Translate

ಸೋಮವಾರ, ಜನವರಿ 05, 2015

ಪುಸ್ತಕಗಳಿಗೆ ಅಳಿವುಂಟೆ?

ಕನ್ನಡ ಪುಸ್ತಕ ಪ್ರಾಧಿಕಾರದ `ಪುಸ್ತಕ ಲೋಕ' (ಸಂಪುಟ 5, ಸಂಚಿಕೆ 3)ದಲ್ಲಿ ಪ್ರಕಟವಾದ ನನ್ನ ಲೇಖನ:
`ಪುಸ್ತಕಗಳಿಗೆ ಅಳಿವುಂಟೆ?'
  



ಖ್ಯಾತ ವಿಜ್ಞಾನ ಕಾಲ್ಪನಿಕ ಕಥನ ಲೇಖಕ ಐಸಾಕ್ ಅಸಿಮೋವ್‍ನ ಭವಿಷ್ಯದಲ್ಲಿ ಸ್ಥಿತವಾಗಿರುವ ಕತೆಯೊಂದರಲ್ಲಿ ಆಟವಾಡುತ್ತಿರುವ ಅಣ್ಣ ಮತ್ತು ತಂಗಿ ಮನೆಯ ಅಟ್ಟಕ್ಕೆ ಹೋಗುತ್ತಾರೆ. ಅಲ್ಲಿ ಹಳೆಯ ವಸ್ತುಗಳನ್ನು ಕುತೂಹಲದಿಂದ ನೋಡುತ್ತಿರುವಾಗ ಅವರಿಗೆ ಪುಸ್ತಕವೊಂದು ಸಿಗುತ್ತದೆ. ಆ ವಸ್ತು ಏನಿರಬಹುದೆಂದು ಅವರಿಬ್ಬರಿಗೂ ಅಚ್ಚರಿಯಾಗುತ್ತದೆ, ಏಕೆಂದರೆ ಅವರು ಎಂದೂ ಪುಸ್ತಕವನ್ನೇ ನೋಡಿದವರಲ್ಲ. ಅಕ್ಷರಗಳು ಈ ರೀತಿಯ ತೆಳುವಾದ ಹಾಳೆಯ ಮೇಲೆ ಕಪ್ಪು ಅಕ್ಷರಗಳಲ್ಲಿ ಮುದ್ರಿತವಾಗಿರುವುದನ್ನು ಕಂಡು ಅವರಿಗೆ ಜ್ಞಾನ ಅಥವಾ ಮಾಹಿತಿ ಈ ರೂಪದಲ್ಲೂ ಈ ಹಿಂದೆ ದೊರಕುತ್ತಿತ್ತೆಂದು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ. 1899ರಲ್ಲಿ ಪ್ರಕಟವಾದ ಎಚ್.ಜಿ.ವೆಲ್ಸ್‍ನ `ಟೈಮ್ ಟ್ರಾವೆಲರ್ನ ಕಥಾನಾಯಕ 22ನೇ ಶತಮಾನಕ್ಕೆ ಪ್ರಯಾಣಿಸಿದಾಗ ಅಲ್ಲಿ ತಾನಿರುವ ಸಮಾಜದ ಬಗೆಗೆ ತಿಳಿದುಕೊಳ್ಳಲು ಪುಸ್ತಕಗಳನ್ನು ಅರಸುತ್ತಾನೆ. ಆದರೆ ಅವನಿಗೆ ಎಲ್ಲಿಯೂ ಪುಸ್ತಕಗಳು ದೊರೆಯುವುದಿಲ್ಲ, ಬದಲಿಗೆ ವಿಚಿತ್ರ ಡಬಲ್ ಸಿಲಿಂಡರ್‍ಗಳು ದೊರೆಯುತ್ತವೆ. ಅವನ್ನು ಉಪಕರಣವೊಂದರಲ್ಲಿ ಇರಿಸಿ ಚಾಲಿಸಿದಾಗ ಅವನಿಗೆ ಬೇಕಾದ ಮಾಹಿತಿ ನೀಡುವ, ಚಲಿಸುವ ಮತ್ತು ಮಾತನಾಡುವ ಆಕೃತಿಗಳು ಅವನ ಕಣ್ಣೆದುರಿಗೇ ಮೂಡುತ್ತವೆ. ಅಸಿಮೋವ್‍ನ ಕತೆ ಸುಮಾರು 2200ರ ಇಸವಿಯ ಸಮಯದ್ದು. ಆದರೆ ಪುಸ್ತಕಗಳ ರೂಪದ ಅಕ್ಷರ ದಾಸೋಹ ಕಣ್ಮರೆಯಾಗಲು ಅಷ್ಟೊಂದು ಸಮಯ ಬೇಕಾಗಿಲ್ಲ... ಏಕೆಂದರೆ ಪುಸ್ತಕಗಳಿಗೆ ಅಳಿವುಂಟು!

ಈಗಿನ ಡಿಜಿಟಲ್ ಯುಗದಲ್ಲಿ ಅಕ್ಷರ ಲೋಕದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ. ಅಮೆಜಾನ್‍ನ `ಕಿಂಡಲ್' (ಈಗ ಅಮೆಜಾನ್ ಭಾರತದಲ್ಲೂ ತನ್ನ ಇ-ಬುಕ್ ರೀಡರ್‍ಗಳ ಮಾರಾಟ ಪ್ರಾರಂಭಿಸುತ್ತಿದೆ), ಬಾನ್ರ್ಸ್ ಅಂಡ್ ನೋಬಲ್ಸ್‍ನ `ನೂಕ್', ಸೋನಿಯ ಇ-ಬುಕ್ (ಎಲೆಕ್ಟ್ರಾನಿಕ್ ಬುಕ್) ರೀಡರ್‍ಗಳು ಬರುವ ಮೊದಲೇ ಕಂಪ್ಯೂಟರುಗಳಲ್ಲಿ ಪುಸ್ತಕಗಳನ್ನು ಡೌನ್‍ಲೋಡ್ ಮಾಡಿ, ಸ್ಕ್ಯಾನ್ ಮಾಡಿ ಓದುವ ಪ್ರಯತ್ನಗಳು ನಡೆಯುತ್ತಿದ್ದವು. ಅ ಎಲ್ಲಾ ಪ್ರಯತ್ನಗಳು ತ್ರಾಸದಾಯಕವಾಗಿದ್ದವು. ಆದರೆ ಕಿಂಡಲ್, ನೂಕ್ ಮುಂತಾದ ಎಲೆಕ್ಟ್ರಾನಿಕ್ ಬುಕ್ ರೀಡರ್‍ಗಳು, ಅಂಗೈ ಅಗಲದ ಮೊಬೈಲ್‍ಗಳು, ಕಾಸಿಗೊಂದು ಕೊಸರಿಗೊಂದು ಎಂದು ಸಿಗುತ್ತಿರುವ ಟ್ಯಾಬ್ಲೆಟ್ಟುಗಳು ಅಕ್ಷರ ಜಗತ್ತಿನಲ್ಲಿ ಅತಿ ದೊಡ್ಡ ಕ್ರಾಂತಿಯನ್ನೇ ಮಾಡುತ್ತಿವೆ. ಕೆಲವರು ಇನ್ನು ಇಪ್ಪತ್ತೈದು ವರ್ಷಗಳಲ್ಲಿ ಕಾಗದದ ಪುಸ್ತಕಗಳು ಸಂಪೂರ್ಣ ಕಣ್ಮರೆಯಾಗುತ್ತದೆ ಎನ್ನುತ್ತಿದ್ದರೆ ಇನ್ನು ಕೆಲವರು ಆ ಕೆಲಸ ಇನ್ನು ಹತ್ತೇ ವರ್ಷಗಳಲ್ಲಿ ಆಗುತ್ತದೆ ಎನ್ನುತ್ತಿದ್ದಾರೆ. ಕಾಗದದ ಪುಸ್ತಕ ಮುದ್ರಣ ಇನ್ನು ಕೆಲವೇ ವರ್ಷಗಳಲ್ಲಿ ಆರ್ಥಿಕವಾಗಿ ಲಾಭದಾಯಕವಲ್ಲದ ಉದ್ದಿಮೆಯಾಗುತ್ತದೆ ಎನ್ನುತ್ತಿದ್ದಾರೆ ಇನ್ನು ಕೆಲವರು.

1933ರಲ್ಲಿ ಮುದ್ರಣ ಪ್ರಾರಂಭಿಸಿದ ಅಮೆರಿಕಾದ ಪ್ರತಿಷ್ಠಿತ ವಾರಪತ್ರಿಕೆ `ನ್ಯೂಸ್‍ವೀಕ್' ಸುಮಾರು ಎಂಭತ್ತು ವರ್ಷಗಳ ಸತತ ಪ್ರಕಟಣೆಯ ನಂತರ 31ನೇ ಡಿಸೆಂಬರ್ 2012ರಲ್ಲಿ ತನ್ನ ಮುದ್ರಣ ಆವೃತ್ತಿಯನ್ನು ನಿಲ್ಲಿಸಿತು. ಈಗ ಅದರ ಆನ್‍ಲೈನ್ ಆವೃತ್ತಿ ಮಾತ್ರ ಪ್ರಕಟವಾಗುತ್ತಿದೆ. 1768ರಲ್ಲಿ ಪುಸ್ತಕರೂಪದಲ್ಲಿ ವಿಶ್ವಕೋಶಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಪ್ರಾರಂಭಿಸಿದ ಎನ್‍ಸೈಕ್ಲೊಪಿಡಿಯಾ ಬ್ರಿಟಾನಿಕ 2010ರಲ್ಲಿ ತನ್ನ ಮುದ್ರಣ ಆವೃತ್ತಿಯನ್ನು ನಿಲ್ಲಿಸಿತು. ಎನ್‍ಸೈಕ್ಲೊಪಿಡಿಯಾ ಬ್ರಿಟಾನಿಕ ವಿಶ್ವಕೋಶದ ಗ್ರಂಥಗಳನ್ನು ತಮ್ಮ ಕಪಾಟುಗಳಲ್ಲಿ ಹೊಂದಿರುವುದೇ ಹೆಮ್ಮೆಯ, ಬೌದ್ಧಿಕತೆಯ ಸಂಕೇತವೆಂಬ ಕಾಲವೊಂದಿತ್ತು. ಗ್ರಂಥಾಲಯಗಳಲ್ಲಿ ಅವುಗಳ ಪುಟಗಳನ್ನು ಸವರುತ್ತಾ ವರ್ಣರಂಜಿತ ಫೋಟೋಗಳನ್ನು ನೋಡುವುದೇ ನನ್ನಂಥವರಿಗೆ ತೀವ್ರ ಭಾವೋದ್ರೇಕದ ಸ್ಪರ್ಶಾನುಭವ ನೀಡುತ್ತಿತ್ತು. ಆದರೆ ಮೂರು-ನಾಲ್ಕು ವರ್ಷಗಳ ಹಿಂದೆ ನೂರು ರೂಪಾಯಿಗಳಿಗೆಲ್ಲ ಎನ್‍ಸೈಕ್ಲೊಪಿಡಿಯಾ ಬ್ರಿಟಾನಿಕಾದ ಸಿ.ಡಿ.ಗಳು ದೊರೆಯುತ್ತಿದ್ದವು ಹಾಗೂ ಎಷ್ಟೋ ಸಾಮಗ್ರಿಗಳ ಜೊತೆ ಅವುಗಳನ್ನು ಉಚಿತವಾಗಿ ಸಹ ನೀಡುತ್ತಿದ್ದರು. ಆದರೆ ಇಂದು ಸಿ.ಡಿ., ಡಿ.ವಿ.ಡಿ.ಗಳ ಮೂಲಕ ವಿಶ್ವಕೋಶಗಳನ್ನು ಪರಾಮರ್ಶಿಸುವ ತಾಳ್ಮೆ ಅಥವಾ ಅವಶ್ಯಕತೆಯೇ ಯಾರಿಗೂ ಇಲ್ಲವೆನ್ನಿಸುತ್ತದೆ. ಏಕೆಂದರೆ ಇಂದು ಆನ್‍ಲೈನ್‍ನಲ್ಲಿಯೇ ತಮ್ಮ ಮೊಬೈಲ್ ಅಥವಾ ಕಂಪ್ಯೂಟರುಗಳಲ್ಲಿ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ದಿನೇ ದಿನೇ ಮಾರಾಟವಾಗುತ್ತಿರುವ ವೃತ್ತಪತ್ರಿಕೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲ ಪತ್ರಿಕೆಗಳೂ ಬಹುಪಾಲು ಉಚಿತವಾಗಿ ಅಂತರ್ಜಾಲದಲ್ಲಿ ದೊರಕುತ್ತವೆ. ಕನ್ನಡದ ಎಲ್ಲ ದಿನಪತ್ರಿಕೆಗಳೂ ಅಂತರ್ಜಾಲದಲ್ಲಿ ಉಚಿತವಾಗಿ ದೊರೆಯುತ್ತವೆ. ಅದೇ ರೀತಿ ಎಲೆಕ್ಟ್ರಾನಿಕ್ ಪುಸ್ತಕಗಳ (ಇ-ಪುಸ್ತಕ) ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಾರ್ಷಿಕ 20-23 ಬಿಲಿಯನ್ ಡಾಲರ್ ಮಾರಾಟ ವಹಿವಾಟು ಹೊಂದಿರುವ ಅಮೆಜಾನ್ ಮಾರಾಟ ಮಾಡುವ 100 ಕಾಗದ ಪುಸ್ತಕಗಳಿಗೆ 242 ಇ-ಪುಸ್ತಕಗಳನ್ನು ಮಾರಾಟ ಮಾಡುತ್ತಿದೆಯಂತೆ.

ಇ-ಪುಸ್ತಕಗಳ ಸಾಧ್ಯತೆ ಅಗಾಧವಾದುದು. ಅವುಗಳಲ್ಲಿ ಅಕ್ಷರಗಳು ಮಾತ್ರವಲ್ಲ, ದೃಶ್ಯಗಳು, ಶಬ್ದಗಳು, ಕೃತಿಕಾರನ ಸ್ವಂತ ಲಿಪಿ, ಮುಂತಾದುವು ಇರಬಹುದು. ಅಂದರೆ `ಓದುಗ’ ಕೃತಿಯೊಂದನ್ನು ಬಹು ಆಯಾಮಗಳಲ್ಲಿ ಗ್ರಹಿಸಿಕೊಳ್ಳಬಹುದು ಮತ್ತು ಅನುಭವಿಸಬಹುದು. ಇಂದು ಹೆಚ್ಚು ಜನಪ್ರಿಯವಾಗಿರುವ ಅಮೆರಿಕದ ಅಮೆಜಾನ್ ಕಂಪೆನಿಯ ಕಿಂಡಲ್ ಅತ್ಯಂತ ಹಗುರವಾದ, ಪುಸ್ತಕದ ಗಾತ್ರವೇ ಇರುವ ಇ-ಬುಕ್ ರೀಡರ್. ಹಾಳೆಯ ಮೇಲೆ ಮುದ್ರಿತ ಅಕ್ಷರಗಳಂತೆಯೇ ಕಾಣುವ ಎಲೆಕ್ಟ್ರಾನಿಕ್ ಇಂಕ್ ತಂತ್ರಜ್ಞಾನದ ಇದನ್ನು ಓದುವಾಗ ಕಾಗದದ ಪುಸ್ತಕ ಓದುವ ಅನುಭವವೇ ಆಗುತ್ತದೆ. ಈಗ ಅದರ ಕಲರ್ ಆವೃತ್ತಿ ಕಿಂಡಲ್ ಫೈರ್ ಮತ್ತು ಕಪ್ಪು ಬಿಳುಪಿನ, ಆದರೆ ಕತ್ತಲಲ್ಲೂ ಓದಬಹುದಾದ ಕಿಂಡಲ್ ಲೈಟ್ ಮಾದರಿಗಳೂ ಬಂದಿವೆ. ಕಪ್ಪುಬಿಳುಪಿನ ಕಿಂಡಲ್‍ನಲ್ಲಿ ಸುಮಾರು ಮೂರು ಸಾವಿರ ಪುಸ್ತಕಗಳನ್ನು ಶೇಖರಿಸಿಡಬಹುದು (ನನ್ನಲ್ಲಿರುವ ಕಿಂಡಲ್‍ನಲ್ಲಿ ಸುಮಾರು ಸಾವಿರ ಪುಸ್ತಕಗಳಿವೆ). ಸುಮಾರು ಮುನ್ನೂರು ಗ್ರಾಂಗಳ ತೂಕವಿರುವ ಅದನ್ನು ಕೊಂಡೊಯ್ಯುತ್ತಿದ್ದರೆ ಇಡೀ ಗ್ರಂಥಾಲಯವನ್ನೇ ಕೊಂಡೊಯ್ಯುತ್ತಿರುತ್ತೇವೆ! ಒಮ್ಮೆ ಅದನ್ನು ಸಂಪೂರ್ಣ ಚಾರ್ಜ್ ಮಾಡಿದರೆ ನೀವು ದಿನಕ್ಕೆ ಒಂದು ಗಂಟೆಯಂತೆ ಓದಿದರೆ ಹದಿನೈದು ದಿನಗಳ ಕಾಲ ಅದನ್ನು ಪುನಃ ಚಾರ್ಜ್ ಮಾಡುವ ಅವಶ್ಯಕತೆಯಿಲ್ಲ ಹಾಗೂ ಅದನ್ನೆಂದೂ ನೀವು `ಆಫ್’ ಮಾಡುವ ಅವಶ್ಯಕತೆಯಿಲ್ಲ. ನೀವು ಅವುಗಳಲ್ಲಿ ಎಷ್ಟೇ ಪುಸ್ತಕಗಳನ್ನು ಓದಿದರೂ, ಪುನಃ ಆ ಪುಸ್ತಕ ತೆರೆದಾಗ ನೀವು ಕಳೆದ ಸಾರಿ ಎಲ್ಲಿ ಓದಿ ನಿಲ್ಲಿಸಿರುತ್ತೀರೋ ಅಲ್ಲಿಯೇ ಪುಟ ತೆರೆದುಕೊಳ್ಳುತ್ತದೆ. ಓದುವಾಗ ಅಕ್ಷರದ ಅರ್ಥ ತಿಳಿದಿಲ್ಲದಿದ್ದಲ್ಲಿ ಅದರ ಪಕ್ಕದಲ್ಲಿ ಕರ್ಸರ್ ಇರಿಸಿದರೆ ತಳದಲ್ಲಿ ಅದರ ಅರ್ಥ ತಾನಾಗೇ ಮೂಡಿಬರುತ್ತದೆ. ನೀವು ಅಮೆಜಾನ್‍ನಿಂದ ಇ-ಪುಸ್ತಕಗಳನ್ನು ಖರೀದಿಸಿದರೆ ಅದು ನೇರವಾಗಿ ನಿಮ್ಮ ಕಿಂಡಲ್‍ಗೆ ವೈ-ಫೈ ಮೂಲಕ ಅಥವಾ 3ಜಿ ಮೂಲಕ ತಲುಪುತ್ತದೆ. ಅಷ್ಟೇ ಅಲ್ಲ ಕಿಂಡಲ್‍ಗೆ ಪೂರಕವಾಗಿ ಹಲವಾರು `ಎಕ್ಸ್‍ಟೆನ್ಷನ್’ಗಳು ಅಂತರ್ಜಾಲದಲ್ಲಿ ಲಭಿಸುತ್ತವೆ. ನೀವು ಅಂತರ್ಜಾಲದಲ್ಲಿ ಯಾವುದಾದರೂ ಲೇಖನ ಓದುತ್ತಿದ್ದಲ್ಲಿ ಅದನ್ನು ಆ ನಂತರ ಓದಬೇಕೆಂದೆನ್ನಿಸಿದರೆ ಬ್ರೌಸರ್‍ನಲ್ಲಿ ನೀವು ಅಳವಡಿಸಿಕೊಂಡಿರುವ ಸಣ್ಣ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಆ ಲೇಖನ ನೇರ ನಿಮ್ಮ ಕಿಂಡಲ್‍ಗೆ ತಲುಪುತ್ತದೆ. ಕಿಂಡಲ್‍ನಲ್ಲಿ ಓದಲು ಅದರದೇ ವಿಶಿಷ್ಟ ನಮೂನೆಯಾದ `ಮೋಬಿ’ ಫಾಮ್ರ್ಯಾಟ್ ಬೇಕಾಗಿರುವುದರಿಂದ ನಿಮಗೆ ಬೇಕಾದ ಬರಹಗಳನ್ನು ಮೋಬಿಗೆ ಪರಿವರ್ತಿಸಿಕೊಳ್ಳಲು ಬೇಕಾದಷ್ಟು ತಂತ್ರಾಂಶಗಳು ಉಚಿತವಾಗಿ ಲಭ್ಯವಿವೆ. ಕಿಂಡಲ್‍ನಲ್ಲಿ ನಿಮಗೆ ಓದುವುದು ಬೇಸರವೆನ್ನಿಸಿದರೆ, ಹೆಡ್‍ಫೋನ್ ಹಾಕಿಕೊಂಡರೆ ಅದೇ ಪುಸ್ತಕವನ್ನು ನಿಮಗೆ ಓದುತ್ತದೆ. ನಿಮಗೆ ಹೆಣ್ಣು ಧ್ವನಿ ಬೇಕೋ, ಗಂಡು ಧ್ವನಿ ಬೇಕೋ ಅದನ್ನೂ ಆಯ್ಕೆಮಾಡಿಕೊಳ್ಳಬಹುದು! ಆದರೆ ಕನ್ನಡದ ಪುಸ್ತಕಗಳು ಮೋಬಿ ನಮೂನೆಯಲ್ಲಿ ದೊರಕುತ್ತಿಲ್ಲ. ಕಿಂಡಲ್‍ನಲ್ಲಿ ಪಿ.ಡಿ.ಎಫ್. (ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮಾಟ್- ಕಂಪ್ಯೂಟರುಗಳಲ್ಲಿ ಬಳಸಲಾಗುವ ಅತ್ಯಂತ ಜನಪ್ರಿಯ ನಮೂನೆ) ಸಹ ಓದಬಹುದಾದ್ದರಿಂದ ಯೂನಿಕೋಡ್‍ನಲ್ಲಿರುವ ಕನ್ನಡವನ್ನು ಪಿ.ಡಿ.ಎಫ್. ಮಾಡಿ ಕಿಂಡಲ್‍ನಲ್ಲಿ ಓದಬಹುದು. ಇಡೀ ಪುಸ್ತಕದ ಹಾಳೆಯನ್ನೇ ಸ್ಕ್ಯಾನ್ ಮಾಡಿ ಪಿ.ಡಿ.ಎಫ್. ಮಾಡಿ ಸಹ ಓದಬಹುದು. ಇತ್ತೀಚೆಗೆ ಯಾರೋ ಪೂರ್ಣಚಂದ್ರ ತೇಜಸ್ವಿಯವರ ಹಲವಾರು ಕತೆ, ಕಾದಂಬರಿಗಳನ್ನು ಸ್ಕ್ಯಾನ್ ಮಾಡಿ, ಪಿ.ಡಿ.ಎಫ್. ಮಾಡಿ ಇ-ಮೇಲ್‍ನಲ್ಲಿ ಎಲ್ಲರಿಗೂ ಹಂಚಿದ್ದರು. ನಾನು ನನ್ನ ಎರಡು ಪುಸ್ತಕಗಳನ್ನು ಇದೇ ರೀತಿ ಮಾಡಿ ಅಂತರ್ಜಾಲದಲ್ಲಿ ತೇಲಿ ಬಿಟ್ಟಿದ್ದೇನೆ. ಇದುವರೆಗೆ ಅವು ತಲಾ 3500ಕ್ಕೂ ಹೆಚ್ಚು ಬಾರಿ ಡೌನ್‍ಲೋಡ್ ಆಗಿವೆ, ಇನ್ನೂ ಆಗುತ್ತಿವೆ. ಇ-ಪುಸ್ತಕಗಳನ್ನು ಲೇಖಕರು ಕ್ಷಣಾರ್ಧದಲ್ಲಿ ಜಗತ್ತಿನಾದ್ಯಂತ ತಲುಪಿಸಿಬಿಡಬಹುದು.

ಆನ್‍ಲೈನ್ ಓದುವಿಕೆ ಅಥವಾ ಇಲೆಕ್ಟ್ರಾನಿಕ್ ಕೃತಿಗಳ `ಗಾಢ’ ಓದುವಿಕೆ ಸಾಧ್ಯವಿಲ್ಲವೆನ್ನುವವರಿದ್ದಾರೆ. ಬಹುಶಃ ಆ ರೀತಿಯ ಓದುವಿಕೆ ಈಗಿನ ತಲೆಮಾರಿನವರಲ್ಲಿ ಇಲ್ಲವೆಂದೇ ಹೇಳಬಹುದು. ಏನಿದ್ದರೂ ಅವರದು `ಮೇಲಿನ’ ಓದು. ಅವರಿಗೆ ಅಷ್ಟೊಂದು ತಾಳ್ಮೆಯಿರುವುದಿಲ್ಲ ಎಂದು ದೂರುವವರಿದ್ದಾರೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಹ್ಯಾರಿಪಾಟರ್ ಪುಸ್ತಕ ಪ್ರಕಟವಾದ ಇಪ್ಪತ್ತನಾಲ್ಕು ಗಂಟೆಗಳೊಳಗೆ ಇಡೀ ಪುಸ್ತಕವನ್ನು ಡಿ.ಟಿ.ಪಿ. ಮಾಡಿ ಅಂತರ್ಜಾಲದಲ್ಲಿ ತೇಲಿಬಿಡುತ್ತಿದ್ದರು. ಆದರೆ ಡಿ.ಟಿ.ಪಿ. ಮಾಡುವ ಯುವ ಪೀಳಿಗೆ ಮಧ್ಯದಲ್ಲಿ ತಮ್ಮ ಕಲ್ಪನೆಯನ್ನೂ ಸೇರಿಸಿ ಕತೆಯನ್ನು ಒಂದಷ್ಟು ಬದಲಾಯಿಸಿಯೂ ಬಿಡುತ್ತಿದ್ದರು ಎನ್ನುತ್ತಿದ್ದಳು ಆ ಪುಸ್ತಕಗಳನ್ನು ಓದುತ್ತಿದ್ದ ನನ್ನ ಮಗಳು. ಕೆಲ ವಾರಗಳ ಹಿಂದಷ್ಟೇ ಡಿಗ್ರಿ ಓದುತ್ತಿರುವ ನನ್ನ ಮಗ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ತನ್ನ ಲ್ಯಾಪ್‍ಟಾಪ್‍ನಲ್ಲಿ ಇಂಟರ್‍ನೆಟ್‍ನಿಂದ ಮಾಹಿತಿ ಪಡೆದು ಓದುತ್ತಿದ್ದ. ತನ್ನ ಕಾಲೇಜಿನ ನೋಟ್ಸ್ ಜೊತೆಗೆ ಹಲವಾರು ಪಠ್ಯ ಪುಸ್ತಕಗಳ ಪುಟಗಳನ್ನು ಫೋಟೋ ಹಿಡಿದು ಅವುಗಳನ್ನು ತನ್ನ ಟ್ಯಾಬ್ಲೆಟ್‍ನಲ್ಲಿ ಓದುತ್ತಿದ್ದ. ಹಲವಾರು ಪಿ.ಡಿ.ಎಫ್. ರೂಪದ ಪುಸ್ತಕಗಳನ್ನು ಸಹ ತನ್ನ ಟ್ಯಾಬ್ಲೆಟ್‍ನಲ್ಲಿ ಓದುತ್ತಿದ್ದ. ಈ ತಲೆಮಾರಿನವರಿಗೆ ಪುಸ್ತಕಗಳ ಬಗೆಗೆ ಅಷ್ಟೊಂದು ನಾಸ್ಟಾಲ್ಜಿಯಾ ಇಲ್ಲ. ಮಾಹಿತಿ ಕಾಗದದ ಪುಸ್ತಕಗಳ ರೂಪದಲ್ಲೇ ಇರಬೇಕೆಂದೇನಿಲ್ಲ.

ಇಂದು ವಿದೇಶಗಳಲ್ಲಿ ಮಾಲ್‍ಗಳಲ್ಲಿ, ಪುಸ್ತಕದ ಅಂಗಡಿಗಳಲ್ಲಿ `ಎಸ್‍ಪ್ರೆಸ್ಸೊ ಬುಕ್ ಮೆಶೀನ್’ಗಳಿಗೆ, ಎಸ್‍ಪ್ರೆಸ್ಸೊ ಕಾಫಿ ಯಂತ್ರಗಳು ಇದ್ದ ಹಾಗೆ. ನೀವು ಬೇಕಾದ ಕೃತಿಯನ್ನು ಆ ಯಂತ್ರದಲ್ಲಿ ಆಯ್ಕೆ ಮಾಡಿಕೊಳ್ಳಬಹುದು, ಆ ಪುಸ್ತಕಕ್ಕೆ ಇರುವ ಹತ್ತಿಪ್ಪತ್ತು ಮುಖಪುಟಗಳಲ್ಲಿ ನಿಮಗೆ ಇಷ್ಟವಾದುದನ್ನು ಆಯ್ಕೆಮಾಡಿಕೊಂಡು ಅದರ ಹಣವನ್ನು ನಾಣ್ಯ ಹಾಕುವುದರ ಮೂಲಕ ಅಥವಾ ಕಾರ್ಡ್ ಮೂಲಕ ಪಾವತಿಸಿದರೆ ನಿಮ್ಮ ಕಣ್ಣೆದುರಿನಲ್ಲಿಯೇ ಆ ಯಂತ್ರದ ಗಾಜಿನ ಪೆಟ್ಟಿಗೆಯೊಳಗೆ ಪುಟಗಳು ಮುದ್ರಿತವಾಗುತ್ತದೆ, ಅಂಚುಗಳು ಕತ್ತರಿಸಲ್ಪಡುತ್ತವೆ ಹಾಗೂ ಪುಸ್ತಕ ನೀಟಾಗಿ ಬೈಂಡ್ ಆಗಿ ನಿಮ್ಮ ಕೈಗೆ ಜಾರಿ ಬಂದು ಬೀಳುತ್ತದೆ- ಎಲ್ಲಾ ನಾಲ್ಕು ನಿಮಿಷಗಳಲ್ಲಿ! ಇಂದಿಗೂ ಪೆಂಗ್ವಿನ್ ಪ್ರಕಾಶನ ತನ್ನ ಎಲ್ಲ ಪುಸ್ತಕಗಳನ್ನು ದಾಸ್ತಾನು ಇಟ್ಟಿರುವುದಿಲ್ಲ. ಯಾರೇ ಇಪ್ಪತ್ತೈದಕ್ಕಿಂತ ಹೆಚ್ಚು ಪ್ರತಿಗಳಿಗೆ ಬೇಡಿಕೆ ಸಲ್ಲಿಸಿದಲ್ಲಿ `ಆನ್ ಡಿಮ್ಯಾಂಡ್’ ಒಂದೆರಡು ದಿನದಲ್ಲಿ ಮುದ್ರಿಸಿ ಕೊಡುತ್ತಾರೆ.

ಇ-ಪುಸ್ತಕಗಳು ಪ್ರಾರಂಭವಾಗುವ ಮೊದಲೇ ಪ್ರಾರಂಭವಾದದ್ದು `ಆಡಿಯೊ’ ಅಥವಾ ಶ್ರವಣ ಪುಸ್ತಕಗಳು. ಇಡೀ ಪುಸ್ತಕವನ್ನು ಸ್ವತಃ ಲೇಖಕ ಅಥವಾ ಉತ್ತಮ ಧ್ವನಿಯುಳ್ಳವರು ಓದಿರುತ್ತಾರೆ. ಅದರ ಕ್ಯಾಸೆಟ್ ಹಾಕಿ ಜನ ಓದುವ ಬದಲು ಪುಸ್ತಕವನ್ನು ಕೇಳಿಸಿಕೊಳ್ಳುತ್ತಿದ್ದರು. ಜಪಾನಿನಲ್ಲಿ ಇವು ಸಾಕಷ್ಟು ಜನಪ್ರಿಯವಾಗಿ ದಿನಾ ಬೆಳಿಗ್ಗೆ ಮತ್ತು ಸಂಜೆ ಕಚೇರಿಗೆ ಓಡಾಡುವ ಜನ ಟ್ರೈನು, ಬಸ್ಸುಗಳಲ್ಲಿ ಕೂತು ಕಣ್ಣುಮುಚ್ಚಿಕೊಂಡು ಸಾಕಷ್ಟು ಪುಸ್ತಕಗಳ ವಾಚನವನ್ನು ಆಲಿಸುತ್ತಿದ್ದರು. ಭಾರತದಲ್ಲಿ ಈ ಪ್ರಯತ್ನವನ್ನು `ಕರಡಿ ಟೇಲ್ಸ್’ ಎನ್ನುವ ಮಾಲಿಕೆಯಲ್ಲಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿದರು. ಪುಸ್ತಕದ ಜೊತೆಯಲ್ಲಿ ಕ್ಯಾಸೆಟ್ ಇರುತ್ತಿತ್ತು ಹಾಗೂ ಮಕ್ಕಳಿಗೆ ಅತ್ಯಂತ ರಂಜನೀಯವಾಗಿ, ಸಂಗೀತ, ಶಬ್ದಗಳೊಡನೆ ಕತೆಯನ್ನು ಕೇಳಿಸುತ್ತಿದ್ದರು. ಮಕ್ಕಳಿಗೆ ಕತೆಗಳನ್ನು ಹೇಳುವವರೇ ಇಲ್ಲದಿರುವಾಗ ಇದು ಒಳ್ಳೆ ಪ್ರಯತ್ನವೇ ಆದರೂ ಇದರಲ್ಲಿ `ಹ್ಹೂಂಗುಡು’ ಎಂದು ಹೇಳುವವರು ಯಾರೂ ಇಲ್ಲ. ಇಂದು ಎಂ.ಪಿ.3 ಪ್ಲೇಯರ್, ಮೊಬೈಲ್‍ಗಳಲ್ಲೆಲ್ಲಾ ಸಾಕಷ್ಟು ಶೇಖರಿಸುವ ಹಾಗೂ ಕೇಳುವ ಸೌಲಭ್ಯವಿರುವುದರಿಂದ ಎಂ.ಪಿ.3 ರೂಪದಲ್ಲಿನ ಸಾಕಷ್ಟು ಆಡಿಯೋ ಪುಸ್ತಕಗಳು ಮಾರಾಟವಾಗುತ್ತಿವೆ ಅಥವಾ ಇಂಟರ್‍ನೆಟ್‍ನಲ್ಲಿ ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಸಿಗುತ್ತವೆ.

ಹಲವಾರು ಜನ ಇ-ಪುಸ್ತಕಗಳು ಕಾಗದದ ಪುಸ್ತಕ ನೀಡುವ `ಸುಖಾನುಭವ’ ನೀಡುವುದಿಲ್ಲ ಎನ್ನುತ್ತಿದ್ದಾರೆ ಹಾಗೂ ಕಾಗದದ ಪುಸ್ತಕಗಳು ಎಂದಿಗೂ ತಮ್ಮ ಕೈ ಬಿಟ್ಟು ಹೋಗುವುದಿಲ್ಲ ಎನ್ನುವ ಆಶಾಭಾವನೆ ಹೊಂದಿದ್ದಾರೆ. ಅವು ನೀಡುವ ಅನುಭವ ನಿಜಕ್ಕೂ ಮರೆಯಲಾರದಂಥದು. ಆದರೆ ನಮಗೆ ಶಾಸನಗಳನ್ನು ಅಥವಾ ತಾಳೆಗರಿಗಳನ್ನು ಆ ಕಾಲದಲ್ಲಿ ಓದುತ್ತಿದ್ದಂಥವರ ಅನುಭವ ಪಡೆದುಕೊಳ್ಳಲು ಸಾಧ್ಯವೆ? ಗ್ರಹಿಕೆ ಮತ್ತು ಅನುಭವಗಳು ಚಲನಶೀಲವಾದುವು ಹಾಗೂ ಅವುಗಳನ್ನು ರೂಪಿಸುವುದು ಆಯಾ ಕಾಲದ ಸಂದರ್ಭಗಳಷ್ಟೆ.

ಕಾಗದದ ಪುಸ್ತಕಗಳೇ ಇರಬೇಕೆಂದು ಬಯಸುವ ನಮಗೆ ಒಂದು ಕಾಲಕ್ಕೆ ಪುಸ್ತಕಗಳನ್ನೇ ವಿರೋಧಿಸುವವರೂ ಇದ್ದರೆಂಬುದು ತಿಳಿದಿಲ್ಲ. ಪುಸ್ತಕ ಮುದ್ರಣಕ್ಕೆ 17 ಮತ್ತು 18ನೇ ಶತಮಾನಗಳಲ್ಲೇ ವಿರೋಧ ವ್ಯಕ್ತವಾಗಿತ್ತು. ಆಗ ಅತ್ಯಂತ ಕಷ್ಟಪಟ್ಟು ಕೈಯಿಂದ ಬರೆದು ಸಿದ್ಧಪಡಿಸುತ್ತಿದ್ದ ಕಲಾಕೃತಿಗಳಂತಿದ್ದ ಪುಸ್ತಕಗಳ ಎದುರು ಮುದ್ರಿತ ಪುಸ್ತಕಗಳನ್ನು ನಿಕೃಷ್ಠವಾಗಿ ಕಾಣಲಾಗುತ್ತಿತ್ತು. ಆ ಪುಸ್ತಕಗಳನ್ನು ಸ್ಥಾಪಿತ `ಪ್ರಕಾಶಕ’ರಾಗಿದ್ದ ಕ್ರೈಸ್ತ ಮಠಗಳು (ಆಗ ಮುದ್ರಣವೆಂದರೆ ಬರೇ ಬೈಬಲ್ ಮಾತ್ರ ಎನ್ನುವಂತಿತ್ತು) ಮುದ್ರಿತ ಪುಸ್ತಕಗಳು ಸಂಸ್ಕøತಿ ಮತ್ತು ನಾಗರಿಕತೆಗೇ ಮಾರಕ ಎಂದು ಕರೆದವು. ಕೆಲವು ಪ್ರಕಾಶಕರನ್ನು ಅವರು ಧರ್ಮವಿರೋಧಿ ಪುಸ್ತಕಗಳನ್ನು ಪ್ರಕಟಿಸಿವೆಯೆಂದು ಯೂರೋಪಿನಲ್ಲಿ ಕಂಬಕ್ಕೆ ಕಟ್ಟಿ ಬೆಂಕಿ ಹಾಕಿ ಸುಟ್ಟುಹಾಕಿದರು. ವಿಕ್ಟರ್ ಹ್ಯೂಗೋನ `ಹಂಚ್ ಬ್ಯಾಕ್ ಆಫ್ ನಾಟ್ರೆ ಡ್ಯಾಮ್’ ಕೃತಿಯಲ್ಲಿ ಫ್ರೋಲೊ ಎಂಬುವವನು `ಪುಸ್ತಕ ಚರ್ಚ್ ಅನ್ನು ಕೊಲ್ಲುತ್ತದೆ, ಅಕ್ಷರ ಆಕೃತಿಯನ್ನು ಕೊಲ್ಲುತ್ತದೆ’ ಎನ್ನುತ್ತಾನೆ. 1835ರಲ್ಲಿ ಪ್ರಕಟವಾದ ಥಿಯೋಫಿಲ್ ಗೋತಿಯೇ ತನ್ನ ಕಾದಂಬರಿ `ಮ್ಯಾಮ್‍ಸೆಲ್ ದ ಮಾಪಿನ್’ನಲ್ಲಿ `ಪುಸ್ತಕ ವಾಸ್ತುಶಿಲ್ಪವನ್ನು ಕೊಂದಂತೆ ವೃತ್ತಪತ್ರಿಕೆ ಪುಸ್ತಕವನ್ನು ಕೊಲ್ಲುತ್ತಿದೆ’ ಎಂದಿದ್ದಾನೆ.

ಹೊಸ ವಿಚಾರ ಹಳೆಯ ವಿಚಾರವನ್ನು ಕೊಲ್ಲುತ್ತದೆ ಎನ್ನುವುದು ಇತ್ತೀಚಿನ ವಿಚಾರವಲ್ಲ, ಅದು ತೀರಾ ಪ್ರಾಚೀನವಾದುದು. `ಫೇಡ್ರಸ್’ನಲ್ಲಿ ಪ್ಲಾಟೊ ಹೇಳಿರುವಂತೆ ಬರವಣಿಗೆಗೇ ಮೊಟ್ಟಮೊದಲು ವಿರೋಧ ವ್ಯಕ್ತವಾಗಿತ್ತು. ಅದರಲ್ಲಿರುವಂತೆ ಥ್ಯೂಟ್ ಅಥವಾ ಹರ್ಮೀಸ್ ಬರವಣಿಗೆಯನ್ನು ಮೊದಲಿಗೆ ಕಂಡುಹಿಡಿದವನು. ಆತ ತನ್ನ ಆವಿಷ್ಕಾರವನ್ನು ದೊರೆ ಫೆರೊ ಥಮುಸ್‍ನಿಗೆ ತೋರಿಸುತ್ತಾನೆ. ಆದರೆ ಥಮುಸ್ ಅದನ್ನು ತಿರಸ್ಕರಿಸುತ್ತಾನೆ. ಬರವಣಿಗೆ ಸ್ಮರಣೆ ಸಂಸ್ಕøತಿಗೆ ವಿರುದ್ಧವಾದುದು ಹಾಗೂ ಅದಕ್ಕೆ ಮಾರಕವಾದುದು ಎನ್ನುತ್ತಾನೆ.

ಆದರೆ ಜರ್ಮನಿಯ ಗುಟೆನ್‍ಬರ್ಗ್ ಸುಮಾರು 1439ರಲ್ಲಿ ಮುದ್ರಣಯಂತ್ರ ಕಂಡುಹಿಡಿದು ಪುಸ್ತಕ ಮುದ್ರಣ ಪ್ರಾರಂಭವಾದುದರಿಂದ ಆ ಸಮಯದಲ್ಲಿ ಸಂಸ್ಕøತಿ ಮತ್ತು ನಾಗರಿಕತೆಗಳು ಹಾಳಾಗುವ ಬದಲು ಮಹಿಳೆಯರು ಮತ್ತು ಬಡಜನರು ಅಕ್ಷರಸ್ಥರಾಗಲು ಕಾರಣವಾಗಿದೆ. ಅದೇ ಸಮಯದಲ್ಲಿ ಗ್ರಂಥಾಲಯಗಳು ಪ್ರಾರಂಭವಾದಾಗ ಪ್ರಕಾಶಕರೆಲ್ಲಾ ತಾವು ನಿರ್ಗತಿಕರಾಗಿಬಿಡುತ್ತೇವೆಂದು ಬೊಬ್ಬೆಯಿಟ್ಟರು. ಅಷ್ಟು ಹಳೆಯದೇಕೆ, 1939ರಲ್ಲಿ ಪೆಂಗ್ವಿನ್ ಪೇಪರ್‍ಬ್ಯಾಕ್ ಪ್ರಕಟಣೆಗಳು ಪ್ರಾರಂಭವಾದಾಗ ಅದೂ ಸಹ ಮುದ್ರಣ ಉದ್ಯಮವನ್ನು ನಾಶಮಾಡುತ್ತದೆ ಎಂದಿದ್ದರು. ಆದರೆ ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಗಟು ಖರೀದಿಯಿಂದಾಗಿ ಪ್ರಕಾಶಕರ ಸಂಖ್ಯೆ ಹೆಚ್ಚಾಗಿದೆ ಹಾಗೂ ಪುಸ್ತಕಗಳ ಹೆಸರಿನಲ್ಲಿ ಕೆಲಸಕ್ಕೆ ಬಾರದ ಪುಸ್ತಕಗಳ ಸಂಖ್ಯೆಯ ಪ್ರಕಾಶನ ಹೆಚ್ಚಾಗಿದೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ, ಗ್ರಂಥಾಲಯ ಇಲಾಖೆಯನ್ನು ವಂಚಿಸುವ ಪ್ರಕಾಶಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಒಂದೇ ಪುಸ್ತಕಕ್ಕೆ ಎರಡು ಪ್ರತ್ಯೇಕ ರಕ್ಷಾಪುಟಗಳನ್ನು ಹಾಗೂ ಇಬ್ಬರು ಪ್ರಕಾಶಕರ ಹೆಸರುಗಳನ್ನು ಹಾಕಿ ಪ್ರಕಟಿಸಿರುವುದನ್ನು ಆಯ್ಕೆ ಸಮಿತಿಯ ಸದಸ್ಯನಾಗಿರುವ ನಾನು ಸ್ವತಃ ಕಂಡಿದ್ದೇನೆ. ಸಗಟು ಖರೀದಿಗೆಂದು ಅಂತರ್ಜಾಲದಿಂದ ಪಡೆದ ಒಂದಷ್ಟು ಚಿತ್ರಗಳನ್ನು, ಕೆಲಸಕ್ಕೆ ಬಾರದ ಮಾಹಿತಿಯನ್ನು ಪ್ರಕಟಿಸಿ ಮಕ್ಕಳ ಪುಸ್ತಕಗಳೆಂದು ಐದು ಪುಟದ ಲೇಖನವನ್ನು ಮಿತಿಮೀರಿದ ದಪ್ಪಕ್ಷರಗಳಲ್ಲಿ, ಪುಟಗಟ್ಟಲೆ ಚಿತ್ರಗಳನ್ನು ಹಾಕಿ ನೂರು ಪುಟಗಳನ್ನು ಮಾಡಿ ಸಲ್ಲಿಸುವ ಹಲವಾರು ಮೈಸೂರಿನ ಪ್ರಕಾಶಕರಿದ್ದಾರೆ. ಗ್ರಂಥಾಲಯಗಳು ಪುಸ್ತಕಗಳ ಮರುಬಳಕೆಯನ್ನು ಪ್ರೋತ್ಸಾಹಿಸುತ್ತವೆ, ಆದರೆ ವಾಣಿಜ್ಯೋದ್ಯಮ ಕಾಗದ ಪೋಲು ಮಾಡುವುದನ್ನು ತನ್ಮೂಲಕ ಲಾಭ ಮಾಡಿಕೊಳ್ಳುವುದನ್ನು ಬಯಸುತ್ತದೆ. ನಾವು ಪುಸ್ತಕ ಕೊಂಡಾಗ ಬರೇ ಪುಸ್ತಕ ಕೊಳ್ಳುವುದಿಲ್ಲ, ಆ ಪುಸ್ತಕದ ಕಾಗದಕ್ಕಾಗಿ ಕತ್ತರಿಸಿದ ಮರವನ್ನೂ ಕೊಳ್ಳುತ್ತೇವೆನ್ನುತ್ತಾರೆ ಪರಿಸರವಾದಿಗಳು.

ಇ-ಬುಕ್ ರೀಡರ್‍ಗಳು ಧಾರಕಗಳಷ್ಟೆ, ಅವೇ ಅಂತಸ್ಸತ್ವವಲ್ಲ. ಆದರೆ ಎಲೆಕ್ಟ್ರಾನಿಕ್ ಪಠ್ಯಗಳು ಸಾಧನ ಅವಲಂಬಿಗಳು ಅಂದರೆ ಇ-ಬುಕ್ ರೀಡರ್ ಅಥವಾ ಅಂತಹುದೇ ಸಾಧನ ಇಲ್ಲದಿದ್ದಲ್ಲಿ ಅವುಗಳನ್ನು ಓದಲು ಸಾಧ್ಯವಿಲ್ಲ, ಅಲ್ಲದೆ ಅವುಗಳಿಗೆ ಹೊಂದಿಕೊಳ್ಳುವ ನಮೂನೆಯಲ್ಲಿಯೇ (ಫಾಮ್ರ್ಯಾಟ್) ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವುಗಳನ್ನು ಓದಲು ವಿದ್ಯುತ್ ಸೌಲಭ್ಯ ಬೇಕೇ ಬೇಕು. ಅವುಗಳನ್ನು ನೀವು ಸಾಕಷ್ಟು ಚಾರ್ಜ್ ಮಾಡಿಕೊಂಡಿರಬೇಕು. ತಂತ್ರಜ್ಞಾನ ಶರವೇಗದಲ್ಲಿ ಸಾಗುತ್ತಿರುವ ಈ ದಿನಗಳಲ್ಲಿ ಇಂದು ಇರುವ ತಂತ್ರಜ್ಞಾನ ನಾಳೆ ಇರುವುದಿಲ್ಲ. ಸಾಫ್ಟ್‍ವೇರ್ ಮತ್ತು ಹಾರ್ಡ್‍ವೇರ್ ಎಲ್ಲವೂ ಬದಲಾಗುತ್ತಿರುತ್ತವೆ. ನಿಮ್ಮ ಎಲೆಕ್ಟ್ರಾನಿಕ್ ಪುಸ್ತಕ ಸಂಗ್ರಹವನ್ನು ಹೊಸ ನಮೂನೆಗೆ ಬದಲಾಯಿಸಿಕೊಳ್ಳದಿದ್ದಲ್ಲಿ ಅವೆಲ್ಲವೂ ಉಪಯೋಗಕ್ಕೆ ಬರುವುದಿಲ್ಲ. ಆಧುನಿಕ  ವಿದ್ಯುನ್ಮಾನ ಶೇಖರಣಾ ವಿಧಾನಗಳು ಅತ್ಯಂತ ಸೀಮಿತ ಶೇಖರಣಾವಧಿಯನ್ನು ಹೊಂದಿವೆ. ವೀಡಿಯೋ ಕ್ಯಾಸೆಟ್‍ನಿಂದ ಸಿ.ಡಿ. ಬಂತು ಡುಂ ಡುಂ ಡುಂ. ಸಿ.ಡಿ.ಯಿಂದ ಡಿ.ವಿ.ಡಿ. ಬಂತು ಡುಂ ಡುಂ ಡುಂ. ಡಿ.ವಿ.ಡಿ.ಯಿಂದ ಬ್ಲೂ ರೇ ಬಂತು ಡುಂ ಡುಂ ಡುಂ. ಬ್ಲೂ ರೇನಿಂದ...

ಮತ್ತೊಂದು ಆತಂಕವಿದೆ. ಸೌರ ವಿಕಿರಣಸ್ಫೋಟ ತೀವ್ರ ಪ್ರಮಾಣದಲ್ಲಿ ಉಂಟಾದಲ್ಲಿ ಎಲ್ಲಾ ವಿದ್ಯುನ್ಮಾನ ಮಾಹಿತಿ ಅಳಿಸಿಹೋಗುತ್ತದೆನ್ನುವ ಹೆದರಿಕೆ ವಿಜ್ಞಾನಿಗಳಿಗಿದೆ. ಆ ರೀತಿ ಆದಲ್ಲಿ ಚಿಂದಿಯಾಗಿದ್ದರೂ ಉಳಿಯುವುದು ಹಾಗೂ ಓದಲು ಸಿಗುವುದು ಮುದ್ರಿತ ಪುಸ್ತಕಗಳೇ! ಆಗ ಯಾವುದೇ ಕಂಪ್ಯೂಟರುಗಳಾಗಲೀ, ಇ-ಬುಕ್ ರೀಡರ್‍ಗಳಾಗಲೀ ಉಳಿದಿರುವುದಿಲ್ಲ. ನಿಮ್ಮ ಡಿಜಿಟಲ್ ಸಂಗ್ರಹಣೆ ಎಲ್ಲಾ ಖಾಲಿ ಖಾಲಿಯಾಗಿರುತ್ತದೆ! ಏನೇ ಆದರೂ ವಿಜ್ಞಾನ ಮತ್ತು ತಂತ್ರಜ್ಞಾನಗಳು ನಿಲ್ಲುವುದಿಲ್ಲ. ನಾವು ಯಾವುದನ್ನು ಸಂಸ್ಕøತಿ ಎಂದು ಕರೆಯುತ್ತೇವೆಯೋ ಅದರ ವ್ಯಾಖ್ಯಾನವೂ ಸಹ ಸಾಪೇಕ್ಷವಾದುದು. ಇಂದಲ್ಲ ನಾಳೆ ಇಲೆಕ್ಟ್ರಾನಿಕ್ ಪುಸ್ತಕಗಳು ಕಾಗದದ ಪುಸ್ತಕಗಳನ್ನು ಇಲ್ಲವಾಗುತ್ತವೆ ಏಕೆಂದರೆ, ಕಾಗದದ ಪುಸ್ತಕ ಮುದ್ರಣ ಮತ್ತು ಮಾರಾಟ ಆರ್ಥಿಕವಾಗಿ ಮತ್ತು ಪರಿಸರದ ದೃಷ್ಟಿಯಿಂದ ಲಾಭದಾಯಕವಾಗುವುದಿಲ್ಲ. ಅಷ್ಟಲ್ಲದೆ ಮುಂದೆ ಅಕ್ಷರ ಮತ್ತಾವ ರೂಪದಲ್ಲಿ ಬರುತ್ತದೋ ಯಾರಿಗೆ ಗೊತ್ತು? ಏನೇ ಆದರೂ ಪುಸ್ತಕಕ್ಕೆ ಅಳಿವಿದ್ದರೂ ಅಕ್ಷರಕ್ಕೆ ಅಳಿವಿರುವುದಿಲ್ಲ.
-ಡಾ.ಜೆ.ಬಾಲಕೃಷ್ಣ

j.balakrishna@gmail.com

ಬುಧವಾರ, ಸೆಪ್ಟೆಂಬರ್ 24, 2014

ಸಂವಾದ ಪತ್ರಿಕೆಯ ಸೆಪ್ಟೆಂಬರ್ 2014ರ ಸಂಚಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 32ನೇ ಕಂತು



 ಏನಾದರೂ ಕೊಡಬೇಕು

ನಸ್ರುದ್ದೀನನಿಗೆ ಬಹಳ ದಿನಗಳಿಂದ ಜ್ವರವಿತ್ತು. ಏನು ಚಿಕಿತ್ಸೆ ಕೊಟ್ಟರೂ ವಾಸಿಯಾಗಲಿಲ್ಲ. ಹಲವಾರು ಪರೀಕ್ಷೆಗಳನ್ನು ಮಾಡಿದ ವೈದ್ಯರು,

`ಮುಲ್ಲಾ, ನನಗೆ ಹೇಳಲು ಬೇಸರವಾಗುತ್ತಿದೆ. ನಿನ್ನ ಕೊನೆಯ ದಿನಗಳು ಹತ್ತಿರವಾಗುತ್ತಿವೆ. ನಿನಗೆ ಎಬೋಲಾ ವೈರಸ್ ಜ್ವರವಿದೆ. ತುಂಬಾ ಸೋಂಕು ರೋಗವದು’ ಎಂದರು.

ಮುಲ್ಲಾ ಪಕ್ಕದಲ್ಲೇ ಇದ್ದ ತನ್ನ ಪತ್ನಿ ಫಾತೀಮಾಳ ಕಡೆಗೆ ನೋಡಿ,

`ನಾನು ಆಸ್ಪತ್ರೆಗೆ ಸೇರಿದಾಗಲಿಂದ ನನಗೆ ಸಾಲ ನೀಡಿದವರೆಲ್ಲಾ ವಸೂಲಿಗೆ ಬರುತ್ತಿದ್ದಾರೆ ಎಂದಿದ್ದೆಯೆಲ್ಲಾ. ಅವರಿಗೆಲ್ಲಾ ಏನಾದರೂ ಕೊಡಬೇಕೆನ್ನಿಸುತ್ತಿದೆ. ಅವರನ್ನೆಲ್ಲಾ ಇಲ್ಲಿಗೆ ಬರಲು ಹೇಳು, ಅವರನ್ನೊಮ್ಮೆ ತಬ್ಬಿಕೊಳ್ಳಬೇಕೆಂದು ಮನಸ್ಸಾಗುತ್ತಿದೆ’ ಎಂದ ನಸ್ರುದ್ದೀನ್.

ನಿಧಾನವಾಗಿ ಚಲಿಸಿ

ನಸ್ರುದ್ದೀನ್ ಬಾಲಕನಾಗಿದ್ದಾಗ ದಿನಾಗಲೂ ಶಾಲೆಗೆ ತಡವಾಗಿ ಬರುತ್ತಿದ್ದ. ಮಾಸ್ತರು ಅವನ ತಂದೆ ತಾಯಿಗಳಿಗೆ ವಿಷಯ ತಿಳಿಸಿದರು. `ಅವನು ದಿನಾಗಲೂ ಸರಿಯಾದ ಸಮಯಕ್ಕೇ ಮನೆ ಬಿಡುತ್ತಾನೆ’ ಎಂದರು ಅವರು. ಆ ದಿನ ತಡವಾಗಿ ಶಾಲೆಗೆ ಬಂದಾಗ ಮಾಸ್ತರು ಶಾಲೆಗೆ ತಡವಾಗಿ ಬರುವುದು ಏಕೆಂದು ಕೇಳಿದರು.

`ನಾನು ಶಾಲೆಯ ಹತ್ತಿರಕ್ಕೆ ಬೇಗನೆ ಬರುತ್ತೇನೆ ಸಾರ್, ಆದರೆ ಶಾಲೆಗೆ ಸ್ವಲ್ಪ ದೂರದಲ್ಲಿ ರಸ್ತೆ ಬದಿ ಬೋರ್ಡ್ ಹಾಕಿದ್ದಾರಲ್ಲ, `ಮುಂದೆ ಶಾಲೆಯಿದೆ ನಿಧಾನವಾಗಿ ಚಲಿಸಿ’ ಎಂದು.... ಅಲ್ಲಿಂದ ಬರುವುದು ತಡವಾಗುತ್ತಿದೆ...’ ಎಂದ ಬಾಲ ನಸ್ರುದ್ದೀನ್.

ಅಪ್ಪನ ಕೆಲಸ

ನಸ್ರುದ್ದೀನ್ ಚಿಕ್ಕ ಬಾಲಕನಾಗಿದ್ದಾಗ ಒಂದು ದಿನ ಅವನ ತಂದೆಯ ಜೊತೆ ಮಾರುಕಟ್ಟೆಗೆ ಹೋಗಿದ್ದಾಗ ಕಳೆದುಹೋಗಿದ್ದ. ಒಬ್ಬಂಟಿಯಾಗಿ ಅಳುತ್ತಾ ಓಡಾಡುತ್ತಿದ್ದ ಅವನನ್ನು ಪೊಲೀಸರು ಕಂಡು ವಿಚಾರಿಸಿದರು.

`ಅಳಬೇಡ ಮರಿ, ನಿನ್ನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತೇವೆ. ನಿನ್ನ ಅಪ್ಪನ ಹೆಸರೇನು?’ ಎಂದು ಪೊಲೀಸರು ಕೇಳಿದರು. ನಸ್ರುದ್ದೀನ್ ಅವನ ತಂದೆಯ ಹೆಸರು ಹೇಳಿದ.

`ಅವರೇನು ಕೆಲಸ ಮಾಡುತ್ತಾರೆ?’ ವಿಚಾರಿಸಿದರು ಪೊಲೀಸರು.

`ಅವರು ನಮ್ಮಮ್ಮ ಹೇಳೋ ಎಲ್ಲಾ ಕೆಲ್ಸ ಮಾಡ್ತಾರೆ’ ಹೇಳಿದ ನಸ್ರುದ್ದೀನ್ ಕಣ್ಣೊರೆಸಿಕೊಳ್ಳುತ್ತಾ.

ಕತ್ತಲಲ್ಲಿ ಸೂರ್ಯ

ಶಾಲೆಯಲ್ಲಿ ನಸ್ರುದ್ದೀನ್ ಪಾಠ ಕೇಳಿಸಿಕೊಳ್ಳದೆ ಏನೋ ಚಿಂತಿಸುತ್ತಿದ್ದ. ಭೌತಶಾಸ್ತ್ರದ ಮಾಸ್ತರು ಸಿಟ್ಟಿನಿಂದ ಅವನನ್ನು ಎಬ್ಬಿಸಿ,

`ಸೂರ್ಯ ರಾತ್ರಿ ಹೊತ್ತು ಏಕೆ ಕಾಣುವುದಿಲ್ಲ ಹೇಳು?’ ಎಂದು ಗದರಿಸಿದರು.

`ರಾತ್ರಿ ಕತ್ತಲಾಗಿರುತ್ತದಲ್ಲ ಸಾರ್, ಅದಕ್ಕೇ ಸೂರ್ಯ ಕಾಣುವುದಿಲ್ಲ’ ಹೇಳಿದ ಬಾಲಕ ನಸ್ರುದ್ದೀನ್.

ಅದ್ಭುತ ಆಹಾರ

ನಸ್ರುದ್ದೀನ್ ಮತ್ತು ಆತನ ಗೆಳೆಯ ಇಬ್ಬರೂ ತಮ್ಮ ತಮ್ಮ ಹೆಂಡತಿಯರ ಅಡುಗೆಯ ಬಗ್ಗೆ ಮಾತನಾಡುತ್ತಿದ್ದರು. ಗೆಳೆಯ ಹೇಳಿದ, `ನಿನ್ನ ಹೆಂಡತಿಯ ಅಡುಗೆ ಹೇಗೇ ಇರಲಿ, ನೀನದನ್ನು ಆಗಾಗ ಹೊಗಳುತ್ತಿರು, ಆಕೆಗೆ ಖಂಡಿತಾ ಸಂತೋಷವಾಗುತ್ತದೆ’. ನಸ್ರುದ್ದೀನನಿಗೂ ಅದು ಸರಿಯೆನ್ನಿಸಿತು, ಒಂದು ದಿನವೂ ತನ್ನ ಹೆಂಡತಿಯ ಅಡುಗೆಯನ್ನ ಹೊಗಳಿಲ್ಲವೆನ್ನಿಸಿ ಈ ದಿನ ಮನೆಗೆ ಹೋದಾಗ ಅದನ್ನೇ ಮಾಡಬೇಕೆಂದು ನಿರ್ಧರಿಸಿದ.

ಮನೆಯಲ್ಲಿ ಊಟಕ್ಕೆ ಕೂತಾಗ ಮುಲ್ಲಾನ ಹೆಂಡತಿ ಫಾತಿಮಾ ಬಿರಿಯಾನಿ ಬಡಿಸಿದಳು. ಒಂದು ತುತ್ತು ಬಾಯಿಗಿರಿಸಿದ ಮುಲ್ಲಾ ಅದರ ರುಚಿಯನ್ನು, ಸುವಾಸನೆಯನ್ನು ಬಾಯಿ ತುಂಬ ಹೊಗಳತೊಡಗಿದ. ಅದನ್ನು ಕೇಳಿಸಿಕೊಂಡ ಮುಲ್ಲಾನ ಹೆಂಡತಿ ಜೋರಾಗಿ ಅಳತೊಡಗಿದಳು. ಮುಲ್ಲಾನಿಗೆ ಗಾಭರಿಯಾಯಿತು. ಹೆಂಡತಿಯ ಅಡುಗೆ ಹೊಗಳಿದರೆ ಅವಳು ಸಂತೋಷಪಡುವುದು ಬಿಟ್ಟು ಅಳುತ್ತಿರುವುದೇಕೆಂದು ಕೇಳಿದ.

`ಇಷ್ಟು ವರ್ಷಗಳಿಂದ ರುಚಿರುಚಿಯಾದ ಅಡುಗೆ ಮಾಡುತ್ತಿದ್ದೇನೆ, ಒಂದು ದಿನವೂ ಹೊಗಳಿಲ್ಲ. ಈ ದಿನ ಪಕ್ಕದ ಮನೆಯ ನರ್ಗೀಸ್ ಬಿರಿಯಾನಿ ಕಳುಹಿಸಿದ್ದಳು. ಅದನ್ನು ತಿಂದ ತಕ್ಷಣ ನಿಮ್ಮ ಮುಖ ಹೇಗೆ ಅರಳಿಬಿಟ್ಟಿತು...’ ಫಾತಿಮಾ ತನ್ನ ಅಳುವನ್ನು ಮುಂದುವರಿಸಿದಳು.

ರೊಟ್ಟಿ ಗಟ್ಟಿಯಾಗಿದೆ

ನಸ್ರುದ್ದೀನ್ ದಂತ ವೈದ್ಯರ ಬಳಿ ಹೋದ. `ಡಾಕ್ಟರೇ, ನನ್ನ ಹಲ್ಲು ಮುರಿದಿದೆ, ದವಡೆ ನೋಯುತ್ತಿದೆ’ ಎಂದ.

`ಹೌದೆ, ಹಲ್ಲು ಹೇಗೆ ಮುರಿಯಿತು?’ ವೈದ್ಯರು ಕೇಳಿದರು.

`ನನ್ನ ಪತ್ನಿ ಮಾಡಿದ್ದ ರೊಟ್ಟಿ ತುಂಬಾ ಗಟ್ಟಿಯಾಗಿತ್ತು...’ ಕೇಳಿದ ಮುಲ್ಲಾ.

`ಹಾಗಿದ್ದಾಗ, ನೀನು ರೊಟ್ಟಿ ತಿನ್ನಲು ನಿರಾಕರಿಸಬೇಕಾಗಿತ್ತು’ ಎಂದರು ವೈದ್ಯರು.

`ಅಯ್ಯೋ, ರೊಟ್ಟಿ ತಿಂದದ್ದಕ್ಕೆ ಹಲ್ಲು ಮುರಿದದ್ದಲ್ಲ ಡಾಕ್ಟರೆ, ರೊಟ್ಟಿ ತಿನ್ನಲು ನಿರಾಕರಿಸಿದ್ದಕ್ಕೇ.....ಮುರಿದದ್ದು’ ಎಂದ ನಸ್ರುದ್ದೀನ್ ತನ್ನ ಉಬ್ಬಿದ ದವಡೆ ನೀವಿಕೊಳ್ಳುತ್ತಾ.

ಉಡುಗೊರೆ

ನಸ್ರುದ್ದೀನನ ಪತ್ನಿ ಫಾತಿಮಾಳ ಹುಟ್ಟಿದ ಹಬ್ಬ ಹತ್ತಿರಕ್ಕೆ ಬರುತ್ತಿತ್ತು. ನಸ್ರುದ್ದೀನ್ ತನ್ನ ಪತ್ನಿಯನ್ನು ತಬ್ಬಿಕೊಂಡು ಅವಳ ಹುಟ್ಟಿದ ಹಬ್ಬಕ್ಕೆ ಅವಳಿಗೇನು ಉಡುಗೊರೆ ಬೇಕೆಂದು ಕೇಳಿದ.

`ನನಗ್ಯಾವ ಉಡುಗೊರೆಯೂ ಬೇಡ. ನೀನು ಇದೇ ರೀತಿ ನನ್ನನ್ನು ಪ್ರೀತಿಸುತ್ತಿರು, ನನ್ನನ್ನು ಗೌರವಿಸು ಹಾಗೂ ಸದಾ ನನ್ನ ಮಾತನ್ನು ಕೇಳುತ್ತಿರು, ಅಷ್ಟೇ ಸಾಕು, ಇನ್ಯಾವ ಉಡುಗೊರೆಯೂ ಬೇಡ’ ಎಂದಳು ಫಾತಿಮಾ ಗಂಡನನ್ನು ತಾನೂ ತಬ್ಬಿಕೊಳ್ಳುತ್ತಾ.

`ಹೇ, ಬೇಡ, ಉಡುಗೊರೆಯೇ ಕೊಡುತ್ತೇನೆ, ಏನು ಬೇಕೋ ಹೇಳು’ ಎಂದ ನಸ್ರುದ್ದೀನ್ ತನ್ನ ಪತ್ನಿಯ ಅಪ್ಪುಗೆ ಬಿಡಿಸಿಕೊಳ್ಳುತ್ತಾ.

ತಮಾಷೆಯ ಹಕ್ಕಿಲ್ಲವೆ?

ನಸ್ರುದ್ದೀನ್ ತೀರ ಬಡವನಾಗಿದ್ದ. ಅವನಿಗೆ ಹಣದ ವಿಪರೀತ ಕೊರತೆಯಿತ್ತು. ಒಂದು ದಿನ ಬೇಸತ್ತ ಅವನು, `ಅಯ್ಯೋ ದೇವರೇ ನನಗೇಕೆ ಈ ಕಷ್ಟ! ಈ ಯಾತನೆ! ನನಗೆ ಸಾವಾದರೂ ಬರಬಾರದೆ?’ ಎಂದ.

ತಕ್ಷಣವೇ ಅಲ್ಲಿಗೆ ಸಾವಿನ ದೂತ ಬಂದು, `ಏನು ನನ್ನನ್ನು ಕರೆದೆಯಾ?’ ಎಂದು ಕೇಳಿದ.

`ಅಯ್ಯೋ ದೇವರೇ! ಈ ಬಡವನಿಗೆ ತಮಾಷೆ ಮಾಡುವ ಹಕ್ಕೂ ಇಲ್ಲವೆ?’ ಹೇಳಿದ ಆಕಾಶದೆಡೆಗೆ ನೋಡುತ್ತಾ ನಸ್ರುದ್ದೀನ್. 



ಅರ್ಧ ಚಾರ್ಜ್

ಆ ದಿನ ಮುಲ್ಲಾ ನಸ್ರುದ್ದೀನ್ ತನ್ನ ಹಳ್ಳಿಯಿಂದ ನಗರಕ್ಕೆ ಕೆಲಸದ ಮೇಲೆ ಬಂದಿದ್ದ. ಮೆಜೆಸ್ಟಿಕ್‍ನಿಂದ ವಿಧಾನಸೌಧಕ್ಕೆ ಆಟೋದಲ್ಲಿ ಬಂದಿಳಿದ. `ನೂರು ರೂಪಾಯಿ ಕೊಡಿ’ ಎಂದ ಆಟೋ ಚಾಲಕ.

ಮುಲ್ಲಾ ಐವತ್ತು ರೂಪಾಯಿ ಕೊಟ್ಟ.

`ಉಳಿದ ಐವತ್ತು ಕೊಡಿ’ ಎಂದ ಆಟೋ ಚಾಲಕ.

`ಎಲ್ಲಾ ನಾನೇಕೆ ಕೊಡಬೇಕು. ನೀನು ಸಹ ಆಟೋದಲ್ಲಿ ನನ್ನ ಜೊತೆಯಲ್ಲೇ ಬಂದಿದ್ದೀಯಲ್ಲಾ, ಉಳಿದರ್ಧ ನಿನ್ನ ಪಾಲು’ ಎಂದ ನಸ್ರುದ್ದೀನ್ ಆಟೋ ಚಾಲಕನಿಗೆ.


ಸಾಲ

ನಸ್ರುದ್ದೀನನ ಗೆಳೆಯನೊಬ್ಬ ಒಂದು ದಿನ ಎದುರಾಗಿ,

`ಮುಲ್ಲಾ ನನಗೆ ತುರ್ತಾಗಿ ಹಣ ಬೇಕಿತ್ತು. ನೂರು ರೂ ಸಾಲ ಕೊಡು’ ಎಂದ.

`ಕ್ಷಮಿಸು, ನಾನು ನಿನಗೆ ಐವತ್ತು ರೂಪಾಯಿ ಮಾತ್ರ ಕೊಡುತ್ತೇನೆ’ ಎಂದ ಮುಲ್ಲಾ.

`ಅದೇಕೆ ಕೇವಲ ಐವತ್ತು? ಪೂರ್ತಿ ನೂರು ಏಕೆ ಕೊಡುವುದಿಲ್ಲ?’ ಕೇಳಿದ ಆ ಗೆಳೆಯ.

`ಏಕೆಂದರೆ, ನಾನು ಐವತ್ತು ಕಳೆದುಕೊಳ್ಳುತ್ತಿದ್ದೇನೆ, ನೀನೂ ಐವತ್ತು ಕಳೆದುಕೊ’ ಹೇಳಿದ ನಸ್ರುದ್ದೀನ್.

ಸಾಲ ತೀರುವಳಿ

ನಸ್ರುದ್ದೀನ್ ಮತ್ತು ಆತನ ಗೆಳೆಯ ಅಬ್ದುಲ್ಲಾ ಇಬ್ಬರೂ ಒಂದು ದಿನ ಬೆಂಗಳೂರಿಗೆ ಬಂದಿದ್ದರು. ರಾತ್ರಿ ಬಾರ್ ಒಂದರಲ್ಲಿ ಕೂತು ತಮ್ಮ ಊರಿಗೆ ಹೊರಡುವುದು ತಡವಾಯಿತು. ಎದ್ದು ನಿಧಾನವಾಗಿ ತಡವರಿಸುತ್ತಾ ಕತ್ತಲ ಓಣಿಗಳಲ್ಲಿ ಮೆಜೆಸ್ಟಿಕ್ ಕಡೆಗೆ ನಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಕತ್ತಲ ಮರೆಯಿಂದ ಕಳ್ಳನೊಬ್ಬ ಎದುರು ಬಂದು ಚೂಪಾದ ಚಾಕು ಎದೆಗೆ ಹಿಡಿದು,

`ಕಿಸೆಯಲ್ಲಿರುವ ಹಣವೆಲ್ಲಾ ಕೊಡಿ, ಇಲ್ಲದಿದ್ದಲ್ಲಿ ನಿಮ್ಮ ಪ್ರಾಣ ತೆಗೆಯುತ್ತೇನೆ’ ಎಂದು ಘರ್ಜಿಸಿದ.

ನಸ್ರುದ್ದೀನನ ಕಿಸೆಯಲ್ಲಿ ಸಾವಿರ ರೂಪಾಯಿ ಇತ್ತು. ತಕ್ಷಣ ಅವನಿಗೆ ತಾನು ಅಬ್ದುಲ್ಲಾನಿಂದ ಬಹಳ ದಿನಗಳ ಹಿಂದೆ ತೆಗೆದುಕೊಂಡಿದ್ದ ಸಾವಿರ ರೂಪಾಯಿ ಸಾಲದ ನೆನಪಾಯಿತು. ಕೂಡಲೇ ತನ್ನ ಕಿಸೆಯಿಂದ ಸಾವಿರ ರೂಪಾಯಿ ತೆಗೆದು ಅಬ್ದುಲ್ಲಾನ ಕಿಸೆಗೆ ತುರುಕಿ,

`ತಗೊಳಪ್ಪ ನಿನ್ನ ಸಾಲ ಹಿಂದಿರುಗಿಸಿದ್ದೇನೆ. ಪದೇ ಪದೇ ಸಾಲ ಹಿಂದಿರುಗಿಸು ಎಂದು ಪೀಡಿಸಬೇಡ’ ಎಂದ.

ಕುದುರೆಯ ಬಾಲದ ಹಿಂದೆ
ನಸ್ರುದ್ದೀನನ ಪತ್ನಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ನ್ಯಾಯಾಲಯದಲ್ಲಿ ನ್ಯಾಯಾಧೀಶರು ಕೇಳಿದರು,

`ಏನಮ್ಮಾ, ನಿನಗೇಕೆ ವಿಚ್ಛೇದನ ಬೇಕು. ನಿನ್ನ ಗಂಡ ನಿನಗೆ ಹಿಂಸೆ ಕೊಡುತ್ತಿದ್ದಾನೆಯೆ?’

`ನನ್ನ ಗಂಡನೊಂದಿಗೆ ಬದುಕುವುದು ಸಾಧ್ಯವಿಲ್ಲ ಸ್ವಾಮಿ. ಅವನಿಗೆ ಕುದುರೆ ಜೂಜಿನ ಹುಚ್ಚು. ಹಗಲು ರಾತ್ರಿ ಅವನಿಗೆ ಅದೇ ಚಿಂತೆ. ಅವನಿಗೆ ಎಲ್ಲಾ ಕುದುರೆಗಳ ಹೆಸರು ಗೊತ್ತು ಆದರೆ, ಅವನಿಗೆ ನಮ್ಮ ಮದುವೆಯಾದ ದಿನವಾಗಲಿ ನಮ್ಮ ಮಕ್ಕಳು ಹುಟ್ಟಿದ ದಿನವಾಗಲಿ ಒಂದೂ ತಿಳಿದಿಲ್ಲ... ಅಂಥವನೊಂದಿಗೆ ಬದುಕುವುದಾದರೂ ಹೇಗೆ?’ ಎಂದಳು ಫಾತಿಮಾ.

`ಆಕೆ ಹೇಳುವುದು ಸುಳ್ಳು, `ನನಗೆಲ್ಲಾ ನೆನಪಿದೆ. ನಮ್ಮ ಮದುವೆಯಾದದ್ದು ಮೈಸೂರು ಡರ್ಬಿ ರೇಸಿನ ದಿನ. ನನ್ನ ಮಗ ಹುಟ್ಟಿದ್ದು ಪ್ರಿನ್ಸ್ ಕುದುರೆ ಗೆದ್ದ ದಿನ...’ ಎಂದ ನಸ್ರುದ್ದೀನ್.

ಸಾಕ್ಷಿ

ಬಂದೂಕದಲ್ಲಿ ಯಾರೋ ಗುಂಡು ಹಾರಿಸಿರುವುದರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಸಾಕ್ಷಿಯಾಗಿ ನಸ್ರುದ್ದೀನನನ್ನು ಕರೆಸಿದ್ದರು.

`ನಸ್ರುದ್ದೀನ್, ಆ ವ್ಯಕ್ತಿ ನೀನು ಗುಂಡು ಹಾರಿಸಿದ್ದನ್ನು ನೋಡಿದೆಯಾ?’ ನ್ಯಾಯಾಧೀಶರು ಕೇಳಿದರು.

`ಇಲ್ಲ ಸ್ವಾಮಿ, ನಾನು ಗುಂಡು ಹಾರಿಸಿದ ಶಬ್ದ ಕೇಳಿಸಿಕೊಂಡೆ’ ಎಂದ ನಸ್ರುದ್ದೀನ್.

`ನೀನು ಕಣ್ಣಾರೆ ನೋಡಿಲ್ಲ, ಬರೇ ಕೇಳಿಸಿಕೊಂಡಿದ್ದೀಯ. ನಿನ್ನ ಸಾಕ್ಷ್ಯಕ್ಕೆ ಯಾವುದೇ ಬೆಲೆ ಇಲ್ಲ ಹೋಗು’ ಎಂದರು ನ್ಯಾಯಾಧೀಶರು.

ನಸ್ರುದ್ದೀನ್ ಹಿಂದಕ್ಕೆ ತಿರುಗಿ ಕಟಕಟೆಯಿಂದ ಇಳಿದುಹೋಗುವಾಗ ಜೋರಾಗಿ ಗಹಗಹಿಸಿ ನಕ್ಕ. ಅದನ್ನು ಕೇಳಿಸಿಕೊಂಡ ನ್ಯಾಯಾಧೀಶರಿಗೆ ಅವನು ತನ್ನನ್ನೇ ಅವಮಾನಿಸುತ್ತಿರುವಂತೆ ಭಾವಿಸಿ ಅವನನ್ನು ಪುನಃ ಕಟಕಟೆಗೆ ಕರೆಸಿ,

`ನೀನು ಜೋರಾಗಿ ನಕ್ಕಿದ್ದು ಏಕೆ?’ ಎಂದು ಗದರಿಸಿ ಕೇಳಿದರು.

`ನಾನು ನಗಲಿಲ್ಲವಲ್ಲಾ? ನಾನು ನಕ್ಕಿದ್ದನ್ನು ನೀವು ನೋಡಿದಿರಾ?’ ಕೇಳಿದ ನಸ್ರುದ್ದೀನ್.

`ಇಲ್ಲಾ ನಾನು ಕೇಳಿಸಿಕೊಂಡೆ’, ಹೇಳಿದರು ನ್ಯಾಯಾಧೀಶರು.

`ಹಾಗಾದರೆ ನಿಮ್ಮ ಮಾತಿಗೆ ಬೆಲೆ ಇಲ್ಲ ಬಿಡಿ’ ಕಟಕಟೆಯಿಂದ ವಾಪಸ್ಸು ಹೋಗುತ್ತಾ ಹೇಳಿದ ನಸ್ರುದ್ದೀನ್.

ಫಿಫ್ಟಿ - ಫಿಫ್ಟಿ


`ನಾನು ಮತ್ತು ಅಬ್ದುಲ್ಲಾ ಜೊತೆಯಾಗಿ ಬಿಸಿನೆಸ್ ಶುರುಮಾಡಿದ್ದೇವೆ’ ಎಂದು ನಸ್ರುದ್ದೀನ್ ತನ್ನ ಮತ್ತೊಬ್ಬ ಗೆಳೆಯನ ಬಳಿ ಹೇಳಿದ.

`ಹೌದೆ? ಬಂಡವಾಳ ಎಷ್ಟು ಹಾಕಿದ್ದೀಯ?’ ಕೇಳಿದ ಗೆಳೆಯ.

`ನನ್ನದೇನಿಲ್ಲ, ಬಂಡವಾಳವೆಲ್ಲಾ ಅಬ್ದುಲ್ಲಾನದು. ನನ್ನದು ಅನುಭವ ಮಾತ್ರ’ ಎಂದ ನಸ್ರುದ್ದೀನ್.

`ಹಾಗಾದರೆ ಫಿಫ್ಟಿ- ಫಿಫ್ಟಿ ಲೆಕ್ಕಾಚಾರವೆನ್ನು’ ಹೇಳಿದ ಗೆಳೆಯ.

`ಒಂದು ರೀತಿ ಅದೇ ಲೆಕ್ಕಾಚಾರದಲ್ಲೇ ಬಿಸಿನೆಸ್ ಪ್ರಾರಂಭಿಸುತ್ತಿದ್ದೇವೆ. ಕೆಲವರ್ಷಗಳ ನಂತರ ಬಂಡವಾಳ ನನ್ನದಾಗಿರುತ್ತದೆ, ಅನುಭವ ಅಬ್ದುಲ್ಲಾನದಾಗಿರುತ್ತದೆ’ ಹೇಳಿದ ನಸ್ರುದ್ದೀನ್.

ಐವತ್ತರಲ್ಲಿ ಐದು

`ಏನು ಮುಲ್ಲಾ, ಹೊಸ ಬಟ್ಟೆ ಧರಿಸಿದ್ದೀಯ? ಯಾವುದಾದರೂ ಪಾರ್ಟಿಗೆ ಹೋಗುತ್ತಿದ್ದೀಯ?’ ಕೇಳಿದ ಗೆಳೆಯ.

`ಹೌದು, ನನ್ನ ಮದುವೆಯ ಐದು ವರ್ಷಗಳ ಸಂತೋಷದ ಆಚರಣೆಗೆ ನನ್ನ ಹೆಂಡತಿಯೊಂದಿಗೆ ಹೋಟೆಲಿಗೆ ಭೋಜನಕ್ಕೆ ಹೋಗುತ್ತಿದ್ದೇನೆ’ ಹೇಳಿದ ನಸ್ರುದ್ದೀನ್.

`ಆದರೆ ನಿನ್ನ ಮದುವೆಯಾಗಿ ಐವತ್ತು ವರ್ಷಗಳಾಯಿತಲ್ಲವೆ?’

`ಹೌದು, ನಾನು ಹೇಳುತ್ತಿರುವುದು ಸಂತೋಷದ ವರ್ಷಗಳ ಲೆಕ್ಕ ಮಾತ್ರ’ ಹೇಳಿದ ನಸ್ರುದ್ದೀನ್.

j.balakrishna@gmail.com

ಸಂವಾದ ಪತ್ರಿಕೆಯ ಆಗಸ್ಟ್ 2014ರ ಸಂಚಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 31ನೇ ಕಂತು

ಸಂವಾದ ಪತ್ರಿಕೆಯ ಆಗಸ್ಟ್ 2014ರ ಸಂಚಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 31ನೇ ಕಂತು


ದಿವ್ಯೌಷಧ

ಒಬ್ಬ ಫಕೀರ ಒಂದು ದಿವ್ಯೌಷಧ ಕಂಡುಹಿಡಿದಿದ್ದ. ಅದನ್ನು ಸಂತೆಯಲ್ಲಿ ಮಾರಾಟಕ್ಕಿಟ್ಟಿದ್ದ. ಫಕೀರ ಕಣ್ಣುಮುಚ್ಚಿ ಧ್ಯಾನಭಂಗಿಯಲ್ಲಿದ್ದ. ಅವನ ಸಹಾಯಕನಾದ ನಸ್ರುದ್ದೀನ್ ಜೋರಾಗಿ ಕೂಗಿ ಪ್ರಚಾರ ಮಾಡುತ್ತಿದ್ದ.

`ನೋಡಿ, ನಮ್ಮ ಬಾಬಾ ಕಂಡುಹಿಡಿದಿರುವ ದಿವ್ಯೌಷಧ! ಇದನ್ನು ಒಂದು ತಿಂಗಳು ಸೇವಿಸಿದರೆ ನಿಮ್ಮ ಆಯಸ್ಸು ಮುನ್ನೂರು ವರ್ಷ ಹೆಚ್ಚುತ್ತದೆ! ಬೇಕಿದ್ದಲ್ಲಿ ನೋಡಿ, ನಮ್ಮ ಬಾಬಾ ಅದನ್ನು ದಿನಾಲೂ ಸೇವಿಸುತ್ತಾರೆ, ಈಗ ಅವರ ವಯಸ್ಸು ಕೇವಲ ಮುನ್ನೂರೈವತ್ತು ವರ್ಷಗಳಷ್ಟೇ!!’

ನೆರೆದಿದ್ದ ಜನರಲ್ಲಿ ಒಬ್ಬಾತ ಕುತೂಹಲದಿಂದ, `ಹೌದೆ? ಆ ಬಾಬಾನ ವಯಸ್ಸು ನಿಜವಾಗಿಯೂ ಮುನ್ನೂರೈವತ್ತು ವರ್ಷಗಳೇ?’ ಎಂದು ಕೇಳಿದ.

`ಇದ್ದರೂ ಇರಬಹುದು, ನನಗೆ ಸರಿಯಾಗಿ ತಿಳಿದಿಲ್ಲ. ನಾನು ಆತನ ಬಳಿ ಕೇವಲ ನೂರೈವತ್ತು ವರ್ಷಗಳಿಂದ ಕೆಲಸಕ್ಕಿದ್ದೇನೆ ಅಷ್ಟೆ’ ಹೇಳಿದ ನಸ್ರುದ್ದೀನ್.


ಜಗದ ಸತ್ಯ

ಆ ಊರಿಗೆ ಒಬ್ಬ ಹೊಸ ಮೌಲ್ವಿ ಬಂದಿದ್ದ. ಆತ ಮಹಾನ್ ಮಾತುಗಾರ. ನಿರಂತರವಾಗಿ ದಿನಗಟ್ಟಲೆ ಮಾತನಾಡುವಂಥವನು. ಆತನ ಬೋಧನೆ ಕೇಳಿದ ನಸ್ರುದ್ದೀನ್, `ಆತನ ಮಾತುಗಳನ್ನು ಕೇಳುತ್ತಿದ್ದರೆ, ಆತನ ಮಾತಿನಲ್ಲಿ ಸತ್ಯವಿರುವಂತೆಯೇ ಇಲ್ಲ’ ಎಂದ ತನ್ನ ಗೆಳೆಯನ ಬಳಿ.

`ಏಕೆ?’ ಕೇಳಿದ ಆತನ ಗೆಳೆಯ.

`ಏಕೆಂದರೆ ಆತ ದಿನಗಟ್ಟಲೆ ಮಾತನಾಡುತ್ತಾನೆ. ಜಗದಲ್ಲಿ ಅಷ್ಟೊಂದು ಸತ್ಯ ಎಲ್ಲಿ ಉಳಿದಿದೆ?’ ಹೇಳಿದ ನಸ್ರುದ್ದೀನ್.

ಸಮಸ್ಯೆ ವರ್ಗಾವಣೆ

ತನಗೆ ತೀವ್ರ ಆತಂಕ ಕಾಡತೊಡಗಿದ್ದರಿಂದ ಮುಲ್ಲಾ ನಸ್ರುದ್ದೀನ್ ಮನೋವೈದ್ಯರನ್ನು ಭೇಟಿಯಾದ. ಆತನನ್ನು ಪರೀಕ್ಷಿಸಿದ ವೈದ್ಯರು `ನಿನ್ನಲ್ಲಿ ಅಂಥ ದೊಡ್ಡ ಸಮಸ್ಯೆ ಏನಿಲ್ಲ. ನೀನು ಚಿಂತೆ, ಆಲೋಚನೆ ಅಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಬೇಡ. ಎಲ್ಲವೂ ಸರಿಯಾಗುತ್ತದೆ. ಕೆಲದಿನಗಳ ಹಿಂದೆ ಇದೇ ರೀತಿಯ ಆತಂಕ ಹೊಂದಿದ್ದ ಒಬ್ಬಾತ ಬಂದಿದ್ದ. ಆತ ಯಾರಿಗೋ ಐವತ್ತು ಸಾವಿರ ಸಾಲ ತೀರಿಸಬೇಕಿತ್ತಂತೆ. ತುಂಬಾ ಆತಂಕಕ್ಕೊಳಗಾಗಿದ್ದ. ನಾನು ಆತನಿಗೆ ಅದನ್ನು ಮರೆತು ಆರಾಮವಾಗಿರುವಂತೆ ತಿಳಿಸಿದೆ. ಮುಂದೆ ಎಂದಾದರೂ ಸಮಯಬಂದಾಗ ಸಾಲ ತೀರಿಸಬಹುದು ಎಂದು ಹೇಳಿದೆ’ ಎಂದರು ವೈದ್ಯರು.

`ಅವನ ಆತಂಕದ ಕಾಯಿಲೆ ವಾಸಿಯಾಯಿತೆ?’ ಕೇಳಿದ ನಸ್ರುದ್ದೀನ್.

`ಹೌದು, ಈಗ ಅವನು ಆರೋಗ್ಯವಾಗಿದ್ದಾನೆ’ ಹೇಳಿದರು ವೈದ್ಯರು.

`ಆದರೆ, ಈಗ ಆ ಕಾಯಿಲೆ ನನಗೆ ಬಂದಿದೆ. ಅವನು ಐವತ್ತು ಸಾವಿರ ಸಾಲ ಹಿಂದಿರುಗಿಸಬೇಕಾಗಿದ್ದುದು ನನಗೆ’ ಹೇಳಿದ ನಸ್ರುದ್ದೀನ್ ತನ್ನ ತಲೆಯ ಮೇಲೆ ಕೈ ಹೊತ್ತು.

ಸಾಮ್ಯ

ಒಂದು ದಿನ ಮುಲ್ಲಾ ನಸ್ರುದ್ದೀನ್ ಗಡಂಗಿನಲ್ಲಿ ಕೂತಿದ್ದಾಗ ಬಹಳ ದಿನಗಳ ನಂತರ ಆತನ ಗೆಳೆಯನೊಬ್ಬ ಅಲ್ಲಿಗೆ ಬಂದ. ಆತನನ್ನು ನೋಡಿದ ಮುಲ್ಲಾ, `ನಿನ್ನನ್ನು ನೋಡಿದಾಗಲೆಲ್ಲಾ ನನಗೆ ಅಬ್ದುಲ್ಲಾನ ನೆನಪಾಗುತ್ತದೆ’ ಎಂದ.

`ವಿಚಿತ್ರ! ನನಗೂ ಅವನಿಗೂ ಯಾವ ರೀತಿಯ ಸಾಮ್ಯವೂ ಇಲ್ಲ. ಅದ್ಹೇಗೆ ನನ್ನನ್ನು ಕಂಡರೆ ಅಬ್ದುಲ್ಲಾನ ನೆನಪಾಗುತ್ತದೆ?’ ಕೇಳಿದ ಗೆಳೆಯ.

`ಖಂಡಿತಾ ಸಾಮ್ಯವಿದೆ. ನೀವಿಬ್ಬರೂ ನನಗೆ ನೂರು ನೂರು ರೂಪಾಯಿ ಸಾಲ ಹಿಂದಿರುಗಿಸಬೇಕು’ ಹೇಳಿದ ನಸ್ರುದ್ದೀನ್.

ಹುಡುಗಿಯ ಮುತ್ತು

ಆ ಊರಿಗೆ ಸರ್ಕಸ್ ಬಂದಿತ್ತು. ಸರ್ಕಸ್ಸಿಗೆ ಜನರನ್ನು ಆಕರ್ಷಿಸಲು ಒಂದು ಆಟ ಹೂಡಿದ್ದರು. ಆ ಆಟದಲ್ಲಿ ಗೆದ್ದವರಿಗೆ ಸರ್ಕಸ್ಸಿನ ಒಬ್ಬಳು ಸುಂದರ ಹುಡುಗಿ ಮುತ್ತು ಕೊಡುತ್ತಿದ್ದಳು. ಮುಲ್ಲಾ ಅಲ್ಲಿಗೆ ಬಂದಾಗ ಅವನ ಗೆಳೆಯನೊಬ್ಬ ಅಲ್ಲಿ ತುಂಬಾ ಸಂತೋಷದಿಂದಿದ್ದ.

`ನೋಡು ಮುಲ್ಲಾ, ಆ ಆಟದಲ್ಲಿ ನಾನು ಗೆದ್ದೆ. ಅದಕ್ಕಾಗಿ ಆ ಹುಡುಗಿ ಕೊಟ್ಟ ಮುತ್ತು ನನ್ನ ಹೆಂಡತಿ ಕೊಡುವ ಮುತ್ತಿಗಿಂತ ಅದ್ಭುತವಾಗಿತ್ತು’ ಎಂದ ಆ ಗೆಳೆಯ.

`ಹೌದೆ, ನೋಡೋಣ. ನಾನೂ ಪ್ರಯತ್ನಿಸುತ್ತೇನೆ’ ಎಂದ ಮುಲ್ಲಾ ತಾನೂ ಆ ಆಟವಾಡಿದ ಹಾಗೂ ಅದರಲ್ಲಿ ಗೆದ್ದ. ಆ ಹುಡುಗಿ ಮುಲ್ಲಾನಿಗೂ ಮುತ್ತು ಕೊಟ್ಟಳು.

`ಹೇಗಿತ್ತು?’ ಕೇಳಿದ ಮುಲ್ಲಾನ ಗೆಳೆಯ.

`ಹೇ, ಇಲ್ಲಾ ಬಿಡು. ಇದಕ್ಕಿಂತ ನಿನ್ನ ಹೆಂಡತಿಯ ಮುತ್ತೇ ಚೆನ್ನಾಗಿರುತ್ತದೆ’ ಎಂದ ಮುಲ್ಲಾ.



ದಡ್ಡ

ಮುಲ್ಲಾ ನಸ್ರುದ್ದೀನ್ ಮತ್ತು ಆತನ ಗೆಳೆಯ ಒಂದು ದೊಡ್ಡ ಸರೋವರದಲ್ಲಿ ಮೀನು ಹಿಡಿಯಲು ಹೊರಟಿದ್ದರು. ಬಹಳ ಹೊತ್ತು ಪ್ರಯತ್ನಿಸಿದರೂ ಅವರಿಗೆ ಎಲ್ಲಿಯೂ ಮೀನು ಸಿಗಲಿಲ್ಲ. ಕೊನೆಗೆ ಯಾವುದೋ ಒಂದು ಸ್ಥಳದಲ್ಲಿ ಬಹಳಷ್ಟು ಮೀನು ಸಿಕ್ಕಿತು.

`ಈ ಜಾಗವನ್ನು ಗುರುತು ಮಾಡು ಮುಲ್ಲಾ. ನಾಳೆ ಮೀನು ಹಿಡಿಯಲು ನೇರ ಇಲ್ಲಿಗೇ ಬರೋಣ’ ಎಂದ ಮುಲ್ಲಾ ನಸ್ರುದ್ದೀನನ ಗೆಳೆಯ.

ಮೀನು ಹಿಡಿದು ದೋಣಿಯನ್ನು ನಿಲ್ಲಿಸಿ ಹೊರಡುವಾಗ ಮುಲ್ಲಾನ ಗೆಳೆಯ ಪುನಃ ನೆನಪು ಮಾಡಿಕೊಂಡು, `ಮುಲ್ಲಾ ನಾನು ಹೇಳಿದಂತೆ ಆ ಜಾಗದ ಗುರುತು ಮಾಡಿದೆಯಾ?’ ಎಂದು ಕೇಳಿದ.

`ಹೌದು, ಮಾಡಿದ್ದೇನೆ. ದೋಣಿಯ ಹಿಂಭಾಗದಲ್ಲಿ ಇದ್ದಿಲಿನಲ್ಲಿ ಗುರುತು ಹಾಕಿದ್ದೇನೆ’ ಎಂದ ಮುಲ್ಲಾ.

`ಅಯ್ಯೋ, ಎಂಥ ದಡ್ಡ ನೀನು. ನಾಳೆ ನಮಗೆ ಅದೇ ದೋಣಿ ಸಿಗುತ್ತದೆ ಎನ್ನುವ ಗ್ಯಾರಂಟಿ ಏನು?’ ಕೇಳಿದ ಮುಲ್ಲಾನ ಗೆಳೆಯ.

ಸಮಸ್ಯೆಯಲ್ಲ

ಮುಲ್ಲಾ ತನ್ನ ಕತ್ತೆಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ. ಮೊಣಕೈ ಚರ್ಮ ತರಿದುಹೋಗಿ ರಕ್ತಸಿಕ್ತ ಗಾಯವಾಯಿತು. ಚಿಕಿತ್ಸೆಗೆ ವೈದ್ಯರ ಬಳಿ ಹೋದ. ಗಾಯಕ್ಕೆ ಔಷಧಿ ಹಚ್ಚಿ ಕಟ್ಟು ಕಟ್ಟುವಾಗ ವೈದ್ಯರು, `ಸ್ವಲ್ಪ ತರಚಿದೆ, ಒಂದಷ್ಟು ರಕ್ತ ಹೋಗಿದೆ ಹಾಗೂ ಎಲುಬು ಊದಿಕೊಂಡಿದೆ. ಅದೇನೂ ದೊಡ್ಡ ಸಮಸ್ಯೆಯೆಂದು ನನಗನ್ನಿಸುವುದಿಲ್ಲ’ ಎಂದರು.

`ಹೌದು, ನಿಮಗೂ ಅದೇ ರೀತಿ ನಿಮಗೂ ಸ್ವಲ್ಪ ತರಚಿ, ಒಂದಷ್ಟು ರಕ್ತ ಹೋಗಿ ಎಲುಬು ಊದಿಕೊಂಡಿದ್ದಲ್ಲಿ ನನಗೂ ಅದೇನೂ ದೊಡ್ಡ ಸಮಸ್ಯೆಯೆಂದು ನನಗನ್ನಿಸುತ್ತಿರಲಿಲ್ಲ’ ಎಂದ ಮುಲ್ಲಾ.

ನನಗೇನು ಹುಚ್ಚೇ!

ಮುಲ್ಲಾನನ್ನು ಚಿಕಿತ್ಸೆಗೆಂದು ಹುಚ್ಚಾಸ್ಪತ್ರೆಗೆ ಸೇರಿಸಲಾಗಿತ್ತು. ಕೆಲವಾರಗಳ ನಂತರ ಆತನ ಗೆಳೆಯ ಮುಲ್ಲಾನನ್ನು ಭೇಟಿಮಾಡಲು ಬಂದ.

`ಹೇಗಿದ್ದೀಯಾ ಮುಲ್ಲಾ?’

`ಬಹಳ ಚೆನ್ನಾಗಿದ್ದೇನೆ’ ಹೇಳಿದ ಮುಲ್ಲಾ.

`ಹಾಗಾದರೆ ಇನ್ನು ಕೆಲವು ದಿನಗಳಲ್ಲಿ ನೀನು ಮನೆಗೆ ಹಿಂದಿರುಗಬಹುದು?’ ಕೇಳಿದ ಗೆಳೆಯಾ.

`ಏನು? ಮನೆಗೆ? ಇಲ್ಲಿ ಇಷ್ಟೊಂದು ಪ್ರಶಾಂತ ವಾತಾವರಣವಿರುವ, ಸಮಯಕ್ಕೆ ಸರಿಯಾಗಿ ಗೊಣಗದೆ ಊಟ ಹಾಕುವಾಗ, ಆ ಕೆಲಸ ಮಾಡು, ಈ ಕೆಲಸ ಮಾಡು ಎಂದು ಒತ್ತಾಯ ಮಾಡುವವರು ಇಲ್ಲದಿರುವ ಈ ಸುಂದರ ಸ್ಥಳವನ್ನು ಬಿಟ್ಟು ಆ ಜಗಳಗಂಟಿ ಹೆಂಡತಿಯಿರುವ ಮನೆಗೆ ಹಿಂದಿರುಗಬೇಕೆ? ನನಗೇನು ಹುಚ್ಚು ಹಿಡಿದಿದೆಯೆ ಅಲ್ಲಿಗೆ ಹಿಂದಿರುಗಲು?’ ಕೇಳಿದ ಸಿಡುಕುತ್ತಾ ಮುಲ್ಲಾ.

ನಮ್ಮೊಳಗೊಬ್ಬ

ಮುಲ್ಲಾನನ್ನು ಚಿಕಿತ್ಸೆಗಾಗಿ ಬಹಳ ದಿನಗಳಿಂದ ಹುಚ್ಚಾಸ್ಪತ್ರೆಯಲ್ಲಿದ್ದ. ಹಿಂದಿದ್ದ ವೈದ್ಯರಿಗೆ ವರ್ಗವಾಗಿ ಹೊಸ ವೈದ್ಯರು ಬಂದರು. ಅವರನ್ನು ನೋಡಿ, ಅವರೊಂದಿಗೆ ಮಾತನಾಡಿದ ಮುಲ್ಲಾ,

`ಹಿಂದಿನ ವೈದ್ಯರಿಗಿಂತ ನೀವೇ ನಮಗೆ ಹೆಚ್ಚು ಇಷ್ಟವಾಗಿದ್ದೀರಿ’ ಎಂದ. ವೈದ್ಯರಿಗೆ ಸಂತೋಷವಾಯಿತು.

`ಹೌದೆ? ಅದಕ್ಕೆ ಏನು ಕಾರಣವಿರಬಹುದು?’ ಎಂದು ಕೇಳಿದರು.

`ಏನಿಲ್ಲಾ, ನೀವು ನಮ್ಮೊಳಗೊಬ್ಬರು ಎನ್ನಿಸುತ್ತಿರುವಿರಿ, ಅದಕ್ಕೆ’ ಎಂದ ಮುಲ್ಲಾ.

ಯುದ್ಧದ ಗಾಯ

ನಸ್ರುದ್ದೀನ್ ಕ್ಷೌರಕ್ಕೆಂದು ಕ್ಷೌರದ ಅಂಗಡಿಗೆ ಹೋದ. ಕ್ಷೌರಿಕ ನಸ್ರುದ್ದೀನನ ಮುಖ ನೋಡಿ, `ನಿಮ್ಮನ್ನು ನೋಡಿದಂತಿದೆ. ಈ ಹಿಂದೆ ನಾನು ನಿಮಗೆ ಕ್ಷೌರ ಮಾಡಿರಬಹುದಲ್ಲವೆ?’ ಎಂದು ಕೇಳಿದ.

`ಖಂಡಿತಾ ಇಲ್ಲ. ನನ್ನ ಕೆನ್ನೆಯ ಮೇಲಿನ ಕತ್ತಿಯ ಗಾಯದ ಕಲೆ ನನಗೆ ಯುದ್ಧದಲ್ಲಾದದ್ದು’ ಎಂದ ನಸ್ರುದ್ದೀನ್.

ನಿಲ್ಲಲೇ ಆಗುತ್ತಿಲ್ಲ

ನಸ್ರುದ್ದೀನ್ ಎಂ.ಜಿ.ರಸ್ತೆಯ ಬಾರೊಂದರಿಂದ ಕುಡಿದು ತೂರಾಡುತ್ತಾ ಹೊರಬಂದ. ಅಲ್ಲೇ ನಿಂತಿದ್ದ ತನ್ನ ಕಾರಿನ ಬಳಿ ಹೋಗಿ ಬಾಗಿಲು ತೆರೆಯಬೇಕೆನ್ನುವಷ್ಟರಲ್ಲಿ ಅಲ್ಲಿಗೆ ಪೋಲೀಸಿನವನೊಬ್ಬ ಬಂದ.

`ನೀವು ಸ್ವಲ್ಪ ಹೆಚ್ಚೇ ಕುಡಿದಂತಿದೆ. ನಿಮ್ಮ ಕಾರನ್ನು ನೀವು ಡ್ರೈವ್ ಮಾಡುವುದಿಲ್ಲ ತಾನೆ?’ ಎಂದು ಕೇಳಿದ.

`ಇಲ್ಲ, ನಾನೇ ಡ್ರೈವ್ ಮಾಡಬೇಕು. ನೀವೇ ನೋಡಿ ನನಗೆ ನಿಲ್ಲಲೇ ಆಗುತ್ತಿಲ್ಲ. ಇನ್ನು ಮನೆಗೆ ನಡೆದುಹೋಗುವುದಾದರೂ ಹೇಗೆ?’ ಎಂದು ಕೇಳಿದ.

ಹೆಂಡತಿಯ ಸಮಸ್ಯೆ

ನಸ್ರುದ್ದೀನ್ ಒಂದು ದಿನ ಹೆಂಡದಂಗಡಿಯಲ್ಲಿ ತನ್ನ ಗೆಳೆಯನ ಜೊತೆ ಕುಳಿತಿದ್ದಾಗ, `ನನ್ನ ಹೆಂಡತಿಯದು ಮನೆಯಲ್ಲಿ ದೊಡ್ಡ ಸಮಸ್ಯೆಯಾಗಿದೆ. ನಿನಗೂ ನಿನ್ನ ಹೆಂಡತಿಯದು ಸಮಸ್ಯೆಯೆ?’ ಎಂದು ಕೇಳಿದ.

`ಹೌದೆ? ಏನು ಸಮಸ್ಯೆ?’ ಕೇಳಿದ ಗೆಳೆಯ.

`ದಿನಬೆಳಗಾದರೆ ಹಣ ಕೊಡಿ ಎಂದು ಪೀಡಿಸುತ್ತಾಳೆ. ಯಾವಾಗ ನೋಡಿದರೂ ಹಣ ಹಣ ಎಂದು ತಲೆ ತಿನ್ನುತ್ತಾಳೆ’ ಎಂದ ನಸ್ರುದ್ದೀನ್.

`ಆಕೆಗೆ ಏಕೆ ಅಷ್ಟೊಂದು ಹಣ ಬೇಕು. ನೀನು ಕೊಡುವ ಹಣವನ್ನು ಆಕೆ ಏನು ಮಾಡುತ್ತಾಳೆ?’ ಕೇಳಿದ ಗೆಳೆಯ.

`ನನಗೇನು ಗೊತ್ತು? ಆಕೆಗೆ ನಾನೆಂದಾದರೂ ಹಣ ಕೊಟ್ಟಿದ್ದರಲ್ಲವೆ?’ ಹೇಳಿದ ನಸ್ರುದ್ದೀನ್.

ಹೆಂಡತಿಯ ಮತ್ತೊಂದು ಸಮಸ್ಯೆ
ನಸ್ರುದ್ದೀನ್ ಅದೇ ಹೆಂಡದಂಗಡಿಯಲ್ಲಿ ತನ್ನ ಗೆಳೆಯನಿಗೆ ಮತ್ತೊಂದು ಸಮಸ್ಯೆ ಹೇಳಿಕೊಂಡ.

`ನನ್ನ ಹೆಂಡತಿಗೆ ರಾತ್ರಿಯೆಲ್ಲಾ ಎದ್ದು ಕೂತಿರುವ ಅಭ್ಯಾಸವಿದೆ. ಪ್ರತಿ ರಾತ್ರಿ ಎರಡು ಮೂರು ಗಂಟೆಯವರೆಗೆ ಎದ್ದು ಕೂತಿರುತ್ತಾಳೆ. ಅವಳ ಈ ಕೆಟ್ಟ ಅಭ್ಯಾಸ ಹೇಗೆ ಬಿಡಿಸುವುದೋ ತಿಳಿಯುತ್ತಿಲ್ಲ’ ಎಂದ ನಸ್ರುದ್ದೀನ್.

`ಹೌದೆ? ರಾತ್ರಿ ಅಷ್ಟು ಹೊತ್ತಿನಲ್ಲಿ ಎದ್ದು ಕೂತು ಏನು ಮಾಡುತ್ತಿರುತ್ತಾಳೆ?’ ಕೇಳಿದ ಗೆಳೆಯ.

`ಇನ್ನೇನು ಮಾಡುತ್ತಾಳೆ, ನಾನು ಮನೆಗೆ ಹಿಂದಿರುಗುವುದನ್ನೇ ಎದುರುನೋಡುತ್ತಿರುತ್ತಾಳೆ’ ಹೇಳಿದ ನಸ್ರುದ್ದೀನ್ ಗ್ಲಾಸು ತುಟಿಗೇರಿಸುತ್ತಾ.



ಹಣ ಮತ್ತು ಆರೋಗ್ಯ


`ಮುಲ್ಲಾ ನಿಮ್ಮ ತಂದೆ ಸಾಕಷ್ಟು ಹಣ ಗಳಿಸಿದ್ದರು? ನಿನಗೆ ಬಹಳಷ್ಟು ಉಳಿಸಿ ಹೋಗಿರಬೇಕಲ್ಲವೆ?’ ಎಂದು ಒಂದು ದಿನ ಮುಲ್ಲಾನ ಗೆಳೆಯ ಕೇಳಿದ.

`ಒಂದು ನಯಾ ಪೈಸೆಯೂ ಇಲ್ಲ. ಅವರ ಕತೆ ಹೇಳುತ್ತೇನೆ ಕೇಳು. ಅವರು ಸಾಕಷ್ಟು ಹಣ ಸಂಪಾದಿಸಲು ಹೋಗಿ ತಮ್ಮ ಆರೋಗ್ಯ ಕಳೆದುಕೊಂಡರು. ಕೊನೆಗೆ ಆರೋಗ್ಯ ಪಡೆದುಕೊಳ್ಳಲು ಹೋಗಿ ಎಲ್ಲಾ ಹಣ ಕಳೆದುಕೊಂಡರು’ ಎಂದ ನಸ್ರುದ್ದೀನ್.

j.balakrishna@gmail.com