ಶುಕ್ರವಾರ, ಜುಲೈ 10, 2020

ಗ್ರೀಕ್ ಕುಂಬಾರಿಕೆ ಕಲೆಯಲ್ಲಿ ಆದಿಮ ವ್ಯಂಗ್ಯಚಿತ್ರಗಳು


ನಾಗರಿಕ ಜಗತ್ತಿನ ಮೊದಲ ವ್ಯಂಗ್ಯಚಿತ್ರಕಾರರು ಯಾರು? 2500-3000 ವರ್ಷಗಳ ಹಿಂದೆ ಕಾಗದ, ಪತ್ರಿಕೆ ಇಲ್ಲದ ಸಮಯದಲ್ಲಿ ಮಣ್ಣಿನ ಮಡಕೆ, ಕುಡಿಕೆಗಳ ಮೇಲೆ ವಿಡಂಬನೆಯ ಚಿತ್ರಗಳನ್ನು ರಚಿಸಿದ ಗ್ರೀಕ್ ಕುಂಬಾರರು, ಕಲಾವಿದರು ಮೊದಲ ವ್ಯಂಗ್ಯಚಿತ್ರಕಾರರೆ? 16ರ ಜುಲೈ 2020ರ `ಸುಧಾ' ವಾರಪತ್ರಿಕೆಯಲ್ಲಿ ನನ್ನ ಸುದೀರ್ಘ ಲೇಖನದ ಸಂಕ್ಷಿಪ್ತ ರೂಪ `ಗ್ರೀಕ್ ಕುಂಬಾರಿಕೆ ಕಲೆಯಲ್ಲಿ ಆದಿಮ ವ್ಯಂಗ್ಯಚಿತ್ರಗಳು' ಲೇಖನ ಪ್ರಕಟವಾಗಿದೆ. 



ಕುಂಬಾರನ ಚಕ್ರದ ಮೇಲೆ ಆಕ್ರೋಬ್ಯಾಟ್ ಬಾಲೆ. ನಾನು ಕೇಂಬ್ರಿಡ್ಜ್ ನ ಫಿಟ್ಜ್ ವಿಲಿಯಂ ಮ್ಯೂಸಿಯಂನಲ್ಲಿ ತೆಗೆದ ಚಿತ್ರ

 
ಮೊದಲ ವ್ಯಂಗ್ಯಚಿತ್ರಕಾರರು ಯಾರು ಎಂಬುದು ಇಂದಿಗೂ ವಿವಾದಾಸ್ಪದ ವಿಷಯವಾಗಿದೆ. ಚರಿತ್ರೆಯಲ್ಲಿ ಕೆಲವೊಂದು ಹೆಸರುಗಳು ದೊರಕಿದರೂ ಅವರೇ ಮೊದಲ ವ್ಯಂಗ್ಯಚಿತ್ರಕಾರರೆಂದು ರುಜುವಾತು ಮಾಡುವುದು ಕಷ್ಟದ ವಿಷಯವಾಗಿದೆ. ಸಾವಿರಾರು ವರ್ಷಗಳ ಹಿಂದೆ ಆದಿ ಮಾನವ ಗುಹೆಗಳಲ್ಲಿ ಕೆತ್ತಿರುವ ಮಾನವರ, ಪ್ರಾಣಿಗಳ ಚಿತ್ರಗಳು ಕಾರ್ಟೂನುಗಳು ಯಾಕಾಗಿರಬಾರದು ಎನ್ನುತ್ತಾರೆ ಕೆಲವರು. ಸುಮಾರು ಮುವ್ವತ್ತು ಸಾವಿರ ವರ್ಷಗಳ ಹಿಂದೆ ಗುಹೆಗಳಲ್ಲಿ ರಚಿಸಿದ ಚಿತ್ರಗಳ ಉದ್ದೇಶ ನಮಗೆ ತಿಳಿದಿಲ್ಲ. ಅವು ಯಾವುದಾದರೂ ಆಚರಣೆಯ ಉದ್ದೇಶಕ್ಕಾಗಿ ರಚಿಸಿದ್ದೋ, ಕಲಾವಿದನೊಬ್ಬನ ಕೇವಲ ವಸ್ತುಸ್ಥಿತಿ ನಿರೂಪಣೆಯೋ ಅಥವಾ ಕಲಾವಿದನೊಬ್ಬನ ಕಲೆಯ ಪ್ರದರ್ಶನಕ್ಕಾಗಿಯಷ್ಟೇ ಇರಬಹುದು. ಆದರೆ ಅವುಗಳನ್ನು ವ್ಯಂಗ್ಯ ಅಥವಾ ವಿಡಂಬನೆಯ ದೃಷ್ಟಿಯಿಂದ ರಚಿಸಿದ್ದಲ್ಲಿ ಖಂಡಿತಾ ಅವುಗಳನ್ನು ವ್ಯಂಗ್ಯಚಿತ್ರಗಳೆನ್ನಬಹುದು. ಆ ರೀತಿ ವ್ಯಂಗ್ಯ ಅಥವಾ ವಿಡಂಬನೆಯ ಉದ್ದೇಶದಿಂದ ಚಿತ್ರಗಳನ್ನು ಸುಮಾರು 2500 -3000 ವರ್ಷಗಳ ಹಿಂದೆ ಗ್ರೀಕ್ ಕುಂಬಾರಿಕೆಯಲ್ಲಿ ರಚಿಸಲಾಗಿದೆ. ಚಿತ್ರ ರಚಿಸಲು ಕಾಗದ ಇಲ್ಲದ ಸಮಯದಲ್ಲಿ ಹಾಗೂ ಮನೆಮನೆಗೂ ತಲುಪುತ್ತಿದ್ದ ಮಡಿಕೆ ಕುಡಿಕೆಗಳ ಮೇಲೆ ಕುಂಬಾರ ಕಲಾವಿದರು ಪುರಾಣದ, ಪ್ರಕೃತಿಯ ಹಾಗೂ ದಿನನಿತ್ಯದ ಬದುಕಿನ ಚಿತ್ರಗಳನ್ನು ರಚಿಸುತ್ತಿದ್ದರು. ಅದೇ ರೀತಿ ವ್ಯಂಗ್ಯ ಅಥವಾ ವಿಡಂಬನೆಯ ಉದ್ದೇಶದಿಂದ ಚಿತ್ರಗಳನ್ನು ರಚಿಸುವುದು ಬಹುಶಃ ಜನಪ್ರಿಯವೂ ಆಗಿತ್ತೆನ್ನಿಸುತ್ತದೆ. ಅವುಗಳನ್ನು ಆದಿಮ ಅಥವಾ ಪ್ರೋಟೊ ವ್ಯಂಗ್ಯಚಿತ್ರಗಳೆನ್ನಬಹುದು.

ಪ್ರಾಚೀನ ನಾಗರಿಕತೆಗಳು ತಾವು ಬಿಟ್ಟು ಹೋಗುವ ಕುರುಹುಗಳಲ್ಲಿ ಮಡಕೆ ಕುಡಿಕೆಗಳು ಪ್ರಾಖ್ತನನ ಸಂಶೋಧಕರಿಗೆ ಬಹಳ ಮುಖ್ಯವಾದುವು. ಅವುಗಳ ಅಧ್ಯಯನದ ಮೂಲಕ ಆ ನಾಗರಿಕತೆಗಳ ಸಾಮಾಜಿಕ ಬದುಕು, ಆಹಾರ ಅಭ್ಯಾಸಗಳು, ಅವರ ಸಾಂಸ್ಕøತಿಕ ಆಚರಣೆ ಇತ್ಯಾದಿಗಳ ಬಗೆಗೆ ತಿಳಿಯಬಹುದು. ಸುಮಾರು 2500 ವರ್ಷಗಳ ಹಿಂದೆ ಗ್ರೀಕರು ಮಣ್ಣಿನ ಮಡಕೆ – ಕುಂಡಗಳನ್ನು ಧಾನ್ಯ, ಆಹಾರ, ನೀರು, ವೈನ್ ಮುಂತಾದುವನ್ನು ಸಂಗ್ರಹಿಸಲು, ಸಾಗಾಣಿಕೆ ಮಾಡಲು, ಕುಡಿಯಲು ಹಾಗೂ ಇನ್ನಿತರ ದಿನನಿತ್ಯದ ಕಾರ್ಯಗಳಲ್ಲಿ ಬಳಸುತ್ತಿದ್ದರು. ಮಡಕೆ ಹಾಗೂ ಕುಂಡಗಳು ಅವರಿಗೆ ಸುಲಭವಾಗಿ ಲಭಿಸುತ್ತಿದ್ದ ಹಾಗೂ ದಿನಗಳಕೆಯ ವಸ್ತುಗಳಾಗಿದ್ದವು. ಅವು ಅವರ ಚಿತ್ರ ಕಲಾಭಿವ್ಯಕ್ತಿಯ ಮಾಧ್ಯಮಗಳೂ ಆಗಿದ್ದವು. ಪ್ರಾರಂಭದಲ್ಲಿ, ಅಂದರೆ ಸುಮಾರು ಕ್ರಿ.ಪೂ. 1000 – 700ರವರೆಗೆ ಅವರು ಮಡಕೆ ಕುಡಿಕೆಗಳ ಮೇಲೆ ಜ್ಯಾಮಿತಿ ರೇಖೆಗಳ ಚಿತ್ರಗಳನ್ನು ರಚಿಸುತ್ತಿದ್ದರು. ಅವುಗಳಲ್ಲಿ ವೃತ್ತಾಕಾರ ಮತ್ತು ಅರ್ಧ ವೃತ್ತಾಕರದ ರಚನೆಗಳು ಹೆಚ್ಚು ಇರುತ್ತಿದ್ದವು. ಕ್ರಮೇಣ ಮಾನವರ ಮತ್ತು ಪ್ರಾಣಿಗಳ ಚಿತ್ರಗಳನ್ನು ರಚಿಸತೊಡಗಿದರು. ಅವು ಬಹುಪಾಲು ಪುರಾಣದ ಕತೆಗಳ ಪಾತ್ರಗಳಾಗಿದ್ದು ವಿಶೇಷವಾಗಿ ಹೆರಾಕ್ಲಸ್‍ನ (ಹಕ್ರ್ಯುಲಿಸ್) ಸಾಹಸಗಾಥೆಗಳಾಗಿರುತ್ತಿದ್ದವು. ಆ ಸಮಯದ ಚಿತ್ರಗಳು ಬಹುಪಾಲು ಎರಡು ಆಯಾಮದ, ಬದಿ ಮಾತ್ರ ಪ್ರದರ್ಶಿಸುವ ಚಿತ್ರಗಳಾಗಿರುತ್ತಿದ್ದವು.

ಕ್ರಿ.ಪೂ. 8ನೇ ಶತಮಾನದ ಕೊನೆಯಿಂದ 7ನೇ ಶತಮಾನದ ಪ್ರಾರಂಭದ ಅವಧಿಯಲ್ಲಿ ಗ್ರೀಕ್ ಮಡಕೆ ಚಿತ್ರಕಾರರ ಚಿತ್ರ ರಚನೆ ವಿಷಯ, ವಸ್ತುಗಳಲ್ಲಿ ಬದಲಾವಣೆಗಳು ಕಂಡುಬರತೊಡಗಿದವು. ಇದನ್ನು ಕೊರಿಂಥಿಯನ್ ಶೈಲಿ ಎನ್ನುತ್ತಾರೆ. ಪುರಾಣ, ಐತಿಹ್ಯಗಳ ಹೊಸ ಹೊಸ ರಕ್ಕಸರ, ಪ್ರಾಣಿಗಳ, ವೀರಯೋಧರ ಚಿತ್ರಗಳು ಹೆಚ್ಚು ಸ್ಪಷ್ಟತೆ, ನವಿರಾದ ಗೆರೆ, ವರ್ಣಗಳೊಂದಿಗೆ ಮೂಡತೊಡಗಿದವು. ಆ ಸಮಯದಲ್ಲಿಯೇ ಚಿತ್ರ ರಚಿಸುವ ಕಲಾವಿದರು ತಮ್ಮ ರಚನೆಯ ಕೆಳಗೆ ಸಹಿ ಮಾಡತೊಡಗಿದರು. ಇಂದು ಸಂಶೋಧನಾಕಾರರಿಗೆ ಆ ರೀತಿಯ ಸಹಿಯ ಮೂಲಕ ಚಿತ್ರಕಾರರನ್ನು ಗುರುತಿಸಲು ಸಾಧ್ಯವಾಗಿದೆ. ಸುಮಾರು ಕ್ರಿ.ಪೂ.5ನೇ ಶತಮಾನದ ಹೊತ್ತಿಗೆ ಗ್ರೀಕ್ ಕಲಾವಿದರು ಎರಡು ಆಯಾಮಗಳ ಬದಿ ಮಾತ್ರ ಕಾಣುವ ಚಿತ್ರಗಳ ರಚನೆಯಿಂದ ಮೂರು ಆಯಾಮಗಳ ಚಿತ್ರದಂತೆ ಕಾಣುವ, ಒಂದರ ಹಿಂದೆ ಮತ್ತೊಂದು ಆಕೃತಿ ಇರುವ ಚಿತ್ರರಚನೆಗಳನ್ನು ಪ್ರಾರಂಭಿಸಿದರು. ಇದನ್ನು ಅಥೆನಿಯನ್ ಅವಧಿ ಎನ್ನುತ್ತಾರೆ. ಈ ಅವಧಿ ಗ್ರೀಕ್ ಕುಂಬಾರಿಕೆ ಕಲೆಯ ಉತ್ತುಂಗದ ಅವಧಿಯೆನ್ನಬಹುದು. ಈ ಅವಧಿಯ ಗ್ರೀಕ್ ಮಡಕೆಗಳ ಮೇಲಿನ ಕಲೆ ಅತ್ಯುತ್ತಮ ಗುಣಮಟ್ಟದ್ದಾಗಿದ್ದು ಅವರು ರಚಿಸುತ್ತಿದ್ದ ವಿಷಯಗಳೂ ಸಹ ಆಗಿನ ಗ್ರೀಕ್ ಬದುಕು, ವಿಚಾರಗಳ ಬಗ್ಗೆ ಮಹತ್ತರ ಮಾಹಿತಿ ನೀಡುತ್ತದೆ. ಅದೇ ಸಮಯದಲ್ಲಿಯೇ ಮಡಕೆಗಳ ಮೇಲೆ `ಆದಿಮ ವ್ಯಂಗ್ಯಚಿತ್ರ’ಗಳೆಂದು (Proto Cartoons) ಕರೆಯಬಹುದಾದ ಕಪ್ಪು ಮತ್ತು ಕೆಂಪು ಚಿತ್ರ ರಚನೆಗಳು ಕಂಡುಬರುತ್ತವೆ.

ಗ್ರೀಕ್ ಮಡಕೆ-ಕುಡಿಕೆಗಳ ಅಧ್ಯಯನ 17-18ನೇ ಶತಮಾನದಿಂದ ಪ್ರಾರಂಭವಾಗಿದ್ದು ಸಾಕಷ್ಟು ಸಂಶೋಧನೆ ನಡೆಸಲಾಗಿದೆ. ಇಂದು ಜಗತ್ತಿನಾದ್ಯಂತ ಸಾವಿರಾರು ಗ್ರೀಕ್ ಮಡಕೆ-ಕುಡಿಕೆಗಳು ಹಂಚಿಹೋಗಿದ್ದು ಮ್ಯೂಸಿಯಂಗಳಲ್ಲಿ ಕಾಣಬಹುದಾಗಿದೆ. ಇನ್ನೂ ಅಧ್ಯಯನ ಮಾಡದಿರುವ ರಾಶಿ ರಾಶಿ ಮಡಕೆ ಕುಡಿಕೆಗಳಿವೆ. ವ್ಯಂಗ್ಯ ಅಥವಾ ವಿಡಂಬನೆ ಎನ್ನುವುದು ಒಂದು ಸಾಪೇಕ್ಷ ವಿಷಯ ಹಾಗೂ ಅದು ಆಯಾ ಸಮಾಜದ ಕಾಲ, ಸÀಂದರ್ಭ, ಸಂಸ್ಕøತಿ ಮತ್ತು ಆಯಾ ಸಮಾಜದಲ್ಲಿ ಯಾವುದನ್ನು ತಪ್ಪು, ನಿಷಿದ್ಧ ಎಂದು ಪರಿಗಣಿಸಲಾಗಿತ್ತು ಎನ್ನುವುದÀನ್ನು ಆಧರಿಸಿರುತ್ತದೆ. ಪ್ರಾಚೀನ ಗ್ರೀಕ್ ಸಮಾಜದಲ್ಲಿ ವ್ಯಂಗ್ಯದ ವಿಷಯವಾಗಿದ್ದುದು ಈಗ ನಮಗೆ ವ್ಯಂಗ್ಯವನ್ನಿಸದೇ ಹೋಗಬಹುದು. ಹಾಗಾಗಿ ಗ್ರೀಕ್ ಕುಂಬಾರಿಕೆಯಲ್ಲಿನ ಚಿತ್ರಗಳ ವ್ಯಂಗ್ಯ-ವಿಡಂಬನೆಯನ್ನು ಅರಿಯಲು ಅಧ್ಯಯನಕಾರರು ಗ್ರೀಕ್ ಸಾಹಿತ್ಯದ ಮೊರೆ ಹೋಗುತ್ತಾರೆ ಅದರಲ್ಲೂ ವಿಶೇಷವಾಗಿ ಅರಿಸ್ಟೋಫೇನ್ಸ್‍ನ `ಓಲ್ಡ್ ಕಾಮಿಡಿ'. ಅವುಗಳ ಅಧ್ಯಯನದಿಂದ ಕ್ರಿ.ಪೂ. 5ನೇ ಶತಮಾನದಲ್ಲಿನ ಗ್ರೀಕರು ಯಾವುದನ್ನು ನೋಡಿ ನಗುತ್ತಿದ್ದರು, ಅವರಲ್ಲಿ ಲೇವಡಿ, ವ್ಯಂಗ್ಯದ ಭಾವನೆ ತರಿಸುತ್ತಿದ್ದ ವಿಷಯಗಳು ಯಾವುವು ಎಂಬುದನ್ನು ತಿಳಿಯಬಹುದು. 


 ಸಿಂಪೋಸಿಯಂನಲ್ಲಿ ಕುಡಿದು ಹೆಚ್ಚಾಗಿ ವಾಂತಿ ಮಾಡುತ್ತಿರುವಾತ ಹಾಗೂ ಅವನ ಸಹಾಯಕ್ಕೆ ನಿಂತಿರುವ ಸೇವಕ.

ಆಗಿನ ಬಹುಪಾಲು ಮಣ್ಣಿನ ಧಾರಕಗಳ ಮೇಲಿನ ಚಿತ್ರಕಾರರು ಬಹುಪಾಲು ಅನಕ್ಷರಸ್ಥರಾಗಿದ್ದು ಮಧ್ಯಮ ಅಥವಾ ಕೆಳವರ್ಗದವರಾಗಿದ್ದರು. ಹಾಗಾಗಿ ಅವರು ಚಿತ್ರಿಸುತ್ತಿದ್ದ ಚಿತ್ರಗಳು ತಾವು ಕಾಣುತ್ತಿದ್ದ ತಮ್ಮ ದಿನನಿತ್ಯದ ಬದುಕಿನ  ಹಾಗೂ ಸಾಮಾನ್ಯ ಜನರ ವ್ಯಂಗ್ಯದ ವಿಷಯಗಳಾಗಿರುತ್ತಿದ್ದವು. ಬಹುಪಾಲು ಆ ಚಿತ್ರಗಳಿಗೆ ವಿವರಣೆ ಅಥವಾ ಶೀರ್ಷಿಕೆ ಇಲ್ಲದಿರುತ್ತಿದ್ದುದರಿಂದ ಅವುಗಳ ಅರ್ಥ ಬಹು ವಿಶ್ಲೇಷಣೆಗೆ ಒಳಪಡುತ್ತವೆ. ಮಡಕೆ ಕುಡಿಕೆಗಳು ಎಲ್ಲರ ಮನೆಗಳಲ್ಲಿ ಬಳಸಲ್ಪಡುತ್ತಿದ್ದುದರಿಂದ ಅವುಗಳ ಮೇಲೆ ಬರೆದ ಚಿತ್ರಗಳು ಬಹುಬೇಗ ಜನರನ್ನು ತಲುಪುತ್ತಿದ್ದವು. ಅಲ್ಲದೆ ಆಂಫೋರ, ಹೈಡ್ರಿಯಾಗಳು, ಕ್ರೇಟರ್, ಕೈಲಿಕ್ಸ್ ಮತ್ತು ಕುಡಿಯುವ ಬಟ್ಟಲುಗಳಾದ ಕಾಂತರೋಸ್ ಮುಂತಾದವು `ಸಿಂಪೋಸಿಯಂ’ಗಳನ್ನು ತಲುಪುತ್ತಿದ್ದವೆಂಬುದು ಚಿತ್ರಕಾರರಿಗೆ ತಿಳಿದಿತ್ತು. ಇಂದು ಇಂಗ್ಲಿಷ್‍ನಲ್ಲಿ ಸಿಂಪೋಸಿಯಂ ಎಂದರೆ ಶೈಕ್ಷಣಿಕ ಸಂಸ್ಥೆಗಳು, ಅಧ್ಯಯನ ಸಂಸ್ಥೆಗಳು ನಡೆಸುವ ವಿಚಾರಗೋಷ್ಠಿ ಎಂದಿದೆ. ಆದರೆ ಗ್ರೀಕ್ ಸಮಾಜದಲ್ಲಿ ಸಿಂಪೋಸಿಯಂಗಳು ಸಾಂಸ್ಥಿಕ ರೂಪ ಪಡೆದ ಗಂಡಸರ ಮದ್ಯಪಾನ ಗೋಷ್ಠಿಗಳಾಗಿದ್ದವು. ಮದ್ಯಪಾನ ಗ್ರೀಕ್ ಸಮಾಜದ ಬಹಳ ಮುಖ್ಯವಾದ ಭಾಗವಾಗಿತ್ತು. ಸಿರಿವಂತ ಮೇಲ್ವರ್ಗದವರು ತಮ್ಮ ಮನೆಗಳಲ್ಲಿ `ಸಿಂಪೋಸಿಯಂ' ಏರ್ಪಡಿಸಿ ಅಲ್ಲಿ ಸಂಜೆ ಗೆಳೆಯರೆಲ್ಲರೂ ಕಲೆತು ಉಂಡು, ಕುಡಿಯುತ್ತಿದ್ದರು. ಕುಡಿದು ಮತ್ತೇರಿಸಿಕೊಳ್ಳುವುದರ ಮೂಲಕ ಮದಿರೆಯ ದೇವನಾದ ಡೈಯೋನಿಸಸ್‍ನಿಗೆ ಹತ್ತಿರವಾಗುತ್ತೇವೆಂದು ನಂಬಿದ್ದರು. ಅಲ್ಲಿಯೇ ಅಲ್ಲಿನ ಗಂಡಸರು ರಾಜಕೀಯ, ಕಲೆ, ತತ್ವಶಾಸ್ತ್ರ, ವಿಜ್ಞಾನ, ವ್ಯವಹಾರಗಳ ಮತ್ತು ಸಾಮಾಜಿಕ ವಿಷಯಗಳ ಚರ್ಚೆ ನಡೆಸುತ್ತಿದ್ದರು. ಅಲ್ಲಿ ಅವರು ಕುಡಿದು ಸಂಕೋಚ ದೂರವಿರಿಸಿ ಮುಕ್ತವಾಗಿ ಚರ್ಚೆ ನಡೆಸಬೇಕೆಂಬುದನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಕುಡುಕರಿಗೆ ತಮ್ಮ ಬಟ್ಟಲು ಹಾಗೂ ಮದಿರೆಯ ಧಾರಕಗಳ ಮೇಲಿನ ವ್ಯಂಗ್ಯ ಅಥವಾ ಅಶ್ಲೀಲ ಚಿತ್ರಗಳು ಮನರಂಜನೆ ನೀಡುತ್ತಿದ್ದವು. ಅವುಗಳ ಮೇಲೆ ಕುಡುಕರನ್ನು, ಹೆಂಗಸರನ್ನು, ದೇವಾನು ದೇವತೆಗಳನ್ನು ಲೇವಡಿ ಮಾಡುವ ಚಿತ್ರಗಳು ಇರುತ್ತಿದ್ದವು. ಗ್ರೀಕ್ ಪುರಾಣದಲ್ಲಿ ಡೈಯಾನಿಸೋಸ್ ಮದಿರೆಯ ದೇವರಾದರೂ ಆತನನ್ನೂ ಮತ್ತು ವೀರಾಧಿವೀರ ಹಕ್ರ್ಯುಲಿಸ್ ಮುಂತಾದವರನ್ನು ಲೇವಡಿ ಮಾಡುವ ಚಿತ್ರಗಳಿರುತ್ತಿದ್ದವು. ಈ ಗ್ರೀಕ್ ಕಲಾವಿದರು ತಮ್ಮ ಪುರಾಣದ ದೇವಾನುದೇವತೆಗಳನ್ನು ಲೇವಡಿ ಮಾಡುವುದರಲ್ಲಿ ಯಾವುದೇ ಹಿಂಜರಿಕೆ ತೋರುತ್ತಿರಲಿಲ್ಲ. 


 ಗಂಡನ ಸಿಂಪೋಸಿಯಂಗೆ ವೈನ್ ಕೊಂಡೊಯ್ಯುತ್ತಿರುವ ಮನೆಯೊಡತಿ ತಾನೂ ವೈನ್ ಕುಡಿಯುತ್ತಿರುವುದು. ಕ್ರಿ.ಪೂ. 460-440ರ ಅವಧಿಯ ಚಿತ್ರ.

ಈ ಕುಡಿತದ ಹಾಗೂ ಅದರ ಪರಿಣಾಮದ ಹಲವಾರು ಚಿತ್ರಗಳು ವ್ಯಂಗ್ಯವಾಗಿ ಗ್ರೀಕ್‍ನ ಮಡಕೆ ಕುಡಿಕೆಗಳ ಮೇಲೆ ಮೂಡಿಬಂದಿವೆ. ಕ್ರಿ.ಪೂ. 460-440ರ ಅವಧಿಯ ಸ್ಕೈಫೋಸ್ ಮೇಲಿನ ಚಿತ್ರವೊಂದರಲ್ಲಿ ಮನೆಯೊಡತಿಗೆ ತನ್ನ ಮನೆಯ ವೈನ್ ಉಗ್ರಾಣದಿಂದ ವೈನ್ ತರಲು ಹೇಳಿದ್ದರೆ ಆಕೆ ಮತ್ತು ಆಕೆಯ ಸೇವಕಿ ವೈನ್ ಹೊತ್ತು ತರುತ್ತಿದ್ದಾರೆ. ಹಿಂದೆ ಸೇವಕಿ ವೈನ್ ಚೀಲ ಮುಂತಾದುವನ್ನು ಹೊತ್ತು ತರುತ್ತಿದ್ದರೆ ಆಕೆಯ ಮುಂದೆ ಮನೆಯೊಡತಿ ತಾನು ಕೊಂಡೊಯ್ಯುತ್ತಿರುವ ಸ್ಕೈಫೋಸ್‍ನಲ್ಲಿನ ವೈನ್ ಕುಡಿದುಕೊಂಡೇ ತನ್ನ ಗಂಡನ ಸಿಂಪೋಸಿಯಂಗೆ ಕೊಂಡೊಯ್ಯುತ್ತಿದ್ದಾಳೆ.

 

ಅತಿಯಾಗಿ ಕುಡಿದ ವ್ಯಕ್ತಿಯೊಬ್ಬ ರಸ್ತೆಯಲ್ಲೇ ಮೂತ್ರ ಮಾಡುತ್ತಿದ್ದಾನೆ ಹಾಗೂ ಆತನ ಸೇವಕ ವೈನ್ ಕುಡಿಯುವ ಪಾತ್ರೆಯಲ್ಲಿಯೇ ಮೂತ್ರ ಸಂಗ್ರಹಿಸುತ್ತಿದ್ದಾನೆ (ಕ್ರಿ.ಪೂ.460-430ರ ಚಿತ್ರ) 
 ಕ್ರಿ.ಪೂ.460-430ರ ಚಿತ್ರವೊಂದರಲ್ಲಿ ಅತಿಯಾಗಿ ಕುಡಿದ ವ್ಯಕ್ತಿಯೊಬ್ಬ ರಸ್ತೆಯಲ್ಲೇ ಮೂತ್ರ ಮಾಡುತ್ತಿದ್ದಾನೆ ಹಾಗೂ ಆತನ ಸೇವಕ ವೈನ್ ಕುಡಿಯುವ ಪಾತ್ರೆಯಲ್ಲಿಯೇ ಮೂತ್ರ ಸಂಗ್ರಹಿಸುತ್ತಿದ್ದಾನೆ. ಕ್ರಿ.ಪೂ. 440-420ರ ಒಂದು ಚಿತ್ರದಲ್ಲಿ ರಾತ್ರಿ ಕುಡಿದು ಬಂದ ಗಂಡ ತನ್ನ ಕೋಲಿನಿಂದ ಮನೆಯ ಬಾಗಿಲು ಬಡಿಯುತ್ತಿದ್ದಾನೆ ಹಾಗೂ ಬಾಗಿಲ ಹಿಂದೆ ದೀಪ ಹಿಡಿದು ನಿಂತಿರುವ ಹೆಂಗಸು ತನ್ನ ಕೈ ಬಾಯಿ ಬಳಿ ತಂದು ಗಾಭರಿಯಿಂದ ನಿಂತಿದ್ದಾಳೆ. 


ರಾತ್ರಿ ಕುಡಿದು ಬಂದ ಗಂಡ ತನ್ನ ಕೋಲಿನಿಂದ ಮನೆಯ ಬಾಗಿಲು ಬಡಿಯುತ್ತಿದ್ದಾನೆ ಹಾಗೂ ಬಾಗಿಲ ಹಿಂದೆ ದೀಪ ಹಿಡಿದು ನಿಂತಿರುವ ಹೆಂಗಸು ತನ್ನ ಕೈ ಬಾಯಿ ಬಳಿ ತಂದು ಗಾಭರಿಯಿಂದ ನಿಂತಿದ್ದಾಳೆ (ಕ್ರಿ.ಪೂ. 440-420ರ ಚಿತ್ರ) 
ಹೆಣ್ಣಿನ ಬಗೆಗೆ ಆಕೆಯ ದಿನನಿತ್ಯದ ಬದುಕಿನ ಬಗೆಗೆ ಗ್ರೀಕ್ ಮಡಕೆ ಕುಡಿಕೆಗಳಲ್ಲಿ ಬೇಕಾದಷ್ಟು ಚಿತ್ರಗಳನ್ನು ಆಗಿನ ಕರಕುಶಲಗಾರರು ರಚಿಸಿದ್ದಾರೆ. ಚಿತ್ರಗಳು ಕಲೆಯಾದರೂ ಅವರಿಗೆ ಅದು ವ್ಯಾಪಾರವಾಗಿತ್ತು ಹಾಗೂ ಮಾರಾಟಕ್ಕೆ ಆಕರ್ಷಣೆಯಾಗಿತ್ತು. ಮಡಕೆಗಳ ಮೇಲಿನ ಚಿತ್ರಗಳು ಅವುಗಳ ಮಾರಾಟವನ್ನೂ ಸಹ ನಿರ್ಧರಿಸುತ್ತಿದ್ದವಲ್ಲದೆ ಅಲ್ಲಿ ಕಲಾಕಾರನ ಅಭಿಪ್ರಾಯ ಮುಖ್ಯವಾಗುತ್ತಿರಲಿಲ್ಲ, ಬದಲಿಗೆ ಯಾವ ಚಿತ್ರ ಬರೆದರೆ ಹೆಚ್ಚು ಮಾರಾಟವಾಗುತ್ತದೆ ಎನ್ನುವುದು ಮುಖ್ಯವಾಗಿರುತ್ತಿತ್ತು. ಗಂಡಸು ಸಾಹಿತ್ಯ, ಕಲೆಯಲ್ಲಿ ತನ್ನ ವ್ಯಂಗ್ಯ, ಲೇವಡಿಗಳಲ್ಲಿ ಹೆಣ್ಣನ್ನು ಗುರಿಮಾಡಿರುವುದು ಕ್ರಿ.ಪೂ. 7ನೇ ಶತಮಾನದಿಂದಲೂ ಕಂಡುಬಂದಿದೆ. ಅರಿಸ್ಟೋಫೇನ್ಸ್‍ನನ್ನೊಳಗೊಂಡಂತೆ ಗ್ರೀಕ್ ನಾಟಕಗಳಲ್ಲಿ ಹೆಣ್ಣನ್ನು ವ್ಯಭಿಚಾರಿ, ಕಳ್ಳತನದಲ್ಲಿ ವೈನ್ ಕುಡಿಯುವವಳು, ಆಕೆ ಸೋಮಾರಿ ಮತ್ತು ಸಾಕಷ್ಟು ಸಮಯ ನೆರೆಹೊರೆಯ ಹೆಂಗಸರೊಂದಿಗೆ ಗೊಡ್ಡುಹರಟೆಯಲ್ಲಿ ತೊಡಗುವವಳು ಎಂಬುದಾಗಿ ಚಿತ್ರಿಸಲಾಗಿದೆ. ಮಡಕೆಗಳ ಮೇಲಿನ ಹೆಣ್ಣಿನ ಕುರಿತಾದ ವ್ಯಂಗ್ಯದ ಮತ್ತು ಲೇವಡಿಯ ಚಿತ್ರಗಳ ಕುರಿತಂತೆ ಸಾಕಷ್ಟು ಸಂಶೋಧನೆ, ಅಧ್ಯಯನ ನಡೆಸಿರುವ ಅಲೆಕ್ಸಾಂಡ್ರೆ ಮಿಶೆಲ್ ಈ ಕುರಿತಂತೆ ನಾಗರಿಕತೆ ಪ್ರಾರಂಭವಾದಾಗಿನಿಂದಲೂ ಹೆಣ್ಣಿನ ಬಗೆಗಿನ ಗಂಡಸಿಗೆ ಇರುವ ಆತಂಕದ ಕುರಿತಂತೆ ತಮ್ಮದೇ ಸಿದ್ಧಾಂತವನ್ನು ಮಂಡಿಸಿದ್ದಾರೆ. ಅವರ ಪ್ರಕಾರ ಗ್ರೀಕ್‍ನ ಮಡಕೆಗಳಲ್ಲಿಯೂ ಹೆಣ್ಣಿನ ಬಗೆಗಿನ ಚಿತ್ರಗಳಲ್ಲಿ ಆಕೆಯ ಮೇಲೆ ತಾನು ಆರೋಪಿಸಿರುವ ಇದೇ ನಾಲ್ಕು ವಿಷಯಗಳ ಕುರಿತಂತೆ ವ್ಯಂಗ್ಯಚಿತ್ರಗಳನ್ನು ರಚಿಸಲಾಗಿದೆ. ಮಿಶೆಲ್ ಹೇಳುವಂತೆ ಗಂಡಿಗೆ ಹೆಣ್ಣಿನ ಕಾಮ, ಆಕೆಯ ಸ್ವಚ್ಛಂದತೆ ಆತಂಕ, ಹೆದರಿಕೆಯ ವಿಷಯವಾಗಿತ್ತು. ಆ ಆತಂಕ, ಹೆದರಿಕೆ ಈ ವ್ಯಂಗ್ಯಚಿತ್ರಗಳಲ್ಲಿ ಮೂಡಿಬಂದಿದೆ ಎನ್ನುತ್ತಾರೆ.

`ಸೋಮಾರಿ ಹೆಣ್ಣು'- ಕಾವಲಿಗೆ ಕೂತ ಹೆಣ್ಣು ನಿದ್ರಿಸುತ್ತಿರುವುದು. ಬೆಕ್ಕೊಂದು ಆ ಮಾಂಸ ಪಡೆಯಲು ಹೊಂಚು ಹಾಕುತ್ತಿದೆ.

ಕ್ರಿ.ಪೂ.500-490ರ ಅವಧಿಯ ಬಟ್ಟಲಿನ ಮೇಲಿನ ಚಿತ್ರವೊಂದರಲ್ಲಿ ಇಬ್ಬರು `ಗೌರವಾನ್ವಿತ' ಮಹಿಳೆಯರು ಒಬ್ಬರಿಗೊಬ್ಬರು ಬೆನ್ನುಮಾಡಿ ತಮ್ಮ ದಿನನಿತ್ಯದ ಕೆಲಸದಲ್ಲಿ ತೊಡಗಿದ್ದಾರೆ, ಬಹುಶಃ ಹಿಟ್ಟು ನಾದುತ್ತಿರಬಹುದು. ಆ ಇಬ್ಬರು ಮಹಿಳೆಯರ ಮಧ್ಯೆ ಮೇಲುಗಡೆ ಶಿಶ್ನದಂತಹ ತಲೆ ಹೊಂದಿರುವ ಪಕ್ಷಿಯೊಂದಿದೆ. ಅದು ಅವರ ಮನಸ್ಸಿನಲ್ಲಿನ ಕಾಮದ ಭಾವನೆಗಳ ಸಂಕೇತವಾಗಿದೆ ಎನ್ನುತ್ತಾರೆ. ಕಾವಲುಗಾರನೇ ನಿದ್ರೆ ಮಾಡುತ್ತಿರುವ ಚಿತ್ರ ಒಂದು ಜನಪ್ರಿಯ ರೂಪಕವೂ ಹೌದು. ಹೆಣ್ಣನ್ನು ಸೋಮಾರಿ ಎಂದು ತೋರಿಸುವ ಚಿತ್ರವೊಂದರಲ್ಲಿ ಒಬ್ಬಾತ ಮಾಂಸ ಕತ್ತರಿಸಿ ನಾಯಿ ಬೆಕ್ಕುಗಳಿಗೆ ಸಿಗದಂತೆ ಉದ್ದನೆ ಕೋಲಿನ ಮೇಲೆ ಇರಿಸಿದ್ದಾನೆ ಹಾಗೂ ಅದರ ಕಾವಲು ಕಾಯಲು ತನ್ನ ಪತ್ನಿಯನ್ನು ಕೂರಿಸಿದ್ದಾನೆ. ಆದರೆ ಆಕೆ ತನ್ನ ಕರ್ತವ್ಯ ಮರೆತು ನಿದ್ರೆ ಮಾಡುತ್ತಿದ್ದಾಳೆ. ಬೆಕ್ಕೊಂದು ಆ ಮಾಂಸ ಪಡೆಯಲು ಹೊಂಚು ಹಾಕುತ್ತಿದೆ

ನೀರು ತುಂಬಿದ್ದರೂ ಅದರ ಪರಿವೆಯಿಲ್ಲದೆ ಮಾತಿನಲ್ಲಿ ತೊಡಗಿರುವ ಹೆಣ್ಣು (ಕ್ರಿ.ಪೂ.500-480ರ ಅವಧಿಯ ಚಿತ್ರ)  

ಗ್ರೀಕ್ ಸಮಾಜದಲ್ಲಿ ಬಹುಪಾಲು ಎಲ್ಲ ಸಂಸ್ಕøತಿಗಳಲ್ಲಿರುವಂತೆ ಮನೆಗೆ ನೀರು ತರುವವಳು ಹೆಣ್ಣೇ ಆಗಿರುತ್ತಿದ್ದಳು. ಆ ಹೆಂಗಸರು ಗ್ರೀಸ್‍ನಲ್ಲಿಯೂ ಊರಿನಲ್ಲೋ ಅಥವಾ ಊರಿನ ಹೊರಗೋ ನೀರಿಗೆ ಹೋಗಬೇಕಾಗಿತ್ತು. ಸಾಮಾನ್ಯವಾಗಿ ಅಲ್ಲಿ ಹೆಂಗಸರು ಕಲೆತು `ಗೊಡ್ಡುಹರಟೆ'ಯಲ್ಲಿ ತೊಡಗುತ್ತಾರೆ, ಅಷ್ಟೇಕೆ ಅವರು ಅಲ್ಲಿಗೆ ತಾವು ಹೋದ ಕೆಲಸವನ್ನೇ ಮೈಮರೆಯುತ್ತಾರೆ ಎನ್ನುವುದು ಆಗಿನ ಗಂಡಸರ ಅಭಿಪ್ರಾಯ ಸಹ ಆಗಿತ್ತು. ಅದನ್ನೇ ವ್ಯಂಗ್ಯಚಿತ್ರ ರೂಪದಲ್ಲಿ ಕ್ರಿ.ಪೂ.500-480ರ ಅವಧಿಯ `ಹೈಡ್ರಿಯ'ವೊಂದರ ಮೇಲೆ ಕಾಣಬಹುದು. ಅದರಲ್ಲಿ ಇಬ್ಬರು ಹೆಂಗಸರು ನೀರಿಗಾಗಿ ಬಂದಿದ್ದಾರೆ. ಸಿಂಹದ ಬಾಯಿಯ ನಳಿಕೆಯಿಂದ ನೀರು ಸುರಿಯುತ್ತಿದೆ. ಒಬ್ಬ ಹೆಂಗಸು ನೀರು ತುಂಬಿಕೊಂಡು, ತುಂಬಿದ ಹೈಡ್ರಿಯಾವನ್ನು ತನ್ನ ತಲೆಮೇಲಿರಿಸಿಕೊಂಡು ಹೊರಡಲು ಸಿದ್ಧವಾಗಿ ಮತ್ತೊಬ್ಬ ಹೆಂಗಸಿನೊಂದಿಗೆ ಮಾತನಾಡುತ್ತಿದ್ದಾಳೆ. ಈ ಹೆಂಗಸಿನ ಹೈಡ್ರಿಯಾ ತುಂಬಿ ನೀರು ಹೊರ ಹರಿಯುತ್ತಿದೆ. ಆದರೆ ಆಕೆಗೆ ಅದರ ಪರಿವೆಯೇ ಇಲ್ಲದಂತೆ ಮಾತಿನಲ್ಲಿ ತಲ್ಲೀನಳಾಗಿದ್ದಾಳೆ. 
 

ಅರ್ಧ ನೀರು ಹೊರಗೆ ಹರಿಯುತ್ತಿರುವ ಪರಿವೆಯಿಲ್ಲದೆ ಮಾತಿನಲ್ಲಿ ತೊಡಗಿರುವ ಹೆಣ್ಣು (ಕ್ರಿ.ಪೂ.510-490ರ ಅವಧಿಯ ಚಿತ್ರ)  

ಮತ್ತೊಂದು ಕ್ರಿ.ಪೂ.510-490ರ ಅವಧಿಯ `ಹೈಡ್ರಿಯ'ವೊಂದರ ಮೇಲಿನ ಚಿತ್ರದಲ್ಲಿ ನೀರಿಗೆ ಬಂದಿರುವ ಹೆಂಗಸು ಸಿಂಹದ ಬಾಯಿಯ ನಳಿಕೆಯ ಕೆಳಗೆ ತನ್ನ ಹೈಡ್ರಿಯ ನೀರು ತುಂಬಿಸಿಕೊಳ್ಳಲು ಇರಿಸಿದ್ದಾಳೆ, ಆದರೆ ಅದನ್ನು ಸರಿಯಾಗಿ ಇರಿಸದೇ ಇರುವುದರಿಂದ ನೀರು ಅರ್ಧ ಹೊರಗೇ ಸುರಿಯುತ್ತಿದೆ. ಆಕೆಗೆ ಅದರ ಪರಿವೆಯಿಲ್ಲ, ಮತ್ತೊಂಡೆಗೆ ತಿರುಗಿ ಮಾತಿನಲ್ಲಿ ತಲ್ಲೀನಳಾಗಿದ್ದಾಳೆ. ಗ್ರೀಕ್ ಸಮಾಜದಲ್ಲಿ ಈ ರೀತಿಯ ನೀರು ತುಂಬಿಸಿಕೊಳ್ಳುವ ಸ್ಥಳಗಳೇ ಆಗಿನ ಹೆಂಗಸರಿಗೆ ಪರಸ್ಪರ ಭೇಟಿಯಾಗುವ, ಮಾತನಾಡುವ ಸ್ಥಳಗಳಾಗಿದ್ದವು. ಹಾಗಾಗಿ ಗಂಡಿಗೆ ಅಂತಹ ಭೇಟಿಗಳನ್ನು ಲೇವಡಿ ಮಾಡಬೇಕಾಗಿತ್ತು ಎನ್ನುತ್ತಾರೆ ಮಿಶೆಲ್.
ತಾವು ಪವಿತ್ರವೆಂದು ಭಾವಿಸುವ, ದೇವತೆಗಳನ್ನೂ ಸಹ ಲೇವಡಿ ಮಾಡುವ ಕಲಾಕಾರರ ಹಾಗೂ ಅವುಗಳನ್ನು ಸ್ವೀಕರಿಸುತ್ತಿದ್ದ ಮತ್ತು ಸಹಿಸುತ್ತಿದ್ದ ಸಮಾಜದ ಮನೋಭಾವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲೀ ಉಲ್ಲೇಖನೀಯ.
ಗ್ರೀಕ್ ಕುಂಬಾರಿಕೆ ಚಿತ್ರಕಲೆ ಅಚ್ಚರಿಯೆನ್ನುವಂತೆ ಕ್ರಿ.ಪೂ. 5ನೇ ಶತಮಾನದ ಮಧ್ಯಭಾಗದಿಂದಲೇ ಕಡಿಮೆಯಾಗತೊಡಗಿತು. ಗೋಡೆ ಮುಂತಾದವುಗಳ ಮೇಲೆ ದೊಡ್ಡ ಚಿತ್ರಕಲೆ ರಚಿಸುವ ಕಲಾವಿದರೊಂದಿಗೆ ಮಡಕೆ ಕುಡಿಕೆಗಳಂತಹ ಸಣ್ಣ ಮತ್ತು ಬಾಗಿದ ಮೇಲ್ಮೈನ ಮೇಲೆ ಚಿತ್ರ ರಚಿಸುವವರು ಸ್ಪರ್ಧಿಸುವುದು ಕಷ್ಟವಾಗಿರಲೂಬಹುದು. ಕ್ರಿ.ಪೂ. 430ರ ನಂತರ ಮಡಕೆಗಳ ಮೇಲಿನ ಚಿತ್ರಕಲೆಯ ಆಸಕ್ತಿ ಹಾಗೂ ಗೌರವವೂ ಕ್ರಮೇಣ ಕಡಿಮೆಯಾಗತೊಡಗಿ ಕ್ರಿ.ಪೂ. 320ರ ಹೊತ್ತಿಗೆ ಅಥೆನ್ಸ್‍ನಿಂದ ಸಂಪೂರ್ಣ ಕಣ್ಮರೆಯಾಯಿತು. ಗ್ರೀಕ್ ನಾಗರಿಕತೆ ಉತ್ತುಂಗದಲ್ಲಿದ್ದಾಗ ಅಲ್ಲಿನ ಸಾಮಾನ್ಯ ಜನರ ಬದುಕು, ಸಂಸ್ಕøತಿಯನ್ನು ಪರಿಚಯಿಸುವ ಚಿತ್ರಗಳ ಮೂಲಕ ಹಾಗೂ ಬದುಕಿನ ಮತ್ತೊಂದು ಮುಖವಾದ ವ್ಯಂಗ್ಯ, ಲೇವಡಿಯನ್ನು ಮನೋಲ್ಲಾಸದಿಂದ ಪರಿಚಯಿಸುವ ಗ್ರೀಕ್‍ನ ಮಡಕೆ ಕುಡಿಕೆಗಳು ಇಂದು ಜಗತ್ತಿನಾದ್ಯಂತ ವಸ್ತುಸಂಗ್ರಹಾಲಯಗಳಲ್ಲಿವೆ. ಈ ರೀತಿಯ ಅಧ್ಯಯನಕ್ಕೊಳಪಡದ ಸಾವಿರಾರು ಕುಂಬಾರಿಕೆ ವಸ್ತುಗಳು ಉಗ್ರಾಣಗಳಲ್ಲಿವೆ. ವಿದ್ವಾಂಸರಿಗೆ ಇಂದಿಗೂ ಈ ರೀತಿಯ ವಸ್ತುಗಳು ತಮ್ಮ ಉತ್ಖನನದಲ್ಲಿ ದೊರಕುತ್ತಲೇ ಇವೆ.
ಡಾ.ಜೆ.ಬಾಲಕೃಷ್ಣ


3 ಕಾಮೆಂಟ್‌ಗಳು:

ಹೆಚ್ ಎ ಪುರುಷೋತ್ತಮ ರಾವ್ ಹೇಳಿದರು...

ಕುಂಬಾರಿಕೆ, ಕುಂಬಾರರ ಬದುಕು ಕುರಿತ ವ್ಯಂಗ ಚಿತ್ರಗಳ ಬಗ್ಗೆ ಬರೆದ ಸಂಶೋಧನಾತ್ಮಕ ಲೇಖನ ಮಹಿಳೆಯರ ಕುರಿತಂತೆ ಪುರುಷ ಸಮಾಜದ ಧೋರಣೆಯನ್ನು ಪ್ರತಿಬಿಂ ಸಸುತ್ತದೆ. ಅದು ಇಂದಿಗೂ ಅನ್ವಯವಾಗುವುದು ಸಾಮಾಜಿಕ ವ್ಯಂಗವೇ ಸರಿ. ಅತ್ಯುತ್ತಮ ಲೇಖನ ಬಾಲು.

Datta3 ಹೇಳಿದರು...

ಆಗಿನ ಕಾಲದಲ್ಲೇ ಜನರು ವ್ಯಂಗ್ಯಚಿತ್ರಗಳನ್ನು ಸ್ವೀಕರಿಸುತ್ತಿದ್ದ ಪರಿ ನೋಡಿ ಆಶ್ಚರ್ಯವಾಗುತ್ತಿದೆ. ಬರುಬರುತ್ತಾ ನಾವು ಅನಾಗರಿಕರಾಗುತ್ತಿದ್ದೇವೆ ಎನ್ನುವುದೇ ವಿಷಾದದ ಸಂಗತಿ!

Dr.Jyothi ಹೇಳಿದರು...

very nice sir