Monday, July 27, 2015

“ಏನೂ ಅಲ್ಲದ ಮನುಷ್ಯ ಅತ್ಯಂತ ಸುಖಿ” - ಜಿದ್ದು ಕೃಷ್ಣಮೂರ್ತಿ ಚಿಂತನೆ - 4

“ಏನೂ ಅಲ್ಲದ ಮನುಷ್ಯ ಅತ್ಯಂತ ಸುಖಿ” 

1948ರ ನಡುವಿನಿಂದ ಹಾಗೂ 1960ರ ಪ್ರಾರಂಭದ ವರ್ಷಗಳವರೆಗೂ, ಕೃಷ್ಣಮೂರ್ತಿಯವರು ಸುಲಭವಾಗಿ ಲಭ್ಯವಿದ್ದರು ಹಾಗೂ ಬಹಳಷ್ಟು ಜನ ಅವರನ್ನು ಭೇಟಿಯಾಗಲು ಬರುತ್ತಿದ್ದರು. ನಡಿಗೆಯ ಸಮಯದಲ್ಲಿ, ತಮ್ಮ ವೈಯಕ್ತಿಕ ಪರಿಸರದಲ್ಲಿ, ಪತ್ರಗಳ ಮೂಲಕ, ಸಂಬಂಧಗಳು ಅರಳಿದವು. ಈ ಮುಂದಿನ ಉದ್ಧರಿಸಿದ ಭಾಗಗಳನ್ನು ದೇಹ ಮತ್ತು ಮನಸ್ಸುಗಳೆರಡೂ ಜರ್ಜರಿತಗೊಂಡು ಅವರ ಬಳಿಬಂದ ಯುವ ಗೆಳೆಯನೊಬ್ಬನಿಗೆ ಬರೆದ ಪತ್ರಗಳಿಂದ ಆಯ್ದುಕೊಳ್ಳಲಾಗಿದೆ.  

“ಮಾನಸಿಕವಾಗಿ ನಮ್ಯವಾಗಿರು. ಶಕ್ತಿಯಿರುವುದು ದೃಢವಾಗಿರುವುದರಿಂದ ಅಥವಾ ಬಲಿಷ್ಠವಾಗಿರುವುದರಿಂದಲ್ಲ, ಆದರೆ ನಮ್ಯವಾಗಿರುವುದರಿಂದ. ನಮ್ಯ ಮರವೊಂದು ಚಂಡಮಾರುತವನ್ನೂ ಎದುರಿಸಿ ನಿಲ್ಲಬಲ್ಲುದು. ಚುರುಕು ಮನಸ್ಸೊಂದರ ಶಕ್ತಿಯನ್ನು ಪಡೆದುಕೊ.
ಬದುಕು ವಿಚಿತ್ರವಾದುದು, ಹಲವಾರು ಸಂಗತಿಗಳು ಅನಿರೀಕ್ಷಿತವಾಗಿ ನಡೆಯುತ್ತವೆ, ಅವುಗಳನ್ನು ಬರೇ ವಿರೋಧಿಸುವುದರಿಂದ ಯಾವುದೇ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಅದಕ್ಕೆ ಬೇಕಿರುವುದು ಅನಂತ ನಮ್ಯತೆ ಮತ್ತು ಆತ್ಮವಿಶ್ವಾಸ.
ಬದುಕೆಂದರೆ ಕತ್ತಿಯ ಅಲಗಿನ ಮೇಲಿನ ನಡಿಗೆ ಹಾಗೂ ಆ ಹಾದಿಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಮತ್ತು ನಮ್ಯ ವಿವೇಕದಿಂದ ನಡೆಯಬೇಕು.
ಬದುಕು ಅತ್ಯಂತ ಸಂಪದ್ಭರಿತವಾಗಿದೆ, ಅದರಲ್ಲಿ ಹಲವಾರು ನಿಧಿ ಸಂಗ್ರಹಗಳಿವೆ, ನಾವು ಖಾಲಿ ಹೃದಯಗಳಿಂದ ಅವುಗಳನ್ನರಸಿ ಹೋಗುತ್ತೇವೆ; ನಮ್ಮ ಹೃದಯಗಳಿಗೆ ಬದುಕಿನ ಸಮೃದ್ಧತೆಯನ್ನು ತುಂಬಿಸಿಕೊಳ್ಳುವುದು ಹೇಗೆಂದು ನಮಗೆ ತಿಳಿದಿಲ್ಲ. ನಾವು ಆಂತರಿಕವಾಗಿ ಬಡತನದಿಂದ ನರಳುತ್ತಿರುವವರು ಹಾಗೂ ನಮಗೆ ಸಿರಿತನವನ್ನು ನೀಡಿದಾಗ, ನಾವದನ್ನು ತಿರಸ್ಕರಿಸುತ್ತೇವೆ....... 
ಈ ಭೂಮಿ ಎಷ್ಟು ಮನೋಹರವಾಗಿದೆ, ಅದರಲ್ಲಿ ಎಷ್ಟೊಂದು ಸೌಂದರ್ಯವಿದೆ, ಎಷ್ಟೊಂದು ವೈಭವತೆ ಹಾಗೂ ಅವಿನಾಶ ವಾತ್ಸಲ್ಯವಿದೆ. ನಾವು ನೋವಿನ ಬಲೆಯಲ್ಲಿ ಸಿಕ್ಕಿಬಿದ್ದಿದ್ದೇವೆ ಹಾಗೂ ಅದರಿಂದ ಬಿಡಿಸಿಕೊಂಡು ಹೊರಬರುವುದರ ಬಗ್ಗೆ ಚಿಂತಿಸುತ್ತಿಲ್ಲ, ಯಾರಾದರೂ ಹೊರಬರುವ ದಾರಿ ತೋರಿಸುತ್ತಿದ್ದರೂ ಸಹ......“ಎಲ್ಲವನ್ನೂ ಸಂಶಯದಿಂದ ನೋಡಬೇಕು, ನಿರಂತರವಾಗಿ ಅನ್ವೇಷಿಸುತ್ತಿರಬೇಕು, ಸುಳ್ಳನ್ನು ಸುಳ್ಳೆಂದು ಗುರುತಿಸಬೇಕು. ಅತ್ಯಂತ ಗಹನವಾಗಿ ಗಮನಿಸಿದಲ್ಲಿ ಸ್ಫುಟವಾಗಿ ಕಾಣುವ ಶಕ್ತಿ ಪಡೆಯಬಹುದು; ಅದು ನಿನ್ನ ಅರಿವಿಗೆ ಬರುವುದನ್ನು ನೀನೇ ಅರಿತುಕೊಳ್ಳಬಹುದು...... ಸ್ಫುಟವಾಗಿ ನೋಡುವುದೇ ಸಮಸ್ಯೆಯೆಂದು ನನಗನ್ನಿಸುತ್ತದೆ, ಆಗ ಅದರ ಪರಿಕಲ್ಪನೆ ಅದರದೇ ಕಾರ್ಯವನ್ನು ಸಕ್ರಿಯಗೊಳಿಸುತ್ತದೆ......” 
ನೀವು ನಿಮ್ಮಲ್ಲಿ ಯಾವುದೇ ಗೊಂದಲಗಳನ್ನು ಇರಿಸಿಕೊಳ್ಳಬಾರದು. ಆಗ, ಎಲ್ಲವೂ ಸರಿಯಾಗುವುದೆಂಬ ಭರವಸೆ ನಾನು ನೀಡುತ್ತೇನೆ; ನಿಮ್ಮಲ್ಲಿ ಸ್ಫುಟತೆ ಇದ್ದಲ್ಲಿ ನಿಮ್ಮ ಕಣ್ಣಮುಂದೆಯೇ, ಯಾವುದೇ ನಿಮ್ಮ ಪ್ರಯತ್ನವಿಲ್ಲದೆಯೇ ಎಲ್ಲವೂ ಸರೂಪಗೊಳ್ಳತೊಡಗುತ್ತವೆ. ಬಯಸುವುದು ಎಲ್ಲವೂ ಸರಿಯಾಗಿರಬೇಕಿಲ್ಲ.
ಸಂಪೂರ್ಣ ಕ್ರಾಂತಿಯಾಗಬೇಕಾಗಿದೆ, ದೊಡ್ಡ ವಿಷಯಗಳಲ್ಲಿ ಮಾತ್ರವಲ್ಲ, ಬದುಕಿನ ಸಣ್ಣ ಸಂಗತಿಗಳಲ್ಲೂ ಸಹ...... ಪಾತ್ರೆ ಕುದಿಯುತ್ತಿರಲಿ, ನಿರಂತರವಾಗಿ, ಆಂತರಿಕವಾಗಿ.


“ವಿಷಯಗಳ ಪರಿಗಣನೆ ಹಗುರವಾಗಿರಲಿ, ಆದರೆ ಸಂಪೂರ್ಣವಾಗಿ ಮತ್ತು ಎಚ್ಚರಿಕೆಯಿಂದ ಹಾಗೂ ಅಂತರ್ಮುಖವಾಗಿ. ನಿಮ್ಮ ಆಂತರ್ಯದಲ್ಲಿ ಹಾಗೂ ನಿಮ್ಮ ಬಗ್ಗೆ ಏನು ನಡೆಯುತ್ತಿದೆಯೆಂಬುದರ ಬಗ್ಗೆ ನೀವು ಸಂಪೂರ್ಣ ಎಚ್ಚರದಿಂದಿಲ್ಲದೆ ಒಂದು ಕ್ಷಣವನ್ನೂ ಕಳೆಯಬೇಡಿ. ಸೂಕ್ಷ್ಮತೆ ಎಂದರೆ ಇದೇ, ಯಾವುದೋ ಒಂದೆರಡು ವಿಷಯಗಳ ಬಗ್ಗೆ ಮಾತ್ರವಲ್ಲ, ಎಲ್ಲದಕ್ಕೂ ಸೂಕ್ಷ್ಮಮತಿಗಳಾಗಿರುವುದು...... 


“ಸ್ವಂತದ್ದನ್ನು ಗುರುತಿಸುವುದರೊಂದಿಗೆ ಪ್ರಯೋಗಮಾಡುವುದು ಒಳ್ಳೆಯದು...... ನಾವು ಹೇಳುತ್ತೇವೆ ಇದು ನನ್ನದು- ನನ್ನ ಚಪ್ಪಲಿಗಳು, ನನ್ನ ಮನೆ, ನನ್ನ ಕುಟುಂಬ, ನನ್ನ ಕೆಲಸ, ಮತ್ತು ನನ್ನ ದೇವರು; ಈ ಸ್ವಂತಿಕೆಯ ಮನೋಭಾವದೊಟ್ಟಿಗೆಯೇ ಅದಕ್ಕೆ ಅಂಟಿಕೊಳ್ಳಬೇಕೆನ್ನುವ ಜಂಜಾಟ ಹುಟ್ಟಿಕೊಳ್ಳುತ್ತದೆ. ಅದನ್ನು ಸಂರಕ್ಷಿಸುವುದು ಒಂದು ಚಟವಾಗಿಬಿಡುತ್ತದೆ. ಈ ಚಟಕ್ಕೆ ಅಡಚಣೆಯಾಗುವುದೆಲ್ಲವೂ ನೋವು ಕೊಡುತ್ತದೆ, ಅನಂತರ ಆ ನೋವಿನಿಂದ ಹೊರಬರಲು ನಾವು ಹೆಣಗಾಡತೊಡಗುತ್ತೇವೆ......ಇದನ್ನು ಯಾರಾದರೂ ಪ್ರಯೋಗದಿಂದ ನೋಡಬೇಕಾದಲ್ಲಿ, ಬರೇ ಎಚ್ಚರದಿಂದಿರುವುದರೊಂದಿಗೆ, ಬದಲಿಕೆಯ ಅಥವಾ ಆಯ್ಕೆಯ ಇಚ್ಛೆಯಿಲ್ಲದೆ- ನಮ್ಮೊಳಗೇ ಅತ್ಯದ್ಭುತ ವಿಷಯಗಳನ್ನು ಕಂಡುಕೊಳ್ಳಬಹುದು. ಸ್ವಂತಿಕೆಯನ್ನು ಗುರುತಿಸುವ ಮನೋಭಾವದ ಆಧಾರದ ಸ್ಮರಣೆಯ ಮನಸ್ಸೇ ಗತ, ಸಂಪ್ರದಾಯ. ಈಗ ನಮಗೆ ತಿಳಿದಿರುವಂತಹ ಮನಸ್ಸು, ಈ ಸ್ವಂತದೆನ್ನುವ ಮನೋಭಾವವಿಲ್ಲದೆ ಕಾರ್ಯನಿರ್ವಹಿಸಬಲ್ಲುದೆ? ಅದನ್ನು ಕಂಡುಹಿಡಿಯಿರಿ, ಅದರೊಂದಿಗೆ ಆಟವಾಡಿ;  ದಿನಿತ್ಯದ ವಸ್ತುಗಳೊಂದಿಗೆ, ಅತ್ಯಂತ ಅಮೂರ್ತದೊಂದಿಗೆ ಈ ಗುರುತಿಸುವಿಕೆಯ ಚಲನೆಯ ಬಗ್ಗೆ ಎಚ್ಚರವಾಗಿರಿ...... ಮನಸ್ಸಿನ ಮೂಲೆಮೂಲೆಗಳಲ್ಲಿ ಎಚ್ಚರದ ಅರಿವು ಆಲೋಚನೆಗಳನ್ನು ಕೊಂಡೊಯ್ಯಲಿ; ತೆರೆದಿಡುತ್ತಾ, ಯಾವುದನ್ನೂ ಆಯ್ಕೆ ಮಾಡಿಕೊಳ್ಳದೆ, ನಿರಂತರವಾಗಿ ಅನ್ವೇಷಿಸುತ್ತಾ.”“ಈ ಸಂಬಂಧಗಳೆಂದರೇನು, ಹಾಗೂ ಒಂದು ನಿರ್ದಿಷ್ಟ ಸಂಬಂಧದ ಚಟದೊಂದಿಗೆ ನಾವು ಹೇಗೆ ಸುಲಭವಾಗಿ ಸಿಕ್ಕಿಬೀಳುತ್ತೇವೆ, ಘಟನೆಗಳು ಮತ್ತು ಪರಿಸ್ಥಿತಿಯನ್ನು ಬಂದಂತೆ ಸ್ವೀಕರಿಸುತ್ತೇವೆ, ಯಾವುದೇ ಬದಲಾವಣೆಯನ್ನು ಸಹಿಸುವುದಿಲ್ಲ; ಅನಿಶ್ಚತತೆಯೆಡೆಗಿನ ಯಾವುದೇ ಚಲನೆಯನ್ನು, ಒಂದರೆಕ್ಷಣವೂ ಒಪ್ಪುವುದಿಲ್ಲ. ಎಲ್ಲವೂ ಅಚ್ಚುಕಟ್ಟಾಗಿ ನಿಯಂತ್ರಿಸಲಾಗಿರುತ್ತದೆ, ಸುರಕ್ಷಿತವಾಗಿ ಬಂಧಿಸಲ್ಪಟ್ಟಿರುತ್ತದೆ, ಯಾವುದೇ ತಾಜಾತನಕ್ಕೆ, ಪುನಶ್ಚೇತನದ ವಸಂತದ ತಂಗಾಳಿಗೆ ಅಲ್ಲಿ ಆಸ್ಪದವೇ ಇರುವುದಿಲ್ಲ. ಇದನ್ನೇ ಹಾಗೂ ಇನ್ನೂ ಹೆಚ್ಚಿನದನ್ನು ಸಂಬಂಧಗಳೆನ್ನುವುದು. ನಾವು ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ, ಸಂಬಂಧಗಳು ಹೆಚ್ಚಿನ ಅವ್ಯಕ್ತವಾದ, ಮಿಂಚಿಗಿಂತ ವೇಗವಾದ, ಭೂಮಿಗಿಂತ ವಿಸ್ತಾರವಾದುದು ಎಂಬುದು ತಿಳಿಯುತ್ತದೆ, ಏಕೆಂದರೆ ಸಂಬಂಧಗಳೇ ಬದುಕು...... ನಾವು ಸಂಬಂಧಗಳನ್ನು ಒರಟೊರಟಾಗಿ, ಗಡುಸಾಗಿ ಮತ್ತು ನಿರ್ವಹಿಸಬಲ್ಲವಾಗಿರುವಂತೆ ಮಾಡಿಕೊಳ್ಳುತ್ತೇವೆ. ಹಾಗಾಗಿ ಅದು ತನ್ನ ಸೌಂದರ್ಯವನ್ನು ಮತ್ತು ಸುಮಧುರತೆಯನ್ನು ಕಳೆದುಕೊಳ್ಳುತ್ತದೆ. ಪ್ರೀತಿಯನ್ನು ಕಳೆದುಕೊಳ್ಳುವುದೇ ಇದಕ್ಕೆಲ್ಲ ಕಾರಣ ಹಾಗೂ ಇದು ಬಹುಮುಖ್ಯ ಕಾರಣವೂ ಹೌದು, ಏಕೆಂದರೆ ಅದರಲ್ಲಿ ತನ್ನನ್ನು ತಾನೇ ಸಂಪೂರ್ಣವಾಗಿ ಕಳೆದುಕೊಳ್ಳಲು ಸಿದ್ಧರಿರಬೇಕು. 
ಇಲ್ಲಿ ಅತ್ಯಂತ ಅವಶ್ಯಕವಿರುವುದು ತಾಜಾತನದ, ಹೊಸತನದ ಗುಣಮಟ್ಟ, ಇಲ್ಲದಿದ್ದಲ್ಲಿ ಬದುಕು ನಿರಂತರ ಜಂಜಾಟವಾಗಿಬಿಡುತ್ತದೆ, ಒಂದು ಚಟವಾಗಿಬಿಡುತ್ತದೆ; ಪ್ರೀತಿಯೆನ್ನುವುದು ಚಟವಲ್ಲ, ಬೇಸರ ತರುವ ವಿಷಯವಲ್ಲ. ಬಹುಪಾಲು ಜನ ಅಚ್ಚರಿಗೊಳ್ಳುವ ಪ್ರಜ್ಞೆಯನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಅವರು ಎಲ್ಲವನ್ನೂ ಸಾರಾಸಗಟಾಗಿ ಬಂದಂತೆ ನಿರ್ವಿಕಾರವಾಗಿ ಸ್ವೀಕರಿಸುತ್ತಾರೆ, ಸುರಕ್ಷಿತತೆಯ ಈ ಮನೋಭಾವ ಸ್ವಾತಂತ್ರ್ಯವನ್ನು ಹಾಗೂ ಅನಿಶ್ಚತತೆಯಲ್ಲಿನ ಅಚ್ಚರಿಯನ್ನು ನಾಶಮಾಡಿಬಿಡುತ್ತದೆ.”“ಸರಳ ಮತ್ತು ಸ್ಫುಟವಾಗಿರುವುದು ಸದಾ ಕಷ್ಟಕರವಾದ ವಿಷಯ. ಜಗತ್ತು ಯಶಸ್ಸನ್ನು ಆರಾಧಿಸುತ್ತದೆ, ದೊಡ್ಡದಾದಷ್ಟೂ ಒಳ್ಳೆಯದು- ಶ್ರೋತೃಗಳ ಹೆಚ್ಚಿನ ಸಂಖ್ಯೆ ಉಪನ್ಯಾಸಕಾರನ ಹಿರಿತನವನ್ನು ತೋರಿಸುತ್ತದೆ, ದೈತ್ಯಾಕಾರದ ಕಟ್ಟಡಗಳು, ಕಾರುಗಳು, ಏರೋಪ್ಲೇನುಗಳು ಮತ್ತು ಜನರು. ಸರಳತೆ ಎಲ್ಲೆಲ್ಲೂ ಇಲ್ಲವಾಗಿದೆ. ಹೊಸ ಜಗತ್ತನ್ನು ನಿರ್ಮಿಸುತ್ತಿರುವವರು ಯಶಸ್ವಿ ಜನರಲ್ಲ. ನಿಜವಾದ ಕ್ರಾಂತಿಕಾರಿಯಾಗಬೇಕಿದ್ದಲ್ಲಿ ಹೃದಯ ಮತ್ತು ಮನಸ್ಸಿನ ಸಂಪೂರ್ಣ ಬದಲಾವಣೆಯಾಗಬೇಕು, ಆದರೆ ಈ ಸ್ವಾತಂತ್ರ್ಯ ಬಯಸುವವರು ಕೆಲವರು ಮಾತ್ರ. ಮೇಲೆ ಕಾಣುವ ಬೇರುಗಳನ್ನು ಮಾತ್ರ ಕತ್ತರಿಸಿಕೊಳ್ಳುತ್ತಾರೆ; ಆದರೆ ಆಳವಾಗಿ ಬೇರುಬಿಟ್ಟಿರುವ ಸಾಮಾನ್ಯತೆಯನ್ನು ಮಾತ್ರ ಉಣಿಸುವ ಬೇರುಗಳನ್ನು ಕತ್ತರಿಸಲು ಮಾತು, ವಿಧಾನಗಳು ಮತ್ತು ಬಲವಂತಗಳಿಗಿಂತ ಹೆಚ್ಚಿನದು ಯಶಸ್ಸಿಗೆ ಬೇಕಾಗುತ್ತದೆ. ಇಂಥವರು ಕೆಲವರು ಮಾತ್ರ ಇದ್ದಾರೆ ಹಾಗೂ ಅವರೇ ನಿಜವಾದ ನಿರ್ಮಾತೃಗಳು- ಉಳಿದವರು ಬರೇ ನಿಷ್ಫಲ ಶ್ರಮಪಡುತ್ತಿದ್ದಾರೆ.
ಪ್ರತಿಯೊಬ್ಬರೂ ತಮ್ಮನ್ನು ಮತ್ತೊಬ್ಬರೊಂದಿಗೆ, ತಮ್ಮ ಸ್ಥಿತಿಯನ್ನು ಮತ್ತೊಬ್ಬರ ಸ್ಥಿತಿಯೊಂದಿಗೆ, ತಮಗಿಂತ ಇನ್ನೂ ಹೆಚ್ಚು ಅದೃಷ್ಟಶಾಲಿಗಳೊಂದಿಗೆ ನಿರಂತರವಾಗಿ ಹೋಲಿಸಿಕೊಳ್ಳುತ್ತಿರುತ್ತಾರೆ. ಈ ತುಲನೆ ವಾಸ್ತವವಾಗಿ ವಿನಾಶಕಾರಕ. ತುಲನೆ ಹೀನಾಯಗೊಳಿಸುವಂಥದು, ಅದು ಅವರ ದೃಷ್ಟಿಕೋನವನ್ನು ಕಲುಷಿತಗೊಳಿಸುತ್ತದೆ. ತುಲನೆಗಳೊಂದಿಗೇ ಮಗುವನ್ನು ಬೆಳೆಸಲಾಗುತ್ತದೆ. ನಮ್ಮ ಎಲ್ಲ ಶಿಕ್ಷಣ ಮತ್ತು ನಮ್ಮ ಸಂಸ್ಕøತಿಯೂ ಸಹ ಅದರ ಆಧಾರಿತವೇ ಆಗಿದೆ. ಹಾಗಾಗಿ ನಾವಿರುವುದಕ್ಕಿಂತ ಭಿನ್ನವಾಗಿರಲು ನಿರಂತರ ಹೋರಾಟ ನಡೆಯುತ್ತಿರುತ್ತದೆ. ನಾವೇನು ಎನ್ನುವುದನ್ನು ಅರಿತುಕೊಳ್ಳುವುದರಿಂದ ಸೃಜನಶೀಲತೆ ಅರಳುತ್ತದೆ, ಆದರೆ ತುಲನೆ ಸ್ಪರ್ಧಾತ್ಮಕತೆ, ಕಠೋರತೆ, ಆಸೆಗಳನ್ನು ಹುಟ್ಟುಹಾಕುತ್ತದೆ- ಇದರಿಂದಲೇ ಪ್ರಗತಿ ಸಾಧ್ಯವಾಗುತ್ತದೆಂದು ನಾವು ಭಾವಿಸುತ್ತೇವೆ. ಈ ಪ್ರಗತಿ ಇದುವರೆಗೂ ನಾವು ಕಂಡರಿಯದ ನಿರ್ದಯಿ ಯುದ್ಧಗಳನ್ನು ಹಾಗೂ ಕ್ಷೋಭೆಯನ್ನು ಮಾತ್ರ ತಂದಿದೆ.” 


“ನಾವು ಸ್ವಾತಂತ್ರ್ಯವನ್ನು ಬಯಸಿದರೂ ಹೇಗೆ ಗುಲಾಮತನದಲ್ಲಿ ಸಿಕ್ಕಿಬೀಳುತ್ತಿದ್ದೇವೆನ್ನುವುದು ನಿನಗೆ ತಿಳಿದಿದೆ. ನಮ್ಮೆಲ್ಲ ಆರಂಭದ ಉತ್ಸಾಹವನ್ನು ಕಳೆದುಕೊಳ್ಳುತ್ತಿದ್ದೇವೆ. ನಮಗೆ ಮಾರ್ಗದರ್ಶನ ನೀಡಲು, ಸಹಾಯ ಮಾಡಲು, ಉದಾರವಾಗಿರಲು, ಶಾಂತರಾಗಿರಲು ಇತರರನ್ನು ಅರಸುತ್ತೇವೆ; ಗುರುಗಳನ್ನು, ಮಾಸ್ಟರ್‍ಗಳನ್ನು, ಉದ್ಧಾರಕರನ್ನು, ಮಧ್ಯವರ್ತಿಗಳನ್ನು ಹುಡುಕುತ್ತೇವೆ...... ನಮ್ಮಲ್ಲಿ ಏನೇನೂ ಇಲ್ಲ, ಹಾಗಾಗಿ ನಮಗೆ ಮನೋರಂಜನೆ ನೀಡಲು, ನಮಗೆ ಉತ್ತೇಜನ ನೀಡಲು, ನಮಗೆ ಮಾರ್ಗದರ್ಶನ ನೀಡಲು ಅಥವಾ ನಮ್ಮನ್ನು ಉಳಿಸಲು ಇತರರನ್ನು ಅರಸುತ್ತೇವೆ. ಈ ಆಧುನಿಕ ನಾಗರಿಕತೆ ನಮ್ಮನ್ನು ನಾಶಗೊಳಿಸುತ್ತಿದೆ, ನಮ್ಮೆಲ್ಲ ಸೃಜನಶೀಲತೆಗಳನ್ನು ಬರಿದುಗೊಳಿಸುತ್ತಿದೆ. ಆಂತರಿಕವಾಗಿ ನಾವೇ ಖಾಲಿಯಾಗಿದ್ದೇವೆ ಹಾಗೂ ನಾವು ನಮ್ಮ ನೆರೆಹೊರೆಯವರನ್ನು ಅಥವಾ ಅವರು ನಮ್ಮನ್ನು ಶೋಷಿಸಲು ಸಾಧ್ಯವಾಗುವಂತೆ ಸಮೃದ್ಧರಾಗಲು ಇತರರನ್ನು ಅರಸುತ್ತೇವೆ.
ಈ ರೀತಿ ಇತರರನ್ನು ಅರಸುವಲ್ಲಿನ ಹಲವಾರು ಪರಿಣಾಮಗಳ ಬಗೆಗೆ ಅರಿವಿದ್ದಲ್ಲಿ, ಆ ಸ್ವಾತಂತ್ರ್ಯವೇ ಸೃಜನಶೀಲತೆಯ ಪ್ರಾರಂಭ. ಆ ಸ್ವಾತಂತ್ರ್ಯವೇ ನಿಜವಾದ ಕ್ರಾಂತಿ ಹಾಗೂ ಅದು ಸಾಮಾಜಿಕ ಅಥವಾ ಆರ್ಥಿಕ ಹೊಂದಾಣಿಕೆಗಳ ಹುಸಿ ಕ್ರಾಂತಿಯಲ್ಲ......”

“ನಮ್ಮ ದಿನಗಳೆಲ್ಲಾ ಖಾಲಿ ಖಾಲಿಯಾಗಿವೆ- ಅದರಲ್ಲಿ ಎಲ್ಲ ರೀತಿಯ ಚಟುವಟಿಕೆಗಳು ತುಂಬಿವೆ, ವ್ಯಾಪಾರ, ಶೇರು ವಹಿವಾಟು, ಧ್ಯಾನ, ದುಃಖ ಮತ್ತು ಸಂಭ್ರಮಗಳು. ಇಷ್ಟೆಲ್ಲಾ ಇದ್ದರೂ ನಮ್ಮ ಬದುಕುಗಳು ಖಾಲಿಯಾಗಿಯೇ ಇವೆ. ವ್ಯಕ್ತಿಯೊಬ್ಬನನ್ನು ಆತನ ಹುದ್ದೆ, ಆಧಿಕಾರ, ಅಥವಾ ಹಣದಿಂದ ವಂಚಿತಗೊಳಿಸಿ. ಆತ ಏನಾಗಿರುತ್ತಾನೆ?”"ನಮ್ಮ ಮನಸ್ಸುಗಳು ಸುರಕ್ಷತೆಯ ಪುಟ್ಟ ಕೋಟೆಗಳನ್ನು ನಿರ್ಮಿಸಿಕೊಳ್ಳುತ್ತವೆ. ಪ್ರತಿಯೊಂದರ ಬಗ್ಗೆಯೂ ಖಾತ್ರಿಯಾಗಿರಲು ನಾವು ಬಯಸುತ್ತೇವೆ; ನಮ್ಮ ಸಂಬಂಧಗಳ ಬಗೆಗೆ, ಅಥವಾ ನಮ್ಮ ಸಾಧನೆಗಳ ಬಗೆಗೆ, ನಮ್ಮ ಆಶೋತ್ತರಗಳ ಬಗೆಗೆ ಹಾಗೂ ನಮ್ಮ ಭವಿಷ್ಯದ ಬಗೆಗೆ. ಈ ಅಂತರ್ಮುಖಿ ಬಂಧಿಖಾನೆಗಳನ್ನು ನಾವು ನಿರ್ಮಿಸಿಕೊಂಡು ಅವುಗಳಿಗೆ ಯಾರಾದರು ತೊಡಕಾದಲ್ಲಿ ಅತಿಯಾದ ವೇದನೆ ಅನುಭವಿಸುತ್ತೇವೆ. ಯಾವುದೇ ಘರ್ಷಣೆಯಿಲ್ಲದ, ಯಾವುದೇ ತೊಡಕಿಲ್ಲದ ವಲಯವನ್ನು ಮನಸ್ಸು ಅರಸುತ್ತದೆನ್ನುವುದು ಎಷ್ಟು ವಿಚಿತ್ರವಲ್ಲವೆ. ನಮ್ಮ ಇಡೀ ಬದುಕು ಈ ಸುರಕ್ಷಾ ವಲಯಗಳನ್ನು ನಿರಂತರವಾಗಿ ಕೆಡವುವುದು ಹಾಗೂ ವಿವಿಧ ರೂಪಗಳಲ್ಲಿ ನಿರ್ಮಿಸುವುದೇ ಆಗಿದೆ. ಸ್ವಾತಂತ್ರ್ಯವೆಂದರೆ ಯಾವುದೇ ರೀತಿಯ ಸುರಕ್ಷತೆಯನ್ನು ಹೊಂದದಿರುವುದು."


"ನಮಗೆ ಸಂಬಂಧಿಸಿದ ವಿಷಯಗಳ ಬಗೆಗೆ, ಅವುಗಳನ್ನು ಅವಲೋಕಿಸಲು ಹಾಗೂ ಪರಿಗಣಿಸಲು ನಾವು ಎಷ್ಟು ಕಡಮೆ ಗಮನ ಹರಿಸುತ್ತೇವೆ. ನಾವೆಷ್ಟು ಸ್ವ-ಕೇಂದ್ರಿತವಾಗಿದ್ದೇವೆಂದರೆ, ನಮ್ಮ ಚಿಂತೆಗಳ ಬಗೆಗೆ, ನಮ್ಮ ಅನುಕೂಲಗಳ ಬಗೆಗೆ ಸದಾ ಗಮನ ಹರಿಸುತ್ತಿರುವುದರಿಂದ ನಮಗೆ ಅವಲೋಕಿಸಲು ಹಾಗೂ ಅರಿತುಕೊಳ್ಳಲು ಸಮಯವೇ ಇಲ್ಲ. ಈ ಪ್ರವೃತ್ತಿ ನಮ್ಮ ಮನಸ್ಸನ್ನು ಮಂಕು ಮತ್ತು ಆಯಾಸಗೊಳಿಸುತ್ತದೆ, ಹತಾಶ ಮತ್ತು ದುಃಖತಪ್ತರನ್ನಾಗಿಸುತ್ತದೆ ಹಾಗೂ ಈ ದುಃಖದಿಂದ ನಾವು ಪಾರಾಗಲು ಬಯಸುತ್ತೇವೆ. ಎಲ್ಲಿವರೆಗೆ ಸ್ವ ಎನ್ನುವುದು ಸಕ್ರಿಯವಾಗಿರುತ್ತದೆಯೋ ಅಲ್ಲಿವರೆಗೆ ಮಂಕುಕವಿದ ಆಯಾಸ ಮತ್ತು ಹತಾಶೆ ಇದ್ದೇಇರುತ್ತದೆ. ಜನ ಒಂದು ರೀತಿಯ ಹುಚ್ಚುಹಿಡಿದಂತೆ ತರಾತುರಿಯಲ್ಲಿದ್ದಾರೆ, ಸ್ವ-ಕೇಂದ್ರಿತ ದುಃಖದ ಮಡುವಿನಲ್ಲಿ. ಈ ದುಃಖತಪ್ತತೆ ಗಾಢ ವಿವೇಚನಾರಹಿತವಾದುದು. ಚಿಂತಕರು, ಎಚ್ಚರದಿಂದಿರುವವರು ದುಃಖದಿಂದ ಮುಕ್ತರಾಗಿರುತ್ತಾರೆ." 
“ಶಿಕ್ಷಣ? ಹಾಗೆಂದರೇನು? ನಾವು ಓದಲು ಮತ್ತು ಬರೆಯಲು ಕಲಿಯುತ್ತೇವೆ, ಜೀವನೋಪಾಯಕ್ಕೆ ಅವಶ್ಯಕವಿರುವ ತಂತ್ರವೊಂದನ್ನು ಕಲಿತುಕೊಳ್ಳುತ್ತೇವೆ, ನಂತರ ನಮ್ಮನ್ನು ಈ ಜಗತ್ತಿನಲ್ಲಿ ಸ್ವೇಚ್ಛೆಯಾಗಿ ಬಿಟ್ಟುಬಿಡಲಾಗುತ್ತದೆ. ಚಿಕ್ಕಂದಿನಿಂದ ನಮಗೆ ಏನು ಮಾಡಬೇಕೆಂಬುದನ್ನು, ಏನು ಯೋಚಿಸಬೇಕೆಂಬುದನ್ನು ಹೇಳಿಕೊಡಲಾಗುತ್ತದೆ, ಹಾಗೂ ನಾವು ಆಂತರ್ಯದಲ್ಲಿ ಗಾಢವಾಗಿ ಸಾಮಾಜಿಕ ಹಾಗೂ ಪರಿಸರದ ಪ್ರಭಾವಕ್ಕೊಳಗಾಗಿರುತ್ತೇವೆ. 
ನಾನು ಆಲೋಚಿಸುತ್ತಿದ್ದೆ, ಮನುಷ್ಯರನ್ನು ಬಾಹ್ಯದಲ್ಲಿ ಶಿಕ್ಷಣ ಒದಗಿಸಿ ಅವರ ಆಂತರ್ಯವನ್ನು ಹಾಗೆಯೇ ಸ್ವತಂತ್ರವಾಗಿ ಬಿಟ್ಟಲ್ಲಿ ಹೇಗಿರುತ್ತದೆ? ಮನುಷ್ಯ ಆಂತರ್ಯದಲ್ಲಿ ಸ್ವತಂತ್ರವಾಗಿದ್ದು ಹಾಗೆಯೇ ಸದಾ ಸ್ವತಂತ್ರವಾಗಿರುವಂತೆ ನಾವು ಸಹಾಯಮಾಡಲು ಸಾಧ್ಯವೆ? ಏಕೆಂದರೆ ಸ್ವಾತಂತ್ರ್ಯದಲ್ಲಿ ಮಾತ್ರ ಆತ ಸೃಜನಶೀಲವಾಗಿರಬಲ್ಲ ಹಾಗೂ ಸಂತೋಷವಾಗಿರಬಲ್ಲ. ಇಲ್ಲದಿದ್ದಲ್ಲಿ, ಈ ಬದುಕು ಒಂದು ರೀತಿಯ ಯಾತನೆಯ ಜಂಜಾಟ- ಆಂತರ್ಯದಲ್ಲಿ ಹಾಗೂ ಬಾಹ್ಯದಲ್ಲಿ ನಿರಂತರ ಯುದ್ಧ. ಆದರೆ ಆಂತರ್ಯದಲ್ಲಿ ಸ್ವತಂತ್ರವಾಗಿರಬೇಕಾದಲ್ಲಿ ಅತ್ಯದ್ಭುತ ಎಚ್ಚರ ಮತ್ತು ವಿವೇಚನೆ ಅಗತ್ಯ; ಆದರೆ ಇದರ ಪ್ರಾಮುಖ್ಯತೆಯನ್ನು ಕೆಲವರು ಮಾತ್ರ ಕಾಣುತ್ತಾರೆ...... ಇದನ್ನೆಲ್ಲ ಬದಲಿಸಬೇಕಿದ್ದಲ್ಲಿ, ಇದರ ಅವಶ್ಯಕತೆಯನ್ನು ಮನಗಾಣುವ ಕೆಲವರಾದರೂ ಇರಬೇಕು ಹಾಗೂ ಅವರು ತಾವೇ ಈ ಸ್ವಾತಂತ್ರ್ಯವನ್ನು ಆಂತರ್ಯದಲ್ಲಿ ತರುತ್ತಿರುವಂಥವರು ಆಗಿರಬೇಕು. ಇದೊಂದು ವಿಚಿತ್ರ ಜಗತ್ತು.”


“ಘನತೆ ಒಂದು ಅಪರೂಪದ ವಸ್ತು. ಒಂದು ಕಚೇರಿ ಅಥವಾ ಒಂದು ಗೌರವಯುತ ಹುದ್ದೆ ಘನತೆಯನ್ನು ತಂದುಕೊಡುತ್ತದೆ. ಅದೊಂದು ರೀತಿ ಕೋಟು ಧರಿಸುವಂತೆ. ಕೋಟು, ಹುದ್ದೆ, ಘನತೆಯನ್ನು ತಂದುಕೊಡುತ್ತದೆ. ಒಂದು ಪದನಾಮ ಅಥವಾ ಹುದ್ದೆ ಘನತೆಯನ್ನು ತಂದುಕೊಡುತ್ತದೆ. ಆದರೆ ವ್ಯಕ್ತಿಯೊಬ್ಬನಿಂದ ಇವುಗಳನ್ನು ತೆಗೆದುಹಾಕಿದರೆ, ಆಂತರ್ಯದ ಸ್ವಾತಂತ್ರ್ಯದಿಂದ, ತಾವು ಏನೂ ಅಲ್ಲದ ಸ್ಥಿತಿಯಿಂದ ಘನತೆಯ ಗುಣ ಉಳಿಸಿಕೊಳ್ಳುವವರು ಕೆಲವರು ಮಾತ್ರ. ತಾನು ಏನಾದರೂ ಆಗಿರಬೇಕೆಂದು ಮಾನವ ಬಯಸುತ್ತಾನೆ, ಆ ಏನಾದರೂ ಎನ್ನುವುದು ಅದನ್ನು ಗೌರವಿಸುವ ಸಮಾಜ ಆತನಿಗೆ ಸ್ಥಾನವೊಂದನ್ನು ದೊರಕಿಸಿಕೊಡುತ್ತದೆ.... ಘನತೆಯೆನ್ನುವುದನ್ನು ಊಹಿಸಿಕೊಳ್ಳಲು, ಬೆಳೆಸಿಕೊಳ್ಳಲು ಸಾಧ್ಯವಿಲ್ಲ, ಘನತೆಯ ಬಗ್ಗೆ ಸದಾ ಪ್ರಜ್ಞಾಪೂರ್ವಕವಾಗಿರುವುದೆಂದರೆ ತನ್ನ ಬಗ್ಗೆಯೇ ಪ್ರಜ್ಞಾಪೂರ್ವಕವಾಗಿರುವಂತೆ, ಅಂದರೆ ಅದೊಂದು ಗೌಣ, ಸಣ್ಣ ಆಲೋಚನೆ. `ಏನೂ ಅಲ್ಲದ’ ವ್ಯಕ್ತಿಯಾಗಿರುವುದೆಂದರೆ ಆ ಆಲೋಚನೆಯಿಂದಲೇ ಮುಕ್ತನಾಗಿರುವುದು ಎಂದರ್ಥ....
ಬದುಕು ಒಂದು ವಿಚಿತ್ರ ವ್ಯಾಪಾರ. ಏನೂ ಅಲ್ಲದ ಮನುಷ್ಯನೇ ಅತ್ಯಂತ ಸುಖಿ.”
ಪೂಪುಲ್ ಜಯಕರ್‍ರವರ Krishnamurti: A Biography ಕೃತಿಯಿಂದ.

 

No comments: