Translate

ಗುರುವಾರ, ಜುಲೈ 28, 2016

ಮುಲ್ಲಾ ನಸ್ರುದ್ದೀನ್ ಕತೆಗಳ 49ನೇ ಕಂತು

ಜುಲೈ 2016ರ `ಸಂವಾದ'ದಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 49ನೇ ಕಂತು

ಗಳಿಕೆ 

ಮೂರು ಜನ ಮಕ್ಕಳು ತಮ್ಮ ಅಪ್ಪಂದಿರ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರು. 

ಒಬ್ಬ ಹೇಳಿದ, `ನಮ್ಮಪ್ಪ ಒಂದೆರಡು ಸಾಲು ಗೀಚುತ್ತಾರೆ, ಅದನ್ನು ಪದ್ಯ ಎಂದು ಕರೆಯುತ್ತಾರೆ. ಪತ್ರಿಕೆಯವರು ಅದನ್ನು ಪ್ರಕಟಿಸಿ ಇನ್ನೂರು ರೂಪಾಯಿ ಕೊಡುತ್ತಾರೆ’. 

ಮತ್ತೊಬ್ಬ ಹೇಳಿದ, `ನಮ್ಮಪ್ಪ ಒಂದೆರಡು ಸಾಲು ಗೀಚುತ್ತಾರೆ, ಅದನ್ನು ಹಾಡು ಎಂದು ಕರೆಯುತ್ತಾರೆ. ಸಿನೆಮಾದವರು ಅದಕ್ಕೆ ಒಂದು ಸಾವಿರ ರೂಪಾಯಿ ಕೊಡುತ್ತಾರೆ.’ 

ನಸ್ರುದ್ದೀನನ ಮಗ ಹೇಳಿದ, `ನಮ್ಮಪ್ಪ ಒಂದೆರಡು ಸಾಲು ಗೀಚುತ್ತಾರೆ, ಅದನ್ನು ವಾಸ್ತು ಸಲಹೆ ಎಂದು ಕರೆಯುತ್ತಾರೆ. ಜನ ಮುಗಿಬಿದ್ದು ಸಾವಿರಾರು ರೂಪಾಯಿ ಕೊಡುತ್ತಾರೆ ಹಾಗೂ ತಮ್ಮದೇ ಮನೆ, ಗೋಡೆ ಕೆಡವಿ ಲಕ್ಷಾಂತರ ಕಳೆದುಕೊಳ್ಳುತ್ತಾರೆ.’ 


ನಾಸ್ತಿಕ 

ಆ ಊರಿಗೆ ಹೊಸದಾಗಿ ಧರ್ಮಬೋಧಕ ಬಂದಿದ್ದ. ಊರಿನ ಜನರನ್ನೆಲ್ಲಾ ಸೇರಿಸಿ, `ನಿಮ್ಮಲ್ಲಿ ಎಷ್ಟು ಜನ ದೇವರನ್ನು ನಂಬುತ್ತೀರಿ?’ ಎಂದು ಕೇಳಿದ. ಎಲ್ಲರೂ ಕೈ ಎತ್ತಿದರು. ಆದರೆ ನಸ್ರುದ್ದೀನ್ ಕೈ ಎತ್ತಲಿಲ್ಲ. ಅದನ್ನು ನೋಡಿದ ಧರ್ಮ ಬೋಧಕ, `ನೀನು ನಾಸ್ತಿಕನೇ?’ ಎಂದು ಕೇಳಿದ. 

`ಹೌದು, ನಾನು ನಾಸ್ತಿಕ, ದೇವರನ್ನು ನಂಬುವುದಿಲ್ಲ’, ಹೇಳಿದ ನಸ್ರುದ್ದೀನ್. 

`ನೀನು ಏಕೆ ನಾಸ್ತಿಕನಾದೆ?’ ಕೇಳಿದ ಧರ್ಮಗುರು. 

`ಏಕೆಂದರೆ ನನ್ನ ಅಪ್ಪ-ಅಮ್ಮ ನಾಸ್ತಿಕರಾಗಿದ್ದರು. ನನ್ನ ಅಜ್ಜ-ಅಜ್ಜಿ ನಾಸ್ತಿಕರಾಗಿದ್ದರು, ಅದಕ್ಕೇ ನಾನೂ ನಾಸ್ತಿಕನಾದೆ’ ನಸ್ರುದ್ದೀನ್ ಹೇಳಿದ. 

`ಹಾಗಾದರೆ ನಿನ್ನ ಅಪ್ಪ-ಅಮ್ಮ, ನಿನ್ನ ಅಜ್ಜ-ಅಜ್ಜಿ ದಡ್ಡರೂ, ತಿಳಿಗೇಡಿಗಳೂ ಆಗಿದ್ದರೆ ನೀನು ಏನು ಆಗಿರುತ್ತಿದ್ದೆ?’ ಕೇಳಿದ ಧರ್ಮಗುರು ವ್ಯಂಗ್ಯದಿಂದ. 

ನಸ್ರುದ್ದೀನ್ ಹೇಳಿದ `ಬಹುಶಃ ಆಗ ನಾನು ಆಸ್ತಿಕನಾಗಿರುತ್ತಿದ್ದೆ’. 

ಪುನಃ ನಸ್ರುದ್ದೀನ್!
ಆ ಊರಿಗೆ ಬಂದ ಹೊಸ ವ್ಯಕ್ತಿಯೊಬ್ಬ ಗಡಂಗಿನ ಮುಂದೆ ಕುಳಿತು ಕುಡಿಯುತ್ತಿದ್ದ. ಅಲ್ಲಿಗೆ ಬಂದ ಮುಲ್ಲಾ ನಸ್ರುದ್ದೀನ್,

`ನೋಡಿ ಕುಡಿಯುವುದು ಧರ್ಮಕ್ಕೆ ವಿರುದ್ಧವಾದುದು. ನೀವು ಕೆಟ್ಟ ಕೆಲಸ ಮಾಡುತ್ತಿರುವಿರಿ. ಕುಡಿಯುವುದರಿಂದ ನಿಮ್ಮ ಮನಸ್ಸು, ವ್ಯಕ್ತಿತ್ವ ಹಾಳಾಗುತ್ತದೆ. ದಯವಿಟ್ಟು ಕುಡಿಯುವುದನ್ನು ಬಿಟ್ಟುಬಿಡಿ’ ಎಂದು ಬೋಧನೆ ಮಾಡಿದ.

ಅದನ್ನು ಕೇಳಿದ ಆ ವ್ಯಕ್ತಿ, `ನೋಡಿ ಧರ್ಮಗುರುಗಳೇ, ಕುಡಿಯುವುದು ಕೆಟ್ಟದ್ದಲ್ಲ. ಅದು ನೀಡುವ ಸುಖ ಧರ್ಮ ಕೊಡುವ ಸುಖಕ್ಕಿಂತ ಉತ್ತಮವಾದುದು, ಅದ್ಭುತವಾದುದು. ಅದರ ಅನುಭವ ದಿವ್ಯವಾದುದು. ಬೇಕಾದರೆ ನೀವೇ ಒಮ್ಮೆ ಕುಡಿದು ನೋಡಿ, ನಿಮಗೇ ನಂಬಿಕೆ ಬರುತ್ತದೆ’ ಎಂದ.

`ನಾನು ಧರ್ಮ ಬೋಧಕ, ನಾನು ಹೇಗೆ ಕುಡಿಯಲಿ. ಜನ ನೋಡಿದರೆ ಏನೆಂದುಕೊಳ್ಳುತ್ತಾರೆ?’ ನಸ್ರುದ್ದೀನ್ ಹೇಳಿದ.

`ಪರವಾಗಿಲ್ಲ. ನಾನು ಚಹಾ ಕಪ್ಪಿನಲ್ಲಿ ನಿಮಗೆ ಮದ್ಯ ತಂದು ಕೊಡುತ್ತೇನೆ, ಜನರಿಗೆ ತಿಳಿಯುವುದಿಲ್ಲ’ ಹೇಳಿದ ಆ ವ್ಯಕ್ತಿ. ಆಯಿತೆಂದು ನಸ್ರುದ್ದೀನ್ ಒಪ್ಪಿಕೊಂಡ.

ಆ ವ್ಯಕ್ತಿ ಗಡಂಗಿನೊಳಕ್ಕೆ ಹೋಗಿ ತನಗೆ ಮತ್ತೊಂದು ಪೆಗ್ ಕೊಂಡು ಚಹಾ ಕಪ್ಪಿನಲ್ಲಿ ಎರಡು ಪೆಗ್ ಹಾಕಿಕೊಡುವಂತೆ ಕೇಳಿದ.

ಅದಕ್ಕೆ ಗಡಂಗಿನವ, `ಓಹ್! ಪುನಃ ಮುಲ್ಲಾ ನಸ್ರುದ್ದೀನ್ ಬಂದಿರುವಂತಿದೆ!’ ಎಂದ.

ಹೆಸರು?
ಆ ಊರಿಗೆ ಪ್ರಖ್ಯಾತ ಧರ್ಮ ಗುರುಗಳು ಬಂದಿದ್ದರು. ವಿದ್ವಾಂಸ ನಸ್ರುದ್ದೀನನ ಜೊತೆ ಲೋಕದ ಬಗ್ಗೆ ಚರ್ಚಿಸುತ್ತಿದ್ದರು. ವಿಷಯ ನೈತಿಕತೆಯ ಬಗೆಗೆ ತಿರುಗಿತು. ಧರ್ಮ ಗುರುಗಳು, `ಈಗ ಜಗತ್ತು ಎಷ್ಟು ನೀತಿಗೆಟ್ಟಿದೆ! ನೋಡಿ, ನಾನಂತೂ ನನ್ನ ಪತ್ನಿಯನ್ನು ಮದುವೆಯಾಗುವವೆಗೂ ಆಕೆಯೊಂದಿಗೆ ಮಲಗಲೇ ಇಲ್ಲ. ನೀವು?’ ಎಂದು ಮುಲ್ಲಾ ನಸ್ರುದ್ದೀನನನ್ನು ಕೇಳಿದರು.

`ನನಗೆ ನೆನಪಿಲ್ಲ, ನಿಮ್ಮ ಪತ್ನಿಯ ಹೆಸರು ಏನಂದಿರಿ?’ ಕೇಳಿದ ನಸ್ರುದ್ದೀನ್. 


ಸ್ವರ್ಗ-ನರಕ
ಊರಿನ ಧರ್ಮಬೀರುಗಳಾದ ಗಂಡಸರೆಲ್ಲಾ ಸೇರಿ ಧರ್ಮ-ಕರ್ಮಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು.

ಒಬ್ಬ ಧರ್ಮಗುರು, `ಈ ಆಧುನಿಕ ಕಾಲದ ಹೆಂಗಸರು ಎಲ್ಲಾ ಧರ್ಮಾಚರಣೆಗಳನ್ನೂ ಉಲ್ಲಂಘಿಸುತ್ತಿದ್ದಾರೆ, ನೀತಿ-ನಿಯಮಗಳನ್ನೆಲ್ಲಾ ಅನುಸರಿಸುತ್ತಿಲ್ಲಾ. ನನಗೆ ತಿಳಿದಂತೆ ಎಲ್ಲಾ ಹೆಂಗಸರೂ ನರಕಕ್ಕೇ ಹೋಗುತ್ತಾರೆ’ ಎಂದ.

ಉಳಿದವರು, `ಹೌದು ಹೌದು’ ಎಂದು ತಲೆದೂಗಿದರು. ತಾವು ಗಂಡಸರೆಲ್ಲಾ ಸ್ವರ್ಗಕ್ಕೆ ಹೋಗಲು ಹೇಗೆ ತಮ್ಮ ಒಳ್ಳೆಯ ಕೆಲಸಗಳನ್ನು ಮುಂದುವರಿಸಬೇಕೆಂದು ಚರ್ಚೆ ಮುಂದುವರಿಸಿದರು. ಸ್ವರ್ಗಕ್ಕೆ ಹೋಗಲು ತಾವು ಯಾವ್ಯಾವ ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆಂದು ಒಬ್ಬೊಬ್ಬರಾಗಿ ಹೇಳಿದರು.

ನಸ್ರುದ್ದೀನನ ಸರದಿ ಬಂದಿತು. `ನಾನು ಸ್ವರ್ಗಕ್ಕೆ ಹೋಗುವುದಿಲ್ಲ, ನರಕಕ್ಕೇ ಹೋಗುತ್ತೇನೆ’ ನಸ್ರುದ್ದೀನ್ ಹೇಳಿದ.

ಎಲ್ಲರೂ ಅಚ್ಚರಿ ಮತ್ತು ಅಪನಂಬಿಕೆಯಿಂದ ಆತನೆಡೆಗೆ ನೋಡಿದರು.

`ಹೌದು, ಎಲ್ಲ ಹೆಂಗಸರೂ ನರಕಕ್ಕೆ ಹೋದರೆ, ನಾನು ಸ್ವರ್ಗದಲ್ಲಿ ಏನು ಮಾಡಲಿ? ನಾನೂ ನರಕಕ್ಕೇ ಹೋಗುತ್ತೇನೆ’ ಹೇಳಿದ ನಸ್ರುದ್ದೀನ್.

ನೀನಿನ್ನೂ ಸಂನ್ಯಾಸಿಯಾಗಿಲ್ಲ
ಮುಲ್ಲಾ ನಸ್ರುದ್ದೀನ್ ಸಂನ್ಯಾಸಿಯಾಗಿದ್ದ.

ಅಬ್ದುಲ್ಲಾ: ನಸ್ರುದ್ದೀನ್ ನೀನು ಸಂನ್ಯಾಸಿ ಹೇಗಾದೆ?

ನಸ್ರುದ್ದೀನ್: ಅದೊಂದು ದೊಡ್ಡ ಕತೆ. ಹೇಳುತ್ತೇನೆ ಕೇಳು. ಒಂದು ದಿನ ಕಾಡಲ್ಲಿ ಹೋಗುತ್ತಿದ್ದಾಗ ಕತ್ತಲಾಯಿತು. ಅಲ್ಲೇ ಒಂದು ಆಶ್ರಮವಿತ್ತು. ಅಲ್ಲಿ ಸಂನ್ಯಾಸಿಗಳು ನನಗೆ ಆ ದಿನ ರಾತ್ರಿ ಕಳೆಯಲು ಸ್ಥಳ ನೀಡಿದರು, ನೀರು ಆಹಾರ ನೀಡಿದರು. ಆ ದಿನ ರಾತ್ರಿ ಆಶ್ರಮದಲ್ಲಿ ಮಲಗಿದ್ದಾಗ ವಿಚಿತ್ರ ಶಬ್ದ ಕೇಳಿಸಿತು. ಆ ಶಬ್ದ ಕೇಳಲು ಬಹಳ ಅದ್ಭುತವಾಗಿತ್ತು. ಬೆಳಿಗ್ಗೆ ಆ ಶಬ್ದ ಏನೆಂದು ಆಶ್ರಮದ ಸಂನ್ಯಾಸಿಗಳನ್ನು ಕೇಳಿದೆ. ಅವರು `ನೀನಿನ್ನೂ ಸಂನ್ಯಾಸಿಯಾಗಿಲ್ಲ. ಆದುದರಿಂದ ಹೇಳಲು ಸಾಧ್ಯವಿಲ್ಲ’ ಎಂದರು. ನನಗೆ ಆ ಶಬ್ದ ಏನು? ಎಲ್ಲಿಂದ ಬರುತ್ತಿದೆ? ಎನ್ನುವುದನ್ನು ತಿಳಿದುಕೊಳ್ಳಲೇಬೇಕೆನ್ನಿಸಿತು. `ಆ ಶಬ್ದದ ಮೂಲ ನಾನು ತಿಳಿದುಕೊಳ್ಳಲೇಬೇಕು, ನಾನು ಸಂನ್ಯಾಸಿಯಾಗುತ್ತೇನೆ. ನಾನು ಸಂನ್ಯಾಸಿಯಾಗುವುದು ಹೇಗೆ ಹೇಳಿ’ ಎಂದು ನಾನು ದುಂಬಾಲು ಬಿದ್ದೆ.’ ಅವರು ಹೇಳಿದರು, `ನೀನು ಈ ಭೂಮಿಯ ಸುತ್ತ ಒಂದು ಸುತ್ತು ಹೋಗು. ಹೋಗುವಾಗ ಸಿಗುವ ಹುಲ್ಲೆಸಳುಗಳನ್ನು ಎಣಿಸಿಕೊ, ಹಾಗೆಯೇ ಸಿಗುವ ಗೊರಜುಕಲ್ಲುಗಳನ್ನು ಸಹ ಎಣಿಸಿಕೊಂಡು ಬಾ. ನಿನಗೆ ಆ ಲೆಕ್ಕ ಸಿಕ್ಕನಂತರ ನೀನು ಸಂನ್ಯಾಸಿಯಾಗಬಹುದು’ ಎಂದರು. ನಾನು ಆ ಅದ್ಭುತ ಶಬ್ದಕ್ಕೆ ಮಾರುಹೋಗಿದ್ದುದರಿಂದ ಸಂನ್ಯಾಸಿಯಾಗಲೇಬೇಕೆಂದು ನಿರ್ಧರಿಸಿ ಭೂಮಿಯ ಸುತ್ತ ಒಂದು ಸುತ್ತ ಹೊಡೆದು ದಾರಿಯಲ್ಲಿ ಸಿಕ್ಕ ಹುಲ್ಲೆಸಳುಗಳನ್ನು ಹಾಗೂ ಗೊರಜುಕಲ್ಲುಗಳನ್ನು ಎಣಿಸಿ ಸುಮಾರು ಐವತ್ತು ವರ್ಷಗಳ ನಂತರ ಪುನಃ ಆ ಕಾಡಿಗೆ ಹಿಂದಿರುಗಿ ಅವರಿಗೆ ಅವುಗಳ ಲೆಕ್ಕ ತಿಳಿಸಿ ನನ್ನನ್ನು ಸಂನ್ಯಾಸಿಯನ್ನಾಗಿ ಮಾಡಿ ಆ ಶಬ್ದದ ಮೂಲ ತಿಳಿಸುವಂತೆ ಬೇಡಿಕೊಂಡೆ. ನನ್ನ ಲೆಕ್ಕದಿಂದ ಸಂತೃಪ್ತರಾದ ಅವರು ನನ್ನನ್ನು ಸಂನ್ಯಾಸಿಯನ್ನಾಗಿ ಮಾಡಿದರು ಹಾಗೂ ನನಗೊಂದು ಕೀಲಿ ನೀಡಿ ಒಂದು ಬಾಗಿಲಿನ ಬಳಿ ಕರೆದೊಯ್ದರು. ಅದು ಮರದ ಬಾಗಿಲಾಗಿತ್ತು. ಅದನ್ನು ತೆರೆದೆ, ಅದರೊಳಗೆ ಒಂದು ಕಲ್ಲಿನ ಬಾಗಿಲಿತ್ತು. ಅದರ ಕೀಲಿ ನೀಡಿದರು. ಅದನ್ನು ತೆರೆದೆ. ಅದರೊಳಗೆ ಕಬ್ಬಿಣದ ಬಾಗಿಲಿತ್ತು. ಅದರ ಕೀಲಿ ನೀಡಿದರು. ಅದನ್ನು ತೆರೆದೆ. ಅದರೊಳಗೆ ತಾಮ್ರದ ಬಾಗಿಲಿತ್ತು. ಅದರ ಕೀಲಿ ನೀಡಿದರು. ಅದನ್ನು ತೆರೆದರೆ ಅದರೊಳಗೆ ಬೆಳ್ಳಿಯ ಬಾಗಿಲಿತ್ತು. ಅದರ ಕೀಲಿ ನೀಡಿದರು. ಅದರೊಳಗೆ ಬಂಗಾರದ ಬಾಗಿಲಿತ್ತು. ಅದರ ಕೀಲಿ ನೀಡಿದರು. ಅದನ್ನು ತೆರೆದೆ. ನನಗೆ ನನ್ನನ್ನೇ ನಂಬಲಾಗಲಿಲ್ಲ. ನನ್ನ ಜನ್ಮ ಸಾರ್ಥಕವಾದಂತೆನಿಸಿತು. ನಾನು ಯಾವ ಶಬ್ದವನ್ನು ಅರಸಿ ಹೊರಟಿದ್ದೆನೋ ಅದರ ಮೂಲ ಆ ಕೋಣೆಯಲ್ಲಿತ್ತು.

ಅಬ್ದುಲ್ಲಾನಿಗೆ ಕುತೂಹಲ ತಡೆಯಲಾಗಲಿಲ್ಲ, `ನಸ್ರುದ್ದೀನ್, ಹೇಳು ಏನಿತ್ತು ಆ ಕೋಣೆಯೊಳಗೆ?’ ಎಂದು ಕೇಳಿದ.

ನಸ್ರುದ್ದೀನ್ ಪ್ರಶಾಂತನಾಗಿ ಹೇಳಿದ, `ನೀನಿನ್ನೂ ಸಂನ್ಯಾಸಿಯಾಗಿಲ್ಲ. ಆದುದರಿಂದ ಹೇಳಲು ಸಾಧ್ಯವಿಲ್ಲ’.

ಮಗನೇ ವೈದ್ಯ
ಮುದುಕ ನಸ್ರುದ್ದೀನನಿಗೆ ಕಾಯಿಲೆಯಾಗಿ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದರು. ನಸ್ರುದ್ದೀನನ ಮಗನೂ ವೈದ್ಯನಾಗಿದ್ದ. ನಸ್ರುದ್ದೀನ್ ತನ್ನ ಮಗನೇ ತನಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ದುಂಬಾಲು ಬಿದ್ದ. ಕೊನೆಗೂ ಆತನ ಮಗನನ್ನೇ ಶಸ್ತ್ರಚಿಕಿತ್ಸೆ ಮಾಡಲು ಕರೆಸಿದರು. ಮಗ, ಅಪ್ಪ ನಸ್ರುದ್ದೀನನಿಗೆ ಶಸ್ತ್ರಚಿಕಿತ್ಸೆ ಮಾಡಲು ಸಿದ್ಧನಾದ. ತನಗೆ ಅರವಳಿಕೆ ಕೊಡುವ ಮೊದಲು ನಸ್ರುದ್ದೀನ್, `ನೋಡು ಮಗನೆ, ನನಗೆ ಸ್ವಲ್ಪ ಎಚ್ಚರಿಕೆಯಿಂದಲೇ ಶಸ್ತ್ರಚಿಕಿತ್ಸೆ ಮಾಡು. ನನಗೇನಾದರೂ ಆದರೆ ನಿನಗೆ ಗೊತ್ತಲ್ಲ, ನಿನ್ನ ಅಮ್ಮ ನೀನು ಮತ್ತು ನಿನ್ನ ಹೆಂಡತಿಯೊಂದಿಗೆ ವಾಸಿಸಲು ಬರುತ್ತಾಳೆ!’ ಎಂದ.

ಜುಟ್ಟು ಕತ್ತರಿಸು

ನಸ್ರುದ್ದೀನ್ ಸೈನ್ಯದಲ್ಲಿ ಸಿಪಾಯಿಯಾಗಿದ್ದ. ಅವನನ್ನು ಭಾರತ-ಪಾಕಿಸ್ತಾನದ ಗಡಿಯಲ್ಲಿ ಸೇವೆಗೆ ನಿಯೋಜಿಸಲಾಗಿತ್ತು. ಭಾರತ-ಪಾಕಿಸ್ತಾನದ ನಡುವೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಅವನಿಗೆ ರಜೆ ಹಾಕಿ ಬರುವಂತೆ ಅವನ ಹೆಂಡತಿ ಫಾತಿಮಾ ಮೇಲಿಂದ ಮೇಲೆ ಪತ್ರ ಬರೆಯುತ್ತಿದ್ದಳು. ತನ್ನ ಮೇಲಧಿಕಾರಿಯನ್ನು ಹೋಗಿ ರಜೆ ಕೇಳಿದ. ಅವನನ್ನು ತಲೆಯಿಂದ ಕಾಲಿನವರೆಗೆ ನೋಡಿದ ಮೇಲಧಿಕಾರಿ, `ನೀನು ಹೋಗಿ ಪಾಕಿಸ್ತಾನಿ ಸೈನಿಕನೊಬ್ಬನ ಜುಟ್ಟು ಕತ್ತರಿಸಿ ಗುರುತಿಗೆ ಅವನ ಟೊಪ್ಪಿಗೆಯನ್ನು ತೆಗೆದುಕೊಂಡು ಬಾ. ನಿನಗೆ ರಜೆ ಕೊಡುತ್ತೇನೆ’ ಎಂದ.

ಆಯಿತೆಂದು ಹೋದ ನಸ್ರುದ್ದೀನ್ ಅರ್ಧಗಂಟೆಯಲ್ಲೇ ಹಿಂದಿರುಗಿ ಪಾಕಿಸ್ತಾನಿ ಸೈನಿಕನ ಕತ್ತರಿಸಿದ ಜುಟ್ಟು ಹಾಗೂ ಟೊಪ್ಪಿಗೆಯನ್ನು ತನ್ನ ಮೇಲಧಿಕಾರಿಗೆ ನೀಡಿ ತನಗೆ ರಜೆ ನೀಡುವಂತೆ ಕೇಳಿದ. ಅಚ್ಚರಿಗೊಂಡ ಮೇಲಧಿಕಾರಿ, ಅದು ಹೇಗೆ ಅಷ್ಟು ಬೇಗ ಪಾಕಿಸ್ತಾನಿ ಸೈನಿಕನ ಜುಟ್ಟು ಕತ್ತರಿಸಿದೆ ಎಂದು ಕೇಳಿದ್ದಕ್ಕೆ ನಸ್ರುದ್ದೀನ್,

`ಗಡಿಯಲ್ಲಿನ ಪಾಕಿಸ್ತಾನಿ ಸೈನಿಕನನ್ನು ಹತ್ತಿರಕ್ಕೆ ಕರೆದು ನಿನಗೂ ಸಹ ನಿನ್ನ ಹೆಂಡತಿಯನ್ನು ನೋಡಲು ಹೋಗಲು ರಜೆ ಬೇಕೇ ಎಂದು ಕೇಳಿದೆ. ಅವನು ಹೌದು ಎಂದ. ಅವನಿಗೆ ನನ್ನ ಜುಟ್ಟು ಕತ್ತರಿಸಿ ನನ್ನ ಟೊಪ್ಪಿಗೆ ನೀಡಿದೆ, ಅವನು ಅವನ ಜುಟ್ಟು ಕತ್ತರಿಸಿ ತನ್ನ ಟೊಪ್ಪಿಗೆ ನನಗೆ ನೀಡಿದ’ ಎಂದ.

ಗೂಳಿಯ ಬಲ

ನಸ್ರುದ್ದೀನ್: ಅಬ್ದುಲ್ಲಾ ನಿನಗೆ ಗೂಳಿಯ ಬಲವಿದೆಯಲ್ಲಾ? ಅಷ್ಟೊಂದು ಶಕ್ತಿ ಹೇಗೆ ಬಂತು?

ಅಬ್ದುಲ್ಲಾ: ಏನಿಲ್ಲಾ, ನಾನು ಮೊದಲಿನಿಂದಲೂ ದನದ ಮಾಂಸ ತಿನ್ನುತ್ತೇನಲ್ಲಾ, ಅದಕ್ಕೇ ನನಗೆ ಗೂಳಿಯ ಬಲ ಬಂದಿದೆ.

ನಸ್ರುದ್ದೀನ್: ಹೌದೆ? ನಾನು ಮೊದಲಿನಿಂದಲೂ ಮೀನಿನ ಮಾಂಸ ತಿನ್ನುತ್ತಿದ್ದೇನೆ, ಆದರೆ ನನಗೆ ಇಂದಿಗೂ ಈಜು ಬರುವುದಿಲ್ಲವಲ್ಲಾ?

ತೆವಳುವಂತೆ ಮಾಡಿದ್ದೇನೆ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಇಬ್ಬರೂ ಗಡಂಗಿನಲ್ಲಿ ಕೂತು ತಮ್ಮ ಪತ್ನಿಯರ ಬಗ್ಗೆ ಮಾತನಾಡುತ್ತಿದ್ದರು.

ಅಬ್ದುಲ್ಲಾ: ನನ್ನ ಪತ್ನಿಗೆ ನಾನು ಸರಿಯಾಗಿ ಬುದ್ದಿ ಕಲಿಸಿದ್ದೇನೆ. ಈಗ ಅವಳು ನಾನು ಹೇಳಿದಂತೆ ಕೇಳುತ್ತಾಳೆ.

ನಸ್ರುದ್ದೀನ್: ಅದೇನು ಮಹಾ! ನಾನು ನನ್ನ ಪತ್ನಿಗೆ ನೆಲದ ಮೇಲೆ ತೆವಳುವಂತೆ ಮಾಡಿದ್ದೇನೆ.

ಅಬ್ದುಲ್ಲಾ: ಹೌದೆ? ಅದು ಹೇಗೆ ಸಾಧ್ಯವಾಯಿತು?

ನಸ್ರುದ್ದೀನ್: ನಿನ್ನೆ ರಾತ್ರಿ ಅವಳು ನೆಲದ ಮೇಲೆ ತೆವಳಿ, `ಲೇ ಪುಕ್ಕಲು ಗಂಡನೇ, ತಾಕತ್ತಿದ್ದರೆ ಮಂಚದ ಕೆಳಗಿನಿಂದ ಹೊರಗೆ ಬಂದು ಮಾತನಾಡೋ!’ ಎಂದಳು.
j.balakrishna@gmail.com

ಶನಿವಾರ, ಜುಲೈ 16, 2016

ಮುಲ್ಲಾ ನಸ್ರುದ್ದೀನ್ ಕತೆಗಳ 48ನೇ ಕಂತು

ಜೂನ್ 2016ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 48ನೇ ಕಂತು

ರಸ್ತೆಗೇ ಉತ್ತಮ!
ವಯೊಲಿನ್ ತಯಾರಿಸುವುದು ನಸ್ರುದ್ದೀನನ ಕುಲ ಕಸುಬಾಗಿತ್ತು. ಹಲವಾರು ತಲಮಾರುಗಳಿಂದ ಅವುಗಳನ್ನು ತಯಾರಿಸಿ ತಮ್ಮ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದರು. ಅದೇ ರಸ್ತೆಯಲ್ಲಿ ಇನ್ನೂ ಎರಡು ಅಂಗಡಿಗಳಲ್ಲಿಯೂ ವಯೊಲಿನ್ ತಯಾರಿಸಿ ಮಾರಾಟ ಮಾಡುವವರಿದ್ದರು. ಬಹಳ ವರ್ಷಗಳಿಂದ ವ್ಯಾಪಾರ ನಡೆಯುತ್ತಿದ್ದುದರಿಂದ ಅವರು ಯಾವುದೇ ಜಾಹೀರಾತು ಮಾಡುತ್ತಿರಲಿಲ್ಲ ಹಾಗೂ ಅವರ ನಡುವೆ ಸ್ಪರ್ಧೆ ಇರಲಿಲ್ಲ. ಆದರೆ ಒಂದು ದಿನ ಒಂದು ಅಂಗಡಿಯವ `ನಾವು ದೇಶದಲ್ಲಿಯೇ ಅತ್ಯುತ್ತಮ ವಯೊಲಿನ್ ತಯಾರಿಸುವವರು’ ಎನ್ನುವ ಫಲಕ ತನ್ನ ಅಂಗಡಿಯ ಮುಂದೆ ಹಾಕಿದ. ಅದನ್ನು ನೋಡಿದ ಮತ್ತೊಬ್ಬ ಅಂಗಡಿಯವ `ನಾವು ಜಗತ್ತಿನಲ್ಲಿಯೇ ಅತ್ಯುತ್ತಮ ವಯೊಲಿನ್ ತಯಾರಿಸುವವರು’ ಎನ್ನುವ ಫಲಕ ಹಾಕಿದ. ನಸ್ರುದ್ದೀನ್ ಈ ಎರಡೂ ಅಂಗಡಿಗಳ ಫಲಕ ನೋಡಿದ. ತಾನೂ ತನ್ನ ಅಂಗಡಿಯ ಮುಂದೆ ಒಂದು ಫಲಕ ಹಾಕಬೇಕೆಂದು ನಿರ್ಧರಿಸಿ, `ನಾವು ಈ ರಸ್ತೆಯಲ್ಲಿಯೇ ಅತ್ಯುತ್ತಮ ವಯೊಲಿನ್ ತಯಾರಿಸುವವರು’ ಎನ್ನುವ ಫಲಕ ಹಾಕಿದ. 

ಎಲ್ಲಿಗೆ ಹೋಗಿದ್ದೆ?
ನಸ್ರುದ್ದೀನ್ ಮಾಡಿದ್ದ ಯಾವುದೋ ತಪ್ಪಿಗಾಗಿ ಹದಿನಾಲ್ಕು ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಅವನಿಗೆ ಹನ್ನೆರಡು ವರ್ಷ ಜೈಲಿನಲ್ಲಿ ಕಳೆಯುವಷ್ಟರಲ್ಲಿ ಸಾಕು ಸಾಕಾಯಿತು. ಹೇಗಾದರೂ ಮಾಡಿ ಜೈಲಿನಿಂದ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿ ಒಂದು ದಿನ ಕಿಟಕಿಯ ಸರಳು ಕತ್ತರಿಸಿ, ಜೈಲಿನ ಮುಳ್ಳುತಂತಿ ಗೋಡೆ ಹಾರಿ ತಪ್ಪಿಸಿಕೊಂಡು ಓಡಿದ. ಹಾಗೂ ಹೀಗೂ ಮಾಡಿ ಮನೆ ತಲುಪಿದ. ಅವನ ಹೆಂಡತಿ ಅವನಿಗಾಗಿಯೇ ಕಾಯುತ್ತಿದ್ದಳು. ಅವನನ್ನು ನೋಡಿದ ತಕ್ಷಣ ಸಿಟ್ಟಿನಿಂದ, `ನೀನು ಜೈಲಿನಿಂದ ತಪ್ಪಿಸಿಕೊಂಡು ಎಂಟು ಗಂಟೆಗಳಾಗಿದೆಯೆಂದು ಸುದ್ದಿ ಬಿತ್ತರವಾಗುತ್ತಿದೆ. ಅಲೆದಾಡಲು ಇಷ್ಟೊತ್ತು ಎಲ್ಲಿಗೆ ಹೋಗಿದ್ದೆ ಹೇಳು!’ ಎಂದು ಗದರಿಸಿದಳು.

ತಪ್ಪಿಸಿಕೊಳ್ಳಲಾರದವ
ಆ ಊರಿನ ಸಾಹುಕಾರ ಸಿದ್ದಪ್ಪನ ಬಳಿ ಲೆಕ್ಕ ನೋಡಿಕೊಳ್ಳಲು ಇದ್ದ ಗುಮಾಸ್ತ ಒಂದು ದಿನ ಹಣಲಪಟಾಯಿಸಿ ಓಡಿ ಹೋದ. ಸಿದ್ದಪ್ಪ ತನ್ನ ಹಣದ ವ್ಯವಹಾರ ಮತ್ತು ಲೆಕ್ಕಗಳನ್ನು ನೋಡಿಕೊಳ್ಳಲು ಒಬ್ಬ ಒಳ್ಳೆಯ ಗುಮಾಸ್ತ ಬೇಕು, ಯಾರಾದರೂ ಅಂಥವರಿದ್ದರೆ ತಿಳಿಸುವಂತೆ ತನ್ನ ಗೆಳೆಯರಿಗೆಲ್ಲ ತಿಳಿಸಿದ. ಒಬ್ಬ ಗೆಳೆಯ ನಸ್ರುದ್ದೀನನ ಹೆಸರು ಸೂಚಿಸಿದ. `ನಸ್ರುದ್ದೀನ್ ಹಣ ಲಪಟಾಯಿಸಿ ಓಡಿ ಹೋಗುವುದಿಲ್ಲ ತಾನೆ?’ ಕೇಳಿದ ಸಿದ್ದಪ್ಪ. 

`ಅವನು ಎಲ್ಲಿಗೇ ಓಡಿಹೋದರೂ ಸಂಜೆ ಗಡಂಗಿನಲ್ಲಿ ಸಿಕ್ಕಿ ಬೀಳುತ್ತಾನೆ. ಅದಕ್ಕೆ ಅವನನ್ನು ಸೂಚಿಸಿದ್ದು’ ಎಂದ ಸಿದ್ದಪ್ಪನ ಗೆಳೆಯ.

ಸ್ವರ್ಗಕ್ಕೆ ದಾರಿ
ಆ ಊರಿಗೆ ಒಬ್ಬ ಧರ್ಮ ಗುರು ಬಂದಿದ್ದ. ಆ ದಿನ ಆತ ಸ್ವರ್ಗಕ್ಕೆ ಹೋಗುವುದು ಹೇಗೆ ಎನ್ನುವುದರ ಬಗ್ಗೆ ಉಪನ್ಯಾಸ ನೀಡುತ್ತಾನೆ ಎಂದು ಬಹಳ ಪ್ರಚಾರ ನೀಡಲಾಗಿತ್ತು. ನಸ್ರುದ್ದೀನ್ ಕುತೂಹಲದಿಂದ ತಾನೂ ಆ ದಿನ ಸಂಜೆ ಉಪನ್ಯಾಸಕ್ಕೆ ಹಾಜರಾದ. ಸ್ವರ್ಗಕ್ಕೆ ಹೋಗುವುದರ ಕುರಿತು ದೀರ್ಘ ಉಪನ್ಯಾಸ ನೀಡುತ್ತಿದ್ದ ಧರ್ಮಗುರು, `ನಾವು ಮನೆ, ಆಸ್ತಿ ಪಾಸ್ತಿ ಎಲ್ಲಾ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಮಸೀದಿಗೆ ಕೊಡುಗೆ ನೀಡಿದರೆ ಸ್ವರ್ಗಕ್ಕೆ ಹೋಗುತ್ತೇವೆಯೇ?’ ಎಂದು ನೆರೆದಿದ್ದ ಜನರನ್ನು ಕೇಳಿದರು.
`ಇಲ್ಲಾ’, ಜನರು ಒಕ್ಕೊರಲಿನಿಂದ ಕೂಗಿದರು.
`ದಿನವೂ ನಾವು ಮಸೀದಿಯನ್ನು ಗುಡಿಸಿ, ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರೆ ಸ್ವರ್ಗಕ್ಕೆ ಹೋಗುತ್ತೇವೆಯೇ?’ ಪುನಃ ಕೇಳಿದರು ಧರ್ಮಗುರುಗಳು.
`ಇಲ್ಲಾ’ ಜನರು ಹೇಳಿದರು.
`ಹಾಗಾದರೆ ನಾವು ಸ್ವರ್ಗಕ್ಕೆ ಹೋಗಬೇಕಾದರೆ ಏನು ಮಾಡಬೇಕು?’ ಇನ್ನೂ ಜೋರಾದ ದನಿಯಲ್ಲಿ ಧರ್ಮಗುರುಗಳು ಜನರನ್ನು ಕೇಳಿದರು.
ಜನರ ಬಳಿ ಉತ್ತರವಿರಲಿಲ್ಲ. ಸಭಾಂಗಣದಲ್ಲಿ ಮೌನವಿತ್ತು. ನಸ್ರುದ್ದೀನ್ ತಾನು ಉತ್ತರ ಹೇಳುತ್ತೇನೆಂದು ಕೈ ಮೇಲಕ್ಕೆತ್ತಿದ.
ನಸ್ರುದ್ದೀನನೆಡೆಗೆ ಅಸಡ್ಡೆಯಿಂದ ನೋಡಿದ ಧರ್ಮಗುರು, `ಹೇಳು, ಸ್ವರ್ಗಕ್ಕೆ ಹೋಗಬೇಕಾದರೆ ಏನು ಮಾಡಬೇಕು?’ ಎಂದರು.
`ಸ್ವರ್ಗಕ್ಕೆ ಹೋಗಬೇಕಾದರೆ ಮೊದಲು ನಾವು ಸಾಯಬೇಕು’ ಹೇಳಿದ ನಸ್ರುದ್ದೀನ್.
ಗುರುತು
ವಿದ್ವಾಂಸ ನಸ್ರುದ್ದೀನ್ ಮತ್ತು ಆ ಊರಿನ ಧರ್ಮಗುರು ಇಬ್ಬರಿಗೂ ಬದುಕು ನೀರಸವೆನ್ನಿಸುತ್ತಿತ್ತು. ಇಬ್ಬರೂ ರಹಸ್ಯವಾಗಿ ಗೋವಾಕ್ಕೆ ಹೋಗಿ ಮೋಜು ಮಸ್ತಿ ಮಾಡೋಣವೆಂದು ತೀರ್ಮಾನಿಸಿದರು. ಗೋವಾಕ್ಕೆ ಹೋದ ಇಬ್ಬರೂ ಯಾರಿಗೂ ಗುರುತು ಸಿಗಬಾರದೆಂದು ಚಡ್ಡಿ, ಅಂಗಿ, ಟೋಪಿ ಧರಿಸಿ ಕೈಯಲ್ಲಿ ಬಿಯರ್ ಹಿಡಿದು ಬೀಚ್‍ನಲ್ಲಿ ಸುತ್ತಾಡಲು ಹೊರಟರು. ಅವರ ಎದುರಿಗೆ ಬಂದ ಒಬ್ಬ ಸುಂದರ ಹಾಗೂ ಬಿಕಿನಿ ಧರಿಸಿದ್ದ ಯುವತಿಯೊಬ್ಬಳು ಇವರನ್ನು ನೋಡಿ, `ನಮಸ್ಕಾರ ಗುರುಗಳೇ! ಹೇಗಿದ್ದೀರಿ?’ ಎಂದು ಕೇಳಿ ಮುಂದಕ್ಕೆ ಹೊರಟಳು.

ಇವರಿಬ್ಬರಿಗೂ ಗಾಭರಿಯಾಯಿತು. ನಾವು ವಿದ್ವಾಂಸರು ಹಾಗೂ ಧರ್ಮಗುರುಗಳೆನ್ನುವುದು ಇವಳಿಗೆ ಹೇಗೆ ತಿಳಿಯಿತು? ಎಂದು ಆಲೋಚಿಸಿದ ಅವರು, ಮರುದಿನ ಇನ್ನೂ ಬಣ್ಣಬಣ್ಣದ ಚಡ್ಡಿ ಧರಿಸಿ, ಕಪ್ಪು ಕನ್ನಡಕ ಧರಿಸಿ, ಎದೆ ಬಿಸಿಲಿಗೆ ಬಿಟ್ಟು, ಬಿಯರ್ ಹಿಡಿದು ಬೀಚ್‍ನಲ್ಲಿ ಸುತ್ತಾಡಿದರು. ಪುನಃ ಎದುರಿಗೆ ಬಂದ ಅದೇ ಸುಂದರ ಯುವತಿ ಪುನಃ, `ನಮಸ್ಕಾರ ಗುರುಗಳೇ! ಗೋವಾ ಹೇಗಿದೆ?’ ಎಂದು ಕೇಳಿ ಮುಂದಕ್ಕೆ ಹೊರಟಳು.

`ಯಾರೀಕೆ? ಇವಳಿಗೆ ನಮ್ಮ ಗುರುತು ಹೇಗೆ ಸಿಗುತ್ತಿದೆ?’ ಎಂದು ಗಲಿಬಿಲಿಗೊಂಡ ಅವರಿಬ್ಬರೂ ಆ ಯುವತಿಯನ್ನು ತಡೆದು ನಿಲ್ಲಿಸಿ,

`ನೀನು ಯಾರಮ್ಮಾ? ನಿನಗೆ ಹೇಗೆ ನಮ್ಮ ಗುರುತು ಸಿಕ್ಕಿತು?’ ಎಂದು ಕೇಳಿದರು.

ಜೋರಾಗಿ ನಕ್ಕ ಆಕೆ, `ಯಾಕೆ ನಿಮಗೆ ನನ್ನ ಗುರುತು ಸಿಗಲಿಲ್ಲವೆ? ನಾನು ನಿಮ್ಮ ಊರಿನ ಆಶ್ರಮದ ಸಂನ್ಯಾಸಿ ಮಾತೆ ಮಾಯಾಂಗನೆ’ ಎಂದಳು.

ಸ್ವಂತ ಇಚ್ಛೆ
ನಸ್ರುದ್ದೀನನಿಗೆ ಮದುವೆ ವಯಸ್ಸಾದಾಗ ಸುಂದರ ಹುಡುಗಿ ಫಾತಿಮಾ ಅವನನ್ನು ನೋಡಿದಳು. ಒಂದಷ್ಟು ದಿನ ಜೊತೆಯಲ್ಲಿ ಸುತ್ತಾಡಿದರು. ಕೊನೆಗೆ ಮದುವೆಯಾಗಲು ನಿರ್ಧರಿಸಿ ಇಬ್ಬರೂ ನೋಂದಣಾಧಿಕಾರಿಗಳ ಕಚೇರಿಗೆ ಗೆಳೆಯರ ಜೊತೆ ಹೋದರು. ನೋಂದಣಾಧಿಕಾರಿಗಳು ಅವರಿಗೆ ಪ್ರಶ್ನಾವಳಿಯೊಂದನ್ನು ನೀಡಿ ಅದನ್ನು ಭರ್ತಿಮಾಡಲು ನಸ್ರುದ್ದೀನನಿಗೆ ನೀಡಿದರು. ಅದರಲ್ಲಿನ ಪ್ರಶ್ನೆಗಳಿಗೆ ಉತ್ತರವನ್ನು ಬರೆಯುತ್ತಿದ್ದ. ಅದರಲ್ಲಿ ಕೊನೆಗೆ, `ನೀವು ನಿಮ್ಮ ಸ್ವಂತ ಇಚ್ಛೆಯಿಂದ ಈ ಮದುವೆಗೆ ಒಪ್ಪಿದ್ದೀರಾ?’ ಎಂಬ ಪ್ರಶ್ನೆಯಿತ್ತು. ಉತ್ತರ ಬರೆಯುವ ಮೊದಲು ನಸ್ರುದ್ದೀನ್ ಫಾತಿಮಾ ಕಡೆಗೆ ನೋಡಿದ. 

`ಹೌದು ಎಂದು ಬರೆಯಿರಿ’, ಆಕೆ ಹೇಳಿದಳು.

ಮೂರನೇ ಮಗು
ನಸ್ರುದ್ದೀನ್ ಮತ್ತು ಫಾತಿಮಾರವರಿಗೆ ಮದುವೆಯಾದ ನಂತರ ಅವರಿಗೆ ಎಷ್ಟು ಮಕ್ಕಳು ಬೇಕು ಎನ್ನುವ ಕುರಿತು ಅವರಿಬ್ಬರ ನಡುವೆ ಚರ್ಚೆ ನಡೆಯಿತು. ನಸ್ರುದ್ದೀನ್ ಹೇಳಿದ, `ನಮಗೆ ಎರಡು ಮಕ್ಕಳು ಸಾಕು’. 

`ಇಲ್ಲ ನನಗೆ ಮೂವರು ಮಕ್ಕಳು ಬೇಕು’ ಹೇಳಿದಳು ಫಾತಿಮಾ.

`ಸಾಧ್ಯವೇ ಇಲ್ಲ. ಈ ಕಾಲದಲ್ಲಿ ಎರಡು ಮಕ್ಕಳನ್ನು ಸಾಕುವುದೇ ಕಷ್ಟ. ಎರಡನೇ ಮಗು ಹುಟ್ಟಿದ ಕೂಡಲೇ ನಾನು ಆಪರೇಶನ್ ಮಾಡಿಸಿಕೊಳ್ಳುತ್ತೇನೆ’ ಹೇಳಿದ ನಸ್ರುದ್ದೀನ್.

`ಆಯಿತು. ಆದರೆ ಮೂರನೇ ಮಗುವನ್ನು ನಿನ್ನ ಮಗುವಿನ ಹಾಗೆಯೇ ಸಾಕುತ್ತೀಯಾ ತಾನೆ?’ ಕೇಳಿದಳು ಫಾತಿಮಾ.

ಮೋಂಬತ್ತಿ
ನಸ್ರುದ್ದೀನ್ ಮತ್ತು ಫಾತಿಮಾರವರಿಗೆ ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಾಗಲಿಲ್ಲ. ಆ ಊರಿನ ಚರ್ಚಿನಲ್ಲಿ ಪ್ರಾರ್ಥಿಸಿದವರಿಗೆ ಮಕ್ಕಳಾಗುತ್ತವೆಂಬ ನಂಬಿಕೆ ಇತ್ತು. ನಸ್ರುದ್ದೀನ್ ಮತ್ತು ಫಾತಿಮಾ ಅಲ್ಲಿಗೆ ಹೋಗಿ ಪ್ರಾರ್ಥಿಸಿದರು ಹಾಗೂ ಅಲ್ಲಿದ್ದ ಪಾದ್ರಿಯವರನ್ನು ಸಹ ತಮಗೆ ಮಕ್ಕಳಾಗುವಂತೆ ಪ್ರಾರ್ಥಿಸಲು ಕೇಳಿದರು.

`ಖಂಡಿತಾ ಪ್ರಾರ್ಥಿಸುತ್ತೇನೆ. ಅಷ್ಟೇ ಅಲ್ಲ, ಮುಂದಿನ ವಾರ ನಾನು ವ್ಯಾಟಿಕನ್‍ಗೆ ಹೋಗುತ್ತಿದ್ದೇನೆ. ಅಲ್ಲಿ ಸಂತ ಪೀಟರನ ಬಳಿ ನಿಮಗೆ ಮಕ್ಕಳಾಗುವಂತೆ ಪ್ರಾರ್ಥಿಸಿ ಅಲ್ಲಿ ಒಂದು ಮೋಂಬತ್ತಿ ಹಚ್ಚಿ ಬರುತ್ತೇನೆ’ ಎಂದರು.

ಮೂರು ವರ್ಷಗಳ ನಂತರ ಪಾದ್ರಿ ಹಿಂದಿರುಗಿದಾಗ ಫಾತಿಮಾ ಎರಡು ಜೊತೆ ಅವಳಿ ಜವಳಿ ಮಕ್ಕಳನ್ನು ಹೆತ್ತಿರುವುದು ತಿಳಿದು ಪಾದ್ರಿಗೆ ಸಂತೋಷವಾಯಿತು. ಆಕೆಯನ್ನು ವಿಚಾರಿಸಿ ಆಕೆಯ ನಾಲ್ಕು ಮಕ್ಕಳನ್ನು ನೋಡಿದ ಪಾದ್ರಿ, ಆಕೆಯ ಗಂಡ ನಸ್ರುದ್ದೀನ್ ಎಲ್ಲಿದ್ದಾರೆ ಎಂದು ಕೇಳಿದರು.

`ನಸ್ರುದ್ದೀನ್ ವ್ಯಾಟಿಕನ್‍ಗೆ ಹೋಗಿದ್ದಾರೆ, ನೀವು ಹಚ್ಚಿರುವ ಮೋಂಬತ್ತಿ ಆರಿಸಿ ಬರುತ್ತೇನೆ’ ಎಂದಿದ್ದಾರೆ ಎಂದಳು ಫಾತಿಮಾ.

ಸುಂದರ ಬದುಕು
ನಸ್ರುದ್ದೀನ್ ಮತ್ತು ಫಾತಿಮಾ ಎಂದಿನಂತೆ ಯಾವುದೋ ಸಣ್ಣ ವಿಷಯಕ್ಕೆ ಜಗಳವಾಡಿದರು. ನಸ್ರುದ್ದೀನನೊಂದಿಗೆ ಮಾತನಾಡುವುದನ್ನು ನಿಲ್ಲಿಸಬೇಕೆಂದು ನಿರ್ಧರಿಸಿದ ಫಾತಿಮಾ ಅವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ಒಂದು ವಾರ ಕಳೆಯಿತು. ಒಂದು ದಿನ ಬೆಳಿಗ್ಗೆ ನಸ್ರುದ್ದೀನ್, `ಫಾತಿಮಾ ನನ್ನ ಅಂಗಿ ಎಲ್ಲಿ?’ ಎಂದು ಕೇಳಿದ.

`ಹಾ! ಅಂತೂ ನೀನೇ ಮೊದಲು ಮಾತನಾಡಿದೆಯಲ್ಲಾ?’ ಎಂದು ಕೇಳಿದಳು.

`ಏಕೆ? ಏನಾಯಿತು?’ ಕೇಳಿದ ನಸ್ರುದ್ದೀನ್.

`ಹೌದೆ? ತಿಳಿಯಲಿಲ್ಲವೆ? ನಾನು ನಿನ್ನೊಂದಿಗೆ ಮಾತನಾಡುವುದು ಬಿಟ್ಟು ಒಂದು ವಾರವಾಯಿತಲ್ಲಾ?’ ಹೇಳಿದಳು ಫಾತಿಮಾ.

`ಹೌದಲ್ಲಾ... ಅದೇ ನಾನು ಯೋಚಿಸುತ್ತಿದ್ದೆ, ಬದುಕು ಅದು ಹೇಗೆ ಇದ್ದಕ್ಕಿದ್ದಂತೆ ಸುಂದರವಾಯಿತು? ಎಂದು. ಈಗ ತಿಳಿಯಿತುಹೇಳಿದ ನಸ್ರುದ್ದೀನ್.
j.balakrishna@gmail.com

ಮಂಗಳವಾರ, ಮೇ 10, 2016

ಮುಲ್ಲಾ ನಸ್ರುದ್ದೀನ್ ಕತೆಗಳ 47ನೇ ಕಂತು

`ಸಂವಾದ' ಪತ್ರಿಕೆಯ ಮೇ 2016ರ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 47ನೇ ಕಂತು.
ಧ್ಯಾನೋದ್ಯೋಗ
ಒಂದು ದಿನ ಸಂಜೆ ನಸ್ರುದ್ದೀನ್ ವಾಯುವಿಹಾರ ಮಾಡುತ್ತಿದ್ದಾಗ ಅಬ್ದುಲ್ಲಾ ಎದುರಾದ. ಇಬ್ಬರೂ ಉಭಯ ಕುಶಲೋಪರಿ ವಿಚಾರಿಸಿಕೊಂಡರು.
`ನಸ್ರುದ್ದೀನ್, ನಿನ್ನ ಮಗ ಹೇಗಿದ್ದಾನೆ? ಅವನಿಗೆ ಏನಾದರೂ ಉದ್ಯೋಗ ಸಿಕ್ಕಿತೇ ಅಥವಾ ಇನ್ನೂ ನಿರುದ್ಯೋಗಿಯಾಗಿಯೇ ಇದ್ದಾನೆಯೆ?’ ಕೇಳಿದ ಅಬ್ದುಲ್ಲಾ.
`ಹೇ ಇಲ್ಲಾ, ಈಗ ಕೂತು ಧ್ಯಾನ ಮಾಡುತ್ತಿದ್ದಾನೆ’, ಹೇಳಿದ ನಸ್ರುದ್ದೀನ್.
`ಧ್ಯಾನ? ಏನು ಹಾಗಂದರೆ?’ ಕೇಳಿದ ಅಬ್ದುಲ್ಲಾ.
`ಉಂಡಾಡಿ ಗುಂಡನಂತೆ ಸುಮ್ಮನೇ ಕೂತು ಏನೂ ಮಾಡದಿರುವುದಕ್ಕಿಂತ ಅದು ವಾಸಿಹೇಳಿದ ನಸ್ರುದ್ದೀನ್.
ಸಾಧನೆ ಮತ್ತು ವಿವೇಕ
ನಸ್ರುದ್ದೀನ್ ಮತ್ತು ಅವನ ಇಬ್ಬರು ಗೆಳೆಯರು ಸಂನ್ಯಾಸಿಗಳಾಗೋಣವೆಂದು ತೀರ್ಮಾನಿಸಿ ಸಾಧನೆಗೆಂದು ಪರ್ವತ ಗುಹೆಗಳನ್ನರಸಿ ಹೊರಟರು. ಹೊರಡುವ ಮೊದಲು ಐದು ವರ್ಷಗಳ ತಮ್ಮ ಸಾಧನೆಯ ನಂತರ ಪುನಃ ಅದೇ ಸ್ಥಳದಲ್ಲಿ ಭೇಟಿಯಾಗಲು ನಿರ್ಧರಿಸಿ ಹೊರಟರು.
ಐದು ವರ್ಷಗಳ ನಂತರ ಆ ಮೂರು ಜನ ಮೊದಲೇ ನಿರ್ಧರಿಸಿದ ಸಮಯ ಮತ್ತು ಸ್ಥಳದಲ್ಲಿ ಭೇಟಿಯಾದರು ಮತ್ತು ತಮ್ಮ ತಮ್ಮ ಸಾಧನೆಗಳ ಬಗೆಗೆ ಹೇಳಿಕೊಳ್ಳತೊಡಗಿದರು.
ಒಬ್ಬ ಹೇಳಿದ: `ನಾನು ಮಹತ್ಸಾಧನೆ ಮಾಡಿದ್ದೇನೆ. ನನ್ನ ಸಾಧನೆಯಿಂದ ನಾನು ಆಹಾರ ಸೇವಿಸದೆ ಎಷ್ಟು ದಿನ ಬೇಕಾದರೂ ಇರಬಲ್ಲೆ’.
ಮತ್ತೊಬ್ಬಾತ ಹೇಳಿದ: `ನನ್ನ ಸಾಧನೆಯೇನೂ ಕಡಿಮೆಯಿಲ್ಲ! ನಾನು ನನ್ನ ಸಾಧನೆಯಿಂದ ನಿದ್ರೆ ಮಾಡದೆ ಎಷ್ಟು ದಿನ ಬೇಕಾದರೂ ಇರಬಲ್ಲೆ’.
ಅವರಿಬ್ಬರೂ ನಸ್ರುದ್ದೀನನ ಸಾಧನೆಯೇನೆಂದು ಕೇಳಿದರು.
`ನನ್ನ ಸಾಧನೆಯಿಂದ ನಾನು ವಿವೇಕವನ್ನು ಗಳಿಸಿದ್ದೇನೆ. ಅದರಿಂದಾಗಿ ನನಗೆ ಹಸಿವಾದಾಗ ಊಟ ಮಾಡುತ್ತೇನೆ, ಬಳಲಿಕೆಯಾದಾಗ ನಿದ್ರೆ ಮಾಡುತ್ತೇನೆಎಂದ ನಸ್ರುದ್ದೀನ್.

ಮರೆವು
ನಸ್ರುದ್ದೀನ್ ಮತ್ತು ಅವನ ಪತ್ನಿ ಫಾತಿಮಾ ಇಬ್ಬರೂ ಮುದುಕರಾಗಿದ್ದರು. ಅವರಿಗೆ ವಯಸ್ಸಾದಂತೆ ಮರೆವು ಹೆಚ್ಚಾಗಿತ್ತು. ಇಬ್ಬರೂ ವೈದ್ಯರ ಬಳಿ ಹೋದರು. ಅವರಿಬ್ಬರನ್ನೂ ಪರೀಕ್ಷಿಸಿದ ವೈದ್ಯರು, `ನಿಮ್ಮ ದೈಹಿಕ ಆರೋಗ್ಯ ಚೆನ್ನಾಗಿದೆ. ವಯಸ್ಸಿನ ಕಾರಣದಿಂದಾಗಿ ನಿಮಗೆ ಮರೆವು ಹೆಚ್ಚಾಗಿದೆ. ಅದಕ್ಕೆ ಯಾವ ಔಷಧವೂ ಕೆಲಸ ಮಾಡುವುದಿಲ್ಲ. ನೀವು ಯಾವುದನ್ನು ಮರೆಯಬಾರದೆಂದುಕೊಂಡಿರುತ್ತೀರೋ ಅದನ್ನು ಒಂದು ಚೀಟಿಯಲ್ಲಿ ಬರೆದಿಟ್ಟುಕೊಳ್ಳಿ, ಅದನ್ನು ನೋಡಿದಾಗ ನಿಮಗೆ ನೆನಪಾಗುತ್ತಿರುತ್ತದೆಎಂದು ಸಲಹೆ ನೀಡಿದರು.
ಆ ದಿನ ರಾತ್ರಿ ಗಂಡ ಹೆಂಡತಿ ಇಬ್ಬರೂ ಕುಳಿತಿದ್ದಾಗ ನಸ್ರುದ್ದೀನ್ ಎದ್ದು ಹೊರಟ.
`ಎಲ್ಲಿಗೆ?’ ಕೇಳಿದಳು ಫಾತಿಮಾ.
`ಅಡುಗೆ ಮನೆಗೆ’, ಹೇಳಿದ ನಸ್ರುದ್ದೀನ್.
`ಹಾಗಾದರೆ ಬರುವಾಗ ಒಲೆಯ ಮೇಲೆ ಹಾಲಿಟ್ಟಿದ್ದೇನೆ. ಒಂದು ಲೋಟಾಕ್ಕೆ ಹಾಕಿಕೊಂಡು ತೆಗೆದುಕೊಂಡು ಬಾ’, ಹೇಳಿದಳು ಫಾತಿಮಾ.
`ಆಯಿತುಎಂದ ನಸ್ರುದ್ದೀನ್.
`ಅದಕ್ಕೆ ಸಕ್ಕರೆ ಹಾಕಿಕೊಂಡು ಬಾ. ಮರೆಯ ಬೇಡ. ಬೇಕಾದರೆ ಒಂದು ಚೀಟಿಯಲ್ಲಿ ಅದನ್ನು ಬರೆದುಕೊಂಡು ಹೋಗು ಎಂದಳುಎಂದಳು ಫಾತಿಮಾ.
`ಬೇಡ ನನಗೆ ನೆನಪಿರುತ್ತದೆಎಂದ ನಸ್ರುದ್ದೀನ್.
ಅಡುಗೆ ಮನೆಯಿಂದ ಬಂದ ನಸ್ರುದ್ದೀನ್, `ತಗೋ ನಿನಗೆ ಕುಡಿಯಲು ನೀರು ಬೇಕೆಂದು ಕೇಳಿದ್ದೆಯಲ್ಲಾ, ಇಲ್ಲಿದೆಎಂದು ನೀರಿನ ಲೋಟ ನೀಡಿದ.
`ಇದೇನು ನೀರು ತಂದಿದ್ದೀಯಾ? ಅದಕ್ಕೇ ನಿನಗೆ ಚೀಟಿಯಲ್ಲಿ ಬರೆದುಕೊಂಡು ಹೋಗು ಎಂದು ಹೇಳಿದ್ದು. ನಾನು ಬಾಟಲಿಯಲ್ಲಿರುವ ಶರಬತ್ ಕುಡಿಯಲು ತೆಗೆದುಕೊಂಡು ಬಾ ಎಂದು ನಿನಗೆ ಹೇಳಿದ್ದಲ್ಲವೆ?’ ಕೇಳಿದಳು ಫಾತಿಮಾ.

ಭಯಂಕರ ಕಾಯಿಲೆ
ನಸ್ರುದ್ದೀನನಿಗೆ ವಯಸ್ಸಾಗಿತ್ತು. ವೈದ್ಯರ ಬಳಿ ಪರೀಕ್ಷೆಗೆಂದು ಹೋದ. ಅವನನ್ನು ಚೆನ್ನಾಗಿ ಪರೀಕ್ಷಿಸಿದ ವೈದ್ಯರು ನಸ್ರುದ್ದೀನನನ್ನು ಎದುರಿಗೆ ಕೂಡ್ರಿಸಿಕೊಂಡು,
`ನಾನು ವಿಷಾದದಿಂದ ನಿಮಗೆ ಎರಡು ಕೆಟ್ಟ ಸುದ್ದಿ ಹೇಳಬೇಕಾಗಿದೆಎಂದರು.
ಚಿಂತಿತನಾದ ನಸ್ರುದ್ದೀನ್, `ಆಯಿತು, ಮೊದಲಿಗೆ ಅವುಗಳಲ್ಲಿ ಅತ್ಯಂತ ಕೆಟ್ಟ ಸುದ್ದಿಯನ್ನೇ ಹೇಳಿಎಂದ.
`ನಿಮಗೆ ಏಡ್ಸ್ ಕಾಯಿಲೆ ಇದೆ. ಇನ್ನು ಬೆರಳಣಿಕೆಯಷ್ಟೇ ನಿಮ್ಮ ದಿನಗಳುಎಂದರು ವೈದ್ಯರು.
`ಅದಕ್ಕಿಂತ ಕೆಟ್ಟ ಸುದ್ದಿ ಮತ್ತಾವುದಿರಲು ಸಾಧ್ಯ. ಮತ್ತೊಂದು ಕೆಟ್ಟ ಸುದ್ದಿಯನ್ನೂ ಹೇಳಿಬಿಡಿಎಂದ ನಸ್ರುದ್ದೀನ್.
`ನಿಮಗೆ ಮರೆವಿನ ಕಾಯಿಲೆ ಇದೆಹೇಳಿದರು ವೈದ್ಯರು.
`ಹೌದೆ! ಇರಲಿಬಿಡಿ, ಸಧ್ಯ ನನಗೆ ಏಡ್ಸ್‍ನಂಥ ಭಯಂಕರ ಕಾಯಿಲೆ ಇಲ್ಲವಲ್ಲ!ಸಂತೋಷದಿಂದ ಹೇಳಿದ ನಸ್ರುದ್ದೀನ್.
ಕೀಲು ನೋವು
ನಸ್ರುದ್ದೀನ್ ಕಂಠಪೂರ್ತಿ ಕುಡಿತು ತೂರಾಡುವಂತಿದ್ದ. ಅವನ ಬಟ್ಟೆ ಎಲ್ಲಾ ಗಲೀಜಾಗಿತ್ತು, ತಲೆಗೂದಲು ಕೆದರಿತ್ತು. ಮೈಯಿಂದ ವಿಚಿತ್ರ ವಾಸನೆ ಬರುತ್ತಿತ್ತು. ಗಡಂಗಿನಿಂದ ಹೊರಬಂದು ಮನೆಗೆ ಹೋಗಲು ನಿಂತಿದ್ದ. ಅಲ್ಲೇ ಕಲ್ಲುಬೆಂಚಿನ ಮೇಲೆ ಒಬ್ಬರು ಹಕೀಮರು ಕೂತಿದ್ದರು ಹಾಗೂ ಅವರು ವೃತ್ತಪತ್ರಿಕೆ ಓದುತ್ತಿದ್ದರು. ಅವರು ಎಲ್ಲ ಕಾಯಿಲೆಗಳಿಗೆ ಔಷಧಿ ಕೊಡುವಂಥವರು. ನಸ್ರುದ್ದೀನನಿಗೆ ಅವರನ್ನು ಮಾತನಾಡೋಣವೆನ್ನಿಸಿತು. ಅವರ ಬಳಿ ಹೋಗಿ,
`ಸ್ವಾಮಿ ಕೀಲು ನೋವು ಏಕೆ ಬರುತ್ತದೆ?’ ಎಂದು ಕೇಳಿದ.
ಆ ಹಕೀಮ ನಸ್ರುದ್ದೀನನನ್ನು ತಲೆಯಿಂದ ಕಾಲಿನವರೆಗೆ ನೋಡಿದ. ಅವನು ಚೆನ್ನಾಗಿ ಕುಡಿದಿರುವುದು ತಿಳಿಯಿತು.
`ನೋಡಿ, ಕೀಲುನೋವು ಬರುವುದು ಸಿಕ್ಕಾಪಟ್ಟೆ ಕುಡಿಯುವುದರಿಂದ, ವೇಶ್ಯೆಯರ ಸಹವಾಸ ಮಾಡುವುದರಿಂದ, ಸ್ನಾನಮಾಡದೆ ಮೈ ವಾಸನೆ ಹಿಡಿಸಿಕೊಂಡು ಗಲೀಜಾಗಿರುವುದರಿಂದಎಂದು ನಸ್ರುದ್ದೀನನನ್ನು ನೋಡುತ್ತಾ ಬೇಕೆಂದೇ ಹೇಳುತ್ತಾ, `ನಿಮಗೆ ಎಷ್ಟು ದಿನಗಳಿಂದ ಕೀಲು ನೋವಿದೆ?’ ಎಂದು ಕೇಳಿದ.
`ಇಲ್ಲ, ನನಗೆ ಕೀಲು ನೋವಿಲ್ಲ. ನಮ್ಮ ರಾಜ್ಯದ ಮಂತ್ರಿಗಳಿಗೆ ಕೀಲುನೋವಿದೆ ಎಂದು ನೀವು ಓದುತ್ತಿರುವ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದಕ್ಕೇ ಕೇಳಿದೆ ಅಷ್ಟೆಎಂದು ಹೇಳಿದ ನಸ್ರುದ್ದೀನ್.

ದೇವರು ಎಲ್ಲಿದ್ದಾನೆ?
ನಸ್ರುದ್ದೀನ್ ಸಣ್ಣವನಿದ್ದಾಗ ಒಂದು ದಿನ ಅವನ ಶಾಲೆಯಲ್ಲಿ ಅಧ್ಯಾಪಕರು ಮಕ್ಕಳನ್ನು, `ಮಕ್ಕಳೇ ದೇವರು ಎಲ್ಲಿದ್ದಾನೆ ಹೇಳಿಎಂದು ಕೇಳಿದರು.
ಒಬ್ಬ ವಿದ್ಯಾರ್ಥಿ ಹೇಳಿದ, `ದೇವರು ಸ್ವರ್ಗದಲ್ಲಿದ್ದಾನೆ’.
ಮತ್ತೊಬ್ಬ ವಿದ್ಯಾರ್ಥಿ ಹೇಳಿದ, `ದೇವರು ನನ್ನ ಹೃದಯದಲ್ಲಿದ್ದಾನೆ’. ಅಧ್ಯಾಪಕರಿಗೆ ಸಂತೋಷವಾಯಿತು.
ನಸ್ರುದ್ದೀನ್ ತನ್ನ ಕೈ ಮೇಲೆತ್ತಿದ. `ನಸ್ರುದ್ದೀನ್ ನೀನು ಹೇಳು, ದೇವರು ಎಲ್ಲಿದ್ದಾನೆ?’ ಕೇಳಿದರು ಅಧ್ಯಾಪಕರು.
`ದೇವರು ನಮ್ಮ ಮನೆಯ ಬಾತ್‍ರೂಮಿನಲ್ಲಿದ್ದಾನೆ’, ಹೇಳಿದ ನಸ್ರುದ್ದೀನ್.
ಗಾಭರಿಗೊಂಡ ಅಧ್ಯಾಪಕರು ಕೇಳಿದರು, `ನಿಮ್ಮ ಮನೆಯ ಬಾತ್‍ರೂಮಿನಲ್ಲೇ? ಅದು ಹೇಗೆ ಸಾಧ್ಯ?’
`ಗೊತ್ತಿಲ್ಲ ಸಾರ್. ನಾನು ದಿನಾ ಬೆಳಿಗ್ಗೆ ಸ್ನಾನ ಮಾಡುವಾಗ ನಮ್ಮಪ್ಪ ಬಾಗಿಲು ಬಡಿಯುತ್ತಾ, `ಹೋ ದೇವರೇ! ನೀನಿನ್ನೂ ಒಳಗೇ ಇದ್ದೀಯಾ?’ ಎಂದು ಅರಚುತ್ತಿರುತ್ತಾರೆಹೇಳಿದ ಬಾಲಕ ನಸ್ರುದ್ದೀನ್.

ಪ್ರಾಮಾಣಿಕತೆ
ಆ ಊರಿಗೆ ಧರ್ಮಗುರುಗಳು ಬಂದಿದ್ದರು. ವಿದ್ವಾಂಸ ನಸ್ರುದ್ದೀನನ ಜೊತೆ ಸಂಜೆ ಅದೂ ಇದೂ ಮಾತನಾಡುತ್ತಾ ವಾಯುವಿಹಾರ ಮಾಡುತ್ತಿದ್ದರು. ಎದುರಿಗೆ ಗಡಂಗೊಂದು ಕಂಡುಬಂದಿತು. ಅವರಿಬ್ಬರಿಗೂ ಕುಡಿಯಬೇಕೆನ್ನಿಸಿತು. ಆದರೆ ಇಬ್ಬರ ಬಳಿಯೂ ಹಣವಿರಲಿಲ್ಲ. ಧರ್ಮಗುರುಗಳು ಹೇಳಿದರು, `ನಾನೊಂದು ಪ್ಲಾನ್ ಮಾಡುತ್ತೇನೆ ನೋಡುಎಂದು ಹೇಳಿ ಗಡಂಗಿನ ಒಳಕ್ಕೆ ಹೋದರು. ನಸ್ರುದ್ದೀನ್ ದೂರದಿಂದಲೇ ನೋಡುತ್ತಿದ್ದ.
ಧರ್ಮಗುರುಗಳು ಒಂದೆರಡು ಪೆಗ್ ಆರ್ಡರ್ ಮಾಡಿ ಕುಡಿದು ಹೊರಡಲು ಎದ್ದುನಿಂತರು. ಗಡಂಗಿನವ ಎಷ್ಟು ದುಡ್ಡುಕೊಡಬೇಕೆಂದು ಹೇಳಿದ.
`ನಾನಾಗಲೇ ನಿನಗೆ ಹಣಕೊಟ್ಟೆನಲ್ಲಾ?’ ಹೇಳಿದರು ಧರ್ಮಗುರುಗಳು.
ಧರ್ಮಗುರುಗಳು ಸುಳ್ಳು ಹೇಳುವುದಿಲ್ಲವೆಂದು ನಂಬಿದ ಗಡಂಗಿನವ `ಹೌದು, ನಾನು ಮರೆತೇ ಬಿಟ್ಟೆ. ನನಗೆ ಕೆಲಸ ಕೊಂಚ ಹೆಚ್ಚೇ ಇದೆ. ಕ್ಷಮಿಸಿಎಂದು ಹೇಳಿ ಧರ್ಮಗುರುಗಳನ್ನು ನಮಸ್ಕರಿಸಿ ಬೀಳ್ಕೊಟ್ಟ.
ನಂತರ ವಿದ್ವಾಂಸ ನಸ್ರುದ್ದೀನ್ ಗಡಂಗಿನವನ ಬಳಿ ಹೋಗಿ ತಾನೂ ಎರಡು ಪೆಗ್ ಆರ್ಡರ್ ಮಾಡಿದ. ಕುಡಿದು ಹೊರಡುವ ಸಮಯದಲ್ಲಿ ಗಡಂಗಿನವ ಎಷ್ಟು ದುಡ್ಡುಕೊಡಬೇಕೆಂದು ಹೇಳಿದ.
`ನಾನಾಗಲೇ ಆರ್ಡರ್ ಮಾಡುವಾಗಲೇ ನಿನಗೆ ಹಣಕೊಟ್ಟೆನಲ್ಲಾ?’ ಹೇಳಿದರು ವಿದ್ವಾಂಸ ನಸ್ರುದ್ದೀನ್.
ವಿದ್ವಾಂಸರು ಸುಳ್ಳು ಹೇಳುವುದಿಲ್ಲವೆಂದು ನಂಬಿದ ಗಡಂಗಿನವ `ಹೌದು, ನೀವು ಮೊದಲೇ ಹಣ ಕೊಟ್ಟಿರಿ ನಾನು ಮರೆತೇ ಬಿಟ್ಟೆ. ನನಗೆ ಕೆಲಸ ಕೊಂಚ ಹೆಚ್ಚೇ ಇದೆ. ಕ್ಷಮಿಸಿಎಂದು ಹೇಳಿದ.
`ಸರಿ ನಾನು ಬೇಗ ಹೊರಡಬೇಕು, ನಿನಗೆ ಐನೂರು ರೂಪಾಯಿ ನೋಟು ಕೊಟ್ಟಿದ್ದೆ. ಚಿಲ್ಲರೆ ವಾಪಸ್ಸು ಕೊಟ್ಟರೆ ನಾನು ಹೊರಡುತ್ತೇನೆಹೇಳಿದರು ವಿದ್ವಾಂಸ ನಸ್ರುದ್ದೀನ್ ಸಾಹೇಬರು.

ಎಂಟನೇ ಮೀನು
ಗಡಂಗಿನ ಪಕ್ಕದಲ್ಲಿ ಒಂದು ಸಣ್ಣ ಬತ್ತಿಹೋಗುತ್ತಿರುವ ಕೊಳವಿತ್ತು. ಮುದುಕ ನಸ್ರುದ್ದೀನ್ ಅಲ್ಲಿ ಕೂತು ಮೀನು ಹಿಡಿಯಲು ಗಾಳ ಹಾಕಿ ಕೂತಿದ್ದ. ಗಡಂಗಿಗೆ ಬಂದ ಒಬ್ಬ ಸಭ್ಯ ವ್ಯಕ್ತಿ ನಸ್ರುದ್ದೀನನನ್ನು ನೋಡಿ `ಆ ಮುದುಕನಿಗೆ ಅಲ್ಲಿ ಯಾವ ಮೀನು ಸಿಗಲು ಸಾಧ್ಯಎನ್ನಿಸಿ ಆ ಮುದುಕ ನಸ್ರುದ್ದೀನನನ್ನು ಗಡಂಗಿಗೆ ಕರೆದುಕೊಂಡು ಹೋಗಿ ಅವನಿಗೂ ಕುಡಿಯಲು ಕೊಡಿಸಿದ. ನೋಡೋಣವೆಂದು,
`ಬೆಳಿಗ್ಗೆಯಿಂದ ನಿಮಗೆ ಆ ಕೊಳದಲ್ಲಿ ಎಷ್ಟು ಮೀನು ಸಿಕ್ಕವು?’ ಎಂದು ಆ ಸಭ್ಯ ವ್ಯಕ್ತಿ ಹೇಳಿದ.
`ನಿಜ ಹೇಳಬೇಕೆಂದರೆ ಬೆಳಗಿನಿಂದ ನೀವು ಎಂಟನೆಯವರುಹೇಳಿದ ಮುದುಕ ನಸ್ರುದ್ದೀನ್.

ಪ್ರೀತಿಸುತ್ತೇನೆ
ಒಂದು ದಿನ ಸಂಜೆ ಮನೆಯಲ್ಲಿ ನಸ್ರುದ್ದೀನ್ ಕೂತು ಬಾಟಲಿ ಹಿಡಿದುಕೊಂಡು ಮದ್ಯಪಾನ ಮಾಡತೊಡಗಿದ್ದ. ಫಾತಿಮಾ ಅದೇನೋ ಓದುತ್ತಿದ್ದಳು. ಸ್ವಲ್ಪ ಹೊತ್ತಿನ ಬಳಿಕೆ ನಸ್ರುದ್ದೀನ್ ಹೇಳಿದ,
`ನಾನು ನಿನ್ನನ್ನು ಪ್ರೀತಿಸುತ್ತೇನೆ’.
ಅದನ್ನು ಕೇಳಿಸಿಕೊಂಡ ಫಾತಿಮಾ, `ಆ ಮಾತನ್ನು ಹೇಳುತ್ತಿರುವುದು ನೀನೋ ಅಥವಾ ನಿನ್ನ ಕೈಯಲ್ಲಿರುವ ಬಾಟಲಿಯೋ?’ ಎಂದು ಕೇಳಿದಳು.
`ಆ ಮಾತನ್ನು ಹೇಳಿದ್ದು ನಾನೇ’, ಹೇಳಿದ ನಸ್ರುದ್ದೀನ್, `ನಾನು ಅದನ್ನು ನನ್ನ ಬಾಟಲಿಗೆ ಹೇಳುತ್ತಿದ್ದೇನೆ’.

ವೈದ್ಯಕೀಯ ಪದ
ನಸ್ರುದ್ದೀನನಿಗೆ ಇತ್ತೀಚೆಗೆ ಮನೆಯಲ್ಲಿ ಯಾವ ಕೆಲಸವೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ತನಗೆ ಏನೋ ಆರೋಗ್ಯದ ಸಮಸ್ಯೆಯಿದೆ ಎಂದು ಪರೀಕ್ಷೆಗೆಂದು ವೈದ್ಯರ ಬಳಿ ಹೋದ. ನಸ್ರುದ್ದೀನನನ್ನು ಚೆನ್ನಾಗಿ ಪರೀಕ್ಷಿಸಿದ ವೈದ್ಯರು,
`ನಸ್ರುದ್ದೀನ್, ನಿನಗೆ ಯಾವ ಆರೋಗ್ಯದ ಸಮಸ್ಯೆಯೂ ಇಲ್ಲ. ನಿನಗೆ ಕೆಲಸ ಮಾಡಲು ಸೋಮಾರಿತನವಷ್ಟೇ!ಎಂದು ಹೇಳಿದರು.

`ಅದು ನನಗೂ ಗೊತ್ತು’, ಹೇಳಿದ ನಸ್ರುದ್ದೀನ್, `ಆದರೆ ಅದನ್ನು ನನ್ನ ಪತ್ನಿಗೆ ಹೇಳಲು ಅದಕ್ಕೊಂದು ವೈದ್ಯಕೀಯ ಪದ ಹೇಳಿಎಂದ ನಸ್ರುದ್ದೀನ್.





ಮಂಗಳವಾರ, ಜನವರಿ 12, 2016

ಮುಲ್ಲಾ ನಸ್ರುದ್ದೀನ್ ಕತೆಗಳ 46ನೇ ಕಂತು

ಜನವರಿ 2016ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳು 

ನಿಮಿಷದ ಕೆಲಸ
ದಂತ ವೈದ್ಯ ನಸ್ರುದ್ದೀನನ ಬಳಿ ಒಬ್ಬ ರೋಗಿ ಬಂದಿದ್ದ. ಆತನಿಗೆ ತೀರಾ ಹುಳುಕಾಗಿದ್ದ ಒಂದು ಹಲ್ಲಿತ್ತು. ಅದನ್ನು ನಸ್ರುದ್ದೀನ್ ಕಿತ್ತು ತೆಗೆದು ಶುಲ್ಕ ಸಾವಿರ ರೂಪಾಯಿಯೆಂದು ಹೇಳಿದ.
`ಸಾವಿರ ರೂಪಾಯಿ! ಅದೂ ಒಂದು ನಿಮಿಷಕ ಕೆಲಸಕ್ಕೆ!’ ಎಂದು ಗೊಣಗಿದ ರೋಗಿ.
`ಹೇ, ಹಾಗೇನಿಲ್ಲ. ನಿಮಗೆ ಬೇಕೆಂದಿದ್ದರೆ ಅದೇ ಹಲ್ಲನ್ನು ನಾನು ನಿಧಾನವಾಗಿ ಒಂದು ಗಂಟೆ ಕೀಳುತ್ತಿದ್ದೆ’ ಎಂದ ವೈದ್ಯ ನಸ್ರುದ್ದೀನ್.

ಲೈಂಗಿಕ ಕ್ರಿಯೆ
ನಸ್ರುದ್ದೀನನನ್ನು ತೀರಾ ಬಳಲಿಕೆ ಕಾಡುತ್ತಿತ್ತು. ವೈದ್ಯರ ಬಳಿ ಪರೀಕ್ಷೆಗೆಂದು ಹೋದ. ಎಲ್ಲಾ ಪರೀಕ್ಷೆ ಮಾಡಿದ ವೈದ್ಯರಿಗೆ ನಸ್ರುದ್ದೀನನಲ್ಲಿ ಯಾವ ಐಬೂ ಕಾಣಲಿಲ್ಲ. ಆದರೂ ಇರಲಿ ಎಂದು, `ನಿಮ್ಮ ಲೈಂಗಿಕ ಕ್ರಿಯೆಯೇ ನಿಮ್ಮ ಬಳಲಿಕೆಗೆ ಕಾರಣವೆನ್ನಿಸುತ್ತದೆ. ನೀವು ಅದನ್ನು ಅರ್ಧದಷ್ಟು ಕಡಿಮೆ ಮಾಡಿ’ ಎಂದು ಸಲಹೆ ನೀಡಿದರು.
`ಯಾವ ಲೈಂಗಿಕ ಕ್ರಿಯೆ ಕಡಿಮೆ ಮಾಡಲಿ? ಅದರ ಬಗ್ಗೆ ಆಲೋಚಿಸುವುದೋ ಅಥವಾ ಅದರ ಬಗ್ಗೆ ಮಾತನಾಡುವುದೋ?’ ಕೇಳಿದ ನಸ್ರುದ್ದೀನ್.

ತೀರ್ಮಾನ
ಒಂದು ನಿರ್ದಿಷ್ಟ ದಿನಾಂಕದಂದು ಇಡೀ ಜಗತ್ತೇ ಪ್ರವಾಹದಲ್ಲಿ ಮುಳುಗಿ ಹೋಗುತ್ತದೆಂದು ಬಹಳ ಹಿಂದೆಯೇ ಭವಿಷ್ಯ ನುಡಿಯಲಾಗಿತ್ತು. ದಿನಾಂಕದ ಒಂದು ವಾರ ಮೊದಲು ಊರಿನ ಎಲ್ಲ ಧರ್ಮಗಳ ಮುಖಂಡರು ಊರಿನ ಜನರನ್ನೆಲ್ಲಾ ಒಂದೆಡೆ ಸೇರಿಸಿದರು. ಹಿಂದೂ ಧಾರ್ಮಿಕ ಮುಖಂಡ ಜನರನ್ನುದ್ದೇಶಿಸಿ ಮಾತನಾಡಿ ಹಿಂದೂ ಧರ್ಮಕ್ಕೆ ಮಾತ್ರ ಜನರನ್ನು ಪ್ರವಾಹದಿಂದ ಉಳಿಸಲು ಸಾಧ್ಯವೆಂದು ತಿಳಿಸಿ ಜನ ತಾವು ಬದುಕುಳಿಯಬೇಕಾದರೆ ಎಲ್ಲರೂ ಹಿಂದೂ ಧರ್ಮಕ್ಕೆ ಮತಾಂತರ ಹೊಂದಬೇಕೆಂದು ಘೋಷಿಸಿದ. ಅದಾದ ನಂತರ ಮುಸಲ್ಮಾನ ಮುಖಂಡರೂ ಸಹ ಮಾತನಾಡಿ ಇಸ್ಲಾಂ ಧರ್ಮ ಮಾತ್ರ ಜನರನ್ನು ಪ್ರವಾಹದಿಂದ ಕಾಪಾಡಲು ಸಾಧ್ಯವೆಂದು ತಿಳಿಸಿ ಜನರನ್ನೆಲ್ಲಾ ಇಸ್ಲಾಂಗೆ ಮತಾಂತರ ಹೊಂದಲು ತಿಳಿಸಿದ. ಅದೇ ರೀತಿ ಕ್ರೈಸ್ತ ಧರ್ಮಗುರು ಮಾತನಾಡಿ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಲು ಪುಸಲಾಯಿಸಿದ. ಅದನ್ನು ಕೇಳಿಸಿಕೊಂಡ ಜನರು ಪ್ರವಾಹದಲ್ಲಿ ಬದುಕುಳಿಯಲು ಅವರಿಗೆ ಸೂಕ್ತವೆನ್ನಿಸುವ ಧರ್ಮಕ್ಕೆ ಮತಾಂತರ ಹೊಂದಲು ತೀರ್ಮಾನಿಸಿದರು. ಅದನ್ನೆಲ್ಲಾ ಕೇಳಿಸಿಕೊಂಡ ನಸ್ರುದ್ದೀನ್ ಅಲ್ಲಿಂದ ಎದ್ದುಹೋಗಲು ಅಣಿಯಾದ. ಅದನ್ನು ನೋಡಿದ ಧಾರ್ಮಿಕ ಮುಖಂಡರು ನಸ್ರುದ್ದೀನನ ತೀರ್ಮಾನವೇನೆಂದು ಕೇಳಿದರು.
`ಪ್ರವಾಹಕ್ಕೆ ಇನ್ನೂ ಒಂದು ವಾರವಿರುವುದರಿಂದ ನಾನು ಈಜು ಕಲಿಯಲು ತೀರ್ಮಾನಿಸಿದ್ದೇನೆಎಂದ ನಸ್ರುದ್ದೀನ್.

ಹೆಂಡತಿಯ ಮಾತು
ಪ್ರವಾಹದಿಂದ ಇಡೀ ಜಗತ್ತೇ ಮುಳುಗಿಹೋಯಿತು. ಲಕ್ಷಾಂತರ ಜನ ಪ್ರಾಣಬಿಟ್ಟರು. ಸ್ವರ್ಗದ ಬಾಗಿಲಲ್ಲಿ ಒಳಕ್ಕೆ ಪ್ರವೇಶಿಸಲು ನೂಕುನುಗ್ಗಲು ಪ್ರಾರಂಭವಾಗಿ ದೇವರಿಗೆ ಅವರನ್ನು ನಿಯಂತ್ರಿಸುವುದು ಕಷ್ಟವಾಯಿತು. ದೇವರಿಗೆ ಒಂದು ವಿಚಾರ ಹೊಳೆಯಿತು.
`ಮಹಿಳೆಯರು ಮತ್ತು ಮಕ್ಕಳಿಗೆ ಪ್ರವೇಶಿಸಲು ಪ್ರತ್ಯೇಕ ದ್ವಾರವಿದೆ. ಮಹಿಳೆಯರು ಮತ್ತು ಮಕ್ಕಳು ಅಲ್ಲಿಗೆ ಹೋಗಿಎಂದರು. ಅರ್ಧದಷ್ಟು ನೂಕುನುಗ್ಗಲು ಕಡಿಮೆಯಾಯಿತು. ಆದರೂ ಗಂಡಸರ ನೂಕುನುಗ್ಗಾಟ ಕಡಿಮೆಯಾಗಲಿಲ್ಲ.
`ಹೆಂಡತಿಗೆ ಹೆದರುವ ಪುಕ್ಕಲು ಗಂಡಂದಿರೆಲ್ಲಾ ಒಂದು ಸಾಲು ಮಾಡಿ ಹಾಗೂ ಹೆಂಡತಿಗೆ ಹೆದರದ ಮತ್ತು ಆಕೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಗಂಡಸರೆಲ್ಲಾ ಮತ್ತೊಂದು ಸಾಲು ಮಾಡಿಎಂದರು ದೇವರು.
ಗಂಡಸರು ಎರಡು ಸಾಲು ಮಾಡಿದರು. ನಸ್ರುದ್ದೀನನನ್ನು ಹೊರತುಪಡಿಸಿ ಎಲ್ಲ ಗಂಡಸರೂ ಹೆಂಡತಿಗೆ ಹೆದರುವ ಪುಕ್ಕಲು ಗಂಡಸರ ಸಾಲಿನಲ್ಲೇ ನಿಂತರು. ಹೆಂಡತಿಗೆ ಹೆದರದ ಗಂಡಂದಿರ ಸಾಲಿನಲ್ಲಿ ನಸ್ರುದ್ದೀನ್ ಒಬ್ಬನೇ ನಿಂತದ್ದು ನೋಡಿ ದೇವರಿಗೆ ಸಂತೋಷವಾಯಿತು. ನಸ್ರುದ್ದಿನನ ಬಳಿ ಹೋಗಿ,
`ಶಾಭಾಷ್ ನಸ್ರುದ್ದೀನ್! ನೀನೊಬ್ಬನೇ ನಿಜವಾದ ಗಂಡಸು. ನೀನು ಹೆಂಡತಿಯನ್ನು ಹೇಗೆ ಹಿಡಿತದಲ್ಲಿಟ್ಟುಕೊಂಡಿದ್ದೆ ಎಂಬುದನ್ನು ಪುಕ್ಕಲು ಗಂಡಸರಿಗೆ ವಿವರಿಸಿ ಹೇಳುಎಂದರು.
`ನನಗೇನು ಗೊತ್ತು? ನನ್ನ ಹೆಂಡತಿ ನನಗೆ ಇದೇ ಸಾಲಿನಲ್ಲಿ ನಿಲ್ಲಲು ಆದೇಶ ಮಾಡಿ ಹೋದಳುಎಂದ ನಸ್ರುದ್ದೀನ್.

ಲೆಕ್ಕಾಚಾರ
ನಸ್ರುದ್ದೀನ್ ರೊಟ್ಟಿ ಮತ್ತು ಬೆಣ್ಣೆ ಕೊಳ್ಳಲು ಮಾರುಕಟ್ಟೆಗೆ ಹೋದ. ಅಂಗಡಿಯವ ಹದಿನಾಲ್ಕು ರೂಪಾಯಿ ಎಂದ.
`ಅದ್ಹೇಗೆ? ನಾನು ಹನ್ನೊಂದು ರೂಪಾಯಿ ಎಂದುಕೊಂಡಿದ್ದೆಎಂದ ನಸ್ರುದ್ದೀನ್.
`ರೊಟ್ಟಿಗೆ ಏಳು ರೂಪಾಯಿ ಹಾಗೂ ಬೆಣ್ಣೆಗೆ ಏಳು ರೂಪಾಯಿ, ಒಟ್ಟು ಹದಿನಾಲ್ಕಾಯಿತುಎಂದ ಅಂಗಡಿಯವ.
`ನನ್ನ ಪ್ರಕಾರ ಏಳಕ್ಕೆ ಏಳು ಕೂಡಿದರೆ ಹನ್ನೊಂದಾಗುತ್ತದೆಎಂದ ನಸ್ರುದ್ದೀನ್.
`ಸಾಧ್ಯವೇ ಇಲ್ಲ. ಅದು ಹೇಗೆ ವಿವರಿಸಿ ಹೇಳುಎಂದ ಅಂಗಡಿಯವ, ಏಕೆಂದರೆ ನಸ್ರುದ್ದೀನ್ ಅಸಾಮಾನ್ಯ ಬುದ್ಧಿವಂತನೆಂಬುದು ಅವನಿಗೆ ತಿಳಿದಿತ್ತು.
`ನೋಡು, ನನಗೆ ನನ್ನ ಮೊದಲ ಪತ್ನಿಯಿಂದ ನಾಲ್ಕು ಮಕ್ಕಳು. ಅವಳು ತೀರಿಕೊಂಡ ಮೇಲೆ ಮತ್ತೊಬ್ಬಳನ್ನು ಮದುವೆಯಾದೆ. ನನ್ನ ಎರಡನೇ ಹೆಂಡತಿಗೆ ಆಕೆಯ ಮೊದಲನೇ ಗಂಡನಿಂದ ನಾಲ್ಕು ಮಕ್ಕಳಿದ್ದರು. ನಾವಿಬ್ಬರೂ ಮದುವೆಯಾದ ಮೇಲೆ ನಮಗೆ ಮೂವರು ಮಕ್ಕಳು ಹುಟ್ಟಿದರು. ಅಂದರೆ ನಮಗೆ ತಲಾ ಏಳು ಮಕ್ಕಳು ಆದರೆ ಒಟ್ಟು ನಮಗಿಬ್ಬರಿಗೂ ಹನ್ನೊಂದು ಮಕ್ಕಳು. ಏಳು ಮತ್ತು ಏಳು ಹನ್ನೊಂದಾಗಲಿಲ್ಲವೆ?’ ನಸ್ರುದ್ದೀನ್ ಕೇಳಿದ.

ಕಳ್ಳತನ
ನಸ್ರುದ್ದೀನ್ ಯುವಕನಾಗಿದ್ದಾಗಲೇ ಮಹಾನ್ ವಿದ್ವಾಂಸನಾಗಿದ್ದ. ತನ್ನ ವಿದ್ವತ್ತಿನಿಂದಾಗಿ ಪ್ರಾಂತ್ಯದಲ್ಲೆಲ್ಲಾ ಪ್ರಖ್ಯಾತನಾಗಿದ್ದ. ಊರಿನ ಪ್ರಖ್ಯಾತ ಧರ್ಮ ಗುರು ಒಂದು ದಿನ ತನ್ನ ಆಶ್ರಮಕ್ಕೆ ನಸ್ರುದ್ದೀನನ ಜೊತೆ ಒಂದಷ್ಟು ವಿಷಯ ಚರ್ಚೆ ಮಾಡಬಹುದೆಂದು ಭೋಜನಕ್ಕೆ ಆಹ್ವಾನಿಸಿದ. ಅದನ್ನು ಮನ್ನಿಸಿ ನಸ್ರುದ್ದೀನ್ ಅವರಲ್ಲಿಗೆ ಹೋದ. ಇಬ್ಬರೂ ಒಂದಷ್ಟು ವಿಚಾರ ವಿಮರ್ಶೆ ಮಾಡಿ ಊಟಕ್ಕೆ ಕೂತರು. ಧರ್ಮ ಗುರುವಿಗೆ ಅಡಿಗೆ ಮಾಡಲು ಒಬ್ಬಳು ಸುಂದರ ಹಾಗೂ ಆಕರ್ಷಕ ಮಹಿಳೆ ಇದ್ದಳು. ಆಕೆ ಅವರಿಬ್ಬರಿಗೂ ಊಟ ಬಡಿಸಿದಳು. ಧರ್ಮಗುರುಗಳು ತಾವೇ ಪ್ರಚುರಪಡಿಸಿದಂತೆ ಬ್ರಹ್ಮಚಾರಿಗಳು. ಆದರೆ ಅವರಿಬ್ಬರನ್ನೂ ಗಮನಿಸಿದ ನಸ್ರುದ್ದೀನನಿಗೆ ಏನೋ ಸಂಶಯ ಬಂತು. ಅದನ್ನು ಗಮನಿಸಿದ ಧರ್ಮಗುರುಗಳು,
`ನಿನ್ನ ಮನಸ್ಸಿನಲ್ಲಿ ಏನು ಆಲೋಚಿಸುತ್ತಿರುವೆಯೆಂಬುದು ನನಗೆ ಗೊತ್ತು. ಆದರೆ ನೀನು ಊಹಿಸಿದಂತೆ ನನ್ನ ಮತ್ತು ಆಕೆಯ ನಡುವೆ ವೃತ್ತಿ ಸಂಬಂಧ ಹೊರತುಪಡಿಸಿ ಮತ್ತಾವುದೇ ಸಂಬಂಧವಿಲ್ಲಎಂದರು.
ನಸ್ರುದ್ದೀನ್ ಹಿಂದಿರುಗಿದ ನಂತರ ಒಂದು ದಿನ ಅಡುಗೆಯವಳು ಧರ್ಮಗುರುಗಳ ಬಳಿ, `ನಿಮ್ಮ ಬಳಿ ಹೇಳಲು ನನಗೆ ಸಂಕೋಚವಾಗುತ್ತಿದೆ. ಆದರೆ ನಿಮ್ಮ ಗೆಳೆಯ ನಸ್ರುದ್ದೀನ್ ಆಶ್ರಮಕ್ಕೆ ಬಂದು ಹೋದ ದಿನದಿಂದ ಬೆಳ್ಳಿಯ ಸೌಟು ಕಾಣುತ್ತಿಲ್ಲ. ನಸ್ರುದ್ದೀನ್ ಅದನ್ನು ಕದ್ದಿರಬಹುದೆಂದು ನಿಮಗನ್ನಿಸುತ್ತದೆಯೆ?’ ಎಂದು ಕೇಳಿದಳು.
`ಆತ ಕದ್ದಿರಲಾರ ಎಂದು ನನಗನ್ನಿಸುತ್ತಿದೆ. ಆದರೂ ಆತನನ್ನು ಕೇಳುತ್ತೇನೆಎಂದ ಧರ್ಮಗುರು ನಸ್ರುದ್ದೀನನಿಗೆ ಒಂದು ಪತ್ರಬರೆದರು: `ಪ್ರಿಯ ನಸ್ರುದ್ದೀನ್, ನೀನು ನನ್ನ ಮನೆಯಿಂದ ಬೆಳ್ಳಿಯ ಸೌಟನ್ನು ಕದ್ದಿರುವೆಯೆಂದು ನಾನು ಹೇಳುತ್ತಿಲ್ಲ ಹಾಗೂ ನೀನು ಕದ್ದಿಲ್ಲವೆಂದೂ ಸಹ ನಾನು ಹೇಳುತ್ತಿಲ್ಲ. ಆದರೆ ವಾಸ್ತವಾಂಶವೇನೆಂದರೆ, ನೀನು ನನ್ನ ಮನೆಗೆ ಊಟಕ್ಕೆ ಬಂದು ಹೋದ ದಿನದಿಂದ ನನ್ನ ಮನೆಯ ಬೆಳ್ಳಿಯ ಸೌಟು ಕಣ್ಮರೆಯಾಗಿದೆ.
ಕೆಲವು ದಿನಗಳ ನಂತರ ಧರ್ಮಗುರುವಿಗೆ ನಸ್ರುದ್ದೀನನಿಂದ ಪತ್ರವೊಂದು ಬಂದಿತು. ಅದರಲ್ಲಿ ನಸ್ರುದ್ದೀನ್ ಹೀಗೆ ಉತ್ತರ ಬರೆದಿದ್ದ: ಮಾನ್ಯ ಧರ್ಮಗುರುಗಳೇ, ನೀವು ನಿಮ್ಮ ಅಡುಗೆಯವಳೊಂದಿಗೆ ಮಲಗುತ್ತಿರುವಿರಿ ಎಂದು ನಾನು ಹೇಳುತ್ತಿಲ್ಲ ಹಾಗೂ ನೀವು ಮಲಗುತ್ತಿಲ್ಲ ಎಂದೂ ನಾನು ಹೇಳುತ್ತಿಲ್ಲ. ಆದರೆ ವಾಸ್ತವಾಂಶವೇನೆಂದರೆ, ನೀವು ನಿಮ್ಮ ಹಾಸಿಗೆಯ ಮೇಲೆ ಮಲಗಿದ್ದಿದ್ದರೆ ಇಷ್ಟೊತ್ತಿಗಾಗಲೇ ಅದರ ಮೇಲಿನ ಹೊದಿಕೆಯ ಕೆಳಗೆ ನಾನು ಇರಿಸಿದ್ದ ಬೆಳ್ಳಿಯ ಸೌಟು ಇಷ್ಟೊತ್ತಿಗೆ ನಿಮಗೆ ಸಿಕ್ಕಿರುತ್ತಿತ್ತು...’

ಒತ್ತುವರಿ
ಊರಿನ ಸ್ಮಶಾನವನ್ನು ಇಬ್ಬರು ಒತ್ತುವರಿ ಮಾಡಿಕೊಂಡಿದ್ದರು. ಕೊನೆಗೆ ಅವರಿಬ್ಬರ ನಡುವೆಯೇ ಜಾಗ ತಮಗೆ ಸೇರಿದ್ದು ಎಂದು ಕಿತ್ತಾಟ ಶುರುವಾಯಿತು. ಅವರ ಹೊಡೆದಾಟ ನೋಡಿದ ಸಾರ್ವಜನಿಕರು ಅವರನ್ನು ನ್ಯಾಯಾಧೀಶ ನಸ್ರುದ್ದೀನನ ಮುಂದೆ ತಕರಾರು ಇತ್ಯರ್ಥಕ್ಕಾಗಿ ಕರೆದೊಯ್ದರು. ಇಬ್ಬರ ಅಹವಾಲನ್ನೂ ಆಲಿಸಿದ ನಸ್ರುದ್ದೀನ್,
ನಿಮ್ಮ ತಕರಾರಿನ ಜಾಗ ಸ್ಮಶಾನವಲ್ಲವೇ? ನಿಮ್ಮಿಬ್ಬರಲ್ಲಿ ಯಾರು ಮೊದಲು ಸಾಯುತ್ತಾರೋ, ಅವರಿಗೆ ಸ್ಥಳ ಸೇರುತ್ತದೆ. ಸ್ಥಳ ಯಾರಿಗೆ ಮೊದಲು ಸೇರಬೇಕು ಎನ್ನುವುದನ್ನು ನೀವೇ ತೀರ್ಮಾನ ಮಾಡಿಕೊಂಡು ಬನ್ನಿಎಂದು ತೀರ್ಪು ನೀಡಿದ. ಅಂದೇ ಅವರಿಬ್ಬರೂ ಸ್ಥಳಕ್ಕಾಗಿ ಹೊಡೆದಾಡುವುದನ್ನು ನಿಲ್ಲಿಸಿದರು.

ಗಡಿಯಾರ ಮತ್ತು ಅಳಿಯ?
ಮುದುಕ ನಸ್ರುದ್ದೀನ್ ಟ್ರೈನಿನಲ್ಲಿ ಪ್ರಯಾಣಿಸುತ್ತಿದ್ದ. ರಾತ್ರಿಯ ಸಮಯ, ಟ್ರೈನಿನಲ್ಲಿ ಹೆಚ್ಚು ಜನರಿರಲಿಲ್ಲ. ಒಬ್ಬ ಯುವಕ ನಸ್ರುದ್ದೀನನನ್ನು,
`ಕ್ಷಮಿಸಿ, ಈಗ ಸಮಯವೆಷ್ಟು?’ ಎಂದು ಕೇಳಿದ. ನಸ್ರುದ್ದೀನ್ ಕೇಳಿಸಿಕೊಳ್ಳದವನಂತೆ ಸುಮ್ಮನಿದ್ದ. ಸ್ವಲ್ಪ ಹೊತ್ತಿನ ನಂತರ ಯುವಕ ಪುನಃ ನಸ್ರುದ್ದೀನನನ್ನು ಸಮಯ ಎಷ್ಟೆಂದು ಕೇಳಿದ. ನಸ್ರುದ್ದೀನ್ ಆಗಲೂ ಉತ್ತರಿಸಲಿಲ್ಲ. ಯುವಕ ಬಿಡದೆ,
`ನೋಡಿ, ನಾನು ಬಹಳ ಹೊತ್ತಿನಿಂದ ನಿಮ್ಮನ್ನು ಸಮಯ ಕೇಳುತ್ತಿದ್ದೇನೆ, ನೀವು ಮಾತನಾಡುತ್ತಲೇ ಇಲ್ಲ. ಏಕೆಎಂದು ಒತ್ತಾಯಪೂರ್ವಕವಾಗಿ ಕೇಳಿದ.
ಅದಕ್ಕೆ ನಸ್ರುದ್ದೀನ್, `ನೋಡಪ್ಪಾ. ಟ್ರೈನು ತಲುಪುವ ಮುಂದಿನ ನಿಲ್ದಾಣವೇ ಹಾದಿಯಲ್ಲಿ ಕೊನೆಯದು. ನೀನ್ಯಾರೆಂಬುದು ನನಗೆ ತಿಳಿದಿಲ್ಲ, ಹಾಗಾಗಿ ನೀನು ಅಪರಿಚಿತ. ನಿನ್ನನ್ನು ಮಾತನಾಡಿಸಿದರೆ ನಾನು ನಿನ್ನನ್ನು ನನ್ನ ಮನೆಗೆ ಆಹ್ವಾನಿಸಬೇಕಾಗುತ್ತದೆ. ನೀನು ಸ್ಫುರದ್ರೂಪಿ ಹುಡುಗ. ಮನೆಯಲ್ಲಿ ನನಗೆ ಒಬ್ಬ ಸುಂದರ ಮಗಳಿದ್ದಾಳೆ. ನೀನು ನನ್ನ ಮನೆಗೆ ಬಂದರೆ ನನ್ನ ಮಗಳನ್ನು ಕಂಡು ನೀನು ಆಕರ್ಷಿತನಾಗಬಹುದು, ನಿಮ್ಮಿಬ್ಬರ ನಡುವೆ ಪ್ರೇಮಾಂಕುರವಾಗಬಹುದು ಹಾಗೂ ನೀವಿಬ್ಬರೂ ಮದುವೆಯಾಗಲು ತೀರ್ಮಾನಿಸಬಹುದು. ಆದರೆ ಒಂದು ಗಡಿಯಾರವನ್ನೂ ಹೊಂದಿರದ ಹುಡುಗ ನನಗೆ ಅಳಿಯನಾಗುವುದು ಇಷ್ಟವಿಲ್ಲಎಂದ.

ಅಂಕಾರಾದ ಹಸು
ಟರ್ಕಿಯ ಒಂದು ಸಣ್ಣ ಗ್ರಾಮ. ಇಡೀ ಗ್ರಾಮದಲ್ಲಿ ಒಂದೇ ಒಂದು ಹಸುವಿತ್ತು. ಹಸು ಸಾಕಷ್ಟು ಹಾಲು ಕೊಡುತ್ತಿದ್ದು ಅದೇ ಊರಿನ ಜನಕ್ಕೆ ಸಾಕಾಗುತ್ತಿತ್ತು. ಒಂದು ದಿನ ಹಸು ಹಾಲು ಕೊಡುವುದು ನಿಲ್ಲಿಸಿತು. ಊರಿನ ಜನಕ್ಕೆ ಹಾಲಿಲ್ಲದೆ ಬಹಳಷ್ಟು ತೊಂದರೆ ಎದುರಿಸಬೇಕಾಯಿತು. ಊರಿನ ಜನರೆಲ್ಲಾ ಸೇರಿ ಮತ್ತೊಂದು ಹಸು ಕೊಂಡು ತರಲು ನಿರ್ಧರಿಸಿದರು. ಎಲ್ಲರೂ ಹಣ ಸಂಗ್ರಹಿಸಿ ಅಂಕಾರಾ ನಗರಕ್ಕೆ ಹೋಗಿ ಒಂದು ಹಸುವನ್ನು ಕೊಂಡುತಂದರು. ಹೊಸ ಹಸು ಹಳೆಯ ಹಸುವಿಗಿಂತ ಹೆಚ್ಚಿನ ಹಾಲು ಕೊಡುತ್ತಿದ್ದುದರಿಂದ ಊರಿನ ಜನಕ್ಕೆ ಹಸು ತುಂಬಾ ಇಷ್ಟವಾಯಿತು ಹಾಗೂ ಎಲ್ಲರೂ ಕೂಡಿ ಒಂದು ಹೊಸ ಆಲೋಚನೆ ಮಾಡಿದರು. ಒಂದು ಹೋರಿಯನ್ನು ತಂದು ಹಸುವಿಗೆ ಕೂಡಿಸಿ ಹುಟ್ಟುವ ಕರುಗಳನ್ನು ತಾವೇ ಸಾಕಿ ಬೆಳೆಸಿ ಮುಂದಿನ ತಲಮಾರಿಗೂ ಸಾಕಾಗುವಷ್ಟು ಗೋಸಂಪತ್ತು ಮಾಡಿಕೊಳ್ಳಬಹುದೆಂದೂ ಹಾಗೂ ತಮ್ಮ ಮಕ್ಕಳು, ಮರಿಮಕ್ಕಳು ಹಾಲಿಗಾಗಿ ಚಿಂತಿಸುವ ಅವಶ್ಯಕತೆಯೇ ಇರುವುದಿಲ್ಲವೆಂದು ಯೋಜನೆಯೊಂದನ್ನು ರೂಪಿಸಿದರು.
       ಅದರಂತೆ ಒಂದು ದಷ್ಟುಪುಷ್ಟ ಹೋರಿಯೊಂದನ್ನು ತಂದು ಹಸುವಿಗೆ ಕೂಡಿಸುವ ಪ್ರಯತ್ನ ನಡೆಸಿದರು. ಹೋರಿ ಮೇಲೇರಲು ಪ್ರಯತ್ನಿಸಿದರೆ ಹಸು ಎಡಕ್ಕೆ ತಿರುಗುತ್ತಿತ್ತು. ಹೋರಿ ಎಡದಿಂದ ಏರಲು ಪ್ರಯತ್ನಿಸಿದರೆ ಬಲಕ್ಕೆ ತಿರುಗುತ್ತಿತ್ತು. ಎಷ್ಟು ಪ್ರಯತ್ನಿಸಿದರೂ ಹೋರಿಗೆ ಯಶಸ್ಸು ಸಿಗಲಿಲ್ಲ. ಕೊನೆಗೆ ಊರಿನ ಜನರೆಲ್ಲಾ ಪಕ್ಕದೂರಿನ ವಿದ್ವಾಂಸ ನ್ಯಾಯಾಧೀಶ ನಸ್ರುದ್ದೀನನ ಸಲಹೆ ಕೇಳಲು ನಿರ್ಧರಿಸಿ ಆತನಲ್ಲಿಗೆ ಹೋಗಿ ತಮ್ಮ ಸಮಸ್ಯೆ ತಿಳಿಸಿ ಪರಿಹಾರ ಕೇಳಿದರು. ಅದನ್ನು ಆಲಿಸಿದ ನಸ್ರುದ್ದೀನ್, `ನೀವು ಹಸುವನ್ನು ಅಂಕಾರಾದಿಂದ ಏಕೆ ಕೊಂಡು ತಂದಿರಿ?’ ಎಂದು ಕೇಳಿದರು. ಜನರಿಗೆ ಅಚ್ಚರಿಯಾಯಿತು.
`ನೀವು ವಿದ್ವಾಂಸರಷ್ಟೇ ಅಲ್ಲ ಕಾಲಜ್ಞಾನಿಗಳೂ ಹೌದು. ನಾವು ಹಸುವನ್ನು ಎಲ್ಲಿಂದ ಕೊಂಡುತಂದೆವೆಂದು ನಿಮಗೆ ಹೇಳಲೇ ಇಲ್ಲ. ಆದರೆ ಹಸು ನಾವು ಅಂಕಾರಾದಿಂದ ಕೊಂಡುತಂದದ್ದೆಂದು ನಿಮಗೆ ಹೇಗೆ ತಿಳಿಯಿತು?’ ಎಂದು ಜನ ಅಚ್ಚರಿಯಿಂದ ಕೇಳಿದರು.

ಅದಕ್ಕೆ ನ್ಯಾಯಾಧೀಶ ನಸ್ರುದ್ದೀನ್, `ನನ್ನ ಹೆಂಡತಿಯೂ ಅಂಕಾರಾದವಳೆ!’ ಎಂದು ಹೇಳಿದರು.