ಶುಕ್ರವಾರ, ಜುಲೈ 05, 2013

ಗೇಯಾ ಸಿದ್ಧಾಂತ: ಜೀವಂತ ಭೂಮಿಯ ವಿಜ್ಞಾನ

ಗೇಯಾ ಸಿದ್ಧಾಂತ: ಜೀವಂತ ಭೂಮಿಯ ವಿಜ್ಞಾನ
  ಗ್ರೀಕ್ ಪುರಾಣದ ಭೂಮಿ ತಾಯಿ `ಗೇಯಾ
`ಒಂದು ರೂಪಕ(ಮೆಟಫರ್)ದಂತೆಯೂ ಜೀವಂತ ಭೂಮಿಯ ಪರಿಕಲ್ಪನೆಯನ್ನು ಗ್ರಹಿಸುವುದು ಸುಲಭವಲ್ಲ. ಭೂಮಿಯ ನಡವಳಿಕೆ ಒಂದು ಜೀವಂತ ವ್ಯವಸ್ಥೆಯಂತೆ ಇದೆಯೆಂಬುದಕ್ಕೆ ಬಲವಾದ ಪುರಾವೆಗಳಿವೆ. ಅದು ವಾತಾವರಣದ ಬದಲಾವಣೆಯನ್ನು ತಡೆದುಕೊಳ್ಳಬಲ್ಲದು ಅಥವಾ ಮತ್ತಷ್ಟು ಬದಲಾಯಿಸಿಕೊಳ್ಳಬಲ್ಲದು. ಆದರೆ ಭೂಮಿಯ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲಾಗಲಿ ಅಥವಾ ಮುಂದಾಗುವುದನ್ನು ನಾವು ಊಹಿಸಿಕೊಳ್ಳಲಾಗಲಿ ಸಾಧ್ಯವಿಲ್ಲ. ಮಾನವನಿಗೆ ಭೂಮಿಯನ್ನು ಕಾಪಾಡಬಲ್ಲೆನೆಂಬ ಅಹಂಕಾರ ಬೇಡ: ನಮ್ಮ ಭೂಮಿ ತನ್ನನ್ನು ತಾನು ನೋಡಿಕೊಳ್ಳಬಲ್ಲದು. ನಾವು ಮಾಡಬೇಕಾಗಿರುವುದು ನಮ್ಮನ್ನು ನಾವು ಕಾಪಾಡಿಕೊಳ್ಳುವುದಷ್ಟೆ.
-ಜೇಮ್ಸ್ ಲವ್ಲಾಕ್

ವಿಜ್ಞಾನಿ ಜೇಮ್ಸ್ ಲವ್ಲಾಕ್
ಅರವತ್ತರ ದಶಕದ ಪ್ರಾರಂಭದಲ್ಲಿ ಜೇಮ್ಸ್ ಲವ್ಲಾಕ್ ಎಂಬ ವಿಜ್ಞಾನಿಯನ್ನು ನ್ಯಾಸಾ(ಓಂS)ದವರು ಮಂಗಳ ಗ್ರಹದ ಮೇಲಿನ ಜೀವಾನ್ವೇಷಣೆಯ ವೈಜ್ಞಾನಿಕ ಸಂಶೋಧನೆಗೆ ಆಹ್ವಾನಿಸಿದರು. ಸಂಶೋಧನೆಯಲ್ಲಿ ಜೇಮ್ಸ್ ಲವ್ಲಾಕ್ರವರು ಮಂಗಳ ಗ್ರಹದ ಮೇಲೆ ಇರಬಹುದಾದ ಜೀವವನ್ನು ಪತ್ತೆಹಚ್ಚುವಂತಹ ಉಪಕರಣಗಳನ್ನು ವಿನ್ಯಾಸಗೊಳಿಸಬೇಕು ಹಾಗೂ ಅವುಗಳನ್ನು ಮಂಗಳಗ್ರಹಕ್ಕೆ ಕಳುಹಿಸಬೇಕೆನ್ನುವ ಆಲೋಚನೆ ನ್ಯಾಸಾದವರದು. ಆದರೆ ಇದು ಅಷ್ಟೇ ಸರಳವಾಗಿರುವಂಥದಲ್ಲ. ಏಕೆಂದರೆ, ಮಂಗಳ ಗ್ರಹದಲ್ಲಿ ಇದ್ದರೂ ಇರಬಹುದಾದಂತಹ ಜೀವರೂಪಗಳು ಭೂಮಿಯ ಮೇಲಿನ ಜೀವರೂಪಗಳಿಗಿಂಥ ವಿಭಿನ್ನವಾಗಿರಬಹುದು. ಹಾಗಾಗಿ ಭೂಮಿಯ ಮೇಲೆ ಜೀವರೂಪಗಳನ್ನು ಕಂಡುಹಿಡಿಯುವಂತಹ ಉಪಕರಣಗಳು ಮಂಗಳ ಗ್ರಹಕ್ಕೆ ಸರಿಹೊಂದದೇ ಇರಬಹುದು.
                ಇದರಿಂದಾಗಿ ಲವ್ಲಾಕ್ರವರು ಜೀವವೊಂದರ ಮೂಲಭೂತ ರಚನೆಯೇನು ಹಾಗೂ ಅದನ್ನು ಹೇಗೆ ಪತ್ತೆಹಚ್ಚಬಹುದೆಂಬುದರ ಬಗೆಗೆ ಆಲೋಚಿಸತೊಡಗಿದರು. ಅವರ ಪ್ರಕಾರ ಜೀವವೊಂದರ ಬಹು ಸಾಮಾನ್ಯ ಲಕ್ಷಣವೆಂದರೆ ಅದು ಶಕ್ತಿ ಮತ್ತು ವಸ್ತುವನ್ನು ಬಳಸಿಕೊಳ್ಳುತ್ತದೆ ಹಾಗೂ ತ್ಯಾಜ್ಯವನ್ನು ವಿಸರ್ಜಿಸುತ್ತದೆ. ಅವರ ಊಹೆಯಂತೆ, ನಾವು ಆಮ್ಲಜನಕವನ್ನು ಬಳಸಿಕೊಂಡು ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡ್ ಬಿಡುವಂತೆ ಬೇರೆ ಗ್ರಹಗಳಲ್ಲಿ ಇರಬಹುದಾದ ಜೀವರಾಶಿ ಅವುಗಳ ಗ್ರಹದ ವಾತಾವರಣವನ್ನು ರೀತಿಯ ಆವರ್ತನೀಯ ವಿನಿಮಯಕ್ಕೆ ಬಳಸಿಕೊಳ್ಳುತ್ತದೆ. ಮಂಗಳಗ್ರಹದಲ್ಲಿ ಜೀವರಾಶಿ ಇದ್ದಲ್ಲಿ ಅದು ಮಂಗಳ ಗ್ರಹದ ವಾತಾವರಣದಲ್ಲಿ ನಾವು ಪತ್ತೆಹಚ್ಚಬಹುದಾದಂತಹ ರಾಸಾಯನಿಕ ಕುರುಹುಗಳನ್ನು ಬಿಟ್ಟಿರುತ್ತದೆ. ಅಂದರೆ ಮಂಗಳಗ್ರಹದಲ್ಲಿ ಜೀವರಾಶಿ ಇದೆಯೋ ಇಲ್ಲವೋ ಎಂಬುದನ್ನು ಪತ್ತೆಹಚ್ಚಲು ಮಂಗಳ ಗ್ರಹಕ್ಕೆ ಅಂತರಿಕ್ಷ ನೌಕೆಯೊಂದನ್ನು ಕಳುಹಿಸುವ ಅವಶ್ಯಕತೆಯೇ ಇಲ್ಲ, ಅದರ ಬದಲಿಗೆ ಇಲ್ಲಿಂದಲೇ ಮಂಗಳ ಗ್ರಹದ ವಾತಾವರಣವನ್ನು ವಿಶ್ಲೇಷಿಸುವ ಮೂಲಕ ಕಂಡುಕೊಳ್ಳಬಹುದು ಎಂದರು ಜೇಮ್ಸ್ ಲವ್ಲಾಕ್.

ತಮ್ಮ ವಿಚಾರವನ್ನು ಪರೀಕ್ಷಿಸಲು ಅವರು ತಮ್ಮ ಸಹ ವಿಜ್ಞಾನಿ ಡಿಯಾನ್ ಹಿಚ್ಕಾಕ್ರವರೊಂದಿಗೆ ಮಂಗಳ ಗ್ರಹದ ವಾತಾವರಣದ ರಾಸಾಯನಿಕ ವಿಶ್ಲೇಷಣೆಯನ್ನು ಪ್ರಾರಂಭಿಸಿದರು. ಅದರ ಫಲಿತಾಂಶಗಳು ಭೂಮಿಯ ವಾತಾವರಣಕ್ಕೆ ತದ್ವಿರುದ್ಧವಾಗಿತ್ತು. ಮಂಗಳನ ವಾತಾವರಣದಲ್ಲಿ ಶೇ.95ರಷ್ಟು ಇಂಗಾಲದ ಡೈ ಆಕ್ಸೈಡ್ ಹಾಗೂ ಅಲ್ಪ ಪ್ರಮಾಣದಲ್ಲಿ ಆಮ್ಲಜನಕವಿತ್ತು ಮತ್ತು ಮೀಥೇನ್ ಅನಿಲವಿರಲೇ ಇಲ್ಲ. ಆದರೆ ಭೂಮಿಯ ವಾತಾವರಣದಲ್ಲಿ ಶೇ.77ರಷ್ಟು ಸಾರಜನಕ, ಶೇ.21ರಷ್ಟು ಆಮ್ಲಜನಕ ಹಾಗೂ ಸಾಕಷ್ಟು ಪ್ರಮಾಣದಲ್ಲಿ ಮೀಥೇನ್ ಅನಿಲವಿದೆ. ಅಂದರೆ ಮಂಗಳಗ್ರಹ ರಾಸಾಯನಿಕವಾಗಿ ನಿರ್ಜೀವವಾಗಿದೆ, ನಡೆಯಬೇಕಾದ ರಾಸಾಯನಿಕ ಪ್ರಕ್ರಿಯೆಗಳೆಲ್ಲಾ ನಡೆದುಹೋಗಿವೆ. ಭೂಮಿ ಇನ್ನೂ ರೀತಿಯ ರಾಸಾಯನಿಕ ಸಮತೋಲನವನ್ನು ತಲುಪಿಲ್ಲ. ಉದಾಹರಣೆಗೆ, ಮೀಥೇನ್ ಅನಿಲ ಮತ್ತು ಆಮ್ಲಜನಕ ಪರಸ್ಪರ ಸುಲಭವಾಗಿ ಪ್ರಕ್ರಿಯಿಸಬಲ್ಲವು, ಆದರೂ ಅವು ಭೂಮಿಯ ವಾತಾವರಣದಲ್ಲಿವೆ. ಅಂದರೆ ಸ್ಥಿತಿಯಲ್ಲಿರಲು ಅನಿಲಗಳು ನಿರಂತಹ ಪರಿಚಲನೆಯಲ್ಲಿರಬೇಕು- ಭೂಮಿಯ ಮೇಲೆ ಪರಿಚಲನೆಯನ್ನು ಸಾಧ್ಯವಾಗಿಸುತ್ತಿರುವುದೇ ಭೂಮಿಯ ಮೇಲಿನ ಜೀವರಾಶಿ. ರೀತಿಯ ಪರಿಚಲನೆ ಮಂಗಳ ಗ್ರಹದಲ್ಲಿ ಕಾಣದೇ ಇರುವುದರಿಂದ ಈಗ ಅಲ್ಲಿ ಯಾವುದೇ ಜೀವರಾಶಿ ಇಲ್ಲವೆನ್ನಬಹುದು ಎಂದರು ಲವ್ಲಾಕ್.

ಹಿನ್ನೆಲೆಯಲ್ಲಿ ಲವ್ಲಾಕ್ರವರು ಭೂಮಿಯ ಮೇಲಿನ ಜೀವರಾಶಿ ಮತ್ತು ವಾತಾವರಣದ ನಡುವಿನ ಪ್ರಕ್ರಿಯೆಗಳನ್ನು ವಿಶ್ಲೇಷಿಸಿದರು. ಭೂಮಿಯ ಮೇಲೆ ಸುಮಾರು ಮೂರು ಬಿಲಿಯನ್ ವರ್ಷಗಳ ಹಿಂದೆ ಬ್ಯಾಕ್ಟೀರಿಯಾ ಮತ್ತು ದ್ಯುತಿಸಂಶ್ಲೇಷಣೆ ನಡೆಸುವ ಪಾಚಿ ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ಬಳಸಿಕೊಳ್ಳಲು ಪ್ರಾರಂಭಿಸಿ ತ್ಯಾಜ್ಯವಾಗಿ ಆಮ್ಲಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡಲು ಪ್ರಾರಂಭಿಸಿದವು. ಲಕ್ಷಾಂತರ ವರ್ಷಗಳು ಕಳೆದಂತೆ ಕ್ರಮೇಣ ಇದು ಭೂಮಿಯ ವಾತಾವರಣವನ್ನೇ ಬದಲಿಸಿತು- ಇದು ಆಗಿನ ಜೀವಿಗಳಿಗೆ ಆಮ್ಲಜನಕವೇ ವಿಷಕಾರಕವಾಗುವಂತಹ ಹಂತ ತಲುಪಿತು! ಆಗ ಆಮ್ಲಜನಕವನ್ನು ಬಳಸಿಕೊಳ್ಳುವ ಜೀವಿಗಳು ವಿಕಾಸವಾದವು.

ಅಂದರೆ ಅಸಂಖ್ಯ ಜೀವರಾಶಿಗಳ ಸಮ್ಮಿಳಿತ ಪ್ರಕ್ರಿಯೆಗಳು ವಾತಾವರಣವನ್ನು ನಿಯಂತ್ರಿಸುತ್ತಿದ್ದವು. ಎಲ್ಲ ಪ್ರಕ್ರಿಯೆಗಳ ಫಲವಾಗಿ ಭೂಮಿಯನ್ನು ಬಾಹ್ಯಾಕಾಶದಿಂದ ನೋಡಿದಲ್ಲಿ ಇಡೀ ಭೂಮಿಯೇ ಒಂದು ಜೀವಿಯಂತೆ ಕಂಡುಬರುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಇತರ ಗ್ರಹಗಳು `ಮೃತ ಗ್ರಹಗಳ ಹಾಗೆ ಕಂಡುಬರುತ್ತವೆ. ತಕ್ಷಣ ಲವ್ಲಾಕ್ರವರಿಗೆ ಇಡೀ ಭೂ ಗ್ರಹವೇ ಒಂದು `ಮಹಾನ್ ಜೀವಿಯಂತೆ ವರ್ತಿಸುತ್ತದೆ ಎನ್ನಿಸಿತು:

`ನನಗೆ ತತ್ಕ್ಷಣದ ಜ್ಞಾನೋದಯದಂತೆ ಭೂಮಿ ಜೀವಂತ ಗ್ರಹವೆಂಬ ವಿಚಾರ ನನ್ನೆದುರಿಗೆ ಅನಾವರಣಗೊಂಡಿತು. ನಾನು ಕ್ಯಾಲಿಫೋರ್ನಿಯಾದ ಪಸಡೇನಾದಲ್ಲಿನ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಕಟ್ಟಡದ ಮೇಲಿನ ಮಹಡಿಯ ಸಣ್ಣ ಕೋಣೆಯೊಂದರಲ್ಲಿದ್ದೆ. 1965 ಶರತ್ಕಾಲದ ಒಂದು ದಿನ ದಿನ... ನನ್ನ ಸಹ ವಿಜ್ಞಾನಿ ಡಿಯಾನ್ ಹಿಚ್ಕಾಕ್ರವರೊಂದಿಗೆ ಮಾತನಾಡುತ್ತಿದ್ದೆ... ಕ್ಷಣ ಇದ್ದಕ್ಕಿದ್ದಂತೆ ಭೂಮಿ ಜೀವಂತ ಗ್ರಹವೆಂಬ ಪರಿಕಲ್ಪನೆ ನನ್ನಲ್ಲಿ ಮಿಂಚುಹೊಡೆದಂತೆ ಕಾಣಿಸಿಕೊಂಡಿತು. ನನ್ನಲ್ಲೊಂದು ವಿಚಾರ ಮೂಡಿತು. ಭೂಮಿಯ ವಾತಾವರಣ ಒಂದು ಅಸಾಧಾರಣ ಹಾಗೂ ಅಸ್ಥಿರ ವಾಯು ಮಿಶ್ರಣ. ಅದರ ಸಂರಚನೆ ಬಹು ದೀರ್ಘಕಾಲದಿಂದಲೂ ಬಹುಪಾಲು ಬದಲಾವಣೆಯಿಲ್ಲದೆಯೇ ಇದೆ. ಅಂದರೆ, ಭೂಮಿಯ ಮೇಲಿನ ಜೀವರಾಶಿ ವಾತಾವರಣವನ್ನು ನಿರ್ಮಿಸಿದ್ದೂ ಅಲ್ಲದೆ ಅದರ ಸಂರಚನೆ ಅವುಗಳಿಗೆ ಅನುಕೂಲಕರವಾಗಿರುವಂತೆ ಅದನ್ನು ನಿಯಂತ್ರಿಸುತ್ತಲೂ ಇದೆಯೆ?’
ವಿಚಾರವನ್ನು ತಮ್ಮ ಗೆಳೆಯ ಹಾಗೂ ನೆರೆಮನೆಯಾತ ಇಂಗ್ಲಿಷ್ ಪ್ರಖ್ಯಾತ ಲೇಖಕ ಹಾಗೂ ಸಾಹಿತ್ಯದಲ್ಲಿ ನೋಬೆಲ್ ಬಹುಮಾನ ಪಡೆದಿರುವ ವಿಲಿಯಂ ಗೋಲ್ಡಿಂಗ್ರವರೊಡನೆ ಹಂಚಿಕೊಂಡರು. ಗೋಲ್ಡಿಂಗ್ ಸಿದ್ಧಾಂತಕ್ಕೆ ಗ್ರೀಕ್ ಪುರಾಣದ ಭೂದೇವತೆಯಾದ `ಗೇಯಾ (Gaia) ಹೆಸರನ್ನು ಇಡಲು ಸೂಚಿಸಿದರು. ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಲವ್ಲಾಕ್ 1979ರಲ್ಲಿಗೇಯಾ: ನ್ಯೂ ಲುಕ್ ಅಟ್ ಲೈಫ್ ಆನ್ ಅರ್ಥ್ಎಂಬ ಪುಸ್ತಕ ರಚಿಸಿದರು. ಅದರಲ್ಲಿ ಅವರು, `...ಭೂಮಿಯ ಮೇಲ್ಮೈನಲ್ಲಿನ, ವಾತಾವರಣದ ಹಾಗೂ ಸಾಗರಗಳ ಭೌತಿಕ ಮತ್ತು ರಾಸಾಯನಿಕ ಪರಿಸ್ಥಿತಿಗಳನ್ನು ಜೀವರಾಶಿಗೆ ಬದುಕಲು ಅನುಕೂಲಕರವಾಗಿರುವಂತೆ ಮಾಡಿಕೊಂಡಿರುವುದು ಜೀವರಾಶಿಯೇ. ಇದು ಭೂಮಿಯ ವಾತಾವರಣ ಮತ್ತು ಪರಿಸ್ಥಿತಿಗೆ ಜೀವರಾಶಿ ಹೊಂದಾಣಿಕೆ ಮಾಡಿಕೊಂಡು ವಿಕಾಸಹೊಂದಿವೆ ಎಂಬ ಸಾಂಪ್ರದಾಯಕ ನಂಬಿಕೆಗೆ ವಿರುದ್ಧವಾದುದುಎಂದಿದ್ದಾರೆ.

    ವಿಜ್ಞಾನಿ ಲಿನ್ ಮಾರ್ಗುಲಿಸ್

ಅವರ ಸಿದ್ಧಾಂತಕ್ಕೆ ಭೂಮಿ ಸ್ವ-ನಿಯಂತ್ರಣಕ್ಕೆ ಒಳಪಟ್ಟಿದೆ ಎನ್ನುವುದೇ ಅವರ ಚಿಂತನೆಗೆ ಮೂಲಭೂತ ಆಧಾರ. ಅದನ್ನು ಅವರು ಗಮನಿಸಿದ್ದರು ಹಾಗೂ ಅದು ಅವರಿಗೆ ತಿಳಿದಿತ್ತು. ಉದಾಹರಣೆಗೆ, ಭೂಮಿಯ ಮೇಲೆ ಜೀವ ವಿಕಾಸವಾದಾಗಿನಿಂದ ಇಂದಿನವರೆಗೆ ಭೂಮಿಗೆ ತಲುಪುವ ಸೂರ್ಯನ ಶಾಖದಲ್ಲಿ ಶೇ.25ರಷ್ಟು ಹೆಚ್ಚಳವಾಗಿದೆ, ಆದರೂ ಭೂಮಿಯ ಮೇಲಿನ ಉಷ್ಣಾಂಶ ಬಹುಪಾಲು ಏರಿಳಿತವಿಲ್ಲದೆ ನಿಯತವಾಗಿದೆ. ಆದರೆ ಅವರಿಗೆ ಅದರ ಹಿಂದಿನ ಕಾರ್ಯವೈಖರಿಯ ನಿಖರ ಅರಿವಿರಲಿಲ್ಲ. ಅಮೆರಿಕದ ಸೂಕ್ಷ್ಮಜೀವಿಶಾಸ್ತ್ರಜ್ಞೆ ಲಿನ್ ಮಾರ್ಗುಲೀಸ್ರವರೊಡನೆ ಅಧ್ಯಯನ ಪ್ರಾರಂಭಿಸಿದ ನಂತರ `ಗೇಯಾ ಸಿದ್ಧಾಂತ ಪೂರ್ಣರೂಪ ಪಡೆಯತೊಡಗಿತು. ಮಾರ್ಗುಲೀಸ್ರವರು ಹೇಗೆ ಜೀವಿಗಳು ಅದರಲ್ಲೂ ಸೂಕ್ಷ್ಮಜೀವಿಗಳು ವಾತಾವರಣದಿಂದ ಅನಿಲವನ್ನು ಬಳಸಿಕೊಳ್ಳುತ್ತವೆ ಹಾಗೂ ತಯಾರಿಸುತ್ತವೆ ಎಂಬುದರ ಬಗೆಗೆ ಅಧ್ಯಯನ ನಡೆಸುತ್ತಿದ್ದರು. ಇವರಿಬ್ಬರೂ ಜೊತೆಗೂಡಿ ಪ್ರಕೃತಿಯ ಹಲವಾರು `ನಿಯಂತ್ರಕವಿಧಾನಗಳನ್ನು ಕಂಡುಕೊಂಡರು. ಒಂದು ಉದಾಹರಣೆಯೆಂದರೆ ಇಂಗಾಲದ ಡೈ ಆಕ್ಸೈಡ್ ಚಕ್ರ. ಅಗ್ನಿಪರ್ವತಗಳು ನಿರಂತರವಾಗಿ ಅಗಾಧ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಉತ್ಪಾದಿಸುತ್ತವೆ. ಆದರೆ ಇಂಗಾಲದ ಡೈ ಆಕ್ಸೈಡ್ ಒಂದು ಹಸಿರುಮನೆ ಅನಿಲವಾಗಿರುವುದರಿಂದ ಅದು ಭೂಮಿಯ ಶಾಖವನ್ನು ಹೆಚ್ಚಿಸುತ್ತದೆ. ಅದನ್ನು ನಿಯಂತ್ರಣಕ್ಕೆ ತರದಿದ್ದಲ್ಲಿ ಭೂಮಿಯ ವಾತಾವರಣದ ಉಷ್ಣಾಂಶ ಹೆಚ್ಚಾಗಿ ಅದು ಜೀವರಾಶಿಗೆ ಮಾರಕವಾಗುತ್ತದೆ. ಸಸ್ಯಗಳು ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ಬಳಸಿಕೊಂಡು ಆಮ್ಲಜನಕ ಹೊರಬಿಡುತ್ತವೆ ಮತ್ತು ಪ್ರಾಣಿಗಳು ಆಮ್ಲಜನಕ ಬಳಸಿಕೊಂಡು ಇಂಗಾಲದ ಡೈ ಆಕ್ಸೈಡ್ ಹೊರಹಾಕಿ ಒಂದು ರೀತಿಯ ಸಮತೋಲನ ಕಾಪಾಡುತ್ತವೆ. ಇದು ಒಟ್ಟಾರೆ ವಾತಾವರಣದ ಮೇಲೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ. ಆದರೆ ಅಗ್ನಿಪರ್ವತಗಳು ಉಗುಳುವ ಇಂಗಾಲದ ಡೈ ಆಕ್ಸೈಡ್ ಸಮತೋಲನಕ್ಕೆ ಬೇರೆಯದೇ ವಿಧಾನವಿರಬೇಕು.

ಅಂತಹ ಒಂದು ವಿಧಾನವೆಂದರೆ, ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಶಿಲೆಗಳ ಶಿಥಿಲೀಕರಣದಿಂದ ಅಂದರೆ, ಮಳೆನೀರು ಇಂಗಾಲದ ಡೈ ಆಕ್ಸೈಡ್ನೊಂದಿಗೆ ಶಿಲೆಗಳೊಂದಿಗೆ ಬೆರೆತು ಕಾರ್ಬೊನೇಟ್ಗಳನ್ನು ಉಂಟುಮಾಡುತ್ತವೆ. ಲವ್ಲಾಕ್ ಮತ್ತು ಮಾರ್ಗುಲೀಸ್ ಕಂಡುಕೊಂಡಂತೆ ಪ್ರಕ್ರಿಯೆ ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾಗಳಿಂದ ಇನ್ನೂ ಹೆಚ್ಚು ಸಮರ್ಥವಾಗಿ ಮತ್ತು ಕ್ಷಿಪ್ರವಾಗಿ ನಡೆಯುತ್ತದೆ. ಕಾರ್ಬೊನೇಟ್ಗಳು ಹರಿಯುವ ನೀರಿನಲ್ಲಿ ಸೇರಿ ಸಮುದ್ರವನ್ನು ಸೇರುತ್ತದೆ. ಅಲ್ಲಿ ಸೂಕ್ಷ್ಮ ಪಾಚಿ ಅದನ್ನು ಬಳಸಿಕೊಂಡು ಸಣ್ಣ ಚಿಪ್ಪುಗಳನ್ನು ತಯಾರಿಸಿಕೊಳ್ಳುತ್ತವೆ. ಪಾಚಿ ಸತ್ತಾಗ, ಅವುಗಳ ಚಿಪ್ಪುಗಳು ಸಮುದ್ರದ ತಳ ಸೇರಿ ಅಲ್ಲಿ ಸುಣ್ಣಕಲ್ಲು ಮಡ್ಡಿಯಾಗುತ್ತವೆ. ಸುಣ್ಣಕಲ್ಲುಗಳು ಹೆಚ್ಚು ತೂಕವಿರುವುದರಿಂದ ಅವು ಕ್ರಮೇಣ ಭೂಮಿಯೊಳಕ್ಕೆ ಸೇರಿಕೊಂಡು ಅಲ್ಲಿ ಕರಗುತ್ತವೆ. ಅವುಗಳಲ್ಲಿನ ಸ್ವಲ್ಪ ಇಂಗಾಲದ ಡೈ ಆಕ್ಸೈಡ್ ಮತ್ತೊಂದು ಅಗ್ನಿಪರ್ವತದ ಮೂಲಕ ಪುನಃ ವಾತಾವರಣ ಸೇರುತ್ತದೆ.

ಮಣ್ಣಿನೊಳಗಿನ ಬ್ಯಾಕ್ಟೀರಿಯಾಗಳು ಹೆಚ್ಚಿನ ಉಷ್ಣತೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವುದರಿಂದ, ಭೂಮಿ ಬಿಸಿಯಾಗಿರುವಾಗ ಅವು ಹೆಚ್ಚು ಹೆಚ್ಚು ಇಂಗಾಲದ ಡೈ ಆಕ್ಸೈಡ್ ಅನ್ನು ವಾತಾವರಣದಿಂದ ತೆಗೆಯುತ್ತವೆ. ಇದರಿಂದ ಭೂಮಿ ತಂಪಾಗುತ್ತದೆ. ಹಾಗಾಗಿ ಇಡೀ ಪ್ರಕ್ರಿಯೆ ಪುನರಾವರ್ತಿತವಾಗುತ್ತಿರುತ್ತದೆ. ಲವ್ಲಾಕ್ ಮತ್ತು ಮಾರ್ಗುಲೀಸ್ರವರು ಇದೇ ರೀತಿ ಕಾರ್ಯನಿರ್ವಹಿಸುವ ಹಲವಾರು `ಚಕ್ರ ಪ್ರಕ್ರಿಯೆಗಳನ್ನು ಗುರುತಿಸಿದರು. ಅವರು ಗುರುತಿಸಿದ ಪ್ರಕ್ರಿಯೆಗಳ ವಿಶೇಷತೆಯೆಂದರೆ ಪ್ರಕ್ರಿಯೆಯಲ್ಲಿ ಸಮತೋಲನ ಕಾಪಾಡುವಲ್ಲಿ ಜೀವಿಗಳು ಹಲವು ರೀತಿಯಲ್ಲಿ ನಿರ್ಜೀವಿ ವಸ್ತುಗಳೊಂದಿಗೆ ಕಾರ್ಯನಿರ್ವಹಿಸುವುದು.

ಭೂಮಿಯ ಮೇಲಿನ ಜೈವಿಕ ಪ್ರಕ್ರಿಯೆಗಳ ಬಗೆಗೆ ವೆರ್ನಾಡ್ಸ್ಕಿ ಎಂಬ ರಷಿಯನ್ ವಿಜ್ಞಾನಿ 1929ರಲ್ಲೇ, `ನಮ್ಮ ಭೂಮಿಯ ರಾಸಾಯನಿಕ `ನಿರ್ಜೀವ ಗಡಸುತನದ ಮೇಲೆ ಜೀವರಾಶಿ ಅದ್ಭುತ, ಶಾಶ್ವತ ಹಾಗೂ ನಿರಂತರ ಆಕ್ರಮಣಕಾರಕವೆಂಬಂತೆ ಕಂಡುಬಂದಿದೆ... ಹಾಗಾಗಿ ಭೂಮಿಯ ಮೇಲೆ ಜೀವರಾಶಿ ಒಂದು ಬಾಹ್ಯ ಅಥವಾ ಆಕಸ್ಮಿಕ ಅಭಿವೃದ್ಧಿಯಲ್ಲ. ಬದಲಿಗೆ, ಅದು ಭೂಮಿಯ ಮೇಲ್ಪದರದೊಂದಿಗೆ ನಿಕಟ ಸಂಬಂಧ ಹೊಂದಿದೆ, ಅದರ ಚಟುವಟಿಕೆಗಳ ಭಾಗವಾಗಿದೆ ಹಾಗೂ ಚಟುವಟಿಕೆಗಳಲ್ಲಿನ ಬಹುಮುಖ್ಯ ಕಾರ್ಯಗಳನ್ನು ನಿಭಾಯಿಸುತ್ತದೆ ಮತ್ತು ಚಟುವಟಿಕೆಗಳಿಲ್ಲದಿದ್ದಲ್ಲಿ ಜೀವರಾಶಿ ಬದುಕುಳಿಯಲೇ ಸಾಧ್ಯವಾಗುತ್ತಿರಲಿಲ್ಲಎಂದು ಹೇಳಿದ್ದಾರೆ. ಸೌರಶಕ್ತಿಯನ್ನು ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸುವ ಕಾರ್ಯವನ್ನು ಪ್ರಾಥಮಿಕವಾಗಿ ಜೀವರಾಶಿಯೇ ನಿರ್ವಹಿಸುತ್ತದೆ ಎಂಬುದನ್ನು ತೋರಿಸಿಕೊಟ್ಟ ಮೊದಲ ವ್ಯಕ್ತಿಯೇ ವೆರ್ನಾಡ್ಸ್ಕಿ ಹಾಗೂ ಆತ ಜೈವಿಕಸಾಗಾಣಿಕೆ ವ್ಯವಸ್ಥೆಗಳ ಪ್ರಾಮುಖ್ಯತೆಯನ್ನೂ ಸಹ ಒತ್ತಿ ಹೇಳಿದ. ಜೈವಿಕಸಾಗಾಣಿಕೆ ವ್ಯವಸ್ಥೆಯ ಒಂದು ಉದಾಹರಣೆಯೆಂದರೆ ಸಾಗರಗಳ ಮೀನುಗಳನ್ನು ಪಕ್ಷಿಗಳು ತಿಂದು ಅಗಾಧ ಪ್ರಮಾಣದ ಸಾಗರದ ವಸ್ತುವನ್ನು ಭೂಮಿಗೆ ಸಾಗಿಸುವುದು. ಭೂಮಿಯಂತಹ ಗ್ರಹವೊಂದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದಲ್ಲಿ, ಅದರ ಮೇಲೆ ಜೀವರಾಶಿಯ ಪರಿಣಾಮವನ್ನು ಸಹ ಪರಿಗಣಿಸಬೇಕಾಗುತ್ತದೆ- ಅದನ್ನೇ ಲವ್ಲಾಕ್ ಮತ್ತು ಮಾರ್ಗುಲಿಸ್ರವರು ಹೇಳಿದ್ದು.

 ಭೂಮಿ ಒಂದು ಜೀವಂತ ಗ್ರಹ - ಬಾಹ್ಯಾಕಾಶದಿಂದ ಕಾಣುವಂತೆ

`ಗೇಯಾ ಸಿದ್ಧಾಂತ ಕೂಡಲೇ ಬಹಳಷ್ಟು ಕುತೂಹಲವನ್ನು ಉಂಟುಮಾಡಿತು. ಭೂಗ್ರಹ ಜೀವಂತವಾಗಿದೆ ಎಂಬುದನ್ನು ಹಿಂದೆ ಹಲವಾರು ಸಾರಿ ಬಹಳಷ್ಟು ವಿಜ್ಞಾನಿಗಳು ಹೇಳಿದ್ದರೂ ಅದು ಅರವತ್ತರ ದಶಕದಲ್ಲಿ ವಿಶೇಷವೆನಿಸಿದ್ದು ಏಕೆಂದರೆ ಬಾಹ್ಯಾಕಾಶ ನೌಕೆಗಳ ಮೂಲಕ ಮೊಟ್ಟಮೊದಲ ಬಾರಿಗೆ ಮಾನವನಿಗೆ ಭೂಮಿಯೆಂಬ ಜೀವಂತ ಗ್ರಹವನ್ನು ಇಡಿಯಾಗಿ ಬಾಹ್ಯಾಕಾಶದಿಂದ ನೋಡಲು ಸಾಧ್ಯವಾದುದರಿಂದ.

ಚಿಲಿ ದೇಶದ ನರ ವಿಜ್ಞಾನಿಗಳಾದ ಮಾಚುರಾನ ಮತ್ತು ವರೇಲಾರವರು ಜೀವದ `ಸ್ವರಚನಾವಿವರಣೆಯನ್ನು ಸಿದ್ಧಗೊಳಿಸುತ್ತಿದ್ದರು. `ಜೀವವೆಂಬುದೇನೆಂಬುದನ್ನು ವಿವರಿಸಲು ಹಲವಾರು ವಿವರಣೆಗಳಿದ್ದರೂ ಎಲ್ಲಾ ಕ್ಷೇತ್ರಗಳ ವಿಜ್ಞಾನಿಗಳು ಒಪ್ಪುವಂತಹ ಒಂದೇ ವಿವರಣೆ ಇಲ್ಲ. ಆದರೂ, ಜೀವಿಗಳು ತಮ್ಮದೇ ನಿಯಮಗಳಿಂದ ಜೀವದ ಘಟಕಗಳನ್ನು, ಅವುಗಳನ್ನು ನಿರ್ದಿಷ್ಟಪಡಿಸುವ ತಮ್ಮದೇ ಮಿತಿಗಳನ್ನೊಳಗೊಂಡಂತೆ ಉತ್ಪತ್ತಿ ಮಾಡುತ್ತವೆ ಹಾಗೂ ಅವುಗಳನ್ನು ಕಾಲಾಕಾಶದಲ್ಲಿ (Space and Time) ಒಂದು ಸ್ಥಿರ ಘಟಕದಂತೆ ಸ್ಥಾಪಿಸಿಕೊಳ್ಳುತ್ತವೆ ಎನ್ನುವ ಅವರ ವಿವರಣೆ ಭೂಮಿಯ ಮೇಲಿನ `ಜೀವವನ್ನು ವಿವರಿಸುವಲ್ಲಿ ಹೆಚ್ಚು ಯಶಸ್ವಿಯಾಗಿದೆ. ವಿವರಣೆಯಲ್ಲಿ ಮುಖ್ಯವಾಗಿರುವುದು ಜೀವದ ಭೌತಿಕ ರಚನೆಯಲ್ಲ ಬದಲಿಗೆ ಅದರ ಪ್ರಕ್ರಿಯೆಗಳು, ಅದರ ವ್ಯವಸ್ಥೆ ಹಾಗೂ ಘಟಕಗಳ ನಡುವಿನ ಪರಸ್ಪರ ಸಂಬಂಧಗಳು. ಜೀವವೆಂದರೆ ಒಂದು ಪರಸ್ಪರ ಸಂಬಂಧಗಳ ಜಾಲವಾಗಿದ್ದು ನಿರಂತರವಾಗಿ ಅವುಗಳನ್ನು ರಚಿಸಿಕೊಳ್ಳುತ್ತಿರುತ್ತದೆ. ಅತ್ಯಂತ ಸರಳವಾದ ಒಂದು ಸ್ವರಚನಾ ವ್ಯವಸ್ಥೆಯೆಂದರೆ ಒಂದು ಜೀವಕೋಶ (Living Cell). ವಿವರಣೆಯಂತೆ ಜೀವಿಯೊಂದು ಜೀವಂತವಾಗಿದೆಯೆಂದರೆ ಅದು ಸಂತಾನೋತ್ಪತ್ತಿ ಮಾಡಬೇಕು ಹಾಗೂ ತನ್ನ ಡಿ.ಎನ್..ಯನ್ನು ವರ್ಗಾಯಿಸುತ್ತಿರಬೇಕೆಂಬ ಅವಶ್ಯಕತೆಯಿಲ್ಲ. ವೆರ್ನಾಡ್ಸ್ಕಿ ಗಮನಿಸಿದಂತೆ ಶೇ.99.9ರಷ್ಟು ಭೂಮಿಯ ಮೇಲಿನ ವಿವಿಧ ಅಣುಗಳು ಭೂಮಿಯ ಮೇಲಿನ ಜೀವಿಗಳ ಪ್ರಕ್ರಿಯೆಗಳಿಂದಲೇ ರೂಪುಗೊಂಡಿರುವಂಥವು ಹಾಗಾಗಿ ಭೂಗ್ರಹವೂ ಸಹ ಒಂದು ಸ್ವ-ರಚನಾ ಜೀವಿಯೆಂದು ಕರೆಸಿಕೊಳ್ಳಲು ಅರ್ಹವಾಗಿದೆ.

`ಗೇಯಾ ಸಿದ್ಧಾಂತ ಸಾಕಷ್ಟು ಕುತೂಹಲ ಉಂಟುಮಾಡಿದಂತೆ ಬಹಳಷ್ಟು ಟೀಕೆಗೂ ಒಳಗಾಯಿತು. ಲವ್ಲಾಕ್ರವರು ಭೂಮಿ ಒಂದು ರೀತಿಯಲ್ಲಿ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳುತ್ತದೆ ಎನ್ನುವ ವಿಚಾರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರಿಂದಲೋ ಏನೋ, ಕೆಲವರು ಭೂಮಿಯ ನಡತೆಯಲ್ಲಿ ಪೂರ್ವನಿರ್ಧಾರಿತ ಉದ್ದೇಶವಿದೆ ಹಾಗೂ ಅದೊಂದು ಮೂಲಸಂಕಲ್ಪ (Teleology) `ಜೀವಿಎಂಬಂತೆ ಅರ್ಥೈಸಿಕೊಂಡರು. ಅಂದರೆ ಪ್ರಕೃತಿಯ ಕಾರ್ಯವೈಖರಿಯ ಹಿಂದೆ ಒಂದು ಉದ್ದೇಶ ಅಥವಾ ವಿನ್ಯಾಸವಿದೆ ಎಂಬಂತೆ (ಗ್ರೀಕ್ ಪದ ಟೆಲೋಸ್ ಎಂದರೆ ಉದ್ದೇಶ ಎಂದರ್ಥ). ಸಿದ್ಧಾಂತವನ್ನು ಟೀಕಿಸುವವರು `ಲವ್ಲಾಕ್ ಪ್ರತಿಪಾದಿಸುತ್ತಿರುವ ಸಿದ್ಧಾಂತದಲ್ಲಿ ಭೂಮಿಯಲ್ಲಿ ಒಂದು ಜೀವಂತ ಶಕ್ತಿಯಿದ್ದು ಅದು ಉದ್ದೇಶಪೂರ್ವಕವಾಗಿ ಹವಾಮಾನ ಮುಂತಾದುವನ್ನು ನಿಯಂತ್ರಿಸುತ್ತದೆ ಎನ್ನುವ ಅಭಿಪ್ರಾಯವಿದೆಎಂದರು. ಆದರೆ ಲವ್ಲಾಕ್ರವರು ವಿವರಿಸುತ್ತಿದ್ದ ಸಿದ್ಧಾಂತದ ಹಿನ್ನೆಲೆಯಲ್ಲಿ ಅಭಿಪ್ರಾಯವಿರಲಿಲ್ಲ. `ನಾನು ಅಥವಾ ಲಿನ್ ಮಾರ್ಗುಲೀಸ್ ಎಂದಿಗೂ ಗ್ರಹದ ಸ್ವ-ನಿಯಂತ್ರಣ ಉದ್ದೇಶಪೂರ್ವಕವೆಂದು ಅಥವಾ ಪೂರ್ವ ನಿರ್ಧಾರಿತವೆಂದು ಎಂದಿಗೂ ಪ್ರತಿಪಾದಿಸಲಿಲ್ಲ... ಆದರೂ ನಮ್ಮ ಸಿದ್ಧಾಂತ ಮೂಲಸಂಕಲ್ಪ ಸಿದ್ಧಾಂತವೆಂಬ ನಿರಂತರ ಹಾಗೂ ಕಠೋರ ಟೀಕೆಗೊಳಗಾಯಿತುಎಂದಿದ್ದಾರೆ ಅವರು.

ಡಾರ್ವಿನ್ ವಾದದ ಬೆಂಬಲಿಗರು ಸಹ `ಗೇಯಾ ಸಿದ್ಧಾಂತವನ್ನು ಟೀಕಿಸಿದರು. ಅವರ ಪ್ರಕಾರ ಡಾರ್ವಿನ್ ಸಮರ್ಥಿಸುವ ಪ್ರಾಕೃತಿಯ ಆಯ್ಕೆಯ (Natural Selection) ಬೆಂಬಲವಿಲ್ಲದೆ `ಗೇಯಾ ಹೇಗೆ ವಿಕಾಸಗೊಂಡಿತು? ಭೂಮಿ ಜೀವಂತವಿರುವುದಾದರೆ ಅದರ `ಸ್ವಾರ್ಥಿ ವಂಶವಾಹಿ (Selfish Gene) ಎಲ್ಲಿದೆ ಹಾಗೂ ಅದನ್ನು ಹೇಗೆ ತನ್ನ ಸಂತತಿಯನ್ನು ಮುಂದುವರಿಸುತ್ತದೆ?

ಇದಕ್ಕೆ ಪ್ರತ್ಯುತ್ತರವಾಗಿ ಲವ್ಲಾಕ್ ತಮ್ಮ ಸಹ ವಿಜ್ಞಾನಿ ಆಂಡ್ರ್ಯೂ ವ್ಯಾಟ್ಸನ್ರವರೊಡಗೂಡಿ `ಡೈಸಿ ಜಗತ್ತಿನ ಮಾದರಿಯನ್ನು ಪ್ರಸ್ತುತಪಡಿಸಿದರು. `ಡೈಸಿ ಜಗತ್ತುಎನ್ನುವುದು ಒಂದು ಕಾಲ್ಪನಿಕ ಗ್ರಹ ಹಾಗೂ ಅದು ತನ್ನದೇ ಪ್ರಾಕೃತಿಕ ಪ್ರಕ್ರಿಯೆಗಳಿಂದ ತಾನು ಬದುಕುಳಿಯುವ ಪರಿಸ್ಥಿತಿಗಳನ್ನು ನಿರ್ವಹಿಸಿಕೊಂಡು ಹೋಗುತ್ತದೆ. ಸರಳ ಮಾದರಿಯು `ಗೇಯಾ ಸಿದ್ಧಾಂತದ ವಿವರಣೆಯಲ್ಲಿ ಚರ್ಚೆಯ ಭಾಗವಾಗಿಹೋಗಿದೆ.

ಡೈಸಿ ಜಗತ್ತಿನ ಗ್ರಹದಲ್ಲಿ ಎರಡೇ ಪ್ರಭೇದದ ಜೀವಿಗಳಿವೆ- ಬಿಳಿಯ ಬಣ್ಣದ ಹಾಗೂ ಕಪ್ಪು ಬಣ್ಣದ ಡೈಸಿ ಹೂಗಳ ಸಸ್ಯಗಳು. ಬಿಳಿಯ ಡೈಸಿಗಳು ಬೆಳಕನ್ನು ಪ್ರತಿಫಲಿಸುತ್ತವೆ ಹಾಗೂ ಇದು ತಂಪಾಗಿಸುವ ಪರಿಣಾಮ ಹೊಂದಿವೆ, ಆದರೆ ಕಪ್ಪು ಡೈಸಿಗಳು ಬೆಳಕನ್ನು ಹೀರಿಕೊಳ್ಳುವುದರಿಂದ ಗ್ರಹವನ್ನು ಬೆಚ್ಚಗಾಗಿಸುತ್ತವೆ. ಡೈಸಿ ಸಸ್ಯಗಳ ಬೆಳವಣಿಗೆ ಅವುಗಳ ಸಂಖ್ಯೆ ಅಥವಾ ಸಾಂದ್ರತೆ, ಅವುಗಳ ಪ್ರಾಕೃತಿಕ ಸಾವಿನ ಗತಿ, ಲಭ್ಯವಿರುವ ಸ್ಥಳಾವಕಾಶ ಮತ್ತು ಉಷ್ಣಾಂಶವನ್ನು ಅವಲಂಬಿಸಿರುತ್ತದೆ. ಗ್ರಹ ಸೂರ್ಯನ ಸುತ್ತ ಸುತ್ತುತ್ತದೆ ಹಾಗೂ ಸೂರ್ಯನ ಪ್ರಖರತೆ ಮತ್ತು ತನ್ನ ಪ್ರತಿಫಲನ ಶಕ್ತಿಯ ಆಧಾರದ ಮೇಲೆ ಶಕ್ತಿಯನ್ನು ಹೀರಿಕೊಳ್ಳುತ್ತದೆ ಹಾಗೂ ತಾನು ಶಾಖವನ್ನು ಸಹ ಪ್ರತಿಫಲಿಸುತ್ತದೆ.

ಮಾದರಿಯಲ್ಲಿ ಸೂರ್ಯನ ಬೆಳಕಿನ ಪ್ರಖರತೆಯನ್ನು ಕ್ರಮೇಣ ಹೆಚ್ಚುಮಾಡಿದಂತೆ ಬಿಳಿಯ ಮತ್ತು ಕಪ್ಪು ಬಣ್ಣದ ಡೈಸಿಗಳು ಅವುಗಳ ಬೆಳವಣಿಗೆಗೆ ಅವಶ್ಯಕವಿರುವ ಉಷ್ಣಾಂಶ ಸೂಕ್ತ ಮಟ್ಟದಲ್ಲಿ ನಿಯತವಾಗಿರುವಂತೆ ಕಾಯ್ದುಕೊಳ್ಳಲು ತಮ್ಮ ಸಂಖ್ಯೆಯನ್ನು ಪ್ರಾಕೃತಿಕವಾಗಿ ಹೊಂದಿಸಿಕೊಳ್ಳುತ್ತವೆ. ಡೈಸಿಜಗತ್ತು ಒಂದು ಸ್ವ-ನಿಯಂತ್ರಕ ವ್ಯವಸ್ಥೆಯ ಉದಾಹರಣೆ. ಡೈಸಿ ಸಸ್ಯಗಳು ಹಾಗೂ ಗ್ರಹದ ಉಷ್ಣಾಂಶದ ನಡುವಿನ ಪರಸ್ಪರ ಸಂಬಂಧದ ಮೇಲೆ ಅವುಗಳ ಬೆಳವಣಿಗೆಯ ಗತಿ ಮತ್ತು ಗ್ರಹದ ಪ್ರತಿಫಲನ ಶಕ್ತಿಗಳು ಹೇಗೋ ಕಾರ್ಯನಿರ್ವಹಿಸಿ ಜೀವರಾಶಿಯ ಅಸ್ತಿತ್ವಕ್ಕೆ ಪರಿಸ್ಥಿತಿ ಸೂಕ್ತವಾಗಿರುವಂತೆ ನೋಡಿಕೊಳ್ಳುತ್ತವೆ.
ಡೈಸಿ ಜಗತ್ತು ಕೇವಲ ಒಂದು ಊಹಾಪ್ರಯೋಗ, ಆದರೆ ಸ್ವ-ನಿಯಂತ್ರಣದ ತತ್ವವನ್ನು ಯಾವುದೇ ರೀತಿಯ ಮೂಲಸಂಕಲ್ಪ (Teleology) ತತ್ವದ ಬೆಂಬಲವಿಲ್ಲದೆ ಉಷ್ಣತೆಯನ್ನು ನಿಯಂತ್ರಿಸಿಕೊಳ್ಳಬಲ್ಲ ಸುಸ್ಥಿರ ವ್ಯವಸ್ಥೆಯೆಂಬುದನ್ನು ಮನದಟ್ಟುವಂತೆ ತೋರಿಸಿಕೊಡುತ್ತದೆ. ಅಲ್ಲದೆ ಒಂದು ಪರಿಸರ ವ್ಯವಸ್ಥೆಯೊಂದರಲ್ಲಿನ ಜೀವಿಯೊಂದು ತನ್ನ ಉಳಿವಿನ ಬಗ್ಗೆ ಮಾತ್ರ ಕಾಳಜಿ ವಹಿಸುತ್ತದೆ. ಆದರೆ ಕಾಳಜಿಯ ಪ್ರತಿಫಲವು ಅವುಗಳ ಅಸ್ತಿತ್ವದ ಮೇಲೆ ಮಾತ್ರವಲ್ಲ ಇಡೀ ವ್ಯವಸ್ಥೆಯ ಮೇಲೇ ಅನುಕೂಲಕರ ಪರಿಣಾಮ ಬೀರುತ್ತದೆ.

ಡೈಸಿ ಜಗತ್ತಿನ ಮಾದರಿಯು ಪ್ರಕೃತಿಯನ್ನು ಪ್ರತ್ಯೇಕ ಘಟಕವಾಗಿ ಪರಿಗಣಿಸಿ ಅದನ್ನು ವಿಭಜಿಸಿ ನೋಡುವ ವಿಧಾನಕ್ಕೆ ತದ್ವಿರುದ್ಧವಾಗಿ ಅದನ್ನು ಒಂದು ಪರಿಪೂರ್ಣ ಘಟಕವೆಂಬಂತೆ ಸಮಗ್ರವಾಗಿ ನೋಡಬೇಕೆಂಬುದನ್ನು ತೋರಿಸಿಕೊಟ್ಟಿದೆ. ಡೈಸಿ ಜಗತ್ತು ಒಂದು ಮನೋಪ್ರಯೋಗವಾದರೂ ರೀತಿಯ ಪ್ರಕ್ರಿಯೆಗಳು ಪ್ರಕೃತಿಯಲ್ಲಿ ಚಾಲನೆಯಲ್ಲಿವೆ ಎಂಬುದನ್ನು ವಿಜ್ಞಾನಿಗಳು ಒಂದೊಂದಾಗಿ ವಿಶ್ಲೇಷಿಸತೊಡಗಿದ್ದಾರೆ. ಸಾಗರಗಳಲ್ಲಿನ ಉಪ್ಪು ಅಂಥದೊಂದು ಉದಾಹರಣೆ. ಹಿಂದೆ ಜೀವವಿಕಾಸದ ಹಾದಿಯಲ್ಲಿ ಪ್ರಾಕೃತಿಕ ಆಯ್ಕೆಯು (Natural Selection) ತಮ್ಮ ಸುತ್ತಮುತ್ತಲ ಪರಿಸರಕ್ಕೆ ಹೊಂದಿಕೊಳ್ಳುವಂತಹ ಜೀವಿಗಳನ್ನು ಮಾತ್ರ ಬದುಕುಳಿಯಲು ಬಿಡುತ್ತದೆ ಎಂದು ನಂಬಲಾಗಿತ್ತು. ಆದರೂ ಸಾಗರಗಳಲ್ಲಿನ ಉಪ್ಪಿನಂಶ ಲಕ್ಷಾಂತರ ವರ್ಷಗಳಿಂದ ಒಂದೇ ಮಟ್ಟದಲ್ಲಿ ಹೇಗೆ ಉಳಿದುಕೊಂಡುಬಂದಿದೆ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಕಾಡುತ್ತಿತ್ತು. ಸಾಗರಗಳಲ್ಲಿ ಈಗ ಇರುವ ಉಪ್ಪಿನಂಶ ಸುಮಾರು ಶೇ.3.4ರಷ್ಟು. ಅದೇನಾದರೂ ಶೇ.4ಕ್ಕಿಂತ ಹೆಚ್ಚಾದಲ್ಲಿ ಜೀವಿಗಳಲ್ಲಿನ ಜೀವಕೋಶಗಳ ಪದರಗಳು ಛಿದ್ರಗೊಂಡು ನಾಶವಾಗುತ್ತವೆ. ರೀತಿ ಆದಲ್ಲಿ ಸಾಗರಗಳಲ್ಲಿನ ಎಲ್ಲ ಜೀವರಾಶಿಯೂ ನಶಿಸಿಹೋಗಿಬಿಡುತ್ತವೆ. ಆದರೆ ಕಳೆದ 500 ದಶಲಕ್ಷ ವರ್ಷಗಳಿಂದ ಸಾಗರಗಳಲ್ಲಿನ ಉಪ್ಪಿನ ಅಂಶ ಹೆಚ್ಚಾಗಿ ರೀತಿಯ ಯಾವುದೇ ಜೀವಸಂಕುಲ ನಾಶವಾಗಿಲ್ಲ. ಹಾಗೆಂದು ಸಾಗರಕ್ಕೆ ಯಾವುದೇ ಉಪ್ಪಿನಂಶ ಸೇರುತ್ತಿಲ್ಲವೆಂದಲ್ಲ. ಶಿಲೆಗಳ ನಿರಂತರ ಶಿಥಿಲೀಕರಣದಿಂದ ಉಪ್ಪು ಸಾಗರವನ್ನು ಸೇರುತ್ತಲೇ ಇರುತ್ತದೆ. ಇನ್ನೂ ಹಲವಾರು ಪ್ರಾಕೃತಿಕ ಕ್ರಿಯೆಗಳಿಂದಲೂ ಸಹ ಉಪ್ಪಿನಂಶ ಸಾಗರಕ್ಕೆ ಸೇರುತ್ತಿರುತ್ತದೆ. ಆದರೂ ಸಾಗರದಲ್ಲಿನ ಉಪ್ಪಿನಂಶ ಹೇಗೆ ಹೆಚ್ಚಾಗದೆ ಅದರೊಳಗಿನ ಜೀವಸಂಕುಲದ ಉಳಿವೆಗೆ ಪೂರಕವಾಗಿದೆ?

ಇದಕ್ಕೆ ಉತ್ತರವನ್ನು ನಾವು ಡೈಸಿ ಜಗತ್ತಿನ ಮಾದರಿಯಲ್ಲೇ ಕಾಣಬಹುದು. ಅಂದರೆ ಸಾಗರದಲ್ಲಿನ ಜೀವಿಗಳೇ ಉಪ್ಪಿನಂಶದ ನಿಯಂತ್ರಣದಲ್ಲಿ ಪಾತ್ರವಹಿಸುತ್ತವೆ. ಉದಾಹರಣೆಗೆ ಸಾಗರದ ನೀರಿನಲ್ಲಿನ ಬ್ಯಾಕ್ಟೀರಿಯಾಗಳು ಸಾಗರದ ಜೀವಸಂಕುಲದ ಜೈವಿಕದ್ರವ್ಯದ ಶೇ.10ರಿಂದ 40 ಭಾಗದಷ್ಟಿದ್ದರೂ ಅವುಗಳ ಹೆಚ್ಚಿನ ಮೇಲ್ಮೈ ಪ್ರದೇಶದಿಂದಾಗಿ ಅವು ಶೇ.70ರಿಂದ 90ರಷ್ಟು ಸಕ್ರಿಯ ಜೈವಿಕ ಮೇಲ್ಮೈ ಪ್ರದೇಶವನ್ನು ಹೊಂದಿವೆ ಹಾಗೂ ಅದರ ಮೂಲಕ ಅವು ಸಾಗರದಲ್ಲಿನ ಹೆಚ್ಚಿನ ಉಪ್ಪಿನಂಶವನ್ನು ನಿಯಂತ್ರಿಸುತ್ತವೆ. `ಗೇಯಾ ಸಿದ್ಧಾಂತ ನಾವು ಸಾಂಪ್ರದಾಯಕ ದೃಷ್ಟಿಕೋನದಿಂದ ಅರಿತಿರುವ ಜೀವ ಮತ್ತು ನಿರ್ಜೀವ ವ್ಯವಸ್ಥೆಗಳ ಪರಸ್ಪರ ಸಂಬಂಧವನ್ನೇ ಬದಲಿಸಿದೆ.

ಡೈಸಿ ಜಗತ್ತು ಮತ್ತು `ಗೇಯಾ ಸಿದ್ಧಾಂತಗಳೆರಡೂ ವಿವಾದಾಸ್ಪದ ವಿಷಯಗಳಾಗಿವೆ ಏಕೆಂದರೆ, ಅವು ನಾವು ಅರಿತಿರುವ ಜೀವದ ವ್ಯಾಖ್ಯಾನದ ಬುಡಕ್ಕೇ ಕೈಹಾಕುತ್ತದೆ. ಜೀವವೆಂದರೆ ತನ್ನ ವಂಶವನ್ನು ಮುಂದುವರಿಸಲು ಬಯಸುವ `ಸ್ವಾರ್ಥಿ ವಂಶವಾಹಿ (Selfish Gene), ಇತರ ಜೀವಿಗಳೊಂದಿಗೆ ಸ್ಪರ್ಧಿಸುವ ಹಾಗೂ ಎಲ್ಲ ರೀತಿಯಿಂದಲೂ ಸರಿಯಿರುವ ಜೀವಿ ಮಾತ್ರ ಬದುಕುಳಿಯುತ್ತದೆ ಎಂಬುದು ಜೀವಸಂಕುಲದ ಬಗೆಗಿನ ನಮ್ಮ ವ್ಯಾಖ್ಯಾನದ ಹಿನ್ನೆಲೆಯಲ್ಲಿ ಭೂಮಿಯೂ ಸಹ ಒಂದು ಜೀವಂತ ಗ್ರಹವೆಂದು ಪರಿಗಣಿಸಬಹುದೆ?

`ಗೇಯಾ ಸಿದ್ಧಾಂತವು ಈಗಾಗಲೇ ವಿಜ್ಞಾನದ ಮೇಲೆ ಮಹತ್ತರ ಪರಿಣಾಮ ಬೀರಿದೆ ಹಾಗೂ ಜಗತ್ತಿನಲ್ಲಿ ನಮ್ಮ ಸ್ಥಾನವೆಲ್ಲಿದೆ ಎಂಬುದನ್ನು ನಮಗೆ ತೋರಿಸಿಕೊಟ್ಟಿದೆ. ನಾವು ಭೂಮಿ ವ್ಯವಸ್ಥೆ ಭಾಗವಷ್ಟೇ ಹೊರತು ಅದರ ಮಾಲೀಕರಲ್ಲ. ಭೂಮಿ ನಮ್ಮ ಲಾಭಕ್ಕಾಗಿ ರೂಪುಗೊಂಡಿಲ್ಲ ಹಾಗೂ ಅದನ್ನು ವಿರೂಪಗೊಳಿಸುವ ಹಕ್ಕೂ ನಮಗಿಲ್ಲ. `ಗೇಯಾ ವ್ಯವಸ್ಥೆಯಲ್ಲಿನ ಇತರ ಜೀವಿಗಳ ಹಾಗೆ ನಾವೂ ಸಹ ಪಾಲುದಾರ ಜೀವಿಗಳಷ್ಟೆ. ನಮ್ಮ ಪೂರ್ವಜರ ಹಾಗೆ ಸೀಮಿತ ಜೀವಿತಾವಧಿಯನ್ನು ಹೊಂದಿರುವ ಜೀವವಿಕಾಸದ ಹಾದಿಯಲ್ಲಿನ ಜೀವಿಗಳು. ಆದರೆ ನಾವು ವಿವೇಚನೆ ಮತ್ತು ಬುದ್ಧಿವಂತಿಕೆ ಹೊಂದಿರುವ ಜೀವಿಗಳು ಹಾಗೂ ಇನ್ನೂ ಹೆಚ್ಚಿನ ಬುದ್ಧಿವಂತಿಕೆ ಪಡೆಯುವಂತೆ ವಿಕಾಸ ಹೊಂದುವ ಸಾಧ್ಯತೆ ಇರುವವರೂ ಹೌದು. ಹಾಗಾಗಿ `ಗೇಯಾ ವ್ಯವಸ್ಥೆಯಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿರುವ ಜೀವಿಗಳೂ ಸಹ ಆಗಿದ್ದೇವೆ. ಹಾಗಾಗಿ ನಮ್ಮ ಗುರಿ ನಾವು ಬದುಕುಳಿಯುವುದಷ್ಟೇ ಅಲ್ಲ ಮುಂದೆ ವಿಕಾಸಹೊಂದುವ ಜೀವಿಗಳಿಗೂ ಬದುಕುಳಿಯುವ ಅವಕಾಶ ಮಾಡಿಕೊಡಬೇಕಾಗಿದೆ. ಆದರೆ ಜೀವಂತ ಭೂಮಿಯನ್ನು ನಿರ್ವಹಿಸುವ ಬುದ್ಧಿಮತ್ತೆ ನಮಗಿದೆಯೆ?

1979ರಲ್ಲಿ ತಮ್ಮ `ಗೇಯಾ: ನ್ಯೂ ಲುಕ್ ಅಟ್ ಲೈಫ್ ಆನ್ ಅರ್ಥ್ಪ್ರಕಟಣೆಯ ನಂತರ ಮಾನವನಿಂದಾಗಿ ಭೂಮಿಯ ಪರಿಸರದ ಮೇಲಾಗುತ್ತಿರುವ ತೀವ್ರ ಪರಿಣಾಮಗಳನ್ನು ಮತ್ತು ಅದರಿಂದುಂಟಾಗಬಹುದಾದ ಅಪಾಯಗಳ ಬಗೆಗೆ ಎರಡು ಕೃತಿಗಳನ್ನು ಜೇಮ್ಸ್ ಲವ್ಲಾಕ್ರವರು ರಚಿಸಿದ್ದಾರೆ. ಅದರಲ್ಲಿ ಮೊದಲನೆಯದು 2006ರಲ್ಲಿ ಪ್ರಕಟವಾದ `ರಿವೆಂಜ್ ಆಫ್ `ಗೇಯಾ ಎನ್ನುವ ಕೃತಿ. ಮಾನವನಿಂದಾಗಿ ಪರಿಸರದಲ್ಲಿ ಹೆಚ್ಚಾಗುತ್ತಿರುವ ಹಸಿರುಮನೆ ಅನಿಲಗಳ ಪ್ರಭಾವವನ್ನು ಕನಿಷ್ಠಗೊಳಿಸುವ `ಗೇಯಾ' ಸಾಮಥ್ರ್ಯವನ್ನು ಮಾನವನೇ ತನ್ನ ಮಳೆಕಾಡುಗಳು ಮತ್ತು ಜೈವಿಕ ವೈವಿಧ್ಯತೆಯ ವಿನಾಶದಿಂದಾಗಿ ಕುಂಠಿತಗೊಳಿಸುತ್ತಿದ್ದಾನೆಂದು ಅದರಲ್ಲಿ ಹೇಳಿದ್ದಾರೆ. ಇದರಿಂದಾಗಿ ಜಾಗತಿಕ ತಾಪಮಾನ ಹೆಚ್ಚುತ್ತಿದ್ದು ಅದೇ ಕಾರಣದಿಂದಾಗಿ ಉಷ್ಣ ಸಾಗರಗಳು ತಮ್ಮಲ್ಲಿನ ಉಷ್ಣತಾ ಪದರವನ್ನು ಆಕ್ರ್ಟಿಕ್ ಮತ್ತು ಅಂಟಾಕ್ರ್ಟಿಕ್ ಸಾಗರಗಳಿಗೂ ವಿಸ್ತರಿಸಿ ಸಾಗರದಲ್ಲಿನ ಪೋಷಕಾಂಶಗಳು ಮೇಲ್ಭಾಗಕ್ಕೆ ಬರದಂತೆ ತಡೆಯುತ್ತಿರುವುದರಿಂದ ಫೈಟೋಪ್ಲಾಂಕ್ಟನ್ ಪಾಚಿ ಬೆಳೆಯುತ್ತಿಲ್ಲ. ಇಡೀ ಸಾಗರದ ಆಹಾರ ಸರಪಳಿಯೇ ಪಾಚಿಯ ಮೇಲೆ ಅವಲಂಬಿತವಾಗಿದೆ. ಅಲ್ಲದೆ ಪಾಚಿ ಮತ್ತು ಕಾಡುಗಳ ಮೂಲಕವೇ `ಗೇಯಾ ವಾತಾವರಣದಲ್ಲಿನ ಹೆಚ್ಚಿನ ಹಸಿರುಮನೆ ಅನಿಲಗಳನ್ನು ಹೀರಿಕೊಂಡು ಭೂಮಿಯ ಮೇಲೆ ಸಮತೋಲನ ಉಂಟುಮಾಡಬಲ್ಲದು. ಆದರೆ ಇವೇ ಇಲ್ಲವಾಗುತ್ತಿರುವುದರಿಂದ ಶತಮಾನದ ಮಧ್ಯದ ಹೊತ್ತಿಗೆ ಭೂಮಿಯ ಮೇಲೆ ಮರುಭೂಮಿಗಳು ವಿಸ್ತರಿತವಾಗಿ ಮಾನವರು ವಾಸಿಸುವುದೇ ಕಷ್ಟವಾಗುತ್ತದೆ ಎನ್ನುತ್ತಾರೆ ಲವ್ಲಾಕ್.

ತಮ್ಮ ಮತ್ತೊಂದು ಕೃತಿಯಾದ ` ವ್ಯಾನಿಶಿಂಗ್ ಫೇಸ್ ಆಫ್ `ಗೇಯಾದಲ್ಲಿ ಅವರು ಏರುತ್ತಿರುವ ಸಾಗರಗಳ ಮಟ್ಟ ಹಾಗೂ ಧೃವಗಳಲ್ಲಿ ಕರಗುತ್ತಿರುವ ಹಿಮದ ಬಗೆಗೆ ಆತಂಕ ವ್ಯಕ್ತಪಡಿಸುತ್ತಾ ಭೂಮಿಯ ವಾತಾವರಣ ಈಗಾಗಲೇ ಶಾಶ್ವತ ಉಷ್ಣತಾ ಮಟ್ಟ ತಲುಪಿದೆ ಎನ್ನುತ್ತಾರೆ. ಸಂದರ್ಭಗಳಲ್ಲಿ ಮಾನವ ನಾಗರಿಕತೆ ಬದುಕುಳಿಯುವುದು ಕಷ್ಟಕರ ಹಾಗೂ ಭೂಮಿ 55 ದಶಲಕ್ಷ ವರ್ಷಗಳ ಹಿಂದೆ ಇದ್ದಂತಹ Paleocene–Eocene Thermal Maximum (PETM) ಹಂತ ತಲುಪುತ್ತದೆ ಎನ್ನುತ್ತಾರೆ. ಹಂತದಲ್ಲಿ ಇಡೀ ಭೂಮಿ ಅಲ್ಲಲ್ಲಿ ಕುರುಚಲು ಹೊಂದಿರುವ ಬಹುಪಾಲು ಮರುಭೂಮಿಯಾಗಿರುತ್ತದೆ. ` ಕೃತಿ ರಚನೆಯ ಸಮಯದಲ್ಲಿ ನನ್ನನ್ನು ಹೆಚ್ಚು ಭಾವುಕನನ್ನಾಗಿ ಮಾಡಿರುವುದು ನಾವು `ಗೇಯಾ ಒಂದು ಚೈತನ್ಯ ಭಾಗವಾಗಿದ್ದೇವೆ ಎನ್ನುವ ಆಲೋಚನೆ. ನಾವು ಈಗ ಏನಾಗಿದ್ದೇವೆ ಎನ್ನುವುದು ಮುಖ್ಯವಲ್ಲ, ಆದರೆ ನಾವು `ಗೇಯಾ ವ್ಯವಸ್ಥೆಯಲ್ಲಿ ಇನ್ನೂ ಉತ್ತಮ ಜೀವಿಗಳಾಗಿ ಮುಂದುವರಿಯಬಹುದು. ನಂಬಿದಂರೆ ನಂಬಿ, ಬಿಟ್ಟರೆ ಬಿಡಿ ನಾವೀಗ ವ್ಯವಸ್ಥೆಯ ಹೃದಯ ಮತ್ತು ಮನಸ್ಸಾಗಿದ್ದೇವೆ. ಆದರೆ ಪಾತ್ರದಲ್ಲಿ ನಾವು ಮುಂದುವರಿಯಬೇಕಾದಲ್ಲಿ ನಾವೊಂದು ನಾಗರಿಕ ಮತ್ತು ವಿವೇಚನೆಯುಳ್ಳ ಪ್ರಭೇದವಾಗಿ ಮುಂದುವರಿಯುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಹಾಗಾಗಿ ನಮ್ಮ ಜವಾಬ್ದಾರಿ ಮಹತ್ತರವಾದುದು. ಭೂಮಿ ವ್ಯವಸ್ಥೆಯಾದ `ಗೇಯಾ ಇಡೀ ವಿಶ್ವದ ವಯಸ್ಸಿನ ಕಾಲು ಭಾಗಕ್ಕಿಂತ ಹೆಚ್ಚು ಸಮಯ ಅಸ್ತಿತ್ವದಲ್ಲಿದೆ ಹಾಗೂ ಚಿಂತಿಸಬಲ್ಲ, ಸಂವಹಿಸಬಲ್ಲ ಮತ್ತು ತನ್ನ ಆಲೋಚನೆ ಮತ್ತು ಅನುಭವಗಳನ್ನು ದಾಖಲಿಸಿಡಬಲ್ಲ ಜೀವಪ್ರಭೇದವೊಂದರ ವಿಕಾಸಕ್ಕೂ ಅಷ್ಟೇ ಸಮಯ ಹಿಡಿದಿದೆ. `ಗೇಯಾ ಭಾಗವಾಗಿ ನಮ್ಮ ಅಸ್ತಿತ್ವವೂ ಸಹ ಗ್ರಹವನ್ನು ಸಚೇತನಗೊಳಿಸಿದೆ. ಕ್ರಮೇಣ ಸೂರ್ಯ ತನ್ನ ಶಾಖವನ್ನು ಹೆಚ್ಚಿಸುತ್ತಾ ಹೋದಂತೆ, ನಮ್ಮ ಸೌರವ್ಯೂಹ ಜೀವಿಗಳ ಅಸ್ತಿತ್ವಕ್ಕೆ ಹೆಚ್ಚು ಹೆಚ್ಚು ಮಾರಕವಾಗುತ್ತಾ ಹೋದಂತೆ, `ಗೇಯಾ ಬದುಕುಳಿಯುವಂತೆ ಮಾಡುವಲ್ಲಿ ನಮ್ಮ ಪಾಲೂ ಇದೆ ಎಂಬುದರ ಬಗೆಗೆ ನಾವು ಹೆಮ್ಮೆ ಪಡಬೇಕಾಗಿದೆ. ಅದಕ್ಕಾಗಿ ನಮ್ಮಿಂದ ಸಾಧ್ಯವಾಗುವುದನ್ನೆಲ್ಲಾ ಮಾಡಬೇಕಾಗಿದೆ.

`ನಮ್ಮ ವಿಜ್ಞಾನಿಗಳು ಮತ್ತು ಇಂಜಿನಿಯರ್ಗಳು ಭೂಮಿಯ ವಾತಾವರಣದ ವೈಪ್ಯರೀತ್ಯ ಬದಲಾವಣೆಗಳನ್ನು ಹಿಮ್ಮುಖಗೊಳಿಸಿ ಸರಿಪಡಿಸಬಹುದೆಂಬ ಭ್ರಮೆಯಲ್ಲಿದ್ದಾರೆ. ಆದರೆ ಅದು ಇದುವರೆವಿಗೂ ಸಾಧ್ಯವಾಗಿಲ್ಲ. ನಾವು ಹೇಗಾದರೂ ಶತಮಾನದ ಅಂತ್ಯದವರೆಗೂ ನಮ್ಮ ನಾಗರಿಕತೆಯನ್ನು ಮುಂದುವರಿಸಿಕೊಂಡುಹೋದಲ್ಲಿ ನಮ್ಮ ಮುಂದಿನ ಸಂತತಿ ಬಹುಶಃ `ಗೇಯಾ ಹವಾಮಾನ ಮತ್ತು ಭೂಮಿಯ ಸಂರಚನೆಯ ಸ್ವ-ನಿಯಂತ್ರಣ ಕಾರ್ಯದಲ್ಲಿ ತಾವೂ ಕೈಗೂಡಿಸುತ್ತಾರೆಂಬ ನಂಬಿಕೆ ನನಗಿದೆ.

`ನಾವು ಕಳೆದ ಹಿಮಯುಗ ಬದಲಾದಾಗಿನಿಂದ ಸುಮಾರು ಹನ್ನೆರಡು ಸಾವಿರ ವರ್ಷಗಳ ಹವಾಮಾನ ಶಾಂತಿಯನ್ನು ಅನುಭವಿಸುತ್ತಾ ಬಂದಿದ್ದೇವೆ. ಆದರೆ ಪರಿಸರ ಮತ್ತು ಹವಾಮಾನದ ಮೇಲೆ ನಮ್ಮ ರೀತಿ ದೌರ್ಜನ್ಯ ಮುಂದುವರಿದಲ್ಲಿ ಅನಿಯಂತ್ರಿತ ಅಣ್ವಸ್ತ್ರ ಯುದ್ಧಗಳಿಗಿಂತಲೂ ಭೀಕರವಾದ ಹವಾಮಾನ ವೈಪರೀತ್ಯಗಳನ್ನು ನಾವು ಕಾಣಬೇಕಾಗುತ್ತದೆ. ನಮ್ಮ ಹವಾಮಾನ ಇಡೀ ಮನುಕುಲವನ್ನೇ ನಾಶಮಾಡಿಬಿಡಬಹುದು ಹಾಗೂ ಬದುಕುಳಿಯುವ ಕೆಲವರು ಶಿಲಾಯುಗದ ಅಸ್ತಿತ್ವದ ಹಂತ ತಲುಪುತ್ತಾರೆಎಂದಿದ್ದಾರೆ ಜೇಮ್ಸ್ ಲವ್ಲಾಕ್.

`ಗೇಯಾ ಸಿದ್ಧಾಂತವು ಈಗಾಗಲೇ ವಿಜ್ಞಾನದ ಮೇಲೆ ಮಹತ್ತರ ಪರಿಣಾಮ ಬೀರಿದೆ ಹಾಗೂ ಜಗತ್ತಿನಲ್ಲಿ ನಮ್ಮ ಸ್ಥಾನವೆಲ್ಲಿದೆ ಎಂಬುದನ್ನು ನಮಗೆ ತೋರಿಸಿಕೊಟ್ಟಿದೆ. ಜೀವಂತ ಗ್ರಹದ ಸಮತೋಲನದ ಮೇಲೆ ನಮ್ಮ ಕೃತ್ಯಗಳು ಎಂಥಹ ಅಪಾಯಕಾರಿ ಪರಿಣಾಮ ಬೀರುತ್ತಿದೆ ಎಂಬುದನ್ನು ಮನಗಾಣಿಸಿದೆ. ಪರಿಸರದ ಮೇಲಾಗುತ್ತಿರುವ ನಮ್ಮ `ನಾಗರಿಕತೆ ಪ್ರತಿಕೂಲ ಪರಿಣಾಮಗಳನ್ನು ಸರಿಪಡಿಸಲೂ ಸಾಧ್ಯವಾಗದೆ ಹೋಗಬಹುದು. ಮಾನವನನ್ನೊಳಗೊಂಡಂತೆ ಯಾವುದೇ ಜೀವ ಸಂಕುಲ ಒಮ್ಮೆ ನಾಶವಾಯಿತೆಂದರೆ ಪುನಃ ಅದನ್ನು ವಾಪಸ್ಸು ತರಲಾಗದು. ಒಂದು ಬೃಹತ್ ವ್ಯವಸ್ಥೆಯ ಒಂದು ಸಣ್ಣ ಭಾಗ ಮಾತ್ರವಾಗಿದ್ದೇವೆ ನಾವು. ಅದರ ಮೇಲೆ ನಾವು ಉಂಟುಮಾಡುವ ಒಂದೊಂದು ಪ್ರತಿಕೂಲ ಪರಿಣಾಮವೂ ನಮ್ಮನ್ನು ವಿನಾಶದ ಬಾಗಿಲಿನ ಹತ್ತಿರ ಹತ್ತಿರಕ್ಕೆ ಕೊಂಡೊಯ್ಯುತ್ತದೆ.
ಡಾ.ಜೆ.ಬಾಲಕೃಷ್ಣ
j.balakrishna@gmail.com

4 ಕಾಮೆಂಟ್‌ಗಳು:

ನಾಗೇಶ ಹೆಗಡೆ ಹೇಳಿದರು...

ಪ್ರಿಯ ಬಾಲಕೃಷ್ಣ,
ಜೇಮ್ಸ್ ಲವ್ಲಾಕ್ ಮತ್ತು ಮಾಗು೯ಲಿಸ್ ಅವರ ಗೇಯಾ ಸಿದ್ಧಾಂತದ ಬಗ್ಗೆ ಕನ್ನಡದಲ್ಲಿ ಇಷ್ಟು ವಿವರವಾಗಿ ಯಾರೂ ಬರೆದಿರಲಿಲ್ಲ. ಅಭಿನಂದನೆಗಳು. ಗೇಯಾ ಅನ್ನೋದು 'ಭೂಮಿತಾಯಿ'ಎಂಬ ತುಸು ಆಧ್ಯಾತ್ಮಿಕ ಪರಿಕಲ್ಪನೆಗೆ ಸಮೀಪವಾಗಿರುವುದರಿಂದ ವಿಜ್ಞಾನಿಗಳು ಮೊದಮೊದಲು ಅದನ್ನು ಒಪ್ಪಲು ಸಿದ್ಧವಿರಲಿಲ್ಲ. ಇಂದಿನ ಜಗತ್ತಿನ ಅತ್ಯಂತ ಪ್ರಖರ ಚಿಂತಕಿಯರಲ್ಲೊಬ್ಬರಾದ ಮೇರಿ ಮಿಗ್ಲಿ ಎಂಬವರು ಗೇಯಾ ಸಿದ್ದಾಂತವನ್ನು ಜಗತ್ತನ್ನೇ ಬದಲಿಸಬಲ್ಲ ಹೊಸದಶ೯ನ (ಫಿಲಾಸಫಿ) ಎಂದು ಬಣ್ಣಿಸಿದ ನಂತರ ಅದು ವಿಜ್ಞಾನಿಗಳ ಗಮನ ಸೆಳೆಯತೊಡಗಿತು.
ಒಂದು ವಿನಂತಿ: Gaia ವನ್ನು 'ಗಿಯಾ' ಎಂತಲೋ 'ಗಾಯಾ' ಎಂತಲೋ ಬರೆಯುವುದು ಬೇಡ. 'ಗೇಯಾ' ಎನ್ನೋಣ. ಅದು ಮೂಲ ಉಚ್ಚಾರಣೆಗೆ ಸಮೀಪವಾಗಿಯೂ ಇದೆ. ಕನ್ನಡದ 'ಗೇಯ'ಕ್ಕೆ ಹೊಂದುವಂತೆಯೂ ಇದೆ.

ನಾವು ಕನ್ನಡಿಗರು ಈ ಪರಿಕಲ್ಪನೆಯನ್ನು ದಯವಿಟ್ಟು

ಹೆಚ್ ಎ ಪುರುಷೋತ್ತಮ ರಾವ್ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಹೆಚ್ ಎ ಪುರುಷೋತ್ತಮ ರಾವ್ ಹೇಳಿದರು...

ಪ್ರಿಯ ಬಾಲು ,
ನೀವು ಕನ್ನಡಕ್ಕೆ ಪುಕುವೊಕನನ್ನು ಪರಿಚಯಿಸಿದ ಮೊದಲಿಗಾರಗಿದ್ದೀರಿ . ಗಿಯಾ ಕಲ್ಪನೆ ಬಹುತೇಕ ನಮ್ಮ ಆಧ್ಯಾತ್ಮಿಕ ಪರಿಕಲ್ಪನೆಯನ್ನೇ ಹೋಲುವುದೆಂಬ ನಾಗೇಶ ಹೆಗಡೆಯವರ ಅಭಿಪ್ರಾಯ ಸರಿ. ಕನಿಷ್ಠ ಈ ಚಿಂತನೆಗಳು ಭೂಮಿಯ ಬಗ್ಗೆ ನಮ್ಮ ಅಹಂಕಾರವನ್ನು ತಗ್ಗಿಸಿದರೆ ಅಷ್ಟೇ ಸಾಕು.
ಹೆಚ್ ಎ. ಪುರುಷೋತ್ತಮ ರಾವ್ ಕೋಲಾರ .

Girish Babu ಹೇಳಿದರು...

ಈ ಭೂಮಿ, ಇಡೀ ಭೂಮಿಯ ಅನೇಕ ಭಾಗಗಳಲ್ಲಿರುವ ಅನೇಕ ರೀತಿಯ ಪರಿಸರಗಳು, ಸೂಕ್ಷ್ಮ ಅಣುಗಳಿಂದ ಹಿಡಿದು ಗಿಡ ಮರ ಪಶು ಪಕ್ಷಿ ನದಿ ತೊರೆ ಸಮುದ್ರ ಬೆಟ್ಟ ಬಯಲು ಕಾಡು ಮಳೆಗಾಲ ಚಳಿಗಾಲ ಹಾಗೂ ಬೇಸಿಗೆ ಕಾಲಗಳ ಸಮನ್ವಯತೆ, ಪ್ರತಿಯೊಂದು ಜೀವಿಯ ಮತ್ತೊಂದು ಜೀವಿಯ ಮೇಲಿನ ಪರಾವಲಂಬನೆ, ಕೋಟಿ ಕೋಟಿ ಕೋಟಿ ಜೀವರಾಶಿಗಳ ಸಹಜೀವನ ಮತ್ತು ಸಮನ್ವಯತೆ ಅರ್ಥ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ . ಹಾಗೆಯೇ ಪ್ರತಿಯೊಂದು ಜೀವಿಯೂ ಕೂಡ ಇಡೀ ಭೂಮಿಯ ಒಂದು ಭಾಗವಾಗಿ ಇಡೀ ಭೂಮಿಯನ್ನು ಜೀವಂತವಾಗಿ ನೋಡುವುದು ಕೂಡ ಎಲ್ಲರಿಗೂ ಸಾಧ್ಯವಾಗುವ ಕೆಲಸವೂ ಅಲ್ಲ .
ನಮಗೆಲ್ಲರಿಗೂ ಜೀವಂತ ಭೂಮಿಯ ಸಾಕ್ಷಾತ್ಕಾರವಾದ ಬೇಕಾಗಿದೆ.
ಆತ್ಮೀಯ ಗೆಳೆಯ ಬಾಲು ಈ ವಿಚಾರದಲ್ಲಿ ಈಗಾಗಲೇ ನಮ್ಮಲ್ಲಿ ಇರುವ ಅನೇಕ ಸಿದ್ಧಾಂತಗಳನ್ನು ಕನ್ನಡದಲ್ಲಿ ವಿವರಿಸಿ ಹೇಳಿರುವುದು ಸಂತೋಷದ ವಿಷಯ . ದುರಂತ ಎಂದರೆ ಭೂಮಿಯ ಬಗ್ಗೆ ಸ್ವಲ್ಪವೂ ಗೌರವ ಇಲ್ಲದ ನಾಯಕರು ಇಂದು ಭೂಮಿಯನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ .
ಸ್ನೇಹಿತ ಬಾಲು ಬರೆದಿರುವ ಈ ವಿಷಯ ಎಲ್ಲರಿಗೂ ತಲುಪಲಿ ಎಂದು ಆಶಿಸುತ್ತೇನೆ