ಸೋಮವಾರ, ಜುಲೈ 20, 2015

ಜಿದ್ದು ಕೃಷ್ಣಮೂರ್ತಿ ಚಿಂತನೆ - 3: ನಾವು ಸದಾ ಭೀತಿಯಲ್ಲಿ ಬದುಕುತ್ತಿದ್ದೇವೆ

ನಾನು 10 ವರ್ಷಗಳ ಹಿಂದೆ ಕೃಷ್ಣಮೂರ್ತಿ ಫೌಂಡೇಶನ್ ಗೆ ಜಿದ್ದು ಕೃಷ್ಣಮೂರ್ತಿಯವರ ಲೇಖನಗಳನ್ನು ಅನುವಾದಿಸಿಕೊಟ್ಟಿದ್ದೆ. ಅವು ಪತ್ರಿಕೆಯ ರೂಪದಲ್ಲಿ ಆರು ತಿಂಗಳು ಪ್ರಕಟವಾದುವು. ಅವು ಇಲ್ಲಿವೆ:


ಪ್ರಶ್ನೆ: ನಾವು ಸದಾ ಯುದ್ಧದ ಹೆದರಿಕೆಯಲ್ಲಿ, ಉದ್ಯೋಗವಿದ್ದಲ್ಲಿ ಅದನ್ನು ಕಳೆದುಕೊಳ್ಳುವ ಹೆದರಿಕೆಯಲ್ಲಿ, ಭಯೋತ್ಪಾದಕತೆಯ ಹೆದರಿಕೆಯಲ್ಲಿ, ನಮ್ಮ ಮಕ್ಕಳ ಹಿಂಸೆಯ ಹೆದರಿಕೆಯಲ್ಲಿ, ಅವಿವೇಕಿ ರಾಜಕಾರಣಿಗಳ ಕೃಪಾಶ್ರಯದಲ್ಲಿರಬೇಕಾದ ಹೆದರಿಕೆಯಲ್ಲಿ ಬದುಕುತ್ತಿದ್ದೇವೆ. ಈ ದಿನ ನಿತ್ಯದ ಬದುಕನ್ನು ಅದು ಇರುವಂತೆಯೇ ನಡೆಸುವುದು ಹೇಗೆ?

ಕೃಷ್ಣಮೂರ್ತಿ: ನಡೆಸುವುದು ಹೇಗೆ? ಈ ಜಗತ್ತು ದಿನೇ ದಿನೇ ಹೆಚ್ಚೆಚ್ಚು ಹಿಂಸಾತ್ಮಕವಾಗುತ್ತಿರುವುದನ್ನು ನಾವೆಲ್ಲಾ ಸ್ವೀಕರಿಸಲೇಬೇಕಾಗಿದೆ - ಬೇರೆ ದಾರಿಯೇ ಇಲ್ಲ. ಯುದ್ಧದ ಭೀತಿ ಕಣ್ಣೆದುರೇ ಕಾಡುತ್ತಿರುವುದು ವಾಸ್ತವವಿರುವಂತೆ ನಮ್ಮ ಮಕ್ಕಳು ಹೆಚ್ಚೆಚ್ಚು ಹಿಂಸಾತ್ಮಕವಾಗುತ್ತಿರುವ ವಿಚಿತ್ರ ವರ್ತನೆಯೂ ವಾಸ್ತವವಾದದ್ದೆ. ತಾಯಿಯೊಬ್ಬರು ಕೆಲಸಮಯದ ಹಿಂದೆ ನಮ್ಮನ್ನು ನೋಡಲು ಬರುತ್ತಿದ್ದುದು ನೆನಪಾಗುತ್ತದೆ. ಭಾರತೀಯ ಸಂಪ್ರದಾಯದಲ್ಲಿ ತಾಯಿಯರಿಗೆ ಅತ್ಯಂತ ಗೌರವಯುತ ಸ್ಥಾನವಿದೆ, ಆದರೆ ಈ ತಾಯಿ ಹೆದರಿಕೆಯ ಆಘಾತಕ್ಕೊಳಗಾಗಿದ್ದಳು, ಏಕೆಂದರೆ ಆಕೆಯ ಮಕ್ಕಳೇ ಆಕೆಯನ್ನು ಹೊಡೆದಿದ್ದರು - ಭಾರತದಲ್ಲಿ ಇಂತಹ ಘಟನೆಗಳೇ ತೀರಾ ಅಪರೂಪ. ಈ ಹಿಂಸೆ ಜಗತ್ತಿನಾದ್ಯಂತ ಹರಡುತ್ತಿದೆ. ಪ್ರಶ್ನಿಸಿರುವವರು ಕೇಳಿರುವಂತೆ, ಉದ್ಯೋಗ ಕಳೆದುಕೊಳ್ಳುವ ಹೆದರಿಕೆಯೂ ಇದೆ. ಈ ಎಲ್ಲವನ್ನೂ ಎದುರಿಸಿ ದಿನ ನಿತ್ಯದ ಬದುಕನ್ನು ಅದು ಇರುವಂತೆಯೇ ನಡೆಸುವುದು ಹೇಗೆ?

         ನನಗಂತೂ ಗೊತ್ತಿಲ್ಲ. ನನ್ನ ಸ್ವಂತ ಬದುಕನ್ನು ಎದುರಿಸಿ ನಡೆಸುವುದು ಹೇಗೆಂದು ನನಗೆ ಗೊತ್ತಿದೆ, ಆದರೆ ನೀವು ಹೇಗೆ ಎದುರಿಸುವಿರೆಂಬುದು ನನಗೆ ತಿಳಿದಿಲ್ಲ. ಮೊದಲಿಗೆ, ಬದುಕೆಂದರೆ ಏನು, ಈ ಜಗತ್ತಿನಲ್ಲಿ ದುಃಖಭರಿತವಾಗಿರುವ, ಜನಸಂಖ್ಯೆ ಮಿತಿಮೀರಿರುವ, ಅವಿವೇಕಿ ರಾಜಕಾರಣಿಗಳ, ಎಲ್ಲ ಮೋಸ, ಅಪ್ರಾಮಾಣಿಕತೆ, ಲಂಚಕೋರತನಗಳ ನಡುವೆ ಈ ಅಸ್ತಿತ್ವವೆಂದರೆ ಏನು? ಈ ಬದುಕನ್ನು ಎದುರಿಸುವುದು ಹೇಗೆ? ಬದುಕುವುದೆಂದರೇನೆಂದು ಮೊದಲಿಗೆ ಖಂಡಿತವಾಗಿ ವಿಚಾರಣೆ ನಡೆಸಬೇಕು. ಈ ಜಗತ್ತು ಇರುವ ರೀತಿಯಲ್ಲಿಯೇ ಹಾಗೇ ಬದುಕುವುದೆಂದರೇನು? ನಾವು ದಿನನಿತ್ಯದ ಬದುಕನ್ನು ಹೇಗೆ ನಡೆಸುತ್ತೇವೆ, ಸೈದ್ಧಾಂತಿಕವಾಗಿ ಅಲ್ಲ, ತತ್ವಶಾಸ್ತ್ರಾಧಾರಿತವಾಗಿ ಅಲ್ಲ ಅಥವಾ ಆದರ್ಶಪ್ರಾಯವಾಗಿ ಅಲ್ಲ ಆದರೆ ವಾಸ್ತವಾಗಿ ಹೇಗೆ ಬದುಕು ನಡೆಸುತ್ತೇವೆ? ನಾವು ಅದನ್ನು ಪರಿಶೀಲಿಸಿದಲ್ಲಿ ಅಥವಾ ಅದು ತೀವ್ರವಾಗಿ ನಮ್ಮ ಅರಿವಿಗೆ ಬಂದಿದ್ದಲ್ಲಿ- ಅದು ಒಂದು ನಿರಂತರ ಯುದ್ಧ, ನಿರಂತರ ಹೋರಾಟ, ಪ್ರಯತ್ನದ ನಂತರ ಪ್ರಯತ್ನ. ಮುಂಜಾನೆ ಎದ್ದೇಳುವುದೂ ಒಂದು ಪ್ರಯತ್ನವೆ. ಏನು ಮಾಡುವುದು? ನಾವು ಅದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಈ ಜಗತ್ತಿನಲ್ಲಿ ಬದುಕುವುದು ಸಾಧ್ಯವೇ ಇಲ್ಲವೆಂದು ಹೇಳುವಂತಹ ಹಲವಾರು ಮಂದಿ ಎಲ್ಲರಿಗೂ ತಿಳಿದಿರುತ್ತಾರೆ, ಅಂತಹ ಮಂದಿ ಹಿಮಾಲಯ ಪರ್ವತಗಳ ಮೊರೆ ಹೊಕ್ಕು ಕಣ್ಮರೆಯಾಗುತ್ತಾರೆ. ಅದು ಒಂದು ರೀತಿಯ ನಿವಾರಣೆಯಷ್ಟೇ, ವಾಸ್ತವತೆಯಿಂದ ತಪ್ಪಿಸಿಕೊಳ್ಳುವ ವಿಧಾನ, ಸತ್ಸಂಗದಲ್ಲಿಯೋ ಅಥವಾ ಸಾಕಷ್ಟು ಆಸ್ತಿ ಹೊಂದಿರುವ ಗುರುವಿನ ಆಶ್ರಯದಲ್ಲಿಯೋ ಕಳೆದುಹೋಗುವಂತೆ. ಅಂತಹ ಜನ, ದಿನನಿತ್ಯದ ಸಮಸ್ಯೆಗಳನ್ನು ಖಂಡಿತವಾಗಿಯೂ ಪರಿಹರಿಸುವುದಿಲ್ಲ, ಅಥವಾ ಬದಲಾವಣೆಯನ್ನೋ, ಸಮಾಜದ ಮಾನಸಿಕ ಕ್ರಾಂತಿಯನ್ನೋ ಪರಿಶೀಲಿಸುವುದಿಲ್ಲ. ಅವರು ಈ ಎಲ್ಲವುಗಳಿಂದ ತಪ್ಪಿಸಿಕೊಳ್ಳುತ್ತಾರೆ. ಆದರೆ ನಾವು, ತಪ್ಪಿಸಿಕೊಳ್ಳದ ಮತ್ತು ಈ ಜಗತ್ತು ಇರುವ ರೀತಿಯಲ್ಲಿಯೇ ಅದರಲ್ಲಿ ಬದುಕುತ್ತಿರುವಂತಹ ನಾವು ಏನು ಮಾಡಬೇಕು? ನಮ್ಮ ಬದುಕನ್ನು ಬದಲಿಸಿಕೊಳ್ಳಲು ಸಾಧ್ಯವೆ? ಸಂಘರ್ಷವೇ ಹಿಂಸೆಯ ಭಾಗವಾಗಿರುವುದರಿಂದ ನಮ್ಮ ಬದುಕಿನಲ್ಲಿ ಸಂಘರ್ಷವೇ ಇಲ್ಲದಂತೆ ಮಾಡಿಕೊಳ್ಳುವುದೆ? ಅದು ಸಾಧ್ಯವೆ? ಏನಾದರೊಂದು ಆಗಬೇಕೆನ್ನುವ ಈ ನಿರಂತರ ಹೋರಾಟವೇ ನಮ್ಮ ಬದುಕಿನ ಮೂಲಾಧಾರ, ಹೋರಾಟ ಮಾಡಬೇಕೆನ್ನುವ ಹೋರಾಟ. ಮಾನವರಂತೆ ಈ ಜಗತ್ತಿನಲ್ಲಿ ಬದುಕುತ್ತಿರುವ ನಾವು ನಮ್ಮನ್ನು ಬದಲಿಸಿಕೊಳ್ಳಲು ಸಾಧ್ಯವೆ? ಅಮೂಲಾಗ್ರವಾಗಿ, ನಮ್ಮನ್ನು ಮಾನಸಿಕವಾಗಿ ರೂಪಾಂತರಗೊಳಿಸಿಕೊಳ್ಳಲು ಸಾಧ್ಯವೆ? ಕ್ರಮೇಣವಾಗಲ್ಲ, ಯಾವುದೇ ಸಮಯವನ್ನು ಕೋರಿಯೂ ಅಲ್ಲ- ಅದು ನಮ್ಮೆದುರು ಇರುವ ಪ್ರಶ್ನೆ. 
ಒಬ್ಬ ಗಂಭೀರ ವ್ಯಕ್ತಿಗೆ, ವಾಸ್ತವವಾಗಿ ಧಾರ್ಮಿಕವಾಗಿರುವ ವ್ಯಕ್ತಿಗೆ, ನಾಳೆ ಎಂಬುದು ಇರುವುದಿಲ್ಲ. ಈ ರೀತಿ ನಾಳೆಯಿಲ್ಲ ಎನ್ನುವುದು ಒಂದು ಕಠಿಣವಾದ ಮಾತೇ; ಇಂದಿನ ದಿನವನ್ನು ಪೂಜಿಸುವವರು ಶ್ರೀಮಂತರು ಮಾತ್ರ. ಈ ಬದುಕನ್ನು ನಾವು ಸಂಪೂರ್ಣವಾಗಿ ಬದುಕಲು, ಮತ್ತು ಪ್ರತಿಯೊಬ್ಬರೊಂದಿಗಿನ ಸಂಬಂಧಗಳನ್ನು ದಿನನಿತ್ಯವೂ, ವಾಸ್ತವವಾಗಿ ರೂಪಾಂತರಗೊಳಿಸಿಕೊಳ್ಳಲು ಸಾಧ್ಯವೆ? ಅದೇ ಮುಖ್ಯವಾದ ವಿಷಯವೇ ಹೊರತು ಜಗತ್ತಲ್ಲ, ಏಕೆಂದರೆ ನಾವೇ ಜಗತ್ತು. ದಯವಿಟ್ಟು ಇದನ್ನು ಗಮನಿಸಿ: ಈ ಜಗತ್ತು ನೀವು ಮತ್ತು ನೀವೇ ಈ ಜಗತ್ತು. ಇದು ಒಂದು ಕಠೋರ ಸತ್ಯ, ಸಂಪೂರ್ಣವಾಗಿ ಎದುರಿಸಬೇಕಾದ ಸವಾಲು - ಅಂದರೆ, ಈ ಕುರೂಪ ಜಗತ್ತು ನಾವೇ ಎನ್ನುವುದನ್ನು ಮನವರಿಕೆಮಾಡಿಕೊಳ್ಳುವುದು, ಇದಕ್ಕೆಲ್ಲ ನಮ್ಮ ಕೊಡುಗೆಯೂ ಇದೆಯೆಂದು ತಿಳಿಯುವುದು, ಇದಕ್ಕೆಲ್ಲ ನಾವೇ ಕಾರಣವೆಂದು ಅರಿತುಕೊಳ್ಳುವುದು, ಮಧ್ಯಪ್ರಾಚ್ಯದಲ್ಲಿ, ಆಫ್ರಿಕಾದಲ್ಲಿ ನಡೆಯುತ್ತಿರುವ ಎಲ್ಲ ಅವಿವೇಕಿ ಕೃತ್ಯಗಳಿಗೆ ನಾವೇ ಕಾರಣವೆಂಬ ಸತ್ಯವನ್ನು ಅರಿತುಕೊಳ್ಳುವುದು. ನಮ್ಮ ತಾತ ಮುತ್ತಾತಂದಿರ ಕೃತ್ಯಗಳಿಗೆ - ಗುಲಾಮಗಿರಿಗೆ, ಸಾವಿರಾರು ಯುದ್ಧಗಳಿಗೆ, ಸಾಮ್ರಾಜ್ಯಗಳ ಕ್ರೌರ್ಯಕ್ಕೆ ನಾವು ಕಾರಣವಾಗಿಲ್ಲದಿರಬಹುದು - ಆದರೆ ನಾವು ಅದರ ಒಂದು ಭಾಗವೇ ಆಗಿದ್ದೇವೆ. ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳದಿದ್ದಲ್ಲಿ, ಅಂದರೆ ನಾವು ಮಾಡುವ ಕಾರ್ಯಗಳಿಗೆ, ನಮ್ಮ ಆಲೋಚನೆಗಳಿಗೆ, ನಮ್ಮ ನಡತೆಗೆ ನಾವು ಸಂಪೂರ್ಣ ಜವಾಬ್ದಾರರಾಗದಿದ್ದಲ್ಲಿ ಈ ಜಗತ್ತು ಇರುವ ರೀತಿಯಲ್ಲಿ ನಾವು ಒಬ್ಬಂಟಿಯಾಗಿ, ಪ್ರತ್ಯೇಕವಾಗಿ ಈ ಭಯೋತ್ಪಾದನೆಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲವೆಂಬ ಹತಾಶೆಗೆ ಒಳಗಾಗುತ್ತೇವೆ. ನಾಗರಿಕರನ್ನು ಸುರಕ್ಷಿತವಾಗಿಡುವ, ರಕ್ಷಿಸುವ ಹೊಣೆ ಸರ್ಕಾರದ್ದು, ಆದರೆ ಅವರು ಅದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಪ್ರತಿ ಸರ್ಕಾರವೂ ತನ್ನದೇ ಜನಗಳನ್ನು ರಕ್ಷಿಸುವ ಕಾಳಜಿ ಹೊಂದಿದ್ದಲ್ಲಿ ಯುದ್ಧಗಳೇ ನಡೆಯುವುದಿಲ್ಲ. ಆದರೆ ಸರ್ಕಾರವು ತನ್ನ ವಿವೇಕವನ್ನು ಕಳೆದುಕೊಂಡಿದೆ, ಅವು ಪಕ್ಷ ರಾಜಕೀಯಗಳ ಬಗ್ಗೆ, ತಮ್ಮದೇ ಅಧಿಕಾರ, ಸ್ಥಾನಮಾನಗಳ ಬಗ್ಗೆ ತಲೆಕೆಡಿಸಿಕೊಂಡಿವೆ- ನಿಮಗೆ ಈ ಎಲ್ಲ ಆಟಗಳ ಬಗ್ಗೆ ತಿಳಿದೇ ಇದೆ. 

ಹಾಗಾಗಿ ನಾವು, ಸಮಯವನ್ನು ಅಂದರೆ ನಾಳೆ, ಭವಿಷ್ಯವನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಈ ದಿನವೇ ಅತಿ ಮುಖ್ಯವಾದುದೆಂದು ಬದಕಲು ಸಾಧ್ಯವಿಲ್ಲವೆ? ಅಂದರೆ, ನಾವು ನಮ್ಮ ಪ್ರತಿಕ್ರಿಯೆಗಳಿಗೆ, ನಮ್ಮ ಗೊಂದಲಗಳಿಗೆ ಅಸಾಧಾರಣವಾಗಿ ಎಚ್ಚರವಾಗಿರಬೇಕು - ನಮ್ಮ ಬಗ್ಗೆಯೇ ಅಗಾಧವಾಗಿ ಕಾರ್ಯನಿರತರಾಗಬೇಕು. ಗೋಚರವಾಗುವಂತೆ ನಾವು ಅದನ್ನು ಮಾತ್ರ ಮಾಡಲು ಸಾಧ್ಯ ಹಾಗೂ ನಾವದನ್ನು ನೆರವೇರಿಸದಿದ್ದಲ್ಲಿ ಮನುಕುಲಕ್ಕೆ ಭವಿಷ್ಯವೇ ಇಲ್ಲ. ವಾರ್ತಾಪತ್ರಿಕೆಗಳಲ್ಲಿನ ಶೀರ್ಷಿಕೆಗಳನ್ನು ನೀವು ಗಮನಿಸಿರಬೇಕು- ಯುದ್ಧದ ಸಿದ್ಧತೆಗಳ ಸುದ್ದಿಯನ್ನು. ನೀವು ಯಾವುದಕ್ಕಾದರೂ ಸಿದ್ಧತೆ ನಡೆಸುತ್ತಿದ್ದಲ್ಲಿ, ನೀವದನ್ನು ಪಡೆದೇ ಪಡೆಯುತ್ತೀರಿ- ಒಂದು ಅತ್ಯುತ್ತಮ ಅಡುಗೆ ತಯಾರಿಸುವ ಹಾಗೆ. ಈ ಜಗತ್ತಿನ ಸಾಮಾನ್ಯ ಜನ ಇದನ್ನೆಲ್ಲ ಗಮನಿಸುವಂತೆ ತೋರುವುದಿಲ್ಲ. ಯುದ್ಧಾಸ್ತ್ರಗಳ ತಯಾರಿಕೆಯಲ್ಲಿ ಬೌದ್ಧಿಕವಾಗಿ ಹಾಗೂ ವೈಜ್ಞಾನಿಕವಾಗಿ ತೊಡಗಿಕೊಂಡಿರುವಂತಹವರೂ ಸಹ ತಲೆಕೆಡಿಸಿಕೊಳ್ಳುವುದಿಲ್ಲ. ಅವರೆಲ್ಲಾ ತಮ್ಮ ವೃತ್ತಿಜೀವನದ ಬಗೆಗೆ, ಉದ್ಯೋಗಗಳ ಬಗೆಗೆ, ತಮ್ಮ ಸಂಶೋಧನೆಗಳ ಬಗೆಗೆ ಆಸಕ್ತರಾಗಿರುತ್ತಾರೆ; ಆದರೆ ನಮ್ಮಂತಹ ಸಾಧಾರಣ ಜನ, ಮಧ್ಯಮವರ್ಗದವರೆನ್ನಿಸಿಕೊಳ್ಳುವವರು, ನಾವೇನಾದರೂ ತಲೆಕೆಡಿಸಿಕೊಳ್ಳದಿದ್ದಲ್ಲಿ ತೊಂದರೆಗೆ ಸಿಲುಕಿಕೊಳ್ಳುತ್ತೇವೆ. ದುರಂತವೆಂದರೆ ನಾವೂ ಸಹ ನಿರ್ವಿಗ್ನರಾಗಿದ್ದೇವೆ. ನಾವು ಒಂದುಗೂಡುವುದಿಲ್ಲ, ಒಂದಾಗಿ ಆಲೋಚಿಸುವುದಿಲ್ಲ ಹಾಗೂ ಒಂದಾಗಿ ಕಾರ್ಯನಿರ್ವಹಿಸುವುದಿಲ್ಲ. ನಾವೆಲ್ಲ ಸಂಘ ಸಂಸ್ಥೆಗಳಿಗೆ ಸೇರಲು ಉತ್ಸುಕರಾಗಿದ್ದೇವೆ ಹಾಗೂ ಅವರು ಯುದ್ಧಗಳನ್ನು ತಡೆಯುತ್ತಾರೆ ಮತ್ತು ನಾವು ಪರಸ್ಪರ ಕೊಂದುಕೊಳ್ಳುವುದನ್ನು ತಡೆಯುವರೆಂಬ ಭರವಸೆ ಉಳ್ಳವರಾಗಿರುತ್ತೇವೆ. ಆದರೆ ಅವರೆಂದೂ ಆ ಕಾರ್ಯನಿರ್ವಹಿಸಿಲ್ಲ. ಸಂಘ ಸಂಸ್ಥೆಗಳು ಇಂಥವನ್ನೆಂದೂ ತಡೆಯುವುದಿಲ್ಲ. ಇಲ್ಲಿ ತೊಡಗಿರುವುದು ಮಾನವ ಹೃದಯಗಳು ಮತ್ತು ಮಾನವ ಮನಸ್ಸುಗಳು. ದಯವಿಟ್ಟು, ನಾವಿಲ್ಲಿ ವಾಕ್ಚಾತುರ್ಯ ಮೆರೆಸುತ್ತಿಲ್ಲ; ನಾವು ಒಂದು ಅತ್ಯಂತ ಅಪಾಯಕಾರಿಯಾದುದನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ತೊಡಗಿರುವಂತಹ ಕೆಲವು ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಿದ್ದೇವೆ, ಅವರು ಯಾವುದೇ ರೀತಿಯಲ್ಲಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ ನಾವು ಇದರ ಬಗ್ಗೆ ಗಮನ ಹರಿಸಿ ನಮ್ಮ ದೈನಂದಿನ ಬದುಕನ್ನು ಸರಿಯಾದ ಹಾದಿಯಲ್ಲಿ ನಡೆಸಿದಲ್ಲಿ ಹಾಗೂ ನಮ್ಮ ದಿನನಿತ್ಯದ ಕಾರ್ಯದ ಬಗ್ಗೆ ಅರಿವಿದ್ದಲ್ಲಿ, ಭವಿಷ್ಯದ ಬಗ್ಗೆ ಆಶಾದಾಯಕವಾಗಿರಬಹುದೆಂದು ನನಗನ್ನಿಸುತ್ತದೆ. 
ಬುಲೆಟಿನ್ 46, 1984ರಿಂದ

          ಹುಟ್ಟಿದಂದಿನಿಂದ ಸಾಯುವವರೆಗೂ ನಮ್ಮ ಬದುಕು ಒಂದು ರೀತಿಯ ನಿರಂತರ ಸಂಘರ್ಷಕ್ಕೊಳಗಾಗಿರುವುದರಿಂದ ನಾವು ಬಹುಪಾಲು ಜನ ಒಂದಲ್ಲ ಒಂದು ರೀತಿಯ ಸುರಕ್ಷತೆಯನ್ನು ಅರಸುತ್ತೇವೆ. ಬದುಕಿನಲ್ಲಿ ಬೇಸರ ಮತ್ತು ಆತಂಕ; ಹತಾಶೆ; ಪ್ರೀತಿಸಲ್ಪಡಬೇಕೆನ್ನುವ ಭಾವನೆ, ಆದರೆ ಯಾರೂ ಪ್ರೀತಿಸುತ್ತಿಲ್ಲವೆನ್ನುವ ನೋವು; ಹಗುರ ಮತ್ತು ಸಣ್ಣ ಬುದ್ಧಿ, ದಿನನಿತ್ಯದ ಜಂಜಾಟಗಳು- ಇವೇ ನಮ್ಮ ಬದುಕು. ಈ ಬದುಕಿನಲ್ಲಿ ಅಪಾಯವಿದೆ, ಆತಂಕವಿದೆ; ಯಾವುದೂ ಖಾತ್ರಿಯಲ್ಲ; ಸದಾ ನಾಳೆಯೆಂಬ ಅನಿಶ್ಚಿತತೆ ಇದ್ದೇ ಇರುತ್ತದೆ. ಆದುದರಿಂದ ನೀವು ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ಸದಾ ಸುರಕ್ಷಿತತೆಯನ್ನು ಅರಸುತ್ತಿರುತ್ತೀರಿ; ಒಂದು ಶಾಶ್ವತ ಅವಸ್ಥೆಯನ್ನು ಬಯಸುತ್ತೀರಿ, ಮೊದಲಿಗೆ ಮಾನಸಿಕವಾಗಿ, ನಂತರ ಬಾಹ್ಯವಾಗಿ- ಅದು ಸದಾ ಮೊದಲಿಗೆ ಮಾನಸಿಕವಾಗಿ, ಬಾಹ್ಯವಾಗಿ ಅಲ್ಲ. ಯಾವುದೇ ಹೆದರಿಕೆ, ಆತಂಕ, ಯಾವುದೇ ಅನಿಶ್ಚಿತತೆ, ಯಾವುದೇ ಪಾಪಪ್ರಜ್ಞೆಗಳು ಕಾಡದಂತಹ ಒಂದು ಶಾಶ್ವತ ಅವಸ್ಥೆಯನ್ನು ನೀವು ಬಯಸುತ್ತೀರಿ. ನಮ್ಮಲ್ಲಿ ಬಹಳಷ್ಟು ಮಂದಿ ಬಯಸುವುದೂ ಅದನ್ನೇ. ನಾವು ಬಾಹ್ಯದಲ್ಲಿ ಹಾಗೂ ಅಂತರಂಗದಲ್ಲೂ ಅದನ್ನೇ ಬಯಸುತ್ತೇವೆ. 

ಬಾಹ್ಯರೂಪದಲ್ಲಿ ನಾವು ಒಳ್ಳೆಯ ಉದ್ಯೋಗಗಳನ್ನು ಬಯಸುತ್ತೇವೆ; ನಾವು ಶಿಕ್ಷಿತರು, ತಾಂತ್ರಿಕವಾಗಿ, ಒಂದು ರೀತಿಯ ಅಧಿಕಾರದ ರೀತಿಯಲ್ಲಿ ಅಥವಾ ಮತ್ತಾವುದಾದರೂ ಆಗಬಹುದು, ಯಾಂತ್ರಿಕವಾಗಿ ಕಾರ್ಯನಿರ್ವಹಿಸಬಲ್ಲೆವು. ಆದರೆ ಆಂತರ್ಯದಲ್ಲಿ ನಾವು ಶಾಂತಿಯನ್ನು, ಒಂದು ರೀತಿಯ ನಿಶ್ಚಿತತೆಯನ್ನು ಹಾಗೂ ಶಾಶ್ವತತೆಯ ಪ್ರಜ್ಞೆಯನ್ನು ಬಯಸುತ್ತೇವೆ. ನಮ್ಮ ಎಲ್ಲ ಸಂಬಂಧಗಳಲ್ಲಿ, ನಮ್ಮೆಲ್ಲ ಕ್ರಿಯೆಗಳಲ್ಲಿ, ಅವು ಸರಿಯಾದರೂ ಆಗಿರಬಹುದು ಅಥವಾ ತಪ್ಪಾದರೂ ಆಗಿರಬಹುದು, ನಾವು ಸುರಕ್ಷಿತವಾಗಿರಲು ಬಯಸುತ್ತೇವೆ. ನಮಗೆ ಯಾರಾದರು ಹೇಳುತ್ತಿರಬೇಕು: ಇದು ಸರಿ, ಇದು ತಪ್ಪು; ಇದನ್ನು ಮಾಡಬೇಡ, ಇದನ್ನು ಮಾಡು ಎಂದು. ನಾವು ಒಂದು ನಿರ್ದಿಷ್ಟ ಹಾದಿಯನ್ನು ಅನುಸರಿಸುತ್ತೇವೆ, ಏಕೆಂದರೆ ನಮಗೆ ತಿಳಿದಂತೆ ಬದುಕಲು ಅದೇ ಸುರಕ್ಷಿತ ಮಾರ್ಗ- ಆ ಹಾದಿ ನಿಮ್ಮದೇ ಆಗಿರಬಹುದು ಅಥವಾ ಮತ್ತಾರದಾದರೂ ಆಗಿರಬಹುದು, ಸಮಾಜ ರೂಪಿಸಿರಬಹುದು, ಯಾರಾದರೂ ಗುರು ತೋರಿಸಿರಬಹುದು ಅಥವಾ ನಿಮ್ಮದೇ ಆದರ್ಶಗಳು ಮತ್ತು ಅನಿಸಿಕೆಗಳು ರೂಪಿಸಿರಬಹುದು.   ಹಾಗಾಗಿ ಬಾಹ್ಯ ಮತ್ತು ಆಂತರ್ಯ ಸುರಕ್ಷಿತತೆಗೆ ನಿರಂತರ ಬೇಡಿಕೆ ಇದೆ. ಆದರೆ, ಯಾವುದಾದರೂ ವಿಚಾರದ ಅಧಿಕಾರವಿದ್ದಲ್ಲಿ ಈ ಆಂತರಿಕ ಸುರಕ್ಷಿತತೆ ಹೆಚ್ಚು ಸಂಕೀರ್ಣವಾಗುತ್ತದೆ.

      ಇಲ್ಲಿ ವಿಚಾರವೆಂದಲ್ಲಿ ಅದು ಒಂದು ಆದರ್ಶವಾಗಿರಬಹುದು, ಒಂದು ವಿನ್ಯಾಸವಾಗಿರಬಹುದು, ಉದಾಹರಣೆಯಾಗಿರಬಹುದು, ಸೂತ್ರವಾಗಿರಬಹುದು ಅಥವಾ ಒಬ್ಬ ನಾಯಕನಾಗಿರಬಹುದು. ಅದು ಒಂದು ರೀತಿಯಲ್ಲಿ ಶಾಶ್ವತ, ಹಾಗೂ ನಾವು ಅದರೆಡೆಗೆ ನಡೆಯಲು ತೊಳಲಾಡುತ್ತಿದ್ದೇವೆ. ಹಾಗಾಗಿ ಏನಿದೆ ಮತ್ತು `ಏನಿರಬೇಕಾಗಿದೆ' ಎನ್ನುವುದರ ನಡುವೆ ಸದಾ ಅಂತರವಿರುವುದರಿಂದ ಸಂಘರ್ಷ ಉಂಟಾಗುತ್ತದೆ. ಮನಸ್ಸು ಸುರಕ್ಷಿತತೆಯನ್ನು ಅರಸುತ್ತಿರುವಾಗ ನಿಮ್ಮಲ್ಲಿ ಅಧಿಕಾರವಿರಬೇಕಾಗುತ್ತದೆ- ಅದು ಸಮಾಜದ ಅಧಿಕಾರವಾಗಬಹುದು, ಕಾನೂನಿನ, ಆದರ್ಶವೆಂದು ಸಮಾಜ ತೋರಿಸಿರುವುದಾಗಬಹುದು ಅಥವಾ ಯಾವುದು ಸರಿ ಯಾವುದು ತಪ್ಪು ಎಂದು ತೋರಿಸಿಕೊಡುವ ವ್ಯಕ್ತಿಯಾಗಬಹುದು. ಅಂತಿಮವಾಗಿ, ನಾವು ಅರಸುವ ಪರಿಪೂರ್ಣ ಸುರಕ್ಷತೆ ದೇವರಲ್ಲಿ ಕಂಡುಬರುತ್ತದೆ. ಶತಶತಮಾನಗಳಿಂದ ನಾವು ಇದೇ ಮಾದರಿಯಲ್ಲಿಯೇ ಬದುಕುತ್ತಾ ಬರುತ್ತಿದ್ದೇವೆ. 

          ... ದಯವಿಟ್ಟು, ನಾನು ಹೇಳಿದ್ದಂತೆ ಗಮನಿಸಿ, ನಿಮ್ಮ ಮನಸ್ಸನ್ನು, ನಿಮ್ಮದೇ ಬದುಕನ್ನು. ಬಹುಪಾಲು ನೀವೆಲ್ಲಾ ಅದರಲ್ಲೇ ಆಸಕ್ತರಾಗಿದ್ದೀರ- ಬಾಹ್ಯರೂಪದಲ್ಲಿ, ಸುರಕ್ಷತೆ: ಹಣ, ಸ್ಥಾನ, ಅಧಿಕಾರ, ಸುಖ; ಮತ್ತು ಆಂತರಿಕವಾಗಿ, ಎಲ್ಲ ಆತಂಕದಿಂದ ಬಿಡುಗಡೆ, ಎಲ್ಲ ಸಮಸ್ಯೆಗಳಿಂದ ಬಿಡುಗಡೆ, ಹತ್ತಿರವಿರುವ ಅಥವಾ ದೂರ ಇರಬಹುದಾದ ಅಪಾಯದಿಂದ ರಕ್ಷಣೆ ಇರುವ ಮಾನಸಿಕ ಸ್ಥಿತಿ. ಅದೇ ನಮ್ಮ ಬದುಕು. ಈ ಮಾದರಿಯ ಬದುಕನ್ನು ಸ್ವೀಕರಿಸಿದ್ದೇವೆ ಹಾಗೂ ಅದನ್ನು ಪ್ರಶ್ನಿಸುವ ಗೋಜಿಗೇ ಹೋಗಿಲ್ಲ. ನಮಗೆ ತೊಂದರೆಯಾದಾಗ, ನಾವು ಅದರಿಂದ ದೂರ ದೇವಾಲಯಗಳಿಗೆ ಅಥವಾ ತಪ್ಪಿಸಿಕೊಳ್ಳುವ ಇತರ ಮಾರ್ಗಗಳ ಮೂಲಕ ಓಡಿಹೋಗಲು ಪ್ರಯತ್ನಿಸುತ್ತೇವೆ. ನಾವು ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಎಂದೂ ಈ ರೀತಿಯ ಸುರಕ್ಷತೆ ಎನ್ನುವುದು ಇದೆಯೇ ಎನ್ನುವುದನ್ನು ಪ್ರಶ್ನಿಸುವುದಾಗಲೀ,  ಪರಿಶೀಲಿಸುವುದಾಗಲೀ ಮಾಡಿಲ್ಲ. ಈಗ ನಾವದನ್ನು ಪ್ರಶ್ನಿಸುತ್ತಿದ್ದೇವೆ. ನೀವದನ್ನು ಇಷ್ಟಪಡದಿರಬಹುದು, ನೀವದನ್ನು ಪ್ರತಿರೋಧಿಸಬಹುದು, ಏಕೆಂದರೆ ನಮಗೆ ಅಂತಹ ವಿಷಯಗಳನ್ನು ಎದುರಿಸುವ ಅಭ್ಯಾಸವಿಲ್ಲ, ನಮ್ಮನ್ನು ನಾವಿರುವ ರೀತಿಯಲ್ಲಿಯೇ ನೋಡಿಕೊಳ್ಳುವ ಅಭ್ಯಾಸವೂ ಇಲ್ಲ. ಬದಲಿಗೆ ನಾವು ಇಲ್ಲದ ವಸ್ತುಗಳನ್ನು ನೋಡಲು ಬಯಸುತ್ತೇವೆ, ಅಥವಾ ವಸ್ತುಗಳು ಇವೆಯೆಂದು ಊಹಿಸಿಕೊಳ್ಳುತ್ತೇವೆ. ಈಗ ನಾವು ವಾಸ್ತವವಾಗಿ `ಏನಿದೆ' ಎಂಬುದನ್ನು ನೋಡೋಣ.. 

ಮೊಟ್ಟಮೊದಲನೆಯದಾಗಿ, ನಮ್ಮ ಸಂಬಂಧಗಳಲ್ಲಿ, ನಮ್ಮ ಆತ್ಮೀಯತೆಯಲ್ಲಿ, ನಮ್ಮ ಆಲೋಚನೆಯ ಮಾದರಿಗಳಲ್ಲಿ ಆಂತರಿಕ ಸುರಕ್ಷಿತತೆ ಎನ್ನುವುದು ಇದೆಯೆ? ಪ್ರತಿಯೊಬ್ಬ ಮನುಷ್ಯ ಬಯಸುವ, ಆಶಿಸುವ ಮತ್ತು ತನ್ನ ಶ್ರದ್ಧೆಯನ್ನು ಇರಿಸಿರುವ ಅಂತಿಮ ವಾಸ್ತವತೆ ಎನ್ನುವುದು ಇದೆಯೆ? ನಿಮಗೆ ಸುರಕ್ಷತೆ ಬೇಕು ಎನಿಸಿದ ಕ್ಷಣವೇ, ನಿಮಗೆ ಸುರಕ್ಷತೆಯ ಭಾವನೆ ಒದಗಿಸುವ ದೇವರೊಬ್ಬರನ್ನು, ಒಂದು ವಿಚಾರವನ್ನು, ಒಂದು ಆದರ್ಶವನ್ನು ಅವಿಷ್ಕರಿಸುತ್ತೀರಾ; ಅದು ಸತ್ಯವಲ್ಲದೇ ಇರಬಹುದು- ಕೇವಲ ಒಂದು ವಿಚಾರ, ಒಂದು ಪ್ರತಿಕ್ರಿಯೆ, ಅನಿಶ್ಚತತೆಯ ವಾಸ್ತವಕ್ಕೆ ಕೇವಲ ಪ್ರತಿರೋಧವೂ ಆಗಿರಬಹುದು. ಹಾಗಾಗಿ ನಮ್ಮ ಬದುಕಿನ ಎಲ್ಲ ಹಂತಗಳಲ್ಲಿಯೂ ಸುರಕ್ಷಿತತೆ ಇದೆಯೇ ಎನ್ನುವ ಪ್ರಶ್ನೆಯನ್ನು ಪರಿಶೀಲಿಸಬೇಕಾಗಿದೆ. ಮೊದಲಿಗೆ, ಆಂತರಿಕವಾಗಿ ಯಾವುದೇ ಸುರಕ್ಷತೆ ಇಲ್ಲದಿದ್ದಲ್ಲಿ, ಹೊರ ಜಗತ್ತಿನೊಂದಿಗೆ ನಮ್ಮ ಸಂಬಂಧ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ; ಆಗ ನಮ್ಮನ್ನು ನಾವು ಯಾವುದೇ ಗುಂಪಿನೊಂದಿಗೆ, ಯಾವುದೇ ರಾಷ್ಟ್ರದೊಂದಿಗೆ ಅಥವಾ ಯಾವುದೇ ಕುಟುಂಬದೊಂದಿಗೂ ಸಹ ಗುರುತಿಸಿಕೊಳ್ಳದೇ ಇರಬಹುದು.

          ಹಾಗಾಗಿ, ನಾವು ಮೊದಲಿಗೆ ಈ ರೀತಿಯ ಶಾಶ್ವತತೆ ಇದೆಯೇ. `ಸುರಕ್ಷಿತ ಭಾವನೆ’ ಇದೆಯೇ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕು. ಅಂದರೆ, ನೀವು ಮತ್ತು ನಾವು ಸಂತೋಷವಾಗಿ, ಸುಲಭವಾಗಿ, ಯಾವುದೇ ಸಂಕೋಚವಿಲ್ಲದೆ ನಮ್ಮಂತರಂಗವನ್ನು ನಾವೇ ನೋಡಿಕೊಳ್ಳಬಹುದು. ಏಕೆಂದರೆ ನಾವು ಅಧಿಕಾರದಿಂದ ಬಂಧಿತರಾಗಿದ್ದೇವೆ- ಮತ್ತದೇ ಬಾಹ್ಯ ಮತ್ತು ಆಂತರ್ಯದ: ಸಮಾಜದ ಅಧಿಕಾರದಿಂದ. ಅಥವಾ ನಮ್ಮ ಅನುಭವದಿಂದ ನಾವೇ ಸ್ಥಾಪಿಸಿಕೊಂಡ ಅಧಿಕಾರದಿಂದ, ಅಥವಾ ಸಂಪ್ರದಾಯ ನಮಗೆ ನೀಡಿರುವ ಅಧಿಕಾರದಿಂದ. ಆಜ್ಞಾಪಾಲನೆಗಾಗಿ ನಮಗೆ ತರಬೇತಿ ನೀಡಲಾಗಿದೆ, ಏಕೆಂದರೆ ಆಜ್ಞಾಪಾಲನೆಯಲ್ಲಿಯೇ ಸುರಕ್ಷಿತತೆಯಿದೆ. ಹಾಗಾಗಿ ಸುರಕ್ಷಿತತೆ ಇದೆಯೇ ಎನ್ನುವುದನ್ನು ಕಂಡುಹಿಡಿಯಲು ಎಲ್ಲ ರೀತಿಯ ಅಧಿಕಾರಗಳಿಂದ ಮುಕ್ತರಾಗಿರಬೇಕು. ಇದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾದುದು, ಏಕೆಂದರೆ ಒಂದು ಪಾರಮಾರ್ಥಿಕ, ಶಾಶ್ವತ ಅಸ್ತಿತ್ವವೊಂದಿದೆ ಎಂದು ಎಲ್ಲ ಧರ್ಮಗಳು ಹೇಳುತ್ತಿವೆ- ನೀವದನ್ನು ವಿವಿಧ ಹೆಸರುಗಳಿಂದ ಕರೆಯಬಹುದು, ಚೇತನವೆನ್ನಿ, ಆತ್ಮವೆನ್ನಿ ಅಥವಾ ನಿಮ್ಮ ಇಷ್ಟದಂತೆ ಯಾವ ಹೆಸರಿನಿಂದಾದರೂ ಕರೆಯಬಹುದು. ಪ್ರಚಾರದಿಂದಲೋ, ಕಟ್ಟುಪಾಡಿನಿಂದಲೋ, ನಮ್ಮದೇ ಹೆದರಿಕೆಗಳಿಂದಲೋ ಅಥವಾ ಸುರಕ್ಷತೆಗಾಗಿ ನಮ್ಮದೇ ಸ್ವಂತ ಬೇಡಿಕೆಗಳಿಂದಲೋ ಏನೋ ನಾವದನ್ನು ಸ್ವೀಕರಿಸಿದ್ದೇವೆ. ನಾವದನ್ನು ಸಾಂತ್ವನಗೊಳಿಸುವ, ವಾಸ್ತವವಾಗಿರುವ ವಸ್ತುವೆಂದು, ನಿಜಸ್ಥಿತಿಯೆಂದು ಸ್ವೀಕರಿಸಿದ್ದೇವೆ. ಹಾಗೂ ಇಡೀ ಜಗತ್ತು ಹೇಳುತ್ತಿದೆ: ಅಂಥಹ ವಸ್ತುವೇ ಇಲ್ಲ, ಅದು ನಂಬಿಕೆಯ ವಿಷಯ ಮಾತ್ರ, ಅದಕ್ಕೆ ಯಾವುದೇ ಸಿಂಧುತ್ವವಿಲ್ಲ. ಅದು, ನೀವು ನಾಸ್ತಿಕರೆಂದು ಕರೆಯುವ, ದೈವತ್ವವಿಲ್ಲವೆಂದು ಕರೆಯುವ ಕಮ್ಯೂನಿಸ್ಟ್ ಜಗತ್ತು- ನೀವಾದರೋ ದೈವತ್ವವಿರುವವರಂತಿರುವವರು, ಏಕೆಂದರೆ ನಿಮಗೆ ನಂಬಿಕೆಯೊಂದಿದೆ. 

ಹಾಗಾಗಿ, ಈ ಸುರಕ್ಷಿತತೆಯ ಬಗ್ಗೆ ಪರಿಶೀಲಿಸುವ ಯಾವುದೇ ವ್ಯಕ್ತಿ ಸಂಪೂರ್ಣವಾಗಿ ಎಲ್ಲ ರೀತಿಯ ಅಧಿಕಾರದಿಂದಲೂ ಮುಕ್ತವಾಗಿರಬೇಕು- ಕಾನೂನಿನ ಅಧಿಕಾರದಿಂದಲ್ಲ, ಸರ್ಕಾರದ ಅಧಿಕಾರದಿಂದಲ್ಲ, ಬದಲಿಗೆ ಮನಸ್ಸು ಅರಸುವ ಅಧಿಕಾರದಿಂದ ಅಥವಾ ಪುಸ್ತಕದಲ್ಲಿ ಸ್ಥಾಪಿತವಾಗಿರುವುದರಿಂದ, ವಿಚಾರದಿಂದ, ಬದುಕಿನ ಅನುಭವದಿಂದ. ದಯವಿಟ್ಟು ಇವೆಲ್ಲವನ್ನು ಅನುಸರಿಸಿ, ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ. ಅಧಿಕಾರದಿಂದ ಮುಕ್ತವಾಗಿರುವಂತಹ ಮನಸ್ಸು ಮಾತ್ರ ಈ ಸುರಕ್ಷಿತತೆಯ ಬೃಹತ್ ಸಮಸ್ಯೆಯ ಬಗೆಗೆ ತನ್ನ ಪರಿಶೀಲನೆ ಪ್ರಾರಂಭಿಸಬಲ್ಲದು. ಇಲ್ಲದಿದ್ದಲ್ಲಿ, ನಿಮ್ಮ ಹಾಗೂ ನನ್ನ ನಡುವೆ ಯಾವುದೇ ವಿಚಾರ ವಿನಿಮಯ ಇರುವುದಿಲ್ಲ, ಏಕೆಂದರೆ ನಾನು ಆ ರೀತಿಯ ಯಾವುದೇ ಮಾನಸಿಕ ಸುರಕ್ಷಿತತೆ ಇಲ್ಲವೆಂದು ಹೇಳುತ್ತೇನೆ. 
ಬಾಂಬೆಯಲ್ಲಿ ಸಾರ್ವಜನಿಕ ಭಾಷಣ, 12ನೇ ಫೆಬ್ರವರಿ 1964. 

j.balakrishna@gmail.com

ಕಾಮೆಂಟ್‌ಗಳಿಲ್ಲ: