ಗುರುವಾರ, ಜುಲೈ 02, 2015

ಮುಲ್ಲಾ ನಸ್ರುದ್ದೀನ್ ಕತೆಗಳ 40ನೇ ಕಂತು

`ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 40ನೇ ಕಂತು - ಜುಲೈ 2015
 ಚಿತ್ರಗಳು: ಮುರಳೀಧರ ರಾಠೋಡ್




ನನಗೂ ಅಷ್ಟೆ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಸಹಪಾಠಿಗಳು. ಅಬ್ದುಲ್ಲಾ ಓದುವುದರಲ್ಲಿ ನಸ್ರುದ್ದೀನನಿಗಿಂತ ಮುಂದು. ಅಂತಿಮ ಪರೀಕ್ಷೆಯಲ್ಲಿ ನಸ್ರುದ್ದೀನ್ ಅಬ್ದುಲ್ಲಾನ ಹಿಂದೆ ಕೂತ ಹಾಗೂ ತನಗೆ ಕಾಪಿ ಹೊಡೆಯಲು ಉತ್ತರಗಳನ್ನು ತೋರಿಸುವಂತೆ ಕೇಳಿಕೊಂಡ. ಅಬ್ದುಲ್ಲಾ ಅವನ ಖಾಸಾ ದೋಸ್ತ್ ಅಲ್ಲವೆ. ಅಬ್ದುಲ್ಲಾ ತನಗೆ ಗೊತ್ತಿದ್ದ ಉತ್ತರಗಳನ್ನೆಲ್ಲಾ ಬರೆಯುತ್ತಿದ್ದ. ಗೊತ್ತಿಲ್ಲದ ಉತ್ತರದ ಕೆಳಗೆ `ನನಗೆ ಗೊತ್ತಿಲ್ಲಎಂದು ಬರೆದ. ಅದನ್ನು ಕಾಪಿ ಹೊಡೆದ ನಸ್ರುದ್ದೀನ್ `ನನಗೂ ಅಷ್ಟೆಎಂದು ಬರೆದ.

ಮಾಯಾಲಾಂದ್ರ
ನಸ್ರುದ್ದೀನನ ಪತ್ನಿ ಫಾತಿಮಾ ತಮ್ಮ ಮನೆಯ ಅಟ್ಟದಲ್ಲಿ ಹಳೆ ಸಾಮಾನುಗಳನ್ನು ವಿಲೇವಾರಿ ಮಾಡುವಾಗ ಪ್ರಾಚೀನ ಲಾಂದ್ರವೊಂದು ಸಿಕ್ಕಿತು. ಅಲ್ಲಾವುದ್ದೀನನ ಲಾಂದ್ರದಂತಿದ್ದ ಲಾಂದ್ರದ ಮೇಲಿನ ಧೂಳನ್ನು ಉಜ್ಜಿ ಒರೆಸಿದಳು. ಲಾಂದ್ರದೊಳಗಿನಿಂದ ಭೂತವೊಂದು ಹೊರಬಂದು `ನಾನು ನಿಮ್ಮ ಗುಲಾಮ. ನಿಮಗೊಂದು ವರ ಕೊಡುತ್ತೇನೆ. ಏನು ಬೇಕೊ ಕೇಳಿಎಂದಿತು.
ಏನು ಕೇಳಬೇಕೆಂದು ಯೋಚಿಸಿದ ಫಾತಿಮಾ, `ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವೇಷ ಮಾಯವಾಗಲಿ, ಶಾಂತಿ ನೆಲೆಸಲಿ, ಯುದ್ಧದ ಆಲೋಚನೆ ಎಂದಿಗೂ ಬರದಿರುವಂತೆ ಮಾಡುಎಂದಳು.
`ಅದು ಸಾಧ್ಯವಿಲ್ಲದ ಮಾತು. ಭಾರತ ಮತ್ತು ಪಾಕಿಸ್ತಾನ ಎಂದಿಗೂ ಗೆಳೆಯರಾಗುವುದಿಲ್ಲ. ಅಂತಹ ಕಷ್ಟದ ಕಾರ್ಯ ನನ್ನಿಂದ ಸಾಧ್ಯವಿಲ್ಲ. ಮತ್ತೇನಾದರೂ ಸುಲಭದ ವರ ಕೇಳುಎಂದಿತು ಭೂತ.
`ಹೋಗಲಿ, ನನ್ನ ಗಂಡ ನಸ್ರುದ್ದೀನ್ ಕುಡಿತ, ಜೂಜು, ಮೋಜು ಮಾಡುವುದನ್ನು, ಸುಳ್ಳು ಹೇಳುವುದನ್ನು ನಿಲ್ಲಿsಸುವಂತೆ ಮಾಡುಎಂದು ತನ್ನ ಮತ್ತೊಂದು ಆಸೆ ತೀರಿಸಿದಳು.
ತಲೆ ತುರಿಸಿಕೊಂಡ ಭೂತ, `ಅದೇನೋ ಭಾರತ-ಪಾಕಿಸ್ತಾನ ಎನ್ನುತ್ತಿದ್ದಿರಲ್ಲಾ, ಅದನ್ನೇ ಪ್ರಯತ್ನಿಸುತ್ತೇನೆಎಂದಿತು.

ಒಂಟಿತನ
ನಸ್ರುದ್ದೀನ್ ಉದ್ಯೋಗಕ್ಕೆ ಬೆಂಗಳೂರಿಗೆ ಬಂದ. ಜನಜಂಗುಳಿಯ ನಡುವಿನ, ಸಿಕಾಪಟ್ಟೆ ಟ್ರಾಫಿಕ್ ಪ್ರಯಾಣದ ಬದುಕು ಕೆಲದಿನಗಳಲ್ಲೇ ಬೇಸರವಾಯಿತು, ಅದೆಂಥದೋ ವಿಚಿತ್ರ ಕಾಯಿಲೆ ಕಾಡತೊಡಗಿತು. ಒಂದು ದಿನ ಮನೋವೈದ್ಯರ ಬಳಿ ಹೋಗಿ,
`ಡಾಕ್ಟರೇ, ಅದೆಂಥದೋ ಒಬ್ಬನೇ ವ್ಯಕ್ತಿಯಲ್ಲಿ ಎರಡು ವ್ಯಕ್ತಿತ್ವಗಳಿರುವ ಕಾಯಿಲೆ ಇರುತ್ತದಂತಲ್ಲ, ನನಗೆ ಕಾಯಿಲೆ ಬರುವಂತೆ ಮಾಡಿಎಂದು ಕೇಳಿಕೊಂಡ.
`ಅದೇಕೆ ನಿನಗೆ ಅಂಥ ಕಾಯಿಲೆ ಬೇಕು?’ ವೈದ್ಯರು ಆಶ್ಚರ್ಯದಿಂದ ಕೇಳಿದರು.
`ಅದ್ಯಾಕೋ, ಬೆಂಗಳೂರಿಗೆ ಬಂದಾಗಿನಿಂದ ವಿಚಿತ್ರದ ಒಂಟಿತನ ನನ್ನನ್ನು ಕಾಡುತ್ತಿದೆಎಂದ ನಸ್ರುದ್ದೀನ್.

ಒಂದು ಕಣ್ಣು ಹೋಗಲಿ
ಧರ್ಮ ಪ್ರವರ್ತಕರು ವೇದಿಕೆಯ ಮೇಲೆ ಪ್ರವಚನ ನೀಡುತ್ತಿದ್ದಾಗ ಒಬ್ಬ ಸುಂದರ ಯುವತಿ ಅವರಿಗೆ ನೀರು ಕೊಡಲು ವೇದಿಕೆಯ ಮೇಲೆ ಹೋದಳು. ಜೋರಾಗಿ ಗಾಳಿ ಬೀಸಿ ಆಕೆಯ ಧರಿಸಿದ್ದ ವಸ್ತ್ರ ಮೇಲಕ್ಕೆ ಹಾರಿತು. ತಕ್ಷಣ ಪ್ರವಚನಕಾರರು ಸಭಿಕರನ್ನುದ್ದೇಶಿಸಿ,
`ಕೂಡಲೇ ಕಣ್ಣು ಮುಚ್ಚಿಕೊಳ್ಳಿ, ನೋಡಬಾರದ್ದನ್ನು ನೋಡಿದರೆ ನಿಮ್ಮ ಕಣ್ಣು ಕುರುಡುಗಾಗುತ್ತದೆಎಂದು ಜೋರಾಗಿ ಆಜ್ಞಾಪಿಸಿದರು.
ಸಭಿಕರಲ್ಲಿದ್ದ ನಸ್ರುದ್ದೀನ್, `ನಾನು ಒಂದು ಕಣ್ಣು ಕಳೆದುಕೊಳ್ಳಲು ಸಿದ್ಧನಿದ್ದೇನೆಎಂದು ಒಂದು ಕಣ್ಣು ಮುಚ್ಚಿಕೊಂಡು ವೇದಿಕೆಯ ಕಡೆ ನೋಡುತ್ತಾ ತನ್ನಲ್ಲೇ ಹೇಳಿಕೊಂಡ.

ತೂಕ
ನಸ್ರುದ್ದೀನ್ ಚಿಕ್ಕವನಾಗಿದ್ದಾಗ ಅವನ ತಾಯಿ ಅಂಗಡಿಗೆ ಒಂದು ಕಿಲೋ ಖರ್ಜೂರ ತರಲು ಕಳುಹಿಸಿದಳು. ನಸ್ರುದ್ದೀನ್ ತಂದು ಕೊಟ್ಟ. ಅವರ ತಾಯಿಗೆ ಖರ್ಜೂರದ ತೂಕ ಕಡಿಮೆ ಇದೆಯೆನ್ನಿಸಿ ತೂಕ ಮಾಡಿದರೆ ಮುಕ್ಕಾಲು ಕಿಲೋ ಮಾತ್ರ ಇತ್ತು. ಅಂಗಡಿಯವ ಮೋಸ ಮಾಡಿದ್ದಾನೆಂದು ಹೋಗಿ ಖರ್ಜೂರ ವಾಪಸ್ಸು ಕೊಡುತ್ತಾ,
`ಒಂದು ಕಿಲೋ ಕೇಳಿದರೆ ಮುಕ್ಕಾಲು ಕಿಲೋ ಕೊಟ್ಟಿದ್ದೀಯಾ! ತೂಕದಲ್ಲಿ ಮೋಸ ಮಾಡಿದ್ದೀಯಾ!’ ಎಂದು ಅಂಗಡಿಯವನನ್ನು ದಬಾಯಿಸಿದಳು.
`ಇಲ್ಲಮ್ಮಾ, ನಾನು ಸರಿಯಾದ ತೂಕವನ್ನೇ ಕೊಟ್ಟಿದ್ದೇನೆ. ನೀವು ನಿಮ್ಮ ಮಗನ ತೂಕ ನೋಡಿದಿರೇನು?’ ಎಂದ ಅಂಗಡಿಯವ.

ಕಡಿಮೆ ಸಂಬಳ
ಕೆಲಸಗಾರ ತಿಂಗಳ ಕೊನೆಯಲ್ಲಿ ತನ್ನ ಸಂಬಳ ಎಣಿಸಿಕೊಂಡಾಗ ನೂರು ರೂಪಾಯಿ ಕಡಿಮೆಯಿತ್ತು. ತಕ್ಷಣ ಹೋಗಿ ಲೆಕ್ಕಿಗ ನಸ್ರುದ್ದೀನನ ಬಳಿ ಹೋಗಿ ನೂರು ರೂಪಾಯಿ ಕಡಿಮೆ ಕೊಟ್ಟಿರುವುದಕ್ಕೆ ಕಾರಣವೇನೆಂದು ದಬಾಯಿಸಿದ.
ನಸ್ರುದ್ದೀನ್ ಹಣವನ್ನು ಮತ್ತೊಮ್ಮೆ ಎಣಿಸಿದ ಹಾಗೂ ತನ್ನ ಲೆಕ್ಕದ ಪುಸ್ತಕ ಪರಿಶೀಲಿಸಿದ.
`ಕಳೆದ ತಿಂಗಳ ಸಂಬಳದಲ್ಲಿ ನನ್ನ ತಪ್ಪಿನಿಂದಾಗಿ ನಿನಗೆ ನೂರು ರೂ ಹೆಚ್ಚಿಗೆ ನೀಡಿದ್ದೆ. ಆಗ ನೀನ್ಯಾಕೆ ಸಂಬಳ ಹೆಚ್ಚಿಗೆ ನೀಡಿದ್ದೀಯೆಂದು ದಬಾಯಿಸಲಿಲ್ಲ?’ ಕೇಳಿದ ನಸ್ರುದ್ದೀನ್.

ಭಾರತೀಯರು
ಅಧ್ಯಾಪಕರು: ಭೂಮಿಯ ಮೇಲಿನ ಮೊಟ್ಟ ಮೊದಲ ಮಾನವರು ಯಾರು?
ನಸ್ರುದ್ದೀನ್: ಆದಂ ಮತ್ತು ಈವ್ ಸಾರ್.
ಅಧ್ಯಾಪಕರು: ಅವರು ಯಾವ ದೇಶದವರು?
ನಸ್ರುದ್ದೀನ್: ಅವರು ಭಾರತೀಯರು ಸಾರ್.
ಅಧ್ಯಾಪಕರು: ಅವರು ಭಾರತೀಯರೆಂದು ಹೇಗೆ ಹೇಳುತ್ತೀಯ?
ನಸ್ರುದ್ದೀನ್: ಅವರಿಗೆ ತೊಡಲು ಬಟ್ಟೆಯಿರಲಿಲ್ಲ, ತಲೆಯ ಮೇಲೆ ಸೂರಿರಲಿಲ್ಲ. ತಿನ್ನಲು ಒಂದು ಸೇಬು ಮಾತ್ರ ಇತ್ತು. ಆದರೂ ಅವರು ತಾವಿರುವ ಸ್ಥಳವನ್ನು ಸ್ವರ್ಗವೆಂದು ಕರೆದರು ಸಾರ್.
ಮರೆವು
ನಸ್ರುದ್ದೀನನಿಗೆ ಮರೆವು ಹೆಚ್ಚುಯಾವಾಗಲೂ ತನ್ನ ಪತ್ನಿ ಫಾತಿಮಾಳ ಹುಟ್ಟಿದ ಹಬ್ಬವನ್ನು ಮರೆಯುತ್ತಿದ್ದ ವರ್ಷ ಮರೆಯಬಾರದೆಂದು ಮೊದಲೇ ನಿರ್ಧರಿಸಿ ಹೂಗುಚ್ಛದ ಅಂಗಡಿಯವನಿಗೆ ಹಣ ಮತ್ತು ತನ್ನ ಮನೆಯ ವಿಳಾಸ ಕೊಟ್ಟ ಹಾಗೂ ತನ್ನ   ಪತ್ನಿಯ ಹುಟ್ಟಿದ ಹಬ್ಬದ ದಿನಾಂಕ ತಿಳಿಸಿ  ದಿನ ಮರೆಯದೆ ತನ್ನ ಮನೆಗೆ ಹುಟ್ಟಿದ ಹಬ್ಬದ ಶುಭಾಶಯಗಳೊಂದಿಗೆ ಹೂಗುಚ್ಛ  ಕಳಿಸುವಂತೆ ತಿಳಿಸಿದ.
                ಹುಟ್ಟಿದ ಹಬ್ಬದ ದಿನ ಎಂದಿನಂತೆ ಅದನ್ನು ಮರೆತನಸ್ರುದ್ದೀನ್ ಮನೆಯಿಂದ ಹೊರಗೆ ಹೋಗಿದ್ದಾಗ ಅಂಗಡಿಯವ ಹೂಗುಚ್ಛ ತಂದುಕೊಟ್ಟಅದರ ಮೇಲೆ ಶುಭಾಶಯಗಳೊಂದಿಗೆ ಗಂಡನ ಹೆಸರು ಬರೆದಿತ್ತುತನ್ನ ಗಂಡನೇ ಹೂಗುಚ್ಛ ಕಳುಹಿಸಿದ್ದಾನೆ ಎಂದುಕೊಂಡ ಫಾತಿಮಾ ತನ್ನ ಗಂಡನ ಪ್ರೇಮದಿಂದ ಸಂತೋಷಗೊಂಡಳುಸಂಜೆ ನಸ್ರುದ್ದೀನ್ ಮನೆಗೆ ಹಿಂದಿರುಗಿದಮೇಜಿನ ಮೇಲೆ ಹೂಗುಚ್ಛವಿದ್ದಿತುಅಚ್ಚರಿಯಿಂದ `ಇದೇನಿದು ಯಾರೋ ಹೂಗುಚ್ಛ ತಂದುಕೊಟ್ಟಿದ್ದಾರೆ?’ ಎಂದು ಫಾತಿಮಾಳನ್ನು ಕೇಳಿದ.

ಅಪ್ಪನ ಹಾಗೆ
ನಸ್ರುದ್ದೀನ್ ಮತ್ತು ಫಾತೀಮಾರವರಿಗೆ ಮಗು ಹುಟ್ಟಿತ್ತು. ಓರಗೆಯ ಹೆಂಗಸರೆಲ್ಲಾ ಮಗುವನ್ನು ನೋಡಲು ಬಂದರು. ಅದರಲ್ಲಿ ಒಬ್ಬಾಕೆ,
`ಮಗ ಥೇಟ್ ಅವರ ಅಪ್ಪನ ಹಾಗೆ ಇದ್ದಾನೆಎಂದಳು.
`ಹೌದು. ಆದರೆ ಅವನು ಬೆಳೆದಂತೆ ಸರಿಯಾಗಬಹುದೆಂಬ ನಂಬಿಕೆ ಹೊಂದಿದ್ದೇನೆಎಂದಳು ಫಾತಿಮಾ.

ಶಾಲೆಗೆ ತಡವಾಯಿತು
ನಸ್ರುದ್ದೀನ್ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. ಅವನ ತಾಯಿ ಜೋರಾಗಿ ಕೂಗಿ ಹೇಳಿದರು,
`ನಸ್ರುದ್ದೀನ್ ಶಾಲೆಗೆ ತಡವಾಯಿತು, ಬೇಗ ಎದ್ದು ಹೊರಡುಎಂದರು.
`ನನಗೆ ಶಾಲೆಗೆ ಹೋಗಲು ಇಷ್ಟವಿಲ್ಲ. ಅಲ್ಲಿನ ಮಕ್ಕಳು ಪುಂಡರು, ಮಾಸ್ತರರು ಸರಿಯಾಗಿ ಪಾಠ ಮಾಡುವುದಿಲ್ಲ ಅಲ್ಲದೆ ಶಾಲೆಯೇ ಬೋರು ಹೊಡೆಸುತ್ತದೆ. ನನಗೆ ಮನೆಯಲ್ಲೇ ಇರಲು ಇಷ್ಟಎಂದ ನಸ್ರುದ್ದೀನ್ ಹಾಸಿಗೆಯಿಂದಲೆ.
`ಹಾಗೆಂದರೆ ಹೇಗೆ? ನಿನಗೆ ವಯಸ್ಸು ನಲ್ವತ್ತೈದಾಯಿತು! ಅಲ್ಲದೆ ನೀನೇ ಶಾಲೆಯ ಹೆಡ್ಮಾಸ್ತರು?’ ಹೇಳಿದರು ನಸ್ರುದ್ದೀನನ ತಾಯಿ.

ಮರೆವಿನ ಕಾಯಿಲೆ
ನಸ್ರುದ್ದೀನನಿಗೆ ವಿಪರೀತ ಮರೆವಿನ ಕಾಯಿಲೆಯಿತ್ತು. ಎಲ್ಲವನ್ನೂ ಮರೆಯುತ್ತಿದ್ದ. ಒಂದು ದಿನ ಫಾತಿಮಾ ಮಾರುಕಟ್ಟೆಯಿಂದ ಅದೆಂಥದೋ ಔಷಧಿ ತಂದುಕೊಟ್ಟು, `ಇದನ್ನು ಕುಡಿ. ನಿನ್ನ ಮರೆವಿನ ಕಾಯಿಲೆ ವಾಸಿಯಾಗುತ್ತದೆಎಂದಳು.
ನಸ್ರುದ್ದೀನ್ ಕುಡಿದ ಹಾಗೂ ಬಾಟಲಿಯ ಮೇಲೆ ಬರೆದಿರುವುದನ್ನು ಓದಿದ.
`ಅರೆ ಇದು ಅಮೃತಬಳ್ಳಿಯ ಕಷಾಯ! ಇದಕ್ಯಾಕೆ ಅಷ್ಟೊಂದು ಹಣ ಕೊಟ್ಟೆ? ನಮ್ಮ ಹಿತ್ತಲಲ್ಲೇ ಬೇಕಾದಷ್ಟು ಅಮೃತಬಳ್ಳಿ ಬೆಳೆದಿದೆ!’ ಎಂದ ನಸ್ರುದ್ದೀನ್.
`ನೋಡಿದೆಯಾ? ಔಷಧ ಎಷ್ಟು ಬೇಗ ಕೆಲಸಮಾಡಿದೆಉದ್ಘರಿಸಿದಳು ಫಾತಿಮಾ.

ಕಳವು
ನಸ್ರುದ್ದೀನ್ ತನ್ನ ಮನೆಯಲ್ಲಿದ್ದ ಹರಕು-ಮುರುಕು ಮೇಜು ಕುರ್ಚಿಗಳನ್ನು ಮನೆಯ ಹೊರಗಿಟ್ಟು, `ಇವು ಉಚಿತ. ಯಾರು ಬೇಕಾದರೂ ಕೊಂಡೊಯ್ಯಬಹುದುಎಂಬ ಫಲಕ ಹಾಕಿದ. ಹಳೆಯ ಹಾಗೂ ಮುರಿದ ಪೀಠೋಪಕರಣ ಯಾರಿಗೆ ಬೇಕು ಎಂದು ಒಂದು ವಾರವಾದರೂ ಯಾರೂ ಕೊಂಡೊಯ್ಯಲಿಲ್ಲ.
ಮರು ದಿನ ` ಪೀಠೋಪಕರಣ ಮಾರಾಟಕ್ಕಿದೆ, ಬೆಲೆ ರೂ.1000/-’ ಎಂಬ ಫಲಕ ಹಾಕಿದ. ದಿನ ರಾತ್ರಿಯೇ ಯಾರೋ ಅವುಗಳನ್ನು ಕದ್ದೊಯ್ದರು.

ಹೆಂಡತಿಯೆಂದುಕೊಂಡೆ
ನಸ್ರುದ್ದೀನ್ ಗಡಂಗಿನಲ್ಲಿ ಒಬ್ಬನೇ ಕೂತು ಬಹಳ ಹೊತ್ತಿನಿಂದ ಕುಡಿಯುತ್ತಿದ್ದ. ದಿನ ಅವನ ಕುಡಿತ ಕೊಂಚ ಹೆಚ್ಚೇ ಆಗಿತ್ತು. ಸ್ವಲ್ಪ ದೂರದಲ್ಲಿ ಒಬ್ಬ ಸುಂದರ ಯುವತಿ ಒಬ್ಬಂಟಿಯಾಗಿ ಕೂತಿದ್ದಳು. ನಸ್ರುದ್ದೀನ್ ನಿಧಾನವಾಗಿ ಅವಳ ಹಿಂದಿನಿಂದ ಹೋಗಿ ಅವಳನ್ನು ಹಿಡಿದುಕೊಂಡು ಚುಂಬಿಸಿದ. ತಕ್ಷಣ ಬೆಚ್ಚಿಬಿದ್ದ ಆಕೆ ಮೇಲಕ್ಕೆದ್ದು ಬಿಡಿಸಿಕೊಂಡು ನಸ್ರುದ್ದೀನನ ಕಪಾಳಕ್ಕೆ ಬಾರಿಸಿದಳು.
`ಕ್ಷಮಿಸಿ, ನಿಮ್ಮನ್ನು ನನ್ನ ಹೆಂಡತಿಯೆಂದುಕೊಂಡೆಎಂದ ನಸ್ರುದ್ದೀನ್ ಕೆನ್ನೆ ಸವರಿಕೊಳ್ಳುತ್ತಾ.
`ನಾಲಾಯಕ್... ಕುಡುಕ ಮುಂ... ಮಗನೇ!’ ಎಂದು ಆಕೆ ಬೈದಳು.
`ನೋಡಿ, ನೋಡಿ ನಿಮ್ಮ ಬೈಗಳು ಸಹ ನನ್ನ ಹೆಂಡತಿಯ ಬೈಗಳಂತೆಯೇ ಇದೆಹೇಳಿದ ನಸ್ರುದ್ದೀನ್.

ವೇಗ
ನಸ್ರುದ್ದೀನನಿಗೆ ವಯಸ್ಸಾಗಿತ್ತು. ಅವನೂ ಹಾಗೂ ಇನ್ನಿಬ್ಬರು ಮುದುಕರು ಸಂಜೆ ಪಾರ್ಕಿನಲ್ಲಿ ಕೂತು ಮಾತನಾಡುತ್ತಿದ್ದರು. ಒಬ್ಬಾತ ಹೇಳಿದ,
`ನಾನು ವಯಸ್ಸಿನಲ್ಲಿದ್ದಾಗ ನನ್ನಲ್ಲಿ ಎಂಥ ಅದ್ಭುತ ವೇಗವಿತ್ತು! ನಾನು ಬಾಣ ಬಿಟ್ಟರೆ ಅದು ಗುರಿ ತಲುಪುವ ಮೊದಲೇ ನಾನು ಗುರಿಯ ಬಳಿ ವೇಗವಾಗಿ ಓಡಿ ತಲುಪುತ್ತಿದ್ದೆ.
ಮತ್ತೊಬ್ಬಾತ ಹೇಳಿದ, `ನನ್ನಲ್ಲಿ ಇನ್ನೂ ಅದ್ಭುತವಾದ ವೇಗವಿತ್ತು. ಬಂದೂಕಿನಿಂದ ಗುಂಡು ಹಾರಿಸಿದರೆ, ಗುಂಡು ಗುರಿ ತಲುಪುವ ಮೊದಲೇ ನಾನು ಅಲ್ಲಿಗೆ ಓಡಿ ನಿಂತಿರುತ್ತಿದ್ದೆ.
`ನನ್ನ ವೇಗದ ಮುಂದೆ ನಿಮ್ಮದ್ಯಾವುದೂ ಸಾಟಿಯಿಲ್ಲಹೇಳಿದ ನಸ್ರುದ್ದೀನ್, `ನಾನು ಐದು ಗಂಟೆಗೆ ಆಫೀಸ್ ಮುಗಿಯುವಂತಿದ್ದರೆ, ನಾಲ್ಕು ಗಂಟೆಗೇ ಮನೆಯಲ್ಲಿರುತ್ತಿದ್ದೆ.

ಓಟ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಕಾಡಿಗೆ ಹೋಗಿದ್ದರು. ಆಯಾಸವಾಯಿತೆಂದು ಅಲ್ಲೇ ಒಂದು ಮರದ ಕೆಳಗೆ ವಿಶ್ರಮಿಸಿಕೊಳ್ಳುತ್ತಿದ್ದರು. ಹಿಂದೆ ಪೊದೆಯಲ್ಲಿ ಏನೋ ಸದ್ದಾಯಿತು. ತಲೆ ಎತ್ತಿ ನೋಡಿದರೆ `ಇಲ್ಲಿ ಕರಡಿಗಳಿವೆ, ಜಾಗ್ರತೆಎಂಬ ಫಲಕ ಹಾಕಿತ್ತು. ತಕ್ಷಣ ನಸ್ರುದ್ದೀನ್ ತನ್ನ ಬೂಟುಗಳನ್ನು ಧರಿಸಿ ಓಡಲು ಸಿದ್ಧನಾಗತೊಡಗಿದ. ಅದನ್ನು ನೋಡಿದ ಅಬ್ದುಲ್ಲಾ,
`ಅದರಿಂದ ಏನು ಪ್ರಯೋಜನ? ಕರಡಿಗಿಂತ ವೇಗವಾಗಿ ಓಡುವುದು ನಿನ್ನಿಂದ ಸಾಧ್ಯವಿಲ್ಲಎಂದ.
`ವಾಸ್ತವವಾಗಿ ನಾನು ಕರಡಿಗಿಂತ ಹೆಚ್ಚು ವೇಗವಾಗಿ ಓಡಬೇಕಿಲ್ಲ, ನಿನಗಿಂತ ಹೆಚ್ಚು ವೇಗವಾಗಿ ಓಡಿದರೆ ಸಾಕುಎಂದ ನಸ್ರುದ್ದೀನ್.

j.balakrishna@gmail.com


ಕಾಮೆಂಟ್‌ಗಳಿಲ್ಲ: