ಬುಧವಾರ, ಜನವರಿ 09, 2013

ಮುಲ್ಲಾ ನಸ್ರುದ್ದೀನ್ ಕತೆಗಳು- 13ನೇ ಕಂತು

`ಸಂವಾದ' ಮಾಸಪತ್ರಿಕೆ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 13ನೇ ಕಂತು.
ಚಿತ್ರಗಳು: ಮುರಳೀಧರ ರಾಠೋಡ್

ನಸ್ರುದ್ದೀನನ ಮಗು
ಗೆಳೆಯ: ‘ಅಭಿನಂದನೆಗಳು ನಸ್ರುದ್ದೀನ್. ನೀನು ತಂದೆಯಾದೆಯಂತೆ.’
ನಸ್ರುದ್ದೀನ್: ‘ಹೌದು’
ಗೆಳೆಯ: ‘ಗಂಡು ಮಗುವೇ?’
ನಸ್ರುದ್ದೀನ್: ‘ಅಲ್ಲ’
ಗೆಳೆಯ: ‘ಹಾಗಾದರೆ ಹೆಣ್ಣು ಮಗುವೇ ಆಗಿರಬೇಕು?’
ನಸ್ರುದ್ದೀನ್: ‘ಹೌದು. ಆದರೆ ಹೆಣ್ಣು ಮಗುವೆಂದು ನಿನಗೆ ಹೇಗೆ ತಿಳಿಯಿತು?’

ನೀನೇ ನಾನು
ಒಂದು ದಿನ ಮುಲ್ಲಾ ನಸ್ರುದ್ದೀನ್ ಊಟ ಮಾಡಿ ಮನೆಯ ಮುಂದಿನ ಜಗುಲಿಯ ಮೇಲೆ ಕುಳಿತಿದ್ದಾಗ, ಒಬ್ಬ ವ್ಯಕ್ತಿ ಬಂದು ಆತನ ಪಕ್ಕದಲ್ಲಿ ಕೂತ. ಇಬ್ಬರೂ ಊರ ವಿಷಯ, ವೈಯಕ್ತಿಕ ವಿಷಯ, ರಾಜಕೀಯ, ತತ್ವಶಾಸ್ತ್ರ ಎಲ್ಲದರ ಬಗ್ಗೆ ಹರಟೆ ಹೊಡೆದರು. ಒಂದು ಗಂಟೆಯ ನಂತರ ಆ ವ್ಯಕ್ತಿ ‘ಸಮಯವಾಯಿತು, ಹೋಗುತ್ತೇನೆ’ ಎಂದು ಎದ್ದು ನಿಂತ.
ಆಗ ನಸ್ರುದ್ದೀನ್, ‘ಕ್ಷಮಿಸು ಗೆಳೆಯಾ.... ನೀನ್ಯಾರೆಂದು ತಿಳಿಯಲಿಲ್ಲ’ ಎಂದ.
‘ಏನು? ನಾನ್ಯಾರು ತಿಳಿದಿಲ್ಲವೆ? ಹಾಗಾದರೆ ಇಷ್ಟೊತ್ತು ಅಷ್ಟೊಂದು ಖಾಸಗಿ ವಿಷಯವೆಲ್ಲಾ ಮಾತನಾಡಿದೆವಲ್ಲಾ! ನಾನ್ಯಾರೆಂದು ತಿಳಿಯದೆ ಮಾತನಾಡಿದೆಯಾ?’ ಆ ವ್ಯಕ್ತಿ ಕೇಳಿದ ಆಶ್ಚರ್ಯದಿಂದ.
‘ಹೌದು’ ಎಂದ ನಸ್ರುದ್ದೀನ್.
‘ಹಾಗಾದರೆ, ನೀನು ನನ್ನನ್ನು ಯಾರೆಂದು ತಿಳಿದಿದ್ದೆ?’ ಆತ ಕೇಳಿದ.
‘ನಿನ್ನ ನಡತೆ, ನಿನ್ನ ಬಟ್ಟೆ, ರುಮಾಲು, ಗಡ್ಡ ಎಲ್ಲಾ ನೋಡಿ ನೀನು ನಾನೇ ಇರಬಹುದು ಎಂದುಕೊಂಡಿದ್ದೆ’ ಎಂದ ನಸ್ರುದ್ದೀನ್.

ದೇವವಾಣಿ
ಒಂದು ದಿನ ಮುಲ್ಲಾ ನಸ್ರುದ್ದೀನ್ ನಿದ್ರೆಯಲ್ಲಿದ್ದವನು ತಕ್ಷಣ ಎಚ್ಚೆತ್ತು ‘ಹೋ ನನಗೆ ದೇವವಾಣಿ ಕಿವಿಯಲ್ಲಿ ಗುಟ್ಟು ಉಸುರಿದೆ. ಅದನ್ನು ಬರೆಯುವ ಮುನ್ನ ಬರೆದಿಡಬೇಕು... ಕಾಗದ ಲೇಖನಿ ಕೊಡು’ ಎಂದು ತನ್ನ ಪತ್ನಿಯನ್ನೂ ಎಬ್ಬಿಸಿದ. ಆಕೆ ಕಾಗದ ಹಾಗೂ ಲೇಖನಿ ಕೊಟ್ಟಳು. ನಸ್ರುದ್ದೀನ್ ಅದರಲ್ಲಿ ಒಂದೆರಡು ಸಾಲು ಗೀಚಿ ಅದನ್ನು ಪಕ್ಕಕ್ಕೆ ಇರಿಸಿ ಮಲಗಲು ಹೊರಟ. ಅದನ್ನು ನೋಡುತ್ತಿದ್ದ ಅವನ ಪತ್ನಿ, ‘ಅದೇನು ದೇವವಾಣಿಯೂ ನನಗೂ ಓದಿ ಹೇಳು’ ಎಂದಳು. ನಸ್ರುದ್ದೀನ್ ಶಿಸ್ತಾಗಿ ಹಾಸಿಗೆಯ ಮೇಲೆ ಕೂತು ಪಕ್ಕಕ್ಕಿರಿಸಿದ್ದ ಕಾಗದ ತೆಗೆದುಕೊಂಡು, ‘ನೀನು ಎಲ್ಲಿಗೇ ಹೋಗು. ನೀನು ಹೋದ ಸ್ಥಳ ಖಂಡಿತಾ ತಲುಪಿರುತ್ತೀಯೆ’ ಎಂದು ಜೋರಾಗಿ ಓದಿದ.

ಗಾಳಿಮಾತು
ಗಾಳಿಮಾತು ಹಬ್ಬಿಸುವವ: ‘ನಸ್ರುದ್ದೀನ್! ಒಂದು ದೊಡ್ಡ ಪೀಪಾಯಿಯಲ್ಲಿ ಯಾರೋ ದ್ರಾಕ್ಷಾರಸ ರವಾನೆ ಮಾಡುತ್ತಿದ್ದುದನ್ನು ಕಂಡೆ!’
ನಸ್ರುದ್ದೀನ್: ‘ಅದರಿಂದ ನನಗೇನಾಗಬೇಕು?’
ಗಾಳಿಮಾತು ಹಬ್ಬಿಸುವವ: ‘ಆ ಪೀಪಾಯಿಯನ್ನು ನಿನ್ನ ಮನೆಗೆ ರವಾನಿಸುತ್ತಿದ್ದರು!; ನಸ್ರುದ್ದೀನ್: ‘ಹೌದೆ? ಅದರಿಂದ ನಿನಗೇನಾಗಬೇಕು?’

ದೇವರ ಭಾವಮೈದ
ಒಂದು ದಿನ ನಡುರಾತ್ರಿಯಲ್ಲಿ ಮುಲ್ಲಾನ ಮನೆಯ ಬಾಗಿಲನ್ನು ಯಾರೋ ತಟ್ಟಿದರು. ‘ಯಾರಿರಬಹುದು?’ ಎಂದು ಕೊಂಡು ಬಾಗಿಲನ್ನು ತೆರೆದ. ಒಬ್ಬ ಅಪರಿಚಿತ ವ್ಯಕ್ತಿ ನಿಂತಿದ್ದ. ಆತ,
‘ಮುಲ್ಲಾ ನೀನು ಪ್ರಯಾಣದಲ್ಲಿರುವ ಈ ಸೋದರನಿಗೆ ಸಹಾಯ ಮಾಡಬೇಕು. ಈ ದಿನ ರಾತ್ರಿ ಉಳಿದುಕೊಳ್ಳಲು ನಿನ್ನ ಮನೆಯಲ್ಲಿ ಸ್ಥಳಾವಕಾಶ ಕೊಡು. ನಾನು ದೇವರ ಭಾವಮೈದ’ ಎಂದ.
‘ಓಹೋ ಹಾಗೇನು?’ ಎಂದ ನಸ್ರುದ್ದೀನ್.
‘ಹೌದು, ನಾನು ದೇವರ ಭಾವಮೈದ’ ಎಂದ ಆ ಅಪರಿಚಿತ ಮತ್ತೊಮ್ಮೆ.
‘ಹಾಗಾದರೆ ನಿನ್ನಂತಹ ಅತಿಥಿಗೆ ಮಲಗಲು ಅತ್ಯುತ್ತಮ ಸ್ಥಳವನ್ನೇ ನೀಡಬೇಕು’ ಎನ್ನುತ್ತಾ, ‘ಬಾ ನನ್ನೊಂದಿಗೆ’ ಎಂದು ನಸ್ರುದ್ದೀನ್ ಆತನನ್ನು ಎರಡು ಬೀದಿ ಆಚೆಗಿದ್ದ ಮಸೀದಿಗೆ ಕರೆದೊಯ್ದ.
ಆ ಅಪರಿಚಿತನಿಗೆ ಮಸೀದಿ ತೋರಿಸುತ್ತಾ, ‘ನೋಡು ನಿನಗೆ ಇದಕ್ಕಿಂತ ಉತ್ತಮ ಸ್ಥಳ ಬೇರೆಲ್ಲೂ ಇಲ್ಲ, ಅಲ್ಲದೆ ಇದು ನಿಮ್ಮ ಮಾವನ ಮನೆ ಸಹ ಆಗಿದೆ. ನೀನು ಇಲ್ಲಿ ಆರಾಮವಾಗಿ ಮಲಗಬಹುದು’ ಎಂದ ನಸ್ರುದ್ದೀನ್.

ಮೋಸಗೊಳಿಸಲು ಸಾಧ್ಯವಿಲ್ಲ
ವ್ಯಕ್ತಿಯೊಬ್ಬ ತನ್ನನ್ನು ಯಾರೂ ಮೋಸಗೊಳಿಸಲು ಸಾಧ್ಯವಿಲ್ಲವೆಂದು ಜಂಬ ಕೊಚ್ಚಿಕೊಳ್ಳುತ್ತಿದ್ದ. ಅಲ್ಲೇ ಇದ್ದ ನಸ್ರುದ್ದೀನ್ ‘ನಿನ್ನನ್ನು ಖಂಡಿತಾ ಮೋಸಗೊಳಿಸುತ್ತೇನೆ’ ಎಂದ. 
‘ಸಾಧ್ಯವೇ ಇಲ್ಲ. ಬೇಕಾದರೆ ಪ್ರಯತ್ನಿಸು’ ಎಂದ ಆ ವ್ಯಕ್ತಿ.
‘ನನಗೊಂದು ವಿಚಾರ ಹೊಳೆದಿದೆ. ಈಗಲೇ ಬರುತ್ತೇನೆ, ಇಲ್ಲೇ ಇರು. ಇಲ್ಲೇ ಹೋಗಿ ವಾಪಸ್ಸು ಬಂದು ಖಂಡಿತಾ ನಿನ್ನನ್ನು ಮೋಸಗೊಳಿಸುತ್ತೇನೆ’ ಎಂದು ಹೊರಟ.
‘ಹೋಗಿ ಬಾ. ನೀನು ಏನೇ ಮಾಡಿದರೂ ನನ್ನನ್ನು ಮೋಸಗೊಳಿಸಲು ಸಾಧ್ಯವಾಗುವುದಿಲ್ಲ’ ಎಂದ ಆ ಜಂಬದ ವ್ಯಕ್ತಿ.
ಎಷ್ಟು ಹೊತ್ತಾದರೂ ನಸ್ರುದ್ದೀನ್ ವಾಪಸ್ಸು ಬರಲಿಲ್ಲ. ಆ ವ್ಯಕ್ತಿ ಕಾಯುತ್ತಿದ್ದುದನ್ನು ಕಂಡ ದಾರಿಹೋಕರು ಆತ ಯಾರಿಗಾಗಿ ಕಾಯುತ್ತಿದ್ದಾನೆ ಎಂದು ವಿಚಾರಿಸಿದರು.
‘ನಸ್ರುದ್ದೀನ್ ನನ್ನನ್ನು ಮೋಸಗೊಳಿಸಲು ಬರುವುದಾಗಿ ಹೇಳಿದ್ದಾನೆ. ನೋಡೋಣ ಅದು ಹೇಗೆ ಮೋಸಗೊಳಿಸುತ್ತಾನೋ. ಅವನಿಗಾಗೇ ಕಾಯುತ್ತಿದ್ದೇನೆ’ ಎಂದ ಆತ.
‘ಅವನಿಗಾಗಿ ನೀನು ಕಾಯುವುದು ಬೇಡ. ಆತ ಈಗಾಗಲೇ ನಿನ್ನನ್ನು ಮೋಸಗೊಳಿಸಿದ್ದಾನೆ. ಅವನು ಹಿಂದಿರುಗುವುದಿಲ್ಲ’ ಎಂದರು ನಸ್ರುದ್ದೀನನ ಬಗ್ಗೆ ತಿಳಿದಿದ್ದ ದಾರಿಹೋಕರು.

ಚೆರ್ರಿ ತರ್ಕ
ನಸ್ರುದ್ದೀನ್ ತನ್ನ ತೋಟದಲ್ಲಿ ಬೆಳೆದಿದ್ದ ಚೆರ್ರಿ ಹಣ್ಣುಗಳನ್ನು ತನ್ನ ಕತ್ತೆಯ ಮೇಲೆ ಹೇರಿಕೊಂಡು ಮಾರುಕಟ್ಟೆಗೆ ಮಾರಲು ಹೊರಟಿದ್ದ. ದಾರಿಯಲ್ಲಿ ಅರ್ಧ ಡಜನು ಸಣ್ಣ ಮಕ್ಕಳು ಆತ ಚೆರ್ರಿ ಕೊಂಡೊಯ್ಯುತ್ತಿದ್ದುದನ್ನು ಕಂಡು ಅವನ ಹಿಂದೆಯೇ ಬಂದು, 
‘ಮುಲ್ಲಾ ನಮಗೆ ತಿನ್ನಲು ಚೆರ್ರಿ ಹಣ್ಣು ಕೊಡು’ ಎಂದು ಅಂಗಲಾಚಿದರು.
ನಸ್ರುದ್ದೀನ್ ಸಂಕಷ್ಟಕ್ಕೆ ಸಿಕ್ಕಿಬಿದ್ದ. ಆತನಿಗೆ ಮಕ್ಕಳನ್ನು ಕಂಡರೆ ಇಷ್ಟ. ಆದರೆ ಆತನಿಗೆ ಅವುಗಳನ್ನು ಮಾರಿದರ ಸಿಗುವ ಲಾಭವೂ ಇಷ್ಟ. ಆತನಿಗೆ ಅದನ್ನು ಕಳೆದುಕೊಳ್ಳಲು ಇಷ್ಟವೂ ಇರಲಿಲ್ಲ. ಅದರ ಬಗ್ಗೆ ಬಹಳಷ್ಟು ಯೋಚಿಸಿದ ನಂತರ ತನ್ನಲ್ಲಿದ್ದ ಚೆರ್ರಿ ಹಣ್ಣಿನ ಬುಟ್ಟಿಯಿಂದ ಆರು ಹಣ್ಣನ್ನು ಮಾತ್ರ ತೆಗೆದು ಆ ಆರು ಮಕ್ಕಳಿಗೆ ಕೊಟ್ಟ. ಮಕ್ಕಳು ಅದನ್ನು ಖುಷಿಯಿಂದ ತಿಂದು
‘ಕೇವಲ ಆರೇ ಹಣ್ಣು ಕೊಟ್ಟಿದ್ದೀಯ, ಇನ್ನೂ ಒಂದಷ್ಟು ಕೊಡು’ ಎಂದರು.
ಅದಕ್ಕೆ ಮುಲ್ಲಾ, ‘ನೋಡಿ ಮಕ್ಕಳೆ, ನನ್ನಲ್ಲಿರುವ ಎಲ್ಲಾ ಚೆರ್ರಿ ಹಣ್ಣುಗಳ ರುಚಿ ಒಂದೇ ರೀತಿ ಇದೆ. ನೀವು ಒಂದು ತಿಂದರೇನು, ಎಲ್ಲಾ ತಿಂದರೇನು ಎಲ್ಲಾ ಒಂದೇ ರೀತಿ ಇರುತ್ತದೆ’ ಎಂದು ಹೇಳಿ ಅಲ್ಲಿಂದ ಹೊರಟ.

ನಸ್ರುದ್ದೀನನ ತತ್ವ
ಗೆಳೆಯ: ‘ನಸ್ರುದ್ದೀನ್, ನಿನ್ನ ಬಳಿ ಮುವ್ವತ್ತು ವರ್ಷಗಳಷ್ಟು ಹಳೆಯ ದ್ರಾಕ್ಷಾರಸ ಇದಯೆಂದು ಕೇಳಿದೆ. ನಿಜವೆ?’
ನಸ್ರುದ್ದೀನ್: ‘ಹೌದು’
ಗೆಳೆಯ: ‘ನನಗೆ ಸ್ವಲ್ಪ ಕೊಡುತ್ತೀಯಾ?’
ನಸ್ರುದ್ದೀನ್: ‘ಇಲ್ಲ, ಅದು ತತ್ವಕ್ಕೆ ವಿರುದ್ಧವಾದುದು’
ಗೆಳೆಯ: ‘ತತ್ವಕ್ಕೆ ವಿರುದ್ಧವಾದುದು? ಏನು ನಿನ್ನ ಮಾತಿನ ಅರ್ಥ?’ 
ನಸ್ರುದ್ದೀನ್: ‘ಅದು ಸರಳ ತತ್ವ. ಕೇಳಿದವರಿಗೆಲ್ಲಾ ನಾನು ದ್ರಾಕ್ಷಾರಸ ಕೊಡುತ್ತಾ ಬಂದಿದ್ದರೆ ನನ್ನ ಬಳಿ ಮುವ್ವತ್ತು ವರ್ಷಗಳ ದ್ರಾಕ್ಷಾರಸ ಇರುತ್ತಿರಲಿಲ್ಲ ಎನ್ನುವ ತತ್ವ.’

ವಿವೇಕಿಯಾಗುವುದು
ಒಬ್ಬ ವ್ಯಕ್ತಿ ಅತ್ಯಂತ ವಿವೇಕವಿದ್ದ ಮುಲ್ಲಾ ನಸ್ರುದ್ದೀನನ ಬಳಿ ಬಂದು, ‘ನಸ್ರುದ್ದೀನ್ ನಾನು ಸಹ ನಿನ್ನಂತೆ ವಿವೇಕವನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ಏನು ಮಾಡಬೇಕು?’ ಎಂದು ಕೇಳಿದ.
ಅದಕ್ಕೆ ನಸ್ರುದ್ದೀನ್, ‘ಅದು ಬಹಳ ಸುಲಭದ ಕೆಲಸ. ವಿವೇಕವುಳ್ಳ ವ್ಯಕ್ತಿಗಳ ಹೇಳುವ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊ. ಹಾಗೆಯೇ ಬೇರೆ ಯಾರಾದರೂ ನಿನ್ನ ಮಾತುಗಳನ್ನು ಕೇಳುತ್ತಿರುವಾಗ ನೀನು ಏನು ಹೇಳುತ್ತಿದ್ದೀಯೋ ಅದನ್ನೂ ಗಮನವಿಟ್ಟು ಕೇಳಿಸಿಕೋ’ ಎಂದ.
ವೈದ್ಯರೇ ನೀವು ಬರುವುದು ಬೇಡ
ಒಂದು ದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ನಸ್ರುದ್ದೀನನ ಹೆಂಡತಿ ಕಾಯಿಲೆ ಬಿದ್ದಳು ಹಾಗೂ ಕೂಡಲೇ ವೈದ್ಯರನ್ನು ಕರೆದುಕೊಂಡುಬರುವಂತೆ ಹೇಳಿದಳು. ನಸ್ರುದ್ದೀನ್ ಸಿದ್ಧವಾಗಿ ಹೊರಡಬೇಕೆನ್ನುವಷ್ಟರಲ್ಲಿ ಆಕೆ ಆತನನ್ನು ಕೂಗಿ ಕರೆದು, ‘ಕಾಯಿಲೆ ಗುಣವಾದಂತಿದೆ. ವೈದ್ಯರ ಅವಶ್ಯಕತೆ ಇಲ್ಲವೆನ್ನಿಸುತ್ತದೆ. ವೈದ್ಯರನ್ನು ಕರೆತರಬೇಡ’ ಎಂದಳು. 
‘ಆಯಿತು’ ಎಂದ ನಸ್ರುದ್ದೀನ್ ಆತುರಾತುರವಾಗಿ ವೈದ್ಯರ ಮನೆಗೆ ಹೊರಟು ವೈದ್ಯರನ್ನು ಕಂಡು, ‘ವೈದ್ಯರೇ ನನ್ನ ಪತ್ನಿ ಈ ದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ಕಾಯಿಲೆ ಬಿದ್ದಳು ಹಾಗೂ ನಿಮ್ಮನ್ನು ಕರೆದುಕೊಂಡು ಬರಲು ಹೇಳಿದಳು. ನಾನು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಕಾಯಿಲೆ ವಾಸಿಯಾದಂತಿದೆ, ವೈದ್ಯರನ್ನು ಕರೆದುಕೊಂಡುಬರುವುದು ಬೇಡವೆಂದಳು. ಹಾಗಾಗಿ ನೀವು ನನ್ನ ಮನೆಗೆ ಬರುವುದು ಬೇಡ’ ಎಂದು ಹೇಳಿದ.




1 ಕಾಮೆಂಟ್‌:

Prashanth ಹೇಳಿದರು...

ಚೆನ್ನಾಗಿದೆ ಸರ್..