ಗೆಳೆಯ ಗಿರೀಶ್ ಬಾಬುರವರು ನನ್ನ ʻಬಿ.ಡಿ.ಎ. ಲೇಔಟ್ ಮತ್ತು ಚಿಕ್ಕ ತಾಯಮ್ಮನ ಜಮೀನುʼ ಕತೆಗೆ ಆಡಿಯೋ ರೂಪ ಒದಗಿಸಿ ಯೂಟ್ಯೂಬ್ ಗೆ ಬಿಟ್ಟಿದ್ದಾರೆ. ಬಹಳಷ್ಟು ಶ್ರಮ ವಹಿಸಿ ಅವರು ಮತ್ತು ಅವರ ತಂಡದವರು ಸುಂದರವಾಗಿ, ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಮಯ ಸಿಕ್ಕಾಗ ನೋಡಿ ಅಥವಾ ಆಡಿಯೋ ಕ್ಲಿಪ್ ಕೇಳಿ. ಓದಲು ಆ ಕತೆಯ ಲಿಂಕ್ ಇಲ್ಲಿದೆ:
https://antaragange.blogspot.com/2009/01/blog-post.html
ಯೂಟ್ಯೂಬ್ ಲಿಂಕ್:
https://youtu.be/jDn14iKdAIY
ಕತೆಯ ಆಡಿಯೋ ಕ್ಲಿಪ್ ಇಲ್ಲಿದೆ:
https://archive.org/download/j-balakrishna-kannada-story-read-by-girish-babu-1/J%20Balakrishna%20Kannada%20Story-%20read%20by%20Girish%20Babu1.mp3
ಸೋಮವಾರ, ಆಗಸ್ಟ್ 31, 2020
ಶುಕ್ರವಾರ, ಆಗಸ್ಟ್ 21, 2020
ಟೋನಿ ಜೋಸೆಫ್ `Early Indians’: ಮೊದಲ ಭಾರತೀಯರು ನಾವು ಬಂದದ್ದು ಹೇಗೆ?
12 ಆಗಸ್ಟ್ 2020ರ ʻನ್ಯಾಯಪಥʼ ಪತ್ರಿಕೆಯಲ್ಲಿ ಪ್ರಕಟವಾದ ಟೋನಿ ಜೋಸೆಫ್ ರವರ ʻEarly Indians' ಕೃತಿಯ ನಾನು ಅನುವಾದಿಸಿರುವ ಮೊದಲ ಅಧ್ಯಾಯದ ಅನುವಾದ ಇಲ್ಲಿದೆ.:
ನಮ್ಮ
ಪೂರ್ವಜರು, ಮೊದಲ/ಪ್ರಾಚೀನ ಭಾರತೀಯರು, ಆಪ್ರಿಕಾ, ಪಶ್ಚಿಮ ಏಷ್ಯಾ, ಪೂರ್ವ ಏಷ್ಯಾ
ಮತ್ತು ಮಧ್ಯ ಏಷ್ಯಾಗಳಿಂದ ಬಂದವರು ಕಳೆದ 65,000 ವರ್ಷಗಳಿಂದ ಈ ನಾಡನ್ನು ಹೇಗೆ
ತಮ್ಮದಾಗಿಸಿಕೊಂಡರು ಎಂಬ ಕಥೆ.
‘ನೀವು
ಚಲಿಸುತ್ತಲೇ ಇಲ್ಲ ಎಂದು ಅನ್ನಿಸುತ್ತಿದ್ದರೂ ನೀವು ನಿಜವಾಗಿಯೂ ಎಷ್ಟು ವೇಗವಾಗಿ
ಚಲಿಸುತ್ತಿರುವಿರಿ ಎಂಬುದು ನಿಮಗೆ ತಿಳಿದಿದೆಯೇ?’ – ಪ್ರೊಫೆಸರ್ ಆಂಡ್ರ್ಯೂ
ಫ್ರಕ್ನೋಯ್, ಖಗೋಳಶಾಸ್ತ್ರಜ್ಞ
ಜಗತ್ತು ನಮಗೆ ಕಾಣುವಂತೆಯೇ
ಇರುವುದಿಲ್ಲ. ನೀವು ಈ ವಾಕ್ಯ ಓದುತ್ತಿರುವಂತೆ, ಬಹುಶಃ ನಿಮ್ಮ ಓದುವ ಕೋಣೆಯಲ್ಲಿ ಆರಾಮ
ಕುರ್ಚಿಯಲ್ಲಿ ಕುಳಿತಿದ್ದಲ್ಲಿ ನೀವು ಒಂದೆಡೆ ತಟಸ್ಥವಾಗಿರುವಂತೆ ಭಾವಿಸಿರುತ್ತೀರಿ.
ಆದರೆ ನೀವು ಒಂದೆಡೆ ತಟಸ್ಥವಾಗಿಲ್ಲ, ಏಕೆಂದರೆ ನೀವು ಭಾಗವಾಗಿರುವ ಹಾಲು ಹಾದಿ (ಮಿಲ್ಕಿ
ವೇ ಗ್ಯಾಲೆಕ್ಸಿ) ಆಕಾಶಗಂಗೆಯು ಅಂತರಿಕ್ಷದಲ್ಲಿ ಗಂಟೆಗೆ 2.1 ದಶಲಕ್ಷ ಕಿಲೋಮೀಟರ್
ವೇಗದಲ್ಲಿ ಚಲಿಸುತ್ತಿದೆ. ಇದು ಭೂಮಿ ತನ್ನದೇ ಅಕ್ಷದ ಮೇಲೆ ಸುತ್ತುತ್ತಿರುವುದರ
ಪರಿಣಾಮವನ್ನು (ಭೂಮಧ್ಯ ರೇಖೆಯ ಬಳಿ ಗಂಟೆಗೆ 1600 ಮತ್ತು ಧೃವಗಳ ಬಳಿ ಸೊನ್ನೆ
ಕಿಲೋಮೀಟರ್ ವೇಗ), ಸೂರ್ಯನ ಸುತ್ತ ಸುತ್ತುತ್ತಿರುವುದರ (ಗಂಟೆಗೆ 107,000 ಕಿಲೋಮೀಟರ್)
ಹಾಗೂ ಹಾಲು ಹಾದಿಯ ಸುತ್ತ ಸೂರ್ಯನ ಪಯಣವನ್ನು (ಗಂಟೆಗೆ 792,000 ಕಿಲೋಮೀಟರ್‌ಗಳು) ಪರಿಗಣನೆಗೆ ತೆಗೆದುಕೊಂಡಿಲ್ಲ.
ನೀವು
ಮೇಲಿನ ಪ್ಯಾರಾ ಓದಲು ತೆಗೆದುಕೊಂಡಿರುವ ಸುಮಾರು ಇಪ್ಪತ್ತು ಸೆಕೆಂಡುಗಳ ಸಮಯದಲ್ಲಿ
ನೀವು ನಿಮಗರಿವಿಲ್ಲದೆ ಸಾವಿರಾರು ಕಿಲೋಮೀಟರ್‌ಗಳಷ್ಟು ಪಯಣಿಸಿದ್ದೀರಿ.
ಈ ಮೇಲಿನ
ಲೆಕ್ಕಾಚಾರಗಳನ್ನು ಕಂಡುಕೊಳ್ಳುವಂತಹ ಪ್ರತಿಯೊಂದು ಆವಿಷ್ಕಾರವೂ – ಸೂರ್ಯನನ್ನು
ಸುತ್ತುತ್ತಿರುವ ಹಲವಾರು ಗ್ರಹಗಳಲ್ಲಿ ಭೂಮಿಯೂ ಕೇವಲ ಒಂದು ಗ್ರಹ; ಹಾಲುಹಾದಿ
ಆಕಾಶಗಂಗೆಯಲ್ಲಿ ಸೂರ್ಯನೂ ಸಹ ಒಂದು ಸಾಧಾರಣ ಮಧ್ಯವಯಸ್ಸಿನ ನಕ್ಷತ್ರವಾಗಿದೆ; ಈ
ಆಕಾಶಗಂಗೆಯೂ ಸಹ ನೂರಾರು ಕೋಟಿ ಆಕಾಶಗಂಗೆಗಳಲ್ಲಿ ಒಂದು ಎಂಬುದು – ಕೆಲವರಲ್ಲಿ ಕುಬ್ಜ
ಭಾವನೆ ತರಿಸಿದರೆ ಇನ್ನು ಕೆಲವು ವಿವೇಕವುಳ್ಳವರಲ್ಲಿ ನಾವು ಭಾಗವಾಗಿರುವ ಈ ಭವ್ಯ
ವ್ಯವಸ್ಥೆಯ ಬಗೆಗೆ ಹೊಸ ವಿಸ್ಮಯ ಭಾವ ಉಂಟುಮಾಡಿದೆ.
ಇದು ಅನಂತ ವಿಶ್ವದ
ದೃಷ್ಟಿಯಿಂದ ಮಾತ್ರವಲ್ಲ, ಜೈವಿಕ ದೃಷ್ಟಿಯಿಂದಲೂ ಸಹ ಸತ್ಯವಾಗಿದೆ. ಡಾರ್ವಿನ್ ಒಂದೂವರೆ
ಶತಮಾನದ ಹಿಂದೆ ಜೀವ ವಿಕಾಸ ಸಿದ್ಧಾಂತವನ್ನು ಮಂಡಿಸಿ ಚಿಂಪಾಂಜಿಗಳು ನಮ್ಮ ಅತ್ಯಂತ
ನಿಕಟ ಸಂಬಂಧಿಗಳೆಂದು ಸೂಚಿಸಿ ಮನುಕುಲಕ್ಕೇ ಆಘಾತ ನೀಡಿದಾಗಿನಿಂದ, ನಡೆಯುತ್ತಿರುವ
ಪ್ರತಿಯೊಂದು ಆವಿಷ್ಕಾರವೂ ನಾವು ನಮಗಾಗಿ ನಿರ್ಮಿಸಿಕೊಂಡ ವಿಶೇಷ ಅಂತಸ್ತು, ಸ್ಥಾನಮಾನಗಳ
ಬುಡವನ್ನೇ ಅಲುಗಾಡಿಸುತ್ತಿವೆ. ಮೊದಲಿಗೆ, ಆಧುನಿಕ ಮಾನವರಾದ ನಾವು ಅಥವಾ ಹೋಮೊ
ಸೇಪಿಯೆನ್ಸ್1, ಕಾಣಿಸಿಕೊಂಡಾಗಿನಿಂದ ನಿರ್ಮಿಸುತ್ತಿದ್ದ ಸಲಕರಣೆಗಳಲ್ಲಿ
ಇದ್ದಕ್ಕಿದ್ದಂತೆ ಮತ್ತು ಅನುಕೂಲಕರ ವ್ಯತ್ಯಾಸಗಳು ಕಂಡುಬಂದಿವೆ ಹಾಗೂ ಕಲೆ ಮತ್ತು
ಅಮೂರ್ತ ಚಿಂತನೆಗಳು ರೂಪುಗೊಳ್ಳತೊಡಗಿದವು ಎಂದು ಭಾವಿಸಿದ್ದೇವೆ. ಅದೆಲ್ಲವೂ ಸುಳ್ಳೆಂದು
ಈಗ ನಮಗೆ ತಿಳಿದಿದೆ, ಜೀವವಿಕಾಸದ ಹಾದಿಯಲ್ಲಿನ ನಮ್ಮ ಅತ್ಯಂತ ನಿಕಟ ಸಂಬಂಧಿಗಳಾಗಿದ್ದ
ಹೋಮೊ ಎರೆಕ್ಟಸ್, ಹೋಮೊ ನಿಯಾಂಡರ್ತೆಲೆನ್ಸಿಸ್, ಡೆನಿಸೋವನ್ನರು ತಯಾರಿಸುತ್ತಿದ್ದ ಹಾಗೂ
ನಾವು ತಯಾರಿಸುತ್ತಿದ್ದ ಸಲಕರಣೆಗಳಲ್ಲಿ ವ್ಯತ್ಯಾಸವಿರಲಿಲ್ಲ ಮತ್ತು ಯಾವುದೇ ಪರ್ವಕಾಲದ
ಕ್ಷಣವೂ ಇರಲಿಲ್ಲ. ವಿನಾಶವಾಗಿರುವ ಹೋಮೊ ಪ್ರಭೇದದ (ಹೋಮೊ ಕುಟುಂಬದ ಸದಸ್ಯರಲ್ಲಿ ಇಂದು
ಜೀವಂತವಾಗಿರುವುದು ಹೋಮೊ ಸೇಪಿಯೆನ್ಸ್ ಮಾತ್ರ) ಎಲ್ಲ ಸದಸ್ಯರೂ ನಮ್ಮಂತೆಯೇ ದೊಡ್ಡ
ಮಿದುಳನ್ನು ಹೊಂದಿದ್ದರು.
ಆ
ಇತರ ಪ್ರಭೇದಗಳು ಹೋಮೊ ಸೇಪಿಯೆನ್ಸ್‍ಗೆ ಆನುವಂಶಿಕವಾಗಿ ಎಷ್ಟು ಸಾಮ್ಯತೆ
ಹೊಂದಿದ್ದರೆಂದರೆ, ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು ಆ ಮೂಲಕ ಹುಟ್ಟಿದ ಮಕ್ಕಳೂ
ಸಹ ಫಲವಂತಿಕೆ ಹೊಂದಿದ್ದರೆಂಬುದನ್ನು ನಾವು ಕಳೆದ ಒಂದು ದಶಕದಲ್ಲಿ ತಿಳಿದಿದ್ದೇವೆ. ಇದು
ನಮಗೆ ತಿಳಿದಿದೆ ಏಕೆಂದರೆ ಎಲ್ಲಾ ಆಫ್ರಿಕೇತರ ಹೋಮೊ ಸೇಪಿಯೆನ್ಸ್ ಇಂದು ತಮ್ಮ
ಡಿ.ಎನ್.ಎ.ಗಳಲ್ಲಿ ಶೇ.2ರಷ್ಟು ನಿಯಾಂಡರ್ತಲ್ ವಂಶವಾಹಿಗಳನ್ನು ಹೊಂದಿವೆ. ನಮ್ಮಲ್ಲಿ
ಕೆಲವರು – ಮೆಲನೇಸಿಯನ್ನರು, ಪಪುವನ್ನರು ಮತ್ತು ಆಸ್ಟ್ರೇಲಿಯಾದ ಮೂಲನಿವಾಸಿಗಳು – ಸಹ
ಶೇ.3ರಿಂದ 6ರಷ್ಟು ಡೆನಿಸೋವನ್ ಡಿ.ಎನ್.ಎ. ಹೊಂದಿದ್ದಾರೆ. ಆನುವಂಶಿಕತೆಯಿಂದಾಗಿ ನಾವು
ಅವರನ್ನು ನಮ್ಮ ಪೂರ್ವಜರೆಂದು ಕರೆಯಬಹುದು, ಆದರೆ ಅವರನ್ನು ಹೋಮೊ ಸೇಪಿಯೆನ್ನರು
ಒಡನಾಡಿದ ಜೀವವಿಕಾಸದ ಹಾದಿಯ ಬಂಧುಗಳೆಂದು ಕರೆಯುವುದು ಹೆಚ್ಚು ಉಚಿತ. ಚಿಂಪಾಂಜಿಗಳು
ಶೇ. 96ರಷ್ಟು ಹೋಮೊ ಸೇಪಿಯೆನ್ಸ್ ಡಿ.ಎನ್.ಎ. ಹಂಚಿಕೊಂಡಿದ್ದು, ಜೈವಿಕವಾಗಿ ನಾವು
ಜೀವವಿಕಾಸದ ಹಾದಿಯ ಸಹಪಯಣಿಗರಾಗಿದ್ದೇವೆ. ಅಲ್ಲದೆ ಹೋಮೊ ಸೇಪಿಯೆನ್ನರೂ
ಇದ್ದಕ್ಕಿದ್ದಂತೆ ಈ ಭೂಮಿಯ ಮೇಲೆ ಪ್ರತ್ಯಕ್ಷರಾದವರಲ್ಲ. ಅದೊಂದು ಬಹಳ ನಿಧಾನದ
ಪ್ರಕ್ರಿಯೆಯ ಹಾದಿ; ಆ ಹಾದಿಯಲ್ಲಿ ಹಲವಾರು ಹೋಮೊ ಪ್ರಭೇದಗಳು (ಈಗ ಅವೆಲ್ಲವೂ
ವಿನಾಶಗೊಂಡಿವೆ) ಉಗಮವಾಗಿ ಪರಸ್ಪರ ಅಂತರಮಿಶ್ರಣಗೊಂಡಿವೆ. ನಮ್ಮಲ್ಲಿನ ಸಂಕುಚಿತ
ಮನೋಭಾವದವರಿಗೆ ಈ ಕಟುವಾಸ್ತವ ಸ್ವೀಕೃತವಲ್ಲದಿದ್ದರೂ ಮರೆಯಬಲ್ಲ ವಿಷಯವಾಗಿದೆ.
ಇತರರಿಗೆ, ನಮ್ಮ ಸುತ್ತಮತ್ತಲಿನ ಜೀವ ಜಗತ್ತನ್ನು ಮೆಚ್ಚುವ ಮತ್ತು ಈ ಎಲ್ಲ
ಜೀವರಾಶಿಯನ್ನು ಒಟ್ಟಿಗೆ ಬಂಧಿಸಿರುವ ಏಕತೆಯನ್ನು ವಿಸ್ಮಯದಿಂದ ಕಾಣಲು ಇದು ಮತ್ತೊಂದು
ಕಾರಣವಾಗಿದೆ.
ಯಾವುದು ಖಗೋಳಶಾಸ್ತ್ರ ಮತ್ತು ಜೀವಶಾಸ್ತ್ರಗಳಿಗೆ ಅನ್ವಯಿಸುತ್ತದೋ
ಅದು ನಮ್ಮ ಚರಿತ್ರೆಗೂ ಅನ್ವಯಿಸುತ್ತದೆ. ಹೋಮೊ ಸೇಪಿಯೆನ್ಸ್‍ಗಳ ಅಲ್ಪಾವಧಿ
ಚರಿತ್ರೆಯಲ್ಲಿ (ಭೂಮಿಯ ಮೇಲೆ ಜೀವರಾಶಿ ಇರುವ 3.8 ಬಿಲಿಯನ್ ವರ್ಷಗಳಿಗೆ ಹೋಲಿಸಿದಲ್ಲಿ
ಕೇವಲ 300,000 ವರ್ಷಗಳು) ನಮ್ಮ ಪ್ರತಿಯೊಂದು ಬುಡಕಟ್ಟು, ಪಂಗಡಗಳು, ಸಾಮ್ರಾಜ್ಯಗಳು
ಮತ್ತು ರಾಷ್ಟ್ರಗಳು ತಾವೇ ಎಲ್ಲರಿಗಿಂತ ಉತ್ತಮರೆಂದು ಪರಿಗಣಿಸಿದ್ದಾರೆ. ಕೆಲವರು
ತಮ್ಮನ್ನು ವಿಶೇಷ ದೇವರ ಮಕ್ಕಳೆಂದು ಪರಿಗಣಿಸಿದರೆ, ಇತರರು ತಾವು ದೇವರಿಂದ
ಆಯ್ಕೆಯಾದವರೆಂದೂ ಅಥವಾ ತಾವು ಇತರ ಎಲ್ಲರನ್ನೂ ಆಳಬಲ್ಲ ದೈವಾಂಶಸಂಭೂತರೆಂದೂ
ಪರಿಗಣಿಸಿದ್ದರು. ಇನ್ನು ಕೆಲವರು ತಾವು ಆಕ್ರಮಿಸಿರುವ ಭೂಮಿಯೇ ಎಲ್ಲವುಗಳ ಕೇಂದ್ರವೆಂದು
ಭಾವಿಸಿದ್ದರು. ಉದಾಹರಣೆಗೆ, ಚೀನಿಯರು ಮಧ್ಯ ಸಾಮ್ರಾಜ್ಯ ಅಥವಾ ನಾರ್ಸ್ ಪುರಾಣಗಳಲ್ಲಿನ
‘ಮಿಡ್ ಗಾರ್ಡ್’ (ಮಧ್ಯಾವರಣ). ಹೊಸದಾಗಿ ರಚಿತವಾದ ‘ರಾಷ್ಟ್ರಗಳು’ ಇತರ
ರಾಷ್ಟ್ರಗಳಿಗಿಂತ ಅಸೀಮ ಹಿರಿತನ ಹೊಂದಿವೆಯೆಂದೂ ಮತ್ತು ಅವು ‘ಸ್ಮೃತಿಪೂರ್ವ ಸಮಯ’(Time
immemorial)ದಿಂದಲೂ ಅಸ್ತಿತ್ವದಲ್ಲಿವೆಯೆಂದು ಎಲ್ಲರನ್ನೂ ನಂಬಿಸಲು ಈ ತಮ್ಮ ವಿಚಾರಗಳ
ತಳಹದಿಯ ಮೇಲೆ ಹದಿನೆಂಟು ಮತ್ತು ಹತ್ತೊಂಭತ್ತನೇ ಶತಮಾನಗಳ ನವರಾಷ್ಟ್ರೀಯತೆಯ
ಕಲ್ಪನೆಗಳು ರೂಪುಗೊಂಡಿದ್ದವು. ವಾಸ್ತವವೆಂದರೆ, ನಮ್ಮ ಚರಿತ್ರೆಯನ್ನು ನಾವು ಅರಿಯಲು
ಹೊರಟಾಗ ‘ಸ್ಮೃತಿಪೂರ್ವ ಸಮಯ’ ಎನ್ನುವ ಮಾತನ್ನು ಅತಿ ಹೆಚ್ಚು ಕೇಳುತ್ತಿರುತ್ತೇವೆ.
ಆದರೆ,
ಇವು ಯಾವುವೂ ನಿಜವಲ್ಲ. ಯಾವ ಮಾನವ ಸಮುದಾಯವೂ ಇತರರಿಗೆ ಹೋಲಿಸಿದಲ್ಲಿ ವಿಶೇಷ
ಸ್ಥಾನಮಾನ ಹೊಂದಿಲ್ಲ. ಎಲ್ಲ ಮಾನವರೂ ಆಗಿರದಿದ್ದಲ್ಲಿ, ಇತರ ಯಾರೂ ದೇವರ ಮಕ್ಕಳು ಅಥವಾ
ದೇವರ ಆಯ್ಕೆಯ ಮಾನವರಾಗಿಲ್ಲ. ನಾವು ಭೂಮಿಯ ಮಧ್ಯದಲ್ಲಾಗಲೀ, ಅದರ ಅಂಚಿನಲ್ಲಾಗಲೀ
ವಾಸಿಸುತ್ತಿಲ್ಲ, ಏಕೆಂದರೆ ನಾವು ಒಂದು ಗೋಳದ ಮೇಲ್ಮೈನಲ್ಲಿ ವಾಸಿಸುತ್ತಿದ್ದೇವೆ. ಇಂದು
ನಾವು ಅರಿತಿರುವ ರಾಷ್ಟ್ರಗಳು ಕೆಲವು ಶತಮಾನಗಳಷ್ಟೇ ಹಳೆಯವು ಮತ್ತು ನಾವೆಲ್ಲರೂ
ಆನುವಂಶಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಚಾರಿತ್ರಿಕವಾಗಿ ನಾವು ಊಹಿಸಿರುವುದಕ್ಕಿಂತ
ಹೆಚ್ಚಿಗೇ ಪರಸ್ಪರ ಸಂಬಂಧ ಹೊಂದಿದವರೇ ಆಗಿದ್ದೇವೆ. ‘ಸ್ಮೃತಿಪೂರ್ವ ಸಮಯ’
ಎನ್ನುವುದನ್ನೂ ಸಹ ಈಗಿನ ತಂತ್ರಜ್ಞಾನದಲ್ಲಿ ನಿಖರವಾಗಿ ಗುರುತಿಸಿ, ದಿನಾಂಕ
ನಿರ್ಧರಿಸಿ, ವಿಶ್ಲೇಷಿಸಿ ಅರ್ಥಮಾಡಿಕೊಳ್ಳಬಹುದಾಗಿದೆ. ನಾವು ಅದನ್ನು ಮಾಡಿದಾಗಲೇ ನಮ್ಮ
ಸಮಾಜ, ಸಂಸ್ಕೃತಿ ಹಾಗೂ ಅದರ ನಿರ್ಮಾಣದ ಹಿನ್ನೆಲೆಯನ್ನು ಉತ್ತಮವಾಗಿ ಅರಿತುಕೊಳ್ಳಲು
ಸಾಧ್ಯ.
ಇದು ಕೆಲವರಿಗೆ ಸರಿದೋರುವುದಿಲ್ಲವೆ? ಹೌದು. ನಿಮ್ಮ ಬಾಲ್ಯದಲ್ಲಿ
ನಿಮ್ಮನ್ನು ಮಂತ್ರಮುಗ್ಧರನ್ನಾಗಿಸಿದ ಮಾಂತ್ರಿಕನ ರಹಸ್ಯಗಳನ್ನು ನಿಮ್ಮ ಮುಂದೆ
ಬಿಚ್ಚಿಟ್ಟ ಅನುಭವ. ನೀವು ಆತನ ರಹಸ್ಯಗಳನ್ನು ತಿಳಿದುಕೊಂಡಲ್ಲಿ, ನಿಮ್ಮ ಮುಗ್ಧತೆಯನ್ನು
ಕಳೆದುಕೊಂಡದ್ದನ್ನು ಮತ್ತು ಮಾಂತ್ರಿಕತೆ ಉಂಟುಮಾಡುತ್ತಿದ್ದ ರೋಚಕ ಅನುಭವ
ಹಾಳಾಗಿರುವುದನ್ನು ದೂಷಿಸಬಹುದು ಅಥವಾ ಹೊಸ ಜ್ಞಾನದ ಅರಿವಿನಿಂದ, ಹಲವಾರು ವಿಷಯಗಳ
ಬಗೆಗೆ ಅದು ನೀಡುವ ಸ್ಪಷ್ಟತೆಯಿಂದ ಹಾಗೂ ಆ ಜ್ಞಾನದ ಸಾಧ್ಯತೆಗಳ ಬಗ್ಗೆ
ಪುಳಕಿತರಾಗುತ್ತೀರಿ. ಪ್ರಿಯ ಓದುಗರೇ, ನೀವು ಆ ಎರಡನೇ ಗುಂಪಿನವರೆಂದು ಈ ಕೃತಿ
ಭಾವಿಸುತ್ತದೆ.
ಈ ಮುಂದಿನ ಅಧ್ಯಾಯಗಳಲ್ಲಿ, ನಾವು ಆಧುನಿಕ ಮಾನವರು ಅಥವಾ ಹೋಮೊ
ಸೇಪಿಯೆನ್ಸ್ ಭಾರತಕ್ಕೆ ಮೊದಲಿಗೆ ಬಂದದ್ದು ಯಾವಾಗ; ಅವರು ಯಾವ ಕುರುಹುಗಳನ್ನು ಉಳಿಸಿ
ಹೋಗಿದ್ದಾರೆ; ಇಂದು ಅವರ ಸಂತತಿ ಯಾರಿದ್ದಾರೆ; ಈ ನಮ್ಮ ನಾಡಿಗೆ ಅವರನ್ನು ವಲಸಿಗರಾಗಿ
ಮತ್ತಾರು ಹಿಂಬಾಲಿಸಿದರು; ಹೇಗೆ ಮತ್ತು ಯಾವಾಗ ನಾವು ಬೇಸಾಯ ಆರಂಭಿಸಿದೆವು ಮತ್ತು ಆ
ಸಮಯದ ಅತಿ ದೊಡ್ಡ ನಾಗರಿಕತೆಯ ನಿರ್ಮಾಣ ಮಾಡಿದೆವು; ಯಾವಾಗ ಮತ್ತು ಏಕೆ ಈ ನಾಗರಿಕತೆ
ಕ್ರಮೇಣ ಇಲ್ಲವಾಯಿತು ಹಾಗೂ ಮುಂದೇನು ನಡೆಯಿತು ಎನ್ನುವುದರ ಕುರಿತು ಅವಲೋಕಿಸೋಣ.
ಈ
ಕೃತಿಯು ಪೂರ್ವಚರಿತ್ರೆ ಕುರಿತಾದುದು ಮತ್ತು ಪೂರ್ವಚರಿತ್ರೆಯು ಚರಿತ್ರೆಯ ಹಿಂದಿನ
ಅವಧಿಯದು. ಚರಿತ್ರೆ ಪ್ರಾರಂಭವಾಗುವುದು ಬರವಣಿಗೆ ಪ್ರಾರಂಭವಾದಾಗ ಮತ್ತು ಸ್ಥಳಗಳು ಹಾಗೂ
ವ್ಯಕ್ತಿಗಳು ನಮ್ಮ ಕಣ್ಣೆದುರಿಗೆ ಅವರದೇ ಹೆಸರುಗಳಿಂದ, ಕೆಲವೊಮ್ಮೆ ಗುರುತಿಸಬಲ್ಲ
ಕತೆಗಳಿಂದ ಜೀವಂತವಾಗಿ ಬರುತ್ತಾರೆ. ಪೂರ್ವಚರಿತ್ರೆಯಲ್ಲಿ ಯಾವುದೆ ಲಿಖಿತ
ದಾಖಲೆಗಳಿರುವುದಿಲ್ಲ, ಹಾಗಾಗಿ ನಮಗೆ ಅವರ ಹೆಸರುಗಳ, ಸ್ಥಳಗಳ ಅಥವಾ ಆ ವ್ಯಕ್ತಿಗಳ
ಕತೆಗಳ ಕುರಿತು ಖಾತರಿಯಾಗಿ ತಿಳಿದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದರೆ ಇತರ
ಕುರುಹುಗಳನ್ನು ಬಳಸಿಕೊಂಡು ಆ ಸಮಯದಲ್ಲಿನ ಜನರ ಬದುಕು ಹೇಗಿತ್ತೆಂಬುದನ್ನು ತಕ್ಕ
ಮಟ್ಟಿಗೆ ವಿಶ್ಲೇಷಿಸಿ ತಿಳಿಯಬಹುದು. ಪೂರ್ವಚರಿತ್ರೆಯ ಕುರುಹುಗಳು ನಮಗೆ
ಪಳೆಯುಳಿಕೆಗಳು, ಪ್ರಾಚೀನ ಮಾನವರ ವಾಸಸ್ಥಾನಗಳ ಪ್ರಾಕ್ತನನ ಅಗೆತಗಳಿಂದ, ಸಲಕರಣೆಗಳಂತಹ
ಮಾನವರು ನಿರ್ಮಿಸಿದ ಹಲವಾರು ವಸ್ತುಗಳಿಂದ ಮತ್ತು ಈಗ ಹೆಚ್ಚು ಪ್ರಾಮುಖ್ಯತೆ ಪಡೆದಿರುವ
ಪ್ರಾಚೀನ ಮತ್ತು ಈಗಿನ ವ್ಯಕ್ತಿಗಳ ಡಿ.ಎನ್.ಎ. ವಿಶ್ಲೇಷಣೆಯಿಂದ ದೊರಕುತ್ತದೆ.
ಹಾಗಿದ್ದಲ್ಲಿ
ಭಾರತದ ಪೂರ್ವಚರಿತ್ರೆ ಕೊನೆಗೊಳ್ಳುವುದು ಮತ್ತು ಚರಿತ್ರೆ ಪ್ರಾರಂಭವಾಗುವುದು
ಎಲ್ಲಿಂದ? ಇದೊಂದು ಸರಳ ಪ್ರಶ್ನೆಯಲ್ಲ ಏಕೆಂದರೆ, ಕ್ರಿ.ಪೂ. 2600ರಿಂದ ಕ್ರಿ.ಪೂ.
1900ರ ಅವಧಿಯವರೆಗೆ ಉಚ್ಛ್ರಾಯದಲ್ಲಿದ್ದ ಹರಪ್ಪ ನಾಗರಿಕತೆಯ ಮುದ್ರೆಗಳು ಮತ್ತು
ಫಲಕಗಳಲ್ಲಿ ಲಿಖಿತ ದಾಖಲೆಗಳಿವೆ. ಹಾಗಾದರೆ ಅಲ್ಲಿಂದಲೇ ನಮ್ಮ ಚರಿತ್ರೆ ಪ್ರಾರಂಭವಾಗಿದೆ
ಹಾಗೂ ಪೂರ್ವಚರಿತ್ರೆ ಅಂತ್ಯವಾಗಿದೆ ಎಂದು ಹೇಳಬಹುದೆ? ಆದರೆ ಹರಪ್ಪ ಲಿಪಿಯನ್ನು ನಮಗೆ
ಓದಲು ಇನ್ನೂ ಸಾಧ್ಯವಾಗಿಲ್ಲ, ಹಾಗಾಗಿ ಆ ದಾಖಲೆಗಳಲ್ಲಿ ಏನು ಬರೆದಿದೆಯೆಂಬ ಅರಿವು
ನಮಗಿಲ್ಲ. ಆದುದರಿಂದ ಆ ಅವಧಿಯು ಚರಿತ್ರೆಯ ಪರಿಧಿಯಿಂದ ಹೊರಗೆ ಮತ್ತು
ಪೂರ್ವಚರಿತ್ರೆಯೊಳಗೆ ಬರುತ್ತದೆ. ಆದರೆ, ಹರಪ್ಪ ನಾಗರಿಕತೆಯ ಬಗ್ಗೆ ಪಶ್ಚಿಮ ಏಷ್ಯಾದ
ಮೆಸೊಪೊಟೇಮಿಯನ್ ನಾಗರಿಕತೆಯ ಸಮಕಾಲೀನ ದಾಖಲೆಗಳಲ್ಲಿ ಕೆಲವು ಉಲ್ಲೇಖಗಳಿವೆ. ಆದುದರಿಂದ
ಅದು ಚರಿತ್ರೆಯ ಭಾಗವೂ ಆಗತ್ತದೆ.
ಈ ದ್ವಂದ್ವದಿಂದಾಗಿಯೇ ಕೆಲವು ಚರಿತ್ರಕಾರರು
ಪೂರ್ವಚರಿತ್ರೆ ಮತ್ತು ಚರಿತ್ರೆಯ ನಡುವಿನ ಅವಧಿಯನ್ನು ವಿವರಿಸಲು ‘ಪ್ರೋಟೊ-ಚರಿತ್ರೆ’
ಎಂಬ ಪರಿಕಲ್ಪನೆ ಬಳಸುತ್ತಾರೆ. (ಇಲ್ಲಿ ‘ಪ್ರೋಟೊ’ ಪದದ ಅರ್ಥ ಆದಿಮ ಅಥವಾ ಮೂಲ
ಎಂದಾಗುತ್ತದೆ). ಈ ಕೃತಿಯಲ್ಲಿ ನಾವು ಹರಪ್ಪ ನಾಗರಿಕತೆಯ ಅಂತ್ಯದ ಹಾಗೂ ಆನಂತರದ ಕೆಲವು
ಶತಮಾನಗಳವರೆಗೂ ತಲುಪಲು ಪ್ರಯತ್ನಿಸಿದ್ದೇವೆ ಮತ್ತು ಬಹುಶಃ ಮುಂದಿನದನ್ನು ಮತ್ತೊಂದು
ಕೃತಿಯಲ್ಲಿ ಪರಿಚಯಿಸಬಹುದೇನೋ!
ಈ ಕೃತಿ ಈಗ ಪ್ರಕಟಿಸುತ್ತಿರುವ ಉದ್ದೇಶವೇನು
ಈ
ಕೃತಿಯನ್ನು ಈ ಮೊದಲಿಗಿಂತ ಈಗ ಬರೆಯುತ್ತಿರುವುದಕ್ಕೆ ಒಂದು ಕಾರಣವೂ ಇದೆ. ಅದೇನೆಂದರೆ,
ನಮ್ಮ ಗಾಢ ಚರಿತ್ರೆಯ ಅರಿವು ಕಳೆದ ಐದು ವರ್ಷಗಳಲ್ಲಿ ಮಹತ್ತರ ಬದಲಾವಣೆಯನ್ನು ಕಂಡಿದೆ.
ನಾವು ಮಾತನಾಡುತ್ತಿರುವಂತೆ ಹತ್ತಾರು ಸಾವಿರ ವರ್ಷಗಳ ಹಿಂದೆ ಬದುಕಿದ್ದವರ ಡಿ.ಎನ್.ಎ.
ಸಾರದ ವಿಶ್ಲೇಷಣೆಯ ಆಧಾರದ ಮೇಲೆ ನಮ್ಮ ಪೂರ್ವಚರಿತ್ರೆಯ ಮರುವ್ಯಾಖ್ಯಾನ ನಡೆಯುತ್ತಿದೆ.
ನಾವು ಯಾವುದನ್ನು ‘ಸತ್ಯ’ವೆಂದು ಪರಿಗಣಿಸಿದ್ದೆವೋ ಅವು ಸುಳ್ಳೆಂದು ಸಾಬೀತಾಗುತ್ತಿವೆ,
ಚರಿತ್ರೆಕಾರರು, ಪ್ರಾಕ್ತನತಜ್ಞರು ಮತ್ತು ಮಾನವಶಾಸ್ತ್ರಜ್ಞರು ಚರ್ಚಿಸುತ್ತಿದ್ದ
ಹಲವಾರು ಪ್ರಶ್ನೆಗಳಿಗೆ ಹೊಸ ಉತ್ತರಗಳು ದೊರಕುತ್ತಿವೆ. ಆನುವಂಶಿಕ ವಿಜ್ಞಾನಿಗಳು
ಪ್ರಾಚೀನ ಪಳೆಯುಳಿಕೆಗಳಿಂದ ಯಶಸ್ವಿಯಾಗಿ ಡಿ.ಎನ್.ಎ. ಸಾರ ತೆಗೆದು ಅದನ್ನು ಸರಣಿಗೊಳಿಸಿ
ಜನರ ಪರಸ್ಪರ ಸಾಮ್ಯತೆಗಳನ್ನು ಅಥವಾ ವ್ಯತ್ಯಾಸಗಳನ್ನು ಅರಿತುಕೊಳ್ಳುವ ಪ್ರಯತ್ನದಿಂದಲೇ
ಇವೆಲ್ಲವೂ ಸಾಧ್ಯವಾಗುತ್ತಿದೆ. ಈ ಹಂತಕ್ಕೆ ಇಂದು ತಂತ್ರಜ್ಞಾನವು
ತಲುಪಿಲ್ಲದಿದ್ದಲ್ಲಿ, ವಿಜ್ಞಾನಿಗಳ ಇಂದಿನ ಆವಿಷ್ಕಾರಗಳು ಸಾಧ್ಯವಾಗುತ್ತಿರಲಿಲ್ಲ. ಅವರ
ಇತ್ತೀಚಿನ ಆವಿಷ್ಕಾರಗಳಿಲ್ಲದಿದ್ದಲ್ಲಿ, ನಮ್ಮ ಪೂರ್ವಚರಿತ್ರೆ ಮೊದಲಿನಂತೆ ಇನ್ನೂ
ಅಸ್ಪಷ್ಟ ಹಾಗೂ ವಿವಾದಾಸ್ಪದವಾಗಿಯೇ ಉಳಿಯುತ್ತಿತ್ತು ಹಾಗೂ ಈ ಪುಸ್ತಕ ಬರೆಯುವ
ಅವಶ್ಯಕತೆಯೇ ಇರುತ್ತಿರಲಿಲ್ಲ.
ಈ ಸಂಶೋಧನೆಗಳು ಎಷ್ಟು ವೇಗವಾಗಿ
ನಡೆಯುತ್ತಿವೆಯೆಂದರೆ, ಈ ಪುಸ್ತಕ ಬರೆಯಲು ಆರು ವರ್ಷಗಳ ಹಿಂದೆ ಪ್ರಾರಂಭಿಸಿದಾಗ ಹರಪ್ಪ
ನಾಗರಿಕತೆಯ ಜನ ಅಥವಾ ಅವರ ಮುಂದಿನ ತಲೆಮಾರಿನವರು ಎಲ್ಲಿಗೆ ಹೋದರೆಂಬುದು
ತಿಳಿದಿರಲಿಲ್ಲ, ಆದರೆ ನಮಗೆ ಈಗ ಅದು ತಿಳಿದಿದೆ. ನಮ್ಮ ಸಂತತಿಯು 65,000 ವರ್ಷಗಳ
ಹಿಂದೆ ಭಾರತ ತಲುಪಿದ ಆಫ್ರಿಕಾದಿಂದ ಹೊರ ಹೊರಟ ಮೂಲ ವಲಸೆಗಾರರಿಗೆ ಆನುವಂಶಿಕವಾಗಿ
ಋಣಿಯಾಗಿದೆ ಎಂಬುದು ಆರು ವರ್ಷಗಳ ಹಿಂದೆ ತಿಳಿದಿರಲಿಲ್ಲ, ಆದರೆ ಈಗ ಅದು ತಿಳಿದಿದೆ.
ಜಾತಿ ಪದ್ಧತಿ ಆರಂಭವಾದುದು ಯಾವಾಗ ಎಂಬುದು ನಮಗೆ ಆರು ವರ್ಷಗಳ ಹಿಂದೆ ತಿಳಿದಿರಲಿಲ್ಲ,
ಆದರೆ ಈಗ ತಕ್ಕ ಮಟ್ಟಿನ ಆನುವಂಶಿಕ ನಿಖರತೆಯಿಂದಾಗಿ ಅದು ಪ್ರಾರಂಭವಾದ ಅವಧಿಯನ್ನು
ಗುರುತಿಸಬಹುದಾಗಿದೆ. ಭಾರತದ ಪೂರ್ವಚರಿತ್ರೆ ಮಾತ್ರವಲ್ಲ, ಇಡೀ ಜಗತ್ತಿನ
ಪೂರ್ವಚರಿತ್ರೆಯ ನಮ್ಮ ಅರಿವು ಹೆಚ್ಚುತ್ತಿರುವುದಕ್ಕೆ ಇವು ಕೆಲವು ಉದಾಹರಣೆಗಳು ಮಾತ್ರ.
ಪ್ರಾಚೀನ
ಡಿ.ಎನ್.ಎ.ನಿಂದಾಗಿ ಜಗತ್ತಿನ ಇತರೆಡೆ ಮಾನವ ಪೂರ್ವಚರಿತ್ರೆಯ ಸಂಗತಿಗಳ ಬದಲಾವಣೆಗಳ
ಒಂದು ಸಂಕ್ಷಿಪ್ತ ಪಟ್ಟಿ ಇಲ್ಲಿದೆ: ಕಳೆದ 10,000 ವರ್ಷಗಳಲ್ಲಿ ಯೂರೋಪಿನ ಜನಸಮೂಹದ
ಬಹುಪಾಲು ಭಾಗವು ಒಮ್ಮೆಯೆಲ್ಲ ಎರಡು ಬಾರಿ ಬದಲಾಯಿಸಲ್ಪಟ್ಟಿದೆ. ಮೊದಲಿಗೆ, ಪಶ್ಚಿಮ
ಏಷ್ಯಾದಿಂದ ಸುಮಾರು 9000 ವರ್ಷಗಳ ಹಿಂದೆ ಕೃಷಿಕರು ಸಮೂಹ ವಲಸೆ ಬಂದು ಯೂರೋಪಿನಲ್ಲಿ
ಈಗಾಗಲೇ ನೆಲೆಸಿದ್ದ ಬೇಟೆಗಾರ-ಆಹಾರ ಸಂಗ್ರಹಿಸುವವರೊಂದಿಗೆ ಬೆರೆತುಹೋದರು ಅಥವಾ ಅವರ
ಸ್ಥಾನವನ್ನು ಆಕ್ರಮಿಸಿದರು. ಆನಂತರ ಸುಮಾರು 5000 ವರ್ಷಗಳ ಹಿಂದೆ ಯುರೇಶಿಯನ್
ಸ್ಟೆಪ್(ಹುಲ್ಲುಗಾವಲು ಮೈದಾನ)ಗಳಿಂದ ಸಮೂಹ ವಲಸೆ ಬಂದವರು ಆಗ ಯೂರೋಪಿನಲ್ಲಿ
ನೆಲೆಯೂರಿದ್ದ ಕೃಷಿಕ ಜನ ಸಮೂಹದೊಂದಿಗೆ ಬೆರೆತುಹೋದರು ಅಥವಾ ಅವರ ಸ್ಥಾನ ಆಕ್ರಮಿಸಿ
ಅವರನ್ನು ಬದಲಿಸಿದರು. ಅಮೆರಿಕಾಗಳಲ್ಲಿ, ಯೂರೋಪಿಯನ್ನರು ಬರುವ ಮೊದಲು ಅಲ್ಲಿದ್ದ ಮೂಲ
ಅಮೆರಿಕನ್ನರು ಏಷ್ಯಾದ ಒಂದಲ್ಲ ಮೂರು ವಲಸೆಗಳಲ್ಲಿ ತಮ್ಮ ವಂಶಮೂಲವನ್ನು
ಹೊಂದಿದ್ದರೆಂಬುದು ನಮಗೀಗ ತಿಳಿದಿದೆ. ಪೂರ್ವ ಏಷ್ಯಾದಲ್ಲಿ, ಆ ಪ್ರದೇಶದ ಜನರ ವಂಶಮೂಲವು
ಚೀನಿ ಕೃಷಿ ಕೇಂದ್ರಸ್ಥಾನದ ಜನ ಸಮೂಹದ ಎರಡು ಅಥವಾ ಹೆಚ್ಚಿನ ಪ್ರಮುಖ
ವಿಸ್ತರಣೆಗಳಲ್ಲಿದೆಯೆಂಬುದು ನಮಗೀಗ ತಿಳಿದಿದೆ. ಆಧುನಿಕ ಮಾನವರು ನಿಯಾಂಡರ್ತಲ್
ಮಾನವರೊಂದಿಗೆ ಅಂತರ್ ಸಂವರ್ಧನೆಗೊಂಡಿದ್ದರೆಂದು ನಮಗೆ 2010ರಲ್ಲಿ ತಿಳಿದುಬಂದಿದೆ ಹಾಗೂ
ಅದೇ ರೀತಿ ನಮ್ಮ ಪೂರ್ವಜರು ಡೆನಿಸೋವನ್‍ರೊಂದಿಗೆ (ಹೋಮೊ ಪ್ರಭೇದದ ಜೀವಿ ಹಾಗೂ
ಪ್ರಾಚೀನ ಡಿ.ಎನ್.ಎ. ಸರಣಿ ಮೂಲಕವಷ್ಟೇ ಗುರುತಿಸಲಾಗಿದೆ) ಅಂತರ್
ಸಂವರ್ಧನೆಗೊಂಡಿದ್ದರೆಂದು 2014ರಲ್ಲಿ ತಿಳಿದುಬಂದಿದೆ.
ಆರು
ವರ್ಷಗಳ ಹಿಂದೆ ನಾನು ಪೂರ್ವಚರಿತ್ರೆಯ ಜಗತ್ತಿನೊಳಗಿನ ಈ ಪಯಣ ಆರಂಭಿಸಿದಾಗ ಹೊಸ
ಜ್ಞಾನದ ಈ ಮಹಾಸ್ಪೋಟವನ್ನು ಅನುಭವಿಸುತ್ತೇನೆಂದು ಊಹಿಸಿರಲಿಲ್ಲ. ಈ ಘಟನೆಗಳು ಸುಪ್ತ
ಆಕಸ್ಮಿಕಗಳೆಂದೇ ಹೇಳಬಹುದು. ನಾನು ಪ್ರಾರಂಭಿಸಿದಾಗ, ಹರಪ್ಪ ನಾಗರಿಕತೆಯ ಬಗ್ಗೆ ಹಾಗೂ
ಇನ್ನೂ ಉತ್ತರ ದೊರಕದ ಪ್ರಶ್ನೆಗಳ ಬಗ್ಗೆ ನನಗೆ ಕುತೂಹಲವಿತ್ತು: ಆ ಸಮಯದ ಅತ್ಯಂತ ಬೃಹತ್
ನಾಗರಿಕತೆಯನ್ನು ನಿರ್ಮಿಸಿದವರು ಯಾರು ಮತ್ತು ಅವರು ಎಲ್ಲಿಗೆ ಹೋದರು? ನಾನು
ಗುಜರಾತ್‍ನಲ್ಲಿನ ಧೊಳವೀರ ಮತ್ತು ಲೋಥಲ್‍ಗಳಿಗೆ, ಹರಿಯಾಣಾದಲ್ಲಿನ ರಾಖಿಘರಿ ಹರಪ್ಪ
ನಾಗರಿಕತೆಯಿದ್ದ ಸ್ಥಳಗಳಿಗೆ ಭೇಟಿ ನೀಡಿದೆ ಹಾಗೂ ಅದರ ಮೂಲಕ ಭಾರತದ ಮತ್ತು
ಪ್ರಪಂಚದೆಲ್ಲೆಡೆಯ ಪ್ರಮುಖ ಚರಿತ್ರೆಕಾರರು, ಪ್ರಾಕ್ತನತಜ್ಞರು, ಲಿಪಿಶಾಸ್ತ್ರಜ್ಞರು,
ಭಾಷಾತಜ್ಞರು ಮತ್ತು ಆನುವಂಶಿಕ ತಜ್ಞರೊಂದಿಗೆ ಹಲವಾರು ಸಭೆಗಳು ಮತ್ತು ಇಮೇಲ್
ಚರ್ಚೆಗಳಿಗೆ ಹಾದಿಯಾಯಿತು – ನವದೆಹಲಿಯಲ್ಲಿ ರೊಮಿಲಾ ಥಾಪರ್ ಮತ್ತು ಬಿ.ಬಿ.ಲಾಲ್; ನ್ಯೂ
ಯಾರ್ಕ್‍ನಲ್ಲಿನ ಶೆಲ್ಡಾನ್ ಪೊಲ್ಲಾಕ್; ಹಾರ್ವರ್ಡ್‍ನಲ್ಲಿನ ಮೈಖೆಲ್ ವಿಟ್ಜೆಲ್,
ಡೇವಿಡ್ ರೀಚ್ ಹಾಗೂ ವಾಗೀಶ್ ನರಸಿಂಹನ್; ಚೆನ್ನೈನಲ್ಲಿನ ಇರಾವತಂ ಮಹದೇವನ್; ಯುನೈಟೆಡ್
ಕಿಂಗ್‍ಡಮ್‍ನ ಹಡ್ಡರ್ಸ್ ಫೀಲ್ಡ್‍ನಲ್ಲಿನ ಮಾರ್ಟಿನ್ ಬಿ. ರಿಚಡ್ರ್ಸ್;
ಸ್ಟ್ಯಾನ್‍ಫರ್ಡ್‍ನಲ್ಲಿನ ಪೀಟರ್ ಅಂಡರ್ ಹಿಲ್; ಪುಣೆಯಲ್ಲಿನ ಎಂ.ಕೆ. ಧವಳೀಕರ್,
ವಿ.ಎನ್. ಮಿಶ್ರಾ, ವಸಂತ್ ಶಿಂಧೆ ಮತ್ತು ಹೈದರಾಬಾದ್‍ನಲ್ಲಿನ ಕೆ.ತಂಗರಾಜ್;
ವಾರಣಾಸಿಯಲ್ಲಿನ ಲಾಲ್ಜಿ ಸಿಂಗ್; ಲಕ್ನೋದಲ್ಲಿನ ನೀರಜ್ ರಾಯ್; ಜರ್ಮನಿಯ ಜೇನಾದಲ್ಲಿನ
ಮೈಖೆಲ್ ಪೆಟ್ರಾಗ್ಲಿಯ …. ಪಟ್ಟಿ ದೊಡ್ಡದು.
ಎಲ್ಲರಲ್ಲೂ ಒಮ್ಮತವಿರಲಿಲ್ಲ ನಿಜ,
ಆದರೆ ಪ್ರತಿಯೊಂದು ಚರ್ಚೆಯೂ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು
ಒದಗಿಸುತ್ತಿತ್ತು, ಹಾಗೆಯೇ ನನ್ನಲ್ಲಿ ಹರಪ್ಪ ನಾಗರಿಕತೆಯ ಬಗೆಗೆ ಮಾತ್ರವಲ್ಲ ಅದರ
ಮೊದಲಿನ ಅವಧಿಯ ಬಗೆಗೂ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದವು. ನಾನು
ಹರಪ್ಪನ್ನರು ಯಾರು ಎಂದು ಉತ್ತರ ಅರಸುತ್ತಿದ್ದ ಪ್ರಶ್ನೆ ನನ್ನ ಅರಿವಿಗೆ ಬಾರದಂತೆ ನಾವು
ಭಾರತೀಯರು ಬಂದದ್ದು ಹೇಗೆ ಎಂದು ರೂಪಾಂತರಗೊಂಡಿತು.
ಈ ಅನ್ವೇಷಣೆಯ ಹಾದಿಯಲ್ಲಿ,
ಜನಸಮೂಹ ಆನುವಂಶಿಕತೆಯ (Population Genetics) ಹೊಸ ಕ್ಷೇತ್ರದಿಂದ ಬಹುಮುಖ್ಯ
ಹೊಳಹಿನ ಹಾದಿಗಳು ತೆರೆದುಕೊಳ್ಳುತ್ತಿವೆ ಎನ್ನುವುದು ಸ್ಪಷ್ಟವಾಗತೊಡಗಿತು. ಇದರಿಂದಾಗಿ
ನಾನು ದಕ್ಷಿಣ ಏಷ್ಯಾ ಜನರ ಮೇಲಿನ ಜನಸಮೂಹ ಆನುವಂಶಿಕ ಸಂಶೋಧನಾ ಪ್ರಬಂಧಗಳನ್ನು
ಅರಸತೊಡಗಿದೆ- ಅವು ನೂರಾರು ಇದ್ದವು – ಆನಂತರ ಅವುಗಳ ಲೇಖಕರೊಂದಿಗೆ ಅವುಗಳ ಕುರಿತು
ಚರ್ಚಿಸಿದೆ. ನಾನು ಹೈದರಾಬಾದ್‍ನಲ್ಲಿನ ಸೆಂಟರ್ ಫಾರ್ ಸೆಲ್ಲುಲಾರ್ ಅಂಡ್
ಮಾಲಿಕ್ಯುಲಾರ್ ಬಯಾಲಜಿಯ (ಸಿ.ಸಿ.ಎಂ.ಬಿ.) ಪ್ರಧಾನ ವಿಜ್ಞಾನಿ ಕೆ.ತಂಗರಾಜ್‍ರವರನ್ನು
ಮತ್ತು ಸಿ.ಸಿ.ಎಂ.ಬಿ.ಯ ಹಿಂದಿನ ಮುಖ್ಯಸ್ಥರಾಗಿದ್ದ ನಂತರ ವಾರಣಾಸಿಯ ಬನಾರಸ್ ಹಿಂದು
ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಲಾಲ್ಜಿ ಸಿಂಗ್‍ರವರನ್ನು ಭೇಟಿಯಾದೆ. ಇದು
2015ರಲ್ಲಿ ಹಾಗೂ ನನ್ನ ಸಂಶೋಧನೆ ಮತ್ತು ಸಂವಾದಗಳ ಆಧಾರದ ಮೇಲೆ ಹರಪ್ಪ ನಾಗರಿಕತೆ
ಮತ್ತು ಚರ್ಚಾಸ್ಪದ ‘ಆರ್ಯರ ವಲಸೆ’2ಯ ವಿಷಯದ ಕುರಿತು ನಾನು ನನ್ನ ಮೊದಲ
ಲೇಖನ ಪ್ರಕಟಿಸುವವನಿದ್ದೆ. ಅಷ್ಟರಲ್ಲಿ ಸಮಸ್ಯೆಯೊಂದು ಉದ್ಭವಿಸಿತು. ನಾನು ನನ್ನ
ಲೇಖನವನ್ನು ಪೂರ್ಣಗೊಳಿಸಲಾಗಲಿಲ್ಲ ಏಕೆಂದರೆ ಸಿಂಗ್ ಮತ್ತು ತಂಗರಾಜ್‍ರವರು ಹೇಳಿದ
ವಿಷಯಗಳು ನಾನು ಓದಿದ ಜಗತ್ತಿನೆಡೆಯ ಇತರ ವಿಜ್ಞಾನಿಗಳೊಂದಿಗೆ ಅವರು 2009ರಲ್ಲಿ ಬರೆದ
ಪ್ರಬಂಧಗಳ ವಿಷಯಗಳಿಗೆ ತಾಳೆಯಾಗುತ್ತಿರಲಿಲ್ಲ3. ಹಾಗಾಗಿ ನಾನು
ಬರೆಯುವುದನ್ನು ನಿಲ್ಲಿಸಿದೆ ಹಾಗೂ ಆ ಕುರಿತು ಹೆಚ್ಚಿನದನ್ನು ಬರೆಯುವ ಮೊದಲು ಜನಸಮೂಹ
ಆನುವಂಶಿಕತೆ ಕುರಿತು ಇನ್ನೂ ಹೆಚ್ಚು ತಿಳಿದುಕೊಳ್ಳಲು ನಿರ್ಧರಿಸಿದೆ. ಎರಡು ವರ್ಷಗಳ
ನಂತರ 2017ರಲ್ಲಿ ಯುನೈಟೆಡ್ ಕಿಂಗ್ ಡಮ್‍ನ ಹಡ್ಡರ್ಸ್ ಫೀಲ್ಡ್ ವಿಶ್ವವಿದ್ಯಾನಿಲಯದ
ಪ್ರೊ.ಮಾರ್ಟಿನ್ ಬಿ. ರಿಚಡ್ರ್ಸ್‍ರವರು ತಮ್ಮ ವಿಜ್ಞಾನಿಗಳ ತಂಡದೊಂದಿಗೆ ಬರೆದ ‘ಎ
ಜೆನೆಟಿಕ್ ಕ್ರೋನಾಲಜಿ ಆಫ್ ದ ಇಂಡಿಯನ್ ಸಬ್ ಕಾಂಟಿನೆಂಟ್ ಪಾಯಿಂಟ್ಸ್ ಟು ಹೆವ್ವೀಲಿ
ಸೆಕ್ಸ್-ಬಯಾಸ್ಡ್ ಡಿಸ್ಪರ್ಸಲ್ಸ್’ ಎನ್ನುವ ಪ್ರಬಂಧ ಕಣ್ಣಿಗೆ ಬಿತ್ತು4. ನನಗೆ ವಿಷಯ ಮನವರಿಕೆಯಾಗುವವರೆಗೂ ಅದನ್ನು ಪುನಃ ಪುನಃ ಓದಿದೆ. ಕೊನೆಗೂ ನನಗೆ ಈ ವಿಷಯದ ಅರಿವಿನ ಸಮಸ್ಯೆಯ ಮೂಲವನ್ನು ಕಂಡುಕೊಂಡೆ.
ಈ
ಗೊಂದಲಕ್ಕೆ ಕಾರಣ ನಾನು ಆ ವಿಜ್ಞಾನಿಗಳನ್ನು 2015ರಲ್ಲಿ ಭೇಟಿಯಾಗಿದ್ದು. ಆಗ ಅವರು
2009ರಲ್ಲಿನ ಅವರ ಪ್ರಬಂಧದಲ್ಲಿ ಇಲ್ಲದ ಒಂದು ಹೊಸ ಆಧಾರಕಲ್ಪನೆಯನ್ನು ಮಂಡಿಸಿದ್ದರು. ಈ
ಆಧಾರಕಲ್ಪನೆ ಏನೆಂದರೆ, ಕಳೆದ ಸುಮಾರು 40,000 ವರ್ಷಗಳಲ್ಲಿ ಭಾರತಕ್ಕೆ ಯಾವುದೇ ದೊಡ್ಡ
ಪ್ರಮಾಣದ ವಲಸೆಗಳಾಗಿಲ್ಲ ಎನ್ನುವುದು. ಎರಡು ಬಹಳ ಪ್ರಾಚೀನ ಜನ ಸಮೂಹಗಳು, ಒಂದು ಉತ್ತರ
ಭಾರತದಲ್ಲಿ ಹಾಗೂ ಮತ್ತೊಂದು ದಕ್ಷಿಣ ಭಾರತದಲ್ಲಿ ನೆಲೆಸಿವೆ ಮತ್ತು ಈಗಿನ ಎಲ್ಲ ಜನರೂ ಈ
ಎರಡೂ ಗುಂಪುಗಳ ನಡುವಿನ ಮಿಶ್ರಣದ ಸಂತತಿಯಾಗಿದ್ದಾರೆ ಎಂದೂ ಸಹ ಹೇಳಿದರು ಹಾಗೂ ಈ
ಗುಂಪುಗಳಿಗೆ ಪೂರ್ವಜ ಉತ್ತರ ಭಾರತೀಯರು (Ancestral North Indian – ANI) ಮತ್ತು
ಪೂರ್ವಜ ದಕ್ಷಿಣ ಭಾರತೀಯರು (Ancestral South Indian – ASI) ಎಂಬ ಹೆಸರುಗಳನ್ನು ಸಹ
ನೀಡಿದ್ದಾರೆ.
ಆದರೆ ಲಾಲ್ಜಿ ಸಿಂಗ್ ಮತ್ತು ತಂಗರಾಜ್‍ರವರು 2009ರಲ್ಲಿ
ಹಾರ್ವರ್ಡ್ ಮೆಡಿಕಲ್ ಸ್ಕೂಲ್ ವಿಜ್ಞಾನಿಗಳೊಂದಿಗೆ ಸಹ ಲೇಖಕರಾಗಿ ಬರೆದಿದ್ದ
‘ರಿಕನ್ಸ್‍ಟ್ರಕ್ಟಿಂಗ್ ಇಂಡಿಯನ್ ಪಾಪ್ಯುಲೇಶನ್ ಹಿಸ್ಟರಿ’ ಪ್ರಬಂಧದಲ್ಲಿ ಕಳೆದ 40,000
ವರ್ಷಗಳಲ್ಲಿ ಭಾರತಕ್ಕೆ ಯಾವುದೇ ದೊಡ್ಡ ಪ್ರಮಾಣದಲ್ಲಿ ವಲಸೆಗಳು ಬಂದಿಲ್ಲ ಎಂಬುದಾಗಿ
ತಿಳಿಸಿರಲಿಲ್ಲ. ಅವರ ಪ್ರಬಂಧದಲ್ಲಿ ಪೂರ್ವಜ ಉತ್ತರ ಭಾರತೀಯರು (ANI) ಪೂರ್ವಜ ದಕ್ಷಿಣ
ಭಾರತೀಯ(ASI)ರಂತಲ್ಲದೆ ಪಶ್ಚಿಮ ಯುರೇಶಿಯನ್ನರಿಗೆ (ಪಶ್ಚಿಮ ಏಷ್ಯಾ, ಯೂರೋಪಿಯನ್ನರು,
ಮಧ್ಯ ಏಷಿಯನ್ನರು ಮತ್ತು ಕಾಕಸಸ್ ಪ್ರದೇಶದ ಜನರು) ಸಂಬಂಧ ಹೊಂದಿದವರು ಎಂದು
ಸ್ಪಷ್ಟವಾಗಿ ಹೇಳಿದ್ದರು. ತಮ್ಮನ್ನು ಆರ್ಯನ್ನರೆಂದು ಕರೆದುಕೊಳ್ಳುವ
ಇಂಡೋ-ಯೂರೋಪಿಯನ್-ಭಾಷೆ ಮಾತನಾಡುವವರು ಸುಮಾರು 4000 ವರ್ಷಗಳ ಹಿಂದೆ ಹರಪ್ಪ ನಾಗರಿಕತೆಯ
ಅವನತಿಯ ಪ್ರಾರಂಭದ ನಂತರ ವಲಸೆ ಬಂದಿದ್ದರೆಂಬ ಸಿದ್ಧಾಂತಕ್ಕೆ ಇದು ಹೆಚ್ಚಿನ ಬೆಂಬಲ
ನೀಡಬಲ್ಲುದಾಗಿತ್ತು. ‘ಆರ್ಯನ್ನರ ವಲಸೆ’ಯು ದಶಕಗಳಿಂದ ರಾಜಕೀಯ ಚರ್ಚೆಗೆ ಬಿಸಿ ಬಿಸಿ
ವಿಷಯವಾಗಿದೆ. ಬಹಳಷ್ಟು ಜನ ‘ಆರ್ಯನ್ನರು’ ತಡವಾಗಿ ವಲಸೆ ಬಂದವರು ಹಾಗೂ ಮೊದಲ ಭಾರತೀಯ
ಜನಸಮೂಹದ ಭಾಗವಾಗಿರಲಿಲ್ಲ ಎನ್ನುವುದನ್ನು ವಿರೋಧಿಸುತ್ತಿದ್ದರು. ಇದರ ಜೊತೆಗೆ ಹರಪ್ಪ
ನಾಗರಿಕತೆಯ ಮತ್ತೊಂದು ಸಮಸ್ಯೆಯಿದ್ದಿತು: ಭಾರತದ ಮೇಲೆ ಅಳಿಸಲಾಗದ ಅಚ್ಚೊತ್ತಿರುವ ಈ
ಬೃಹತ್ ನಾಗರಿಕತೆ ‘ಆರ್ಯನ್ನರ ವಲಸೆ’ಗಳಿಗಿಂತ ಮೊದಲಿನಿಂದಲೂ ಇತ್ತು ಎಂದಾದರೆ,
‘ಆರ್ಯನ್ನರು’ ಸಂಸ್ಕೃತ ಮತ್ತು ವೇದಗಳು ಭಾರತೀಯ ಸಂಸ್ಕೃತಿಯ ಆದಿಮೂಲ ಎನ್ನುವ ಬಲಪಂಥೀಯ
ಹೇಳಿಕೆಗಳಿಗೆ ಬಲವಾದ ಹೊಡೆತ ಬೀಳುತ್ತದೆ.
ಮಾರ್ಟಿನ್ ಬಿ. ರಿಚಡ್ರ್ಸ್‍ರವರು
ಸಹ-ಲೇಖಕರಾಗಿರುವ ಪ್ರಬಂಧ 2017ರ ಮಾರ್ಚ್ 23ರಂದು ಪ್ರಕಟವಾಯಿತು ಹಾಗೂ ನನಗೆ ಅದು ಒಂದು
ವಾರದ ನಂತರ ದೊರಕಿತು. ಮುಂದಿನ ಎರಡು ತಿಂಗಳುಗಳು ನನಗೆ ಸುಲಭವಾಗಿ ಅರ್ಥವಾಗದ ಭಾರತೀಯರ
ವಿವಿಧ ಕಾಲಾವಧಿಗಳ ಆನುವಂಶಿಕತೆ ಕುರಿತ ಪ್ರಬಂಧಗಳನ್ನು ಹಲವಾರು ಬಾರಿ ಓದಿ
ಅರ್ಥೈಸಿಕೊಳ್ಳಲು ನಾನು ಪ್ರಯತ್ನಿಸಿದೆ; ಈ ಪ್ರತಿ ಪ್ರಬಂಧ ಪ್ರಕಟವಾದಾಗಲೂ
ಕಾಣುತ್ತಿದ್ದ ಜನಸಮೂಹ ಆನುವಂಶಿಕತೆಯ ಅಭಿವೃದ್ಧಿಯ ಸ್ಥಿತಿಗತಿಗಳ ಪರಸ್ಪರ ವಿರೋಧದ
ಆವಿಷ್ಕಾರಗಳನ್ನು ತಾಳೆ ಹಾಕಲು ಪ್ರಯತ್ನಿಸುತ್ತಿದ್ದೆ; ತಮ್ಮ ಕ್ಷೇತ್ರಗಳಲ್ಲಿ ಮಹಾನ್
ಸಾಧನೆ, ಆವಿಷ್ಕಾರ ಮಾಡಿದ ಈ ಪ್ರಬಂಧಗಳ ಲೇಖಕರನ್ನು ಸಂಪರ್ಕಿಸುತ್ತಿದ್ದೆ ಹಾಗೂ ನಾನು
ಕೈಗೊಳ್ಳುತ್ತಿದ್ದ ನಿರ್ಧಾರಗಳನ್ನು ಪರೀಕ್ಷಿಸಿ- ಮರು ಪರೀಕ್ಷಿಸುತ್ತಿದ್ದೆ ಹಾಗೂ
ಇನ್ನೂ ಹೆಚ್ಚು ಹೆಚ್ಚು ಪ್ರಬಂಧಗಳ ಮನನ ಮಾಡುತ್ತಿದ್ದೆ.
2017ರ ಜೂನ್ 17ರಂದು
`ದ ಹಿಂದು’ ಪತ್ರಿಕೆ ನನ್ನ ಲೇಖನ ‘ಹೌ ಜೆನೆಟಿಕ್ಸ್ ಈಸ್ ಸೆಟ್ಲಿಂಗ್ ದ ಆರ್ಯನ್
ಮೈಗ್ರೇಶನ್ ಡಿಬೇಟ್’ (ಹೇಗೆ ಆನುವಂಶಿಕತೆಯ ಅಧ್ಯಯನಗಳು ಆರ್ಯರ ವಲಸೆ ಚರ್ಚೆಯನ್ನು
ನಿರ್ಧರಿಸುತ್ತಿದೆ) ಪ್ರಕಟಿಸಿತು. ಈ ಲೇಖನದಲ್ಲಿ ನಾನು ತಮ್ಮನ್ನು ಆರ್ಯನ್ನರೆಂದು
ಕರೆದುಕೊಳ್ಳುವ ಇಂಡೋ-ಯೂರೋಪಿಯನ್-ಭಾಷೆ ಮಾತನಾಡುವವರು ಸುಮಾರು 4000 ವರ್ಷಗಳ ಹಿಂದೆ
ಭಾರತಕ್ಕೆ ವಲಸೆ ಬಂದಿದ್ದರೆಂಬ ಸಿದ್ಧಾಂತಕ್ಕೆ ಹೇಗೆ ಡಿ.ಎನ್.ಎ. ಸಾಕ್ಷಿ ಬೆಂಬಲ
ನೀಡುತ್ತದೆ ಎಂಬುದನ್ನು ವಿವರಿಸಿದ್ದೆ. 2018ರ ಮಾರ್ಚ್‍ನಲ್ಲಿ ಜಗತ್ತಿನಾದ್ಯಂತದ
ತೊಂಭತ್ತೆರಡು ಜನ ವಿಜ್ಞಾನಿಗಳು ಬರೆದ ಹಾಗೂ biology, bioRxiv ಮುದ್ರಣಪೂರ್ವ
ಸರ್ವರ್‍ನಲ್ಲಿ ಪ್ರಕಟವಾದ ‘The Genomic Formation of South and Central Asia’
(ದಕ್ಷಿಣ ಮತ್ತು ಮಧ್ಯ ಏಷ್ಯಾದ ಪೂರಕ ವಂಶವಾಹಿ ಮಾಹಿತಿ ಭಂಡಾರದ ರಚನೆ) ಎಂಬ ಅನ್ವೇಷಕ
ಪ್ರಬಂಧವು ನನ್ನ ಆ ಲೇಖನದಲ್ಲಿನ ಹೇಳಿಕೆಗಳನ್ನು ಪುಷ್ಟೀಕರಿಸಿದವು. ರೀಚ್ ಮತ್ತು
ತಂಗರಾಜ್‍ರವರು ಅ ಅಧ್ಯಯನದ ಸಹ-ನಿರ್ದೇಶಕರಾಗಿದ್ದರು. ಆ ಅಧ್ಯಯನದ ಹರವು ಮತ್ತು
ಪ್ರಾಚೀನ ಡಿ.ಎನ್.ಎ. ಆಧಾರಿತವಾದುದೆಂಬ ವಾಸ್ತವತೆ ಸಂಶೋಧನೆಯ ಫಲಿತಗಳು ಹೆಚ್ಚು
ಪರಿಣಾಮಕಾರಿ ಹಾಗೂ ವಲಸೆ ಬಂದವರ ಕಾಲಾನುಕ್ರಮಣಿಕೆಯನ್ನು ಹೆಚ್ಚು ನಿಖರವಾಗಿ ಹೇಳಲು
ಸಾಧ್ಯವಾಯಿತು.
ಎಂತಹ
ವೃತ್ತಿಪರ ಪರಿಸರವಿದ್ದರೂ ಸಂಶೋಧನಾ ಫಲಿತಾಂಶಗಳನ್ನು ಹೇಗೆ ಅರಿತುಕೊಳ್ಳಬಹುದು ಹಾಗೂ
ಅವುಗಳನ್ನು ಹೇಗೆ ನಿರೂಪಿಸಬಹುದೆಂಬುದರ ಮೇಲೆ ವೈಯಕ್ತಿಕ ಆದ್ಯತೆಗಳು ಪಾತ್ರ
ವಹಿಸುತ್ತವೆ ಎಂಬುದನ್ನು ಈ ಪುಸ್ತಕದ ಬರವಣಿಗೆಯ ನನ್ನ ಅನುಭವಗಳು ತಿಳಿಸಿಕೊಟ್ಟಿವೆ.
ಬಹಳಷ್ಟು ಸಾರಿ ಅದು ಪಕ್ಷಪಾತದ ಪ್ರಶ್ನೆಯಾಗಿರುವುದಿಲ್ಲ, ಆದರೆ ಸತ್ಯಾಸತ್ಯತೆ
ಹಾನಿಯುಂಟುಮಾಡಬಹುದಾದುದರಿಂದ ಅದನ್ನು ಎಚ್ಚರಿಕೆಯಿಂದ ನಿಭಾಯಿಸಬೇಕೆಂಬ ಪ್ರಾಮಾಣಿಕ
ನಂಬಿಕೆಯೂ ಕಾರಣವಾಗಿರುತ್ತದೆ. ಉದಾಹರಣೆಗೆ, ಮಧ್ಯಕಾಲೀನ ಅವಧಿಯಲ್ಲಿನ ದಬ್ಬಾಳಿಕೆ,
ಅತ್ಯಾಚಾರಗಳ ವಿವರಗಳು ವಿವಿಧ ಧರ್ಮಗಳ ನಡುವೆ ಶತ್ರುತ್ವ ಉಂಟುಮಾಡಬಹುದೆಂಬ ಭಾರತೀಯ
ಚರಿತ್ರೆಕಾರರಲ್ಲಿನ ಐವತ್ತು ವರ್ಷಗಳ ಹಿಂದೆಯಿದ್ದ ಅಂಜಿಕೆಯಂತೆಯೇ ಹುಲ್ಲುಗಾವಲು ಮೈದಾನ
ಪ್ರದೇಶಗಳಿಂದ (Steppe)
ವಲಸೆ ಬಂದಿರುವರೆಂಬ ವಾಸ್ತವಾಂಶವು ಭಾಷೆ ಮತ್ತು ಪ್ರಾದೇಶಿಕ ವಿಭಜನೆಯ ಸಂಘರ್ಷವನ್ನು
ಪುನರಾರಂಭಿಸಬಹುದೆಂಬ ಅಂಜಿಕೆಯೂ ಇರಬಹುದು. ವಾಸ್ತವವೇನೆಂದರೆ, ಸತ್ಯವನ್ನು
ಅವಿತಿಡುವುದು ವಿಭಜನೆಗಳ ಗಾಯವನ್ನು ಶಮನಗೊಳಿಸುವುದಿಲ್ಲ. ಅದು ಗಾಯ ಒಳಗೇ
ಹುಣ್ಣಾಗುವಂತೆ, ಮುಂದೆ ಇನ್ನೂ ಹೆಚ್ಚು ನೋವು ಕೊಡುವಂತಾಗಬಹುದು. ಅಲ್ಲದೆ, ಯಾವುದೇ
ವಿಜ್ಞಾನಿಯಾಗಲೀ ಅಥವಾ ಲೇಖಕನಾಗಲೀ ಸತ್ಯಾಂಶವೊಂದನ್ನು ಅವಿತಿಡುವುದರ ಪರಿಣಾಮದ
ಮುನ್ಸೂಚನೆ ನಿಖರವಾಗಿ ಹೇಳಲಾರ: ಚರಿತ್ರೆಯು ಸಂಪೂರ್ಣವಾಗಿ ಅಂತಹ ಅನಿರೀಕ್ಷಿತ
ಪರಿಣಾಮಗಳಿಂದಲೇ ರಚಿತವಾಗಿದೆ. ಹಾಗಾಗಿ ಯಾವುದೇ ವಿಜ್ಞಾನಿ ಅಥವಾ ಯಾವುದೇ ಲೇಖಕರಾಗಲಿ
ಮೊದಲಿಗೆ ವಾಸ್ತವಾಂಶಗಳು ಮಾತನಾಡಲು ಬಿಡಬೇಕು, ಆದರೆ ಅವುಗಳಿಂದ ಯಾವುದೇ ಆಧಾರವಿಲ್ಲದ
ನಿರ್ಧಾರಗಳನ್ನು ಕೈಗೊಳ್ಳದಂತೆ ನೋಡಿಕೊಳ್ಳಬೇಕು.
ಈ ವಿಷಯ ಕುರಿತಂತೆ, ಕ್ರಿ.ಪೂ.
ಎರಡು ಸಾವಿರ ವರ್ಷಗಳ ಹಿಂದೆ ಬೃಹತ್ ಪ್ರಮಾಣದಲ್ಲಿ ಇಂಡೋ-ಯೂರೋಪಿಯನ್-ಭಾಷೆ
ಮಾತನಾಡುವವರು ವಲಸೆ ಬಂದರೆಂಬುದು ಸತ್ಯವಾದ ವಿಷಯ, ಆದರೆ ಈಗಿನ ಭಾರತದಲ್ಲಿನ ಜನರು ತಮ್ಮ
ವಂಶವಾಹಿಗಳನ್ನು ಭಾರತಕ್ಕೆ ಬಂದಿರುವ ಹಲವಾರು ವಲಸೆಗಳ ವಿವಿಧ ಕಾಲಾವಧಿಯ ಜನಸಮೂಹಗಳಿಂದ
ಪಡೆದಿದ್ದಾರೆಂಬುದೂ ಸತ್ಯ: ಹಾಗಾಗಿ ‘ಅನಾದಿ ಕಾಲ’ದಿಂದಲೂ ‘ಪರಿಶುದ್ಧ’ ಗುಂಪು, ಜನಾಂಗ
ಅಥವಾ ಜಾತಿ ಎನ್ನುವುದು ಇರಲೇ ಇಲ್ಲ. ಆದರೆ, ವಿವಿಧ ಜನಸಮೂಹಗಳ ನಡುವಿನ ಮಿಶ್ರಣದ
ಪ್ರಮಾಣದಲ್ಲಿ ವಿವಿಧ ಪ್ರದೇಶ ಹಾಗೂ ಸಮುದಾಯಗಳ ನಡುವೆ ವ್ಯತ್ಯಾಸವಿದೆ. ಹಾಗಾಗಿ,
ಸಾವಿರಾರು ವರ್ಷಗಳಿಂದ ನಡೆದ ಬಹುಸಂಖ್ಯೆಯ ವಲಸೆಗಳು ಹಾಗೂ ಬೃಹತ್ ಪ್ರಮಾಣದ ಜನಸಮೂಹಗಳು
ಮಿಶ್ರಣಗೊಂಡ ಸತ್ಯದೊಂದಿಗೆ ಇಂಡೋ-ಯೂರೋಪಿಯನ್ ವಲಸೆಗಳ ವಾಸ್ತವತೆಯ ಕುರಿತೂ ಸಹ
ಹೇಳಬೇಕಾಗಿದೆ. ಹಲವಾರು ಜನಸಮೂಹಗಳ ವಿವಿಧ ವಲಸೆ ಚರಿತ್ರೆಗಳೊಂದಿಗೆ ಮತ್ತು ಒಂದಲ್ಲ
ಹಲವಾರು ವಿವಿಧ ಮೂಲಗಳಿಂದ ಪಡೆದ ನಡೆ, ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳನ್ನು
ಮೈಗೂಡಿಸಿಕೊಂಡಿರುವ ನಾವು ಇಂದು ಒಂದು ವಿಶಿಷ್ಟ ಭಾರತೀಯ ನಾಗರಿಕತೆಯಾಗಿದ್ದೇವೆ.
***
ಅಡಿ ಟಿಪ್ಪಣಿಗಳು
1
: ಈ ಕೃತಿಯಲ್ಲಿ ಎಲ್ಲೆಡೆ ಆಧುನಿಕ ಮಾನವರು ಮತ್ತು ಹೋಮೊ ಸೇಪಿಯೆನ್ಸ್ ಪದಗಳನ್ನು ಒಂದೇ
ಅರ್ಥದಲ್ಲಿ ಬಳಸಲಾಗಿದೆ. ಮಾನವರು ಎಂದಾಗ ಅವರು ಹೋಮೊ ಪ್ರಭೇದದ ಹೋಮೊ ಹ್ಯಾಬಿಲಿಸ್,
ಹೋಮೊ ಎರೆಕ್ಟಸ್, ಹೋಮೊ ನಿಯಾಂಡರ್ತಲೆನ್ಸಿಸ್ ಅಥವಾ ಹೋಮೊ ಸೇಪಿಯೆನ್ಸ್ ನ
ಸದಸ್ಯರಾಗಿರಬಹುದು. ಆದಿ ಮಾನವರು ಎಂದಾಗ ಅವರು ನಾಮಾವಶೇಷವಾಗಿರುವ ಹೋಮೊ ಪ್ರಭೇದದ ಹೋಮೊ
ಹ್ಯಾಬಿಲಿಸ್, ಹೋಮೊ ಎರೆಕ್ಟಸ್ ಅಥವಾ ಹೋಮೊ ನಿಯಾಂಡರ್ತಲೆನ್ಸಿಸ್ ನ
ಸದಸ್ಯರಾಗಿರುತ್ತಾರೆ. ಆದರೆ, ಹೋಲೊಸೀನ್ (ಕ್ರಿ.ಪೂ. 9700ರ ನಂತರದ ಅವಧಿ) ಅವಧಿಯಲ್ಲಿ
‘ಮಾನವರು’ ಎಂದರೆ ಆಧುನಿಕ ಮಾನವರು ಮಾತ್ರ, ಏಕೆಂದರೆ ಅಷ್ಟೊತ್ತಿಗಾಗಲೇ ಆದಿ ಮಾನವರು
ನಿರ್ನಾಮ ಹೊಂದಿದ್ದರೆಂದು ನಂಬಲಾಗಿದೆ.
2 : ‘ಆರ್ಯನ್ನರ ವಲಸೆ’ ಎನ್ನುವುದು
ಕ್ರಿ.ಪೂ. 2000ದ ನಂತರದ ಅವಧಿಯಲ್ಲಿ ಯುರೇಶಿಯನ್ ಹುಲ್ಲುಗಾವಲು ಮೈದಾನ ಪ್ರದೇಶಗಳಿಂದ
ಭಾರತಕ್ಕೆ ವಲಸೆ ಬಂದವರು ಹಾಗೂ ತಮ್ಮನ್ನು ಆರ್ಯನ್ನರೆಂದು ಕರೆದುಕೊಂಡವರು ಸಂಸ್ಕೃತದ
ಪ್ರಾಚೀನ ಅವೃತ್ತಿಯನ್ನೊಳಗೊಂಡಂತೆ ಇಂಡೋ-ಯೂರೋಪಿಯನ್ ಭಾಷೆಗಳನ್ನು ತಂದರೆಂಬ ಸಿದ್ಧಾಂತ.
‘ಆರ್ಯ’ರು ಎನ್ನುವುದು ಒಂದೇ ಕುಟುಂಬದ ಭಾಷೆಯನ್ನು ಮಾತನಾಡುವ ಜನಸಮೂಹದ ಸ್ವ-ವಿವರಣೆ. ಈ
ಕೃತಿಯಲ್ಲಿ ‘ಆರ್ಯನ್ನರ ವಲಸೆ’ ಎಂದು ಎಲ್ಲೆಲ್ಲಿ ಬಳಸಲಾಗಿದೆಯೋ ಅಲ್ಲೆಲ್ಲಾ,
‘ತಮ್ಮನ್ನು ಆರ್ಯರೆಂದು ಕರೆದುಕೊಂಡ ಇಂಡೋ-ಯೂರೋಪಿಯನ್-ಭಾಷೆ ಮಾತನಾಡುವ ಜನರ ವಲಸೆ’
ಎಂಬರ್ಥದಲ್ಲಿ ಓದಿಕೊಳ್ಳಬೇಕು ಹಾಗೂ ‘ಆರ್ಯನ್ನರು’ ಎಂದು ಎಲ್ಲೆಲ್ಲಿ ಬಳಸಲಾಗಿದೆಯೋ
ಅಲ್ಲೆಲ್ಲಾ, ‘ತಮ್ಮನ್ನು ಆರ್ಯರೆಂದು ಕರೆದುಕೊಂಡವರು’ ಎಂಬರ್ಥದಲ್ಲಿ ಓದಿಕೊಳ್ಳಬೇಕು
3 : David Reich, et al., ‘Reconstructing Indian Population History’, Nature 461: 489-94 (September 2009).
4 : Marina Silva, et al., ‘A Genetic Chronology . . .’, BMC Evolutionary Biology (2017).
ಈ ಆಯ್ದ ಭಾಗವನ್ನು ಟೋನಿ ಜೋಸೆಫ್‍ರವರ `Early Indians’ ಪ್ರಕಾಶಕರಾದ ಜಗರ್‍ನಾಟ್ ಬುಕ್ಸ್ ಅನುಮತಿಯಿಂದ ಬಳಸಿಕೊಳ್ಳಲಾಗಿದೆ.
ಅನುವಾದ: ಡಾ.ಜೆ.ಬಾಲಕೃಷ್ಣ,
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಕನ್ನಡದಲ್ಲಿ ವಿಜ್ಞಾನ
ಸಂವಹನೆಯಲ್ಲಿ ಕೆಲಸ ಮಾಡಿರುವ ಇವರು, ಮಂಟೋ ಕಥೆಗಳನ್ನೊಳಗೊಂಡಂತೆ ಹಲವು ಸೃಜನಶೀಲ
ಕೃತಿಗಳನ್ನು ಕನ್ನಡಿಸಿದ್ದಾರೆ.
ಬುಧವಾರ, ಆಗಸ್ಟ್ 12, 2020
ಹೆಣ್ಣುಲೋಕದ ಅನಂತ ಮುಖಗಳು
ನನ್ನ ಹೊಸ ಪುಸ್ತಕ – ಮೌನ ವಸಂತ
ಈ ಕೃತಿಗೆ ಡಾ.ಎಚ್.ಎಸ್.ಅನುಪಮಾರವರ ಮುನ್ನುಡಿ
- ಹೆಣ್ಣುಲೋಕದ ಅನಂತ ಮುಖಗಳು
ಹೆಣ್ಣು ಎಂದರೆ ದೇಹ ಮಾತ್ರ ಎಂಬ ಅಭಿಪ್ರಾಯವನ್ನು ಸಮಾಜ ಎಲ್ಲರ ಮೇಲೆ ಹೇರಿದೆ. ಎಂದೇ ಅವಳ ನಿಜದ ಭಾಷೆ-ಭಾವನೆಗಳನ್ನು ಸಮಾಜ ತಿಳಿಯದಿರುವ ಸಾಧ್ಯತೆಯೇ ಹೆಚ್ಚಿದೆ. ಬೇರೆಯವರ ಆಸೆಆಕಾಂಕ್ಷೆ, ಅವಶ್ಯಕತೆಗಳಿಗನುಗುಣವಾಗಿ ತನ್ನ ಆಸೆಆಕಾಂಕ್ಷೆ-ಗುಣಚಹರೆಗಳನ್ನೂ ಬದಲಿಸಿಕೊಳ್ಳಬೇಕಾಗಿರುವ ಅನಿವಾರ್ಯತೆ ಹೆಣ್ಣಿನ ಅಧೀನ ಮನಸ್ಥಿತಿಯನ್ನು ರೂಪಿಸಿರುವಂತೆ; ಎಲ್ಲ ಸಂಬಂಧಗಳನ್ನು ತನ್ನ ವಲಯದೊಳಗೆ ತೆಗೆದುಕೊಂಡು, ಜವಾಬ್ದಾರಿಗಳನ್ನು ಹೇರಿಕೊಳ್ಳುವ ಹೆಣ್ಣುಸ್ವಭಾವಕ್ಕೂ ಕಾರಣವಾಗಿದೆ. ಇದು ಅವಳನ್ನು ಖಾಸಗಿ ಸ್ಥಳಗಳಿಗೆ ಸೀಮಿತಗೊಳಿಸಿ ಸಾರ್ವಜನಿಕವಾಗಿ ಅದೃಶ್ಯರಾಗಿರುವಂತೆ ಮಾಡಿದೆ. ಇದನ್ನೆಲ್ಲ ಮೀರಿ ಅವಳು ತನ್ನ ಬಿಡುಗಡೆಯ ಮಾರ್ಗ ತಾನು ಶೋಧಿಸಿಕೊಳ್ಳಬೇಕೆಂದರೆ ತನ್ನವರ ಸಮಗ್ರ ಅನುಭವಗಳ ಮೂಲದಿಂದಲೇ ಹೊರಡಬೇಕಿದೆ. ತಮ್ಮ ಆಸಕ್ತಿಯಂತೆ ಬದುಕನ್ನು ರೂಪಿಸಿಕೊಂಡು, ಅಡೆತಡೆಗಳ ದಾಟುತ್ತ ಸ್ವಾಯತ್ತತೆ ಸಾಧಿಸಿಕೊಳ್ಳಬೇಕಿದೆ. ಅದೇನೂ ಸುಲಭವಲ್ಲ. ಇವಳು ಯಾರವಳು? ಯಾರಿಗೆ ಸೇರಿದವಳು? ಎಷ್ಟು ಸೇರಿದವಳು? ಎಂಬ ಜಿಜ್ಞಾಸೆ ಹೆಣ್ಣುಜೀವಗಳ ಬಗೆಗೆ ಅಂದಿನಿಂದ ನಡೆದಿದ್ದು ಇಂದಿಗೂ ನಡೆಯುತ್ತಲೇ ಇದ್ದು ಆ ಚೌಕಟ್ಟುಗಳೊಳಗೆ ಬಂಧಿತವಾದ ತನ್ನ ಅಸ್ಮಿತೆಯಿಂದ ಮುಕ್ತಳಾಗಲು ಹೆಣ್ಣು ಹೋರಾಟವನ್ನೇ ನಡೆಸಬೇಕಿದೆ.
ಅಂಥ ಸವಾಲುಗಳ ದಾಟಿದ `ಹತ್ತು ಸಮಸ್ತ’ರು ಈ ಹೊತ್ತಗೆಯಲ್ಲಿ ನಿರೂಪಿಸಲ್ಪಟ್ಟಿದ್ದಾರೆ.
ಅಂಥ ಸವಾಲುಗಳ ದಾಟಿದ `ಹತ್ತು ಸಮಸ್ತ’ರು ಈ ಹೊತ್ತಗೆಯಲ್ಲಿ ನಿರೂಪಿಸಲ್ಪಟ್ಟಿದ್ದಾರೆ.
ಶೇಕ್ಸ್‍ಪಿಯರ್ ಒಂದೆಡೆ ಹೇಳುತ್ತಾನೆ: `ಗುಲಾಬಿಯನ್ನು ನೀವು ಯಾವ ಹೆಸರಿನಿಂದಾದರೂ ಕರೆಯಿರಿ, ಅದು ಗುಲಾಬಿಯೇ. ಪರಿಮಳ ಸೂಸುವುದನ್ನು ನಿಲಿಸಲಾರದು. ತನ್ನ ಗುಲಾಬಿತನ ಬಿಡಲಾರದು.’ ಹಾಗೆಯೇ ಹೆಣ್ಣೂ ಸಹ. ಭಾರತೀಯಳೋ, ಜರ್ಮನಳೋ, ಅಮೆರಿಕನ್ನಳೋ; ಗೂಢಚಾರಳೋ, ವಿಜ್ಞಾನಿಯೋ ಬರಹಗಾರ್ತಿಯೋ; ಅನುಭಾವಿಯೋ, ಮರಣಮುಖಿ ರೋಗಿಯೋ, ನರ್ತಕಿಯೋ; ಕ್ರಿಸ್ತಪೂರ್ವ ಕಾಲದವಳೋ, 20ನೇ ಶತಮಾನದವಳೋ - ಅಂತೂ ಅವರ ಬದುಕುಗಳಲ್ಲಿ ಎದ್ದು ಕಾಣುವುದು ಫೀನಿಕ್ಸ್‍ನಂತೆ ಬೂದಿಯೊಳಗಿನಿಂದೆದ್ದು ಬರುವ ಒಂದು ಹೆಣ್ಣುತನ. ಅಂತಹ ಹತ್ತು ಹೆಣ್ಣು ಚೇತನಗಳ ಬದುಕು, ಬವಣೆ, ಸಾಧನೆಗಳು ಇಲ್ಲಿ ಜೀವನ ಕಥನಗಳಾಗಿ ನಿರೂಪಿಸಲ್ಪಟ್ಟಿವೆ.
ಚರಿತ್ರೆಯಲ್ಲಿ ಅದೃಶ್ಯ ಕಥನಗಳಿದ್ದರೆ ಅವು ಹೆಣ್ಣುಗಳದ್ದು. ಯಾರದಾದರೂ ದುಡಿಮೆ-ಹೋರಾಟಗಳ ಮರೆಮಾಚಲಾಗಿದ್ದರೆ ಅದು ಹೆಣ್ಣುಮಕ್ಕಳದ್ದು. ಅದಕ್ಕೆ ಕಾರಣ ಮನುಷ್ಯ ಸಮಾಜ ಹೆಣ್ಣನ್ನು ಪರಿಗಣಿಸಿದ್ದು ಒಂದು ವಸ್ತು ಎಂದು ಮಾತ್ರ. ಆ ವಸ್ತುವಿಗೆ `ಅವರು’ ಕೊಟ್ಟ ಅರ್ಥ ಮಾತ್ರವೇ ಬರುತ್ತದೆ. `ಅವರು’ ಕಟ್ಟಿದ ಬೆಲೆ ಮಾತ್ರವೇ ಇರುತ್ತದೆ. ಹೀಗಿರುತ್ತ ನಿಜವಾದ ಮಹಿಳೆಯನ್ನು, ಮಹಿಳಾ ಶಕ್ತಿ-ಸಾಮಥ್ರ್ಯಗಳನ್ನು ಅರಿಯಲು ಇಂತಹ ವಿಭಿನ್ನ ಮಾದರಿಗಳ ಪರಿಶೀಲನೆ ಬಹುಮುಖ್ಯವಾಗಿದೆ. ಇಲ್ಲಿರುವ ಒಬ್ಬೊಬ್ಬ ಹೆಣ್ಣಿನ ಅನುಭವವು ಇಡೀ ಹೆಣ್ಣುಲೋಕದ ಅನುಭವವಾಗಿ ಸಮಾಜವನ್ನು ತಿಳಿದುಕೊಳ್ಳುವ ಮುಖ್ಯ ಆಕರವೇ ಆಗಿವೆ. ಗರುಕೆಯಂತೆ ಮೆಟ್ಟಿದವರ ಎದುರೇ ತಲೆಯೆತ್ತಿ ನಿಂತ ಈ ಅವಿನಾಶಿ ಚೇತನಗಳು ನಮ್ಮಲ್ಲಿ ಒಂದು ಎಳೆ ಹೆಮ್ಮೆಯನ್ನೂ, ವಿಷಾದದ ನಿಟ್ಟುಸಿರನ್ನೂ, ತೊಡಗಿಸಿಕೊಳ್ಳಬೇಕಾದ ತುರ್ತನ್ನೂ, ಅಂದು-ಇಂದು ಎಂಬ ತುಲನೆಯನ್ನೂ ಹುಟ್ಟುಹಾಕುವಂತಿವೆ.
ವಿಭಿನ್ನ ಕಾಲದೇಶ ಸ್ಥಳಗಳಲ್ಲಿ ಅನನ್ಯವಾಗಿ ಬದುಕಿದ ಆ ಹತ್ತು ಮಹಿಳೆಯರ ಬದುಕು ಈ ಪುಸ್ತಕದಲ್ಲಿ ಸ್ಫೂರ್ತಿದಾಯಕವಾಗಿ ಪರಿಚಯಿಸಲ್ಪಟ್ಟಿದೆ:
1. ಇಲ್ಲಿರುವವರಲ್ಲಿ ಎದ್ದುಕಾಣುವ ಬದುಕು ಆನೆ ಫ್ರಾಂಕ್ ಎಂಬ ಹುಡುಗಿಯದು. ಅಜಮಾಸು 40 ಲಕ್ಷ ಜನರ (ಅವರಲ್ಲಿ 15 ಲಕ್ಷ ಮಕ್ಕಳ) ಹತ್ಯಾಕಾಂಡ ನಡೆಸಿದ ಹಿಟ್ಲರನ ಜನಾಂಗೀಯ ದ್ವೇಷದ ಕಥೆಗಳನ್ನು ನಾನಾಮೂಲಗಳಿಂದ ತಿಳಿದಿದ್ದೇವೆ. ಅವನ ಕುಲಮದಾಂಧತನಕ್ಕೆ ಬಲಿಯಾದ ಎಳೆಯರಲ್ಲಿ ಜರ್ಮನಿಯ ಆನ್ ಫ್ರಾಂಕ್ ಕಥನ ಕಣ್ಣೀರುಕ್ಕಿಸುತ್ತದೆ. ಆಟೋಟಗಳೆಂದು ಜಿಗಿದು ಶಾಲೆಗೆ ಹೋಗಬೇಕಿದ್ದ 15ರ ಹರೆಯದ ಹುಡುಗಿ ನೆಲಮಾಳಿಗೆಯಲ್ಲವಿತು ತಾಜಾ ಗಾಳಿಗಾಗಿ, ಬೆಳಕಿಗಾಗಿ, ಸ್ವತಂತ್ರಕ್ಕಾಗಿ ಹಂಬಲಿಸುತ್ತ, ಕಿಟಕಿಯ ಕಿಂಡಿಯಿಂದ ಹೊರಗಿನದನ್ನು ನೋಡುತ್ತ ವರುಷಗಟ್ಟಲೆ ಕಳೆದಳು. ಏಕಾಕಿತನ ಮರೆಯಲು ದಿನಚರಿಯ ಪುಸ್ತಕವನ್ನೇ `ಕಿಟ್ಟಿ’ ಎಂದು ಕರೆದು ಆಪ್ತಗೆಳತಿಯನ್ನಾಗಿಸಿಕೊಂಡಳು. ತಮ್ಮ ಜೊತೆಗಿರಲು ಬಂದ ಇನ್ನೊಂದು ಕುಟುಂಬದ ಹುಡುಗ ಪೀಟರನ ಪ್ರೀತಿಸುತ್ತ, ಖಿನ್ನಳಾಗುತ್ತ, ನಿದ್ರೆ ಬರಿಸುವ ವ್ಯಾಲೆರಿಯನ್ ಮಾತ್ರೆ ನುಂಗುತ್ತ ಬಿಡುಗಡೆಯ ದಿನಗಳಿಗಾಗಿ ಕಾದೇ ಕಾದಳು. ಲೇಖಕಿ-ಪತ್ರಕರ್ತೆ ಆಗಬೇಕು ಎಂಬ ತೀವ್ರ ಹಂಬಲದ ಆನ್ ಕೊನೆಗೆ ಹಿಟ್ಲರನ ಕ್ಯಾಂಪಿಗೆ ಎಳೆದೊಯ್ಯಲ್ಪಟ್ಟು ಚಿತ್ರಹಿಂಸೆ ಅನುಭವಿಸಿ ಮರಣ ಹೊಂದಿದಳು. `ಸಾವಿನ ನಂತರವೂ ಬದುಕುವ ಹಂಬಲ ನನ್ನದು’ ಎಂದು ದಿನಚರಿ ಪುಸ್ತಕದಲ್ಲಿ ಬರೆದಿಟ್ಟ ಆ ಎಳೆ ಹುಡುಗಿಯ ದುರಂತ ಬದುಕು ಓದುಗರನ್ನು ಗದ್ಗದಗೊಳಿಸುತ್ತದೆ.
2. ಅಪರಾಧ ನಿರ್ವಚನೆ ಸಾರ್ವಜನಿಕ ಕ್ಷೇಮದ ಕಾಳಜಿಯಿಂದ ಹುಟ್ಟಿರುತ್ತದೆ, ಅಲ್ಲಿ ಅಪರಾಧಿಯೆನಿಸಿಕೊಂಡವರ ಬದುಕಿನ ಕಾಳಜಿ ಕಡಿಮೆ ಇರುತ್ತದೆ. ಅದರಲ್ಲೂ ಅಪರಾಧವನ್ನು ವ್ಯಾಖ್ಯಾನಿಸುವುದು ರಾಷ್ಟ್ರೀಯತೆ ಎಂದಾದರೆ ಖಾಸಗಿ ನೋವುಗಳಿಗೆ ಜಾಗವೇ ಇಲ್ಲ. ಅದರ ದುಷ್ಪರಿಣಾಮವೆಲ್ಲ ಹೆಣ್ಣುಮಕ್ಕಳ ಮೇಲೇ. ಇದಕ್ಕೆ ಗೂಢಚಾರಿಣಿಯೆಂಬ ಆರೋಪದ ಮೇಲೆ ಮರಣದಂಡನೆಗೊಳಗಾದ ಮಾತಾ ಹರಿ ಎಂಬ ಹೆಣ್ಣುಬದುಕು ಉತ್ತಮ ಉದಾಹರಣೆ. ಬಿಡುಗಡೆ, ದುಡಿಮೆ, ಪ್ರತಿಭಟನೆ, ಸಮಯಸಾಧನೆ ಎಲ್ಲಕ್ಕು ತನ್ನ ಅಸೀಮ ದೇಹಸೌಂದರ್ಯವನ್ನು ಬಳಸಿದ ಮಾತಾಹರಿ ನರ್ತಕಿಯೋ, ಗೂಢಚಾರಿಣಿಯೋ, ಅತಿಕಾಮಿಯೋ, ಜೀವನಪ್ರೀತಿಯ ಹೆಣ್ಣೋ ಒಂದೂ ಸ್ಪಷ್ಟವಾಗದಂತಹ ವರ್ಣರಂಜಿತ ಬದುಕು ಬದುಕಿದವಳು. ಎಳತರಲ್ಲೇ ತಾಯ್ತಂದೆಯರ ಕಳೆದುಕೊಂಡು ಪರಾಶ್ರಯದಲ್ಲಿ ಬೆಳೆದ ಮಾರ್ಗರಿತಾ ಜೊಲ್ಲೆ ಎಂಬ ಅಮಾಯಕ ಹುಡುಗಿಯು ಮುಂದೆ ಯೂರೋಪಿನ ಅತ್ಯುನ್ನತ ಅಧಿಕಾರಿ ವರ್ಗ, ಸೇನಾಧಿಕಾರಿಗಳು-ರಾಜಕಾರಣಿಗಳ ಮನದನ್ನೆಯಾಗಿ ಬೆಳೆದ ರೋಮಾಂಚನಕಾರಿ ಕಥೆ ಈ ಪುಸ್ತಕದಲ್ಲಿದೆ.
ಅವಳಿದ್ದ ಯುದ್ಧಕಾಲದ ಯೂರೋಪು, ಅದರಲ್ಲೂ ಪ್ಯಾರಿಸ್, ಮಾತಾಹರಿಯ ವರ್ಣಮಯ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ಮಹತ್ತರ ಪಾತ್ರ ವಹಿಸಿತು. ಸಮವಸ್ತ್ರದ ಗಂಡಸರು ಬದುಕಿಗೆ ಸುರಕ್ಷೆ ನೀಡಿಯಾರೆಂಬ ಭಾವನೆ ಅಭದ್ರ ಬದುಕು ಬದುಕಿದವಳಲ್ಲಿ ಗಟ್ಟಿಯಾಗಿತ್ತು. ಎಂದೇ ತನಗಿಂತ 20 ವರ್ಷ ಹಿರಿಯ ಸೇನಾಧಿಕಾರಿಯನ್ನು ಮದುವೆಯಾಗಿ ವಿದೇಶಕ್ಕೆ ಹೋದಳು. ಹಿಂಸೆ, ದರ್ಪ, ಅಸಹಾಯಕತೆ, ಅಧಿಕಾರ ಎಲ್ಲ ಅನುಭವಿಸಿದಳು. ತನ್ನ ಬಾಹ್ಯಸೌಂದರ್ಯವೆಂಬ ಬಂಡವಾಳದಿಂದ ಗಂಡು ಸಮಾಜವನ್ನು ಹೇಗೆ ಬೇಕಾದರೂ ಮಣಿಸಬಹುದು ಎಂಬ ಸತ್ಯ ಗೋಚರವಾಗಿತ್ತು. ನಗ್ನ ನರ್ತಕಿ, ನಗ್ನ ರೂಪದರ್ಶಿಯಾಗಿ ಲೆಕ್ಕವಿಲ್ಲದಷ್ಟು ಗೆಳೆಯರನ್ನು ಪಡೆದಳು. ತನ್ನ ಅರ್ಧದಷ್ಟು ವಯಸ್ಸಿನ ಎಳೆಯನನ್ನು ಎರಡನೆಯ ವಿವಾಹವಾದಳು. ಆದರೂ ಬೇರೆ ಗಂಡಸರೊಡನೆ ಸಂಪರ್ಕ ಮುಂದುವರಿಸಿದ್ದಳು. ಸ್ವಾಯತ್ತತೆಯೋ, ಸ್ವೇಚ್ಛೆಯೋ ಗೆರೆ ಎಳೆಯಲು ಅಸಾಧ್ಯವಾದ ಐಹಿಕ ಭೋಗಗಳಲ್ಲಿ ಮುಳುಗಿದ್ದರೂ ಮಾತಾಹರಿ ತನ್ನ ವಿಚ್ಛೇದಿತ ಗಂಡನೊಡನಿದ್ದ ಏಕೈಕ ಮಗಳ ಬಗೆಗೆ ಸದಾ ಚಿಂತಿಸುತ್ತಿದ್ದ ತಾಯಿಯೂ ಆಗಿದ್ದಳು. ಗೂಢಚಾರಿಕೆಯ ಆರೋಪ ಹೊತ್ತು 41 ವರ್ಷಕ್ಕೆ ಮರಣದಂಡನೆಗೊಳಗಾದಾಗ ಕೊಲ್ಲಲು ಸಾಲಾಗಿ ನಿಂತ ಬಂದೂಕುಧಾರಿಗಳಿಗೆ ಗಾಳಿಯಲ್ಲಿ ಮುತ್ತು ಕೊಟ್ಟಳು! ದುರಂತವೆಂದರೆ ಅಸಂಖ್ಯ ಗಂಡಸರ ಗೆಳತಿಯಾಗಿದ್ದ ಅವಳ ಮೃತದೇಹ ಒಯ್ಯಲು ಯಾರೂ ಬರಲಿಲ್ಲ! ದೇಹ ಸರಕುಗೊಳಿಸಲ್ಪಟ್ಟ ಅವಳ ಬದುಕಿನ ಕಥನವನ್ನು ಇಲ್ಲಿ ಎದೆಝಲ್ಲೆಸುವಂತೆ ಕಟ್ಟಿಕೊಡಲಾಗಿದೆ.
3. ಹಿಮಾವೃತ ಬೆಟ್ಟಗಳ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಹುಟ್ಟಿದ ಒಂದು ಮಗು ತಾಯಿಯ ಎದೆ ಹಾಲು ಕುಡಿಯಲು ನಿರಾಕರಿಸುತ್ತಿತ್ತು. ಹಸಿದು ಬಸವಳಿದು ಕೂಗುತ್ತಿದ್ದ ಮಗುವಿನ ಬಳಿ ಯಾರೋ ಒಬ್ಬ ಹೆಣ್ಣುಮಗಳು ಬಂದಳು. `ಹುಟ್ಟಿದ್ದಕ್ಕೆ ನಾಚಿಕೆಯಿಲ್ಲ, ನಿನಗೆ ಅಮ್ಮನ ಮೊಲೆಹಾಲು ಕುಡಿಯಲು ಎಂಥಾ ನಾಚಿಕೆ? ಆಧ್ಯಾತ್ಮಜ್ಞಾನದ ಹಾಲು ಕುಡಿಯದಿದ್ದರೆ ಆನಂದವೆಲ್ಲಿದೆ?’ ಎಂದು ಅದರ ಕಿವಿಯಲ್ಲಿ ಪಿಸುಗುಟ್ಟಿದಳು. ಕೂಡಲೇ ಮಗು ಆಕೆಯ ಮೊಲೆ ಜಗಿಯಿತು. ನಂತರ ತನ್ನಮ್ಮನ ಹಾಲು ಕುಡಿಯಿತು. ಹಾಗೆ ಹಾಲು ಕುಡಿಸಿದವಳು ಲಲ್ಲೇಶ್ವರಿ. ಕುಡಿದವ ಮುಂದೆ ನಂದ ಋಷಿ ಎನಿಸಿಕೊಂಡ ಶೇಕ್ ನೂರುದ್ದೀನ್. ದೇಹದ ವಾಂಛೆಗಳಿಂದ ಮುಕ್ತಳಾಗಿ ನಗ್ನಳಾಗಿ ಓಡಾಡುತ್ತಿದ್ದ ಲಲ್ಲೇಶ್ವರಿ ಅಥವಾ ಲಲ್ಲಾ ಧೇಡ್ 14ನೇ ಶತಮಾನದ ಕಾಶ್ಮೀರದ ಭಕ್ತಕವಿ. ಲಲ್ಲಾ ದೇಹಾಂತವಾದಾಗ ಆಕೆ ಶೈವಸಂತಳೆಂದು ಹಿಂದೂಗಳೂ, ಸೂಫಿ ಸಂತಳೆಂದು ಮುಸ್ಲಿಮರೂ ಜಗಳವಾಡಿ ಅಂತ್ಯಸಂಸ್ಕಾರವನ್ನು ಹೇಗೆ, ಯಾರು ಮಾಡುವುದೆಂಬ ಬಗೆಗೆ ವಿವಾದ ತಾರಕಕ್ಕೇರಿತು. ತಿಕ್ಕಾಡುತ್ತ ಎರಡೂ ಗುಂಪುಗಳು ಮೃತದೇಹದ ಮೇಲಿನ ಹೊದಿಕೆ ಎಳೆದರೆ ಅಲ್ಲಿ ದೇಹದ ಬದಲಾಗಿ ಹೂವಿನ ರಾಶಿಯಿತ್ತು! ಅದನ್ನೇ ಇಬ್ಬರೂ ಹಂಚಿಕೊಂಡು ತಂತಮ್ಮ ಸಂಪ್ರದಾಯದ ಹಾಗೆ ಅಂತ್ಯಸಂಸ್ಕಾರ ಮಾಡಿದರು. ಇದು ಅಂತೆಕಂತೆಯ ಪುರಾಣ ಇರಬಹುದು, ಆದರೆ ಕೋಮುವೈಷಮ್ಯದ ಈ ದಿನಗಳಲ್ಲಿ ಅದು ಹೇಳುವ ಪಾಠ ಅಮೂಲ್ಯವಾದುದು.
4. ಇಸ್ಮತ್ ಚುಗ್ತಾಯ್ ದಿಟ್ಟವಾಗಿ ಬದುಕಿ, ಬರೆದ 20ನೇ ಶತಮಾನದ ಭಾರತೀಯ ಉರ್ದು ಲೇಖಕಿ. 1942ರಲ್ಲಿ ತಮ್ಮ ಮದುವೆಗೆ ಎರಡು ತಿಂಗಳಿರುವಾಗ ಹೆಣ್ಣುಗಳ ಸಲಿಂಗಸ್ನೇಹದ ಕಥಾವಸ್ತುವಿರುವ `ಲಿಹಾಫ್’ (ಕೌದಿ) ಕತೆ ಬರೆದು ಪ್ರಕಟಿಸಿದರು. ಅದು ಅಶ್ಲೀಲ ಎಂದು ಸಂಪ್ರದಾಯವಾದಿಗಳು ಕೋರ್ಟಿಗೆ ಹೋದರು. ಹೊಲಸು ವಸ್ತುಗಳ ಕುರಿತು ಕತೆ ಬರೆಯುವುದೇಕೆ ಎಂದು ನ್ಯಾಯಾಧೀಶರು ಕೇಳಿದಾಗ, `ಜಗತ್ತು ಹೊಲಸಿನಿಂದ ತುಂಬಿದೆ. ಅವನ್ನು ಕೆದಕಿ ಮೇಲೆ ತೆಗೆಯಬೇಕು. ಹಾಗಾದರಷ್ಟೆ ಎಲ್ಲರ ಕಣ್ಣಿಗೆ ಬೀಳುತ್ತದೆ, ಶುಚಿ ಮಾಡಬೇಕಾದ ಅವಶ್ಯಕತೆ ಅರಿವಾಗುತ್ತದೆ’ ಎಂದಿದ್ದರು. ತುಂಬ ನಿಜ. ಹೆಣ್ಣುಬರವಣಿಗೆಯ ಮುಖ್ಯ ಉದ್ದೇಶವೇ ಅದು - ಗಾಯವನ್ನು, ನೋವನ್ನು ಹೊರಗೆಡವುವುದು; ಮತ್ತೆ ಗಾಯವಾಗದಂತೆ ತಡೆಯುತ್ತಲೇ, ಇರುವ ಗಾಯಕ್ಕೆ ಮುಲಾಮು ಹುಡುಕುವುದು. ಅವರ ಲಿಹಾಫ್ ಕತೆಯ ಅನುವಾದವನ್ನೂ ಈ ಹೊತ್ತಗೆಯಲ್ಲಿ ಸೇರಿಸಲಾಗಿದೆ. ಆ ಕತೆ ಬರೆದು ಮುಕ್ಕಾಲು ಶತಮಾನ ಕಳೆದಮೇಲೆ ಭಾರತವು ಸಲಿಂಗಸ್ನೇಹವನ್ನು ಕಾನೂನುಬದ್ಧಗೊಳಿಸಿರುವುದನ್ನು ನೋಡಿದರೆ ಅಂದಿಗೆ ಆ ವಿಷಯ ಆಯ್ದುಕೊಂಡ ಅವರ ದಿಟ್ಟತನವನ್ನು ಊಹಿಸಬಹುದು.
5. ಹೆಣ್ಣಿನ ದುಡಿಮೆ ಸದಾ ವೇತನ ರಹಿತ, ಅದೃಶ್ಯ. ವಿವಿಧ ವೃತ್ತಿಗಳಲ್ಲಿ, ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದ್ದರೂ ಪಾಲನೆ, ಪೋಷಣೆಗಳ ವಿಸ್ತರಣೆಯಂತಹ ಉದ್ಯೋಗಗಳೇ ಹೆಣ್ಣುಮಕ್ಕಳಿಗೆ ಸಿಗುವುದು. ಅವರ ವೃತ್ತಿ ಹಿನ್ನಡೆ, ಏರುಪೇರುಗಳಿಗೆ ಮುಖ್ಯ ಕಾರಣ ಮಹಿಳೆಯಾಗಿರುವುದೇ ಆಗಿರುತ್ತದೆ. ಮಹಿಳಾ ಸ್ವಾಯತ್ತತೆ, ಘನತೆಯ ಬಗೆಗೆ ಬರಬರುತ್ತ ಅಸೂಕ್ಷ್ಮವಾಗುತ್ತಿರುವ ವಿಜ್ಞಾನ ಕ್ಷೇತ್ರಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ. ಅದರಲ್ಲೂ ಪುರುಷ ಅಧಿಕಾರದ ಕೇಂದ್ರವಾಗಿರುವ ಸಂಶೋಧನಾ ವಿಜ್ಞಾನ ಲೋಕದಲ್ಲಿ ಏಗುವುದು ಮಹಿಳಾ ವಿಜ್ಞಾನಿಗಳಿಗೆ ಸುಲಭವಲ್ಲ. ಅದಕ್ಕೆ ಈ ಪುಸ್ತಕದಲ್ಲಿ ಕಾಣುವ ರೊಸಾಲಿಂಡ್ ಫ್ರಾಂಕ್ಲಿನ್ ಉತ್ತಮ ಉದಾಹರಣೆ.
ಎಲ್ಲ ಜೀವಿಗಳ ಅನುವಂಶೀಯತೆಗೆ ಕಾರಣವಾದ ವಂಶವಾಹಿಗಳ ಹೊತ್ತಿರುವ ಡಿಎನ್‍ಎ ಸುರುಳಿಯಾಕಾರದ ರಚನೆ ಎಂದು ತಮ್ಮ ಕಿರು ವೈಜ್ಞಾನಿಕ ಪ್ರಬಂಧದಲ್ಲಿ ಬರೆದ ವಾಟ್ಸನ್ ಮತ್ತು ಕ್ರಿಕ್ ಎಂಬ ವಿಜ್ಞಾನಿಗಳು ಮತ್ತೊಬ್ಬ ಸಂಶೋಧಕ ಮೌರಿಸ್ ವಿಲ್ಕಿನ್ಸ್ ಅವರೊಡನೆ ನೊಬೆಲ್ ಬಹುಮಾನ ಪಡೆದರು. ಆದರೆ ವಾಟ್ಸನ್-ಕ್ರಿಕ್ ಅವರ ಪ್ರಬಂಧಕ್ಕೆ ಮೂಲಾಧಾರವಾಗಿದ್ದು ರೋಸಾಲಿಂಡ್ ಫ್ರಾಂಕ್ಲಿನ್ ಸಂಶೋಧನೆ. ಜೈವಿಕ, ಕೌಟುಂಬಿಕ ಜವಾಬ್ದಾರಿಗಳ ನಿಭಾಯಿಸುತ್ತ, ಡಿಎನ್‍ಎ ಕುರಿತು ವರ್ಷಗಟ್ಟಲೆ ಮಹತ್ತರ ಸಂಶೋಧನೆ ನಡೆಸಿದ ರೋಸಾಲಿಂಡ್ ಡಿಎನ್‍ಎಯ ಕ್ಷಕಿರಣ ಚಿತ್ರವೊಂದನ್ನು ತೆಗೆದಿದ್ದಳು. ಆದರೆ ಸಂಶೋಧನೆ ಮುಗಿಯುವ ಮೊದಲೇ ಅಂಡಾಶಯ ಕ್ಯಾನ್ಸರಿನಿಂದ 37ರ ಎಳೆ ಹರೆಯದಲ್ಲೆ ಮೃತಳಾದಳು. ಅವರ ತಿಳಿವನ್ನು ಬಳಸಿಕೊಂಡು ಕಗ್ಗಂಟಾಗಿದ್ದ ಡಿಎನ್‍ಎ ರಚನೆಯ ಒಗಟನ್ನು ವಾಟ್ಸನ್ ಮತ್ತು ಕ್ರಿಕ್ ಬಿಡಿಸಿದಾಗ ವಿಜ್ಞಾನ ಜಗತ್ತು ಅತ್ಯಾಶ್ಚರ್ಯಗೊಂಡಿತು. ಆದರೆ ತಮಗೆ ಮೂಲಾಧಾರವಾದ ಸಂಶೋಧನೆ ಮಾಡಿದ ರೋಸಾಲಿಂಡ್ ಹೆಸರನ್ನು ಅವರಿಬ್ಬರು ಎಲ್ಲೂ ಉಲ್ಲೇಖಿಸಲಿಲ್ಲ. ಅವಳದೇ ಸಂಶೋಧನಾಲಯದಲ್ಲಿದ್ದರೂ ಆಕೆಯೊಂದಿಗೆ ಮಾತುಬಿಟ್ಟಿದ್ದ ವಿಲ್ಕಿನ್ಸ್ ನೊಬೆಲ್ ಪಡೆಯುವಂತಾಯಿತು. ಆಕೆ ಸುರುಳಿ ರಚನೆ ಥಿಯರಿಯ ವಿರುದ್ಧವಾಗಿದ್ದಳು ಎಂದು ಸುಳ್ಳು ಬರೆಯಲಾಯಿತು. ಎಷ್ಟೋ ವರ್ಷ ಬಳಿಕ ಆನ್ ಸಾಯ್ರೆ ಎಂಬಾಕೆ ರೋಸಾಲಿಂಡ್ ಫ್ರಾಂಕ್ಲಿನ್ ಬಗೆಗೆ ಮಾಹಿತಿ ಸಂಗ್ರಹಿಸುವಾಗ ನಿಜ ವಿಷಯ ಜಗತ್ತಿಗೆ ತಿಳಿಯಿತು. ಅವಳ ಮೌಲಿಕ ಸಂಶೋಧನೆಯನ್ನು ಬಳಸಿಕೊಂಡರೂ ಸಮಕಾಲೀನ ಪುರುಷ ವಿಜ್ಞಾನಿಗಳು ರೋಸಾಲಿಂಡ್‍ಳ ಬೌದ್ಧಿಕತೆಗೆ ವಂಚನೆಗೈಯಲು ಕಾರಣವಾಗಿದ್ದು ಹೆಣ್ಣು ಅಧೀನಳು ಎಂಬ ಧೋರಣೆಯ ಕಾರಣವಾಗಿಯೇ ಎನ್ನಬಹುದು.
6. ರೋಮನ್ ಆಳ್ವಿಕೆಯ ಅಲೆಕ್ಸಾಂಡ್ರಿಯಾದಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲು ಕ್ರೈಸ್ತ ಧರ್ಮ ಹಿಂಸಾರೂಪಿಯಾಗಿದ್ದ ಕಾಲದಲ್ಲಿ ಮಹಾನ್ ಗಣಿತಜ್ಞೆ ಹೈಪೇಶಿಯಾ ಹುಟ್ಟಿದಳು. ಗುಲಾಮರ ದುಡಿತದಿಂದಲೇ ಸಮಾಜ ರೂಪುಗೊಳ್ಳುತ್ತಿದ್ದ ನಾಗರಿಕತೆಯ ಕಾಲಘಟ್ಟದಲ್ಲಿ ಕ್ರಿ. ಶ. 370(?)ರಲ್ಲಿ ಗಣಿತಶಾಸ್ತ್ರಜ್ಞನ ಮಗಳಾಗಿ ಬೆಳೆದಳು. ಮದುವೆಯಾಗಲೊಪ್ಪದೆ ಅಧ್ಯಯನಶೀಲಳಾದ ಅವಳು ಅಲೆಕ್ಸಾಂಡ್ರಿಯಾ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತ ಗಣಿತಶಾಸ್ತ್ರದ ಜೊತೆಗೆ ತತ್ವಶಾಸ್ತ್ರವನ್ನೂ ಬೋಧಿಸುತ್ತಿದ್ದಳು. ಆದರೆ ಹೆಣ್ಣೊಬ್ಬಳ ಬೌದ್ಧಿಕ ಹಿರಿಮೆಯನ್ನು, ಸ್ವಾಯತ್ತ ಚಿಂತನೆ-ಬದುಕುಗಳನ್ನು ಒಪ್ಪದ ಕ್ರೈಸ್ತಧರ್ಮದ ನೈತಿಕ ಪೊಲೀಸ್‍ಗಿರಿಗೆ ದುರಂತ ಸಾವು ಕಂಡಳು. ಅವಳದು ಬ್ಲ್ಯಾಕ್ ಮ್ಯಾಜಿಕ್, ಧರ್ಮವಿರೋಧಿ ಜ್ಞಾನ ಎಂದು ಕರೆದ ಆರ್ಚ್ ಬಿಷಪ್ ಸಿರಿಲ್, ಕ್ರಿ.ಶ. 415ರಲ್ಲಿ ಸಾರೋಟಿನಲ್ಲಿ ಹೋಗುತ್ತಿದ್ದವಳನ್ನು ಎಳೆದು ನಗ್ನಗೊಳಿಸಿ, ಚಿತ್ರಹಿಂಸೆ ಕೊಟ್ಟು, ಕಪ್ಪೆಚಿಪ್ಪುಗಳಿಂದ ಮೂಳೆ ಕಾಣುವವರೆಗೆ ಮಾಂಸ ಕೆರೆದು ಬೀದಿಯಲ್ಲಿ ಕೊಲ್ಲಲು ಆದೇಶಿಸಿದ. ನಂತರ ಅವಳ ಬರವಣಿಗೆ, ಪುಸ್ತಕಗಳನ್ನೆಲ್ಲ ಸುಡಲಾಯಿತು. ಜ್ಞಾನದ ಮೇಲಿನ ಪುರುಷಾಧಿಪತ್ಯ ಅವಳ ಹತ್ಯೆಯಲ್ಲಿ ಕೊನೆಯಾಯಿತು.
7. ಹೆಣ್ಣನ್ನು ಪ್ರಕೃತಿಯೊಂದಿಗೆ ಸಮೀಕರಿಸುವುದು ಎಲ್ಲ ಪುರುಷ ಸಮಾಜಗಳಲ್ಲಿ ಕಂಡುಬರುವಂತೆ ಸುತ್ತಮುತ್ತಲ ಪರಿಸರವನ್ನು ತನ್ನದನ್ನಾಗಿ ಮಾಡಿಕೊಂಡು ಆಪ್ತವಾಗಿಸಿಕೊಳುವ ಗುಣ ಹೆಣ್ಣುಮಕ್ಕಳದು. ಪರಿಸರವನ್ನು ಹಾಳುಗೆಡವುವುದರ ವಿರುದ್ಧ ಎಂದಿನಿಂದ ದನಿಯೆತ್ತಿರುವುದು ಮಹಿಳೆಯರೇ. ಇಂದು ಕ್ರಿಮಿ, ಕೀಟನಾಶಕವೆಂದು ನಾವು ಬಳಸುವ ಡಿಡಿಟಿ ಎಂಬ ರಾಸಾಯನಿಕ ಮುಂದೊಂದು ದಿನ ಕ್ರಿಮಿಕೀಟಗಳಿಲ್ಲದೆ, ಪಕ್ಷಿಗಳೇ ಇಲ್ಲದೆ, ಚಿಲಿಪಿಲಿಯೇ ಇಲ್ಲದೆ `ಮೌನವಸಂತ’ವನ್ನು ನೋಡುವಂತೆ ಮಾಡಬಹುದು ಎಂದು ಪರಿಸರ ಕಾಳಜಿಯ ವಿಜ್ಞಾನಿ ಮಹಿಳೆ 1962ರಲ್ಲಿ ಬರೆದು ಎಚ್ಚರಿಸಿದ್ದರು. ಅವಳೇ ರೇಚೆಲ್ ಕಾರ್ಸನ್. ಆಧುನಿಕ ಭಾಷೆಯಲ್ಲಿ `ಕಳೆ’, `ಪೀಡೆ’ ಎಂದು ಕರೆಯಲ್ಪಡುವ ಕೀಟ-ಗಿಡ-ಪ್ರಾಣಿಗಳ ಮೇಲೆ ಪ್ರಯೋಗಿಸುವ ನಾಶಕಗಳು ಒಳ್ಳೆಯ-ಕೆಟ್ಟ ಭೇದವಿಲ್ಲದೆ ಎಲ್ಲ ಜೀವಸಂಕುಲವನ್ನೂ ನಾಶಗೊಳಿಸಿಯಾವು; ಗಿಡದ ಎಲೆಗಳ ಮೇಲೆ, ನೆಲದೊಳಗೆ ಉಳಿದು ನೀರಿಗೆ ಸೇರಿಯಾವು; ಕೊನೆಗೆ ಕೀಟನಾಶಕವನ್ನೇ ತಿಂದು ಬದುಕುವ ಭಯಾನಕ ಕೀಟಗಳು ಸೃಷ್ಟಿಯಾದಾವು ಎಂದವಳು ಎಚ್ಚರಿಸಿದ್ದಳು. `ಪ್ರಕೃತಿಯ ವಿರುದ್ಧ ಹೂಡುವ ಯುದ್ಧ ಮನುಷ್ಯರು ತಮ್ಮ ವಿರುದ್ಧ ತಾವೇ ಹೂಡಿಕೊಳ್ಳುವ ಯುದ್ಧ’ ಎಂದು ಸ್ತನ ಕ್ಯಾನ್ಸರಿಗೊಳಗಾಗಿ ಸಾಯುವ ಮೊದಲು ರೇಚೆಲ್ ಹೇಳಿದ್ದಳು. ಆದರೆ ಆಕೆಯನ್ನು `ಹುಚ್ಚಿ’ ಎಂದು ಕರೆಯಲಾಯಿತು. ಬರವಣಿಗೆಯ ಉದ್ದೇಶಗಳನ್ನು ಅನುಮಾನಿಸಲಾಯಿತು. ಅವರು ಬರೆದ `ಮೌನವಸಂತ’ ಕೃತಿಗೆ ವಿರುದ್ಧವಾಗಿ ಮತ್ತೊಂದು ಕೃತಿ ಬರೆಸಿ ಸಾವಿರಗಟ್ಟಲೆ ಪ್ರತಿ ಹಂಚಲಾಯಿತು. ಬೀಜ ಮತ್ತು ಕೀಟನಾಶಕ ಕಂಪನಿಗಳು ಆಡಿಸಿದ ವಿಕಟ ನಾಟಕದ ಹೊರತಾಗಿಯೂ ಪರಿಸರವಾದ ಶುರುವಾಗಲು ಕಾರಣರಾದ ಆದ್ಯ ವ್ಯಕ್ತಿ ರೇಚೆಲ್ ಕಾರ್ಸನ್. ಅವರ `ಮೌನವಸಂತ’ದ ಒಂದು ಭಾಗ ಈ ಹೊತ್ತಗೆಯಲ್ಲಿದೆ.
8. ಈ ಪುಸ್ತಕದಲ್ಲಿ ಹೆನ್ರಿಟಾ ಲ್ಯಾಕ್ಸ್ ಎಂಬ ಅಮರ ಚೇತನವೊಂದರ ಬಗೆಗೆ ಕುತೂಹಲಕರ ಬರಹವಿದೆ. ಗರ್ಭಕೊರಳ ಕ್ಯಾನ್ಸರಿನಿಂದ 1951ರಲ್ಲಿ ಹೆನ್ರಿಟಾ ಲ್ಯಾಕ್ಸ್ ಮೃತಳಾದರೂ ಪ್ರಯೋಗಶಾಲೆಯಲ್ಲಿ ಬೆಳೆಯುತ್ತಲೇ ಇದ್ದಾಳೆ. ಗುಲಾಮರಾಗಿದ್ದ ಕಪ್ಪು ಜನರ ಮನೆಯ ಅಮೆರಿಕನ್ ಮಹಿಳೆ ಹೆನ್ರಿಟಾ, ನೀಗ್ರೋ ಎಂಬ ಕಾರಣಕ್ಕೆ ಚಿಕಿತ್ಸೆ, ಕಾಳಜಿ, ಹಣಬೆಂಬಲ ಸಿಗದೇ ಜೀವ ತೆರುವಂತಾಗಿತ್ತು. ಆದರೆ ಪ್ರಯೋಗಾಲಯದಲ್ಲಿ ಅತಿಸುಲಭವಾಗಿ ಸರಸರ ಬೆಳೆದ ಅವಳ ಕ್ಯಾನ್ಸರ್ ಜೀವಕೋಶಗಳು (ಹೀಲಾ ಕೋಶಗಳು) ಲಸಿಕೆ ಪ್ರಯೋಗ, ಔಷಧ ಅಡ್ಡಪರಿಣಾಮ ಪ್ರಯೋಗ, ಜೀವಕೋಶ ಬೆಳೆಸುವ ಪ್ರಯೋಗ, ಅಂತರಿಕ್ಷ ನೌಕೆಯಲ್ಲಿ ಪ್ರಯೋಗ, ಕ್ಯಾನ್ಸರ್ ಅಧ್ಯಯನ, ಅನೇಕಾನೇಕ ಬ್ಯಾಕ್ಟೀರಿಯಾ-ವೈರಸ್ ಅಧ್ಯಯನಕ್ಕೆ ಬಳಕೆಯಾದವು. ಇವತ್ತಿಗೂ ಕೋಟ್ಯಂತರ ಡಾಲರ್ ವಹಿವಾಟಿಗೆ ಅವು ಕಾರಣವಾಗಿವೆ. ವಿಶ್ವಾದ್ಯಂತ 60 ಸಾವಿರಕ್ಕೂ ಮಿಕ್ಕಿ ಪ್ರಯೋಗಗಳನ್ನು ಅವಳ ಕ್ಯಾನ್ಸರ್ ಜೀವಕೋಶಗಳ ಮೇಲೆ ನಡೆಸಲಾಗಿದೆ. ದುರಂತವೆಂದರೆ ತಮ್ಮಮ್ಮನ ಸಾವಿಗೆ ಕಾರಣವಾದ ಕಾಯಿಲೆಯ ಜೀವಕೋಶಗಳು ಅಷ್ಟೆಲ್ಲ ಪ್ರಸಿದ್ಧವಾಗಿ, ಹಣಗಳಿಸುತ್ತ ಜೀವಂತ ಇದ್ದುದು ಬಡವರಾಗಿ, ಆರೋಗ್ಯವಿಮೆಯಿಲ್ಲದೆ ಕಷ್ಟದ ಬದುಕು ಸವೆಸಿದ ಅವಳ ಮಕ್ಕಳಿಗೆ ಗೊತ್ತೇ ಇರಲಿಲ್ಲ. ಕಳೆದ 100 ವರ್ಷಗಳಲ್ಲಿ ವೈದ್ಯಕೀಯ ಲೋಕ ಕಂಡ ಅದ್ಭುತ ಎಂದು ವಿಜ್ಞಾನಿಯೊಬ್ಬರು ಬಣ್ಣಿಸಿದ, ಕೋಟಿಗಟ್ಟಲೆ ಡಾಲರು ವಹಿವಾಟು ನಡೆಸಿದ ಹೀಲಾ ಕೋಶಗಳ ಮೇಲೆ ಹೆನ್ರಿಟಾ ಲ್ಯಾಕ್ಸ್‍ಗಾಗಲೀ, ಅವಳ ಮಕ್ಕಳದಾಗಲೀ ಯಾವುದೇ ಹಕ್ಕು ಇರಲಿಲ್ಲ!
9. ತಾನೇ ಸೃಷ್ಟಿಕರ್ತನಾಗಹೊರಟು ಅಸಾಧ್ಯ ಕುರೂಪ, ಕ್ರೌರ್ಯದ ಮಾನವನನ್ನು ಸೃಷ್ಟಿಸಿ, ಕೊನೆಗೆ ತನ್ನ ಸೃಷ್ಟಿಗೆ ತಾನೇ ಬಲಿಯಾದ ವಿಕ್ಟರ್ ಫ್ರಾಂಕೆನ್‍ಸ್ಟೀನ್ ಎಂಬ ವ್ಯಕ್ತಿಯ ಕುರಿತ ಕಾಲ್ಪನಿಕ ವೈಜ್ಞಾನಿಕ ಕಾದಂಬರಿ `ಫ್ರಾಂಕೆನ್‍ಸ್ಟೀನ್’ ಬರೆದ ಮೇರಿ ವುಲ್‍ಸ್ಟನ್‍ಕ್ರಾಫ್ಟ್ ಶೆಲ್ಲಿಯ ಬಗೆಗೊಂದು ಬರಹ ಇಲ್ಲಿದೆ. 200 ವರ್ಷ ಕೆಳಗೆ ವೈಜ್ಞಾನಿಕ ಕಾದಂಬರಿ ಬರೆಯುವಾಗ ಅವಳ ವಯಸ್ಸು ಬರಿಯ 19 ! `ಫ್ರಾಂಕೆನ್‍ಸ್ಟೀನ್’ನ ಅನುವಾದಿತ ಭಾಗವೂ ಇಲ್ಲಿದೆ. ಜೊತೆಗೆ ಮೇರಿ ಸೊಂತಾಗ್ ಎಂಬ ಅಪರೂಪದ ಚಿಂತಕಿಯ ಕುರಿತ ಬರಹವೂ ಇದೆ. ಅವಳ ಒಂದು ಬರಹದ ಅನುವಾದವೂ ಇಲ್ಲಿದೆ.
ಹೀಗೆ ಈ ಹೆಣ್ಣುಗಳು ಅಗ್ನಿದಿವ್ಯಗಳನ್ನು ಹಾದುಬಂದವರು. ಕುಟುಂಬ, ಉದ್ಯೋಗ, ಆರೋಗ್ಯ, ಸಮಾಜವೆಂಬ ನಾನಾ ಸವಾಲುಗಳನ್ನೆದುರಿಸುತ್ತ ಯಶಸ್ವಿಯಾಗಿ ದಾಟಿದವರು. ಒಬ್ಬೊಬ್ಬರದೂ ಒಂದೊಂದು ಸಾಹಸ. ಆದರೆ ಈ ಎಲ್ಲ ಹೆಣ್ಣುಮಕ್ಕಳ ಹೆಸರುಗಳು ಜನಸಾಮಾನ್ಯರಿರಲಿ, ಸಾಹಿತಿ-ಹೋರಾಟಗಾರರ ಮಾತುಕತೆಗಳ ಒಳಗೂ ಸಾಮಾನ್ಯವಾಗಿ ಸುಳಿಯದಂಥವು. ಕೆಲವು ಸಾಹಿತ್ಯಾಭ್ಯಾಸಿಗಳಿಗೆ ಇಸ್ಮತ್ ಚುಗ್ತಾಯ್, ಲಲ್ಲೇಶ್ವರಿ, ಮೇರಿ ಸೊಂತಾಗ್ ಗೊತ್ತಿರಬಹುದು. ಅಷ್ಟು ಬಿಟ್ಟರೆ ಹೆಣ್ಣುಪಾತ್ರದ ಸಿದ್ಧ, ಸ್ಥಿರ ಮಾದರಿಗಳನ್ನು ಮನದಲ್ಲಿಟ್ಟುಕೊಂಡವರಿಗೆ ಇಲ್ಲಿನ ವೈವಿಧ್ಯಮಯ ಹೆಣ್ಣುಬದುಕುಗಳ ಚಿತ್ರಣ ಆಶ್ಚರ್ಯಾಘಾತ ಉಂಟುಮಾಡಬಹುದು. ಪಾಶ್ಚಾತ್ಯ ವಿದ್ಯಾವಂತ ಸಮಾಜವೂ ಎಷ್ಟು ಲಿಂಗಅಸೂಕ್ಷ್ಮವಾಗಿದೆ ಎನಿಸಬಹುದು. ಹೀಗಿರುತ್ತ ವಿವಿಧ ದೇಶ-ಕಾಲ-ಕ್ಷೇತ್ರಗಳ ಹೆಣ್ಣು ಬದುಕುಗಳ ಒತ್ತಟ್ಟಿಗಿರಿಸಿ ನಿರೂಪಿಸಿದ ಡಾ. ಜೆ. ಬಾಲಕೃಷ್ಣ ಅವರ ಪಯತ್ನಕ್ಕೆ ನನ್ನ ಮೊದಲ ಸಲಾಮು.
ಈ ಅನನ್ಯ ಮಹಿಳಾ ಮಾದರಿಗಳ ಓದುತ್ತ ಒಂದೇಒಂದು ಕೊರತೆ ಎದ್ದು ಕಾಣಿಸಿತು. ವೈಯಕ್ತಿಕ ಸಾಧನೆಯಿಂದ ಶ್ರೇಷ್ಠ ವ್ಯಕ್ತಿಗಳಾದವರ ಮಾದರಿ ಹೇಗೆ ಮುಖ್ಯವೋ ಹಾಗೆಯೇ ಸಾಮೂಹಿಕತೆಯಲ್ಲಿ ನಂಬಿಕೆಯಿಟ್ಟು ಜೀವ ಸವೆಸಿದ ಮಾದರಿಗಳೂ ಮುಖ್ಯ. ತನ್ನತನದ ವಿಸ್ತರಣೆಯಾಗಿ ವೈಯಕ್ತಿಕ ಸಾಧನೆಗಳು ಇದ್ದರೆ, `ಸ್ವ’ ಕಲ್ಪನೆಯಿಂದ ತಮ್ಮ ವ್ಯಕ್ತಿತ್ವವನ್ನು ಹೊರತಂದು ವಿಶ್ವಾತ್ಮಕ ಉದ್ದೇಶ ಹೊತ್ತು ಸಾಮೂಹಿಕಗೊಳ್ಳುವುದು ಅತಿವಿಶಿಷ್ಟ ಸಾಧನೆ. ವಿಶಿಷ್ಟ ಯಾಕೆಂದರೆ ಒಂಟಿತನದಿಂದ ಪಾರಾಗಿ ಸಮುದಾಯದ ಭಾಗವಾಗದೇ ಅಥವಾ ಹಾಗೆಂದು ತನ್ನನ್ನು ಗುರುತಿಸಿಕೊಳ್ಳದೇ ಹೆಣ್ಣಿಗೆ ನಿಜವಾದ ಬಿಡುಗಡೆಯ ಮಾರ್ಗಗಳಿಲ್ಲ. ಆ ದೃಷ್ಟಿಯಿಂದ ಇಲ್ಲಿ ಸಂಘಟನಾತ್ಮಕ, ರಾಜಕಾರಣದಂತಹ ಕ್ರಿಯೆಗಳಲ್ಲಿ ತೊಡಗಿಕೊಂಡ ಮಹಿಳಾ ಮಾದರಿಯ ಕೊರತೆಯಿದೆ. ಒಬ್ಬ ಲಲ್ಲಾ ಆಧ್ಯಾತ್ಮಿಕವಾಗಿ ಆ ಮಟ್ಟ ತಲುಪಿದ್ದಾಳೆ. ಅವಳ ಬದುಕು ಉಳಿದೆಲ್ಲರಿಗಿಂತ ಕೊಂಚ ಭಿನ್ನವಾಗಿ ನಿಲ್ಲುತ್ತದೆ. ಆದರೆ ಸಾಮೂಹಿಕ ಚಿಂತನೆ, ನಾಯಕತ್ವ ರೂಢಿಸಿಕೊಂಡ ಒಂದು ಮಹಿಳಾ ಮಾದರಿ ಇಲ್ಲಿದ್ದರೂ ಪುಸ್ತಕದ ಗರಿಮೆ ಇಮ್ಮಡಿಯಾಗುತ್ತಿತ್ತು ಅನಿಸುತ್ತಿದೆ.
ಅದೇನೇ ಇರಲಿ, ಇಂಥ ಬದುಕುಗಳ ನಿರೂಪಣೆ ಸುಲಭವಲ್ಲ. ಯಾವುದೋ ಹೆಣ್ಮಕ್ಕಳ ಕಾಲ-ದೇಶ-ಬದುಕುಗಳೊಳಗೆ ಸಂಪೂರ್ಣವಾಗಿ ಒಳಹೊಕ್ಕ ಹೊರತು ಇಂಥ ಕಥನಗಳ ನಿರೂಪಿಸಲು ಸಾಧ್ಯವಿಲ್ಲ. ಡಾ. ಜೆ. ಬಾಲಕೃಷ್ಣ ಕ್ರಿಸ್ತಪೂರ್ವ ಕಾಲದ ಹೈಪೇಶಿಯಾಳಿಂದ ಹಿಡಿದು 20ನೇ ಶತಮಾನದ ಲೇಖಕಿ ಇಸ್ಮತ್ ಚುಗ್ತಾಯ್‍ವರೆಗೆ ಈ ಹೆಣ್ಣುಜೀವಗಳ ಬದುಕಿನ ವಿವಿಧ ಮಗ್ಗುಲುಗಳ ಬಗೆಗೆ ಆಳವಾಗಿ ಅಭ್ಯಸಿಸಿ ಬರೆದಿದ್ದಾರೆ. ಅವರ ಬದುಕುಗಳ ಕಟ್ಟಿಕೊಡುತ್ತಲೇ ಆ ಕಾಲವನ್ನೂ ಕಟ್ಟಿಕೊಟ್ಟಿರುವುದರಿಂದ ಈ ಬರಹಗಳನ್ನೋದುವಾಗ ಚರಿತ್ರೆಯ ಪುಟಗಳ ನಡುವೆ ಸುಳಿದಾಡಿ ಬಂದಂತೆನಿಸುತ್ತದೆ. ಉತ್ಪ್ರೇಕ್ಷೆ ಮತ್ತು ವೈಭವೀಕರಣದಿಂದ ದೂರನಿಂತು ಬದುಕನ್ನು ಜೀವನಪ್ರೀತಿಯಿಂದ ನೋಡುತ್ತ ಹೇಳಿರುವ ಕಥೆಗಳು ಇಲ್ಲಿವೆ. ಸರಾಗ ಓದಿಸಿಕೊಳ್ಳಬಲ್ಲ ಭಾಷೆ ಮತ್ತು ಲವಲವಿಕೆಯ ಶೈಲಿ ಇಲ್ಲಿನ ವಸ್ತು ಮತ್ತು ನಿರೂಪಣಾಕ್ರಮಕ್ಕೆ ಸೂಕ್ತವಾಗಿ ಹೊಂದಿಕೊಂಡಿವೆ. ಭಾವತೀವ್ರತೆಯನ್ನು ಓದುಗರಲ್ಲಿ ಹುಟ್ಟಿಸುವ ಇಂತಹ ಮಹಿಳಾ ಕಥನಗಳಿಗಾಗಿ ಕನ್ನಡ ಜಾಣಜಾಣೆಯರ ಪರವಾಗಿ ಬಾಲಕೃಷ್ಣ ಅವರಿಗೆ ಧನ್ಯವಾದಗಳು.
ಅದೇವೇಳೆಗೆ ಅನಾಮಿಕರಾಗಿಯೇ ಉಳಿದ ಇನ್ನೆಷ್ಟೋ ಅಸಂಖ್ಯ ಹೆಣ್ಣುಬದುಕುಗಳು ಚರಿತ್ರೆಯಲ್ಲಿ ಹುಗಿದು ಹೋಗಿವೆ. ಚರಿತ್ರೆಯ ಗತಿಯಲ್ಲಿ ಎಂದೋ ಆಗಿಹೋದವರ ಕಥೆ ನಮಗಿಂದು ಮುಖ್ಯವಾಗಿದೆ ಯಾಕೆಂದರೆ ಅವರ ಬದುಕುಗಳಲ್ಲಿ ಇವತ್ತಿನ ಸಂಕಟಕಾಲದ ಕಾರಣಗಳು, ಉತ್ತರಗಳು ಸಿಗಬಹುದಾಗಿದೆ. ಅಂಥವರನ್ನು ಹುಡುಕಿ ತೆಗೆದು ಅನಾವರಣಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
25-01-19 ಡಾ. ಎಚ್. ಎಸ್. ಅನುಪಮಾ
j.balakrishna@gmail.com
ಮಂಗಳವಾರ, ಆಗಸ್ಟ್ 04, 2020
ವಸಾಹತುಶಾಹಿ ಆಧುನಿಕತೆ ಹಾಗೂ ಒಂದು ಸಮಾಜ ಸುಧಾರಕ ಕಾದಂಬರಿ: ಇಂದಿರಾಬಾಯಿ (1899) ಒಂದು ಓದು
ಮೂಲ: ಶಿವರಾಮ ಪಡಿಕ್ಕಲ್
ಅನುವಾದ: ಡಾ.ಜೆ.ಬಾಲಕೃಷ್ಣ
ಹತ್ತೊಂಬತ್ತನೆಯ ಶತಮಾನದ ಕೆಲವು ಅಧ್ಯಯನಗಳು
ಭಾರತದಲ್ಲಿ ವಸಾಹತು ಶಾಹಿ ಮತ್ತು ವಸಾಹತು ಆಧುನಿಕತೆಗಳು ನೆಲೆಯೂರಿ, ಭದ್ರಗೊಳ್ಳುತ್ತಿದ್ದುದ್ದರ ಜೊತೆ ಜೊತೆಯಲ್ಲೇ ನಡೆದ ಸಾಂಸ್ಕೃತಿಕ ರೂಪಾಂತರಗಳ ವ್ಯಾಪ್ತಿ ಹಾಗೂ ಗಾಢತೆಯ ಚಿಂತನೆಗೂ ಸ್ಥಳಾವಕಾಶ
ಒದಗಿಸಿಕೊಟ್ಟಿವೆ1.
ವಸಾಹತುಶಾಹಿ
ಸಮಾಜದ ಮೇಲೆ ಪ್ರಾಬಲ್ಯ ಸಾಧಿಸುವ ಹಿನ್ನೆಲೆಯಲ್ಲಿ ಹತ್ತೊಂಬತ್ತನೆಯ ಶತಮಾನದ ಸಮಾಜ ಸುಧಾರಣಾ
ಚಳುವಳಿಗಳು ಹೇಗೆ ಸ್ತ್ರೀ ಪ್ರಶ್ನೆಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ ಎಂಬುದನ್ನು ಎತ್ತಿ
ತೋರಿಸುವುದರೊಂದಿಗೆ ನಮಗೆ ಹೊಸ ಅರಿವನ್ನು ಒದಗಿಸುವಲ್ಲಿ ಈ ಅಧ್ಯಯನಗಳು ವಿಶೇಷವಾಗಿ ಸಹಾಯ
ಮಾಡಿವೆ. ಹೊಸ `ಜಾತ್ಯಾತೀತ ಸ್ವಂತಿಕೆ'ಯ ರಚನೆ ಹಾಗೂ ಸಾಂಪ್ರದಾಯಕ ಸಮಾಜವನ್ನು ಆಧುನಿಕ ಮತ್ತು ಆಧುನೀಕರಿಸುವ ಸಮಾಜವಾಗಿ
ರೂಪಾಂತರಿಸುವ ಪ್ರಕ್ರಿಯೆ ಕುಟುಂಬ ಮತ್ತು ಸಮಾಜದಲ್ಲಿನ ಮಹಿಳೆಯ ಸ್ಥಾನದ ಬಗೆಗೆ ಮರು
ವ್ಯಾಖ್ಯಾನಿಸುವ ಪ್ರಾಯೋಜನೆಯೊಂದಿಗೆ ಸದಾ ಸಂಬಂಧ ಹೊಂದಿತ್ತು. ಈ ಪ್ರಾಯೋಜನೆಯನ್ನು
ಕಾರ್ಯಗತಗೊಳಿಸಲು ಲಿಖಿತ ಪ್ರಕಾರವಾದ ಕಾದಂಬರಿ ಒಂದು ಸೂಕ್ತ ವಾಹಕವಾಗಿತ್ತು. ಹಾಗಾಗಿ, ನಾವು ಮೊದಲ ಕಾದಂಬರಿಗಳಲ್ಲಿ ಕಾಣುವುದು ಆಧುನಿಕ ಜಾತ್ಯಾತೀತ ಸ್ವಂತಿಕೆಯ
ನಿರ್ಮಾಣ ಹಾಗೂ ಅದು `ಸಾಂಪ್ರದಾಯಕತೆ' ಮತ್ತು `ಆಧುನಿಕತೆ'ಯೊಂದಿಗೆ ಮುಖಾಮುಖಿಯಾಗಿ ತನ್ನ ನಿರ್ಮಾಣದ ಪ್ರಕ್ರಿಯೆಯಲ್ಲಿ ಸಂಘರ್ಷ ಹಾಗೂ
ಸಮ್ಮಿಳಿತ ಎರಡರಲ್ಲೂ ತೊಡಗಿಸಿಕೊಳ್ಳುತ್ತದೆ. ಈ ದೃಷ್ಟಿಯಲ್ಲಿ ಕಾದಂಬರಿಯು `ಜಾತ್ಯತೀತ ಸ್ವಂತಿಕೆಯ ಅತ್ಮ ಚರಿತ್ರೆ'ಯೂ ಆಗಿದೆ2. ಕನ್ನಡದ ಕಾದಂಬರಿಗಳಲ್ಲಿ ಆಧುನಿಕವಾಗಲು
ಬಯಸುವ `ಜಾತ್ಯಾತೀತ ಸ್ವಂತಿಕೆ'ಯು ಸದಾ ಮೇಲ್ಜಾತಿಗೇ ಸೇರಿದುದಾಗಿತ್ತು.
ಅದನ್ನು ಬೇರೆ
ರೀತಿಯಲ್ಲಿ ಹೇಳುವುದಾದಲ್ಲಿ, ಇಂಗ್ಲಿಷ್ ಶಿಕ್ಷಿತ ವರ್ಗವು ಆಧುನಿಕ
ಸಾರ್ವತ್ರಿಕ ನಿಯಮಗಳಂತೆ `ಪ್ರಗತಿ'ಯನ್ನು ಸಾಧಿಸಲು ಹೇಗೆ ಸಂಸ್ಕøತಿಯನ್ನು
ಮರು-ಸಜ್ಜುಗೊಳಿಸಲು ಹಾಗೂ ವ್ಯಕ್ತಿ ಮತ್ತು ಕುಟುಂಬವನ್ನು ಪುನರ್ರಚಿಸಲು ಪ್ರಯತ್ನಿಸುತ್ತದೆ
ಎಂಬುದನ್ನು ನಾವು ಮೊದಲ ಕನ್ನಡ ಕಾದಂಬರಿಗಳಲ್ಲಿ ನಾಟಕೀಕರಣ ರೂಪದಲ್ಲಿ ಕಾಣುತ್ತೇವೆ. ಅದು `ಸಾಂಪ್ರದಾಯಕತೆ'ಯೊಂದಿಗೆ ಮಾತ್ರವಲ್ಲ, ಆಧುನಿಕತೆಯ ಕೆಲರೂಪಗಳೊಂದಿಗೆ ತೊಡಗಿದ ಸಂಘರ್ಷದಿಂದಾಗಿ ಹುಟ್ಟಿಕೊಂಡ ಸಾಮಾಜಿಕ
ಗುರುತನ್ನು ಪುನರ್ರೂಪಿಸುವ ಕಾರ್ಯವನ್ನೂ ಸಹ ತೊಡಗಿಸಿಕೊಳ್ಳುತ್ತದೆ.
"ಪಾಶ್ಚಿಮಾತ್ಯವಲ್ಲದ ಆದರೆ `ಆಧುನಿಕ' ರಾಷ್ಟ್ರೀಯ ಸಂಸ್ಕøತಿಯಂತಹ ಅತ್ಯಂತ ಪ್ರಭಾವೀ, ಕ್ರಿಯಾಶೀಲ ಹಾಗೂ ಚಾರಿತ್ರಿಕವಾಗಿ ಬಹುಮುಖ್ಯವಾದಂತಹ ಪ್ರಾಯೋಜನೆಯನ್ನು
ರಾಷ್ಟ್ರೀಯತೆ ಹೇಗೆ" ಉಪಕ್ರಮಿಸಿದೆಯೆಂಬುದನ್ನು ಪಾರ್ಥ ಚಟರ್ಜಿಯವರು
ತೋರಿಸಿಕೊಟ್ಟಿದ್ದಾರೆ3. ಅವರ ಪ್ರಕಾರ ಆಧುನಿಕ ಜಾತ್ಯಾತೀತ
ಸ್ವಂತಿಕೆಯು ತನ್ನ ಗುರಿಯನ್ನು ಸಾಧಿಸಲು ಆಧ್ಯಾತ್ಮಿಕ ಹಾಗೂ ಪ್ರಾಪಂಚಿಕ ನೆಲೆಗಳ ನಡುವಿನ
ವಿಭಜನೆಯನ್ನು ಬಳಸಿಕೊಳ್ಳುತ್ತದೆ. ಕನ್ನಡದ ಸುಧಾರಣಾ ಕಾದಂಬರಿಗಳಲ್ಲಿ ಆಧ್ಯಾತ್ಮಿಕ/ಧಾರ್ಮಿಕ
ಜಗತ್ತು ಇನ್ನೂ ಎರಡು ಗುಂಪುಗಳಾಗಿ ವಿಭಜಿಸಲ್ಪಟ್ಟಿದೆ. ಅದರ ಒಂದು ಆಧ್ಯಾತ್ಮಿಕ ಗುಂಪು ಧರ್ಮದ
ಪರಿಶುದ್ಧ ಅಂತಸ್ಸಾರವಾದ ಅನಂತ ಮತ್ತು ತರ್ಕಾತೀತ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಅದನ್ನು
ಆಧುನಿಕ ಜಗತ್ತಿನಲ್ಲಿಯೂ ಹಿಂಪಡೆದು, ನವೀಕರಿಸಿ, ಸಂರಕ್ಷಿಸಿಡಬೇಕಾಗುತ್ತದೆ. ಆದರೆ ಧರ್ಮದ ಪರದೆಯ ಹಿಂದೆ ಕ್ರಮೇಣ
ನುಸುಳಿಕೊಂಡಿರುವ ಭ್ರಷ್ಟ ಆಚರಣೆಗಳ ಗೋಜಲು ಗೋಜಲು ಜಗತ್ತಿದೆ. ಮೂಢನಂಬಿಕೆ, ಕ್ರೌರ್ಯದ ವಿಧಾನಗಳು, ಬಲವಂತದ ಆಚರಣೆಗಳು ಇತ್ಯಾದಿ ನಿಜವಾದ
ಧರ್ಮವನ್ನು ಕಲುಷಿತಗೊಳಿಸಲಾಗಿದೆಯೆಂದು ನಂಬಲಾಗಿತ್ತು. ಹಾಗಾಗಿ ಆಧುನಿಕತೆ ಅಂತಹ ವಿಚಾರಹೀನ
ವಿಷಯಗಳನ್ನು ಬಿಟ್ಟು ಮುನ್ನಡೆಯುವುದು ಅವಶ್ಯಕವಾಗಿತ್ತು. ಈ ಹಿನ್ನೆಲೆಯಿಂದಲೇ ಮೊದಲ ಕನ್ನಡ
ಕಾದಂಬರಿಗಳ ಕಥಾನಾಯಕರು ತಮ್ಮ ಆಯ್ಕೆಗಳನ್ನು ಮಾಡುತ್ತಾರೆ. ವಿಧವೆಯರ ತಲೆ ಬೋಳಿಸುವುದು,
ಬಲವಂತವಾಗಿ ಧಾರ್ಮಿಕ ಕಟ್ಟುಪಾಡುಗಳನ್ನು ವಿಧಿಸುವುದು
ಮುಂತಾದುವುಗಳು ತಾವು `ಅನೈತಿಕ', `ಅನ್ಯಾಯ' ಹಾಗೂ `ಅಧರ್ಮ'ವೆಂದು ಪರಿಗಣಿಸಿದ ಧಾರ್ಮಿಕ ಆಚರಣೆಗಳ ಬಗೆಗೆ
ಸಾರಸ್ವತ ಜನಾಂಗದ ಯುವಪೀಳಿಗೆಯ ಅಸಹನೆಯನ್ನು ಸೂಚಿಸುತ್ತದೆ. ಅಂತಹ ಆಚರಣೆಗಳ ಬಗೆಗಿನ ಚರ್ಚೆಯು
ಮಹಿಳೆಯರನ್ನು ಸಮಾಜ ಸುಧಾರಣೆಯ ವಸ್ತುಗಳಾಗಿ ಚಿತ್ರಿಸುತ್ತದೆ ಹಾಗೂ ಮಹಿಳಾ ಪ್ರಶ್ನೆಗಳನ್ನು
ಪಠ್ಯದ ಕೇಂದ್ರ ವಸ್ತುವನ್ನಾಗಿಸುತ್ತದೆ. ಆದರೆ ಚರ್ಚೆಯ ಎರಡೂ ಬದಿಯಲ್ಲಿರುವವರು ಪುರುಷರು ಹಾಗೂ
ಸ್ತ್ರೀ ಲೈಂಗಿಕತೆ ಮತ್ತು ಸ್ತ್ರೀತ್ವವನ್ನು
ವಿವರಿಸುವ, ಕಟ್ಟುಪಾಡುಗಳಿಗೆ ಒಳಪಡಿಸುವವರು
ಮಹಿಳೆಯರಾಗಿರದೆ ಪುರುಷರೇ ಆಗಿರುತ್ತಾರೆ. ಜಾತ್ಯಾತೀತ ಸ್ವಂತಿಕೆಯ ರಚನೆಗೆ ವಸ್ತು, ಆಧ್ಯಾತ್ಮಿಕ ಮತ್ತು ಸಾಂಸ್ಕøತಿಕ
ಸಂಪನ್ಮೂಲಗಳನ್ನು ಒದಗಿಸುತ್ತಿದ್ದುದು ಧರ್ಮವೇ ಎಂಬುದನ್ನು ಇಲ್ಲಿ ಗಮನಿಸಬೇಕು.
ಕೆ.ರಾಘವೇಂದ್ರರಾವ್‍ರವರು ಹೇಳಿರುವಂತೆ ಆಧುನಿಕ ಸನ್ನಿವೇಶದಲ್ಲಿ ಧರ್ಮವು `ಪರಲೋಕದ ದಿಕ್ಸೂಚಿಯಾಗಿ ಮಾತ್ರ ಬರಲಿಲ್ಲ, ಬದಲಿಗೆ ಇನ್ನೂ ಪ್ರಮುಖವಾಗಿ ಬದುಕಿನ ಜಾತ್ಯಾತೀತ, ಪವಿತ್ರವಲ್ಲದ ಭಾಗದ ನಿಯಂತ್ರಣದ, ಮಾರ್ಗದರ್ಶನದ
ಮತ್ತು ಉತ್ತೇಜಕ ಮೂಲವಾಗಿ ಬಂದಿತು'4. ಆಧುನಿಕತೆ ಅಥವಾ ಆಧುನಿಕತೆಯ ಕಲ್ಪನೆ,
ಒಂದು ಮುಕ್ತಸ್ಥಾನ, ಬೌದ್ಧಿಕತೆಯ ಒಂದು ಕ್ಷೇತ್ರ ಹಾಗೂ ಯಾವುದೇ ವಸ್ತು ಇರಬಹುದಾದ ಒಂದು ಅವಸ್ಥೆಯೂ
ಹೌದು5. ಇಂತಹ ಒಂದು ಸ್ಥಳಾವಕಾಶದಲ್ಲಿಯೇ ಕನ್ನಡದ ಕಾದಂಬರಿ
ಉಗಮವಾಯಿತು. ಈ ನಿರೂಪಣಾ ಪ್ರಕಾರವು, ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ
ತಮ್ಮ ಸ್ಥಾನ ಹಾಗೂ ಕಾರ್ಯಗಳನ್ನು ನಿರ್ದಿಷ್ಟಪಡಿಸಲು ಇಂಗ್ಲಿಷ್ ಶಿಕ್ಷಿತ ಮಧ್ಯಮ ವರ್ಗದವರಿಂದ
ಅಭಿವೃದ್ಧಿಪಡಿಸಲ್ಪಟ್ಟಿತು. ಹಾಗಾಗಿ ಮೊದಲ ಕನ್ನಡ ಕಾದಂಬರಿಗಳು ಒಂದು ಸಾಮಾಜಿಕ ಗುರುತನ್ನು
ಸಾಧಿಸಲು ಪ್ರಯತ್ನಿಸುವ ಈ ತ್ರಿಶಂಕು ಮೇಲ್ವರ್ಗದವರ ಕತೆಗಳನ್ನು ನಿರೂಪಿಸಿರುವುದರಲ್ಲಿ
ಅಚ್ಚರಿಯೇನಿಲ್ಲ.
ಸಾಮಾಜಿಕ ಗುರುತಿನ
ಪ್ರಶ್ನೆಯು ಒಂದು ಸಮುದಾಯದ ಸಮಗ್ರ ಗುರುತಿನಿಂದಲೇ ಉದ್ಭವಿಸಿದೆ. ಕನ್ನಡದ ಮೊದಲ ಸಾಮಾಜಿಕ
ಕಾದಂಬರಿಗಳ ಚರಿತ್ರೆಯನ್ನು ಅವಲೋಕಿಸಿದಲ್ಲಿ, ಅವುಗಳ ಲೇಖಕರು
ಸಾರಸ್ವತ ಬ್ರಾಹ್ಮಣರಾಗಿದ್ದರು ಎನ್ನುವುದು ಒಂದು ಗಮನಿಸಬೇಕಾದ ಅಂಶ. ಕೆಲವು ಲೇಖಕರ ಹಾಗೂ
ಅನುವಾದಕರ ಹೆಸರುಗಳನ್ನು- ಬೋಳಾರ ಬಾಬುರಾವ್, ಅಣ್ಣಾಜಿರಾವ್,
ಬೆನಗಲ್ ರಾಮರಾವ್, ಹಟ್ಟಿಂಗಡಿ ನಾರಾಯಣರಾವ್, ಪಂಜೆ ಮಂಗೇಶರಾವ್-
ಗಮನಿಸಿದಲ್ಲಿ ಅದು ವೇದ್ಯವಾಗುತ್ತದೆ. ಬಹುಪಾಲು ಈ ಎಲ್ಲ ಲೇಖಕರೂ ಒಂದೇ ಜಿಲ್ಲೆಯಿಂದ ಹಾಗೂ ಒಂದೇ
ಸಮುದಾಯದಿಂದ ಬಂದವರಾಗಿದ್ದಾರೆ. ಇವರ ಮತ್ತೊಂದು ವಿಶೇಷತೆಯೆಂದರೆ, ಈ ಎಲ್ಲ ಲೇಖಕರೂ ಸಮಾಜ ಸುಧಾರಕರಾಗಿದ್ದವರು.
ಕರ್ನಾಟಕದ ಈಗಿನ
ಮಂಗಳೂರು ಮತ್ತು ಉಡುಪಿ ಜಿಲ್ಲೆಗಳು (ಆಗಿನ ಸೌತ್ ಕೆನರಾ) 1799ರಲ್ಲಿ ಟಿಪ್ಪುವಿನ ಪತನದ ನಂತರ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿ ನೇರ
ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ಮೊದಲ ಜಿಲ್ಲೆಗಳಾಗಿದ್ದುವು. ಈ ಪ್ರದೇಶಗಳಲ್ಲಿ 1834ರಲ್ಲಿಯೇ ಬೆಸೆಲ್ ಮಿಶನ್ ಶಿಕ್ಷಣ, ಧರ್ಮ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತನ್ನ ಚಟುವಟಿಕೆ ಪ್ರಾರಂಭಿಸಿತು.
ಮೊದಲನೆಯ ವಿಶ್ವಯುದ್ಧದ ಹೊತ್ತಿಗೆ ಈ ಮಿಶನ್ ಭಾರತಕ್ಕೆ ನೂರಕ್ಕೂ ಹೆಚ್ಚು ಕ್ರೈಸ್ತ
ಮಿಶನರಿಗಳನ್ನು ಕಳುಹಿಸಿತ್ತು ಹಾಗೂ ಅದರಲ್ಲಿ ಅರ್ಧಕ್ಕೂ ಹೆಚ್ಚಿನವರು ಭಾಷೆ, ಸಾಹಿತ್ಯ ಮತ್ತು ಶಿಕ್ಷಣ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಂಗ್ಲಿಷ್
ಶಿಕ್ಷಣ ಪಡೆಯುವವರಲ್ಲಿ ಸಾರಸ್ವತರು ಮೊದಲಿಗರಾಗಿದ್ದರು ಹಾಗೂ ಆ ಶಿಕ್ಷಣದಿಂದಾಗಿ ದೊರಕಿದ
ಅವಕಾಶಗಳನ್ನು ತಮ್ಮದಾಗಿಸಿಕೊಂಡರು. ಮೂಲತಃ ಅವರು ಕೆಳದಿಯ ಅವಧಿಯಲ್ಲಿ ಕರಣಿಕ6ರಾಗಿದ್ದವರು ಹಾಗೂ ಹತ್ತೊಂಬತ್ತನೆಯ ಶತಮಾನದಲ್ಲಿ ವ್ಯಾಪಾರಿಗಳಾಗಿದ್ದರು.
ಬ್ರಿಟಿಷ್ ದಾಖಲೆಗಳಲ್ಲಿ ಸಾರಸ್ವತ ಬ್ರಾಹ್ಮಣರನ್ನು ಅವರ ಹೊಂದಾಣಿಕೆಗೆ, ವ್ಯವಹಾರ ಚತುರತೆಗೆ ಹಾಗೂ ಭವಿಷ್ಯದೆಡೆಗಿನ ದೃಷ್ಟಿಕೋನಕ್ಕೆ ಪ್ರಶಂಸಿಸಲಾಗಿದೆ.
ಮದ್ರಾಸ್ ಜಿಲ್ಲೆಯ ಗ್ಯಸೆಟಿಯರ್‍ನಲ್ಲಿ ಮತ್ತು ಮದ್ರಾಸ್ ಜಿಲ್ಲೆಯ ಕೈಪಿಡಿಗಳಲ್ಲಿ ಅವರ ಬಗೆಗಿನ
ಅತ್ಯಂತ ಹೊಗಳಿಕೆಯ ಟಿಪ್ಪಣಿಗಳನ್ನು ಕಾಣುತ್ತೇವೆ. ಈ ಮೂಲಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ
ಮೇಲ್‍ಸ್ತರದ ಅಧಿಕಾರಿವರ್ಗದಲ್ಲಿನ ಅವರ ಇರುವಿಕೆಯ ಅನುಮೋದನೆಯನ್ನೂ ಕಾಣುತ್ತೇವೆ. ಅವರು ಸಕ್ರಿಯ
ಹಾಗೂ ಪ್ರಗತಿಪರ ವರ್ಗದವರಾಗಿದ್ದು ಅವರಲ್ಲಿ ಬಹಳಷ್ಟು ಜನರು ಒಂದು ನಿರ್ದಿಷ್ಟ ಬದುಕಿನ ರೀತಿಗೆ
ಯಾವುದೇ ಮೌಲ್ಯ ಅಥವಾ ಬಂಧನವನ್ನು ಇರಿಸಿಕೊಂಡಿರಲಿಲ್ಲ7. ತಮ್ಮ ಅಕ್ಷರಜ್ಞಾನ ಹಾಗೂ ಸಾರ್ವಜನಿಕ ಬದುಕಿನ ಸುಲಭ ಲಭ್ಯತೆಯಿಂದಾಗಿ ಸಾರಸ್ವತ
ಸಮುದಾಯ ಸಿಕ್ಕ ಸೀಮಿತ ಅವಕಾಶಗಳನ್ನೇ ತಮ್ಮದಾಗಿಸಿಕೊಳ್ಳಲು ಸೂಕ್ತ ಸ್ಥಾನದಲ್ಲಿದ್ದು ಹೊಸ
ಪರಿಕಲ್ಪನೆಗಳನ್ನು ಹಾಗೂ ತಂತ್ರಗಳನ್ನು ಕಲಿತು ಸಾಮಾಜಿಕವಾಗಿ ಮುನ್ನಡೆದರು. ಆದರೆ ಇದರಿಂದಾಗಿ
ಸಮುದಾಯದೊಳಗೂ ಹಲವಾರು ಸಮಸ್ಯೆಗಳು ತಲೆದೋರಿದುವು. ಶಿಕ್ಷಿತ ಸಾರಸ್ವತರು ಎರಡು ಜಗತ್ತಿನೊಳಗೆ
ಸಿಲುಕಿಕೊಂಡು, ಅವರು ತಮ್ಮ ಹೊಸ ವಾಸ್ತವತೆಗೆ ಹೊಂದಿಕೊಳ್ಳುವ
ಪ್ರಯತ್ನದಲ್ಲಿ ಹೊಸ ರೂಪ ಪಡೆಯಲು ಯತ್ನಿಸಿದರು. ತಮ್ಮ ಸಮುದಾಯ/ಸಾಮಾಜಿಕ ಗುರುತನ್ನು
ಉಳಿಸಿಕೊಳ್ಳಲೂ ಯತ್ನಿಸಿದರು. ಅವರು ಧಾರ್ಮಿಕ ಸಿದ್ಧಾಂತಗಳನ್ನಲ್ಲ, ಆದರೆ ಅವುಗಳ ಆಚರಣೆಗಳನ್ನು ವಿರೋಧಿಸಲು ಆರಂಭಿಸಿದರು. ಇದರಿಂದಾಗಿ ಗಾಭರಿಗೊಂಡ
ಅವರ ಧಾರ್ಮಿಕ ಗುರುಗಳಾದ ಪಾಂಡುರಂಗಸ್ವಾಮಿಯವರು ದಿನನಿತ್ಯ ಧಾರ್ಮಿಕ ಆಚರಣೆ ಮತ್ತು
ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಕಟ್ಟಳೆಯನ್ನು ತರಲು ಯತ್ನಿಸಿದರು. ಇದರಿಂದಾಗಿ
ನಗರದ ಯುವಕರ ಧರ್ಮದ ಉಲ್ಲಂಘನೆಯನ್ನು ಕಂಡ ಗುರುಗಳ ನಡುವೆ ಹಾಗೂ ಆದುನಿಕ ಸನ್ನಿವೇಶದಲ್ಲಿ ಈ
ಧಾರ್ಮಿಕ ಆಚರಣೆಗಳು ಅರ್ಥಹೀನವೆಂದು ಕಂಡ ಸಮಾಜಸುಧಾರಕ ಯುವ ಸಮುದಾಯದ ನಡುವೆ ತಾತ್ವಿಕ ಹಾಗೂ
ಧಾರ್ಮಿಕ ಸಂಘರ್ಷಗಳುಂಟಾದುವು. ಈ ಸಂಘರ್ಷವು ಸಮುದ್ರಯಾನ, ವಿಧವಾ ಮರುವಿವಾಹ, ಮಹಿಳೆಯರಿಗೆ ಶಿಕ್ಷಣ, ವಿಧವೆಯರ ತಲೆಬೋಳಿಸುವುದರಂತಹ ಮುಂತಾದ ವಿಷಯಗಳ ಬಗೆಗೆ ತೀವ್ರ ಚರ್ಚೆಗಳಿಗೆ
ಕಾರಣವಾಯಿತು. ಫ್ರಾಂಕ್ ಕೊಲಾನ್‍ರವರು ಇದರ ಬಗ್ಗೆ ಈ ರೀತಿ ಹೇಳಿದ್ದಾರೆ:
ಸ್ವಾಮೀಜಿಯನ್ನೊಳಗೊಂಡಂತೆ
ಎಲ್ಲ ಸಾರಸ್ವತರಿಗೆ ಬದಲಾದ ಪರಿಸ್ಥಿತಿಗಳ ಅನುಭವವಾಗಿತ್ತು ಹಾಗೂ ಆ ಸನ್ನಿವೇಶಕ್ಕೆ ತಕ್ಕಂತೆ
ದೊರಕುವ ಅವಕಾಶಗಳಿಗೆ ಹಾಗೂ ಅವಶ್ಯಕತೆಗಳಿಗೆ ಹೊಂದಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದರು ಎಂದರೆ
ತಪ್ಪಾಗಲಾರದು. ಸ್ವಾಮೀಜಿಯವರ ಸುಧಾರಣಾ ಕಾರ್ಯಗಳು ಈ ಹಿಂದಿನ ಶತಮಾನಕ್ಕಿಂತ ವಿಭಿನ್ನವಾಗಿಯೇ
ಇದ್ದವು. ಈ ಸುಧಾರಣೆಗಳು ಹೇಗೆ ವಿಭಿನ್ನವಾಗಿದ್ದುವೆಂದರೆ, ಅವುಗಳ ಮಾನಕ ಮತ್ತು ಆದ್ಯತೆಗಳೇ ಬೇರೆಯಾಗಿದ್ದುವು. ಅದೇ ರೀತಿ ಸುಧಾರಕರೂ ಸಹ
ಪಾಶ್ಚಿಮಾತ್ಯ ಅನುಭವದ ಮೂಸೆಯಿಂದ ಮೂಡಿಬಂದ ಒಂದು ಅಮೂರ್ತ ಮಾದರಿಯನ್ನು
ಗುರಿಯಾಗಿಟ್ಟುಕೊಂಡಿದ್ದರು8.
ಈ ಪ್ರದೇಶದಿಂದ
ಪ್ರಕಟವಾದ ಕನ್ನಡ ಕಾದಂಬರಿಯು ಇದೇ ಸಂಘರ್ಷವನ್ನು ಪ್ರತಿಫಲಿಸುತ್ತದೆ ಹಾಗೂ ತೀರ್ಮಾನದ
ಶರತ್ತುಗಳನ್ನು ಅದು ನಿರೀಕ್ಷಿಸುತ್ತದೆ. ಅವು ಸಾಮಾಜಿಕ ವಾಸ್ತವತೆಯನ್ನು ಬರೇ
ಪ್ರತಿಫಲಿಸುವದಷ್ಟೇ ಅಲ್ಲ ಅದನ್ನು ರಚಿಸುತ್ತವೆ, ಚರ್ಚೆಗೆ
ವೇದಿಕೆಯನ್ನು ಸಿದ್ಧಪಡಿಸುತ್ತವೆ ಹಾಗೂ ಇದುವರೆಗೆ ನಾನು ವಿವರಿಸಿರುವ ಚರಿತ್ರೆಯನ್ನೇ
ದಾಖಲಿಸುತ್ತವೆ. ಅವುಗಳಲ್ಲಿ ಒಂದು ಕನ್ನಡದ ಮೊಟ್ಟಮೊದಲ ಸಾಮಾಜಿಕ ಕಾದಂಬರಿ ಎಂದು
ಪರಿಗಣಿಸಲಾಗಿರುವ ಗುಲ್ವಾಡಿ ವೆಂಕಟರಾವ್‍ರವರ ಇಂದಿರಾ ಬಾಯಿ (1899).
ಮೊದಲಿಗೆ,
ಕಾದಂಬರಿಯ ಸಂಕ್ಷಿಪ್ತ ಸಾರಾಂಶ: ಕಾದಂಬರಿಯ ಕಥಾನಾಯಕಿ
ಇಂದಿರಾಬಾಯಿ, ಅಂಬಾಬಾಯಿ ಮತ್ತು ಭೀಮರಾವ್‍ರವರ ಮಗಳು. ಒಬ್ಬ
ಸಾಧಾರಣ ಗುಮಾಸ್ತನಾಗಿದ್ದ ಭೀಮರಾವ್ ತನ್ನ ಚತುರ ಪತ್ನಿಯ ಸಲಹೆಗಳಿಂದ ಒಬ್ಬ ಪ್ರಬಲ
ವ್ಯಾಪಾರಸ್ಥನಾಗಿದ್ದ. ತನ್ನ ಪತ್ನಿಯ ಪ್ರಚೋದನೆಯಿಂದ ತನ್ನದೇ ಸೇವಕನಾಗಿದ್ದ ಸುಂದರರಾವ್‍ಗೆ
ವಿಷವುಣಿಸುತ್ತಾನೆ. ತನ್ನ ಮಗಳನ್ನು ರೋಗಿಷ್ಠನೊಬ್ಬನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಆತ
ಇಂದಿರಾಳೊಂದಿಗೆ ಒಂದು ದಿನವೂ ಕಳೆಯದೆ ಮದುವೆಯಾದ ಕೂಡಲೇ ಸತ್ತುಹೋಗುತ್ತಾನೆ. ಆ ಯುವವಿಧವೆಯ
ಮೇಲೆ ಕಟ್ಟುನಿಟ್ಟಾದ ಆಚರಣೆ ಧಾರ್ಮಿಕ ನೇಮಗಳನ್ನು ಬಲವಂತವಾಗಿ ಹೇರಲಾಗುತ್ತದೆ. ಆದರೆ ಇಂದಿರಾ
ತನ್ನ ತಲೆ ಬೋಳಿಸಿಕೊಳ್ಳುವುದನ್ನು ವಿರೋಧಿಸುತ್ತಾಳೆ ಹಾಗೂ ತನ್ನ ತಂದೆ ತಾಯಿ ಬೇಡವೆಂದರೂ
ಪುಸ್ತಕಗಳನ್ನು ಓದುವುದನ್ನು ಮುಂದುವರೆಸುತ್ತಾಳೆ. ಒಂದು ಸಂದರ್ಭದಲ್ಲಿ ಸಂತಮಂಡಲಿ(ಭಕ್ತಿ
ಗೀತೆಗಳನ್ನು ಹಾಡುವ ತಂಡ)ಯೊಂದು ಭೀಮರಾವ್‍ರವರ ಮನೆಗೆ ಆಗಮಿಸುತ್ತದೆ. ಆ ಸಂತಮಂಡಲಿಯ ಮುಖಂಡ
ಇಂದಿರಾಳನ್ನು ತನ್ನ ಬಲೆಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಆಕೆ ಆತನ ಪ್ರಯತ್ನಗಳನ್ನು
ವಿರೋಧಿಸುತ್ತಾಳೆ. ಆಕೆಯ ತಂದೆ ತಾಯಿಯರು ಸಂತರ ಸೇವೆ ಹೇಗೆ ಮಾಡಬೇಕೆಂಬುದನ್ನು ಇತರ
ವಿಧವೆಯರನ್ನು ನೋಡಿ ಕಲಿಯುವುಂತೆ ತಿಳಿ ಹೇಳುತ್ತಾರೆ. ಆದರೆ ಮನೆಯಲ್ಲಿನ ಅವರ ಹಿಂಸೆ
ನಿಲ್ಲುವುದೇ ಇಲ್ಲ. ಕೊನೆಗೆ ಆಕೆ ಮನೆಬಿಟ್ಟು ಓಡಿಹೋಗಿ ಸಮಾಜ ಸುಧಾರಕಿ, ವಕೀಲಳಾದ ಅಮೃತಾರಾವ್‍ರವರ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ. ಆಕೆಯ ವಿದ್ಯಾಭ್ಯಾಸ
ಮುಂದುವರಿಸಲು ಅಮೃತಾರಾವ್ ಪ್ರೋತ್ಸಾಹಿಸುತ್ತಾರೆ. ಆಕೆ ಮಹಾರಾಷ್ಟ್ರದಲ್ಲಿನ ಸತಾರಾಗೆ ಹೋಗಿ
ಸಂಸ್ಕøತ, ಮರಾಠಿ ಮತ್ತು
ಇಂಗ್ಲಿಷಿನಲ್ಲಿ ಪದವಿ ಪಡೆಯುತ್ತಾಳೆ. ಆಕೆಯ ಮಾರ್ಗದರ್ಶಿ, ಇಂದಿರಾಳ ತಂದೆ ಕೊಂದ ಸೇವಕ ಸುಂದರರಾವ್‍ನ ಮಗ ಭಾಸ್ಕರರಾವ್‍ನಿಗೂ ಆಕೆ ಸಹಾಯ
ಮಾಡಿರುತ್ತಾಳೆ. ಭಾಸ್ಕರರಾವ್ ಇಂಗ್ಲಿಂಡಿನಿಂದ ಕಮಲಾಪುರದ ಮೊಟ್ಟಮೊದಲ ಸ್ಥಳೀಯ ಜಿಲ್ಲಾ
ಕಲೆಕ್ಟರ್ ಆಗಿ ಹಿಂದಿರುಗುತ್ತಾನೆ. ಅಮೃತಾರಾವ್‍ರವರ ನಿರ್ದೇಶನದಂತೆ ಇಂದಿರಾ ಭಾಸ್ಕರರಾವ್‍ನನ್ನು
ಮದುವೆಯಾಗುತ್ತಾಳೆ. ತನ್ನ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ವಕೀಲರಿಗೆ ಹಾಗೂ ಅಧಿಕಾರಿಗಳಿಗೆ
ಲಂಚ ನೀಡಿ ಭೀಮರಾವ್ ಗೆಲ್ಲುತ್ತಾನೆ ಆದರೆ ಧಾರ್ಮಿಕ ನಿಯಮಗಳ ಉಲ್ಲಂಘನೆಗಾಗಿ ಅಮೃತಾರಾವ್ ಮತ್ತು
ಇತರರನ್ನು ಶಿಕ್ಷಿಸುವಲ್ಲಿ ಸೋಲುತ್ತಾನೆ. ಕೊನೆಗೆ ಭೀಮ್‍ರಾವ್ ತನ್ನ ಧರ್ಮವೀರಚಕ್ರ 9 ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸುತ್ತಾನೆ. ಹಾಗೂ ಭಾಸ್ಕರ ಮತ್ತು
ಇಂದಿರಾಳನ್ನು ಭೇಟಿಯಾಗಲು ಸಮ್ಮತಿಸುತ್ತಾನೆ. ಇಂದಿರಾಳ ಶಿಕ್ಷಣ ಮತ್ತು ತನ್ನ ತಂದೆಯ ಸೇವಕನ
ಮಗನೊಂದಿಗಿನ ಮದುವೆ, ಲಿಂಗಭೇದÀ ನ್ಯಾಯ ಹಾಗೂ ಸಾಮಾಜಿಕ ನ್ಯಾಯದ ವಿಷಯಗಳನ್ನು ಒಟ್ಟಿಗೆ ತರುತ್ತವೆ ಹಾಗೂ
ಧರ್ಮರಕ್ಷಕರ ಹಿಪಾಕ್ರಸಿಯನ್ನು ಬಯಲಿಗೆಳೆಯುತ್ತದೆ.
ಇಂದಿರಾಬಾಯಿ
ಭ್ರಷ್ಟ ಧಾರ್ಮಿಕ ಆಚರಣೆಗಳಷ್ಟನ್ನೇ ಅಲ್ಲದೆ ಆಧುನಿಕ ಬದುಕಿನ ರೀತಿಯನ್ನೂ ಲೇವಡಿ ಮಾಡುತ್ತದೆ.
ಕೆಟ್ಟ ಆಚರಣೆಗಳಿಂದ ಒಳ್ಳೆಯ ಆಚರಣೆಗಳನ್ನು ಬೇರ್ಪಡಿಸಲು ವೆಂಕಟರಾವ್‍ರವರು ಬಳಸುವ ಸೈದ್ಧಾಂತಿಕ
ಜರಡಿ ನೈತಿಕ ಮತ್ತು ವಿವೇಚನೆಯದ್ದು. ಪ್ರಮುಖ ಪಠ್ಯದ ಪ್ರಾರಂಭದ ಮುಂಚಿನ ಪುಟಗಳಲ್ಲೇ ಇದು
ಸ್ಫುಟವಾಗಿದೆ. ಮುಖಪುಟದ ಮೇಲೆ ಮುದ್ರಿತವಾಗಿರುವ ಎರಡು ಪದ್ಯಗಳು ಹೀಗಿವೆ: "ಬೆಟ್ಟದ ಮೇಲೆ
ಕಟ್ಟಿದ ಅಥವಾ ನೀರಿನಿಂದಾವೃತವಾದ ಅಥವಾ ಕಣ್‍ಕಟ್ಟಿನಿಂದ ಅಥವಾ ಯಂತ್ರದಿಂದ ಕಟ್ಟಿದ
ಕೋಟೆಕೊತ್ತಳಗಳು ನಮ್ಮನ್ನು ರಕ್ಷಿಸಬಲ್ಲವೆ? ಸತ್ಯವೇ ನಮ್ಮನ್ನು
ನಿರಂತರವಾಗಿ ರಕ್ಷಿಸುತ್ತದೆ". ಮುನ್ನುಡಿಯಲ್ಲಿ ಅವರು ಹೀಗೆ ಹೇಳಿದ್ದಾರೆ:
ಈ ಪುಸ್ತಕದ
ಸಾರ್ಥಕತೆ ಏನೆಂದು ಓದುಗರು ಕೇಳಬಹುದು. ಸತ್ಯ ಮತ್ತು ಹೃದಯದ ಪರಿಶುದ್ಧತೆ ಈ ಜಗತ್ತಿನಲ್ಲಿಯೂ
ಹಾಗೂ ಮುಂದಿನ ಜಗತ್ತಿನಲ್ಲಿಯೂ ನಿಲ್ಲುವ ಸಾರ್ಥಕ್ಯಗಳಾಗಿವೆ. ಈ ಪರಿಕಲ್ಪನೆಯನ್ನು ಎತ್ತಿ
ಹಿಡಿಯುವುದೇ ಈ ಕೃತಿಯ ಉದ್ದೇಶ10.
ಹೊಸ ಕಾದಂಬರಿ
ಪ್ರಕಾರದ ವಾಸ್ತವತೆಯ ಪ್ರಶ್ನೆಗಳ ಬಗ್ಗೆ ಹಾಗೂ ಇತರ ಔಪಚಾರಿಕ ವಿಷಯಗಳ ಬಗ್ಗೆ ಗುಲ್ವಾಡಿ
ವೆಂಕಟರಾವ್‍ರವರು ಆತಂಕಗೊಂಡಂತೆ ತೋರುವುದಿಲ್ಲ. ಅವರ ಕತೆಯನ್ನು ಅವರು ಇಂದಿರಾಬಾಯಿಯ
ಜೀವನಚರಿತ್ರೆ ಎಂದು ಕರೆಯುತ್ತಾರೆ ಹಾಗೂ ತಾವು ಉತ್ತಮ ಕಲಾಪ್ರಕಾರದ ಅಭ್ಯಾಸಿಗರು ಅಲ್ಲವೆಂದೂ
ಹೇಳುತ್ತಾರೆ. ತನ್ನ `ದೌರ್ಭಾಗ್ಯದ ಸೋದರಿಯರ' ಬದುಕಿನ ಮೇಲೆ ಪರಿಣಾಮ ಬೀರುವ ಧಾರ್ಮಿಕ ಆಚಾರವಿಚಾರಗಳನ್ನು ನಿರೂಪಿಸುವುದೇ ಅವರ
ಮುಖ್ಯ ಉದ್ದೇಶವಾಗಿ ತೋರುತ್ತದೆ. ಅವರು ತಮ್ಮ ಪಠ್ಯದಲ್ಲಿ ಅವರು ಸಾರಸ್ವತ ಸಮುದಾಯವನ್ನು ಹಾಗೂ
ಆಧುನಿಕತೆಯ ಕೆಲವು ಆಚಾರ ವಿಚಾರಗಳನ್ನೂ ಸಹ `ಕಟ್ಟುನಿಟ್ಟಾದ ನೈತಿಕ ಪರಾಮರ್ಶನೆಗೆ' ಒಡ್ಡುತ್ತಾರೆ11. ಅವರ ಪ್ರಕಾರ ಸತ್ಯ ಮತ್ತು ಪ್ರಾಮಾಣಿಕತೆ
ಬದುಕಿನ ಅವಿಭಾಜ್ಯ ಅಂಗಗಳು ಹಾಗೂ ಅವುಗಳನ್ನು ಗೌರವಿಸಬೇಕು.
ಇಂದಿರಾಬಾಯಿ ತನ್ನ
ಗುರಿಯನ್ನು ತಲುಪಲು ಹಲವಾರು ಪಠ್ಯ ಕಾರ್ಯತಂತ್ರಗಳನ್ನು ಅನುಸರಿಸುತ್ತದೆ. ಅವುಗಳಲ್ಲಿ ಒಂದು
ವಿಡಂಬನೆಯ ವಿಧಾನವಾಗಿದ್ದು ಇದರಿಂದ ಗುಲ್ವಾಡಿ ವೆಂಕಟರಾವ್‍ರವರಿಗೆ ಸಾಂಪ್ರದಾಯಿಕ ಆಚಾರ
ವಿಚಾರಗಳನ್ನು, ಧೋರಣೆಗಳನ್ನು ಹಾಗೂ ಸಾಮಾಜಿಕ ಸಂಸ್ಥೆಗಳನ್ನು
ಟೀಕಿಸಲು ಸಾಧ್ಯವಾಗಿರುವುದಲ್ಲದೆ ನಿರೂಪಕನ ಧ್ವನಿಯು ಕತೆಯಲ್ಲಿನ ಇತರ ಧ್ವನಿಗಳನ್ನು ಆವರಿಸಿ
ಅವುಗಳಿಗೆ ಸಂವಾದಕ್ಕೆ ಆಸ್ಪದ ಕೊಡದಂತೆ ನಿಯಂತ್ರಿಸಲೂ ಅನುವು ಮಾಡಿಕೊಡುತ್ತದೆ. ತನ್ನನ್ನು ಯಾವ
ಟೀಕೆಗೂ ನಿಲುಕಿಸಿಕೊಳ್ಳದಂತೆ ಮೇಲಿನ ಸ್ಥಾನದಲ್ಲಿರಿಸಿಕೊಂಡು ಅದು ಅವರ ನಡತೆ ಮತ್ತು
ಕಾರ್ಯಗಳನ್ನು ಟೀಕಿಸಬಲ್ಲುದು. ಅಲ್ಲದೆ, ವಿಡಂಬನೆಯಿಂದೊಡಗೂಡಿದ ನಿರೂಪಕನ ಧ್ವನಿಯು
ಲೇಖಕನ ದೃಷ್ಟಿಕೋನಕ್ಕೆ ಇಂಬು ಕೊಡುತ್ತದೆ- ಭಾಷೆಯ ಸಾಧ್ಯತೆಗಳನ್ನು ಪ್ರಶಂಸಿಸುವ ಮಟ್ಟಕ್ಕೆ
ಪಠ್ಯದ ಸ್ತರಗಳು ರಚಿತವಾಗಬಹುದೆಂಬ ಪರಿಕಲ್ಪನೆ. ಲೇಖಕರು ವಿವಿದಾರ್ಥದ ಪದಪ್ರಯೋಗ, ಗಾದೆಗಳು, ಪುರಾಣದ ಉಲ್ಲೇಖಗಳು, ಜನಪದ ಹಾಡುಗಳು ಹಾಗೂ ಬಳಕೆಯಲ್ಲಿರುವ ಜನಪ್ರಿಯ ಸಾಂಸ್ಕøತಿಕ ರೂಪಗಳಿಂದ ವಿವಿಧ ರೀತಿಯ ನಿರೂಪಣಾ ವಿಧಾನಗಳನ್ನು ಬಳಸಿದ್ದಾರೆ.
ಇಂದಿರಾಬಾಯಿಯ ಸಂದರ್ಭದಲ್ಲಿ ವಾಸ್ತವವಾದವನ್ನು ಒಂದು ಸಾಹಿತ್ಯಕ ಕಾರ್ಯತಂತ್ರವೆಂದು
ಪರಿಗಣಿಸಬೇಕೇ ಹೊರತು ಅದು ವಾಸ್ತವ ಜಗತ್ತನ್ನು ಚಿತ್ರಿಸುತ್ತಿದೆಯೆಂದಲ್ಲ. ಈ ವಿಧಾನದ
ಪರಿಮಿತಿಗಳ ಬಗೆಗೆ ಲೇಖಕರು ಪ್ರಜ್ಞಾಪೂರ್ವಕವಾಗಿದ್ದಾರೆ. ಆದರೆ ತಮ್ಮ ಪರಿಕಲ್ಪನೆಗೆ ಒಂದು ರೂಪ
ಕೊಡಲು ಅದನ್ನು ಕೇಂದ್ರಬಿಂದುವಾಗಿ ಬಳಸಿದ್ದಾರೆ.
ಕಾದಂಬರಿಯ
ಉಪಶೀರ್ಷಿಕೆ ಸತ್ಯ ಮತ್ತು ಸಚ್ಚಾರಿತ್ರ್ಯದ ವಿಜಯ ಎಂಬುದು ಅದರ ಮೂಲಭೂತ ನೈತಿಕ ಉದ್ದೇಶವನ್ನು
ಸೂಚಿಸುತ್ತದೆ. ಕಾದಂಬರಿಯಲ್ಲಿನ ಪಾತ್ರಗಳು ಒಳಿತು ಅಥವಾ ಕೆಡುಕನ್ನು ಪ್ರತಿನಿಧಿಸುವ `ಚಪ್ಪಟೆ' ಪಾತ್ರಗಳಾಗಿವೆ. ಕಾದಂಬರಿಕಾರರು ಯಾವ
ಮೌಲ್ಯಗಳಿಗೆ ಅಂತಿಮವಾಗಿ ಜಯ ಲಭಿಸಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಂಡು ಬಿಟ್ಟಿದ್ದಾರೆ.
ಪ್ರಮುಖ ಪಾತ್ರಗಳಲ್ಲಿ ಸಾಂಪ್ರದಾಯಕತೆಯನ್ನು ಪ್ರತಿನಿಧಿಸುವ ಹಾಗೂ ಮೊದಲಿನಿಂದಲೇ ಕೆಟ್ಟವರೆಂದು
ತೋರಿಸಿಕೊಳ್ಳುತ್ತಾ ಬಂದ ಅಂಬಾಬಾಯಿ ಮತ್ತು ಭೀಮರಾವ್‍ರವರು ತಮ್ಮ ವಿಧೇಯ ಮತ್ತು
ಪ್ರಾಮಾಣಿಕ ಸೇವಕನಿಗೆ ವಿಷವುಣಿಸಿ
ಸಾಯಿಸುತ್ತಾರೆ. ಶಿಕ್ಷಿತ ಸಾರಸ್ವತರನ್ನು ಸಾಮಾನ್ಯವಾಗಿ ಒಳ್ಳೆಯ ಪಾತ್ರಗಳಾಗಿ ತೋರಿಸಲಾಗಿದೆ.
ಕೆಲವು ಶಿಕ್ಷಿತ ಬಿ.ಎ. ಮತ್ತು ಎಂ.ಎ.ಗಳನ್ನು ತಮ್ಮ ಮಾತುಗಳಲ್ಲಿ ಅನಾವಶ್ಯಕವಾಗಿ ಇಂಗ್ಲಿಷ್
ಪದಗಳನ್ನು ಬಳಸುವುದನ್ನು ಹಾಗೂ ಅವರು ಸದಾ ಪಾರ್ಟಿ, ಮೀಟಿಂಗ್‍ಗಳಲ್ಲಿ ಬ್ಯುಸಿಯಾಗಿರುವಂತೆ ತೋರಿಸಲಾಗಿದೆ. ಅಲ್ಲದೆ, ಗುಲ್ವಾಡಿಯವರು ತಮ್ಮ ಕಾದಂಬರಿಯಲ್ಲಿ ಕಾನೂನಿನ ಯಾವುದೇ ಗಂಧವಿಲ್ಲದ ಫೂಟ್‍ಲಾಯರ್‍ಗಳು
ಮತ್ತು ಪ್ಲೀಡರ್‍ಗಳನ್ನು ವಿವರಿಸುತ್ತಾರೆ. ಅವರು
ಕಾನೂನಿನ ಪುಸ್ತಕಗಳ ಬದಲಿಗೆ ಕೆಲವು ಹಳೆಯ ಪುಸ್ತಕ ಅಥವಾ ಗೆಜೆಟಿಯರ್‍ಗಳನ್ನು `ನಾರ್ಟನ್ಸ್ ಲಾ ಆಫ್ ಎವಿಡೆನ್ಸ್' ಅಥವಾ `ಮೇನ್ ಕಾಮೆಂಟರೀಸ್' ಎಂದು ಕಟ್ಟು ಹಾಕಿಸಿ ತಮ್ಮೊಂದಿಗೆ
ಕೊಂಡೊಯ್ಯುತ್ತಿರುತ್ತಾರೆ. ಗುಲ್ವಾಡಿಯವರ ಪ್ರಕಾರ ಸಾಂಪ್ರದಾಯಕತೆ ಮತ್ತು ಆಧುನಿಕತೆ ಎರಡರಲ್ಲೂ
ಒಳಿತು ಮತ್ತು ಕೆಡುಕಿನ ಅಂಶಗಳಿವೆ; ಆದರೆ ಆಧುನಿಕ ಜಗತ್ತು ಅಮೃತಾರಾವ್‍ರವರಂತಹ
ಪ್ರಗತಿಪರರಿಗೆ ಸ್ಥಳಾವಕಾಶ ಒದಗಿಸುತ್ತದೆ. ಹಾಗಾಗಿ ಇಂಥವರ ಕೈಯಲ್ಲಿ ಸಾರಸ್ವತ ಸಮುದಾಯದ ಭವಿಷ್ಯ
ಸುರಕ್ಷಿತವಾಗಿರುತ್ತದೆ. ಏಕೆಂದರೆ ಸಾಂಪ್ರದಾಯಕತೆ ಯಾವುದೇ ಬದಲಾವಣೆಗೆ ಆಸ್ಪದ ಕೊಡುವುದಿಲ್ಲ.
ಈ ಮೊದಲೇ
ಗಮನಿಸಿರುವಂತೆ, ಗುಲ್ವಾಡಿ ವೆಂಕಟರಾವ್‍ರವರ ಪಠ್ಯ ಸಂಸ್ಕøತಿಯ ವಿವಿಧ ಮಜಲುಗಳಿಂದ ಅಂಶಗಳನ್ನು ಪಡೆದಿದೆ. ವಿವಿಧ ರೀತಿಯ ಪಠ್ಯ ಹಾಗೂ ವಿವಿಧ
ಸಂಸ್ಕøತಿ ಪ್ರಕಾರಗಳ ಸಂಘರ್ಷ ಹಾಗೂ ಅವುಗಳು ಪರಸ್ಪರ ಬೆರೆತುಕೊಳ್ಳುವುದಕ್ಕೆ
ಅವರು ಸ್ಥಳಾವಕಾಶ ಮಾಡಿಕೊಡುತ್ತಾರೆ. ಖಳನಾಯಕನ ಭಾವನೆಗಳನ್ನು ಪ್ರತಿಬಿಂಬಿಸಲು ಮಾತ್ರ
ವೆಂಕಟರಾವ್‍ರವರು ಯಕ್ಷಗಾನ ತಾಳಮದ್ದಲೆ12 ಕಲಾಪ್ರಕಾರವನ್ನು ಬಳಸುವುದಲ್ಲದೆ, ಅದು ಒಂದು ರೀತಿಯ ವಿಡಂಬನೆಯ ಪ್ರಭಾವವನ್ನೂ ನೀಡುತ್ತದೆ. ಸುಂದರರಾವ್‍ನÀನ್ನು ಕೊಂದನಂತರ, ತನಿಖೆಯ ಸಮಯದಲ್ಲಿ ಹಾಗೂ ತನ್ನ ಮೇಲಿನ ಅಪರಾಧ
ಮೊಕದ್ದಮೆಯಲ್ಲಿ ಗೆದ್ದಕೂಡಲೇ ಭೀಮರಾವ್ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮಗಳನ್ನು
ಏರ್ಪಡಿಸುತ್ತಾನೆ. ಪೋಲೀಸರು ಕೊಲೆಯ
ಸುಳುಹುಗಳನ್ನು ಅರಸುತ್ತಿರುವಾಗ ಒಮ್ಮೆ ಅಂತಹ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಆ ಪ್ರಹಸನ ವಾಲಿ ವಧಾ ಹಾಗೂ ಅದರಲ್ಲಿ ಭಾಗವತ (ಹಾಡುಗಾರ
ಹಾಗೂ ನಿರ್ದೇಶಕ) ಸ್ವತಃ ಭೀಮರಾವ್‍ರವರೇ ಆಗಿರುತ್ತಾರೆ. ರಾಮನ ಹೇಡಿ ಕೃತ್ಯದ ಹಾಡನ್ನು ಹಾಡುವಾಗ
ಆತ ಬೆವರತೊಡಗುತ್ತಾರೆ, ತೊದಲುತ್ತಾರೆ, ಕೊನೆಗೆ ಎಚ್ಚರತಪ್ಪಿ ಬೀಳುತ್ತಾರೆ. ಈ ಘಟನೆಯನ್ನು ವಿಡಂಬನೆಗಾಗಿ ರಚಿಸಲಾಗಿದೆ,
ಏಕೆಂದರೆ ಓದುಗರಿಗೆ ಕೊಲೆಗಾರ ಯಾರೆಂಬುದು
ತಿಳಿದಿರುತ್ತದೆ. ಇದರ ಜೊತೆಗೆ ಈ ಪ್ರಕಾರದ ಮನರಂಜನೆಯ ಕಲಾಪ್ರಕಾರದ ಬಗೆಗೂ ಸೂಚ್ಯವಾಗಿ ವಿವರ ನೀಡಲಾಗುತ್ತದೆ.
ಅದನ್ನು ಕೆಳಮಟ್ಟದ ಅಬ್ಬರದ ಮತ್ತು ಗಲಾಟೆಯ ಕಲಾಪ್ರಕಾರವಾಗಿ ನೋಡಲಾಗಿದೆ. ಅನೈತಿಕ
ವ್ಯವಹಾರಗಳನ್ನು ನಡೆಸುವ ಖಳನಾಯಕ ಇಂತಹ ಕಲೆಯನ್ನು ಮೆಚ್ಚುತ್ತಾನೆ. ಈ ಕಾದಂಬರಿಯು ರಚಿಸುವ
ಆಧುನಿಕ ಯತಾದೃಷ್ಟಿ ಈ ರೀತಿಯ ಮನರಂಜನೆಯನ್ನು ಬೇರೊಂದು ರೀತಿಯಲ್ಲಿಯೇ ವ್ಯಕ್ತಪಡಿಸುತ್ತದೆ ಹಾಗೂ
ಸಂಸ್ಕøತಿಯ ಬಗ್ಗೆ ಬರೆಯುವ ಮತ್ತು ಅದನ್ನು ನಿಯಂತ್ರಿಸುವ
ಕಾರ್ಯವನ್ನೂ ಮಾಡುತ್ತದೆ. ಇದನ್ನು ಇಂದಿರಾಳ ಮರುಮದುವೆಯ ಸಮಯದಲ್ಲಿ ಪ್ರದರ್ಶಿಸಿದ ಕಲೆಯೊಂದಿಗೆ
ಎದುರುಬದುರು ನಿಲ್ಲಿಸಿ ನೋಡಬಹುದು. ಅದರಲ್ಲಿ ಹೆಂಗಸರು ಸೋಬಾನೆ ಹಾಡುಗಳನ್ನು
ಹಾಡುತ್ತಿರುತ್ತಾರೆ. ಇವು ಗಂಡ ಮತ್ತು ಹೆಂಡತಿಯ ಆತ್ಮೀಯದ ಮತ್ತು ಆದರ್ಶ ಸಂಬಂಧಗಳ ಕುರಿತಾಗಿ
ನವಿರಾಗಿ ತಿಳಿಹೇಳುವ ಮದುವೆ ಹಾಡುಗಳು.
ಕಾದಂಬರಿಯಲ್ಲಿ
ವೆಂಕಟರಾವ್‍ರವರು ಪಾತ್ರಗಳ ಅಂತಸ್ತನ್ನು ಹಾಗೂ ಸಾಮಾಜಿಕ ಮೇಲುಕೀಳುಗಳನ್ನು ಗುರುತಿಸಲು ಕೊಂಕಣಿ,
ತುಳು ಮತ್ತು ಇಂಗ್ಲಿಷನ್ನು ಬಳಸುತ್ತಾರೆ. ಕೆಳಜಾತಿಯ
ಹಾಗೂ ಕೆಳಸ್ತರದ ಕೆಲಸಗಳನ್ನು ಮಾಡುವ ಪಾತ್ರಗಳು ಕೊಂಕಣಿ ಅಥವಾ ತುಳು ಮಾತನಾಡಿದರೆ ಇಂಗ್ಲಿಷ್
ಶಿಕ್ಷಿತ ಯುವಕರು ತಮ್ಮ ಕನ್ನಡದಲ್ಲಿ ಇಂಗ್ಲಿಷ್ ಪದಗಳನ್ನು ಸೇರಿಸಿ ಮಾತನಾಡುತ್ತಾರೆ. ಕೆಲವು
ಸಾಹಿತ್ಯ ವಿಮರ್ಶಕರು ಇದನ್ನು ವಾಸ್ತವತೆಯೆಂದು ಕರೆದಿದ್ದಾರೆ. ಕೆಳಜಾತಿಯವರು ತಮ್ಮದೇ
ಭಾಷೆಯಲ್ಲಿ ಮಾತನಾಡುವಂತೆ ತೋರಿಸಿರುವದರಿಂದ ವೆಂಕಟರಾವ್‍ರವರು ಕನ್ನಡ ಕಾದಂಬರಿಯಲ್ಲಿ ವಾಸ್ತವತೆಯ ಚಿತ್ರಣದ
ಸಂಪ್ರದಾಯವನ್ನು ಪ್ರಾರಂಭಿಸಿದ್ದಾರೆ ಎಂದು ಅವರು ವಾದಮಾಡುತ್ತಾರೆ. ಆದರೆ ವಾಸ್ತವತೆಯ
ದೃಷ್ಟಿಯಿಂದ ಈ ಬಹುಭಾಷಿಕತೆಯನ್ನು ನೋಡುವುದೆಂದರೆ ಲೇಖಕರ ಕೆಲವು ಮೂಲಭೂತ ಉದ್ದೇಶಗಳನ್ನೇ
ಕಡೆಗಣಿಸಿದಂತೆ.
ಯಾರು ಮತ್ತು
ಯಾವಾಗ ತಮ್ಮ ಮಾತೃಭಾಷೆಯಲ್ಲಿ ಮಾತನಾಡುತ್ತಾರೆ? ವಾಸ್ತವವಾಗಿ ಈ
ಕಾದಂಬರಿಯು ಸಾರಸ್ವತ ಸಮುದಾಯದ ಬಗೆಗಿನದು ಹಾಗೂ ಅವರು ನಿಜಜೀವನದಲ್ಲಿ ಕೊಂಕಣಿಯನ್ನು
ಮಾತನಾಡುವವರು ಮತ್ತು ಈ ಕಾದಂಬರಿಯ ಎಲ್ಲ ಪಾತ್ರಗಳೂ ಅದೇ ಸಮುದಾಯದಿಂದಲೇ ಬಂದಿರುವಂಥವು.
ಗುಲ್ವಾಡಿಯವರು ಕನ್ನಡ ಕಾದಂಬರಿಯನ್ನು ಬರೆದಿರುವುದರಿಂದ ಆ ಪಾತ್ರಗಳು ತಮ್ಮ ಮಾತೃಭಾಷೆಯಲ್ಲಿ
ಮಾತನಾಡುವಂತೆ ತೋರಿಸಿಲ್ಲ. ಕ್ರೈಸ್ತಮತದ ಪೋಲೀಸಿನವ ಕೊಂಕಣಿಯಲ್ಲಿ ಮಾತನಾಡುತ್ತಾನೆ, ಮನೆಗೆಲಸದ ಹೆಂಗಸರು, ಅಗಸರ ಹೆಂಗಸರು ಮುಂತಾದವರು ತುಳುವಿನಲ್ಲಿ
ಮಾತನಾಡುತ್ತಾರೆ. ಹೊಸ ತಲೆಮಾರಿನ ಸಾರಸ್ವತರು ಕನ್ನಡದೊಂದಿಗೆ ಇಂಗ್ಲಿಷ್ ಬೆರೆಸಿ
ಮಾತನಾಡುತ್ತಾರೆ. ಇಲ್ಲಿ ಬಳಸಲಾಗಿರುವ ಬಹಭಾಷಿಕತೆಯ ಸಂಜ್ಞೆ ಕರ್ನಾಟಕ ಸಮಾಜದ ಹೊಸ ಅಂತಸ್ತನ್ನೇ
ರಚಿಸುತ್ತದೆ ಹಾಗೂ ಅದನ್ನು ನಿರ್ವಹಿಸಿಕೊಂಡು ಹೋಗುತ್ತದೆ. ಈ ಸಂಜ್ಞೆಯ ಮೂಲಕ ಸಮಾಜದಲ್ಲಿನ
ವಿವಿಧ ಸಂಬಂಧಗಳನ್ನು ನಿಚ್ಛಳವಾಗಿ ತೋರಿಸಲು ಸಾಧ್ಯವಾಗಿದೆ ಹಾಗೂ ಇಲ್ಲಿ ಸಾರಸ್ವತ ಸಮುದಾಯದ
ಜಾತ್ಯಾತೀತ ಗುರುತನ್ನು ಸಹ ನಿರ್ಮಿಸಲಾಗಿದೆ. ಕೊಂಕಣಿ ಮತ್ತು ತುಳು ಎರಡರಲ್ಲೂ ಇಂದಿರಾ ಮತ್ತು
ಭಾಸ್ಕರ್‍ರವರ ಉಲ್ಲೇಖಗಳು ಪುನರಾವರ್ತಿತವಾಗುತ್ತವೆ. ಮಾತನಾಡುವವರು ಆ ಪಾತ್ರಗಳನ್ನು
ಆದರ್ಶಪಾತ್ರಗಳೆಂಬಂತೆ ನೋಡುತ್ತಾರೆ. ಬಹುಪಾಲು ಈ ರೀತಿ ಗೊಡ್ಡುಹರಟೆ ಹೊಡೆಯುವವರು ತಮ್ಮ
ಮಾತೃಭಾಷೆ ಬಳಸುತ್ತಾರೆ ಹಾಗೂ ಈ ಗೊಡ್ಡು ಹರಟೆ ಭೀಮರಾವ್ ಮತ್ತು ಇತರರ ಕೃತ್ಯಗಳ ಬಗ್ಗೆ ಅಥವಾ
ಸಮಾಜಸುಧಾರಕರ ಕಾರ್ಯಗಳ ಬಗ್ಗೆ ಸಾರ್ವಜನಿಕ ವ್ಯಾಖ್ಯಾನದ ರೂಪ ಪಡೆದುಕೊಳ್ಳುತ್ತದೆ. ಸಾಮಾನ್ಯ
ಜನರ ಈ ಒಕ್ಕೊರಲಿನ ಧ್ವನಿಯನ್ನು ಲೇಖಕರು ಸಾಂಪ್ರದಾಯಕ ಮೌಲ್ಯಗಳನ್ನು ಲೇವಡಿ ಮಾಡಲು ಬಳಸುತ್ತಾರೆ.
ಲೇಖಕರು ಅವನತಿ ಹೊಂದಿದ ಧಾರ್ಮಿಕ ಆಚಾರ ವಿಚಾರಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು
ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆಂಬದು ಇಲ್ಲಿ ವೇದ್ಯವಾಗುತ್ತದೆ. ಸಂಪ್ರದಾಯದ ಪೋಷಕರ
ಕಾರ್ಯಗಳ ಬಗ್ಗೆ ಇಡೀ ಜಗತ್ತೇ ತಿಳಿದು ಅವುಗಳನ್ನು ಟೀಕಿಸುತ್ತಿದ್ದರೂ ಸಹ ಅವರಿಗೆ ಅದರ ಅರಿವೇ
ಇಲ್ಲ ಅಥವಾ ಅದರಿಂದ ಅವರು ವಿಚಲಿತರಾಗಿಲ್ಲ. ಹಾಗಾಗಿ ಓದುಗರು ಓದಿ ಅರ್ಥಮಾಡಿಕೊಳ್ಳಲೆಂದು
ವೆಂಕಟರಾವ್‍ರವರು ಅದನ್ನು ಕನ್ನಡಕ್ಕೆ ಅನುವಾದಿಸಿ ಆ ಟೀಕೆಗಳಿಗೆ ಜೀವಕೊಟ್ಟಿದ್ದಾರೆ. ಹಾಗಾಗಿ
ಇಂದಿರಾಬಾಯಿಯಲ್ಲಿ ಸಾಂಪ್ರದಾಯಕ ಸಮಾಜದ ಕಟುವಿಮರ್ಶೆ ಅನುವಾದದ ಮೂಲಕ ಇನ್ನೂ ಜೀವಂತವಾಗಿ
ಉಳಿದಿದೆ.
ಪ್ರಾರಂಭದಲ್ಲೇ
ನಾನು ತಿಳಿಸಿರುವಂತೆ, ಮಹಿಳಾ ಪ್ರಶ್ನೆಗಳು ಈ ಕಾದಂಬರಿಯ
ಕೇಂದ್ರವಸ್ತುವಾಗಿವೆ. ಸಾರಸ್ವತ ಯುವಕರ ಪ್ರಕಾರ, ಬಾಲ್ಯ ವಿವಾಹ
ಮತ್ತು ವಿಧವೆಯರನ್ನು ವಿರೂಪಗೊಳಿಸುವುದು ಅನಾಗರಿಕ ಹಾಗೂ ಕ್ರೌರ್ಯದ ವಿಧಾನಗಳಾಗಿವೆ.
ಇಂದಿರಾಬಾಯಿಯಲ್ಲಿ "ತಲೆಮಾರಿನ ಸಂಘರ್ಷವಾದ-ಶಿಕ್ಷಣ ಮತ್ತು ಲೈಂಗಿಕತೆ" - ಈ
ಎರಡನ್ನೂ ಕೂಡಿಸಿ ಹೆಣೆಯಲಾಗಿದೆ13. 1884ರಲ್ಲಿ ಮದ್ರಾಸ್ ಸಾರಸ್ವತ ಸಭೆಯು ಎರಡು
ತೀರ್ಮಾನಗಳನ್ನು ಕೈಗೊಂಡಿತು: ಮೊದಲನೆಯದು, ಹದಿನೈದು
ವರ್ಷಗಳಿಗಿಂತ ಕಿರಿಯನಾದ ಹುಡುಗನ ಹಾಗೂ ಹತ್ತು ವರ್ಷಗಳಿಗಿಂತ ಕಿರಿಯಳಾದ ಹುಡುಗಿಯ ಮದುವೆ
ಮಾಡಬಾರದು; ಎರಡನೆಯದು, ಯಾವ ವಿಧವೆಯ ವಿವಾಹ ಪ್ರಸ್ತಕಾರ್ಯದಿಂದ ಪರಿಪೂರ್ಣಗೊಂಡಿರುವುದಿಲ್ಲವೋ, ಅಂತಹ ವಿಧವೆ ಮರುಮದುವೆಯಾಗಬಹುದು. ಅವರು ತಮ್ಮ ತೀರ್ಮಾನಗಳನ್ನು ವಿವಿಧ ಕನ್ನಡ
ಪತ್ರಿಕೆಗಳಲ್ಲಿ ಪ್ರಕಟಿಸಿ ಅದಕ್ಕೆ ಸಾರ್ವತ್ರಿಕ ಬೆಂಬಲವನ್ನು ಕೋರಿದರು. ಆಗಿನ ದಕ್ಷಿಣ ಕನ್ನಡ
ಜಿಲ್ಲೆಯ ಎಲ್ಲಾ ಸಾರಸ್ವತರು ಈ ವಿಷಯದ ಬಗ್ಗೆ ಚರ್ಚೆ ನಡೆಸಿ ಅಭಿಪ್ರಾಯವನ್ನು ತಮ್ಮ
ಸ್ವಾಮೀಜಿಯವರಿಗೆ ತಿಳಿಸಿದರು. ಆದರೆ ಪಾಂಡುರಂಗಾಶ್ರಮ ಸ್ವಾಮಿಯವರು ಶಾಸ್ತ್ರ ಮತ್ತು ಸ್ಮøತಿಗಳಲ್ಲಿನ ಹೇಳಿಕೆಗಳನ್ನು ಉಲ್ಲೇಖಿಸಿ ಸಮಾಜಸುಧಾರಕರು ಎತ್ತಿದ ಪ್ರತಿಯೊಂದು
ವಿಷಯವನ್ನೂ ಟೀಕಿಸಿದರು. ವಿಧವಾ ಮರುವಿವಾಹವನ್ನು ಬೆಂಬಲಿಸಿ ಗುಲ್ವಾಡಿ ವೆಂಕಟರಾಯರು ಅದೇ
ಶಾಸ್ತ್ರಗಳನ್ನು ಆಧರಿಸಿ ತಮ್ಮ ವಾದಮಂಡಿಸಿ ಸ್ವಾಮೀಜಿಯವರಿಗೆ ಪತ್ರವೊಂದನ್ನು ಬರೆದರು. ಅವರು
ಶಾಸ್ತ್ರಗಳಲ್ಲಿ ಹೇಳಿರುವುದಕ್ಕೂ ದೇಶಪದ್ಧತಿ(ಆಚರಣೆಯಲ್ಲಿನ ವಿಧಾನಗಳು)ಗಳಿಗೂ ನಡುವಿರುವ
ವ್ಯತ್ಯಾಸಗಳನ್ನು ತೋರಿಸಿದರು. ಅವರ ಪ್ರಕಾರ ದೇಶಪದ್ಧತಿಯು ಪವಿತ್ರ ಗ್ರಂಥಗಳು ಸೂಚಿಸಿರುವ
ದಾರಿಯನ್ನು ಬಿಟ್ಟು ಬೇರೊಂದು ಹಾದಿಯನ್ನೇ ಹಿಡಿದಿವೆ. ಸ್ವಾಮಿಯವರು ಅವೆರಡರ ನಡುವೆ
ಗೊಂದಲಕ್ಕೊಳಗಾಗದೆ ದೇಶಪದ್ಧತಿಯಿಂದ ಕಲುಷಿತವಾಗದ ಶಾಸ್ತ್ರಗಳನ್ನು ಅನುಸರಿಸಬೇಕೆಂದು ಅವರು
ವಾದಿಸಿದರು. ಗುಲ್ವಾಡಿಯವರ ಪ್ರಕಾರ ಶಾಸ್ತ್ರಗಳಲ್ಲಿ ವಿಧವಾ ಮರು ವಿವಾಹಕ್ಕೆ ಅವಕಾಶವಿದೆ.
ವಿಧವಾ ವಿವಾಹದ ಪರ ಮತ್ತು ವಿರೋಧ ವಾದವಿವಾದಗಳು, ಶಾಸ್ತ್ರಗಳು ತಮ್ಮ
ನಿಲುವನ್ನು ಖಚಿತಪಡಿಸಿಕೊಳ್ಳಲು ಪ್ರಚೋದಿಸಿತು.
`ನಮ್ಮ ಸಮಯಕ್ಕೆ ಸೂಕ್ತವಾದ ತಾರತಮ್ಯತೆ'ಯನ್ನು ಅನುಸರಿಸಬೇಕೆಂದು ಇಂದಿರಾಬಾಯಿ ಒತ್ತಿ ಹೇಳುತ್ತದೆ. ಆದರೆ, ಹಿಂದೂ ಧರ್ಮದ ಚೌಕಟ್ಟಿನೊಳಗೆ ಸಮಾಜಸುಧಾರಣೆಯ ಪ್ರಾಯೋಜನೆ ಸಾಧ್ಯವಾಗುತ್ತದೆಯೆ?
ಇದಕ್ಕೆ ಉತ್ತರ ಇಲ್ಲ, ಏಕೆಂದರೆ ಈಗ ಅನುಸರಿಸುತ್ತಿರುವ ಸಂಪ್ರದಾಯದೊಳಗೆ ಆಮೂಲಾಗ್ರ ಸಾಧ್ಯತೆಗಳಿಗೆ
ಅವಕಾಶವಿಲ್ಲ. ಅದು ಹೊರಗಿನಿಂದಲೇ ಬರಬೇಕು. ಶಿಕ್ಷಣ ಮಾತ್ರ ಪ್ರತಿಭಟನೆಯ ಶಕ್ತಿ ನೀಡಬಲ್ಲುದು
ಹಾಗೂ ಅದೇ ಸುಧಾರಣೆಗೆ ಸ್ಥಳಾವಕಾಶ ಸಹ ಒದಗಿಸಿಕೊಡಬಲ್ಲುದು. ವಸಾಹತುಶಾಹಿ ಸಾಮಾಜಿಕ ಸಂಸ್ಥೆಗಳು
ಸಹ ಸಮಾಜವನ್ನು ರೂಪಾಂತರಗೊಳಿಸಲಾರವು, ಏಕೆಂದರೆ ಅವೂ ಸಹ ಭ್ರಷ್ಟ ಆಚರಣೆಗಳ ಸೋಂಕಿಗೆ
ಒಳಗಾಗಿವೆ. ಹಾಗಿರುವಾಗ, ಒಬ್ಬ ಪ್ರಾಮಾಣಿಕ ಮತ್ತು ಸತ್ಯದ ಪ್ರತಿಪಾದಕ
ವ್ಯಕ್ತಿ ಮಾತ್ರ ರೂಪಾಂತರದ ನಿಯೋಗಿಯಾಗಬಲ್ಲ. ಕಾದಂಬರಿಯಲ್ಲಿ ಭಾಸ್ಕರರಾವ್ ಮತ್ತು ಇಂದಿರಾ ಈ ನಿಯೋಗಿಗಳನ್ನು ಪ್ರತಿನಿಧಿಸುತ್ತಾರೆ.
ಇಂದಿರಾಳ ನಿಷ್ಠೆ
ಮತ್ತು ಅರ್ಥಪೂರ್ಣ ಮೌಲ್ಯಗಳು ಆಕೆಯ ಶಿಕ್ಷಣದಿಂದ ದೊರಕಿವೆ. ಇಂದಿರಾ ಮತ್ತು ಆಕೆಯ ತಾಯಿಯ
ನಡುವಿನ ಸಂವಾದವೊಂದು ಹೀಗಿದೆ:
`ನೀನು ಓದುತ್ತಿರುವ
ಪುಸ್ತಕ ಎಂಥದು?'
`ನಿನ್ನೆಯವರೆಗೆ
ನಾನು ಸ್ತ್ರೀ ಧರ್ಮ ನೀತಿ ಎನ್ನುವ ಪುಸ್ತಕ ಓದುತ್ತಿದ್ದೆ. ಈಗ ಈಸೋಪನ ಕತೆಗಳನ್ನು
ಓದುತ್ತಿದ್ದೇನೆ.'
`ಈ
ಪುಸ್ತಕಗಳನ್ನೆಲ್ಲ ಪಡ್ರೆಗಳು ಮುದ್ರಿಸುವರಲ್ಲವೆ?'
`ನನಗೆ ಅದರ ಬಗ್ಗೆ
ಗೊತ್ತಿಲ್ಲ!'
`ಅವನ್ನು ನಮ್ಮ
ಧರ್ಮವನ್ನೆಲ್ಲ ಹಾಳು ಮಾಡಲಿಕ್ಕೇ ಮುದ್ರಿಸಿದ್ದಾರೆ.'
`ಈಗ ನಾನು ಓದಿರುವ
ಪುಸ್ತಕದಲ್ಲಿ ನಮ್ಮ ಜಾತಿ ಪರಿಶುದ್ಧತೆಯನ್ನು
ಹಾಳು ಮಾಡುವಂಥದು
ನನಗೇನೂ ಕಂಡುಬರಲಿಲ್ಲ. ಬರೇ ಪುಸ್ತಕ
ಓದುವುದರಿಂದಲೇ
ಧರ್ಮ ಹಾಳಾಗಬಲ್ಲದೆ?.'
`ಈ ಪುಸ್ತಕಗಳು ನಮ್ಮ ಧರ್ಮಕ್ಕೆ ವಿರುದ್ಧವಾದ ವಿಚಾರಗಳನ್ನು ಹೊಂದಿರುತ್ತವೆ.'
`ನಾನು ಓದಿರುವ
ಪುಸ್ತಕದಲ್ಲಿ ಅಂಥದ್ದೇನೂ ಇಲ್ಲ. ಬದಲಿಗೆ ಹೆಣ್ಣೊಬ್ಬಳು ತನ್ನ ತಂದೆ ತಾಯಿ ಹಾಗೂ ಗಂಡನೊಂದಿಗೆ
ಹೇಗೆ ನಡೆದುಕೊಳ್ಳ ಬೇಕೆಂಬುದನ್ನು ಅತ್ಯುತ್ತಮವಾಗಿ ತೋರಿಸಿಕೊಟ್ಟಿದೆ'14.
ಇಲ್ಲಿ ಇಂದಿರಾ
ತನ್ನ ತಾಯಿಗೆ ಎದುರುತ್ತರ ನೀಡಿ, ಆಕೆ ತಪ್ಪು ಎಂದು ತೋರಿಸುವುದರಲ್ಲಿ
ತಲೆಮಾರುಗಳ ನಡುವಿನ ವಿಭಜನೆ ಸ್ಪಷ್ಟವಾಗಿ ಕಾಣುತ್ತದೆ. ಈ ಸಂವಾದ ಮತ್ತೊಂದು ದೃಷ್ಟಿಕೋನದಿಂದಲೂ
ಇಲ್ಲಿ ಪ್ರಮುಖವಾಗುತ್ತದೆ. ಅದರಲ್ಲಿನ ಕೊನೆಯ ಸಾಲುಗಳು ಸೂಚಿಸುವಂತೆ, ಇಂದಿರಾ ಓದುವ ಪುಸ್ತಕಗಳು ಇಂಗ್ಲಿಷ್ ನಡತೆಯ, ಮಹಿಳೆಯರ ನಡತೆಯನ್ನು ನಿಯಂತ್ರಿಸುವ ಪುಸ್ತಕಗಳಾಗಿವೆ. ಈ ಪುಸ್ತಕಗಳು ವಿವಾಹ
ಅಥವಾ ಕುಟುಂಬದಂತಹ ಸಾಂಸ್ಥಿಕ ಘಟಕಗಳನ್ನು ಪ್ರಶ್ನಿಸುವುದಿಲ್ಲ, ಬದಲಿಗೆ, ಅವು ಒಬ್ಬಳು ಆಧುನಿಕ ಗೃಹಿಣಿ ತನ್ನ ಗಂಡ
ಹಾಗೂ ಕುಟುಂಬದ ಬಗೆಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಬೋಧಿಸುತ್ತವೆ. ಅಲ್ಲದೆ ಈ ಪುಸ್ತಕಗಳು
ಅಂಬಾಬಾಯಿ ಒಪ್ಪಲಾರದಂತಹ ಸಾಮಾಜಿಕ ಸಖ್ಯದ ಒಂದು ನಿರ್ದಿಷ್ಟ ವಿಧಾನವನ್ನು ಬೋಧಿಸುತ್ತವೆ. ಆಕೆಯ
ಪ್ರಕಾರ, ಆಕೆ ಈಗಾಗಲೇ ವಿಧವೆಯಾಗಿರುವುದರಿಂದ ಆಕೆಗೆ
ಅಂತಹ ಪುಸ್ತಕಗಳ ಅವಶ್ಯಕತೆಯಿಲ್ಲ. ಹಾಗಾಗಿ ಆಕೆ, ತನ್ನ ಮಗಳಿಗೆ
ರಾಧಾ ವಿಲಾಸದಂತಹ ಪುಸ್ತಕಗಳನ್ನು ಓದಲು ಸಲಹೆ ನೀಡುತ್ತಾಳೆ. ಅಂಬಾಬಾಯಿಯಂತಹವರು ಪ್ರತಿನಿಧಿಸುವ
ಸಾಂಪ್ರದಾಯಕ ಸಮಾಜದಲ್ಲಿರುವ ಹುಳುಕು ಮತ್ತು ಗೋಮುಖವ್ಯಾಘ್ರತನವನ್ನು ಈ ಅಧ್ಯಾಯ ವಿಶೇಷವಾಗಿ
ಬಯಲಿಗೆಳೆಯುತ್ತದೆ. ಈ ಕಾದಂಬರಿಯು ಮಹಿಳೆಯನ್ನು ಹೊಸ ಪಡಿಯಚ್ಚಿನಲ್ಲಿ ರೂಪುಗೊಳಿಸುವ
ಪ್ರಯತ್ನವನ್ನು ಮಾಡುತ್ತದೆ. ಆದರ್ಶ ಮಹಿಳೆಯ ಸಂಕೇತವಾಗಿ ಇಂದಿರಾಬಾಯಿಯನ್ನು ತೋರಿಸಲಾಗಿದೆ,
ಏಕೆಂದರೆ ಆಕೆ ಓದುವುದರಿಂದ ಆಧುನಿಕ ಬದುಕಿನ ರೀತಿ
ರಿವಾಜುಗಳನ್ನು ತಿಳಿದುಕೊಂಡಿದ್ದಾಳೆ. ಆಧುನಿಕ ಪುರುಷನ ಪರಿಕಲ್ಪನೆಯ ದೃಷ್ಟಿಯಿಂದ ಮಹಿಳೆಯ ಈ
ಹೊಸ ಮಾದರಿಯ ರಚನೆಗೆ ಕೃತಿಕಾರನ ಸಮ್ಮತಿಯಿದೆ. ಈ ದೃಷ್ಟಿಕೋನದಿಂದ, ಮಹಿಳೆಯ ಅಂತಿಮ ವಿಮೋಚನೆ ಇರುವುದು ಆಕೆ ಉತ್ತಮ ಪತ್ನಿಯಾಗಿರುವುದರಿಂದ. ಅದನ್ನು
ತಲುಪಲು ಮಹಿಳೆಯು ಸ್ತ್ರೀ ಧರ್ಮ ನೀತಿಯನ್ನು ಓದುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
ಶಿಕ್ಷಿತ
ಮಹಿಳೆಯರನ್ನುಳಿದು ಇತರ ಎಲ್ಲಾ ಮೇಲ್ಜಾತಿಯ ಮಹಿಳೆಯರನ್ನು ಈ ಕಾದಂಬರಿಯಲ್ಲಿ ಅಭಾವಾತ್ಮಕವಾಗಿ
ಚಿತ್ರಿಸಲಾಗಿದೆ. ಕೆಳಜಾತಿಯ ಬಹುಪಾಲು ಎಲ್ಲ ಮಹಿಳೆಯರು ಮುಗ್ಧರನ್ನಾಗಿ, ಸಹಜವಾಗಿರುವಂತೆ ಚಿತ್ರಿಸಿದೆ. ಅವರು ಯಾವುದೇ ಮುಚ್ಚುಮರೆಯಿಲ್ಲದೆ ಹೃದಯದಾಳದಿಂದ
ಮಾತನಾಡುತ್ತಾರೆ. ಕೆಳಜಾತಿಯ ಮಹಿಳೆಯರಲ್ಲೂ ಕೆಲವು ಕೆಟ್ಟ ಹೆಂಗಸರಿದ್ದಾರೆ. ಆದರೆ ಅವರ
ನಡತೆಯನ್ನು ನಿಯಂತ್ರಿಸುವುದು ಕಪಟ ಧಾರ್ಮಿಕ ನೀತಿ ನಿಯಮಗಳಲ್ಲ, ಬದಲಿಗೆ ಬಡತನವೆಂಬುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಆದರೆ ಶಿಕ್ಷಿತ,
ಮೇಲ್ಜಾತಿಯ ಮಹಿಳೆಯರೇ ಕಾದಂಬರಿಯಲ್ಲಿ ಶೌರ್ಯದ ಸ್ಥಾನ
ಪಡೆದಿದ್ದಾರೆ. ಈ ಶಿಕ್ಷಿತ ಯುವಕ ಮತ್ತು ಯುವತಿಯರು ಪೂರ್ವ ಮತ್ತು ಪಶ್ಚಿಮದ ಉತ್ತಮ ಗುಣಗಳನ್ನು
ಸಮ್ಮಿಳಿತಗೊಳಿಸಿಕೊಂಡು ಉತ್ತಮ ಸಂಸ್ಕøತಿಯನ್ನು ಪಡೆದಿದ್ದಾರೆ. ಭೀಮರಾವ್‍ರವರ ಈ
ಕೆಳಗಿನ ಇಂದಿರಾ ಮತ್ತು ಭಾಸ್ಕರ್‍ರವರ ವಿವರಣೆ ಮನಸ್ಸಿನ ಆಧುನಿಕತೆ ಎಂದರೆ ಸಾಂಪ್ರದಾಯಿಕ
ದಿರಿಸಿನ ನೀತಿ ನಿಯಮಗಳನ್ನು ತ್ಯಜಿಸುವದಲ್ಲ ಎಂಬುದನ್ನು ಸ್ಪಷ್ಟವಾಗಿ ಚಿತ್ರಿಸಲಾಗಿದೆ.
`ಆಕೆ ಎಂತಹ
ವಸ್ತ್ರಗಳನ್ನು ಧರಿಸಿದ್ದಳು?' ಕೇಳಿದರು ಅಂಬಾಬಾಯಿ.
`ಚಿನ್ನದ ಜರಿ ಇರುವ
ನೀಲಿ ರೇಷ್ಮೆ ಸೀರೆ; ತಿಳಿಗೆಂಪಿನ ಕುಬುಸ; ನಮ್ಮ ಸಂಪ್ರದಾಯದಂತೆ ಚಿನ್ನದ ಆಭರಣಗಳು; ಮಲ್ಲಿಗೆ ಮತ್ತು ಗುಲಾಬಿ ಮುಡಿದ ನೀಳ ಜಡೆ; ತೀರಾ ಅಗಲವೂ ಅಲ್ಲದ ಚಿಕ್ಕದೂ ಅಲ್ಲದ ಕುಂಕುಮದ ಬೊಟ್ಟು; ಕಾಡಿಗೆಯಿಂದ ಅಲಂಕರಿಸಿದ ಕಣ್ಣುಗಳು ಹಾಗೂ ಮುಖ ಮತ್ತು ಕೈಗಳ ಮೇಲೆ ಅರಿಷಿನದ
ಲೇಪವಿತ್ತು.'
`ಆಕೆಯ ಗಂಡ
ಹೇಗಿದ್ದ?'
`ಚಿನ್ನದ ಜರಿಯ
ಹನ್ನೆರಡು ಮೊಳದ ಧೋತ್ರ; ಉದ್ದನೆ ಕಪ್ಪನೆ ಕೋಟು; ನೇರಳೆ ಬಣ್ಣದ ಪೇಟ; ಹಣೆಯ ಮೇಲೆ ನೀಲ ಗಂಧದ ಹಾಗೂ ಕೆಂಪನೆಗಂಧದ ಗುರುತಿತ್ತು.'
ಇಂದಿರಾಬಾಯಿಗೆ
ಮರುಮದುವೆಯಾಗುವ ಅವಕಾಶ ಮುಕ್ತವಾಗಿದೆ. ಏಕೆಂದರೆ ಆಕೆ ತನ್ನ ಗಂಡನೊಂದಿಗೆ ಒಂದು ದಿನವೂ
ಕಳೆದಿಲ್ಲ. ಕಾದಂಬರಿಯಲ್ಲಿ ಬ್ರಹ್ಮಚರ್ಯವೇ ವಿಧವೆಯರಿಗೆ ಅತ್ಯುತ್ತಮ ಜೀವನ ವಿಧಾನವೆಂದು
ತಿಳಿಸಿದ್ದರೂ ಸಹ ಈ ಹೊಸಯುಗದಲ್ಲಿ ಅದನ್ನು ಅನುಸರಿಸುವುದು ತೀರಾ ಕಷ್ಟಕರವಾದುದು. ಬದುಕಿನ
ಬದಲಾದ ವಿಧಾನಗಳು ಹಾಗು ದೈಹಿಕ ಆಸೆ ಆಕಾಂಕ್ಷೆಗಳು ಯುವ ವಿಧವೆಯನ್ನು ಅನೈತಿಕ ಸಂಬಂಧಗಳನ್ನು
ಹೊಂದುವಂತೆ ಮಾಡಬಹುದು. ಅದು ರಹಸ್ಯವಾಗಿರುವವರೆಗೂ ಈ ಆಷಾಢಭೂತಿ ಸಾಂಪ್ರದಾಯಕ ಸಮಾಜ ಅದರ ಬಗ್ಗೆ
ತಲೆಕೆಡಿಸಿಕೊಳ್ಳದೆ ಇರಬಹುದು. ಆದರೆ ಯುವಪೀಳಿಗೆಯು ಅಂತಹ ಮಹಿಳೆಯರ ಪರಿಸ್ಥಿತಿಯ ಬಗೆಗೆ
ಪ್ರಾಮಾಣಿಕ ಕಾಳಜಿಹೊಂದಿದೆ. ಇಂದಿರಾಬಾಯಿ ಕಾದಂಬರಿಯು ವೈವಾಹಿಕ ಲೈಂಗಿಕ ಚರ್ಚೆಯನ್ನು
ಕೇಂದ್ರವಾಗಿಟ್ಟುಕೊಂಡು ಲೈಂಗಿಕತೆಯ ವಿಚಾರದ ಬಗ್ಗೆ ಚರ್ಚಿಸುತ್ತದೆ.
ಭಾಸ್ಕರ
ಕಮಲಾಪುರಕ್ಕೆ ಮೊಟ್ಟ ಮೊದಲ ದೇಶೀ ಜಿಲ್ಲಾ ಕಲೆಕ್ಟರನಾಗಿ ಬರುವುದು ಹಾಗೂ ಆತ ಇಂದಿರಾಳನ್ನು
ಮದುವೆಯಾಗಿ ದೀರ್ಘ ರಾತ್ರಿಯು ಅಂತ್ಯಗೊಂಡು ಹೊಸ ಬೆಳಕು ಪ್ರಾರಂಭವಾಗುವುದರೊಂದಿಗೆ ಕಾದಂಬರಿಯು
ಅಂತ್ಯಗೊಳ್ಳುತ್ತದೆ. ಸಮುದ್ರ ಯಾನ ಮತ್ತು ವಿಧವಾ ಮರುವಿವಾಹದ ಬಗ್ಗೆ ಸ್ವಾಮೀಜಿಯ ಮತ್ತು ಮಠದ
ಮೌನ ನಿಚ್ಚಳವಾಗಿ ಕಾಣುತ್ತದೆ. ಹೊಸ ಜಗತ್ತಿನ ಆಗುಹೋಗುಗಳ ಮೇಲೆ ಧಾರ್ಮಿಕ ಪ್ರಾಧಿಕಾರವು
ತನ್ನೆಲ್ಲ ನಿಯಂತ್ರಣವನ್ನು ಕಳೆದುಕೊಂಡಿದೆ. ಆ ಸಮುದಾಯವು ಸುಧಾರಣೆ ಹೊಂದುವುದೇ ಅದರ ಚಾರಿತ್ರಿಕ
ಅಂತಿಮ ಗುರಿಯಾಗಬೇಕಾಗಿದೆ. ಸಮಯ ಬದಲಾಗಿದೆ. ವಸಾಹತುಶಾಹಿ ಆಧುನಿಕತೆ ಜನರ ಬದುಕುಗಳನ್ನು ರೂಪಾಂತರಗೊಳಿಸುತ್ತಿರುವುದರಿಂದ
ನಮ್ಮೆಲ್ಲರ ಬದುಕಿನ ರೀತಿಗಳಲ್ಲಿ ಹೊಸ ವಿಚಾರಗಳನ್ನು ರೂಢಿಸಿಕೊಳ್ಳುವುದು
ಅತ್ಯವಶ್ಯಕವೆಂಬುದನ್ನು ಕಾದಂಬರಿಯು ಸೂಚಿಸುತ್ತದೆ.
ಇಂದಿರಾಬಾಯಿ
ಕಾದಂಬರಿಯನ್ನು ಅದೇ ಸಮಯದ ಇತರ ಎರಡು ಕಾದಂಬರಿಗಳಾದ ಬೋಳಾರ ಬಾಬುರಾವ್ ಬರೆದ ವಾಗ್ದೇವಿ (1905)
ಮತ್ತು ಕೇರೂರು ವಾಸುದೇವಾಚಾರ್ಯರ ಇಂದಿರಾಳೊಂದಿಗೆ (1908)
ತುಲನೆ ಮಾಡುವುದು ಸೂಕ್ತವೆನ್ನಿಸುತ್ತದೆ ಮತ್ತು
ಇಂದಿರಾಬಾಯಿಯಂತೆ ವಾಗ್ದೇವಿಯೂ ಸಹ ಸಮಾಜಸುಧಾರಕ ಕಾದಂಬರಿಯೆ. ಕಾದಂಬರಿಯ ಕಥಾನಾಯಕಿ ವಾಗ್ದೇವಿ
ಒಂದು ಸಂಪ್ರದಾಯಸ್ಥ ಕುಟುಂಬದಿಂದ ಬಂದವಳು. ಆಕೆಯ ಗಂಡ ಒಬ್ಬ ಮೂರ್ಖ, ಆದರೆ ವಾಗ್ದೇವಿ ಮತ್ತು ಆಕೆಯ ತಾಯಿ ಚತುರ ಹಾಗೂ ಕುಯುಕ್ತಿಯವರು. ಸ್ಥಳೀಯ ಮಠದ ಚಂಚಲ
ನೇತ್ರಸ್ವಾಮಿ ವಾಗ್ದೇವಿಯ ಸೌಂದರ್ಯಕ್ಕೆ ಮರುಳಾಗಿ ಆಕೆ ಮಠಕ್ಕೆ ಬರುವಂತೆ ಮಾಡುತ್ತಾನೆ.
ಇದರಿಂದಾಗಿ ಸಮಾಜದಲ್ಲಿ ಗದ್ದಲವುಂಟಾಗುತ್ತದೆ. ಆದರೆ ಸರಿಯಾದ ನೈತಿಕತೆಯ ದೃಷ್ಟಿಯಿಂದ ಅಂತಹ
ಸಂಬಂಧವನ್ನು ವಿರೋಧಿಸುವಂತಹ ಆಧುನಿಕ ಪಾತ್ರಗಳು ಈ ಕಾದಂಬರಿಯಲ್ಲಿ ಇಲ್ಲವೇ ಇಲ್ಲ. ಕಾದಂಬರಿಯ
ಜಗತ್ತು ತನ್ನದೇ ತೂಕದಿಂದಾಗಿ ಕುಸಿಯುತ್ತದೆ.
ಇದಕ್ಕೆ
ವಿರುದ್ಧವಾಗಿ ಇಂದಿರಾ ಸಾಂಪ್ರದಾಯಕತೆಯ ಚೌಕಟ್ಟಿನಲ್ಲಿಯೇ ಉತ್ತಮ ಸಮಾಜಕ್ಕಾಗಿ ಬದಲಿ ದಾರಿಗಳ
ಅನ್ವೇಷಣೆಯ ಪ್ರಯತ್ನ ನಡೆಸುತ್ತದೆ. ಕೇರೂರುರವರ ಪ್ರಕಾರ ಸಮಾಜ ಸುಧಾರಣೆಯ ಪ್ರಾರಂಭ ಸಮುದಾಯದ
ಒಳಗಿನಿಂದಲೇ ಪ್ರಾರಂಭವಾಗಬಹುದು ಹಾಗೂ ಅದಕ್ಕಾಗಿ ವಸಾಹತು ಸರ್ಕಾರದ ಮೇಲಾಗಲಿ ಅಥವಾ ಪರಕೀಯ
ಧರ್ಮದ ಮೇಲಾಗಲೀ ಅವಲಂಬಿಸಬೇಕಾಗಿಲ್ಲ. ನಾವು ಮರುಸಜ್ಜುಗೊಳ್ಳಬೇಕಾದಲ್ಲಿ ನಮ್ಮ ಸಂಪ್ರದಾಯದ
ಪರಿಶುದ್ಧತೆÉಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ.
ಇಂಗ್ಲಿಷ್ ಶಿಕ್ಷಣ ಪಡೆಯುವುದರಲ್ಲಿ ತಪ್ಪೇನಿಲ್ಲ, ಆದರೆ ಆ ಶಿಕ್ಷಣ ನಮ್ಮ ಸಂಪ್ರದಾಯದಲ್ಲಿ ತಲೆ ತೂರಿಸಬಾರದಷ್ಟೆ. ಈ ದೃಷ್ಟ್ಟಿಯಿಂದ
ಕೇರೂರರು ಇಂಗ್ಲಿಷ್ ಮತ್ತು ಸಂಸ್ಕøತ ಎರಡನ್ನೂ ಚೆನ್ನಾಗಿ ಬಲ್ಲ ಆದರ್ಶ ಆಧುನಿಕ
ಪಾತ್ರಗಳನ್ನು ರಚಿಸಿದ್ದಾರೆ. ಅವರು ಲೇವಡಿ ಮಾಡಲಿಕ್ಕಾಗಿಯೇ ಸಮಾಜಸುಧಾರಕ ಪಾತ್ರಗಳನ್ನು
ರಚಿಸಿದ್ದಾರೆ. ಈ ಸಾಂಸ್ಕøತಿಕ ಪುನರುಜ್ಜೀವನ ಮತ್ತು ರೂಪಾಂತರದ
ಪ್ರಾಯೋಜನೆಯ ಈ ಮೂರೂ ಕಾದಂಬರಿಗಳಲ್ಲಿ ಮಹಿಳೆಯರು ಸಂಪ್ರದಾಯದ ಹೊರೆಹೊತ್ತವರಾಗಿಯೋ ಅಥವಾ ಸಮಾಜ
ಸುಧಾರಣೆಯ ವಸ್ತುಗಳಾಗಿಯೋ ಚಿತ್ರಿಸಲ್ಪಟ್ಟಿದ್ದಾರೆ ಎನ್ನುವುದನ್ನು ಗಮನಿಸಬೇಕು.
ಹಾಗಾದರೆ,
ನಿಖರವಾಗಿ ಈ ರೂಪಾಂತರ ಯಾವ ರೀತಿಯದ್ದು. ಅದು ಜನರ
ಬದುಕಿನ ಮೇಲೆ ಎಂತಹ ಪರಿಣಾಮ ಬೀರಿದೆ? ಇಂದಿರಾಬಾಯಿಯಲ್ಲಿನ ಇಂದಿರಾಳ ಮರುಮದುವೆಯ
ಸುದೀರ್ಘ ವಿವರಣೆಯನ್ನು ಪರಿಗಣಿಸಿ ಅದನ್ನು ಆಕೆಯ ಮೊದಲ ಮದುವೆಯೊಂದಿಗೆ ತುಲನೆ ಮಾಡೋಣ.
ವಾಸ್ತವವಾಗಿ ಎರಡು ವಿಭಿನ್ನ ಸಾಮಾಜಿಕ ಆಚರಣೆಗಳನ್ನು ಪ್ರತ್ಯೇಕಿಸುವ ಸಲುವಾಗಿಯೇ ಈ
ಚಿತ್ರಣಗಳಿವೆ. ಮೊದಲ ಮದುವೆಯ ಕಾರ್ಯಕ್ರಮವು ತೋರಿಕೆಗಾಗಿಯೇ ಇರುವಂತಿದೆ; ಅದರಲ್ಲಿ ಅಹಂನ ಹಾಗೂ ಸಿಕ್ಕಾಪಟ್ಟೆ ಹಣದ ಖರ್ಚಿನ ಪ್ರದರ್ಶನವಿದೆ: ಬೆಲೆಬಾಳುವ
ಬಟ್ಟೆ ಬರೆಗಳು, ಚಿನ್ನದ ಮತ್ತು ಬೆಳ್ಳಿಯ ಒಡವೆ, ವಸ್ತುಗಳು, ಗಂಡಿನ ತೋರಿಕೆಯ ಮೆರವಣಿಗೆ, ಕಳಪೆ ವಿನೋದ, ಸ್ಥಳೀಯ ವೇಶ್ಯೆಯರಿಂದ ನೃತ್ಯ
ಮುಂತಾದವು. ಎರಡನೆಯ ಮದುವೆಯನ್ನು ಅದಕ್ಕೆ
ತದ್ವಿರುದ್ಧವಾಗಿ ನಡೆಸಲಾಗುತ್ತದೆ. ಮಂತ್ರಗಳ ಪಠಣ, ದೈವಭಕ್ತಿ ಗೀತೆಗಳ ಗಾಯನ ಹಾಗೂ ನೆರೆದಿರುವ ಬಂಧುಬಳಗದವರಿಂದ ಶುಭ ಹಾರೈಕೆ ಹಾಗೂ
ಅದಾದ ನಂತರ ಮರುದಿನ ಎಲ್ಲರಿಗೂ ಔತಣವನ್ನು ಏರ್ಪಡಿಸಲಾಗಿರುತ್ತದೆ. ಔತಣವನ್ನು ಅಮೃತಾರಾವ್‍ರವರು
ತಮ್ಮ ಸಮುದಾಯದವರಿಗೆ ಏರ್ಪಡಿಸಿರುತ್ತಾರೆ ಹಾಗೂ ಇತರ ಸಮುದಾಯದವರೆಗೆ ಅವರವರ ಪೂಜಾಸ್ಥಾನಗಳಲ್ಲಿ
ಮತ್ತು ಕಾಲೋನಿಗಳಲ್ಲಿ ಏರ್ಪಡಿಸಿರುತ್ತಾರೆ. ಅಂತಹ ವಿವರಣೆಗಳು ಎಂತಹ ಸಮಾಜ ಸುಧಾರಣೆಯನ್ನು ಹಾಗೂ
ಆಧುನಿಕತೆಯನ್ನು ಮೇಲ್ಜಾತಿಯ ಬರಹಗಾರರು ಬಯಸುತ್ತಾರೆ ಎಂಬುದನ್ನು ತೋರಿಸುತ್ತವೆ. ಕರ್ನಾಟಕದಲ್ಲಿ
ಆಧುನಿಕತೆ ಜಾತಿ ವ್ಯವಸ್ಥೆಯನ್ನಾಗಲಿ ಅಥವಾ ಮೂಲಭೂತ ಲಿಂಗಸಂಬಂಧಗಳಲ್ಲಾಗಲೀ ಬೃಹತ್ ಪ್ರಮಾಣದ
ಬದಲಾವಣೆಗಳನ್ನು ತರಲಿಲ್ಲ.
ನಾನು ಬೇರೆಡೆ
ಈಗಾಗಲೇ ಕನ್ನಡದ ಸಾಮಾಜಿಕ ಕಾದಂಬರಿಯು ಸಾಮಾಜಿಕ ಅನನ್ಯತೆಯ ಪ್ರಶ್ನೆಯನ್ನು ಎದುರಿಸುತ್ತದೆ ಹಾಗೂ
ಕನ್ನಡದ ಚಾರಿತ್ರಿಕ ಕಾದಂಬರಿಯು `ಕರ್ನಾಟಕತ್ವ'ದ ಅನ್ವೇಷಣೆಯಿಂದಾಗಿ ಉಗಮವಾಗಿದೆಯೆಂದು ವಾದಿಸಿದ್ದೇನೆ15. ಉದಾಹರಣೆಗೆ, ಇದೇ ಸಮಯದಲ್ಲಿ ಹಲವಾರು ಚಾರಿತ್ರಿಕ
ಕಾದಂಬರಿಗಳನ್ನು ರಚಿಸಿದ ಉತ್ತರ ಕರ್ನಾಟಕದ ಲೇಖಕ ಗಳಗನಾಥರು ವಿಜಯನಗರದ ಚರಿತ್ರೆಯನ್ನು ಒಂದು
ಸಂಕೇತವೆನ್ನುವಂತೆ ವೈಭವೀಕರಿಸಿ ಪ್ರಬಲ ಭಾಷಾ ಪ್ರಾದೇಶಿಕ ಮನೋಭಾವವನ್ನು ಕನ್ನಡಿಗರಲ್ಲಿ
ತುಂಬಿದರು. ಈ ಅವಧಿಯಲ್ಲಿ ಮೇಲ್ಜಾತಿ ಕಾದಂಬರಿಗಳಿಗೆ ಸಂಬಂಧಿಸಿದಂತೆ ಸ್ವ, ಸಾಮುದಾಯಿಕ, ಭಾಷಿಕ ಹಾಗೂ ರಾಷ್ಟ್ರೀಯ ಗುರುತಿನ ರಚನೆಗಳು
ಅದೇ ಚಾರಿತ್ರಿಕ ಪ್ರಕ್ರಿಯೆಯ ಭಾಗವಾಗಿವೆ. ಮೊದಲ ಕನ್ನಡ ಕಾದಂಬರಿಗಳು ಮೇಲ್ಜಾತಿಯ ಇಂಗ್ಲಿಷ್
ಶಿಕ್ಷಿತ ವರ್ಗದವರ ಸಮಸ್ಯೆಗಳು, ಆಸೆ ಆಕಾಂಕ್ಷೆಗಳು ಹಾಗೂ ಆತಂಕಗಳನ್ನು ಮಾತ್ರ
ಬಿಂಬಿಸುತ್ತವೆ. ಆದರೆ ಕೆಳಜಾತಿಯವರ ಮತ್ತು ಇತರ ಸಮುದಾಯಗಳ ಅನುಭವಗಳು, ಸಂಘರ್ಷಗಳು ಹಾಗೂ ಆಸೆ ಆಕಾಂಕ್ಷೆಗಳ ಬಗೆಗೆ ಈ ಸಾಹಿತ್ಯ ಪ್ರಕಾರ ಮೌನವಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)