Monday, July 13, 2015

ಜಿದ್ದು ಕೃಷ್ಣಮೂರ್ತಿ ಚಿಂತನೆ - 2: ನಾವು ವಾಸ್ತವವಾಗಿ ಆಲಿಸುವುದೇ ಇಲ್ಲ

ನಾನು 10 ವರ್ಷಗಳ ಹಿಂದೆ ಕೃಷ್ಣಮೂರ್ತಿ ಫೌಂಡೇಶನ್ ಗೆ ಜಿದ್ದು ಕೃಷ್ಣಮೂರ್ತಿಯವರ ಲೇಖನಗಳನ್ನು ಅನುವಾದಿಸಿಕೊಟ್ಟಿದ್ದೆ. ಅವು ಪತ್ರಿಕೆಯ ರೂಪದಲ್ಲಿ ಆರು ತಿಂಗಳು ಪ್ರಕಟವಾದುವು. ಅವು ಇಲ್ಲಿವೆ:
ನಾವು ಬಹಳಷ್ಟು ಜನ ವಾಸ್ತವವಾಗಿ ಆಲಿಸುವುದೇ ಇಲ್ಲ, ಏಕೆಂದರೆ ನಾವು ಸದಾ ಯಾವುದಾದರೂ ಆಕ್ಷೇಪಣೆಯಿಂದಲೇ ಆಲಿಸುತ್ತೇವೆ, ನಮ್ಮದೇ ವ್ಯಾಖ್ಯಾನಗಳೊಂದಿಗೆ; ಕೇಳಿದುದನ್ನು ನಮ್ಮದೇ ಆಲೋಚನೆಗಳ ದೃಷ್ಟಿಯಲ್ಲಿ ಅನುವಾದಿಸಿಕೊಳ್ಳುತ್ತೇವೆ, ಅಥವಾ ನಮಗೆ ಈಗಾಗಲೇ ತಿಳಿದಿರುವುದರೊಂದಿಗೆ ತುಲನೆಮಾಡಿಕೊಳ್ಳುತ್ತೇವೆ; ಹಾಗಾಗಿ ವಾಸ್ತವವಾಗಿ ನಾವು ಆಲಿಸುವುದೇ ಇಲ್ಲ. ಯಾರ ಮಾತನ್ನಾದರೂ ನೀವು ಎಂದಾದರು ವಾಸ್ತವವಾಗಿ ಆಲಿಸಲು ಪ್ರಯತ್ನಿಸಿದ್ದಲ್ಲಿ ಅದು ಎಷ್ಟು ಅಸಾಮಾನ್ಯಕರವಾಗಿ ಕಷ್ಟಕರವಾದುದೆಂಬುದು ನಿಮಗೆ ತಿಳಿಯುತ್ತದೆ, ಏಕೆಂದರೆ ನಿಮ್ಮಲ್ಲಿ ಅದೆಷ್ಟು ಪೂರ್ವಾಗ್ರಹಗಳಿವೆಯೆಂದರೆ ಅವು ನಿಮ್ಮ ಮತ್ತು ನೀವು ಆಲಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ನಡುವೆ ಪರದೆಯಂತೆ ಅಡ್ಡಬರುತ್ತವೆ. ಆದರೆ ಒಬ್ಬ ವ್ಯಕ್ತಿ ಪೂರ್ವಾಪರ ನಿರ್ಣಯಗಳಿಲ್ಲದೆ, ತುಲನೆ ಮಾಡದೆ, ಅನುವಾದ ಮಾಡಿಕೊಳ್ಳದೆ ಆಲಿಸಲು ಸಾಧ್ಯವಾದಲ್ಲಿ, ನನಗನ್ನಿಸುತ್ತದೆ, ಅಂತಹ ಆಲಿಕೆ ಅತ್ಯದ್ಭುತ ಪ್ರಭಾವಬೀರಬಲ್ಲುದು. ಅಂತಹ ಆಲಿಕೆ ಮನಸ್ಸಿನಲ್ಲಿ ಒಂದು ಸಂಪೂರ್ಣ ಕ್ರಾಂತಿಯನ್ನೇ ಉಂಟುಮಾಡಬಲ್ಲುದು, ಏಕೆಂದರೆ, ಅದು ಸಂಪೂರ್ಣ ಲಕ್ಷ್ಯವನ್ನು ಬಯಸುತ್ತದೆ ಹಾಗೂ ಸಂಪೂರ್ಣ ಲಕ್ಷ್ಯ ಸಂಪೂರ್ಣವಾಗಿ ಉತ್ತಮವಾದುದು.

ಹಾಗಾಗಿ ನಾನು ನಿಮಗೆ ಸಲಹೆ ನೀಡುವುದೇನೆಂದರೆ, ನೀವು ಈ ಸಂಜೆ ಉಪನ್ಯಾಸವನ್ನು ಅದೇ ದೃಷ್ಟಿಯಿಂದಲೇ ಆಲಿಸಲು ಪ್ರಯತ್ನಿಸಿ, ಹಾಗೂ ಅದೆಷ್ಟು ಕಷ್ಟಕರವೆಂಬುದು ನಿಮಗೆ ತಿಳಿಯುತ್ತದೆ. ನಾನು ಹೇಳುವುದು ನಿಮಗೆ ಸಂಪೂರ್ಣ ಹೊಸ ವಿಷಯವಾಗಿರಬಹುದು, ಏಕೆಂದರೆ ನೀವು ಬೌದ್ಧಧರ್ಮದವರಾಗಿರಬಹುದು, ಕ್ರೈಸ್ತರಾಗಿರಬಹುದು, ಅಥವಾ ಹಿಂದೂಗಳಾಗಿರಬಹುದು ಹಾಗೂ ನೀವು ಒಂದು ನಿರ್ದಿಷ್ಟ ವಿಚಾರಪರಂಪರೆಯಲ್ಲಿ ಮುಳುಗಿರುವವರಾಗಿರಬಹುದು, ಹಾಗಾಗಿ ನಿಮ್ಮಲ್ಲಿ ಆಕ್ಷೇಪಣೆಗಳು, ಪ್ರತಿಕ್ರಿಯೆಗಳಿರುವುದು ಸಹಜ; ಹೇಳಿದುದನ್ನು ನಿಮಗೆ ಈಗಾಗಲೇ ತಿಳಿದಿರುವುದರೊಂದಿಗೆ ತುಲನೆಮಾಡಿ ನೋಡುತ್ತೀರಿ- ಅಂದರೆ ವಾಸ್ತವವಾಗಿ ನೀವು ನನ್ನ ಮಾತುಗಳನ್ನು ಆಲಿಸುತ್ತಿಲ್ಲವೆಂದೇ ಅರ್ಥ. ನಿಮ್ಮ ಮನಸ್ಸು ಅಚ್ಚರಿಪಡುವ ರೀತಿಯಲ್ಲಿ ತುಲನೆಮಾಡುತ್ತಿದೆ, ನಿರ್ಣಯಿಸುತ್ತಿದೆ ಹಾಗೂ ಮೌಲ್ಯಮಾಪನ ಮಾಡುತ್ತಿದೆ, ಹಾಗಾಗಿ ವಾಸ್ತವವಾಗಿ ಅದರ ಗಮನ ಬೇರೆಡೆಗೆ ಸೆಳೆದಿದೆ. ಈಗ ಮುಖ್ಯವಾಗುವುದೇನೆಂದರೆ, ಆ ವಿಶಿಷ್ಟ ಲಕ್ಷ್ಯದೊಂದಿಗೆ ಆಲಿಸುವುದು, ಅದು ಅಂತಹ ಕಷ್ಟವೂ ಅಲ್ಲ ಹಾಗೂ ತಲ್ಲೀನವಾಗುವುದೂ ಅಲ್ಲ- ಏನಾದರೂ ಕಂಡುಕೊಳ್ಳಬೇಕಾದಲ್ಲಿ, ಏನಾದರೂ ತುರ್ತಿದ್ದಲ್ಲಿ ನೀವು ಅದೇ ರೀತಿ ಆಲಿಸುತ್ತೀರಿ. ಈಗಿನ ವಿಶ್ವದ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂತಹ ತುರ್ತಿದೆ.....

ಇದನ್ನು ಕೊಂಚ ಅನುಸರಿಸಿ, ನಿಮಗೆ ಮನಸ್ಸಿದ್ದಲ್ಲಿ. ನಮ್ಮ ಮನಸ್ಸುಗಳು ಗೊಂದಲಮಯವಾಗಿವೆ. ನಾವು ಪ್ರತಿಯೊಬ್ಬರೂ ಗೊಂದಲಕ್ಕೊಳಗಾಗಿದ್ದೇವೆ, ಅದರ ಬಗ್ಗೆ ಎರಡು ಮಾತಿಲ್ಲ. ಧರ್ಮಗಳು ಸಂಪೂರ್ಣ ವಿಫಲವಾಗಿವೆ.... ಗೊಂದಲಕ್ಕೊಳಗಾದ ಮನಸ್ಸು ಹಲವಾರು ಗುರುಗಳಿಂದ ಹೇಳಲ್ಪಟ್ಟ ವಿಷಯಗಳಲ್ಲಿ ಮಾರ್ಗದರ್ಶನ ಕೋರಬಹುದು, ಅಥವಾ ಹತ್ತುಸಾವಿರ ಪ್ರಾರ್ಥನೆಗಳ ಪಠನ ಮಾಡಬಹುದು, ಆದರೂ ಮನಸ್ಸಿನ ಗೊಂದಲ ಹೋಗುವುದಿಲ್ಲ, ಏಕೆಂದರೆ ಮೂಲದಲ್ಲೇ ಅದು ಗೊಂದಲಕ್ಕೊಳಗಾಗಿದೆ. ಅಂತಹ ಮನಸ್ಸು ಅಂಚುಗಳಲ್ಲಿ ಮಾತ್ರ ಪರಿಹಾರ ಪಡೆಯಬಹುದು, ಆದರೆ ಅದರ ಮೂಲ ಕೇಂದ್ರದಲ್ಲಿ ಅನಿಶ್ಚತೆಯಿದೆ, ಅಸಾಧಾರಣ ಗೊಂದಲವಿದೆ ಹಾಗೂ ಆಲೋಚನೆಗಳ ಸ್ಫುಟತೆಯ ಕೊರತೆಯಿದೆ.
ಒಬ್ಬ ವ್ಯಕ್ತಿಗೆ ತಾನು ಗೊಂದಲದಲ್ಲಿರುವುದು ಅರಿವಾಗಿ ಹಾಗೂ ಆತ ಗತದೆಡೆಗೆ ನೋಡಲು ಅಥವಾ ತನ್ನ ಗೊಂದಲ ನಿವಾರಣೆಯ ಹಾದಿ ಮತ್ತೊಬ್ಬರಿಂದ ಪಡೆಯಲು ಅಸಾಧ್ಯವಾದ ಕ್ಷಣ, ಆ ಗೊಂದಲಕ್ಕೆ ಕಾರಣವಾದುದನ್ನು ಕಂಡುಕೊಳ್ಳುವುದು ಆತನ ಸಮಸ್ಯೆಯಾಗುತ್ತದೆ. ಆದರೆ ನಮ್ಮಲ್ಲಿ ಬಹಳಷ್ಟು ಮಂದಿ ನಾವು ಗೊಂದಲದಲ್ಲಿದ್ದೇವೆನ್ನುವುದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲವೆಂದು ನನಗನ್ನಿಸುತ್ತದೆ- ಹಾಗೂ ಈ ಧೋರಣೆ ವಾಸ್ತವವಾಗಿ ತರ್ಕಬದ್ಧವಲ್ಲ ಮತ್ತು ಆತ್ಮವಂಚನೆಯೂ ಹೌದು, ಏಕೆಂದರೆ ನಮ್ಮ ಸುತ್ತಮುತ್ತಲಿರುವುದು ಹಾಗೂ ನಮ್ಮೊಳಗಿರುವುದೆಲ್ಲವೂ ಗೊಂದಲದ ಮೂಲದೆಡೆಗೆ ಕೈಬೆರಳು ಮಾಡಿ ತೋರಿಸುತ್ತವೆ. ನಾವು ಒಂದು ರೀತಿಯ ಸ್ವ-ನಿರಾಕರಣ ಸ್ಥಿತಿಯಲ್ಲಿದ್ದೇವೆ. ನಾವು ಧಾರ್ಮಿಕ ಬದುಕು ನಡೆಸಲು ಪ್ರಯತ್ನಿಸುತ್ತೇವೆ, ಆದರೂ ಪ್ರಾಪಂಚಿಕ ಮನೋಭಾವ ಹೊಂದಿರುತ್ತೇವೆ; ನಮ್ಮಲ್ಲಿ ದುಃಖವಿದೆ, ಯಾತನೆಯಿದೆ, ನಿರಾಸೆಯಿದೆ, ವಿವಿಧ ದಿಕ್ಕುಗಳಿಗೆ ಬಲವಾಗಿ ಸೆಳೆಯುವ ಹತ್ತುಹಲವಾರು ಆಸೆಗಳಿವೆ. ಇವೆಲ್ಲವೂ ಒಂದು ಗೊಂದಲದ ಮನೋಭಾವವನ್ನು ಸೂಚಿಸುತ್ತವೆ, ಅಲ್ಲವೆ?
ನಾನೀಗ ಮಾತನಾಡುತ್ತಿರುವಂತೆ, ದಯವಿಟ್ಟು ನಿಮ್ಮ ಬದುಕನ್ನು ಗಮನಿಸಿ; ನಿಮ್ಮ ದಿನನಿತ್ಯದ ಚಟುವಟಿಕೆಗಳನ್ನು ಗಮನಿಸಿ, ನಿಮ್ಮ ಆಲೋಚನೆಗಳನ್ನು ಗಮನಿಸಿ. ವಾಸ್ತವವಾಗಿ ಏನು ನಡೆಯುತ್ತಿದೆಯೋ ನಾನು ಅದನ್ನು ಮಾತ್ರ ವಿವರಿಸುತ್ತಿದ್ದೇನೆ. ನೀವು ಪದಗಳನ್ನು ಮಾತ್ರ ಆಲಿಸುತ್ತಿದ್ದು, ಕೇಳಿದುದನ್ನು ನಿಮ್ಮದೇ ಮನಸ್ಸಿನ ಚಟುವಟಿಕೆಗಳಿಗೆ ಸಂಬಂಧ ಕಲ್ಪಿಸಿಕೊಳ್ಳದಿದ್ದಲ್ಲಿ, ಅದು ಯಾವುದೇ ಅರ್ಥವನ್ನು ಪಡೆದುಕೊಳ್ಳುವುದಿಲ್ಲ. ಆದರೆ ಕೇಳಿದುದನ್ನು ನಿಮ್ಮ ದಿನನಿತ್ಯದ ಬದುಕಿಗೆ, ನಿಮ್ಮ ವಾಸ್ತವ ಮನಸ್ಥಿತಿಗೆ ಸಂಬಂಧ ಕಲ್ಪಿಸಿಕೊಳ್ಳಲು ನಿಮಗೆ ಸಾಧ್ಯವಾದಲ್ಲಿ ಈ ಉಪನ್ಯಾಸ ಅತ್ಯಂತ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ, ಏಕೆಂದರೆ ಏನು ಮಾಡಬೇಕೆಂಬುದನ್ನು ನಾನು ನಿಮಗೆ ಹೇಳುತ್ತಿಲ್ಲವೆಂಬುದು ನಿಮಗೆ ಅರಿವಾಗುತ್ತದೆ; ಅದಕ್ಕೆ ತದ್ವಿರುದ್ಧವಾಗಿ, ವರ್ಣನೆಯ ಮೂಲಕ, ವಿವರಣೆಯ ಮೂಲಕ ನಿಮ್ಮದೇ ಆಲೋಚನೆಗಳನ್ನು ನೀವೇ ಆವಿಷ್ಕಾರ ಮಾಡಿಕೊಳ್ಳಲಿದ್ದೀರಿ. ಹೀಗೆ ನಿಮ್ಮನ್ನು ನೀವು ಅರಿತುಕೊಂಡಾಗ, ಸ್ಫುಟತೆ ತಾನಾಗಿ ಬರುತ್ತದೆ. ಈ ರೀತಿಯ ಸ್ಫುಟತೆಯನ್ನು ತರುವುದು ಸ್ವ-ಜ್ಞಾನವೇ ಹೊರತು ಪುಸ್ತಕದ ಮೇಲಿನ ಅವಲಂಬನೆಯಲ್ಲ, ಗುರುವಾಗಲೀ ಅಥವಾ ಮಾರ್ಗದರ್ಶಿಯಾಗಲೀ ಅಲ್ಲ...
ನೀವು ಗೊಂದಲದಲ್ಲಿರುವುದು ನಿಮ್ಮ ಗಮನಕ್ಕೆ ಬಾರದೇ ಹೋಗಿರಬಹುದು, ಆದರೆ ನೀವು ನಿಮ್ಮನ್ನೇ ಗಾಢವಾಗಿ ಅವಲೋಕಿಸಿಕೊಂಡಲ್ಲಿ ಆ ಗೊಂದಲಗಳು ಕಂಡುಬರುತ್ತವೆ. ಈ ಗೊಂದಲದ ಒಂದು ಪ್ರಮುಖ ಕಾರಣವೆಂದರೆ ಮಾರ್ಗದರ್ಶಕ ಅಧಿಕಾರದ ಮೇಲಿನ ನಿಮ್ಮ ಅತಿಯಾದ ವಿಶ್ವಾಸ: ಚರ್ಚ್ ಮೇಲಿನ ವಿಶ್ವಾಸ, ಪುರೋಹಿತರ ಮೇಲಿನ ವಿಶ್ವಾಸ, ಪುಸ್ತಕದ ಮೇಲಿನ ವಿಶ್ವಾಸ ಹಾಗೂ ಗುರುಗಳ ಅಧಿಕಾರದ ಮೇಲಿನ ವಿಶ್ವಾಸ. ಇತ್ತೀಚೆಗೆ ರಾಜಕೀಯವಾಗಿ ಮತ್ತು ಮಿಲಿಟರಿಯಾಗಿ ಕಂಡುಬಂದಿರುವಂತೆ ಎಲ್ಲ ಬದುಕೂ ಅಧಿಕಾರದ ಆಧಾರಿತವಾಗಿದೆ ಹಾಗೂ ಅಸ್ತಿತ್ವದ ಅತ್ಯಂತ ವಿನಾಶಕಾರಿ ರೂಪವೂ ಆಗಿದೆ. ದಬ್ಬಾಳಿಕೆ, ಅದು ಪ್ರಭುತ್ವದ್ದಾಗಿರಬಹುದು ಅಥವಾ ಪುರೋಹಿತಶಾಹಿಯದಾಗಿರಬಹುದು, ಆಲೋಚನೆಗಳಿಗೆ ಹಾಗೂ ನಿಜವಾದ ಆಧ್ಯಾತ್ಮಿಕ ಬದುಕಿಗೇ ಮಾರಕ; ಮತ್ತು ನಮ್ಮಲ್ಲಿ ಬಹಳಷ್ಟು ಜನ ಅಧಿಕಾರದ ಬಂಧೀಖಾನೆಗಳಲ್ಲಿ ಬದುಕುತ್ತಿರುತ್ತೇವೆ, ನಮಗಾಗಿ ಸ್ಫುಟವಾಗಿ ಮತ್ತು ನೇರವಾಗಿ ಆಲೋಚಿಸುವ ಸಾಮಥ್ರ್ಯವನ್ನೇ ಕಳೆದುಕೊಂಡುಬಿಟ್ಟಿರುತ್ತೇವೆ.
ನಿಮ್ಮ ಆಲೋಚನೆಗಳು ತಿಳಿಗೊಳದಂತೆ ಸ್ಫುಟವಾಗಿರಲು ಯಾವಾಗ ನೀವು ಯಾವುದೇ ಅಧಿಕಾರವನ್ನು ಅವಲಂಬಿಸುವುದಿಲ್ಲವೋ ಆಗ, ನಾನು ಹೇಳುತ್ತಿರುವ ಮೂಲಭೂತ ಬದಲಾವಣೆ ನಿಮ್ಮಲ್ಲಿ ಬರುತ್ತದೆ. ಈ ಅಧಿಕಾರವೆನ್ನುವುದು ಅತ್ಯಂತ ಸಂಕೀರ್ಣವಾದುದು; ಏಕೆಂದರೆ, ಇರುವುದು ಸಮಾಜದ, ಸರ್ಕಾರದ ಅಧಿಕಾರ ಮಾತ್ರವಲ್ಲ, ಜೊತೆಗೆ ಸಂಪ್ರದಾಯದ, ಪುಸ್ತಕಗಳ, ಪುರೋಹಿತರ, ಚರ್ಚಿನ ಮತ್ತು ದೇವಾಲಯದ ಅಧಿಕಾರಗಳೂ ಇವೆ. ನೀವು ಇವನ್ನೆಲ್ಲ ತಿರಸ್ಕರಿಸಿದರೂ ನಿಮ್ಮದೇ ಅನುಭವಗಳ ಅಧಿಕಾರ ನಿಮ್ಮ ಹೆಗಲಮೇಲಿರುತ್ತದೆ ಹಾಗೂ ಈ ಅನುಭವ ನಿಮ್ಮ ಗತವನ್ನಾಧರಿಸಿರುತ್ತದೆ. ಬದುಕೆಂದರೆ ಸವಾಲು ಮತ್ತು ಅದರ ಪ್ರತಿಕ್ರಿಯೆಗಳು ಹಾಗೂ ಸವಾಲಿಗೆ ನೀವು ಕೊಡುವ ಪ್ರತಿಕ್ರಿಯೆಯೇ ಅನುಭವ. ಆದರೆ ಆ ಅನುಭವ...... ನಿಮ್ಮ ಪರಿಸ್ಥಿತಿಗಳಿಂದ, ನಿಮ್ಮ ಗತದಿಂದ ನಿಯಂತ್ರಿಸಲ್ಪಡುತ್ತದೆ, ಹಾಗಾಗಿ ನಿಮ್ಮ ಅನುಭವ ಎಂದಿಗೂ ಸ್ವೋಪಜ್ಞ ಅನುಭವವಾಗುವುದಿಲ್ಲ; ಹಾಗಾಗಿ ಆಲೋಚನೆಗಳ ಸ್ಫುಟತೆಗೆ ನೀವು ಬಹುಶಃ ನಿಮ್ಮ ಅನುಭವಗಳನ್ನು ಅವಲಂಬಿಸಲಾಗುವುದಿಲ್ಲ. ಇದು ಅರಿತುಕೊಳ್ಳಬೇಕಾದ ಬಹಳ ಮುಖ್ಯ ವಿಷಯವೆಂದು ನನಗನ್ನಿಸುತ್ತದೆ.
ಅದನ್ನು ಸರಳವಾಗಿ ಹೇಳಬೇಕೆಂದರೆ: ನೀವು ಹಿಂದು, ಬೌದ್ಧ, ಮುಸಲ್ಮಾನ ಅಥವಾ ಕ್ರೈಸ್ತರಾಗಿರಬಹುದು, ಅಥವಾ ಕಮ್ಯೂನಿಸ್ಟರಾಗಿರಬಹುದು, ಅಂದರೆ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಆಲೋಚಿಸುವಂತೆ ನಿಮಗೆ ಹೇಳಿಕೊಡಲಾಗಿದೆಯೆಂದು ಅರ್ಥ, ಹಾಗೂ ಅದರ ಹಿನ್ನೆಲೆಯಲ್ಲಿಯೇ ನಿಮ್ಮ ಅನುಭವಗಳಿರುತ್ತವೆ- ಆ ಅನುಭವ ಆಯಾ ಸವಾಲಿನ ನಿಮ್ಮ ಪ್ರತಿಕ್ರಿಯೆಗಳಾಗಿರುತ್ತವೆ. ಇದು ಪ್ರತಿನಿತ್ಯ ನಡೆಯುತ್ತಿರುತ್ತದೆ. ನಿಮ್ಮ ಗತದ ಅನುಭವದ ಮನಸ್ಥಿತಿಯಿಂದಾಗಿ ಸವಾಲಿಗೆ ನೀವು ಪ್ರತಿಕ್ರಯಿಸುತ್ತಿರುತ್ತೀರಿ, ಹಾಗೂ ನಿಮ್ಮ ಅನುಭವ ನಿಮ್ಮ ಮನಸ್ಥಿತಿಯನ್ನು ಮತ್ತಷ್ಟು ಬಲಗೊಳಿಸುತ್ತದೆ, ಇದು ಕಣ್ಣಿಗೆ ಕಾಣುವ ಸತ್ಯ. ಹಾಗಾಗಿ ಪುರೋಹಿತರ, ದೇವಾಲಯದ, ಪುಸ್ತಕದ ಅಧಿಕಾರದ ಜೊತೆಗೆ ನಿಮ್ಮ ವೈಯಕ್ತಿಕ ಅನುಭವಗಳ ಮೂಲಕ ಕ್ರೋಢೀಕರಣಗೊಂಡ ಜ್ಞಾನದ ಅಧಿಕಾರವೂ ನಿಮ್ಮ ಮೇಲಿರುತ್ತದೆ.
ಯಾವುದೇ ಸಮಯದಲ್ಲಿ ಅಧಿಕಾರದ ಮೇಲೆ ವಿಶ್ವಾಸವಿರಿಸುವುದು ಸತ್ಯದ ಅನ್ವೇಷಣೆಯ ಸಾಮಥ್ರ್ಯವನ್ನು ನಾಶಗೊಳಿಸುತ್ತದೆ. ಅಧಿಕಾರದಿಂದ ಸ್ವಾತಂತ್ರ್ಯ ಪಡೆಯುವುದೇ ಮೂಲಭೂತ ಕ್ರಾಂತಿಯ ಹಾಗೂ ಸತ್ಯದ,  ದೇವರೆಂದರೆ ಏನೆಂದು ಅರಿತುಕೊಳ್ಳುವ ಅನ್ವೇಷಣೆಯ ವೈಯಕ್ತಿಕ ರೂಪಾಂತರದ ಪ್ರಾರಂಭ; ಮತ್ತು ನಮ್ಮಲ್ಲಿನ ಪ್ರತಿಯೊಬ್ಬರಲ್ಲಿನ ಈ ಆವಿಷ್ಕಾರವೇ ಒಂದು ವಿಭಿನ್ನ ಜಗತ್ತನ್ನು ರೂಪಿಸಬಲ್ಲುದು.
.....ನಿಮಗೆ ಹೇಳಿರುವುದನ್ನೇ ನೀವು ಕೇವಲ ಪುನರುಚ್ಛರಿಸುವಿರಾದಲ್ಲಿ ನೀವು ಸತ್ಯವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ; ಹಾಗಾಗಿ ಮನಸ್ಸಿನ ಮತ್ತು ಹೃದಯದ ಸಂಪೂರ್ಣ ಪರಿಶುದ್ಧತೆ ಅವಶ್ಯಕತೆಯಿದೆ. ನಾವು ಈ ಪಯಣವನ್ನು ಹೊಸದಾಗಿ ಪ್ರಾರಂಭಿಸಬೇಕಾಗಿದೆ; ಅಂದರೆ, ಅವೆಷ್ಟೇ ಉದಾತ್ತ ಹಾಗೂ ಮಹತ್ವದ್ದಾಗಿದ್ದರೂ ಸಹ ನಾವು ಯಾವುದೇ ಊಹೆಗಳೊಂದಿಗೆ, ಯಾವುದೇ ನಿರ್ಣಯಗಳೊಂದಿಗೆ ಪಯಣವನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಯಾವುದೇ ಪೂರ್ವನಿರ್ಧಾರಗಳೊಂದಿಗೆ ಮನಸ್ಸು ಆಲೋಚಿಸಲು ಪ್ರಾರಂಭಿಸಿದರೆ, ಅದು ಆಲೋಚನೆಯೇ ಅಲ್ಲ. ಪದಶಃ ಅರ್ಥದಲ್ಲಿ, ಆಲೋಚಿಸಬಲ್ಲ ಸಾಮಥ್ರ್ಯವುಳ್ಳ ಮನಸ್ಸೆಂದರೆ ಅದರಲ್ಲಿ ಯಾವುದೇ ಪೂರ್ವನಿರ್ಧಾರಗಳಿರುವುದಿಲ್ಲ, ಹಾಗಾಗಿ ಅದು ಸದಾ ಹೊಸದಾಗಿ ಪ್ರಾರಂಭಿಸುತ್ತದೆ; ಹಾಗೂ ಅಂತಹ ಮನಸ್ಸಿಗೆ ಸತ್ಯದ ಆವಿಷ್ಕಾರದ ಸಾಧ್ಯತೆಯಿರುತ್ತದೆ...ತನ್ನ ಗೊಂದಲಗಳಿಂದ ಮುಕ್ತಗೊಳ್ಳಬೇಕಾದ ಮನಸ್ಸಿಗೆ ತಾನು ಅಧಿಕಾರದ ಸಂಕೋಲೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಅರಿವಿರಬೇಕು. ನನ್ನ ಮಾತಿನ ಅರ್ಥದ ಅಧಿಕಾರವೆಂದರೆ, ನೀವು ರಸ್ತೆಯ ಎಡ ಅಥವಾ ಬಲದಿಕ್ಕಿನಲ್ಲೇ ಚಲಿಸಬೇಕೆಂದು ಹೇಳುವ ಅಧಿಕಾರವಲ್ಲ. ನಾನು ಹೇಳುತ್ತಿರುವ ಅಧಿಕಾರ ಇನ್ನೂ ಗಾಢ ಹಾಗೂ ಮಹತ್ತರವಾದುದು- ಮನಸ್ಸನ್ನು ಬಂಧನದಲ್ಲಿಟ್ಟುಕೊಂಡಿರುವ ಅಧಿಕಾರ.   
ಮನಸ್ಸು ನಿರಂತರವಾಗಿ ಸುರಕ್ಷತೆಯನ್ನು ಬಯಸುತ್ತಿರುತ್ತದೆ, ಅಲ್ಲವೆ? ಅದು ಸದಾ ಸುರಕ್ಷಿತವಾಗಿರಬೇಕು, ಆರಾಮವಾಗಿರಬೇಕೆಂದು ಬಯಸುತ್ತದೆ; ಸದಾ ತನ್ನ ಸುರಕ್ಷಿತತೆಯ ಬಗ್ಗೆ, ಅಥವಾ ತಾನು ಗುರುತಿಸಿಕೊಂಡಿರುವ ಒಂದು ನಿರ್ದಿಷ್ಟ ಗುಂಪಿನ ಸುರಕ್ಷಿತತೆಯ ಬಗ್ಗೆ ಆಲೋಚಿಸುವಂತಹ ಮನಸ್ಸು ಗೊಂದಲಗಳನ್ನು ಸೃಷ್ಟಿಸಲೇಬೇಕು, ಹಾಗೂ ಜಗತ್ತಿನಲ್ಲಿ ನಡೆಯುತ್ತಿರುವುದೇ ಇದು. ನಮ್ಮಲ್ಲಿ ಬಹುಪಾಲು ಜನ ಯಾವುದಾದರೂ ಒಂದು ಗುಂಪಿನೊಂದಿಗೆ, ಒಂದು ವರ್ಗದೊಂದಿಗೆ, ದೇಶದೊಂದಿಗೆ, ಧರ್ಮದೊಂದಿಗೆ ಗುರುತಿಸಿಕೊಂಡಿದ್ದೇವೆ, ಅಂದರೆ ನಾವು ಚೂರುಚೂರುಗಳಾಗಿ, ವಿಭಾಗಗಳಾಗಿ ಆಲೋಚಿಸುತ್ತೇವೆ; ಹಾಗಾಗಿ ಹಲವಾರು ಅತ್ಯಂತ ಅವಶ್ಯಕ ಹಾಗೂ ತುರ್ತು ಸಮಸ್ಯೆಗಳ ಬಗೆಗೆ ಆಲೋಚಿಸಲು ನಮ್ಮಿಂದ ಅಸಾಧ್ಯವಾಗಿದೆ. ಆದರೆ, ಸ್ಫುಟವಾಗಿ ಆಲೋಚಿಸಬಲ್ಲ ವ್ಯಕ್ತಿಯೊಬ್ಬ, ತನ್ನೊಳಗೇ ತಾನು ಯಾವುದೇ ಅಂಜಿಕೆಯಿಲ್ಲದೆ- ಪ್ರಜ್ಞಾಸ್ಥಿತಿಯಲ್ಲಿ ಮಾತ್ರವಲ್ಲ ಅಪ್ರಜ್ಞಾಸ್ಥಿತಿಯಲ್ಲೂ ಪ್ರವೇಶಿಸಬಲ್ಲನೋ ಅಂತಹ ವ್ಯಕ್ತಿ ಅಸಾಮಾನ್ಯ ಜೀವಂತಿಕೆ ಹಾಗೂ ಸೃಷ್ಟಿಯ ಚೇತನಶಕ್ತಿ ಹೊಂದಿರುತ್ತಾನೆಂಬ ಭರವಸೆಯನ್ನು ನಾನು ನೀಡಬಲ್ಲೆ. ಅಂತಹ ವ್ಯಕ್ತಿಗಳು ಮಾತ್ರ ಒಂದು ವಿಭಿನ್ನ ಜಗತ್ತನ್ನು ತರಬಲ್ಲರು- ವಿಜ್ಞಾನಿಯಲ್ಲ ಹಾಗೂ ಖಂಡಿತವಾಗಿ ಪುರೋಹಿತನಲ್ಲ ಅಥವಾ ರಾಜಕಾರಣಿಯಲ್ಲ.... ಸತ್ಯದ ಆವಿಷ್ಕಾರಕ್ಕೆ ಕಾರಣವಾಗುವ ಇಂತಹ ವೈಯಕ್ತಿಕ ಕ್ರಾಂತಿ, ಜಗತ್ತನ್ನು ರೂಪಾಂತರಿಸುತ್ತದೆ- ಯಾವುದೇ ಆರ್ಥಿಕ ಕ್ರಾಂತಿಯಲ್ಲ.
ಕಾತುರರಾಗಿರುವವರು ತಮ್ಮ ಸ್ಥಿತಿಯ ಬಗೆಗೆ, ತಮ್ಮದೇ ವೈಲಕ್ಷಣಗಳ ಬಗೆಗೆ ಹಾಗೂ ತಮ್ಮ ಮಾನಸಿಕ ಬಂಧನಗಳ ಬಗೆಗೆ ಅರಿವು ಹೊಂದಿರಬೇಕಾದುದು ಇಲ್ಲಿ ಅತ್ಯವಶ್ಯಕ, ಏಕೆಂದರೆ ಇಲ್ಲಿ ಯಾವುದೇ ಆತ್ಮ-ವಂಚನೆಯಿರಬಾರದು. ನೀವು ನಿಮ್ಮ ದಿನನಿತ್ಯದ ನಡವಳಿಕೆಯಲ್ಲಿ ನಿಮ್ಮ ಪತ್ನಿಯೊಂದಿಗೆ, ನಿಮ್ಮ ಮಗುವಿನೊಂದಿಗೆ, ನಿಮ್ಮ ಮೇಲಧಿಕಾರಿಯೊಂದಿಗೆ ಹೇಗೆ ನಡೆದುಕೊಳ್ಳುತ್ತೀರಿ ಎಂಬುದನ್ನು ಗಮನಿಸುವುದರ ಮೂಲಕ ನೀವು ನಿಮ್ಮನ್ನು ಆವಿಷ್ಕಾರ ಮಾಡಿಕೊಳ್ಳುತ್ತೀರಿ; ಹಾಗೂ ಆ ಆವಿಷ್ಕಾರದಿಂದಲೇ ವಿವೇಚನೆ ಪ್ರಾರಂಭವಾಗುತ್ತದೆ. ಸ್ವ-ಜ್ಞಾನದಿಂದ ಸ್ಫುಟತೆ ಲಭಿಸುತ್ತದೆ, ಮತ್ತು ನೀವು ಯಾರೊಬ್ಬರ ಮೇಲೂ ಅವಲಂಬಿಸದಿದ್ದಲ್ಲಿ ನಿಮಗೆ ನೀವೇ ಮಾರ್ಗದರ್ಶಿಗಳಾಗುತ್ತೀರಿ, ಅಂಧಕಾರದ ನಡುವೆ ಇರುವ ಪ್ರಕಾಶದಂತೆ.
ಕೊಲಂಬೊ, ಶ್ರೀಲಂಕಾ, ಉಪನ್ಯಾಸ 2, 16ನೇ ಜನವರಿ 1957

ಇಲ್ಲಿ ಯೂರೋಪಿನಲ್ಲಿ, ಮತ್ತು ಭಾರತ ಹಾಗೂ ಅಮೆರಿಕಾದಲ್ಲೂ ಸಹ ನಾನು ಹೇಳುತ್ತಿರುವುದರಲ್ಲಿ ಹೊಸತೇನೂ ಇಲ್ಲವೆಂದು ಹಲವಾರು ಮಂದಿ ಹೇಳುತ್ತಿದ್ದಾರೆ. ಇಲ್ಲಿ ಸ್ವರ್ಗದಡಿಯಲ್ಲಿ ಯಾವುದೂ ಹೊಸತಿಲ್ಲ. ಆದರೆ ಆವಿಷ್ಕಾರ ಮಾಡುವ ಪ್ರತಿಯೊಬ್ಬ ಮನುಷ್ಯನಿಗೂ,........ ಎಲ್ಲವೂ ಹೊಸತು. ಹಾಗಾಗಿ ನನ್ನ ಮಾತುಗಳಲ್ಲಿ ನೀವು ಹೊಸತೇನನ್ನೂ ಕಾಣದಿದ್ದಲ್ಲಿ, ಅದು ನನ್ನ ತಪ್ಪಲ್ಲ; ಅದು ಯಾರು ತಮ್ಮಲ್ಲೇ ಹೊಸತನವನ್ನು ಹೊಂದಿರುವುದಿಲ್ಲವೋ ಅಂಥವರ ತಪ್ಪು (ಅದನ್ನು ತಪ್ಪೇ ಅನ್ನುವುದಾದಲ್ಲಿ). ಪ್ರತಿ ದಿನದಲ್ಲೂ ಹೊಸತನ, ಕಾತುರವಿರುವಂತೆ, ಪ್ರತಿಯೊಂದು ವಸಂತವೂ ಹೊಸದಾಗಿರುವಂತೆ, ಸ್ವೋಪಜ್ಞವಾಗಿರುವಂತೆ, ಪರಿಶುದ್ಧವಾಗಿರುವಂತೆ, ವಿಭಿನ್ನವಾಗಿರುವಂತೆ, ನೀವೂ ಸಹ ವಿಭಿನ್ನವಾಗಿರಬೇಕು. ಹೊಸತನ್ನು ಕಂಡುಹಿಡಿಯಬೇಕಾದಲ್ಲಿ, ಹಳೆಯದರಿಂದ ಬಿಡುಗಡೆಹೊಂದುವ ಇಚ್ಛೆ ನಿಮ್ಮ ಹೃದಯದಲ್ಲಿರಬೇಕು.
ಈರ್ಡೆ, ಹಾಲೆಂಡ್, 7 ಆಗಸ್ಟ್ 1929

No comments: