Translate

ಗುರುವಾರ, ಏಪ್ರಿಲ್ 16, 2020

ಉಚಿತ ಡೌನ್ಲೋಡ್ ಗೆ ಹಂಚಿಕೊಳ್ಳುತ್ತಿರುವ ನನ್ನ ಮತ್ತೊಂದು ಅನುವಾದಿತ ಪುಸ್ತಕ `ಪುಟ್ಟ ರಾಜಕುಮಾರ'.


`ಪುಟ್ಟ ರಾಜಕುಮಾರ


https://archive.org/download/puttarajakumarajbalakrishna/Putta%20Rajakumara-%20J%20Balakrishna.pdf
 
ಈ ದಿನ ನಾನು ನಿಮ್ಮೊಂದಿಗೆ ಪಿ.ಡಿ.ಎಫ್. ರೂಪದಲ್ಲಿ ಉಚಿತ ಡೌನ್ಲೋಡ್ ಗೆ ಹಂಚಿಕೊಳ್ಳುತ್ತಿರುವ ನನ್ನ ಮತ್ತೊಂದು ಅನುವಾದಿತ ಪುಸ್ತಕ `ಪುಟ್ಟ ರಾಜಕುಮಾರ'. ವಿಶಿಷ್ಟ ಕಥಾವಸ್ತು ಹೊಂದಿರುವ ಪುಟ್ಟ ರಾಜಕುಮಾರ ಒಂದು ಪ್ರಖ್ಯಾತ ಪುಸ್ತಕ. ಫ್ರೆಂಚ್ ಭಾಷೆಯಲ್ಲಿ (‘ ಪತಿ ಪ್ರಿನ್ಸ್) 1943ರಲ್ಲಿ ಮೊದಲು ಪ್ರಕಟವಾದ ಪುಸ್ತಕ ಈಗಾಗಲೇ ವಿಶ್ವದ 361 ಭಾಷೆಗಳಿಗೆ ಅನುವಾದಗೊಂಡಿದೆ; 140 ಮಿಲಿಯನ್ ಗೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಮಕ್ಕಳಿಗಾಗಿ ಬರೆದ ಪುಸ್ತಕಕ್ಕೆ ಚಿತ್ರಗಳು ಬೇಕಿದ್ದುದರಿಂದ, ತನ್ನ ಕಲ್ಪನೆಗಳ ಸರಳತೆಯನ್ನು ಚಿತ್ರಿಸುವರ್ಯಾರೂ ಸಿಗದಿದ್ದುದರಿಂದ ಚಿತ್ರಗಳನ್ನು ತಾನೇ ಬಿಡಿಸಿದ. ಆದರೆ ಪುಸ್ತಕ ನಿಜವಾಗಿಯೂ ಮಕ್ಕಳ ಪುಸ್ತಕವೆ? ಅಥವಾ ದೊಡ್ಡವರಿಗಾಗಿ ಬರೆದ ಮಕ್ಕಳ ಕತೆಯೆ? ಸೇಂತ್ ಎಕ್ಸೂಪರಿಯೇ ಹೇಳಿದಂತೆ, ‘ಎಲ್ಲಾ ದೊಡ್ಡವರು ಮೊದಲು ಮಕ್ಕಳಾಗಿದ್ದವರೆ. ಆದರೆ, ಅದನ್ನು ನೆನೆಪಿನಲ್ಲಿಟ್ಟುಕೊಳ್ಳುವವರು ಕೆಲವರು ಮಾತ್ರ. ಸುಖಸಂತೋಷದ ಬದುಕಿನ ಅವಶ್ಯಕತೆಗಳು ತೀರಾ ಸರಳವಾದುವು ಹಾಗೂ ನಿಸ್ವಾರ್ಥತೆಯೇ ಸಿರಿಸಂಪತ್ತು ಎಂಬ ಸಂದೇಶವನ್ನುಪುಟ್ಟ ರಾಜಕುಮಾರ ಸಾರುತ್ತಾನೆ.
          ಪುಟ್ಟ ರಾಜಕುಮಾರ ಪುಸ್ತಕವನ್ನು ನಾವು ಮಕ್ಕಳ ಅಥವಾ ದೊಡ್ಡವರ ಪುಸ್ತಕ- ಏನೆಂದೇ ಪರಿಗಣಿಸಿದರೂ ಕತೆಯಲ್ಲಿ ಕೇಂದ್ರಿತವಾಗಿರುವ ಸಾವು, ಕೆಡುಕು ಹಾಗೂ ಹತಾಶೆಯ ಪ್ರತಿಮೆಗಳು ಓದಿದ ನಂತರವೂ ನಮ್ಮನ್ನು ಕಾಡುತ್ತಿರುತ್ತವೆ. ಕತೆಯ ಯಾವುದೇ ಪಾತ್ರವೂ ಸಂತೋಷವಾಗಿಲ್ಲ.  ಸೇಂತ್-ಎಕ್ಸ್, ಒಂಟಿತನ ಕಾಡಲು ನಾವು ಒಂಟಿಯಾಗಿರಬೇಕಿಲ್ಲ, ಇತರರ ನಡುವೆಯೂ ನಮ್ಮನ್ನು ಒಂಟಿತನ ಕಾಡುತ್ತದೆ ಎಂಬುದನ್ನು ಒತ್ತಿ ಹೇಳುತ್ತಾರೆ. ಮನುಷ್ಯ ಸಂಪರ್ಕ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ರೊಯ್ಯೆಂದು ಹಾದು ಹೋಗುವ `ಎಕ್ಸ್ಪ್ರೆಸ್ ಟ್ರೈನಿನ' ಹಾಗೆ ಕ್ಷಣಿಕವಾದದ್ದು. ಕೊನೆಗೆ ಯಾರನ್ನಾದರೂ ಗೆಳೆಯರನ್ನಾಗಿ ಮಾಡಿಕೊಂಡ ನಂತರವೂ ಪುಟ್ಟ ರಾಜಕುಮಾರ ಹೊರಡಲೇಬೇಕಾಗುತ್ತದೆ. ನರಿಯಂತಹ ಪಾತ್ರ ಸಾಂಗತ್ಯಕ್ಕಾಗಿ ಹತಾಶತೆಯಿಂದ ತನ್ನನ್ನು ತಾನೇ `ಪಳಗಿಸಿಕೊಳ್ಳಲು' ಮುಂದಾಗುತ್ತದೆ.
          ಮಕ್ಕಳು ಯಶಸ್ವಿಯಾಗುವ ಹಲವಾರು ಸನ್ನಿವೇಶಗಳಲ್ಲಿ ದೊಡ್ಡವರು ಸೋಲುತ್ತಾರೆ. ಪ್ರಪಂಚದಲ್ಲಿನ ಎಲ್ಲ ಕೆಡುಕಿಗೂ ದೊಡ್ಡವರೇ ಕಾರಣ- ಅದು ನಕ್ಷತ್ರಗಳನ್ನು ಹೊಂದುವುದಾಗಬಹುದು, ಕುಡುಕರಾಗುವುದಾಗಬಹುದು, ಇಲಿಗಳಿಗೆ ಮರಣದಂಡನೆ ವಿಧಿಸುವುದಾಗಬಹುದು ಅಥವಾ `ಕೆಡಕನ್ನುಂಟುಮಾಡುವ' ಆನೆಹುಣಿಸೆ ಮರಗಳನ್ನು ಬೆಳೆಯಲು ಬಿಡುವುದಾಗಬಹುದು. ದೊಡ್ಡವರು ತಮ್ಮ ಹೃದಯವಂತಿಕೆಯಿಂದ ಜಗತ್ತನ್ನು ನೋಡಲು ಸಾಧ್ಯವಾಗದೆ ಅಂಕಿಅಂಶಗಳ ಮೂಲಕ ನೋಡುವುದು ಅವರನ್ನು ಬಲವಂತದ ಒಂಟಿತನಕ್ಕೆ ದೂಡುತ್ತದೆ. ಪುಟ್ಟ ರಾಜಕುಮಾರ ತನ್ನ ಕ್ಷುದ್ರಗ್ರಹದಲ್ಲಿ  ಒಬ್ಬನೇ ಇದ್ದರೂ ಅವನಿಗೆ ತಾನು ಒಬ್ಬಂಟಿ ಎನ್ನಿಸಿರುವುದೇ ಇಲ್ಲ. ಆದರೆ, ಎಂದು ದೊಡ್ಡವರ ಜಗತ್ತಿಗೆ ಕಾಲಿಡುತ್ತಾನೆಯೋ ಅಂದೇ ಅವನಿಗೆ ಒಂಟಿತನ ಕಾಡತೊಡಗುತ್ತದೆ.
          ಆನೆಹುಣಿಸೆ ಮರಗಳ ಮೂಲಕ ಸೇಂತ್-ಎಕ್ಸೂಪರಿ ನಾತ್ಸಿಗಳ ದೌರ್ಜನ್ಯವನ್ನು ಸೂಚ್ಯವಾಗಿ ತೋರಿಸುತ್ತಾನೆಂದು ಕೆಲವು ವಿಮರ್ಶಕರು ಹೇಳುತ್ತಾರೆ. ತಮ್ಮ ಸೋಮಾರಿತನದಿಂದ ಆನೆಹುಣಿಸೆ ಮರಗಳನ್ನು ಬೆಳೆಯಲು ಬಿಡುವುದರಿಂದಾಗುವ ಅನಾಹುತಗಳಿಗೆ ಅವರೇ ಹೊಣೆಗಾರರಾಗಬೇಕೆನ್ನುವ ಪುಟ್ಟ ರಾಜಕುಮಾರ ತಾನೆಂದೂ ಸೋಮಾರಿಯಲ್ಲ. ಕೆಟ್ಟ ಬೀಜದ ಸಸಿಗಳನ್ನು ಕಿತ್ತೆಸೆದು ತನ್ನ ಪುಟ್ಟ ಗ್ರಹವನ್ನು ಸ್ವಚ್ಛವಾಗಿಟ್ಟುಕೊಂಡಿರುತ್ತಾನೆ.
          ಭರವಸೆ, ಸಾಂತ್ವನ ಹಾಗೂ ಪ್ರೀತಿಯ ಸಂದೇಶವನ್ನು ಸಾರಲು ಯತ್ನಿಸುವ ಸೇಂತ್-ಎಕ್ಸೂಪರಿಯ ಪ್ರಯತ್ನವೇ ಪುಸ್ತಕದ ಜೀವಾಳ. ಗುಲಾಬಿಯ ಬಗೆಗಿನ ರಾಜಕುಮಾರನ ಅನನ್ಯ ಪ್ರೇಮ ಆತನನ್ನು ಬದುಕಿನ ಅದೃಶ್ಯ ಸೌಂದರ್ಯವನ್ನು ಕಾಣುವಂತೆ ಮಾಡುತ್ತದೆ. ತನ್ನ ಪ್ರೀತಿಯಿಂದ ತನ್ನ ಅಸ್ತಿತ್ವದ ನಿರಾಕಾರ ಸತ್ಯವನ್ನು ಕಾಣುತ್ತಾನೆ. ಸತ್ಯವನ್ನು ಆತ ಕಣ್ಣಿಂದ ಕಾಣುವುದಿಲ್ಲ, ಬದಲಿಗೆ ಹೃದಯದಿಂದ ಕಾಣುತ್ತಾನೆ. ಕತೆಯಲ್ಲಿನ ಪೈಲಟ್ ಹಾಗೂ ಪುಟ್ಟರಾಜಕುಮಾರ ಇಚ್ಛಾ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತಾರೆ- ಕಾಗದದ ಮೇಲಿನ ಚಿತ್ರಗಳು ಜೀವ ಪಡೆಯುತ್ತವೆ ಹಾಗೂ ಏನೂ ಇಲ್ಲದ ಮರುಭೂಮಿಯಲ್ಲಿ ನೀರಿನ ಬಾವಿ ಕಾಣಿಸಿಕೊಳ್ಳುತ್ತದೆ. ಅವರ ಪ್ರಯಾಣದಲ್ಲಿ ಸತ್ಯದ ಮುಗ್ಧತೆ ಜ್ಞಾನೋದಯದ ಬೆಳಕು ಕಾಣತೊಡಗುತ್ತದೆ.
          ಸ್ವತಃ ಸೇಂತ್-ಎಕ್ಸೂಪರಿಯೇ, ` ಪುಸ್ತಕದಲ್ಲಿನ ಚಿತ್ರಗಳು ಬಾಲ್ಯದ ಮುಗ್ಧತೆಯನ್ನು ಸೆರೆಹಿಡಿಯಲು ಯತ್ನಿಸಿವೆ, ಪಠ್ಯದಷ್ಟೇ ಪ್ರಾಮುಖ್ಯತೆ ಚಿತ್ರಗಳಿಗಿವೆ' ಎನ್ನುತ್ತಾನೆ. ಕತೆಯಲ್ಲಿನ ವೃತ್ತಾಂತಕಾರ ತನ್ನ ಮಾತುಗಳಿಗಿಂತ ಚಿತ್ರಗಳೇ ಉತ್ತಮವಾಗಿ ಮಾತನಾಡುತ್ತವೆ ಎನ್ನುತ್ತಾನೆ. ಅಲ್ಲದೆ ಆತ ಮಕ್ಕಳ ಹಾಗೂ ದೊಡ್ಡವರ ಜಗತ್ತುಗಳು ಬೇರೆ ಬೇರೆ ಎಂದೂ ಗುರುತಿಸುತ್ತಾನೆ. ಮಕ್ಕಳ ಕಲ್ಪನಾಲೋಕವನ್ನು ಬೇಧಿಸಲು ಹಾಗೂ ಅದನ್ನು ಅರ್ಥೈಸಿಕೊಳ್ಳಲು ದೊಡ್ಡವರು ಪ್ರಯತ್ನಿಸುವುದೇ ಇಲ್ಲ. ದೊಡ್ಡವರ ಕೆಲಸಕಾರ್ಯಗಳೆಲ್ಲಾ ಅವರಿಗೆ `ಬಹಳ ಮುಖ್ಯವಾದ ವಿಚಾರಗಳು'. ಅವರು ಎಲ್ಲವನ್ನೂ ಅಂಕಿಸಂಖ್ಯೆಗಳ ಮೂಲಕ ಹಾಗೂ ಹಣದ ಮೌಲ್ಯದ ಮೂಲಕವೇ ನೋಡಲು ಪ್ರಯತ್ನಿಸುತ್ತಾರೆ. ಆದ್ದರಿಂದಲೇ ಲೇಖಕನಾದ ಸೇಂತ್-ಎಕ್ಸೂಪರಿ, `ಎಲ್ಲಾ ದೊಡ್ಡವರು ಮೊದಲು ಮಕ್ಕಳಾಗಿದ್ದವರೆ. ಆದರೆ ಅದನ್ನು ನೆನಪಿನಲ್ಲಿಟ್ಟುಕೊಳ್ಳುವವರು ಕೆಲವರು ಮಾತ್ರ; ಎಂದಿದ್ದಾನೆ.
ಆಂತ್ವಾನ್ ಸೇಂತ್-ಎಕ್ಸೂಪರಿ
          ಆಂತ್ವಾನ್ ಸೇಂತ್-ಎಕ್ಸೂಪರಿ (29.6.1900 - 31.7.1944) ಉತ್ತಮ ಬರಹಗಾರನಾಗಿರುವಂತೆ ಅತ್ಯುತ್ತಮ ಪೈಲಟ್ ಸಹ ಆಗಿದ್ದನು. ಫ್ರಾನ್ಸ್ನವನಾದ ಈತ ಸಾಹಸ ಮತ್ತು ಅಪಾಂವನ್ನು ಕವಿದೃಷ್ಟಿಯಲ್ಲಿ ಕಂಡವನು. ಆದರೆ ಆತ ಪೈಲಟ್ ಆಗಬೇಕೆಂದುಕೊಂಡಿದ್ದವನಲ್ಲ. ಮೊದಲ ವಿಶ್ವಯುದ್ಧದ ಸಮಯದಲ್ಲಿ ಯುವಕನಾಗಿದ್ದ ಈತನನ್ನು ಮಿಲಿಟರಿಗೆ ಸೇರುವಂತೆ ಆದೇಶಿಸಿ ಅಲ್ಲಿ ವಾಯುಪಡೆಗೆ ಸೇವೆ ಸಲ್ಲಿಸುವಂತೆ ಹೇಳಲಾಯಿತು. ಅಲ್ಲಿ ವಿಮಾನ ಮತ್ತು ವಿಮಾನಚಾಲನೆಯಲ್ಲಿ ಮೂಡಿದ ಆಸಕ್ತಿ ಅದನ್ನೇ ಆತನ ಬದುಕಾಗುವಂತೆ ಮಾಡಿತು.
          ವಿಮಾನಚಾಲನೆಯಲ್ಲಿ ಸೇಂಟ್-ಎಕ್ಸ್ ಒಬ್ಬ ಹೀರೋ ಆಗಿದ್ದ. ಆಫ್ರಿಕಾದ ಕಷ್ಟಕರ ಹಾಗೂ ಅಪಾಯಕರ ಪ್ರದೇಶಗಳಲ್ಲೂ ಆತನ ಸಾಹಸಮಯ ವಿಮಾನಚಾಲನೆ ಆತನ ಸಹ-ಪೈಲಟ್ಗಳೂ ಸಹ ಬೆರಗಾಗುವ ಹಾಗಿತ್ತು. 1929ರಲ್ಲಿ ಅತ ಟೌಲೋಸ್ನಲ್ಲಿನ ಕಾಂಪೇನಿ ಲೇಟೆಕೋರೆ ಸೇರಿಕೊಂಡು ವಾಯುವ್ಯ ಆಫ್ರಿಕ, ದಕ್ಷಿಣ ಅಟ್ಲಾಂಟಿಕ್ ಮತ್ತು ದಕ್ಷಿಣ ಅಮೆರಿಕಗಳಲ್ಲಿ ವಿಮಾನ ಅಂಚೆಸೇವೆಯಲ್ಲಿ ತೊಡಗಿದ. ಆಗ ಮೆರಿಟರೇನಿಯನ್ ದಾಟಿದಲ್ಲಿ ಎಲ್ಲವೂ ಶತ್ರುಪ್ರದೇಶವೇ. ದಾರಿಯಲ್ಲಿನ ಮೊರೊಕ್ಕೊ, ರಿಯೋ ಡೆ ಓರೋ ಮತ್ತು ಮಾರಿಷಿಯಾನಿಯಾಗಳಲ್ಲೆಲ್ಲ ಅಂಚೆಚೀಲ ತಲುಪಿಸುವ/ ಸಂಗ್ರಹಿಸುವ ಕಾರ್ಯ ಅಪಾಯಕಾರಿಯಾಗಿತ್ತು. ಈತನ ಸಾಹಸ ಮನೋಭಾವವನ್ನು ಕಂಡು ಆತನನ್ನು ಮಾರಿಷಿಯಾನಿಯದಲ್ಲಿನ ಶತ್ರುಗಳ ನಡುವಿನ ಕ್ಯಾಂಪ್ ಜ್ಯೂಬಿಗೆ ವರ್ಗಾಯಿಸಲಾಯಿತು. ಇಲ್ಲಿ ಆತನ ಕೆಲಸವಿಷ್ಟೆ: ಮರಳುಗಾಡಿನಲ್ಲಿ ಬಿದ್ದಿರುವ ಪೈಲಟ್ಗಳನ್ನು ನೂರಾರು ಕಿಲೋಮೀಟರ್ ವಿಸ್ತಾರದ ಪ್ರದೇಶದಲ್ಲಿ ಹುಡುಕಿ ಎರಡು ದಿನಗಳಲ್ಲಿ ರಕ್ಷಿಸಿ ಕ್ಯಾಂಪಿಗೆ ತರಬೇಕು. ಇಲ್ಲದಿದ್ದಲ್ಲಿ ಪೈಲಟ್ಗಳು ಶತ್ರುಗಳಿಂದ ಬದುಕಿ ಉಳಿಯುತ್ತಿರಲಿಲ್ಲ.
          ಕ್ಯಾಂಪ್ನಲ್ಲಿನ ತನ್ನ ಬದುಕಿನ ಬಗ್ಗೆ 1927ರಲ್ಲಿ ಒಮ್ಮೆ ತನ್ನ ತಾಯಿಗೆ ಪತ್ರ ಬರೆದಿದ್ದ: ‘ಆಫ್ರಿಕಾದ ದುರ್ಗಮ ಪ್ರದೇಶದಲ್ಲಿ, ಸ್ಪ್ಯಾನಿಷ್ ಸಹಾರಾದ ನಡುವೆ ನನ್ನದು ಎಂತಹ ಸಂನ್ಯಾಸಿಯ ಬದುಕು! ಸಮುದ್ರ ತೀರದಲ್ಲಿನ ಕೋಟೆ, ಪಾಳು ಮನೆ - ಇಷ್ಟೇ ನನ್ನ ಸುತ್ತಮುತ್ತ. ಎಂಟು ದಿನಕ್ಕೊಮ್ಮೆ ಒಂದು ವಿಮಾನ ಬಂದುಹೋಗುತ್ತದೆ. ಎಂಟುದಿನಗಳ ನಡುವೆ, ಬರೇ ನಿಶ್ಶಬ್ದ ..........’
          1940ರಲ್ಲಿ ಫ್ರಾನ್ಸ್ ಪತನದ ನಂತರ ಉತ್ತರ ಅಮೆರಿಕಕ್ಕೆ ತಪ್ಪಿಸಿಕೊಂಡು ಹೋದ ಸೇಂತ್- ಎಕ್ಸ್ 1943ರಲ್ಲಿ ಉತ್ತರ ಆಫ್ರಿಕಾದ ವಾಯುಪಡೆಗೆ ಸೇರಿಕೊಂಡ. ‘ಪುಟ್ಟ ರಾಜಕುಮಾರಪ್ರಕಟಗೊಂಡ ಮರುವರ್ಷ, ಅಂದರೆ 1944 ಸೇಂತ್ ಎಕ್ಸೂಪರಿ ಇದ್ದ ವಿಮಾನ ಕಣ್ಮರೆಯಾಯಿತು. ಎಕ್ಸೂಪರಿ ಸತ್ತ ಅರವತ್ತು ವರ್ಷಗಳ ನಂತರ 2004ರಲ್ಲಿ ಮೆಡಿಟರೇನಿಯನ್ ಸಮುದ್ರದ ಮಾರ್ಸೀಲ್ ತೀರದ ಬಳಿ ಆತನ ವಿಮಾನದ ಅವಶೇಷಗಳ ಸಿಕ್ಕಿವೆ. 1998ರಲ್ಲೇ ಮೀನುಗಾರರಿಗೆ ಸೇಂತ್- ಎಕ್ಸೂಪರಿಯ ಹೆಂಡತಿಯ ಹೆಸರು ಕೆತ್ತಿದ್ದ ಕಡಗವೊಂದು ಸಿಕ್ಕಿತ್ತು. ಆತನ ವಿಮಾನದ ಮೇಲೆ ಯಾವುದೇ ಬಂದೂಕದಿಂದ ಗುಂಡು ಹೊಡೆದ ಗುರುತುಗಳಿರಲಿಲ್ಲ. ಸೇಂತ್ ಶತ್ರುದಾಳಿಗೆ ಬಲಿಯಾದನೋ ಅಥವಾ ಅವಘಡಕ್ಕೀಡಾದನೋ ತಿಳಿದಿಲ್ಲ.
ಇಂದು ಜಗತ್ತಿನಲ್ಲಿ ಪುಟ್ಟ ರಾಜಕುಮಾರ ಕೃತಿಯ ಎಲ್ಲ ಭಾಷೆಗಳ ಆವೃತ್ತಿಗಳನ್ನು ಯೂರೋಪಿನಲ್ಲಿ ಬಹಳಷ್ಟು ಜನ ಸಂಗ್ರಹಿಸುತ್ತಿದ್ದಾರೆ. ಕೆಲವರು ಅದೇ ಪುಸ್ತಕದ್ದೇ ಎಲ್ಲಾ ಭಾಷೆಗಳ ಗ್ರಂಥಾಲಯವನ್ನು ಹೊಂದಿದ್ದಾರೆ. ನನ್ನ ಕೃತಿ ಪ್ರಕಟವಾದ ಮೇಲೆ ಬಹಳಷ್ಟು ಜನ ನನ್ನ ಬ್ಲಾಗ್ ನ ಮೂಲಕ ಅದನ್ನು ತಿಳಿದು ನನ್ನಿಂದ ತರಿಸಿಕೊಂಡಿದ್ದಾರೆ.
                                                                                                 ಡಾ.ಜೆ.ಬಾಲಕೃಷ್ಣ

https://archive.org/download/puttarajakumarajbalakrishna/Putta%20Rajakumara-%20J%20Balakrishna.pdf

ಸೋಮವಾರ, ಏಪ್ರಿಲ್ 06, 2020

ನನ್ನ `ಮಳೆಬಿಲ್ಲ ನೆರಳು' ವಿಜ್ಞಾನ ಲೇಖನಗಳ ಸಂಕಲನದ ಪಿ.ಡಿ.ಎಫ್. ಡೌನ್ ಲೋಡ್ ಲಭ್ಯವಿದೆ

2010ರಲ್ಲಿ ಪ್ರಕಟವಾದ ನನ್ನ `ಮಳೆಬಿಲ್ಲ ನೆರಳು' ವಿಜ್ಞಾನ ಲೇಖನಗಳ ಸಂಕಲನದ ಪಿ.ಡಿ.ಎಫ್. ಡೌನ್ ಲೋಡ್  ಲಭ್ಯವಿದೆ. ಈ ಕೃತಿಗೆ 2011ರ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ `ಶ್ರೇಷ್ಠ ಕೃತಿ' ಪ್ರಶಸ್ತಿ ಲಭಿಸಿದೆ.





ಮುನ್ನುಡಿಯಿಂದ

ಮೇಲುನೋಟಕ್ಕೆ ವಿಜ್ಞಾನದ ಲೇಖನಗಳು ಎಂಬಂತೆ ತೋರಿದರೂ ಸೂಕ್ಷ್ಮ ಮತ್ತು ಸಮಗ್ರ, ವೈಯುಕ್ತಿಕ ಮತ್ತು ಸಾಮಾಜಿಕ ಸ್ಥಳೀಯ ಮತ್ತು ಜಾಗತಿಕ ಎಂಬ ಧ್ರುವೀಕರಣವಿಲ್ಲದ ಅಖಂಡ ಗ್ರಹಿಕೆ ಮತ್ತು ಸಂಕೀರ್ಣ ನೇಯ್ಗೆಯ ಮೂಲಕ ಕೇವಲ ಮಾಹಿತಿಯ ತಂತ್ರಜ್ಞಾನವಾಗುಳಿಯದೆ, ಸಂಸ್ಕøತಿ ಚಿಂತನೆಯ ನಿಜೋದಯವಾಗಿ ಸ್ಥಿತ್ಯಂತರಗೊಂಡಿರುವ ಇಲ್ಲಿನ ಬರೆಹಗಳನ್ನು `ನಿರಂಕುಶ ಸಾಹಿತ್ಯ’ವೆಂದೇ ಕರೆಯಲಿಚ್ಛಿಸುತ್ತೇನೆ.

ವಿಜ್ಞಾನ ಸಾಹಿತ್ಯ- ವಿಚಾರ ಸಾಹಿತ್ಯ- ಪ್ರಬಂಧ ಸಾಹಿತ್ಯ- ಅಂಕಣ ಬರೆಹಗಳೆಂಬ ಜಾತಿಪದ್ಧತಿಯನ್ನು ಹೋಲುವ ವಿಭಾಗ ಕ್ರಮ ಮತ್ತು ಗುಂಪುಗಾರಿಕೆಯಲ್ಲಿ ಕಳೆದುಹೋಗಿರುವವರ ಮಧ್ಯೆ, ಇವನ್ನೆಲ್ಲ ಮೀರಿದಂತೆ ಸುಲಲಿತವಾದ `ತೇಜಸ್ವಿ’ ಶೈಲಿಯಲ್ಲಿ ಕನ್ನಡದ ಓದನ್ನು ರೂಪಿಸುತ್ತಿರುವ ಗೆಳೆಯ ಬಾಲು ಅವರ ಬಹುತೇಕ ಲೇಖನಗಳು ಮೂಡಲಸೀಮೆಯ ಮುಂಗೋಳಿಯ ಕೂಗಿನಂತೆ, ಮುಂಬೆಳಕಿನ ಕಿರಣಗಳಂತೆ ಪ್ರಕಟಗೊಂಡಿರುವುದನ್ನು ಗಮನಿಸಬೇಕಾಗಿದೆ. ಕೃಷಿ ಋಷಿ ಫುಕುವೊಕ ಮತ್ತು ಸ್ಟೀಫನ್ ಹಾಕಿಂಗ್ ಅವರನ್ನು ಕನ್ನಡಕ್ಕೆ ಮೊದಲು ಪರಿಚಯಿಸಿದ ಬಾಲು ಬಹುಮುಖ ಪ್ರತಿಭಾವಂತ: ಕೃಷಿವಿಜ್ಞಾನದ ವಿದ್ಯಾರ್ಥಿ, ಕವಿ, ಕತೆಗಾರ, ಸಂಸ್ಕøತಿ ಚಿಂತಕ, ಅನುವಾದಕ ಮತ್ತು ಚಾರಣಿಗ.

ಮಾನವ ಕೇಂದ್ರಿತವಾದ ಎಲ್ಲ ಬಗೆಯ ರಚನೆಗಳನ್ನು ನಿರಾಕರಿಸುತ್ತಾ, ಉಳ್ಳವರು ಹುಟ್ಟುಹಾಕಿದ ಸುಳ್ಳು ಸೃಷ್ಟಿಯ “ಸಚರಾಚರವೆಲ್ಲ” ರಚನೆಗೆ ಬಾರದಂದು ನಮ್ಮನ್ನು ಕರೆದೊಯ್ಯುವ ಇಲ್ಲಿನ ಬರೆಹಗಳು ಅಪರಿಮಿತದ ಕತ್ತಲೆಯೊಳಗೆ ಈಜುತ್ತಿರುವ ವಿಪರೀತದ ಬೆಳಕಿನ ಹುಳುಗಳಾಗಿ ಕಾಣುತ್ತವೆ.                                                                                                                                                                          ಪ್ರೊ. ವಿ.ಚಂದ್ರಶೇಖರ ನಂಗಲಿ



ಪ್ರತಿ ಪ್ರಬಂಧದಲ್ಲಿಯೂ ಓದುಗನನ್ನು ತನ್ನದೆ ಅವಲೋಕನೆಯತ್ತ ನೂಕಿ, ಆ ಪ್ರಬಂಧ ರಚನೆಯಲ್ಲಿಯೇ ತಾನೂ ಒಂದು ಪಾತ್ರವಾಗುವಂತೆ ಪ್ರೇರೇಪಿಸುತ್ತಾರೆ. ಇದು ಬಾಲು ಅವರ ಲೇಖನಗಳ ಅನನ್ಯತೆ.  ಬಹುಶಃ ಈ ವಿಭಿನ್ನತೆಗೆ ಕಾರಣ- ‘ವಿಜ್ಞಾನದಲ್ಲಿ ರಹಸ್ಯ ಬಗೆದಷ್ಟೂ ನಿಗೂಢ ಹೆಚ್ಚುತ್ತಾ ಹೋಗುತ್ತದೆ. ಆ ನಿಗೂಢದ ಬೆಡಗೇ ಜೀವನ ಪ್ರೀತಿಯ ಮೂಲ ಸೆಲೆ’ ಎಂಬ ಅವರ ನಂಬಿಕೆ. ಈ ನಂಬಿಕೆಯಿಂದಲೇ ಬರೆಯುವ ಅವರು ತಮ್ಮೆಲ್ಲ ಲೇಖನಗಳಲ್ಲೂ, ವಿಜ್ಞಾನವನ್ನು ಓದುಗನ ಆಂತರ್ಯದ ಸಮೀಪಕ್ಕೆ ತಂದಿಡುವ ಕುಶಲತೆಯನ್ನು ಅಳವಡಿಸಿ ಕೊಂಡಿರುವುದು ವಿಶೇಷ.

ಬಾಲು ಅವರನ್ನು ಕಾಡುವ ವಿಜ್ಞಾನದ ವಿಷಯಗಳು ವೈವಿಧ್ಯಮಯವೂ ವಿಸ್ತಾರವೂ ಆಗಿದ್ದು, ಅವುಗಳನ್ನು ಅವರು ಪರಿಶೋಧಿಸುವ ಆಳವೂ ಸಹ ಇಂಪ್ರೆಸಿವ್ ಅಗಿದೆ. ಹಾಗೆಂದೆ ಅವರು ಮನುಕುಲದ ಮುತ್ತಾತನ ಮುತ್ತಾತನ ....ಮುತ್ತಾತನ ಜೀವನ ಹೇಗಿತ್ತು ಎಂದು ಪರಿಚಯಿಸುವಷ್ಟೇ ಗಾಢವಾಗಿ, ಓದುಗನು ತಾನು ರಾತ್ರಿ ಕಂಡ ಕನಸಿನ ಅರ್ಥವನ್ನು ವೈಜ್ಞಾನಿಕ ಹಿನ್ನೆಲೆಯಿಂದ ತಾನೆ ಹುಡುಕಿಕೊಳ್ಳುವಂತೆ ಪ್ರೇರೇಪಿಸುತ್ತಾರೆ.

                                                                                                  ಡಾ. ಗಣೇಶಯ್ಯ, ಕೆ.ಎನ್.



ಕೃತಿಯಲ್ಲಿನ ಲೇಖನಗಳು

1. ಮಳೆಬಿಲ್ಲ ನೆರಳ ಅನ್ವೇಷಣೆಯೆ?

2. ಕನಸೆಂಬ ಮಾಯಾಲೋಕ

3. ನಿಗೂಢಗಳನ್ನು ಉಳಿಸಿ ಹೋದ ನಿಯಾಂಡರ್ತಲ್ ಮಾನವ

4. ಮನಸ್ಸಿಗೇ ಮೂಗುದಾರ - ಒಂದು ಜಾಗತಿಕ ಪಿತೂರಿ

5. ಕಾಲಗರ್ಭದ ಕತ್ತಲ ಸಾಮ್ರಾಜ್ಯದ ಅದ್ಭುತ ಮೀನು: ಸೀಲಾಕ್ಯಾಂತ್

6. ಅಣ್ವಸ್ತ್ರ ಯುದ್ಧ - ಮನುಕುಲದ ಚರಮಗೀತೆ?

7. ಜೇಡ

8. ಕಾಮ’ನಬಿಲ್ಲಿನ ಅನಾವರಣ

9. ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ ‘ಅಮರ’ ಕತೆ

10. ಅನ್ಯಗ್ರಹ ಜೀವಿಗಳಿವೆಯೆ?

11.ಮರಗಳಿಗೂ ಮನಸ್ಸಿದೆಯೆ?

12. ಡಾಲ್ಫಿನ್: ಮಾನವನ `ಬೌದ್ಧಿಕ’ ಸಮಜೀವಿ

13. ಮತ್ತೆ ಹುಟ್ಟಿ ಬರಲಿದೆಯೆ ವೂಲಿ ಮ್ಯಾಮತ್?

14. ಪ್ರಾಣಿಗಳು ಭೂಕಂಪದ ಮುನ್ಸೂಚನೆ ನೀಡಬಲ್ಲವೆ?

15. ಗಾಂಧಿ ಮತ್ತು ಪರಿಸರ ಪ್ರಜ್ಞೆ

16. ಕೃಷಿ ಋಷಿ ಫುಕುವೊಕ

17. ಆಧುನಿಕ ಕೃಷಿ ಮತ್ತು ಪರಿಸರ


ಡೌನ್ ಲೋಡ್ ಲಿಂಕ್ ಇಲ್ಲಿದೆ:
https://archive.org/download/malebillaneralujbalakrishna.pdf/Malebilla%20Neralu%20-J%20Balakrishna.pdf.pdf

ಶುಕ್ರವಾರ, ಏಪ್ರಿಲ್ 03, 2020

ನನ್ನ ಕೃತಿ `ಮಾತಾಹರಿ’ಯ ಪಿ.ಡಿ.ಎಫ್. ಉಚಿತ ಡೌನ್ಲೋಡ್ ಲಭ್ಯವಿದೆ.

ಪ್ರೀತಿ ಮತ್ತು ಯುದ್ಧದ ಕ್ರೌರ್ಯ

ನನ್ನ ಕೃತಿ `ಮಾತಾಹರಿ’ಯ ಪಿ.ಡಿ.ಎಫ್. (1.8 mb) ಉಚಿತ ಡೌನ್ಲೋಡ್ ಲಭ್ಯವಿದೆ.


ಮಾತಾಹರಿಯ ಹೆಸರು ಬೇಹುಗಾರಿಕೆ, ನಿಗೂಢತೆ ಹಾಗೂ `ಸೆನ್ಶುಯಾಲಿಟಿ’ಯೊಂದಿಗೆ ಸೇರಿಹೋಗಿದೆ. ಸಾಧಾರಣ ಕುಟುಂಬದ  ಹುಡುಗಿ ಅತಿ ಭವ್ಯ ಕನಸುಗಳನ್ನು ಕಂಡವಳು, ಬದುಕನ್ನು ಅತಿಯಾಗಿ ಪ್ರೀತಿಸುತ್ತಿದ್ದವಳು. ಅದೇ ಅವಳ ಬದುಕಿನ ದುರಂತಗಳಿಗೆ ಕಾರಣವಾಯಿತು. ತಾನು ಭಾರತವನ್ನೇ ನೋಡಿಲ್ಲದಿದ್ದರೂ ತಾನೊಬ್ಬ ಬ್ರಾಹ್ಮಣ ಪೂಜಾರಿಯ ಹಾಗೂ ಕಾಳಿ ದೇವಿಯ ದೇವಸ್ಥಾನದ ದೇಗುಲ ನರ್ತಕಿಯ ಮಗಳೆಂದು ಹೇಳಿಕೊಂಡವಳು. ಮೊದಲನೆಯ ವಿಶ್ವಯುದ್ಧದ ಸಮಯದಲ್ಲಿ ಆಕೆಯ ಐಶಾರಾಮಿ ಬದುಕು, ಅವಳ ಗೆಳೆಯರ ವೃಂದ, ವ್ಯಭಿಚಾರದ ಬದುಕು ಅವಳನ್ನು ಗುಮಾನಿಯಿಂದ ನೋಡುವಂತಿತ್ತು. ಫ್ರೆಂಚ್ ಅಧಿಕಾರಿಗಳಿಗೆ ಅಷ್ಟೇ ಸಾಕಾಗಿತ್ತು. ಆಕೆಯನ್ನು ಒಂದು ಬೆಳಗಿನ ಜಾವ ಕಂಬಕ್ಕೆ ಕಟ್ಟಿ ಗುಂಡು ಹಾರಿಸಿ ಕೊಂದುಹಾಕಿದರು. ಬದುಕಿನಲ್ಲಿ ವೈಯಕ್ತಿಕ ಧಾರುಣ ದುರಂತಗಳನ್ನು ಕಂಡ ಮಾತಾಹರಿ ಸಾವಿನಲ್ಲೂ ದುರಂತ ಕಂಡವಳು. ಲೆಕ್ಕವಿಡದಷ್ಟು ಇನಿಯರನ್ನು ಹೊಂದಿದ್ದ ಆಕೆಯ ದೇಹವನ್ನು ಪಡಯಲು ಯಾರೂ ಮುಂದೆ ಬರಲಿಲ್ಲ. ಆಕೆಯ ದೇಹವನ್ನು ವಿದ್ಯಾರ್ಥಿಗಳ ಅಧ್ಯನಕ್ಕೆಂದು ವೈದ್ಯಕೀಯ ಶಾಲೆಗೆ ನೀಡಲಾಯಿತು. ಆಕೆಯ ತಲೆಯನ್ನು ಎಲ್ಲ ಪ್ರಖ್ಯಾತ ಅಪರಾಧಿಗಳ ತಲೆಯಂತೆ ಕತ್ತರಿಸಿ ಪ್ಯಾರಿಸ್ಸಿನ ಮೆಕಬರ್ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿತ್ತು. ಎರಡನೇ ವಿಶ್ವಯುದ್ಧದ ಸಮಯದಲ್ಲಿ ಆ ತಲೆಯೂ ನಿಗೂಢವಾಗಿ ಮಾಯವಾಯಿತು.

ಮಾತಾಹರಿಯ ಬದುಕಿನ ದುರಂತಗಳನ್ನು ಗೌರಿಲಂಕೇಶರನ್ನೂ ಕಾಡಿತ್ತು. ಪತ್ರಿಕೆಗೆ ಬರೆದುಕೊಡುವಂತೆ ನನ್ನನ್ನು ಕೇಳಿ ಬರೆಯಿಸಿಕೊಂಡ ಈ ಬರಹ `ಗೌರಿ ಲಂಕೇಶ್ ಪತ್ರಿಕೆ’ಯಲ್ಲಿ 7 ವಾರಗಳ ಕಾಲ 2006ರಲ್ಲಿ ಪ್ರಕಟವಾಯಿತು. ನಂತರ ಪುಸ್ತಕರೂಪದಲ್ಲಿ 2007ರಲ್ಲಿ ಪ್ರಕಟವಾಯಿತು. ಅದರ ಪಿ.ಡಿ.ಎಫ್. ಡೌನ್ಲೋಡ್ ಲಿಂಕ್ ಇಲ್ಲಿದೆ. ಗೆಳೆಯರೊಂದಿಗೂ ಹಂಚಿಕೊಳ್ಳಿ. ಓದಿ ಅಭಿಪ್ರಾಯ ತಿಳಿಸಿ.

https://archive.org/download/mataharijbalakrishna/Matahari-J%20Balakrishna.pdf

ಗುರುವಾರ, ಏಪ್ರಿಲ್ 02, 2020

ನೀನೆಂಬ ನಾನು - ಸೂಫಿ ಎಂಬ ಮಾನಸಿಕ ಅವಸ್ಥೆ ಹಾಗೂ ಸೂಫಿ ಕತೆಗಳು ಉಚಿತ ಡೌನ್ಲೋಡ್




'ನೀನೆಂಬ ನಾನು' ಮುನ್ನುಡಿಯಿಂದ:
"ಝೆನ್ ಮತ್ತು ಸೂಫಿ ತತ್ವಗಳು ಈ ಭೂಮಿಯ ಒಂದೇ ಹೃದಯದರಿವಿನ ಎರಡು ಕಣ್ಣುಗಳು. ಕಾಲ, ದೇಶಾತೀತವಾದ ಉನ್ನತ ತಿಳುವಳಿಕೆಯ ಸೋಪಾನಗಳು. ಇಹದ ಆಳವಾದ ತಿಳಿವನ್ನು ಒಳಗೊಂಡರೂ ಈ ಕತೆಗಳು ಪೂರ್ತಿ ಇಹದವಲ್ಲ, ಲೋಕೋತ್ತರ ಅನುಭಾವದ ಅರಿವಿದ್ದರೂ ಅವು ಪೂರ್ತಿ ಪರದವಲ್ಲ. ಇವನ್ನು ಖುಷಿಗಾಗಿ ಓದಬಹುದು, ಲೋಕಾನುಭವ ಹಾಗೂ ನೀತಿಗಳನ್ನು ಮನನ ಮಾಡಬಹುದು.ಮನೋಜಿಜ್ಞಾಸೆಗಳನ್ನು ಬಿಡಿಸಲು ಬಳಸಬಹುದು, ಅಥವಾ ಇನ್ನೂ ಹೆಚ್ಚಿನ ಪ್ರಯೋಜನವನ್ನೂ ಇವುಗಳಿಂದ ಪಡೆಯಬಹುದು. ಈ ಅನರ್ಘ್ಯ ಕತೆಗಳನ್ನು ಆಯಾ ಓದುಗರು ತಮಗೆ ಹೇಗೆ ಬೇಕೋ ಹಾಗೆ ಓದಬಹುದು. ಒಟ್ಟಾರೆ ಈ ಕತೆಗಳು `ಸಟೋರಿ'ಯ ಹಾಗೆ ಎಟುಕದ ಸತ್ಯಗಳನ್ನು ಮಿಂಚಿನಂತೆ ಹೊಳೆಯಿಸಿ ಬದುಕನ್ನಿಡೀ ಮಾಗಿದ ಹೃದಯದಿಂದ ನೋಡುವಂತೆ ಮಾಡಬಲ್ಲವು".

ನನ್ನ ನೀನೆಂಬ ನಾನು - ಸೂಫಿ ಎಂಬ ಮಾನಸಿಕ ಅವಸ್ಥೆ ಹಾಗೂ ಸೂಫಿ ಕತೆಗಳು ಮೊದಲಿಗೆ 2001 ರಲ್ಲಿ ಗೆಳೆಯ ಕೆ.ಪುಟ್ಟಸ್ವಾಮಿ ತಮ್ಮ ನಳಂದ ಮಂಟಪ ಪ್ರಕಾಶನದಿಂದ ಪ್ರಕಟಿಸಿದರು. 2011ರಲ್ಲಿ ಅದರ ಪರಿಷ್ಕೃತ ಆವೃತ್ತಿ ಅಸೀಮ ಅಕ್ಷರ ಪ್ರಕಟಿಸಿತು. ಅದರ pdf ಈಗ ಉಚಿತ ಡೌನ್ಲೋಡ್ ಲಭ್ಯವಿದೆ. ಗೆಳೆಯರೊಂದಿಗೆ ಹಂಚಿಕೊಳ್ಳಿ. ಓದಿ ಅಭಿಪ್ರಾಯ ತಿಳಿಸಿ.
https://archive.org/download/neenembanaanujbalakrishna/Neenemba%20Naanu-J%20Balakrishna.pdf

ಭಾನುವಾರ, ಮಾರ್ಚ್ 29, 2020

ನನ್ನ ಕಥಾ ಸಂಕಲನ 'ನೆನಪುಗಳಿಗೇಕೆ ಸಾವಿಲ್ಲ' pdf ಡೌನ್ಲೋಡ್


2010ರಲ್ಲಿ ಪ್ರಕಟವಾದ ನನ್ನ ಕಥಾ ಸಂಕಲನ 'ನೆನಪುಗಳಿಗೇಕೆ ಸಾವಿಲ್ಲ' pdf ಡೌನ್ಲೋಡ್ ಲಭ್ಯವಿದೆ.
https://archive.org/download/nenapugaligekesavillajbalakrishna/Nenapugaligeke%20Savilla_J%20Balakrishna.pdf

ಗುರುವಾರ, ಮಾರ್ಚ್ 26, 2020

ಬೊಕಾಷಿಯೋನ `ರಸಿಕತೆ’ಗಳು


 

https://archive.org/download/boccaccionarasikategalu/Boccacciona%20Rasikategalu.pdf
ಇಟಲಿಯಲ್ಲಿ ಕೊರೊನಾ ವೈರಸ್ ಕನ್ನಡ ನ್ಯೂಸ್ ಚಾನೆಲ್ ಗಳು ಬೊಬ್ಬಿಡುತ್ತಿರುವಂತೆ `ಮರಣ ಮೃದಂಗ’ ಭಾರಿಸುತ್ತಿದೆ. ಹದಿನಾಲ್ಕನೇ ಶತಮಾನದಲ್ಲಿ ಇದೇ ರೀತಿ ಇಟಲಿಯನ್ನು ಪ್ಲೇಗ್ ಕಾಡಿದಾಗ `ಡೆಕಮೆರಾನ್’ ಎಂಬ ಮಹಾನ್ ಕೃತಿ ರೂಪುಗೊಂಡಿತು. ಅದರ ಕೆಲವು `ರಸಿಕತೆ’ಗಳನ್ನು 30 ವರ್ಷಗಳ ಹಿಂದೆಯೇ ನಾನು ಅನುವಾದಿಸಿದ್ದೆ. ಈಗ ಅದರ ಪಿ.ಡಿ.ಎಫ್. ಉಚಿತ ಡೌನ್ ಲೋಡ್ ಗೆ ಲಭ್ಯವಿದೆ. ಅದರ ಹಿನ್ನೆಲೆ ಓದಿ:
ನಾನು 1978-82ರ ಅವಧಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದಾಗ `ಅಂಕುರ’ ಎಂಬ ವಿದ್ಯಾರ್ಥಿ ಮಾಸಪತ್ರಿಕೆಯ ಸಂಪಾದಕನಾಗಿದ್ದೆ. ಪತ್ರಿಕೆ ಮಾರಾಟವೂ ಸಂಪಾದಕ ಮಂಡಳಿಯ ಕೆಲಸವೇ ಆಗಿದ್ದುದರಿಂದ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ (ಅವರ ಮನೆಗಳಿಗೆ), ಇತರ ಸಿಬ್ಬಂದಿಗೆ `ಅಂಕುರ’ ಮಾರಾಟ ಮಾಡುತ್ತಿದ್ದೆವು. ಇದೇ ರೀತಿ ಪತ್ರಿಕೆ ಮಾರಾಟ ಮಾಡಲು ಇಂಗ್ಲಿಷ್ ವಿಭಾಗಕ್ಕೆ ಹೋದಾಗ ನಮ್ಮ ಅಧ್ಯಾಪಕರಾಗಿದ್ದ ಎಚ್.ಎ.ರಾಮಕೃಷ್ಣ (ಅವರು ಕಮೂನ Mistaken Identity ಎಂಬ ನಾಟಕವನ್ನು `ತಪ್ಪಿದ ಎಳೆ’ ಎಂದು ಅನುವಾದಿಸಿದ್ದರು ಹಾಗೂ ಸ್ವತಃ ನಾಟಕ ಸಹ ರಚಿಸಿದ್ದರು) ಹಾಗೂ ಗ್ರಂಥಪಾಲಕರಾದ ರಾಮಚಂದ್ರರವರು ಕೂತು ಮಾತನಾಡುತ್ತಿದ್ದರು. ನನ್ನನ್ನು ಕೂಡಿಸಿಕೊಂಡು ಪತ್ರಿಕೆ, ಲಂಕೇಶ್ ಪತ್ರಿಕೆ, ಇತರ ಪುಸ್ತಕಗಳ ಬಗೆಗೆ ಮಾತನಾಡಿದರು. ಆಗ ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ `ತುಂಟಾಟ’ದ `ಫೋಲಿ’ ಜೋಕುಗಳ ಬಗ್ಗೆ ಹೇಳುತ್ತಾ, ಈಗ ಲಂಕೇಶ್ ಬರೆಯುವುದೇನು, ಅಂಥವನ್ನು 14ನೇ ಶತಮಾನದಲ್ಲಿಯೇ ಬೊಕಾಷಿಯೋ ಬರೆದಿದ್ದ ಎಂದರು. ಆಗ ನನಗೆ ಬೊಕಾಷಿಯೋನ `ಡೆಕಮೆರಾನ್’ ಪರಿಚಯಿಸಿದರು. ವಿದ್ಯಾರ್ಥಿ ದಿನಗಳಲ್ಲಿ ನಾನು ಮೆಜೆಸ್ಟಿಕ್ ಗೆ ಹೋದಾಗಲೆಲ್ಲಾ ಚಿಕ್ಕಪೇಟೆಯ ಹಳೆಯ ಪುಸ್ತಕದ ಅಂಗಡಿಗಳಿಗೆ ಭೇಟಿ ನೀಡುತ್ತಿದ್ದೆ. ಡೆಕಮೆರಾನ್ ಪರಿಚಯವಾದ ಕೆಲವೇ ವಾರಗಳಲ್ಲಿ ನನಗೆ ಅದರ ಪ್ರತಿಯೊಂದು ದೊರಕಿತು. ಓದಿದ ನಂತರ ನನಗೆ ಅವುಗಳಲ್ಲಿ ಕೆಲವು `ರಸಿಕತೆ’ಗಳನ್ನು ಅನುವಾದ ಮಾಡಬೇಕೆನ್ನಿಸಿ ಅನುವಾದಿಸಿದೆ ಸಹ. ಆದರೆ ಅವುಗಳನ್ನು ಯಾವ ಪತ್ರಿಕೆಯೂ ಪ್ರಕಟಿಸುವುದಿಲ್ಲವೆಂದು ಹಾಗೆಯೇ ನನ್ನ ಬಳಿ 15 ವರ್ಷಗಳು ಹಾಗೆಯೇ ಇದ್ದಿತು. ಗೌರಿ ಲಂಕೇಶರ ಬಳಿ ಮಾತನಾಡುವಾಗ  ವಿಷಯ ತಿಳಿಸಿದಾಗ ಅವರು `ಗೌರಿ ಲಂಕೇಶ್ ಪತ್ರಿಕೆ’ಯಲ್ಲಿ ಹತ್ತನ್ನೆರಡು ವಾರಗಳು ಸರಣಿಯಾಗಿ ಪ್ರಕಟಿಸಿದರು. ನಂತರ 2007ರಲ್ಲಿ ಪುಸ್ತಕ ರೂಪದಲ್ಲಿಯೂ ಪ್ರಕಟವಾಯಿತು. ಈಗ ಅದನ್ನು ಪಿ.ಡಿ.ಎಫ್. ಮಾಡಿ ಎಲ್ಲರಿಗೂ ಉಚಿತವಾಗಿ ಸಿಗಲೆಂದು ಅಂತರ್ಜಾಲದಲ್ಲಿ ಗಾಳಿಗೆ ತೂರಿಬಿಟ್ಟಿದ್ದೇನೆ. ಡೌನ್ ಲೋಡ್ ಮಾಡಿಕೊಂಡು ಓದಿ. ಅದರಲ್ಲಿಯೇ ನನ್ನ ಇಮೇಲ್ ಇದೆ. ಅಭಿಪ್ರಾಯ ತಿಳಿಸಿ.
ಕತೆ ಹೇಳುವ ಮುನ್ನ........
                1348ರಲ್ಲಿ ಇಟಲಿಯ ಸುಂದರ ನಗರಗಳಲ್ಲೊಂದಾದ ಫ್ಲಾರೆನ್ಸ್ ಪ್ಲೇಗ್‍ನ ದಾಳಿಗೆ ಬಲಿಯಾಗಿತ್ತು. ಯಾವ ಗ್ರಹಗತಿಯಿಂದಾಗಿಯೋ ಅಥವಾ ದೇವರ ಕೋಪದಿಂದಾಗಿಯೋ ಏನೋ ಪೂರ್ವದಲ್ಲಿ ಪ್ರಾರಂಭವಾದ ಪ್ಲೇಗ್ ಮಾರಿ ಹುಲುಮಾನವರನ್ನು ಅವರ ಪಾಪಗಳಿಗೆ ಪ್ರತಿಫಲವಾಗಿಯೋ ಏನೋ ಎಂಬಂತೆ ಕಾಡಿತ್ತು. ಸಾವಿರಾರು ಜನ ಹುಳುಗಳ ಹಾಗೆ ಸಾಯುತ್ತಿದ್ದರು. ಊರಿಂದೂರಿಗೆ ವಿನಾಶ ಹರಡುತ್ತಾ ಪಶ್ಚಿಮದ ದಿಕ್ಕಿಗೆ ಸಾಗುತ್ತಿತ್ತು. ಆ ಭಯಂಕರ ಪ್ಲೇಗ್‍ನ ಎದುರು ಮನುಷ್ಯನ ಯಾವುದೇ ಜಾಣತನ, ಮುಂದಾಲೋಚನೆ ಕೆಲಸಕ್ಕೆ ಬರುತ್ತಿರಲಿಲ್ಲ. ವರುಷದ ವಸಂತದ ಆಗಮನದೊಂದಿಗೆ ಪ್ಲೇಗ್‍ನ ಭಯಂಕರ ಪರಿಣಾಮಗಳು ಕಾಣಿಸಿಕೊಳ್ಳತೊಡಗಿದವು. ಪೂರ್ವದಲ್ಲಿ ಮೂಗಿನಿಂದ ರಕ್ತ ಸುರಿಯುವುದು ಸಾವಿನ ನಿಶ್ಚಿತ ಸಂಕೇತವಾಗಿತ್ತು. ಆದರೆ ಇಲ್ಲಿ ಅದರ ಜೊತೆಗೆ ಕಂಕುಳು ಹಾಗೂ ತೊಡೆಗಳ ಸಂದಿಯಲ್ಲಿ ಗಂಟುಗಳು ಕಾಣಿಸಿಕೊಳ್ಳಲಾರಂಭಿಸಿದವು. ನಂತರ ಆ ತರಹದ ಗಂಟುಗಳು ದೇಹವೆಲ್ಲಾ ವ್ಯಾಪಿಸುತ್ತಿದ್ದುವು. ಮೈಮೇಲೆಲ್ಲಾ ಕಪ್ಪು ಅಥವಾ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತಿದ್ದವು. ಆ ಚುಕ್ಕೆಗಳು ಸಾವಿನ ಆಗಮನವನ್ನು ಸಾರುತ್ತಿದ್ದವು.
                ಆ ಭಯಂಕರ ವ್ಯಾಧಿಗೆ ಕಾರಣವೇನೆಂದು ತಿಳಿಯದೆ ವೈದ್ಯರು ಕಂಗಾಲಾಗಿದ್ದರು. ಆವರ ಯಾವುದೇ ಸಲಹೆ, ಔಷಧ ಕೆಲಸ ಮಾಡುತ್ತಿರಲಿಲ್ಲ. ಪ್ಲೇಗ್ ರೋಗ ಒಬ್ಬರಿಂದೊಬ್ಬರಿಗೆ ಕಾಡ್ಗಿಚ್ಚಿನಂತೆ ಹರಡುತ್ತಿತ್ತು. ರೋಗಿಯೊಬ್ಬನ ಬಳಿ ಹೋದರೆ, ಮಾತನಾಡಿದರೆ ಆತನ ಬಟ್ಟೆ, ಇನ್ನಾವುದೇ ವಸ್ತು ಮುಟ್ಟಿದರೂ ಸಹ ರೋಗ ಹರಡುವುದು ಖಚಿತವಾಗಿತ್ತು. ಇದರಿಂದಾಗಿ ಜನರಲ್ಲಿ ಎಷ್ಟು ಹೆದರಿಕೆ ಉಂಟಾಗಿತ್ತೆಂದರೆ, ಕೊನೆಕೊನೆಗೆ ರೋಗಿಗಳನ್ನು ಅವರ ಪಾಡಿಗೆ ಬಿಟ್ಟು ತಮ್ಮ ರಕ್ಷಣೆಗಾಗಿ ಅವರಿಂದ ದೂರ ಓಡುತ್ತಿದ್ದರು.
                ಕೆಲಜನ ಈ ರೋಗಿಗಳ ಸಹವಾಸವೇ ಬೇಡವೆಂದು ತಮ್ಮದೇ ಒಂದು ಗುಂಪು ರಚಿಸಿಕೊಂಡು ಯಾವುದಾದರೂ ಮನೆಯಲ್ಲಿ ತಮ್ಮ ಆಳುಕಾಳುಗಳೊಂದಿಗೆ, ರುಚಿಶುಚಿಯಾದ ಆಹಾರ ಸೇವಿಸಿಕೊಂಡು, ಒಳ್ಳೆಯ ವೈನ್ ಚಪ್ಪರಿಸಿಕೊಂಡು, ಹೊರಗಿನ ಸಾವು ನೋವಿನ ಪ್ರಪಂಚಕ್ಕೆ ತಮ್ಮ ಮನೆಯ ಹಾಗೂ ಮನದ ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡು ಸಾವು ನರಳಾಟದ ವಿಷಯಗಳನ್ನೇ ಮಾತನಾಡದಂತೆ ಸಂಗೀತ ಪ್ರಪಂಚದಲ್ಲಿ ಮುಳುಗಿರುತ್ತಿದ್ದರು. ಇನ್ನು ಕೆಲವರು ಇದಕ್ಕೆ ತದ್ವಿರುದ್ಧವಾಗಿ ಚೆನ್ನಾಗಿ ಕುಡಿದು, ಊರೆಲ್ಲಾ ಅಲೆದಾಡುತ್ತ, ಸಿಕ್ಕ ಸಿಕ್ಕ ಮನೆಗಳಿಗೆ ನುಗ್ಗಿ (ಬಹುಪಾಲು ಮನೆಗಳು ಖಾಲಿಯಾಗಿದ್ದವು) ದಾಂಧಲೆ ಎಬ್ಬಿಸುತ್ತಾ, ರೋಗಿಗಳನ್ನು ಸೋಕಿಸಿಕೊಳ್ಳದೆ ಈ ರೀತಿ ಮೋಜು ಮಾಡುವುದೇ ಪ್ಲೇಗ್ ರೋಗಕ್ಕೆ ಸರಿಯದ ಔಷಧವೆಂದು ನಂಬಿದ್ದರು.
                ಇಂಥ ಭೀಭತ್ಸ ವಾತಾವರಣದಲ್ಲಿ ನಗರದ ಕಾನೂನು ಪಾಲಕರು ನಿಯಮ, ಕಾನೂನುಗಳೆಲ್ಲಾ ಸಾವಿನ ಗಾಳಿಗೆ ತೂರಿಹೋಗಿದ್ದವು. ಎಲ್ಲರೂ ಅವರಿಗಿಷ್ಟ ಬಂದಹಾಗೆ ನಡೆದು ಕೊಳ್ಳುತ್ತಿದ್ದರು.
                ಬಹುಪಾಲು ಜನ ತಮ್ಮ ಮನೆ, ಆಸ್ತಿಪಾಸ್ತಿ ತ್ಯಜಿಸಿ, ಅಷ್ಟೇಕೆ ರೋಗದಿಂದ ನರಳುತ್ತಿರುವ ತಮ್ಮ ಸಂಬಂಧಿಕರನ್ನು, ಅಮ್ಮ ಅಪ್ಪಂದಿರನ್ನು, ಅಣ್ಣ ತಂಗಿಯರನ್ನು, ಹೆಂಡತಿ ಗಂಡಂದಿರನ್ನೂ ಬಿಟ್ಟು ಸಾವಿನಿಂದ ದೂರ ಓಡುವ ಸಲುವಾಗಿ ಫ್ಲಾರೆನ್ಸ್ ನಗರ ಬಿಟ್ಟು ಪರ ಊರುಗಳಿಗೆ ಹೋಗುತ್ತಿದ್ದರು. ಕೆಲವರಿಗೆ ಆತ್ಮೀಯ ಗೆಳೆಯರೋ ಅಥವಾ ಹಣದಾಸೆಗೆ ಇರುತ್ತಿದ್ದ ಸೇವಕರೋ ತಮ್ಮ ಸೇವೆಗೆ ಇರುವುದನ್ನು ಬಿಟ್ಟಲ್ಲಿ, ಬಹುಪಾಲು ರೋಗಿಗಳು ತಮ್ಮ ಆರೈಕೆಗೆ ಯಾರೂ ಇಲ್ಲದೆ ಸಾಯುತ್ತಿದ್ದರು.
                ಸಾವಿನ ಸಂಖ್ಯೆ ಹೆಚ್ಚಿದಂತೆಲ್ಲಾ ಶವಸಂಸ್ಕಾರದ ಆಚರಣೆಗಳೂ ಬದಲಾಗುತ್ತಿದ್ದವು. ಮೊದಲಿನಂತೆ ಶಿಸ್ತಿನ ಆಚರಣೆಗಳನ್ನು ನಡೆಸದೆ ಕಾಟಾಚಾರಕ್ಕೆ ಬೇಗ ಬೇಗ ಒಂದೆರಡು ಶಾಸ್ತ್ರಗಳನ್ನು ನಡೆಸಿ ಸಿಕ್ಕಸಿಕ್ಕ ಸ್ಮಶಾನಗಳಲ್ಲಿ ಹೂತುಬಿಡುತ್ತಿದ್ದರು. ಪಾದ್ರಿ, ಪುರೋಹಿತರಿಗಂತೂ ಬಿಡುವೇ ಇರುತ್ತಿರಲಿಲ್ಲ. ಸತ್ತವರಿಗೆ ಅಳುವವರೇ ಇರುತ್ತಿರಲಿಲ್ಲ. ಹೆಣಗಳನ್ನು ಗಾಡಿಗಳಲ್ಲಿ ಸ್ಮಶಾನಕ್ಕೆ ಸಾಗಿಸುತ್ತಿದ್ದರು. ದೊಡ್ಡ ದೊಡ್ಡ ಹಳ್ಳಗಳನ್ನು ಅಗೆದು ಹಡಗಿಗೆ ಸಾಮಾನು ತುಂಬಿಸುವಂತೆ ಶವಗಳನ್ನು ಗುಂಡಿಗೆ ತುಂಬಿ ಸಾಮೂಹಿಕ ಶವಸಂಸ್ಕಾರ ನಡೆಸಿಬಿಡುತ್ತಿದ್ದರು.
                ಮಾರ್ಚ್ ಹಾಗೂ ಜುಲೈನ ನಡುವೆ ಫ್ಲಾರೆನ್ಸ್ ನಗರವೊಂದರಲ್ಲೇ ಒಂದು ಲಕ್ಷ ಜನ ಸತ್ತಿದ್ದರು.  ಪ್ಲೇಗ್ ದಾಳಿಯಿಡುವ ಮೊದಲು ಆ ನಗರದಲ್ಲಿ ಅಷ್ಟೊಂದು ಜನರಿದ್ದಾರೆಂದು ತಿಳಿದೇ ಇರಲಿಲ್ಲ!
                ಹೋ! ಫ್ಲಾರೆನ್ಸ್ ಎಂಥ ಸುಂದರ ನಗರ! ಅದ್ಭುತ ಅರಮನೆಗಳೂ, ಸುಂದರ ಮನೆಗಳೂ- ಕೆಲದಿನಗಳ ಹಿಂದಷ್ಟೇ ರಾಜಮನೆತನದವರಿಂದ, ಶ್ರೀಮಂತ, ಕುಲೀನ ಮನೆತನದವರಿಂದ ಅವರ ಆಳುಕಾಳುಗಳಿಂದ ಗಿಜಿಗಿಜಿಗುಡುತ್ತಿದ್ದ ಆ ಮನೆಗಳು ಇಂದು ಮಸಣಗಳಾಗಿವೆ. ಬೆಳಗಿದ್ದ ಜನ ರಾತ್ರಿ ಇರುತ್ತಿರಲಿಲ್ಲ. ಇಹಲೋಕದಲ್ಲಿ ಮಧ್ಯಾಹ್ನ ಗೆಳೆಯರೊಂದಿಗೆ, ನೆಂಟರೊಂದಿಗೆ ಊಟ ಮಾಡಿದವರು ರಾತ್ರಿಯ ಊಟದ ಹೊತ್ತಿಗೆ ತಮ್ಮ ಪಿತೃಗಳೊಂದಿಗೆ ಪರಲೋಕದಲ್ಲಿರುತ್ತಿದ್ದರು!
                ಅಂತಹ ದಟ್ಟ ಸಾವಿನ ವಾಸನೆಯ ವಾತಾವರಣದಲ್ಲಿ ಒಂದು ಮಂಗಳವಾರ ಮುಂಜಾನೆ ಏಳು ಜನ ಯುವತಿಯರು ಸಂತ ಮರಿಯಾ ನೊವೆಲ್ಲಾ ಚರ್ಚಿನ ಬಳಿ ಪ್ರಾರ್ಥನೆಗೆಂದು ಬಂದವರು ಆಕಸ್ಮಿಕವಾಗಿ ಭೇಟಿಯಾಗುತ್ತಾರೆ. ಆ ಯುವತಿಯರು ಹದಿನೆಂಟರಿಂದ ಇಪ್ಪತ್ತೆಂಟರ ವಯಸ್ಸಿನವರು. ವಿದ್ಯಾವಂತರೂ, ಸುಸಂಸ್ಕøತರೂ, ಸುಂದರಿಯರೂ ಆಗಿದ್ದು ಉತ್ತಮ ಮನೆತನದಿಂದ ಬಂದವರಾಗಿರುತ್ತಾರೆ. ಅವರ ಹೆಸರುಗಳು ಪಾಂಪಿನಿಯಾ, ಫಿಯಮೆಟ್ಟಾ, ಫಿಲೋಮೆನ, ಎಮಿಲಿಯ, ಲಾರೆಟ್ಟ, ನೆಫಿಲೆ ಮತ್ತು ಎಲಿಸಾ. ಅವರೆಲ್ಲಾ ಪ್ಲೇಗ್‍ನಿಂದಾದ ಸಾವು ನೋವಿನ ವಿಷಯ ಮಾತನಾಡುತ್ತಾ ಇರುವಾಗ ಹಿರಿಯವಳಾದ ಪಾಂಪಿನಿಯ ಹೇಳುತ್ತಾಳೆ, ‘ಈ ನಗರದಲ್ಲಿ ನಾವೆಲ್ಲಾ ಏನೂ ಕಾರಣವಿಲ್ಲದೆ ಇದ್ದೇವೆ. ದಿನನಿತ್ಯ ಸಾವು-ನೋವು, ನರಳಾಟ ಕಾಣುತ್ತಿದ್ದೇವೆ, ಪಾದ್ರಿಯ ಒಂದೇ ಪ್ರಾರ್ಥನೆಯ ಯಾಂತ್ರಿಕ ವದರಾಟ ಕೇಳುತ್ತಿದ್ದೇವೆ. ಅವರಿವರಿಂದ ನಮಗೆ ಸಿಗುವ ಸುದ್ದಿಯೂ ಸಾವಿನ ಸುದ್ದಿಯೇ ಆಗಿರುತ್ತದೆ. ಎಲ್ಲಿ ಹೋದರೂ, ಎಲ್ಲಿ ನೋಡಿದರೂ ಸತ್ತವರ ಪ್ರೇತಾತ್ಮಗಳೇ ಕಂಡಂತೆ ಭಾಸವಾಗುತ್ತದೆ. ಹಾಗಿರುವಾಗ ಈ ಸ್ಮಶಾನ ನಗರದಲ್ಲಿ ನಾವೇಕೆ ಇರಬೇಕು. ನಮ್ಮ ಆತ್ಮಗಳೂ ಸಹ ನಮ್ಮ ದೇಹಕ್ಕೆ ಬೇರೆಯವರಿಗಿಂತ ಬಲವಾಗೇನೂ ಅಂಟಿಕೊಂಡಿಲ್ಲ. ನಮ್ಮಂಥ ಯುವಕ ಯುವತಿಯರೂ ಸತ್ತಿರುವುದನ್ನು ಕಂಡಿದ್ದೇವೆ. ಹಾಗಿರುವಾಗ ನಮಗೆ ಶಕ್ತಿ ಇರುವಾಗಲೇ ಈ ಊರು ಬಿಟ್ಟು ದೂರ ಹೋಗೋಣ; ಸಾಧ್ಯವಿರುವಾಗಲೇ ತಪ್ಪಿಸಿಕೊಳ್ಳೋಣ. ಪಕ್ಷಿಗಳ ಕಲರವ ಕೇಳುವಲ್ಲಿಗೆ, ಸುಂದರ ಹಸಿರು ಬೆಟ್ಟ, ಕಣಿವೆ ಕಾಣುವಲ್ಲಿಗೆ, ಸಮುದ್ರದ ಅಲೆಗಳ ಹಾಗೆ ಓಲಾಡುವ ಗೋಧಿ ಹೊಲಗಳು ಇರುವೆಡೆಗೆ ಹೋಗೋಣ. ನಾವು ಎಲ್ಲರನ್ನೂ ಬಿಟ್ಟು ಹೋಗುತ್ತಿದ್ದೇವೆನ್ನುವ ಪಾಪ ಪ್ರಜ್ಞೆ ಬೇಡ. ಏಕೆಂದರೆ ನಾವು ಯಾರನ್ನೂ ಬಿಟ್ಟು ಹೋಗುತ್ತಿಲ್ಲ; ಒಂದು ರೀತಿಯಲ್ಲಿ ನಮ್ಮ ಸಂಬಂಧಿಕರೆಲ್ಲಾ ಸತ್ತು ನಮ್ಮನ್ನೇ ಬಿಟ್ಟು ಹೋಗಿದ್ದಾರೆ. ನಾವು ಇಲ್ಲೇ ಇದ್ದರಂತೂ ನಮಗೆ ಸಾವು ನಿಶ್ಚಿತ. ಆದ್ದರಿಂದ ದೂರದ ಹಳ್ಳಿಗಳಿಗೆ ನಮ್ಮ ಆಳುಕಾಳುಗಳೊಂದಿಗೆ ಹೋಗೋಣ. ಸಾಧ್ಯವಿರುವಷ್ಟು ದಿನ ಸುಖ ಸಂತೋಷದಿಂದ ಬದುಕೋಣ.
                ಪಾಂಪಿನಿಯಾಳ ಸಲಹೆಯನ್ನು ಎಲ್ಲರೂ ಒಪ್ಪುತ್ತಾರೆ ಹಾಗೂ ಕೂಡಲೇ ಹೊರಡೋಣವೆಂದು ಹೇಳುತ್ತಾರೆ. ಆಗ, ‘ಬರೇ ಹೆಂಗಸರೇ ಹೊರಡುವುದು ಕಷ್ಟ.. ನಿಮಗೇ ಗೊತ್ತು ಗಂಡಸೊಬ್ಬನಿಲ್ಲದಿದ್ದಲ್ಲಿ ಹೆಂಗಸರು ಹೇಗೆ ವರ್ತಿಸುತ್ತಾರೆಂಬುದು! ನಾವೆಲ್ಲಾ ಮೊದಲೇ ಪುಕ್ಕಲು ಸ್ವಭಾವದವರು. ಯಾರಾದರು ಗಂಡಸರನ್ನೂ ಕರೆದೊಯ್ಯೋಣಎನ್ನುತ್ತಾಳೆ ಫಿಲೋಮೆನಾ. ಆಗ ಅಲ್ಲಿಗೆ ಪಾಂಫಿಲೊ, ಫಿಲೋಸ್ಟ್ರಾಟೊ ಹಾಗೂ ಡಿಯೋನಿಯೋ ಎಂಬ ಮೂವರು ಸ್ಫುರದ್ರೂಪಿ ಯುವಕರು ಬರುತ್ತಾರೆ. ಅವರು ಆ ಯುವತಿಯರಿಗೆ ಪರಿಚಯವಿದ್ದವರೆ. ಪಾಂಪಿನಿಯಾ, ‘ಅದೃಷ್ಟವೇ ಅವರನ್ನು ಅಲ್ಲಿಗೆ ಕರೆತಂದಿದೆಎಂದು ಹೇಳುತ್ತಾ, ಅವರಿಗೆ ಅದುವರೆಗೆ ನಡೆದ ಮಾತುಕತೆಯೆಲ್ಲಾ ತಿಳಿಸಿ ಅವರ ಜೊತೆ ಬರುವಂತೆ ಕೇಳುತ್ತಾಳೆ. ಆ ಯುವಕರೂ ಸಂತೋಷದಿಂದ ಹೊರಡಲು ತಯಾರಾಗುತ್ತಾರೆ.
                ಎಲ್ಲರೂ ಮರುದಿನ ಮುಂಜಾನೆಯೇ ತಮಗೆ ಬೇಕಾದ ಸಾಮಾನು ಸರಂಜಾಮುಗಳನ್ನು ಹೊತ್ತು ಆಳುಕಾಳುಗಳೊಂದಿಗೆ ಹೊರಟು ಊರ ಹೊರಗಿನ ತೋಟದ ಮನೆಯೊಂದಕ್ಕೆ ಹೋಗುತ್ತಾರೆ. ಆ ಹತ್ತು ಜನಗಳ ಗುಂಪಿನಲ್ಲಿ ದಿನಕ್ಕೊಬ್ಬರು ನಾಯಕರಾಗಬೇಕೆಂದೂ, ಆ ದಿನ ಎಲ್ಲರೂ ಅವರು ಹೇಳಿದಂತೆ ಕೇಳಬೇಕೆಂದು ತೀರ್ಮಾನಿಸುತ್ತಾರೆ.
                ಆ ಮನೆಯಲ್ಲಿ ಎಲ್ಲರೂ ಹರುಷೋಲ್ಲಾಸದಿಂದ ರುಚಿಯಾದ ವೈನ್ ಕುಡಿದು, ಒಳ್ಳೆಯ ಆಹಾರ ಸೇವಿಸಿ, ಹೊರಗಿನ ತೋಟದಲ್ಲಿ ಓಡಾಡಿ, ಹಾಡು, ಸಂಗೀತದೊಂದಿಗೆ ಹೊರಗಿನ ಸಾವಿನ ಪ್ರಪಂಚ ಮರೆತು ಕಾಲ ಕಳೆಯುತ್ತಾರೆ.
                ಮೊದಲನೆಯ ದಿನ ಆ ಗುಂಪಿಗೆ ನಾಯಕಿಯದ ಪಾಂಪಿನಿಯಾ ಕಾಲ ಕಳೆಯಲು ದಿನಕ್ಕೊಬ್ಬಬ್ಬರು ಒಂದೊಂದು ಕತೆ ಹೇಳಬೇಕೆಂದು ತಿಳಿಸುತ್ತಾರೆ. ಎಲ್ಲರೂ ಆ ಸಲಹೆಯನ್ನು ಅನುಮೋದಿಸಿ ಕತೆಗಳನ್ನು ಕೇಳಲು ಉತ್ಸುಕರಾಗುತ್ತಾರೆ.




https://archive.org/download/boccaccionarasikategalu/Boccacciona%20Rasikategalu.pdf

ಶುಕ್ರವಾರ, ಮೇ 10, 2019

ಜಾರ್ಜ್ ಟೌನ್ ವ್ಯಂಗ್ಯಚಿತ್ರಗಳು

16ನೇ ಮೇ 2019ರ ‘ಸುಧಾ‘ದಲ್ಲಿ ಪ್ರಕಟವಾದ ನನ್ನ ಚಿತ್ರ-ಲೇಖನ


        ಜಾರ್ಜ್ ಟೌನ್ ಮಲೇಷಿಯಾದ ಪಿನಾಂಗ್ ರಾಜ್ಯದ ರಾಜಧಾನಿ ಹಾಗೂ ಅದೊಂದು ದ್ವೀಪನಗರವಾಗಿದೆ. 2008ರಲ್ಲಿ ಈ ನಗರವನ್ನು ವಿಶ್ವಸಂಸ್ಥೆಯು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿದೆ. ಮಲಕ್ಕಾ ಕೊಲ್ಲಿಯ ಮಲಕ್ಕಾ ಮತ್ತು ಜಾರ್ಜ್ ಟೌನ್‍ಗಳು ಕಳೆದ ಐನೂರು ವರ್ಷಗಳಿಂದ ಜಗತ್ತಿನ ಪೂರ್ವ ಮತ್ತು ಪಶ್ಚಿಮಗಳ ನಡುವಿನ ವ್ಯಾಪಾರ ಹಾಗೂ ಸಾಂಸ್ಕøತಿಕ ವಿನಿಮಯದ ಕೇಂದ್ರಗಳಾದುದರಿಂದ ಈ ಮಾನ್ಯತೆ ಸಿಕ್ಕಿದೆ. ಅಷ್ಟಲ್ಲದೆ, ಐನೂರು ವರ್ಷಗಳಿಂದ ಬಹು ಸಂಸ್ಕøತಿಯ ಹಾಗೂ ಸಾಮರಸ್ಯೆಯ ಪರಂಪರೆಯನ್ನು ಈ ನಗರವು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಇಲ್ಲಿನ ಮಲಯರ ನಾಡಿಗೆ ಚೀನಿ ಮತ್ತು ಭಾರತೀಯರು ಬಂದು ನೆಲೆಸಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಭಾರತದ ಉಪಖಂಡದಿಂದ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ವ್ಯಾಪಾರಿಗಳು ಮಲೇಷಿಯಾದ ಉಪಖಂಡಕ್ಕೆ ಭೇಟಿ ನೀಡಿ ತಮ್ಮ ಧರ್ಮ, ಸಂಸ್ಕøತಿಗಳನ್ನು ಪರಿಚಯಿಸಿದ್ದಾರೆ ಎಂದು ದಾಖಲೆಗಳು ತಿಳಿಸುತ್ತವೆ. ಇಂದು ಮಲೇಷಿಯಾದ ಶೇ.61ರಷ್ಟು ಮುಸಲ್ಮಾನ ಧರ್ಮ ಆಚರಿಸುತ್ತಿದ್ದು ಬೌದ್ಧ ಧರ್ಮ, ಕ್ರೈಸ್ತ ಧರ್ಮ, ಹಿಂದೂ ಧರ್ಮ, ತಾವೋ, ಸಿಖ್ ಧರ್ಮೀಯರು ಸಹ ಇದ್ದಾರೆ. ಇದರ ಜೊತೆಗೆ 1957ರವರೆಗೂ ಬ್ರಿಟಿಷ್ ವಸಾಹತಾಗಿದ್ದ ಜಾರ್ಜ್ ಟೌನ್ ಯೂರೋಪಿಯನ್ ವಿಶಿಷ್ಟ ವಾಸ್ತುಶಿಲ್ಪದ ಪಾರಂಪರಿಕ ಕಟ್ಟಡಗಳನ್ನು ಹೊಂದಿದೆ. ಯುನೆಸ್ಕೊ ಪ್ರಕಾರ ಈ ರೀತಿಯ ಬಹು ಸಂಸ್ಕøತಿಯ, ವಿಶಿಷ್ಟ ವಾಸ್ತು ವಿನ್ಯಾಸದ ನಗರಗಳಾದ ಮಲಕ್ಕಾ ಮತ್ತು ಜಾರ್ಜ್ ಟೌನ್‍ಗಳಿಗೆ ಸರಿಸಮನಾದುದು ಪೂರ್ವ ಮತ್ತು ದಕ್ಷಿಣ ಏಷಿಯಾದಲ್ಲಿ ಮತ್ತೆಲ್ಲೂ ಇಲ್ಲ. 
        ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಭಾರತಕ್ಕೆ ಪ್ರವೇಶಿಸುವುದಕ್ಕೂ ಮೊದಲೇ 1786ರಲ್ಲಿ ಪಿನಾಂಗ್ ತಲುಪಿ ಅಲ್ಲಿ 1786ರಲ್ಲಿ ಅದರ ಒಬ್ಬ ಕ್ಯಾಪ್ಟನ್ ಫ್ರಾನ್ಸಿಸ್ ಲೈಟ್ ಬ್ರಿಟಿಷ್ ವಸಾಹತು ಸ್ಥಾಪಿಸಿದ. ಅದು ಅವರ ಸರಕು ಸಾಗಾಣಿಕೆಯ ಬಂದರಾಯಿತು. ಬ್ರಿಟಿಷ್ ದೊರೆ 3ನೇ ಜಾರ್ಜ್ ನೆನಪಿನಲ್ಲಿ ಆ ನಗರಕ್ಕೆ ಜಾರ್ಜ್ ಟೌನ್ ಎಂದು ಹೆಸರಿಸಲಾಗಿದೆ. ಬ್ರಿಟಿಷರಿಂದ ಮಲೇಷಿಯಾಕ್ಕೆ 1957ರಲ್ಲಿ ಸ್ವಾತಂತ್ರ್ಯ ದೊರಕಿತು.
       2008ರಲ್ಲಿ ಜಾರ್ಜ್ ಟೌನನ್ನು ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೊ ಗುರುತಿಸಿದ ನಂತರ 2009ರಲ್ಲಿ ಜಾರ್ಜ್ ಟೌನನ್ನು ಕಲೆಯಿಂದ ಮತ್ತಷ್ಟು ಸುಂದರಗೊಳಿಸಲು ಪಿನಾಂಗ್ ರಾಜ್ಯ ಸರ್ಕಾರವು ಹೊಸ ವಿಚಾರಗಳಿಗಾಗಿ "Marking Georgetown- An Idea Competition for a UNESCO World Heritage Site"  ಎಂಬ ಒಂದು ಅಂತರರಾಷ್ಟ್ರೀಯ ಸ್ಪರ್ಧೆಯನ್ನು ಏರ್ಪಡಿಸಿತು. ಅಲ್ಲಿ ದೊರಕಿದ ವಿಚಾರವೇ ಹಲವಾರು ಕಲೆ ಮತ್ತು ಸಂಸ್ಕøತಿಯ ವಿಶಿಷ್ಟತೆಗಳನ್ನು ಹೊಂದಿರುವ ಜಾರ್ಜ್ ಟೌನನ್ನು ಮತ್ತಷ್ಟು ಸುಂದರಗೊಳಿಸಲು `ಬೀದಿ ಕಲೆ' ಅಥವಾ Street Art ರಚನೆ. ಅದರಂತೆ ಐವತ್ತೆರಡು ಬೀದಿಗಳಲ್ಲಿ ಆ ಬೀದಿಯ ಕತೆ ಹೇಳುವ ಕಬ್ಬಿಣದ ಸರಳುಗಳಿಂದ ಮಾಡಿದ ವ್ಯಂಗ್ಯಚಿತ್ರಗಳನ್ನು ಸ್ಥಾಪಿಸಲಾಗಿದೆ. ಈ ರೀತಿಯ ಕಬ್ಬಿಣದ ಸರಳುಗಳ ವ್ಯಂಗ್ಯಚಿತ್ರಗಳ ಸ್ಥಾಪನೆ ಬಹುಶಃ ವಿಶ್ವದಲ್ಲಿ ಮೊಟ್ಟಮೊದಲನೆಯದಿರಬಹುದೇನೋ. `ಜನರ ಧ್ವನಿ' ಎಂಬ ಥೀಮ್‍ನೊಂದಿಗೆ ಸ್ಥಳೀಯ ವ್ಯಂಗ್ಯಚಿತ್ರಕಾರ/ಕಲಾವಿದ ಟಾಂಗ್ ಮುನ್ ಕಿಯಾರವರ ನಿರ್ದೇಶನದೊಂದಿಗೆ Sculpture at Work ಎನ್ನುವ ಸ್ಥಳೀಯ ಕಂಪೆನಿಯೊಂದು 2010ರಲ್ಲಿ ಈ ರೀತಿಯ ಕಬ್ಬಿಣದ ಸರಳುಗಳ ವ್ಯಂಗ್ಯಚಿತ್ರಗಳನ್ನು ರಚಿಸಿ ಸ್ಥಾಪಿಸಿದೆ. ಪ್ರತಿಯೊಂದು ವ್ಯಂಗ್ಯಚಿತ್ರವು ಪಿನಾಂಗ್‍ನ ಹಾಗೂ ಆಯಾ ಬೀದಿಯ ಚರಿತ್ರೆಯನ್ನು ವಿಡಂಬನಾತ್ಮಕವಾಗಿ ತಿಳಿಸುತ್ತದೆ. ಆಯಾ ಚಿತ್ರದ ಜೊತೆಗೆ ವಿವರಣೆಯೂ ಇದೆ ಹಾಗೂ ಕಬ್ಬಿಣದ ಸರಳಿನ ವ್ಯಂಗ್ಯಚಿತ್ರದಡಿಯಲ್ಲಿ ವ್ಯಂಗ್ಯಚಿತ್ರಕಾರನ ಸಹಿಯೂ ಇದೆ. ಈ ಪ್ರಾಯೋಜನೆಯಲ್ಲಿ ಟಾಂಗ್ ಮುನ್ ಕಿಯಾರವರ ಜೊತೆಗೆ ಮಲೇಷಿಯಾದ ಪ್ರಖ್ಯಾತ ವ್ಯಂಗ್ಯಚಿತ್ರಕಾರರಾದ ಬಾಬಾ ಚುವಾ, ರೆಗ್ಗೀ ಲೀ ಮತ್ತು ಲೆಫ್ಟಿಯವರ ವ್ಯಂಗ್ಯಚಿತ್ರಗಳಿವೆ.

     
         ಮಂತ್ರಿ ರಸ್ತೆಯನ್ನು ಹಿಂದೆ `ಲವ್ ಲೇನ್' ಎಂದು ಕರೆಯುತ್ತಿದ್ದರಂತೆ. ಅಲ್ಲಿರುವ ಒಂದು ವ್ಯಂಗ್ಯಚಿತ್ರದಲ್ಲಿ ಗಂಡಸೊಬ್ಬನು ಹಗ್ಗವೇರಿ ಮನೆಯೊಂದರ ಕಿಟಕಿಯೊಂದನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾನೆ. ಅದರ ಹೆಸರು `ನನ್ನ ಗಂಡ ಎಲ್ಲಿ?' ಅಥವಾ `ಮೋಸ ಮಾಡುತ್ತಿರುವ ಗಂಡ'. ಅಲ್ಲಿರುವ ಟಿಪ್ಪಣಿ, `ಸ್ಥಳೀಯ ಚೀನಿಯರ ಹೇಳಿಕೆಯಂತೆ ಮಂತ್ರಿ ರಸ್ತೆಯಲ್ಲಿನ ಸಿರಿವಂತರು ಇಲ್ಲಿ ತಮ್ಮ ತಮ್ಮ ಪ್ರೇಯಸಿ/ಉಪಪತ್ನಿಯರನ್ನು ಹೊಂದಿದ್ದರು, ಅದರಿಂದಾಗಿಯೇ ಇದನ್ನು ಪ್ರೇಮ ರಸ್ತೆ (ಲವ್ ಲೇನ್) ಎಂದೂ ಕರೆಯುತ್ತಿದ್ದರು' ಎಂದು ಹೇಳುತ್ತದೆ.


       ಅರ್ಮೇನಿಯನ್ ರಸ್ತೆಯಲ್ಲಿರುವ `ಮೆರವಣಿಗೆ' ಎಂಬ ವ್ಯಂಗ್ಯಚಿತ್ರ ಇಬ್ಬರು ವ್ಯಕ್ತಿಗಳು ಹುಲಿಯೊಂದನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದರೆ ಪ್ರವಾಸಿಗನೊಬ್ಬನಿಗೆ ಈ ಹಿಂದೆ 1930ರ ದಶಕದಲ್ಲಿ ಹುಲಿಯನ್ನು ಕೊಂದು ಕೊಂಡೊಯ್ಯುತ್ತಿರುವುದು ನೆನಪಾಗುತ್ತಿದೆ ಹಾಗೂ ಅಲ್ಲಿನ ಟಿಪ್ಪಣಿ ಚೀನಿಯರು ಹುಲಿಯ ವರ್ಷದಲ್ಲಿ ತಮ್ಮ ದುರಾದೃಷ್ಟ ತೊಡಗಿಸಲು ಹುಲಿಯನ್ನು ಮೆರವಣಿಗೆ ಕೊಂಡೊಯ್ಯುತ್ತಾರೆ ಎಂದು ತಿಳಿಸುತ್ತದೆ.
  
ಸೆಕ್ ಚುವಾನ್ ರಸ್ತೆಯಲ್ಲಿರುವ ಟಿಂಗ್ ಟಿಂಗ್ ಥಾಂಗ್ ವ್ಯಂಗ್ಯಚಿತ್ರ.   


     

     ಹುಡುಗಿಯೊಬ್ಬಳಿಗೆ ಜಡೆ ಹಾಕುತ್ತಿರುವ ವ್ಯಂಗ್ಯಚಿತ್ರವೊಂದು ರೋಪ್ ವಾಕ್ ರಸ್ತೆಯಲ್ಲಿದೆ. ಈ ಹಿಂದೆ ಅಲ್ಲಿ ಹಗ್ಗಗಳನ್ನು ಹೆಣೆಯಲಾಗುತ್ತಿತ್ತು ಎಂದು ಅಲ್ಲಿನ ಟಿಪ್ಪಣಿ ಹೇಳುತ್ತದೆ.
     

  ಮಲಯ್ ರಸ್ತೆಯಲ್ಲಿನ `ಕೌ ಅಂಡ್ ಫಿಶ್' ವ್ಯಂಗ್ಯಚಿತ್ರವು ಆ ರಸ್ತೆಯಲ್ಲಿ ಮೊದಲು ಕಸಾಯಿಖಾನೆ ಇದ್ದದ್ದನ್ನು ಹಾಗೂ ಮಾರಾಟಮಾಡಲು ಮೀನುಗಳನ್ನು ತೂಗುಹಾಕುತ್ತಿದ್ದುದನ್ನು ಹೇಳುತ್ತದೆ.

 
      ಚೀನಿ ರಸ್ತೆಯಲ್ಲಿ ಗಾಡಿಯಲ್ಲಿ ತಿಂಡಿ ತಿನಿಸು ಮಾರುವ ಚೀನಿ ವ್ಯಾಪಾರಿಗಳು ತಾವು ಬರುತ್ತಿರುವುದನ್ನು ತಿಳಿಸಲು ಬಾಣಲೆಯನ್ನು ಸೌಟಿನಿಂದ ಬಡಿದು ಮಾಡುತ್ತಿದ್ದ ಶಬ್ದವೇ `ಟೊಕ್ ಟೊಕ್ ಮೀ' ವ್ಯಂಗ್ಯಚಿತ್ರವಾಗಿದೆ. ಈ ವ್ಯಂಗ್ಯಚಿತ್ರಗಳ ವೈಶಿಷ್ಟ್ಯತೆಯೆಂದರೆ ಕಬ್ಬಿಣದ ಸರಳುಗಳಿಂದ ಮಾಡಿರುವ ಇವುಗಳಲ್ಲಿ ವ್ಯಂಗ್ಯಚಿತ್ರ ಕಲಾವಿದನ ಕುಶಲತೆ ಹಾಳೆಯ ಮೇಲೆ ಬರೆದಷ್ಟೇ ನವಿರಾಗಿವೆ. ಅಲ್ಲದೆ ಗೋಡೆ ಹಾಗೂ ಅದರಲ್ಲಿನ ಕಿಟಕಿ ಬಾಗಿಲುಗಳನ್ನು ಹಿನ್ನೆಲೆಯಾಗಿಯೇ ಬಳಸಿಕೊಳ್ಳಲಾಗಿದೆ. ಟೊಕ್ ಟೊಕ್ ಮೀ ವ್ಯಂಗ್ಯಚಿತ್ರದಲ್ಲಿ ಮನೆಯಲ್ಲಿನ ಕಿಟಕಿಯಿಂದ ಗಾಡಿಯವನಿಂದ ಆಹಾರ ಕೊಳ್ಳಲು ಬುಟ್ಟಿಯನ್ನು ಇಳಿಬಿಟ್ಟಿರುವುದನ್ನು ಕಾಣಬಹುದು.

   
       ಗಟ್ ಚೆಬು ಚೂಲಿಯಾ ರಸ್ತೆಯಲ್ಲಿರುವ `ಡಬಲ್ ರೋಲ್' ವ್ಯಂಗ್ಯಚಿತ್ರ 1909ರವರೆಗೂ ಅಲ್ಲಿನ ಪೋಲೀಸರೇ ಅಗ್ನಿಶಾಮಕ ದಳದವರ ಕೆಲಸ ನಿರ್ವಹಿಸುತ್ತಿದ್ದರೆಂದು ಹೇಳುತ್ತದೆಯಲ್ಲದೆ ಆ ವ್ಯಂಗ್ಯಚಿತ್ರದಲ್ಲಿನ ಪೋಲೀಸ್ ಒಬ್ಬ ಸರ್ದಾರ್‍ಜೀ ಸಹ ಆಗಿರುವುದನ್ನು ತೋರಿಸುತ್ತದೆ.
     ಈ ರೀತಿಯಲ್ಲಿ ಜಾರ್ಜ್ ಟೌನ್‍ನಲ್ಲಿನ ಪ್ರತಿಯೊಂದು ವ್ಯಂಗ್ಯಚಿತ್ರವೂ ಅಲ್ಲಿನ ಕತೆ ಹೇಳುತ್ತದೆ. 
  

 ಜಾರ್ಜ್ ಟೌನ್‍ನ ಪ್ರಖ್ಯಾತ ಸೈಕಲ್ ತುಳಿಯುತ್ತಿರುವ ಮ್ಯೂರಲ್ ಜೊತೆ ಲೇಖಕರು

  ವ್ಯಂಗ್ಯಚಿತ್ರಗಳಿಂದ ಪ್ರಾರಂಭವಾದ ಈ ಕಲೆಯ ಅನುಷ್ಠಾನ ನಂತರ ಮ್ಯೂರಲ್ ಕಲೆಗೆ ಹಾದಿಮಾಡಿಕೊಟ್ಟಿತು. ಲಿಥುವೇನಿಯಾದ ಕಲಾವಿದ ಅರ್ನೆಸ್ಟ್ ಜಖರೆವಿಕ್ ಜಾರ್ಜ್ ಟೌನ್‍ನಲ್ಲೆಲ್ಲಾ ಗೋಡೆಗಳ ಮೇಲೆ ಮ್ಯೂರಲ್ ಕಲೆಯನ್ನು ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚು ಜನಪ್ರಿಯವಾಗಿರುವುದು `ಸೈಕಲ್ ತುಳಿಯುತ್ತಿರುವ ಮಕ್ಕಳು'. ನಿಜವಾದ ಸೈಕಲ್ ಗೋಡೆಗೆ ಬಂಧಿಸಿ ಗೋಡೆಯ ಮೇಲೆ ಚಿತ್ರ ಬಿಡಿಸಿದ್ದಾನೆ ಕಲಾವಿದ ಅರ್ನೆಸ್ಟ್ ಜಖರೆವಿಕ್. ಪೀನಾಂಗ್‍ಗೆ ಭೇಟಿ ನೀಡುವ ಪ್ರವಾಸಿಗರೆಲ್ಲರೂ ಆ ಮಕ್ಕಳ ಸೈಕಲ್‍ನ ಕ್ಯಾರಿಯರ್ ಮೇಲೆ ಕೂತು ಫೋಟೋ ತೆಗೆಸಿಕೊಳ್ಳುತ್ತಾರೆ. 

ಚಿತ್ರ-ಲೇಖನ: ಡಾ. ಜೆ.ಬಾಲಕೃಷ್ಣ
j.balakrishna@gmail.com