ಶುಕ್ರವಾರ, ಏಪ್ರಿಲ್ 06, 2012

ಜಾನ್ ಪೆನ್ನಿಕುಕ್‌ ಮತ್ತು ಮುಳ್ಳಪೆರಿಯಾರ್ ಆಣೆಕಟ್ಟು

ಡಾ.ಮಧು ಸೀತಪ್ಪನವರ `ಬಯಲುಸೀಮೆಯ ಬಾಯಾರಿಕೆ ಹಿಂಗೀತೆ?' ಕೃತಿಯಲ್ಲಿನ ಒಂದು ಲೇಖನ


ಮಧು ಸೀತಪ್ಪ
ಬ್ರಿಟಿಷರೇ ನಮ್ಮ ದೇಶ ಬಿಟ್ಟು ತೊಲಗಿ ಎಂದು ಸ್ವಾತಂತ್ರ್ಯ ಚಳುವಳಿ ಮಾಡಿದ ಭಾರತೀಯರು ಬ್ರಿಟಿಷನೊಬ್ಬನನ್ನು ದೇವರೆಂದು ಪೂಜಿಸಲು ಸಾಧ್ಯವೆ. ಅವನ ದೇವಾಲಯವನ್ನು ಸ್ಥಾಪಿಸಿರುವುದಲ್ಲದೆ, ಆತನ ಫೋಟೊವನ್ನು ತಮ್ಮ ಮನೆಗಳ ದೇವರಮನೆಯಲ್ಲಿ ತೂಗಿ ಹಾಕಿ ಪೂಜೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಆತನ ಹೆಸರನ್ನು ಈಗಲೂ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ನಾಮಕರಣ ಮಾಡುತ್ತಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಇದು ಸತ್ಯವೇ? ಯಾರೀ ವ್ಯಕ್ತಿ? ಬನ್ನಿ ೧೯ನೇ ಶತಮಾನದ ಇತಿಹಾಸದ ಪುಟಗಳನ್ನು ತಿರುವಿ ನೋಡೋಣ. ೧೭೮೯ ರಲ್ಲಿ ರಾಮನಾಡ ರಾಜ್ಯದ ಪ್ರಧಾನಮಂತ್ರಿ ಮುತ್ತಿರುಲಪ್ಪ ಪಿಲ್ಲೈ ಪಶ್ಚಿಮಾಭಿಮುಖವಾಗಿ ಹರಿಯುವ ಪೆರಿಯಾರ್ ನದಿಯನ್ನು ಪಶ್ಚಿಮಘಟ್ಟಗಳಲ್ಲಿ ಸುರಂಗಮಾಡಿ ಪೂರ್ವಾಭಿಮುಖವಾಗಿ ಹರಿಯುವ ವೇಗೈ ನದಿಗೆ ಜೋಡಣೆ ಮಾಡಿ ಬರಪೀಡಿತ ಥೇಣಿ, ಮಧುರೈ, ಶಿವಗಂಗಾ ಮತ್ತು ರಾಮನಾಥಪುರಂ ಜಿಲ್ಲೆಗಳಿಗೆ ನೀರು ಹರಿಸುವ ಬಗ್ಗೆ ಮಹಾರಾಜ ಮುತ್ತುರ ಮಾಲಿಂಗ ಸೇತುಪತಿಯ ಮುಂದೆ ಪ್ರಸ್ತಾಪವನ್ನಿಟ್ಟ. ಆದರೆ ಮಹಾರಾಜ ಇದು ತುಂಬಾ ದುಂದು ವೆಚ್ಚದ ಯೋಜನೆ ಹಾಗು ಪಶ್ಚಿಮ ಘಟ್ಟಗಳ ಬೆಟ್ಟ ಗುಡ್ಡಗಳಲ್ಲಿ ಈ ಯೋಜನೆ ಕೈಗೊಳ್ಳಲು ನಮ್ಮ ಬಳಿ ತಂತ್ರಜ್ಞಾನವಿಲ್ಲ ಎಂದು ಯೋಜನೆಯನ್ನು ಕೈಬಿಟ್ಟರು. ೧೮೬೫ರಲ್ಲಿ ಮದ್ರಾಸ್ ಪ್ರ್ರೆಸಿಡೆನ್ಸಿಯ ಬ್ರಿಟಿಷರು ಈ ಬರಪೀಡಿತ ಜಿಲ್ಲೆಗಳ ಧಾರುಣ ಪರಿಸ್ಥಿತಿಯನ್ನು ನೋಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದರ ಬಗ್ಗೆ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಮುಖ್ಯ ಅಭಿಯಂತರರಾದ ಜಾನ್ ಪೆನ್ನಿಕುಕ್‌ರವರಿಗೆ ವಹಿಸಿದರು. ಸುಮಾರು ಹತ್ತು ವರ್ಷಗಳು ಸಾಧಕ ಭಾಧಕಗಳು ಚರ್ಚೆಯಾಗಿ ಇದು ದುಬಾರಿ ಯೋಜನೆ ಹಾಗು ಪಶ್ಚಿಮಘಟ್ಟಗಳಂತಹ ಬೆಟ್ಟಗಳಲ್ಲಿ ಅಣೆಕಟ್ಟು ಕಟ್ಟುವುದು ಅಸಾಧ್ಯವೇ ಸರಿ ಎಂಬ ನಿರ್ಣಯಕ್ಕೆ ಬರಲಾಯಿತು. ಆದರೆ ಇಂತಹ ಮಿಷನ್ ಇಂಪಾಸಿಬಲ್ ಅನ್ನು, ಪಾಸಿಬಲ್ ಮಾಡಿದ ಕೀರ್ತಿ ಜಾನ್ ಪೆನ್ನಿಕುಕ್‌ಗೆ ಸೇರಬೇಕು. ೧೮೭೭ರಲ್ಲಿ ಈ ಯೋಜನೆಯ ವೆಚ್ಚ ಸುಮಾರು ೧ ಕೋಟಿರೂಗಳೆಂದು ಅಂದಾಜು ಮಾಡಲಾಯಿತು. ಆದರೆ ಇದು ದುಬಾರಿ ಯೋಜನೆಯೆಂದು ಮದ್ರಾಸ್ ಪ್ರೆಸಿಡೆನ್ಸಿಯ ಅಕ್ಷೇಪಣೆ ಎತ್ತಿತು. ಇದಕ್ಕೆ ಜಾನ್ ಪೆನ್ನಿಕುಕ್ ಈ ಪ್ರದೇಶಗಳ ಜನರಿಗೆ ನೀರು ಅತ್ಯವಶ್ಯಕ, ಆದುದರಿಂದ ಸಂಬಳವಿಲ್ಲದೆ ಅಥವಾ ಕಡಿಮೆ ಸಂಬಳಕ್ಕೆ ಕೂಲಿ ಕಾರ್ಮಿಕರು ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ, ಆದುದರಿಂದ ಯೋಜನಾ ವೆಚ್ಚ ಶೇ.೧೦% ಕಡಿಮೆಯಾಗುತ್ತದೆ ಎಂಬ ಹೊಸ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟ. ಹೊಸ ಪ್ರಸ್ತಾವನೆಗೆ ಸರ್ಕಾರದಿಂದ ಕೂಡಲೆ ಒಪ್ಪಿಗೆ ದೊರೆಯಿತು.
ಜಾನ್ ಪೆನ್ನಿಕುಕ್

ಪೆರಿಯಾರ್ ನದಿ ನಮ್ಮ ರಾಜ್ಯದ ನೇತ್ರಾವತಿಯಂತೆ ಪಶ್ಚಿಮಘಟ್ಟಗಳಲ್ಲಿ ಹುಟ್ಟಿ ಅರಬ್ಬಿಸಮುದ್ರಕ್ಕೆ ಸೇರುತ್ತದೆ. ವೇಗೈ ನದಿ ನಮ್ಮ ರಾಜ್ಯದ ಹೇಮಾವತಿ ನದಿಯಂತೆ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುತ್ತದೆ. ಪಶ್ಚಿಮಘಟ್ಟಗಳಲ್ಲಿ ಮಳೆಗಾಲದಲ್ಲಿ ಸರಾಸರಿ ೫೦೦೦ ಮಿ.ಮೀ. ಮಳೆಯಾಗುವುದರಿಂದ ಯತೇಚ್ಛ ನೀರು ಮಳೆಗಾಲದಲ್ಲಿ ಅರಬ್ಬಿ ಸಮುದ್ರದ ಪಾಲಾಗುತ್ತಿತ್ತು. ಮಳೆಗಾಲದಲ್ಲಾಗುವ ಹೆಚ್ಚುವರಿ ನೀರನ್ನು ತೇಕಡಿ ಅರಣ್ಯ ಪ್ರದೇಶದಲ್ಲಿ ಅಣೆಕಟ್ಟು ಕಟ್ಟಿ, ಈ ತೇಕಡಿ ಸರೋವರದ ನೀರನ್ನು ಪಶ್ಚಿಮಘಟ್ಟಗಳಲ್ಲಿ ೨ ಕಿ.ಮೀ. ಉದ್ದದ ಸುರಂಗವನ್ನು ಕೊರೆದು ಪೂರ್ವಾಭಿಮುಖವಾಗಿ ಹರಿಯುವ ವೇಗೈ ನದಿಗೆ ಜೋಡಿಸಿ ಬರಪೀಡಿತ ಮಧುರೈ ಹಾಗು ಇತರ ಮೂರು ಜಿಲ್ಲೆಗಳಿಗೆ ಹರಿಸಿವುದೇ ಪೆನ್ನಿಕುಕ್‌ನ ಮುಖ್ಯ ಉದ್ದೇಶ. ಪೆರಿಯಾರ್ ನದಿ ಹಾಗು ತೇಕಡಿ ಕೇರಳದ ತಂಜಾವೂರು ರಾಜ್ಯದ ಅಧೀನದಲ್ಲಿ ಇದ್ದುದ್ದರಿಂದ ಬ್ರಿಟಿಷ್ ಪ್ರೆಸಿಡೆನ್ಸಿ ೯೯೯ ವರ್ಷಗಳ ಲೀಸ್‌ನಂತೆ ೮೦೦೦ ಎಕರೆ ತೇಕಡಿ ಅರಣ್ಯ ಪ್ರದೇಶವನ್ನು ಹಾಗು ಮುಳ್ಳಪೆರಿಯಾರ್ ಅಣೆಕಟ್ಟು ಕಟ್ಟಲು ಅನುಮತಿಯನ್ನು ತಂಜಾವೂರು ಮಹಾರಾಜರಿಂದ ಪಡೆಯಿತು. ಇತ್ತೀಚೆಗೆ ಕೇರಳ ಹಾಗು ತಮಿಳುನಾಡಿನ ನಡುವೆ ಈ ಅಣೆಕಟ್ಟು ತೀವ್ರ ವಿವಾದಕ್ಕೆ ಗುರಿಯಾಗಿತ್ತು.

ಮಧುರೈನ ಪಿ.ಡಬ್ಲ್ಯೂ.ಡಿ. ಕಚೇರಿಯ ಆವರಣದಲ್ಲಿರುವ ಜಾನ್ ಪೆನ್ನಿಕುಕ್ ಪುತ್ಥಳಿ

೧೮೮೫ರಲ್ಲಿ ಕೆಲಸ ಪ್ರಾರಂಭಿಸಿದ ಪೆನ್ನಿಕುಕ್‌ನ ಮುಂದೆ ‘ಮಿಷನ್ ಇಂಪಾಸಿಬಲ್’ ಯೋಜನೆಯನ್ನು ‘ಪಾಸಿಬಲ್’ ಮಾಡುವ ಹಟವಿತ್ತು. ಅಂದು ಸಿಮೆಂಟಿರಲಿಲ್ಲ. ಈ ಅಣೆಕಟ್ಟನ್ನು ಸುಣ್ಣದ ಕಲ್ಲು, ಸುರ್ಕಿ ಹಾಗು ಮರಳು ಮಿಶ್ರಿತ ಪುಡಿಯನ್ನು ಬಳಸಿ ಕಟ್ಟಲಾಗಿದೆ. ೮೦,೦೦೦ ಟನ್ ಸುಣ್ಣದ ಕಲ್ಲನ್ನು ಪಶ್ಚಿಮಘಟ್ಟಗಳ ಪ್ರದೇಶಕ್ಕೆ ಎತ್ತಿನ ಬಂಡಿಗಳಲ್ಲಿ ಹಾಗೂ ಹಗ್ಗಗಳ ಮೂಲಕ ಸಾಗಿಸಲಾಯಿತು. ಮಳೆಗಾಲದ ೪ ತಿಂಗಳು ಕೆಲಸಮಾಡಲಾಗುತ್ತಿರಲಿಲ್ಲ. ಮಲೇರಿಯಾ ಬೇನೆ ಈ ಪ್ರದೇಶಗಳಲ್ಲಿ ವ್ಯಾಪಕವಾಗಿತ್ತು. ಆಗ ಮಲೇರಿಯಾಕ್ಕೆ ಔಷಧವಿರಲಿಲ್ಲ. ಆದರೆ ಪಶ್ಚಿಮಘಟ್ಟಗಳಲ್ಲಿ ದೊರೆಯುವ ಭಟ್ಟಿ, ಸಾರಾಯಿಯೇ ಇದಕ್ಕೆ ಮದ್ದು. ಮಲೇರಿಯಾದಿಂದ ೪೩೯ ಜನ ಮೃತಪಟ್ಟರು, ಇದರಲ್ಲಿ ಅನೇಕ ಬ್ರಿಟಿಷ್ ಅಧಿಕಾರಿಗಳು ಸೇರಿದ್ದಾರೆ. ಸ್ಥಳೀಯ ಭಟ್ಟಿ ಸಾರಾಯಿಲ್ಲದಿದ್ದಲ್ಲಿ ಈ ಅಣೆಕಟ್ಟನ್ನು ಕಟ್ಟಲೇ ಸಾಧ್ಯವಿರುತ್ತಿರಲಿಲ್ಲ ಎಂದು ಚರಿತ್ರ ಸಂಶೋಧಕರು ದಾಖಲಿಸಿದ್ದಾರೆ.
ಅಣೆಕಟ್ಟಿನ ಅಡಿಪಾಯ ಕಟ್ಟುವ ಮೊದಲ ಹಂತದಲ್ಲೇತೀವ್ರ ಮಳೆಯಿಂದ ಎರಡುಬಾರಿ ಕೊಚ್ಚಿ ಹೋಯಿತು. ಈ ಘಟನೆಗಳು ಸಂಭವಿಸಿದ ಮೇಲೆ ಮದ್ರಾಸ್ ಪ್ರೆಸಿಡೆನ್ಸಿ ಈ ದುಬಾರಿ ಯೋಜನೆಯನ್ನು ಕೈಬಿಡಲು ನಿರ್ಧರಿಸಿತು. ಪೆನ್ನಿಕುಕ್‌ಗೆ ಈ ಪ್ರಪಂಚದಲ್ಲಿ ಹುಟ್ಟಿದ ಮೇಲೆ ಈ ‘ಮ್ಯಾನ್‌ಕೈಂಡ್‌ಗೆ’ ನಾವು ಏನೂ ಮಾಡಲಿಲ್ಲವೆಂದರೆ, ಬದುಕಿ ಏನು ಪ್ರಯೋಜನಾ? ಎಂಬುದು ಮನಸ್ಸಿನಲ್ಲೇ ಕೊರಗುತ್ತಿತ್ತು. ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ ಪೆನ್ನಿಕುಕ್ ತನ್ನ ಸ್ವಂತ ಮನೆಯನ್ನು ಹಾಗೂ ಹೆಂಡತಿಯ ಒಡವೆಗಳನ್ನು ಮಾರಿ ಹಣ ಸಂಗ್ರಹಿಸಿದ.

ಮುಳ್ಳಪೆರಿಯಾರ್ ಆಣೆಕಟ್ಟು

ಆ ಹಣದೊಂದಿಗೆ ಭಾರತಕ್ಕೆ ಹಿಂದಿರುಗಿದ ಪೆನ್ನಿಕುಕ್ ನೆನೆಗುದಿಗೆ ಬಿದ್ದಿದ್ದ ಮುಳ್ಳಪೆರಿಯಾರ್ ಯೋಜನೆಯನ್ನು ಪುನರಾರಂಭಿಸಿದ. ಇಷ್ಟೆಲ್ಲ ತೊಡಕುಗಳಿದ್ದರೂ ೧೮೮೫ರಲ್ಲಿ ಪ್ರಾರಂಭವಾದ ಕಾಮಗಾರಿ ಕೇವಲ ಹತ್ತು ವರ್ಷಗಳಲ್ಲಿ ಪೂರ್ಣಗೊಂಡಿತ್ತು. ಪ್ರಪಂಚದ ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ಕಾರ್ಯಗತವಾದ ಪಶ್ಚಿಮ-ಪೂರ್ವ ನದಿಜೋಡಣೆ ಯೋಜನೆಯೆಂದು ಹೆಗ್ಗಳಿಕೆಗೆ ಪಾತ್ರವಾಯಿತು. ‘ಮಿಷನ್ ಇಂಪಾಸಿಬಲ್’ಗೆ ‘ಹ್ಯಾಪಿ ಎಂಡಿಂಗ್’ ನೀಡಿದ ಪೆನ್ನಿಕುಕ್ ತಮಿಳುನಾಡಿನ ಬರಪೀಡಿತ ಜಿಲ್ಲೆಗಳಲ್ಲಿ ಆರಾಧ್ಯ ಧೈವವಾದ.
ಅಂದು ಪೆನ್ನಿಕುಕ್ ತನ್ನ ಪತ್ನಿಯ ಒಡವೆ ಮಾರಿ ಯೋಜನೆಯನ್ನು ಮುಂದುವರೆಸಿದ, ಆದರೆ ಇಂದು ಕೆಲವು ಅಭಿಯಂತರರು ಲೋಕಾಯಕ್ತಕ್ಕೆ ಕಾಣದಿರುವ ರೀತಿ ಒಡವೆಗಳನ್ನು ಎಲ್ಲಿ ಬಚ್ಚಿಡುವುದು ಎಂದು ಸದಾ ಯೋಚಿಸುತ್ತಿರುತ್ತಾರೆ. ಮುಖ್ಯಮಂತ್ರಿಗಳೇ, ನಾವು ನಿಮ್ಮ ಒಡವೆ ಅಥವಾ ಮನೆ ಮಾರಿ ಅಂತ ಕೇಳ್ತಾ ಇಲ್ಲ. ಬರಪೀಡಿತ ಜಿಲ್ಲೆಗಳಿಗಾಗಿರುವ ನೀರಿನ ಅಸಮತೋಲನವನ್ನು ಸರಿಪಡಿಸಲು ಇರುವ ಒಂದೇ ಮಾರ್ಗವಾದ ನೇತ್ರಾವತಿ ಯೋಜನೆಯನ್ನು ಅನುಷ್ಠಾನ ಮಾಡಿ ಎಂದು ಕೇಳುತ್ತಿದ್ದೇವೆ. ನೀವು ತಿಪಟೂರಿನಲ್ಲಿ ಭಾಷಣ ಮಾಡಿ, ‘ನಾನು ನೇತ್ರಾವತಿ ಯೋಜನೆಗೆ ಬದ್ಧ’ ಎಂದು ಹೇಳಿದ ಮರುದಿನವೇ ಶಿವಮೊಗ್ಗದಲ್ಲಿ, ‘ನಾನು ಆ ರೀತಿ ಹೇಳಿಯೇ ಇಲ್ಲ, ಪತ್ರಿಕೆಗಳಲ್ಲಿ ತಪ್ಪು ವರದಿಯಾಗಿರುವುದರಿಂದ ನನ್ನ ಮನಸ್ಸಿಗೆ ನೋವಾಗಿದೆ’ ಎಂಬ ಹೇಳಿಕೆ ನೀಡಿದ್ದೀರಾ. ನಿಮ್ಮ ಹೇಳಿಕೆಯನ್ನು ಅಲ್ಲಿಗೇ ನಿಲ್ಲಿಸಿದ್ದರೆ ಚೆನ್ನಾಗಿತ್ತು ಆದರೆ ನೀವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ನಾನು ನೇತ್ರಾವತಿ ಯೋಜನೆಗೆ ಹಿಂದೆಯೂ ವಿರೋಧಿ ಹಾಗು ಈಗಲೂ ವಿರೋಧಿ’ ಎಂದು ಹೇಳಿರುವುದು ದುರುದೃಷ್ಟಕರ. ಕುಡಿಯಲು ಶುದ್ಧ ನೀರಿಲ್ಲದೆ ಬರಪೀಡಿತ ಜಿಲ್ಲೆಗಳಲ್ಲಿ ಹಸುಗೂಸುಗಳು ಮತ್ತು ಮಕ್ಕಳು ಅಂಗವಿಕಲರಾಗುತ್ತಿರುವಾಗ ಈ ರೀತಿಯ ಸಂವೇದನಾರಹಿತ ಹೇಳಿಕೆಗಳು ಮುಖ್ಯಮಂತ್ರಿಗಳ ಪದವಿಗೆ ಘನತೆ ತರುವುದಿಲ್ಲ. ನೀವು ದಕ್ಷಿಣ ಕನ್ನಡ ಹಾಗೂ ತುಳುನಾಡಿಗೆ ಮಾತ್ರ ಮುಖ್ಯಮಂತ್ರಿಗಳೋ ಅಥವಾ ಸಮಗ್ರ ಕರ್ನಾಟಕಕ್ಕೆ ಮುಖ್ಯಮಂತ್ರಿಗಳೋ ಎಂಬ ಸಂದೇಹ ಕಂಡು ಬರುತ್ತಿದೆ. ನಿಮಗೆ ಮೊದಲಿನಿಂದಲೂ ಈ ಯೋಜನೆಗೆ ವಿರೋಧವಿದ್ದರೆ ಬಹುಶಃ ಪರಿಸರಕ್ಕಾಗುವ ಹಾನಿ, ನೀರಿನಲ್ಲಿ ಹೆಚ್ಚಾಗುವ ಉಪ್ಪಿನಾಂಶ, ಪಶಿಮಘಟ್ಟಗಳ ಬಹುವೈವಿಧ್ಯತೆಯ ಜೀವರಾಶಿಗಾಗುವ ಹಾನಿ, ಕರಾವಳಿಯ ಮೀನುಗಾರರಿಗಾಗುವ ತೊಂದರೆಗಳ ಭೀತಿ ನಿಮ್ಮನ್ನು ಕಾಡುತ್ತಿರಬಹುದು. ೧೧೬ ವರ್ಷಗಳ ಹಿಂದೆ ನೇತ್ರಾವತಿಯ ಯೋಜನೆಯಂತೆ ಪಶ್ಚಿಮಕ್ಕೆ ಹರಿಯುವ ಪೆರಿಯಾರ್ ನದಿಯ ಮಳೆಗಾಲದ ಹೆಚ್ಚುವರಿಯ ನೀರನ್ನು ಪೂರ್ವದ ವೇಗೈ ನದಿಗೆ ಜೋಡಿಸಿರುವ ಜೀವಂತ ಉದಾಹರಣೆ ಕೇರಳದ ಮುಳ್ಳಪೆರಿಯಾರ್ ಅಣೆಕಟ್ಟು. ೧೧೬ ವರ್ಷಗಳಿಂದ ಪರಿಸರಕ್ಕೆ ಅಥವಾ ಬಹುವೈವಿಧ್ಯತೆಯ ಜೀವರಾಶಿಗೆ ಅಥವಾ ನದಿಯ/ಅರಬ್ಬಿ ಸಮುದ್ರದ ಉಪ್ಪಿನಾಂಶಕ್ಕೆ ಅಥವಾ ಮೀನುಗಾರರಿಗೆ ಯಾವ ರೀತಿಯ ತೊಂದರೆಗಳಾಗಿದೆ ಎಂದು ಅರಿಯಲು ಇದು ಒಂದು ಜೀವಂತ ನಿದರ್ಶನ. ಪೆರಿಯಾರ್ ಯೋಜನೆಗೆ ೮೦೦೦ ಎಕರೆ ಅರಣ್ಯ ಪ್ರದೇಶ ಹಾಗು ಪಶ್ಚಿಮಘಟ್ಟಗಳ ಹೊಟ್ಟೆಯನ್ನು ಬಗೆದು ೨ ಕಿ.ಮೀ. ಸುರಂಗ ಕೊರೆಯಲಾಯಿತು. ಆದರೆ ಸರ್ಕಾರದ ಮುಂದಿರುವ ನೇತ್ರಾವತಿಯ ಯೋಜನೆಗೆ ಕೇವಲ ೫೦೦ ಎಕರೆಗಳು ಸಾಕು ಹಾಗೂ ಪಶ್ಚಿಮ ಘಟ್ಟಗಳ ಹೊಟ್ಟೆಯನ್ನು ಬಗೆಯುವಂತಿಲ್ಲ. ಮುಖ್ಯಮಂತ್ರಿಯ ಸ್ಥಾನದಲ್ಲಿರುವ ನೀವು ಯಾವುದೋ ಸ್ವಾಮಿಗಳ ಅಥವಾ ಧರ್ಮಾಧಿಕಾರಿಗಳ ಒತ್ತಡಕ್ಕೊ ಮಣಿದು ನಿಮ್ಮ ಹೇಳಿಕೆಯನ್ನೇ ತಿರುಚಿರುವುದು ವಿಷಾದಕರ. ಕೆಲವು ತಿಂಗಳುಗಳಿಂದ ನಿಮ್ಮ ಕುರ್ಚಿ ಒಂದೇ ಸಮನೆ ಅಲ್ಲಾಡಿ ತುಂಬಾ ಮೈ ಕೈ ನೋವಾಗಿದ್ದರೆ ನಿಮ್ಮ ಕುಟುಂಬ ಸಮೇತ ತೇಕಡಿ ಅರಣ್ಯ ಧಾಮಕ್ಕೆ ಹೋಗಿ ಬನ್ನಿ. ವಿಶ್ರಾಂತಿಯೊಂದಿಗೆ, ಮುಳ್ಳಪೆರಿಯಾರ್ ಯೋಜನೆಯನ್ನು ನೋಡಿದಂತಾಗುತ್ತದೆ.
ಡಾ.ಮಧು ಸೀತಪ್ಪ
madhuseethappa@yahoo.com

ಕಾಮೆಂಟ್‌ಗಳಿಲ್ಲ: