Translate

ಭಾನುವಾರ, ಜುಲೈ 27, 2025

ಇಂದಿನ ವಿಶ್ವವಾಣಿಯಲ್ಲಿ (27/07/2025) ನನ್ನ ಕೃತಿ ಗಿಲ್ಗಮೆಶ್ ನ ಪರಿಚಯ/ವಿಮರ್ಶೆ

 ಇಂದಿನ ವಿಶ್ವವಾಣಿಯಲ್ಲಿ (27/07/2025) ನನ್ನ ಕೃತಿ ಗಿಲ್ಗಮೆಶ್ ನ ಪರಿಚಯ/ವಿಮರ್ಶೆ



ಸಾಹಸಿ ಗಿಲ್ಲಮೆಶ್

ನಿವೇದಿತಾ ಎಚ್. ಮೈಸೂರು

 

ನಾವು ಎಂದರೆ ಮನುಷ್ಯರಿಗೆ ಆಜೀವಪರ್ಯಂತ ಕಾಡುವ ಒಂದು ನಿಗೂಢತೆ. 'ಮರಣವೇ ಮಹಾನವಮಿ' ಎಂದು ಶರಣರ ಪರಂಪರೆ ಸಾರಿದೆಯಾದರೂ, ಸಾವಿಗೆ ಹೆದರಿದ ಯಯಾತಿ, ಪರೀಕ್ಷಿತ, ಹಿರಣ್ಯ ಕಶಿಪು, ಸಿಸಿಫಸ್ ನಂತಹವರು ಸೃಷ್ಟಿಸಿದ ಅವಾಂತರಗಳಿಗೆ ಜಗತ್ತು ಸಾಕ್ಷಿಯಾಗಿದೆ. ಅಂತಹುದೇ ಮತ್ತೊಂದು ಐತಿಹಾಸಿಕ ಹೆಸರು ಗಿಲ್ಗಮೆಶ್ ನದು. ಕ್ರಿ.ಪೂ. 2850-ಕ್ರಿ.ಪೂ. 2700 ರಲ್ಲಿ ಬದುಕಿದ್ದನೆನ್ನಲಾದ ಗಿಲ್ಗಮೆಶ್ ಸಾವನ್ನು ಗೆಲ್ಲಲು ಬಯಸಿದ್ದವನು.

 

ನಾಲ್ಕು ಸಾವಿರ ವರ್ಷಗಳ ಹಿಂದೆ ಮೆಸಪಟೋಮಿಯಾ ಅಂದರೆ ಈಗಿನ ಇರಾಕ್ ಮತ್ತು ಸಿರಿಯಾದಲ್ಲಿ ರಚಿತವಾಗಿ ರುವ ಗಿಲ್ಗಮೆಶ್ ಮಹಾಗಾಥೆ ಅತ್ಯಂತ ಪ್ರಾಚೀನ ಮಹಾ ಕಾವ್ಯವಾಗಿದೆ. ಅಕ್ಟೇಡಿಯನ್ ಭಾಷೆಯಲ್ಲಿ  ಕ್ಯೂನಿಫಾರಂ ಲಿಪಿ ಯಲ್ಲಿ ಬರೆಯಲಾಗಿದ್ದು ಜೇಡಿಮಣ್ಣಿನ ಫಲಕಗಳ ಮೇಲಿದೆ. ಗಿಲ್ಗಮೆಶ್ ಮೇಲೆ ಗೌರವ ಹೊಂದಿದ್ದ ಕ್ರಿ. ಪೂ. ಏಳನೆಯ ಶತಮಾನದಲ್ಲಿದ್ದ ದೊರೆ ಆಶುರ್ ಬನಿಪಾಲ ಮಹಾಗಾಥೆಯ ರಚನೆಯ ಹಿಂದಿನ ಪ್ರೇರಕ ಶಕ್ತಿ. ಅವನ ಗ್ರಂಥಾಲಯದಲ್ಲಿ ಸಿಕ್ಕ ಫಲಕಗಳನ್ನು ಮೊದಲು ಅರ್ಥೈ ಸಿಕೊಂಡು ಭಾಷಾಂತರಿಸಿದ್ದು ಜಾರ್ಜ್ ಸ್ಮಿತ್ ಎಂಬಾತ.

ಉರುಕ್ ಐದನೇ ದೊರೆಯಾಗಿದ್ದ ಗಿಲ್ಗಮೆಶ್ ದೈವಾಂಶ ಸಂಭೂತ, ಮಹಾ ಪರಾಕ್ರಮಿ; ಮಾತ್ರವಲ್ಲ, ಮಹಾಕ್ರೂರಿ, ಲೋಲುಪ, ನಿಷ್ಕರುಣಿಯಾಗಿದ್ದನು. ಇವನ ಕ್ರೌರ್ಯದಿಂದ ಜರ್ಝರಿತರಾದ ಜನ ಗೋಳಿಡುವುದನ್ನು ನೋಡಿ ಜನನದ ದೇವತೆ ಇವನಷ್ಟೇ ಪರಾಕ್ರಮಿಯಾದ 'ಎಂಕಿಡು'ವನ್ನು ಸೃಷ್ಟಿಸುತ್ತಾಳೆ. ದೇವಾಲಯದ ವೇಶ್ಯೆ ಶಹ್ಮತ್ಳಿಂದ ಪ್ರಭಾವಿತನಾಗಿ ನಾಡಿಗೆ ಬರುವ ಎಂಕಿಡು ಮತ್ತು ಗಿಲ್ಗಮೆಶ್ ನಡುವೆ ಮಧುರ ಬಾಂಧವ್ಯವೊಂದು ಬೆಳೆದು ಇಬ್ಬರೂ ಸ್ನೇಹಿತರಾಗುತ್ತಾರೆ. ನಂತರ ಜೊತೆಗೂಡಿ ಹುಂಬಾಬ ಎಂಬ ದೈತ್ಯ ಮತ್ತು ಸ್ವರ್ಗದ ಹೋರಿಯನ್ನು ಕೊಂದು ವಿಜಯಶಾಲಿಯಾಗುವ ಇಬ್ಬರೂ ಉರುಕ್ಗೆ ಹಿಂತಿರುಗುತ್ತಾರೆ. ಶಾಪಗ್ರಸ್ತನಾಗಿ ಎಂಕಿಡು ಮರಣವನ್ನಪ್ಪಿದ ಮೇಲೆ ದುಃಖಿತನಾದ ಗಿಲ್ಗಮೆಶ್ನಲ್ಲಿ ಅಮರತ್ವದ ಅಮಲೇರಿ, ಅಮರತ್ವದ ವರ ಪಡೆದ ತನ್ನದೇ ಕುಲದ ಉತನಪಿಷ್ತಿಮ್ನನ್ನು ಹುಡುಕಿ ಹೊರಡುತ್ತಾನೆ. ಸಾಕಷ್ಟು ನೋವು ಕಷ್ಟಗಳ ನಂತರ ಉತನಪಿಷ್ತಿಮ್ನನ್ನು ಭೇಟಿಮಾಡುತ್ತಾನಾದರೂ, ಅವನ ಉಪದೇಶದಿಂದ ಜ್ಞಾನೋದಯವಾಗುತ್ತದೆ. ನಂತರ ತನ್ನ ರಾಜ್ಯಕ್ಕೆ ಹಿಂತಿರುಗಿ ಪ್ರಜಾನುರಾಗಿಯಾಗಿ ಆಳ್ವಿಕೆ ನಡೆಸಿ ಮರಣ ಹೊ೦ದುತ್ತಾನೆ.

ನಾವು ಓದಿರುವ ಸಾಕಷ್ಟು ಜನಪದ ಕತೆಗಳಿಗೆ ಹೋಲುವ ಗಿಲ್ಗಮೆಶ್ ಕತೆ, ಅದರಲ್ಲಿನ ಮನುಷ್ಯ ಸ್ವಭಾವದ ಸಾರ್ವತ್ರಿಕ 'ತೆಯನ್ನು ಸಾರುವುದರಿಂದ ನಮಗೆ ಆಪ್ತವೆನಿಸುತ್ತದೆ. ಮನುಷ್ಯ ಎಂಬ ಒಂದು ಹಣೆಪಟ್ಟಿ ಸಾಕು ಅವನ ಸ್ವಭಾವ ಏಕರೂಪವೆನಿಸಲು, ಅದನ್ನು ಗಿಲ್ಗಮೆಶ್ ಗಾಥೆ ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ. ಸಾವಿಗೆ ಹೆದರಿದ ಗಿಲ್ಗಮೆಶ್ ಅನುಭವಿಸಿದ ನೋವು, ಸಂಕಟ, ಆರ್ತತೆ, ದೈನ್ಯ, ಅಸಹಾಯಕತೆ ಎಲ್ಲವೂ ಮನುಷ್ಯ ಜನ್ಮದ ಅಂತಿಮ ಸತ್ಯವನ್ನು ಜೀವನ ಎಲ್ಲರಿಗೂ ಅರ್ಥ ಮಾಡಿಸುವ ರೂಕ್ಷ ಪರಿಯನ್ನು ಹೇಳುತ್ತದೆ. ಅವನು ಯಾವನೇ ಆಗಿರಲಿ, ರಾಜನೋ ಸೇವಕನೋ, ಸಾವು ಭೇದ ಎಣಿಸುವುದಿಲ್ಲವೆಂಬ ಸತ್ಯದ ಅನಾವರಣ, ಅಮರತ್ವ ತಂದೊಡ್ಡುವ ನಿರರ್ಥಕತೆ ಎಲ್ಲವೂ ಗಿಲ್ಗಮೆಶ್ ಕತೆಯಲ್ಲಿದೆ. ಜೀವನದಲ್ಲಿ ನಾವು ಬದುಕುತ್ತಿರುವ ಕ್ಷಣವಷ್ಟೇ ನಮ್ಮದು ಎಂಬ ಸತ್ಯವನ್ನು ಮನಗಾಣಿಸುವ ಪ್ರಯತ್ನ ಕಥನದಲ್ಲಿದೆ.

ಪುರಾಣಗಳು ರಂಜನೀಯ ಮತ್ತು ಸ್ವಾರಸ್ಯಕರ ಹಾಗೆಯೇ ವೈವಿಧ್ಯಮಯ ಕೂಡಾಗಿಲ್ಗಮೆಶ್ ಕೂಡಾ ಅದಕ್ಕೆ ಹೊರತಲ್ಲಗಿಲ್ಗಮೆಶ್ ಇಲ್ಲಿ ಪವಿತ್ರ ಕಾಡುಹಸುವಿನ ದೇವತೆಯ ಮಗ, ಎ೦ಕಿಡು ಮೃಗಸದೃಶನಾದರೂ ಸ್ನೇಹಿ, ವಿಚಾರಶೀಲ! ಶಹ್ಮತ್ ಸಹೃದಯಿ ವೇಶ್ಯೆ, ದೇವರ ದೇವ ಅನು, ಜನನದ ದೇವತೆ ಅರೂರು, ಸೂರ್ಯದೇವ ಶಮಶ್‌, ಮದಿರೆ ತಯಾರಿಸುವ ಸಿದೂರಿ, ಉತನಪಿಷ್ತಿಮ್ ನಾವಿಕ ಉರ್ಶನಬಿ, ವಿವೇಕದ ದೇವತೆ ಇಯಾ, ಯುದ್ಧದೇವ ನಿನುರ್ತ, ಸುಂಟರಗಾಳಿಯ ದೇವತೆ ಎನ್ನಿಲ್ ಹೀಗೆ ವೈವಿಧ್ಯಮಯ ಪಾತ್ರಗಳು ಜೀವನದ ಸತ್ಯವನ್ನು ಗಿಲ್ಗಮೆಶ್‌ ಗೆ ಮಾತ್ರವಲ್ಲ ಓದುಗರಿಗೂ ತಲುಪಿಸುತ್ತವೆ. ಕನಸುಗಳು ಇಹಕ್ಕೂ ಪರಕ್ಕೂ ಸೇತುವೆಯಾಗುವ ರೀತಿ ಸ್ವಾರಸ್ಯಕರವಾಗಿದೆ.

104 ಪುಟಗಳಲ್ಲಿ ಮಹಾಗಾಥೆಯನ್ನು ತೆರೆದಿಡುವುದಕ್ಕೆ ಲೇಖಕರು ಹಲವು ಸಂಶೋಧಕರ, ಲೇಖಕರ ಇಂಗ್ಲಿಷ್ ಪುಸ್ತಕಗಳನ್ನು ಅರಗಿಸಿಕೊಂಡಿದ್ದಾರೆ! ಡಾ.ಜೆ.ಬಾಲಕೃಷ್ಣ ಅವರು ಗಿಲ್ಬಮೆಶ್ ಕತೆಯನ್ನು ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ.


ಕಾಮೆಂಟ್‌ಗಳಿಲ್ಲ: