Translate

ಶುಕ್ರವಾರ, ಜೂನ್ 21, 2013

ನೆಸ್ಸೀ ಎಂಬ ಜಲರಕ್ಕಸನ ಜಾಡು ಅರಸಿ

`ಸುಧಾ' (27/6/2013) ವಾರಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಲೇಖನ: `ನೆಸ್ಸೀ ಎಂಬ ಜಲರಕ್ಕಸನ ಜಾಡು ಅರಸಿ'


ಒಮ್ಮೆ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಗೆಳೆಯರು ಊರಿನ ಜನಗಳಿಗೆ ಒಂದು ಸುಳ್ಳು ಹೇಳಿ ತಮಾಷೆ ಮಾಡೋಣವೆಂದು ನಿರ್ಧರಿಸಿದರು. ನಸ್ರುದ್ದೀನ್ ಊರಿನ ಜನರನ್ನೆಲ್ಲಾ ಸೇರಿಸಿ ಊರಿನ ಪಕ್ಕದಲ್ಲಿರುವ ಬೆಟ್ಟದ ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಧಿಯಿದೆ ಎಂದು ಹೇಳಿ ಆ ನಿಧಿಯನ್ನು ಮತ್ತು ಅದು ಇರುವ ಸ್ಥಳವನ್ನು ತಾನೇ ಸ್ವತಃ ಕಂಡವನಂತೆ ವರ್ಣರಂಜಿತವಾಗಿ ವಿವರಿಸಿದ. ಆತನ ಮಾತನ್ನು ನಂಬಿದ ಜನರೆಲ್ಲಾ ಆ ನಿಧಿಯನ್ನು ಪಡೆಯಲು ಬೆಟ್ಟದೆಡೆಗೆ ಓಡತೊಡಗಿದರು. ನಸ್ರುದ್ದೀನ್ ಸಹ ಅವರ ಜೊತೆ ಓಡತೊಡಗಿದ. ಅದನ್ನು ನೋಡಿದ ಆತನ ಗೆಳೆಯ ‘ನೀನ್ಯಾಕೆ ಅವರ ಜೊತೆ ಓಡುತ್ತಿದ್ದೀಯೆ? ನಿಧಿ ಇದೆಯೆಂಬ ಸುಳ್ಳು ಕತೆ ಕಟ್ಟಿದವರು ನಾವೇ ಅಲ್ಲವೆ?’ ಎಂದು ಕೇಳಿದ್ದಕ್ಕೆ, ‘ಅಷ್ಟೊಂದು ಜನ ನನ್ನ ಮಾತನ್ನು ನಂಬಿದರಲ್ಲಾ! ಅಲ್ಲಿ ನಿಧಿ ಇರುವುದು ನಿಜವೇ ಇದ್ದರೂ ಇರಬಹುದೇನೋ!’ ಎಂದು ಹೇಳಿ ಜನರ ಜೊತೆ ಬೆಟ್ಟದೆಡೆಗೆ ಓಡುವುದನ್ನು ಮುಂದುವರಿಸಿದ.
ಲಂಡನ್‍ನಿಂದ ಸ್ಕಾಟ್‍ಲೆಂಡಿನ ಗ್ಲಾಸ್ಗೋಗೆ ವರ್ಜಿನ್ ಟ್ರೈನ್ ನಲ್ಲಿ ನಡೆಸಿದ್ದ ನಮ್ಮ ಪಯಣ ಮುಲ್ಲಾ ನಸ್ರುದ್ದೀನನ ಓಟದಂತೆಯೇ ಇದ್ದಿರಬಹುದೆನ್ನಿಸುತ್ತದೆ. ದಂತಕತೆಯಾಗಿರುವ ನೆಸ್ಸೀ ಎಂಬ ದೈತ್ಯ ಪ್ರಾಣಿ ಇಲ್ಲವೆನ್ನುವುದು ವೈಜ್ಞಾನಿಕವಾಗಿ ಬಹುಪಾಲು ಖಚಿತವಾಗಿದ್ದರೂ ಆ ದಂತಕತೆಗೆ ಕಾರಣವಾಗಿರುವ ಸುಂದರ `ಸರೋವರ’ವನ್ನು ನೋಡುವುದೂ ನಮ್ಮ ಉದ್ದೇಶಗಳಲ್ಲೊಂದಾಗಿತ್ತು. ಅಷ್ಟಲ್ಲದೆ ಈ ನೆಸ್ಸೀ ಎಂಬ ದೈತ್ಯ ರಕ್ಕಸ ಜಲಜೀವಿಯ ಕಲ್ಪನೆ ಹಲವಾರು ದೇಶಗಳ ವಿಜ್ಞಾನಿಗಳಲ್ಲಿ ಸಾಕಷ್ಟು ಸಂಚಲನ ಉಂಟುಮಾಡಿದೆ ಹಾಗೂ ಅವರು ಅದರ ಅಸ್ತಿತ್ವದ ಬಗೆಗೆ ಗಂಭೀರ ಸಂಶೋಧನೆಗಳನ್ನು ಸಹ ಕೈಗೊಳ್ಳುವಂತೆ ಮಾಡಿದೆ.  ನೆಸ್ಸಿಯ ಅಸ್ತಿತ್ವದಲ್ಲಿ ನಂಬಿಕೆ ಇರಿಸಿಕೊಂಡಿರುವ ಹಲವಾರು ಜನ ಅದರ ಹೆಸರಲ್ಲಿ ವಿವಿಧ ಸಂಘಸಂಸ್ಥೆಗಳನ್ನು ಸ್ಥಾಪಿಸಿಕೊಂಡಿವೆ. ಸ್ಕಾಟ್‍ಲೆಂಡಿನ ಪ್ರವಾಸೋದ್ಯಮ ಸಂಘಟನೆಯಾದ ಸ್ಕಾಟಿಶ್ ಟ್ರಾವೆಲರ್ಸ್ ಅಸೋಸಿಯೇಶನ್ `ವದಂತಿಗಳಿರುವಂತೆ ನಾವು ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಿಸಲು ನೆಸ್ಸಿಯನ್ನು ಖಂಡಿತಾ ಹುಟ್ಟುಹಾಕಿಲ್ಲ’ ಎನ್ನುವ ಹೇಳಿಕೆಯನ್ನು ಸಹ ಕೊಟ್ಟಿದ್ದಾರೆ. ಇಷ್ಟೆಲ್ಲಾ ಸುದ್ದಿ ಮಾಡಿರುವ ಲಾಖ್ ನೆಸ್ ನೋಡಲೇಬೇಕು ಎಂದು ತೀರ್ಮಾನ ಮಾಡಿದ್ದೆವು. ಇದರ ಜೊತೆಗೆ ಸ್ಕಾಟ್‍ಲೆಂಡ್ ಅದ್ಭುತ ನಿಸರ್ಗ ಸಿರಿಯ ಪ್ರದೇಶವೆನ್ನುವುದರಲ್ಲಿ ಎರಡು ಮಾತಿಲ್ಲ.
ಬೆಂಗಳೂರಿನಿಂದಲೇ ಗ್ಲಾಸ್ಗೋದಲ್ಲಿನ ಹೋಟೆಲ್ ಬುಕ್ ಮಾಡಿದ್ದೆ ಹಾಗೂ ಪ್ರಯಾಣಕ್ಕೆಂದು ಬ್ರಿಟ್‍ರೇಲ್ ಪಾಸ್ ಸಹ ಕೊಂಡಿದ್ದೆ. ಅಷ್ಟಲ್ಲದೆ ಲಾಖ್ ನೆಸ್ ಪ್ರಯಾಣಕ್ಕೆ ಗ್ಲಾಸ್ಗೋನಿಂದ ಟೂರ್ ಸಹ ಬುಕ್ ಮಾಡಿದ್ದೆ. ಅದರ ಪ್ರಕಾರ ನಾವು ಮರುದಿನ ಬೆಳಿಗ್ಗೆ ಎಂಟು ಗಂಟೆಗೆ ಗ್ಲಾಸ್ಗೋದ ಜಾರ್ಜ್ ಸ್ಕ್ವೇರ್‍ನಲ್ಲಿ ಸೇರಬೇಕಿತ್ತು. ಗ್ಲಾಸ್ಗೊ ತಲುಪಿದ ದಿನ ಸಂಜೆಯೇ ಸಮಯವಿದ್ದುದರಿಂದ ಹಾಗೂ ಅದು ನಾವಿದ್ದ ಹೋಟೆಲಿನಿಂದ ಕಾಲುನಡಿಗೆಯ ದೂರದಲ್ಲೇ ಇದ್ದುದರಿಂದ ರೂಮಿನಲ್ಲಿ ಲಗೇಜು ಇರಿಸಿ ಜಾರ್ಜ್‍ಸ್ಕ್ವೇರ್ ಕಡೆಗೆ ಹೊರಟೆವು. ಗೋಥಿಕ್ ಶೈಲಿಯ ಕಟ್ಟಡಗಳ ನಡುವೆ ನಡೆದಾಡುವುದು ಸ್ಕಾಟ್‍ಲೆಂಡಿನ ಮಧ್ಯಕಾಲೀನ ಯುಗದಲ್ಲಿ ನಡೆದಾಡುವಂತಿತ್ತು. 

ಗ್ಲಾಸ್ಗೋದ ಜಾರ್ಜ್ ಸ್ವೇರ್

ಮರುದಿನ ಬೆಳಿಗ್ಗೆ ಸೂಚಿಸಿದ ಸ್ಥಳದಲ್ಲಿ ನಿಂತಿದ್ದ ನಮ್ಮನ್ನು ಕರೆದೊಯ್ಯಲು ರಬ್ಬೈ ಟೂರ್ಸ್‍ನ ಚಾಲಕ ತನ್ನ ಹದಿನಾಲ್ಕು ಸೀಟರ್‍ನ ಮಿನಿ ಬಸ್ಸಿನಲ್ಲಿ ಬಂದು ಪರಿಚಯ ಮಾಡಿಕೊಂಡ. ಆ ಟೂರಿಗೆ ಬುಕ್ ಮಾಡಿದ್ದವರಲ್ಲಿ ನಾವು ಅಲ್ಲಿ ಐದು ಜನ ಮಾತ್ರ ಇದ್ದೆವು- ನಾವಿಬ್ಬರು, ಇಸ್ರೇಲಿನ ಇಬ್ಬರು ಮಹಿಳೆಯರು ಮತ್ತು ಪೋರ್ಚುಗಲ್‍ನ ಒಬ್ಬ ಮಹಿಳೆ. ಸ್ಕಾಟ್‍ಲೆಂಡಿನ ಸಾಂಪ್ರದಾಯಕ ಧಿರಿಸಾದ ಕೆಂಪು ಚೌಕಳಿಯ ಸ್ಕರ್ಟ್ ಧರಿಸಿದ್ದ ಆತ ತನ್ನನ್ನು ಜಾನ್ ಎಂದು ಪರಿಚಯಿಸಿಕೊಂಡ ಆತ ನಾವು ಐದೇ ಜನ ಇದ್ದದ್ದು ಕಂಡು ತನ್ನ ಟ್ರಾವೆಲ್ ಕಂಪೆನಿಯನ್ನು ಹೊಗಳತೊಡಗಿದ. `ನಿಮ್ಮಲ್ಲಿ ಒಬ್ಬರು ಬಂದಿದ್ದರೂ ನಾನು ಕರೆದೊಯ್ತಿದ್ದೆ. ಜನ ಕಡಿಮೆಯೆಂದು ಎಂದಿಗೂ ನಾವು ಇತರ ಟ್ರಾವೆಲ್ಸ್‍ಗಳಂತೆ ಕ್ಯಾನ್ಸಲ್ ಮಾಡುವುದಿಲ್ಲ’ ಎಂದ ತನ್ನ ಸ್ಕಾಟ್ ಇಂಗ್ಲಿಷಿನಲ್ಲಿ. ಆ ದಿನದ ನಮ್ಮ ಗೈಡ್ ಸಹ ಆತನೇ. ಬಸ್ಸು ಹೊರಟಂತೆ ಸ್ಕಾಟ್‍ಲೆಂಡಿನ ಸಾಂಪ್ರದಾಯಕ  ಬ್ಯಾಗ್‍ಪೈಪ್ ಸಂಗೀತ ಚಾಲೂ ಮಾಡಿ ವಿವರಣೆ ನೀಡತೊಡಗಿದ. ಲಾಖ್ ನೆಸ್‍ನಲ್ಲಿ ನೆಸ್ಸೀ ಇದೆಯೇ ಎಂದು ಕೇಳಿದ್ದಕ್ಕೆ `ಇಲ್ಲವೇ ಇಲ್ಲ’ವೆನ್ನುವಂತೆ ಕೈ ಸನ್ನೆ ಮಾಡಿದ.


ಸುಂದರ ಸ್ಕಾಟ್‍ಲೆಂಡ್

ಸ್ಕಾಟ್‍ಲೆಂಡ್ ಅದೆಷ್ಟು ಸುಂದರವೋ ಅಷ್ಟೇ ನಿಗೂಢವೂ ಹೌದು. ಹಲವಾರು ನಿಗೂಢಗಳಲ್ಲಿ ಅತ್ಯಂತ ರೋಚಕವಾಗಿರುವುದು ಲಾಖ್ ನೆಸ್ ರಕ್ಕಸ.  ಲಾಖ್ ನೆಸ್ ಸರೋವರದಲ್ಲಿ ರಕ್ಕಸ ಪ್ರಾಣಿಯೊಂದಿದೆ ಎಂಬ ನಂಬಿಕೆ ಇತ್ತೀಚಿನದೇನಲ್ಲ. ಶತಶತಮಾನಗಳಿಂದ ಜನ ಅದರ ಬಗ್ಗೆ ಮಾತನಾಡಿಕೊಳ್ಳುತ್ತಾ ಬಂದಿದ್ದಾರೆ. ಸ್ಕಾಟಿಶ್ ಭಾಷೆಯಲ್ಲಿ ಲಾಖ್ ಎಂದರೆ ಕೆರೆ ಅಥವಾ ಸರೋವರ. ಸ್ಕಾಟ್‍ಲೆಂಡಿನ ಜನಪದ ಕತೆಗಳಲ್ಲಿ ಅದರ ಸರೋವರ ಮತ್ತು ನದಿಗಳಲ್ಲಿನ ರಕ್ಕಸಗಳ ಬಗೆಗೆ ಹಲವಾರು ಕತೆಗಳಿವೆ. ಅವಕಾಶ ಸಿಕ್ಕಾಗಲೆಲ್ಲಾ ಅವು ಮನುಷ್ಯರನ್ನು ಕೊಲ್ಲುತ್ತಿದ್ದುದರ ವಿವರಣೆಗಳು ಹಲವಾರು ಭಯಾನಕ ಕತೆಗಳಲ್ಲಿವೆ. ಆ ರಕ್ಕಸ ಪ್ರಾಣಿಗಳಲ್ಲಿ ಜನಪ್ರಿಯವಾಗಿರುವುದು ಕೆಲ್ಪೀ ಎಂಬ ರಕ್ಕಸ. ಅದಕ್ಕೆ ತನಗೆ ಬೇಕಾದ ರೂಪ ಪಡೆಯುವ ಶಕ್ತಿಯಿದ್ದು ಅದು ಸಾಮಾನ್ಯವಾಗಿ ಕುದುರೆಯ ರೂಪ ತಳೆದು ನದಿಯ ಬಳಿ ಬಳಲಿಕೆಯಿಂದ ನಡೆದು ಹೋಗುವ ಪ್ರಯಾಣಿಕರ ಗೆಳೆತನ ಸಾಧಿಸಿ ಅವರು ಕುದುರೆ ದೊರೆಯಿತೆಂದು ಸವಾರಿ ಮಾಡಲು ಹೊರಟಾಗ ಅವರನ್ನು ನೀರಿಗೆ ಕೆಡವಿ ಕೊಂದುಹಾಕುತ್ತಿತ್ತಂತೆ. ಅದು ಕುದುರೆಯ ರೂಪ ತಳೆಯುತ್ತಿದ್ದುದರಿಂದ ಅದನ್ನು ನೀರು ಕುದುರೆ (ವಾಟರ್ ಹಾರ್ಸ್) ಎಂದು ಕರೆಯುತ್ತಿದ್ದರು. ನೆಸ್ಸಿಯನ್ನು ಆಧರಿಸಿಯೇ `ವಾಟರ್ ಹಾರ್ಸ್’ ಎಂಬ ಇಂಗ್ಲಿಶ್ ಚಲನಚಿತ್ರವನ್ನು 2007ರಲ್ಲಿ ತಯಾರಿಸಲಾಗಿದೆ. 


 ನೆಸ್ಸಿಯನ್ನು ಆಧರಿಸಿದ `ವಾಟರ್ ಹಾರ್ಸ್’ ಎಂಬ ಇಂಗ್ಲಿಶ್ ಚಲನಚಿತ್ರ

ಒಂದು ದಂತಕತೆಯ ಪ್ರಕಾರ 13ನೇ ಶತಮಾನದಲ್ಲಿ ಸಂತ ಕೊಲಂಬ ಎಂಬ ಐರಿಶ್ ಕ್ರೈಸ್ತ ಧರ್ಮ ಪ್ರಚಾರಕ ಒಮ್ಮೆ ತನ್ನ ಸಹಚರರೊಡನೆ ನೆಸ್ ನದಿಯ ದಡದಲ್ಲಿ ಪ್ರಯಾಣಿಸುತ್ತಿದ್ದಾಗ ಆ ನದಿಯಲ್ಲಿದ್ದ ಜಲರಕ್ಕಸ ಅವರ ಮೇಲೆ ದಾಳಿ ಮಾಡಿ ಒಬ್ಬನನ್ನು ಕೊಂದು ಮತ್ತೊಬ್ಬನನ್ನು ಕೊಲ್ಲಲು ದಾಳಿ ಮಾಡಿದಾಗ ಸಂತ ಕೊಲಂಬ ತನ್ನ ಗಡಸು ಹಾಗೂ ಏರು ದನಿಯಲ್ಲಿ ಅದನ್ನು ಗದರಿ ನದಿಗೆ ಹಿಂದಿರುಗುವಂತೆ ಆದೇಶಿಸಿದ. ಆತನ ದನಿಗೆ ಹೆದರಿಯೋ ಏನೊ ಜಲರಕ್ಕಸ ನದಿಗೆ ಹಿಂದಿರುಗಿತಂತೆ.
ಲಾಖ್ ನೆಸ್ ಸರೋವರದಲ್ಲಿ ಇದೆಯೆನ್ನಲಾಗುವ ಹಾಗೂ ಅಲ್ಲಿನ ಜನರು ಪ್ರೀತಿಯಿಂದ `ನೆಸ್ಸೀ’ ಎಂದು ಕರೆಯಲ್ಪಡುವ ಈ ಜಲರಕ್ಕಸ ಬಹುಶಃ ಒಂದು ಸಾಧು ಪ್ರಾಣಿಯಿರಬಹುದು- ಹಲವಾರು ಜನರನ್ನು `ಹೆದರಿಸಿರಬಹುದು’, ಅದರೆ ಇದುವರೆಗೆ ಅದು ಯಾರನ್ನೂ ತಿಂದಿರುವ, ತೊಂದರೆ ನೀಡಿರುವ ಕತೆಗಳ ಉದಾಹರಣೆಗಳಿಲ್ಲ.
ಲಾಖ್ ನೆಸ್ ಸರೋವರ ಸುಮಾರು 38 ಕಿ.ಮೀ.ಗಳಷ್ಟು ಉದ್ದವಿದೆ ಹಾಗೂ ಅದು ಅತಿ ಹೆಚ್ಚು ಅಗಲವಿರುವ ಕಡೆ ಸುಮಾರು 1.6 ಕಿ.ಮೀ.ಗಳಷ್ಟು ಅಗಲವಿದೆ- ಈ ದಡದಲ್ಲಿ ನಿಂತರೆ ಆ ದಡ ಕಾಣುತ್ತದೆ. ಅದರ ಆಳ 800 ಅಡಿಗಳವರೆಗೂ ಇದೆ.  ಅದರ ವಿಸ್ತೀರ್ಣ 61 ಚದರ ಕಿ.ಮೀ.ಗಳು. ಗ್ರೇಟ್ ಬ್ರಿಟನ್ನಿನಲ್ಲಿ ಇದೇ ಅತಿ ದೊಡ್ಡ ಸರೋವರ. ಲಾಖ್ ನೆಸ್ ಸರೋವರದ ನಿಗೂಢತೆಗೆ ಮತ್ತೊಂದು ಕಾರಣವಿದೆ. ಸುತ್ತಮುತ್ತಲ ನದಿಗಳಿಂದ ಲಾಖ್ ನೆಸ್‍ಗೆ ಹರಿದುಬರುವ ನೀರು ಪೀಟ್ ಅಥವಾ ಸಸ್ಯಾಂಗಾರದ ಕಣಗಳನ್ನು ಹೊತ್ತು ತಂದಿರುವುದರಿಂದ ನೀರು ಒಂದು ರೀತಿಯ ಕಡು ಕಂದು ಬಣ್ಣವಿದ್ದು 13 ಅಡಿಗಳಿಗಿಂತ ಕೆಳಕ್ಕೆ ಸೂರ್ಯನ ಬೆಳಕೇ ಪ್ರವೇಶಿಸುವುದಿಲ್ಲ. ಲಾಖ್ ನೆಸ್‍ನ ತಳವೊಂದು ಕತ್ತಲ ಸಾಮ್ರಾಜ್ಯ. ಅಲ್ಲದೆ ಆ ಸರೋವರ ರೂಪುಗೊಂಡಿರುವುದು ಒಂದು ಬೃಹತ್ ಕಣಿವೆಯಲ್ಲಿ. ಹಾಗಿರುವಾಗ ಅದು ರಕ್ಕಸ ಪ್ರಾಣಿಯೊಂದು ಅವಿತಿರಲು ಪ್ರಶಸ್ತ ಸ್ಥಳವಲ್ಲವೆ?


ಲಾಖ್ ನೆಸ್ ಸರೋವರ

ನೆಸ್ಸೀ ಹೆಚ್ಚು ಸುದ್ದಿಯಾದದ್ದು 1933ರಲ್ಲಿ. ಸ್ಕಾಟ್‍ಲೆಂಡಿನ ವೃತ್ತ ಪತ್ರಿಕೆಗಳಲ್ಲಿ ಆಗಾಗ ನೆಸ್ಸಿಯನ್ನು ಕಂಡಿದ್ದಾರೆನ್ನುವ ಸಣ್ಣ ಸಣ್ಣ ಸುದ್ದಿಗಳು ಆಗಾಗ ಪ್ರಕಟವಾಗುತ್ತಿತ್ತು. ಆದರೆ 1933ರ ಮೇ 2ರ `ದ ಇನ್‍ವರ್ನೆಸ್ ಕೊರಿಯರ್’ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ಜಾನ್ ಮ್ಯಾಕ್‍ಕೆ ಮತ್ತು ಆತನ ಪತ್ನಿ ತಮ್ಮ ಕಾರಿನಲ್ಲಿ ಲಾಖ್‍ನ ಉತ್ತರದ ತೀರದಲ್ಲಿ ಹೊರಟಿದ್ದಾಗ ನೀರಿನಲ್ಲಿ (ಸುಮಾರು 1.2 ಕಿ.ಮೀ ದೂರದಲ್ಲಿ) ಒಂದು ಅದ್ಭುತ ಪ್ರಾಣಿಯೊಂದು ಈಜುತ್ತಿದ್ದುದು ಕಾಣಿಸಿತು. “ಆ ಪ್ರಾಣಿ ಸುಮಾರು ಒಂದು  ನಿಮಿಷ ನೀರಿನಲ್ಲಿ ಹೊರಳಾಡುತ್ತಿತ್ತು, ಅದರ ದೇಹ ತಿಮಿಂಗಲದಂತಿತ್ತು ಹಾಗೂ ಅದರ ಸುತ್ತಲಿದ್ದ ನೀರು ಹಂಡೆಯಲ್ಲಿದ್ದ ನೀರಿನಂತೆ ಕುದಿಯುತ್ತಿತ್ತು. ಕೆಲ ಸಮಯದ ನಂತರ ಅದು ಕುದಿಯುವ ನೀರಿನ ನೊರೆಯಂತಿದ್ದ ನೀರಿನಲ್ಲಿ ಕಣ್ಮರೆಯಾಯಿತು’ ಎಂದಿದ್ದರು ಅದನ್ನು ಕಣ್ಣಾರೆ ಕಂಡಿದ್ದ ಜಾನ್. ಆ ಲೇಖನ ಪ್ರಕಟವಾದ ಕೆಲತಿಂಗಳುಗಳ ನಂತರ ಕೆಲವೊಂದ ವಿಷಯಗಳು ಹೊರಬಿದ್ದವು. ಜಾನ್ ಮ್ಯಾಕ್‍ಕೆ ಆ ದಿನ ವಾಹನ ನಡೆಸುತ್ತಿದ್ದರು ಹಾಗೂ ಅವರು ಏನೂ ಕಂಡಿರಲಿಲ್ಲ. ಆ `ಪ್ರಾಣಿ’ಯನ್ನು ನೋಡಿದ್ದುದು ಆತನ ಪತ್ನಿ. ಆದರೆ ಆಕೆ ಕಂಡಿದ್ದುದು ಸುಮಾರು ನೂರುಗಜಗಳ ದೂರದ ನೀರಿನಲ್ಲಿ ಕಿತ್ತಾಡುತ್ತಿದ್ದ ಎರಡು ಬಾತುಕೋಳಿಗಳನ್ನು! ಆದರೆ ಆ ಲೇಖನ ಬರೆದಿದ್ದ ಅಲೆಕ್ಸ್ ಕ್ಯಾಂಪ್‍ಬೆಲ್ ಎಂಬಾತನಿಗೆ ಲಾಖ್ ನೆಸ್‍ನಲ್ಲಿ ರಕ್ಕಸ ಪ್ರಾಣಿ ಇರುವುದು ನಿಜವೆಂಬುದನ್ನು ಹೇಗಾದರೂ ಸಾಬೀತುಗೊಳಿಸಬೇಕಾಗಿತ್ತು!


ಲಾಖ್ ನೆಸ್ ಸರೋವರ

ಆದರೂ ಆ ಲೇಖನ ಪ್ರಕಟವಾದ ನಂತರ ಜನ ಚುರುಕಾದರು. ನೀರಿನಲ್ಲಿ ಏನೇ ಅಸ್ಪಷ್ಟ ಚಟುವಟಿಕೆ ಕಂಡರೂ ಅದನ್ನು `ನೆಸ್ಸಿ’ ಎನ್ನತೊಡಗಿದರು. ಅದೇ ವರ್ಷದ ಜುಲೈ ತಿಂಗಳಿನಲ್ಲಿ ಸ್ಥಳೀಯರಾದ ಜಾರ್ಜ್ ಸ್ಪೈಸರ್ ಮತ್ತು ಆತನ ಪತ್ನಿ ದಕ್ಷಿಣದ ತೀರದಲ್ಲಿ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಒಂದು `ಕುರೂಪ’ ಪ್ರಾಣಿಯೊಂದು ಬಾಯಲ್ಲಿ ಕುರಿಮರಿಯನ್ನು ಕಚ್ಚಿಕೊಂಡು ನೀರಿಗೆ ತೆವಳುತ್ತಾ ಹೋಯಿತೆಂದು ವರದಿ ಮಾಡಿದರು. ಮೊದಲಿಗೆ ಆ ಪ್ರಾಣಿಯ ಉದ್ದ 2 ಮೀಟರ್ ಇತ್ತೆಂದರು. ಅದು ಬಾಯಿಂದ ಬಾಯಿಗೆ ತಲುಪಿ ಕೊನೆಗೆ 9 ಮೀಟರ್ ಉದ್ದದ ಪ್ರಾಣಿಯೆಂಬ ಸುದ್ದಿಯಾಯಿತು. ಅದನ್ನು ನಂಬದಿರುವವರು ಆ ರೀತಿ ತೆವಳುತ್ತಾ ಹೋಗುವ ಪ್ರಾಣಿ ನೀರುನಾಯಿಯೇ ಇರಬಹುದೆಂದರು. ಏಕೆಂದರೆ ಆ ಪ್ರದೇಶದಲ್ಲಿ ಬೇಕಾದಷ್ಟು ನೀರುನಾಯಿಗಳಿದ್ದವು ಹಾಗೂ ಅವು ಆಗಾಗ ತಮ್ಮದೇ ಮರಿಗಳನ್ನು ಬಾಯಿಯಲ್ಲಿ ಕಚ್ಚಿಕೊಂಡು ಕೊಂಡೊಯ್ಯುತ್ತವೆ, ಕುರಿಮರಿಗಳನ್ನಲ್ಲ. ಆದರೂ ಈ ಸುದ್ದಿಯೂ ಜನರಲ್ಲಿ ಕುತೂಹಲ ಹೆಚ್ಚಿಸಿತು. 
ಸ್ಪೈಸರ್‍ರವರ ಈ ಸುದ್ದಿ ಪ್ರಕಟವಾದ ಕೆಲತಿಂಗಳುಗಳ ನಂತರ, ಅಂದರೆ ನವೆಂಬರ್ 1933ರಂದು ನೆಸ್ಸಿಯ ಮೊಟ್ಟಮೊದಲ ಫೋಟೊ ಗ್ಲಾಸ್ಗೋದ `ದ ಡೈಲಿ ರೆಕಾರ್ಡ್’ ವೃತ್ತಪತ್ರಿಕೆಯಲ್ಲಿ ಪ್ರಕಟವಾಯಿತು. ಹ್ಯೂ ಗ್ರೇ ಎಂಬ ಛಾಯಾಚಿತ್ರಕಾರ ತೆಗೆದ ಫೋಟೋ ನಕಲಿಯದು ಎಂಬುದು ರುಜುವಾತಾಗಿದೆ. ಅದೇ ರೀತಿ ಟಿಮ್ ಡಿನ್ಸ್‍ಡೇಲ್ ಎಂಬಾತ ವೀಡಿಯೋ ಚಿತ್ರೀಕರಣ ಮಾಡಿ ಅದು ನೆಸ್ಸಿಯದು ಎಂದೇ ವಾದಿಸಿದ. ವಿಜ್ಞಾನಿಗಳು ಅದನ್ನೂ ನೆಸ್ಸಿಯದಲ್ಲ ಎಂದು ತಿರಸ್ಕರಿಸಿದರು. ಆದರೆ ಹೆಚ್ಚು ಪ್ರಸಿದ್ಧವಾದುದು `ಸರ್ಜನ್ಸ್ ಫೋಟೋಗ್ರಾಫ್’ ಎಂದು ಜನಪ್ರಿಯವಾಗಿರುವ ಡಾ.ರಾಬರ್ಟ್ ಕೆನೆತ್ ವಿಲ್ಸನ್ ತೆಗೆದ ಫೋಟೊ. 1934ರಲ್ಲಿ ಲಂಡನ್‍ನ ವೈದ್ಯ ಡಾ.ವಿಲ್ಸನ್ ಒಂದು ಫೋಟೊ ತೆಗೆದು ಅದು ನಿಜವಾದ ನೆಸ್ಸಿಯದು ಎಂದು ಅದನ್ನು 21ರ ಏಪ್ರಿಲ್ 1934ರ `ಡೈಲಿ ಮೇಲ್’ ಪತ್ರಿಕೆಯಲ್ಲಿ ಪ್ರಕಟಿಸಿದ. ಅದರ ಬಗೆಗೆ 1993ರವರೆಗೂ ವಾದ ವಿವಾದಗಳು ನಡೆಯುತ್ತಿದ್ದು ಕೊನೆಗೆ ಅದು ಕೇವಲ ಗೊಂಬೆಯೊಂದರ ಫೋಟೊ ಎಂಬುದು ರುಜುವಾತಾಗಿದೆ.


`ಸರ್ಜನ್ಸ್ ಫೋಟೋಗ್ರಾಫ್’ ಎಂದು ಜನಪ್ರಿಯವಾಗಿರುವ ನೆಸ್ಸಿಯ ಚಿತ್ರ. ಅದು ಪುಟ್ಟ ಗೊಂಬೆಯೊಂದರ ಚಿತ್ರ ಎಂಬುದು ರುಜುವಾತಾಗಿದೆ.

ಮುವ್ವತ್ತರ ದಶಕದಿಂದ ಇಂದಿಗೂ ನೆಸ್ಸಿಯ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. 1962ರಲ್ಲಿ ಲಾಖ್ ನೆಸ್ ಫೆನಾಮೆನಾ ಇನ್‍ವೆಸ್ಟಿಗೇಶನ್ ಬ್ಯೂರೊ (ಎಲ್.ಎನ್.ಐ.ಬಿ.) ಎಂಬ ಸಂಸ್ಥೆ ಪ್ರಾರಂಭವಾಗಿ ನೆಸ್ಸಿಗಾಗಿ ಒಂದು ದಶಕದ ಕಾಲ ಹುಡುಕಾಡಿದರು. ಅವರು ಮಿನಿ ಸಬ್‍ಮರೀನ್‍ಗಳನ್ನು ಬಳಸಿ ಲಾಖ್ ನೆಸ್ ಸರೋವರದ ತಳವನ್ನೆಲ್ಲಾ ಜಾಲಾಡಿದರು. 1972ರಲ್ಲಿ ಅವರ ಜೊತೆಗೆ ಅಮೆರಿಕದ ವಿಜ್ಞಾನಿ ರಾಬರ್ಟ್ ರೈನ್ ಸಹ ಜೊತೆಗೂಡಿ ಸೋನಾರ್ ಮತ್ತು ಕ್ಯಾಮೆರಾ ಬಳಸಿ ಸರೋವರದ ತಳದಲ್ಲಿ ನೆಸ್ಸಿಯ ಚಿತ್ರಗಳನ್ನು ದಾಖಲಿಸಿದರು ಯತ್ನಿಸಿದರು. 
1975ರಲ್ಲಿ ಪುನಃ ರೈನ್‍ರವರು ಮತ್ತೊಮ್ಮೆ ಸೋನಾರ್ ಹಾಗೂ ಕ್ಯಾಮೆರಾ ಬಳಸಿ `ದೈತ್ಯ ತಲೆಯ, ಎರಡು ಕೊಂಬುಗಳಿರುವ ಪ್ರಾಣಿ’ಯಂತಹ ಆಕಾರವನ್ನು ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿದರು. ತಾವು ಖಂಡಿತಾ ನೆಸ್ಸಿಯನ್ನು ಕಂಡುಹಿಡಿದೆವೆಂಬ ಸಂತೋಷದಿಂದ ಅವರು ಹಾಗೂ ಎಲ್.ಎನ್.ಐ.ಬಿ.ನ ಸಂಸ್ಥೆಯ ನಿರ್ದೇಶಕರಾದ ಸರ್ ಪೀಟರ್ ಸ್ಕಾಟ್‍ರವರು ಒಂದು ಪತ್ರಿಕಾ ಗೋಷ್ಠಿ ನಡೆಸಿ ಆ ಪ್ರಾಣಿ ಹೊಸ ಪ್ರಭೇದವೆಂದು ಅದಕ್ಕೆ ನೆಸ್ಸಿಟೆರಾಸ್ ರಾಂಬೊಟೆರಿಕ್ಸ್ ಎಂಬ ವೈಜ್ಞಾನಿಕ ಹೆಸರನ್ನು ಸಹ ನೀಡಿದರು. ಇತರ ವಿಜ್ಞಾನಿಗಳು ಆ ಚಿತ್ರಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ನಂತರ ಅದು ನೆಸ್ಸಿಯದಲ್ಲವೆಂಬುದು ತಿಳಿಯಿತು.
ಆದರೆ ನೆಸ್ಸಿಯಿರುವುದು ಖಾತ್ರಿಯೆಂಬಂತೆ ಪಟ್ಟು ಬಿಡದ ಟಿಮ್ ಡಿನ್ಸ್‍ಡೇಲ್ ತಮ್ಮ ಅಧ್ಯಯನವನ್ನು ಮುಂದುವರಿಸಿದರು. ಸ್ಥಳೀಕಳಾದ ಕಾನ್‍ಸ್ಟೆನ್ಸ್ ವೈಟ್ ಎಂಬಾಕೆ ಬರೆದಿರುವ `ಮೋರ್ ದ್ಯಾನ್ ಎ ಲೆಜೆಂಡ್’ ಎಂಬ ಪುಸ್ತಕದಲ್ಲಿ ನಡೆಸಿರುವ ನೂರಾರು ಜನ `ಪ್ರತ್ಯಕ್ಷದರ್ಶಿ’ಗಳ ಸಂದರ್ಶನಗಳನ್ನು ವಿಶ್ಲೇಷಿಸಿ ಒಂದು ಅದ್ಭುತ ತೀರ್ಮಾನಕ್ಕೆ ಬಂದರು. ಅವರ ಪ್ರಕಾರ ನೆಸ್ಸಿ ಎಂಬ ರಕ್ಕಸ ಪ್ರಾಣಿ 9 ಅಡಿ ಉದ್ದದ ಕುತ್ತಿಗೆಯನ್ನು ಹಾಗೂ 10 ಅಡಿ ಉದ್ದದ ಬಾಲವನ್ನು ಹೊಂದಿರುವ ಸುಮಾರು 40 ಅಡಿಗಳಷ್ಟು ಉದ್ದವಿರುವ ಪ್ರಾಣಿ. ಈಜು ರೆಕ್ಕೆಗಳನ್ನು ಹೊಂದಿರುವ ಅದು ಅವರ ಪ್ರಕಾರ ಅದು ಲಕ್ಷಾಂತರ ವರ್ಷಗಳ ಹಿಂದೆ ನಶಿಸಿ ಹೋಗಿರುವ ಡೈನಾಸಾರ್‍ಗಳಲ್ಲಿನ ಪ್ಲೀಸಿಯೋಸಾರಸ್ ಎಂಬ ಡೈನೋಸಾರ್‍ನ ಮುಂದುವರಿದು ಬಂದ ಜೀವಂತ ಸಂತತಿ. ಡಿನ್ಸ್‍ಡೇಲ್ ಹೇಳುವಂತೆ ನೆಸ್ಸಿಯ ಪೂರ್ವಜರು ಬ್ರಿಟಿಷ್ ದ್ವೀಪಗಳ ಸುತ್ತಮುತ್ತಲ ಧೃವ ಸಾಗರಗಳಲ್ಲಿ ಜೀವಿಸಿದ್ದು ಹಿಮಯುಗದ ಮಂಜುಗಡ್ಡೆಗಳು ಕರಗಿದಂತೆ ಸಾಗರದಿಂದ ಪ್ರತ್ಯೇಕವಾಗಿ ಸುಮಾರು ಹನ್ನೆರಡು ಸಾವಿರ ವರ್ಷಗಳಿಂದ ಲಾಖ್ ನೆಸ್ ಸರೋವರದಲ್ಲಿ ಸುತ್ತಮುತ್ತಲ ಭೂಮಿಯಿಂದ ಬಂಧಿತವಾಗಿ ತಮ್ಮ ಸಂತತಿಯನ್ನು ಮುಂದುವರಿಸಿಕೊಂಡು ಬಂದಿವೆ. ಹದಿನಾಲ್ಕು ಕೋಟಿ ವರ್ಷಗಳ ಹಿಂದೆಯೇ ವಿನಾಶಹೊಂದಿದೆಯೆಂದು ನಂಬಲಾಗಿದ್ದ ಸೀಲಾಕ್ಯಾಂತ್ ಎಂಬ ಮೀನು ಇಂದಿಗೂ `ಜೀವಂತ ಪಳೆಯುಳಿಕೆ’ ಎಂದು ಕರೆಯಲ್ಪಟ್ಟು ಜೀವಂತವಾಗಿಲ್ಲವೆ? ಇದಕ್ಕೆ ಪುಷ್ಟಿ ನೀಡುವಂತೆ ಇಂಗ್ಲೆಡ್‍ನ ನಾಟಿಂಗ್‍ಹ್ಯಾಮ್‍ಶೈರ್ ಮುಂತಾದೆಡೆ ಪ್ಲೀಸಿಯೋಸಾರಸ್‍ನ ಪಳೆಯುಳಿಕೆಗಳು ದೊರೆತಿವೆ.
ನೆಸ್ಸೀ ಪ್ಲೀಸಿಯೋಸಾರಸ್ ಎಂಬುದನ್ನು ಸಹ ವಿಜ್ಞಾನಿಗಳು ಅಲ್ಲಗಳೆಯುತ್ತಾರೆ. ಅಂತಹ ದೈತ್ಯ ಪ್ರಾಣಿ ಲಾಖ್ ನೆಸ್ ಎಂಬ ಸುತ್ತಲೂ ಭೂಮಿಯಿಂದ ಬಂಧಿತವಾಗಿರುವ ಸಣ್ಣ ನದಿ ಅಥವಾ ಸರೋವರದಲ್ಲಿ ಇಷ್ಟೊಂದು ಸಾವಿರಾರು ವರ್ಷ ಬದುಕಿ ತನ್ನ ಸಂತತಿ ಮುಂದುವರೆಸಿಕೊಂಡು ಬಂದಿರಲು ಸಾಧ್ಯವೆ?  ಆ ರೀತಿಯೇ ಆದಲ್ಲಿ ಆರೋಗ್ಯಕರ ಸಂತತಿ ಮುಂದುವರಿಯಲು ಇರಬೇಕಾದ ಅಗಾಧ ಸಂಖ್ಯೆಯ ನೆಸ್ಸೀಗಳು ಅಲ್ಲಿ ಇವೆಯೆ? ಕಡಿಮೆ ಸಂಖ್ಯೆಯ ನೆಸ್ಸೀಗಳು ತಮ್ಮ ಆಂತರಿಕ ಸಂತಾನವರ್ಧನೆಯಿಂದ (ಇನ್‍ಬ್ರೀಡಿಂಗ್- ಸೋದರ ಸಂಬಂಧಿಗಳ ನಡುವೆ ಸಂತಾನವರ್ಧನೆ) ದುರ್ಬಲಗೊಂಡು, ರೋಗರುಜಿನಗಳಿಗೆ ತುತ್ತಾಗಿ ನಶಿಸಿಹೋಗುವುದಿಲ್ಲವೆ? ನಲವತ್ತು ಅಡಿ ಉದ್ದವಿರುವ ಅಂತಹ ದೈತ್ಯ ಪ್ರಾಣಿಗಳು ಲಾಖ್‍ನೆಸ್‍ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದರೆ ಅವುಗಳಿಗೆ ಬೇಕಾಗುವಷ್ಟು ಆಹಾರ ಆ ಸರೋವರದಲ್ಲಿ ದೊರಕುತ್ತಿದೆಯೆ? ಅಂತಹ ದೈತ್ಯ ಪ್ರಾಣಿ ತಮ್ಮ ಸಂತಾನವರ್ಧನೆಗೆ ಅವಶ್ಯಕವಿರುವಷ್ಟು ಸಂಖ್ಯೆಯಲ್ಲಿ ಅಲ್ಲಿ ಜೀವಿಸಿದ್ದಲ್ಲಿ ಅವು ಜನರ ಕಣ್ಣಿಗೆ ಕಾಣದಂತೆ ಇರಲು ಸಾಧ್ಯವೆ? ಇವೇ ಮುಂತಾದ ಪ್ರಶ್ನೆಗಳನ್ನು ವಿಜ್ಞಾನಿಗಳು ಮುಂದಿಟ್ಟರು. ಅದಕ್ಕಿಂತ ಮುಖ್ಯವಾಗಿ ಇದುವರೆಗೆ ಏಕೆ ಆ ಪ್ರಾಣಿಯ ಒಂದು ಶವವೂ ದೊರೆತಿಲ್ಲ? 1972ರಲ್ಲಿ ಟೈಮ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪ್ರಕಾರ ನೆಸ್ಸಿ ಸುಸೂತ್ರವಾಗಿ ತನ್ನ ಸಂತತಿ ಮುಂದುವರೆಸಿಕೊಂಡು ಹೋಗಬೇಕಾದಲ್ಲಿ ಕನಿಷ್ಠ ಅವುಗಳ ಸಂಖ್ಯೆ ಇಪ್ಪತ್ತಾದರೂ ಇರಬೇಕು. ಆದರೆ ವಿಜ್ಞಾನಿಗಳ ಪ್ರಕಾರ ಅವುಗಳ ಸಂಖ್ಯೆ ಕನಿಷ್ಠ ಐವತ್ತರಿಂದ ಐನೂರಾದರೂ ಇದ್ದಲ್ಲಿ ಅವುಗಳ ಸಂತತಿ ಮುಂದುವರೆಸಲು ಸಾಧ್ಯ.
ಲಾಖ್ ನೆಸ್ ಪ್ರದೇಶದ ಸಾಕಷ್ಟು ಅಧ್ಯಯನ ನಡೆಸಿರುವ ಇಟಲಿಯ ಭೂವಿಜ್ಞಾನಿ ಲೂಗಿ ಪಿಕಾರ್ಡಿ ಲಾಖ್ ನೆಸ್ ಸರೋವರದಲ್ಲಿ ಯಾವ ರಕ್ಕಸ ಪ್ರಾಣಿಯೂ ಇಲ್ಲ. ಆ ಪ್ರದೇಶದ ನಿಗೂಢತೆಗೆ ಆ ಸರೋವರದ ತಳದಲ್ಲಾಗುವ ಭೂಕಂಪಗಳೇ ಕಾರಣ ಎಂದಿದ್ದಾರೆ. ಗ್ರೇಟ್ ಗ್ಲೆನ್ ಫಾಲ್ಟ್‍ನ ನೇರವಾಗಿ ಮೇಲ್ಭಾಗದಲ್ಲೇ ಲಾಖ್ ನೆಸ್ ಇರುವುದರಿಂದ ಭೂತಳದ ಅಲುಗಾಟಗಳು ನೀರಿನಲ್ಲಿ `ಮಿನಿ ಸುನಾಮಿ’ಗಳನ್ನು ಉಂಟುಮಾಡುತ್ತವೆ ಹಾಗೂ ಅವು ಪ್ರಶಾಂತ ಸರೋವರದಲ್ಲಿ ದೈತ್ಯ ಪ್ರಾಣಿಯೊಂದು ಅಲುಗಾಡುತ್ತಿರುವಂತೆ ಕಾಣುತ್ತದೆ ಹಾಗೂ ಅಲೆಗಳು ದೂರದಿಂದ ಪ್ರಾಣಿಯೊಂದರ ಡುಬ್ಬದ ಹಾಗೆ ಕಾಣಬಹುದು ಎನ್ನುತ್ತಾರೆ ಪಿಕಾರ್ಡಿ. ಇಟಲಿಯ ಫಿರೆಂಜೆಯಲ್ಲಿನ ಭೂವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಿಯಾಗಿರುವ ಪಿಕಾರ್ಡಿ ಪ್ರಾಚೀನ ಚರಿತ್ರೆಯಲ್ಲಿನ ಭೂಕಂಪಗಳ ಬಗೆಗೆ ಅಧ್ಯಯನ ಮಾಡುವಾಗ ಈ ವಿಚಾರ ಅವರಿಗೆ ಹೊಳೆಯಿತು.  ಮೆಡಿಟರೇನಿಯನ್, ನಾರ್ವೆ, ಐಸ್‍ಲ್ಯಾಂಡ್, ಉತ್ತರ ಅಮೆರಿಕ ಮತ್ತು ಸ್ಕಾಟ್‍ಲೆಂಡ್‍ನ ಚರಿತ್ರೆ ಮತ್ತು ಪುರಾಣಗಳಲ್ಲಿ ಭೂಕಂಪಗಳಿಗೂ ಮತ್ತು ಜಲರಕ್ಕಸಗಳು ಕಾಣಿಸಿಕೊಳ್ಳುವುದಕ್ಕೂ ಇರುವ ಸಂಬಂಧವನ್ನು ಕಂಡುಕೊಂಡ ಅವರು ತಮ್ಮ ಈ ಸಿದ್ಧಾಂತವನ್ನು ಎಡಿನ್‍ಬರೋದಲ್ಲಿನ ವಿಜ್ಞಾನಿಗಳ ಸಮಾವೇಶದಲ್ಲಿ ಮಂಡಿಸಿದರು. ಅವರು ಹೇಳುವಂತೆ ದಾಖಲಾಗಿರುವ ನೆಸ್ಸಿಯನ್ನು ಕಂಡಿರುವ ಮೂರು ಸಾವಿರ ಉದಾಹರಣೆಗಳಲ್ಲಿ 250 ದಾಖಲೆಗಳನ್ನು ಮರದ ಟೊಂಗೆಗಳು ಅಥವಾ ಕುಡುಕರು ಕಂಡಿರುವ ಉದಾಹರಣೆಗಳು ಎಂದು ಹೇಳಲಾಗುವುದಿಲ್ಲ. ಅಂತಹ ಉದಾಹರಣೆಗಳಲ್ಲಿ ವಿಪರೀತದ ನೀರಿನ ಅಲೆಗಳು ಹಾಗೂ `ಪ್ರಾಣಿ’ಯೊಂದರ ಡುಬ್ಬ ಕಂಡಿದೆ. ಅಲ್ಲದೆ ಕ್ರಿ.ಶ. 7ನೇ ಶತಮಾನದ ದಾಖಲೆಗಳಲ್ಲಿಯೂ ನೀರು ಜೋರಾಗಿ ಅಲುಗಾಡಿ ಅಲೆಗಳನ್ನೆಬ್ಬಿಸಿ ಆ ನಂತರ ರಕ್ಕಸ ಕಂಡಿರುವ ಉದಾಹರಣೆಗಳಿವೆ ಎನ್ನುತ್ತಾರೆ ಪಿಕಾರ್ಡಿ.  1933ರಲ್ಲಿ ನೆಸ್ಸಿ ಕಂಡಿರುವ ಅತಿ ಹೆಚ್ಚು ಉದಾಹರಣೆಗಳಿವೆ. ಅದಾದ ನಂತರ 1934ರ ಆಗಸ್ಟ್‍ನಲ್ಲಿ ಆ ಪ್ರದೇಶದಲ್ಲಿ ಭೂಕಂಪ ಉಂಟಾಯಿತು.
ಈ ರೀತಿಯ ನಿಗೂಢ ಪ್ರಾಣಿಗಳ ಬಗೆಗಿನ ಕತೆಗಳು ಜಗತ್ತಿನಾದ್ಯಂತ ಎಲ್ಲ ಪ್ರದೇಶಗಳಲ್ಲೂ ಇವೆ. ಕೆನಡಾದ ದಕ್ಷಿಣ ಬ್ರಿಟಿಷ್ ಕೊಲಂಬಿಯಾದಲ್ಲಿನ ಓಕನಾಗನ್ ಸರೋವರದಲ್ಲಿ ಓಗೊಪೋಗೊ ಎಂಬ ಜಲರಕ್ಕಸ ಇರುವ ಹಾಗೂ ಅವುಗಳನ್ನು ಕೆಲವರು ಕಂಡಿರುವ ಕತೆಗಳಿವೆ. ಅಮೆರಿಕದ ಮೂಲನಿವಾಸಿಗಳನ್ನು ಮೊದಲು ಅದನ್ನು ನಿ’ಹಾ-ಇ-ಇಟ್ಕ್ ಎಂದು ಕರೆಯುತ್ತಿದ್ದರು. ಅದರ ಉಚ್ಚಾರ ಕಷ್ಟವಾದುದರಿಂದ ಓಗೊಪೋಗೊ ಎಂಬುದು ಇತ್ತೀಚಿನ ಹೆಸರು. ಓಗೊಪೋಗೊ ಸ್ಕಾಟ್‍ಲೆಂಡಿನ ನೆಸ್ಸಿಯ ಹಾಗೆ `ಸಾಧು’ ಪ್ರಾಣಿಯಲ್ಲ. ಅದು ನಿಜವಾದ ಜಲರಕ್ಕಸ. ಅದು ರ್ಯಾಟ್ಲ್ ಸ್ನೇಕ್ ದ್ವೀಪದ ತಳಭಾಗದ ಗುಹೆಯೊಂದರಲ್ಲಿ ವಾಸಿಸುತ್ತದೆ ಹಾಗೂ ಸರೋವರದ ಸುತ್ತಮುತ್ತಲ ಹವಾಮಾನವನ್ನೂ ನಿಯಂತ್ರಿಸಬಲ್ಲದು- ಅದಕ್ಕೆ ಸಿಟ್ಟು ಬಂದಾಗ ಬಿರುಗಾಳಿ, ರಭಸ ಮಳೆ ತರಿಸಬಲ್ಲದು. ಓಕನಾಗ ಬುಡಕಟ್ಟು ಜನ ನೀರಿಗೆ ಮೀನುಹಿಡಿಯಲು, ಪ್ರಯಾಣಕ್ಕೆ ಹೊರಟಾಗ ಓಗೊಪೋಗೊ ರಕ್ಕಸನಿಗೆ ಪ್ರಾಣಿಬಲಿ ನೀಡುತ್ತಾರೆ.
ಉತ್ತರ ಅಮೆರಿಕಾದಲ್ಲಿ ಚಾಂಪ್ ಎಂದು ಕರೆಯಲ್ಪಡುವ ಜಲರಕ್ಕಸ, ಬಿಗ್‍ಫುಟ್ ಎಂದು ಕರೆಯಲ್ಪಡುವ ಎರಡು ಕಾಲಿನಲ್ಲಿ ನಡೆದಾಡುವ ದೈತ್ಯ ವಾನರ-ಮಾನವ, ಹಿಮಾಲಯ ಪರ್ವತಗಳಲ್ಲಿ ಇದೆಯೆಂದು ಹೇಳಲಾಗುವ ಯೇತಿ, ಚೀನಾದಲ್ಲಿನ ಡ್ರ್ಯಾಗನ್‍ಗಳು ಮುಂತಾದವು ಹಿಂದಿನಿಂದಲೂ ಮನುಷ್ಯನ ಕಲ್ಪನೆಯ ಭಾಗಗಳಾಗಿ ಕೆಲವರಲ್ಲಿ ಅವು ಇರುವುದು ನಿಜವೆನ್ನುವಂತೆ ಆಗಿಬಿಟ್ಟಿವೆ. ಜಲರಕ್ಕಸದ ಕಲ್ಪನೆ ಮಾನವನ ಸಾಗರಯಾನದೊಂದಿಗೇ ಪ್ರಾರಂಭವಾಗಿದೆ. ನಾವಿಕರು ತಮ್ಮ ಯಾನದಲ್ಲಿ ಕಂಡ ದೈತ್ಯ ಆಕ್ಟೋಪಸ್, ಹಾವಿನಂತಹ ದೈತ್ಯ ಸರೀಸೃಪ ಹಡಗನ್ನೇ ಛಿದ್ರಗೊಳಿಸಿದ ಕತೆಗಳನ್ನು ಹೇಳುತ್ತಾ ಬಂದಿದ್ದಾರೆ.
ಗಾಸ್ಗೋದಿಂದ ಹೊರಟ ನಾವು ಫೋರ್ಟ್ ಆಗಸ್ಟಸ್‍ನಲ್ಲಿ ಇಳಿದು ಲಾಖ್ ನೆಸ್‍ನ ತಟದಲ್ಲಿ ಅಡ್ಡಾಡಿ ಅಲ್ಲಿಂದ ಇನ್‍ವರ್ನೆಸ್ ತಲುಪಿ ಅಲ್ಲಿ ದೋಣಿಯೊಂದನ್ನು ಹತ್ತಿ  ಹತ್ತಿ ಲಾಖ್ ನೆಸ್ ಸರೋವರದ ಮೇಲೆ ಹೊರಟೆವು. ಅಷ್ಟಾದರೂ ಕಡುಗಪ್ಪು ನೀರನ್ನು ಸೀಳಿಕೊಂಡು ದೋಣಿ ಹೋಗುತ್ತಿದ್ದಂತೆ ಎಲ್ಲಾದರೂ ನೆಸ್ಸಿ ಧುತ್ತನೆದ್ದು ಕಾಣಿಸಿಕೊಳ್ಳಬಹುದೇನೋ ಎನ್ನುವ ಆಶಾಭಾವನೆ ಮನದಲ್ಲಿ ಸುಳಿದಾಡುತ್ತಿತ್ತು. ಹೇಗಾದರಾಗಲಿ ಎಂದು ಕ್ಯಾಮೆರಾ ರೆಡಿಯಾಗಿ ಇಟ್ಟುಕೊಂಡಿದ್ದೆ ಮುಲ್ಲಾ ನಸ್ರುದ್ದೀನನ ಮನಸ್ಥಿತಿಯೊಂದಿಗೆ.
ಕಳೆದ ಐವತ್ತು ಅರವತ್ತು ವರ್ಷಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು `ಹೈಲ್ಯಾಂಡರ್ಸ್’ (ಸ್ಕಾಟ್‍ಲೆಂಡಿನ ಬೆಟ್ಟಗುಡ್ಡಗಳನ್ನು ಹೈಲ್ಯಾಂಡ್ಸ್ ಎಂದು ಕರೆಯುತ್ತಾರೆ) ಮತ್ತು ಹೊರಗಿನವರು ನೆಸ್ಸಿಯನ್ನು ಕಂಡಿದ್ದೇವೆನ್ನುತ್ತಾರೆ. ಆದರೆ 1933ರಲ್ಲೇ ಲಂಡನ್ ಮೃಗಾಲಯದ ಅಕ್ವೇರಿಯಂನ ನಿರ್ದೇಶಕರಾಗಿದ್ದ ಇ.ಜಿ.ಬೌಲೆಂಜರ್ ಈ ವರದಿಗಳನ್ನು `ಸಾಮೂಹಿಕ ಭ್ರಮೆಯ ಅತ್ಯುತ್ತಮ ಉದಾಹರಣೆ’ ಎಂದಿದ್ದಾರೆ.
ಪ್ರಕೃತಿಯಲ್ಲಿ ನಾವು ಅರಿಯದ ನಿಗೂಢಗಳು ಇಲ್ಲವೇ ಇಲ್ಲವೆಂದಲ್ಲ. ವಾಸ್ತವಾಂಶವೇನೆಂದರೆ ನಮಗೆ ಪ್ರಕೃತಿಯ ನಿಗೂಢಗಳು ಅರ್ಥವಾಗಿರುವುದು ತೀರಾ ಅಲ್ಪವಷ್ಟೆ. ಆದರೂ ಪ್ರಕೃತಿಯಲ್ಲಿನ ನಿಗೂಢಗಳು ಇಂದಿನ ವಿಜ್ಞಾನದ ವಿಶ್ಲೇಷಣೆಗೆ ನಿಲುಕದೇ ಇದ್ದರೂ ಅದರ ಹಿಂದೆ ಪ್ರಕೃತಿಯನ್ನು (ಲೌಕಿಕ) ಮೀರುವ ಯಾವುದೇ ಅಲೌಕಿಕ ಶಕ್ತಿ ಇಲ್ಲವೆನ್ನುವುದು ನನ್ನ ಭಾವನೆ.


ಲಾಖ್ ನೆಸ್ ಸರೋವರದ ನಮ್ಮ ವಿಹಾರ ಮುಗಿದ ಮೇಲೆ ಹಾಗೂ ನಮಗೆ ನೆಸ್ಸೀ ಎಲ್ಲೂ ಕಾಣದಿದ್ದುದರಿಂದ ನೆನಪಿಗೆ ಇರಲೆಂದು ಅಲ್ಲೇ ಮಾನವನ ಕಲ್ಪನೆಯಾಧರಿಸಿ ನಿರ್ಮಿಸಿದ್ದ ಒಂದು ಸಿಮೆಂಟ್ ನೆಸ್ಸಿಯ ಫೋಟೊ ತೆಗೆದೆವು ಹಾಗೂ ನೆಸ್ಸಿಯ ಕೆಲವು ಸ್ಮರಣಿಕೆಗಳನ್ನು ಅಂಗಡಿಯಲ್ಲಿ ಕೊಂಡು ಸ್ಕಾಟ್‍ಲೆಂಡಿನ ಸುಂದರ ಪ್ರಕೃತಿಯನ್ನು ಸವಿಯುತ್ತ ಗ್ಲಾಸ್ಗೋಗೆ ಹಿಂದಿರುಗಿದೆವು. 

j.balakrishna@gmail.com

ಮಂಗಳವಾರ, ಜೂನ್ 04, 2013

ಡಾ.ವಿಜಯಾ ದಬ್ಬೆಯವರಿಗೆ 2012ರ ಡಾ.ಎಲ್.ಬಸವರಾಜು ಪ್ರಶಸ್ತಿ



ಡಾ.ಎಲ್.ಬಸವರಾಜು ಪ್ರಶಸ್ತಿ 2012 ಡಾ.ವಿಜಯಾ ದಬ್ಬೆ 





ಕೋಲಾರದ ನಾವು ಕೆಲವು ಗೆಳೆಯರು ಸೇರಿ ರಚಿಸಿಕೊಂಡಿರುವ ಡಾ.ಎಲ್.ಬಸವರಾಜು ಪ್ರತಿಷ್ಠಾನ ಕಳೆದ ಹತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯ ಕೊಡುಗೆ ನೀಡಿದವರನ್ನು ಸ್ಮರಿಸಿ ಡಾ.ಎಲ್.ಬಸವರಾಜು ಪ್ರಶಸ್ತಿ ನಿಡುತ್ತಾ ಬಂದಿದೆ. ಈ ಸಾರಿಯ ಪ್ರಶಸ್ತಿ ಸ್ತ್ರೀವಾದಿ ಲೇಖಕಿ ಡಾ.ವಿಜಯಾ ದಬ್ಬೆಯವರಿಗೆ ನೀಡಿದ್ದು, ಅವರ ಅನಾರೋಗ್ಯದ ಕಾರಣ ಅವರನ್ನು ಆಹ್ವಾನಿಸಿ ಸನ್ಮಾನ ಮಾಡಲಾಗದ ಕಾರಣ ನಾವೇ- ಅಧ್ಚಕ್ಷರಾದ ಪ್ರೊ.ಚಂದ್ರಮೋಹನ್, ಕಾರ್ಯದರ್ಶಿ ಲಕ್ಷ್ಮೀಪತಿ ಕೋಲಾರ, ಸದಸ್ಯರಾದ ನಾನು ಮತ್ತು ರಾಮಲಿಂಗಪ್ಪ ಬೇಗೂರು ಅವರ ಊರಿಗೇ ಹೋಗಿ ಪ್ರಶಸ್ತಿ ಪ್ರದಾನ ಮಾಡಿಬಂದೆವು. ಪ್ರಶಸ್ತಿ ರೂ.10000 ನಗದು, ಬುದ್ಧನ ವಿಗ್ರಹ ಹಾಗೂ ಫಲಕವೊಂದನ್ನು ಒಳಗೊಂಡಿದೆ.



ಡಾ.ಎಲ್.ಬಸವರಾಜು ಪ್ರಶಸ್ತಿ 2012

ಕನ್ನಡದ ಮೊದಮೊದಲ ಸ್ತ್ರೀವಾದಿ ಎಂಬ ಅಗ್ಗಳಿಕೆಯ ಲೇಖಕಿ ಡಾ.ವಿಜಯಾ ದಬ್ಬೆ. ನೇರ ಹಾಗೂ ನಿಷ್ಠುರ ಮಾತು ಮತ್ತು ನಡವಳಿಕೆಯ ಮೂಲಕ ಎಪ್ಪತ್ತು-ಎಂಬತ್ತರ ದಶಕದಲ್ಲಿ ಕನ್ನಡ ಸಾರಸ್ವತ ಲೋಕದ ತೀವ್ರ ಗಮನ ಸೆಳೆದವರು. ಮಾತಿನಲ್ಲಿ ಹರಿತವಿರುವಂತೆ ಬರವಣಿಗೆಯಲ್ಲೂ ಖಚಿತತೆ ಮತ್ತು ಪ್ರಾಮಾಣಿಕತೆಗಲ ಜೀವ ಎರೆವ ಅಪರೂಪದ ಲೇಖಕಿ ವಿಜಯಾ ದಬ್ಬೆ. `ಇರುತ್ತವೆ', `ನೀರು ಲೋಹದ ಚಿಂತೆ', `ತಿರುಗಿ ನಿಂತ ಪ್ರಶ್ನೆ', `ಇತಿಗೀತಿಕೆ' ಎಂಬ ನಾಲ್ಕು ಕವನಸಂಕಲನಗಳು, `ನಯಸೇನ', `ಸಂಪ್ರತಿ', ಮಹಿಳೆ, ಸಾಹಿತ್ಯ, ಸಮಾಜ', `ನಾರಿ ದಾರಿ ದಿಗಂತ', `ಅನುಪಮಾ ನಿರಂಜನ' ಮತ್ತು `ಮಹಿಳೆ ಮತ್ತು ಮಾನವತೆ' ಎಂಬ ಆರು ವಿಮರ್ಶಾ ಸಂಕಲನಗಳು, `ನಾಗಚಂದ್ರ- ಒಂದು ಅಧ್ಯಯನ', `ಹಿತೈಷಿಯ ಹೆಜ್ಜೆಗಳು' ಮತ್ತು `ಸಾರ ಸರಸ್ವತಿ' ಎಂಬ ಮೂರು ಮಹತ್ವದ ಸಂಶೋಧನಾ ಕೃತಿಗಳಷ್ಟೇ ಅಲ್ಲದೆ ಸಂಪಾದನೆ, ವ್ಯಕ್ತಿಚಿತ್ರ, ಪ್ರವಾಸ ಹಾಗೂ ಅನುವಾದಗಳೊಂದಿಗೆ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದವರು.
ವಿಜಯಾ ದಬ್ಬೆ ಅವರು ಮಾನವೀಯ ಚಿಂತನೆ ಮತ್ತು ಪ್ರಗತಿಪರ ಆಶಯಗಳ ಲೇಖಕಿಯಾಗಿದ್ದು, ತಮ್ಮ ನಂಬಿಕೆ ಮತ್ತು ಚಿಂತನೆಗಳಿಗೆ ತಕ್ಕಂತೆಯೇ ಎಲ್ಲ ಬಗೆಯ ಕಂದಾಚಾರಗಳನ್ನೂ ಬದಿಗೊತ್ತಿ ಬದುಕಿ ತೋರಿದ ಧೀಮಂತೆ. ತಮ್ಮ ದಿಟ್ಟ ಬರವಣಿಗೆಗಳಿಂದ ಈ ನಾಡಿನ ಸಾಕ್ಷಿ ಪ್ರಜ್ಞೆಯನ್ನು ಕಲಕುತ್ತಿದ್ದ ಈ ಲೇಖಕಿ ಈಗ ಮಗುವಿನ ಮುಗ್ಧತೆಯಲ್ಲಿ ಮಾಗಿದಂತೆ ಕಾಣುತ್ತಿದ್ದಾರೆ.

ಡಾ. ವಿಜಯಾ ದಬ್ಬೆಯವರ ತಾಯಿ ಮತ್ತು ತಂದೆ

ಡಾ. ವಿಜಯಾ ದಬ್ಬೆಯವರ ಅನುಮಪವಾದ ಸಾರಸ್ವತ ಸಾಧನೆಗೆ ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ, 1979ರ ವರ್ಧಮಾನ ಸಾಹಿತ್ಯ ಪ್ರಶಸ್ತಿ, 2008ರ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ 2008ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗಲು ಸಲ್ಲುವುದರ ಮೂಲಕ ಕನ್ನಡ ಮನಸ್ಸು ಪದೇಪದೇ ವಿಜಯಾ ದಬ್ಬೆಯವರನ್ನು ಪ್ರೀತಿಯಿಂದ ಸ್ಮರಿಸಿಕೊಂಡಿದೆ. ಅಂತಹ ಅವಕಾಶ ಈ ಬಾರಿ ನಮ್ಮದು. ನಮ್ಮ ಪ್ರತಿಷ್ಠಾನವು ಕನ್ನಡದ ಧೀಮಂತ ಲೇಖಕಿಯೊಬ್ಬರಿಗೆ ಮೊದಲ ಬಾರಿಗೆ ಪ್ರಶಸ್ತಿ ನೀಡುತ್ತಿರುವುದು ನಮ್ಮ ಹೆಮ್ಮೆ. ಇದು ಮಹಿಳೆ ಮತ್ತು ಮಾನವತೆಗೆ ನಾವು ಸಲ್ಲಿಸುತ್ತಿರುವ ಪ್ರೀತಿಯ ಗೌರವ. ದಬ್ಬೆಯ ಈ ಸಾರ ಸರಸ್ವತಿಗೆ ನಮಸ್ಕಾರ.

ಅಧ್ಯಕ್ಷರು ಮತ್ತು ಸದಸ್ಯರು
ಡಾ.ಎಲ್.ಬಸವರಾಜು ಪ್ರತಿಷ್ಠಾನ (ರಿ), ಕೋಲಾರ

ಶನಿವಾರ, ಮೇ 25, 2013

ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 17ನೇ ಕಂತು


ಮೇ 2013ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 17ನೇ ಕಂತು.
ಚಿತ್ರಗಳು: ಮುರಳೀಧರ ರಾಠೋಡ್



ಅಳಲು ಸಮಯವಿರುವುದಿಲ್ಲ
ನಸ್ರುದ್ದೀನನ ಕತ್ತೆಗೆ ಕಾಯಿಲೆಯಾಗಿತ್ತು. ನಸ್ರುದ್ದೀನ್ ಜೋರಾಗಿ ಅಳುತ್ತಿದ್ದ. ಅದನ್ನು ನೋಡಿದ ಗೆಳೆಯನೊಬ್ಬ,
‘ಇನ್ನೂ ನಿನ್ನ ಕತ್ತೆ ಸತ್ತಿಲ್ಲ. ಈಗಲೇ ಏಕೆ ಅಳುತ್ತಿದ್ದೀಯ?’ ಎಂದು ಕೇಳಿದ.
‘ಅಯ್ಯೋ, ಈ ಕತ್ತೆ ಸತ್ತು ಹೋದರೆ, ಅದನ್ನು ಹೂಳಬೇಕು. ಮತ್ತೊಂದು ಹೊಸ ಕತ್ತೆ ಖರೀದಿಸಬೇಕು, ಅದಕ್ಕೆ ಹೊರೆ ಹೊರುವ, ಕೆಲಸ ಮಾಡುವ ತರಬೇತಿ ಕೊಡಬೇಕು. ಆಗ ನನಗೆ ಅಳಲು ಸಮಯವೆಲ್ಲಿ ಇರುತ್ತದೆ?’ ಎಂದ ನಸ್ರುದ್ದೀನ್ ತನ್ನ ಅಳು ಮುಂದುವರಿಸುತ್ತಾ.


ಮಳೆ ಮತ್ತು ಛತ್ರಿ
ನಸ್ರುದ್ದೀನ್ ಮತ್ತು ಆತನ ಗೆಳೆಯ ಸಂಜೆ ಅದೂ ಇದೂ ಮಾತನಾಡುತ್ತಾ ಹೊರಟಿದ್ದರು. ಇದ್ದಕ್ಕಿದ್ದಂತೆ ಮಳೆ ಸುರಿಯಲು ಆರಂಭವಾಯಿತು. ನಸ್ರುದ್ದೀನನ ಕೈಯಲ್ಲಿ ಛತ್ರಿ ಇದ್ದದ್ದನ್ನು ನೋಡಿದ ಗೆಳೆಯ,
‘ನಸ್ರುದ್ದೀನ್ ನಿನ್ನ ಬಳಿ ಛತ್ರಿ ಇದೆಯೆಲ್ಲಾ, ತೆಗೆ ಅದನ್ನು’ ಎಂದ
‘ಇಲ್ಲ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ’ ಎಂದ ನಸ್ರುದ್ದೀನ್.
‘ಏಕೆ? ಏನಾಗಿದೆ ನಿನ್ನ ಛತ್ರಿಗೆ?’ ಎಂದು ಕೇಳಿದ ಗೆಳೆಯ.
‘ಅದು ಹರಿದುಹೋಗಿದೆ’ ಎಂದ ನಸ್ರುದ್ದೀನ್.
‘ಹಾಗಾದರೆ, ಅಂತಹ ಛತ್ರಿ ಏಕೆ ತಂದೆ?’ ಎಂದು ಕೇಳಿದ ಗೆಳೆಯ.
‘ನನಗೇನು ಗೊತ್ತು ಈ ದಿನ ಮಳೆ ಬರುತ್ತದೆ ಎಂದು?’ ಕೇಳಿದ ನಸ್ರುದ್ದೀನ್.


ಜ್ಞಾಪಕ ಶಕ್ತಿ
ನಸ್ರುದ್ದೀನ್ ಮರೆವಿನ ಕಾಯಿಲೆಯಿಂದ ನರಳುತ್ತಿದ್ದ. ಚಿಕಿತ್ಸೆಗೆಂದು ವೈದ್ಯರ ಬಳಿ ಹೋದ.
‘ನನಗೇನೂ ನೆನಪಿಲ್ಲ ಎನ್ನಿಸುತ್ತಿದೆ’ ಎಂದ ನಸ್ರುದ್ದೀನ್.
‘ಹೌದೆ? ಯಾವಾಗಿನಿಂದ?’ ಎಂದು ವೈದ್ಯರು ಕೇಳಿದರು.
‘ಏನದು ಯಾವಾಗಿನಿಂದ? ಏನು ಕೇಳುತ್ತಿದ್ದೀರಿ?’ ಎಂದ ನಸ್ರುದ್ದೀನ್.
ವೈದ್ಯರು ಜ್ಞಾಪಕ ಶಕ್ತಿ ಸುಧಾರಿಸಲು ಔಷಧ ಕೊಟ್ಟರು. ಒಂದು ವಾರ ಕಳೆದ ನಂತರ  ಪುನಃ ವೈದ್ಯರ ಬಳಿ ನಸ್ರುದ್ದೀನ್ ಹೋದ.
‘ಹೇಗಿದೆ ಈಗ ಜ್ಞಾಪಕ ಶಕ್ತಿ?’ ಕೇಳಿದರು ವೈದ್ಯರು.
‘ಈಗ ಪರವಾಗಿಲ್ಲ ಎನ್ನಿಸುತ್ತೆ. ಏನೋ ಮರೆತಿದ್ದೇನೆ ಎನ್ನುವ ನೆನಪಿದೆ’ ಎಂದ ನಸ್ರುದ್ದೀನ್.

ಅದ್ಭುತ ಶಕ್ತಿ
ನಸ್ರುದ್ದೀನ್ ತನಗೆ ಅದ್ಭುತ ಶಕ್ತಿ ಇದೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದ. ತನಗೆ ಕತ್ತಲಲ್ಲೂ ಸಂಪೂರ್ಣವಾಗಿ ಕಾಣುತ್ತದೆ ಎಂದು ಹೇಳಿಕೊಳ್ಳುತ್ತಿದ್ದ. ಒಂದು ದಿನ ರಾತ್ರಿ ಕತ್ತಲಲ್ಲಿ ನಸ್ರುದ್ದೀನ್ ಲಾಂದ್ರ ಹಿಡಿದು ಹೋಗುತ್ತಿದ್ದಾಗ ಆತನ ಗೆಳೆಯನೊಬ್ಬ ಎದುರು ಸಿಕ್ಕಿ,
‘ಏನು ನಸ್ರುದ್ದೀನ್! ಕತ್ತಲಲ್ಲಿ ಸಹ ನಿನಗೆ ಎಲ್ಲಾ ಕಾಣುತ್ತದೆ ಎಂದು ಹೇಳುತ್ತಿದ್ದೆ. ಈಗ ನೋಡಿದರೆ ಲಾಂದ್ರ ಹಿಡಿದು ಹೊರಟಿದ್ದೀಯೆ?’ ಎಂದ ಅವನನ್ನು ತಮಾಷೆ ಮಾಡಲು.
‘ಹೌದಪ್ಪ, ನನಗೇನೋ ಕತ್ತಲಲ್ಲಿ ಕಾಣುತ್ತದೆ. ಈ ಲಾಂದ್ರ ಹಿಡಿದಿರುವುದು ನನಗೆ ದಾರಿ ಕಾಣಲು ಅಲ್ಲ. ಇದು ನಿನ್ನಂಥವರಿಗಾಗಿ. ಕತ್ತಲಲ್ಲಿ ಏನೂ ಕಾಣದೆ ನನಗೆ ಬಂದು ಡಿಕ್ಕಿ ಹೊಡೆಯಬಾರದಲ್ಲ, ಅದಕ್ಕಾಗಿ’ ಎಂದ ನಸ್ರುದ್ದೀನ್.

ಸೈನಿಕ ನಸ್ರುದ್ದೀನ್
ಯುದ್ಧದಿಂದ ಹಿಂದಿರುಗಿದ ಕೆಲವು ಸೈನಿಕರು ತಮ್ಮ ಸಾಹಸಗಳ ಬಗ್ಗೆ ಊರಿನವರ ಮುಂದೆ ಹೇಳಿಕೊಳ್ಳುತ್ತಿದ್ದರು. ಒಬ್ಬ ಸೈನಿಕ ತಾವು ಹೇಗೆ ಶತ್ರುಗಳ ರುಂಡ ಚೆಂಡಾಡಿದೆನೆಂದು ಹೇಳಿದರೆ ಮತ್ತೊಬ್ಬ ಶತ್ರು ಬಾಣಗಳನ್ನು ತಾನು ಹೇಗೆ ಕೈಯಲ್ಲೇ ಹಿಡಿದು ಅವುಗಳನ್ನು ಶತ್ರುಗಳ ಕಡೆಗೆ ಎಸೆದು ಅವರನ್ನು ಕೊಂದೆನೆಂದು ಹೇಳುತ್ತಿದ್ದ. ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನಸ್ರುದ್ದೀನ್ ತಾನೂ ಸಹ ಸೈನ್ಯದಲ್ಲಿದ್ದು ಒಂದು ಸಾರಿ ಯುದ್ಧದಲ್ಲಿ ಶತ್ರು ಸೈನಿಕನೊಬ್ಬನ ಕೈಯನ್ನು ಕತ್ತರಿಸಿದೆನೆಂದು ಹೇಳಿದ. ಅದನ್ನು ಕೇಳಿಸಿಕೊಂಡ ಸೈನಿಕ,
‘ನಾನಾಗಿದ್ದಿದ್ದರೆ ಶತ್ರುವಿನ ತಲೆಯನ್ನೇ ಕತ್ತರಿಸುತ್ತಿದ್ದೆ’ ಎಂದ.
‘ನನಗೆ ಅದಕ್ಕೆ ಅವಕಾಶವೇ ಇರಲಿಲ್ಲ’ ಎಂದ ನಸ್ರುದ್ದೀನ್.
‘ಅದು ಹೇಗೆ ಸಾಧ್ಯ?’ ಕೇಳಿದ ಸೈನಿಕ.
‘ಅಷ್ಟೊತ್ತಿಗೆ ಯಾರೋ ಯಾವಾಗಲೋ ತಲೆಯನ್ನು ಕತ್ತರಿಸಿಬಿಟ್ಟಿದ್ದರು’ ಎಂದ ನಸ್ರುದ್ದೀನ್.


ಧರ್ಮ ಮತ್ತು ಗಡ್ಡ
ದೇಶದ ಮಹಾನ್ ಮತ್ತು ಪ್ರಮುಖ ಧಾರ್ಮಿಕ ಮುಖಂಡರೆಲ್ಲಾ ವೇದಿಕೆಯ ಮೇಲೆ ಸೇರಿದ್ದರು. ಅವರನ್ನು ನೋಡಲು ಮತ್ತು ಅವರ ಮಾತು ಕೇಳಲು ಜನರೆಲ್ಲಾ ಸೇರಿದ್ದರು.  ನಸ್ರುದ್ದೀನ್ ಸಹ ಆ ಧಾರ್ಮಿಕ ಮಹಾನ್ ಪುರುಷರನ್ನು ನೋಡಲು ಬಂದಿದ್ದ. ಅವನ ಪಕ್ಕ ಇದ್ದ ಒಬ್ಬಾತ,
‘ನೋಡು, ಎಲ್ಲಾ ಧಾರ್ಮಿಕ ಮಹಾನ್ ಪುರುಷರು ಗಡ್ಡ ಬಿಟ್ಟಿರುತ್ತಾರೆ. ಗಡ್ಡ ಅವರ ಜ್ಞಾನ ವಿದ್ವತ್ತಿನ ಸಂಕೇತ’ ಎಂದ.
ಅದನ್ನು ಕೇಳಿಸಿಕೊಂಡ ನಸ್ರುದ್ದೀನ್ ಮನೆಗೆ ಹೊರಡಲು ಎದ್ದು ನಿಂತ. ಅದನ್ನು ನೋಡಿದ ವ್ಯಕ್ತಿ,
‘ಏಕೆ? ಎಲ್ಲಿಗೆ ಹೋಗುತ್ತಿದ್ದೀಯಾ?’ ಎಂದು ಕೇಳಿದ.
‘ನನ್ನ ಮನೆಗೆ. ನನ್ನ ಮನೆಯಲ್ಲೇ ಒಬ್ಬ ಜ್ಞಾನ-ವಿದ್ವತ್ತು ಇರುವ ಧಾರ್ಮಿಕ ವ್ಯಕ್ತಿಯೊಬ್ಬನಿದ್ದಾನೆ’ ಎಂದ ನಸ್ರುದ್ದೀನ್.
‘ಹೌದೆ? ನನಗೆ ಆ ವಿಷಯ ತಿಳಿದೇ ಇರಲಿಲ್ಲ. ಯಾರದು ಆ ಮಹಾನ್ ಪುರುಷ?’ ಎಂದು ಕೇಳಿದ ಆ ವ್ಯಕ್ತಿ.
‘ನನ್ನ ಮೇಕೆ. ನನ್ನ ಮೇಕೆಗೆ ಇಲ್ಲಿನ ಮಹಾನ್ ಧಾರ್ಮಿಕ ಪುರುಷರಿಗಿಂತ ಉದ್ದವಾದ ಗಡ್ಡವಿದೆ’ ಎಂದು ಹೇಳಿ ನಸ್ರುದ್ದೀನ್ ಮನೆಗೆ ಹೊರಟ.

ಗಡ್ಡದ ಬಣ್ಣ
ಸುಲ್ತಾನ ಒಂದು ದಿನ ಕ್ಷೌರ ಮಾಡಿಸಿಕೊಳ್ಳುತ್ತಿದ್ದಾಗ ಕ್ಷೌರಿಕ,
‘ಮಹಾ ಪ್ರಭು, ತಮ್ಮ ಗಡ್ಡದ ಕೂದಲು ಬೆಳ್ಳಗಾಗುತ್ತಿದೆ’ ಎಂದ.
ಸಿಟ್ಟಿಗೆದ್ದ ಸುಲ್ತಾನ ಕ್ಷೌರಿಕನನ್ನು ಒಂದು ವರ್ಷ ಸೆರೆಮನೆಗೆ ಹಾಕಿ ಎಂದು ಆದೇಶಿಸಿದ. ತನ್ನ ಆಸ್ತಾನಕ್ಕೆ ಬಂದ ನಂತರ ತನ್ನ ಪರಿಚಾರಕನನ್ನು ಕರೆದು ತನ್ನ ಗಡ್ಡದ ಕೂದಲ ಬಣ್ಣ ಹೇಗಿದೆ ಎಂದು ಕೇಳಿದ.
‘ತಮ್ಮ ಗಡ್ಡದ ಬಣ್ಣ ಬಹುಪಾಲು ಕಪ್ಪಗೇ ಇದೆ’ ಎಂದ ಆತ.
‘ಬಹುಪಾಲು ಎಂದರೇನು?!’ ಎಂದು ಕೂಗಿದ ಸುಲ್ತಾನ ಅವನನ್ನು ಎರಡು ವರ್ಷ ಸೆರೆಮನೆಗೆ ತಳ್ಳಿ ಎಂದು ಆದೇಶಿಸಿದ. ಮತ್ತೊಬ್ಬ ಪರಿಚಾರಕನನ್ನು ಕರೆದು ಅವನನ್ನು ಅದೇ ಪ್ರಶ್ನೆ ಕೇಳಿದ ಸುಲ್ತಾನ. ಇದನ್ನೆಲ್ಲಾ ನೋಡುತ್ತಿದ್ದ ಆತ ಹೆದರಿಕೊಂಡಿದ್ದ.
‘ತಮ್ಮ ಗಡ್ಡದ ಕೂದಲು ಅಪ್ಪಟ ಕಪ್ಪು ಬಣ್ಣದಿಂದ ಮಿರಮಿರನೆ ಮಿಂಚುತ್ತಿದೆ’ ಎಂದ ಆತ ಅಳುಕಿನಿಂದಲೇ.
‘ಸುಳ್ಳುಗಾರ! ಅವನಿಗೆ ಛಡಿ ಏಟುಕೊಟ್ಟು ಮೂರು ವರ್ಷ ಸೆರೆಮನೆಗೆ ಹಾಕಿ’ ಎಂದು ಅರಚಿದ ಸುಲ್ತಾನ. ಇದನ್ನೆಲ್ಲಾ ನೋಡುತ್ತಿದ್ದ ತನ್ನ ಸಲಹೆಗಾರ ಮುಲ್ಲಾ ನಸ್ರುದ್ದೀನನನ್ನು ಕರೆದು ಅವನನ್ನು ಅದೇ ಪ್ರಶ್ನೆ ಕೇಳಿದ.
‘ಸ್ವಾಮಿ, ನನಗೆ ಬಣ್ಣಗುರುಡು, ಬಣ್ಣಗಳನ್ನು ನಾನು ಗುರುತಿಸಲಾರೆ’ ಎಂದ ನಸ್ರುದ್ದೀನ್.

ಮೀನುಗಾರನಲ್ಲ
ಆ ರಾಜ್ಯದ ರಾಜ ಒಂದು ನಸ್ರುದ್ದೀನನನ್ನು ಕರೆಸಿ, ‘ನಿನ್ನಲ್ಲಿ ಅದ್ಭುತ ಶಕ್ತಿಯಿದೆ ಎಂದು ನೀನು ಹೇಳಿಕೊಂಡಿದ್ದೀಯಂತೆ! ನಿನ್ನ ಅದ್ಭುತ ಶಕ್ತಿಯಿಂದ ನಮ್ಮ ರಾಜ್ಯದ ಜನರಿಗೆ ಮೀನು ಹಿಡಿದುಕೊಡು ನೋಡೋಣ’ ಎಂದು ಸವಾಲೆಸೆದ.
‘ಸ್ವಾಮಿ, ನನ್ನಲ್ಲಿ ಅದ್ಭುತ ಶಕ್ತಿಯಿದೆ ಎಂದು ನಾನು ಹೇಳಿದ್ದು ನಿಜ. ಆದರೆ ನಾನೆಂದೂ ನಾನು ಮೀನುಗಾರನೆಂದು ಹೇಳಿಕೊಂಡಿಲ್ಲವಲ್ಲ..? ಎಂದ ನಸ್ರುದ್ದೀನ್.

ಆತುರದ ಪ್ರಾರ್ಥನೆ
ಒಂದು ದಿನ ನಸ್ರುದ್ದೀನ್ ಆತುರಾತುರವಾಗಿ ಮಸೀದಿಗೆ ಹೋಗಿ ದೇವರಿಗೆ ಆತುರಾತುರವಾಗಿಯೇ ಪ್ರಾರ್ಥನೆ ಮಾಡಿ ಹೊರಟಿದ್ದ. ಅದನ್ನು ನೋಡಿದ ಇಮಾಂ ಸಿಟ್ಟಿನಿಂದ ಅವನನ್ನು ಕರೆದು,
‘ಇದೇನು ನೀನು ಮಾಡಿದ್ದು ಪ್ರಾರ್ಥನೆಯೇ? ಪ್ರಾರ್ಥನೆ ಅಷ್ಟು ಆತುರಾತುರವಾಗಿ ಮಾಡಬಾರದು. ಇನ್ನೊಮ್ಮೆ ಮೊದಲಿನಿಂದ ನಿಧಾನವಾಗಿಯೇ ಪ್ರಾರ್ಥನೆ ಮಾಡು’ ಎಂದು ಗದರಿಸಿದ.
ನಸ್ರುದ್ದೀನ್ ಅದೇ ರೀತಿ ಮಾಡಿ ಹೊರಡಲು ಎದ್ದು ನಿಂತ.
‘ಈ ನಿನ್ನ ಎರಡನೇ ಪ್ರಾರ್ಥನೆ ಮೊದಲ ಪ್ರಾರ್ಥನೆಗಿಂತ ದೇವರಿಗೆ ಇಷ್ಟವಾಗಿರುತ್ತದಲ್ಲವೆ?’ ಕೇಳಿದ ಇಮಾಂ.
‘ಖಂಡಿತಾ ಇಲ್ಲ’ ಹೇಳಿದ ನಸ್ರುದ್ದೀನ್, ‘ಮೊದಲ ಪ್ರಾರ್ಥನೆ ಆತುರಾತುರವಾಗಿ ಮಾಡಿದ್ದರೂ ಅದು ದೇವರಿಗಾಗಿ ಮಾಡಿದೆ. ಎರಡನೇ ಪ್ರಾರ್ಥನೆ ನಿಧಾನವಾದದ್ದಾದರೂ ಅದು ಮಾಡಿದ್ದು ನಿನಗಾಗಿ.’

ಸಾಲದ ವಧುದಕ್ಷಿಣೆ
ನಸ್ರುದ್ದೀನ್ ಸರ್ಕಾರಕ್ಕೆ ಹಲವಾರು ವರ್ಷಗಳ ಕಾಲ ಕಂದಾಯವನ್ನೇ ಕಟ್ಟಿರಲಿಲ್ಲ. ಸರ್ಕಾರ ಹಲವಾರು ಬಾರಿ ಅವನಿಗೆ ಎಚ್ಚರಿಕೆ ನೀಡಿತ್ತು. ನಸ್ರುದ್ದೀನ್ ತಲೆಕೆಡಿಸಿಕೊಂಡಿರಲಿಲ್ಲ. ಕೊನೆಗೊಂದು ದಿನ ಸರ್ಕಾರ ಅವನ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಿತು. ಅಷ್ಟಾದರೂ ಅವನು ಇನ್ನೂ ಸರ್ಕಾರಕ್ಕೆ ಹತ್ತು ಸಾವಿರ ರೂಪಾಯಿ ಬಾಕಿ ತೀರಿಸಬೇಕಿತ್ತು.
ರಾಜ ಅವನ್ನನು ಕರೆಸಿ ಬಾಕಿ ತೀರಿಸುವಂತೆ ಹೇಳಿದ.
‘ನನ್ನ ಮತ್ತು ನನ್ನ ಹೆಂಡತಿಯ ಹತ್ತಿರ ಕೇವಲ ಐದು ಸಾವಿರ ರೂಪಾಯಿ ಮಾತ್ರ ಉಳಿದಿದೆ. ಆದರೆ ಆ ಹಣ ನನ್ನ ಹೆಂಡತಿಯದು’ ಎಂದ ನಸ್ರುದ್ದೀನ್.
‘ಸರ್ಕಾರದ ನಿಯಮಾನುಸಾರ ಗಂಡ ಹೆಂಡತಿಯ ಆಸ್ತಿ ಇಬ್ಬರದೂ ಒಂದೆ. ಅದನ್ನೇ ಆಕೆ ಕಟ್ಟಬೇಕು’ ಎಂದ ರಾಜ.
‘ಅದೂ ಸಾಧ್ಯವಿಲ್ಲ’ ಎಂದ ನಸ್ರುದ್ದೀನ್.
‘ಏಕೆ ಸಾಧ್ಯವಿಲ್ಲ?’ ಕೇಳಿದ ರಾಜ.
‘ಏಕೆಂದರೆ ಆಕೆಯ ಬಳಿ ಇರುವ ಐದು ಸಾವಿರವೆಂದರೆ ನಾನು ಆಕೆಗೆ ಕೊಡಬೇಕಾಗಿರುವ ವಧುದಕ್ಷಿಣೆ. ಆ ವಧುದಕ್ಷಿಣೆಯನ್ನು ನಾನಿನ್ನೂ ಆಕೆಗೆ ಕೊಟ್ಟಿಲ್ಲ, ನಾನಿನ್ನೂ ಆಕೆಗೆ ಸಾಲಗಾರನಾಗಿದ್ದೇನೆ’ ಎಂದ ನಸ್ರುದ್ದೀನ್.

ಶನಿವಾರ, ಮೇ 04, 2013

ಮುಲ್ಲಾ ನಸ್ರುದ್ದೀನ್ ಕತೆಗಳ 16ನೇ ಕಂತು

ಏಪ್ರಿಲ್ 2013ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಲ್ಲಾ ನಸ್ರುದ್ದೀನ್ ಕತೆಗಳ 16ನೇ ಕಂತು.
ಚಿತ್ರಗಳು: ಮುರಳೀಧರ ರಾಠೋಡ್




ಮೂಢನಂಬಿಕೆ
ಆ ರಾಜ್ಯದ ರಾಜನಂಬಿಕೆ ಮೂಢನಂಬಿಕೆಗಳಲ್ಲಿ ಅತೀವ ವಿಶ್ವಾಸವಿತ್ತು. ಒಂದು ದಿನ ಆತ ಬೆಳಿಗ್ಗೆ ಬೇಟೆಗೆಂದು ಹೊರಟ. ದಾರಿಯಲ್ಲಿ ಮುಲ್ಲಾ ನಸ್ರುದ್ದೀನ್ ಎದುರಾದ.
‘ಹೋ. ಮುಲ್ಲಾಗಳು ಅಪಶಕುನದ ಸಂಕೇತ. ಹೋದ ಕೆಲಸ ಆಗುವುದಿಲ್ಲ. ಅವನನ್ನು ಕಟ್ಟಿ ಸಂಜೆಯವರೆಗೂ ಕೋಣೆಯಲ್ಲಿ ಕೂಡಿಹಾಕಿ’ ಎಂದ. ಸೈನಿಕರು ಅದೇ ರೀತಿ ಮಾಡಿದರು. ಆದರೆ ಆ ದಿನ ರಾಜನ ಬೇಟೆ ಭರ್ಜರಿಯಾಗಿಯೇ ನಡೆಯಿತು. ರಾಜನಿಗೆ ಸಂತೋಷವೂ ಆಯಿತು. ಸಂಜೆ ಮುಲ್ಲಾನನ್ನು ಬಂಧಮುಕ್ತಗೊಳಿಸಿ ಕರೆತರಲು ಹೇಳಿದನು. ಮುಲ್ಲಾ ಬಂದಾಗ, ‘ಕ್ಷಮಿಸು ನಸ್ರುದ್ದೀನ್. ನೀನು ಎದುರಾದದ್ದು ಅಪಶಕುನವೆಂದು ನಿನ್ನನ್ನು ಕೂಡಿಹಾಕಿದ್ದೆ. ಆದರೆ ಈ ದಿನದ ನನ್ನ ಬೇಟೆ ಚೆನ್ನಾಗಿಯೇ ನಡೆಯಿತು’ ಎಂದ ರಾಜ.
‘ನಾನು ಅಪಶಕುನವೇ? ನಾನು ಎದುರಾಗಿದ್ದಕ್ಕೆ ನಿಮಗೆ ಒಳ್ಳೆಯ ಬೇಟೆಯಾಯಿತು. ನನಗೆ ನೀವು ಎದುರಾದುದಕ್ಕೆ ಇಡೀ ದಿನ ಕತ್ತಲ ಕೋಣೆಯಲ್ಲಿ ನಾನು ಬಿದ್ದಿರಬೇಕಾಯ್ತು’ ಎಂದ ನಸ್ರುದ್ದೀನ್.


ದೇವರದಯೆ
ತಮ್ಮ ಹೊಸ ರಾಜನಿಗೆ ಏನಾದರೂ ಉಡುಗೊರೆ ಕೊಡೋಣವೆಂದು ನಸ್ರುದ್ದೀನ್ ಒಂದು ಚೀಲ ತುಂಬಾ ಆಲೂಗೆಡ್ಡೆ ಕೊಂಡೊಯ್ಯುತ್ತಿದ್ದ. ಅದನ್ನು ನೋಡಿದ ಪಕ್ಕದ ಮನೆಯಾತ,
‘ಏನದು ನಸ್ರುದ್ದೀನ್?’ ಎಂದು ಕೇಳಿದ.
‘ನಮ್ಮ ಹೊಸ ರಾಜನಿಗೆ ಉಡುಗೊರೆಯಾಗಿ ಆಲೂಗೆಡ್ಡೆ ಕೊಂಡೊಯ್ಯುತ್ತಿದ್ದೇನೆ’ ಎಂದ ನಸ್ರುದ್ದೀನ್.
‘ಏನು? ಆಲೂಗೆಡ್ಡೆಯೆ? ಅಂತಹ ದೊರೆಗೆ ಅದು ಒಳ್ಳೆಯ ಕೊಡುಗೆ ಅಲ್ಲ. ಇನ್ನೂ ಉತ್ತಮವಾದುದು ಸ್ಟ್ರಾಬೆರ್ರಿಯಂಥದನ್ನು ಕೊಡು’ ಎಂದ ನೆರೆಮನೆಯಾತ.
ಆಯಿತೆಂದು ಒಂದು ಚೀಲ ಸ್ಟ್ರಾಬೆರ್ರಿ ತುಂಬಿಕೊಂಡು ರಾಜನ ಅರಮನೆಗೆ ಹೋಗಿ ತನ್ನ ಕೊಡುಗೆ ನೀಡಿದ. ಸ್ಟ್ರಾಬೆರ್ರಿಯಂತಹ ನಿಕೃಷ್ಟ ವಸ್ತು ಕೊಡುಗೆಯಾಗಿ ನೀಡಿದ್ದನ್ನು ಕಂಡು ಸಿಟ್ಟಾದ ರಾಜ ಅವುಗಳಿಂದಲೇ ನಸ್ರುದ್ದೀನನನಿಗೆ ಹೊಡೆಯುವಂತೆ ರಾಜ ತನ್ನ ಸೈನಿಕರಿಗೆ ಆಜ್ಞೆ ಮಾಡಿದ. ಅವರು ಅವುಗಳಿಂದ ಹೊಡೆಯುವಾಗ ನಸ್ರುದ್ದೀನ್ ದೇವರಿಗೆ ಧನ್ಯವಾದ ತಿಳಿಸುತ್ತಿದ್ದ. ಅದನ್ನು ನೋಡಿ ಅಚ್ಚರಿಗೊಂಡ ರಾಜ,
‘ನೀನು ನೀಡಿದ ಕೊಡುಗೆಯಿಂದಲೇ ನಿನ್ನನ್ನು ಹೊಡೆಯುತ್ತಿದ್ದರೂ ದೇವರಿಗೆ ಧನ್ಯವಾದ ಹೇಳುತ್ತಿದ್ದೀಯಲ್ಲಾ. ಏಕೆ ಮುಲ್ಲಾ?’ ಎಂದು ಕೇಳಿದ ರಾಜ.
‘ನಾನು ನಿಮಗೆ ಆಲೂಗೆಡ್ಡೆಯನ್ನು ಉಡುಗೊರೆಯಾಗಿ ಕೊಡಲಿಲ್ಲವಲ್ಲ, ಅದಕ್ಕೆ ದೇವರಿಗೆ ಧನ್ಯವಾದವನ್ನು ಹೇಳುತ್ತಿದ್ದೇನೆ’ ಎಂದ ನಸ್ರುದ್ದೀನ್.

ಒಂದು ಸೇರು ಹಸುವಿನ ಹಾಲು
ನಸ್ರುದ್ದೀನ್ ಹಾಲು ಮಾರುವವನ ಬಳಿ ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಹೋಗಿ, ‘ಒಂದು ಸೇರು ಹಸುವಿನ ಹಾಲು ಕೊಡು’ ಎಂದ.
ಹಾಲಿನವ ಆ ಸಣ್ಣ ಪಾತ್ರೆ ನೋಡಿ, ‘ಅಷ್ಟು ಸಣ್ಣ ಪಾತ್ರೆಯಲ್ಲಿ ಒಂದು ಸೇರು ಹಸುವಿನ ಹಾಲು ಹಿಡಿಸುವುದಿಲ್ಲ’ ಎಂದ.
‘ಹೌದೆ, ಹಾಗಾದರೆ ಒಂದು ಸೇರು ಮೇಕೆಯ ಹಾಲೇ ಕೊಡು. ಅದಾದರೆ ಹಿಡಿಸಬಹುದೇನೋ’ ಎಂದ ನಸ್ರುದ್ದೀನ್.

ಉತ್ತಮ ಗೆಳೆಯ
ಗೆಳೆಯ: ‘ನಸ್ರುದ್ದೀನ್ ನಿನ್ನ ಅತ್ಯುತ್ತಮ ಗೆಳೆಯ ಯಾರು?’
ನಸ್ರುದ್ದೀನ್: ‘ಯಾರು ನನಗೆ ಅದ್ದೂರಿ ಭೋಜನ ಹಾಕಿಸುವರೋ ಅವನೇ ನನ್ನ ಅತ್ಯುತ್ತಮ ಗೆಳೆಯ’
ಗೆಳೆಯ: ‘ನಾನು ನಿನಗೆ ಅದ್ದೂರಿ ಭೋಜನ ಹಾಕಿಸುತ್ತೇನೆ. ಹಾಗಾದರೆ ನಾನು ನಿನ್ನ ಅತ್ಯುತ್ತಮ ಗೆಳೆಯ ತಾನೆ?’
ನಸ್ರುದ್ದೀನ್: ‘ಗೆಳೆತನ ಹಾಗೆಲ್ಲಾ ಸಾಲದ ರೂಪದಲ್ಲಿ ಕೊಡಲಾಗದು’

ಅಪರೂಪ
ಪಕ್ಕದ ರಾಜ್ಯದ ಪ್ರಧಾನ ಮಂತ್ರಿ ಆ ಊರಿಗೆ ಬಂದಿದ್ದವನು ನಸ್ರುದ್ದೀನ್ ನಡೆಸುತ್ತಿದ್ದ ಉಪಾಹಾರ ಗೃಹ ಅತ್ಯಂತ ಜನಪ್ರಿಯವೆಂದು ಕೇಳಿ ಅಲ್ಲಿಗೆ ಭೋಜನಕ್ಕೆ ಬಂದನು. ಅಲ್ಲಿ ರುಚಿಕರವಾದ ಕುರಿಯ ಮಾಂಸದ ಊಟ ಮಾಡಿ ಆ ಊಟಕ್ಕೆ ಎಷ್ಟು ಹಣ ಕೊಡಬೇಕೆಂದು ಉಪಾಹಾರ ಗೃಹದ ಮಾಲೀಕನಾದ ನಸ್ರುದ್ದೀನನನ್ನು ಕೇಳಿದನು.
‘ಐವತ್ತು ಚಿನ್ನದ ನಾಣ್ಯಗಳು’ ಎಂದ ನಸ್ರುದ್ದೀನ್.
‘ಐವತ್ತು ಚಿನ್ನದ ನಾಣ್ಯಗಳೇ? ದರ ತೀರಾ ಹೆಚ್ಚಾಯಿತಲ್ಲ? ಏಕೆ ಈ ರಾಜ್ಯದಲ್ಲಿ ಕುರಿಗಳು ಅಷ್ಟು ಅಪರೂಪವೇ?’ ಕೇಳಿದ ಪ್ರಧಾನ ಮಂತ್ರಿ.
‘ಕುರಿಗಳೇನು ಅಪರೂಪವಲ್ಲ, ಆದರೆ ಭೋಜನಕ್ಕೆ ಭೇಟಿ ನೀಡುವ ಪ್ರಧಾನ ಮಂತ್ರಿಗಳು ಅಪರೂಪ’ ಎಂದ ನಸ್ರುದ್ದೀನ್.

ಕೆಂಪನೆ ಹಣ್ಣು
ನಸ್ರುದ್ದೀನ್ ಒಮ್ಮೆ ಭಾರತಕ್ಕೆ ಭೇಟಿ ನೀಡಿದ್ದ. ರಸ್ತೆಯಲ್ಲಿ ಹಾದು ಹೋಗುತ್ತಿದ್ದಾಗ ಆತನಿಗೆ ಹಸಿವಾಗುತ್ತಿತ್ತು. ಏನಾದರೂ ತಿನ್ನಬೇಕೆಂದು ಯೋಚಿಸುತ್ತಿರುವಾಗ ಯಾರೋ ಕೆಂಪನೆ ಹಣ್ಣುಗಳನ್ನು ಮಾರುತ್ತಿದ್ದರು. ಆ ಹಣ್ಣುಗಳು ಏನೆಂದು ತಿಳಿದಿರದಿದ್ದರೂ ನೋಡಲು ಚೆನ್ನಾಗಿ ಕಾಣುತ್ತಿದ್ದುದರಿಂದ ಎರಡು ಸೇರು ಹಾಕಿಸಿಕೊಂಡು ಮರದ ಕೆಳಗೆ ಕೂತು ತಿನ್ನತೊಡಗಿದ. ಕೂಡಲೇ ಖಾರದಿಂದಾಗಿ ನಾಲಿಗೆ ಉರಿಯತೊಡಗಿತು, ಕಣ್ಣು ಕೆಂಪಾಗಿ ಕಣ್ಣಲಿ ನೀರು ಹರಿಯತೊಡಗಿತು ಹಾಗೂ ಬೆವರು ಸುರಿಯತೊಡಗಿತು.
ರಸ್ತೆಯಲ್ಲಿ ಹೋಗುತ್ತಿದ್ದ ಒಬ್ಬಾತನನ್ನು ತಾನು ತಿನ್ನುತ್ತಿರುವುದು ಯಾವ ಹಣ್ಣು, ಏಕೆ ಅವು ಅಷ್ಟೊಂದು ಖಾರವಾಗಿವೆ ಎಂದು ಕೇಳಿದ.
‘ಅಯ್ಯೋ, ಅವು ಹಣ್ಣಲ್ಲ. ಅವು ಮೆಣಸಿನಕಾಯಿಗಳು. ಅವುಗಳನ್ನು ಯಾರೂ ನೇರವಾಗಿ ತಿನ್ನುವುದಿಲ್ಲ, ಅವುಗಳನ್ನು ಸ್ವಲ್ಪ ಸ್ವಲ್ಪ ಆಹಾರದಲ್ಲಿ ಬಳಸುತ್ತಾರೆ’ ಎಂದ ಒಬ್ಬ ಹಾದಿಹೋಕ.
ಅದನ್ನು ಕೇಳಿದ ನಂತರವೂ ನಸ್ರುದ್ದೀನ್ ಅದನ್ನು ಕಷ್ಟದಲ್ಲಿ ತಿನ್ನತೊಡಗಿದ. ಅದನ್ನು ನೋಡಿದ ಹಾದಿಹೋಕ,
‘ಖಾರವೆಂದು ತಿಳಿದನಂತರವೂ ಏಕೆ ತಿನ್ನುತ್ತಿದ್ದೀರಿ?’ ಎಂದು ಕೇಳಿದ.
‘ಏನು ಮಾಡಲಿ? ಅದಕ್ಕೆ ಈಗಾಗಲೇ ನಾನು ಹಣವನ್ನು ಕೊಟ್ಟುಬಿಟ್ಟಿದ್ದೇನಲ್ಲ! ನಾನೀಗ ತಿನ್ನುತ್ತಿರುವುದು ಯಾವುದೇ ಹಣ್ಣನಲ್ಲ, ನನ್ನ ಹಣವನ್ನು’ ಎಂದ ನಸ್ರುದ್ದೀನ್.

ನಾನು ಯಾರು?
ನಸ್ರುದ್ದೀನ್ ಯಾವುದೋ ಕೆಲಸದ ನಿಮಿತ್ತ ಪಟ್ಟಣಕ್ಕೆ ಹೋಗಬೇಕಾಯ್ತು. ಅಷ್ಟು ದೊಡ್ಡ ಪಟ್ಟಣ, ಅಷ್ಟೊಂದು ಜನಜಂಗುಳಿ ಆತ ಹಿಂದೆಂದೂ ನೋಡಿರಲಿಲ್ಲ. ಆ ಜನರ ಮಧ್ಯೆ ತಾನು ಕಳೆದುಹೋಗಬಹುದು ಹಾಗೂ ತನ್ನನ್ನೇ ತಾನು ಗುರುತಿಸಲು ಸಾಧ್ಯವಾಗದಿರಬಹುದು ಎಂದನ್ನಿಸಿತು ಆತನಿಗೆ. ರಾತ್ರಿ ಛತ್ರವೊಂದರಲ್ಲಿ ಹಲವರು ಜನರ ನಡುವೆ ಮಲಗುವಾಗ ಬೆಳಿಗ್ಗೆ ಎದ್ದನಂತರ ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯವಾಗಲೆಂದು ತಾನು ತಂದಿದ್ದ ಚೀಲವನ್ನು ತನ್ನ ಕಾಲಿಗೆ ಕಟ್ಟಿಕೊಂಡ. ಅದನ್ನು ಗಮನಿಸುತ್ತಿದ್ದ ಒಬ್ಬಾತ ತಮಾಷೆ ಮಾಡೋಣವೆಂದು ನಸ್ರುದ್ದೀನ್ ನಿದ್ರಿಸಿದ ನಂತರ ಆ ಚೀಲವನ್ನು ಬಿಚ್ಚಿ ತನ್ನ ಕಾಲಿಗೆ ಕಟ್ಟಿಕೊಂಡು ಮಲಗಿದ. ಬೆಳಗ್ಗೆ ಎದ್ದ ನಸ್ರುದ್ದೀನ್ ತನ್ನ ಚೀಲ ಮತ್ತೊಬ್ಬ ವ್ಯಕ್ತಿಯ ಕಾಲಲ್ಲಿರುವುದನ್ನು ಕಂಡು,
‘ಹೋ, ನಾನೇ ಆ ವ್ಯಕ್ತಿ’ ಎಂದುಕೊಂಡ.
ತಕ್ಷಣವೇ ಏನೋ ಹೊಳೆದಂತಾಗಿ ಗಾಬರಿಯಿಂದ ಆ ವ್ಯಕ್ತಿಯನ್ನು ಎಬ್ಬಿಸಿ,
‘ಹೇ! ನೀನು ನಾನಾದರೆ, ನಾನು ಯಾರು?’ ಎಂದು ಅರಚಿದ.



ಏಕೆ ಹೋದೆ?
ನಸ್ರುದ್ದೀನ್ ಸ್ಮಶಾನದಲ್ಲಿ ಒಂದು ಸಮಾಧಿಯ ಮುಂದೆ ಕೂತು ರೋಧಿಸುತ್ತಿದ್ದ.
‘ಅಯ್ಯೋ! ಇಷ್ಟು ಬೇಗ ನಿನಗೆ ಸಾವು ಬರಬಾರದಿತ್ತು! ನನ್ನನ್ನು ಈ ದುಃಸ್ಥಿತಿಗೆ ತಳ್ಳಿ ಏಕೆ ಬಿಟ್ಟು ಹೋದೆ?’ ಎಂದು ಅಳುತ್ತಿದ್ದ.
ಅಲ್ಲೇ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ನಸ್ರುದ್ದೀನನನ್ನು ಕಂಡು ಮರುಕ ಹುಟ್ಟಿ, ‘ಏಕಪ್ಪಾ ಅಳುತ್ತಿದ್ದೀಯ? ಯಾರ ಸಮಾಧಿಯಿದು? ನಿನ್ನ ಮಗನದೆ?’ ಎಂದು ಕೇಳಿದ.
‘ಅಲ್ಲಾ, ಈ ಸಮಾಧಿ ನನ್ನ ಪತ್ನಿಯ ಮೊದಲ ಗಂಡನದು’ ಎಂದ ನಸ್ರುದ್ದೀನ್.

ಸರಿಯಾದ ಪದ
ನಸ್ರುದ್ದೀನ್ ಮತ್ತು ಆತನ ಗೆಳೆಯ ಒಂದು ಸಂಜೆ ನದಿಯ ದಡದಲ್ಲಿ ನಡೆದು ಹೋಗುತ್ತಿದ್ದಾಗ ನದಿಯ ಪ್ರವಾಹದಲ್ಲಿ ಒಬ್ಬಾತ ಸಿಕ್ಕಿಬಿದ್ದು ಮರದ ಬೇರೊಂದನ್ನು ಹಿಡಿದು ಸಹಾಯಕ್ಕಾಗಿ ಕೂಗುತ್ತಿದ್ದ. ಅದನ್ನು ನೋಡಿದ ನಸ್ರುದ್ದೀನ್ ಕೂಡಲೇ ಆತನ ಬಳಿಗೆ ಹೋಗಿ ತನ್ನ ಕೈ ಚಾಚಿ,
‘ನಿನ್ನ ಕೈ ಕೊಡು, ಮೇಲಕ್ಕೆ ಎಳೆದುಕೊಳ್ಳುತ್ತೇನೆ’ ಎಂದ. ಆತ ಕೈ ಕೊಡಲೇ ಇಲ್ಲ.
‘ನಿನ್ನ ಉದ್ಯೋಗ ಯಾವುದು?’ ಎಂದು ನಸ್ರುದ್ದೀನ್ ಆ ವ್ಯಕ್ತಿಯನ್ನು ಕೇಳಿದ.
‘ನಾನೊಬ್ಬ ಕಂದಾಯ ವಸೂಲಿಗಾರ’ ಎಂದ ಆ ವ್ಯಕ್ತಿ.
‘ಹೌದೆ. ಹಾಗಾದರೆ ನನ್ನ ಕೈ ತಗೋ. ಅದನ್ನು ಹಿಡಿದುಕೊ, ನಿನ್ನನ್ನು ಮೇಲಕ್ಕೆ ಎಳೆದುಕೊಳ್ಳುತ್ತೇನೆ’ ಎಂದ ನಸ್ರುದ್ದೀನ್. ಆ ವ್ಯಕ್ತಿ ನಸ್ರುದ್ದೀನ್ ಚಾಚಿದ ಕೈ ಹಿಡಿದುಕೊಂಡ. ನಸ್ರುದ್ದೀನ್ ಆತನನ್ನು ಮೇಲಕ್ಕೆಳೆದು ಆತನನ್ನು ಬದುಕಿಸಿದ. ಅಲ್ಲಿಂದ ಹೊರಟಂತೆ ನಸ್ರುದ್ದೀನ್ ತನ್ನ ಗೆಳೆಯನಿಗೆ ಹೇಳಿದ,
‘ಈ ಕಂದಾಯ ವಸೂಲಿಗಾರರಿಗೆ ಕೊಡು ಎಂದರೆ ಅರ್ಥವಾಗುವುದಿಲ್ಲ, ತಗೋ ಎಂದರೆ ಮಾತ್ರ ಅರ್ಥವಾಗುತ್ತದೆ’ ಎಂದ.