05/07/2020ರ `ಪ್ರಜಾವಾಣಿ’ಯಲ್ಲಿ ಪ್ರಕಟವಾದ ನನ್ನ ಚಿತ್ರ-ಲೇಖನ. ಸಂಪೂರ್ಣ ಲೇಖನ
ಮತ್ತು ಹೆಚ್ಚಿನ ಚಿತ್ರಗಳು ಇಲ್ಲಿವೆ:
ಉಲುವಾಟು ಇಂಡೋನೇಷಿಯಾದ ದಕ್ಷಿಣ ಬಾಲಿಯಲ್ಲಿನ ಒಂದು ಸುಂದರ ಸ್ಥಳ. ಅದು ಅಲ್ಲಿರುವ ಪ್ರಾಚೀನ ದೇವಾಲಯ ಹಾಗೂ ಸುಂದರ ಮತ್ತು ಅದ್ಭುತ ಕಡಲತಡಿಗೆ ಹೆಸರುವಾಸಿಯಾಗಿದೆ. ಭಾರತದಲ್ಲಿನ ಹಲವಾರು ದೇವಾಲಯಗಳಲ್ಲಿ ಮಂಗಗಳು ಜನರ ಕೈಯಲ್ಲಿನ ಆಹಾರ ವಸ್ತುಗಳನ್ನು ಕದಿಯುವುದು ಸಾಮಾನ್ಯವಾಗಿರುವಂತೆ ಇಲ್ಲಿಯೂ ಮಂಗಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ಅಲ್ಲಿಗೆ ಭೇಟಿ ನೀಡುವ ಭಕ್ತರಿಗೆ, ಪ್ರವಾಸಿಗರಿಗೆ ತೊಂದರೆ ನೀಡುತ್ತವೆ. ಇಲ್ಲಿರುವ ಮಂಗಗಳು ಮಕಾಕ ಪ್ರಭೇದಕ್ಕೆ ಸೇರಿದ ಬಾಲಿ ಮಕಾಕ್‌ಗಳು ಹಾಗೂ ಅವುಗಳ ವೈಜ್ಞಾನಿಕ ಹೆಸರು ಮಕಾಕ ಫ್ಯಾಸಿಕ್ಯುಲಾರಿಸ್.
ಇಲ್ಲಿನ ಮಂಗಗಳ ಕದಿಯುವ ಪ್ರವೃತ್ತಿ ವಿಶಿಷ್ಟವಾದುದು ಹಾಗೂ ಅವು `ವ್ಯವಹಾರ ಚತುರ' ಮಂಗಗಳಾಗಿವೆ. ಸಾಧಾರಣವಾಗಿ ಮಂಗಗಳು ಮನುಷ್ಯರ ಕೈಯಲ್ಲಿರುವ ಹಣ್ಣು, ತಿಂಡಿ ತಿನಿಸುಗಳನ್ನು ಕದಿಯುತ್ತವೆ. ಉಲುವಾಟುವಿನಲ್ಲಿರುವ ಮಂಗಗಳೂ ಅದನ್ನೇ ಮಾಡುತ್ತವೆ. ಸುತ್ತ ಮುತ್ತಲೂ ಮಂಗಗಳಿರುವುದರಿAದ ಅಲ್ಲಿಗೆ ಬರುವ ಜನರು ಸಾಮಾನ್ಯವಾಗಿ ತಿಂಡಿ ತಿನಿಸುಗಳನ್ನು ಮಂಗಗಳಿಗೆ ಕಾಣದ ಹಾಗೆ ಬಚ್ಚಿಟ್ಟುಕೊಂಡಿರುತ್ತಾರೆ. ಸುಮಾರು ಮುವ್ವತ್ತು ವರ್ಷಗಳಿಂದ ಉಲುವಾಟು ಮಂಗಗಳು ತಿನ್ನಲು ಆಹಾರ ಪಡೆಯಲು ಹೊಸ `ವ್ಯಾವಹಾರಿಕ' ವಿಧಾನವೊಂದನ್ನು ಕಲಿತುಕೊಂಡಿವೆ. ಅವು ಜನರ ಬಳಿಯಿರುವ ಅವರ ಕನ್ನಡಕ, ಟೋಪಿ, ಮೊಬೈಲ್, ಚಪ್ಪಲಿ ಇತರ ಯಾವುದೇ `ಅಮೂಲ್ಯ' ವಸ್ತುಗಳನ್ನು ಕದಿಯುತ್ತವೆ. ಅವು ಅವುಗಳನ್ನು ಕದ್ದು ದೂರ ಓಡಿಹೋಗುವುದಿಲ್ಲ, ಬದಲಿಗೆ ಅಲ್ಲೇ ಮರ ಏರಿ ಕೂರುತ್ತವೆ. ನೀವು ಏನಾದರೂ ಅವುಗಳಿಗೆ ತಿಂಡಿ ನೀಡಿದರೆ, ಆ ತಿಂಡಿ ಅವುಗಳಿಗೆ ಇಷ್ಟವಾಗುವ ಗುಣಮಟ್ಟದ ಅಥವಾ ಪ್ರಮಾಣದಲ್ಲಿದ್ದರೆ ಕದ್ದ ವಸ್ತುವನ್ನು ಕೈಯಿಂದ ಜಾರಿಸಿ ತಿಂಡಿ ತೆಗೆದುಕೊಂಡು ಓಡುತ್ತವೆ. ಈ ವ್ಯವಹಾರವನ್ನು ಅರ್ಥಶಾಸ್ತçದಲ್ಲಿ ವಸ್ತುವಿನಿಮಯ ಅಥವಾ ಬಾರ್ಟರಿಂಗ್ ಎನ್ನುತ್ತಾರೆ. ಮನುಷ್ಯ ಹಣದ ಆವಿಷ್ಕಾರವಾಗುವ ಮೊದಲು ಮಾಡುತ್ತಿದ್ದುದು ಇದೇ ರೀತಿಯ ವ್ಯವಹಾರವನ್ನು. ನಮ್ಮ ಬಾಲ್ಯದ ದಿನಗಳಲ್ಲಿ ಹಳ್ಳಿಗಳಲ್ಲಿ ದವಸ ಧಾನ್ಯ ನೀಡಿ ಮಡಕೆ, ಕಬ್ಬಿಣದ ಸಲಕರಣೆಗಳನ್ನು ಈ ರೀತಿಯಲ್ಲಿ ವಸ್ತುವಿನಿಮಯ `ಖರೀದಿ' ಮಾಡುತ್ತಿದ್ದುದನ್ನು ನಾವು ಕಂಡಿದ್ದೇವೆ.
ನಾವು ಉಲುವಾಟುವಿಗೆ ಭೇಟಿ ನೀಡಿದಾಗ ನಮ್ಮ ಕಾರಿನ ಡ್ರೆöÊವರ್ ನಮ್ಮ ಕನ್ನಡಕ, ಟೋಪಿ ಇತ್ಯಾದಿ ವಸ್ತುಗಳ ಬಗ್ಗೆ ಎಚ್ಚರಿಕೆ ನೀಡಿದ್ದ. ನಾವು ಎಪ್ಪತ್ತು ಮೀಟರ್ ಕಡಿದಾದ ಎತ್ತರದಿಂದ ಸಾಗರವನ್ನು ವೀಕ್ಷಿಸುತ್ತ ಮೈಮರೆತಿರುವಾಗ ನನ್ನ ಪಕ್ಕದಲ್ಲಿ ಮಂಗವೊAದು ತಾಳ್ಮೆಯಿಂದ ಕೂತಿರುವುದನ್ನು ನೋಡಿ ಪ್ರವಾಸಿಗನೊಬ್ಬ ಎಚ್ಚರಿಸಿದ. ನಾನು ನೋಡುತ್ತಿರುವಂತೆ ಮರದ ಮೇಲೆ ಕೂತಿದ್ದ ಮಂಗವೊAದು ಅದರ ಕೆಳಗೆ ಹಾದುಹೋದ ಪ್ರವಾಸಿ ಮಹಿಳೆಯೊಬ್ಬಳ ತಲೆಯ ಮೇಲೆ ಸಿಕ್ಕಿಸಿಕೊಂಡಿದ್ದ ಕನ್ನಡಕವನ್ನು ಕಸಕ್ಕನೆ ಕಸಿದು ಬಾಯಲ್ಲಿ ಕಚ್ಚಿಕೊಂಡು ಮರದ ಎತ್ತರಕ್ಕೆ ಏರಿತು.
ಚಿತ್ರ 1: ಮಹಿಳೆಯೊಬ್ಬಳಿಂದ ಕನ್ನಡಕ ಕದ್ದಿರುವ ಮಂಗ. ಅದರ ಎದುರು ಕನ್ನಡಕ ವಾಪಸ್ಸು ಪಡೆಯಲು ಇಟ್ಟಿರುವ ಚಾಕಲೇಟ್ ಮತ್ತು ಹಣ್ಣು.
ಆಕೆ ಗಾಭರಿಯಾಗಿ ತಡವರಿಸುತ್ತಿರುವಾಗ ಅಂತಹ ಘಟನೆಗಳನ್ನು ಪರಿಹರಿಸಲು ಅಲ್ಲಿಯೇ ಇದ್ದ ಆ ದೇವಸ್ಥಾನದ ಸಿಬ್ಬಂದಿ ಮಹಿಳೆಯೊಬ್ಬಳು ತನ್ನ ಕೈಯಲ್ಲಿದ್ದ ಚೀಲದಿಂದ ಚಾಕೊಲೇಟ್ ತೆರೆದು ಮರದ ಮೇಲಿರಿಸಿದಳು. ಅದು ಮಿಸುಕಾಡಲಿಲ್ಲ. ನಂತರ ಹಣ್ಣೊಂದನ್ನು ಇರಿಸಿದಳು. ಅದು ಕಚ್ಚಿಕೊಂಡಿದ್ದ ಕನ್ನಡಕ ಬೀಳಿಸಿ ಆ ತಿಂಡಿಗಳನ್ನು ತೆಗೆದುಕೊಂಡು ತಿನ್ನತೊಡಗಿತು. ಆ ವಿದೇಶಿ ಪ್ರವಾಸಿ ಮಹಿಳೆ ಧನ್ಯವಾದ ಹೇಳಿ ಆ ಸಿಬ್ಬಂದಿ ಮಹಿಳೆಗೆ ಟಿಪ್ಸ್ ಕೊಟ್ಟಳು.
ಚಿತ್ರ 2: ಕನ್ನಡಕ ಹಿಂದಿರುಗಿಸಿ ಚಾಕೊಲೇಟ್ ಪಡೆದು ವಸ್ತುವಿನಿಮಯ ಮಾಡಿಕೊಂಡಿರುವ ಮಂಗ
ಮತ್ತೊಬ್ಬ ವಿದೇಶಿ ಮಹಿಳೆ ಮಂಗಗಳು ತೀರಾ ಹತ್ತಿರದಲ್ಲೇ ನಿರುಪದ್ರವಿಗಳಂತೆ ಕೂತಿರುವುದನ್ನು ಕಂಡು ತನ್ನ ಮೊಬೈಲ್‌ನಿಂದ ಫೋಟೊ ತೆಗೆಯತೊಡಗಿದಳು. ಫೋಸು ಕೊಡುವಂತೆ ಕೂತಿದ್ದ ಮಂಗ ಸರಕ್ಕನೆ ತನ್ನ ಎರಡೂ ಕೈಗಳಿಂದ ಆಕೆಯ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿತು. ಬಹುಶಃ ಆಕೆ ಅದನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು ಅನ್ನಿಸುತ್ತೆ. ಅದು ಮಂಗನ ಪಾಲಾಗಲಿಲ್ಲ. ಆಕೆ ಕಿರಿಚುತ್ತಾ ಹಿಂದೆ ಓಡಿದಳು.
ಚಿತ್ರ 3: ಮಂಗವೊAದರ ಫೋಟೊ ತೆಗೆಯುತ್ತಿರುವ ಮಹಿಳೆ. ಆಕೆಯ ಫೋನ್ ಕಸಿದುಕೊಳ್ಳುವ ಮಂಗನ ಪ್ರಯತ್ನ ಸಫಲವಾಗಲಿಲ್ಲ.
ಉಲುವಾಟು ಮಂಗಗಳು ನೀರಿನ ಬಾಟಲಿಯ ಮುಚ್ಚಳವನ್ನು ಸರಾಗವಾಗಿ ತಿರುಗಿಸಿ ತೆರೆದು ನೀರು ಕುಡಿಯುವುದನ್ನು ಸಹ ಕಲಿತಿವೆ. ಅವಕ್ಕೆ ದಾಹವಾದಾಗ ಬಹುಪಾಲು ಎಲ್ಲರ ಬಳಿಯೂ ಇರುವ ನೀರಿನ ಬಾಟಲಿಗಳನ್ನು ಸರಕ್ಕನೆ ಎಳೆದುಕೊಂಡು ಮರವೇರಿ ಮುಚ್ಚಳ ತಿರುಗಿಸಿ ತೆಗೆದು ನೀರು ಕುಡಿದು ಬಾಟಲಿ ಎಸೆಯುತ್ತವೆ. ಈ ರೀತಿ ಬಾಟಲಿಗಳ ಮುಚ್ಚಳ ತೆರೆಯಲು ತಿಳಿಯದೆ ಬಾಟಲಿಯನ್ನು ಕಚ್ಚಿ ಕಚ್ಚಿ ಅದರೊಳಗಿನ ಪಾನೀಯ ಕುಡಿಯಲು ಹರಸಾಹಸ ಪಡುತ್ತಿದ್ದ ಮಂಗಗಳನ್ನು ನಂದಿಬೆಟ್ಟದಲ್ಲಿ ಕಂಡಿದ್ದೇನೆ.
ಉಲುವಾಟು ಮಂಗಗಳ ಈ ರೀತಿಯ ವಸ್ತುವಿನಿಮಯ `ವ್ಯಾವಹಾರಿಕ' ನಡವಳಿಕೆ ಸುದ್ದಿಯಾಗಿತ್ತೇ ವಿನಃ ಅದರ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನ ನಡೆದಿರಲಿಲ್ಲ. 2010ರಲ್ಲಿ ಬೆಲ್ಜಿಯಂನ ಲೀಜ್ ವಿಶ್ವವಿದ್ಯಾನಿಲಯದ ನಡವಳಿಕೆ ಜೀವಶಾಸ್ತç ವಿಭಾಗದ ಫ್ಯಾನಿ ಬ್ರಾಟ್‌ಕಾರ್ನ್ ಇತರ ವಿಜ್ಞಾನಿಗಳೊಂದಿಗೆ ನಾಲ್ಕು ತಿಂಗಳು ಅಲ್ಲೇ ನೆಲೆಸಿ ಅಧ್ಯಯನ ಮಾಡಿ ಅದರ ಫಲಿತಾಂಶಗಳನ್ನು ವೈಜ್ಞಾನಿಕ ಪತ್ರಿಕೆಯೊಂದರಲ್ಲಿ ಪ್ರಕಟಿಸಿದರು.
ನಡವಳಿಕೆಯ ಕಲಿಕೆಗಳು ಸಮುದಾಯವೊಂದರಲ್ಲಿ ಅಥವಾ ತಲಮಾರಿನಿಂದ ತಲಮಾರಿಗೆ ವರ್ಗಾವಣೆಯಾಗುವುದು `ಪ್ರಜ್ಞೆ' ಇರುವ ಮಾನವನಲ್ಲಿ ಮಾತ್ರ ಎಂದು ಬಹಳ ದಿನಗಳವರೆಗೂ ನಂಬಲಾಗಿತ್ತು. ಆದರೆ ಹಲವಾರು ಮಂಗ ಮತ್ತು ವಾನರ(Pಡಿimಚಿಣes)ಗಳಲ್ಲಿ ಕೆಲವು ಸಲಕರಣೆಗಳ ಬಳಕೆಯ ಕಲಿಕೆ ದಾಖಲಾಗಿದೆ. ಆದರೆ ಹೊಸದಾಗಿ ಕಲಿತ ನಡವಳಿಕೆಯನ್ನು ಇತರ ಮಂಗಗಳು ನೋಡಿ ಕಲಿತು ಅವುಗಳನ್ನು ಪ್ರಾಕೃತಿಕ ಪರಿಸರದಲ್ಲಿ ಅನುಕರಿಸುತ್ತಿರುವುದು ಬಹುಶಃ ಇದೇ ಮೊದಲ ಗಮನಿಕೆಯಾಗಿರಬಹುದು. ಪ್ರಯೋಗಾಲಯಗಳಲ್ಲಿ ಮಂಗಗಳಿಗೆ ಈ ರೀತಿಯ ಅನುಕರಣೆಯನ್ನು ಹೇಳಿಕೊಟ್ಟು ಕಲಿಸಲಾಗಿರುವ ಉದಾಹರಣೆಗಳಿವೆ. ಪ್ರಕೃತಿಯಲ್ಲಿ ಒಂದು ಪ್ರಭೇದದ ಜೀವಿಯು ಮತ್ತೊಂದ ಪ್ರಭೇದದ ಜೀವಿಯಿಂದ ಆಹಾರವನ್ನು ಕದಿಯುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಮಾನವನನ್ನು ಹೊರತುಪಡಿಸಿ ಒ್ತಂದು ಜೀವಿಯು ಮತ್ತೊಂದು ಪ್ರಭೇದದ ಜೀವಿಯಿಂದ ವಸ್ತುವನ್ನು ಕದ್ದು ಅದನ್ನು ಅದೇ ಪ್ರಭೇದದ ಜೀವಿಯೊಂದಿಗೆ ವಸ್ತುವಿನಿಮಯ ಮಾಡಿಕೊಳ್ಳುವ `ಸಾಂಸ್ಕೃತಿಕ ನಡವಳಿಕೆ' ವಿಜ್ಞಾನಿಗಳಿಗೆ ಹೊಸ ವಿಷಯವಾಗಿದೆ.
ತಮ್ಮ ನಾಲ್ಕು ತಿಂಗಳ ಅಧ್ಯಯನದಲ್ಲಿ ಫ್ಯಾನಿ ಬ್ರಾಟ್‌ಕಾರ್ನ್ ಮತ್ತು ತಂಡದವರು 201 ಈ ರೀತಿಯ ಕದಿಯುವ ಮತ್ತು ವಸ್ತುವಿನಿಮಯ ಮಾಡಿಕೊಳ್ಳುವ ಘಟನೆಗಳನ್ನು ದಾಖಲಿಸಿದರು. ಅವರ ಅಧ್ಯಯನದ ಸಮಯದಲ್ಲಿ ಉಲುವಾಟುವಿನಲ್ಲಿ ತಲಾ ಸುಮಾರು 30ರಿಂದ 50 ಮಂಗಗಳಿರುವ ನಾಲ್ಕು ಗುಂಪುಗಳಿದ್ದು ಅವುಗಳಲ್ಲಿ ಎರಡು ಗುಂಪುಗಳು ಈ ರೀತಿಯ ನಡವಳಿಕೆಯನ್ನು ಹೆಚ್ಚು ಪ್ರದರ್ಶಿಸುತ್ತಿದ್ದವು. ಆ ಅಧ್ಯಯನದ ಸಮಯದಲ್ಲಿಯೇ ಅಲ್ಲಿಗೆ ಆಗಮಿಸಿದ ಹೊಸ ಮಂಗಗಳ ಗುಂಪೊAದು ಪ್ರಾರಂಭದಲ್ಲಿ ಈ ರೀತಿಯ ನಡವಳಿಕೆ ಪ್ರದರ್ಶಿಸಲಿಲ್ಲ. ಆದರೆ ಕ್ರಮೇಣ ಇತರ ಮಂಗಗಳನ್ನು ನೋಡಿ ಅವುಗಳಲ್ಲಿ ಕೆಲ ಮಂಗಗಳು ಆ ನಡವಳಿಕೆಯನ್ನು ಅನುಕರಿಸಲು ಪ್ರಯತ್ನಿಸಿದವು. ಕೆಲವು ಮಂಗಗಳು ತಮಗೆ ವಿನಿಮಯವಾಗಿ ಸಿಗುವ ಆಹಾರದ ಪ್ರಮಾಣದ ಆಧಾರದ ಮೇಲೆ ಕದ್ದಿರುವ ವಸ್ತುವನ್ನು ಹಿಂದಿರುಗಿಸಿದರೆ, ಕೆಲವು ಅವುಗಳ ಗುಣಮಟ್ಟ ನೋಡಿ ಹಿಂದಿರುಗಿಸಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸುತ್ತಿದ್ದವು.
ಅವರ ಅಧ್ಯಯನದ ಮತ್ತೊಂದು ಪ್ರಮುಖ ಅಂಶವೆAದರೆ, ಗಂಡು ಮಂಗಗಳು ಹೆಚ್ಚು ಕದಿಯುತ್ತಿದ್ದವು ಹಾಗೂ ಹದಿಹರೆಯದ ಗಂಡು ಮಂಗಗಳು ಈ ಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದವು. ವಿಜ್ಞಾನಿಗಳು ಹೇಳುವಂತೆ ಹದಿಹರೆಯದ ಮಂಗಗಳು ಹೆಚ್ಚು ಅಪಾಯಕ್ಕೆ ಒಡ್ಡಿಕೊಳ್ಳುವ ನಡವಳಿಕೆ ಹೊಂದಿರುತ್ತವೆ. ಈ ರೀತಿಯ ನಡವಳಿಕೆಯನ್ನು ಉಲುವಾಟು ಮಂಗಗಳು ಮೊದಲಿಗೆ ಹೇಗೆ ಕಲಿತವು ಎಂಬುದೇ ಅಚ್ಚರಿಯ ವಿಷಯವಾಗಿದೆ. ಬಹುಶಃ ಪ್ರಾರಂಭದಲ್ಲಿ ಮನುಷ್ಯರ ಪ್ರಭಾವವಿದ್ದರೂ ಇರಬಹುದು, ಆದರೆ ನಂತರ ಅದು ಹೇಗೆ ಒಂದು ಸಾಂಸ್ಕೃತಿಕ ನಡವಳಿಕೆಯಾಗಿ ಸಮುದಾಯದಲ್ಲಿ ಪ್ರಸಾರವಾಗಿದೆ ಎನ್ನುವುದರ ಕುರಿತು ಇನ್ನೂ ಹೆಚ್ಚಿನ ಮನೋವೈಜ್ಞಾನಿಕ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ಫ್ಯಾನಿಯವರು. ಈ ರೀತಿಯ ಕಾರ್ಯಕ್ಕೆ ಮಂಗಗಳಿಗೆ ಧೈರ್ಯ ಬೇಕು, ಏಕೆಂದರೆ ಅವು ಮನುಷ್ಯನನ್ನು ಆ ಸಮಯದಲ್ಲಿ ಮುಟ್ಟಬೇಕು ಮತ್ತು ಎಲ್ಲ ಮಂಗಗಳು ಆ ರೀತಿಯ ಧೈರ್ಯ ತೋರುವುದಿಲ್ಲ. ಅಲ್ಲದೆ ಕದ್ದನಂತರ ತಮಗೆ ಬೇಕಾಗಿರುವ ವಸ್ತು ಹಿಂದಿರುಗಿಸುವವರೆಗೂ ತಾಳ್ಮೆ ಮತ್ತು ಸ್ವ-ನಿಯಂತ್ರಣ ಹೊಂದಿರಬೇಕು. ಮಂಗಗಳು ಕದಿಯುವುದಷ್ಟೇ ಅಲ್ಲ, ಈ ರೀತಿಯ ಕೌಶಲ್ಯತೆಗಳನ್ನು ರೂಢಿಸಿಕೊಳ್ಳಬೇಕು. ಏಕೆಂದರೆ ಕದ್ದ ವಸ್ತು ಹಾನಿಗೊಳಗಾದರೆ ತಾವು ನಿರೀಕ್ಷಿಸಿದ ಆಹಾರ ಸಿಗದೇ ಹೋಗಬಹುದು. ಆದರೆ ತಿಂಡಿ ಸಿಕ್ಕನಂತರ ಬಹಳಷ್ಟು ಸಾರಿ ಕೆಳಕ್ಕೆ ಬೀಳಿಸುವ ಕನ್ನಡಕ ಇತ್ಯಾದಿ ಮುರಿದು ಹಾಳಾಗುತ್ತವೆ. ಅವರ ಪ್ರಕಾರ ಈ ಕೌಶಲ್ಯತೆಯನ್ನು ರೂಢಿಸಿಕೊಳ್ಳಲು ಮಂಗಗಳಿಗೆ ಸುಮಾರು ಐದಾರು ವರ್ಷಗಳೇ ಬೇಕಾಗಬಹುದು. ಮಂಗಗಳಿಗೆ ತಮ್ಮ ನಡವಳಿಕೆಯ ಅರಿವಿದೆಯೇ? ಅವು ತಮ್ಮ ಭವಿಷ್ಯದ ಕುರಿತು ಯೋಜಿಸುತ್ತವೆಯೆ? ಈ ಅಧ್ಯಯನಗಳಿಂದ ಮಾನವನ ಬಾಹ್ಯ ಜಗತ್ತಿನ ಗ್ರಹಿಕೆಯ ಸಾಮರ್ಥ್ಯದ ವಿಕಾಸದ ಕುರಿತು ಹಾಗೂ ಮಾನವನ ನಡವಳಿಕೆಯ ವಿಕಾಸದ ಕುರಿತೂ ಅರಿಯಬಹುದೆನ್ನುತ್ತಾರೆ ಅವರು.
ಬಾಲಿಯ ಉಲುವಾಟುವಿನಲ್ಲಿನ ಮಂಗಗಳು ಮಾತ್ರ ಈ ನಡವಳಿಕೆಯನ್ನು ಕಲಿತುಕೊಂಡಿವೆ. ಬಾಲಿಯ ಇತರೆಡೆ ಇದೇ ಪ್ರಭೇದದ ಮಂಗಗಳಿದ್ದರೂ ಅವು ಈ ರೀತಿಯ ನಡವಳಿಕೆಯನ್ನು ಕಲಿತಿಲ್ಲ.
***
ಚಿತ್ರ 4: ಉಲುವಾಟು ದೇವಾಲಯದ ಒಂದು ನೋಟ
ಚಿತ್ರ 5: ರುದ್ರ ರಮಣೀಯ ಉಲುವಾಟು
ಚಿತ್ರ 6: ಉಲುವಾಟುವಿನಲ್ಲಿ ಸುಂದರ ಸೂರ್ಯಾಸ್ಥ
ಇಂಡೋನೇಷ್ಯಾ ಪ್ರಮುಖವಾಗಿ ಇಸ್ಲಾಂ ರಾಷ್ಟçವಾದರೂ ಬಾಲಿ ಒಂದು ಹಿಂದೂ ದ್ವೀಪವಾಗಿದೆ. ಬಾಲಿ ದ್ವೀಪದಲ್ಲಿರುವ ಜನರಲ್ಲಿ ಶೇ. 83ರಷ್ಟು ಜನ ಹಿಂದೂಗಳು. ಕ್ರಿ.ಶ. ಮೊದಲ ಶತಮಾನದಲ್ಲಿಯೇ ಇಲ್ಲಿ ಮಹಾಭಾರತದ ಕತೆಗಳು ಪ್ರಚಲಿತವಾಗಿದ್ದುದು ದಾಖಲಾಗಿದ್ದು ಆ ಕತೆಗಳ ಆವೃತ್ತಿಗಳು ದಕ್ಷಿಣ ಭಾರತದ (ತಮಿಳುನಾಡು, ಆಂಧ್ರಪ್ರದೇಶ) ಕತೆಗಳಿಗೆ ಹೋಲಿಕೆಯಾಗುತ್ತಿದ್ದವಂತೆ. ಚೋಳರ ಆಳ್ವಿಕೆಯ ಅವಧಿಯಲ್ಲಿ ವ್ಯಾಪಾರಿಗಳು, ಸಾಹಸಶೀಲ ನಾವಿಕರಿಂದ ಹಿಂದೂಧರ್ಮ ಪ್ರಸಾರವಾಗಿರಬಹುದೆನ್ನುತ್ತವೆ ದಾಖಲೆಗಳು. ಬಾಲಿಯಲ್ಲಿ ಆಚರಣೆಯಲ್ಲಿರುವ ಆಗಮ ಹಿಂದೂ ಧರ್ಮ ಅಲ್ಲಿನ ಸ್ಥಳೀಯ ಪ್ರಾಚೀನ ಸಂಪ್ರದಾಯಗಳೊAದಿಗೆ ಬೆರೆತು ಹುಟ್ಟಿಕೊಂಡ ಜೀವನಶೈಲಿಯಾಗಿದೆ. ತ್ರಿಮೂರ್ತಿಗಳಾದ ಬ್ರಹ್ಮ, ಶಿವ, ವಿಷ್ಣುರನ್ನು ಪೂಜಿಸಿದರೂ ಇಂಡೋನೇಷ್ಯಾದ ಕಾನೂನಿನನ್ವಯ `ಏಕ ದೈವ' ಧರ್ಮವೆಂದು ಗುರುತಿಸಿಕೊಂಡಿದ್ದು `ಸ್ಯಾಂಗ್ ಹ್ಯಾಂಗ್ ಅಚಿಂತ್ಯ'ನೇ ದೇವಾದಿ ದೇವ ಎಂದು ಪರಿಗಣಿಸುತ್ತಾರೆ. ರಾಮಾಯಣ ಮತ್ತು ಮಹಾಭಾರತ ಬಾಲಿಯಲ್ಲಿ ಪ್ರಖ್ಯಾತವಾಗಿದ್ದು ಹಲವಾರು ಬಾಲಿಯ ಸಾಂಪ್ರದಾಯಕ ನೃತ್ಯ, ಗೊಂಬೆಯಾಟಗಳ ಮೂಲಕ ಸದಾ ಪ್ರದರ್ಶಿಸುತ್ತಿರುತ್ತಾರೆ. ಉಲುವಾಟುವಿನಲ್ಲಿ ಪ್ರತಿ ದಿನ ಸಂಜೆ ಬಾಲಿಯ ಕೆಚಕ್ ನೃತ್ಯದಲ್ಲಿ ರಾಮಾಯಣವನ್ನು ಪ್ರದರ್ಶಿಸುತ್ತಾರೆ.
ಚಿತ್ರ 7 ಮತ್ತು 8: ಉಲುವಾಟುವಿನಲ್ಲಿ ಸಂಜೆ ನಡೆಯುವ ಕೆಚಕ್ ನೃತ್ಯದಲ್ಲಿ ರಾಮಾಯಣದ ಸೀತಾಪಹರಣದ ಹಾಗೂ ಲಂಕಾದಹನದ ದೃಶ್ಯಗಳು.
ಉಲುವಾಟು ದೇವಾಲಯ ಅಥವಾ ಬಾಲಿ ಭಾಷೆಯಲ್ಲಿ ಪುರ ಲುಹುರ್ ಉಲುವಾಟು (ಬಾಲಿ ಭಾಷೆಯಲ್ಲಿ ದೇವಾಲಯವನ್ನು ಪುರ ಎನ್ನುತ್ತಾರೆ). ಬಾಲಿಯ `ಆಧ್ಯಾತ್ಮಿಕ ಸ್ತಂಭ'ಗಳೆAದು ಪರಿಗಣಿಸಿರುವ ಆರು ಪ್ರಮುಖ ದೇವಾಲಯಗಳಲ್ಲಿ ಉಲುವಾಟುವಿನ ಶಿವ/ರುದ್ರ ದೇವಾಲಯವೂ ಒಂದು. ಸಾಗರದಿಂದ 70 ಮೀಟರ್ ಎತ್ತರದ ಕಡಿದಾದ ಸ್ಥಳದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದಿಂದ ಕಾಣುವ ಸಾಗರದ ನೋಟವೂ `ರುದ್ರ ರಮಣೀಯ'ವಾಗಿದೆ. ಬಾಲಿ ಬಾಷೆಯಲ್ಲಿ ಉಲು ಎಂದರೆ ತುದಿ ಅಥವಾ ಮೇಲ್ಭಾಗ ಮತ್ತು ವಾಟು ಎಂದರೆ ಶಿಲೆ ಎಂದರ್ಥ. ಉಲುವಾಟು ದೇವಾಲಯದ ಚರಿತ್ರೆ ಸುಮಾರು 10ನೇ ಶತಮಾನದಲ್ಲಿಯೇ ಪ್ರಾರಂಭವಾಯಿತೆನ್ನುತ್ತವೆ ಪ್ರಾಖ್ತನನ ಕುರುಹುಗಳು.
ಉಲುವಾಟು ಬಾಲಿಯ ವಿಮಾನ ನಿಲ್ದಾಣದಿಂದ ಅಥವಾ ಕೇಂದ್ರ ನಗರ ಪ್ರದೇಶದಿಂದ ಸುಮಾರು 20 ಕಿ.ಮೀ. ದೂರದಲ್ಲಿದ್ದು ಸಾಕಷ್ಟು ಟ್ಯಾಕ್ಸಿಗಳು ಸುಲಭವಾಗಿ ಲಭಿಸುತ್ತವೆ. ಕೇಚಕ್ ನೃತ್ಯ ಮುಗಿಯಲು ರಾತ್ರಿ ಸುಮಾರು 7.30 ಗಂಟೆಯಾಗುವುದರಿAದ ಹೋಟೆಲಿಗೆ ಹಿಂದಿರುಗಲು ಟ್ಯಾಕ್ಸಿಯಲ್ಲಿ ಹೋಗುವುದು ಉತ್ತಮ.
1 ಕಾಮೆಂಟ್:
Makes very interesting reading.And very detailed in the description.
ಕಾಮೆಂಟ್ ಪೋಸ್ಟ್ ಮಾಡಿ