Translate

ಶುಕ್ರವಾರ, ಸೆಪ್ಟೆಂಬರ್ 21, 2012

`ಪ್ರಜಾವಾಣಿ'ಯಲ್ಲಿ ನನ್ನ ಬ್ಲಾಗ್ ಪರಿಚಯ

ಈ ದಿನದ (21/09/12) `ಪ್ರಜಾವಾಣಿ'ಯ ಮೆಟ್ರೋ ಪುರವಣಿಯಲ್ಲಿ ನನ್ನ ಬ್ಲಾಗ್ ಪರಿಚಯವಿದೆ. ಪರಿಚಯಿಸಿದ `ಪ್ರಜಾವಾಣಿ'ಯ ಸಂಪಾದಕರಿಗೆ ಹಾಗೂ ಲೇಖಕರಾದ ಸಾಕ್ಷಿಯವರಿಗೆ ಧನ್ಯವಾದಗಳು.

ಲೇಖನದ ಲಿಂಕ್ ಇಲ್ಲಿದೆ: http://prajavani.net/include/story.php?news=10604&section=56&menuid=13

ಹಲವು ಸೆಲೆಗಳ `ಅಂತರಗಂಗೆ'



ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಜೆ. ಬಾಲಕೃಷ್ಣ ಅವರ ಬ್ಲಾಗ್ `ಅಂತರಗಂಗೆ` (antaragange.blogspot.in). 

`ಅಂತರಗಂಗೆ` ಎನ್ನುವ ಶಬ್ದದಲ್ಲೇ ಒಂದು ಬಗೆಯ ಆರ್ದ್ರತೆಯಿದೆ. ಇದು ಕಣ್ಣಿಗೆ ಕಾಣದ ಹರಿವು. ಗುಪ್ತಗಾಮಿನಿಯಂತೆ ಹರಿಯುವ ಈ ಹರಿವು ನೆಲದೊಳಗೂ ಇರಬಹುದು, ಮನುಷ್ಯನ ಎದೆಯೊಳಗೂ ಇರಬಹುದು. ಮನುಷ್ಯನೊಳಗಣ ಅಂತರಗಂಗೆಯ ಸೆಲೆಗಳನ್ನು ಜಾಗೃತಗೊಳಿಸುವುದೇ ಸಾಹಿತ್ಯದ ಉದ್ದೇಶವಲ್ಲವೇ? ಈ ನಿಟ್ಟಿನಲ್ಲಿ ಬಾಲಕೃಷ್ಣ ಅವರ ಬ್ಲಾಗ್‌ನ ತುಡಿತವಿದೆ. 

ಈ ಬ್ಲಾಗನ್ನು ಎರಡು ರೀತಿಯಲ್ಲಿ ನೋಡಬಹುದು. ಒಂದು ಬರಹದ ರೂಪದಲ್ಲಿ, ಇನ್ನೊಂದು ಚಿತ್ರರೂಪದಲ್ಲಿ. ಬಾಲಕೃಷ್ಣ ಅವರು ವ್ಯಂಗ್ಯಚಿತ್ರಕಾರರೂ ಹೌದು. ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ತಮ್ಮ ಕಾರ್ಟೂನ್‌ಗಳನ್ನು ಅವರಿಲ್ಲಿ ಒಟ್ಟು ಮಾಡಿದ್ದಾರೆ.
 ಈ ಚಿತ್ರಗಳಲ್ಲಿನ ಹರಿತ ವ್ಯಂಗ್ಯ ಓದುಗನಲ್ಲಿ ನವಿರು ಭಾವವನ್ನೂ ವಿಷಾದವನ್ನೂ ಮೂಡಿಸಬಲ್ಲದು. 

ಹಗರಣಗಳ ಕುರಿತಾದ ಒಂದು ಚಿತ್ರದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳ ವಿವರಗಳಿವೆ. ಆ ಚಿತ್ರದ ಅಡಿ ಟಿಪ್ಪಣಿ- “ಗಣಿತಶಾಸ್ತ್ರಕ್ಕೆ `ಸೊನ್ನೆ`ಯ ಕೊಡುಗೆ ನೀಡಿದವರು ಭಾರತೀಯರೇ ಅಲ್ಲವೆ!” ಎಂದು ಮಾರ್ಮಿಕವಾಗಿ ಹೇಳುತ್ತದೆ. ಶೌಚಾಲಯ ಒಳಗೊಂಡ ಬಸ್ಸಿನ ಕುರಿತ ಸುದ್ದಿಗೆ ಪ್ರತಿಕ್ರಿಯಿಸುವ ಚಿತ್ರದಲ್ಲಿ, ಗ್ರಾಮೀಣ ಪರಿಸರದ ಇಬ್ಬರು ಹೆಣ್ಣುಮಕ್ಕಳು ತಂಬಿಗೆ ಹಿಡಿದು “ಬಸ್ ಎಷ್ಟು ಹೊತ್ತಿಗೆ ಬರುತ್ತೆ?” ಎಂದು ನಿರೀಕ್ಷಿಸುತ್ತಿದ್ದಾರೆ.
 
ಒಲಿಂಪಿಕ್ಸ್ ಪಥ ಸಂಚಲನದಲ್ಲಿ ಅಪರಿಚಿತ ತರುಣಿಯೊಬ್ಬಳು ಭಾರತದ ಕ್ರೀಡಾಪಟುಗಳೊಂದಿಗೆ ಕಾಣಿಸಿಕೊಂಡಿದ್ದಳಲ್ಲ! ಆ ಘಟನೆಯನ್ನು ಚಿತ್ರವೊಂದರ ಪಾತ್ರ ಗೇಲಿ ಮಾಡುವುದು ಹೀಗೆ- “ನಾನೆಲ್ಲೋ ಮಾರುವೇಷದಲ್ಲಿರೋ ಸುರೇಶ್ ಕಲ್ಮಾಡಿ ಎಂದುಕೊಂಡಿದ್ದೆ”. ಹೀಗೆ ಸುದ್ದಿಯ ಹಿನ್ನೆಲೆ ಕೆದಕುತ್ತಾ ನಗೆಯ ಅಲೆಯೊಂದನ್ನೋ ವಿಷಾದದ ವರ್ತುಲವೊಂದನ್ನೋ ಸೃಷ್ಟಿಸುವುದು ಬಾಲಕೃಷ್ಣರಿಗೆ ಸಾಧ್ಯವಾಗಿದೆ. 

ಬಾಲಕೃಷ್ಣ ಅವರು ಒಳ್ಳೆಯ ಗದ್ಯ ಲೇಖಕರು. `ಮುಲ್ಲಾ ನಸ್ರುದ್ದೀನ್ ಕಥೆಗಳು` ಸರಣಿಯಲ್ಲಿ ಅವರೊಳಗೊಬ್ಬ ಕಥೆಗಾರ ಇರುವ ಸುಳಿವು ಕಾಣಿಸುತ್ತದೆ. ಮುತ್ತೋಡಿ, ಸ್ಟೋನ್ ಹೆಂಜ್- ಹೀಗೆ, ತಮ್ಮ ಅನುಭವಕ್ಕೆ ದಕ್ಕಿದ ಪ್ರವಾಸಿ ಸ್ಥಳಗಳ ಕುರಿತೂ ಅವರು ಬರೆದಿದ್ದಾರೆ.

`ಅಂತರಗಂಗೆ`ಯ ಮತ್ತೊಂದು ವಿಶೇಷ ವಿಜ್ಞಾನ ಬರಹಗಳು. ಇವು ಅಪ್ಪಟ ವೈಜ್ಞಾನಿಕ ಬರಹಗಳೇನಲ್ಲ. ವಿಜ್ಞಾನದ ವಿಷಯಗಳನ್ನು ಸಾಹಿತ್ಯದ ವಿದ್ಯಾರ್ಥಿಯೊಬ್ಬ ಹೇಗೆ ಬರೆಯಬಲ್ಲ ಎನ್ನುವುದಕ್ಕೆ ಇಲ್ಲಿನ ಲೇಖನಗಳು ಉದಾಹರಣೆಯಂತಿವೆ. ಇದಕ್ಕೆ ಉದಾಹರಣೆಯಾಗಿ `ಮೇರಿ ಶೆಲ್ಲಿಯ ಫ್ರಾಂಕೆನ್‌ಸ್ಟೈನ್- ಮೊಟ್ಟ ಮೊದಲ ವೈಜ್ಞಾನಿಕ ಕಾಲ್ಪನಿಕ ಕಥನ` ಬರಹವನ್ನು ನೋಡಬಹುದು. ಆ ಬರಹದ ಒಂದು ತುಣುಕು-
“ಹತ್ತೊಂಬತ್ತನೇ ಶತಮಾನದ ಪ್ರಾರಂಭದಲ್ಲಿ ರಾಬರ್ಟ್ ವಾಲ್ಟನ್ ಎಂಬ ಸಾಹಸಿ ನಾವಿಕ ತನ್ನ ಬದುಕಿನ ಧ್ಯೇಯವಾದ ಉತ್ತರ ಧ್ರುವವನ್ನು ತಲುಪಲು ಹೊರಟಿರುತ್ತಾನೆ.
 
ಆತ ತನ್ನ ಪಯಣ ಮತ್ತು ಸಾಹಸಗಳ ಬಗೆಗೆ ತನ್ನ ಸೋದರಿ ಸೆವೆಲ್‌ಳಿಗೆ ನಿಯಮಿತವಾಗಿ ಪತ್ರ ಬರೆಯುತ್ತಿರುತ್ತಾನೆ. ರಷಿಯಾದ ಹಿಮಾವೃತ ಸಾಗರದಲ್ಲಿ ತನ್ನ ಪಯಣ ಮುಂದುವರಿಸಿದ್ದಾಗ ಭಯಂಕರ ಚಳಿ ಮತ್ತು ಹಿಮದಲ್ಲಿ ಒಬ್ಬ ಬಸವಳಿದ ಹಾಗೂ ಸಾವಿನಂಚಿನಲ್ಲಿದ್ದ, ಬದುಕಿನಲ್ಲಿ ತೀರಾ ಹತಾಶನಾದಂತಹ ವ್ಯಕ್ತಿಯೊಬ್ಬ ದೊರೆತು ಆತನನ್ನು ಕಾಪಾಡುತ್ತಾನೆ. ಆತ `ತನ್ನಿಂದ ಓಡಿ ಹೋಗಿರುವ ರಕ್ಕಸನೊಬ್ಬನನ್ನು` ಅರಸುತ್ತಿರುವುದಾಗಿ ತಿಳಿಸುತ್ತಾನೆ.
 
ಆ ಅತ್ಯಂತ ಪ್ರತಿಕೂಲ ವಾತಾವರಣದಲ್ಲಿ ರಕ್ಕಸನನ್ನು ಅರಸುತ್ತ ಹೊರಟ ವ್ಯಕ್ತಿಯೇ ವಾಲ್ಟರ್ ಫ್ರಾಂಕೆನ್‌ಸ್ಟೈನ್. ಈ ಘಟನೆ ಬರುವುದು 1818ರ `ಫ್ರಾಂಕೆನ್‌ಸ್ಟೈನ್ ಆರ್ ದ ಮಾಡರ್ನ್ ಪ್ರೊಮೆಥೆಯೆಸ್` ಕಾದಂಬರಿಯಲ್ಲಿ. ಫ್ರಾಂಕೆನ್‌ಸ್ಟೈನ್ ಎನ್ನುವ ಪದ ಇಂದು ಒಂದು ರೂಪಕವಾಗಿ ವಿಜ್ಞಾನ ಜಗತ್ತಿನಲ್ಲಿ ಅತ್ಯಂತ ಜನಪ್ರಿಯವಾಗಿದೆ. 

ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿ `ಫ್ರಾಂಕೆನ್‌ಸ್ಟೈನ್` ಪದದ ಅರ್ಥ `ಒಂದು ಭಯಂಕರ ಭೂತ. ಪೆಡಂಭೂತ; ಸೃಷ್ಟಿಸಿದವನಿಗೇ ಎದುರಿಸಲು ಕಷ್ಟವಾದ ಯಾವುದೇ ಸಮಸ್ಯೆ` ಎಂದಿದೆ. 

ಬಾಲಕೃಷ್ಣ ಅವರು ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಅವರ `ಮಿಥುನ- ಲೈಂಗಿಕ ಮನೋವಿಜ್ಞಾನದ ಬರಹಗಳು` ಹಾಗೂ `ಕನಸೆಂಬ ಮಾಯಾಲೋಕ` ಕೃತಿಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲಿಕ್ಕೆ `ಅಂತರಗಂಗೆ`ಯಲ್ಲಿ ಅವಕಾಶ ಕಲ್ಪಿಸಲಾಗಿದೆ.     

ಮಂಗಳವಾರ, ಸೆಪ್ಟೆಂಬರ್ 11, 2012

ಮುಲ್ಲಾ ನಸ್ರುದ್ದೀನ್ ಕತೆಗಳ 9ನೇ ಕಂತು

ಸೆಪ್ಟೆಂಬರ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 9ನೇ ಕಂತು.
ಚಿತ್ರ: ಮುರಳೀಧರ ರಾಠೋಡ್




ಮೋಸಗಾರ ಫಕೀರ
ಆ ಊರಿಗೆ ಬಂದಿದ್ದ ಫಕೀರ ತಾನು ಮಂತ್ರದಿಂದ ಓದು ಬರಹ ಬಾರದ ಅನಕ್ಷರಸ್ಥರಿಗೂ ಸಹ ತತ್‌ಕ್ಷಣವೇ ಓದುವಂತೆ ಮಾಡಬಲ್ಲೆನೆಂದು ಹೇಳುತ್ತಿದ್ದ. ಆದರೆ ಯಾರೂ ಆತನ ಮಾತು ನಂಬಲಿಲ್ಲ. ಅನಕ್ಷರಸ್ಥನಾಗಿದ್ದ ನಸ್ರುದ್ದೀನನಿಗೆ ಬಹಳ ದಿನಗಳಿಂದ ಓದುವುದನ್ನು ಕಲಿಯಬೇಕೆಂಬ ಆಸೆ ಇತ್ತು, ಆದರೆ ಅದಕ್ಕೆ ಆತನಿಗೆ ಅವಕಾಶವೇ ಸಿಕ್ಕಿರಲಿಲ್ಲ. ಈಗ ಸುಲಭವಾಗಿ ಅದೂ ತತ್‌ಕ್ಷಣವೇ ಓದಲು ಕಲಿಯಲು ಅವಕಾಶ ಸಿಕ್ಕಿರುವಾಗ ಏಕೆ ಬಿಡಬೇಕೆಂದು ಆತ ಮುಂದೆ ಬಂದ. ಫಕೀರ ನಸ್ರುದ್ದೀನ್‌ನನ್ನು ಮುಂದೆ ಕೂಡ್ರಿಸಿಕೊಂಡು ಅದೇನೋ ಮಂತ್ರವನ್ನು ಗುಣಗುಣಿಸಿ ತನ್ನ ಮಂತ್ರದಂಡವನ್ನು ಆತನ ತಲೆಯಮೇಲಿರಿಸಿ ‘ಹೋಗು ಈಗ ನಿನಗೆ ಓದಲು ಬರುತ್ತದೆ’ ಎಂದು ಹೇಳಿ ಕಳುಹಿಸಿದ. ನಸ್ರುದ್ದೀನ್ ಸಂತೋಷದಿಂದ ಓಡಿದ.
ಜನ ನೋಡುತ್ತಿರುವಂತೆ ನಸ್ರುದ್ದೀನ್ ಓಡುತ್ತಾ ಬಂದ. ಆತನ ಮುಖ ಕೋಪದಿಂದ ಬುಸುಗುಡುತ್ತಿತ್ತು ಹಾಗೂ ಆತನ ಕೈಯಲ್ಲಿ ಒಂದು ಪುಸ್ತಕವೂ ಇತ್ತು. ಫಕೀರನ ಬಳಿ ಇದ್ದ ಜನರೆಲ್ಲಾ ನಸ್ರುದ್ದೀನನ ಮುಖವನ್ನು  ನೋಡಿ, ‘ಏಕೆ ನಸ್ರುದ್ದೀನ್ ಫಕೀರನ ಮಾಯಾ ಮಂತ್ರ ನಿನಗೆ ಓದು ಕಲಿಸಿಕೊಡಲಿಲ್ಲವೆ?’ ಎಂದು ಕೇಳಿದರು. ‘ಓದಲು ಕಲಿತಿದ್ದೇನೆ. ಆದರೆ ನಾನು ವಾಪಸ್ಸು ಬಂದದ್ದು ಅದಕ್ಕಲ್ಲ. ಎಲ್ಲಿ ಹೋದ ಮೋಸಗಾರ ಫಕೀರ?’ ಎಂದು ಕೇಳಿದ.
‘ಏನು? ನಿನಗೆ ಒಂದು ನಿಮಿಷದಲ್ಲಿ ಓದಲು ಕಲಿಸಿದ ಫಕೀರ ಮೋಸಗಾರನೆಂದು ಕರೆಯುತ್ತಿದ್ದೀಯಾ?’ ಎಂದರು ಅಲ್ಲಿದ್ದ ಜನರು. 
‘ಹೌದು, ಮನೆಗೆ ಹೋದ ತಕ್ಷಣ ಈ ಪುಸ್ತಕ ಓದಿದೆ. ನೋಡಿ, ಇದರಲ್ಲಿ ಫಕೀರರೆಲ್ಲಾ ಮೋಸಗಾರರು ಎಂದು ಬರೆದಿದೆ’ ಎಂದ ತನ್ನ ನಸ್ರುದ್ದೀನ್ ತನ್ನ ಬಳಿ ಇದ್ದ ಪುಸ್ತಕ ತೋರಿಸುತ್ತಾ.

ಚಳಿ
ಅದೊಂದು ಚಳಿಗಾಲದ ದಿನ. ಉಣ್ಣೆಯ ಬಟ್ಟೆ ಧರಿಸಿದ್ದರೂ ಚಳಿ ತಡೆಯಲಾಗದೆ ಆತ ಗಡಗಡ ನಡುಗುತ್ತಿದ್ದ. ಆತನ ಎದುರಿಗೆ ಮುಲ್ಲಾ ನಸ್ರುದ್ದೀನ್ ನಡೆದು ಹೋಗುತ್ತಿದ್ದ. ನಸ್ರುದ್ದೀನ್ ತೆಳುವಾದ ಬಟ್ಟೆ ಧರಿಸಿದ್ದರೂ ಆತನ ಮೇಲೆ ಚಳಿ ಯಾವುದೇ ಪ್ರಭಾವ ಬೀರಿದಂತಿರಲಿಲ್ಲ. ಚಳಿಯಲ್ಲಿ ನಡುಗುತ್ತಿದ್ದಾತ ನಸ್ರುದ್ದೀನ್‌ನನ್ನು ಕರೆದು, ‘ಮುಲ್ಲಾ ನಾನು ಇಷ್ಟೊಂದು ಉಣ್ಣೆ ಬಟ್ಟೆ ಧರಿಸಿದ್ದರೂ ಚಳಿ ತಡೆಯಲಾಗದೆ ಗಡಗಡ ನಡುಗುತ್ತಿದ್ದೇನೆ. ನೀನು ಅಷ್ಟು ತೆಳುವಾದ ಬಟ್ಟೆ ಧರಿಸಿದ್ದರೂ ಆರಾಮವಾಗಿ ಓಡಾಡುತ್ತಿದ್ದೀಯಲ್ಲಾ. ನಿನ್ನಿಂದ ಅದು ಹೇಗೆ ಸಾಧ್ಯ?’ ಎಂದು ಕೇಳಿದ.
ಆ ಮಾತಿಗೆ ನಸ್ರುದ್ದೀನ್, ‘ನೋಡಿ. ನನ್ನ ಬಳಿ ಇರುವುದು ಈಗ ನಾನು ಧರಿಸಿರುವ ಬಟ್ಟೆ ಮಾತ್ರ. ಹಾಗಾಗಿ ಚಳಿಯನ್ನು ಅನುಭವಿಸುವಂತಹ ಸಿರಿತನ ನನ್ನಲ್ಲಿಲ್ಲ. ನಿಮ್ಮ ಬಳಿ ಬೇಕಾದಷ್ಟು ಬಟ್ಟೆಗಳಿವೆ ಹಾಗೂ ಅದರಿಂದಾಗಿ ಚಳಿಯನ್ನು ಅನುಭವಿಸುವಂತಹ ಸ್ವಾತಂತ್ರ್ಯವೂ ನಿಮಗಿದೆ’ ಎಂದ.

ಕತ್ತೆ ಮತ್ತು ಹಸು
ಒಂದು ದಿನ ನಸ್ರುದ್ದೀನ್‌ನ ಪತ್ನಿ ‘ನಾವೊಂದು ಹಸುವನ್ನು ಸಾಕಿಕೊಳ್ಳೋಣ. ಅದರಿಂದಾಗಿ ನಾವು ಹಾಲಿಗೆ ಪರದಾಡುವುದು ತಪ್ಪುತ್ತದೆ’ ಎಂದಳು. ನಸ್ರುದ್ದೀನನಿಗೆ ಹಸು ಸಾಕುವುದು ಇಷ್ಟವಿರಲಿಲ್ಲ, ಏಕೆಂದರೆ ಅವನ ಕೊಟ್ಟಿಗೆ ಚಿಕ್ಕದಾಗಿದ್ದು ಅದರಲ್ಲಿ ಅವನ ಪ್ರೀತಿಪಾತ್ರವಾದ ಕತ್ತೆಗೆ ಸಾಕಾಗುವಷ್ಟು ಮಾತ್ರ ಜಾಗವಿತ್ತು. ಆದರೂ ಅವನ ಹೆಂಡತಿಯು ತನ್ನ ಹಠ ಬಿಡಲಿಲ್ಲ. ಕೊನೆಗೆ ಒಂದು ಹಸುವನ್ನು ಕೊಂಡುತಂದರು. ಹಸುವನ್ನು ಕೊಟ್ಟಿಗೆಗೆ ಕೊಂಡೊಯ್ದಾಗ ಅಲ್ಲಿ ಅವನು ಊಹಿಸಿದಂತೆಯೇ ಇತ್ತು. ಹಸು ಮತ್ತು ಕತ್ತೆಯನ್ನು ಒಟ್ಟಿಗೇ ಕಟ್ಟಿದಾಗ ಆ ಎರಡು ಪ್ರಾಣಿಗಳಿಗೂ ಇಕ್ಕಟ್ಟಾಗಿತ್ತು. ತನ್ನ ಕತ್ತೆಗೆ ಹಿಂಸೆಯಾಗುತ್ತಿರುವುದನ್ನು ಸಹಿಸದ ನಸ್ರುದ್ದೀನ್ ಆ ದಿನ ರಾತ್ರಿ ಮಲಗುವಾಗ, ‘ಹೋ ದೇವರೇ! ಬೆಳಗಾಗುವಷ್ಟರಲ್ಲಿ ಆ ಹಸು ಸತ್ತು ಹೋಗಿರಲಿ. ಅದರಿಂದಾದರೂ ನನ್ನ ಹೆಂಡತಿ ಸುಮ್ಮನಾಗಬಹುದು. ಮತ್ತೊಂದು ಹಸು ತರಲು ಆಕೆ ಒತ್ತಾಯ ಮಾಡುವುದಿಲ್ಲ. ನನ್ನ ಕತ್ತೆ ತನ್ನ ಕೊಟ್ಟಿಗೆಯಲ್ಲಿ ಆರಾಮವಾಗಿರುತ್ತದೆ’ ಎಂದು ಪ್ರಾರ್ಥಿಸಿದ.
ಬೆಳಗಾಗೆದ್ದು ನೋಡಿದಾಗ ಕೊಟ್ಟಿಗೆಯಲ್ಲಿ ನಸ್ರುದ್ದೀನನ ಪ್ರೀತಿಪಾತ್ರ ಕತ್ತೆ ಸತ್ತುಬಿದ್ದಿತ್ತು. ಆತನಿಗೆ ವಿಪರೀತ ಸಿಟ್ಟುಬಂತು. ‘ದೇವರೇ! ನಿನಗೇನು ಬುದ್ದಿ ಇದೆಯೋ ಇಲ್ಲವೋ? ಇಷ್ಟು ವರ್ಷಗಳ ನಂತರವೂ ನಿನಗೆ ನಿನಗೆ ಕತ್ತೆ ಮತ್ತು ಹಸುವಿನ ನಡುವಿನ ಅಂತರವೇ ತಿಳಿದಿಲ್ಲವಲ್ಲಾ!’ ಎಂದು ಗೊಣಗಿದ.

ಅರ್ಧಪಾಲು ಮಗು
ಸರಿ ರಾತ್ರಿಯಲ್ಲಿ ಮಗು ಜೋರಾಗಿ ಅಳುತ್ತಿತ್ತು. ನಸ್ರುದ್ದೀನನ ಪತ್ನಿ ಆತನನ್ನು ಎಬ್ಬಿಸಿ, ‘ನೋಡು ಮಗು ಅಳುತ್ತಿದೆ. ನನಗೂ ಸಾಕಾಗಿದೆ. ಮಗುವಿನಲ್ಲಿ ನಿನ್ನದೂ ಅರ್ಧ ಪಾಲಿದೆಯಲ್ಲವೆ? ಹೋಗಿ ಮಗುವಿಗೆ ನಿದ್ರೆ ಮಾಡಿಸು’ ಎಂದಳು. ಅದಕ್ಕೆ ನಸ್ರುದ್ದೀನ್, ‘ನೀನು ಹೋಗಿ ನಿನ್ನ ಅರ್ಧ ಪಾಲು ಮಗುವಿಗೆ ನಿದ್ರೆ ಮಾಡಿಸು. ನನ್ನ ಅರ್ಧ ಪಾಲು ಅತ್ತರೆ ಅಳಲಿ’ ಎಂದು ಮಗ್ಗುಲು ಬದಲಿಸಿದ.


ಗಣಿತ ಶಾಸ್ತ್ರಕ್ಕೆ ಸೊನ್ನೆಯ ಕೊಡುಗೆ!

ವಿಜಯವಾಣಿ ಪತ್ರಿಕೆಯ 9/9/12ರ ಸಂಚಿಕೆಯಲ್ಲಿ ಪ್ರಕಟವಾದ ನನ್ನ ವ್ಯಂಗ್ಯಚಿತ್ರ

ಗುರುವಾರ, ಆಗಸ್ಟ್ 16, 2012

ಅನುಭಾವದ ಅದ್ಭುತ ನೀಲ ಜಗತ್ತು- ಮುತ್ತೋಡಿ


ಈ ವಾರದ `ಸುಧಾ'ದಲ್ಲಿ ಪ್ರಕಟವಾದ ನನ್ನ ಚಿತ್ರ ಲೇಖನ:


ಚಿಕ್ಕಮಗಳೂರು ದಾಟುತ್ತಿದ್ದಂತೆ ಮಳೆಯ ಜಿಟಿಜಿಟಿ ಹೆಚ್ಚಾಯಿತು. ಕತ್ತಲಾಗುವುದರೊಳಗೆ ಮುತ್ತೋಡಿ ಸೇರಬೇಕೆಂದು ಹೊರಟಿದ್ದೆವು. ಬೇಸಿಗೆ ಮತ್ತು ಮಳೆಗಾಲದ ಸಂದಿಕಾಲದ ಸಮಯ. ಒಂದೆರಡು ದಿನದ ಮಳೆ, ವಾತಾವರಣ ಹಾಗೂ ಭೂಗೋಳದ ಜೊತೆಗೆ ಮನಸ್ಸನ್ನೂ ಸಹ ಸಂಪೂರ್ಣ ಬದಲಿಸಿಬಿಟ್ಟಿತ್ತು. ಮಲ್ಲಂದೂರು ದಾಟಿ ಮುತ್ತೋಡಿಯ ಕಡೆಗೆ ನಮ್ಮ ವಾಹನ ಚಲಿಸುತ್ತಿರುವಂತೆ ಕೊರಕಲು `ಸಿಂಗಲ್ ರೋಡ್' ಎಲ್ಲರ ಎದೆಬಡಿತ ಹೆಚ್ಚಿಸಿ ಮಾತು ನಿಲ್ಲಿಸಿತ್ತು. ಕಾಣಿಸುತ್ತಿದ್ದ ಬೆಟ್ಟಗಳನ್ನು ಮಂಜಿನ ಮೋಡಗಳು ಮರೆಮಾಡಲು ಯತ್ನಿಸುತ್ತಿದ್ದವು. ಸೋನೆ ಮಳೆಗೆ ಮರಗಳೆಲ್ಲ ತೊಯ್ದು ಧ್ಯಾನಾವಸ್ಥೆಯಲ್ಲಿದ್ದಂತಿದ್ದವು. ಪಕ್ಕದ ಕಣಿವೆಯಲ್ಲಿ ಹರಿಯುವ ನೀರಿನ ಸದ್ದು, ಕಾರಿನ ಮೇಲೆ ಬೀಳುವ ಮಳೆಯ ನೀರಿನ ಟಪಟಪ ಸದ್ದು ಹಾಗೂ ಪಕ್ಷಿಗಳ ಕಲರವ ಒಂದು ನವನವೀನ ಪ್ರಕೃತಿ ರಾಗದ ಸಂಗೀತ ಗೋಷ್ಠಿ ನಡೆಸುತ್ತಿತ್ತು.
ಮುಖ್ಯ ರಸ್ತೆಯಿಂದ ಶೀಗೆಕಾನ್ ಕಡೆಗೆ ತಿರುಗಿದ ನಮ್ಮ ವಾಹನ ಉಳಿದ ಮೂರು ಕಿಲೋಮೀಟರ್ ಕ್ರಮಿಸುವುದೇ ಎಂಬ ಸಂಶಯವಾಗತೊಡಗಿತು. ಏರು ಕಾಡುಹಾದಿ, ಕೆಲಗಂಟೆಗಳ ಹಿಂದಷ್ಟೇ ಹಾಕಿರಬಹುದಾದ ಆನೆಯ ಲದ್ದಿ, ಸುತ್ತಮುತ್ತಲೂ ಒಬ್ಬ ಮನುಷ್ಯನೂ ಇಲ್ಲದ ಜಿಟಿಜಿಟಿ ಮಳೆಯ ಗವ್ವೆಂದು ಮೋಡಕವಿದಿರುವ ವಾತಾವರಣ, ಇವೆಲ್ಲದಕ್ಕೂ ಹೆದರಿ ಮರೆಯಾಗುತ್ತಿರುವಂತಿರುವ ಸೂರ್ಯ ಒಂದು ರೀತಿಯ ಆತಂಕ ಉಂಟುಮಾಡುತ್ತಿತ್ತು. ಹಾದಿಯ ಎಡೆಗಳಲ್ಲಿ ಎಂದೋ ಉರುಳಿ ಬಿದ್ದಿರುವ ಮರಗಳು, ಸಿಡಿಲಿಗೆ ಬಲಿಯಾಗಿ ಮೋಟು ಕಂಬಗಳಂತಾಗಿರುವ ದೈತ್ಯ ಮರಗಳು ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತಿತ್ತು.
ಕಾರಿನಲ್ಲಿದ್ದ ಮಕ್ಕಳು, ಹೆಂಗಸರಿಗೆ ಕೊನೆಯ ಮೂರು ಕಿಲೋಮೀಟರುಗಳ ಹಾದಿ ಮೂರು ಯುಗಗಳಂತೆ ಕಂಡಿತ್ತು. ಕೊನೆಗೂ ಫಾರೆಸ್ಟ್ ಗೆಸ್ಟ್ ಹೌಸ್ ಕಂಡಾಗ ಎಲ್ಲರೂ ಸಂತೋಷದ ಉದ್ಗಾರ ಮಾಡಿದರು. ಗೆಸ್ಟ್ ಹೌಸ್ನ ಬಾಲ್ಕನಿಯಲ್ಲಿ ನಿಂತು ಕಂಡ ದೃಶ್ಯ ಬಹುಶಃ ಜೀವನದಲ್ಲಿ ನಾವೆಂದೂ ಕಂಡಿರದ ದೃಶ್ಯ. ಕಣ್ಣಿನ ದೃಷ್ಠಿ ಎತ್ತ ಹರಿಸಿದರೂ ಹಸಿರು ಹಾಸಿನಂತಿರುವ ದಟ್ಟ ಕಾಡು, ದಿಗಂತದಲ್ಲಿ ಮೋಡಗಳೊಂದಿಗೆ ಚೆಲ್ಲಾಟವಾಡುತ್ತಿರುವ ಬೆಟ್ಟಗಳು. ಆತಂಕದಿಂದ ಮುದುಡಿದ್ದ ಎಲ್ಲರ ಮನಗಳು ಒಮ್ಮೆಲೇ ಗರಿಗೆದರಿ ಹಾರಾಡತೊಡಗಿದವು. ಹಕ್ಕಿಯ ಕಲರವದಂತೆಯೇ ಇತ್ತು ಅವರವರ ವಿಶಿಷ್ಟ ಉದ್ಗಾರಗಳು.
ಮಳೆಯಿಂದಾಗಿ ವಾತಾವರಣ ಮತ್ತಷ್ಟು ಸುಂದರವಾಗಿತ್ತು. ಅಲ್ಲೇ ಕುರ್ಚಿಯ ಮೇಲೆ ಕೂತು ಮಂಜುಕವಿದ ಬೆಟ್ಟಗಳನ್ನು, ಹಸಿರು ಹಾಸಿನ ಕಾಡನ್ನು, ಸುರಿಯುವ ಮಳೆಯನ್ನು ನೋಡುತ್ತಿರುವಂತೆ ಮನಸ್ಸು ಧ್ಯಾನಮಗ್ನವಾಗುತ್ತದೆ, ಅನುಭಾವದ ಅವರ್ಣನೀಯ ಅನುಭವ ನಮಗರಿವಿಲ್ಲದೆ ನಮ್ಮ ಮನಸ್ಸನ್ನು ಆವರಿಸತೊಡಗುತ್ತದೆ, ಇಷ್ಟೂ ದಿನ ಮುಚ್ಚಿದ್ದ ಮನಸ್ಸಿನ ಕಿಟಕಿಗಳು ಒಂದೊಂದೇ ತೆರೆದುಕೊಳ್ಳಲಾರಂಭಿಸುತ್ತವೆ. ಒಂದೊಂದು ಕಿಟಕಿಯಲ್ಲೂ ಕಾಣುವ ನೋಟ ವಿಶಿಷ್ಟವಾದುದು, ವಿಭಿನ್ನವಾದುದು. ಆದಮ್ಯ ಸಂತೋಷದ ಧನ್ಯತಾಭಾವಕ್ಕೆ ಶರಣಾಗತೊಡಗುತ್ತೇವೆ. ಇದು ಪ್ರಕೃತಿಯ ನಿಗೂಢಗಳ ಸಂಕೀರ್ಣತೆಯೋ ಅಥವಾ ಮಹಾತ್ಮ ಗಾಂಧಿ ಹೇಳುವಂತೆ ಸರಳ ನಿರೂಪಣೆಯ, ನೇರ ಅಭಿವ್ಯಕ್ತಿಯ ಪ್ರಕೃತಿಯ ಭಾಷೆಯೋ.....ಜಗತ್ತಿನಲ್ಲಿ ಏನುಂಟು ಏನಿಲ್ಲ, ಮನಸ್ಸಿನ ಬೆಳಕಿಂಡಿ ಇರುವುದೆಲ್ಲಿ? ಮನಸ್ಸಿನ ಕತ್ತಲ ಕೋಣೆಯಲ್ಲಿರುವ ನಿಗೂಢಗಳಂತೆ ಪ್ರಕೃತಿಯಲ್ಲೂ ಎಷ್ಟೊಂದು ನಿಗೂಢಗಳಿವೆ. ಆ ಎಲ್ಲ ನಿಗೂಢಗಳನ್ನು ವಿಜ್ಞಾನದ ಭೂತಕನ್ನಡಿ ಕಾಣಬಲ್ಲುದೆ? ನೋಡಿದಲ್ಲಿ ನಾವು ಕಾಣುವುದಾದರೂ ಏನು? ಬಿಳಿಬೆಳಕನ್ನು ಛೇಧಿಸಿ ಕಾಮನಬಿಲ್ಲಿನ ಬಣ್ಣ ಪಡೆಯಬಹುದು, ಧೂಳಿನ ಕಣಗಳಿಂದ ವಿಚ್ಛಿಧ್ರವಾಗುವ ಬೆಳಕಿನ ಲಕ್ಷಣದಿಂದ ನೀಲಾಗಸವನ್ನು ವಿವರಿಸಬಹುದು. ಆದರೆ ಆ ನೀಲಾಗಸದ ಅಥವಾ ಬಿಸಿಲ್ಗುದುರೆಯ ಸೌಂದರ್ಯದ ಗ್ರಹಿಕೆಯಿಂದುಂಟಾಗುವ ಆನಂದವನ್ನು ವಿವರಿಸಲು ಸಾಧ್ಯವೆ?
ನೋಡನೋಡುತ್ತಿರುವಂತೆ ಕತ್ತಲಾಯಿತು. ಗೆಸ್ಟ್ ಹೌಸ್ನಲ್ಲಿ ಮನಸ್ಸಿನ ಸ್ಥಿಮಿತ ತಪ್ಪಿಸುವ ಟಿ.ವಿ. ಹಾಗೂ ವಿದ್ಯುತ್ ಇಲ್ಲದಿದ್ದುದು ಸಂತೋಷ ತಂದಿತು. ಇವುಗಳಿಂದುಂಟಾದ ನಿಶ್ಶಬ್ದದ ಸದ್ದು ವಾತಾವರಣದ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಊಟ ಮಾಡಿ ಮಲಗಿದ ನಮಗೆ ರಾತ್ರಿಯೆಲ್ಲಾ ಮಳೆಯ ಸದ್ದು, ಆಗಾಗ ಕೇಳಿಸುವ ಕಾಡುಪ್ರಾಣಿಯ ಶಬ್ದಗಳು ಮಾತ್ರ ಕೇಳಿಸುತ್ತಿತ್ತು. ಬೆಳಿಗ್ಗೆ ಆರು ಗಂಟೆಗೇ ಕಾಡನ್ನು ನೋಡಲು ಹೋಗೋಣವೆಂದು ಮೇಟಿ ಸಂತೋಷ್ ತಿಳಿಸಿದ.
ನಾನು ಸೂರ್ಯನಿಗಿಂತ ಮೊದಲೇ ಎದ್ದು ಅನುಭಾವದ ಬೆಟ್ಟಗುಡ್ಡಗಳ ಮೇಲೆ ಆತನ ನೆಳಲು ಬೆಳಕಿನಾಟವನ್ನು ಕಾಣಲು ಒಬ್ಬನೇ ಬಾಲ್ಕನಿಯಲ್ಲಿ ಕೂತೆ. ಸೂರ್ಯನ ಬೆಳಕು ಕೊಂಚಕೊಂಚ ಕಂಡಂತೆ ಆಗಸ ಹಾಗೂ ಬೆಟ್ಟಗಳು ವಿಚಿತ್ರ ನೀಲಿಬಣ್ಣ ಪಡೆಯಲಾರಂಭಿಸಿದವು. ವಿಚಿತ್ರ ನೀಲಿ- ನಾನೆಂದೂ ಕಂಡಿರದ ಅನುಭಾವದ ಅದ್ಭುತ ನೀಲಜಗತ್ತು! ಈ ಅನುಭಾವದ ಅನುಭವ ಆಕಸ್ಮಿಕವೆ ಅಥವಾ ಆದಮ್ಯ ಸಂತೋಷದ ಧನ್ಯತಾಭಾವಕ್ಕೆ ಶರಣಾಗತೊಡಗಿದಂತೆ ಸಾಮಾನ್ಯವೂ ಅದ್ಭುತವಾಗಿರುವಂತೆ ಕಾಣುವ ಕಣ್ಕಟ್ಟು ಮೋಡಿಯೆ? ಮನಸ್ಸಿನ ಎಲ್ಲ ಕಿಟಕಿಗಳು ತೆರೆದಾಗ ನಾವು ಅವುಗಳಿಂದ ಏನು ನೋಡುತ್ತೇವೆನ್ನುವುದು ಮುಖ್ಯವಾಗುವುದಿಲ್ಲ, ನಾವು ಹೇಗೆ ನೋಡುತ್ತೇವೆನ್ನುವುದು ಮುಖ್ಯವಾಗುತ್ತದೆ. ಈ ಗ್ರಹಿಕೆಯ ಸತ್ಯ ಸಾರ್ವ್ರತ್ರಿಕವಲ್ಲ, ಸಾಪೇಕ್ಷವಾದುದು. ಆದರೆ, ಯಾರೋ ಅಜ್ಞಾತ ಅನುಭಾವಿ ಹೇಳಿರುವಂತೆ ಸತ್ಯ ಸತ್ಯವಾಗುವುದು ಆ ಸತ್ಯವನ್ನು ನಾವು ಅನುಭವಿಸಿ ಬದುಕಿದಾಗಲೇ.
ಸಂತೋಷ್ ಬಂದು ಕರೆದಾಗ ಕಾಡಿನಲ್ಲಿ ಸುತ್ತಾಡಲು ಹೊರಟೆವು. ಮಳೆ ಸ್ವಲ್ಪ ಬಿಡುವು ಕೊಟ್ಟಿತ್ತು. ಶೀಗೆಕಾನ್ನಿಂದ ನಾಲ್ಕು ಕಿಲೋಮೀಟರ್ ದೂರದ ಮುತ್ತೋಡಿಗೆ ಹೊರಟು ಅಲ್ಲಿಂದ ಜೀಪಿನಲ್ಲಿ ಪ್ರಯಾಣ ಬೆಳೆಸಿತು ನಮ್ಮ ತಂಡ. ಜಿಂಕೆಗಳು, ಹತ್ತಾರು ನವಿಲುಗಳು, ಕಾಡುಕೋಳಿ, ಕಾಡುಕುರಿಗಳ ಜೊತೆಗೆ ಜೀಪಿಗೆ ಎದುರಾದವು ನಾಲ್ಕು ಕಾಡೆಮ್ಮೆಗಳು. ಮುನ್ನೂರು ವರ್ಷದ ಸಾಗುವಾನಿ ಮರವನ್ನು ಇಲಾಖೆಯ ಶಿವಾನಂದ್ ತೋರಿಸಿದರು. ಶೀಗೆಕಾನ್ಗೆ ಹಿಂದಿರುಗುವಷ್ಟರಲ್ಲಿ ಎರಡು ಕಡೆ ಮರಗಳು ರಸ್ತೆಯಲ್ಲಿ ಅಡ್ಡಬಿದ್ದಿದ್ದವು. ಬೇರೊಂದೆಡೆ ಆನೆ ತಾನು ಹಾಯ್ದುಹೋಗಿರುವ ಗುರುತು ಬಿಟ್ಟಿತ್ತು.
ಮತ್ತೆ ಮಳೆ ಶುರುವಾಯಿತು. ಈ ಪಶ್ಚಿಮಘಟ್ಟಗಳು ಒಮ್ಮೊಮ್ಮೆ ಒಂದೊಂದು ರೀತಿ ಕಾಣುತ್ತವೆ. ಸಂಜೆ, ಮುಂಜಾನೆ, ಮಧ್ಯಾಹ್ನ, ಮಳೆಯಲ್ಲಿ, ಬಿಸಿಲಲ್ಲಿ- ಪ್ರತಿಯೊಂದು ಸಮಯವೂ ಒಂದೊಂದು ರೀತಿಯ ವಿಭಿನ್ನ ದೃಶ್ಯ- ಅನುಭಾವದ ಅನುಭವದಂತೆ ಪ್ರತಿಯೊಂದು ಅನುಭವವೂ ವಿಭಿನ್ನ, ಪ್ರತಿಯೊಂದು ಸತ್ಯವೂ ವಿಭಿನ್ನ. ನಮಗೆ ಈ ಅದ್ಭುತಾವಂದವನ್ನು ಸವಿಯಲು ಅವಕಾಶ ಮಾಡಿಕೊಟ್ಟ ಅರಣ್ಯ ಉಪ ಸಂರಕ್ಷಣಾಧಿಕಾರಿ ಧನಂಜಯ ಮತ್ತು ಗೆಳೆಯ ಗಂಗರಾಜ್ರವರಿಗೆ ಮೊಬೈಲ್ ಮೂಲಕ ವಂದಿಸಿ ಕಾಡಿನ ಮರಗಳನ್ನು, ಘಟ್ಟಗಳನ್ನು, ಆಗಸದಿಂದ ಭೂಮಿಗೆ ಸೇತುವೆ ನಿರ್ಮಿಸಿದ್ದ ಮೋಡಗಳನ್ನು ನೋಡುತ್ತ ವಾಪಸ್ಸು ಹೊರಡುವಾಗ ಝೆನ್ ಹೇಳಿಕೆಯೊಂದು ನೆನಪಾಯಿತು: `ಜ್ಞಾನೋದಯದ ಮೊದಲು ಮರಗಳು ಮರಗಳಾಗಿದ್ದವು ಹಾಗೂ ಪರ್ವತಗಳು ಪರ್ವತಗಳಾಗಿದ್ದವು. ಜ್ಞಾನೋದಯದ ನಂತರವೂ ಮರಗಳು ಮರಗಳಾಗೇ ಉಳಿದಿವೆ ಹಾಗೂ ಪರ್ವತಗಳು ಪರ್ವತಗಳಾಗೇ ಉಳಿದಿವೆ.' ಆದರೆ ಮನಸ್ಸು ಮಾತ್ರ ಅದ್ಭುತ ಬದಲಾವಣೆಯಿಂದ ಹಾಡುತ್ತಿತ್ತು.
ಚಿತ್ರ ಲೇಖನ: ಜೆ. ಬಾಲಕೃಷ್ಣ

ಗುರುವಾರ, ಆಗಸ್ಟ್ 02, 2012

ಮುಲ್ಲಾ ನಸ್ರುದ್ದೀನ್ ಕತೆಗಳು- 8

ಆಗಸ್ಟ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 8ನೇ ಕಂತು.
ಚಿತ್ರ: ಮುರಳೀಧರ ರಾಠೋಡ್

ಮುಠ್ಠಾಳ
ನಸ್ರುದ್ದೀನ್ ಸಂತೆಯ ದಿನ ರಸ್ತೆ ಬದಿಯಲ್ಲಿ ಬಿಕ್ಷೆ ಬೇಡಲು ನಿಲ್ಲುತ್ತಿದ್ದ. ಜನರೆಲ್ಲರೂ ಅವನನ್ನು ಮುಠ್ಠಾಳನೆಂದು ಕರೆಯುತ್ತಿದ್ದರು, ಏಕೆಂದರೆ ಅವನಿಗೆ ಬಿಕ್ಷೆ ನೀಡಲು ನಾಣ್ಯಗಳನ್ನು ಕೊಟ್ಟರೆ ಆತ ಅದರಿಂದ ಅತ್ಯಂತ ಕಡಿಮೆ ಬೆಲೆಯದೇ ಆಯ್ಕೆ ಮಾಡಿಕೊಳ್ಳುತ್ತಿದ್ದ. ಜನ ಅವನನ್ನು ತಮಾಷೆ ಮಾಡಲು ನಾಣ್ಯಗಳನ್ನು ಅವನ ಮುಂದೆ ಚಾಚುತ್ತಿದ್ದರು. ಅವುಗಳಿಂದ ಕಡಿಮೆ ಬೆಲೆಯದು ಆಯ್ಕೆಮಾಡಿಕೊಂಡಾಗ ಎಲ್ಲಾ ಅವನನ್ನು ಗೇಲಿ ಮಾಡುತ್ತಿದ್ದರು. ಆತನನ್ನು ಗಮನಿಸುತ್ತಿದ್ದ ಒಬ್ಬ ಸಹೃದಯಿ ನಸ್ರುದ್ದೀನ್‌ನ ಬಳಿ ಬಂದು, ‘ಅಲ್ಲಯ್ಯಾ, ನೀನು ನಿಜವಾಗಿಯೂ ದಡ್ಡನೇ. ಜನ ಹೆಚ್ಚಿನ ಬೆಲೆಯ ನಾಣ್ಯ ಕೊಟ್ಟರೆ ನೀನು ಏಕೆ ಕಡಿಮೆ ಬೆಲೆಯದೇ ಸಾಕೆನ್ನುತ್ತೀಯ? ನೀನು ಹೆಚ್ಚಿನ ಬೆಲೆಯದು ತೆಗೆದುಕೋ ಹಾಗೂ ನಿನಗೆ ಹೆಚ್ಚಿನ ಹಣವೂ ದೊರಕುತ್ತದೆ ಅಲ್ಲದೆ ಜನ ನಿನ್ನನ್ನು ಗೇಲಿ ಮಾಡುವುದೂ ತಪ್ಪುತ್ತದೆ’ ಎಂದ. ಅದಕ್ಕೆ ನಸ್ರುದ್ದೀನ್ ನಗುತ್ತಾ, ‘ನಿಮ್ಮ ಮಾತು ನಿಜವಿರಬಹುದು, ಆದರೆ ನಾನು ಹೆಚ್ಚಿನ ಬೆಲೆಯ ನಾಣ್ಯ ತೆಗೆದುಕೊಳ್ಳಲು ಪ್ರಾರಂಭಿಸಿದರೆ ಜನ ನಾನು ಬುದ್ಧಿವಂತನಾಗಿರುವನೆಂದು ತಿಳಿದು ನನಗೆ ನಾಣ್ಯ ನೀಡುವುದನ್ನು ನಿಲ್ಲಿಸುತ್ತಾರೆ. ಜನ ನನ್ನನ್ನು ದಡ್ಡನೆಂದೇ ಪರಿಗಣಿಸಿದರೆ ನನಗೇ ಲಾಭ’ ಎಂದ ಸಂಗ್ರಹವಾಗಿದ್ದ ಚಿಲ್ಲರೆ ಕಿಸೆಗೆ ಬಿಡುತ್ತಾ.

ಭಿಕ್ಷುಕನ ಅವಶ್ಯಕತೆಗಳು
ಒಂದು ದಿನ ಮುಲ್ಲಾ ನಸ್ರುದ್ದೀನ್ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬಂದಾಗ ಅಲ್ಲೇ ಬಾಗಿಲ ಬಳಿ ಭಿಕ್ಷುಕನೊಬ್ಬ ಕೈ ಚಾಚಿಕೊಂದು ಕೂತಿದ್ದ. ಅವನನ್ನು ಕಂಡ ನಸ್ರುದ್ದೀನ್, ‘ಏನಯ್ಯಾ ನೀನು ದುಂದುವೆಚ್ಚಗಾರನೇ?’ ಎಂದು ಕೇಳಿದ.
‘ಹೌದು’ ಎಂದ ಭಿಕ್ಷುಕ.
‘ನೀನು ಸೋಮಾರಿಯಂತೆ ಚಹಾ ಕುಡಿಯುತ್ತಾ ಬೀಡಿ, ಸಿಗರೇಟು ಸೇದುತ್ತೀಯಾ?’
‘ಹೌದು’
‘ನೀನು ಗೆಳೆಯರ ಜೊತೆ ದಿನಾ ಸಂಜೆ ಮದ್ಯಪಾನ ಮಾಡುತ್ತೀಯಾ?’
‘ಹೌದು, ನನಗೆ ಅಂಥವೆಲ್ಲಾ ಇಷ್ಟ’ ಎಂದ ಭಿಕ್ಷುಕ ವಿನಮ್ರನಾಗಿ.
‘ಛೆ! ಛೆ!’ ಎನ್ನುತ್ತಾ ನಸ್ರುದ್ದೀನ್ ಅವನಿಗೆ ಚಿನ್ನದ ನಾಣ್ಯವೊಂದನ್ನು ನೀಡಿದ. ಸ್ವಲ್ಪ ದೂರದಲ್ಲೇ ಮತ್ತೊಬ್ಬ ಭಿಕ್ಷುಕ ಈ ಸಂಭಾಷಣೆಯನ್ನೆಲ್ಲಾ ಕೇಳಿಸಿಕೊಂಡು ಕೂತಿದ್ದ. ಅವನ ಬಳಿ ಬಂದ ನಸ್ರುದ್ದೀನ್ ಅದೇ ಪ್ರಶ್ನೆಗಳನ್ನು ಕೇಳಿದ.
‘ಏನಯ್ಯಾ ನೀನು ದುಂದುವೆಚ್ಚಗಾರನೇ?’ ಎಂದು ಕೇಳಿದ.
‘ಇಲ್ಲ ಸ್ವಾಮಿ’ ಎಂದ ಭಿಕ್ಷುಕ.
‘ನೀನು ಸೋಮಾರಿಯಂತೆ ಚಹಾ ಕುಡಿಯುತ್ತಾ ಬೀಡಿ, ಸಿಗರೇಟು ಸೇದುತ್ತೀಯಾ?’
‘ಖಂಡಿತಾ ಇಲ್ಲ ಸ್ವಾಮಿ’
‘ನೀನು ಗೆಳೆಯರ ಜೊತೆ ದಿನಾ ಸಂಜೆ ಮದ್ಯಪಾನ ಮಾಡುತ್ತೀಯಾ?’
‘ನನಗೆ ಅಂಥಾ ಕೆಟ್ಟ ಅಭ್ಯಾಸಗಳೆಲ್ಲಾ ಇಲ್ಲ. ಬದಲಿಗೆ ನಾನು ದಿನಾ ಮಸೀದಿಗೆ ಹೋಗಿ ದೇವರ ಪ್ರಾರ್ಥನೆ ಮಾಡುತ್ತೇನೆ’ ಎಂದ ಭಿಕ್ಷುಕ ವಿನಮ್ರನಾಗಿ.
‘ಛೆ! ಛೆ!’ ಎನ್ನುತ್ತಾ ನಸ್ರುದ್ದೀನ್ ಅವನಿಗೆ ತಾಮ್ರದ ನಾಣ್ಯವೊಂದನ್ನು ನೀಡಿದ.
ತಾನೊಬ್ಬ ಉತ್ತಮ ವ್ಯಕ್ತಿ, ದೇವರ ಭಕ್ತ ಎಂದು ಹೇಳಿಕೊಂಡರೆ ಆ ಭಿಕ್ಷುಕನಿಗೆ ನೀಡಿದುದಕ್ಕಿಂತ ಹೆಚ್ಚಿನ ಭಿಕ್ಷೆ ದೊರೆಯಬಹುದೆಂದು ನಿರೀಕ್ಷಿಸಿದ್ದ ಆ ಭಿಕ್ಷುಕನಿಗೆ ನಿರಾಸೆಯಾಯಿತು. ಆತ ನಸ್ರುದ್ದೀನ್‌ನನ್ನು ಕುರಿತು, ‘ಅಲ್ಲಾ, ಕೆಟ್ಟ ಚಟಗಳಿರುವ ಅವನಿಗೆ ಚಿನ್ನದ ನಾಣ್ಯ ನೀಡಿದಿರಿ, ನನ್ನಂಥ ದೇವರ ಭಕ್ತನಿಗೆ ತಾಮ್ರದ ನಾಣ್ಯ ಕೊಟ್ಟಿರುವಿರಲ್ಲಾ? ಇದು ನ್ಯಾಯವೇ?’ ಎಂದು ಕೇಳಿದ.
ಅದಕ್ಕೆ ಮುಲ್ಲಾ ನಸ್ರುದ್ದೀನ್, ‘ಬೇಸರ ಮಾಡಿಕೊಳ್ಳಬೇಡ. ಅವನಿಗೆ ನಿನಗಿಂತ ಹೆಚ್ಚಿನ ಅವಶ್ಯಕತೆಗಳಿವೆ. ಅದಕ್ಕಾಗೇ ಅವನಿಗೆ ಚಿನ್ನದ ನಾಣ್ಯ ನೀಡಿದೆ’ ಎಂದ ಮುನ್ನಡೆಯುತ್ತಾ.

ನೀನ್ಯಾರು ನನಗೆ ತಿಳಿದಿಲ್ಲವೆ?
ಆ ಊರಿಗೆ ಹೊಸಬನಾಗಿದ್ದ ಮುಲ್ಲಾ ನಸ್ರುದ್ದೀನ್ ಒಂದು ದಿನ ತನ್ನ ಮನೆಯ ಬಳಿ ಇದ್ದ ಅಂಗಡಿಗೆ ಹೋಗಿ ಮಾತುಕತೆ ಆರಂಭಿಸಿದ.
‘ಹೇಗಿದೆ ವ್ಯಾಪಾರ?’ ಕೇಳಿದ ನಸ್ರುದ್ದೀನ್.
‘ಹೋ, ಚೆನ್ನಾಗಿದೆ’ ಹೇಳಿದ ಅಂಗಡಿಯಾತ.
‘ಹಾಗಾದರೆ, ನನಗೆ ನೂರು ರೂಪಾಯಿ ಸಾಲ ಕೊಡುವಿರಾ?’ ಕೇಳಿದ ನಸ್ರುದ್ದೀನ್.
‘ಇಲ್ಲ, ಸಾಧ್ಯವಿಲ್ಲ. ನೀವ್ಯಾರೋ ನನಗೆ ಪರಿಚಯವಿಲ್ಲ’ ಎಂದ ಅಂಗಡಿಯಾತ.
‘ಇದೆಂಥ ವಿಚಿತ್ರ! ನಮ್ಮೂರಿನಲ್ಲಿ ಸಾಲ ಕೇಳಿದರೆ, ನೀನ್ಯಾರೆಂದು ನಮಗೆ ಚೆನ್ನಾಗಿ ತಿಳಿದಿದೆ, ಅದಕ್ಕೇ ನಿನಗೆ ಸಾಲ ಕೊಡುವುದಿಲ್ಲ ಎನ್ನುತ್ತಾರೆ. ಈ ಊರಿನಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಾನು ಪರಿಚಯವಿಲ್ಲ ಕೊಡುವುದಿಲ್ಲ ಎನ್ನುತ್ತೀರಲ್ಲಾ?’ ಎಂದ ನಸ್ರುದ್ದೀನ್.

ಭಾನುವಾರ, ಜುಲೈ 29, 2012

ಭಾನುವಾರ, ಜುಲೈ 15, 2012

ಮೇರಿ ಶೆಲ್ಲಿಯ ಫ್ರಾಂಕೆನ್‌ಸ್ಟೈನ್- ಮೊಟ್ಟಮೊದಲ ವೈಜ್ಞಾನಿಕ ಕಾಲ್ಪನಿಕ ಕಥನ



ಮೇರಿ ಶೆಲ್ಲಿಯ ಫ್ರಾಂಕೆನ್‌ಸ್ಟೈನ್- ಮೊಟ್ಟಮೊದಲ ವೈಜ್ಞಾನಿಕ ಕಾಲ್ಪನಿಕ ಕಥನ
ಹತ್ತೊಂಬತ್ತನೇ ಶತಮಾನದ ಪ್ರಾರಂಭದಲ್ಲಿ ರಾಬರ್ಟ್ ವಾಲ್ಟನ್ ಎಂಬ ಸಾಹಸಿ ನಾವಿಕ ತನ್ನ ಬದುಕಿನ ಧ್ಯೇಯವಾದ ಉತ್ತರ ಧೃವವನ್ನು ತಲುಪಲು ಹೊರಟಿರುತ್ತಾನೆ. ಆತ ತನ್ನ ಪಯಣ ಮತ್ತು ಸಾಹಸಗಳ ಬಗೆಗೆ ತನ್ನ ಸೋದರಿ ಸೆವೆಲ್‌ಳಿಗೆ ನಿಯತವಾಗಿ ಪತ್ರ ಬರೆಯುತ್ತಿರುತ್ತಾನೆ. ರಷಿಯಾದ ಹಿಮಾವೃತ ಸಾಗರದಲ್ಲಿ ತನ್ನ ಪಯಣ ಮುಂದುವರಿಸಿದ್ದಾಗ ಭಯಂಕರ ಚಳಿ ಮತ್ತು ಹಿಮದಲ್ಲಿ ಒಬ್ಬ ಬಸವಳಿದ ಹಾಗೂ ಸಾವಿನಂಚಿನಲ್ಲಿದ್ದ, ಬದುಕಿನಲ್ಲಿ ತೀರಾ ಹತಾಶನಾದಂತಹ ವ್ಯಕ್ತಿಯೊಬ್ಬ ದೊರೆತು ಆತನನ್ನು ಕಾಪಾಡುತ್ತಾನೆ. ಆತ `ತನ್ನಿಂದ ಓಡಿ ಹೋಗಿರುವ ರಕ್ಕಸನೊಬ್ಬನನ್ನು’ ಅರಸುತ್ತಿರುವುದಾಗಿ ತಿಳಿಸುತ್ತಾನೆ. ಆ ಅತ್ಯಂತ ಪ್ರತಿಕೂಲ ವಾತಾವರಣದಲ್ಲಿ ರಕ್ಕಸನನ್ನು ಅರಸುತ್ತ ಹೊರಟ ವ್ಯಕ್ತಿಯೇ ವಾಲ್ಟರ್ ಫ್ರಾಂಕೆನ್‌ಸ್ಟೈನ್. ಈ ಘಟನೆ ಬರುವುದು 1818ರ `ಫ್ರಾಂಕೆನ್‌ಸ್ಟೈನ್ ಆರ್ ದ ಮಾಡರ್ನ್ ಪ್ರೊಮೆಥೆಯೆಸ್’ ಕಾದಂಬರಿಯಲ್ಲಿ. ಫ್ರಾಂಕೆನ್‌ಸ್ಟೈನ್ ಎನ್ನುವ ಪದ ಇಂದು ಒಂದು ರೂಪಕವಾಗಿ ವಿಜ್ಞಾನ ಜಗತ್ತಿನಲ್ಲಿ ಅತ್ಯಂತ ಜನಪ್ರಿಯವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಶ್-ಕನ್ನಡ ನಿಘಂಟಿನಲ್ಲಿ `ಫ್ರಾಂಕೆನ್‌ಸ್ಟೈನ್’ (Frankenstein) ಪದದ ಅರ್ಥ `ಒಂದು ಭಯಂಕರ ಭೂತ. ಪೆಡಂಭೂತ; ಸೃಷ್ಟಿಸಿದವನಿಗೇ ಎದುರಿಸಲು ಕಷ್ಟವಾದ ಯಾವುದೇ ಸಮಸ್ಯೆ’ ಎಂದಿದೆ. ಇಂದು `ಫ್ರಾಂಕೆನ್‌ಸ್ಟಿನಿಯನ್’ (Frankensteinian) ಎನ್ನುವ ಪದ ಗುಣವಾಚಕವಾಗಿಯೂ ಬಳಕೆಯಲ್ಲಿದೆ. ಆದರೆ ಫ್ರಾಂಕೆನ್‌ಸ್ಟೈನ್ ಅಥವಾ ಫ್ರಾಂಕೆನ್‌ಸ್ಟಿನಿಯನ್ ಎನ್ನುವ ಪದ ವಿಜ್ಞಾನವನ್ನು ಮತ್ತು ಅದರ ಸಾಧನೆಯನ್ನು ಹೆಮ್ಮೆಯಿಂದ ಹೊಗಳುವ ಪದವಲ್ಲ, ಬದಲಿಗೆ ವಿಜ್ಞಾನವನ್ನು ಟೀಕಿಸುವ, ಅದರಿಂದ ಎಂಥದೋ ಆಪತ್ತು ಉಂಟಾಗುತ್ತದೆ ಎಂಬುದನ್ನು ಸೂಚಿಸುವ ಪದವಾಗಿ ಬಳಸುತ್ತಾರೆ. ವಿಜ್ಞಾನದಿಂದಾಗುವ ಕೆಡಕಿಗೆ ಹಾಗೂ ಅದರಿಂದ ಮನುಕುಲಕ್ಕಾಗುವ ತೊಂದರೆಗಳಿಗೆ ಫ್ರಾಂಕೆನ್‌ಸ್ಟಿನಿಯನ್ ವಿಜ್ಞಾನವೆನ್ನುತ್ತಾರೆ. ಇದರ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕಾದಲ್ಲಿ `ಫ್ರಾಂಕೆನ್‌ಸ್ಟೈನ್ ಆರ್ ದ ಮಾಡರ್ನ್ ಪ್ರೊಮೆಥೆಯೆಸ್’ ಕಾದಂಬರಿಯನ್ನು ಹಾಗೂ ಅದರ ಕರ್ತೃವನ್ನು ಅರಿತುಕೊಳ್ಳಬೇಕಾದುದು ಅತ್ಯವಶ್ಯಕ.

ಮೇರಿ ವೊಲ್‌ಸ್ಟೋನ್‌ಕ್ರಾಫ್ಟ್ ಶೆಲ್ಲಿ   

ಫ್ರಾಂಕೆನ್‌ಸ್ಟೈನ್ ಕಾದಂಬರಿ ಆಧುನಿಕ ಸಾಹಿತ್ಯದ ಪ್ರಮುಖ ಪಠ್ಯಗಳಲ್ಲೊಂದಾಗಿದೆ. ಅದರ ಕರ್ತೃ ಮೇರಿ ವೊಲ್‌ಸ್ಟೋನ್‌ಕ್ರಾಫ್ಟ್ ಶೆಲ್ಲಿ ಹಾಗೂ ಅದರ ರಚನೆಯಾಗಿದ್ದು 1818ರಲ್ಲಿ, ಇಂದಿಗೆ 197 ವರ್ಷಗಳ ಹಿಂದೆ! ಮೇರಿ ಶೆಲ್ಲಿ ಖ್ಯಾತ ಆಂಗ್ಲ ಕವಿ ಪರ್ಸಿ ಶೆಲ್ಲಿಯ ಪತ್ನಿ ಹಾಗೂ ಫ್ರಾಂಕೆನ್‌ಸ್ಟೈನ್ ರಚಿಸಿದಾಗ ಆಕೆಯ ವಯಸ್ಸು ಕೇವಲ 19 ವರ್ಷಗಳು! ಪ್ರಕಟಿಸಿದ ಮೂರು ವರ್ಷಗಳ ನಂತರ ಆಕೆ ಅದನ್ನು ಪರಿಷ್ಕರಿಸಿದಳು. ವೈಜ್ಞಾನಿಕ ಕಾಲ್ಪನಿಕ ಕಥನ (Science Fiction) ಸಾಹಿತ್ಯವನ್ನು ನಿರ್ಧರಿಸುವ ತರ್ಕದ ಆಧಾರದ ಮೇಲೆ ಪರಿಗಣಿಸುವುದಾದಲ್ಲಿ ಫ್ರಾಂಕೆನ್‌ಸ್ಟೈನ್ ಮೊಟ್ಟಮೊದಲ ವೈಜ್ಞಾನಿಕ ಕಾಲ್ಪನಿಕ ಕಥನ ಸಾಹಿತ್ಯವೆಂದು ಪರಿಗಣಿಸಬಹುದು. ಅದು ಆಕೆಯ ಮೊಟ್ಟಮೊದಲ ಕೃತಿ ಹಾಗೂ ಅದರಲ್ಲಿ ಆಕೆಯ ವಯಸ್ಸನ್ನೂ ಮೀರಿದ ಅದ್ಭುತ ಕಾಲ್ಪನಿಕ ಜಗತ್ತಿದೆ. ಬಹುಶಃ ಆಕೆಯ ಉದ್ದೇಶ ವಿಜ್ಞಾನದಿಂದಾಗಬಹುದಾದ ಕೆಡಕನ್ನು ಬಿಂಬಿಸುವುದಾಗಿರಲಿಲ್ಲ. ಫ್ರಾಂಕೆನ್‌ಸ್ಟೈನ್ ಕೃತಿಯಲ್ಲಿನ ಕೇಡನ್ನು ಬಗೆಯುವ `ರಕ್ಕಸ’ನ ಹೆಸರು ಫ್ರಾಂಕೆನ್‌ಸ್ಟೈನ್ ಆಗಿರುವುದಿಲ್ಲ, ಬದಲಿಗೆ ಅದರ ಸೃಷ್ಟಿಕರ್ತನ ಹೆಸರು ವಿಕ್ಟರ್ ಫ್ರಾಂಕೆನ್‌ಸ್ಟೈನ್ ಎಂದಾಗಿರುತ್ತದೆ. ಆದರೆ ಇಂದು ಸೃಷ್ಟಿಕಾರನ ಹೆಸರೇ ಕೇಡನ್ನು ಬಗೆಯುವುದರ ಸೂಚಕವಾಗಿ ಬಳಕೆಯಲ್ಲಿದೆ.
    ಮೇರಿ ಶೆಲ್ಲಿ ಜನಿಸಿದ್ದು 1797ರಲ್ಲಿ. ಆಕೆಯ ತಂದೆತಾಯಿಗಳು ಆಗಿನ ಖ್ಯಾತ ಮತ್ತು ಕ್ರಾಂತಿಕಾರಿ ವಿಚಾರವಾದಿ ಲೇಖಕರಾಗಿದ್ದ ಮೇರಿ ವೂಲ್‌ಸ್ಟೋನ್‌ಕ್ರಾಫ್ಟ್ ಮತ್ತು ವಿಲಿಯಂ ಗಾಡ್ವಿನ್. ಆಕೆಯ ತಾಯಿ ಮಗುವಿಗೆ ಜನ್ಮ ನೀಡಿದ ಕೆಲದಿನಗಳಲ್ಲೇ ತೀರಿಕೊಂಡಳು. ಮಗುವನ್ನು ತಂದೆಯೇ ಸಾಕಿದರು ಸಹ ಆಕೆಗೆ ತಾಯಿ ಮತ್ತು ತಂದೆಯರ ಇಬ್ಬರ ಪ್ರೀತಿ ಪ್ರೇಮದ ಕೊರತೆಯಿತ್ತು. ಆ ಕೊರತೆ ಆಕೆಯ ತಂದೆ ಮತ್ತೊಂದು ಮದುವೆಯಾದ ಮೇಲೆ ಮತ್ತಷ್ಟು ಹೆಚ್ಚಾಯಿತು. ತನ್ನ ತಾಯಿಯ ಸ್ಥಾನವನ್ನು ಮತ್ತಾರೂ ಪಡೆಯುವುದು ಆಕೆಗೆ ಇಷ್ಟವಿರಲಿಲ್ಲ. ಆಕೆಯ ಅಸಹನೆಯಿಂದ ಬೇಸತ್ತ ಆಕೆಯ ತಂದೆ ಮೇರಿಯನ್ನು ಬೇರೆಯ ಊರಿಗೆ ಕಳುಹಿಸಿದ. ಮೇರಿ ಶೆಲ್ಲಿ ಆಗಿನ ಕಾಲದ ಹುಡುಗಿಯರಿಗೆ ದೊರಕುವುದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದಿದ್ದಳು. ಮೇರಿ ತನ್ನ ಹದಿನೇಳನೇ ವಯಸ್ಸಿನಲ್ಲಿಯೇ ಖ್ಯಾತ ಆಂಗ್ಲ ಕವಿ ಹಾಗೂ ಅಷ್ಟೊತ್ತಿಗಾಗಲೇ ಮದುವೆಯೂ ಆಗಿದ್ದ ಪರ್ಸಿ ಬೈಷೆ ಶೆಲ್ಲಿಯೊಂದಿಗೆ ಓಡಿಹೋದಳು. ಆಗಲೂ ಮೇರಿಯ ತಂದೆ ಆಕೆಯನ್ನು ತಿರಸ್ಕರಿಸಿದ. ಆಕೆಗೆ ಜನಿಸಿದ ನಾಲ್ಕು ಮಕ್ಕಳಲ್ಲಿ ಒಂದು ಮಗು ಮಾತ್ರ ಬದುಕುಳಿಯಿತು ಹಾಗೂ 1822ರಲ್ಲಿ ಆಕೆಯ ಪತಿ ಪರ್ಸಿ ಶೆಲ್ಲಿ ನೀರಿನಲ್ಲಿ ಮುಳುಗಿ ಮರಣಿಸಿದ. ಆಕೆ ಫ್ರಾಂಕೆನ್‌ಸ್ಟೈನ್ ನಂತರವೂ ಹಲವಾರು ಕೃತಿಗಳನ್ನು ರಚಿಸಿದರೂ ಆಕೆಯ ಸ್ಮರಣೆ ಇಂದಿಗೂ ಇರುವುದು ಫ್ರಾಂಕೆನ್‌ಸ್ಟೈನ್ನಿಂದಾಗಿಯೇ. ಮೇರಿ ಶೆಲ್ಲಿ 1851ರಲ್ಲಿ ಮರಣಿಸಿದಳು.
ಫ್ರಾಂಕೆನ್‌ಸ್ಟೈನ್ ಮೊದಲು ಪ್ರಕಟವಾಗಿದ್ದು ಅನಾಮಧೇಯವಾಗಿ. ಅದರ ಜನಪ್ರಿಯತೆಯ ನಂತರ ಹಲವಾರು ಜನ ತಾವೇ ಅದರ ಕೃತಿಕಾರರೆಂದು ಮುಂದೆಬಂದರು. ಆನಂತರವೇ ಅದರ ಕರ್ತೃವನ್ನು ಬಹಿರಂಗಪಡಿಸಲಾಯಿತು. ನಂತರದ ಪ್ರಕಟಣೆಗಳಲ್ಲಿ ಆಕೆ ಹಲವಾರು ಬದಲಾವಣೆಗಳನ್ನು ಮಾಡಿದಳು ಹಾಗೂ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಷ್ಟೊಂದು `ಭಯಂಕರ’ ಕಾದಂಬರಿಯನ್ನು ಆಕೆಗೆ ಹೇಗೆ ಬರೆಯಲು ಸಾಧ್ಯವಾಯಿತು ಎನ್ನುವ ಹಲವಾರು ಪ್ರಶ್ನೆಗಳಿಗೆ ಆಕೆ ಉತ್ತರಗಳನ್ನು ಸಹ ನೀಡಿದ್ದಳು. ಆಕೆಯನ್ನು ಕಾಡುತ್ತಿದ್ದ ಒಂದು ಭಯಾನಕ ಕನಸೇ ಆ ಕೃತಿಗೆ ಸ್ಫೂರ್ತಿ ಎಂದಿದ್ದಾಳೆ. ಆಕೆ ಆಗ ಓದುತ್ತಿದ್ದ ಕೃತಿಗಳಾದ ಜಾನ್ ಮಿಲ್ಟನ್ನನ `ಪ್ಯಾರಡೈಸ್ ಲಾಸ್ಟ್’ (ಈ ಪುಸ್ತಕವನ್ನು ಆಕೆಯ ಫ್ರಾಂಕೆನ್‌ಸ್ಟೈನ್ ಕೃತಿಯಲ್ಲಿನ `ರಕ್ಕಸ’ ಸಹ ಓದುತ್ತಾನೆ), ಶೇಕ್ಸ್‌ಪಿಯರ್‌ನ ಹಲವಾರು ಕೃತಿಗಳು ಹಾಗೂ ಸರ್ವಾಂಟಿಸ್‌ನ `ಡಾನ್ ಕ್ವಿಹೋತೆ’ಯ ಎಳೆಗಳು ತನ್ನ ಕೃತಿಯಲ್ಲಿ ಕಂಡುಬರುತ್ತವೆಂದು ಆಕೆಯೇ ಹೇಳಿದ್ದಾಳೆ. 
 
ಫ್ರಾಂಕೆನ್‌ಸ್ಟೈನ್ 1818ರ ಪ್ರಕಟಣೆಯ ಕೃತಿ

1818ರಲ್ಲಿ ಫ್ರಾಂಕೆನ್‌ಸ್ಟೈನ್ ಕೃತಿ ಪ್ರಕಟವಾದಾಗ ಹಲವಾರು ಪತ್ರಿಕೆಗಳು ಅದನ್ನು ಟೀಕಿಸಿದವು ಹಾಗೂ ಅದೊಂದು ಆಧಾರ್ಮಿಕ ಕೃತಿ, ಅದರ ಲೇಖಕರು ಆ ರೀತಿಯ ಕೃತಿ ಬರೆದದ್ದಕ್ಕೆ ಕ್ಷಮಾಪಣೆ ಕೇಳಬೇಕು ಎಂದಿದ್ದವು. ಮೇರಿ ಶೆಲ್ಲಿಯ ದುರಂತ ಬಾಲ್ಯದ, ಪ್ರೀತಿ ಪ್ರೇಮದ ಕೊರತೆಯ ಬದುಕನ್ನು ಅಧ್ಯಯನ ಮಾಡಿರುವ ಹಲವಾರು ವಿದ್ವಾಂಸರು ಫ್ರಾಂಕೆನ್‌ಸ್ಟೈನ್ ಆಕೆಯ `ಆತ್ಮಕತೆ’ ಎನ್ನುತ್ತಾರೆ. ಆಕೆ ಆ ಕೃತಿಯ ರಚನೆಗೆ ಕೈ ಹಾಕುವುದಕ್ಕೂ ಒಂದು ಹಿನ್ನೆಲೆ ಇದೆ. ಜಿನೀವಾದ ಚಳಿ ಮತ್ತು ಮಳೆಗೆ ಬೇಸತ್ತ ಗೆಳೆಯರ ಗುಂಪೊಂದು ಒಮ್ಮೆ ಜೊತೆಗೂಡಿದ್ದಾಗ ಬೇಸರ ಹಾಗೂ ಚಳಿ ನೀಗಿಸುವಂತಹ ದೆವ್ವದ ಕತೆಯೊಂದನ್ನು ಏಕೆ ಬರೆಯಬರದು ಎಂದು ಲಾರ್ಡ್ ಬೈರನ್ ಸೂಚಿಸುತ್ತಾನೆ. ಅದರಂತೆ ಆ ಗುಂಪಿನಲ್ಲಿದ್ದ ಮೇರಿ ಶೆಲ್ಲಿ, ಪರ್ಸಿ ಶೆಲ್ಲಿ ಹಾಗೂ ಇತರರು ಬರೆಯಲು ಆರಂಭಿಸುತ್ತಾರೆ. ಅದರ ಫಲಿತಾಂಶವಾಗಿಯೇ ಮೇರಿ ಫ್ರಾಂಕೆನ್‌ಸ್ಟೈನ್ ಬರೆದದ್ದು ಎನ್ನುತ್ತಾರೆ.

ಫ್ರಾಂಕೆನ್‌ಸ್ಟೈನ್ ಇತ್ತೀಚಿನ ಪ್ರಕಟಣೆಯ ಕೃತಿ

ಫ್ರಾಂಕೆನ್‌ಸ್ಟೈನ್ ಕೃತಿಯ ಸಾರಾಂಶ ಇಷ್ಟು: ವಿಕ್ಟರ್ ಫ್ರಾಂಕೆನ್‌ಸ್ಟೈನ್ ಎಂಬಾತ ಜಿನೀವಾದಲ್ಲಿ ಹುಟ್ಟಿ ಬೆಳೆದು ಜರ್ಮನಿಯ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಾನೆ. ಒಂದು ದಿನ ತಾನೇ ಸ್ವತಃ ಏಕೆ ಜೀವ ಸೃಷ್ಟಿ ಮಾಡಬಾರದು? ತಾನೇ ಏಕೆ ದೇವರಂತಾಗಬಾರದು? ಎಂದು ಆಲೋಚಿಸಿ ಸ್ಮಶಾನದಿಂದ ಶವಗಳನ್ನು ತಂದು ಬೇರೆ ಬೇರೆ ಶವಗಳಿಂದ ಅಂಗಾಂಗಗಳನ್ನು ತೆಗೆದು ಒಂದು ಮಾನವಾಕೃತಿಯನ್ನು ರಚಿಸುತ್ತಾನೆ. ಹೇಗೂ ಮಾಡುತ್ತಿದ್ದೇನೆ ಇರಲಿ ಎಂದು ಸಾಧಾರಣ ಮನುಷ್ಯರಿಗಿಂತ ದೊಡ್ಡ ಗಾತ್ರದ ವ್ಯಕ್ತಿಯನ್ನೇ ರಚಿಸುತ್ತಾನೆ. ತನ್ನ ಸೃಷ್ಟಿ ಅದ್ಭುತವಾಗಿರುತ್ತದೆ ಹಾಗೂ ತಾನು ಹೇಳಿದಂತೆ ಕೇಳುತ್ತದೆ ಎಂಬ ಭಾವನೆಯಿಂದ ಅದಕ್ಕೆ ಜೀವವನ್ನೂ ನೀಡುತ್ತಾನೆ. ಆದರೆ ಉತ್ಸಾಹದ ಆತುರದಿಂದ ನಿರ್ಮಿಸಿದ ಆ ಜೀವ ಅತ್ಯಂತ ಕುರೂಪ ಹಾಗೂ ವಿಕಾರವಾಗಿರುತ್ತದೆ. ವಿಕ್ಟರ್ ಫ್ರಾಂಕೆನ್‌ಸ್ಟೈನ್‌ನಿಗೆ ತನ್ನ ಸೃಷ್ಟಿಯ ಬಗ್ಗೆಯೇ ಹೇಸಿಗೆಯಾಗಿ ಅದರ ಭೀಭತ್ಸ ರೂಪದಿಂದ ತಲ್ಲಣಗೊಂಡು ಅದನ್ನು ತನ್ನಷ್ಟಕ್ಕೇ ಬಿಟ್ಟು ಓಡಿಹೋಗುತ್ತಾನೆ. ಆ ವಿಲಕ್ಷಣ ಅನುಭವದಿಂದ ಕಾಯಿಲೆಯೂ ಬೀಳುತ್ತಾನೆ.

ವಿಕ್ಟರ್ ಫ್ರಾಂಕೆನ್‌ಸ್ಟೈನ್‌ನ ಸೃಷ್ಟಿ `ರಕ್ಕಸ’- ಕಲಾವಿದನೊಬ್ಬನ ಕಲ್ಪನೆ

ಹೊಸದಾಗಿ ಸೃಷ್ಟಿಯಾದ `ರಕ್ಕಸ’ ಎಲ್ಲಿಗೆ ಹೋದರೂ ಜನ ಅವನ ಆಕಾರ ರೂಪಕ್ಕೆ ಹೆದರಿ ಅವನಿಗೆ ಕಲ್ಲುಗಳಿಂದ ಹೊಡೆಯುತ್ತಾರೆ ಹಾಗೂ ಅವನ ಬದುಕು ದುರ್ಬರ ಮಾಡಿಬಿಡುತ್ತಾರೆ. ತನ್ನ ಸೃಷ್ಟಿಕರ್ತನೇ ತನ್ನನ್ನು ತಿರಸ್ಕರಿಸಿರುವಾಗ ಬೇರೆಯವರು ತಾನೆ ಹೇಗೆ ತನ್ನನ್ನು ಸ್ವೀಕರಿಸಲು ಸಾಧ್ಯ ಎಂದು ಓಡಿ ಹೋಗಿರುವ ತನ್ನ ಸೃಷ್ಟಿಕರ್ತನಾದ ವಿಕ್ಟರ್ ಫ್ರಾಂಕೆನ್‌ಸ್ಟೈನ್ ವಾಪಸ್ಸು ಬರುವಂತೆ ಮಾಡಲು ಆ `ರಕ್ಕಸ’ ಮೊದಲಿಗೆ ಫ್ರಾಂಕೆನ್‌ಸ್ಟೈನ್‌ನ ತಮ್ಮನಾದ ವಿಲಿಯಂನನ್ನು ಕೊಂದು ಅದರ ಅಪವಾದವನ್ನು ಅವನನ್ನು ನೋಡಿಕೊಳ್ಳುತ್ತಿದ್ದ ಜಸ್ಟೀನ್ ಎಂಬಾಕೆಯ ಮೇಲೆ ಬರುವಂತೆ ಮಾಡುತ್ತಾನೆ. ಆ ಅಪರಾಧಕ್ಕಾಗಿ ಜಸ್ಟೀನ್‌ಳನ್ನು ಗಲ್ಲಿಗೇರಿಸಿ ಕೊಲ್ಲಲಾಗುತ್ತದೆ. ತನ್ನ ತಮ್ಮನ ಹಾಗೂ ಜಸ್ಟೀನ್‌ಳ ಸಾವಿಗೆ ತಾನೇ ಕಾರಣವೆಂಬಂತೆ ಫ್ರಾಂಕೆನ್‌ಸ್ಟೈನ್ ತಹತಹಿಸುತ್ತಾನೆ. ಹಿಂದಿರುಗಿ ಬಂದ ಫ್ರಾಂಕೆನ್‌ಸ್ಟೈನ್‌ನನ್ನು ತನ್ನನ್ನು ಪ್ರೀತಿಸಿ ಸ್ವೀಕರಿಸುವಂತೆ `ರಕ್ಕಸ’ ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ. ಆದರೆ ಫ್ರಾಂಕೆನ್‌ಸ್ಟೈನ್ ಅವನ ಮುಖವನ್ನೂ ನೋಡಲೂ ಹೇಸಿಕೊಳ್ಳುತ್ತಾನೆ. ಆ `ರಕ್ಕಸ’ ಜನರಿಗೆ ಸಹಾಯಮಾಡಲು ಹೋದರೂ ಅವರು ಅವನನ್ನು ಹೊಡೆದು ಬಡೆದು ದೂರ ಅಟ್ಟುತ್ತಾರೆ. ಕಾಡಿನಲ್ಲಿ ಅವಿತು ಜನರನ್ನು ನೋಡಿ ಅವರ ನಡೆನುಡಿಗಳನ್ನು ಕಲಿಯುತ್ತಾನೆ. ಅವನಿಗೊಂದು ಪುಸ್ತಕದ ರಾಶಿ ಸಿಕ್ಕಿ ಓದು ಸಹ ಕಲಿಯುತ್ತಾನೆ. ಒಮ್ಮೆ ಭೇಟಿಯಾಗುವ ಫ್ರಾಂಕೆನ್‌ಸ್ಟೈನ್‌ನಿಗೆ ತನಗೆ ಜೊತೆಯಾಗಿ ಮತ್ತೊಂದು ಹೆಣ್ಣನ್ನು ರಚಿಸಿ ಅದಕ್ಕೆ ಜೀವನೀಡಿ ಕೊಡುವಂತೆ ಕೇಳಿಕೊಳ್ಳುತ್ತಾನೆ. ತಾವಿಬ್ಬರು ದೂರ ಕಾಡಿಗೆ ಹೋಗಿ ಯಾರ ಜನರ ತಂಟೆಗೂ ಬರದಂತೆ ಬದುಕುತ್ತೇವೆ ಎನ್ನುತ್ತಾನೆ. ಆ ಪ್ರಯತ್ನಕ್ಕೂ ಕೈ ಹಾಕುವ ವಿಕ್ಟರ್ ಫ್ರಾಂಕೆನ್‌ಸ್ಟೈನ್ ಆ `ರಕ್ಕಸ’ ದಂಪತಿಗಳ ಸಂತತಿ ಇನ್ನೆಷ್ಟು ಭಯಾನಕವಾಗಿರಬಹುದೆಂದು ಹೆದರಿ ಒಂದು ಸೃಷ್ಟಿ ಕಾರ್ಯದಿಂದಲೇ ಸಾಕಷ್ಟು ಪಾಠ ಕಲಿತಿರುವ ಫ್ರಾಂಕೆನ್‌ಸ್ಟೈನ್ ತನ್ನ ಕಾರ್ಯವನ್ನು ಅರ್ಧಕ್ಕೇ ನಿಲ್ಲಿಸುತ್ತಾನೆ. ಅದರಿಂದ ರೋಸಿದ `ರಕ್ಕಸ’ ವಿಕ್ಟರ್ ಫ್ರಾಂಕೆನ್‌ಸ್ಟೈನ್‌ನ ಪತ್ನಿಯಾದ ಎಲಿಜಬೆತ್‌ಳನ್ನು ಅವರು ಮದುವೆಯಾದ ಮೊದಲ ರಾತ್ರಿಯೇ ಕೊಲ್ಲುತ್ತಾನೆ. ತನ್ನನ್ನು ಸೃಷ್ಟಿಸಿ ತನ್ನ ಬದುಕು ದುಸ್ತರ ಹಾಗೂ ಹೀನಾಯವಾಗುವಂತೆ ಮಾಡಿದ ಫ್ರಾಂಕೆನ್‌ಸ್ಟೈನ್ ಮೇಲೆ ಸೇಡು ತೀರಿಸಿಕೊಳ್ಳಲು ಹಾಗೂ ಅವನ ಬದುಕನ್ನೂ ಸಹ ಅದೇ ರೀತಿ ದುಸ್ತರ ಮಾಡುತ್ತೇನೆಂದು ತೀರ್ಮಾನಿಸುವ `ರಕ್ಕಸ’ ವಿಕ್ಟರ್ ಫ್ರಾಂಕೆನ್‌ಸ್ಟೈನ್‌ನ ಗೆಳೆಯನನ್ನು ಕೊಲೆಮಾಡುತ್ತಾನೆ. ತನ್ನ ಸೃಷ್ಟಿಯೇ ತನ್ನ ಮೇಲೆ ತಿರುಗಿಬಿದ್ದು ತನ್ನ ಬದುಕನ್ನೇ ಅತ್ಯಂತ ಯಾತನಾಮಯವನ್ನಾಗಿ ಮಾಡಿದ ಆ `ರಕ್ಕಸ ಸೃಷ್ಟಿ’ಯನ್ನು ನಾಶಮಾಡಲು ಫ್ರಾಂಕೆನ್‌ಸ್ಟೈನ್ ಅದನ್ನರಸಿ ಹೋಗುತ್ತಾನೆ. ಆ ಸಮಯದಲ್ಲಿಯೇ ಆತ ರಾಬರ್ಟ್ ವಾಲ್ಟನ್‌ನಿಗೆ ಉತ್ತರ ಧೃವದ ಹಿಮಭರಿತ ಸ್ಥಳದಲ್ಲಿ ದೊರಕುವುದು. ಕೊನೆಗೆ ವಿಕ್ಟರ್ ಫ್ರಾಂಕೆನ್‌ಸ್ಟೈನ್ ತನ್ನ ಸೃಷ್ಟಿಗೆ ತಾನೇ ಬಲಿಯಾಗುತ್ತಾನೆ.
ಮೇರಿ ಶೆಲ್ಲಿಯ ಫ್ರಾಂಕೆನ್‌ಸ್ಟೈನ್ ಕೃತಿ ಇಂದಿಗೂ ನಮ್ಮ `ವೈಜ್ಞಾನಿಕ ಸಂಸ್ಕೃತಿ’ಯ ಭಾಗವಾಗಿ ಉಳಿದುಕೊಂಡುಬಂದಿದೆ. ಆ ಕೃತಿ ರಚಿಸಿ 197 ವರ್ಷಗಳೇ ಆಗಿದ್ದರೂ ಆ ಕೃತಿಯ ಶೀರ್ಷಿಕೆ ನಮ್ಮ ನುಡಿಗಟ್ಟಿನ ಭಾಗವಾಗಿಹೋಗಿದೆ. ಆ ಕೃತಿಯನ್ನು ಆಧರಿಸಿ ಹಲವಾರು ಚಲನಚಿತ್ರಗಳು ಬಂದಿವೆ. ಆದರೆ ಅವು ಆ ಕೃತಿಯ ಮೂಲತತ್ವವನ್ನು ಅರಿಯಲಾಗದೆ ಕೇವಲ `ಹಾರರ್’ ಸಿನೆಮಾಗಳಾಗಿವೆ. ಫ್ರಾಂಕೆನ್‌ಸ್ಟೈನ್ ಕೃತಿ ಇಂದು ವಿಜ್ಞಾನ ಜಗತ್ತಿನಲ್ಲಿ ಮಾನವನ ಸ್ಥಾನವನ್ನು ಪುನಃ ಪುನಃ ನೆನಪಿಸುವ ಸಾಧನವಾಗಿದೆ. ನಿರಂತರವಾಗಿ ವಿಸ್ತರಿತವಾಗುತ್ತಿರುವ ನಮ್ಮ ವೈಜ್ಞಾನಿಕ ಶಕ್ತಿಯನ್ನು ನಾವು ಹೇಗೆ ಬಳಸಿಕೊಳ್ಳಬೇಕು? ಸಾವು ಮತ್ತು ಬದುಕಿನ ಮೂಲ ಕೀಲಿ ನಮ್ಮ ಕೈಗೆ ದೊರಕಿದ ತಕ್ಷಣ ನಾವು ಅದನ್ನು ಹೇಗೆ ಬಳಸಿಕೊಳ್ಳಬೇಕು? ಹೊಸ ವೈಜ್ಞಾನಿಕ ಸಂಶೋಧನೆಗಳಿಗೆ, ವಿಶೇಷವಾಗಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಫ್ರಾಂಕೆನ್‌ಸ್ಟೈನ್ ಪದದ ಬಳಕೆ ಎಂಥದೋ ಮುನ್ನೆಚ್ಚರಿಕೆ ನೀಡುವಂತೆ ಬಳಸಲಾಗುತ್ತಿದೆ. ಜೈವಿಕ ತಂತ್ರಜ್ಞಾನವನ್ನು ಫ್ರಾಂಕೆನ್‌ಸ್ಟೈನ್ ವಿಜ್ಞಾನವೆಂದೂ ಕರೆಯುವವರಿದ್ದಾರೆ. ಒಂದು ಸಸ್ಯದ ಅಥವಾ ಪ್ರಾಣಿಯ ವಂಶವಾಹಿಯನ್ನು (Genes) ಮತ್ತೊಂದು ಸಸ್ಯ ಅಥವಾ ಪ್ರಾಣಿಗೆ ವರ್ಗಾಯಿಸಿ `ಹೊಸ ಜೀವ’ದ ಸೃಷ್ಟಿಗೆ ಕಾರಣವಾಗುವುದನ್ನು ಫ್ರಾಂಕೆನ್‌ಸ್ಟೈನ್ ಜೀವ ಸೃಷ್ಟಿಯೆನ್ನುತ್ತಿದ್ದಾರೆ. ಆ ಹೊಸಜೀವಗಳು ಪರಿಸರದಲ್ಲಿ ಪ್ರತಿಕೂಲ ಪರಿಣಾಮ ಉಂಟುಮಾಡಿ `ಸೃಷ್ಟಿಕರ್ತ’ನಿಗೇ ಕೆಡುಕಾಗುತ್ತದೆನ್ನುವವರೂ ಇದ್ದಾರೆ. ಆನುವಂಶಿಕವಾಗಿ ಮಾರ್ಪಡಿಸಿದ ಬೆಳೆಗಳ (Genetically Modified Crops) ಫಸಲನ್ನು ಅಥವಾ ಆಹಾರವನ್ನು `ಫ್ರಾಂಕೆನ್‌ಸ್ಟೈನ್ ಆಹಾರ’ವೆಂದು ಪರಿಸರವಾದಿಗಳು ಕರೆಯುತ್ತಿದ್ದಾರೆ. ಶರವೇಗದಲ್ಲಿ ವಿಜ್ಞಾನದ ಪ್ರಗತಿ ದಾಪುಗಾಲು ಹಾಕುತ್ತಿರುವ ಈ ವೈಜ್ಞಾನಿಕ ಯುಗದಲ್ಲಿ ಮೇರಿ ಶೆಲ್ಲಿಯ ಫ್ರಾಂಕೆನ್‌ಸ್ಟೈನ್ ಕೃತಿಯನ್ನು ಆಧಾರವಾಗಿರಿಸಿಕೊಂಡಿರುವ, `ನೈತಿಕತೆ’ಯ ಪ್ರತಿಪಾದಕರಾಗಿರುವವರು ಹಲವಾರು ಪ್ರಶ್ನೆಗಳನ್ನು ಎದುರಿಗಿಡುತ್ತಿದ್ದಾರೆ: ವಿಜ್ಞಾನ ಮತ್ತು ತಂತ್ರಜ್ಞಾನದ ಅಪಾಯಗಳು ನಿಜವಲ್ಲವೆ? ವಿಜ್ಞಾನದ ಪ್ರಗತಿಗೆ ಮಿತಿಯೆಂಬುದಿರಬೇಕಲ್ಲವೆ? ಸ್ಟೆಮ್ ಸೆಲ್ ಸಂಶೋಧನೆ, ಮಾನವ ಕ್ಲೋನಿಂಗ್‌ಗಳನ್ನು ಮಾಡಬೇಕೆ? ಕೃಷಿಯಲ್ಲಿ ಪ್ರಗತಿ ಸಾಧಿಸಲು ಮತ್ತು ಬೆಳೆಗಳ ಇಳುವರಿ ಹೆಚ್ಚಿಸಲು ಅವುಗಳನ್ನು ಆನುವಂಶಿಕವಾಗಿ ಬದಲಾವಣೆ ಮಾಡುವುದು ಸರಿಯೆ? ಲಕ್ಷಾಂತರ ವರ್ಷಗಳ ಜೀವ ವಿಕಾಸದ ಪ್ರತಿಫಲವಾಗಿರುವ ಜೀವರಾಶಿಯಲ್ಲಿ ಮಾನವ ತತ್‌ಕ್ಷಣ ಬದಲಾವಣೆಗಳನ್ನು ತರುವುದು ಅಪಾಯಕ್ಕೆ ಆಹ್ವಾನ ನೀಡಿದಂತಲ್ಲವೆ? ಇವೇ ಮುಂತಾದವು.
ಜೈವಿಕ ತಂತ್ರಜ್ಞಾನದ ಕಿಂಚಿತ್ತೂ ಅರಿವಿಲ್ಲದ ಹತ್ತೊಂಬತ್ತನೆಯ ಶತಮಾನದ ಪ್ರಾರಂಭದಲ್ಲಿ ಮೇರಿ ಶೆಲ್ಲಿ ಈ ಕೃತಿ ರಚಿಸಿದಾಗ ಅದು ಈಗ ಉಂಟುಮಾಡುತ್ತಿರುವ ಪರಿಣಾಮವನ್ನು ಆಕೆ ಊಹಿಸಿರಲೂ ಸಾಧ್ಯವಿಲ್ಲ. ಆಕೆ ತನ್ನ ಕಾದಂಬರಿಯಲ್ಲಿ ವಿಕ್ಟರ್ ಫ್ರಾಂಕೆನ್‌ಸ್ಟೈನ್‌ನನ್ನು ಎರಡು ಕಾರಣಗಳಿಗೆ ಶಿಕ್ಷಿಸಿರುವಂತೆ ತೋರುತ್ತದೆ. ಮೊದಲನೆಯದು ಅವನು ದುರಹಂಕಾರಿ ಎಂಬ ಕಾರಣಕ್ಕಾಗಿ. ಆತ ತಾನೇ ಸೃಷ್ಟಿಕರ್ತ, ತನ್ನಿಂದ ಎಲ್ಲವೂ ಸಾಧ್ಯ ಎಂಬ ದುರಹಂಕಾರ ಹೊಂದಿರುವುದರಿಂದ. ಎರಡನೆಯದು, ಅವನಲ್ಲಿ ಅನುಕಂಪ, ಪ್ರೀತಿ ಇಲ್ಲದಿರುವುದರಿಂದ. ಆತ ತನ್ನದೇ ಸೃಷ್ಟಿಯನ್ನು ಪ್ರೀತಿಸದೆ ಅದನ್ನು ಕಂಡು ಹೇಸಿಗೆ ಪಡುವುದರಿಂದ. ಇದು ಅತ್ಯಂತ ಪ್ರಬಲ ಮನೋವೈಜ್ಞಾನಿಕ ಅಂಶವಾಗಿದೆ. `ಸೃಷ್ಟಿಸಿದ ನೀನೇ ನನ್ನನ್ನು ಪ್ರೀತಿಸದೆ ದೂರ ತಳ್ಳಿದರೆ, ಇತರರು ಹೇಗೆ ನನ್ನನ್ನು ಸ್ವೀಕರಿಸುವರು?’ ಎಂದು ಆ `ರಕ್ಕಸ’ ಫ್ರಾಂಕೆನ್‌ಸ್ಟೈನ್‌ನನ್ನು ಕೇಳಿಕೊಳ್ಳುತ್ತಾನೆ. ಪ್ರೀತಿಯ ನಿರಾಕರಣೆ ಆ `ರಕ್ಕಸ’ನನ್ನು ಹಿಂಸೆಯೆಡೆಗೆ ದೂಡುತ್ತದೆ. ಪ್ರೀತಿ, ಅನುಕಂಪ ನೀಡದೆ ತಿರಸ್ಕರಿದ ವ್ಯಕ್ತಿ ಹಾಗೂ ಸಮಾಜಕ್ಕೆ ತಕ್ಕ ಪಾಠ ಕಲಿಸಲು ಮುಂದಾಗುತ್ತಾನೆ. ಇಂದಿನ ಮನೋವಿಜ್ಞಾನ ಹೇಳುವುದೂ ಅದನ್ನೇ ಅಲ್ಲವೆ? ಮೇರಿ ಶೆಲ್ಲಿ ತನ್ನ ಕೃತಿಯಲ್ಲಿ `ರಕ್ಕಸ’ನ ಪಾತ್ರವನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾಳೆ. ಆ ರಕ್ಕಸ ವಿಕ್ಟರ್ ಫ್ರಾಂಕೆನ್‌ಸ್ಟೈನ್ ಭೇಟಿಯಾದಾಗ ತನ್ನ ಗೋಳನ್ನು ಹೇಳಿಕೊಳ್ಳುತ್ತದೆ, ತನ್ನ ಒಂಟಿತನವನ್ನು ಹೇಳಿಕೊಂಡು ಕಣ್ಣೀರು ಹಾಕುತ್ತದೆ. `ನಾನೂ ಸಾಯುತ್ತೇನೆ, ಈ ಯಾತನೆ ಹಾಗೂ ಗೋಳಿನಿಂದ ಪಾರಾಗಲು’ ಎನ್ನುತ್ತಾನೆ. ತನ್ನನ್ನು ತಿರಸ್ಕರಿಸಿರುವ ಈ ಜಗತ್ತಿಗೆ ನನ್ನನ್ನು ಸೃಷ್ಟಿಸಿ ಕರೆತಂದದ್ದಾರೂ ಏಕೆ ಎಂದು ಕೇಳಿ ಕೃತಿಯ ಓದುಗರ ಸಹಜ ಅನುಕಂಪಕ್ಕೆ ಪಾತ್ರವಾಗುತ್ತಾನೆ. ಓದಿ ಮುಗಿಸಿದ ನಂತರ ಕಾದಂಬರಿಯಲ್ಲಿನ ಖಳನಾಯಕ ಯಾರು- `ಸೃಷ್ಟಿಕರ್ತ’ ವಿಕ್ಟರ್ ಫ್ರಾಂಕೆನ್‌ಸ್ಟೈನನೇ ಅಥವಾ ಅವನು ಸೃಷ್ಟಿಸಿದ `ರಕ್ಕಸ’ನೆ? ಎನ್ನುವ ಪ್ರಶ್ನೆ ಓದುಗನನ್ನು ಕಾಡದೇ ಇರದು.
ಡಾ.ಜೆ.ಬಾಲಕೃಷ್ಣ


`ಫ್ರಾಂಕೆನ್‌ಸ್ಟೈನ್ ಆರ್ ದ ಮಾಡರ್ನ್ ಪ್ರೊಮೆಥೆಯೆಸ್’ ಕಾದಂಬರಿಯ ಆಯ್ದ ಭಾಗಗಳು:
ಅಂತಹ ಅತ್ಯದ್ಭುತ ಶಕ್ತಿ ನನ್ನ ಕೈಲಿದೆಯೆಂಬುದು ನನಗೆ ಅರಿವಾದಾಗ, ಅದನ್ನು ಹೇಗೆ ಬಳಸಬೇಕೆಂಬುದರ ಬಗೆಗೆ ಬಹಳಷ್ಟು ಆಲೋಚಿಸಿದೆ. ಜೀವ ಸೃಷ್ಟಿಸುವ ಸಾಮರ್ಥ್ಯ ನನ್ನ ಮಿತಿಯೊಳಗೇ ಇದ್ದರೂ ಅದನ್ನು ಸ್ವೀಕರಿಸುವಂತಹ ಆಕೃತಿಯೊಂದನ್ನು ರಚಿಸಬೇಕು. ಆ ರಚನೆಯಲ್ಲಿ ಅತ್ಯಂತ ಸೂಕ್ಷ್ಮ ನರಗಳು, ಸ್ನಾಯುಗಳು ಮತ್ತು ರಕ್ತನಾಳಗಳನ್ನು ಜೋಡಿಸುವಂತಹ ಕಾರ್ಯ ಊಹಿಸಿಕೊಳ್ಳಲೂ ಸಾಧ್ಯವಾಗದಷ್ಟು ಕಷ್ಟವಾದುದು ಹಾಗೂ ಶ್ರಮದಾಯಕವಾದುದು. ನಾನು ನನ್ನ ಪ್ರತಿರೂಪದಂತಹುದನ್ನೇ ಸೃಷ್ಟಿಸಲೇ ಅಥವಾ ಇನ್ನೂ ಸರಳವಾದ ಜೀವಿಯೊಂದನ್ನು ಸೃಷ್ಟಿಸಲೇ ಎಂದು ಬಹಳಷ್ಟು ಆಲೋಚಿಸಿದೆ. ಆದರೆ ನನ್ನ ಉತ್ಸಾಹ ಮತ್ತು ಕಲ್ಪನೆ ಮನುಷ್ಯನಂತಹ ಸಂಕೀರ್ಣ ಮತ್ತು ಅತ್ಯದ್ಭುತ ಪ್ರಾಣಿಯ ಸೃಷ್ಟಿಗೇ ಕೈ ಹಾಕುವಂತೆ ಪ್ರೇರೇಪಿಸಿತು. ಆ ಕಾರ್ಯಕ್ಕಾಗಿ ನನ್ನ ಬಳಿಯಿದ್ದ ವಸ್ತು ಸಲಕರಣೆಗಳು ಸಾಕಾಗದಿದ್ದರೂ ನಾನು ಇದರಲ್ಲಿ ಯಶಸ್ವಿಯಾಗಲೇಬೇಕೆಂದು ನಿರ್ಧರಿಸಿದೆ. ಅದಕ್ಕಾಗಿ ಹಲವಾರು ಹಿನ್ನಡೆಗಳನ್ನು ಎದುರಿಸಬೇಕಾಗಬಹುದು, ನನ್ನ ಕಾರ್ಯದಿಂದ ಇತರರು ಗಾಬರಿಯಾಗಬಹುದು ಮತ್ತು ಕೊನೆಯದಾಗಿ ನನ್ನ ಕಾರ್ಯ ಅಪರಿಪೂರ್ಣವಾಗಿರಬಹುದು: ಆದರೂ ವಿಜ್ಞಾನ ಮತ್ತು ಯಂತ್ರ ಜಗತ್ತಿನ ಸುಧಾರಣೆಗೆ ನನ್ನ ಕೊಡುಗೆ ಕಡಿಮೆಯೇನಿರುವುದಿಲ್ಲ. ಭವಿಷ್ಯದ ಯಶಸ್ಸಿಗೆ ನನ್ನ ಈಗಿನ ಪ್ರಯತ್ನಗಳು ಬುನಾದಿಯಾದರೂ ಆಗಬಹುದು- ಈ ಭಾವನೆಗಳೊಂದಿಗೆ ಮಾನವ ಜೀವಿಯ ಸೃಷ್ಟಿಯ ಕಾರ್ಯವನ್ನು ಪ್ರಾರಂಭಿಸಿದೆ. ನನ್ನ ಮೊದಲ ಉದ್ದೇಶವನ್ನು ಕೊಂಚ ಬದಲಾಯಿಸಿ ಒಂದು ದೈತ್ಯ ಮಾನವನನ್ನೇ ಸೃಷ್ಟಿಸಲು ನಿರ್ಧರಿಸಿದೆ- ಅಂದರೆ ಸುಮಾರು ಎಂಟು ಅಡಿ ಎತ್ತರ ಹಾಗೂ ಎತ್ತರಕ್ಕೆ ತಕ್ಕಂತೆ ದೇಹದ ರಚನೆ. ಈ ನಿರ್ಧಾರದಿಂದ ಸೃಷ್ಟಿಗೆ ಬೇಕಾಗುವ ವಸ್ತು ಸಲಕರಣೆಗಳ ಸಂಗ್ರಹ ಪ್ರಾರಂಭಿಸಿದೆ.
    ಮೊದಲ ಯಶಸ್ಸಿನ ಕನಸಿನ ಉತ್ಸಾಹದ ಸಾಗರದಲ್ಲಿ ತೇಲುತ್ತಿದ್ದ ನನ್ನಲ್ಲಿ ಉಂಟಾಗುತ್ತಿದ್ದ ಭಾವನೆಗಳ ಮಹಾಪೂರವನ್ನು ವರ್ಣಿಸಲು ಸಾಧ್ಯವೇ ಇಲ್ಲ. ಹುಟ್ಟು ಮತ್ತು ಸಾವಿನ ಗಡಿಯನ್ನು ಛಿದ್ರಗೊಳಿಸಿ ನಮ್ಮ ಅಂಧಕಾರ ಜಗತ್ತಿನಲ್ಲಿ ಬೆಳಕನ್ನು ಹರಿಸುವ ಆತುರದಲ್ಲಿದ್ದೆ ನಾನು. ನನ್ನ ಸೃಷ್ಟಿಯ ಹೊಸ ಪ್ರಭೇದ ನಾನು ಅದರ ಸೃಷ್ಟಿಕಾರನಾಗಿರುವುದರಿಂದ ಅದರ ಮೂಲ ಧೈವವೆಂಬಂತೆ ಅದು ನನ್ನನ್ನು ಹರಸುತ್ತದೆ; ಹಲವಾರು ಸಂತೃಪ್ತ ಮತ್ತು ಉತ್ಕೃಷ್ಟ ಜೀವಿಗಳು ನನ್ನಿಂದಲೇ ಅವು ಅಸ್ತಿತ್ವದಲ್ಲಿವೆ ಎಂಬುದನ್ನು ಮನಗಂಡು ನನಗೆ ಆಭಾರಿಯಾಗಿರುತ್ತವೆ. ಈ ರೀತಿಯ ತನ್ನ ಸಂತಾನದ ಕೃತಜ್ಞತೆಯನ್ನು ಯಾವ ತಂದೆಯೂ ಅನುಭವಿಸಿರಲಾರ. ನಾನು ನಿರ್ಜೀವ ವಸ್ತುವಿನಲ್ಲಿ ಜೀವದ ಬೆಳಕನ್ನು ತರಲು ಸಾಧ್ಯವಾದಲ್ಲಿ, ಕ್ರಮೇಣ ದೇಹವನ್ನು ಶಿಥಿಲಗೊಳಿಸುವ ಸಾವಿನ ಸ್ಥಾನದಲ್ಲಿ ಜೀವ ಚಿಗುರುವಂತೆ ಮಾಡಬಹುದು ಎಂದು ನನಗನ್ನಿಸಿತು.
****
ಎದುರಿಗೆ ಸ್ವಲ್ಪ ದೂರದಲ್ಲಿ ಒಂದು ಮನುಷ್ಯಾಕೃತಿ ಕಂಡಿತು, ಅದು ನನ್ನೆಡೆಗೆ ಅತಿಮಾನುಷ ವೇಗದಲ್ಲಿ ಮುನ್ನುಗ್ಗುತ್ತಿತ್ತು. ಹಿಮಗಲ್ಲುಗಳನ್ನು ಹಾರಿ ಬರುತ್ತಿದ್ದ ಅದರ ದೇಹದ ಎತ್ತರ ಮತ್ತು ಗಾತ್ರವೂ ಸಾಧಾರಣ ಮನುಷ್ಯನಿಗಿಂದ ಹೆಚ್ಚಿದ್ದಿತು. ನನ್ನಲ್ಲೇನೋ ಆತಂಕ ಮೂಡಿತು, ಕಣ್ಣು ಮಂಜಿಟ್ಟಿತು, ಪ್ರಜ್ಞೆ ತಪ್ಪುವಂತೆ ಭಾಸವಾಯಿತು; ತಕ್ಷಣ ಪರ್ವತಗಳ ಹಿಮಭರಿತ ಬೀಸುಗಾಳಿ ನನ್ನನ್ನು ಬಡಿದೆಚ್ಚರಿಸಿತು. ಆ ಮಾನವಾಕೃತಿ ಹತ್ತಿರ ಹತ್ತಿರ ಬಂದಂತೆ (ಭಯಾನಕ ಹಾಗೂ ಅಸಹ್ಯ ರೂಪ) ಅದು ನಾನೇ ಸೃಷ್ಟಿಸಿದ ಅನಿಷ್ಟ ಜೀವಿ ಎಂಬುದರ ಅರಿವಾಯಿತು. ರೋಷ ಮತ್ತು ಭಯದಿಂದ ಅದುಹತ್ತಿರ ಬರುವವರೆಗೂ ಕಾದು ನಂತರ ಅದರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ನಿರ್ಧರಿಸಿದೆ. ಅವನು ಹತ್ತಿರ ಹತ್ತಿರ ಬಂದ. ಅವನ ಮುಖದಲ್ಲೂ ಆತಂಕ, ನಿರಾಸೆ ಮತ್ತು ಕೇಡುಭಾವವಿತ್ತು. ಅದರ ಕುರೂಪವಂತೂ ಮಾನವ ಕಣ್ಣುಗಳಿಗೆ ಅತ್ಯಂತ ಭಯಾನಕವಾಗಿತ್ತು. ಆದರೆ ನಾನು ಅವುಗಳನ್ನೆಲ್ಲಾ ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಅವನ ಬಗೆಗೆ ನನ್ನಲ್ಲಿದ್ದ ಕೋಪ ಮತ್ತು ದ್ವೇಷ ನನ್ನಲ್ಲಿನ ಮಾತನ್ನೆಲ್ಲಾ ಕಿತ್ತುಕೊಂಡಂತೆ ಭಾಸವಾಗುತ್ತಿತ್ತು ಆದರೂ ನನ್ನಲ್ಲಿ ಅವನ ಬಗೆಗಿದ್ದ ಹೇಸಿಗೆ ಮತ್ತು ಅವಹೇಳನವನ್ನು ಅವರ ಮೇಲೆ ಕಾರಿದೆ.
`ದೆವ್ವ!’ ನಾನು ಅರಚಿದೆ, `ನನ್ನ ಬಳಿಗೇ ಬರುವಷ್ಟು ಧೈರ್ಯವೇ ನಿನಗೆ? ನಿನ್ನ ಪಾಪಿ ತಲೆಯ ಮೇಲೆ ನನ್ನ ದ್ವೇಷಭರಿತ ತೋಳಿನ ಹೊಡೆತವನ್ನು ಸಹಿಸಿಕೊಳ್ಳಬಲ್ಲೆಯಾ ನೀನು? ತೊಲಗು ನಿಕೃಷ್ಟ ಹುಳುವೆ! ಇಲ್ಲೇ ಇದ್ದರೆ ನಿನ್ನನ್ನು ತುಳಿದು ನಾಶ ಮಾಡುತ್ತೇನೆ! ಹೋ! ನಿನ್ನನ್ನು ಕೊಂದು ನೀನು ಭಯಾನಕವಾಗಿ ಕೊಂದಿರುವವರನ್ನೆಲ್ಲಾ ಬದುಕಿಸುವಂತಿದ್ದರೆ!’
`ಈ ರೀತಿಯ ಸ್ವಾಗತವನ್ನು ನಾನು ನಿರೀಕ್ಷಿಸಿದ್ದೆ,’ ಹೇಳಿದ ಆ ರಕ್ಕಸ. `ಈ ನತದೃಷ್ಟನನ್ನು ಎಲ್ಲ ಜನರೂ ದ್ವೇಷಿಸುತ್ತಾರೆ; ದ್ವೇಷಿಸದೇ ಮತ್ತೇನು ಮಾಡುತ್ತಾರೆ, ಈ ಜೀವ ಜಗತ್ತಿನಲ್ಲಿ ಅತ್ಯಂತ ನಿಕೃಷ್ಟ ನಾನು. ಆದರೆ ನೀನು, ನನ್ನ ಸೃಷ್ಟಿಕರ್ತ- ನೀನೇ ನನ್ನ ಕಂಡರೆ ಅಸಹ್ಯ ಪಡುತ್ತೀಯೆ, ನನ್ನನ್ನು ತಿರಸ್ಕರಿಸಿದ್ದೀಯೆ. ನಾನು ನಿನ್ನದೇ ಜೀವಿ. ನಮ್ಮಿಬ್ಬರ ನಡುವಿನ ಬಂಧನ ಇಬ್ಬರಲ್ಲೊಬ್ಬರ ಸಾವಿನಿಂದಲೇ ಕೊನೆಗಾಣುವಂಥದು. ನೀನು ನನ್ನನ್ನು ಕೊಲ್ಲಲು ಬಯಸಿದ್ದೀಯೆ. ಹಾಗಿರುವಾಗ ಜೀವ ಸೃಷ್ಟಿ ಮಾಡುವ ಹಕ್ಕು ನಿನಗೆಲ್ಲಿದೆ? ನೀನು ನನ್ನ ಬಗೆಗಿನ ಕರ್ತವ್ಯ ನಿಭಾಯಿಸು, ನಾನು ನಿನ್ನ ಬಗೆಗೆ ಹಾಗೂ ಇಡೀ ಮಾನವಕುಲಕ್ಕೆ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ನೀನು ನನ್ನ ಷರತ್ತುಗಳಿಗೆ ಒಪ್ಪಿದಲ್ಲಿ ನಾನು ಅವರನ್ನು ಮತ್ತು ನಿನ್ನನ್ನು ಶಾಂತಿಯಿಂದ ಇರುವಂತೆ ಬಿಡುತ್ತೇನೆ; ಆದರೆ ನೀನು ತಿರಸ್ಕರಿಸಿದಲ್ಲಿ, ಸಾವಿನ ರುದ್ರ ನೃತ್ಯ ತೋರಿಸುತ್ತೇನೆ ಹಾಗೂ ಆ ರೌದ್ರತೆ ಶಮನವಾಗುವುದು ನಿನ್ನ ಉಳಿದ ಗೆಳೆಯರ ರಕ್ತದಿಂದಲೇ!
ಹೋ ಫ್ರಾಂಕೆನ್‌ಸ್ಟೈನ್, ಶಾಂತನಾಗಿರು. ನನ್ನ ಮೇಲೆ ನಿನ್ನ ದ್ವೇಷದ ಹಗೆ ತೀರಿಸುವ ಮೊದಲು ನನ್ನ ಮಾತು ಕೇಳು. ನಾನು ಬದುಕಲ್ಲಿ ಬಹಳಷ್ಟು ಅನುಭವಿಸಿದ್ದೇನೆ. ನನ್ನ ಬದುಕು ಆತಂಕ, ಹಿಂಸೆಯಿಂದಲೇ ಕೂಡಿದ್ದರೂ ಸಹ ನನ್ನ ಜೀವ ನನಗೆ ಪ್ರಿಯವಾದುದು; ನಾನದನ್ನು ರಕ್ಷಿಸಿಕೊಳ್ಳುತ್ತೇನೆ. ನೆನಪಿರಲಿ, ನೀನು ನನ್ನನ್ನು ನಿನಗಿಂತ ಹೆಚ್ಚು ಎತ್ತರದವನಾಗಿ, ಶಕ್ತಿವಂತನಾಗಿ ಮಾಡಿದ್ದೀಯೆ. ನೀನು ನನ್ನ ಸೃಷ್ಟಿಕರ್ತ; ನನ್ನ ಸಹಜ ಪ್ರಭು ಮತ್ತು ದೊರೆಯಾಗಿರುವ ನಿನಗೆ ನಾನು ವಿಧೇಯತೆಯನ್ನು ತೋರುತ್ತೇನೆ. ಎಲ್ಲರಿಗೂ ಒಳ್ಳೆಯವನಾಗಿ ನೀನು ನನ್ನನ್ನೇಕೆ ತಿರಸ್ಕರಿಸಿದ್ದೀಯ? ನನಗೆ ನಿನ್ನ ನ್ಯಾಯದ, ದಯೆಯ ಮತ್ತು ಪ್ರೀತಿಯ ಅವಶ್ಯಕತೆಯಿದೆ. ಅದು ನಿನ್ನ ಕರ್ತವ್ಯವೂ ಹೌದು. ಎಲ್ಲೆಲ್ಲೂ ಸುಖ ಶಾಂತಿಯನ್ನು ಕಾಣುತ್ತಿದ್ದೇನೆ, ಆದರೆ ನಾನು ಮಾತ್ರ ಅದರಲ್ಲಿ ಭಾಗಿಯಾಗದಂತೆ, ಒಬ್ಬಂಟಿಯಾಗಿರುವಂತೆ ನೀನು ಮಾಡಿದ್ದೀಯೆ. ನಾನೂ ಒಳ್ಳೆಯವನಾಗಿದ್ದೆ, ಪರರ ಹಿತಬಯಸುವವನಾಗಿದ್ದೆ, ಆದರೆ ನನ್ನ ಯಾತನೆ ನಾನೊಬ್ಬ ರಕ್ಕಸನಾಗುವಂತೆ ಮಾಡಿದೆ. ನನ್ನನ್ನು ಸಂತೋಷಗೊಳಿಸು, ನಾನು ಪುನಃ ಒಳ್ಳೆಯವನಾಗುತ್ತೇನೆ.’
****
`ಇವನೂ ಸಹ ನನಗೆ ಬಲಿಯಾದ!’ ರಕ್ಕಸ ಉದ್ಘರಿಸಿದ. ಹೋ ಫ್ರಾಂಕೆನ್‌ಸ್ಟೈನ್! ನಿನ್ನ ಕ್ಷಮೆಯನ್ನು ನಾನು ಹೇಗೆ ಕೇಳಲಿ? ನೀನು ಪ್ರೀತಿಸುವವರನ್ನೆಲ್ಲಾ ನಾಶ ಮಾಡಿ ನಿನ್ನನ್ನೂ ನಾಶ ಮಾಡಿದೆ. ಅಯ್ಯೋ! ಆತ ಉತ್ತರಿಸಲಾರ.. ಆತನ ಉಸಿರು ನಿಂತುಹೋಗಿದೆ. ನನ್ನ ಹೃದಯ ಪ್ರೀತಿ, ಕರುಣೆಗೆ ಪ್ರತಿಸ್ಪಂದಿಸುವಂತೆ ನಿರ್ಮಿಸಲಾಗಿತ್ತು. ಆದರೆ ಅದಕ್ಕೆ ದೊರಕಿದ್ದೇನು! ದ್ವೇಷ ಮತ್ತು ತಾತ್ಸಾರ! ನಾನು ಅನುಭವಿಸಿದ ಯಾತನೆ ಮತ್ತು ಹಿಂಸೆಯನ್ನು ನೀನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
     `ನಿಜ, ನಾನೊಬ್ಬ ಕ್ರೂರಿ. ಅಸಹಾಯಕರನ್ನು ಮತ್ತು ಸುಂದರವಾಗಿದ್ದವರ ಕೊಲೆ ಮಾಡಿದ್ದೇನೆ; ನನಗಾಗಲಿ ಇತರರಿಗಾಗಲಿ ಎಂದೂ ಕೇಡು ಮಾಡದ ಮುಗ್ಧ ಹಸುಳೆಗಳು ನಿದ್ರಿಸುವಾಗ ಅವರ ಕತ್ತು ಹಿಸುಕಿ ಕೊಂದಿದ್ದೇನೆ. ನನ್ನ ಸೃಷ್ಟಿಕರ್ತನ ಬದುಕು ನರಕವಾಗುವಂತೆ ಮಾಡಿದ್ದೇನೆ... ಈಗ ಆತ ಅಲ್ಲಿ ಬಿದ್ದಿದ್ದಾನೆ, ಬಿಳಿಚಿಕೊಂಡು, ಸಾವಿನ ಶೈತ್ಯದಲ್ಲಿ ಹೆಪ್ಪುಗಟ್ಟಿ. ನೀನು ನನ್ನನ್ನು ದ್ವೇಷಿಸಿದೆ, ಆದರೆ ನಿನ್ನ ಅಸಹ್ಯ ನನ್ನ ಬಗೆಗಿನ ನನ್ನದೇ ಪಾಪಪ್ರಜ್ಞೆಯನ್ನು ಮೀರಿಸುವಂಥದಲ್ಲ.. ಹೆದರಿಕೋಬೇಡ.. ನಾನಿನ್ನು ಸೂರ್ಯನ ಬೆಳಕನ್ನಾಗಲೀ, ನಕ್ಷತ್ರಗಳನ್ನಾಗಲೀ ನೋಡುವುದಿಲ್ಲ; ತಂಗಾಳಿ ನನ್ನ ಕೆನ್ನೆಗಳ ಮೇಲೆ ಸುಳಿದಾಡಲು ಬಿಡುವುದಿಲ್ಲ. ಎಲ್ಲ ಭಾವನೆ ಮತ್ತು ಸಂವೇದನೆಗಳು ನನ್ನಿಂದ ದೂರವಾಗುತ್ತವೆ. ಕೆಲವರ್ಷಗಳ ಹಿಂದೆ ಮೊಟ್ಟಮೊದಲ ಬಾರಿಗೆ ನಾನು ಕಣ್ಣುಬಿಟ್ಟಾಗ ಬೆಚ್ಚನೆಯ ಬೇಸಿಗೆ, ಎಲೆಗಳ ಸದ್ದು, ಪಕ್ಷಿಗಳ ಚಿಲಿಪಿಲಿ ಗಾನ ನನ್ನಲ್ಲಿ ಎಂತಹ ಸಂತೋಷ ತಂದಿತ್ತು. ಅಷ್ಟೇ ನಾನು ನನ್ನ ಬದುಕಲ್ಲಿ ಕಂಡ ಸುಖ. ಆಗಲೇ ನಾನು ಕಣ್ಣೀರಿಟ್ಟು ಸತ್ತುಹೋಗಬೇಕಿತ್ತು. ಈಗ ನಾನು ನನ್ನ ಸುಖ ಸಂತೋಷವನ್ನು ಸಾವಿನಲ್ಲಲ್ಲದೆ ಮತ್ತೆಲ್ಲಿ ಕಂಡುಕೊಳ್ಳಲಿ?.. ವಿದಾಯ ಒಡೆಯ.’
ಇಷ್ಟು ಹೇಳಿದ ಆ `ರಕ್ಕಸ’ ಕ್ಯಾಬಿನ್ನಿನ ಕಿಟಕಿಯಿಂದ ಹಾರಿ ಹಡಗಿನ ಪಕ್ಕದಲ್ಲೇ ಇದ್ದ ತನ್ನ ಹಿಮದ ದೋಣಿಯೇರಿದ. ನೋಡ ನೋಡುತ್ತಿದ್ದಂತೆಯೇ ಆ ದೋಣಿ ದೈತ್ಯ ಅಲೆಗಳ ನಡುವೆ, ಕತ್ತಲಲ್ಲಿ ಮರೆಯಾಯಿತು.

ಮಂಗಳವಾರ, ಜುಲೈ 10, 2012

ಮುಲ್ಲಾ ನಸ್ರುದ್ದೀನ್ ಕತೆಗಳು ಭಾಗ- 7

`ಸಂವಾದ' ಜುಲೈ ಸಂಚಿಕೆಯಲ್ಲಿ ಪ್ರಕಟವಾದ ನನ್ನ ನಸ್ರುದ್ದೀನ್ ಕತೆಗಳು ಭಾಗ- 7
ಚಿತ್ರಗಳು: ಮುರಳೀಧರ ರಾಠೋಡ್



ಶವಪೆಟ್ಟಿಗೆ
ಮುಲ್ಲಾ ನಸ್ರುದ್ದೀನ್ ತನ್ನ ಊರಿನಲ್ಲಿ ಸಂಬಂಧಿಕರ ಶವಸಂಸ್ಕಾರದಲ್ಲಿ ಪಾಲ್ಗೊಂಡಿದ್ದ. ಶವ ಪೆಟ್ಟಿಗೆಯನ್ನು ಸ್ಮಶಾನಕ್ಕೆ ಕೊಂಡೊಯ್ಯುವಾಗ ಒಬ್ಬ ವ್ಯಕ್ತಿ ಸರ್ವಜ್ಞಾನಿ ಮುಲಾನ ಬಳಿ ತನ್ನ ಒಂದು ಸಂಶಯವನ್ನು ಪರಿಹರಿಸಿಕೊಳ್ಳಲು ಬಂದು,
`ಮುಲ್ಲಾ, ಶವದ ಪೆಟ್ಟಿಗೆಯನ್ನು ಹೊರುವವರು ಮುಂದೆ ಹೊತ್ತರೆ ಒಳ್ಳೆಯದೇ ಅಥವಾ ಹಿಂದೆ ಹೊತ್ತರೆ ಒಳ್ಳೆಯದೆ?’ ಎಂದು ಕೇಳಿದ.
`ಶವದ ಪೆಟ್ಟಿಗೆಯನ್ನು ಮುಂದೆಯಾದರೂ ಹೊರು, ಹಿಂದೆಯಾದರೂ ಹೊರು. ಆದರೆ ಅದರೊಳಗೆ ನೀನಿಲ್ಲದಂತೆ ಜಾಗ್ರತೆ ವಹಿಸು’ ಎಂದ ಮುಲ್ಲಾ.

ಸೈಫು ಯಾರು?
ಒಬ್ಬ ವ್ಯಕ್ತಿ ಅತ್ಯಂತ ಸಿಟ್ಟಿನಿಂದ ದುರುಗುಟ್ಟುತ್ತಾ ಒಂದು ಉಪಾಹಾರ ಗೃಹಕ್ಕೆ ನುಗ್ಗಿದ. ನುಗ್ಗಿದವನೇ ಅಲ್ಲಿದ್ದ ಜನರ ಕಡೆ ತಿರುಗಿ `ಇಲ್ಲಿ ಸೈಫು ಹೆಸರಿನವರು ಯಾರು?’ ಎಂದು ಅರಚಿದ. ಅವನ ರೌದ್ರಾವತಾರ ಕಂಡು ಅಲ್ಲಿದ್ದ ಜನರೆಲ್ಲಾ ಬೆಚ್ಚಿಬಿದ್ದರು. ಆ ವ್ಯಕ್ತಿ ಸಿಟ್ಟಿನಿಂದ ಅರಸುತ್ತಿರುವ ಸೈಫು ಯಾರೆಂದು ಪರಸ್ಪರ ಮುಖ ನೋಡಿಕೊಳ್ಳುತ್ತಿದ್ದರು.
`ಯಾರಿಲ್ಲಿ ಸೈಫು? ಸೈಫು ಇಲ್ಲಿಲ್ಲವೇ?!’ ಮತ್ತೆ ಅರಚಿದ ಆತ. ಆ ಜನರ ನಡುವೆಯಿಂದ ಒಬ್ಬ ವ್ಯಕ್ತಿ ಎದ್ದು ನಿಂತು, `ನಾನೇ ಸೈಫು’ ಎಂದ. ಸಿಟ್ಟಿನಿಂದ ಕುದಿಯುತ್ತಿದ್ದ ಆ ಮನುಷ್ಯ ಆ ವ್ಯಕ್ತಿಯ ಬಳಿ ಬಂದು ಅವನ ಕಪಾಳಕ್ಕೆ ಬಾರಿಸಿ, ಒದ್ದು ನೆಲಕ್ಕೆ ಕೆಡವಿ  ಬಂದ ಹಾಗೆಯೇ ಸರಸರ ಹೊರಕ್ಕೆ ಹೊರಟು ಹೋದ. ಏಟು ತಿಂದ ವ್ಯಕ್ತಿ ನಿಧಾನವಾಗಿ ಮೇಲಕ್ಕೆದ್ದು, ಮೂಗಿನಿಂದ ಸುರಿಯುತ್ತಿದ್ದ ರಕ್ತ ಒರೆಸಿಕೊಂಡ. ಜನರೆಲ್ಲಾ ಆತನ ಪ್ರತಿಕ್ರಿಯೆಯನ್ನೇ ಎದುರುನೋಡುತ್ತಿದ್ದರು. ಆತ ಏನೂ ಮಾಡದೆ, ಪುನಃ ತನ್ನ ಮೇಜಿಗೆ ಹೋಗಿ ತಾನು ತಿನ್ನುತ್ತಿದ್ದ ಆಹಾರ ತಿನ್ನುವುದನ್ನು ಮುಂದುವರೆಸಿದ. ಅಲ್ಲಿದ್ದ ಜನರಲ್ಲಿ ಒಬ್ಬಾತ ಎದ್ದುಬಂದು ಏಟು ತಿಂದ ಆ ವ್ಯಕ್ತಿಯ ಬಳಿ ಹೋಗಿ, `ಅದ್ಹೇಗೆ ನೀನು ಸುಮ್ಮನೇ ಕೂತಿದ್ದೀಯ? ಆ ವ್ಯಕ್ತಿ ಏಟು ಕೊಟ್ಟರೂ ನೀನು ತಿರುಗೇಟು ಕೊಡಲಿಲ್ಲ? ಕನಿಷ್ಠ ಅವನನ್ನು ಬಯ್ಯಲೂ ಇಲ್ಲ?’ ಎಂದ. 
ಆ ವ್ಯಕ್ತಿ ನಿಧಾನವಾಗಿ ತಲೆ ಎತ್ತಿ, `ನಾನು ಆ ವ್ಯಕ್ತಿಗೆ ಮಾಡಿದ ಮೋಸ ನಿನಗೆ ತಿಳಿದಿದ್ದರೆ ನೀನು ಈ ರೀತಿ ಕೇಳುತ್ತಿರಲಿಲ್ಲ’ ಎಂದ ಆ ವ್ಯಕ್ತಿ ತಮಾಷೆಯ ನಗು ನಗುತ್ತಾ.  
`ಹೌದೆ? ನೀನು ಅದೇನು ಮೋಸ ಮಾಡಿದೆ ಆತನಿಗೆ’ ಕೇಳಿದ ಆ ವ್ಯಕ್ತಿ ಕುತೂಹಲದಿಂದ.
ಏಟು ತಿಂದ ವ್ಯಕ್ತಿ `ನಿನಗೆ ಗೊತ್ತೇನು, ನನ್ನ ಹೆಸರು ಸೈಫು ಅಲ್ಲ. ನಾನು ನಸ್ರುದ್ದೀನ್’ ಎಂದ ಹೆಮ್ಮೆಯಿಂದ.

ಉಪದೇಶ
ಒಂದು ದಿನ ಮುಲ್ಲಾ ನಸ್ರುದ್ದೀನ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಅವನ ಊರಿನ ಕೆಲವರು ಆತನ ಬಳಿ ಬಂದು, `ಮುಲ್ಲಾ ನೀನು ನಮ್ಮೂರಿನಲ್ಲಿ ಅತ್ಯಂತ ಮೇಧಾವಿ ಮತ್ತು ವಿದ್ವಾಂಸ. ದಯವಿಟ್ಟು ನಮ್ಮನ್ನು ನಿನ್ನ ಶಿಷ್ಯರನ್ನಾಗಿ ಸ್ವೀಕರಿಸಿ ನಾವು ಹೇಗೆ ಬದುಕಬೇಕೆಂದು ತೋರಿಸಿ ಉಪದೇಶ ಮಾಡು’ ಎಂದು ಕೇಳಿಕೊಂಡರು. ನಸ್ರುದ್ದೀನ್ ಕೊಂಚ ಅಲೋಚಿಸಿ, `ಆಯಿತು. ಬದುಕುವ ದಾರಿ ತೋರಿಸಿಕೊಡುತ್ತೇನೆ. ಎಲ್ಲದಕ್ಕೂ ಮೊದಲು ನೀವು ಬಹಳ ಮುಖ್ಯವಾದ ಆಚರಣೆಯೊಂದನ್ನು ಅನುಸರಿಸಬೇಕು’ ಎಂದ. ಎಲ್ಲರೂ ಭಕ್ತಿ, ವಿನಯದಿಂದ ಆಯಿತೆಂದು ತಲೆದೂಗಿದರು. `ಮೊದಲಿಗೆ ನೀವು ನಿಮ್ಮ ಕಾಲುಗಳ ಮತ್ತು ಚಪ್ಪಲಿಗಳ ಬಗ್ಗೆ ಹೆಚ್ಚು ಆಸ್ಥೆ ವಹಿಸಬೇಕು. ಕಾಲುಗಳನ್ನು ಮತ್ತು ಚಪ್ಪಲಿಗಳನ್ನು ಸದಾ ಶುದ್ಧವಾಗಿಟ್ಟುಕೊಂಡಿರಬೇಕು’ ಎಂದ. ಆ ಜನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಮುಲ್ಲಾನ ಪಾದಗಳೆಡೆಗೆ ನೋಡಿದರು. ಆತನ ಪಾದಗಳು ಗಲೀಜಾಗಿದ್ದವು ಮತ್ತು ಚಪ್ಪಲಿಗಳು ಕಿತ್ತು ಹರಿದುಹೋಗಿದ್ದವು. ಆ ಜನರಲ್ಲೊಬ್ಬ, `ಅದು ಸರಿ ಮುಲ್ಲಾ, ನೀನು ನಮಗೆ ಉಪದೇಶ ಮಾಡುತ್ತಿದ್ದೀಯ. ಆದರೆ ನಿನ್ನ ಪಾದಗಳೇ ಗಲೀಜಾಗಿವೆ, ನಿನ್ನ ಚಪ್ಪಲಿಗಳು ಚಿಂದಿಯಾಗಿವೆ! ಹಾಗಿರುವಾಗ ನಾವು ನಿನ್ನ ಮಾತುಗಳನ್ನು ಅನುಸರಿಸಬೇಕೆಂದು ಹೇಗೆ ನಿರೀಕ್ಷಿಸುತ್ತೀಯಾ?’ ಎಂದು ಕೇಳಿದ. 
`ನಿನ್ನ ಮಾತು ನಿಜ. ಆದರೆ ನಾನು ದಾರಿಯಲ್ಲಿ ಹೋಗುವವರನ್ನೆಲ್ಲಾ, ನನಗೆ ಬದುಕುವ ದಾರಿ ತೋರಿಸಿ, ಉಪದೇಶ ಮಾಡಿ ಎಂದು ಕೇಳುವುದಿಲ್ಲವಲ್ಲಾ!’ ಎಂದ ಮುಲ್ಲಾ ನಸ್ರುದ್ದೀನ್. 

ಹುಟ್ಟು ಮತ್ತು ಸಾವು
ಮುಲ್ಲಾ ನಸ್ರುದ್ದೀನ್ ಆ ಊರಿಗೆ ಹೊಸದಾಗಿ ಬಂದು ನೆಲೆಸಿದ್ದ. ಆತ ಅಡುಗೆ ಮಾಡುವಾಗ ಆತನಿಗೆ ಮತ್ತೊಂದು ಪಾತ್ರೆಯ ಅವಶ್ಯಕತೆ ಬಿತ್ತು. ಪಕ್ಕದ ಮನೆಯವರಲ್ಲಿಗೆ ಹೋಗಿ ಒಂದು ಪಾತ್ರೆಯನ್ನು ಎರವಲು ಕೊಡುವಂತೆಯೂ, ಅದನ್ನು ತಾನು ಮರುದಿನ ಹಿಂದಿರುಗಿಸುತ್ತೇನೆಂದು ಕೇಳಿದ. ಪಕ್ಕದ ಮನೆಯವರು ತಮ್ಮಲ್ಲಿದ್ದ ಒಂದು ಪಾತ್ರೆಯನ್ನು ಕೊಟ್ಟರು. ಅದನ್ನು ಬಳಸಿಕೊಂಡ ನಸ್ರುದ್ದೀನ್ ಮರುದಿನ ಪಾತ್ರೆ ಅವರಿಗೆ ಹಿಂದಿರುಗಿಸಿದ.  ಪಾತ್ರೆ ವಾಪಸ್ಸು ಪಡೆದ ನೆರೆಮನೆಯವರು ಆ ಪಾತ್ರೆಯೊಳಗೆ ಮತ್ತೊಂದು ಚಿಕ್ಕ ಪಾತ್ರೆ ಇರುವುದನ್ನು ಕಂಡು ಅದೇನೆಂದು ನಸ್ರುದ್ದೀನ್‌ನನ್ನು ಕೇಳಿದರು. 
`ಹೋ ಅದೇ? ನಿಮ್ಮ ಪಾತ್ರೆ ಮರಿಹಾಕಿದೆ. ಅದು ನಿಮ್ಮ ಪಾತ್ರೆಯ ಮರಿಯಲ್ಲವೇ? ಅದಕ್ಕೇ ಅದನ್ನು ನಿಮಗೇ ಕೊಡುತ್ತಿದ್ದೇನೆ’ ಎಂದ ನಸ್ರುದ್ದೀನ್.
ನೆರೆಮನೆಯವರಿಗೆ ವಿಚಿತ್ರವೆನ್ನಿಸಿದರೂ ಒಂದು ಪಾತ್ರೆ ಹೆಚ್ಚಿಗೆ ಸಿಕ್ಕಿದ್ದರಿಂದ ಸಂತೋಷವಾಗಿಯೇ ತೆಗೆದುಕೊಂಡರು. 
ಮರುದಿನ ನಸ್ರುದ್ದೀನ್ ಪುನಃ ಅವರ ಮನೆಗೆ ಹೋಗಿ ಮೊದಲು ಪಡೆದುದ್ದಕ್ಕಿಂತ ದೊಡ್ಡ ಪಾತ್ರೆ ಇದ್ದರೆ ಬೇಕೆಂದು ಕೇಳಿದ. ಅದನ್ನು ಮರುದಿನವೇ ಹಿಂದಿರುಗಿಸುವುದಾಗಿ ತಿಳಿಸಿದ. ನೆರೆಮನೆಯವರು ಸಂತೋಷದಿಂದಲೇ ದೊಡ್ಡ ಪಾತ್ರೆ ಕೊಟ್ಟರು. ಆದರೆ ನಸ್ರುದ್ದೀನ್ ಪಾತ್ರೆ ಹಿಂದಿರುಗಿಸಲು ಬರಲೇ ಇಲ್ಲ. ದಿನಗಳು ಕಳೆದು ವಾರವಾಯಿತು. ನೆರೆಮನೆಯವರು ಒಂದು ದಿನ ನಸ್ರುದ್ದೀನ್‌ನ ಮನೆಗೆ ಹೋಗಿ ತಮ್ಮ ಪಾತ್ರೆ ವಾಪಸ್ಸು ಕೊಡುವಂತೆ ಕೇಳಿದರು.
`ಹೋ, ಆ ಪಾತ್ರೆಯೇ? ಅದು ನಾನು ತಂದ ದಿನವೇ ಸತ್ತುಹೋಯಿತು’ ಎಂದ.
ನೆರೆಮನೆಯವರಿಗೆ ಅದನ್ನು ನಂಬಲಾಗಲಿಲ್ಲ. `ಇದೆಂತಹ ತಮಾಷೆ! ಪಾತ್ರೆ ಸತ್ತುಹೋಗುವುದೆಂದರೇನು?’ ಎಂದರು ಸಿಡುಕುತ್ತಲೇ.
`ಏಕೆ ಸಾಯಬಾರದು? ಪಾತ್ರೆ ಮರಿಹಾಕಬಹುದಾದರೆ ಸಾಯಲೂ ಬಹುದಲ್ಲವೇ?’ ಕೇಳಿದ ನಸ್ರುದ್ದೀನ್.

ಸರಿಯಾದ ಜೋಡಿ
ಒಂದು ದಿನ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಗೆಳೆಯ ಚಹಾ ಸೇವಿಸುತ್ತಾ ಆರಾಮವಾಗಿ ಮಾತನಾಡುತ್ತಿದ್ದರು. ವಿಷಯ ಪ್ರೀತಿ ಪ್ರೇಮದ ಕಡೆಗೆ ತಿರುಗಿತು. ಆತನ ಗೆಳೆಯ, `ಎಲ್ಲಾ ಸರಿ ನಸ್ರುದ್ದೀನ್. ನೀನ್ಯಾಕೆ ಇಷ್ಟು ವರ್ಷವಾದರೂ ಮದುವೆಯಾಗಲಿಲ್ಲ?’ ಎಂದು ಕೇಳಿದ.
`ಮದುವೆಯಾಗಬೇಕೆಂದೇ ಇದ್ದೆ’ ಹೇಳಿದ ನಸ್ರುದ್ದೀನ್, `ನಾನು ಯುವಕನಾಗಿದ್ದಾಗ ಎಲ್ಲರೀತಿಯಿಂದಲೂ ಸರಿಯಾದ ಹುಡುಗಿಗಾಗಿ ಅರಸುತ್ತಿದ್ದೆ. ಕೈರೋದಲ್ಲಿ ಒಂದು ಸುಂದರ ಹುಡುಗಿ ಪರಿಚಯವಾದಳು. ಆಕೆ ಸುಂದರಿ, ಬುದ್ಧಿವಂತೆ.... ಆದರೆ ಆಕೆ ಕ್ರೂರಿಯಾಗಿದ್ದಳು. ಆನಂತರ ಬಾಗ್ದಾದ್‌ನಲ್ಲಿ ಮತ್ತೊಬ್ಬ ಹುಡುಗಿ ಪರಿಚಯವಾದಳು. ಆಕೆಯೂ ಸುಂದರವಾಗಿದ್ದಳು. ಆದರೆ ನಮ್ಮಿಬ್ಬರ ನಡುವೆ ಸಮಾನ ಅಂಶಗಳೇ ಇರಲಿಲ್ಲ.... ಇದೇ ರೀತಿ ಹಲವಾರು ಹುಡುಗಿಯರನ್ನು ನೋಡಿದೆ. ಎಲ್ಲರಲ್ಲೂ ಏನೋ ಒಂದು ಐಬಿರುತ್ತಿತ್ತು. ಆದರೂ ಕೊನೆಗೆ ಒಬ್ಬಳು ಎಲ್ಲರೀತಿಯಿಂದಲೂ ನನಗೆ ಸರಿಹೊಂದುವ ಹುಡುಗಿ ಸಿಕ್ಕಳು.......’ ಎನ್ನುತ್ತಾ ಮಾತು ನಿಲ್ಲಿಸಿದ ನಸ್ರುದ್ದೀನ್.
`ಮುಂದೇನಾಯಿತು? ನೀನು ಆಕೆಯನ್ನೇಕೆ ಮದುವೆಯಾಗಲಿಲ್ಲ?’ ಕೇಳಿದ ಆತನ ಗೆಳೆಯ.
 `ಏಕೆಂದರೆ.... ಆಕೆ ಎಲ್ಲ ರೀತಿಯಿಂದಲೂ ಸರಿಯಾಗಿರುವ ಗಂಡನ್ನು ಅರಸುತ್ತಿದ್ದಳು’ ಎಂದ ನಸ್ರುದ್ದೀನ್ ಚಹಾದ ಲೋಟವನ್ನು ತುಟಿಗಿರಿಸುತ್ತ.
ಎರಡು ಮಹಾನ್ ಕೊಡುಗೆಗಳು
ಒಂದು ದಿನ ಮುಲ್ಲಾ ನಸ್ರುದ್ದೀನ್ ಊರಿನ ಮಧ್ಯದ ಚೌಕದಲ್ಲಿ ಫಲಕವೊಂದನ್ನು ತೂಗು ಹಾಕಿದ. ಅದರಲ್ಲಿ ಈ ರೀತಿ ಬರೆದಿತ್ತು: `ನನ್ನ ಕತ್ತೆಯನ್ನು ಕದ್ದಿರುವವರು ದಯವಿಟ್ಟು ನನಗೆ ಹಿಂದಿರುಗಿಸಿ. ನಾನು ಅದನ್ನೇ ನಿಮಗೆ ಉಡುಗೊರೆಯಾಗಿ ಕೊಡುತ್ತೇನೆ’. 
ಅದನ್ನು ಓದಿದ ಊರಿನ ಜನರೆಲ್ಲಾ, `ಇದೇನು ನಸ್ರುದ್ದೀನ್! ಇದೆಂತಹ ಹುಚ್ಚು ಹೇಳಿಕೆಯ ಫಲಕ! ಕದ್ದದ್ದನ್ನು ವಾಪಸ್ಸು ಅವರಿಗೇ ಕೊಡುವುದಾದರೆ ಈ ಫಲಕ ಏಕೆ ಬೇಕು?’ ಎಂದು ಆಶ್ಚರ್ಯದಿಂದ ಕೇಳಿದರು.
ಆ ರೀತಿ ಕೇಳಿದ ಜನರಿಗೆ ಮುಲ್ಲಾ, `ಬದುಕಿನಲ್ಲಿ ಎರಡು ಮಹಾನ್ ಕೊಡುಗೆಗಳಿವೆ. ಮೊದಲನೆಯದು, ನೀವು ಅತ್ಯಂತ ಪ್ರೀತಿಸುವ ವಸ್ತು ಕಳೆದುಹೋಗಿದ್ದು, ಅದು ಪುನಃ ನಿಮಗೆ ದೊರಕಿದಾಗ ಸಿಗುವ ಸಂತೋಷ. ಎರಡನೆಯದು, ನೀವು ಅತ್ಯಂತ ಪ್ರೀತಿಸುವ ವಸ್ತುವನ್ನು ಇತರರಿಗೆ ಕೊಡುಗೆಯಾಗಿ ನೀಡುವಾಗ ಸಿಗುವ ಸಂತೋಷ’ ಎಂದ.

ಗುರುವಾರ, ಜೂನ್ 14, 2012

ಕತೆ ಹೇಳದ ಶಿಲೆಗಳು- ಸ್ಟೋನ್‌ಹೆಂಜ್

ಈ ವಾರದ `ಸುಧಾ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಚಿತ್ರ ಲೇಖನ
ಕತೆ ಹೇಳದ ಶಿಲೆಗಳು- ಸ್ಟೋನ್‌ಹೆಂಜ್


ಬಾತ್ ನಗರದ ರೋಮನ್ನರು ನಿರ್ಮಿಸಿದ ಬಿಸಿನೀರ ‘ಸ್ನಾನದಮನೆ’ಯಿಂದ ನಮ್ಮ ಪಯಣ ಮುಂದುವರಿದದ್ದು ಸ್ಟೋನ್‌ಹೆಂಜ್ ದಿಕ್ಕಿನೆಡೆಗೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಅದರ ಬಗ್ಗೆ ಓದಿದಾಗಿನಿಂದಲೂ ಅದರ  ನಿಗೂಢತೆಯ ಬೆರಗು ನನ್ನಿಂದ ದೂರವಾಗಿರಲಿಲ್ಲ. ಒಂದಲ್ಲ ಒಂದು ದಿನ ನಾನೇ ಸ್ವತಃ ಅದನ್ನು ನೋಡುತ್ತೇನೆಂದು ನಾನು ಊಹಿಸಿಯೂ ಇರಲಿಲ್ಲ. ಸುಮಾರು ಐದು ಸಾವಿರ ವರ್ಷಗಳ ಅಥವಾ ಅದಕ್ಕಿಂತಲೂ ಹಳೆಯದಾದ ಈ ಪುರಾತನ ಮಾನವ ನಿರ್ಮಿತ ರಚನೆ ಶತಶತಮಾನಗಳಿಂದ ನಿಬ್ಬೆರಗಿನ ವಸ್ತುವಾಗಿದೆ. ಸ್ಟೋನ್‌ಹೆಂಜ್ ಒಬ್ಬ ವ್ಯಕ್ತಿಯ ಅಥವಾ ಸಮುದಾಯದ ಸ್ಮಶಾನವೇ? ಖಗೋಳ ಅಧ್ಯಯನದ ರಚನೆಯೆ? ಬಲಿ ನೀಡುತ್ತಿದ್ದ ಒಂದು ಆರಾಧನಾ ಸ್ಥಳವೇ? ಯಾವುದೇ ಲೋಹದ ಆವಿಷ್ಕಾರವಾಗಿರದ ಸಮಯದ ಆದಿ ಮಾನವ ಅಷ್ಟೊಂದು ಬೃಹತ್ ಶಿಲಾರಚನೆಯನ್ನು ಹೇಗೆ ನಿರ್ಮಿಸಿದ? ಅವುಗಳ ನಿರ್ಮಾಣಕ್ಕೆ ಬೃಹತ್ ಶಿಲೆಗಳನ್ನು ನೂರಾರು ಮೈಲುಗಳ ದೂರದಿಂದ ಹೇಗೆ ಸಾಗಿಸಿದ? ಅವುಗಳ ನಿರ್ಮಾಣದಲ್ಲಿ ಎಷ್ಟು ಜನ ತೊಡಗಿರಬಹುದು ಎಷ್ಟು ತಲೆಮಾರುಗಳು ಅವುಗಳನ್ನು ನಿರ್ಮಿಸಿರಬಹುದು? ಅಥವಾ ಕೆಲವರು ಹೇಳುವಂತೆ ಅದನ್ನು ಅನ್ಯಗ್ರಹ ಜೀವಿಗಳು ನಿರ್ಮಿಸಿದವೆ? ಅದು ಅವರು ಬಂದಿಳಿಯುವ ನಿಲ್ದಾಣವಾಗಿತ್ತೆ? ಅದರ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಅದನ್ನು ಅನ್ಯಗ್ರಹ ಜೀವಿಗಳು ನಿರ್ಮಿಸಿರುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಅದೇನೇ ಆಗಿರಲಿ, ಅದನ್ನು ನಿರ್ಮಿಸಿದ ಮಾನವನಿಗೆ ಅದನ್ನು ಏಕೆ ನಿರ್ಮಿಸುತ್ತಿದ್ದೇನೆ ಎನ್ನುವ ಸ್ಪಷ್ಟ ಕಲ್ಪನೆ ಖಂಡಿತಾ ಇತ್ತು ಎನ್ನುವುದು ನಿಜ.

ಆದರೆ, ಕಲ್ಲು ಮಾತನಾಡುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೆ? ನಾವು ಸ್ಟೋನ್‌ಹೆಂಜ್ ತಲುಪಿದಾಗ ಸಂಜೆ ಸುಮಾರು ಐದು ಗಂಟೆಯಾಗಿತ್ತು. ದಕ್ಷಿಣ ಇಂಗ್ಲೆಂಡಿನ ಸ್ಯಾಲಿಸ್‌ಬರಿ ಬಯಲುಸೀಮೆಯ ದೊಡ್ಡ  ಬಯಲಿನಲ್ಲಿರುವ ಸ್ಟೋನ್‌ಹೆಂಜ್ ಈಗ ಒಂದು ‘ಇಂಗ್ಲಿಷ್ ಹೆರಿಟೇಜ್’ ಸ್ಥಾನವಾಗಿದ್ದು ಅಲ್ಲಿ ಯಾವುದೇ ಶಾಶ್ವತ ಸಿಮೆಂಟ್ ಕಟ್ಟಡಗಳಿಲ್ಲ. ಅಲ್ಲಿನ ಸ್ಥಳ ಮತ್ತು ರಚನೆಯನ್ನು ವಿವರಿಸಲು ಅಥವಾ ಗೈಡ್ ಮಾಡಲು ಯಾರೂ ಬರುವುದಿಲ್ಲ. ಬದಲಿಗೆ ಎಲ್ಲರಿಗೂ ಉಚಿತವಾಗಿ ‘ಆಡಿಯೋ ಗೈಡ್’ ಕೊಡುತ್ತಾರೆ. ಅದು ಇಂಗ್ಲಿಷ್ ಮತ್ತು ಹಲವಾರು ಯೂರೋಪಿಯನ್ ಭಾಷೆಗಳಲ್ಲಿ ಸ್ಟೋನ್‌ಹೆಂಜ್‌ನ ವಿವರಣೆ ನೀಡುತ್ತದೆ. ಸ್ಟೋನ್‌ಹೆಂಜ್ ಸುತ್ತಲೂ ಅಲ್ಲಲ್ಲಿ ಸಂಖ್ಯೆ ಮತ್ತು ಹೆಡ್‌ಫೋನ್ ಚಿತ್ರವಿದ್ದು ಆ  ಸ್ಥಳದಲ್ಲಿ ನಿಂತು ಆ ಸಂಖ್ಯೆಯನ್ನು ನಿಮ್ಮ ಆಡಿಯೋ ಗೈಡ್‌ನಲ್ಲಿ ಒತ್ತಿದರೆ ಅದು ಆ ಸ್ಥಳದ ವಿವರಣೆ ಹೇಳುತ್ತದೆ. ಆ ವಿವರಣೆ ಎಷ್ಟು ಸ್ಪಷ್ಟವಾಗಿ ಮತ್ತು ನಿಖರವಾಗಿ ಇರುತ್ತದೆಂದರೆ ಯಾವುದೋ ವ್ಯಕ್ತಿ ನಿಮ್ಮೆದುರಿಗೆ ನಿಂತು ವಿವರಣೆ ನೀಡುವಂತಿರುತ್ತದೆ. ಆ  ಸ್ಥಳದ ವಿವರಣೆ ಮುಗಿದ ತಕ್ಷಣ ಅದೇ ಮುನ್ನಡೆಯಲು ಹೇಳಿ ಕರೆದೊಯ್ಯುತ್ತದೆ.

ರೊಯ್ಯನೆ ಬೀಸುತ್ತಿದ್ದ ತಂಗಾಳಿ ವಾತಾವರಣವನ್ನು ನಿಗೂಢವಾಗಿಸಿತ್ತು. ಇದೇ ಸ್ಥಳದಲ್ಲಲ್ಲವೇ ಸಾವಿರಾರು ವರ್ಷಗಳ ಹಿಂದಿನ ಮಾನವ ನಡೆದಾಡಿದ್ದು? ಆ ಬೃಹತ್ ಶಿಲೆಗಳನ್ನು ಎಳೆದಾಡಿದ್ದು? ಇಲ್ಲಿಯೇ ಎಷ್ಟೋ ಜನರ  ಸಮಾಧಿಗಳು ದೊರೆತಿವೆ. ಪ್ರೇತಾತ್ಮಗಳಲ್ಲಿ ನನಗೆ ನಂಬಿಕೆ ಇಲ್ಲದಿದ್ದರೂ ಒಂದರೆಕ್ಷಣ ಈ ಶಿಲಾರಚನೆಯನ್ನು ನಿರ್ಮಿಸಿದ ಮಾನವರ ಆತ್ಮಗಳು ನಮ್ಮನ್ನು ಗಮನಿಸುತ್ತಿರಬಹುದೆ ಎನ್ನಿಸಿತು.


ಮೊದಲ ನೋಟಕ್ಕೆ ಸ್ಟೋನ್‌ಹೆಂಜ್ ಏನೂ ಅನ್ನಿಸುವುದಿಲ್ಲ. ಯಾವುದೋ ಬಯಲಿನಲ್ಲಿ ಏನೋ ಕಲ್ಲುಗಳನ್ನು ತಂದು ನಿಲ್ಲಿಸಿದ್ದಾರೆ ಎನ್ನಿಸುತ್ತದೆ. ನೋಡನೋಡುತ್ತಿದ್ದಂತೆ ಶತಶತಮಾನಗಳಿಂದ ತನ್ನೆಲ್ಲ ನಿಗೂಢಗಳನ್ನು ಇಂದಿಗೂ ಬಿಟ್ಟುಕೊಡದ ಅದು ನಮ್ಮ ಬೆರಗನ್ನು ಅಪಹಾಸ್ಯ ಮಾಡುವಂತೆ ತೋರುತ್ತದೆ, ನಾಗರಿಕತೆಯ ಎಲ್ಲ ಹಂತಗಳನ್ನು ಕಂಡಿರುವ ಅದೊಂದು ನಿಗೂಢ ಕಾಲನೌಕೆಯಂತೆ ಭಾಸವಾಗುತ್ತದೆ.

ಸ್ಟೋನ್‌ಹೆಂಜ್ ನಿರ್ಮಿಸಿದ ಜನರು ಅದನ್ನು ಬೇಕಾಬಿಟ್ಟಿ ನಿರ್ಮಿಸಿಲ್ಲ. ಅವರು ಎಂಥದನ್ನೋ, ಹಿಂದೆಂದು ತಿಳಿದಿರದ ಹೊಸ ವಿಷಯವೊಂದನ್ನು, ಎಂಥದೋ ಸತ್ಯವೊಂದನ್ನು ಕಂಡುಕೊಂಡಿದ್ದರು. ಆ ಶಿಲಾರಚನೆಗಳು ನಮಗೆ ಬಿಟ್ಟುಕೊಡದ ನಿಗೂಢ ಅರ್ಥವನ್ನು ತಮ್ಮ ಒಡಲಲ್ಲಿ ಹುದುಗಿಸಿಕೊಂಡಿವೆ. ಆ ರಚನೆಗಳ ಅರ್ಥ ಏನಿರಬಹುದು? ಶತಶತಮಾನಗಳಿಂದ ಜನ ಅವುಗಳಿಗೆ ತಮ್ಮದೇ ವ್ಯಾಖ್ಯಾನಗಳನ್ನು ನೀಡುತ್ತಾ ಬಂದಿದ್ದಾರೆ. ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ವ್ಯಾಖ್ಯಾನಗಳನ್ನು ಪಡೆದಿರುವ ಹಾಗೂ ಇನ್ನೂ ಪಡೆಯುತ್ತಿರುವ  ಅತ್ಯಂತ ಪ್ರಾಚೀನ ಮಾನವ ನಿರ್ಮಿತ ರಚನೆ ಇದೇ ಆಗಿರಬಹುದು- ಇಂದಿಗೂ ಅದನ್ನು ನಿರ್ಮಿಸಿದವರು ಅದನ್ನು ಯಾವುದಕ್ಕಾಗಿ ನಿರ್ಮಿಸಿದರು ಎಂಬುದು ನಮಗೆ ತಿಳಿದಿಲ್ಲ. ಈ ಹಿಂದೆ ಪ್ರಾಕ್ತನ ಶಾಸ್ತ್ರಜ್ಞರು ಅದರ ಅಂಗುಲ ಅಂಗುಲವನ್ನೂ, ಅವುಗಳ ನೆರಳನ್ನೂ ಬಿಡದಂತೆ ಅಭ್ಯಸಿಸಿ ಅವುಗಳ ಅರ್ಥ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಅವುಗಳ ಮೇಲಿನ ಅಧ್ಯಯನಗಳು ಇಂದಿಗೂ ನಡೆಯುತ್ತಿವೆ. ಸುತ್ತಮುತ್ತಲ ಪ್ರದೇಶಗಳಲ್ಲೂ ಅಧ್ಯಯನಗಳು ನಡೆಯುತ್ತಿವೆ. ಹತ್ತಿರದಲ್ಲೇ ಒಂದು ಶಿಲಾಯುಗದ ಗ್ರಾಮಗಳ ಉಳಿಕೆಗಳು ದೊರೆತಿವೆ, ಸತ್ತವರನ್ನು ಹೂತಿಟ್ಟಿ ಸ್ಥಳಗಳಲ್ಲಿ ಅಸ್ಥಿಪಂಜರಗಳು ದೊರೆತಿವೆ, ಶಿಲೆಯ ಬಾಣದ ಮೊನೆಗಳು ದೊರೆತಿವೆ.

ಸ್ಟೋನ್‌ಹೆಂಜ್ ಪೂರ್ಣಗೊಂಡಾಗ ಹೀಗಿದ್ದಿರಬಹುದು- ಕಲಾವಿದನ ಕಲ್ಪನೆ

ಇಂಗ್ಲಿಷ್‌ನಲ್ಲಿ ‘ಹೆಂಜ್’ ಎಂದರೆ ಮಧ್ಯೆ ತಗ್ಗು ಇದ್ದು ಸುತ್ತಲೂ ಬದು ಅಥವಾ ಕಾಲುವೆಯಂತಹ ರಚನೆ ಇರುವುದು. ಆ ಅರ್ಥದಲ್ಲಿ ಸ್ಟೋನ್‌ಹೆಂಜ್ ಒಂದು ‘ಹೆಂಜ್’ ಅಲ್ಲವೇ ಅಲ್ಲ. ಅಲ್ಲಿ ವರ್ತುಲಾಕಾರದಲ್ಲಿ ಸುತ್ತಲೂ ಕಾಲುವೆಯಿದ್ದು ಮಧ್ಯೆ ಉಬ್ಬಿದ ಅಥವಾ ದಿಬ್ಬದಂತಹ ರಚನೆ ಇತ್ತು. ಈಗ ಜನರು, ಪ್ರಾಖ್ತನ ತಜ್ಞರು ಓಡಾಡಿ ಅದು ಸಮತಟ್ಟಾಗಿದೆ. ಶಿಲಾಯುಗದ ವೃತ್ತಾಕಾರದ ಕಾಲುವೆಯಂತಹ ರಚನೆಗಳು, ದಿಬ್ಬಗಳು, ವೃತ್ತಾಕಾರದ ಮರದ ರಚನೆಗಳು, ಕಲ್ಲಿನ  ವೃತ್ತಾಕಾರದ ಮತ್ತು ಕುದುರೆ ಲಾಳದ ಆಕಾರದ ರಚನೆಗಳು ಬ್ರಿಟನ್ನಿನಲ್ಲೆಲ್ಲಾ ಕಂಡುಬಂದಿವೆ. ಸ್ಟೋನ್‌ಹೆಂಜ್ ತನ್ನ ವಿಕಾಸದ ಹಾದಿಯಲ್ಲಿ ಈ ಎಲ್ಲ ಹಂತಗಳನ್ನೂ ಹಾದುಬಂದಿದೆ. ಇಂದಿನ ಕಾಲಕ್ಕೆ ವಿಶಿಷ್ಟ ರಚನೆಯೆನ್ನಿಸುವ ಸ್ಟೋನ್‌ಹೆಂಜ್ ಬಹುಶಃ ಸುಮಾರು 5000 ವರ್ಷಗಳ ಹಿಂದೆ ತನ್ನದೇ ಸಮಯದಲ್ಲೂ ವಿಶಿಷ್ಟ ರಚನೆಯೇ ಆಗಿದ್ದಿರಬಹುದು. ಆ ಶಿಲಾರಚನೆ ನಿರ್ಮಾಣವಾಗಿ ಸುಮಾರು 5000 ವರ್ಷಗಳಾಗಿದ್ದಲ್ಲಿ ಅದು ಇರುವ ಸ್ಥಳದಲ್ಲಿ ಅದಕ್ಕಿಂತಲೂ ಮೊದಲು ಅದೇ ಸ್ಥಳದಲ್ಲಿ ಮರದ  ರಚನೆಗಳಿದ್ದ ಕುರುಹುಗಳಿವೆ. ಆ ರಚನೆಗಳು ಅಲ್ಲಿನ ಜನರ ವಾಸವನ್ನು ಸುಮಾರು ಎಂಟು ಸಾವಿರ ವರ್ಷಕ್ಕೂ ಹಿಂದಕ್ಕೆ ಕೊಂಡೊಯ್ಯುತ್ತವೆ. 

ಸ್ಟೋನ್‌ಹೆಂಜ್‌ನ ಬೃಹತ್ ನೀಲಶಿಲೆಗಳನ್ನು 240 ಕಿ.ಮೀ. ದೂರದಲ್ಲಿರುವ ವೇಲ್ಸ್‌ನ ಪ್ರೆಸಿಲಿ ಪರ್ವತಗಳ ಕ್ವಾರಿಗಳಿಂದ ಸಾಗಿಸಿ ತರಲಾಗಿದೆ. ಬಹುಪಾಲು ಆ ಶಿಲೆಗಳನ್ನು ಕ್ರಿ.ಪೂ.2500 ವರ್ಷಗಳಿಗೆ ಮೊದಲೇ ಸಾಗಿಸಿರಬೇಕು. ಇನ್ನೂರ ಐವತ್ತು ಮೈಲುಗಳ ದೂರದಿಂದ ಆ ಶಿಲೆಗಳನ್ನು ಆ ಕಾಲದಲ್ಲಿ ಹೇಗೆ ಸಾಗಿಸಿದರೆಂಬುದೇ ವಿಸ್ಮಯದ ವಿಷಯ. ಅದಾದನಂತರ ತಲಾ 40 ಟನ್‌ಗೂ ಹೆಚ್ಚು ತೂಕವಿರುವ ಸಾರ್ಸೆನ್ ಶಿಲೆಗಳೆಂದು ಕರೆಯಲ್ಪಡುವ ದೈತ್ಯ ಶಿಲೆಗಳನ್ನು 30 ಕಿ.ಮೀ. ದೂರದ  ಮಾರ್ಲ್‌ಬರೋ ಡೌನ್‌ನಿಂದ ಸಾಗಿಸಿ ತಂದಿದ್ದಾರೆ. ಅವುಗಳ ಸಾಗಾಣಿಕೆಯನ್ನು ಏವಾನ್ ನದಿಯ ಮೂಲಕ ಮಾಡಿರಬಹುದೆಂಬುದು ತಜ್ಞರ ಊಹೆ. ಸ್ಟೋನ್‌ಹೆಂಜ್ ಒಂದು ರೀತಿಯಲ್ಲಿ ನಿರಂತರವಾಗಿ ವಿಕಾಸಗೊಂಡ ರಚನೆಯಾಗಿದೆ. ಕಾರ್ಬನ್ ಡೇಟಿಂಗ್ ಅನ್ವಯ  ಸ್ಟೋನ್‌ಹೆಂಜ್‌ನ ಶಿಲಾರಚನೆಯ ಮೊದಲ ಹಂತದ ನಿರ್ಮಾಣ ಕಾರ್ಯ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಪ್ರಾರಂಭವಾಯಿತು ಹಾಗೂ ಕೊನೆಯ ಹಂತದ ನಿರ್ಮಾಣ ಕಾರ್ಯ ಸುಮಾರು ಮೂರು ಸಾವಿರದ ಮುನ್ನೂರು ವರ್ಷಗಳ ಹಿಂದೆ ನಡೆದಿದೆ. ಶಿಲಾರಚನೆಯ ನಿರ್ಮಾಣ ಕಾರ್ಯಕ್ಕೂ ಮೊದಲು ಅಲ್ಲಿ ಮರದ ರಚನೆಯಿದ್ದ ಗುರುತುಗಳಿವೆ. ಜಾನ್ ಆಬ್ರೆ (1626-1697) ಎಂಬ ಪ್ರಾಖ್ತನ ತಜ್ಞ ಮೊದಲಿಗೆ ಮರದ ಕಂಬಗಳನ್ನು ನೆಟ್ಟಿದ್ದ ಗುರುತುಗಳನ್ನು ಪತ್ತೆ ಹಚ್ಚಿದ್ದರಿಂದ ಆ ಗುರುತುಗಳಿಗೆ ‘ಆಬ್ರೆ ರಂಧ್ರಗಳು’ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಆ ರಂಧ್ರಗಳು ವೃತ್ತಾಕಾರದಲ್ಲಿ ಸ್ಟೋನ್‌ಹೆಂಜ್‌ನ ಸುತ್ತಲೂ ಇವೆ. ಶಿಲಾರಚನೆಗೂ ಮೊದಲು ಅಲ್ಲಿ ಮರದ ಕಂಬಗಳ ರಚನೆಯಿದ್ದು ಆ ಕಂಬಗಳು ಕ್ರಮೇಣ ಶಿಥಿಲಗೊಂಡು, ಕೊಳೆತುಹೋದನಂತರ ಆ  ರಂಧ್ರಗಳಲ್ಲಿ ಸತ್ತವರನ್ನು ಸುಟ್ಟನಂತರ ಅವರ ಬೂದಿ ಮತ್ತು ಇತರ ಅವಶೇಷಗಳನ್ನು ಹೂಳಲಾಗಿದೆ.

ಸ್ಟೋನ್‌ಹೆಂಜ್‌ನ ಪಕ್ಷಿನೋಟ- ಇಂಟರ್‌ನೆಟ್ ಚಿತ್ರ

ಹತ್ತಿರದ ಏವಾನ್ ನದಿಯೊಂದಿಗೆ ನಮಗೆ ತಿಳಿದಿರದ ಸಂಬಂಧ ಹೊಂದಿರುವ ಅದರ ಅಂತಿಮ ರೂಪ ನೀಡಿದ ಜನರ ಉದ್ದೇಶ ಬಹುಶಃ ಅವರ ಪೂರ್ವಜರು ಮೂಲದಲ್ಲಿ ಆ ಸ್ಥಳದಲ್ಲಿ ಮಣ್ಣು ಮತ್ತು ಮರದಿಂದ ರಚಿಸಿದ ರಚನೆಗಿಂತ  ತೀರಾ ಭಿನ್ನವಾಗಿದ್ದಿರಬಹುದು. ಆ ಶಿಲೆಗಳ ಬಳಿ ನಿಂತಾಗ ಆ ಸ್ಮಾರಕದ ಮೂಲ ರಚನೆ ಹೇಗಿದ್ದಿರಬಹುದೆಂಬುದನ್ನು ಊಹಿಸಿಕೊಳ್ಳುವುದು ಕಷ್ಟ. ಅಳಿದುಳಿದಿರುವ ಶಿಲೆಗಳಿಂದ ವಿಜ್ಞಾನಿಗಳು ಅದರ ಮೂಲ ರಚನೆ ಹೇಗಿದ್ದಿರಬಹುದೆಂದು ಊಹಿಸಿದ್ದಾರೆ. ಮುವ್ವತ್ತು ಸಾರ್ಸೆನ್ ಶಿಲೆಗಳು ಹೊರಗಿನ ವೃತ್ತಾಕಾರವನ್ನು ರಚಿಸಿದ್ದವು. ಅವುಗಳಲ್ಲಿ ಇಂದು ಹದಿನೇಳು ಮಾತ್ರ ಉಳಿದಿವೆ. ಆ ಸಾರ್ಸೆನ್ ಶಿಲೆಗಳ ಮೇಲೆ ಆಯತಾಕಾರದ ಕಲ್ಲುಗಳನ್ನು (ಕ್ಯಾಪ್ ಸ್ಟೋನ್ಸ್) ಇರಿಸಲಾಗಿದೆ. ಅವು ನಿಖರ ಆಯಾತಾಕಾರದ ರಚನೆಗಳಲ್ಲ. ಅವುಗಳ  ಹೊರಭಾಗ ಹಾಗೂ ಒಳಭಾಗವನ್ನು ಅವು ಒಟ್ಟಿಗೆ ಒಂದರ ಪಕ್ಕ ಒಂದನ್ನು ಜೋಡಿಸಿದಾಗ ಸಂಪೂರ್ಣ ವೃತ್ತಾಕಾರವಾಗುವಂತೆ ರಚಿಸಲಾಗಿದೆ. ಅಷ್ಟೇ ಅಲ್ಲದೆ ಆ ಶಿಲೆಗಳನ್ನು ಎರಡು ಮರಗಳನ್ನು ಕೂಡಿಸುವಾಗ ಒಂದರಲ್ಲಿ ರಂಧ್ರ ಹಾಗೂ ಮತ್ತೊಂದರಲ್ಲಿ ಗೂಟದಂತೆ ಮಾಡಿ, ಬಿಗಿಯಾಗಿ ಕೂಡಿಸಲಾಗಿದೆ. ಇಂದು ಆ ರೀತಿಯ ಮೂರು ಕ್ಯಾಪ್‌ಸ್ಟೋನ್‌ಗಳು ಮೂಲ ಆಕಾರದಲ್ಲೇ ಇರುವುದನ್ನು ಈಶಾನ್ಯ ದಿಕ್ಕಿನಿಂದ ಕಾಣಬಹುದಾಗಿದೆ (ಚಿತ್ರ ನೋಡಿ). ಆ ಹೊರ ವೃತ್ತದೊಳಗೆ ಅರವತ್ತು ನೀಲ ಶಿಲೆಗಳ ಮತ್ತೊಂದು ಒಳವೃತ್ತಾಕಾರದ ರಚನೆಯಿತ್ತು. ಆ ರಚನೆಯ ಒಳಗೆ ಕುದುರೆಯಲಾಳದಾಕಾರದಲ್ಲಿ ಬೃಹತ್ ಸಾರ್ಸೆನ್ ಶಿಲೆಗಳ ರಚನೆಯಿತ್ತು. ಅದರೊಳಗೆ ‘ಬಲಿಪೀಠ’ ಶಿಲೆಯಿದೆ. 

ಐದು ಸಾವಿರ ವರ್ಷಗಳ ಹಿಂದೆ ಶಿಲಾಯುಗದಲ್ಲಿ ಲೋಹಗಳೇ ಇಲ್ಲದ ಸಮಯದಲ್ಲಿ ಸ್ಟೋನ್‌ಹೆಂಜ್ ನಿರ್ಮಾಣಕ್ಕೆ ಕುಳಿತೋಡಲು ಬಳಸಲಾಗಿರುವ ಜಿಂಕೆಯ ಕವಲು ಕೊಂಬುಗಳು ಹಾಗೂ ಅದಕ್ಕೂ ಹಿಂದಿನ ಸಮಯದ ಬಹುಶಃ ಬಲಿನೀಡಿರಬಹುದಾದ  ಎತ್ತಿನ ಕೆಳದವಡೆ


ಸ್ಟೋನ್‌ಹೆಂಜ್‌ನ ಅದರ ನಿರ್ಮಾಣ ಹೇಗೆ ನಡೆದಿರಬಹುದೆಂಬುದನ್ನು ಊಹಿಸಿಕೊಳ್ಳಬಹುದು- ಯೋಜನೆ, ಕೌಶಲ್ಯ, ಆ ಶಿಲೆಗಳನ್ನು ನೂರಾರು ಕಿಲೋಮೀಟರುಗಳಿಂದ ಸಾಗಿಸುವಾಗಿನ ಶ್ರಮ, ಅದರ ನಿರ್ಮಾಣದಲ್ಲಿ ನೂರಾರು ಜನರನ್ನು ತೊಡಗಿಸಿಕೊಂಡಿರುವುದು, ಅವರಿಂದ ದುಡಿಸಿಕೊಳ್ಳುವ ಚಾಕಚಕ್ಯತೆ. ಅದರ ನಿರ್ಮಾಣದ ಸಮಯದಲ್ಲಿನ ಬ್ರಿಟನ್ನರು ಬಹುಪಾಲು ರೈತರು ಮತ್ತು ದನಗಾಹಿಗಳಾಗಿದ್ದರು ಎನ್ನುತ್ತಾರೆ ವಿಜ್ಞಾನಿಗಳು. ಆಗಿನ ಅವರ ಸಾಮಾಜಿಕ ರಚನೆ ಹೇಗಿತ್ತು, ಆಗ ಅವರ  ಭಾಷೆ ಯಾವುದಿತ್ತು ಎನ್ನುವುದು ಯಾರಿಗೂ ತಿಳಿದಿಲ್ಲ. ಸ್ಟೋನ್‌ಹೆಂಜ್‌ನ ಆಸುಪಾಸಿನಲ್ಲಿ ದೊರೆದಿರುವ ಅಸ್ಥಿಪಂಜರಗಳಿಂದ ಅವರ ದೇಹ ರಚನೆ ಆಧುನಿಕ ಮಾನವರಿಗಿಂತ ಕೊಂಚ ಸಣ್ಣದೇ ಆಗಿತ್ತು ಎನ್ನುವುದಾಗಿ ತಿಳಿದುಬಂದಿದೆ. ಅವರ ಸರಾಸರಿ ಆಯುಷ್ಯ ಎಷ್ಟಿತ್ತೆನ್ನುವುದನ್ನು ಲೆಕ್ಕಹಾಕುವುದು ಕಷ್ಟ, ಆದರೆ ಅವರು ಆರೋಗ್ಯಕರ ಜೀವನ ನಡೆಸುತ್ತದ್ದರೆನ್ನಲು ಬೇಕಾದಷ್ಟು ಪುರಾವೆಗಳಿವೆ. ಆದರೂ ಶೇ.5ರಿಂದ 6ರಷ್ಟು ಜನರ ತಲೆಯ ಬುರುಡೆಗಳಲ್ಲಿ -ಗಂಡು ಮತ್ತು ಹೆಣ್ಣುಗಳಿಬ್ಬರದೂ- ಬಲವಾದ ಹೊಡೆತದ  ಗುರುತುಗಳಿವೆ ಎನ್ನುತ್ತಾರೆ ಸೆಂಟ್ರಲ್ ಲ್ಯಾಂಕಾಶೈರ್‌ನ ವಿಜ್ಞಾನಿ ಮೈಖೆಲ್ ವೈಸೋಕಿ. ಈ ಆಘಾತಗಳು ಯಾವುದಾದರೂ ಆಚರಣೆಯ ಹಿಂಸೆಯ ಅಭಿವ್ಯಕ್ತಿಯಾಗಿರಬಹುದು ಅಥವಾ ಆಗಿನ ಬದುಕು ಅಷ್ಟೇ ಕ್ರೂರವಾಗಿದ್ದಿರಬಹುದು ಎನ್ನುತ್ತಾರೆ ಅವರು.

ಸ್ಟೋನ್‌ಹೆಂಜ್‌ನ ಬಳಿ ವಿಸ್ಮಯಕಾರಿ ಆವಿಷ್ಕಾರಗಳು ನಡೆಯುತ್ತಲೇ ಇವೆ. 2002ರಲ್ಲಿ ಪ್ರಾಕ್ತನ ತಜ್ಞರಿಗೆ ಸ್ಟೋನ್‌ಹೆಂಜ್‌ನಿಂದ ಎರಡೂವರೆ ಮೈಲು ದೂರದಲ್ಲಿ ಏವಾನ್ ನದಿಯ ಪೂರ್ವದಿಕ್ಕಿನಲ್ಲಿ ಎರಡು ಅಸ್ಥಿಪಂಜರಗಳ  ಸಮಾಧಿ ದೊರಕಿತು. ಸುಮಾರು ಕ್ರಿ.ಪೂ. 2500ರಿಂದ 2300ರ ಸಮಯದ ಆ ಸಮಾಧಿಯಲ್ಲಿ 35ರಿಂದ 45ರ ವಯಸ್ಸಿನ ಒಬ್ಬ ವ್ಯಕ್ತಿಯ ಅವಶೇಷಗಳಿದ್ದವು ಹಾಗೂ ಸನಿಹದ ಮತ್ತೊಂದರಲ್ಲಿ  ಆತನಿಗಿಂತ ಚಿಕ್ಕ ವಯಸ್ಸಿನವನೊಬ್ಬನ ಬಹುಶಃ ಹಿರಿಯನ ಸಂಬಂಧಿಯಿರಬಹುದು- ಅವಶೇಷಗಳಿದ್ದವು. ಹಿರಿಯನ ಸಮಾಧಿಯಲ್ಲಿ ಆ ಸಮಯದ ಬ್ರಿಟನ್ನಿನ ಯಾವುದೇ ಸಮಾಧಿಯಲ್ಲಿರದ ಐಶ್ವರ್ಯ ಸೂಚಕ ವಸ್ತುಗಳಿದ್ದವು- ತಲೆಗೆ ಧರಿಸುವ ಚಿನ್ನದ ಆಭರಣಗಳು, ತಾಮ್ರದ ಚಾಕುಗಳು, ಚಕಮಕಿ ಕಲ್ಲುಗಳು, ಪಾಲಿಶ್  ಮಾಡಿದ ಬಿಲ್ಲುಗಾರರ ಮುಷ್ಠಿ ರಕ್ಷಕಗಳು, ಲೋಹದ ಕೆಲಸ ನಡೆಸುವ ‘ದಿಂಬಿನಾಕಾರದ ಶಿಲೆ’ ಮತ್ತು ಯೂರೋಪಿನಲ್ಲಿ ಸಾಮಾನ್ಯವಾಗಿ ಇದ್ದ ಆದರೆ ಬ್ರಿಟನ್ನಿನಲ್ಲಿ ಇಲ್ಲದಿದ್ದ ವಿಶಿಷ್ಟ ‘ಬೀಕರ್’ ಶೈಲಿಯ ಕುಡಿಕೆಗಳು. ಹಿರಿಯನ ಕಾಲು ಊನವಾಗಿ ಆತ ಕುಂಟ  ಸಹ ಆಗಿದ್ದ. ಅಮೀಸ್‌ಬರಿ ಬಿಲ್ಲುಗಾರನೆಂದು ಕರೆಯಲ್ಪಟ್ಟಿರುವ ಹಿರಿಯನ ಮತ್ತು ಕಿರಿಯನ ಹಲ್ಲಿನ ಎನಾಮೆಲ್‌ನ ರಾಸಾಯನಿಕ ವಿಶ್ಲೇಷಣೆ ನಡೆಸಲಾಗಿದೆ. ಇದರಿಂದ ತಿಳಿದುಬಂದ ವಿಸ್ಮಯದ ವಿಷಯವೆಂದರೆ, ಆ ಹಿರಿಯ ಬ್ರಿಟನ್ನಿನವನೇ ಆಗಿರಲಿಲ್ಲ- ಆತ  ಆಲ್ಪ್ಸ್ ಪರ್ವತಗಳ, ಈಗಿನ ಸ್ವಿಟ್ಜರ್‌ಲ್ಯಾಂಡ್ ಮತ್ತು ಜರ್ಮನಿಯಿರುವ ಯೂರೋಪ್ ಪ್ರದೇಶದವನಾಗಿದ್ದ ಹಾಗೂ ಕಿರಿಯ ಬ್ರಿಟನ್ನಿನ ಹತ್ತಿರದ ವೆಸೆಕ್ಸ್‌ನವನಾಗಿದ್ದ. ವೆಸೆಕ್ಸ್ ಆರ್ಕಿಯಾಲಜಿಯ ಆಂಡ್ರೂ ಫಿಟ್ಜ್‌ಪ್ಯಾಟ್ರಿಕ್ ಹೇಳುವಂತೆ ಯೂರೋಪಿನಿಂದ  ವಲಸೆಬಂದ ಹಿರಿಯ ಆ ಪ್ರದೇಶದಲ್ಲಿ ನೆಲೆಸಿ ತನ್ನ ಮಡಿಕೆ, ಕುಡಿಕೆ ತಯಾರಿಸುವ ಮತ್ತು ಲೋಹದ ಕೌಶಲ್ಯದಿಂದಾಗಿ ಸಾಕಷ್ಟು ಸಿರಿವಂತನಾಗಿ, ಮಾನ್ಯತೆಯನ್ನೂ ಪಡೆದಿದ್ದ.

ಆ ಬಿಲ್ಲುಗಾರ ಮತ್ತು ಆತನ ಸಂಗಾತಿಯೊಬ್ಬನ ಅವಶೇಷಗಳು ದೊರೆತ ಮರುವರ್ಷವೇ ಏಳು ಜನರ ಸಮಾಧಿಯೊಂದು ದೊರಕಿ ಅವರೂ ಸಹ ದೂರದ ಪ್ರದೇಶಗಳಿಂದ ವಲಸೆ ಬಂದವರಾಗಿದ್ದರು. ಫಿಟ್ಜ್‌ಪ್ಯಾಟ್ರಿಕ್ ಹೇಳುವಂತೆ ಆ  ಜನರೆಲ್ಲಾ ಯಾವ ಪ್ರದೇಶಗಳಿಂದ ಬಂದವರೆಂಬುದು ಮುಖ್ಯವಲ್ಲ, ಆದರೆ ಆ ಕಾಲದ ಜನ ಅಷ್ಟೊಂದು ದೂರ ಪ್ರಯಾಣ ಮಾಡುತ್ತಿದ್ದರೆಂಬುದೇ ಮುಖ್ಯ. ಆ ‘ಪರದೇಶಿಗಳು’ ಸ್ಟೋನ್‌ಹೆಂಜ್ ನೋಡಿರಬಹುದು, ಅಥವಾ ಅದರ ನಿರ್ಮಾಣದಲ್ಲಿ ಸಹಾಯವನ್ನೂ ಮಾಡಿರಬಹುದು.

ಶೆಫೀಲ್ಡ್ ವಿಶ್ವವಿದ್ಯಾನಿಲಯದ ಮೈಕ್ ಪಾರ್ಕರ್ ಪಿಯರ್ಸನ್‌ರವರ ನೇತೃತ್ವದಲ್ಲಿ ಹಾಗೂ ನ್ಯಾಶನಲ್ ಜಿಯೋಗ್ರಾಫಿಕ್ ಸೊಸೈಟಿಯ ಸಹಯೋಗದೊಂದಿಗೆ ಸ್ಟೋನ್‌ಹೆಂಜ್ ರಿವರ್‌ಸೈಡ್ ಪ್ರಾಜೆಕ್ಟ್ 2003ರಿಂದಲೂ ಸ್ಟೋನ್‌ಹೆಂಜ್‌ನ ಅಧ್ಯಯನ ನಡೆಸುತ್ತಿದೆ. ಸ್ಟೋನ್‌ಹೆಂಜ್‌ನ ಸುತ್ತಮುತ್ತಲೂ ಉತ್ಖನನ ನಡೆಸಿರುವ ಆ ತಂಡ ಸ್ಟೋನ್‌ಹೆಂಜ್‌ನ ನೈ‌ಋತ್ಯ ದಿಕ್ಕಿನಲ್ಲಿ ಸುಮಾರು ಎರಡು ಮೈಲಿಗಳ ದೂರದಲ್ಲಿ ಸುಮಾರು 1500 ಅಡಿಗಳ ವ್ಯಾಸವಿರುವ ಒಂದು ಬೃಹತ್  ‘ಹೆಂಜ್’ ಆದ ಡ್ಯೂರಿಂಗ್‌ಟನ್ ವಾಲ್ಸ್ ಬಗ್ಗೆ ತನ್ನ ಅಧ್ಯಯನವನ್ನು ಕೇಂದ್ರೀಕರಿಸಿದೆ. 1812ರಲ್ಲೇ ಡ್ಯೂರಿಂಗ್‌ಟನ್ ಬಗೆಗೆ ತಿಳಿದಿತ್ತು. ಆ ‘ಹೆಂಜ್’ ಎಷ್ಟು ಬೃಹತ್ತಾಗಿದೆಯೆಂದರೆ, ಅದರ ಬದುಗಳು ಸುಮಾರು ನೂರು ಅಡಿ ಅಗಲವಿತ್ತು ಹಾಗೂ ಅದರ ಎತ್ತರ  ಸುಮಾರು ಹತ್ತು ಅಡಿಗಳಷ್ಟಿತ್ತು. ಆದರೆ ಮಣ್ಣಿನ ಕೊಚ್ಚಣೆಯಿಂದಾಗಿ ಬದು ಸಮತಟ್ಟಾಗುತ್ತಾ ಬಂದಿದೆ. ಆ ಬೃಹತ್ ಹೆಂಜ್‌ನ ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ವೃತ್ತಾಕಾರದಲ್ಲಿ ಮೂರು ಸಾಲು ಮರದ ಕಂಬಗಳ ರಚನೆಗಳಿದ್ದುವಂತೆ ಹಾಗೂ ಈಗಲೂ ಅವುಗಳನ್ನು ನೆಟ್ಟಿದ್ದ ಗುಂಡಿಗಳ ಗುರುತುಗಳು ಇವೆಯೆನ್ನುತ್ತಾರೆ. ಈ ಮರದ ರಚನೆಗಳ ವೃತ್ತಾಕಾರಗಳು ರಹಸ್ಯ ಆಚರಣೆಗಳ ಸ್ಥಳಗಳಾಗಿದ್ದವು ಹಾಗೂ ಅವುಗಳನ್ನು ಪರದೆಗಳಿಂದ ಮುಚ್ಚಿರುತ್ತಿದ್ದರು ಎನ್ನುತ್ತಾರೆ ಬ್ರಾಡ್‌ಫರ್ಡ್ ವಿಶ್ವವಿದ್ಯಾನಿಲಯದ ಅಲೆಕ್ಸ್  ಗಿಬ್ಸನ್. ಇತ್ತೀಚೆಗೆ ಆ ಹೆಂಜ್‌ನ ಮಧ್ಯಭಾಗದಲ್ಲಿ ವಸತಿಗಳ ಅವಶೇಷಗಳು ದೊರಕಿದ್ದು ಅವು ಆಗಿನ ಮುಖ್ಯಸ್ಥರ ಅಥವಾ ಮೇಲ್ವಿಚಾರಕರ ವಸತಿಗಳಾಗಿದ್ದಿರಬಹುದು ಅಥವಾ ಗುಪ್ತಾಚರಣೆಗಳ ಸ್ಥಳಗಳೂ ಆಗಿದ್ದಿರಬಹುದೆನ್ನುತ್ತಾರೆ. ಹೆಂಜ್‌ನ ಬದುವಿನ  ಹೊರಗೂ ಸುಮಾರು ಕ್ರಿ.ಪೂ. 2600ರಿಂದ 2500 ವರ್ಷಗಳಷ್ಟು ಹಳೆಯದಾದ ಏಳು ಮನೆಗಳ ಅವಶೇಷಗಳೂ ದೊರಕಿವೆ. ಅವುಗಳೊಳಗೆ ಒಲೆಗಳ ಮತ್ತು ಅವುಗಳ ಮುಂದೆ ಕೂತಿದ್ದಿರಬಹುದಾದವರ ಗುರುತುಗಳೂ ದೊರಕಿವೆ. ಆ ಸ್ಥಳಗಳ ಸುತ್ತಮುತ್ತಲ  ಅಧ್ಯಯನಗಳಿಂದ ಸುಮಾರು ಮುನ್ನೂರು ಮನೆಗಳ ಅವಶೇಷಗಳಿವೆ ಎನ್ನುತ್ತಾರೆ ಪಾರ್ಕರ್ ಪಿಯರ್‌ಸನ್. ಹಾಗಿದ್ದಲ್ಲಿ ಅದು ಬ್ರಿಟನ್ನಿನ  ಶಿಲಾಯುಗದ ಅತ್ಯಂತ ದೊಡ್ಡ ವಸತಿತಾಣವಾಗುತ್ತದೆ.

ಡ್ಯೂರಿಂಗ್‌ಟನ್ ವಾಲ್ಸ್‌ನಲ್ಲಿನ ‘ಜೀವದ ತಾಣ’ವಾದ ‘ವುಡ್‌ಹೆಂಜ್’ ಹೀಗಿದ್ದಿರಬಹುದೆ?

ತಮ್ಮ ಮಡಗಾಸ್ಕರ್‌ನ ಕ್ಷೇತ್ರಾಧ್ಯಯನಗಳ ಅನುಭವದಿಂದ ಪಾರ್ಕರ್ ಪಿಯರ್‌ಸನ್ ಸ್ಟೋನ್‌ಹೆಂಜ್ ಶಿಲಾರಚನೆಗೆ ತಮ್ಮದೇ ‘ಉತ್ತರ’ವನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಮಲಗಸಿ ಸಂಸ್ಕೃತಿಯಲ್ಲಿ ತಮ್ಮ ಪೂರ್ವಿಕರಿಗೆ ಶಿಲಾ ಸ್ಮಾರಕಗಳ ಮೂಲಕ ಗೌರವ ಸಲ್ಲಿಸುತ್ತಾರೆ. ಅದರರ್ಥ ದೇಹವು ಸಾವಿನ ನಂತರ ಗಟ್ಟಿಯಾಗಿ ಕೊನೆಗೆ ಶಿಲೆಯಂತೆ ಗಡುಸಾದ ಮೂಳೆ ಮಾತ್ರ ಉಳಿಯುವುದನ್ನು ಸಂಕೇತಿಸುತ್ತದೆ. ಅದಕ್ಕೆ ತದ್ವಿರುದ್ಧವಾಗಿ ಮರವು ಕೊಳೆತು ಶಿಥಿಲವಾಗುವುದರಿಂದ ಅದು ಬದುಕಿನ  ನಶ್ವರತೆಯನ್ನು ಸಂಕೇತಿಸುತ್ತದೆ. ಪಿಯರ್‌ಸನ್ ಹೇಳುವಂತೆ ಶಿಲೆಯು ಪ್ರಾಚೀನವಾದುದು, ವಂಶಪಾರಂಪರ್ಯವಾದುದು ಹಾಗೂ ಪುರುಷ ಸಂಕೇತ ಮತ್ತು ಮರವು ಸ್ತ್ರೀಯರು ಹಾಗೂ ಶಿಶುಗಳ ಹಾಗೆ ಮೃದುವಾದುದು. ಅವರೇ ಹೇಳುವಂತೆ ಆ ರೀತಿಯ ‘ಲಿಂಗಭೇದ  ಬ್ರಿಟನ್ನಿನಲ್ಲಿ ಕಂಡುಬಂದಿರದಿದ್ದರೂ, ಪಾಶ್ಚಿಮಾತ್ಯ ಸ್ಮರಣೆಯ ಆಚರಣೆಗಳಲ್ಲಿ ಅದು ಕಂಡುಬರುತ್ತದೆ. ಈ ಮಾದರಿಯ ಆಧಾರದಿಂದಲೇ ಮರದ ಡ್ಯೂರಿಂಗ್‌ಟನ್ ವಾಲ್ಸ್‌ನ ರಚನೆಗಳ  ಹಾಗೂ ಶಿಲೆಯ ಸ್ಟೋನ್‌ಹೆಂಜ್ ರಚನೆಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಪ್ರಯತ್ನವನ್ನು ಪಿಯರ್‌ಸನ್ ಮಾಡುತ್ತಾರೆ. ಅವರ ವಿಶ್ಲೇಷಣೆಗೆ ಪೂರಕವಾಗಿಯೂ  ಆ ರಚನೆಗಳಿವೆ. ಸ್ಟೋನ್‌ಹೆಂಜ್ ದಕ್ಷಿಣಾಯನ ಸಂಕ್ರಮಣದ ಸೂರ್ಯೋದಯಕ್ಕೆ ಹಾಗೂ ಉತ್ತರಾಯಣ ಸಂಕ್ರಮಣದ ಸೂರ್ಯಾಸ್ತಮಾನದ ಕಕ್ಷೆಗೆ ಹೊಂದಿಕೊಂಡಿದೆ ಆದರೆ, ಡ್ಯೂರಿಂಗ್‌ಟನ್ ವಾಲ್ಸ್‌ನ ದಕ್ಷಿಣ ವೃತ್ತ ಉತ್ತರಾಯಣ ಸಂಕ್ರಮಣದ ಸೂರ್ಯೋದಯವನ್ನು ಸೆರೆಹಿಡಿಯುತ್ತದೆ. ಡ್ಯೂರಿಂಗ್‌ಟನ್ ವಾಲ್ಸ್ ಬಳಿ ಔತಣಕೂಟಗಳು ನಡೆಯುತ್ತಿದ್ದವು ಎನ್ನಲು ಪುರಾವೆಯಂತೆ ಮಡಿಕೆ ಕುಡಿಕೆಗಳ ಮತ್ತು ಪ್ರಾಣಿಗಳ ಮೂಳೆಗಳ ಅದರಲ್ಲೂ ವಿಶೇಷವಾಗ ಹಂದಿಗಳ ಮೂಳೆಗಳ ಅವಶೇಷಗಳು ದೊರೆತಿವೆ. ಇದಕ್ಕೆ ತದ್ವಿರುದ್ಧವಾಗಿ ಸ್ಟೋನ್‌ಹೆಂಜ್ ಬಳಿ ಯಾವುದೇ ಮಡಿಕೆ ಕುಡಿಕೆಗಳು ದೊರೆತಿಲ್ಲ ಬದಲಿಗೆ ಸ್ಟೋನ್‌ಹೆಂಜ್ ಬಳಿ ಇನ್ನೂರ ನಲವತ್ತಕ್ಕೂ ಹೆಚ್ಚು ಶವಸಂಸ್ಕಾರಗಳ ಕುರುಹುಗಳು ದೊರೆತಿವೆ. ಅಂದರೆ ಪಿಯರ್‌ಸನ್ ಹೇಳುವಂತೆ ಡ್ಯೂರಿಂಗ್‌ಟನ್ ಬದುಕಿನ ಆಚರಣೆಗಳ ತಾಣವಾದರೆ ಸ್ಟೋನ್‌ಹೆಂಜ್ ಸಾವಿನ ಆಚರಣೆಗಳ ತಾಣವಾಗಿರಬಹುದು. ಆದರೆ ಸ್ವತಃ ಸ್ಟೋನ್‌ಹೆಂಜ್ ಬಳಿಯಲ್ಲಿ ಉತ್ಖನನ ಕಾರ್ಯದಲ್ಲಿ ಭಾಗಿಯಾಗಿರುವ ಬ್ರಿಟಿಶ್ ಆರ್ಕಿಯಾಲಜಿ ಪತ್ರಿಕೆಯ ಸಂಪಾದಕರಾಗಿರುವ ಮೈಕ್ ಪಿಟ್ಸ್ ಹೇಳುವಂತೆ ಅಲ್ಲಿ ಶಿಲಾರಚನೆಗಳು ಬರುವ ಮುನ್ನ ಮರದ ರಚನೆಗಳು ಇದ್ದ ಸಮಯದಲ್ಲಿ ಅಲ್ಲಿ ಶವಸಂಸ್ಕಾರಗಳಾಗಿದ್ದು ಅದು ಸಾವಿನ ಆಚರಣೆಗಳ  ತಾಣವಾಗಿದ್ದಿರಬಹುದು ಹಾಗೂ ಶಿಲಾರಚನೆಗಳು ರೂಪುಗೊಂಡ ನಂತರದ ಸಮಯದ ಅಧ್ಯಯನದಿಂದ ಅಲ್ಲಿ ದಿನನಿತ್ಯದ ಆಚರಣೆಗಳಾದಂತಹ ಕೃಷಿ, ಪ್ರಾಣಿಗಳನ್ನು ಮೇಯಿಸಿರುವುದು ಮುಂತಾದವುಗಳು ಕುರುಹುಗಳು ಕಂಡುಬರುತ್ತವೆ. ಹಾಗಾಗಿ ನಂತರದಲ್ಲಿ ಅದು ಸಾವಿನ ಆಚರಣೆಗಳ ತಾಣವಾಗಿರಲಿಲ್ಲ. ಅವರ ಅಭಿಪ್ರಾಯದಂತೆ ಸ್ಟೋನ್‌ಹೆಂಜ್‌ನಿಂದ ಏವಾನ್ ನದಿಗೆ ಇರುವ ರಸ್ತೆಯ ಬಗೆಗೆ ಹಾಗೂ ಸ್ಟೋನ್‌ಹೆಂಜ್ ಮತ್ತು ಡ್ಯೂರಿಂಗ್‌ಟನ್ ವಾಲ್ಸ್‌ಗಳ ನಡುವಿನ ಸಂಬಂಧದ ಬಗೆಗೆ ಹೆಚ್ಚಿನ ಅಧ್ಯಯನ  ನಡೆಯಬೇಕಾಗಿದೆ.

ಐದು ಸಾವಿರ ವರ್ಷಗಳ ಹಿಂದೆ ಸ್ಟೋನ್‌ಹೆಂಜ್‌ನ ನಿರ್ಮಾಣ ಪ್ರಾರಂಭವಾದ ಸಮಯದಲ್ಲಿ ಅಲ್ಲಿನ ಜನರು ಅಷ್ಟೊತ್ತಿಗಾಗಲೇ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ತೊಡಗಿದ್ದರು. ಅವರಲ್ಲಿ ಸುಸಜ್ಜಿತ ಸಾಮಾಜಿಕ  ವ್ಯವಸ್ಥೆಯಿತ್ತು. ಅವರು ಬಾರ‍್ಲಿ ಮತ್ತು ಗೋಧಿಯನ್ನು ಬೆಳೆಯುತ್ತಿದ್ದ ಪುರಾವೆಗಳು ದೊರೆತಿವೆ. ಕೃಷಿಕರಾಗಿದ್ದ ಅವರಿಗೆ ಬ್ರಿಟನ್ನಿನ ಚಳಿಗಾಲ ಅಂಧಕಾರದಿಂದ ಕೂಡಿರುತ್ತಿದ್ದು ಬೇಸಿಗೆ ಒಂದು ರೀತಿಯಲ್ಲಿ ಬೆಳಕಿನ ಹಬ್ಬವಾಗಿರುತ್ತಿತ್ತು. ಸ್ಟೋನ್‌ಹೆಂಜ್  ದಕ್ಷಿಣಾಯನ ಸಂಕ್ರಮಣದ ಸೂರ್ಯೋದಯಕ್ಕೆ (ವರ್ಷದ ಅತಿ ದೀರ್ಘ ದಿನ ಜೂನ್ 21) ಹಾಗೂ ಉತ್ತರಾಯಣ ಸಂಕ್ರಮಣದ ಸೂರ್ಯಾಸ್ತಮಾನದ (ವರ್ಷದ ಅತಿ ಕಡಿಮೆ ಅವಧಿಯ ದಿನ ಡಿಸೆಂಬರ್ 21) ಕಕ್ಷೆಗೆ ಹೊಂದಿಕೊಂಡಂತೆ ಅದನ್ನು ನಿರ್ಮಿಸಿರುವುದರಿಂದ  ಆಗಿನ ಜನ ವರ್ಷದ ಅತಿ ದೀರ್ಘ ದಿನದ ಆಚರಣೆಗೆ ಅದನ್ನು ನಿರ್ಮಿಸಿರಬಹುದು ಎನ್ನುತ್ತಾರೆ.
ಇನ್ನು ಕೆಲವರ ಪ್ರಕಾರ ಸ್ಟೋನ್‌ಹೆಂಜ್ ಅನ್ನು ಬ್ರಿಟನ್ನಿನ ಕೆಲ್ಟ್ ಜನರ ಪುರೋಹಿತರು ಮತ್ತು ಮಾಂತ್ರಿಕರು ಆಗಿದ್ದ ‘ಡ್ರೂಯಿಡ್’ಗಳು ತಮ್ಮ ಆಚರಣೆಗಳಿಗೆ ನಿರ್ಮಿಸಿದ್ದಾರೆ. ವಿಲಿಯಂ ಸ್ಟುಕೀಲೆ (1647-1765) ಎಂಬಾತನ ಪ್ರಕಾರ ಡ್ರೂಯಿಡ್‌ಗಳು ಕ್ರಿ.ಶ. 43ರಲ್ಲಿ ಸ್ಟೋನ್‌ಹೆಂಜ್ ನಿರ್ಮಿಸಿದರು. ಆದರೆ ಅಧ್ಯಯನಗಳು ಸ್ಟೋನ್‌ಹೆಂಜ್ ಅದಕ್ಕಿಂತಲೂ ಪುರಾತನವಾದುದು ಎಂಬುದನ್ನು ತೋರಿಸಿಕೊಟ್ಟಿವೆ.

ಸ್ಟೋನ್‌ಹೆಂಜ್‌ನ ಶಿಲೆಗಳು ಮಳೆಯಲ್ಲಿ ನೆನೆದು ಬಿಸಿಲಿಗೆ ತಮ್ಮ ಮೈಯೊಡ್ಡಿದಾಗ ನೀಲ ವರ್ಣವಾಗಿ ಹೊಳೆಯುತ್ತವೆ. ಈ ನೀಲ ಶಿಲೆಗಳ ಮೂಲವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅದು ಇನ್ನೂರ ಐವತ್ತು ಮೈಲುಗಳ ದೂರದಲ್ಲಿ ನೈರುತ್ಯ ವೇಲ್ಸ್‌ನ  ಪ್ರೆಸೆಲಿ ಪರ್ವತಗಳಾಗಿವೆ. ವಿಜ್ಞಾನಿಗಳಿಗೆ ಕಗ್ಗಂಟಾಗಿರುವುದು ಶಿಲಾಯುಗದ ಮಾನವ ಯಾವುದೇ ಲೋಹಗಳಿಲ್ಲದೆ ಹೇಗೆ ತಲಾ ಸುಮಾರು ನಲವತ್ತು ಟನ್ ತೂಕದ  ಬೃಹತ್ ಶಿಲೆಗಳನ್ನು ಹೇಗೆ ಸಾಗಿಸಿದ ಎಂಬುದು. ಸ್ಟೋನ್‌ಹೆಂಜ್‌ನ ನಿರ್ಮಾಣಕ್ಕೆಂದು ಒಮ್ಮೆಲೇ ಎಲ್ಲವನ್ನೂ ಸಾಗಿಸಿದನೆ ಅಥವಾ ಅದರ ನಿರ್ಮಾಣವನ್ನು ಹಲವಾರು ತಲಮಾರುಗಳ ಕಾಲ ನಡೆಸಲಾಯಿತೆ? ಪ್ರಿಸೆಲಿ ಪರ್ವತಗಳ ಕ್ವಾರಿಗಳಲ್ಲಿ ಕ್ರಿ.ಪೂ. 4000 ವರ್ಷಗಳ ಹಿಂದೆಯೇ ಕಲ್ಲುಗಳನ್ನು ಕತ್ತರಿಸಿ ತೆಗೆದಿರುವ ಕುರುಹುಗಳಿವೆ. ಆ ರೀತಿ ಶಿಲೆಗಳನ್ನು ತೆಗೆದಿರುವುದು ಸ್ಟೋನ್‌ಹೆಂಜ್‌ಗೆ ಮಾತ್ರವಲ್ಲ, ಆ ತರಹದ ಸಣ್ಣಪುಟ್ಟ ಶಿಲಾರಚನೆಗಳು ಬ್ರಿಟನ್ನಿನ ಇತರೆಡೆಯೂ ಇವೆ. ಆ ಸಮಯದಲ್ಲಿ ಶಿಲಾಯುಗದ ಮಾನವ ಪ್ರೆಸಿಲಿ ಪರ್ವತಗಳಿಗೆ ಭೇಟಿ ನೀಡುತ್ತಿದ್ದ ಹಾಗೂ ಆ ಸ್ಥಳವನ್ನು ಆರಾಧಿಸುತ್ತಿದ್ದ ಎನ್ನಲು ಪುರಾವೆಗಳೂ ದೊರೆತಿವೆ.

ಆ ಸ್ಥಳದಿಂದ ಶಿಲಾಯುಗದ ಮಾನವ ಸ್ಯಾಲಿಸ್‌ಬರಿ ಬಯಲುಸೀಮೆಗೆ ಬೃಹತ್ ಶಿಲೆಗಳನ್ನು ಹೇಗೆ ಸಾಗಿಸಿದ ಎನ್ನುವುದು ಇಂದಿಗೂ ವಿಜ್ಞಾನಿಗಳಿಗೆ ಬಿಡಿಸಲಾಗದ ಕಗ್ಗಂಟಾಗಿದೆ. ಅವುಗಳನ್ನು ಒಮ್ಮೆಲೇ ಸಾಗಿಸಿದನೆ? ಅಥವಾ ಅದನ್ನು ಹಲವಾರು ತಲಮಾರುಗಳ ಕಾಲ ಸಾಗಿಸಲಾಯಿತೆ? ಅವುಗಳನ್ನು ಹೇಗೆ ಸಾಗಿಸಲಾಯಿತು? ಹಿಮಯುಗದಲ್ಲಿ ಬೃಹತ್ ನೀರ್ಗಲ್ಲುಗಳು ಆ ಶಿಲೆಗಳನ್ನು ಸಡಿಲಗೊಳಿಸಿ ಕೆಳಕ್ಕೆ ತಳ್ಳಿರಬಹುದೆಂಬ ಕೆಲವರ ವಾದವನ್ನು ಆಧುನಿಕ ಅಧ್ಯಯನಗಳು ತಿರಸ್ಕರಿಸಿವೆ. ಈಗ  ಸ್ಟೋನ್‌ಹೆಂಜ್ ಇರುವ ಸ್ಥಳಕ್ಕೆ ಅತಿ ಹತ್ತಿರದ ದಾರಿ ಎಂದರೆ ವೇಲ್ಸ್‌ನ ಕರಾವಳಿಯಲ್ಲಿ ನದಿಯ ಮೂಲಕ ಹೊರಟು ಏವಾನ್ ನದಿ ತಲುಪುವುದು. ಇದು ಸುಮಾರು ಇನ್ನೂರ ಐವತ್ತು ಮೈಲುಗಳಾಗುತ್ತದೆ. ಆ ದಿನಗಳ ಶಿಲಾಯುಗದ ಮಾನವ ಇವುಗಳನ್ನು ಸಾಗಿಸಲು ಯಾವ ತಂತ್ರಜ್ಞಾನ ಬಳಸಿದ ಎನ್ನುವುದು ಇನ್ನೂ ನಿಗೂಢ. ಮರ್ಲಿನ್‌ನ ಮಾಂತ್ರಿಕ ಅವುಗಳನ್ನು ತನ್ನ ಮಂತ್ರಶಕ್ತಿಯಿಂದ ಅವುಗಳನ್ನು ಸಾಗಿಸಿದ ಎನ್ನುವ 3600 ವರ್ಷಗಳ ಹಿಂದಿನ ಜನಪದದ ಕತೆಯೂ ಪ್ರಚಲಿತದಲ್ಲಿದೆ.

ಸ್ಟೋನ್‌ಹೆಂಜ್‌ಅನ್ನು ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಯಿತು ಎನ್ನುವುದೂ ಸಹ ಊಹೆಯಷ್ಟೇ ಆಗಿದೆ. ಜಗತ್ತಿನ ಹಲವಾರು ಪುರಾತನ ರಚನೆಗಳ ಹಿಂದಿನ ಉದ್ದೇಶ ಅಥವಾ ಆ ಸ್ಥಳಗಳಲ್ಲಿ ನಡೆಸಲಾಗುತ್ತಿದ್ದ ಹಲವಾರು ಆಚರಣೆಗಳ ವಿವರಗಳು ಯಾವುದಾದರೂ ಪಠ್ಯಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಲಭ್ಯವಿವೆ. ಆದರೆ ಸ್ಟೋನ್‌ಹೆಂಜ್‌ನ ಬಗೆಗಿನ ವಿವರಣೆ ಇರುವ ಯಾವುದೇ ಪಠ್ಯ ದೊರಕಿಲ್ಲ. ಹಾಗಾಗಿ ಅದರ ನಿರ್ಮಾಣಕ್ಕೆ, ರಚನೆಗೆ ಬಹು‌ಅರ್ಥಗಳನ್ನು ನೀಡುವ  ಪ್ರಯತ್ನ ಅನಿವಾರ್ಯವೆನ್ನಿಸುವಂತಿದೆ. ಅದು ಸೂರ್ಯ ದೇವಾಲಯವಾಗಿತ್ತೆ ಅಥವಾ ಚಂದ್ರನ ದೇವಾಲಯವಾಗಿತ್ತೆ ಅಥವಾ ಖಗೋಳ ದಿನಸೂಚಿಯಾಗಿತ್ತೆ ಅಥವಾ ಶಮನ ಕೇಂದ್ರವಾಗಿತ್ತೆ ಅಥವಾ ಮರಣಿಸಿದವರ ಆರಾಧನೆಯ ಸ್ಥಳವಾಗಿತ್ತೆ? ಅಲ್ಲಿನ ಶಿಲೆಗಳು ದೇವರನ್ನು ಪ್ರತಿನಿಧಿಸುತ್ತಿದ್ದವೆ ಅಥವಾ ಅಂತಸ್ತು ಮತ್ತು ಶಕ್ತಿಯ ಸಂಕೇತವಾಗಿದ್ದವೆ? ಉತ್ತರ ಯಾರಿಗೂ ತಿಳಿದಿಲ್ಲ.

ಮಾನವ ಸ್ಟೋನ್‌ಹೆಂಜ್ ಯಾವ ಉದ್ದೇಶಕ್ಕಾಗಿ ನಿರ್ಮಿಸಿದ್ದನೋ ಆ ಉದ್ದೇಶದ ಉಪಯೋಗ ಕ್ರಿ.ಪೂ. 1500ರಲ್ಲೇ ಮಾಡುವುದನ್ನು ನಿಲ್ಲಿಸಿರಬೇಕು. ಅಂದಿನಿಂದ ಅದು ಉದಾಸೀನಕ್ಕೊಳಗಾಗಿ ಶಿಥಿಲಾವಸ್ಥೆ ತಲುಪಿತು. ಹಲವಾರು ಶಿಲೆಗಳು ಮುರಿದುಹೋದವು ಹಾಗೂ ಅಲ್ಲಿಂದ ಸಾಗಿಸಲ್ಪಟ್ಟವು. ಆ ಶಿಥಿಲ ರಚನೆಯ ಬಗೆಗೆ ಅಲ್ಲಲ್ಲಿ ಉಲ್ಲೇಖಗಳಿವೆ. ಕ್ರಿ.ಪೂ. ಮೊದಲ ಶತಮಾನದ ಗ್ರೀಕ್ ಚರಿತ್ರಕಾರನಾದ ಸಿಸಿಲಿಯ ಡಯೊಡೋರಸ್, ‘ಅಪೋಲೋ ದೇವತೆಗೆ ಪವಿತ್ರವಾಗಿರುವ  ಒಂದು ವೃತ್ತಾಕಾರದ ದೇವಾಲಯ ಉತ್ತರದ ದ್ವೀಪದ ಮೇಲಿದೆ’ ಎಂದಿದ್ದಾನೆ. 1668ರಲ್ಲಿ ಅಲ್ಲಿಗೆ ಭೇಟಿ ನೀಡಿದ ಸ್ಯಾಮ್ಯುಯೆಲ್ ಪೆಪೀಸ್ ‘ತಾನೆಂದೂ ಕೇಳಿರದ, ಕಂಡಿರದ ಬೃಹತ್ ಶಿಲೆಗಳ ರಚನೆಯನ್ನು ಕಂಡೆ. ಅದನ್ನು ಯಾವುದಕ್ಕೆ ಬಳಸುತ್ತಿದ್ದರೆಂಬುದು ದೇವರಿಗೇ ಗೊತ್ತು’ ಎಂದು ಬರೆದಿದ್ದಾನೆ.

ನಾವು ಇಂಗ್ಲೆಂಡಿಗೆ ಭೇಟಿ ನೀಡಿದ ಜುಲೈ ತಿಂಗಳಿನಲ್ಲಿ ರಾತ್ರಿ ಹತ್ತಾದರೂ ಕತ್ತಲಾಗುತ್ತಿರಲಿಲ್ಲ. ಆದರೆ ಸ್ಯಾಲಿಸ್‌ಬರಿಯ ಬಯಲಿನಲ್ಲಿ ಸಂಜೆ ಆರಕ್ಕೇ ಮೋಡ ಕವಿದಿದ್ದು ಇಡೀ ವಾತಾವರಣವೇ ಮಸಕು ಮಸಕಾದಂತಿತ್ತು. ಶೀತಲ ಗಾಳಿ ರೊಯ್ಯನೆ ಬೀಸುತ್ತಿತ್ತು. ಆ ಗಾಳಿಯಲ್ಲಿ ಸ್ಟೋನ್‌ಹೆಂಜ್‌ನ ನಿಗೂಢ ಬಿಡಿಸಿ ಹೇಳುವ ಏನಾದರೂ ಪಿಸುಮಾತಿದೆಯೇನೋ ಎಂದು ಆಲಿಸುವ ನನ್ನ ಪ್ರಯತ್ನ ವಿಫಲವಾಗುತ್ತಿತ್ತು. ಬೆನ್ನಿಗೇರಿಸಿದ್ದ ಚೀಲ ಪ್ರಶ್ನೆಗಳಿಂದ ತುಂಬಿರುವಂತೆ ಭಾರವೆನ್ನಿಸುತ್ತಿತ್ತು.

ಅಮೀಸ್‌ಬರಿಯ ಬಿಲ್ಲುಗಾರ
(Photos courtesy: Wessex Archaeology)
ಸೆನ್‌ಹೆಂಜ್ ನಿರಂತರವಾಗಿ ಸುಮಾರು ಎರಡು ಸಾವಿರ ವರ್ಷಗಳ ಕಾಲ ವಿಕಾಸಗೊಂಡ ರಚನೆಯಾಗಿದೆ. ಕಾರ್ಬನ್ ಡೇಟಿಂಗ್ ಅನ್ವಯ ಸ್ಟೋನ್‌ಹೆಂಜ್‌ನ ಶಿಲಾರಚನೆಯ ಮೊದಲ ಹಂತದ ನಿರ್ಮಾಣ ಕಾರ್ಯ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಶಿಲಾಯುಗದಲ್ಲಿ ಪ್ರಾರಂಭವಾಯಿತು ಹಾಗೂ ಕೊನೆಯ ಹಂತದ ನಿರ್ಮಾಣ ಕಾರ್ಯ ಸುಮಾರು ಮೂರು ಸಾವಿರದ ಮುನ್ನೂರು ವರ್ಷಗಳ ಹಿಂದೆ ಕಂಚಿನ ಯುಗದಲ್ಲಿ ನಡೆದಿದೆ. ನಾಗರಿಕತೆಯ ಎಲ್ಲ ಹಂತಗಳನ್ನು ಕಂಡಿರುವ ಅದೊಂದು ನಿಗೂಢ  ಕಾಲನೌಕೆಯಂತೆ ಭಾಸವಾಗುತ್ತದೆ. ಮೊದಲಿಗೆ ಅದರ ನಿರ್ಮಾಣ ಕಾರ್ಯ ಪ್ರಾರಂಭಿಸಿದ ಮಾನವನಲ್ಲಿ ಯಾವುದೇ ಲೋಹದ ಸಲಕರಣೆಗಳಿರಲಿಲ್ಲ. ಆಗ ಆತ ಗುಂಡಿ ತೋಡಲು ಬಳಸಿರಬಹುದಾದ ಜಿಂಕೆಯ ಕವಲುಕೊಂಬಿನ ‘ಗುದ್ದಲಿ’ಗಳು ದೊರೆತಿವೆ. ಕಾರ್ಬನ್  ಡೇಟಿಂಗ್ ಮೂಲಕ ಅವು ಕ್ರಿ.ಪೂ. 3000ದಿಂದ 2920 ವರ್ಷಗಳಷ್ಟು ಹಳೆಯವು ಎಂದು ತಿಳಿದುಬಂದಿದೆ. ಅಲ್ಲಿಯೇ ಎತ್ತಿನ ಕೆಳದವಡೆ ಎಲುಬುಗಳೂ ದೊರೆತಿದ್ದು ಅವು ಜಿಂಕೆಯ ಕೊಂಬುಗಳಿಗಿಂತ ಹಳೆಯವು ಎಂಬುದಾಗಿ ತಿಳಿದುಬಂದಿದೆ. ಎತ್ತುಗಳನ್ನು ಬಹುಶಃ ಅವರು ಬಲಿಯಾಗಿ ಬಳಸಿರಬಹುದು ಎನ್ನುತ್ತಾರೆ ವಿಜ್ಞಾನಿಗಳು. ಸ್ಟೋನ್‌ಹೆಂಜ್‌ನ ಕೊನೆಯ ಹಂತದ ನಿರ್ಮಾಣದ ಅವಧಿಯ ಕಂಚಿನ ಕತ್ತಿಗಳೂ ದೊರೆತಿವೆ.


2002ರಲ್ಲಿ ಕಂಡುಹಿಡಿಯಲಾದ ಅಮೀಸ್‌ಬರಿ ಬಿಲ್ಲುಗಾರನ ಸಮಾಧಿ.

2002ರಲ್ಲಿ ಪ್ರಾಕ್ತನ ತಜ್ಞರಿಗೆ ಸ್ಟೋನ್‌ಹೆಂಜ್‌ನಿಂದ ಎರಡೂವರೆ ಮೈಲು ದೂರದಲ್ಲಿ ಏವಾನ್ ನದಿಯ ಪೂರ್ವದಿಕ್ಕಿನಲ್ಲಿ ಸುಮಾರು ಕ್ರಿ.ಪೂ. 2500ರಿಂದ 2300ರ ಅವಧಿಯ ‘ಅಮೀಸ್‌ಬರಿ ಬಿಲ್ಲುಗಾರ’ನೆಂದು ಕರೆಯಲ್ಪಟ್ಟಿರುವ ವ್ಯಕ್ತಿಯ ಸಮಾಧಿಯ ಅವಶೇಷಗಳು ದೊರೆತವು. ಕೆಲವರು ಆತನನ್ನು ಸ್ಟೋನ್‌ಹೆಂಜ್‌ನ ರಾಜನೆಂದೂ ಕರೆಯುತ್ತಾರೆ. ಆತನ ಸಮಾಧಿ ಮತ್ತು ಅದರಲ್ಲಿ ದೊರೆತ ಸುಮಾರು ನೂರರಷ್ಟು ವಸ್ತುಗಳು ಬಹಳ ಮುಖ್ಯವಾದುದು. ಆತನ  ಸಮಾಧಿಯಲ್ಲಿ ದೊರೆತ ಬಹುಶಃ ಕಿವಿಯೋಲೆ ಅಥವಾ ತಲೆಯ ಕೂದಲಿಗೆ ಧರಿಸಬಹುದಾದಂತಹ ಚಿನ್ನದ ಆಭರಣಗಳು ಇಡೀ ಇಂಗ್ಲೆಂಡಿನಲ್ಲೇ ದೊರೆತ ಅತ್ಯಂತ ಪ್ರಾಚೀನ ಚಿನ್ನದ ಆಭರಣಗಳಾಗಿವೆ (ಚಿತ್ರ ನೋಡಿ).



ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಚಿನ್ನದ ಕಿವಿಯೋಲೆ ಅಥವಾ ಕೂದಲು ಸಿಂಗರಿಸುವ ಆಭರಣಗಳು. ಇಡೀ ಬ್ರಿಟನ್ನಿನಲ್ಲೇ ದೊರಕಿರುವ  ಅತ್ಯಂತ ಪ್ರಾಚೀನ ಚಿನ್ನದ ಆಭರಣಗಳು ಇವಾಗಿವೆ


 ಆ ಸಮಯದ ಬ್ರಿಟನ್ನಿನ ಯಾವುದೇ ಸಮಾಧಿಯಲ್ಲಿರದ ಐಶ್ವರ್ಯ ಸೂಚಕ ವಸ್ತುಗಳು ಆತನ ಸಮಾಧಿಯಲ್ಲಿದ್ದವು- ತಲೆಗೆ ಧರಿಸುವ ಚಿನ್ನದ ಆಭರಣಗಳು, ತಾಮ್ರದ ಚಾಕುಗಳು, ಚಕಮಕಿ ಕಲ್ಲುಗಳು, ಪಾಲಿಶ್ ಮಾಡಿದ ಬಿಲ್ಲುಗಾರರ ಮುಷ್ಠಿ ರಕ್ಷಕಗಳು, ಲೋಹದ ಕೆಲಸ ನಡೆಸುವ ‘ದಿಂಬಿನಾಕಾರದ  ಶಿಲೆ’ ಮತ್ತು ಯೂರೋಪಿನಲ್ಲಿ ಸಾಮಾನ್ಯವಾಗಿ ಇದ್ದ ಆದರೆ ಬ್ರಿಟನ್ನಿನಲ್ಲಿ ಇಲ್ಲದಿದ್ದ ವಿಶಿಷ್ಟ ‘ಬೀಕರ್’ ಶೈಲಿಯ ಕುಡಿಕೆಗಳು ಆ ಸಮಾಧಿಯಲ್ಲಿ ಕಂಡುಬಂದಿವೆ. ಆತನ ಕಾಲಿಗೆ ಏನೋ ಏಟು ತಗುಲಿ ಆತನ ಒಂದು ಕಾಲು ಊನ ಸಹ ಆಗಿತ್ತು. ಅಧ್ಯಯನದಿಂದ  ತಿಳಿದು ಬಂದ ಮತ್ತೊಂದು ವಿಸ್ಮಯದ ಅಂಶವೆಂದರೆ, ಆ ಹಿರಿಯ ಬ್ರಿಟನ್ನಿನವನೇ ಆಗಿರಲಿಲ್ಲ- ಆತ ಆಲ್ಪ್ಸ್ ಪರ್ವತಗಳ, ಈಗಿನ ಸ್ವಿಟ್ಜರ್‌ಲ್ಯಾಂಡ್ ಮತ್ತು ಜರ್ಮನಿಯಿರುವ ಯೂರೋಪ್ ಪ್ರದೇಶದವನಾಗಿದ್ದ ಹಾಗೂ ಕಿರಿಯ ಬ್ರಿಟನ್ನಿನ ಹತ್ತಿರದ  ವೆಸೆಕ್ಸ್‌ನವನಾಗಿದ್ದ. ವೆಸೆಕ್ಸ್ ಆರ್ಕಿಯಾಲಜಿಯ ಆಂಡ್ರೂ ಫಿಟ್ಜ್‌ಪ್ಯಾಟ್ರಿಕ್ ಹೇಳುವಂತೆ ಯೂರೋಪಿನಿಂದ ವಲಸೆಬಂದ ಹಿರಿಯ ಆ ಪ್ರದೇಶದಲ್ಲಿ ನೆಲೆಸಿ ತನ್ನ ಮಡಿಕೆ, ಕುಡಿಕೆ ತಯಾರಿಸುವ ಮತ್ತು ಲೋಹದ ಕೌಶಲ್ಯದಿಂದಾಗಿ ಸಾಕಷ್ಟು ಸಿರಿವಂತನಾಗಿ, ಮಾನ್ಯತೆಯನ್ನೂ ಪಡೆದಿದ್ದ. ಅವನ ಅಂತ್ಯಸಂಸ್ಕಾರ ಮಾಡಿದವರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇತ್ತೆನ್ನಿಸುತ್ತದೆ, ಏಕೆಂದರೆ ಆತನಿಗೆ ಮರುಜನ್ಮದಲ್ಲಿ ಬೇಕಾಗುವ ಎಲ್ಲಾ ವಸ್ತುಗಳನ್ನು- ಬಟ್ಟೆಬರೆ, ಸಲಕರಣೆಗಳು, ಆಯುಧಗಳು, ಮಡಿಕೆ ಕುಡಿಕೆ ಮತ್ತು ಹೊಸ  ಸಲಕರಣೆಗಳನ್ನು ತಯಾರಿಸಿಕೊಳ್ಳಲೆಂದು ಹೆಚ್ಚಿನ ‘ಫ್ಲಿಂಟ್’ ಶಿಲೆಗಳನ್ನು ಸಹ ಇರಿಸಿದ್ದರು.


ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಫ್ಲಿಂಟ್ ಶಿಲೆಯ ಬಾಣದ ಮೊನೆಗಳು


ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಬೀಕರ್ ಆಕಾರದ ಮಡಕೆಗಳು


ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ತಾಮ್ರದ ಚಾಕುಗಳು


ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಬಿಲ್ಲುಗಾರರ ಮುಷ್ಠಿ ರಕ್ಷಕ ಪಟ್ಟಿಗಳು

ಆ ಅಮೀಸ್‌ಬರಿ ಬಿಲ್ಲುಗಾರನ ಅಧ್ಯಯನ ಮುಖ್ಯವಾದುದು ಏಕೆಂದರೆ ಆತ ಬದುಕಿದ್ದ ಸಮಯ ಸರಿಸುಮಾರು ಸ್ಟೋನ್‌ಹೆಂಜ್ ನಿರ್ಮಾಣದ ಪ್ರಾರಂಭದ ಸಮಯ. ಆತ ಅದರ ವಿನ್ಯಾಸದಲ್ಲಿ ಅಥವಾ ನಿರ್ಮಾಣದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿರಬಹುದು ಅಥವಾ ಅದರ ನಿರ್ಮಾಣ ಕಾರ್ಯ ನಡೆಯುತ್ತಿದ್ದುದರಿಂದ ಕುತೂಹಲದಿಂದ ಅದನ್ನು ನೋಡಲು ಬಂದ ವ್ಯಕ್ತಿಯಾಗಿರಬಹುದು. ಮತ್ತೊಂದು ಕುತೂಹಲಕರವಾದ ಅಂಶವೆಂದರೆ ಆತ ಬ್ರಿಟನ್ನಿನವನಾಗಿರದೆ ಯೂರೋಪ್ ಖಂಡದವನಾಗಿದ್ದುದು. ಆತನ ಸಮಾಧಿಯಲ್ಲಿದ್ದ ‘ಬೀಕರ್’ ರೀತಿಯ ಮಡಿಕೆ ಕುಡಿಕೆಗಳು ಯೂರೋಪಿನಲ್ಲಿದ್ದವು ಹಾಗೂ ಅವನ ಬದುಕಿದ್ದ ಸಮಯದಲ್ಲೇ ಅವು ಬ್ರಿಟನ್ನಿನಲ್ಲಿ ಕಂಡುಬಂದಿವೆ. ವಿಸ್ಮಯಕರವಾದ ವಿಷಯವೆಂದರೆ ಜನ ಆಗ ಖಂಡಾಂತರ ಪ್ರಯಾಣ ಮಾಡುತ್ತಿದ್ದರು ಹಾಗೂ ಆಗ ಸಾಂಸ್ಕೃತಿಕ ವಿನಿಮಯ ನಡೆಯುತ್ತಿತ್ತು ಎನ್ನುವುದು. ಆತ ಬದುಕಿದ್ದ ಸಮಯ ಬ್ರಿಟನ್ನಿನ ಕಂಚಿನ ಯುಗದ ಪ್ರಾರಂಭದ ಸಮಯವಾಗಿತ್ತು. ‘ತಾಮ್ರ ಮತ್ತು ಚಿನ್ನದಂತಹ ಲೋಹಗಳು ಯೂರೋಪಿನಿಂದ ಬ್ರಿಟನ್ ಪ್ರವೇಶಿಸಿತೆನ್ನುವ ಸಂಶಯ ಮೊದಲಿನಿಂದಲೂ ಇತ್ತು. ಈ ಅಮೀಸ್‌ಬರಿಯ ಬಿಲ್ಲುಗಾರ ಅದಕ್ಕೆ ಪುರಾವೆಯಾಗಿದ್ದಾನೆ’ ಎನ್ನುತ್ತಾರೆ ವೆಸೆಕ್ಸ್ ಆರ್ಕಿಯಾಲಜಿಯ ಡಾ. ಆಂಡ್ರೂ ಫಿಟ್ಜ್ ಪ್ಯಾಟ್ರಿಕ್.



ಡಾ.ಜೆ.ಬಾಲಕೃಷ್ಣ
j.balakrishna@gmail.com

ಶನಿವಾರ, ಜೂನ್ 09, 2012

ಮುಲ್ಲಾ ನಸ್ರುದ್ದೀನ್ ಕತೆಗಳು-5


ಜೂನ್ 2012ರ 'ಸಂವಾದ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 5ನೇ ಕಂತು.
ಚಿತ್ರಗಳು: ಮುರಳೀಧರ ರಾಠೋಡ್


ಸಿಕ್ಕಷ್ಟು ಸೀರುಂಡೆ
ಆ ದಿನ ರಾತ್ರಿ ನಿದ್ರೆಯಲ್ಲಿದ್ದ ಮುಲ್ಲಾ ನಸ್ರುದ್ದೀನನಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಆತನ ಗೆಳೆಯ ಮುಲ್ಲಾನಿಗೆ ಒಂಭತ್ತು ನಾಣ್ಯಗಳನ್ನು ನೀಡುತ್ತಿದ್ದ. ಆದರೆ ಮುಲ್ಲಾ ಕನಿಷ್ಠ ಹತ್ತು ನಾಣ್ಯಗಳನ್ನಾದರೂ ಕೊಡದಿದ್ದರೆ ಅವುಗಳನ್ನು ಸ್ವೀಕರಿಸುವುದಿಲ್ಲ ಎನ್ನುತ್ತಿದ್ದ. ಆ ಗೆಳೆಯರ ನಡುವೆ ಮಾತುಕತೆ ಮುಂದುವರಿದಿತ್ತು. ಅಷ್ಟರಲ್ಲಿ ರಸ್ತೆಯಲ್ಲಿ ಏನೋ ಜೋರಾಗಿ ಸಪ್ಪಳವಾಗಿ ಮುಲ್ಲಾನಿಗೆ ಎಚ್ಚರವಾಯಿತು. ಕಣ್ಣುಬಿಟ್ಟು ನೋಡಿದ ಮುಲ್ಲಾನ ಕೈ ಚಾಚಿದಂತೆಯೇ ಇತ್ತು, ಆದರೆ ಅದರಲ್ಲಿ ಯಾವ ನಾಣ್ಯವೂ ಇರಲಿಲ್ಲ. ತಕ್ಷಣ ಕಣ್ಣು ಮುಚ್ಚಿದ ಮುಲ್ಲಾ, ‘ಆಯಿತು ಗೆಳೆಯಾ, ಆ ಒಂಭತ್ತೇ ನಾಣ್ಯಗಳನ್ನು ಕೊಡು’ ಎಂದ.

ವಿಧಿಯೆಂಬ ಊಹೆ
ಒಬ್ಬ ವ್ಯಕ್ತಿ ಬಂದು ವಿದ್ವಾಂಸ ಮುಲ್ಲಾ ನಸ್ರುದ್ದೀನ್‌ನನ್ನು ‘ವಿಧಿಯ ಅರ್ಥವೇನು?’ ಎಂದು ಕೇಳಿದ.
‘ವಿಧಿಯೆನ್ನುವುದು ಒಂದು ಊಹೆ’ ಎಂದ ನಸ್ರುದ್ದೀನ್ ತನ್ನ ಗಡ್ಡ ಕೆರೆದುಕೊಳ್ಳುತ್ತಾ.
‘ಅದನ್ನು ವಿವರಿಸಿ ಹೇಳುತ್ತೀರಾ?’ ಆತ ಅರ್ಥವಾಗದೆ ಕೇಳಿದ.
ಮುಲ್ಲಾ ಆತನೆಡೆಗೆ ನೋಡುತ್ತಾ, ‘ಎಲ್ಲವೂ ಸರಿಯಾಗುತ್ತದೆ ಎಂದು ನೀನು ಊಹಿಸಿಕೊಳ್ಳುತ್ತೀಯಾ- ಆದರೆ ಆ ರೀತಿ ನಡೆಯದಾದಾಗ ಅದನ್ನು ದುರಾದೃಷ್ಟ ಎನ್ನುತ್ತಾರೆ ಅಥವಾ ನೀನು ಊಹಿಸಿದಂತೆಯೇ ನಡೆದರೆ ಅದು ನಿನ್ನ ಅದೃಷ್ಟ ಎನ್ನುತ್ತಾರೆ.  ಇದೇ ರೀತಿ ನಡೆಯಬಹುದೆಂದು ನೀನು ಕೆಲವು ಕೆಲಸಗಳನ್ನು ಮಾಡುತ್ತೀಯೆ. ಆ ರೀತಿ ನಡೆಯದಾದಾಗ ನಿನಗೆ ಮುಂದಾಲೋಚನೆ ಇಲ್ಲವೆನ್ನುತ್ತಾರೆ. ನಿನಗೆ ಭವಿಷ್ಯವಾಗಲಿ ಮುಂದೆ ನಡೆಯುವುದಾಗಲಿ ತಿಳಿದಿಲ್ಲವೆಂದು ಊಹಿಸಿಕೊ, ಆಗ ಅದನ್ನೇ ನಿನ್ನ ವಿಧಿಯೆನ್ನುತ್ತಾರೆ’ ಎಂದ.

ವಿಮರ್ಶಕ ಮುಲ್ಲಾ
ಆ ರಾಜ್ಯದ ಸುಲ್ತಾನನಿಗೆ ತಾನು ಇದ್ದಕ್ಕಿದ್ದಂತೆ ಕವಿಯಾಗಬೇಕೆನ್ನಿಸಿತು. ಹಗಲು ರಾತ್ರಿ ಕೂತು ಪದ್ಯವೊಂದನ್ನು ರಚಿಸಿದ. ಆ ಪ್ರಾಂತ್ಯದಲ್ಲೆಲ್ಲಾ ಅತ್ಯಂತ ಖ್ಯಾತ ಕವಿಯಾಗಿದ್ದ ನಸ್ರುದ್ದೀನ್‌ನನ್ನು ತನ್ನ ಆಸ್ಥಾನಕ್ಕೆ ಕರೆಸಿ ತನ್ನ ಕಾವ್ಯ ವಾಚನ ಆಲಿಸುವಂತೆ ಕೇಳಿದ. ಅತ್ಯಂತ ತನ್ಮಯನಾಗಿ ಸುಲ್ತಾನ ಕಾವ್ಯ ವಾಚನ ಮಾಡಿದ. ಅದು ನಸ್ರುದ್ದೀನ್ ಕೇಳಿದ ಪದ್ಯಗಳಲ್ಲೇ ಅತ್ಯಂತ ಕೆಟ್ಟದ್ದಾಗಿತ್ತು. ಆದರೂ ಸಹಿಸಿಕೊಂಡು ಮೌನವಾಗಿ ಪದ್ಯವನ್ನು ಕೇಳಿ ತಲೆದೂಗಿದ.
ಅಷ್ಟಕ್ಕೇ ಬಿಟ್ಟಿದ್ದಲ್ಲಿ ಏನೂ ಸಮಸ್ಯೆ ಇರಲಿಲ್ಲ. ಆದರೆ ಸುಲ್ತಾನ ತನ್ನ ವಾಚನ ಮುಗಿಸಿ ತನ್ನ ಕಾವ್ಯ ಹೇಗಿದೆ ಎಂದು ನಸ್ರುದ್ದೀನ್‌ನನ್ನು ಕೇಳಿದ. ನಸ್ರುದ್ದೀನ್ ಪೀಕಲಾಟಕ್ಕೆ ಸಿಕ್ಕಿಕೊಂಡ. ಆದರೆ ಆತ ನಿಷ್ಠುರವಾದಿ, ಇದ್ದದ್ದು ಇದ್ದಹಾಗೇ ಹೇಳುವವನು. ‘ನಿಮ್ಮ ಕಾವ್ಯದ ಬಗೆಗೆ ನನ್ನ ಅನಿಸಿಕೆಯನ್ನು ಪ್ರಾಮಾಣಿಕವಾಗಿ ಹೇಳುತ್ತೇನೆ’ ಎನ್ನುತ್ತಾ ಎದ್ದುನಿಂತ. ಖ್ಯಾತ ಕವಿ ನಸ್ರುದ್ದೀನ್ ತನ್ನ ಪದ್ಯವನ್ನು ಹಾಡಿಹೊಗಳುತ್ತಾನೆ ಎಂದು ಸುಲ್ತಾನ್ ಗರ್ವದಿಂದ ಗಡ್ಡ ನೇವರಿಸಿಕೊಳ್ಳುತ್ತಿದ್ದ.
‘ನಿಜ ಹೇಳುತ್ತೇನೆ, ನಿಮ್ಮ ಪದ್ಯ ಅತ್ಯಂತ ಕೆಟ್ಟದ್ದಾಗಿದೆ......’ ಎಂದ ನಸ್ರುದ್ದೀನ್.
ಅವನ ಮಾತಿನಿಂದ ಅತ್ಯಂತ ಕೋಪಗೊಂಡ ಸುಲ್ತಾನ, ‘ಸೈನಿಕರೇ! ಈ ವ್ಯಕ್ತಿಯನ್ನು ಸೆರೆಮನೆಗೆ ಹಾಕಿ’ ಎಂದ. ಸೈನಿಕರು ನಸ್ರುದ್ದೀನ್‌ನನ್ನು ಹಿಡಿದುಕೊಂಡು ಹೋಗುವಾಗ ‘ಸೆರೆಮನೆ ವಾಸ ಮುವ್ವತ್ತು ದಿನಗಳು....’ ಎನ್ನುತ್ತಾ ಎಚ್ಚರಿಕೆಯೆಂಬಂತೆ ನಸ್ರುದ್ದೀನ್ ಕಡೆಗೆ ತನ್ನ ಬೆರಳು ತೋರಿಸಿದ.
ಮುವ್ವತ್ತು ದಿನಗಳ ಸೆರೆಮನೆ ವಾಸದ ನಂತರ ನಸ್ರುದ್ದೀನ್ ತನ್ನ ಮನೆಯಲ್ಲಿದ್ದಾಗ ಮತ್ತೊಂದು ದಿನ ಸುಲ್ತಾನನಿಂದ ಕರೆಬಂದಿತು.
ಸುಲ್ತಾನ ತನ್ನ ಮತ್ತೊಂದು ಪದ್ಯದ ವಾಚನಕ್ಕೆ ನಸ್ರುದ್ದೀನ್‌ನನ್ನು ಆಹ್ವಾನಿಸಿದ್ದ. ಎಂದಿನಂತೆ ಕಾವ್ಯವಾಚನ ನಡೆಯಿತು ಹಾಗೂ ಪುನಃ ಕವಿ ನಸ್ರುದ್ದೀನ್‌ನಿಗೆ ತನ್ನ ಅಭಿಪ್ರಾಯ ತಿಳಿಸುವಂತೆ ಹೇಳಲಾಯಿತು.
ಈ ಬಾರಿ ನಸ್ರುದ್ದೀನ್ ಏನೂ ಹೇಳಲಿಲ್ಲ. ಎದ್ದು ನಿಂತವನೇ ಬಾಗಿಲಿನ ಕಡೆಗೆ ನಡೆಯತೊಡಗಿದ. ಅವನ ವರ್ತನೆ ಅರ್ಥವಾಗದ ಸುಲ್ತಾನ, ‘ಎಲ್ಲಿಗೆ ಹೋಗುತ್ತಿದ್ದೀಯೆ?’ ಎಂದು ಕೇಳಿದ.
‘ಸೆರೆಮನೆಗೆ’ ಎಂದ ನಸ್ರುದ್ದೀನ್.

ಸತ್ಯವನ್ನೇ ಹೇಳುವೆ.....
ತನ್ನ ನಗರಕ್ಕೆ ಸುತ್ತಮುತ್ತಲ ಜನರೆಲ್ಲಾ ನಗರದ ದ್ವಾರಪಾಲಕರಿಗೆ ಅದೂ ಇದೂ ಸುಳ್ಳು ಹೇಳಿ ನಗರಕ್ಕೆ ಬಂದು ದಾಂಧಲೆ ಮಾಡುತ್ತಿದ್ದುದು ಸುಲ್ತಾನನಿಗೆ ತಲೆನೋವಾಗಿ ಪರಿಣಮಿಸಿತ್ತು. ಇದಕ್ಕೆ ಹೇಗಾದರೂ ಮಾಡಿ ಕಡಿವಾಣ ಹಾಕಬೇಕೆಂದು ನಿರ್ಧರಿಸಿದ ಸುಲ್ತಾನ ತನ್ನ ದ್ವಾರಪಾಲಕರಿಗೆ ನಗರಕ್ಕೆ ಬರುವವರು ಹೇಳುವ ತಮ್ಮ ಪ್ರವೇಶದ ಕಾರಣ ಸುಳ್ಳಾಗಿದ್ದಲ್ಲಿ ಅವರನ್ನು ಅಲ್ಲೇ ನೇಣಿಗೆ ಹಾಕುವಂತೆ ಅಜ್ಞಾಪಿಸಿದ.
ಈ ಅಜ್ಞೆಯ ಬಗ್ಗೆ ಕೇಳಿದ್ದ ಮುಲ್ಲಾ ನಸ್ರುದ್ದೀನ್ ಅದೊಂದು ದಿನ ನಗರಕ್ಕೆ ತನ್ನ ಕತ್ತೆಯ ಮೇಲೆ ಕೂತು ಹೊರಟ. ನಗರದ ಪ್ರವೇಶ ದ್ವಾರದಲ್ಲಿದ್ದ ದ್ವಾರಪಾಲಕರು ನಸ್ರುದ್ದೀನ್‌ನನ್ನು ತಡೆದು ನಗರದಲ್ಲಿ ಆತನಿಗೆ ಇರುವ ಕೆಲಸವೇನು ಹಾಗೂ ಅದರ ಬಗ್ಗೆ ಸತ್ಯವನ್ನೇ ಹೇಳಬೇಕು, ಇಲ್ಲದಿದ್ದಲ್ಲಿ ಅವನನ್ನು ಅಲ್ಲೇ ನೇಣಿಗೆ ಹಾಗುವುದಾಗಿ ಎಚ್ಚರಿಕೆ ನೀಡಿದರು. ಅದಕ್ಕೆ ಮುಲ್ಲಾ ನಸ್ರುದ್ದೀನ್,
‘ನಾನು ಸತ್ಯವನ್ನೇ ಹೇಳುತ್ತೇನೆ. ನನಗೆ ಬದುಕು ಸಾಕಾಗಿದೆ. ನಿಮ್ಮ ಕೈಯಲ್ಲಿ ನೇಣು ಹಾಕಿಸಿಕೊಂಡು ಸಾಯೋಣವೆಂದು ಬಂದಿದ್ದೇನೆ’ ಎಂದ.
‘ಸುಳ್ಳು ಹೇಳುತ್ತಿದ್ದೀಯಾ! ನಿನ್ನನ್ನು ಖಂಡಿತವಾಗಿ ನೇಣು ಹಾಕುತ್ತೇವೆ!!’ ಎಂದರು ದ್ವಾರಪಾಲಕರು.
‘ಹಾಗಾದರೆ, ನಾನು ಹೇಳಿದ್ದು ಸತ್ಯವಾಗುತ್ತದೆ. ಸತ್ಯ ಹೇಳುವವರನ್ನು ನೇಣಿಗೆ ಹಾಕಬಾರದಲ್ಲವೆ?’ ಕೇಳಿದ ನಸ್ರುದ್ದೀನ್.

ಜ್ಞಾನೋದಯದ ಹಾದಿ
ಒಂದು ದಿನ ಮುಲ್ಲಾ ನಸ್ರುದ್ದೀನ್ ತನ್ನ ಊರಿನ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ. ಒಂದಷ್ಟು ಜನರ ಗುಂಪು ಆತನನ್ನು ಹಿಂಬಾಲಿಸುತ್ತಿತ್ತು ಹಾಗೂ ಅವರು ನಸ್ರುದ್ದೀನ್ ಏನು ಮಾಡುತ್ತಾನೋ ಅದನ್ನೇ ಅನುಕರಿಸುತ್ತಿದ್ದರು. ನಸ್ರುದ್ದೀನ್ ಒಂದೆರಡು ಹೆಜ್ಜೆ ಹಾಕಿ ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಮುಂದಕ್ಕೆ ಬಾಗಿ ತಕ್ಷಣ ಮೇಲಕ್ಕೆ ಹಾರಿ ‘ಹ್ಹೆ...ಹ್ಹೆ...ಹ್ಹೇ....’ ಎಂದು ಜೋರಾಗಿ ಕೇಕೆ ಹಾಕುತ್ತಿದ್ದ. ಅವನ ಹಿಂಬಾಲಕರು ಅದನ್ನೇ ಅನುಕರಿಸುತ್ತಿದ್ದರು. ಅವರೆಲ್ಲರ ನಡತೆ ಊರಿನ ಜನರಿಗೆ ತಮಾಷೆಯಾಗಿ ಕಾಣುತ್ತಿತ್ತು.
ಆ ರಸ್ತೆಯಲ್ಲಿನ ಅಂಗಡಿಯೊಂದರ ವ್ಯಾಪಾರಿ ನಸ್ರುದ್ದೀನ್‌ನ ಗೆಳೆಯನಾಗಿದ್ದ. ಆತ ತನ್ನ ಗೆಳೆಯನ ಮಂಗಾಟ ನೋಡಿ, ‘ಏನಿದು ನಸ್ರುದ್ದೀನ್, ಏನು ಮಾಡುತ್ತಿದ್ದೀಯ? ಇವರೆಲ್ಲಾ ಯಾರು? ಅವರೇಕೆ ನಿನ್ನನ್ನು ಅನುಕರಿಸುತ್ತಿದ್ದಾರೆ? ಎಂದು ಕೇಳಿದ.
‘ನಾನು ಸೂಫಿ ಗುರುವಾಗಿದ್ದೇನೆ’ ಹೇಳಿದ ನಸ್ರುದ್ದೀನ್, ‘ಇವರೆಲ್ಲಾ ನನ್ನ ಶಿಷ್ಯರು. ಅವರಿಗೆ ನಾನು ಜ್ಞಾನೋದಯದ ಹಾದಿ ತೋರಿಸುತ್ತಿದ್ದೇನೆ.’
‘ಹೌದೆ? ಆದರೆ, ಅವರಿಗೆ ಯಾವಾಗ ಜ್ಞಾನೋದಯವಾಗಿದೆಯೆಂದು ನಿನಗೆ ಹೇಗೆ ತಿಳಿಯುತ್ತದೆ?’ ಎಂದ ಆ ಗೆಳೆಯ.
‘ಹೋ, ಅದು ಬಹಳ ಸುಲಭ. ಪ್ರತಿ ದಿನ ಬೆಳಿಗ್ಗೆ ನಾನು ನನ್ನ ಶಿಷ್ಯರನ್ನು ಎಣಿಸುತ್ತೇನೆ. ಯಾರ‍್ಯಾರು ಬಿಟ್ಟುಹೋಗಿದ್ದಾರೋ, ಅವರಿಗೆಲ್ಲಾ ಜ್ಞಾನೋದಯ ವಾಗಿದೆಯೆಂದು ಅರ್ಥ!’ ಎಂದ ಸೂಫಿ ಗುರು ನಸ್ರುದ್ದೀನ್.

ಚಂದ್ರನೇ ವಾಸಿ!
ಆ ದಿನ ತಾನು ಸದಾ ಹರಟೆ ಹೊಡೆಯಲು ಹೋಗುವಾ ಚಹಾದಂಗಡಿಗೆ ಬಂದ ಮುಲ್ಲಾ ನಸ್ರುದ್ದೀನ್, ‘ಸೂರ್ಯನಿಗಿಂತ ಚಂದ್ರನೇ ಹೆಚ್ಚು ಉಪಕಾರಿ’ ಎಂದ ಅಲ್ಲೇ ಗೆಳೆಯರ ಜೊತೆ ಕೂಡುತ್ತ. ಅಲ್ಲೇ ಕೂತಿದ್ದ ಒಬ್ಬ ಮುದುಕ, ‘ಅದು ಹೇಗೆ ಮುಲ್ಲಾ?’ ಎಂದು ಕೇಳಿದ.
‘ಇನ್ನೇನು? ನಮಗೆ ರಾತ್ರಿಯ ಕತ್ತಲಲ್ಲಿ ಬೆಳಕು ಬೇಕಾಗಿರುವಾಗ ಸೂರ್ಯ ಬರುವುದಿಲ್ಲ. ಆಗ ನಮಗೆ ಬೆಳಕು ಕೊಡುವುದು ಚಂದ್ರ ತಾನೆ?’ ಎಂದ ನಸ್ರುದ್ದೀನ್.

ಮುಲ್ಲಾನ ವಯಸ್ಸು
ಬಹಳ ವರ್ಷಗಳ ನಂತರ ಗೆಳೆಯನೊಬ್ಬ ಮುಲ್ಲಾನನ್ನು ಭೇಟಿಯಾದ. ಮುಲ್ಲಾನನ್ನು ಅಪ್ಪಿಕೊಳ್ಳುತ್ತಾ, ‘ಹೇಗಿದ್ದೀಯ ಗೆಳೆಯಾ? ನೋಡಿ ಬಹಳ ವರ್ಷಗಳೇ ಆದುವು. ಈಗ ನಿನ್ನ ವಯಸ್ಸೆಷ್ಟು?’ ಎಂದು ಕೇಳಿದ.
‘ನನಗೆ ನಲವತ್ತು ವರ್ಷ ವಯಸ್ಸು ಎಂದ’ ಮುಲ್ಲಾ.
‘ಅದ್ಹೇಗೆ ಸಾಧ್ಯ? ಕಳೆದ ಸಾರಿ ಭೇಟಿಯಾದಾಗಲೂ ನೀನು ನಿನ್ನ ವಯಸ್ಸು ನಲವತ್ತು ಎಂದೇ ಹೇಳಿದ್ದೆ?’ ಕೇಳಿದ ಆ ಗೆಳೆಯ.
‘ಹೌದಪ್ಪ. ನಾನು ದಿನಕ್ಕೊಮ್ಮೆ ಮಾತು ಬದಲಿಸುವವನಲ್ಲ. ಹೇಳಿದ ಮಾತಿಗೆ ಬದ್ಧನಾಗಿರುವವನು ನಾನು’ ಎಂದ ಮುಲ್ಲಾ ನಸ್ರುದ್ದೀನ್.


ಎಷ್ಟು ವರ್ಷ ದೊಡ್ಡವನು?
‘ನಿನ್ನ ವಯಸ್ಸೆಷ್ಟು?’ ಗೆಳೆಯನೊಬ್ಬ ಮುಲ್ಲಾನನ್ನು ಕೇಳಿದ.
‘ನಾನು ನನ್ನ ತಮ್ಮನಿಗಿಂತ ಮೂರು ವರ್ಷ ದೊಡ್ಡವನು’ ಎಂದ ಮುಲ್ಲಾ.
‘ನಿನಗೆ ಅಷ್ಟು ನಿಖರವಾಗಿ ಗೊತ್ತೇ?’
‘ಹೌದು. ಕಳೆದ ವರ್ಷ ನನ್ನ ತಮ್ಮ ಯಾರೊಂದಿಗೋ ನನ್ನ ಅಣ್ಣ ನನಗಿಂತ ಎರಡು ವರ್ಷ ದೊಡ್ಡವನು ಎಂದು ಹೇಳುತ್ತಿದ್ದ. ಅವನು ಆ ಮಾತು ಹೇಳಿ ಒಂದು ವರ್ಷವಾಗಿದೆ. ಹಾಗಾಗಿ ಈಗ ನಾನು ಅವನಿಗಿಂತ ಮೂರು ವರ್ಷ ದೊಡ್ಡವನು’ ಎಂದ ಮುಲ್ಲಾ ನಸ್ರುದ್ದೀನ್.


ಮೋಸ!
ಮುಲ್ಲಾ ನಸ್ರುದ್ದೀನ್‌ನ ಊರಿನಲ್ಲಿ ಹೊಸ ವಸ್ತ್ರ ವಿನ್ಯಾಸಗಳ ಫ್ಯಾಶನ್ ಶೋ ನಡೆಯುತ್ತಿತ್ತು. ಸುಂದರ ಯುವತಿಯರು ಆ ಹೊಸ ವಸ್ತ್ರಗಳನ್ನು ಧರಿಸಿ ಪ್ರದರ್ಶನ ನಡೆಸಿದರು. ಮುಲ್ಲಾ ಹೊರಗೆ ಬಂದಾಗ ಆ ಹೊಸ ವಸ್ತ್ರಗಳನ್ನು ಮಾರಾಟಕ್ಕೆ ಇರಿಸಿದ್ದರು. ಅದನ್ನು ನೋಡಿದ ಮುಲ್ಲಾ, ‘ಇದು ಮೋಸ’ ಎಂದರಚಿದ. ಆಯೋಜಕರು ಆತನ ಬಳಿ ಬಂದು ‘ಯಾವುದು ಮೋಸ?’ ಎಂದು ಕೇಳಿದರು.
‘ಒಳಗಡೆ ಸುಂದರ ಯುವತಿಯರು ಹಾಗೂ ವಸ್ತ್ರಗಳನ್ನು ಪ್ರದರ್ಶಿಸಿದಿರಿ. ಆದರೆ ಇಲ್ಲಿ ವಸ್ತ್ರಗಳನ್ನು ಮಾತ್ರ ಮಾರಾಟಕ್ಕೆ ಇಟ್ಟಿದ್ದೀರಾ!’ ಎಂದ ಮುಲ್ಲಾ ನಸ್ರುದ್ದೀನ್.