ನಾನು ಅನುವಾದಿಸಿದ `ಮಾಂಟೊ
ಕತೆಗಳು’ ಕೃತಿಯನ್ನು ಗೌರಿ ಲಂಕೇಶ್ ರವರು ಪತ್ರಿಕೆ ಪ್ರಕಾಶನದಲ್ಲಿ 2009ರಲ್ಲಿ ಪ್ರಕಟಿಸಿದರು. ಮಾಂಟೋನ
ಎಲ್ಲ ಕತೆಗಳೂ ಮನಸ್ಸಿಗೆ ಘಾಸಿಯುಂಟುಮಾಡುತ್ತವೆ, ಎಲ್ಲ ನಂಬಿಕೆಗಳನ್ನು ಪ್ರಶ್ನಿಸುವಂತೆ ಮಾಡುತ್ತವೆ.
ದೇಶ ವಿಭಜನೆಯ ಘೋರ ಹಾಗೂ ಕ್ರೌರ್ಯದ ಚಿತ್ರಣವನ್ನು ಯಾವ ಚಾರಿತ್ರಿಕ ದಾಖಲೆಯೂ ಮಾಂಟೋನ ಕತೆಗಳ ಹಾಗೆ
ಕಟ್ಟಿಕೊಡುವುದಿಲ್ಲ. ನನ್ನ ಅನುವಾದದ ಅಂತಹ ಒಂದು ಕತೆ `ದೇವರ ಮೇಲಾಣೆ’ ಇಲ್ಲಿದೆ:
ದೇವರ ಮೇಲಾಣೆ
ಗಡಿಯ
ಆ ಕಡೆಯಿಂದ ಮುಸಲ್ಮಾನರು ಇನ್ನೂ ಬರುತ್ತಿದ್ದರು ಹಾಗೂ ಈ ಕಡೆಯಿಂದ ಅಲ್ಲಿಗೆ ಹಿಂದೂಗಳು ಹೋಗುತ್ತಿದ್ದರು.
ಮನೆಮಠ ಎಲ್ಲವನ್ನೂ ಕಳೆದುಕೊಂಡ ನಿರಾಶ್ರಿತರಿಂದ ಕ್ಯಾಂಪುಗಳು ತುಂಬಿಹೋಗಿ ಬಿರಿಯುವಂತಾಗಿದ್ದವು.
ಅಲ್ಲಿ ಜನರಿಗೆ ನಿಲ್ಲಲು ಒಂದಿಂಚೂ ಜಾಗವಿಲ್ಲದಂತಿತ್ತು. ಅಷ್ಟಾದರೂ ಬಂದ ಬಂದ ಜನರನ್ನು ಕ್ಯಾಂಪುಗಳಿಗೆ
ತುಂಬಿಸಿಕೊಳ್ಳಲಾಗುತ್ತಿತ್ತು. ಆ ಕ್ಯಾಂಪುಗಳಲ್ಲಿ ತೀವ್ರ ಆಹಾರದ ಕೊರತೆಯಿತ್ತು ಹಾಗೂ ಶೌಚದ ವ್ಯವಸ್ಥೆಯ
ಬಗ್ಗೆ ಹೇಳುವುದೇ ಬೇಡ, ಅಷ್ಟೊಂದು ಅವ್ಯವಸ್ಥೆಯಿತ್ತು. ಜನರು ಹಲವಾರು ಕಾಯಿಲೆಗಳಿಂದ ನರಳುತ್ತಿದ್ದರು.
ಎಲ್ಲೆಲ್ಲೂ ಗೊಂದಲ, ಅವ್ಯವಸ್ಥೆ ರಾರಾಜಿಸುತ್ತಿತ್ತು.
ಅದು 1948ರ ಪ್ರಾರಂಭದ ಅವಧಿ. ಬಹುಶಃ ಮಾರ್ಚ್
ತಿಂಗಳಿರಬಹುದು. ಗಡಿಯ ಎರಡೂ ಬದಿಗಳಲ್ಲಿನ ರಜಾಕಾರ್‍ಗಳು ಅಪಹರಣಕ್ಕೊಳಗಾದ ಹೆಂಗಸರನ್ನು ಮತ್ತು ಮಕ್ಕಳನ್ನು
ಹುಡುಕಿ ಅವರವರ ಕುಟುಂಬಗಳಿಗೆ ಒಪ್ಪಿಸುವ ಶ್ಲಾಘನೀಯ ಕೆಲಸ ಮಾಡುತ್ತಿದ್ದರು. ಈ ಪ್ರಶಂಸನೀಯ ಕೆಲಸದಲ್ಲಿ
ನೂರಾರು ಗಂಡಸರು, ಹೆಂಗಸರು, ಯುವಕ ಯುವತಿಯರು ಕೈಜೋಡಿಸುತ್ತಿದ್ದರು. ಈ ಕಾರ್ಯದಲ್ಲಿ ತೊಡಗಿರುವವರನ್ನು
ನೋಡುವುದು ಒಂದು ಅಚ್ಚರಿಯ ಸಂಗತಿಯಾಗಿತ್ತು. ಅಂದರೆ, ಮನುಷ್ಯನಲ್ಲಿ ಅಂತರ್ಗತವಾಗಿರುವ ಕೆಡುಕನ್ನು
ತೊಡಗಿಸುವಲ್ಲಿ ಮನುಷ್ಯನೇ ಮುಂದಾಗುತ್ತಿದ್ದುದು. ಶೀಲಾಪಹರಣಕ್ಕೆ ಒಳಗಾದ ಹೆಂಗಸರನ್ನು ಅವರಿಗೆ ಮತ್ತಷ್ಟು
ಅಪಮಾನವಾಗದಂತೆ ಕಾಪಾಡುವ ಪ್ರಯತ್ನಗಳು ನಡೆಯುತ್ತಿದ್ದವು. ಏಕೆ?
ಇನ್ನೂ ಮುಂದೆ ಅವರ ಹೆಸರು ಮತ್ತಷ್ಟು ಹಾಳಾಗದಿರಲಿ
ಎಂದೆ? ತಮ್ಮ ಎಲ್ಲಾ ನೋವು, ಗಾಯಗಳನ್ನು ಮರೆತು ಹಿಂದಿನಂತೆ ಗೌರವಾನ್ವಿತರೊಡನೆ ಕೂತು ಆಹಾರ ಪಾನೀಯಗಳನ್ನು
ಸೇವಿಸಲೆಂದೆ? ಹಾಗೂ ಉತ್ತಮ ಮತ್ತು ಸನ್ನಡತೆಯ ಜನ ಮತ್ತೊಂದೆಡೆ ನೋಡುತ್ತಿರುವಾಗ ಸಭ್ಯತೆಯ ಸೂಜಿ ದಾರದಿಂದ
ದಬ್ಬಾಳಿಕೆಯ ಕಾಮದಿಂದ ಛಿದ್ರಗೊಂಡ ಬದುಕಿಗೆ ತೇಪೆ ಹಾಕಲೆಂದೆ?
ಇದೆಲ್ಲಾ ಎಲ್ಲಿಗೆ ಕರೆದೊಯ್ಯತ್ತಿತ್ತೆಂದು ಹೇಳುವುದು
ಕಷ್ಟ. ಏನೇ ಆದರೂ ರಜಾಕಾರ್‍ಗಳ ಪ್ರಯತ್ನಗಳು ಖಂಡಿತವಾಗಿಯೂ ಪ್ರಶಂಸನೀಯವಾಗಿದ್ದವು. ಅವರು ಪ್ರತಿ
ಹಂತದಲ್ಲೂ ರಾಶಿ ರಾಶಿ ಕಷ್ಟಗಳನ್ನು ಎದುರಿಸಬೇಕಾಗಿತ್ತು. ಈ ರೀತಿ ಹೆಂಗಸರನ್ನು ಮತ್ತು ಬಾಲಕಿಯರನ್ನು
ಅಪಹರಿಸುತ್ತಿದ್ದಂಥವರು ಯಾವುದೇ ಶಾಶ್ವತ ನೆಲೆ ಹೊಂದಿರುತ್ತಿರಲಿಲ್ಲ. ಈ ದಿನ ಇಲ್ಲಿರುತ್ತಿದ್ದರು,
ನಾಳೆ ಮತ್ತೆಲ್ಲಿಗೋ ಹೋಗಿರುತ್ತಿದ್ದರು. ಜನ ಸಾಮಾನ್ಯವಾಗಿ ಈ ಸ್ವಯಂಸೇವಕರಿಗೆ ಸಹಾಯಮಾಡಲು ಹಿಂಜರಿಯುತ್ತಿದ್ದರು.
ಎಂತೆಂಥವೋ ವಿಚಿತ್ರ ಕತೆಗಳು ಕೇಳಿಬರುತ್ತಿದ್ದವು.
ಸಹ್ರಾನ್‍ಪುರ್‍ನ ಇಬ್ಬರು ಹುಡುಗಿಯರು ಪಾಕಿಸ್ತಾನದಲ್ಲಿನ ತಮ್ಮ ಕುಟುಂಬಗಳಿಗೆ ಹಿಂದಿರುಗಲು ಒಪ್ಪಿರಲಿಲ್ಲವೆಂದು
ಸಂಪರ್ಕ ಅಧಿಕಾರಿಯೊಬ್ಬರು ತಿಳಿಸಿದ್ದರು. ಅಪಹರಣಕ್ಕೊಳಗಾದ ಮತ್ತೊಬ್ಬ ಹುಡುಗಿಯನ್ನು ಆಕೆಯ ಅಡಗುತಾಣದಿಂದ
ಬಲವಂತವಾಗಿ ಹೊರಕ್ಕೆ ಎಳೆದುತರಬೇಕಾಯಿತೆಂದು ಮತ್ತೊಬ್ಬ ವ್ಯಕ್ತಿ ತಿಳಿಸಿದ್ದ. ಅಪಹರಣಕಾರನ ಕುಟುಂಬದವರು
ಆ ಹುಡುಗಿಗೆ ದೂರದ ಪ್ರಯಾಣಕ್ಕೆ ತಮ್ಮದೇ ಮಗಳನ್ನು ಕಳುಹಿಸಿಕೊಡುವಂತೆ ಕಣ್ಣೀರು ಸುರಿಸಿ ಕಳುಹಿಸಿಕೊಟ್ಟಿದ್ದರು.
ಎಷ್ಟೋ ಜನ ಹುಡುಗಿಯರು ಅವರ ತಾಯಂದಿರಿಗೆ ಹೆದರಿ ಹಿಂದಿರುಗುವ ಪ್ರಯಾಣದ ದಾರಿಯಲ್ಲಿಯೇ ಆತ್ಮಹತ್ಯೆ
ಮಾಡಿಕೊಂಡಿದ್ದರು. ಇನ್ನು ಕೆಲವರು ಈ ಭೀಭತ್ಸ ಸನ್ನಿವೇಶಗಳನ್ನು ಎದುರಿಸಲಾಗದೆ ಮಾನಸಿಕ ಸ್ವಾಸ್ಥ್ಯ
ಕಳೆದುಕೊಂಡಿದ್ದರು. ಇನ್ನು ಕೆಲವರು ಕುಡಿತದ ಚಟಕ್ಕೆ ಬಲಿಯಾಗಿದ್ದರು; ಅವರು ಬಾಯಾರಿಕೆಯಾದಾಗ ನೀರು
ಕೇಳುವ ಬದಲು ಮದ್ಯ ಕೇಳುತ್ತಿದ್ದರು ಮತ್ತು ಅಶ್ಲೀಲ ಬೈಗುಳಗಳ ಸುರಿಮಳೆಗರೆಯುತ್ತಿದ್ದರು.
ಈ ನರಕದಲ್ಲಿ ಬಸಿರಾದ ಹೆಂಗಸರು ಮತ್ತು ಹುಡುಗಿಯರ
ಬಗ್ಗೆ ಯೋಚಿಸುವಾಗಲೆಲ್ಲಾ ಅವರ್ಣನೀಯ ಹೆದರಿಕೆ ನನ್ನನ್ನು ಆವರಿಸಿಕೊಳ್ಳುತ್ತಿತ್ತು. ನಾನು ಅವರ ಹೊಟ್ಟೆಗಳ
ಬಗ್ಗೆಯೇ ಚಿಂತಿಸುತ್ತಿದ್ದೆ. ಆ ಹೊಟ್ಟೆಗಳಿಗೆ ಏನಾಗುತ್ತದೆ? ಅವುಗಳೊಳಗಿನ ಜೀವಗಳ ವಾರಸುದಾರರು ಯಾರಾಗುತ್ತಾರೆ?
ಪಾಕಿಸ್ತಾನವೆ ಅಥವಾ ಭಾರತವೆ?
ಆ ಒಂಭತ್ತು ತಿಂಗಳುಗಳ ಪ್ರಯಾಸದ ಪ್ರವಾಸದ ಹೊಣೆಗಾರಿಕೆಯನ್ನು
ಯಾರು ಹೊರುತ್ತಾರೆ? ಪಾಕಿಸ್ತಾನವೆ ಅಥವಾ ಭಾರತವೆ? ಇವೆಲ್ಲಾ ಮನುಷ್ಯನ ಅಮಾನವೀಯ ಕ್ರೌರ್ಯದ ಲೆಕ್ಕದ
ಪುಸ್ತಕದಲ್ಲಿ ದಾಖಲಾಗುವುದೆ? ಈ ದಾಖಲಾತಿಗೆ ಇನ್ನೂ ಅದರಲ್ಲಿ ಖಾಲಿ ಪುಟಗಳು ಉಳಿದಿರುವುವೆ?
ಅಪಹರಣಕ್ಕೊಳಗಾದ ಹೆಚ್ಚು ಹೆಚ್ಚು ಹೆಂಗಸರು ಬರುತ್ತಿದ್ದರು.
ಅಪಹರಣಕ್ಕೊಳಗಾದ ಹೆಚ್ಚು ಹೆಚ್ಚು ಹೆಂಗಸರು ಹೋಗುತ್ತಿದ್ದರು.
ಈ ಹೆಂಗಸರನ್ನು ಅದೇಕೆ ಅಪಹರಣಕ್ಕೊಳಗಾದ ಹೆಂಗಸರು
ಎಂದು ಕರೆಯುತ್ತಾರೆ ಎಂದು ನನಗೆ ಅಚ್ಚರಿಯಾಗುತ್ತಿತ್ತು. ಎಂತಹ ಸನ್ನಿವೇಶಗಳಲ್ಲಿ ಅವರನ್ನು ಅಪಹರಿಸಲಾಯಿತು?
ಆಸಕ್ತಿ ತೋರುವ ಹೆಣ್ಣನ್ನು ಆಕರ್ಷಿಸುವುದು ಅಥವಾ ಅಪಹರಿಸುವುದು ಗಂಡು ಮತ್ತು ಹೆಣ್ಣು ಇಬ್ಬರೂ ಸಮವಾಗಿ
ಭಾಗವಹಿಸುವ ಒಂದು ಅತ್ಯಂತ ರೊಮ್ಯಾಂಟಿಕ್ ಸಾಹಸಕಾರ್ಯವಾಗಿರುತ್ತದೆ. ಅಂಥವರ ಆತ್ಮಗಳು ತಮ್ಮ ಗಡಿಗಳನ್ನು
ಹಾದುಹೋಗುವವರೆಗೂ ಆತಂಕದಿಂದ ಚಡಪಡಿಸುತ್ತಿರುತ್ತವೆ. ಆದರೆ ಅಸಹಾಯಕ ಮತ್ತು ತನ್ನನ್ನು ರಕ್ಷಿಸಿಕೊಳ್ಳಲಾಗದ
ಹೆಣ್ಣೊಬ್ಬಳನ್ನು ಬಲಾತ್ಕಾರದಿಂದ ಹೊತ್ತುತಂದು ಕತ್ತಲಕೋಣೆಯಲ್ಲಿ ಕೂಡಿಹಾಕುವುದು ಎಂತಹ ಅಪಹರಣ?
ಆದರೆ, ತತ್ವಶಾಸ್ತ್ರ, ವಾದವಿವಾದ ಮತ್ತು ತರ್ಕಗಳೆಲ್ಲ
ಅರ್ಥಹೀನವಾಗಿದ್ದ ಸಮಯಗಳವು. ಎಲ್ಲ ಜನರೂ ಬಾಗಿಲು ಕಿಟಕಿಗಳನ್ನು ಭದ್ರವಾಗಿ ಮುಚ್ಚಿ ನಿದ್ರಿಸಲು ಪ್ರಯತ್ನಿಸುತ್ತಿದ್ದ
ದಿನಗಳವು. ಅದೇ ರೀತಿ ನಾನೂ ಸಹ ನನ್ನ ಮನಸ್ಸಿನ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿರಲು ಪ್ರಯತ್ನಿಸುತ್ತಿದ್ದೆ.
ಆದರೆ ಬೇರೆ ಸಮಯಗಳಿಗಿಂತ ಹೆಚ್ಚು ಅವುಗಳನ್ನು ತೆರೆದಿರುವಂತೆ ನನ್ನ ಅಂತರಾತ್ಮ ಹೇಳುತ್ತಿತ್ತು. ನಾನು
ಅಸಹಾಯಕನಾಗಿದ್ದೆ ಹಾಗೂ ದಿಕ್ಕು ತೋರದವನಾಗಿದ್ದೆ.
ಅಪಹರಣಕ್ಕೊಳಗಾದ ಹೆಚ್ಚು ಹೆಚ್ಚು ಹೆಂಗಸರು ಬರುತ್ತಿದ್ದರು.
ಅಪಹರಣಕ್ಕೊಳಗಾದ ಹೆಚ್ಚು ಹೆಚ್ಚು ಹೆಂಗಸರು ಹೋಗುತ್ತಿದ್ದರು.
ಈ ಬರುವಿಕೆ ಮತ್ತು ಹೋಗುವಿಕೆ ಒಂದು ನಿರಂತರ
ಪ್ರಕ್ರಿಯೆಯಾಗಿಬಿಟ್ಟಿತ್ತು. ಅದರಲ್ಲಿ ಒಂದು ವ್ಯಾಪಾರದ ಎಲ್ಲ ಲಕ್ಷಣಗಳೂ ಕಂಡುಬರುತ್ತಿದ್ದವು. ವೃತ್ತಪತ್ರಿಕೆಗಳವರು,
ಕತೆಗಾರರು ಮತ್ತು ಕವಿಗಳು ಲೇಖನಿಗಳನ್ನು ತಮ್ಮ ಕೈಗಳಲ್ಲಿ ಹಿಡಿದು ಅವರ ಭೇಟೆಯಲ್ಲಿ ತೊಡಗಿದ್ದರು.
ಕತೆ-ಕಾವ್ಯಗಳು ಬೃಹತ್ ಆಕಾರ ಪಡೆದ ನಿರಂತರ ಪ್ರವಾಹವಾಗಿಬಿಟ್ಟಿತ್ತು. ಈ ಪದಪ್ರವಾಹದಲ್ಲಿ ಸಿಲುಕಿದ ಲೇಖನಿಗಳು ಮೊಂಡಾಗುತ್ತಿದ್ದವು. ಎಲ್ಲವೂ ಆಘಾತಕಾರಿಯಾಗಿ
ದಿಗ್ಭ್ರಮೆ ಹುಟ್ಟಿಸುವಂತಿದ್ದವು.
ಒಮ್ಮೆ ಒಬ್ಬ ಸಂಪರ್ಕ ಅಧಿಕಾರಿಯನ್ನು ಭೇಟಿಯಾಗಿದ್ದೆ.
‘ಅದ್ಯಾಕೆ ಅದೆಲ್ಲೋ ಕಳೆದುಹೋಗಿರುವ ಹಾಗಿದ್ದೀರಿ?’ ಆತ ನನ್ನನ್ನು ಕೇಳಿದ.
ಏನು ಉತ್ತರಿಸಬೇಕೆಂದು ನನಗೆ ತೋಚಲಿಲ್ಲ.
ಆತ ನನಗೊಂದು ಕತೆ ಹೇಳಿದ:
‘ಈ ಅಪಹರಣಕ್ಕೊಳಗಾದ ಹೆಂಗಸರನ್ನು ಹುಡುಕಲು ನಾವೆಷ್ಟು
ಕಷ್ಟಪಡಬೇಕಾಗಿದೆ ಗೊತ್ತೆ? ಒಂದು ಪಟ್ಟಣದಿಂದ ಮತ್ತೊಂದು ಪಟ್ಟಣಕ್ಕೆ, ಒಂದು ಹಳ್ಳಿಯಿಂದ ಮತ್ತೊಂದು
ಹಳ್ಳಿಗೆ. ಎಲ್ಲ ಸ್ಥಳಗಳನ್ನೂ ನಾವು ಹುಡುಕುತ್ತೇವೆ. ಬೀದಿಗಳು, ಗಲ್ಲಿಗಳು, ಓಣಿಗಳು. ಒಂದು ಮುತ್ತು
ಸಿಗಬೇಕಾದಲ್ಲಿ ಅತ್ಯಂತ ಪ್ರಯಾಸ ಪಡಬೇಕಾಗುತ್ತದೆ’.
‘ಎಂತಹ ಮುತ್ತು?’ ನಾನು ನನ್ನನ್ನೇ ಕೇಳಿಕೊಂಡೆ.
‘ಅಸಲಿಯೋ ಅಥವಾ ನಕಲಿಯೋ?’
‘ನಮ್ಮ ಹುಡುಕಾಟದಲ್ಲಿ ನಾವು ಎಂತಹ ತೀವ್ರ ಸಂಕಷ್ಟಗಳನ್ನು
ಎದುರಿಸುತ್ತೇವೆನ್ನುವುದು ನಿಮ್ಮ ಕಲ್ಪನೆಗೂ ನಿಲುಕುವುದಿಲ್ಲ’, ಆತ ಮುಂದುವರಿಸಿದ. ‘ನಿಮಗೆ ಒಬ್ಬ
ವಿಚಿತ್ರ ವ್ಯಕ್ತಿಯ ಬಗ್ಗೆ ಹೇಳುತ್ತೇನೆ. ಸರಹದ್ದಿನ ಆ ಕಡೆಗೆ ಈಗಾಗಲೇ ನಾವು ನೂರಾರು ಸಾರಿ ಹೋಗಿಬಂದಿದ್ದೇವೆನ್ನುವುದು
ನಿಮಗೆ ತಿಳಿದೇ ಇದೆ. ಅದನ್ನು ಕಾಕತಾಳೀಯವೆಂದೇ ಹೇಳಿರಿ, ನನ್ನ ಪ್ರತಿಯೊಂದು ಭೇಟಿಯ ಸಮಯದಲ್ಲೂ ನನಗೆ
ಒಬ್ಬ ಹರಕು ಬಟ್ಟೆಯ, ಸೊರಗಿಹೋಗಿರುವ ಒಬ್ಬ ಮಹಿಳೆ-
ಮಧ್ಯಮ ವಯಸ್ಸಿನ ಒಬ್ಬ ಮುಸಲ್ಮಾನ ಮಹಿಳೆ ಎದುರಾಗುತ್ತಾಳೆ...’
ನಾನು ಆಕೆಯನ್ನು ಜಲಂಧರ್‍ನಲ್ಲಿ ಕಂಡೆ. ನೋಡಿದಾಕ್ಷಣ
ಆಕೆ ಮಾನಸಿಕವಾಗಿ ಅಸ್ವಸ್ಥಳಾಗಿರುವಳೆಂದು ತಿಳಿಯುತ್ತಿತ್ತು. ಆಕೆಗೆ ಯಾವುದರ ಪರಿವೆಯಿರಲಿಲ್ಲ. ಕಳೆಗುಂದಿದ
ಕಣ್ಣುಗಳು, ಧೂಳು ತುಂಬಿದ ಕೂದಲು ಹೊಂದಿದ್ದ ಆಕೆ ತೊಟ್ಟಿರುವ ಬಟ್ಟೆಗಳೆಲ್ಲಾ ಚಿಂದಿಯಾಗಿತ್ತು. ಆದರೆ
ಸದಾ ಅರಸುವಂತಿದ್ದ ಆಕೆಯ ನೋಟದಿಂದ ಆಕೆ ಯಾರನ್ನೋ ಹುಡುಕುತ್ತಿದ್ದಾಳೆನ್ನುವುದು ತಿಳಿಯುತ್ತಿತ್ತು.
ಆಕೆ ಎಂಥದೋ ಮಾನಸಿಕ ಆಘಾತಕ್ಕೊಳಗಾಗಿ ಹುಚ್ಚಿಯಾಗಿದ್ದಾಳೆಂದು
ನನ್ನ ತಂಗಿ ತಿಳಿಸಿದಳು. ಆಕೆ ಪಾಟಿಯಾಲಾದವಳೆಂದು ಹಾಗೂ ಆಕೆ ತನಗಿದ್ದ ಒಬ್ಬಳೇ ಮಗಳನ್ನು ಹುಡುಕುತ್ತಿದ್ದಾಳೆಂಬುದೂ
ಸಹ ನನಗೆ ತಿಳಿಯಿತು. ಆಕೆಯ ಮಗಳ ಸುಳಿವೂ ಇಂದಿಗೂ ಸಿಕ್ಕಿರಲಿಲ್ಲ. ಆಕೆಯ ಮಗಳನ್ನು ಹುಡುಕುವ ಎಲ್ಲ
ಪ್ರಯತ್ನಗಳನ್ನೂ ನಡೆಸಲಾಗಿತ್ತು. ಆದರೆ ಫಲಕಾರಿಯಾಗಿರಲಿಲ್ಲ. ಆಕೆ ಗಲಭೆಗಳಲ್ಲಿ ಕೊಲೆಯಾಗಿರುವ ಸಾಧ್ಯತೆಯನ್ನೂ
ಸಹ ಅಲ್ಲಗಳೆಯುವಂತಿರಲಿಲ್ಲ. ಆದರೆ ಈ ವಾಸ್ತವತೆಯನ್ನು ಈಕೆ ಒಪ್ಪಿಕೊಳ್ಳುತ್ತಲೇ ಇರಲಿಲ್ಲ.
ಆ ನಂತರ ಅದೇ ಮಹಿಳೆಯನ್ನು ನಾನು ಸಹ್ರಾನ್‍ಪುರ್‍ನ
ಲಾರಿ ಸ್ಟ್ಯಾಂಡಿನಲ್ಲಿ ಮತ್ತೊಂದು ದಿನ ಕಂಡೆ. ಆಕೆಯ ತುಟಿಗಳ ಮೇಲೆ ದಪ್ಪನೆ ಕಿಟ್ಟ ಕಟ್ಟಿಕೊಂಡಿತ್ತು.
ಕೂದಲು ಸಾಧುಗಳ ಕೂದಲುಗಳಂತೆ ಜಟೆಯಾಗಿತ್ತು. ಆಕೆ ತನ್ನ ಮಗಳ ಹುಡುಕಾಟ ಬಿಡುವಂತೆ ಹೇಳಿ ನಾನು ಆಕೆಯೊಂದಿಗೆ
ಮಾತನಾಡಲು ಯತ್ನಿಸಿದೆ. ನಾನು ಉದ್ದೇಶಪೂರ್ವಕವಾಗಿ ನನ್ನ ಧ್ವನಿಯನ್ನು ಗಡಸುಮಾಡಿಕೊಂಡು, ‘ಮಾಯಿ,
ನಿನ್ನ ಮಗಳು ಕೊಲೆಯಾಗಿದ್ದಾಳೆ’ ಎಂದು ಹೇಳಿದೆ.
‘ಕೊಲೆಯಾಗಿದ್ದಾಳೆ?’ ಆ ಮಹಿಳೆ ನನ್ನೆಡೆಗೆ ತೀಕ್ಷ್ಣನೋಟ
ಬೀರಿದಳು. ‘ಇಲ್ಲ’, ಆಕೆಯ ಧ್ವನಿಯಲ್ಲಿ ದೃಢತೆಯಿತ್ತು, ‘ನನ್ನ ಮಗಳನ್ನು ಯಾರೂ ಕೊಲ್ಲಲಾರರು. ಅವಳನ್ನು
ಕೊಲ್ಲುವ ಧೈರ್ಯ ಯಾರಿಗೂ ಇಲ್ಲ’ ಎಂದು ಹೇಳಿ ಅಲ್ಲಿಂದ ತನ್ನ ಮಗಳನ್ನು ಹುಡುಕುತ್ತಾ ಹೊರಟುಹೋದಳು.
ಆಕೆಯ ಹುಡುಕಾಟ ಎಂದಾದರೂ ಕೊನೆಗೊಳ್ಳಬಹುದೆ ಎಂದು
ನನ್ನನ್ನು ನಾನೇ ಕೇಳಿಕೊಂಡೆ. ಯಾವುದೇ ಸಿಖ್ಖರ ಕತ್ತಿ ಆಕೆಯ ಮಗಳ ಕುತ್ತಿಗೆಯೆಡೆಗೆ ಏಳುವುದಿಲ್ಲ
ಅಥವಾ ಯಾವುದಾದರೂ ಮೊಂಡು ಆಯುಧ ಅಕೆಯ ಕುತ್ತಿಗೆಯನ್ನು ಸವರಿ ಹೋಗಿಲ್ಲವೆಂಬ ದೃಢನಂಬಿಕೆ ಆ ಹುಚ್ಚಿಗೆ
ಹೇಗಿದೆ? ಆಕೆಯ ಮಗಳೇನು ಅಮರಳೆ? ಅಥವಾ ಮಾತೃಪ್ರೇಮ ಅಮರವೆ? ಪ್ರೇಮ ಮಾತ್ರ ಅಮರವೆಂಬುದಾಗಿ ಪರಿಗಣಿಸಲಾಗಿದೆ.
ಆಕೆ ಎಲ್ಲೋ ಕಳೆದುಹೋಗಿರುವ ಅದೇ ಪ್ರೇಮವನ್ನು ಅರಸುತ್ತಿದ್ದಾಳೆಯೆ?
ನನ್ನ ಮೂರನೆಯ ಭೇಟಿಯ ಸಮಯದಲ್ಲಿ ಆಕೆ ನನಗೆ ಮತ್ತೆ
ಕಂಡಳು. ಅದೇ ಸ್ಥಳದಲ್ಲಿ ನಿಂತಿದ್ದಳು. ಈ ಸಾರಿ ಅಕೆ ತೊಟ್ಟಿದ್ದ ಬಟ್ಟೆಗಳೆಲ್ಲಾ ಚಿಂದಿಯಾಗಿ ಬಹುಪಾಲು
ಬೆತ್ತಲೆಯಾಗಿಯೇ ಇದ್ದಳು. ನಾನು ಆಕೆಗೆ ಒಂದಷ್ಟು ಬಟ್ಟೆಗಳನ್ನು ಕೊಟ್ಟೆ. ಆಕೆ ತಿರಸ್ಕರಿಸಿದಳು.
‘ಮಾಯಿ, ನಿನಗೆ ಸತ್ಯ ಹೇಳುತ್ತಿದ್ದೇನೆ. ನನ್ನ
ಮಾತು ನಂಬು. ನಿನ್ನ ಮಗಳನ್ನು ಪಾಟಿಯಾಲಾದಲ್ಲಿ ಕೊಲೆ ಮಾಡಲಾಯಿತು. ಆಕೆ ಈಗ ಜೀವಂತವಿಲ್ಲ’.
ಆಕೆ ಅದೇ ದೃಢ ಆತ್ಮವಿಶ್ವಾಸದಲ್ಲಿ ಉತ್ತರಿಸಿದಳು,
‘ಇಲ್ಲ, ನೀನು ಸುಳ್ಳು ಹೇಳುತ್ತಿದ್ದೀಯ!’
‘ನನ್ನ ಮಾತು ನಂಬು. ನಾನು ಸತ್ಯ ಹೇಳುತ್ತಿದ್ದೇನೆ’,
ಆಕೆಯ ಮನವೊಲಿಸಬೇಕೆಂದು ಮತ್ತಷ್ಟು ಒತ್ತಾಯಪೂರ್ವಕವಾಗಿ ಹೇಳಿದೆ. ‘ನಿನ್ನ ಗೋಳು, ಈ ಹುಡುಕಾಟ ಬಿಟ್ಟುಬಿಡು.
ನೀನು ಈಗಾಗಲೇ ಸಾಕಷ್ಟು ಅನುಭವಿಸಿದ್ದೀಯ. ನನ್ನ ಜೊತೆ ಬಾ. ನಿನ್ನನ್ನು ಪಾಕಿಸ್ತಾನಕ್ಕೆ ಕರೆದೊಯ್ಯುತ್ತೇನೆ’.
ಆಕೆ ನನ್ನ ಮಾತು ಕೇಳಿಸಿಕೊಳ್ಳದಂತೆ ನಿಂತಿದ್ದಳು.
ಅದೇನೋ ತನ್ನಷ್ಟಕ್ಕೆ ತಾನೇ ಗೊಣಗಿಕೊಳ್ಳುತ್ತಿದ್ದಳು. ಇದ್ದಕ್ಕಿದ್ದಂತೆ ಆ ಕ್ಷಣದ ಸನ್ನಿವೇಶ ಅರ್ಥವಾದಂತೆ
ಎಚ್ಚೆತ್ತುಕೊಂಡು ಮೊದಲಿಗಿಂತ ಇನ್ನೂ ಹೆಚ್ಚಿನ ದೃಢತೆಯಿಂದ, ನಂಬಿಕೆಯಿಂದ ಆಕೆ, ‘ನನ್ನ ಮಗಳನ್ನು
ಕೊಲ್ಲುವ ಧೈರ್ಯ ಯಾರಿಗೂ ಇಲ್ಲ’ ಎಂದಳು.
‘ಯಾಕಿರಬಾರದು?’ ನಾನು ಕೇಳಿದೆ.
‘ಏಕೆಂದರೆ... ಆಕೆ ಅಷ್ಟೊಂದು ಸುಂದರವಾಗಿದ್ದಾಳೆ’,
ಒಂದರೆಕ್ಷಣ ತನ್ನ ಮಾತು ನಿಲ್ಲಿಸಿ, ‘ಅದೆಷ್ಟು ಸುಂದರವಾಗಿದ್ದಾಳೆಂದರೆ ಯಾರಿಗೂ ಆಕೆಯನ್ನು ಕೊಲ್ಲಲು
ಮನಸ್ಸಾಗುವುದಿಲ್ಲ. ಆಕೆಯನ್ನು ಹೊಡೆಯಲೂ ಸಹ ಯಾರಿಗೂ ಕೈಯೆತ್ತಲು ಮನಸ್ಸು ಬರುವುದಿಲ್ಲ’.
ಆಕೆಯ ಮಗಳು ನಿಜವಾಗಿ ಅಷ್ಟೊಂದು ಸುಂದರವಾಗಿದ್ದಾಳೆಯೆ
ಎಂದು ನನಗೆ ಅಚ್ಚರಿಯಾಯಿತು. ಪ್ರತಿ ತಾಯಿಯೂ ತನ್ನ ಮಗು ಅತ್ಯಂತ ಸುಂದರ ಎಂದು ಭಾವಿಸಿರುವಳಲ್ಲವೆ-
ಚಂದಿರನಂತೆ, ಹೊಳೆಯುವ ಸೂರ್ಯನಂತೆ. ಅಥವಾ ಈ ತಾಯಿ ಹೇಳುವಂತೆ ಆಕೆಯ ಮಗಳು ನಿಜವಾಗಿ ಸುಂದರವಾಗಿರಬಹುದು.
ಆದರೆ ಇಂತಹ ಕ್ರೌರ್ಯದ ಸನ್ನಿವೇಶಗಳಲ್ಲಿ ಸುಂದರ ಹುಡುಗಿಯೂ ಸಹ ಕಟುಕ ಕೈಗಳಿಂದ ತಪ್ಪಿಸಿಕೊಳ್ಳುವುದು
ಸಾಧ್ಯವಿರುವುದಿಲ್ಲ. ಈ ಹುಚ್ಚಿ ಭ್ರಮೆಯಲ್ಲಿದ್ದಾಳಷ್ಟೆ. ಹಲವಾರು ವಿಧಾನಗಳಿಂದ ತನ್ನನ್ನು ತಾನೇ
ಸಂತೈಸಿಕೊಳ್ಳುವುದು ಮನಸ್ಸಿಗೆ ಚೆನ್ನಾಗಿ ಗೊತ್ತು. ಭೀಭತ್ಸ ವಾಸ್ತವತೆಯಿಂದ ತಪ್ಪಿಸಿಕೊಳ್ಳಲು ಬೇಕಾದಷ್ಟು
ದಾರಿಗಳಿವೆ. ಎದುರಿಗಿರುವ ರಸ್ತೆ ಯಾತನೆಯದು ಒಂದೇ ಆಗಿರುವಾಗ ಮನಸ್ಸು ಬದಲಿ ಹಾದಿಗಳ ಜಾಲವನ್ನೇ ಎದುರಿಗೆ
ಹೆಣೆದುಬಿಡುತ್ತದೆ.
ನಾನು ಸರಹದ್ದಿನ ಆ ಕಡೆಗೆ ಹಲವಾರು ಬಾರಿ ಪ್ರಯಾಣ
ಮಾಡಬೇಕಾಯಿತು. ಪ್ರತಿಸಾರಿಯೂ ಆ ಹೆಂಗಸು ನನಗೆ ಕಂಡುಬರುತ್ತಿದ್ದಳು. ಈಗಂತೂ ಆಕೆ ಬರೇ ಅಸ್ಥಿಪಂಜರವಾಗಿದ್ದಳು.
ಆಕೆಯ ದೃಷ್ಟಿ ಕುಗ್ಗಿತ್ತು, ನಡೆದಾಡಲೂ ಶಕ್ತಿಯಿಲ್ಲದಂತೆ ತಡವರಿಸುತ್ತಿದ್ದಳು. ಆದರೆ ಆಕೆಯ ಹುಡುಕಾಟದ
ತುಡಿತ ಕಡಿಮೆಯಾಗಿರಲಿಲ್ಲ. ತನ್ನ ಮಗಳನ್ನು ಕೊಲ್ಲುವ ಮನಸ್ಸು ಯಾರಿಗೂ ಬಂದಿರುವುದಿಲ್ಲ, ಹಾಗಾಗಿ
ತನ್ನ ಮಗಳು ಬದುಕೇ ಇದ್ದಾಳೆನ್ನುವ ಅಕೆಯ ದೃಢನಂಬಿಕೆಯೂ ಕಡಿಮೆಯಾಗಿರಲಿಲ್ಲ.
ನನ್ನ ತಂಗಿ ನನಗೆ ಹೇಳಿದಳು, ‘ನೀನು ಆಕೆಯೊಂದಿಗೆ
ಮಾತನಾಡಿ ವಿವೇಚನೆ ಹೇಳುವುದು ವ್ಯರ್ಥ. ಆಕೆಯಂತೂ ಸಂಪೂರ್ಣ ಮನೋಸ್ವಾಸ್ಥ್ಯ ಕಳೆದುಕೊಂಡಿದ್ದಾಳೆ.
ಒಳ್ಳೆಯ ಕೆಲಸವೆಂದರೆ ನೀನು ಆಕೆಯನ್ನು ಪಾಕಿಸ್ತಾನಕ್ಕೆ ಕರೆದೊಯ್ದು ಅಲ್ಲಿ ಯಾವುದಾದರೂ ಹುಚ್ಚಾಸ್ಪತ್ರೆಗೆ
ಸೇರಿಸು’.
ಆ ಸಲಹೆಯನ್ನು ನಾನು ವಿರೋಧಿಸಿದೆ. ಹುಡುಕಾಟ
ನಿಷ್ಫಲವಾದರೂ ಆಕೆಯ ನಂಬಿಕೆಯೇ ಆಕೆಯನ್ನು ಇದುವರೆಗೆ ಜೀವಂತವಾಗಿಟ್ಟಿರುವುದು. ಅದನ್ನೂ ಸಹ ನಾನು
ಆಕೆಯ ಕಾಲಿನಡಿಯಿಂದ ಎಳೆಯಲಾರೆ. ಈ ಜಗತ್ತೇ ಒಂದು ದೊಡ್ಡ ಹುಚ್ಚಾಸ್ಪತ್ರೆಯಾಗಿರುವಾಗ ಇಲ್ಲಿ ಆಕೆಗೆ
ಬೇಕಾದೆಡೆ ನಡೆದಾಡುವ, ಹುಡುಕಾಡುವ ಸ್ವಾತಂತ್ರ್ಯವಾದರೂ ಇದೆ. ಇಲ್ಲಿಂದ ಆಕೆಯನ್ನು ಕರೆದೊಯ್ದು ಇಟ್ಟಿಗೆ ಗೋಡೆಗಳ, ಇರುಕಲಿನ ಕೋಣೆಗಳ ಹುಚ್ಚಾಸ್ಪತ್ರೆಗೆ
ಸೇರಿಸುವ ಇಚ್ಛೆ ನನಗಿರಲಿಲ್ಲ.
ಆಕೆಯನ್ನು ನಾನು ಕೊನೆಯ ಬಾರಿಗೆ ಕಂಡದ್ದು ಅಮೃತಸರದಲ್ಲಿ.
ಆಕೆಯ ಪರಿಸ್ಥಿತಿ ಹೇಗಿತ್ತೆಂದರೆ ಆಕೆಯನ್ನು ಕಂಡಾಕ್ಷಣ ನನ್ನ ಕಣ್ಣುಗಳು ಹನಿಗೂಡಿದವು. ಆಕೆಯನ್ನು
ಕೂಡಲೇ ಪಾಕಿಸ್ತಾನಕ್ಕೆ ಕರೆದೊಯ್ದು ಅಲ್ಲಿನ ಹುಚ್ಚಾಸ್ಪತ್ರೆಗೆ ಸೇರಿಸಬೇಕೆಂದು ಅಲ್ಲಿಯೇ ತೀರ್ಮಾನಿಸಿದೆ.
ತನ್ನ ಮಂದ ದೃಷ್ಟಿಯ ಕಂಗಳಿಂದ ಫರೀದ್ ಕಾ ಚೌಕ್‍ನಲ್ಲಿ
ನಿಂತಿದ್ದ ಆಕೆ ಸುತ್ತಮುತ್ತ ನೋಡುತ್ತಿದ್ದಳು. ಚೌಕ ಜನಭರಿತವಾಗಿತ್ತು. ನಾನು ನನ್ನ ತಂಗಿಯೊಂದಿಗೆ
ಅಂಗಡಿಯೊಂದರ ಬಳಿ ನಿಂತು ಅಪಹರಣಕ್ಕೊಳಗಾದ ಹೆಂಗಸೊಬ್ಬಳ ಬಗ್ಗೆ ಮಾತನಾಡುತ್ತಿದ್ದೆ. ಆ ಹೆಂಗಸು ಬಾಜಾರ್
ಸಬೂನಿಯಾದಲ್ಲಿನ ಹಿಂದೂ ಬನಿಯಾ ಒಬ್ಬನ ಮನೆಯಲ್ಲಿ ಆತನೊಂದಿಗೆ ವಾಸಿಸುತ್ತಿದ್ದಳು.
ಆ ಹೆಂಗಸನ್ನು ರಕ್ಷಿಸುವ ಯೋಜನೆಯೊಂದನ್ನು ಅಂತಿಮಗೊಳಿಸಿ
ನಾನು ಆ ಹುಚ್ಚಿಯನ್ನು ಮಾತನಾಡಿಸಲು ಹೊರಟೆ. ಈ ಸಾರಿ ನನ್ನೊಂದಿಗೆ ಪಾಕಿಸ್ತಾನಕ್ಕೆ ಬರುವಂತೆ ಆಕೆಯನ್ನು
ಒತ್ತಾಯಮಾಡಬೇಕೆಂದು ನಿರ್ಧರಿಸಿದ್ದೆ. ರಸ್ತೆಯ ಆ ಬದಿಗೆ ಹೋಗುತ್ತಿದ್ದಂತೆ ಒಂದು ಗಂಡು ಹೆಣ್ಣಿನ
ಜೋಡಿ ಅಲ್ಲಿ ಹಾದುಹೋಯಿತು. ಹೆಂಗಸಿನ ಮುಖ ಸೆರಗಿನಿಂದ ಮುಚ್ಚಿತ್ತು. ಆಕೆಯ ಜೊತೆಗಿದ್ದ ಗಂಡಸು ಒಬ್ಬ
ಸಿಖ್ ಆಗಿದ್ದು, ಸ್ಫುರದ್ರೂಪಿ ಹಾಗೂ ಕಟ್ಟುಮಸ್ತಾಗಿ ಆಕರ್ಷಕವಾಗಿದ್ದ.
ಅವರು ಆ ಹುಚ್ಚಿಯನ್ನು ಹಾದುಹೋದಂತೆ, ಆ ಯುವಕ
ತಕ್ಷಣ ನಿಂತ. ಒಂದೆರೆಡು ಹೆಜ್ಜೆ ಹಿಂದೆ ಬಂದು ಆ ಹುಚ್ಚಿಯ ಕೈ ಹಿಡಿದುಕೊಂಡ. ಅದನ್ನೆಲ್ಲಾ ಆತ ಎಷ್ಟು
ಕ್ಷಿಪ್ರವಾಗಿ ಮಾಡಿದನೆಂದರೆ ಆತನ ಜೊತೆಗಿದ್ದ ಹೆಂಗಸು ಅದನ್ನು ನೋಡಲು ತಕ್ಷಣ ತನ್ನ ಸೆರಗನ್ನು ತೆರೆದಳು.
ಕೂಡಲೆ ಆ ಸೆರಗಿನಲ್ಲಿ ಮರೆಯಾಗಿದ್ದ ಅತ್ಯಂತ ಸುಂದರ ಮುಖವೊಂದನ್ನು ನಾನು ಕಂಡೆ. ಆ ಕ್ಷಣ ನಾನು ಆಕೆಗೆ
ಹತ್ತಿರದಲ್ಲೇ ನಿಂತಿದ್ದೆ.
‘ನಿಮ್ಮ ತಾಯಿ!’ ಆ ಯುವಕ ಆ ಹುಚ್ಚಿಯೆಡೆಗೆ ತನ್ನ
ಕೈ ತೋರಿಸುತ್ತಾ ತನ್ನ ಜೊತೆಗಿದ್ದ ಯುವತಿಗೆ ಪಿಸುಗುಟ್ಟಿದ.
ಹುಚ್ಚಿಯನ್ನು ಕ್ಷಣಕಾಲ ನೋಡಿದ ಆ ಯುವತಿ ತಕ್ಷಣ
ತನ್ನ ಸೆರಗಿನಿಂದ ಮುಖವನ್ನು ಮರೆಮಾಡಿಕೊಂಡಳು. ಆ ಯುವಕನ ಕೈ ಹಿಡಿದು ಎಳೆಯುತ್ತಾ ‘ನಡೆ ಇಲ್ಲಿಂದ
ಬೇಗ ಹೋಗೋಣ’ ಎಂದಳು.
ರಸ್ತೆಯ ಅಂಚಿಗೆ ನಡೆದ ಅವರಿಬ್ಬರೂ ಅಲ್ಲಿಂದ
ಬೇಗ ಬೇಗ ಹೆಜ್ಜೆ ಹಾಕಿ ಅಲ್ಲಿಂದ ಮರೆಯಾದರು.
ಆ ಹುಚ್ಚಿ ಇದ್ದಕ್ಕಿದ್ದಂತೆ ಅವರೆಡೆ ಕಿರುಚುತ್ತಾ
ಹೋದಳು, ‘ನನ್ನ ಲಕ್ಕಿ! ನನ್ನ ಲಕ್ಕಿ!’ ಆಕೆ ಸಂತೋಷದಿಂದ ಅತ್ಯಂತ ಗಲಿಬಿಲಿಗೊಳಗಾಗಿದ್ದಳು.
‘ಏನು ವಿಷಯ ಮಾಯಿ?’ ನಾನು ಆಕೆಯ ಬಳಿ ಹೋಗಿ ಕೇಳಿದೆ.
ಆಕೆ ನಡುಗುತ್ತಿದ್ದಳು. ‘ನಾನು ಅವಳನ್ನು ನೋಡಿದೆ!
ನಾನು ಅವಳನ್ನು ನೋಡಿದೆ!’ ಆಕೆ ಅರಚಿದಳು.
‘ಯಾರನ್ನು ನೋಡಿದೆ?’ ನಾನು ಕೇಳಿದೆ.
ಆಕೆಯ ನಿರ್ಜೀವ ಕಣ್ಣುಗುಡ್ಡೆಗಳು ಆಳ ಕುಳಿಗಳಲ್ಲಿ
ತಿರುಗುತ್ತಿದ್ದವು. ‘ನನ್ನ ಮಗಳು ಲಕ್ಕಿಯನ್ನು!’
‘ಆದರೆ ಆಕೆ ಬಹಳ ಹಿಂದೆಯೇ ಸತ್ತುಹೋಗಿರುವಳಲ್ಲ’,
ನಾನು ಹೇಳಿದೆ, ‘ಸತ್ತು ಹೊರಟುಹೋದಳು’.
‘ಸುಳ್ಳು!’ ನನ್ನನ್ನು ನೋಡಿ ಕಿರುಚಿದಳು.
ಅವಳನ್ನು ಒಪ್ಪಿಸಲು ನನ್ನಲ್ಲಿದ್ದ ಕೊನೆಯ ಅಸ್ತ್ರವನ್ನು
ಉಪಯೋಗಿಸಿದೆ. ‘ದೇವರ ಮೇಲಾಣೆ ಮಾಡಿ ಹೇಳುತ್ತಿದ್ದೇನೆ ಮಾಯಿ, ನಿನ್ನ ಮಗಳು ಸತ್ತುಹೋಗಿದ್ದಾಳೆ’.
ಆ ಮಾತನ್ನು ಕೇಳಿದ ಆ ಹುಚ್ಚಿ ತಾಯಿ ಒಂದರೆಕ್ಷಣ
ನನ್ನನ್ನೇ ದಿಟ್ಟಿಸಿ ನೋಡಿ ಹಾಗೆಯೇ ನೆಲದ ಮೇಲೆ ತೊಪ್ಪೆಯಂತೆ ಕುಸಿದು ಬಿದ್ದಳು.
*******
11ರ ಮೇ 2012 ಉರ್ದು
ಲೇಖಕ ಸಾದತ್ ಹಸನ್ ಮಾಂಟೊನ ಜನ್ಮ ಶತಾಬ್ದಿ. ಅದರ ನೆನಪಿಗೆ ಮಾಂಟೋನನ್ನು ಪರಿಚಯಿಸುವ ನಾನು ಬರೆದ
ಲೇಖನ 6ರ ಮೇ 2012ರ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಆ ಲೇಖನ ಸಂಕ್ಷಿಪ್ತವಾಗಿದ್ದು ಪೂರ್ಣ ಲೇಖನ
ಇಲ್ಲಿ ನನ್ನ ಬ್ಲಾಗ್ ನಲ್ಲಿದೆ.
1 ಕಾಮೆಂಟ್:
ಬಾಲು
ಕಥೆ ಓದಿದೆ, ದೇಶ ಒಡೆದದ್ದು ಎಂತಹ ಕ್ರೌರ್ಯಕ್ಕೆ ದಾರಿ ಮಾಡಿತು. ಯಾರು ಹೊಣೆಗಾರರು ?
ನನ್ನನ್ನು ಕಾಡಿದ ಸಾಲುಗಳು
"ಈ ನರಕದಲ್ಲಿ ಬಸಿರಾದ ಹೆಂಗಸರು ಮತ್ತು ಹುಡುಗಿಯರ ಬಗ್ಗೆ ಯೋಚಿಸುವಾಗಲೆಲ್ಲಾ ಅವರ್ಣನೀಯ ಹೆದರಿಕೆ ನನ್ನನ್ನು ಆವರಿಸಿಕೊಳ್ಳುತ್ತಿತ್ತು. ನಾನು ಅವರ ಹೊಟ್ಟೆಗಳ ಬಗ್ಗೆಯೇ ಚಿಂತಿಸುತ್ತಿದ್ದೆ. ಆ ಹೊಟ್ಟೆಗಳಿಗೆ ಏನಾಗುತ್ತದೆ? ಅವುಗಳೊಳಗಿನ ಜೀವಗಳ ವಾರಸುದಾರರು ಯಾರಾಗುತ್ತಾರೆ? ಪಾಕಿಸ್ತಾನವೆ ಅಥವಾ ಭಾರತವೆ?"
ಕಾಮೆಂಟ್ ಪೋಸ್ಟ್ ಮಾಡಿ