Translate

ಬುಧವಾರ, ಆಗಸ್ಟ್ 27, 2025

ಮಾನಸಿಕ ಬದುಕು ಆಕಸ್ಮಿಕವಲ್ಲ


 ನನ್ನ ತಾಯಿಯ ಕೊನೆಯ ತಮ್ಮ ಹಳ್ಳಿಯಿಂದ ಬಂದು ನಮ್ಮ ಮನೆಯಲ್ಲಿದ್ದೇ ತಮ್ಮ ಬಿ.ಎಸ್ಸಿ. ಪದವಿ ಮುಗಿಸಿದರು. ಅವರು ಪದವಿ ಮುಗಿಸಿ ಹೋಗುವಾಗ ಸಿಗ್ಮಂಡ್‌ ಫ್ರಾಯ್ಡ್‌ ನ Psychopathology of Everyday Life (1951ರ ಮುದ್ರಣ) ಬಿಟ್ಟು ಹೋಗಿದ್ದರು. ನಾನಾಗ ಪಿ.ಯೂ.ಸಿ.ಯಲ್ಲಿದ್ದೆ. ನನಗೆ ಸಿಗ್ಮಂಡ್‌ ಫ್ರಾಯ್ಡ್‌ ಹಾಗೂ ಮನಶಾಸ್ತ್ರದಲ್ಲಿ ಆಸಕ್ತಿ ಬರಲು ಅದೇ ಪುಸ್ತಕ ಕಾರಣ. ಅದರ ಕುರಿತಂತೆ ಒಂದು ಸಣ್ಣ ಟಿಪ್ಪಣಿಯನ್ನು 2004ರಲ್ಲಿ ನಾನು ಕನ್ನಡ ವಿ.ವಿ.ಯಲ್ಲಿ ಪಿ.ಎಚ್ಡಿ.ಗಾಗಿ ಪ್ರವೇಶ ಪಡೆದಾಗ ನನ್ನ ಗೈಡ್‌ ಹಾಗೂ ವಿಜ್ಞಾನ ಸಂಗಾತಿಯ ಸಂಪಾದಕರಾಗಿದ್ದ ಡಾ.ಟಿ.ಎಸ್.ಚನ್ನೇಶ್‌ ರವರ ಜೊತೆ ಮಾತನಾಡುತ್ತಾ ಅಲ್ಲೇ ಹಂಪಿಯಲ್ಲಿ ಬರೆದುಕೊಟ್ಟಿದ್ದೆ: ಅದು ಇಲ್ಲಿದೆ:



ಮಾನಸಿಕ ಬದುಕು ಆಕಸ್ಮಿಕವಲ್ಲ
ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುವ ಹಲವಾರು ಆಕಸ್ಮಿಕ ಘಟನೆಗಳು 'ಆಕಸ್ಮಿಕ' ಘಟನೆಗಳಲ್ಲವೆ? ಅಲ್ಲವೆನ್ನುತ್ತಾರೆ. ಆಧುನಿಕ ಮನೋವಿಶ್ಲೇಷಣೆಯ ಪಿತಾಮಹ ಸಿಗ್ನಂಡ್ ಫ್ರಾಯ್ಡ್ ತಮ್ಮ “ಸೈಕೋಪೆಥಾಲಜಿ ಆಫ್ ಎವ್ವೆರಿಡೇ ಲೈಫ್” ಪುಸ್ತಕದಲ್ಲಿ, “ನಮ್ಮ ಮಾನಸಿಕ ಬದುಕಿನಲ್ಲಿ ಆಕಸ್ಮಿಕವೆಂಬುದೇ ಇಲ್ಲ. ಪ್ರತಿಯೊಂದು ಸಹ ನಮ್ಮ ಜಾಗೃತ ಅಥವಾ ಸುಪ್ತ ಮನಸ್ಸಿನಿಂದ ಪ್ರಭಾವಿತ ಅಥವಾ ಪ್ರೇರಿತ ಘಟನೆಗಳು” ಎನ್ನುತ್ತಾರೆ. ನೀವು ಕುಡಿಯುತ್ತಿರುವ ಕಾಫಿಯ ಗ್ಲಾಸ್ ಕೈ ಜಾರಿ ಕೆಳಗೆ ಬೀಳಬಹುದು, ಗೆಳೆಯನೊಬ್ಬ ಹಲವಾರು ದಿವಸಗಳಿಂದ ಪುಸ್ತಕವೊಂದನ್ನು ಕೇಳುತ್ತಿದ್ದರೂ ಸಹ ನೀವು ಅದನ್ನು ಕೊಂಡೊಯ್ಯಲು ಮರೆಯುತ್ತಿರಬಹುದು, ಬ್ಯಾಂಕಿನಲ್ಲಿ ಚಲನ್ ಬರೆಯಲು ಯಾರಿಂದಲೋ ಎರವಲು ಪಡೆದ ಪೆನ್ನನ್ನು ಮರೆತು ನಿಮ್ಮ ಕಿಸೆಗೆ ಹಾಕಿಕೊಂಡು ಬಂದಿರಬಹುದು, ಆಫೀಸಿಗೆ ಹೋಗುವಾಗ ಆಫೀಸಿನ ಕೀಲಿಯನ್ನೇ ಮರೆತು ಹೋಗಿರಬಹುದು, ಸಂಜೆ ಬರುವಾಗ ಮರೆಯದೆ ತನ್ನಿ ಎಂದು ಪತ್ನಿ ಹಲವಾರು ಬಾರಿ ನೆನಪಿಸಿದ್ದರೂ ಸಹ ಆಕೆ ಕೇಳಿದ್ದ ವಸ್ತುವನ್ನು ನೀವು ಮರೆತಿರುತ್ತೀರಾ, ಮಾತನಾಡುವಾಗ ಯಾವುದೋ ಪದ ಬಳಸುವ ಬದಲು 'ಬಾಯಿತಪ್ಪಿ' ಮತ್ತಾವುದೋ ಪದ ಬಳಸುತ್ತೀರಾ....
ಹೀಗೆ ಹತ್ತು ಹಲವಾರು 'ಆಕಸ್ಮಿಕ' ಘಟನೆಗಳು ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುತ್ತಿರುತ್ತವೆ. ಇವಕ್ಕೆಲ್ಲಾ ನಿಮ್ಮ ಜಾಗೃತ ಅಥವಾ ಸುಪ್ತ ಮನಸ್ಸೇ ಕಾರಣ ಎನ್ನುತ್ತಾರೆ ಫ್ರಾಯ್ಡ್, ಗೆಳೆಯನೊಬ್ಬ ಕೇಳುತ್ತಿರುವ ಪುಸ್ತಕವನ್ನು ಕೊಡಲು ನಿಮಗೆ ಇಷ್ಟವಿಲ್ಲದಿರಬಹುದು. ಆತ ಕೇಳಿದಾಗ ನೀವು ಬೇಕೆಂದೇ ಮರೆತು, 'ಅಯ್ಯೋ ತರುವುದು ಮರೆತೆ' ಎನ್ನುಬಹುದು. 'ಹಾಳಾಗಿಹೋಗಲಿ, ಕೊಟ್ಟೇಬಿಡೋಣ' ಅಂದುಕೊಂಡು ನಾಳೆ ತರೋಣ' ಎಂದುಕೊಂಡ ನಿಮ್ಮನ್ನು ಕೊಡಲಿಚ್ಛೆಯಿಲ್ಲದ ನಿಮ್ಮ ಸುಪ್ತ ಮನಸ್ಸು ನಾಳೆ ನೀವು ಹೊರಡುವ ಸಮಯದಲ್ಲಿ ಬೇಕೆಂದೇ ಆ ವಿಷಯ ನಿಮಗೆ ನೆನಪಾಗದಂತೆ ಮಾಡಬಹುದು. ಹೆಂಡತಿ ಖಂಡಿತಾ 'ತನ್ನಿ' ಎಂದು ಹೇಳುತ್ತಿರುವ ವಸ್ತು ದುಬಾರಿಯಾದ್ದರಿಂದ ನೀವು ಒಲ್ಲದ ಮನಸ್ಸಿನಿಂದ 'ಆಯಿತು, ಸಂಜೆ ತರುತ್ತೇನೆ' ಎಂದು ಹೇಳಿರಬಹುದು. ನಿಮ್ಮ ಸುಪ್ತ ಮನಸ್ಸಿಗೆ ನಿಮ್ಮ ಜಾಗೃತ ಮನಸ್ಸಿನ ಇಚ್ಛೆ ಅರಿವಾಗಿ ಸಂಜೆ ಆ ವಿಷಯ ವಾಪಸ್ಸು ಮನೆ ತಲುಪುವವರೆಗೂ ನೆನಪಾಗದಂತೆ ಮಾಡಿರುತ್ತದೆ. 'ಈ ದಿನ ಏಕೋ ಆಫೀಸಿಗೆ ಹೋಗುವ ಮನಸ್ಸೇ ಇಲ್ಲ' ಎಂದು ಆಫೀಸಿಗೆ ಹೊರಟ ನೀವು ಆಫೀಸಿನ ಕೀಲಿಯನ್ನೇ ಮರೆತು ಹೊರಟಿರಬಹುದು. ಬ್ಯಾಂಕಿನಲ್ಲಿ ಚಲನ್ ಬರೆಯಲು ಎರವಲು ಪಡೆದ ಯಾರದೋ ಪೆನ್ನು ನಿಮಗೆ ಆಕರ್ಷಕವಾಗಿ ಕಂಡು ನಿಮ್ಮ ಸುಪ್ತ ಮನಸ್ಸು ನಿಮ್ಮರಿವಿಗೆ ಬರದಂತೆ ಅದನ್ನು ಕದಿಯುವಂತೆ' ಪ್ರೇರೇಪಿಸಿರಬಹುದು.
ಹೀಗೆ ಹತ್ತು ಹಲವಾರು 'ಆಕಸ್ಮಿಕ' ಘಟನೆಗಳು ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುತ್ತಿರುತ್ತವೆ. ನಮ್ಮ ನಡವಳಿಕೆಗೆ ಜಾಗೃತ ಮನಸ್ಸಿನ 'ಸಭ್ಯತೆ'ಯ ಸೋಗು ಹಾಕಿದರೂ ನಮ್ಮ ಸುಪ್ತ ಮನಸ್ಸಿನ ಕೀಟಲೆಯ ನೈಜತೆ ವಾಸ್ತವವನ್ನು ಬಯಲಿಗೆಳೆಯಲು ಕಾಯುತ್ತಿರುತ್ತದೆ!
- ಜೆ. ಬಾಲಕೃಷ್ಣ
ವಿಜ್ಞಾನ ಸಂಗಾತಿ, ಜನವರಿ ೨೦೦೪
ಈ ಕೃತಿಯ ಬಗ್ಗೆ ಮತ್ತಷ್ಟು ಪರಿಚಯ:
ಸಿಗ್ಮಂಡ್ ಫ್ರಾಯ್ಡ್ನ The Psychopathology of Everyday Life (1901) ಸುಪ್ತಮನಸ್ಸಿನ ಪ್ರಕ್ರಿಯೆಗಳು ದೈನಂದಿನ ವರ್ತನೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ತಿಳಿಸುತ್ತದೆ, ಮನಸ್ಸಿನ ಗುಪ್ತ ಕಾರ್ಯನಿರ್ವಹಣೆಯನ್ನು ಬಹಿರಂಗಪಡಿಸುತ್ತದೆ. ತೋರಿಕೆಯಲ್ಲಿ ಕ್ಷುಲ್ಲಕವೆಂದು ಕಾಣುವ ತಪ್ಪುಗಳು — ಬಾಯಿತಪ್ಪಿ ಹೇಳುವುದು, ಹೆಸರುಗಳನ್ನು ಮರೆಯುವುದು, ವಸ್ತುಗಳನ್ನು ತಪ್ಪಾಗಿ ಇಡುವುದು, ಅಥವಾ ಅಪಘಾತಗಳು—ಇವು ಆಕಸ್ಮಿಕವಲ್ಲ, ಬದಲಿಗೆ ಸುಪ್ತಮನಸ್ಸಿನ ಆಲೋಚನೆಗಳು, ಆಸೆಗಳು ಅಥವಾ ಸಂಘರ್ಷಗಳ ಅರ್ಥಪೂರ್ಣ ಅಭಿವ್ಯಕ್ತಿಗಳಾಗಿವೆ ಎಂದು ಫ್ರಾಯ್ಡ್ ವಾದಿಸುತ್ತಾರೆ. ಈ "ಪ್ಯಾರಾಪ್ರಾಕ್ಸಸ್" (Freudian slips) ಒಡಗೂಡಿದ ಭಾವನೆಗಳು ಅಥವಾ ಉದ್ದೇಶಗಳ ಬಗ್ಗೆ ಒಳನೋಟವನ್ನು ಒದಗಿಸುತ್ತವೆ.
ಈ ಕೃತಿಯು ಸುಪ್ತಮನಸ್ಸು ದೈನಂದಿನ ಜೀವನದಲ್ಲಿ ಹೇಗೆ ನಮ್ಮ ಮಾನಸಿಕ ಬದುಕನ್ನು ನಿಯಂತ್ರಿಸುತ್ತದೆ ಎಂಬುದನ್ನು ಒತ್ತಿಹೇಳುತ್ತದೆ, ಸಾಮಾನ್ಯ ಮನೋವಿಜ್ಞಾನ ಮತ್ತು ಮಾನಸಿಕ ಅಸ್ವಸ್ಥತೆಯ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಒಡಗೂಡಿದ ಆಸೆಗಳು ವರ್ತನೆಯ ಮೇಲೆ ಪ್ರಭಾವ ಬೀರುತ್ತವೆ ಎಂಬ ಫ್ರಾಯ್ಡ್ನ ವಿಶಾಲ ಮನೋವಿಶ್ಲೇಷಣೆ ಸಿದ್ಧಾಂತವನ್ನು ಒತ್ತಿಹೇಳುತ್ತದೆ. ಇದು ದೈನಂದಿನ ಸಂದರ್ಭಗಳಲ್ಲಿ ಮನೋವಿಶ್ಲೇಷಣೆಯನ್ನು ಅರ್ಥಮಾಡಿಕೊಳ್ಳಲು ಒಂದು ಮೂಲಭೂತ ಆಕರವಾಗಿದೆ.

ಕಾಮೆಂಟ್‌ಗಳಿಲ್ಲ: