Monday, July 06, 2015

ಜಿದ್ದು ಕೃಷ್ಣಮೂರ್ತಿ ಚಿಂತನೆ- ಬಹುಪಾಲು ಮನುಷ್ಯರೆಲ್ಲ ಸ್ವಾರ್ಥಿಗಳು - 1

ನಾನು 10 ವರ್ಷಗಳ ಹಿಂದೆ ಕೃಷ್ಣಮೂರ್ತಿ ಫೌಂಡೇಶನ್ ಗೆ ಜಿದ್ದು ಕೃಷ್ಣಮೂರ್ತಿಯವರ ಲೇಖನಗಳನ್ನು ಅನುವಾದಿಸಿಕೊಟ್ಟಿದ್ದೆ. ಅವು ಪತ್ರಿಕೆಯ ರೂಪದಲ್ಲಿ ಆರು ತಿಂಗಳು ಪ್ರಕಟವಾದುವು.

`ಬಹುಪಾಲು ಮನುಷ್ಯರೆಲ್ಲ ಸ್ವಾರ್ಥಿಗಳು. ತಮ್ಮ ಸ್ವಾರ್ಥತೆಯ ಬಗೆಗೆ ಅವರಿಗೇ ಅರಿವಿರುವುದಿಲ್ಲ; ಅದು ಅವರ ಬದುಕಿನ ಒಂದು ರೀತಿಯೇ ಆಗಿರುತ್ತದೆ. ತಮ್ಮ ಸ್ವಾರ್ಥತೆಯ ಬಗೆಗೆ ಯಾರಿಗಾದರೂ ಅರಿವಿದ್ದಲ್ಲಿ, ಆತ/ಆಕೆ ಅದನ್ನು ಬಹಳ ಎಚ್ಚರದಿಂದ ಗೋಪ್ಯವಾಗಿಟ್ಟು ಮೂಲಭೂತವಾಗಿ ಸ್ವಾರ್ಥವಾಗಿರುವ ಸಮಾಜದ ಸ್ವರೂಪಕ್ಕೆ ಅನುರೂಪವಾಗಿರುವಂತೆ ನಡೆದುಕೊಳ್ಳುತ್ತಾರೆ. ಸ್ವಾರ್ಥಭರಿತ ಮನಸ್ಸು ಬಹಳ ಕುಯುಕ್ತಿಯದಾಗಿರುತ್ತದೆ. ಅದು ಕ್ರೂರ ಅಥವಾ ಮುಕ್ತವಾಗಿಯೇ ಸ್ವಾರ್ಥವಾಗಿರುತ್ತದೆ ಅಥವಾ ಹಲವಾರು ರೂಪಗಳನ್ನು ಪಡೆಯುತ್ತದೆ. ನೀವು ರಾಜಕಾರಣಿಯಾಗಿದ್ದಲ್ಲಿ ಸ್ವಾರ್ಥತೆ ಅಧಿಕಾರ, ಅಂತಸ್ತು, ಜನಪ್ರಿಯತೆಯನ್ನು ಅರಸುತ್ತದೆ; ಅದು ಸಾರ್ವಜನಿಕ ಹಿತಾಸಕ್ತಿಯ ಸೋಗಿನ ವಿಚಾರದೊಂದಿಗೋ ಅಥವಾ ಧ್ಯೇಯದೊಂದಿಗೋ ತನ್ನನ್ನು ತಾನು ಗುರುತಿಸಿಕೊಳ್ಳುತ್ತದೆ. ನೀವೊಬ್ಬ ನಿರಂಕುಶ ಪ್ರಭುವಾಗಿದ್ದಲ್ಲಿ ಅದು ಕ್ರೌರ್ಯದ ಮೇಲುಗೈ ಸಾಧಿಸುವಲ್ಲಿ ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತದೆ. ನೀವು ಧಾರ್ಮಿಕ ಒಲವು ತೋರಿಸುವವರಾದಲ್ಲಿ ಅದು ಆರಾಧನೆಯ, ಭಕ್ತಿಯ, ಯಾವುದಾದರೂ ನಂಬಿಕೆಯ ಅಥವಾ ಸಿದ್ಧಾಂತದ ಹಿಂಬಾಲಕರ ರೂಪ ಪಡೆಯುತ್ತದೆ. ಅದು ಕುಟುಂಬದಲ್ಲೂ ವ್ಯಕ್ತಗೊಳ್ಳುತ್ತದೆ; ತಂದೆ ತನ್ನ ಬದುಕಿನ ಎಲ್ಲದರಲ್ಲೂ ತನ್ನ ಸ್ವಾರ್ಥತೆಯನ್ನೇ ಅರಸುತ್ತಾನೆ ಹಾಗೂ ಅದೇ ರೀತಿ ತಾಯಿಯೂ ಸಹ ತನ್ನ ಸ್ವಾರ್ಥತೆಯನ್ನೇ ಅರಸುತ್ತಾಳೆ. ಖ್ಯಾತಿ, ಸಿರಿ ಸಮೃದ್ಧತೆ, ಸೌಂದರ್ಯಗಳು ಈ ರೀತಿಯ ಸ್ವಾರ್ಥದ ಗೋಪ್ಯ ತೆವಳುಚಲನೆಗೆ ಆಧಾರವಾಗುತ್ತವೆ. ದೇವರ ಮೇಲಿನ ತಮ್ಮ ಪ್ರೀತಿಯ ಬಗೆಗೆ ಹಾಗೂ ತಮ್ಮ ಸ್ವ-ರಚಿತ ರೂಪದ ನಿರ್ದಿಷ್ಟ ದೇವರ ಬಗೆಗಿನ ಶ್ರದ್ಧೆಯ ಬಗೆಗೆ ಎಷ್ಟೇ ಹೇಳಿಕೊಂಡರೂ ಸಹ ಇದು ಪೌರೋಹಿತ್ಯಶಾಹಿಯ ಶ್ರೇಣಿವರ್ಗದಲ್ಲಿಯೂ ಇದೆ. ಕೈಗಾರಿಕೋದ್ಯಮದ ನಾಯಕರಲ್ಲಿ ಹಾಗೂ ಬಡ ಗುಮಾಸ್ತನಲ್ಲಿಯೂ ಸಹ ವಿಸ್ತøತಗೊಳ್ಳುತ್ತಿರುವ ಮತ್ತು ಮರಗಟ್ಟಿಸುವ ಸ್ವಾರ್ಥದ ಲಾಲಸೆ ಇದೆ. ಜಗತ್ತಿನ ಆಚರಣೆಗಳನ್ನು ಪರಿತ್ಯಾಗ ಮಾಡಿರುವ ಸಂನ್ಯಾಸಿ ಜಗತ್ತಿನಲ್ಲೆಲ್ಲಾ ಅಲೆದಾಡಬಹುದು ಅಥವಾ ಯಾವುದೋ ಆಶ್ರಮದ ಮೂಲೆಯಲ್ಲಿ ಸ್ವಯಂ-ಬಂಧಿತನಾಗಿ ಇರಬಹುದು, ಆದರೆ ತಾನು ಎಂಬ ನಿರಂತರ ಚಲನೆಯ ಮನೋಭಾವವನ್ನು ತ್ಯಜಿಸಿರುವುದಿಲ್ಲ. ಅವರು ತಮ್ಮ ಹೆಸರುಗಳನ್ನು ಬದಲಿಸಿಕೊಳ್ಳಬಹುದು, ಇತರ ವಸ್ತ್ರಗಳನ್ನು ಧರಿಸಬಹುದು ಅಥವಾ ಬ್ರಹ್ಮಚರ್ಯ ಅಥವಾ ಮೌನದ ಶಪಥ ಮಾಡಬಹುದು, ಆದರೆ ಅವರು ಎಂಥದೋ ಆದರ್ಶದ, ಯಾವುದೋ ಆಕೃತಿಯ, ಲಾಂಛನದ ಜ್ವಾಲೆಯಲ್ಲಿ ಬೇಯುತ್ತಿರುತ್ತಾರೆ. ಇದು ವಿಜ್ಞಾನಿಗಳಲ್ಲಿ, ತತ್ವಜ್ಞಾನಿಗಳಲ್ಲಿ ಹಾಗೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಲ್ಲಿಯೂ ಹೀಗೇ ಆಗಿರುತ್ತದೆ. ಉತ್ತಮ ಕಾರ್ಯಗಳಲ್ಲಿ ತೊಡಗಿರುವವರು, ಸಂತರು ಮತ್ತು ಗುರುಗಳು, ಬಡವರಿಗಾಗಿ ನಿರಂತರವಾಗಿ ಶ್ರಮಿಸುವ ಪುರುಷ ಮತ್ತು ಸ್ತ್ರೀಯರು- ತಮ್ಮ ಕಾರ್ಯಗಳಲ್ಲಿ ತಮ್ಮನ್ನೇ ಕಳೆದುಕೊಳ್ಳಲು ಪ್ರಯತ್ನಿಸುತ್ತಾರೆ ಆದರೆ ಅವರ ಕೆಲಸವೂ ಅದರ ಒಂದು ಭಾಗವಾಗಿರುತ್ತದೆ. ಅವರೆಲ್ಲ ತಮ್ಮ ಅಹಂಕಾರವನ್ನು ತಮ್ಮ ಶ್ರಮಕ್ಕೆ ವರ್ಗಾಯಿಸಿರುತ್ತಾರೆ. ಅದು ಬಾಲ್ಯದಲ್ಲೇ ಪ್ರಾರಂಭವಾಗಿ ಅವರ ಮುದಿವಯಸ್ಸಿಗೂ ಮುಂದುವರೆಯುತ್ತದೆ. ಜ್ಞಾನದ ಹಮ್ಮಿನ, ತೋರಿಕೆಯ ವಿನಯಶೀಲತೆಯ ನಾಯಕ, ಶರಣಾಗುವ ಹಾಗೂ ಪ್ರಬಲತೆ ಸಾಧಿಸುವ ವ್ಯಕ್ತಿ, ಎಲ್ಲರಲ್ಲೂ ಈ ಕಾಯಿಲೆ ಕಂಡುಬರುತ್ತದೆ. ತಾನು, ತನಗೆ ಎನ್ನುವ ಮನೋಭಾವ ಸರ್ಕಾರದೊಂದಿಗೆ, ಅಸಂಖ್ಯಾತ ಸಂಖ್ಯೆಯ ಗುಂಪುಗಳೊಂದಿಗೆ, ಅಸಂಖ್ಯಾತ ಸಂಖ್ಯೆಯ ವಿಚಾರಗಳೊಂದಿಗೆ ಹಾಗೂ ಉದ್ದೇಶಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತದೆ, ಆದರೆ ಅದು ಮೊದಲು ತಾನು ಏನಾಗಿತ್ತೊ ಅದೇ ಆಗಿ ಉಳಿದಿರುತ್ತದೆ.

No comments: