ಟು ಮಂದಿ ಬಡವರೇ ಆಗಿದ್ದು ಅವರ ಬಡತನ ನೋಡಿ ಮರುಗುತ್ತಿದ್ದ ವಿನ್ಸೆಂಟ್‌ನಿಂದ ಹಣ ವಸೂಲಿ ಮಾಡಲು ಸಾಧ್ಯವಾಗದೆ ದಿನಾಲೂ ಬರಿಗೈಲಿ ಹಿಂದಿರುಗುತ್ತಿದ್ದ. ಅಲ್ಲಿಯೂ ಅವನನ್ನು ಕೆಲಸದಿಂದ ತೆಗೆದು ಹಾಕಿದರು.

          ಪ್ರೀತಿ ಪ್ರೇಮ ಅರಸಿ ಹೊರಟ ವಿನ್ಸೆಂಟ್‌ಗೆ ಎಲ್ಲೆಲ್ಲಿಯೂ ನಿರಾಸೆ ಕಾದಿತ್ತು. ಚಿತ್ರಕಾರನಾಗಬೇಕೆಂದು ಬೋರಿನೇಜ್‌ ನಿಂದ ವಾಪಸ್ಸು ಬಂದ ವಿನ್ಸೆಂಟ್‌ನಿಗೆ ಅವನ ಊರಿಗೆ ಬಂದ ಅವನ ಸಂಬಂಧಿ, ಆಗಷ್ಟೇ ವಿಧವೆ ಯಾಗಿದ್ದ ತನ್ನ ಸಂಬಂಧಿ ಕಿ ಸ್ಪೀಕರ್ ವಾನ್ ಳಲ್ಲಿ ಪ್ರೇಮಾಂಕುರವಾಯಿತು. ಅವನು ಅವಳನ್ನು 'ಕೆ' (K) ಎಂದು ಕರೆಯುತ್ತಿದ್ದ. ಅವಳನ್ನು ನೇರವಾಗಿ ತನ್ನನ್ನು ಮದುವೆಯಾಗೆಂದು ಕೇಳಿದ. ಅವಳು 'ಇಲ್ಲ, ಸಾಧ್ಯವೇ ಇಲ್ಲ' ಎಂದು ನಿರಾಕರಿಸಿ ತನ್ನ ಊರಾದ ಅಮ್‌ಸ್ಟರ್ ಡ್ಯಾಮಿಗೆ ವಾಪಸ್ಸು ಹೊರಟು ಹೋದಳು. ಆಮ್‌ಸ್ಟಾರ್ ಡ್ಯಾಮಿಗೆ ಅವಳನ್ನರಸಿ ಹೋಗಲು ಹಣವಿಲ್ಲದ್ದರಿಂದ ತನ್ನ ಕೆಲವು ಚಿತ್ರಗಳನ್ನು ತಮ್ಮ ಥಿಯೋನಿಗೆ ಕಳುಹಿಸಿ ಅವುಗಳನ್ನು ಮಾರಾಟ ಮಾಡಿ ಹಣ ಕಳುಹಿಸುವಂತೆ ಹೇಳಿದ. ಆದರೆ ಅವನ ಚಿತ್ರಗಳನ್ನು ಯಾರೂ ಕೊಳ್ಳಲಿಲ್ಲ, ಕೊನೆಗೆ ಅಲ್ಲಲ್ಲಿ ಹಣ ಸಾಲ ಮಾಡಿ ಆಮ್‌ಸ್ಟರ್‌ ಡಾಮಿಗೆ ಹೊರಟ. ಅವನನ್ನು ನೋಡಲೂ ಸಹ ʻಕೆ' ಒಪ್ಪಲಿಲ್ಲ. ಮೊಂಡು ಬಿಡದ ಏನ್ಸೆಂಟ್ ಉರಿಯುತ್ತಿದ್ದ ಮೋಂಬತ್ತಿಯ ಜ್ವಾಲೆಯಲ್ಲಿ ತನ್ನ ಅಂಗೈ ಇಟ್ಟು ʻಕೆʼಳ ಜೊತೆ ಮಾತನಾಡುವವರೆಗೂ ಹೋಗುವುದಿಲ್ಲವೆಂದ. ಅಂಗೈನ ಮಾಂಸ ಸುಟ್ಟುವಾಸನೆ ಬಂದರೂ ಕೈ ತೆಗೆಯಲಿಲ್ಲ. ಅವನ ಹುಚ್ಚುತನ ನೋಡಿ ಅವಳ ಅಪ್ಪ ಅಮ್ಮ ಅವನನ್ನು ಹೊರದಬ್ಬಿದರು. 'ಕೆ'ಳ ಬಗ್ಗೆ ಥಿಯೋನಿಗೆ ಬರೆದ ಪತ್ರದಲ್ಲಿ, "ಒಬ್ಬ ಕಲಾವಿದನಾಗಬೇಕಾದರೆ ಅವನಿಗೆ ಪ್ರೀತಿ, ಪ್ರೇಮ ಬೇಕು. ಕನಿಷ್ಠ ತನ್ನ ಚಿತ್ರಗಳಲ್ಲಿ ಮಾನವೀಯ ಸ್ಪಂದನಗಳನ್ನು ಮೂಡಿಸಲು ಯತ್ನಿಸುವ ಕಲಾವಿದ ಮಾನವೀಯ ಸ್ಪಂದನಗಳನ್ನು ಸ್ವತಃ ಅನು ಭವಿಸಿರಬೇಕು. ಹಾಗೂ ತನ್ನ ಹೃದಯದಲ್ಲಿ ಪ್ರೇಮದ ತಂತುಗಳನ್ನು ಮೀಟಿರಬೇಕು. ʻಕೆʼ ನನ್ನನ್ನು ಮುಂದೆಂದಾದರೂ ಅರಿತುಕೊಳ್ಳಬಹುದು. ನಾನು ಹೊರಗೆ ಕಳ್ಳ ಖದೀಮನ ಹಾಗೆ ಕಂಡರೂ ಒಳಗೆ ಅತಿ ಮೆದು ಹಾಗೂ ಸೂಕ್ಷ್ಮ ಸಂವೇದನೆಗಳುಳ್ಳವನು ಎಂದು ಅವಳಿಗೆ ತಿಳಿಯುತ್ತದೆ'' ಎಂದು ಬರೆದಿದ್ದ.

          ವಿನ್ಸೆಂಟ್ ಹೇಗ್‌ನಲ್ಲಿದ್ದಾಗ ಕ್ಲಾಸಿನಾ ಮರಿಯಾ ಪೂರ್ನಿಕ್ ಎನ್ನುವ ವೇಶ್ಯೆಯ ಪರಿಚಯವಾಯಿತು. ಅವಳಿಗೆ ಪ್ರೀತಿ, ರಕ್ಷಣೆ ಕೊಡುವುದು ತನ್ನ ಕರ್ತವ್ಯವೆನ್ನಿಸಿ ಅವಳನ್ನು ಕರೆತಂದ. ಅವಳನ್ನು 'ಸೀನ್' (ನನ್ನ ಸ್ವಂತದ) ಎಂದು ಕರೆದ. ಅವನೇ ಬರೆದಿರುವಂತೆ ಅವನಿಗೆ ವೇಶ್ಯೆಯರೆಂದರೆ ಇಷ್ಟವಾಗತೊಡಗಿದರು; ಏಕೆಂದರೆ ಅವರು ಅವನಿಗೆ “ಗೆಳೆಯರು ಹಾಗೂ ಅಕ್ಕತಂಗಿಯರಾಗಿದ್ದರು', ಅಂದರೆ ಅವನ ಹಾಗೆ ಬೀದಿಗೆ ಬಿದ್ದವರಾಗಿದ್ದರು. ಬಸುರಾಗಿದ್ದ ಹಾಗೂ ಅವಳ ಐದು ವರ್ಷದ ಮಗಳನ್ನೂ ಸಹ ಕರೆತಂದು ತನ್ನ ಜೊತೆಯಲ್ಲೇ ಇಟ್ಟು ಕೊಂಡ. 'ಸೀನ್' ವಿನ್ಸೆಂಟ್‌ನಿಗಿಂತ ವಯಸ್ಸಿನಲ್ಲಿ ಹಿರಿಯವಳಾಗಿದ್ದಳು. 'ನನಗೆ ತಾಯಿಯರಾಗಿರುವ ಹೆಂಗಸರೆಂದರೆ ಗೌರವ' ಎಂದ. “ಬೆಳಿಗ್ಗೆ ನಿದ್ದೆಯಿಂದ ಎದ್ದಾಗ ಮಡಿಲಲ್ಲಿ ನಮ್ಮವರೇ, ನಮ್ಮ ಆತ್ಮೀಯರೇ ಇರುವುದನ್ನು ಕಂಡಾಗ, ಬದುಕು ಎಷ್ಟು ಸುಂದರ ಅಲ್ಲವೆ?" ಎಂದು ಥಿಯೋನಿಗೆ ಬರೆದ. ಸೀನ್‌ ಳೇ ಆತನ ʻವಿಷಾದʼ (SORROW) ಚಿತ್ರದಲ್ಲಿರುವ ರೂಪದರ್ಶಿ, ಅವಳಿಗೆ ಕೊಡಲು ಅವನಲ್ಲಿ ಬಡತನ ಮತ್ತು ಪ್ರೀತಿ ಬಿಟ್ಟರೆ ಬೇರೇನೂ ಇರಲಿಲ್ಲ. ಸೀನ್ ವಿನ್ಸೆಂಟ್‌ನಿಗೆ ಗೊನೋರಿಯಾ ಉಡುಗೊರೆಯಾಗಿ ಕೊಟ್ಟಳು. ಅವಳ ಜೊತೆಗೆ ಒಂದು ವರ್ಷವಿದ್ದು ಅವಳನ್ನೇ ಮದುವೆಯಾಗುತ್ತೇನೆ ಎಂದಿದ್ದ, ವಿನ್ಸೆಂಟ್ ಕೊನೆಗೆ ಥಿಯೋನ ಬಲವಂತದಿಂದ ಹಾಗೂ ಇನ್ನಿತರ ಕೌಟುಂಬಿಕ ಕಾರಣಗಳಿಂದಾಗಿ ಅವಳಿಂದ ದೂರ ಸರಿಯ ಬೇಕಾಯಿತು.

         1888ರಲ್ಲಿ ವಿನ್ಸೆಂಟ್ ನ್ಯೂನನ್ ನಲ್ಲಿದ್ದಾಗ ಮಾರ್ಗಟ್ ಬೆಜೆಮನ್ ಎಂಬ 41 ವರ್ಷದ ಹೆಂಗಸು ಅವನ ಹಿಂದೆ ಬಿದ್ದಳು. ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಕೈಗೆ ಸಿಕ್ಕ ವಿನ್ಸೆಂಟ್‌ನನ್ನೂ ಬಿಟ್ಟರೆ ತನಗಿನ್ನು ಮದುವೆಯೇ ಆಗುವುದಿಲ್ಲವೆಂದು ತಿಳಿದಿದ್ದಳು. ಅವಳ ಮೇಲಿನ ಕರುಣೆಯಿಂದಲೋ, ಪ್ರೀತಿಯಿಂದಲೋ ಅಥವಾ ಅವೆರಡರಿಂದಲೂ ಇರಬಹುದು ವಿನ್ಸೆಂಟ್ ಅವಳನ್ನು ಮದುವೆಯಾಗಲು ಒಪ್ಪಿದ. ಆದರೆ ವಿನ್ಸೆಂಟ್‌ ನ ಬಡತನದಿಂದಾಗಿ ಹಾಗೂ ಅವನಿಗೆ ʻಉನ್ನತʼ ಸಾಮಾಜಿಕ ಅಂತಸ್ತು ಇಲ್ಲದ್ದರಿಂದ ಆಕೆಯ ಮನೆಯವರು ಒಪ್ಪಲಿಲ್ಲ. ಆಕೆ ವಿಷವನ್ನು ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದಳು. ವಿನ್ಸೆಂಟ್ ವಿಷವನ್ನು ಕಕ್ಕುವಂತೆ ಮಾಡಿ ಅವಳನ್ನು ಬದುಕಿಸಿದ. ಆದರೂ ಆ ಮದುವೆ ನಡೆಯಲಿಲ್ಲ. ಆಗ ʻಸಮಾಜದ ಗೌರವಯುತ ಜನ ಮಾತನಾಡುವ ಸಾಮಾಜಿಕ ಅಂತಸ್ತು, ಧರ್ಮಗಳ ಅರ್ಥವೇನು?, ಹೋ! ಅವು ಮೂರ್ಖತನದ ವಿಷಯಗಳು: ಸಮಾಜವನ್ನು ತಲೆಕೆಳಗೆ ಮಾಡಿ ಹುಚ್ಚಾಸ್ಪತ್ರೆಯನ್ನಾಗಿ ಮಾಡಿಬಿಡುತ್ತವೆʼ ಎಂದು ಥಿಯೋನಿಗೆ ಬರೆದಿದ್ದ.

 ಹಣಕ್ಕಾಗಿ ಬರೆದವನಲ್ಲ

 ʻಒಂದು ಸಮಯ ಬಂದೇ ಬರುತ್ತದೆ. ಆಗ ಜನಗಳಿಗೆ ನನ್ನ ಚಿತ್ರಗಳ ಬೆಲೆ ತಿಳಿಯುತ್ತದೆ'



          ವಿನ್ಸೆಂಟ್ ವ್ಯಾನ್‌ ಗೊ ಹಣಕ್ಕಾಗಿ ಚಿತ್ರಗಳನ್ನು ಎಂದೂ ಬರೆದವನಲ್ಲ. ಆದರೆ ತನಗೆ ಎಷ್ಟೇ ತೊಂದರೆಗಳಿದ್ದರೂ ಬೇಕಾದಾಗಲೆಲ್ಲಾ ಹಣ ಒದಗಿಸುತ್ತಿದ್ದ ಥಿಯೋನಿಗೆ ತೊಂದರೆ ಕೊಡಲು ವಿನ್ಸೆಂಟ್‌ಗೆ ಇಷ್ಟವಿರಲಿಲ್ಲ. “ನೀನು ಮಾಡುತ್ತಿರುವ ಸಹಾಯಕ್ಕೆ: ನಾನೆಷ್ಟು ಋಣಿಯಾಗಿದ್ದೇನೆಂದರೆ ಅದನ್ನು ವ್ಯಕ್ತಪಡಿಸಲು ನನ್ನಿಂದ ಸಾಧ್ಯವೇ ಇಲ್ಲ. ಆದರೆ ನನ್ನ ಕೆಲಸದಲ್ಲಿ ಪ್ರಗತಿಯೇ ಕಾಣುತ್ತಿಲ್ಲ. ನಾನು ನಿನಗೆ ಈ ರೀತಿ ಹೊರೆಯಾಗಿರುವ ಬದಲು, ಬೋರಿನೇಜ್‌ನಲ್ಲೇ ಏನಾದರೂ ಖಾಯಿಲೆ ಬಂದು ಸತ್ತು ಹೋಗಿದ್ದಿದ್ದರೆ ಚೆನ್ನಾಗಿರುತ್ತಿತ್ತೇನೋ'' ಎಂದು ಒಮ್ಮೆ ಪತ್ರವೊಂದರಲ್ಲಿ ತನ್ನ ನೋವು ವ್ಯಕ್ತಪಡಿಸಿಕೊಂಡಿದ್ದ. ಹಾಗಾಗಿ ತನ್ನ ಕಲಾಕೃತಿಗಳನ್ನು ಮಾರುವುದು ವಿನ್ಸೆಂಟ್‌ನಿಗೆ ಅತ್ಯವಶ್ಯಕವಾಗಿತ್ತು. ಆದರೆ ಅವನ ಬದುಕಿನ ದುರಂತವೆಂದರೆ ಯಾರೂ ಅವನ ಚಿತ್ರಗಳನ್ನು ಕೇಳಲಿಲ್ಲ, ಯಾರೂ ಮೆಚ್ಚಿ ಪ್ರಶಂಸಿಸಲಿಲ್ಲ. ನನ್ನ ಕಲಾಕೃತಿಗಳು ಮಾರಾಟವಾಗದಿರುವುದರ ಬಗ್ಗೆ ನಾನು ನಿಸ್ಸಹಾಯಕ, ಆದರೆ ಒಂದು ಸಮಯ ಬಂದೇ ಬರುತ್ತದೆ ಆಗ ಜನಗಳಿಗೆ ನನ್ನ ಚಿತ್ರಗಳ ಬೆಲೆ ಅದರಲ್ಲಿ ಬಳಸಿರುವ ಬಣ್ಣ ನನ್ನ ಬದುಕಿಗಿಂತ ಹೆಚ್ಚೆಂಬುದು ತಿಳಿದೇ ತಿಳಿಯುತ್ತದೆ' ಎಂದು ನೊಂದು ಪತ್ರವೊಂದರಲ್ಲಿ ಬರೆದಿದ್ದ.

          ವಿನ್ಸೆಂಟ್‌ ನ ಬದುಕಿಡೀ ಒಂದೇ ಒಂದು ಚಿತ್ರ 'ದಿ ರೆಡ್ ವೈನ್' (The Red Wine) ತನ್ನ ಸಾವಿಗೆ 5 ತಿಂಗಳ ಮೊದಲು ಪ್ರದರ್ಶನವೊಂದರಲ್ಲಿ 400 ಫ್ರಾಂಕ್‌ಗಳಿಗೆ ಮಾರಾಟವಾಗಿತ್ತು. ಆದರೆ ಇಂದು ವಿನ್ಸೆಂಟ್ ಸತ್ತ ನೂರು ವರ್ಷಗಳ ಬಳಿಕ ಕಲಾಜಗತ್ತಿನ ವ್ಯಾಪಾರಗಳಲ್ಲಿ ವಿನ್ಸೆಂಟ್‌ ಕಲಾಕೃತಿಗಳು ಕೋಟಗಟ್ಟಲೆ ಹಣ ಗಳಿಸುತ್ತಿವೆ. ಶೇರು ಮಾರುಕಟ್ಟೆಯಲ್ಲಿ ಶೇರುಗಳ ಬೆಲೆ ಏರುವಂತೆ ಅವನ ಚಿತ್ರಗಳ ಬೆಲೆ ದಿನದಿನಕ್ಕೆ ಏರುತ್ತಿವೆ. ಪ್ರಪಂಚದ ಅತಿ ಹೆಚ್ಚು ಬೆಲೆಯ ಹತ್ತು ಕಲಾಕೃತಿಗಳಲ್ಲಿ ವಿನ್ಸೆಂಟ್‌ ನ ನಾಲ್ಕು ಕೃತಿಗಳಿವೆ. ಮೇ 15, 1990ರಂದು ಕಲಾ ಜಗತ್ತಿನಲ್ಲಿ ವಿನ್ಸೆಂಟ್‌ ನ ಡಾಕ್ಟರ್ ಗ್ಯಾಷೆ ಭಾವಚಿತ್ರ, ನಾವು, ನೀವು ಯಾರೂ ಊಹಿಸಲು ಸಾಧ್ಯವಾಗದಷ್ಟು ಬೆಲೆಗೆ ಮಾರಾಟವಾಗಿ ಒಂದು ದಾಖಲೆಯೇ ಸ್ಥಾಪಿಸಿದೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ಕ್ರಿಸ್ಟೀಯನ್ನರು ನಡೆಸಿದ ಹರಾಜಿನಲ್ಲಿ ಜಪಾನಿನ ಗ್ಯಾಲರಿಯೊಂದು 82.5 ಮಿಲಿಯನ್ ಡಾಲರ್ ಗಳಿಗೆ (ಸುಮಾರು ನೂರಾ ಇಪ್ಪತ್ತನಾಲ್ಕು ಕೋಟಿ ರೂಪಾಯಿಗಳು) ಕೊಂಡಿತು. 'ಡಾಕ್ಟರ್ ಗ್ಯಾಷೆಯವರ ಭಾವಚಿತ್ರ'ವನ್ನು  ವಿನ್ಸೆಂಟ್ ಆವರ್ಸ್ ನಲ್ಲಿ ತನ್ನ ಸಾವಿಗೆ ಕೆಲವು ವಾರಗಳ ಮೊದಲಷ್ಟೇ ರಚಿಸಿದ್ದ. ‌

          ಅದಕ್ಕೆ ಮೊದಲು ನವೆಬರ್ 1987ರಲ್ಲಿ ವಿನ್ಸೆಂಟ್‌ ನ ಮತ್ತೊಂದು ಕೃತಿ 'ಐರಿಸಸ್' (Irises) 53.9 ಮಿಲಿಯನ್ ಡಾಲರ್‌ಗಳಿಗೆ (ಸುಮಾರು ಎಂಭತ್ತೊಂದು ಕೋಟಿ ರೂ.ಗಳು) ಮಾರಾಟವಾಗಿ ಅತಿ ಹೆಚ್ಚು ಬೆಲೆಯ ಕಲಾಕೃತಿಯೆಂದು ದಾಖಲೆ ಸ್ಥಾಪಿಸಿತ್ತು. 'ಐರಿಸಸ್' ಅನ್ನು ಕೊಂಡವನು ಕೊಂಡವನು ಆಸ್ಟ್ರೇಲಿಯಾದ 'ಕಲಾಪ್ರೇಮಿ', ಚಿನ್ನದ ಗಣಿಗಳ ಮಾಲೀಕ ಅಲನ್ ಬಾಂಡ್, ಇತ್ತೀಚಿನ ವರದಿಗಳಂತೆ ಕಲಾಕೃತಿಯನ್ನು ಕ್ಯಾಲಿಫೋರ್ನಿಯಾದ ಮಲಿಬುನಲ್ಲಿನ ಜಿ.ಪಾಲ್ ಗೆಟ್ಟಿ ಮ್ಯೂಸಿಯಂ ಖರೀದಿಸಿದೆ. ಆದರೆ ತನ್ನ ನಿಯಮದಂತೆ ಅದು ಖರೀದಿಯ ಮೊತ್ತವನ್ನು ಬಹಿರಂಗಗೊಳಿಸಿಲ್ಲ. ಸಹಜವಾಗಿ ಆ ಮೊತ್ತ  53.9 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿಗೇ ಇರಬೇಕು. ಅದೇ 'ಐರಿಸಸ್' ಚಿತ್ರ 1947ರಲ್ಲೇ 87,000 ಡಾಲರ್‌ಗಳಿಗೆ (ಸುಮಾರು ಹದಿಮೂರು ಲಕ್ಷ ರೂ.ಗಳು) ಮಾರಾಟವಾಗಿತ್ತು.

          ಅದೇ ಅಲನ್ ಬಾಂಡ್ ಮಾರ್ಚ್ 1987ರಲ್ಲಿ ವಿನ್ಸೆಂಟ್‌ನ 'ಸೂರ್ಯಕಾಂತಿ ಹೂ' ಗಳನ್ನು (Sunflowers) ಕೊಳ್ಳಲು ಹರಾಜಿನಲ್ಲಿ ಪ್ರಯತ್ನಿಸಿದ್ದ. ಆದರೆ ಜಪಾನಿನ ಇನ್ಸೂರೆನ್ಸ್ ಕಂಪೆನಿಯೊಂದು 39.9 ಮಿಲಿಯನ್ ಡಾಲರ್‌ಗಳಿಗೆ (ಸುಮಾರು ಅರವತ್ತು ಕೋಟಿ ರೂ.ಗಳು) ಖರೀದಿಸಿತು. ನಂತರ ಅಲನ್ ಬಾಂಡ್ ಅದೇ ಕಲಾಕೃತಿಗೆ 50 ಮಿಲಿಯನ್ ಡಾಲರ್ (ಸುಮಾರು ಎಪ್ಪತ್ತೈದು ಕೋಟಿ ರೂ.ಗಳು) ಕೊಡುತ್ತೇನೆಂದರೂ ಆ ಇನ್ನೂರೆನ್ಸ್ ಕಂಪನಿ ಕೊಡಲಿಲ್ಲ.

           ಜೂನ್ 1987ರಲ್ಲಿ ವಿನ್ಸೆಂಟ್‌ನದೇ ಮತ್ತೊಂದು ಕಲಾಕೃತಿ “ಟ್ರಂಕ್ವೆಟೇಲ್ ಸೇತುವೆ 20.2 ಮಿಲಿಯನ್ ಡಾಲರ್‌ಗಳಿಗೆ (ಸುಮಾರು ಮೂವ್ವತ್ತು ಕೋಟ ರೂ.ಗಳು) ಮಾರಾಟವಾಯಿತು. ವಿನ್ಸೆಂಟ್ ತಾನು ಸಾಯುವ ಒಂದು ತಿಂಗಳ ಮೊದಲು ರಚಿಸಿದ್ದ 'ಅಡೆಲಿನ್ ರಾವೂಳ ಭಾವಚಿತ್ರ' ಮೇ 1988ರಲ್ಲಿ 13.75 ಮಿಲಿಯನ್ ಡಾಲರ್‌ಗಳಿಗೆ (ಸುಮಾರು ಇಪ್ಪತ್ತೊಂದು ಕೋಟಿ ರೂ.ಗಳು) ಮಾರಾಟವಾಯಿತು.

          ಆದರೆ ಈ ಹರಾಜು, ಮಾರಾಟಗಳು ವಿನ್ಸೆಂಟ್ ಬದುಕಿದ್ದ ತತ್ವಗಳಿಗೆ ವಿರುದ್ಧವಾಗಿವೆ. ಈ ರೀತಿ ಕೋಟಿಗಟ್ಟಲೆ ಹಣ ಸಿಗದಿದ್ದರೂ ತನ್ನ ಹೊಟ್ಟೆಬಟ್ಟೆಗೆ, ಬಣ್ಣ ಕ್ಯಾನ್ವಾಸಿಗೆ, ರೂಪದರ್ಶಿಗಳಿಗೆ ಕೊಡುವಷ್ಟಾದರೂ ಹಣವನ್ನು ತನ್ನ ಚಿತ್ರಗಳು ಒದಗಿಸಿಕೊಟ್ಟಿದ್ದಿದ್ದರೆ ಅವನ ಬದುಕಿನಲ್ಲಿನ ನೋವು ಸ್ವಲ್ಪವಾದರೂ ಕಡಿಮೆಯಾಗಿರುತ್ತಿತ್ತು.



2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಬಹಳ ಚೆನ್ನಾಗಿ ಮೂಡಿ ಬಂದಿದೆ

ಅನಾಮಧೇಯ ಹೇಳಿದರು...

ತುಂಬಾ ಚನ್ನಾಗಿದೆ👍