Translate

ಭಾನುವಾರ, ನವೆಂಬರ್ 04, 2012

ಅಘೋಷಿತ ಸ್ತ್ರೀವಾದಿ ಲೇಖಕಿ - ಇಸ್ಮತ್ ಚುಗ್ತಾಯ್‌

ಈ ದಿನದ (04-11-12) `ಪ್ರಜಾವಾಣಿ'ಯ ಸಾಹಿತ್ಯ ಪುರವಣಿಯಲ್ಲಿನ ನನ್ನ ಲೇಖನ/ಪುಸ್ತಕ ಪರಿಚಯ:

http://prajavani.net/include/story.php?news=11377&section=178&menuid=13


ಅಘೋಷಿತ ಸ್ತ್ರೀವಾದಿ ಲೇಖಕಿ
ಪ್ರಖ್ಯಾತ ಉರ್ದು ಸಾಹಿತಿ ಇಸ್ಮತ್ ಚುಗ್ತಾಯ್‌ರನ್ನು (1919-1991) ಇಪ್ಪತ್ತನೇ ಶತಮಾನದ ದಿಟ್ಟ ಹಾಗೂ ವಿವಾದಾಸ್ಪದ ಉರ್ದು ಲೇಖಕಿ ಎಂದೇ ಗುರುತಿಸಲಾಗುತ್ತದೆ. ಅವರ ಆತ್ಮಕತೆ `ಎ ಲೈಫ್ ಇನ್ ವರ್ಡ್ಸ್: ಮೆಮ್ವೋರ್ಸ್‌ ಬೈ ಇಸ್ಮತ್ ಚುಗ್ತಾಯ್`  ಕೃತಿಯನ್ನು ಪೆಂಗ್ವಿನ್ ಇಂಡಿಯಾ ಇತ್ತೀಚೆಗೆ ಪ್ರಕಟಿಸಿದೆ. ಅವರ ಹಲವಾರು ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿರುವ ಎಂ.ಅಸಾಉದ್ದೀನ್ ಇದನ್ನೂ ಸಹ ಅನುವಾದಿಸಿದ್ದಾರೆ. ಇಸ್ಮತ್‌ರವರ ಉರ್ದು ಮೂಲ ಕೃತಿ `ಕಾಗಜ್ ಹೈ ಪೈರಹನ್`  ಅವರ ಆತ್ಮಕತೆ ಎನ್ನುವುದಕ್ಕಿಂತ  ಅವರ ಬದುಕಿನ ತುಣುಕುಗಳನ್ನು ಓದುಗರೆದುರಿಗಿಡುತ್ತದೆ. ಏಕೆಂದರೆ ಇದರಲ್ಲಿನ ಲೇಖನಗಳು ಅನುಕ್ರಮದಲ್ಲಿಲ್ಲ. ಇವು1979ರಿಂದ 1980ರವರೆಗೆ ಉರ್ದು ಪತ್ರಿಕೆಯಾದ `ಆಜ್ ಕಲ್`ನಲ್ಲಿ ಪ್ರಕಟವಾದುವು ಹಾಗೂ ಅವು  ಅವರು ತೀರಿಕೊಂಡ ಮೂರುವರ್ಷಗಳ ನಂತರ 1994ರಲ್ಲಿ `ಕಾಗಜ್ ಹೈ ಪೈರಹನ್` ಹೆಸರಿನಲ್ಲಿ ಪ್ರಕಟವಾಯಿತು.   ಬಾಲ್ಯದಿಂದ  ವೃದ್ಧಾಪ್ಯದವರೆಗಿನ ಸಂಗತಿಗಳನ್ನು ಪ್ರಾಮಾಣಿಕವಾಗಿ ಈ ಬರಹಗಳಲ್ಲಿ ಅವರು ತೆರೆದಿಟ್ಟಿದ್ದಾರೆ.

ಮತ್ತೊಬ್ಬ ಉರ್ದು ಸಾಹಿತಿ ಸಾದತ್ ಹಸನ್ ಮಂಟೋನ ಸಮಕಾಲೀನರಾದ ಇಸ್ಮತ್ ಮಂಟೋನ ಆತ್ಮೀಯ ಗೆಳತಿಯಾಗಿದ್ದರು. ಮಂಟೊ, ಕ್ರಿಷನ್ ಚಂದರ್ ಮತ್ತು ರಾಜಿಂದರ್ ಸಿಂಗ್ ಬೇಡಿಯ ಜೊತೆಗೆ ಇಸ್ಮತ್ ಉರ್ದು ಸಣ್ಣ ಕಥಾ ಸಾಹಿತ್ಯದ ನಾಲ್ಕನೇ ಆಧಾರ ಸ್ತಂಭವಾಗಿದ್ದರು. ಮಹಿಳೆಯರು, ಅದರಲ್ಲೂ ಮುಸಲ್ಮಾನ ಮಹಿಳೆಯರು ಮನೆಯಿಂದಲೇ ಹೊರಗೆ ಬರಬಾರದು ಎಂದಿದ್ದ ಸಮಯದಲ್ಲಿ ಎಲ್ಲವನ್ನೂ ಧಿಕ್ಕರಿಸಿ ಬರಹಗಾರಳಾಗಲು ಹೊರಟಂಥ ಬಂಡಾಯಗಾರ್ತಿ ಆಕೆ. ಇಸ್ಮತ್ ಚುಗ್ತಾಯ್ ಚಿಕ್ಕ ಹುಡುಗಿಯಾಗಿದ್ದಾಗಲೇ ಆಕೆಯ ಅಣ್ಣ ಮಿರ್ಜಾ ಅಜೀಮ್ ಬೇಗ್ ಚುಗ್ತಾಯ್ ಖ್ಯಾತ ಲೇಖಕನಾಗಿದ್ದ. ಆತನೇ ಅವರ ಮೊದಲು ಗುರು ಮತ್ತು ಮಾರ್ಗದರ್ಶಿ. ಥಾಮಸ್ ಹಾರ್ಡಿಯ ಕೃತಿಗಳ ಜೊತೆಗೆ ಹಿಜಾಬ್ ಇಮ್ತಿಯಾಜ್ ಅಲಿ, ಮಜ್ನೂನ್ ಗೋರಖ್‌ಪುರಿ ಮತ್ತು ನಿಯಾಜ್ ಫತೇಪುರಿಯವರ ಕೃತಿಗಳನ್ನು ಓದಿದ್ದರು ಅವರು. ಅದಕ್ಕೂ ಮೊದಲು ಯಾರಿಗೂ ತಿಳಿಯದಂತೆ ಗೋಪ್ಯವಾಗಿ ಪ್ರೇಮದ ಕತೆಗಳನ್ನು ಅವರು ಬರೆಯುತ್ತಿದ್ದರು. ಹೆಣ್ಣಾಗಿ ಬರೆಯುವಂಥ `ಅಪರಾಧ` ಮಾಡುತ್ತಿದ್ದುದರಿಂದ ಸಿಕ್ಕಿಹಾಕಿಕೊಂಡರೆ ಶಿಕ್ಷಿಸುವರೆಂಬ ಭಯವಿತ್ತು. ದಾಸ್ತೋವ್‌ಸ್ಕಿ, ಡಿಕನ್ಸ್, ಟಾಲ್‌ಸ್ಟಾಯ್, ಸೋಮರ್‌ಸೆಟ್ ಮಾಮ್, ಚೆಕೋವ್, ಓ ಹೆನ್ರಿ ಮುಂತಾದ ಲೇಖಕರು ಅವರ ಮೆಚ್ಚಿನ ಲೇಖಕರಾಗಿದ್ದರು. `ಓ ಹೆನ್ರಿಯಿಂದಲೇ ಕತೆ ಬರೆಯುವುದನ್ನು ಕಲಿತೆ` ಎಂದು ಅವರೇ ಹೇಳಿಕೊಂಡಿದ್ದಾರೆ. ಮುನ್ಷಿ ಪ್ರೇಮ್‌ಚಂದ್ ಉರ್ದು -ಹಿಂದಿ ಲೇಖಕರಲ್ಲಿ ಆಕೆಗೆ ಪ್ರಿಯವಾದವರು. ಆ ನಂತರ ಅವರು ಗಾಂಧಿಯ ಕೃತಿಗಳನ್ನೂ ಮೆಚ್ಚುಗೆಯಿಂದ ಓದತೊಡಗಿದರು. ಕಾಲೇಜಿನಲ್ಲಿ ಗ್ರೀಕ್ ನಾಟಕಗಳನ್ನು, ಶೇಕ್ಸ್‌ಪಿಯರ್‌ನ ನಾಟಕಗಳನ್ನು, ಇಬ್ಸೆನ್ ಮತ್ತು ಬರ್ನಾಡ್ ಶಾರವರ ನಾಟಕಗಳನ್ನು ಅತ್ಯಂತ ಆಸಕ್ತಿಯಿಂದ ಓದಿದರು.
                ಶಾಲೆಗೆ ಹೋಗಿ ಓದಬೇಕೆಂಬ ಬಯಕೆ ಅವರಿಗೆ ಎಷ್ಟಿತ್ತೆಂದರೆ, ಅವರಿಗೆ ಹದಿನೈದು ವರ್ಷವಾಗಿ ಒಂಭತ್ತನೇ ತರಗತಿಯಲ್ಲಿದ್ದಾಗ ಆಕೆಗೆ ಮದುವೆಮಾಡಬೇಕೆನ್ನುವ ಸಿದ್ಧತೆಯನ್ನು ತಂದೆತಾಯಿಗಳು ಮಾಡುತ್ತಿದ್ದರು. ಒಂದು ದಿನ ಶಾಲೆಯಿಂದ ಮನೆಗೆ ಬಂದಾಗ ಮನೆಯಲ್ಲಿ ಚಿನಿವಾರರು ಮತ್ತು ದರ್ಜಿಗಳು ಬೀಡುಬಿಟ್ಟಿದ್ದರು. ಆಕೆಯೊಂದಿಗೆ ಅಂತಹ ವಿಷಯಗಳನ್ನು ಮಾತನಾಡುವಂತಹ ಅವಿವಾಹಿತ ಅಕ್ಕ ತಂಗಿಯರೂ ಇರಲಿಲ್ಲ. ಕೊನೆಗೆ ವಿಷಯ ತಿಳಿದ  ಅವರು ಮದುವೆಯಾದಲ್ಲಿ ತನ್ನ ಓದನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲವೆಂದು ತನಗೆ ಮದುವೆಯೇ ಬೇಡವೆಂದು ಹಠ ಹಿಡಿದರು. `ನಿನಗೆ ಹುಚ್ಚು ಹಿಡಿದಿದೆ` ಎಂದು ತಾಯಿ ಬೈದರು. `ನೀನು ಗಂಡನ ಮನೆಗೆ ಹೋದಮೇಲೆ ಓದಬಹುದಲ್ಲಾ?` ಎಂದರು ತಂದೆ. `ಗಂಡನ ಮನೆಯಲ್ಲಿ ಓದಿದ ಹಾಗೆ! ಆ ಗಂಡನೂ ನನ್ನ ತಂದೆಯಂಥವನೇ ಆದಲ್ಲಿ ಪ್ರತಿ ವರ್ಷ ಒಂದು ಮಗುವನ್ನು ಹೆತ್ತುಕೊಡಲೆ? ಅಥವಾ ಪರೀಕ್ಷೆಗಳನ್ನು ಬರೆಯಲೆ?` ಎಂದು ಮನಸ್ಸಿನಲ್ಲೇ ಗೊಣಗಿ ಆ ಮದುವೆ ನಿಲ್ಲಿಸಲು ಉಪಾಯವೊಂದನ್ನು ಹುಡುಕಿದರು. ಅವರ ಮಾವನ ಮಗನೊಬ್ಬ ಬಾಂಬೆಯಲ್ಲಿ ವೈದ್ಯ ಪದವಿ ಓದುತ್ತಿದ್ದ. ಇಸ್ಮತ್ ಅವನಿಗೊಂದು ಪತ್ರ ಬರೆದು `ನನ್ನನ್ನು ಈಗ ನೀನೇ ಪಾರು ಮಾಡಬೇಕು. ಅದಕ್ಕಾಗಿ ನೀನು ಏನೂ ಮಾಡಬೇಕಾಗಿಲ್ಲ. ನೀನು ನಿಮ್ಮ ತಂದೆಗೆ ನನ್ನನ್ನು ಕಂಡರೆ ಇಷ್ಟ ಹಾಗೂ ನನ್ನನ್ನು ಮದುವೆಯಾಗುತ್ತೇನೆ ಎಂದು ಪತ್ರ ಬರೆದುಬಿಡು. ಇದು ಮಾತ್ರ ನನ್ನ ಮದುವೆಯನ್ನು ನಿಲ್ಲಿಸಬಲ್ಲದು. ಆಮೇಲೆ ನೀನು ಹೆದರಿಕೊಳ್ಳುವ ಅವಶ್ಯಕತೆಯೇನೂ ಇಲ್ಲ. ನಾನು  ಪ್ರಮಾಣಮಾಡಿ ಹೇಳುತ್ತೇನೆ ನಿನ್ನನ್ನು ಮದುವೆಯಾಗುವುದಿಲ್ಲವೆಂದು. ದಯವಿಟ್ಟು ಈ ಮದುವೆಯನ್ನು ನಿಲ್ಲಿಸಿಬಿಡು` ಎಂದು ಕೋರಿದ್ದರು. ಆತ ಅದೇ ರೀತಿ ಮಾಡಿದ. ಕೆಲದಿನಗಳ ನಂತರ ಅವಳ ಮಾವ ಓಡಿಬಂದು, `ನೋಡಿಲ್ಲಿ, ನಮ್ಮ ಶೌಕತ್‌ಗೆ ಇಸ್ಮತ್ ಕಂಡರೆ ಇಷ್ಟವಂತೆ. ನೀನು ಅವಳನ್ನು ಹೊರಗಿನವನಿಗೆ ಮದುವೆ ಮಾಡಿಕೊಡುವುದು ಬೇಡ. ಬೇಕಾದರೆ ಈ ಪತ್ರ ನೋಡು` ಎಂದು ತೋರಿಸಿದ. ಇಸ್ಮತ್‌ಳ ಅಮ್ಮನ ಮುಖವೂ ಸಂತೋಷದಿಂದ ಊರಗಲವಾಯಿತು. ದರ್ಜಿಗಳು, ಚಿನಿವಾರರು ಕತ್ತರಿಸಿದ ಬಟ್ಟೆ ಹಾಗೂ ಕರಗಿಸಿದ ಚಿನ್ನ ಬಿಟ್ಟು ಹೊರಟರು. ಮದುವೆ  ಅನಿರ್ದಿಷ್ಟಕಾಲ ಮುಂದೆ ಹೋಗಿತ್ತು.
ಇಪ್ಪತ್ತ ಮೂರು ವರ್ಷಗಳಾದಾಗ ತಾನೂ ಬರೆಯಬಲ್ಲೆ ಎಂದು ಅವರಿಗೆ ಆತ್ಮವಿಶ್ವಾಸ ಬಂದಾಗ ತಮ್ಮ ಮೊಟ್ಟಮೊದಲ ಕತೆ `ಫಾಸದಿ` ಬರೆದರು. ಅದು ಪ್ರತಿಷ್ಠಿತ ಸಾಹಿತ್ಯ ಪತ್ರಿಕೆ `ಸಾಖಿ`ಯಲ್ಲಿ ಪ್ರಕಟವಾಯಿತು. ಅದನ್ನು ಓದಿದವರು ಅಜೀಮ್ ಬೇಗ ಚುಗ್ತಾಯ್ (ಆಕೆಯ ಸಾಹಿತಿ ಅಣ್ಣ) ಯಾವಾಗ ತನ್ನ ಹೆಸರು ಬದಲಿಸಿಕೊಂಡು ಬರೆಯಲು ಶುರುಮಾಡಿದ ಎಂದು ಅಚ್ಚರಿಗೊಂಡರಂತೆ! 1936ರಲ್ಲಿ  ಪದವಿ ಶಿಕ್ಷಣಕ್ಕೆ ಓದುತ್ತಿರುವಾಗಲೇ  ಅವರು ಲಕ್ನೋದಲ್ಲಿನ  ಪ್ರಗತಿಪರ ಬರಹಗಾರರ ಸಂಘದ ಸಭೆಗೆ ಹಾಜರಾದರು. ಇಂಗ್ಲೆಂಡಿನಲ್ಲಿ ಪ್ರಾರಂಭವಾಗಿದ್ದ ಆ ಸಂಘ ಭಾರತಕ್ಕೂ ಬಂದಿತ್ತು ಹಾಗೂ ಅದು ಫಯಾಜ್ ಅಹ್ಮದ್ ಫಯಾಜ್, ಸಜ್ಜದ್ ಜಹೀರ್, ಕೈಫಿ ಆಜ್ಮಿಯಂಥವರನ್ನು ಆಕರ್ಷಿಸಿತ್ತು. ಇವರೆಲ್ಲಾ ಉರ್ದು ಸಾಹಿತ್ಯ ಹೊಸ ದಿಕ್ಕಿನೆಡೆ ಸಾಗಲು ಸಂಪೂರ್ಣ ಹೊಸ ಮೌಲ್ಯಗಳನ್ನು ಹುಟ್ಟುಹಾಕುತ್ತಿದ್ದರು. ಅಲ್ಲಿ ಭೇಟಿಯಾದ ರಶೀದ್ ಜಾನ್ ಎಂಬ ವೈದ್ಯೆ ಮತ್ತು ಲೇಖಕಿ ಇಸ್ಮತ್ ಮೇಲೆ ಬೀರಿದ ಪ್ರಭಾವ  ಅಗಾಧವಾದುದು.
ಪದವಿ ಶಿಕ್ಷಣದ ನಂತರ ಶಿಕ್ಷಣ ವಿಷಯದಲ್ಲಿ ಬ್ಯಾಚುಲರ್ ಪದವಿ ಪಡೆದರು. ಈ ಎರಡೂ ಪದವಿಗಳನ್ನು ಪಡೆದ ಮೊಟ್ಟ ಮೊದಲ ಭಾರತದ ಮುಸಲ್ಮಾನ ಮಹಿಳೆ ಅವರು. ನಂತರ ಬಾಂಬೆಯಲ್ಲಿನ ಮಹಿಳಾ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಕಗೊಂಡರು. ಶಾಲೆಗಳ ನಿರೀಕ್ಷಕರೂ ಆಗಿದ್ದರು. ಕೆಲವು ಸಮಯ ಆಲಿಘರ್‌ನಲ್ಲಿ ಕೆಲಸ ಮಾಡಿದರು. ಅಲ್ಲಿ ಮಾಸ್ಟರ್ಸ್‌ ಪದವಿ ಮಾಡುತ್ತಿದ್ದ ಶಾಹೀದ್ ಲತೀಫ್‌ನನ್ನು ಭೇಟಿಯಾದರು. ಈ ಗೆಳೆತನ ಪ್ರೇಮವಾಗಿ ಅವರಿಬ್ಬರೂ 1942ರಲ್ಲಿ ಮದುವೆಯಾದರು. ಅವರೇ  ಬರೆದುಕೊಂಡಿರುವಂತೆ ಶಾಹೀದ್‌ನನ್ನು ಮದುವೆಯಾಗುವ ಮುನ್ನ, `ಮತ್ತೊಮ್ಮೆ ಸರಿಯಾಗಿ ಆಲೋಚಿಸು, ನಾನು ಸ್ವತಂತ್ರ ಆಲೋಚನೆಯುಳ್ಳವಳು, ನಾನು ನಿನಗೆ ಸರಿಹೊಂದುತ್ತೇನೆಯೋ ಇಲ್ಲವೋ` ಎಂದೂ ಹೇಳಿದ್ದರು. ತಮ್ಮ ಮದುವೆಯ ಬಗ್ಗೆ ಹೇಳುತ್ತ ಅವರು `ಗಂಡು ಹೆಣ್ಣನ್ನು ದೇವತೆ ಎನ್ನುವಂತೆ ಪೂಜಿಸುತ್ತಾನೆ, ಪ್ರೀತಿಸುತ್ತಾನೆ, ಗೌರವಿಸುತ್ತಾನೆ ಆದರೆ ಆಕೆಯನ್ನು ತನ್ನ ಸಮಾನಳು ಎಂದು ಸ್ವೀಕರಿಸಲು ಮಾತ್ರ ಸಿದ್ಧವಿರುವುದಿಲ್ಲ. ಒಬ್ಬ ಅನಕ್ಷರಸ್ಥ ಹೆಣ್ಣಿನೊಂದಿಗೆ ಆತ ಹೇಗೆ ಗೆಳೆಯನಾಗಿರಲು ಸಾಧ್ಯ? ಆದರೆ ಗೆಳೆತನಕ್ಕೆ ಬೇಕಾಗಿರುವುದು ಪ್ರೀತಿ ಪ್ರೇಮಗಳು, ಶಿಕ್ಷಣವಲ್ಲ. ಶಾಹೀದ್ ನನ್ನನ್ನು ತನ್ನ ಸರಿಸಮಳೆಂದು ಪರಿಗಣಿಸಿದ. ಅದಕ್ಕಾಗಿಯೇ ನಮ್ಮ ದಾಂಪತ್ಯ ಜೀವನ ಸುಖಕರವಾಗಿತ್ತು` ಎಂದಿದ್ದಾರೆ. ಮದುವೆಗೆ ಎರಡು ತಿಂಗಳಿದ್ದಾಗಲೇ  ಅವರ ಕತೆ `ಲಿಹಾಫ್  (ಕೌದಿ) ಪ್ರಕಟವಾಯಿತು ಹಾಗೂ ಅದು ವಿವಾದವನ್ನೂ ಹುಟ್ಟುಹಾಕಿತು. ಇಂದಿಗೂ ಈ ಉಪಖಂಡದಲ್ಲಿ ಹೆಣ್ಣೊಬ್ಬಳು ಬರೆದ ಅತ್ಯಂತ ವಿವಾದಾಸ್ಪದ ವಿಷಯದ ಕತೆಯೆಂದು ಇದು ಪರಿಗಣಿಸಲ್ಪಟ್ಟಿದೆ.  ನವಾಬನ ಪತ್ನಿಯೊಬ್ಬಳು ತನ್ನ ಗಂಡ ತನಗಾಗಿ ಸಮಯವನ್ನೇ ಕೊಡದಿದ್ದಾಗ ತನ್ನ ಸಹಜ ಲೈಂಗಿಕ ತೃಷೆಯ ತೃಪ್ತಿಯನ್ನು ಹಾಗೂ ಭಾವನಾತ್ಮಕ ಸಾಂತ್ವನವನ್ನು ತನ್ನ ಸೇವಕಿಯಲ್ಲಿ  ಕಂಡುಕೊಳ್ಳುತ್ತಾಳೆ. ವಯಸ್ಕ ಹೆಣ್ಣು ನಿರೂಪಕಿ ವಹಿಸಬೇಕಾದ ಎಚ್ಚರಿಕೆ ಮತ್ತು ನಿಗ್ರಹವನ್ನು ತೊಡಗಿಸಲು ಈ ಕತೆಯ ನಿರೂಪಣೆಯನ್ನು ಒಂಭತ್ತು ವರ್ಷದ ಹುಡುಗಿಯ ದೃಷ್ಟಿಯಿಂದ ಮಾಡಲಾಗಿದೆ.
ಇಸ್ಮತ್ 1941ರಲ್ಲಿ `ಲಿಹಾಫ್`  ಕತೆಯನ್ನು ಪ್ರಕಟಣೆಗೆ ಕಳುಹಿಸಿದಾಗ ಪತ್ರಿಕೆಯ ಸಂಪಾದಕ ಅಂತಹ ಕತೆಯನ್ನು ಹೆಣ್ಣೊಬ್ಬಳು ಬರೆಯಲು ಸಾಧ್ಯವೇ ಇಲ್ಲ, ಯಾರೋ ಗಂಡಸರು ಹೆಣ್ಣಿನ ಹೆಸರಿನಲ್ಲಿ ಬರೆದಿದ್ದಾರೆ ಎಂದೇ ನಂಬಿದ್ದ. ಕತೆ ಪ್ರಕಟವಾದ ನಂತರ ಓದುಗರು ಮತ್ತು ವಿಮರ್ಶಕರು ಕೃತಿ ಮತ್ತು ಕೃತಿಕಾರಳನ್ನು ಖಂಡಿಸಿದರು. ಕತೆ ಅಶ್ಲೀಲವೆಂದು ನ್ಯಾಯಾಲಯದಲ್ಲಿ  ದಾವೆ ಹೂಡಲಾಯಿತು. ಲಾಹೋರಿನ ನ್ಯಾಯಾಲಯದಲ್ಲಿ ನಾಲ್ಕು ವರ್ಷ ವಿಚಾರಣೆ ನಡೆಯಿತು ಆದರೆ ಕೃತಿಯಲ್ಲಿ ಅಶ್ಲೀಲದ `ನಾಲ್ಕಕ್ಷರ`  ಸಿಗದಿದ್ದುದರಿಂದ ದಾವೆ ವಜಾ ಆಯಿತು. ಅದೇ ಸಮಯದಲ್ಲಿ ಸಾದತ್ ಹಸನ್ ಮಂಟೋನ ಕತೆಗಳ ಮೇಲೂ  ಅಶ್ಲೀಲವೆಂದು ದಾವೆ ಹೂಡಲಾಗಿತ್ತು. ಎಷ್ಟೋ ಸಾರಿ ಇಬ್ಬರೂ ಜೊತೆಯಲ್ಲಿಯೇ ಲಾಹೋರಿನ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಲಾಹೋರಿನ ನ್ಯಾಯಾಲಯದಲ್ಲಿ  ನಡೆದ ವಿಚಾರಣೆಯ ಸನ್ನಿವೇಶಗಳನ್ನು ಇಸ್ಮತ್ ದಾಖಲಿಸಿದ್ದಾರೆ. ಕತೆ ಅಶ್ಲೀಲವೆಂದು ಒಪ್ಪಿಕೊಂಡು ಕ್ಷಮಾಪಣೆ ಕೇಳಿಕೊಂಡುಬಿಡಿ, ಜುಲ್ಮಾನೆ ಹಣ ತಾವೇ ಕಟ್ಟುತ್ತೇವೆಂದು ಆಕೆಯ ಹಲವಾರು `ಹಿತೈಷಿ` ಗಳು ಆಕೆಗೆ ಸಲಹೆ ಕೊಟ್ಟಿದ್ದರು. ತನ್ನ ಕತೆ ಅಶ್ಲೀಲವೆಂದು ರುಜುವಾತಾದಲ್ಲಿ  ತಾನು ಶಿಕ್ಷೆ ಅನುಭವಿಸುತ್ತೇನೆಯೇ ಹೊರತು ಕ್ಷಮಾಪಣೆ ಕೇಳುವುದಿಲ್ಲವೆಂದಿದ್ದರು ಇಸ್ಮತ್. ಆ ಕತೆಯಲ್ಲಿನ `ಪ್ರೇಮಿಗಳು`  ಮತ್ತು `ಸೆಳೆದುಕೊಳ್ಳುವುದು`  ಎನ್ನುವ ಪದಗಳು ಅಶ್ಲೀಲವೆಂದು ದಾವೆ ಹೂಡಿದ್ದಾತ ಅದನ್ನು ಸಮರ್ಥಿಸಿಕೊಳ್ಳಲಾಗದೆ ಕೇಸು ಸೋತ. ವಿಚಾರಣೆ ಮುಗಿದ ನಂತರ ನ್ಯಾಯಾಧೀಶರು ಆಕೆಯನ್ನು ತಮ್ಮ ಕೋಣೆಗೆ ಕರೆಸಿಕೊಂಡು, `ನಿಮ್ಮ ಬಹುಪಾಲು ಎಲ್ಲಾ ಕತೆಗಳನ್ನು ಓದಿದ್ದೇನೆ. ಅವೇನೂ ಅಶ್ಲೀಲವಲ್ಲ. ಲಿಹಾಫ್ ಸಹ ಅಶ್ಲೀಲವಲ್ಲ` ಎಂದಿದ್ದರು.
`ಕಲಿಯಾಂ`  ಮತ್ತು `ಕೋಟೇನ್`  ಅವರ ಆರಂಭದ ಕಥಾ ಸಂಕಲನಗಳು. ಅದಾದನಂತರ ಹಲವಾರು ಸಂಕಲನಗಳು ಪ್ರಕಟವಾದವು- `ಏಕ್ ಬಾತ್` , `ಚುಯ್ ಮುಯ್` , `ದೋ ಹಾತ್` , `ಖರೀದ್ ಲೋ` , `ಏಕ್ ಕತ್ರಾಯೆ ಖೂನ್`  ಮತ್ತು `ಥೋಡಿ ಸಿ ಪಾಗಲ್` . `ತೇರ‌್ಹಿ ಲಖೀರ್`  ಮತ್ತು `ಸೌದಾಯೆ`  ಎಂಬ ಕಾದಂಬರಿಗಳು ಮತ್ತು `ಜಿದ್ದಿ` , `ದಿಲ್ ಕಿ ದುನಿಯಾ`  ಹಾಗೂ `ಮಾಸೂಮಾ`  ಎಂಬ ಕಿರುಕಾದಂಬರಿಗಳೂ ಪ್ರಕಟವಾದವು. ಇದರ ಜೊತೆಗೆ  ಹಲವಾರು ಪ್ರಬಂಧಗಳು ಮತ್ತು ಲೇಖನಗಳೂ ಪ್ರಕಟವಾದವು. ತನ್ನ ಪತಿಯೊಂದಿಗೆ ಹನ್ನೆರಡು ಚಲನಚಿತ್ರಗಳಿಗೆ ಚಿತ್ರಕತೆಗಳನ್ನು ಬರೆದರು ಮತ್ತು ಸ್ವತಂತ್ರವಾಗಿ ಐದು ಚಲನಚಿತ್ರಗಳನ್ನು ಸಹ ನಿರ್ಮಿಸಿದರು. ಶಶಿಕಪೂರ್‌ನ `ಜುನೂನ್` ಸಿನೆಮಾದಲ್ಲಿ ಒಂದು ಪಾತ್ರವನ್ನು ಸಹ ನಿರ್ವಹಿಸಿದ್ದರು.
ಇಸ್ಮತ್ ಪ್ರಜ್ಞಾಪೂರ್ವಕವಲ್ಲದ ಮತ್ತು ಅಘೋಷಿತ ಸ್ತ್ರೀವಾದಿ. ಭಾರತೀಯ ಮುಸಲ್ಮಾನ ಮಹಿಳೆಯರಿಗೆ ಆಗ ಓದಲು ಸಿಗುತ್ತಿದ್ದ ಪುಸ್ತಕವೆಂದರೆ 1905ರಲ್ಲಿ ಪ್ರಕಟವಾಗಿದ್ದ ಮುಸಲ್ಮಾನ ಸಂಸ್ಕೃತಿಯ ಬಗ್ಗೆ, ಸಂಪ್ರದಾಯ ಮತ್ತು ಆಚರಣೆಗಳ ಬಗ್ಗೆ ವಿವರಗಳಿದ್ದ ಎರಡು ಸಂಪುಟಗಳ `ಗೂದರ್ ಕ ಲಾಲ್`  ಎಂಬ ಕಾದಂಬರಿ. ಅದರ ಕರ್ತೃ ವಲೀದಾ ಅಫ್ಜಲ್ ಅಲಿ, ಅಂದರೆ `ಅಫ್ಜಲ್ ಅಲಿಯ ತಾಯಿ`  ಎಂದರ್ಥ. ಆಗ ಹೆಣ್ಣೊಬ್ಬಳು ಕೃತಿಕಾರಳಾಗಿದ್ದರೂ ಆಕೆ ತನ್ನ ಹೆಸರನ್ನು ಹಾಕಿಕೊಳ್ಳುವಂತಿರಲಿಲ್ಲ!
ಇಸ್ಮತ್‌ಗೆ ಇಬ್ಬರು ಪುತ್ರಿಯರಿದ್ದು ಪತಿಯ ಮರಣಾನಂತರ ಬಾಂಬೆಯಲ್ಲೇ ವಾಸಿಸುತ್ತಿದ್ದರು. ಇಸ್ಮತ್ ಚುಗ್ತಾಯ್ 1991ರ ಅಕ್ಟೋಬರ್ 24ರಂದು ಕೊನೆಯುಸಿರೆಳೆದರು.




ಸೋಮವಾರ, ಅಕ್ಟೋಬರ್ 15, 2012

ಈ ದಿನದ ಪಾಠ ಗುರುತ್ವಾಕರ್ಷಣೆಯ ಬಗೆಗೆ- ನನ್ನ ವ್ಯಂಗ್ಯ ಚಿತ್ರ


ಮುಲ್ಲಾ ನಸ್ರುದ್ದೀನ್ ಕತೆಗಳ 10ನೇ ಕಂತು

ಅಕ್ಟೋಬರ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 10ನೇ ಕಂತು.
ಚಿತ್ರ: ಮುರಳೀಧರ ರಾಠೋಡ್

ಇಬ್ಬರ ಸ್ಥಳದಲ್ಲಿ ನಾಲ್ವರು
ನಸ್ರುದ್ದೀನನ ಪತ್ನಿ ಅಕಾಲ ಮರಣಕ್ಕೀಡಾಗಿದ್ದಳು. ಸ್ವಲ್ಪ ಕಾಲಾನಂತರ ಆತ ಮತ್ತೊಬ್ಬ ವಿಧವೆಯನ್ನು ಮದುವೆಯಾದ. ಒಂದು ದಿನ ಅವರಿಬ್ಬರೂ ಮಲಗಿದ್ದಾಗ ಇಬ್ಬರೂ ತಮ್ಮ ಮೊದಲ ಸಂಗಾತಿಗಳನ್ನು ನೆನೆಸಿಕೊಳ್ಳತೊಡಗಿದರು. ಆಕೆ, `ನಿನಗೆ ಗೊತ್ತೆ, ನನ್ನ ಮೊದಲ ಗಂಡ ಮಹಾನ್ ಸುಂದರನಾಗಿದ್ದ' ಎಂದಳು.
`ನನ್ನ ಮೊದಲ ಪತ್ನಿ ಅದ್ವಿತೀಯ ಸುಂದರಿಯಾಗಿದ್ದಳು' ಎಂದ ನಸ್ರುದ್ದೀನ್.
`ನನ್ನ ಮೊದಲ ಪತಿ ಉತ್ತಮ ಉದ್ಯೋಗದಲ್ಲಿದ್ದ'
`ನನ್ನ ಮೊದಲ ಪತ್ನಿ ಅತ್ಯಂತ ರುಚಿಕರ ಅಡುಗೆ ಮಾಡುತ್ತಿದ್ದಳು'.
'ನನ್ನ ಗಂಡ ಶಕ್ತಿಶಾಲಿಯಾಗಿದ್ದ'.
'ನನ್ನ ಪತ್ನಿ ಅತ್ಯಂತ ಚತುರಳಾಗಿದ್ದಳು'.
ಮಾತು ಹೀಗೇ ಬೆಳೆಯುತ್ತಾ ಹೋಗಿ ಇಬ್ಬರೂ ಕೈ ಕೈ ಮಿಲಾಯಿಸಿದರು. ಆಕೆ ಮಂಚದಿಂದ ಕೆಳಕ್ಕೆ ಬಿದ್ದು ಮೈ ಕೈಗೆ ಗಾಯ ಮಾಡಿಕೊಂಡಳು. ಪರಿಸ್ಥಿತಿ ಬಿಗಡಾಯಿಸಿದೆ ಎಂದು ಅರಿತ ಆಕೆ ನಸ್ರುದ್ದೀನನಿಗೆ ಬುದ್ಧಿ ಕಲಿಸಬೇಕೆಂದು ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ದಳು.
ಆಕೆಯ ವಾದವನ್ನು ಆಲಿಸಿದ ನ್ಯಾಯಾಧೀಶರು ನಸ್ರುದ್ದೀನನ ವಾದವನ್ನು ಮಂಡಿಸುವಂತೆ ಹೇಳಿದರು. ಅದಕ್ಕೆ ನಸ್ರುದ್ದೀನ್, `ವಿಷಯ ಸರಳವಾದದ್ದು ಸ್ವಾಮಿ. ನಮ್ಮ ಮನೆಯಲ್ಲಿರುವ ಮಂಚ ತೀರಾ ಚಿಕ್ಕದು, ಅದರಲ್ಲಿ ಇಬ್ಬರು ಮಾತ್ರ ಮಲಗಬಹುದು. ಆದರೆ ನಿನ್ನೆ ರಾತ್ರಿ ನಮ್ಮ ಜೊತೆಗೆ ಮಲಗಲು ನನ್ನ ಪತ್ನಿಯ ಮೊದಲ ಗಂಡ ಹಾಗೂ ನನ್ನ ಮೊದಲ ಪತ್ನಿಯೂ ಬಂದದ್ದರಿಂದ ತೀರಾ ಇಕ್ಕಟ್ಟಾಗಿ ಈಕೆ ಮಂಚದಿಂದ ಬಿದ್ದು ಗಾಯ ಮಾಡಿಕೊಂಡಿದ್ದಾಳೆ ಅಷ್ಟೆ!' ಎಂದ.


ಆ ಬದಿ ಈ ಬದಿ
ಒಮ್ಮೆ ನಸ್ರುದ್ದೀನ್ ನದಿಯ ದಡವೊಂದರಲ್ಲಿ ಕುಳಿತು ನದಿಯ ಜುಳುಜುಳು ನಾದವನ್ನು ಕೇಳುತ್ತಾ ಮೈಮರೆತಿದ್ದ. ನದಿಯ ಆ ಬದಿಯ ದಂಡೆಯಲ್ಲಿದ್ದ ಒಬ್ಬ ವ್ಯಕ್ತಿ ನಸ್ರುದ್ದೀನನಿಗೆ ಕೇಳಿಸುವಂತೆ, `ಹೇ. ನಾನು ನದಿಯ ಆ ಬದಿಗೆ ಬರುವುದು ಹೇಗೆ?' ಎಂದು ಜೋರಾಗಿ ಕೂಗಿದ. ಅದಕ್ಕೆ ಮುಲ್ಲಾ ನಸ್ರುದ್ದೀನ್, `ನೀನು ಆ ಬದಿಯಲ್ಲಿಯೇ ಇದ್ದೀಯಲ್ಲವೆ?' ಎಂದು ಕೂಗಿ ಹೇಳಿದ.

ಮರಳಿ ದೊರಕಿದ ಸಂತೋಷ
ಇಬ್ಬರು ವ್ಯಕ್ತಿಗಳು ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಅವರಲ್ಲಿ ಒಬ್ಬಾತ ಹೇಳುತ್ತಿದ್ದ, `ನೋಡು ನನ್ನಲ್ಲಿ ಬೇಕಾದಷ್ಟು ಹಣವಿದೆ, ಆದರೆ ನನಗೆ ಸಂತೋಷವೆಂಬುದೇ ಇಲ್ಲ. ಸುಖ ಸಂತೋಷ ಅರಸಿ ಹಣದ ಚೀಲ ಹಿಡಿದು ಎಲ್ಲೆಲ್ಲೋ ಅಲೆದಾಡಿದೆ, ಆದರೆ ಎಲ್ಲೂ ನನಗೆ ಸಂತೋಷ, ತೃಪ್ತಿ ಸಿಗಲೇ ಇಲ್ಲ' ಎಂದ. ಅಲ್ಲೇ ಹಾದು ಹೋಗುತ್ತಿದ್ದ ಮುಲ್ಲಾ ನಸ್ರುದ್ದೀನನಿಗೆ ಈ ಮಾತು ಕೇಳಿಸಿತು. ಆತ ಕೂಡಲೇ ಆ ರೀತಿ ಹೇಳಿದ ವ್ಯಕ್ತಿಯ ಕೈಯಲ್ಲಿ ಇದ್ದ ಚೀಲವನ್ನು ಕಸಿದುಕೊಂಡು ಓಡಿದ. ಚೀಲ ಕಳೆದುಕೊಂಡ ವ್ಯಕ್ತಿ `ಅಯ್ಯೋ ನನ್ನ ಚೀಲ' ಎನ್ನುತಾ ನಸ್ರುದ್ದೀನನ ಹಿಂದೆ ಓಡಿದ. ಆದರೆ ಜೋರಾಗಿ ಓಡಿದ ನಸ್ರುದ್ದೀನ್ ಅಲ್ಲೇ ಕಟ್ಟಡವೊಂದರ ಮರೆಯಲ್ಲಿ ಅವಿತುಕೊಂಡ. `ಚೀಲ ಹೋಯಿತಲ್ಲಾ' ಎಂದು ದುಃಖಿಸುತ್ತಿದ್ದ ವ್ಯಕ್ತಿ ಇನ್ನೇನು ಹಿಂದಿರುಗಬೇಕು ಎನ್ನುವಷ್ಟರಲ್ಲಿ ರಸ್ತೆಯ ಮಧ್ಯದಲ್ಲಿ ಆ ಚೀಲ ಕಾಣಿಸಿತು. `ಹೋ ನನ್ನ ಚೀಲ ಸಿಕ್ಕಿತು' ಎಂದು ಆ ವ್ಯಕ್ತಿ ಸಂತೋಷದಿಂದ ಕುಣಿದಾಡಿದ. `ಸಂತೋಷ ಅರಸುವ ವ್ಯಕ್ತಿಗೆ ಸಂತೋಷ ತಂದುಕೊಡುವ ವಿಧಾನಗಳಲ್ಲಿ ಇದೂ ಒಂದು' ಎಂದುಕೊಂಡ ಅಲ್ಲೇ ಮರೆಯಲ್ಲಿದ್ದ ನಸ್ರುದ್ದೀನ್.

ಸೋಮವಾರ, ಅಕ್ಟೋಬರ್ 01, 2012

ಪರಿಸರ ರಕ್ಷಣೆ: ಗಾಂಧೀಜಿ ಚಿಂತನೆ

4/6/2006ರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ.


ಪರಿಸರ ರಕ್ಷಣೆ: ಗಾಂಧೀಜಿ ಚಿಂತನೆ

ಅಭಿವೃದ್ಧಿ ಸಾಧಿಸುವ ಭರದಲ್ಲಿ ಪರಿಸರ ನಾಶವಾಗುತ್ತಲೇ ಇದೆ. ಹೀಗಾಗಿ ಇವತ್ತು ಪರಿಸರ ಸಂರಕ್ಷಣೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಹಾತ್ಮ ಗಾಂಧೀಜಿ ಅವರು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಇಂದಿಗೂ ಪ್ರಸ್ತುತವಾದವರು. ಪರಿಸರದ ಬಗೆಗಿನ ಗಾಂಧೀಜಿಯವರ ಕಾಳಜಿ ಅನುಕರಣೀಯ, ಅಷ್ಟೇ ಅಲ್ಲ ಸಮಸ್ಯೆಗೆ ಸುಲಭ ಪರಿಹಾರ.

ಇಂದು ವೈಜ್ಞಾನಿಕ ಸಾಧನೆ ಉತ್ತುಂಗದಲ್ಲಿದೆ. ಐವತ್ತು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದಷ್ಟು ಪ್ರಗತಿ ವಿಜ್ಞಾನರಂಗದಲ್ಲಾಗಿದೆ. ಪ್ರಗತಿ ಮತ್ತು ಆಧುನಿಕತೆಯನ್ನು ಸಾಧಿಸುವ ಭರದಲ್ಲಿ ಪರಿಸರವನ್ನು ಸಂಪೂರ್ಣ ಕಡೆಗಣಿಸಿದುದರ ಪರಿಣಾಮವಾಗಿ ಇಂದು ಪರಿಸರ ಸಂರಕ್ಷಣೆ ಅತ್ಯಂತ ದೊಡ್ಡ ಸವಾಲು ಹಾಗೂ ಸಮಸ್ಯೆಯಾಗಿದೆ. ಇದುವರೆಗಿನ ಭೂಮಿಯ ಮೇಲಿನ ಎಲ್ಲ ಪ್ರಾಣಿಗಳಿಗಿಂತ ಮಾನವ ಅತ್ಯಂತ ಅಪಾಯಕಾರಿಯಾದ ಪ್ರಾಣಿಯಾಗಿದ್ದಾನೆ. ವಿಜ್ಞಾನಿಗಳು ಹೇಳುವಂತೆ ಭೂಮಿಯ ಚರಿತ್ರೆಯಲ್ಲಿ ಇದುವರೆಗೆ ಆರು ಸಾರಿ ಭೂಮಿಯ ಜೀವಸಂಕುಲಗಳು ನಿರ್ನಾಮವಾದ ಘಟನೆಗಳು ಸಂಭವಿಸಿವೆ. ಆ ಆರೂ ಸಾರಿಯೂ ಜೀವ ಮತ್ತೆ ಪುಟಿದೆದ್ದಿದೆ. ಆದರೆ ಇನ್ನು ಮುಂದೆ ಮಾನವನ ದುರಾಸೆ, ಅಜಾಗರೂಕತೆಯಿಂದ ನಡೆಯಬಹುದಾದ ದುರಂತಗಳಿಂದಾಗುವ ಜೀವಸಂಕುಲ ವಿನಾಶದಿಂದ ಬಹುಶಃ ಜೀವಸಂಕುಲ ಮತ್ತೆ ಚೇತರಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ.

ಪರಿಸರ ಸಂರಕ್ಷಣೆಯ ಹಾದಿಯನ್ನು ಅರಸುತ್ತಾ ಹೊರಟಲ್ಲಿ ನಾವು ನಮಗರಿವಿಲ್ಲದಂತೆ ಮಹಾತ್ಮ ಗಾಂಧಿಯ ಹೆಜ್ಜೆಗಳನ್ನೇ ಅನುಸರಿಸತೊಡಗುತ್ತೇವೆ. ಪರಿಸರ ಕ್ಷೇತ್ರದಲ್ಲಿ ಹಿಂದೆಂದಿಗಿಂತ ಈಗ ಗಾಂಧಿ ಹೆಚ್ಚು ಪ್ರಸ್ತುತರಾಗುತ್ತಿದ್ದಾರೆ. ಗಾಂಧಿ ಇಂದಿನ ನಮ್ಮ ಎಲ್ಲ ಆಧುನಿಕತೆಯ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡಬಲ್ಲವರಾಗಿದ್ದಾರೆ. ಈಗಿನ ಮನುಷ್ಯ ಎದುರಿಸುತ್ತಿರುವ ಪರಿಸರ ಸಮಸ್ಯೆಗಳು ಗಾಂಧಿಯ ಸಮಯದಲ್ಲಿ ಇರಲಿಲ್ಲ ಹಾಗೂ ಈ ಸಮಸ್ಯೆಗಳು ಇಷ್ಟು ಬೃಹದಾಕಾರವಾಗಿ ಬೆಳೆಯುತ್ತವೆಂದು ಯಾರೂ ಊಹಿಸಿರಲಿಲ್ಲ. ಆದರೆ ಆಗಲೇ ಅವನ್ನೆಲ್ಲ ಕಂಡ ಮಹಾನ್ ದಾರ್ಶನಿಕ ಆತ. ಆತನ ಬದುಕು ಮತ್ತು ಆಚರಣೆಗಳೇ ನಮಗಿಂದು ದಾರಿದೀಪಗಳಾಗಿವೆ. ಗಾಂದಿಗೆ ನೈತಿಕ ಬಲದ ಸಾಮರ್ಥ್ಯವಿತ್ತು ಏಕೆಂದರೆ ಅವರು ಬೋಧಿಸು ತ್ತಿದ್ದುದನ್ನು ಅವರೇ ಆಚರಿಸುತ್ತಿದ್ದರು. ಅಹಿಂಸೆ ಮತ್ತು ಅಸಹಕಾರ ಮನೋಭಾವವೆಂಬ ತೀರಾ ವೈಯಕ್ತಿಕ ನೈತಿಕತೆಯನ್ನು ಒಂದು ಬಲಿಷ್ಠ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಯನ್ನಾಗಿ ರೂಪಿಸಿದರು. ಅವರ ಹೋರಾಟ ಸತ್ಯದ ಆಧಾರವಾಗಿತ್ತು, ಅದಕ್ಕೇ ಅದನ್ನು ಸತ್ಯಾಗ್ರಹವೆಂದು ಕರೆದರು.

ಗಾಂಧಿ ಹೊರದೇಶದಲ್ಲಿ ಉನ್ನತ ಶಿಕ್ಷಣ ಪಡೆದವರಾದ್ದರಿಂದ ಅವರಿಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಅರಿವಿತ್ತು. ಅದಕ್ಕೆ ಅವರು ೧೯೦೯ರಲ್ಲೇ ತಮ್ಮ `ಹಿಂದ್ ಸ್ವರಾಜ್'ನಲ್ಲಿ ಭಾರತಕ್ಕೆ ಪಾಶ್ಚಿಮಾತ್ಯ ನಾಗರಿಕತೆಯನ್ನು ಬರಮಾಡಿಕೊಳ್ಳುವುದೆಂದರೆ `ಭಸ್ಮಾಸುರ'ನನ್ನು ಆಹ್ವಾನಿಸಿದಂತೆ ಎಂದು ಹೇಳಿದ್ದರು. `ಪಾಶ್ಚಿಮಾತ್ಯ ನಾಗರಿಕತೆ `ಕೊಳ್ಳುಬಾಕ' ಸಂಸ್ಕೃತಿಯದಾಗಿದ್ದು ಅದನ್ನೇ ಅಭಿವೃದ್ಧಿ ಎಂದುಕೊಂಡಿದೆ. ಪದಶಃ ಅರ್ಥದಲ್ಲಿ ಅದು ನಾಗರಿಕತೆಯೇ ಅಲ್ಲ' ಎಂದಿದ್ದರು. ಕೈಗಾರಿಕಾ ಸಮಾಜವೊಂದರ ಮೊಟ್ಟಮೊದಲ ಪರಿಕಲ್ಪನೆಯೆಂದರೆ ಸಂಪನ್ಮೂಲಗಳು ಅಸೀಮಿತವಾಗಿವೆ ಎನ್ನುವುದು. `ಇಂಗ್ಲೆಂಡ್‌ನಂತೆ ನಮ್ಮ ದೇಶವೂ ಅಭಿವೃದ್ಧಿಯಾಗುವುದು ಯಾವಾಗ?' ಎಂದು ಒಬ್ಬರು ಕೇಳಿದ್ದಕ್ಕೆ, `ಇಂಗ್ಲೆಂಡ್‌ನ ಅಭಿವೃದ್ಧಿಗೆ ಭೂಮಿಯ ಅರ್ಧ ಸಂಪನ್ಮೂಲಗಳೇ ಬರಿದಾಗಿವೆ. ಭಾರತ ಆ ರೀತಿ ಆಗಬೇಕಾದಲ್ಲಿ ಭೂಮಿಯಂತಹ ಇನ್ನೆಷ್ಟು ಗ್ರಹಗಳು ಬರಿದಾಗಬೇಕೋ' ಎಂದಿದ್ದರು. ಬ್ರಿಟಿಶ್ ಆಳ್ವಿಕೆಯಲ್ಲಿ ಭಾರತದ ಸಂಪನ್ಮೂಲಗಳನ್ನು ದೋಚಿ ಬ್ರಿಟನ್‌ನ ಮಿಲ್ಲು ಮತ್ತು ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. `ಅಂತಹ ಅಭಿವೃದ್ಧಿ ಬೇಡವೇ ಬೇಡ. ಮನುಷ್ಯನ ಆಸೆಗೆ ಕೊನೆಯೇ ಇಲ್ಲ. ತನ್ನ ದುರಾಸೆಯನ್ನು ತೃಪ್ತಿಪಡಿಸಿಕೊಳ್ಳಲು ಪಶ್ಚಿಮದ ನಾಗರಿಕತೆ ಪ್ರಕೃತಿಯ ಮೇಲೆ ಮೇಲುಗೈ ಸಾಧಿಸಲು ಯತ್ನಿಸುತ್ತಿದೆ' ಎಂದಿದ್ದರು ಗಾಂಧಿ. `ಪ್ರತಿಯೊಬ್ಬನ ಅವಶ್ಯಕತೆ ಈಡೇರಿಸುವಷ್ಟು ಭೂಮಿಯಲ್ಲಿದೆ, ಆದರೆ ದುರಾಸೆಯ ಈಡೇರಿಕೆಯಷ್ಟಲ್ಲ' ಎಂಬ ಗಾಂಧಿಯ ಮಾತು ಈಗಷ್ಟೇ ಪ್ರಸ್ತುತವಲ್ಲ ಇನ್ನು ಸಾವಿರ ವರ್ಷ ಕಳೆದರೂ ಅಪ್ರಸ್ತುತವಾಗಲಾರದು. ಗಾಂಧಿ ಮನುಷ್ಯನ ಅವಶ್ಯಕತೆ ಮತ್ತು ಬೇಡಿಕೆಗಳನ್ನು ಪ್ರತ್ಯೇಕವಾಗಿ ನೋಡುತ್ತಿದ್ದರು. ಭೂಮಿಯ ಸಂಪನ್ಮೂಲಗಳು ಈಗಿನವರಿಗೆ ಮಾತ್ರವಲ್ಲ, ಅದರ ಅವಶ್ಯಕತೆಯಿರುವ ಮುಂದಿನ ಪೀಳಿಗೆಯನ್ನೂ ಗಮನದಲ್ಲಿರಿಸಿ ಕೊಳ್ಳಬೇಕೆನ್ನುತ್ತಿದ್ದರು. ಮಾನವರು ದುರಾಸೆಯ ಗುಲಾಮರಾಗಬಾರದೆಂದು ಅವರು ಸದಾ ಹೇಳುತ್ತಿದ್ದರು.


ಗಾಂಧೀಜಿ ಪರಿಸರ ಹಾಳಾಗುತ್ತಿರುವುದರ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ. ಪರಿಸರದ ಬಗೆಗಿನ ಗಾಂಧಿಯ ಮಾತುಗಳಿಗಿಂತ ಅವರ ಆಚರಣೆಯೇ ಮುಖ್ಯವಾದುದು. ಒಮ್ಮೆ ಅವರನ್ನು ಜನರಿಗೆ ನಿಮ್ಮ ಸಂದೇಶ ಏನೆಂದು ಕೇಳಿದಾಗ `ನನ್ನ ಬದುಕೇ ಒಂದು ಸಂದೇಶ' ಎಂದು ಹೇಳಿದ್ದರು. ಆ ಸಂದೇಶದಲ್ಲಿಯೇ ಪ್ರತಿಯೊಬ್ಬ ಮನುಷ್ಯ ಅವನ ಎಂಥಹುದೇ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಅವರು ಮನೆ ಮತ್ತು ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಹೇಳುತ್ತಿದ್ದರು. ಅವರ ಆಶ್ರಮಕ್ಕೆ ಪ್ರವೇಶ ಬಯಸುವವರಿಗೆ ಅವರು ಮೊದಲು ಕೇಳುತ್ತಿದ್ದ ಮೊದಲ ಪ್ರಶ್ನೆ, `ನಿನ್ನ ಪಾಯಖಾನೆಯನ್ನು ನೀನೇ ಸ್ವಚ್ಛಗೊಳಿಸಿಕೊಳ್ಳಬಲ್ಲೆಯಾ?' ಅವರು ಸಬರಮತಿ ಆಶ್ರಮದ ಬಳಿಯ ನದಿಯಲ್ಲಿ ಸ್ನಾನ ಮಾಡುವಾಗ ಅವರು ಎಷ್ಟು ಬೇಕೋ ಅಷ್ಟೇ ನೀರನ್ನೇ ಬಳಸುತ್ತಿದ್ದರು. ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದರೂ ಅವರು ಅದನ್ನು ಅನವಶ್ಯಕವಾಗಿ ಬಳಸುತ್ತಿರಲಿಲ್ಲ. `ನದಿಯಲ್ಲಿ ಅಷ್ಟು ನೀರಿದ್ದರೂ ಅದನ್ನು ಬೇಕಾದಷ್ಟು ಬಳಸಲು ಏಕೆ ಹಿಂಜರಿಯುತ್ತಿರುವಿರಿ?' ಎಂದು ಒಮ್ಮೆ ಕೇಳಿದಾಗ, `ನದಿಯಲ್ಲಿ ಹರಿಯುತ್ತಿರುವ ನೀರೆಲ್ಲಾ ನನ್ನದಲ್ಲವಲ್ಲ್ಲಾ' ಎಂದಿದ್ದರು. ಅವರಿದ್ದ ಸಮಯದಲ್ಲಿ ಕಾಗದಕ್ಕಾಗಿ ಕಾಡುಗಳನ್ನು ಕಡಿಯುವುದು ಸಮಸ್ಯೆಯೇ ಆಗಿರಲಿಲ್ಲ. ಆದರೂ ಅವರಿಗೆ ಯಾರಾದರೂ ಪತ್ರ ಬರೆದಲ್ಲಿ ಬೇರೆ ಕಾಗದ ಬಳಸದೇ ಆ ಪತ್ರದ ಹಿಂದೆಯೇ ಬರೆದು ಉತ್ತರಿಸುತ್ತಿದ್ದರು. ಲಕೋಟೆಗಳನ್ನು ಕತ್ತರಿಸಿ ಅದರ ಹಿಂದಿನ ಖಾಲಿ ಸ್ಥಳದಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಹಲವಾರು ಅವರ ಅನುಯಾಯಿಗಳನ್ನು ಅದನ್ನು ಅನುಸರಿಸುವಂತೆ ಮಾಡಿದರು.

ಅವರ ಅಹಿಂಸಾಚರಣೆ ಜೀವಿಗಳಿಗೆ ಮಾತ್ರ ಅನ್ವಯಿಸುವಂಥದಲ್ಲ. ಪ್ರಕೃತಿಯಲ್ಲಿನ ನಿರ್ಜೀವ ವಸ್ತುಗಳ ಮೇಲಿನ ದಬ್ಬಾಳಿಕೆಯೂ ಅವರ ದೃಷ್ಟಿಯಲ್ಲಿ ಹಿಂಸೆಯೇ ಆಗಿತ್ತು. ಪ್ರಕೃತಿಯನ್ನು ಧನ್ಯತಾ ಭಾವದಿಂದ ನೋಡಬೇಕೆನ್ನುವುದೇ ಅವರ ಉದ್ದೇಶವಾಗಿತ್ತು. ಹೇಗೆ ಮನುಷ್ಯನಿಗೆ ಜೀವವನ್ನು ಸೃಷ್ಟಿಸುವ ಶಕ್ತಿಯಿಲ್ಲವೋ, ಅದೇ ರೀತಿ ಅವನಿಗೆ ಜೀವವನ್ನು ನಾಶಮಾಡುವ ಹಕ್ಕೂ ಇಲ್ಲವೆನ್ನುವುದು ಅವರ ಅಭಿಪ್ರಾಯವಾಗಿತ್ತು. ಅವರ ಸೇವಾಗ್ರಾಮ ಆಶ್ರಮದಲ್ಲಿ ದೊಡ್ಡ ಮರದ ಇಕ್ಕಳಗಳಿದ್ದು ಆಶ್ರಮದೊಳಗೆ ಬರುವ ಹಾವುಗಳನ್ನು ಕೊಲ್ಲದೆ ಹಿಡಿದು ದೂರ ಬಿಟ್ಟುಬಿಡಲಾಗುತ್ತಿತ್ತು. ಒಮ್ಮೆ ಬ್ರಿಟಿಷ್ ಲೇಖಕ ಹಾಗೂ ಗೆಳೆಯ ಎಡ್ವರ್ಡ್ ಥಾಂಪ್ಸನ್ ಗಾಂಧಿಯವರ ಜೊತೆ ಮಾತನಾಡುತ್ತ `ಭಾರತದಲ್ಲಿ ಕಾಡುಪ್ರಾಣಿಗಳು ಕಡಿಮೆಯಾಗುತ್ತಿವೆ' ಎಂದು ಆತಂಕ ವ್ಯಕ್ತಪಡಿಸಿದರಂತೆ. ಅದಕ್ಕೆ ಗಾಂಧೀಜಿ ಒಂದರೆಕ್ಷಣ ಯೋಚಿಸಿ, `ಹೌದು ಕಾಡುಗಳಲ್ಲಿ ಕಡಿಮೆಯಾಗುತ್ತಿವೆ, ಆದರೆ ನಗರಗಳಲ್ಲಿ ಹೆಚ್ಚಾಗುತ್ತಿವೆ' ಎಂದರಂತೆ.

ಪರಿಸರಸ್ನೇಹಿ ಸುಸ್ಥಿರ ಅಭಿವೃದ್ಧಿ ಎಂದರೆ ಮುಂದಿನ ಪೀಳಿಗೆಯವರ ಅವಶ್ಯಕತೆಗಳ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಇಂದಿನವರ ಅವಶ್ಯಕತೆಗಳನ್ನು ಪೂರೈಸುವುದು. ಅಭಿವೃದ್ಧಿ ಅಥವಾ ಪರಿಸರದ ಬಗೆಗಿನ ಗಾಂಧಿಯ ಆಲೋಚನೆಗಳನ್ನು ಆಧುನಿಕ ಮಾತುಗಳಲ್ಲಿ ಹೇಳುವುದಾದರೆ, ಅಭಿವೃದ್ಧಿಗಾಗಿ ನವೀಕರಣಗೊಳಿಸಬಹುದಾದ ಸಂಪನ್ಮೂಲಗಳ ಬಳಕೆ ಮತ್ತು ನವೀಕರಣ ಸಾಧ್ಯವಿಲ್ಲದ ಸಂಪನ್ಮೂಲಗಳ ಕನಿಷ್ಠ ಬಳಕೆ. ಗಾಂಧಿಯ ಈ ಆಲೋಚನೆ ಪರಿಸರ ಸಂರಕ್ಷಣೆಯ ಬಗೆಗೆ ಅಲ್ಲದೆ ಪರಿಸರದ ಬಗೆಗಿನ ಧನ್ಯತಾ ಭಾವನೆಯಿಂದಲೇ ಆಗಿದ್ದರೂ ಅದು ಪರಿಸರ ಸಂರಕ್ಷಣೆಯ ಆಲೋಚನೆಯೇ ಆಗಿದೆ. ಗಾಂಧಿ ಪರಿಸರದ ಬಗೆಗೆ ಒಮ್ಮೆ ಹೀಗೆ ಹೇಳಿದ್ದರು, `ನನಗೆ ಪ್ರಕೃತಿಯದಲ್ಲದೆ ಮತ್ತಾವುದರ ಸ್ಫೂರ್ತಿಯೂ ಬೇಡ. ಆಕೆ ನನ್ನನ್ನೆಂದೂ ನಿರಾಶಳನ್ನಾಗಿಸಿಲ್ಲ. ಆಕೆಯಲ್ಲಿ ಎಂಥದೋ ನಿಗೂಢತೆಯಿದೆ, ಅಚ್ಚರಿಯಿದೆ, ಆನಂದ ಪರವಶತೆಗೆ ಕರೆದೊಯ್ಯುವ ಸಾಮರ್ಥ್ಯವಿದೆ. ಅದರ ಮುಂದೆ ಮಾನವ ಎಷ್ಟು ಗೌಣನಲ್ಲವೆ? ಸುಂದರ ತಾರೆಗಳ ಕತ್ತಲ ಆಗಸವನ್ನು ನೋಡುತ್ತಾ ದಣಿಯದೆ ಅದೆಷ್ಟು ಸಾರಿ ಮೈಮರೆತಿಲ್ಲ! ನನ್ನ ದೃಷ್ಟಿಯಲ್ಲಿ ಕಲೆ ಅತ್ಯುತ್ತಮವಾಗಬೇಕಾದರೆ ಅದೂ ಸಹ ಪ್ರಕೃತಿಯ ಸೌಂದರ್ಯದಂತೆ ಸಾರ್ವತ್ರಿಕವಾಗಿರಬೇಕು, ನಿರೂಪಣೆಯಲ್ಲಿ ಸರಳವಾಗಿರಬೇಕು ಹಾಗೂ ಅಭಿವ್ಯಕ್ತಿಯಲ್ಲಿ ನೇರವಾಗಿರಬೇಕು ಪ್ರಕೃತಿಯ ಭಾಷೆಯಂತೆ........ನಾನು ಸೂರ್ಯಾಸ್ತದ ಅದ್ಭುತವನ್ನು ಅಥವಾ ಚಂದಿರನ ಸೌಂದರ್ಯವನ್ನು ಮೆಚ್ಚಿದಲ್ಲಿ, ನನ್ನ ಆತ್ಮ ಸೃಷ್ಟಿಕರ್ತನ ಆರಾಧನೆಯಲ್ಲಿ ಮೈಮರೆಯುತ್ತದೆ'.

ಗಾಂಧಿಯ ಅರ್ಥಶಾಸ್ತ್ರದಲ್ಲಿ ಅನವಶ್ಯಕ ಬೇಡಿಕೆಗಳಿಗೆ ಆಸ್ಪದವಿಲ್ಲ, ಸರಳ ಜೀವನವೇ ಎಲ್ಲ ಆಧುನಿಕತೆಯ ಮೂಲದ ಸಮಸ್ಯೆಗಳಿಗೆ ಪರಿಹಾರ. ಸರಳ ಜೀವನದಿಂದಲೇ ಪ್ರಕೃತಿಯ ಸೀಮಿತ ಸಂಪನ್ಮೂಲಗಳ ಸಂರಕ್ಷಣೆಯೂ ಸಾಧ್ಯ. ನಾವು ಏನನ್ನು ಪ್ರಕೃತಿಯಿಂದ ಪಡೆಯುತ್ತೀವೆಯೋ ಅದನ್ನು ಮರಳಿಸುವಂತಿರಬೇಕು. `ನಾವು ಪ್ರಕೃತಿಯ ವರದಾನವನ್ನು ನಮ್ಮ ಮನಸೋ ಇಚ್ಛೆ ಉಪಯೋಗಿಸಬಹುದು, ಆದರೆ ಆಕೆಯ ಪುಸ್ತಕದಲ್ಲಿ ವ್ಯಯ ಮತ್ತು ಆದಾಯದ ಲೆಕ್ಕಗಳು ಸಮವಾಗಲೇಬೇಕು' ಎನ್ನುತ್ತಿದ್ದರು. ಭಾರತದ ಅಭಿವೃದ್ಧಿಯ ಕನಸನ್ನು ಗಾಂಧಿ ಮತ್ತು ನೆಹರು ಇಬ್ಬರೂ ಹೊಂದಿದ್ದರು. ಆದರೆ ಅದರ ಸಾಕಾರದ ಹಾದಿಯಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು. ೧೯೪೫ರಲ್ಲಿ ಗಾಂಧಿಯವರು ನೆಹರೂಗೆ ಬರೆದ ಪತ್ರವೊಂದರಲ್ಲಿ, `...... ಭಾರತವು ನಿಜವಾದ ಸ್ವಾತಂತ್ರ್ಯವನ್ನು ಮತ್ತು ಆ ಮೂಲಕ ಇಡೀ ಜಗತ್ತು ಸ್ವಾತಂತ್ರ್ಯವನ್ನು ಗಳಿಸಬೇಕಾದರೆ, ಜನರೆಲ್ಲ ಇಂದಲ್ಲ ನಾಳೆ ಗ್ರಾಮಗಳಲ್ಲಿ ಬದುಕಬೇಕಲ್ಲದೆ ಪಟ್ಟಣಗಳಲ್ಲ; ಗುಡಿಸಲುಗಳಲ್ಲದೆ ಅರಮನೆಗಳಲ್ಲಲ್ಲ ಎಂಬ ಸತ್ಯವನ್ನು ಮನಗಾಣಬೇಕು. ಇದರಲ್ಲಿ ನನಗೆ ಸಂಪೂರ್ಣವಾದ ವಿಶ್ವಾಸವಿದೆ. ಪಟ್ಟಣ ಮತ್ತು ಅರಮನೆಗಳಲ್ಲಿ ಕೋಟ್ಯಂತರ ಜನರು ಸಹಬಾಳ್ವೆ, ನೆಮ್ಮದಿಯಿಂದ ಬದುಕಲಾರರು. ಅಲ್ಲಿ ಹಿಂಸೆ ಮತ್ತು ಅಸತ್ಯದ ಆಚರಣೆ ಬಿಟ್ಟರೆ ಅವರಿಗೆ ಅನ್ಯಮಾರ್ಗವಿಲ್ಲ. ಸತ್ಯ ಮತ್ತು ಅಹಿಂಸೆಗಳಿಲ್ಲದಿದ್ದರೆ ಮನುಕುಲದ ವಿನಾಶ ಖಂಡಿತ. ಗ್ರಾಮೀಣ ಬದುಕಿನ ಸರಳತೆಯಲ್ಲಿ ಸತ್ಯ ಮತ್ತು ಅಹಿಂಸೆಗಳ ಸಾಕ್ಷಾತ್ಕಾರ ಸಾಧ್ಯ. ಅಂಥ ಸರಳತೆಯನ್ನು ಚರಕ ಮತ್ತು ಅದು ಪ್ರತಿನಿಧಿಸುವ ಎಲ್ಲ ಅಂಶಗಳಲ್ಲಿಯೂ ಕಾಣಬಹುದು. ಜಗತ್ತು ಇಂದು ಅಡ್ಡದಾರಿ ಹಿಡಿದಿದ್ದರೆ ನಾವು ಧೃತಿಗೆಡಬಾರದು. ಭಾರತವೂ ಸಹ ಜ್ವಾಲೆಯ ಕುಡಿಗೆ ಆಕರ್ಷಿತವಾಗಿ ಅದನ್ನು ಸುತ್ತುತ್ತಾ ತನ್ನನ್ನೇ ಸುಟ್ಟುಕೊಳ್ಳುವ ಪತಂಗದ ರೀತಿಯಲ್ಲಿ ಅದೇ ದಾರಿಯನ್ನು ಹಿಡಿಯಬಹುದು. ಆದರೆ, ಅಂಥ ದುರಂತದಿಂದ ಭಾರತವನ್ನು ಆ ಮೂಲಕ ಇಡೀ ಜಗತ್ತನ್ನು ರಕ್ಷಿಸಲು ನನ್ನ ಕೊನೆಯುಸಿರಿನವರೆಗೂ ಪ್ರಯತ್ನಿಸುವುದು ನನ್ನ ಕರ್ತವ್ಯ. ನನ್ನ ಮಾತಿನ ಸಾರಾಂಶವಿಷ್ಟೆ. ಮಾನವ ತನ್ನ ನಿಜ ಅಗತ್ಯಗಳಿಗೆ ತೃಪ್ತಿಪಟ್ಟು ಸ್ವಾವಲಂಬಿಯಾಗಬೇಕು. ಅಂಥ ನಿಯಂತ್ರಣವಿಲ್ಲದಿದ್ದರೆ ಆತ ತನ್ನನ್ನು ತಾನು ರಕ್ಷಿಸಿಕೊಳ್ಳಲಾರ......' ಎಂದು ಬರೆದಿದ್ದರು. ಇದನ್ನು ಅಭಿವೃದ್ಧಿಯ ಗಾಂಧಿಯ ಹಾದಿ ಎನ್ನಬಹುದು. ಆ ಪತ್ರಕ್ಕೆ ಉತ್ತರವಾಗಿ ನೆಹರೂರವರು `.....ಇಂಥ ಸಮಾಜದ ಸಾಕ್ಷಾತ್ಕಾರದ ವಿಧಾನ ಮತ್ತು ಅದು ಒಳಗೊಳ್ಳಬೇಕಿರುವ ವಿಷಯಗಳು ಯಾವುವು ಎಂಬುದೇ ನಮ್ಮ ಮುಂದಿರುವ ಪ್ರಶ್ನೆ. ಒಂದು ಗ್ರಾಮವು ಸತ್ಯ ಮತ್ತು ಅಹಿಂಸೆಗಳನ್ನೆ ಒಳಗೊಂಡಿರಬೇಕು ಎಂಬುದು ನನಗೆ ಅರ್ಥವಾಗದು. ಸಾಮಾನ್ಯ ಅಭಿಪ್ರಾಯವೆಂದರೆ, ಒಂದು ಗ್ರಾಮ ಬೌದ್ಧಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದಿದೆ. ಒಂದು ಹಿಂದುಳಿದ ಪರಿಸರದಿಂದ ಯಾವುದೇ ಪ್ರಗತಿ ಸಾಧನೆ ಅಸಾಧ್ಯ. ಸಂಕುಚಿತ ಮನೋಭಾವನೆಯ ಜನರು ಹೆಚ್ಚು ಸುಳ್ಳರೂ ಹಿಂಸಾವಾದಿಗಳೂ ಆಗಿರುವ ಸಾಧ್ಯತೆಯಿದೆ. ಆಹಾರ, ಉಡುಪು, ವಸತಿ, ಶಿಕ್ಷಣ, ನೈರ್ಮಲ್ಯ ಇತ್ಯಾದಿಗಳನ್ನು ಒದಗಿಸುವ ಗುರಿಗಳನ್ನು ನಾವು ಹಮ್ಮಿಕೊಳ್ಳಬೇಕು. ಈ ಉದ್ದೇಶದಿಂದ ಅವುಗಳನ್ನು ತ್ವರಿತಗತಿಯಲ್ಲಿ ನಿರ್ದಿಷ್ಟವಾಗಿ ಸಾಧಿಸುವ ಹಾದಿಯನ್ನು ಕಂಡುಕೊಳ್ಳಬೇಕು. ಅದಕ್ಕಾಗಿ ಆಧುನಿಕ ಸಾರಿಗೆ ವಿಧಾನಗಳು ಮತ್ತು ಇತರೆ ಆಧುನಿಕ ಅಭಿವೃದ್ಧಿಗಳು ನಿರಂತರವಾಗಿ ಬೆಳೆಯಬೇಕು. ಇವುಗಳನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ. ಇವೆಲ್ಲ ಬಡ ಗ್ರಾಮಗಳ ಚೌಕಟ್ಟಿನಲ್ಲಿ ಹೇಗೆ ಹೊಂದಿಕೊಳ್ಳುತ್ತವೆ? ಬೃಹತ್ ಅಥವಾ ಲಘು ಉದ್ದಿಮೆಗಳನ್ನು ಸಾಧ್ಯವಾದಷ್ಟು ವಿಕೇಂದ್ರಿಕರಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ವಿದ್ಯುತ್‌ನಿಂದ ಇದು ಸಾಧ್ಯ. ಎರಡು ಬಗೆಯ ಅರ್ಥವ್ಯವಸ್ಥೆಗಳಿದ್ದರೆ, ಒಂದನ್ನೊಂದು ಮೆಟ್ಟಿನಿಲ್ಲಬಹುದು ಅಥವಾ ಎರಡರ ನಡುವೆ ಸಂಘರ್ಷ ಸಾಧ್ಯ .......'. ಇದು ನೆಹರೂರವರು ಕಂಡಿದ್ದ ಹಾದಿ.

ಕೈಗಾರಿಕೀಕರಣದ ಬಗ್ಗೆ ಒಮ್ಮೆ ಹೇಳುತ್ತಾ ಗಾಂಧಿ, `ಕೈಗಾರಿಕೀಕರಣ ಮನುಕುಲಕ್ಕೇ ಶಾಪವಾಗುತ್ತದೆನ್ನುವ ಹೆದರಿಕೆ ನನಗಿದೆ. ಕೈಗಾರಿಕೀಕರಣ ವ್ಯಕ್ತಿಯೊಬ್ಬನ ದೋಚುವ ಸಾಮರ್ಥ್ಯವನ್ನವಲಂಬಿಸಿರುತ್ತದೆ, ವಿದೇಶಿ ಮಾರುಕಟ್ಟೆಯನ್ನು ಮತ್ತು ಸ್ಪರ್ಧಿಗಳಿಲ್ಲದಿರುವುದನ್ನು ಅವಲಂಬಿಸಿರುತ್ತದೆ.... ಕೈಗಾರಿಕೀಕರಣದ ಭವಿಷ್ಯತ್ತು ಅಂಧಕಾರಮಯವಾಗಿದೆ..... ನನ್ನ ಯಂತ್ರಗಳ ಆಕ್ಷೇಪಣೆಗೆ ಕಾರಣವೇನೆಂದರೆ ಈ ರಾಷ್ಟ್ರಗಳು ಇತರರನ್ನು ದೋಚುತ್ತಿರುವುದು ಯಂತ್ರಗಳಿಂದಾಗಿಯೇ..... ಈ ದಿನ, ಬೆರಳೆಣಿಕೆಯಷ್ಟು ಜನ ಲಕ್ಷಾಂತರ ಜನರ ಮೇಲೆ ಸವಾರಿ ಮಾಡಲು ಈ ಯಂತ್ರಗಳು ಸಹಾಯ ಮಾಡುತ್ತಿವೆ. ಇದರ ಹಿಂದೆಯಿರುವುದು ದುರಾಸೆಯೇ ಹೊರತು ಶ್ರಮ ಉಳಿಸುವ ಅಥವಾ ಶ್ರಮ ಕಡಿಮೆ ಮಾಡುವ ಉದಾತ್ತ ಮನೋಭಾವವಲ್ಲ' ಎಂದಿದ್ದರು. ಆದರೆ ಗಾಂಧಿಯವರು ಎಂದಿಗೂ ಯಂತ್ರ ಅಥವಾ ವಿಜ್ಞಾನ ವಿರೋಧಿಯಾಗಿರಲಿಲ್ಲ, ಆದರೆ ಅವು ಜನರ ಶೋಷಣೆಯ ಮಾಧ್ಯಮಗಳಾಗಬಾರದು ಎನ್ನುತ್ತಿದ್ದರು. `.....ವಿದ್ಯುಚ್ಛಕ್ತಿ, ಹಡಗು ನಿರ್ಮಾಣ, ಯಂತ್ರಗಳು ನಮ್ಮ ಗ್ರಾಮೀಣ ಕುಶಲ ಕೈಗಾರಿಕೆಗಳ ಜೊತೆಯಲ್ಲೇ ಸಾಗಬೇಕೇ ಹೊರತು ಅವು ಇತರರನ್ನು ಶೋಷಿಸುವಂತಾಗಬಾರದು. ನನ್ನ ಚರಕವೂ ಯಂತ್ರವೇ, ಆದರೆ ಅದು ಮತ್ತೊಬ್ಬರನ್ನು ಶೋಷಿಸುವುದಿಲ್ಲ, ಬದಲಿಗೆ ಸ್ವಾಭಿಮಾನವನ್ನು ಕೊಡುತ್ತದೆ, ಬದುಕನ್ನು ಕೊಡುತ್ತದೆ' ಎಂದೊಮ್ಮೆ ಹೇಳಿದ್ದರು. ಗಾಂಧಿಯವರ ದೃಷ್ಟಿಯಲ್ಲಿ ತಾಂತ್ರಿಕ ಅಭಿವೃದ್ಧಿಯಲ್ಲಿ ಪ್ರಕೃತಿಯನ್ನು ಗೆಳೆಯನನ್ನಾಗಿ, ನಮ್ಮ ಪೋಷಕನನ್ನಾಗಿ ಪರಿಗಣಿಸಬೇಕು. ಆದರೆ ಈಗಿನ ನಮ್ಮ ವಿಧಾನಗಳೆಲ್ಲಾ ಇದಕ್ಕೆ ತದ್ವಿರುದ್ಧವಾದುವು. ಗಾಂಧಿಯ ಅರ್ಥಶಾಸ್ತ್ರ ಕನಿಷ್ಠ ಬಳಕೆ, ಸಂಸ್ಕರಣೆ, ಮರುಬಳಕೆ ಆಧಾರಿತ ಸುಸ್ಥಿರ ಆರ್ಥಿಕತೆಯ ಬುನಾದಿಯದು.

ಅವರಿಗೆ ಮನುಕುಲದ ಹಾಗೂ ಪ್ರಕೃತಿ ಎರಡರ ಬಗೆಗೂ ಕಾಳಜಿಯಿತ್ತು. ಅವುಗಳ ಉನ್ನತಿಗೆ ಅವರು ಪ್ರೀತಿ ಪ್ರೇಮದ, ಶಾಂತಿಯ ಹಾಗೂ ಸಹಕಾರದ ಹಾದಿ ಅರಸಿದರು, ಏಕೆಂದರೆ ದ್ವೇಷ ಯುದ್ಧಗಳಿಗಿಂತ ಅವೇ ಹೆಚ್ಚು ಸುಸ್ಥಿರವಾದುವು. `ಮನುಕುಲವನ್ನು ಆಳುತ್ತಿರುವುದು ಪ್ರೀತಿಯ ನಿಯಮ. ಅದೇ, ಹಿಂಸೆ ದ್ವೇಷಗಳೇ ರಾರಾಜಿಸಿದ್ದಿದ್ದರೆ ನಾವೆಂದೋ ಸಂಪೂರ್ಣ ನಿರ್ನಾಮವಾಗಿಬಿಡಬೇಕಿತ್ತು. ಆದರೂ ನಾಗರಿಕವೆಂದು ಕರೆಯಲ್ಪಡುವ ಮನುಷ್ಯರು ಹಾಗೂ ದೇಶಗಳು ಸಮಾಜದ ತಳಹದಿಯೇ ಹಿಂಸೆಯೆನ್ನುವಂತೆ ನಡೆದುಕೊಳ್ಳುತ್ತಿರುವುದು ತೀರಾ ದುರಂತ' ಎಂಬ ಆತಂಕ ವ್ಯಕ್ತಪಡಿಸಿದ್ದರು.

ಭಾನುವಾರ, ಸೆಪ್ಟೆಂಬರ್ 30, 2012