Translate
ಶನಿವಾರ, ಜೂನ್ 16, 2012
ಗುರುವಾರ, ಜೂನ್ 14, 2012
ಕತೆ ಹೇಳದ ಶಿಲೆಗಳು- ಸ್ಟೋನ್‌ಹೆಂಜ್
ಈ ವಾರದ `ಸುಧಾ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಚಿತ್ರ ಲೇಖನ
ಐದು ಸಾವಿರ ವರ್ಷಗಳ ಹಿಂದೆ ಶಿಲಾಯುಗದಲ್ಲಿ ಲೋಹಗಳೇ ಇಲ್ಲದ ಸಮಯದಲ್ಲಿ ಸ್ಟೋನ್‌ಹೆಂಜ್ ನಿರ್ಮಾಣಕ್ಕೆ ಕುಳಿತೋಡಲು ಬಳಸಲಾಗಿರುವ ಜಿಂಕೆಯ ಕವಲು ಕೊಂಬುಗಳು ಹಾಗೂ ಅದಕ್ಕೂ ಹಿಂದಿನ ಸಮಯದ ಬಹುಶಃ ಬಲಿನೀಡಿರಬಹುದಾದ ಎತ್ತಿನ ಕೆಳದವಡೆ
ಅಮೀಸ್‌ಬರಿಯ ಬಿಲ್ಲುಗಾರ
(Photos courtesy: Wessex Archaeology)
2002ರಲ್ಲಿ ಕಂಡುಹಿಡಿಯಲಾದ ಅಮೀಸ್‌ಬರಿ ಬಿಲ್ಲುಗಾರನ ಸಮಾಧಿ.

ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಚಿನ್ನದ ಕಿವಿಯೋಲೆ ಅಥವಾ ಕೂದಲು ಸಿಂಗರಿಸುವ ಆಭರಣಗಳು. ಇಡೀ ಬ್ರಿಟನ್ನಿನಲ್ಲೇ ದೊರಕಿರುವ ಅತ್ಯಂತ ಪ್ರಾಚೀನ ಚಿನ್ನದ ಆಭರಣಗಳು ಇವಾಗಿವೆ
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಫ್ಲಿಂಟ್ ಶಿಲೆಯ ಬಾಣದ ಮೊನೆಗಳು
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಬೀಕರ್ ಆಕಾರದ ಮಡಕೆಗಳು
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ತಾಮ್ರದ ಚಾಕುಗಳು
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಬಿಲ್ಲುಗಾರರ ಮುಷ್ಠಿ ರಕ್ಷಕ ಪಟ್ಟಿಗಳು
ಡಾ.ಜೆ.ಬಾಲಕೃಷ್ಣ
j.balakrishna@gmail.com
ಕತೆ ಹೇಳದ ಶಿಲೆಗಳು- ಸ್ಟೋನ್‌ಹೆಂಜ್
ಬಾತ್ ನಗರದ ರೋಮನ್ನರು ನಿರ್ಮಿಸಿದ ಬಿಸಿನೀರ ‘ಸ್ನಾನದಮನೆ’ಯಿಂದ ನಮ್ಮ ಪಯಣ ಮುಂದುವರಿದದ್ದು ಸ್ಟೋನ್‌ಹೆಂಜ್ ದಿಕ್ಕಿನೆಡೆಗೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಅದರ ಬಗ್ಗೆ ಓದಿದಾಗಿನಿಂದಲೂ ಅದರ ನಿಗೂಢತೆಯ ಬೆರಗು ನನ್ನಿಂದ ದೂರವಾಗಿರಲಿಲ್ಲ. ಒಂದಲ್ಲ ಒಂದು ದಿನ ನಾನೇ ಸ್ವತಃ ಅದನ್ನು ನೋಡುತ್ತೇನೆಂದು ನಾನು ಊಹಿಸಿಯೂ ಇರಲಿಲ್ಲ. ಸುಮಾರು ಐದು ಸಾವಿರ ವರ್ಷಗಳ ಅಥವಾ ಅದಕ್ಕಿಂತಲೂ ಹಳೆಯದಾದ ಈ ಪುರಾತನ ಮಾನವ ನಿರ್ಮಿತ ರಚನೆ ಶತಶತಮಾನಗಳಿಂದ ನಿಬ್ಬೆರಗಿನ ವಸ್ತುವಾಗಿದೆ. ಸ್ಟೋನ್‌ಹೆಂಜ್ ಒಬ್ಬ ವ್ಯಕ್ತಿಯ ಅಥವಾ ಸಮುದಾಯದ ಸ್ಮಶಾನವೇ? ಖಗೋಳ ಅಧ್ಯಯನದ ರಚನೆಯೆ? ಬಲಿ ನೀಡುತ್ತಿದ್ದ ಒಂದು ಆರಾಧನಾ ಸ್ಥಳವೇ? ಯಾವುದೇ ಲೋಹದ ಆವಿಷ್ಕಾರವಾಗಿರದ ಸಮಯದ ಆದಿ ಮಾನವ ಅಷ್ಟೊಂದು ಬೃಹತ್ ಶಿಲಾರಚನೆಯನ್ನು ಹೇಗೆ ನಿರ್ಮಿಸಿದ? ಅವುಗಳ ನಿರ್ಮಾಣಕ್ಕೆ ಬೃಹತ್ ಶಿಲೆಗಳನ್ನು ನೂರಾರು ಮೈಲುಗಳ ದೂರದಿಂದ ಹೇಗೆ ಸಾಗಿಸಿದ? ಅವುಗಳ ನಿರ್ಮಾಣದಲ್ಲಿ ಎಷ್ಟು ಜನ ತೊಡಗಿರಬಹುದು ಎಷ್ಟು ತಲೆಮಾರುಗಳು ಅವುಗಳನ್ನು ನಿರ್ಮಿಸಿರಬಹುದು? ಅಥವಾ ಕೆಲವರು ಹೇಳುವಂತೆ ಅದನ್ನು ಅನ್ಯಗ್ರಹ ಜೀವಿಗಳು ನಿರ್ಮಿಸಿದವೆ? ಅದು ಅವರು ಬಂದಿಳಿಯುವ ನಿಲ್ದಾಣವಾಗಿತ್ತೆ? ಅದರ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಅದನ್ನು ಅನ್ಯಗ್ರಹ ಜೀವಿಗಳು ನಿರ್ಮಿಸಿರುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಅದೇನೇ ಆಗಿರಲಿ, ಅದನ್ನು ನಿರ್ಮಿಸಿದ ಮಾನವನಿಗೆ ಅದನ್ನು ಏಕೆ ನಿರ್ಮಿಸುತ್ತಿದ್ದೇನೆ ಎನ್ನುವ ಸ್ಪಷ್ಟ ಕಲ್ಪನೆ ಖಂಡಿತಾ ಇತ್ತು ಎನ್ನುವುದು ನಿಜ.
ಆದರೆ, ಕಲ್ಲು ಮಾತನಾಡುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೆ? ನಾವು ಸ್ಟೋನ್‌ಹೆಂಜ್ ತಲುಪಿದಾಗ ಸಂಜೆ ಸುಮಾರು ಐದು ಗಂಟೆಯಾಗಿತ್ತು. ದಕ್ಷಿಣ ಇಂಗ್ಲೆಂಡಿನ ಸ್ಯಾಲಿಸ್‌ಬರಿ ಬಯಲುಸೀಮೆಯ ದೊಡ್ಡ ಬಯಲಿನಲ್ಲಿರುವ ಸ್ಟೋನ್‌ಹೆಂಜ್ ಈಗ ಒಂದು ‘ಇಂಗ್ಲಿಷ್ ಹೆರಿಟೇಜ್’ ಸ್ಥಾನವಾಗಿದ್ದು ಅಲ್ಲಿ ಯಾವುದೇ ಶಾಶ್ವತ ಸಿಮೆಂಟ್ ಕಟ್ಟಡಗಳಿಲ್ಲ. ಅಲ್ಲಿನ ಸ್ಥಳ ಮತ್ತು ರಚನೆಯನ್ನು ವಿವರಿಸಲು ಅಥವಾ ಗೈಡ್ ಮಾಡಲು ಯಾರೂ ಬರುವುದಿಲ್ಲ. ಬದಲಿಗೆ ಎಲ್ಲರಿಗೂ ಉಚಿತವಾಗಿ ‘ಆಡಿಯೋ ಗೈಡ್’ ಕೊಡುತ್ತಾರೆ. ಅದು ಇಂಗ್ಲಿಷ್ ಮತ್ತು ಹಲವಾರು ಯೂರೋಪಿಯನ್ ಭಾಷೆಗಳಲ್ಲಿ ಸ್ಟೋನ್‌ಹೆಂಜ್‌ನ ವಿವರಣೆ ನೀಡುತ್ತದೆ. ಸ್ಟೋನ್‌ಹೆಂಜ್ ಸುತ್ತಲೂ ಅಲ್ಲಲ್ಲಿ ಸಂಖ್ಯೆ ಮತ್ತು ಹೆಡ್‌ಫೋನ್ ಚಿತ್ರವಿದ್ದು ಆ ಸ್ಥಳದಲ್ಲಿ ನಿಂತು ಆ ಸಂಖ್ಯೆಯನ್ನು ನಿಮ್ಮ ಆಡಿಯೋ ಗೈಡ್‌ನಲ್ಲಿ ಒತ್ತಿದರೆ ಅದು ಆ ಸ್ಥಳದ ವಿವರಣೆ ಹೇಳುತ್ತದೆ. ಆ ವಿವರಣೆ ಎಷ್ಟು ಸ್ಪಷ್ಟವಾಗಿ ಮತ್ತು ನಿಖರವಾಗಿ ಇರುತ್ತದೆಂದರೆ ಯಾವುದೋ ವ್ಯಕ್ತಿ ನಿಮ್ಮೆದುರಿಗೆ ನಿಂತು ವಿವರಣೆ ನೀಡುವಂತಿರುತ್ತದೆ. ಆ ಸ್ಥಳದ ವಿವರಣೆ ಮುಗಿದ ತಕ್ಷಣ ಅದೇ ಮುನ್ನಡೆಯಲು ಹೇಳಿ ಕರೆದೊಯ್ಯುತ್ತದೆ.
ರೊಯ್ಯನೆ ಬೀಸುತ್ತಿದ್ದ ತಂಗಾಳಿ ವಾತಾವರಣವನ್ನು ನಿಗೂಢವಾಗಿಸಿತ್ತು. ಇದೇ ಸ್ಥಳದಲ್ಲಲ್ಲವೇ ಸಾವಿರಾರು ವರ್ಷಗಳ ಹಿಂದಿನ ಮಾನವ ನಡೆದಾಡಿದ್ದು? ಆ ಬೃಹತ್ ಶಿಲೆಗಳನ್ನು ಎಳೆದಾಡಿದ್ದು? ಇಲ್ಲಿಯೇ ಎಷ್ಟೋ ಜನರ ಸಮಾಧಿಗಳು ದೊರೆತಿವೆ. ಪ್ರೇತಾತ್ಮಗಳಲ್ಲಿ ನನಗೆ ನಂಬಿಕೆ ಇಲ್ಲದಿದ್ದರೂ ಒಂದರೆಕ್ಷಣ ಈ ಶಿಲಾರಚನೆಯನ್ನು ನಿರ್ಮಿಸಿದ ಮಾನವರ ಆತ್ಮಗಳು ನಮ್ಮನ್ನು ಗಮನಿಸುತ್ತಿರಬಹುದೆ ಎನ್ನಿಸಿತು.
ಮೊದಲ ನೋಟಕ್ಕೆ ಸ್ಟೋನ್‌ಹೆಂಜ್ ಏನೂ ಅನ್ನಿಸುವುದಿಲ್ಲ. ಯಾವುದೋ ಬಯಲಿನಲ್ಲಿ ಏನೋ ಕಲ್ಲುಗಳನ್ನು ತಂದು ನಿಲ್ಲಿಸಿದ್ದಾರೆ ಎನ್ನಿಸುತ್ತದೆ. ನೋಡನೋಡುತ್ತಿದ್ದಂತೆ ಶತಶತಮಾನಗಳಿಂದ ತನ್ನೆಲ್ಲ ನಿಗೂಢಗಳನ್ನು ಇಂದಿಗೂ ಬಿಟ್ಟುಕೊಡದ ಅದು ನಮ್ಮ ಬೆರಗನ್ನು ಅಪಹಾಸ್ಯ ಮಾಡುವಂತೆ ತೋರುತ್ತದೆ, ನಾಗರಿಕತೆಯ ಎಲ್ಲ ಹಂತಗಳನ್ನು ಕಂಡಿರುವ ಅದೊಂದು ನಿಗೂಢ ಕಾಲನೌಕೆಯಂತೆ ಭಾಸವಾಗುತ್ತದೆ.
ಸ್ಟೋನ್‌ಹೆಂಜ್ ನಿರ್ಮಿಸಿದ ಜನರು ಅದನ್ನು ಬೇಕಾಬಿಟ್ಟಿ ನಿರ್ಮಿಸಿಲ್ಲ. ಅವರು ಎಂಥದನ್ನೋ, ಹಿಂದೆಂದು ತಿಳಿದಿರದ ಹೊಸ ವಿಷಯವೊಂದನ್ನು, ಎಂಥದೋ ಸತ್ಯವೊಂದನ್ನು ಕಂಡುಕೊಂಡಿದ್ದರು. ಆ ಶಿಲಾರಚನೆಗಳು ನಮಗೆ ಬಿಟ್ಟುಕೊಡದ ನಿಗೂಢ ಅರ್ಥವನ್ನು ತಮ್ಮ ಒಡಲಲ್ಲಿ ಹುದುಗಿಸಿಕೊಂಡಿವೆ. ಆ ರಚನೆಗಳ ಅರ್ಥ ಏನಿರಬಹುದು? ಶತಶತಮಾನಗಳಿಂದ ಜನ ಅವುಗಳಿಗೆ ತಮ್ಮದೇ ವ್ಯಾಖ್ಯಾನಗಳನ್ನು ನೀಡುತ್ತಾ ಬಂದಿದ್ದಾರೆ. ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ವ್ಯಾಖ್ಯಾನಗಳನ್ನು ಪಡೆದಿರುವ ಹಾಗೂ ಇನ್ನೂ ಪಡೆಯುತ್ತಿರುವ ಅತ್ಯಂತ ಪ್ರಾಚೀನ ಮಾನವ ನಿರ್ಮಿತ ರಚನೆ ಇದೇ ಆಗಿರಬಹುದು- ಇಂದಿಗೂ ಅದನ್ನು ನಿರ್ಮಿಸಿದವರು ಅದನ್ನು ಯಾವುದಕ್ಕಾಗಿ ನಿರ್ಮಿಸಿದರು ಎಂಬುದು ನಮಗೆ ತಿಳಿದಿಲ್ಲ. ಈ ಹಿಂದೆ ಪ್ರಾಕ್ತನ ಶಾಸ್ತ್ರಜ್ಞರು ಅದರ ಅಂಗುಲ ಅಂಗುಲವನ್ನೂ, ಅವುಗಳ ನೆರಳನ್ನೂ ಬಿಡದಂತೆ ಅಭ್ಯಸಿಸಿ ಅವುಗಳ ಅರ್ಥ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಅವುಗಳ ಮೇಲಿನ ಅಧ್ಯಯನಗಳು ಇಂದಿಗೂ ನಡೆಯುತ್ತಿವೆ. ಸುತ್ತಮುತ್ತಲ ಪ್ರದೇಶಗಳಲ್ಲೂ ಅಧ್ಯಯನಗಳು ನಡೆಯುತ್ತಿವೆ. ಹತ್ತಿರದಲ್ಲೇ ಒಂದು ಶಿಲಾಯುಗದ ಗ್ರಾಮಗಳ ಉಳಿಕೆಗಳು ದೊರೆತಿವೆ, ಸತ್ತವರನ್ನು ಹೂತಿಟ್ಟಿ ಸ್ಥಳಗಳಲ್ಲಿ ಅಸ್ಥಿಪಂಜರಗಳು ದೊರೆತಿವೆ, ಶಿಲೆಯ ಬಾಣದ ಮೊನೆಗಳು ದೊರೆತಿವೆ.
ಸ್ಟೋನ್‌ಹೆಂಜ್ ಪೂರ್ಣಗೊಂಡಾಗ ಹೀಗಿದ್ದಿರಬಹುದು- ಕಲಾವಿದನ ಕಲ್ಪನೆ
ಇಂಗ್ಲಿಷ್‌ನಲ್ಲಿ ‘ಹೆಂಜ್’ ಎಂದರೆ ಮಧ್ಯೆ ತಗ್ಗು ಇದ್ದು ಸುತ್ತಲೂ ಬದು ಅಥವಾ ಕಾಲುವೆಯಂತಹ ರಚನೆ ಇರುವುದು. ಆ ಅರ್ಥದಲ್ಲಿ ಸ್ಟೋನ್‌ಹೆಂಜ್ ಒಂದು ‘ಹೆಂಜ್’ ಅಲ್ಲವೇ ಅಲ್ಲ. ಅಲ್ಲಿ ವರ್ತುಲಾಕಾರದಲ್ಲಿ ಸುತ್ತಲೂ ಕಾಲುವೆಯಿದ್ದು ಮಧ್ಯೆ ಉಬ್ಬಿದ ಅಥವಾ ದಿಬ್ಬದಂತಹ ರಚನೆ ಇತ್ತು. ಈಗ ಜನರು, ಪ್ರಾಖ್ತನ ತಜ್ಞರು ಓಡಾಡಿ ಅದು ಸಮತಟ್ಟಾಗಿದೆ. ಶಿಲಾಯುಗದ ವೃತ್ತಾಕಾರದ ಕಾಲುವೆಯಂತಹ ರಚನೆಗಳು, ದಿಬ್ಬಗಳು, ವೃತ್ತಾಕಾರದ ಮರದ ರಚನೆಗಳು, ಕಲ್ಲಿನ ವೃತ್ತಾಕಾರದ ಮತ್ತು ಕುದುರೆ ಲಾಳದ ಆಕಾರದ ರಚನೆಗಳು ಬ್ರಿಟನ್ನಿನಲ್ಲೆಲ್ಲಾ ಕಂಡುಬಂದಿವೆ. ಸ್ಟೋನ್‌ಹೆಂಜ್ ತನ್ನ ವಿಕಾಸದ ಹಾದಿಯಲ್ಲಿ ಈ ಎಲ್ಲ ಹಂತಗಳನ್ನೂ ಹಾದುಬಂದಿದೆ. ಇಂದಿನ ಕಾಲಕ್ಕೆ ವಿಶಿಷ್ಟ ರಚನೆಯೆನ್ನಿಸುವ ಸ್ಟೋನ್‌ಹೆಂಜ್ ಬಹುಶಃ ಸುಮಾರು 5000 ವರ್ಷಗಳ ಹಿಂದೆ ತನ್ನದೇ ಸಮಯದಲ್ಲೂ ವಿಶಿಷ್ಟ ರಚನೆಯೇ ಆಗಿದ್ದಿರಬಹುದು. ಆ ಶಿಲಾರಚನೆ ನಿರ್ಮಾಣವಾಗಿ ಸುಮಾರು 5000 ವರ್ಷಗಳಾಗಿದ್ದಲ್ಲಿ ಅದು ಇರುವ ಸ್ಥಳದಲ್ಲಿ ಅದಕ್ಕಿಂತಲೂ ಮೊದಲು ಅದೇ ಸ್ಥಳದಲ್ಲಿ ಮರದ ರಚನೆಗಳಿದ್ದ ಕುರುಹುಗಳಿವೆ. ಆ ರಚನೆಗಳು ಅಲ್ಲಿನ ಜನರ ವಾಸವನ್ನು ಸುಮಾರು ಎಂಟು ಸಾವಿರ ವರ್ಷಕ್ಕೂ ಹಿಂದಕ್ಕೆ ಕೊಂಡೊಯ್ಯುತ್ತವೆ.
ಸ್ಟೋನ್‌ಹೆಂಜ್‌ನ ಬೃಹತ್ ನೀಲಶಿಲೆಗಳನ್ನು 240 ಕಿ.ಮೀ. ದೂರದಲ್ಲಿರುವ ವೇಲ್ಸ್‌ನ ಪ್ರೆಸಿಲಿ ಪರ್ವತಗಳ ಕ್ವಾರಿಗಳಿಂದ ಸಾಗಿಸಿ ತರಲಾಗಿದೆ. ಬಹುಪಾಲು ಆ ಶಿಲೆಗಳನ್ನು ಕ್ರಿ.ಪೂ.2500 ವರ್ಷಗಳಿಗೆ ಮೊದಲೇ ಸಾಗಿಸಿರಬೇಕು. ಇನ್ನೂರ ಐವತ್ತು ಮೈಲುಗಳ ದೂರದಿಂದ ಆ ಶಿಲೆಗಳನ್ನು ಆ ಕಾಲದಲ್ಲಿ ಹೇಗೆ ಸಾಗಿಸಿದರೆಂಬುದೇ ವಿಸ್ಮಯದ ವಿಷಯ. ಅದಾದನಂತರ ತಲಾ 40 ಟನ್‌ಗೂ ಹೆಚ್ಚು ತೂಕವಿರುವ ಸಾರ್ಸೆನ್ ಶಿಲೆಗಳೆಂದು ಕರೆಯಲ್ಪಡುವ ದೈತ್ಯ ಶಿಲೆಗಳನ್ನು 30 ಕಿ.ಮೀ. ದೂರದ ಮಾರ್ಲ್‌ಬರೋ ಡೌನ್‌ನಿಂದ ಸಾಗಿಸಿ ತಂದಿದ್ದಾರೆ. ಅವುಗಳ ಸಾಗಾಣಿಕೆಯನ್ನು ಏವಾನ್ ನದಿಯ ಮೂಲಕ ಮಾಡಿರಬಹುದೆಂಬುದು ತಜ್ಞರ ಊಹೆ. ಸ್ಟೋನ್‌ಹೆಂಜ್ ಒಂದು ರೀತಿಯಲ್ಲಿ ನಿರಂತರವಾಗಿ ವಿಕಾಸಗೊಂಡ ರಚನೆಯಾಗಿದೆ. ಕಾರ್ಬನ್ ಡೇಟಿಂಗ್ ಅನ್ವಯ ಸ್ಟೋನ್‌ಹೆಂಜ್‌ನ ಶಿಲಾರಚನೆಯ ಮೊದಲ ಹಂತದ ನಿರ್ಮಾಣ ಕಾರ್ಯ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಪ್ರಾರಂಭವಾಯಿತು ಹಾಗೂ ಕೊನೆಯ ಹಂತದ ನಿರ್ಮಾಣ ಕಾರ್ಯ ಸುಮಾರು ಮೂರು ಸಾವಿರದ ಮುನ್ನೂರು ವರ್ಷಗಳ ಹಿಂದೆ ನಡೆದಿದೆ. ಶಿಲಾರಚನೆಯ ನಿರ್ಮಾಣ ಕಾರ್ಯಕ್ಕೂ ಮೊದಲು ಅಲ್ಲಿ ಮರದ ರಚನೆಯಿದ್ದ ಗುರುತುಗಳಿವೆ. ಜಾನ್ ಆಬ್ರೆ (1626-1697) ಎಂಬ ಪ್ರಾಖ್ತನ ತಜ್ಞ ಮೊದಲಿಗೆ ಮರದ ಕಂಬಗಳನ್ನು ನೆಟ್ಟಿದ್ದ ಗುರುತುಗಳನ್ನು ಪತ್ತೆ ಹಚ್ಚಿದ್ದರಿಂದ ಆ ಗುರುತುಗಳಿಗೆ ‘ಆಬ್ರೆ ರಂಧ್ರಗಳು’ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಆ ರಂಧ್ರಗಳು ವೃತ್ತಾಕಾರದಲ್ಲಿ ಸ್ಟೋನ್‌ಹೆಂಜ್‌ನ ಸುತ್ತಲೂ ಇವೆ. ಶಿಲಾರಚನೆಗೂ ಮೊದಲು ಅಲ್ಲಿ ಮರದ ಕಂಬಗಳ ರಚನೆಯಿದ್ದು ಆ ಕಂಬಗಳು ಕ್ರಮೇಣ ಶಿಥಿಲಗೊಂಡು, ಕೊಳೆತುಹೋದನಂತರ ಆ ರಂಧ್ರಗಳಲ್ಲಿ ಸತ್ತವರನ್ನು ಸುಟ್ಟನಂತರ ಅವರ ಬೂದಿ ಮತ್ತು ಇತರ ಅವಶೇಷಗಳನ್ನು ಹೂಳಲಾಗಿದೆ.
ಸ್ಟೋನ್‌ಹೆಂಜ್‌ನ ಪಕ್ಷಿನೋಟ- ಇಂಟರ್‌ನೆಟ್ ಚಿತ್ರ
ಹತ್ತಿರದ ಏವಾನ್ ನದಿಯೊಂದಿಗೆ ನಮಗೆ ತಿಳಿದಿರದ ಸಂಬಂಧ ಹೊಂದಿರುವ ಅದರ ಅಂತಿಮ ರೂಪ ನೀಡಿದ ಜನರ ಉದ್ದೇಶ ಬಹುಶಃ ಅವರ ಪೂರ್ವಜರು ಮೂಲದಲ್ಲಿ ಆ ಸ್ಥಳದಲ್ಲಿ ಮಣ್ಣು ಮತ್ತು ಮರದಿಂದ ರಚಿಸಿದ ರಚನೆಗಿಂತ ತೀರಾ ಭಿನ್ನವಾಗಿದ್ದಿರಬಹುದು. ಆ ಶಿಲೆಗಳ ಬಳಿ ನಿಂತಾಗ ಆ ಸ್ಮಾರಕದ ಮೂಲ ರಚನೆ ಹೇಗಿದ್ದಿರಬಹುದೆಂಬುದನ್ನು ಊಹಿಸಿಕೊಳ್ಳುವುದು ಕಷ್ಟ. ಅಳಿದುಳಿದಿರುವ ಶಿಲೆಗಳಿಂದ ವಿಜ್ಞಾನಿಗಳು ಅದರ ಮೂಲ ರಚನೆ ಹೇಗಿದ್ದಿರಬಹುದೆಂದು ಊಹಿಸಿದ್ದಾರೆ. ಮುವ್ವತ್ತು ಸಾರ್ಸೆನ್ ಶಿಲೆಗಳು ಹೊರಗಿನ ವೃತ್ತಾಕಾರವನ್ನು ರಚಿಸಿದ್ದವು. ಅವುಗಳಲ್ಲಿ ಇಂದು ಹದಿನೇಳು ಮಾತ್ರ ಉಳಿದಿವೆ. ಆ ಸಾರ್ಸೆನ್ ಶಿಲೆಗಳ ಮೇಲೆ ಆಯತಾಕಾರದ ಕಲ್ಲುಗಳನ್ನು (ಕ್ಯಾಪ್ ಸ್ಟೋನ್ಸ್) ಇರಿಸಲಾಗಿದೆ. ಅವು ನಿಖರ ಆಯಾತಾಕಾರದ ರಚನೆಗಳಲ್ಲ. ಅವುಗಳ ಹೊರಭಾಗ ಹಾಗೂ ಒಳಭಾಗವನ್ನು ಅವು ಒಟ್ಟಿಗೆ ಒಂದರ ಪಕ್ಕ ಒಂದನ್ನು ಜೋಡಿಸಿದಾಗ ಸಂಪೂರ್ಣ ವೃತ್ತಾಕಾರವಾಗುವಂತೆ ರಚಿಸಲಾಗಿದೆ. ಅಷ್ಟೇ ಅಲ್ಲದೆ ಆ ಶಿಲೆಗಳನ್ನು ಎರಡು ಮರಗಳನ್ನು ಕೂಡಿಸುವಾಗ ಒಂದರಲ್ಲಿ ರಂಧ್ರ ಹಾಗೂ ಮತ್ತೊಂದರಲ್ಲಿ ಗೂಟದಂತೆ ಮಾಡಿ, ಬಿಗಿಯಾಗಿ ಕೂಡಿಸಲಾಗಿದೆ. ಇಂದು ಆ ರೀತಿಯ ಮೂರು ಕ್ಯಾಪ್‌ಸ್ಟೋನ್‌ಗಳು ಮೂಲ ಆಕಾರದಲ್ಲೇ ಇರುವುದನ್ನು ಈಶಾನ್ಯ ದಿಕ್ಕಿನಿಂದ ಕಾಣಬಹುದಾಗಿದೆ (ಚಿತ್ರ ನೋಡಿ). ಆ ಹೊರ ವೃತ್ತದೊಳಗೆ ಅರವತ್ತು ನೀಲ ಶಿಲೆಗಳ ಮತ್ತೊಂದು ಒಳವೃತ್ತಾಕಾರದ ರಚನೆಯಿತ್ತು. ಆ ರಚನೆಯ ಒಳಗೆ ಕುದುರೆಯಲಾಳದಾಕಾರದಲ್ಲಿ ಬೃಹತ್ ಸಾರ್ಸೆನ್ ಶಿಲೆಗಳ ರಚನೆಯಿತ್ತು. ಅದರೊಳಗೆ ‘ಬಲಿಪೀಠ’ ಶಿಲೆಯಿದೆ.
ಸ್ಟೋನ್‌ಹೆಂಜ್‌ನ ಅದರ ನಿರ್ಮಾಣ ಹೇಗೆ ನಡೆದಿರಬಹುದೆಂಬುದನ್ನು ಊಹಿಸಿಕೊಳ್ಳಬಹುದು- ಯೋಜನೆ, ಕೌಶಲ್ಯ, ಆ ಶಿಲೆಗಳನ್ನು ನೂರಾರು ಕಿಲೋಮೀಟರುಗಳಿಂದ ಸಾಗಿಸುವಾಗಿನ ಶ್ರಮ, ಅದರ ನಿರ್ಮಾಣದಲ್ಲಿ ನೂರಾರು ಜನರನ್ನು ತೊಡಗಿಸಿಕೊಂಡಿರುವುದು, ಅವರಿಂದ ದುಡಿಸಿಕೊಳ್ಳುವ ಚಾಕಚಕ್ಯತೆ. ಅದರ ನಿರ್ಮಾಣದ ಸಮಯದಲ್ಲಿನ ಬ್ರಿಟನ್ನರು ಬಹುಪಾಲು ರೈತರು ಮತ್ತು ದನಗಾಹಿಗಳಾಗಿದ್ದರು ಎನ್ನುತ್ತಾರೆ ವಿಜ್ಞಾನಿಗಳು. ಆಗಿನ ಅವರ ಸಾಮಾಜಿಕ ರಚನೆ ಹೇಗಿತ್ತು, ಆಗ ಅವರ ಭಾಷೆ ಯಾವುದಿತ್ತು ಎನ್ನುವುದು ಯಾರಿಗೂ ತಿಳಿದಿಲ್ಲ. ಸ್ಟೋನ್‌ಹೆಂಜ್‌ನ ಆಸುಪಾಸಿನಲ್ಲಿ ದೊರೆದಿರುವ ಅಸ್ಥಿಪಂಜರಗಳಿಂದ ಅವರ ದೇಹ ರಚನೆ ಆಧುನಿಕ ಮಾನವರಿಗಿಂತ ಕೊಂಚ ಸಣ್ಣದೇ ಆಗಿತ್ತು ಎನ್ನುವುದಾಗಿ ತಿಳಿದುಬಂದಿದೆ. ಅವರ ಸರಾಸರಿ ಆಯುಷ್ಯ ಎಷ್ಟಿತ್ತೆನ್ನುವುದನ್ನು ಲೆಕ್ಕಹಾಕುವುದು ಕಷ್ಟ, ಆದರೆ ಅವರು ಆರೋಗ್ಯಕರ ಜೀವನ ನಡೆಸುತ್ತದ್ದರೆನ್ನಲು ಬೇಕಾದಷ್ಟು ಪುರಾವೆಗಳಿವೆ. ಆದರೂ ಶೇ.5ರಿಂದ 6ರಷ್ಟು ಜನರ ತಲೆಯ ಬುರುಡೆಗಳಲ್ಲಿ -ಗಂಡು ಮತ್ತು ಹೆಣ್ಣುಗಳಿಬ್ಬರದೂ- ಬಲವಾದ ಹೊಡೆತದ ಗುರುತುಗಳಿವೆ ಎನ್ನುತ್ತಾರೆ ಸೆಂಟ್ರಲ್ ಲ್ಯಾಂಕಾಶೈರ್‌ನ ವಿಜ್ಞಾನಿ ಮೈಖೆಲ್ ವೈಸೋಕಿ. ಈ ಆಘಾತಗಳು ಯಾವುದಾದರೂ ಆಚರಣೆಯ ಹಿಂಸೆಯ ಅಭಿವ್ಯಕ್ತಿಯಾಗಿರಬಹುದು ಅಥವಾ ಆಗಿನ ಬದುಕು ಅಷ್ಟೇ ಕ್ರೂರವಾಗಿದ್ದಿರಬಹುದು ಎನ್ನುತ್ತಾರೆ ಅವರು.
ಸ್ಟೋನ್‌ಹೆಂಜ್‌ನ ಬಳಿ ವಿಸ್ಮಯಕಾರಿ ಆವಿಷ್ಕಾರಗಳು ನಡೆಯುತ್ತಲೇ ಇವೆ. 2002ರಲ್ಲಿ ಪ್ರಾಕ್ತನ ತಜ್ಞರಿಗೆ ಸ್ಟೋನ್‌ಹೆಂಜ್‌ನಿಂದ ಎರಡೂವರೆ ಮೈಲು ದೂರದಲ್ಲಿ ಏವಾನ್ ನದಿಯ ಪೂರ್ವದಿಕ್ಕಿನಲ್ಲಿ ಎರಡು ಅಸ್ಥಿಪಂಜರಗಳ ಸಮಾಧಿ ದೊರಕಿತು. ಸುಮಾರು ಕ್ರಿ.ಪೂ. 2500ರಿಂದ 2300ರ ಸಮಯದ ಆ ಸಮಾಧಿಯಲ್ಲಿ 35ರಿಂದ 45ರ ವಯಸ್ಸಿನ ಒಬ್ಬ ವ್ಯಕ್ತಿಯ ಅವಶೇಷಗಳಿದ್ದವು ಹಾಗೂ ಸನಿಹದ ಮತ್ತೊಂದರಲ್ಲಿ ಆತನಿಗಿಂತ ಚಿಕ್ಕ ವಯಸ್ಸಿನವನೊಬ್ಬನ ಬಹುಶಃ ಹಿರಿಯನ ಸಂಬಂಧಿಯಿರಬಹುದು- ಅವಶೇಷಗಳಿದ್ದವು. ಹಿರಿಯನ ಸಮಾಧಿಯಲ್ಲಿ ಆ ಸಮಯದ ಬ್ರಿಟನ್ನಿನ ಯಾವುದೇ ಸಮಾಧಿಯಲ್ಲಿರದ ಐಶ್ವರ್ಯ ಸೂಚಕ ವಸ್ತುಗಳಿದ್ದವು- ತಲೆಗೆ ಧರಿಸುವ ಚಿನ್ನದ ಆಭರಣಗಳು, ತಾಮ್ರದ ಚಾಕುಗಳು, ಚಕಮಕಿ ಕಲ್ಲುಗಳು, ಪಾಲಿಶ್ ಮಾಡಿದ ಬಿಲ್ಲುಗಾರರ ಮುಷ್ಠಿ ರಕ್ಷಕಗಳು, ಲೋಹದ ಕೆಲಸ ನಡೆಸುವ ‘ದಿಂಬಿನಾಕಾರದ ಶಿಲೆ’ ಮತ್ತು ಯೂರೋಪಿನಲ್ಲಿ ಸಾಮಾನ್ಯವಾಗಿ ಇದ್ದ ಆದರೆ ಬ್ರಿಟನ್ನಿನಲ್ಲಿ ಇಲ್ಲದಿದ್ದ ವಿಶಿಷ್ಟ ‘ಬೀಕರ್’ ಶೈಲಿಯ ಕುಡಿಕೆಗಳು. ಹಿರಿಯನ ಕಾಲು ಊನವಾಗಿ ಆತ ಕುಂಟ ಸಹ ಆಗಿದ್ದ. ಅಮೀಸ್‌ಬರಿ ಬಿಲ್ಲುಗಾರನೆಂದು ಕರೆಯಲ್ಪಟ್ಟಿರುವ ಹಿರಿಯನ ಮತ್ತು ಕಿರಿಯನ ಹಲ್ಲಿನ ಎನಾಮೆಲ್‌ನ ರಾಸಾಯನಿಕ ವಿಶ್ಲೇಷಣೆ ನಡೆಸಲಾಗಿದೆ. ಇದರಿಂದ ತಿಳಿದುಬಂದ ವಿಸ್ಮಯದ ವಿಷಯವೆಂದರೆ, ಆ ಹಿರಿಯ ಬ್ರಿಟನ್ನಿನವನೇ ಆಗಿರಲಿಲ್ಲ- ಆತ ಆಲ್ಪ್ಸ್ ಪರ್ವತಗಳ, ಈಗಿನ ಸ್ವಿಟ್ಜರ್‌ಲ್ಯಾಂಡ್ ಮತ್ತು ಜರ್ಮನಿಯಿರುವ ಯೂರೋಪ್ ಪ್ರದೇಶದವನಾಗಿದ್ದ ಹಾಗೂ ಕಿರಿಯ ಬ್ರಿಟನ್ನಿನ ಹತ್ತಿರದ ವೆಸೆಕ್ಸ್‌ನವನಾಗಿದ್ದ. ವೆಸೆಕ್ಸ್ ಆರ್ಕಿಯಾಲಜಿಯ ಆಂಡ್ರೂ ಫಿಟ್ಜ್‌ಪ್ಯಾಟ್ರಿಕ್ ಹೇಳುವಂತೆ ಯೂರೋಪಿನಿಂದ ವಲಸೆಬಂದ ಹಿರಿಯ ಆ ಪ್ರದೇಶದಲ್ಲಿ ನೆಲೆಸಿ ತನ್ನ ಮಡಿಕೆ, ಕುಡಿಕೆ ತಯಾರಿಸುವ ಮತ್ತು ಲೋಹದ ಕೌಶಲ್ಯದಿಂದಾಗಿ ಸಾಕಷ್ಟು ಸಿರಿವಂತನಾಗಿ, ಮಾನ್ಯತೆಯನ್ನೂ ಪಡೆದಿದ್ದ.
ಆ ಬಿಲ್ಲುಗಾರ ಮತ್ತು ಆತನ ಸಂಗಾತಿಯೊಬ್ಬನ ಅವಶೇಷಗಳು ದೊರೆತ ಮರುವರ್ಷವೇ ಏಳು ಜನರ ಸಮಾಧಿಯೊಂದು ದೊರಕಿ ಅವರೂ ಸಹ ದೂರದ ಪ್ರದೇಶಗಳಿಂದ ವಲಸೆ ಬಂದವರಾಗಿದ್ದರು. ಫಿಟ್ಜ್‌ಪ್ಯಾಟ್ರಿಕ್ ಹೇಳುವಂತೆ ಆ ಜನರೆಲ್ಲಾ ಯಾವ ಪ್ರದೇಶಗಳಿಂದ ಬಂದವರೆಂಬುದು ಮುಖ್ಯವಲ್ಲ, ಆದರೆ ಆ ಕಾಲದ ಜನ ಅಷ್ಟೊಂದು ದೂರ ಪ್ರಯಾಣ ಮಾಡುತ್ತಿದ್ದರೆಂಬುದೇ ಮುಖ್ಯ. ಆ ‘ಪರದೇಶಿಗಳು’ ಸ್ಟೋನ್‌ಹೆಂಜ್ ನೋಡಿರಬಹುದು, ಅಥವಾ ಅದರ ನಿರ್ಮಾಣದಲ್ಲಿ ಸಹಾಯವನ್ನೂ ಮಾಡಿರಬಹುದು.
ಶೆಫೀಲ್ಡ್ ವಿಶ್ವವಿದ್ಯಾನಿಲಯದ ಮೈಕ್ ಪಾರ್ಕರ್ ಪಿಯರ್ಸನ್‌ರವರ ನೇತೃತ್ವದಲ್ಲಿ ಹಾಗೂ ನ್ಯಾಶನಲ್ ಜಿಯೋಗ್ರಾಫಿಕ್ ಸೊಸೈಟಿಯ ಸಹಯೋಗದೊಂದಿಗೆ ಸ್ಟೋನ್‌ಹೆಂಜ್ ರಿವರ್‌ಸೈಡ್ ಪ್ರಾಜೆಕ್ಟ್ 2003ರಿಂದಲೂ ಸ್ಟೋನ್‌ಹೆಂಜ್‌ನ ಅಧ್ಯಯನ ನಡೆಸುತ್ತಿದೆ. ಸ್ಟೋನ್‌ಹೆಂಜ್‌ನ ಸುತ್ತಮುತ್ತಲೂ ಉತ್ಖನನ ನಡೆಸಿರುವ ಆ ತಂಡ ಸ್ಟೋನ್‌ಹೆಂಜ್‌ನ ನೈಋತ್ಯ ದಿಕ್ಕಿನಲ್ಲಿ ಸುಮಾರು ಎರಡು ಮೈಲಿಗಳ ದೂರದಲ್ಲಿ ಸುಮಾರು 1500 ಅಡಿಗಳ ವ್ಯಾಸವಿರುವ ಒಂದು ಬೃಹತ್ ‘ಹೆಂಜ್’ ಆದ ಡ್ಯೂರಿಂಗ್‌ಟನ್ ವಾಲ್ಸ್ ಬಗ್ಗೆ ತನ್ನ ಅಧ್ಯಯನವನ್ನು ಕೇಂದ್ರೀಕರಿಸಿದೆ. 1812ರಲ್ಲೇ ಡ್ಯೂರಿಂಗ್‌ಟನ್ ಬಗೆಗೆ ತಿಳಿದಿತ್ತು. ಆ ‘ಹೆಂಜ್’ ಎಷ್ಟು ಬೃಹತ್ತಾಗಿದೆಯೆಂದರೆ, ಅದರ ಬದುಗಳು ಸುಮಾರು ನೂರು ಅಡಿ ಅಗಲವಿತ್ತು ಹಾಗೂ ಅದರ ಎತ್ತರ ಸುಮಾರು ಹತ್ತು ಅಡಿಗಳಷ್ಟಿತ್ತು. ಆದರೆ ಮಣ್ಣಿನ ಕೊಚ್ಚಣೆಯಿಂದಾಗಿ ಬದು ಸಮತಟ್ಟಾಗುತ್ತಾ ಬಂದಿದೆ. ಆ ಬೃಹತ್ ಹೆಂಜ್‌ನ ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ವೃತ್ತಾಕಾರದಲ್ಲಿ ಮೂರು ಸಾಲು ಮರದ ಕಂಬಗಳ ರಚನೆಗಳಿದ್ದುವಂತೆ ಹಾಗೂ ಈಗಲೂ ಅವುಗಳನ್ನು ನೆಟ್ಟಿದ್ದ ಗುಂಡಿಗಳ ಗುರುತುಗಳು ಇವೆಯೆನ್ನುತ್ತಾರೆ. ಈ ಮರದ ರಚನೆಗಳ ವೃತ್ತಾಕಾರಗಳು ರಹಸ್ಯ ಆಚರಣೆಗಳ ಸ್ಥಳಗಳಾಗಿದ್ದವು ಹಾಗೂ ಅವುಗಳನ್ನು ಪರದೆಗಳಿಂದ ಮುಚ್ಚಿರುತ್ತಿದ್ದರು ಎನ್ನುತ್ತಾರೆ ಬ್ರಾಡ್‌ಫರ್ಡ್ ವಿಶ್ವವಿದ್ಯಾನಿಲಯದ ಅಲೆಕ್ಸ್ ಗಿಬ್ಸನ್. ಇತ್ತೀಚೆಗೆ ಆ ಹೆಂಜ್‌ನ ಮಧ್ಯಭಾಗದಲ್ಲಿ ವಸತಿಗಳ ಅವಶೇಷಗಳು ದೊರಕಿದ್ದು ಅವು ಆಗಿನ ಮುಖ್ಯಸ್ಥರ ಅಥವಾ ಮೇಲ್ವಿಚಾರಕರ ವಸತಿಗಳಾಗಿದ್ದಿರಬಹುದು ಅಥವಾ ಗುಪ್ತಾಚರಣೆಗಳ ಸ್ಥಳಗಳೂ ಆಗಿದ್ದಿರಬಹುದೆನ್ನುತ್ತಾರೆ. ಹೆಂಜ್‌ನ ಬದುವಿನ ಹೊರಗೂ ಸುಮಾರು ಕ್ರಿ.ಪೂ. 2600ರಿಂದ 2500 ವರ್ಷಗಳಷ್ಟು ಹಳೆಯದಾದ ಏಳು ಮನೆಗಳ ಅವಶೇಷಗಳೂ ದೊರಕಿವೆ. ಅವುಗಳೊಳಗೆ ಒಲೆಗಳ ಮತ್ತು ಅವುಗಳ ಮುಂದೆ ಕೂತಿದ್ದಿರಬಹುದಾದವರ ಗುರುತುಗಳೂ ದೊರಕಿವೆ. ಆ ಸ್ಥಳಗಳ ಸುತ್ತಮುತ್ತಲ ಅಧ್ಯಯನಗಳಿಂದ ಸುಮಾರು ಮುನ್ನೂರು ಮನೆಗಳ ಅವಶೇಷಗಳಿವೆ ಎನ್ನುತ್ತಾರೆ ಪಾರ್ಕರ್ ಪಿಯರ್‌ಸನ್. ಹಾಗಿದ್ದಲ್ಲಿ ಅದು ಬ್ರಿಟನ್ನಿನ ಶಿಲಾಯುಗದ ಅತ್ಯಂತ ದೊಡ್ಡ ವಸತಿತಾಣವಾಗುತ್ತದೆ.
ಡ್ಯೂರಿಂಗ್‌ಟನ್ ವಾಲ್ಸ್‌ನಲ್ಲಿನ ‘ಜೀವದ ತಾಣ’ವಾದ ‘ವುಡ್‌ಹೆಂಜ್’ ಹೀಗಿದ್ದಿರಬಹುದೆ?
ತಮ್ಮ ಮಡಗಾಸ್ಕರ್‌ನ ಕ್ಷೇತ್ರಾಧ್ಯಯನಗಳ ಅನುಭವದಿಂದ ಪಾರ್ಕರ್ ಪಿಯರ್‌ಸನ್ ಸ್ಟೋನ್‌ಹೆಂಜ್ ಶಿಲಾರಚನೆಗೆ ತಮ್ಮದೇ ‘ಉತ್ತರ’ವನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಮಲಗಸಿ ಸಂಸ್ಕೃತಿಯಲ್ಲಿ ತಮ್ಮ ಪೂರ್ವಿಕರಿಗೆ ಶಿಲಾ ಸ್ಮಾರಕಗಳ ಮೂಲಕ ಗೌರವ ಸಲ್ಲಿಸುತ್ತಾರೆ. ಅದರರ್ಥ ದೇಹವು ಸಾವಿನ ನಂತರ ಗಟ್ಟಿಯಾಗಿ ಕೊನೆಗೆ ಶಿಲೆಯಂತೆ ಗಡುಸಾದ ಮೂಳೆ ಮಾತ್ರ ಉಳಿಯುವುದನ್ನು ಸಂಕೇತಿಸುತ್ತದೆ. ಅದಕ್ಕೆ ತದ್ವಿರುದ್ಧವಾಗಿ ಮರವು ಕೊಳೆತು ಶಿಥಿಲವಾಗುವುದರಿಂದ ಅದು ಬದುಕಿನ ನಶ್ವರತೆಯನ್ನು ಸಂಕೇತಿಸುತ್ತದೆ. ಪಿಯರ್‌ಸನ್ ಹೇಳುವಂತೆ ಶಿಲೆಯು ಪ್ರಾಚೀನವಾದುದು, ವಂಶಪಾರಂಪರ್ಯವಾದುದು ಹಾಗೂ ಪುರುಷ ಸಂಕೇತ ಮತ್ತು ಮರವು ಸ್ತ್ರೀಯರು ಹಾಗೂ ಶಿಶುಗಳ ಹಾಗೆ ಮೃದುವಾದುದು. ಅವರೇ ಹೇಳುವಂತೆ ಆ ರೀತಿಯ ‘ಲಿಂಗಭೇದ ಬ್ರಿಟನ್ನಿನಲ್ಲಿ ಕಂಡುಬಂದಿರದಿದ್ದರೂ, ಪಾಶ್ಚಿಮಾತ್ಯ ಸ್ಮರಣೆಯ ಆಚರಣೆಗಳಲ್ಲಿ ಅದು ಕಂಡುಬರುತ್ತದೆ. ಈ ಮಾದರಿಯ ಆಧಾರದಿಂದಲೇ ಮರದ ಡ್ಯೂರಿಂಗ್‌ಟನ್ ವಾಲ್ಸ್‌ನ ರಚನೆಗಳ ಹಾಗೂ ಶಿಲೆಯ ಸ್ಟೋನ್‌ಹೆಂಜ್ ರಚನೆಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಪ್ರಯತ್ನವನ್ನು ಪಿಯರ್‌ಸನ್ ಮಾಡುತ್ತಾರೆ. ಅವರ ವಿಶ್ಲೇಷಣೆಗೆ ಪೂರಕವಾಗಿಯೂ ಆ ರಚನೆಗಳಿವೆ. ಸ್ಟೋನ್‌ಹೆಂಜ್ ದಕ್ಷಿಣಾಯನ ಸಂಕ್ರಮಣದ ಸೂರ್ಯೋದಯಕ್ಕೆ ಹಾಗೂ ಉತ್ತರಾಯಣ ಸಂಕ್ರಮಣದ ಸೂರ್ಯಾಸ್ತಮಾನದ ಕಕ್ಷೆಗೆ ಹೊಂದಿಕೊಂಡಿದೆ ಆದರೆ, ಡ್ಯೂರಿಂಗ್‌ಟನ್ ವಾಲ್ಸ್‌ನ ದಕ್ಷಿಣ ವೃತ್ತ ಉತ್ತರಾಯಣ ಸಂಕ್ರಮಣದ ಸೂರ್ಯೋದಯವನ್ನು ಸೆರೆಹಿಡಿಯುತ್ತದೆ. ಡ್ಯೂರಿಂಗ್‌ಟನ್ ವಾಲ್ಸ್ ಬಳಿ ಔತಣಕೂಟಗಳು ನಡೆಯುತ್ತಿದ್ದವು ಎನ್ನಲು ಪುರಾವೆಯಂತೆ ಮಡಿಕೆ ಕುಡಿಕೆಗಳ ಮತ್ತು ಪ್ರಾಣಿಗಳ ಮೂಳೆಗಳ ಅದರಲ್ಲೂ ವಿಶೇಷವಾಗ ಹಂದಿಗಳ ಮೂಳೆಗಳ ಅವಶೇಷಗಳು ದೊರೆತಿವೆ. ಇದಕ್ಕೆ ತದ್ವಿರುದ್ಧವಾಗಿ ಸ್ಟೋನ್‌ಹೆಂಜ್ ಬಳಿ ಯಾವುದೇ ಮಡಿಕೆ ಕುಡಿಕೆಗಳು ದೊರೆತಿಲ್ಲ ಬದಲಿಗೆ ಸ್ಟೋನ್‌ಹೆಂಜ್ ಬಳಿ ಇನ್ನೂರ ನಲವತ್ತಕ್ಕೂ ಹೆಚ್ಚು ಶವಸಂಸ್ಕಾರಗಳ ಕುರುಹುಗಳು ದೊರೆತಿವೆ. ಅಂದರೆ ಪಿಯರ್‌ಸನ್ ಹೇಳುವಂತೆ ಡ್ಯೂರಿಂಗ್‌ಟನ್ ಬದುಕಿನ ಆಚರಣೆಗಳ ತಾಣವಾದರೆ ಸ್ಟೋನ್‌ಹೆಂಜ್ ಸಾವಿನ ಆಚರಣೆಗಳ ತಾಣವಾಗಿರಬಹುದು. ಆದರೆ ಸ್ವತಃ ಸ್ಟೋನ್‌ಹೆಂಜ್ ಬಳಿಯಲ್ಲಿ ಉತ್ಖನನ ಕಾರ್ಯದಲ್ಲಿ ಭಾಗಿಯಾಗಿರುವ ಬ್ರಿಟಿಶ್ ಆರ್ಕಿಯಾಲಜಿ ಪತ್ರಿಕೆಯ ಸಂಪಾದಕರಾಗಿರುವ ಮೈಕ್ ಪಿಟ್ಸ್ ಹೇಳುವಂತೆ ಅಲ್ಲಿ ಶಿಲಾರಚನೆಗಳು ಬರುವ ಮುನ್ನ ಮರದ ರಚನೆಗಳು ಇದ್ದ ಸಮಯದಲ್ಲಿ ಅಲ್ಲಿ ಶವಸಂಸ್ಕಾರಗಳಾಗಿದ್ದು ಅದು ಸಾವಿನ ಆಚರಣೆಗಳ ತಾಣವಾಗಿದ್ದಿರಬಹುದು ಹಾಗೂ ಶಿಲಾರಚನೆಗಳು ರೂಪುಗೊಂಡ ನಂತರದ ಸಮಯದ ಅಧ್ಯಯನದಿಂದ ಅಲ್ಲಿ ದಿನನಿತ್ಯದ ಆಚರಣೆಗಳಾದಂತಹ ಕೃಷಿ, ಪ್ರಾಣಿಗಳನ್ನು ಮೇಯಿಸಿರುವುದು ಮುಂತಾದವುಗಳು ಕುರುಹುಗಳು ಕಂಡುಬರುತ್ತವೆ. ಹಾಗಾಗಿ ನಂತರದಲ್ಲಿ ಅದು ಸಾವಿನ ಆಚರಣೆಗಳ ತಾಣವಾಗಿರಲಿಲ್ಲ. ಅವರ ಅಭಿಪ್ರಾಯದಂತೆ ಸ್ಟೋನ್‌ಹೆಂಜ್‌ನಿಂದ ಏವಾನ್ ನದಿಗೆ ಇರುವ ರಸ್ತೆಯ ಬಗೆಗೆ ಹಾಗೂ ಸ್ಟೋನ್‌ಹೆಂಜ್ ಮತ್ತು ಡ್ಯೂರಿಂಗ್‌ಟನ್ ವಾಲ್ಸ್‌ಗಳ ನಡುವಿನ ಸಂಬಂಧದ ಬಗೆಗೆ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ.
ಐದು ಸಾವಿರ ವರ್ಷಗಳ ಹಿಂದೆ ಸ್ಟೋನ್‌ಹೆಂಜ್‌ನ ನಿರ್ಮಾಣ ಪ್ರಾರಂಭವಾದ ಸಮಯದಲ್ಲಿ ಅಲ್ಲಿನ ಜನರು ಅಷ್ಟೊತ್ತಿಗಾಗಲೇ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ತೊಡಗಿದ್ದರು. ಅವರಲ್ಲಿ ಸುಸಜ್ಜಿತ ಸಾಮಾಜಿಕ ವ್ಯವಸ್ಥೆಯಿತ್ತು. ಅವರು ಬಾರ‍್ಲಿ ಮತ್ತು ಗೋಧಿಯನ್ನು ಬೆಳೆಯುತ್ತಿದ್ದ ಪುರಾವೆಗಳು ದೊರೆತಿವೆ. ಕೃಷಿಕರಾಗಿದ್ದ ಅವರಿಗೆ ಬ್ರಿಟನ್ನಿನ ಚಳಿಗಾಲ ಅಂಧಕಾರದಿಂದ ಕೂಡಿರುತ್ತಿದ್ದು ಬೇಸಿಗೆ ಒಂದು ರೀತಿಯಲ್ಲಿ ಬೆಳಕಿನ ಹಬ್ಬವಾಗಿರುತ್ತಿತ್ತು. ಸ್ಟೋನ್‌ಹೆಂಜ್ ದಕ್ಷಿಣಾಯನ ಸಂಕ್ರಮಣದ ಸೂರ್ಯೋದಯಕ್ಕೆ (ವರ್ಷದ ಅತಿ ದೀರ್ಘ ದಿನ ಜೂನ್ 21) ಹಾಗೂ ಉತ್ತರಾಯಣ ಸಂಕ್ರಮಣದ ಸೂರ್ಯಾಸ್ತಮಾನದ (ವರ್ಷದ ಅತಿ ಕಡಿಮೆ ಅವಧಿಯ ದಿನ ಡಿಸೆಂಬರ್ 21) ಕಕ್ಷೆಗೆ ಹೊಂದಿಕೊಂಡಂತೆ ಅದನ್ನು ನಿರ್ಮಿಸಿರುವುದರಿಂದ ಆಗಿನ ಜನ ವರ್ಷದ ಅತಿ ದೀರ್ಘ ದಿನದ ಆಚರಣೆಗೆ ಅದನ್ನು ನಿರ್ಮಿಸಿರಬಹುದು ಎನ್ನುತ್ತಾರೆ.
ಇನ್ನು ಕೆಲವರ ಪ್ರಕಾರ ಸ್ಟೋನ್‌ಹೆಂಜ್ ಅನ್ನು ಬ್ರಿಟನ್ನಿನ ಕೆಲ್ಟ್ ಜನರ ಪುರೋಹಿತರು ಮತ್ತು ಮಾಂತ್ರಿಕರು ಆಗಿದ್ದ ‘ಡ್ರೂಯಿಡ್’ಗಳು ತಮ್ಮ ಆಚರಣೆಗಳಿಗೆ ನಿರ್ಮಿಸಿದ್ದಾರೆ. ವಿಲಿಯಂ ಸ್ಟುಕೀಲೆ (1647-1765) ಎಂಬಾತನ ಪ್ರಕಾರ ಡ್ರೂಯಿಡ್‌ಗಳು ಕ್ರಿ.ಶ. 43ರಲ್ಲಿ ಸ್ಟೋನ್‌ಹೆಂಜ್ ನಿರ್ಮಿಸಿದರು. ಆದರೆ ಅಧ್ಯಯನಗಳು ಸ್ಟೋನ್‌ಹೆಂಜ್ ಅದಕ್ಕಿಂತಲೂ ಪುರಾತನವಾದುದು ಎಂಬುದನ್ನು ತೋರಿಸಿಕೊಟ್ಟಿವೆ.
ಸ್ಟೋನ್‌ಹೆಂಜ್‌ನ ಶಿಲೆಗಳು ಮಳೆಯಲ್ಲಿ ನೆನೆದು ಬಿಸಿಲಿಗೆ ತಮ್ಮ ಮೈಯೊಡ್ಡಿದಾಗ ನೀಲ ವರ್ಣವಾಗಿ ಹೊಳೆಯುತ್ತವೆ. ಈ ನೀಲ ಶಿಲೆಗಳ ಮೂಲವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅದು ಇನ್ನೂರ ಐವತ್ತು ಮೈಲುಗಳ ದೂರದಲ್ಲಿ ನೈರುತ್ಯ ವೇಲ್ಸ್‌ನ ಪ್ರೆಸೆಲಿ ಪರ್ವತಗಳಾಗಿವೆ. ವಿಜ್ಞಾನಿಗಳಿಗೆ ಕಗ್ಗಂಟಾಗಿರುವುದು ಶಿಲಾಯುಗದ ಮಾನವ ಯಾವುದೇ ಲೋಹಗಳಿಲ್ಲದೆ ಹೇಗೆ ತಲಾ ಸುಮಾರು ನಲವತ್ತು ಟನ್ ತೂಕದ ಬೃಹತ್ ಶಿಲೆಗಳನ್ನು ಹೇಗೆ ಸಾಗಿಸಿದ ಎಂಬುದು. ಸ್ಟೋನ್‌ಹೆಂಜ್‌ನ ನಿರ್ಮಾಣಕ್ಕೆಂದು ಒಮ್ಮೆಲೇ ಎಲ್ಲವನ್ನೂ ಸಾಗಿಸಿದನೆ ಅಥವಾ ಅದರ ನಿರ್ಮಾಣವನ್ನು ಹಲವಾರು ತಲಮಾರುಗಳ ಕಾಲ ನಡೆಸಲಾಯಿತೆ? ಪ್ರಿಸೆಲಿ ಪರ್ವತಗಳ ಕ್ವಾರಿಗಳಲ್ಲಿ ಕ್ರಿ.ಪೂ. 4000 ವರ್ಷಗಳ ಹಿಂದೆಯೇ ಕಲ್ಲುಗಳನ್ನು ಕತ್ತರಿಸಿ ತೆಗೆದಿರುವ ಕುರುಹುಗಳಿವೆ. ಆ ರೀತಿ ಶಿಲೆಗಳನ್ನು ತೆಗೆದಿರುವುದು ಸ್ಟೋನ್‌ಹೆಂಜ್‌ಗೆ ಮಾತ್ರವಲ್ಲ, ಆ ತರಹದ ಸಣ್ಣಪುಟ್ಟ ಶಿಲಾರಚನೆಗಳು ಬ್ರಿಟನ್ನಿನ ಇತರೆಡೆಯೂ ಇವೆ. ಆ ಸಮಯದಲ್ಲಿ ಶಿಲಾಯುಗದ ಮಾನವ ಪ್ರೆಸಿಲಿ ಪರ್ವತಗಳಿಗೆ ಭೇಟಿ ನೀಡುತ್ತಿದ್ದ ಹಾಗೂ ಆ ಸ್ಥಳವನ್ನು ಆರಾಧಿಸುತ್ತಿದ್ದ ಎನ್ನಲು ಪುರಾವೆಗಳೂ ದೊರೆತಿವೆ.
ಆ ಸ್ಥಳದಿಂದ ಶಿಲಾಯುಗದ ಮಾನವ ಸ್ಯಾಲಿಸ್‌ಬರಿ ಬಯಲುಸೀಮೆಗೆ ಬೃಹತ್ ಶಿಲೆಗಳನ್ನು ಹೇಗೆ ಸಾಗಿಸಿದ ಎನ್ನುವುದು ಇಂದಿಗೂ ವಿಜ್ಞಾನಿಗಳಿಗೆ ಬಿಡಿಸಲಾಗದ ಕಗ್ಗಂಟಾಗಿದೆ. ಅವುಗಳನ್ನು ಒಮ್ಮೆಲೇ ಸಾಗಿಸಿದನೆ? ಅಥವಾ ಅದನ್ನು ಹಲವಾರು ತಲಮಾರುಗಳ ಕಾಲ ಸಾಗಿಸಲಾಯಿತೆ? ಅವುಗಳನ್ನು ಹೇಗೆ ಸಾಗಿಸಲಾಯಿತು? ಹಿಮಯುಗದಲ್ಲಿ ಬೃಹತ್ ನೀರ್ಗಲ್ಲುಗಳು ಆ ಶಿಲೆಗಳನ್ನು ಸಡಿಲಗೊಳಿಸಿ ಕೆಳಕ್ಕೆ ತಳ್ಳಿರಬಹುದೆಂಬ ಕೆಲವರ ವಾದವನ್ನು ಆಧುನಿಕ ಅಧ್ಯಯನಗಳು ತಿರಸ್ಕರಿಸಿವೆ. ಈಗ ಸ್ಟೋನ್‌ಹೆಂಜ್ ಇರುವ ಸ್ಥಳಕ್ಕೆ ಅತಿ ಹತ್ತಿರದ ದಾರಿ ಎಂದರೆ ವೇಲ್ಸ್‌ನ ಕರಾವಳಿಯಲ್ಲಿ ನದಿಯ ಮೂಲಕ ಹೊರಟು ಏವಾನ್ ನದಿ ತಲುಪುವುದು. ಇದು ಸುಮಾರು ಇನ್ನೂರ ಐವತ್ತು ಮೈಲುಗಳಾಗುತ್ತದೆ. ಆ ದಿನಗಳ ಶಿಲಾಯುಗದ ಮಾನವ ಇವುಗಳನ್ನು ಸಾಗಿಸಲು ಯಾವ ತಂತ್ರಜ್ಞಾನ ಬಳಸಿದ ಎನ್ನುವುದು ಇನ್ನೂ ನಿಗೂಢ. ಮರ್ಲಿನ್‌ನ ಮಾಂತ್ರಿಕ ಅವುಗಳನ್ನು ತನ್ನ ಮಂತ್ರಶಕ್ತಿಯಿಂದ ಅವುಗಳನ್ನು ಸಾಗಿಸಿದ ಎನ್ನುವ 3600 ವರ್ಷಗಳ ಹಿಂದಿನ ಜನಪದದ ಕತೆಯೂ ಪ್ರಚಲಿತದಲ್ಲಿದೆ.
ಸ್ಟೋನ್‌ಹೆಂಜ್‌ಅನ್ನು ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಯಿತು ಎನ್ನುವುದೂ ಸಹ ಊಹೆಯಷ್ಟೇ ಆಗಿದೆ. ಜಗತ್ತಿನ ಹಲವಾರು ಪುರಾತನ ರಚನೆಗಳ ಹಿಂದಿನ ಉದ್ದೇಶ ಅಥವಾ ಆ ಸ್ಥಳಗಳಲ್ಲಿ ನಡೆಸಲಾಗುತ್ತಿದ್ದ ಹಲವಾರು ಆಚರಣೆಗಳ ವಿವರಗಳು ಯಾವುದಾದರೂ ಪಠ್ಯಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಲಭ್ಯವಿವೆ. ಆದರೆ ಸ್ಟೋನ್‌ಹೆಂಜ್‌ನ ಬಗೆಗಿನ ವಿವರಣೆ ಇರುವ ಯಾವುದೇ ಪಠ್ಯ ದೊರಕಿಲ್ಲ. ಹಾಗಾಗಿ ಅದರ ನಿರ್ಮಾಣಕ್ಕೆ, ರಚನೆಗೆ ಬಹುಅರ್ಥಗಳನ್ನು ನೀಡುವ ಪ್ರಯತ್ನ ಅನಿವಾರ್ಯವೆನ್ನಿಸುವಂತಿದೆ. ಅದು ಸೂರ್ಯ ದೇವಾಲಯವಾಗಿತ್ತೆ ಅಥವಾ ಚಂದ್ರನ ದೇವಾಲಯವಾಗಿತ್ತೆ ಅಥವಾ ಖಗೋಳ ದಿನಸೂಚಿಯಾಗಿತ್ತೆ ಅಥವಾ ಶಮನ ಕೇಂದ್ರವಾಗಿತ್ತೆ ಅಥವಾ ಮರಣಿಸಿದವರ ಆರಾಧನೆಯ ಸ್ಥಳವಾಗಿತ್ತೆ? ಅಲ್ಲಿನ ಶಿಲೆಗಳು ದೇವರನ್ನು ಪ್ರತಿನಿಧಿಸುತ್ತಿದ್ದವೆ ಅಥವಾ ಅಂತಸ್ತು ಮತ್ತು ಶಕ್ತಿಯ ಸಂಕೇತವಾಗಿದ್ದವೆ? ಉತ್ತರ ಯಾರಿಗೂ ತಿಳಿದಿಲ್ಲ.
ಮಾನವ ಸ್ಟೋನ್‌ಹೆಂಜ್ ಯಾವ ಉದ್ದೇಶಕ್ಕಾಗಿ ನಿರ್ಮಿಸಿದ್ದನೋ ಆ ಉದ್ದೇಶದ ಉಪಯೋಗ ಕ್ರಿ.ಪೂ. 1500ರಲ್ಲೇ ಮಾಡುವುದನ್ನು ನಿಲ್ಲಿಸಿರಬೇಕು. ಅಂದಿನಿಂದ ಅದು ಉದಾಸೀನಕ್ಕೊಳಗಾಗಿ ಶಿಥಿಲಾವಸ್ಥೆ ತಲುಪಿತು. ಹಲವಾರು ಶಿಲೆಗಳು ಮುರಿದುಹೋದವು ಹಾಗೂ ಅಲ್ಲಿಂದ ಸಾಗಿಸಲ್ಪಟ್ಟವು. ಆ ಶಿಥಿಲ ರಚನೆಯ ಬಗೆಗೆ ಅಲ್ಲಲ್ಲಿ ಉಲ್ಲೇಖಗಳಿವೆ. ಕ್ರಿ.ಪೂ. ಮೊದಲ ಶತಮಾನದ ಗ್ರೀಕ್ ಚರಿತ್ರಕಾರನಾದ ಸಿಸಿಲಿಯ ಡಯೊಡೋರಸ್, ‘ಅಪೋಲೋ ದೇವತೆಗೆ ಪವಿತ್ರವಾಗಿರುವ ಒಂದು ವೃತ್ತಾಕಾರದ ದೇವಾಲಯ ಉತ್ತರದ ದ್ವೀಪದ ಮೇಲಿದೆ’ ಎಂದಿದ್ದಾನೆ. 1668ರಲ್ಲಿ ಅಲ್ಲಿಗೆ ಭೇಟಿ ನೀಡಿದ ಸ್ಯಾಮ್ಯುಯೆಲ್ ಪೆಪೀಸ್ ‘ತಾನೆಂದೂ ಕೇಳಿರದ, ಕಂಡಿರದ ಬೃಹತ್ ಶಿಲೆಗಳ ರಚನೆಯನ್ನು ಕಂಡೆ. ಅದನ್ನು ಯಾವುದಕ್ಕೆ ಬಳಸುತ್ತಿದ್ದರೆಂಬುದು ದೇವರಿಗೇ ಗೊತ್ತು’ ಎಂದು ಬರೆದಿದ್ದಾನೆ.
ನಾವು ಇಂಗ್ಲೆಂಡಿಗೆ ಭೇಟಿ ನೀಡಿದ ಜುಲೈ ತಿಂಗಳಿನಲ್ಲಿ ರಾತ್ರಿ ಹತ್ತಾದರೂ ಕತ್ತಲಾಗುತ್ತಿರಲಿಲ್ಲ. ಆದರೆ ಸ್ಯಾಲಿಸ್‌ಬರಿಯ ಬಯಲಿನಲ್ಲಿ ಸಂಜೆ ಆರಕ್ಕೇ ಮೋಡ ಕವಿದಿದ್ದು ಇಡೀ ವಾತಾವರಣವೇ ಮಸಕು ಮಸಕಾದಂತಿತ್ತು. ಶೀತಲ ಗಾಳಿ ರೊಯ್ಯನೆ ಬೀಸುತ್ತಿತ್ತು. ಆ ಗಾಳಿಯಲ್ಲಿ ಸ್ಟೋನ್‌ಹೆಂಜ್‌ನ ನಿಗೂಢ ಬಿಡಿಸಿ ಹೇಳುವ ಏನಾದರೂ ಪಿಸುಮಾತಿದೆಯೇನೋ ಎಂದು ಆಲಿಸುವ ನನ್ನ ಪ್ರಯತ್ನ ವಿಫಲವಾಗುತ್ತಿತ್ತು. ಬೆನ್ನಿಗೇರಿಸಿದ್ದ ಚೀಲ ಪ್ರಶ್ನೆಗಳಿಂದ ತುಂಬಿರುವಂತೆ ಭಾರವೆನ್ನಿಸುತ್ತಿತ್ತು.
(Photos courtesy: Wessex Archaeology)
ಸೆನ್‌ಹೆಂಜ್ ನಿರಂತರವಾಗಿ ಸುಮಾರು ಎರಡು ಸಾವಿರ ವರ್ಷಗಳ ಕಾಲ ವಿಕಾಸಗೊಂಡ ರಚನೆಯಾಗಿದೆ. ಕಾರ್ಬನ್ ಡೇಟಿಂಗ್ ಅನ್ವಯ ಸ್ಟೋನ್‌ಹೆಂಜ್‌ನ ಶಿಲಾರಚನೆಯ ಮೊದಲ ಹಂತದ ನಿರ್ಮಾಣ ಕಾರ್ಯ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಶಿಲಾಯುಗದಲ್ಲಿ ಪ್ರಾರಂಭವಾಯಿತು ಹಾಗೂ ಕೊನೆಯ ಹಂತದ ನಿರ್ಮಾಣ ಕಾರ್ಯ ಸುಮಾರು ಮೂರು ಸಾವಿರದ ಮುನ್ನೂರು ವರ್ಷಗಳ ಹಿಂದೆ ಕಂಚಿನ ಯುಗದಲ್ಲಿ ನಡೆದಿದೆ. ನಾಗರಿಕತೆಯ ಎಲ್ಲ ಹಂತಗಳನ್ನು ಕಂಡಿರುವ ಅದೊಂದು ನಿಗೂಢ ಕಾಲನೌಕೆಯಂತೆ ಭಾಸವಾಗುತ್ತದೆ. ಮೊದಲಿಗೆ ಅದರ ನಿರ್ಮಾಣ ಕಾರ್ಯ ಪ್ರಾರಂಭಿಸಿದ ಮಾನವನಲ್ಲಿ ಯಾವುದೇ ಲೋಹದ ಸಲಕರಣೆಗಳಿರಲಿಲ್ಲ. ಆಗ ಆತ ಗುಂಡಿ ತೋಡಲು ಬಳಸಿರಬಹುದಾದ ಜಿಂಕೆಯ ಕವಲುಕೊಂಬಿನ ‘ಗುದ್ದಲಿ’ಗಳು ದೊರೆತಿವೆ. ಕಾರ್ಬನ್ ಡೇಟಿಂಗ್ ಮೂಲಕ ಅವು ಕ್ರಿ.ಪೂ. 3000ದಿಂದ 2920 ವರ್ಷಗಳಷ್ಟು ಹಳೆಯವು ಎಂದು ತಿಳಿದುಬಂದಿದೆ. ಅಲ್ಲಿಯೇ ಎತ್ತಿನ ಕೆಳದವಡೆ ಎಲುಬುಗಳೂ ದೊರೆತಿದ್ದು ಅವು ಜಿಂಕೆಯ ಕೊಂಬುಗಳಿಗಿಂತ ಹಳೆಯವು ಎಂಬುದಾಗಿ ತಿಳಿದುಬಂದಿದೆ. ಎತ್ತುಗಳನ್ನು ಬಹುಶಃ ಅವರು ಬಲಿಯಾಗಿ ಬಳಸಿರಬಹುದು ಎನ್ನುತ್ತಾರೆ ವಿಜ್ಞಾನಿಗಳು. ಸ್ಟೋನ್‌ಹೆಂಜ್‌ನ ಕೊನೆಯ ಹಂತದ ನಿರ್ಮಾಣದ ಅವಧಿಯ ಕಂಚಿನ ಕತ್ತಿಗಳೂ ದೊರೆತಿವೆ.
2002ರಲ್ಲಿ ಕಂಡುಹಿಡಿಯಲಾದ ಅಮೀಸ್‌ಬರಿ ಬಿಲ್ಲುಗಾರನ ಸಮಾಧಿ.
2002ರಲ್ಲಿ ಪ್ರಾಕ್ತನ ತಜ್ಞರಿಗೆ ಸ್ಟೋನ್‌ಹೆಂಜ್‌ನಿಂದ ಎರಡೂವರೆ ಮೈಲು ದೂರದಲ್ಲಿ ಏವಾನ್ ನದಿಯ ಪೂರ್ವದಿಕ್ಕಿನಲ್ಲಿ ಸುಮಾರು ಕ್ರಿ.ಪೂ. 2500ರಿಂದ 2300ರ ಅವಧಿಯ ‘ಅಮೀಸ್‌ಬರಿ ಬಿಲ್ಲುಗಾರ’ನೆಂದು ಕರೆಯಲ್ಪಟ್ಟಿರುವ ವ್ಯಕ್ತಿಯ ಸಮಾಧಿಯ ಅವಶೇಷಗಳು ದೊರೆತವು. ಕೆಲವರು ಆತನನ್ನು ಸ್ಟೋನ್‌ಹೆಂಜ್‌ನ ರಾಜನೆಂದೂ ಕರೆಯುತ್ತಾರೆ. ಆತನ ಸಮಾಧಿ ಮತ್ತು ಅದರಲ್ಲಿ ದೊರೆತ ಸುಮಾರು ನೂರರಷ್ಟು ವಸ್ತುಗಳು ಬಹಳ ಮುಖ್ಯವಾದುದು. ಆತನ ಸಮಾಧಿಯಲ್ಲಿ ದೊರೆತ ಬಹುಶಃ ಕಿವಿಯೋಲೆ ಅಥವಾ ತಲೆಯ ಕೂದಲಿಗೆ ಧರಿಸಬಹುದಾದಂತಹ ಚಿನ್ನದ ಆಭರಣಗಳು ಇಡೀ ಇಂಗ್ಲೆಂಡಿನಲ್ಲೇ ದೊರೆತ ಅತ್ಯಂತ ಪ್ರಾಚೀನ ಚಿನ್ನದ ಆಭರಣಗಳಾಗಿವೆ (ಚಿತ್ರ ನೋಡಿ).

ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಚಿನ್ನದ ಕಿವಿಯೋಲೆ ಅಥವಾ ಕೂದಲು ಸಿಂಗರಿಸುವ ಆಭರಣಗಳು. ಇಡೀ ಬ್ರಿಟನ್ನಿನಲ್ಲೇ ದೊರಕಿರುವ ಅತ್ಯಂತ ಪ್ರಾಚೀನ ಚಿನ್ನದ ಆಭರಣಗಳು ಇವಾಗಿವೆ
ಆ ಸಮಯದ ಬ್ರಿಟನ್ನಿನ ಯಾವುದೇ ಸಮಾಧಿಯಲ್ಲಿರದ ಐಶ್ವರ್ಯ ಸೂಚಕ ವಸ್ತುಗಳು ಆತನ ಸಮಾಧಿಯಲ್ಲಿದ್ದವು- ತಲೆಗೆ ಧರಿಸುವ ಚಿನ್ನದ ಆಭರಣಗಳು, ತಾಮ್ರದ ಚಾಕುಗಳು, ಚಕಮಕಿ ಕಲ್ಲುಗಳು, ಪಾಲಿಶ್ ಮಾಡಿದ ಬಿಲ್ಲುಗಾರರ ಮುಷ್ಠಿ ರಕ್ಷಕಗಳು, ಲೋಹದ ಕೆಲಸ ನಡೆಸುವ ‘ದಿಂಬಿನಾಕಾರದ ಶಿಲೆ’ ಮತ್ತು ಯೂರೋಪಿನಲ್ಲಿ ಸಾಮಾನ್ಯವಾಗಿ ಇದ್ದ ಆದರೆ ಬ್ರಿಟನ್ನಿನಲ್ಲಿ ಇಲ್ಲದಿದ್ದ ವಿಶಿಷ್ಟ ‘ಬೀಕರ್’ ಶೈಲಿಯ ಕುಡಿಕೆಗಳು ಆ ಸಮಾಧಿಯಲ್ಲಿ ಕಂಡುಬಂದಿವೆ. ಆತನ ಕಾಲಿಗೆ ಏನೋ ಏಟು ತಗುಲಿ ಆತನ ಒಂದು ಕಾಲು ಊನ ಸಹ ಆಗಿತ್ತು. ಅಧ್ಯಯನದಿಂದ ತಿಳಿದು ಬಂದ ಮತ್ತೊಂದು ವಿಸ್ಮಯದ ಅಂಶವೆಂದರೆ, ಆ ಹಿರಿಯ ಬ್ರಿಟನ್ನಿನವನೇ ಆಗಿರಲಿಲ್ಲ- ಆತ ಆಲ್ಪ್ಸ್ ಪರ್ವತಗಳ, ಈಗಿನ ಸ್ವಿಟ್ಜರ್‌ಲ್ಯಾಂಡ್ ಮತ್ತು ಜರ್ಮನಿಯಿರುವ ಯೂರೋಪ್ ಪ್ರದೇಶದವನಾಗಿದ್ದ ಹಾಗೂ ಕಿರಿಯ ಬ್ರಿಟನ್ನಿನ ಹತ್ತಿರದ ವೆಸೆಕ್ಸ್‌ನವನಾಗಿದ್ದ. ವೆಸೆಕ್ಸ್ ಆರ್ಕಿಯಾಲಜಿಯ ಆಂಡ್ರೂ ಫಿಟ್ಜ್‌ಪ್ಯಾಟ್ರಿಕ್ ಹೇಳುವಂತೆ ಯೂರೋಪಿನಿಂದ ವಲಸೆಬಂದ ಹಿರಿಯ ಆ ಪ್ರದೇಶದಲ್ಲಿ ನೆಲೆಸಿ ತನ್ನ ಮಡಿಕೆ, ಕುಡಿಕೆ ತಯಾರಿಸುವ ಮತ್ತು ಲೋಹದ ಕೌಶಲ್ಯದಿಂದಾಗಿ ಸಾಕಷ್ಟು ಸಿರಿವಂತನಾಗಿ, ಮಾನ್ಯತೆಯನ್ನೂ ಪಡೆದಿದ್ದ. ಅವನ ಅಂತ್ಯಸಂಸ್ಕಾರ ಮಾಡಿದವರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇತ್ತೆನ್ನಿಸುತ್ತದೆ, ಏಕೆಂದರೆ ಆತನಿಗೆ ಮರುಜನ್ಮದಲ್ಲಿ ಬೇಕಾಗುವ ಎಲ್ಲಾ ವಸ್ತುಗಳನ್ನು- ಬಟ್ಟೆಬರೆ, ಸಲಕರಣೆಗಳು, ಆಯುಧಗಳು, ಮಡಿಕೆ ಕುಡಿಕೆ ಮತ್ತು ಹೊಸ ಸಲಕರಣೆಗಳನ್ನು ತಯಾರಿಸಿಕೊಳ್ಳಲೆಂದು ಹೆಚ್ಚಿನ ‘ಫ್ಲಿಂಟ್’ ಶಿಲೆಗಳನ್ನು ಸಹ ಇರಿಸಿದ್ದರು.
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಫ್ಲಿಂಟ್ ಶಿಲೆಯ ಬಾಣದ ಮೊನೆಗಳು
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಬೀಕರ್ ಆಕಾರದ ಮಡಕೆಗಳು
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ತಾಮ್ರದ ಚಾಕುಗಳು
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಬಿಲ್ಲುಗಾರರ ಮುಷ್ಠಿ ರಕ್ಷಕ ಪಟ್ಟಿಗಳು
ಆ ಅಮೀಸ್‌ಬರಿ ಬಿಲ್ಲುಗಾರನ ಅಧ್ಯಯನ ಮುಖ್ಯವಾದುದು ಏಕೆಂದರೆ ಆತ ಬದುಕಿದ್ದ ಸಮಯ ಸರಿಸುಮಾರು ಸ್ಟೋನ್‌ಹೆಂಜ್ ನಿರ್ಮಾಣದ ಪ್ರಾರಂಭದ ಸಮಯ. ಆತ ಅದರ ವಿನ್ಯಾಸದಲ್ಲಿ ಅಥವಾ ನಿರ್ಮಾಣದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿರಬಹುದು ಅಥವಾ ಅದರ ನಿರ್ಮಾಣ ಕಾರ್ಯ ನಡೆಯುತ್ತಿದ್ದುದರಿಂದ ಕುತೂಹಲದಿಂದ ಅದನ್ನು ನೋಡಲು ಬಂದ ವ್ಯಕ್ತಿಯಾಗಿರಬಹುದು. ಮತ್ತೊಂದು ಕುತೂಹಲಕರವಾದ ಅಂಶವೆಂದರೆ ಆತ ಬ್ರಿಟನ್ನಿನವನಾಗಿರದೆ ಯೂರೋಪ್ ಖಂಡದವನಾಗಿದ್ದುದು. ಆತನ ಸಮಾಧಿಯಲ್ಲಿದ್ದ ‘ಬೀಕರ್’ ರೀತಿಯ ಮಡಿಕೆ ಕುಡಿಕೆಗಳು ಯೂರೋಪಿನಲ್ಲಿದ್ದವು ಹಾಗೂ ಅವನ ಬದುಕಿದ್ದ ಸಮಯದಲ್ಲೇ ಅವು ಬ್ರಿಟನ್ನಿನಲ್ಲಿ ಕಂಡುಬಂದಿವೆ. ವಿಸ್ಮಯಕರವಾದ ವಿಷಯವೆಂದರೆ ಜನ ಆಗ ಖಂಡಾಂತರ ಪ್ರಯಾಣ ಮಾಡುತ್ತಿದ್ದರು ಹಾಗೂ ಆಗ ಸಾಂಸ್ಕೃತಿಕ ವಿನಿಮಯ ನಡೆಯುತ್ತಿತ್ತು ಎನ್ನುವುದು. ಆತ ಬದುಕಿದ್ದ ಸಮಯ ಬ್ರಿಟನ್ನಿನ ಕಂಚಿನ ಯುಗದ ಪ್ರಾರಂಭದ ಸಮಯವಾಗಿತ್ತು. ‘ತಾಮ್ರ ಮತ್ತು ಚಿನ್ನದಂತಹ ಲೋಹಗಳು ಯೂರೋಪಿನಿಂದ ಬ್ರಿಟನ್ ಪ್ರವೇಶಿಸಿತೆನ್ನುವ ಸಂಶಯ ಮೊದಲಿನಿಂದಲೂ ಇತ್ತು. ಈ ಅಮೀಸ್‌ಬರಿಯ ಬಿಲ್ಲುಗಾರ ಅದಕ್ಕೆ ಪುರಾವೆಯಾಗಿದ್ದಾನೆ’ ಎನ್ನುತ್ತಾರೆ ವೆಸೆಕ್ಸ್ ಆರ್ಕಿಯಾಲಜಿಯ ಡಾ. ಆಂಡ್ರೂ ಫಿಟ್ಜ್ ಪ್ಯಾಟ್ರಿಕ್.
ಡಾ.ಜೆ.ಬಾಲಕೃಷ್ಣ
j.balakrishna@gmail.com
ಶನಿವಾರ, ಜೂನ್ 09, 2012
ಮುಲ್ಲಾ ನಸ್ರುದ್ದೀನ್ ಕತೆಗಳು-5
ಜೂನ್ 2012ರ 'ಸಂವಾದ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 5ನೇ ಕಂತು.
ಚಿತ್ರಗಳು: ಮುರಳೀಧರ ರಾಠೋಡ್
ಸಿಕ್ಕಷ್ಟು ಸೀರುಂಡೆ
ಆ ದಿನ ರಾತ್ರಿ ನಿದ್ರೆಯಲ್ಲಿದ್ದ ಮುಲ್ಲಾ ನಸ್ರುದ್ದೀನನಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಆತನ ಗೆಳೆಯ ಮುಲ್ಲಾನಿಗೆ ಒಂಭತ್ತು ನಾಣ್ಯಗಳನ್ನು ನೀಡುತ್ತಿದ್ದ. ಆದರೆ ಮುಲ್ಲಾ ಕನಿಷ್ಠ ಹತ್ತು ನಾಣ್ಯಗಳನ್ನಾದರೂ ಕೊಡದಿದ್ದರೆ ಅವುಗಳನ್ನು ಸ್ವೀಕರಿಸುವುದಿಲ್ಲ ಎನ್ನುತ್ತಿದ್ದ. ಆ ಗೆಳೆಯರ ನಡುವೆ ಮಾತುಕತೆ ಮುಂದುವರಿದಿತ್ತು. ಅಷ್ಟರಲ್ಲಿ ರಸ್ತೆಯಲ್ಲಿ ಏನೋ ಜೋರಾಗಿ ಸಪ್ಪಳವಾಗಿ ಮುಲ್ಲಾನಿಗೆ ಎಚ್ಚರವಾಯಿತು. ಕಣ್ಣುಬಿಟ್ಟು ನೋಡಿದ ಮುಲ್ಲಾನ ಕೈ ಚಾಚಿದಂತೆಯೇ ಇತ್ತು, ಆದರೆ ಅದರಲ್ಲಿ ಯಾವ ನಾಣ್ಯವೂ ಇರಲಿಲ್ಲ. ತಕ್ಷಣ ಕಣ್ಣು ಮುಚ್ಚಿದ ಮುಲ್ಲಾ, ‘ಆಯಿತು ಗೆಳೆಯಾ, ಆ ಒಂಭತ್ತೇ ನಾಣ್ಯಗಳನ್ನು ಕೊಡು’ ಎಂದ.
ವಿಧಿಯೆಂಬ ಊಹೆ
ಒಬ್ಬ ವ್ಯಕ್ತಿ ಬಂದು ವಿದ್ವಾಂಸ ಮುಲ್ಲಾ ನಸ್ರುದ್ದೀನ್‌ನನ್ನು ‘ವಿಧಿಯ ಅರ್ಥವೇನು?’ ಎಂದು ಕೇಳಿದ.
‘ವಿಧಿಯೆನ್ನುವುದು ಒಂದು ಊಹೆ’ ಎಂದ ನಸ್ರುದ್ದೀನ್ ತನ್ನ ಗಡ್ಡ ಕೆರೆದುಕೊಳ್ಳುತ್ತಾ.
‘ಅದನ್ನು ವಿವರಿಸಿ ಹೇಳುತ್ತೀರಾ?’ ಆತ ಅರ್ಥವಾಗದೆ ಕೇಳಿದ.
ಮುಲ್ಲಾ ಆತನೆಡೆಗೆ ನೋಡುತ್ತಾ, ‘ಎಲ್ಲವೂ ಸರಿಯಾಗುತ್ತದೆ ಎಂದು ನೀನು ಊಹಿಸಿಕೊಳ್ಳುತ್ತೀಯಾ- ಆದರೆ ಆ ರೀತಿ ನಡೆಯದಾದಾಗ ಅದನ್ನು ದುರಾದೃಷ್ಟ ಎನ್ನುತ್ತಾರೆ ಅಥವಾ ನೀನು ಊಹಿಸಿದಂತೆಯೇ ನಡೆದರೆ ಅದು ನಿನ್ನ ಅದೃಷ್ಟ ಎನ್ನುತ್ತಾರೆ. ಇದೇ ರೀತಿ ನಡೆಯಬಹುದೆಂದು ನೀನು ಕೆಲವು ಕೆಲಸಗಳನ್ನು ಮಾಡುತ್ತೀಯೆ. ಆ ರೀತಿ ನಡೆಯದಾದಾಗ ನಿನಗೆ ಮುಂದಾಲೋಚನೆ ಇಲ್ಲವೆನ್ನುತ್ತಾರೆ. ನಿನಗೆ ಭವಿಷ್ಯವಾಗಲಿ ಮುಂದೆ ನಡೆಯುವುದಾಗಲಿ ತಿಳಿದಿಲ್ಲವೆಂದು ಊಹಿಸಿಕೊ, ಆಗ ಅದನ್ನೇ ನಿನ್ನ ವಿಧಿಯೆನ್ನುತ್ತಾರೆ’ ಎಂದ.
ವಿಮರ್ಶಕ ಮುಲ್ಲಾ
ಆ ರಾಜ್ಯದ ಸುಲ್ತಾನನಿಗೆ ತಾನು ಇದ್ದಕ್ಕಿದ್ದಂತೆ ಕವಿಯಾಗಬೇಕೆನ್ನಿಸಿತು. ಹಗಲು ರಾತ್ರಿ ಕೂತು ಪದ್ಯವೊಂದನ್ನು ರಚಿಸಿದ. ಆ ಪ್ರಾಂತ್ಯದಲ್ಲೆಲ್ಲಾ ಅತ್ಯಂತ ಖ್ಯಾತ ಕವಿಯಾಗಿದ್ದ ನಸ್ರುದ್ದೀನ್‌ನನ್ನು ತನ್ನ ಆಸ್ಥಾನಕ್ಕೆ ಕರೆಸಿ ತನ್ನ ಕಾವ್ಯ ವಾಚನ ಆಲಿಸುವಂತೆ ಕೇಳಿದ. ಅತ್ಯಂತ ತನ್ಮಯನಾಗಿ ಸುಲ್ತಾನ ಕಾವ್ಯ ವಾಚನ ಮಾಡಿದ. ಅದು ನಸ್ರುದ್ದೀನ್ ಕೇಳಿದ ಪದ್ಯಗಳಲ್ಲೇ ಅತ್ಯಂತ ಕೆಟ್ಟದ್ದಾಗಿತ್ತು. ಆದರೂ ಸಹಿಸಿಕೊಂಡು ಮೌನವಾಗಿ ಪದ್ಯವನ್ನು ಕೇಳಿ ತಲೆದೂಗಿದ.
ಅಷ್ಟಕ್ಕೇ ಬಿಟ್ಟಿದ್ದಲ್ಲಿ ಏನೂ ಸಮಸ್ಯೆ ಇರಲಿಲ್ಲ. ಆದರೆ ಸುಲ್ತಾನ ತನ್ನ ವಾಚನ ಮುಗಿಸಿ ತನ್ನ ಕಾವ್ಯ ಹೇಗಿದೆ ಎಂದು ನಸ್ರುದ್ದೀನ್‌ನನ್ನು ಕೇಳಿದ. ನಸ್ರುದ್ದೀನ್ ಪೀಕಲಾಟಕ್ಕೆ ಸಿಕ್ಕಿಕೊಂಡ. ಆದರೆ ಆತ ನಿಷ್ಠುರವಾದಿ, ಇದ್ದದ್ದು ಇದ್ದಹಾಗೇ ಹೇಳುವವನು. ‘ನಿಮ್ಮ ಕಾವ್ಯದ ಬಗೆಗೆ ನನ್ನ ಅನಿಸಿಕೆಯನ್ನು ಪ್ರಾಮಾಣಿಕವಾಗಿ ಹೇಳುತ್ತೇನೆ’ ಎನ್ನುತ್ತಾ ಎದ್ದುನಿಂತ. ಖ್ಯಾತ ಕವಿ ನಸ್ರುದ್ದೀನ್ ತನ್ನ ಪದ್ಯವನ್ನು ಹಾಡಿಹೊಗಳುತ್ತಾನೆ ಎಂದು ಸುಲ್ತಾನ್ ಗರ್ವದಿಂದ ಗಡ್ಡ ನೇವರಿಸಿಕೊಳ್ಳುತ್ತಿದ್ದ.
‘ನಿಜ ಹೇಳುತ್ತೇನೆ, ನಿಮ್ಮ ಪದ್ಯ ಅತ್ಯಂತ ಕೆಟ್ಟದ್ದಾಗಿದೆ......’ ಎಂದ ನಸ್ರುದ್ದೀನ್.
ಅವನ ಮಾತಿನಿಂದ ಅತ್ಯಂತ ಕೋಪಗೊಂಡ ಸುಲ್ತಾನ, ‘ಸೈನಿಕರೇ! ಈ ವ್ಯಕ್ತಿಯನ್ನು ಸೆರೆಮನೆಗೆ ಹಾಕಿ’ ಎಂದ. ಸೈನಿಕರು ನಸ್ರುದ್ದೀನ್‌ನನ್ನು ಹಿಡಿದುಕೊಂಡು ಹೋಗುವಾಗ ‘ಸೆರೆಮನೆ ವಾಸ ಮುವ್ವತ್ತು ದಿನಗಳು....’ ಎನ್ನುತ್ತಾ ಎಚ್ಚರಿಕೆಯೆಂಬಂತೆ ನಸ್ರುದ್ದೀನ್ ಕಡೆಗೆ ತನ್ನ ಬೆರಳು ತೋರಿಸಿದ.
ಮುವ್ವತ್ತು ದಿನಗಳ ಸೆರೆಮನೆ ವಾಸದ ನಂತರ ನಸ್ರುದ್ದೀನ್ ತನ್ನ ಮನೆಯಲ್ಲಿದ್ದಾಗ ಮತ್ತೊಂದು ದಿನ ಸುಲ್ತಾನನಿಂದ ಕರೆಬಂದಿತು.
ಸುಲ್ತಾನ ತನ್ನ ಮತ್ತೊಂದು ಪದ್ಯದ ವಾಚನಕ್ಕೆ ನಸ್ರುದ್ದೀನ್‌ನನ್ನು ಆಹ್ವಾನಿಸಿದ್ದ. ಎಂದಿನಂತೆ ಕಾವ್ಯವಾಚನ ನಡೆಯಿತು ಹಾಗೂ ಪುನಃ ಕವಿ ನಸ್ರುದ್ದೀನ್‌ನಿಗೆ ತನ್ನ ಅಭಿಪ್ರಾಯ ತಿಳಿಸುವಂತೆ ಹೇಳಲಾಯಿತು.
ಈ ಬಾರಿ ನಸ್ರುದ್ದೀನ್ ಏನೂ ಹೇಳಲಿಲ್ಲ. ಎದ್ದು ನಿಂತವನೇ ಬಾಗಿಲಿನ ಕಡೆಗೆ ನಡೆಯತೊಡಗಿದ. ಅವನ ವರ್ತನೆ ಅರ್ಥವಾಗದ ಸುಲ್ತಾನ, ‘ಎಲ್ಲಿಗೆ ಹೋಗುತ್ತಿದ್ದೀಯೆ?’ ಎಂದು ಕೇಳಿದ.
‘ಸೆರೆಮನೆಗೆ’ ಎಂದ ನಸ್ರುದ್ದೀನ್.
ಸತ್ಯವನ್ನೇ ಹೇಳುವೆ.....
ತನ್ನ ನಗರಕ್ಕೆ ಸುತ್ತಮುತ್ತಲ ಜನರೆಲ್ಲಾ ನಗರದ ದ್ವಾರಪಾಲಕರಿಗೆ ಅದೂ ಇದೂ ಸುಳ್ಳು ಹೇಳಿ ನಗರಕ್ಕೆ ಬಂದು ದಾಂಧಲೆ ಮಾಡುತ್ತಿದ್ದುದು ಸುಲ್ತಾನನಿಗೆ ತಲೆನೋವಾಗಿ ಪರಿಣಮಿಸಿತ್ತು. ಇದಕ್ಕೆ ಹೇಗಾದರೂ ಮಾಡಿ ಕಡಿವಾಣ ಹಾಕಬೇಕೆಂದು ನಿರ್ಧರಿಸಿದ ಸುಲ್ತಾನ ತನ್ನ ದ್ವಾರಪಾಲಕರಿಗೆ ನಗರಕ್ಕೆ ಬರುವವರು ಹೇಳುವ ತಮ್ಮ ಪ್ರವೇಶದ ಕಾರಣ ಸುಳ್ಳಾಗಿದ್ದಲ್ಲಿ ಅವರನ್ನು ಅಲ್ಲೇ ನೇಣಿಗೆ ಹಾಕುವಂತೆ ಅಜ್ಞಾಪಿಸಿದ.
ಈ ಅಜ್ಞೆಯ ಬಗ್ಗೆ ಕೇಳಿದ್ದ ಮುಲ್ಲಾ ನಸ್ರುದ್ದೀನ್ ಅದೊಂದು ದಿನ ನಗರಕ್ಕೆ ತನ್ನ ಕತ್ತೆಯ ಮೇಲೆ ಕೂತು ಹೊರಟ. ನಗರದ ಪ್ರವೇಶ ದ್ವಾರದಲ್ಲಿದ್ದ ದ್ವಾರಪಾಲಕರು ನಸ್ರುದ್ದೀನ್‌ನನ್ನು ತಡೆದು ನಗರದಲ್ಲಿ ಆತನಿಗೆ ಇರುವ ಕೆಲಸವೇನು ಹಾಗೂ ಅದರ ಬಗ್ಗೆ ಸತ್ಯವನ್ನೇ ಹೇಳಬೇಕು, ಇಲ್ಲದಿದ್ದಲ್ಲಿ ಅವನನ್ನು ಅಲ್ಲೇ ನೇಣಿಗೆ ಹಾಗುವುದಾಗಿ ಎಚ್ಚರಿಕೆ ನೀಡಿದರು. ಅದಕ್ಕೆ ಮುಲ್ಲಾ ನಸ್ರುದ್ದೀನ್,
‘ನಾನು ಸತ್ಯವನ್ನೇ ಹೇಳುತ್ತೇನೆ. ನನಗೆ ಬದುಕು ಸಾಕಾಗಿದೆ. ನಿಮ್ಮ ಕೈಯಲ್ಲಿ ನೇಣು ಹಾಕಿಸಿಕೊಂಡು ಸಾಯೋಣವೆಂದು ಬಂದಿದ್ದೇನೆ’ ಎಂದ.
‘ಸುಳ್ಳು ಹೇಳುತ್ತಿದ್ದೀಯಾ! ನಿನ್ನನ್ನು ಖಂಡಿತವಾಗಿ ನೇಣು ಹಾಕುತ್ತೇವೆ!!’ ಎಂದರು ದ್ವಾರಪಾಲಕರು.
‘ಹಾಗಾದರೆ, ನಾನು ಹೇಳಿದ್ದು ಸತ್ಯವಾಗುತ್ತದೆ. ಸತ್ಯ ಹೇಳುವವರನ್ನು ನೇಣಿಗೆ ಹಾಕಬಾರದಲ್ಲವೆ?’ ಕೇಳಿದ ನಸ್ರುದ್ದೀನ್.
ಜ್ಞಾನೋದಯದ ಹಾದಿ
ಒಂದು ದಿನ ಮುಲ್ಲಾ ನಸ್ರುದ್ದೀನ್ ತನ್ನ ಊರಿನ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ. ಒಂದಷ್ಟು ಜನರ ಗುಂಪು ಆತನನ್ನು ಹಿಂಬಾಲಿಸುತ್ತಿತ್ತು ಹಾಗೂ ಅವರು ನಸ್ರುದ್ದೀನ್ ಏನು ಮಾಡುತ್ತಾನೋ ಅದನ್ನೇ ಅನುಕರಿಸುತ್ತಿದ್ದರು. ನಸ್ರುದ್ದೀನ್ ಒಂದೆರಡು ಹೆಜ್ಜೆ ಹಾಕಿ ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಮುಂದಕ್ಕೆ ಬಾಗಿ ತಕ್ಷಣ ಮೇಲಕ್ಕೆ ಹಾರಿ ‘ಹ್ಹೆ...ಹ್ಹೆ...ಹ್ಹೇ....’ ಎಂದು ಜೋರಾಗಿ ಕೇಕೆ ಹಾಕುತ್ತಿದ್ದ. ಅವನ ಹಿಂಬಾಲಕರು ಅದನ್ನೇ ಅನುಕರಿಸುತ್ತಿದ್ದರು. ಅವರೆಲ್ಲರ ನಡತೆ ಊರಿನ ಜನರಿಗೆ ತಮಾಷೆಯಾಗಿ ಕಾಣುತ್ತಿತ್ತು.
ಆ ರಸ್ತೆಯಲ್ಲಿನ ಅಂಗಡಿಯೊಂದರ ವ್ಯಾಪಾರಿ ನಸ್ರುದ್ದೀನ್‌ನ ಗೆಳೆಯನಾಗಿದ್ದ. ಆತ ತನ್ನ ಗೆಳೆಯನ ಮಂಗಾಟ ನೋಡಿ, ‘ಏನಿದು ನಸ್ರುದ್ದೀನ್, ಏನು ಮಾಡುತ್ತಿದ್ದೀಯ? ಇವರೆಲ್ಲಾ ಯಾರು? ಅವರೇಕೆ ನಿನ್ನನ್ನು ಅನುಕರಿಸುತ್ತಿದ್ದಾರೆ? ಎಂದು ಕೇಳಿದ.
‘ನಾನು ಸೂಫಿ ಗುರುವಾಗಿದ್ದೇನೆ’ ಹೇಳಿದ ನಸ್ರುದ್ದೀನ್, ‘ಇವರೆಲ್ಲಾ ನನ್ನ ಶಿಷ್ಯರು. ಅವರಿಗೆ ನಾನು ಜ್ಞಾನೋದಯದ ಹಾದಿ ತೋರಿಸುತ್ತಿದ್ದೇನೆ.’
‘ಹೌದೆ? ಆದರೆ, ಅವರಿಗೆ ಯಾವಾಗ ಜ್ಞಾನೋದಯವಾಗಿದೆಯೆಂದು ನಿನಗೆ ಹೇಗೆ ತಿಳಿಯುತ್ತದೆ?’ ಎಂದ ಆ ಗೆಳೆಯ.
‘ಹೋ, ಅದು ಬಹಳ ಸುಲಭ. ಪ್ರತಿ ದಿನ ಬೆಳಿಗ್ಗೆ ನಾನು ನನ್ನ ಶಿಷ್ಯರನ್ನು ಎಣಿಸುತ್ತೇನೆ. ಯಾರ‍್ಯಾರು ಬಿಟ್ಟುಹೋಗಿದ್ದಾರೋ, ಅವರಿಗೆಲ್ಲಾ ಜ್ಞಾನೋದಯ ವಾಗಿದೆಯೆಂದು ಅರ್ಥ!’ ಎಂದ ಸೂಫಿ ಗುರು ನಸ್ರುದ್ದೀನ್.
ಚಂದ್ರನೇ ವಾಸಿ!
ಆ ದಿನ ತಾನು ಸದಾ ಹರಟೆ ಹೊಡೆಯಲು ಹೋಗುವಾ ಚಹಾದಂಗಡಿಗೆ ಬಂದ ಮುಲ್ಲಾ ನಸ್ರುದ್ದೀನ್, ‘ಸೂರ್ಯನಿಗಿಂತ ಚಂದ್ರನೇ ಹೆಚ್ಚು ಉಪಕಾರಿ’ ಎಂದ ಅಲ್ಲೇ ಗೆಳೆಯರ ಜೊತೆ ಕೂಡುತ್ತ. ಅಲ್ಲೇ ಕೂತಿದ್ದ ಒಬ್ಬ ಮುದುಕ, ‘ಅದು ಹೇಗೆ ಮುಲ್ಲಾ?’ ಎಂದು ಕೇಳಿದ.
‘ಇನ್ನೇನು? ನಮಗೆ ರಾತ್ರಿಯ ಕತ್ತಲಲ್ಲಿ ಬೆಳಕು ಬೇಕಾಗಿರುವಾಗ ಸೂರ್ಯ ಬರುವುದಿಲ್ಲ. ಆಗ ನಮಗೆ ಬೆಳಕು ಕೊಡುವುದು ಚಂದ್ರ ತಾನೆ?’ ಎಂದ ನಸ್ರುದ್ದೀನ್.
ಮುಲ್ಲಾನ ವಯಸ್ಸು
ಬಹಳ ವರ್ಷಗಳ ನಂತರ ಗೆಳೆಯನೊಬ್ಬ ಮುಲ್ಲಾನನ್ನು ಭೇಟಿಯಾದ. ಮುಲ್ಲಾನನ್ನು ಅಪ್ಪಿಕೊಳ್ಳುತ್ತಾ, ‘ಹೇಗಿದ್ದೀಯ ಗೆಳೆಯಾ? ನೋಡಿ ಬಹಳ ವರ್ಷಗಳೇ ಆದುವು. ಈಗ ನಿನ್ನ ವಯಸ್ಸೆಷ್ಟು?’ ಎಂದು ಕೇಳಿದ.
‘ನನಗೆ ನಲವತ್ತು ವರ್ಷ ವಯಸ್ಸು ಎಂದ’ ಮುಲ್ಲಾ.
‘ಅದ್ಹೇಗೆ ಸಾಧ್ಯ? ಕಳೆದ ಸಾರಿ ಭೇಟಿಯಾದಾಗಲೂ ನೀನು ನಿನ್ನ ವಯಸ್ಸು ನಲವತ್ತು ಎಂದೇ ಹೇಳಿದ್ದೆ?’ ಕೇಳಿದ ಆ ಗೆಳೆಯ.
‘ಹೌದಪ್ಪ. ನಾನು ದಿನಕ್ಕೊಮ್ಮೆ ಮಾತು ಬದಲಿಸುವವನಲ್ಲ. ಹೇಳಿದ ಮಾತಿಗೆ ಬದ್ಧನಾಗಿರುವವನು ನಾನು’ ಎಂದ ಮುಲ್ಲಾ ನಸ್ರುದ್ದೀನ್.
ಎಷ್ಟು ವರ್ಷ ದೊಡ್ಡವನು?
‘ನಿನ್ನ ವಯಸ್ಸೆಷ್ಟು?’ ಗೆಳೆಯನೊಬ್ಬ ಮುಲ್ಲಾನನ್ನು ಕೇಳಿದ.
‘ನಾನು ನನ್ನ ತಮ್ಮನಿಗಿಂತ ಮೂರು ವರ್ಷ ದೊಡ್ಡವನು’ ಎಂದ ಮುಲ್ಲಾ.
‘ನಿನಗೆ ಅಷ್ಟು ನಿಖರವಾಗಿ ಗೊತ್ತೇ?’
‘ಹೌದು. ಕಳೆದ ವರ್ಷ ನನ್ನ ತಮ್ಮ ಯಾರೊಂದಿಗೋ ನನ್ನ ಅಣ್ಣ ನನಗಿಂತ ಎರಡು ವರ್ಷ ದೊಡ್ಡವನು ಎಂದು ಹೇಳುತ್ತಿದ್ದ. ಅವನು ಆ ಮಾತು ಹೇಳಿ ಒಂದು ವರ್ಷವಾಗಿದೆ. ಹಾಗಾಗಿ ಈಗ ನಾನು ಅವನಿಗಿಂತ ಮೂರು ವರ್ಷ ದೊಡ್ಡವನು’ ಎಂದ ಮುಲ್ಲಾ ನಸ್ರುದ್ದೀನ್.
ಮುಲ್ಲಾ ನಸ್ರುದ್ದೀನ್‌ನ ಊರಿನಲ್ಲಿ ಹೊಸ ವಸ್ತ್ರ ವಿನ್ಯಾಸಗಳ ಫ್ಯಾಶನ್ ಶೋ ನಡೆಯುತ್ತಿತ್ತು. ಸುಂದರ ಯುವತಿಯರು ಆ ಹೊಸ ವಸ್ತ್ರಗಳನ್ನು ಧರಿಸಿ ಪ್ರದರ್ಶನ ನಡೆಸಿದರು. ಮುಲ್ಲಾ ಹೊರಗೆ ಬಂದಾಗ ಆ ಹೊಸ ವಸ್ತ್ರಗಳನ್ನು ಮಾರಾಟಕ್ಕೆ ಇರಿಸಿದ್ದರು. ಅದನ್ನು ನೋಡಿದ ಮುಲ್ಲಾ, ‘ಇದು ಮೋಸ’ ಎಂದರಚಿದ. ಆಯೋಜಕರು ಆತನ ಬಳಿ ಬಂದು ‘ಯಾವುದು ಮೋಸ?’ ಎಂದು ಕೇಳಿದರು.
‘ಒಳಗಡೆ ಸುಂದರ ಯುವತಿಯರು ಹಾಗೂ ವಸ್ತ್ರಗಳನ್ನು ಪ್ರದರ್ಶಿಸಿದಿರಿ. ಆದರೆ ಇಲ್ಲಿ ವಸ್ತ್ರಗಳನ್ನು ಮಾತ್ರ ಮಾರಾಟಕ್ಕೆ ಇಟ್ಟಿದ್ದೀರಾ!’ ಎಂದ ಮುಲ್ಲಾ ನಸ್ರುದ್ದೀನ್.
ಮಂಗಳವಾರ, ಜೂನ್ 05, 2012
ಶುಕ್ರವಾರ, ಜೂನ್ 01, 2012
ಗುರುವಾರ, ಮೇ 17, 2012
ಶುಕ್ರವಾರ, ಮೇ 11, 2012
ಸಾದತ್ ಹಸನ್ ಮಂಟೋ ಜನ್ಮ ಶತಮಾನೋತ್ಸವ - ಈ ಎರಡೂ ದೇಶಗಳಲ್ಲಿ ನನ್ನ ದೇಶ ಯಾವುದು?
ಇಂದಿಗೆ ಸಾದತ್ ಹಸನ್ ಮಂಟೋ (11.5.1912-18.1.1955) ಹುಟ್ಟಿ ನೂರು ವರ್ಷಗಳಾದುವು. ಆತ ಈ ಉಪಖಂಡ ಕಂಡ ಒಬ್ಬ ಮಹಾನ್ ಹಾಗೂ ವಿವಾದಾಸ್ಪದ ಉರ್ದು ಕತೆಗಾರ. ಭಾರತ, ಪಾಕಿಸ್ತಾನ ವಿಭಜನೆಯಿಂದ ತೀವ್ರ ಆಘಾತಕ್ಕೊಳಗಾದ ಮಾಂಟೊ ಆಗ ತಾನು ಕಂಡ ಕೋಮುಗಲಭೆಗಳ ಅಮಾನವೀಯ ಕ್ರೌರ್ಯದಿಂದ ತತ್ತರಿಸಿಹೋದ. ಭಾರತ, ಪಾಕಿಸ್ತಾನ ವಿಭಜನೆಯಾದಾಗ, 'ಈ ಎರಡೂ ದೇಶಗಳಲ್ಲಿ ನನ್ನ ದೇಶ ಯಾವುದೆಂದು ನಿರ್ಧರಿಸಲು ನನ್ನಿಂದ ಸಾಧ್ಯವಾಗಲೇ ಇಲ್ಲ' ಎಂದಿದ್ದಾನೆ. ಆತ ಜನರನ್ನು ಹಿಂದೂ, ಮುಸಲ್ಮಾನ ಅಥವಾ ಸಿಖ್ಖರೆಂದು ಪ್ರತ್ಯೇಕಿಸಿ ನೋಡಲಿಲ್ಲ. ಆತನಿಗೆ ಎಲ್ಲರೂ ಮನುಷ್ಯರೆ. ಕೆಲದಿನಗಳ ಹಿಂದೆಯಷ್ಟೇ ನೆರೆಹೊರೆಯವರು, ಗೆಳೆಯರಾಗಿದ್ದವರು ಪರಸ್ಪರ ಕೊಂದುಕೊಳ್ಳುವ ಅಮಾನವೀಯ, ಕ್ರೌರ್ಯ ಮನೋಭಾವ ಪಡೆದುಕೊಂಡದ್ದು ಮಾಂಟೋನಲ್ಲಿ ಆಘಾತ ಹಾಗೂ ದಿಗ್ಭ್ರಮೆ ಉಂಟುಮಾಡಿತ್ತು. ವಿಭಜನೆಯ ನಂತರ ಪಾಕಿಸ್ತಾನದ ಲಾಹೋರ್‌ಗೆ ಹೋದ ಮಾಂಟೊ ಅಲ್ಲಿ ಏಳು ವರ್ಷಗಳು ಬದುಕಿದ್ದ. ಆ ಏಳು ವರ್ಷಗಳು ಆತನ ಬದುಕಿನ ಸೆಣಸಾಟವೇ ಆಗಿತ್ತು. ಆ ಸೆಣಸಾಟದಲ್ಲೂ ಜಗತ್ತಿಗೆ ತನ್ನ ಮಹಾನ್ ಕೃತಿಗಳ ಕಾಣಿಕೆ ನೀಡಿದ. ಆ ಏಳೂ ವರ್ಷಗಳ ಬದುಕಿನ ಪಯಣ ಆತನನ್ನು ಸಾವಿಗೆ ಹತ್ತಿರ ಹತ್ತಿರ ಕೊಂಡೊಯ್ದವು. ಮಾಂಟೊ ಸತ್ತಾಗ ಆತನಿಗಿನ್ನೂ ೪೩ ವರ್ಷ ತುಂಬಿರಲಿಲ್ಲ. ಅಷ್ಟರಲ್ಲೇ ಆತ ೨೫೦ಕ್ಕೂ ಹೆಚ್ಚು ಸಣ್ಣ ಕತೆಗಳನ್ನು (22 ಕಥಾ ಸಂಕಲನಗಳು), ಏಳು ರೇಡಿಯೋ ನಾಟಕ ಸಂಗ್ರಹಗಳನ್ನು, ಮೂರು ಪ್ರಬಂಧ ಸಂಗ್ರಹಗಳನ್ನು ಹಾಗೂ ಒಂದು ಕಿರುಕಾದಂಬರಿಯನ್ನು ರಚಿಸಿದ್ದ. ಆತ ಬದುಕಿನಲ್ಲಿ ಎಲ್ಲವನ್ನೂ ಕಂಡಿದ್ದ- ಅತ್ಯಂತ ಜನಪ್ರಿಯತೆ, ಅಸೀಮ ದ್ವೇಷ, ತಾನು ಬಯಸದ ಅಪಮಾನ ಹಾಗೂ ಆ ಎಲ್ಲವನ್ನೂ ತನ್ನ ಕತೆಗಳಲ್ಲಿ ಹೇಳಿಬಿಟ್ಟಿದ್ದ- ಜಗತ್ತೇ ತನ್ನನ್ನು ಅದ್ಭುತ ಕತೆಗಾರನೆಂದು ಕೊಂಡಾಡುವಂತೆ.
ನಾನು ಅನುವಾದಿಸಿರುವ 'ಮಾಂಟೊ ಕತೆಗಳು' ಲಂಕೇಶ್ ಪ್ರಕಾಶನದಲ್ಲಿ ಪ್ರಕಟವಾಗಿದೆ (ಲಂಕೇಶ್ ಪ್ರಕಾಶನ, ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು-560004. ದೂರವಾಣಿ: 080-26676427, ಪುಟಗಳು: xvi+107, ಬೆಲೆ ರೂ: 80/-). ಅದರಿಂದ ಆಯ್ದ ಕೆಲವು ಕತೆಗಳನ್ನು ಮಂಟೋ ನೆನಪಿಗೆ ಇಲ್ಲಿ ಕೊಟ್ಟಿದ್ದೇನೆ.
ಫಿಫ್ಟಿ-ಫಿಫ್ಟಿ
ಆ ವ್ಯಕ್ತಿಗೆ ಆ ದೊಡ್ಡ ಮರದ ಪೆಟ್ಟಿಗೆ ಇಷ್ಟವಾಯಿತು. ಆತ ಅದನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ. ಆ ಪೆಟ್ಟಿಗೆ ಅದೆಷ್ಟು ತೂಕವಾಗಿತ್ತೆಂದರೆ ಅದು ಒಂದಿಂಚೂ ಅಲುಗಾಡಲಿಲ್ಲ. ಮತ್ತೊಬ್ಬ ವ್ಯಕ್ತಿ ಅಲ್ಲಿಗೆ ಬಂದ. ಆತನಿಗೆ ಬೆಳಿಗ್ಗೆಯಿಂದ ಲೂಟಿಮಾಡಲು ಏನೂ ಸಿಕ್ಕಿರಲಿಲ್ಲ. ‘ನಿನಗೆ ಸಹಾಯ ಬೇಕೆ?’, ಕೇಳಿದ ಆತ. ಮೊದಲ ವ್ಯಕ್ತಿ ಒಪ್ಪಿಕೊಂಡ ಹಾಗೂ ಇಬ್ಬರೂ ಸೇರಿ ಅದನ್ನು ಎತ್ತಿಕೊಂಡು ಮನೆಯಿಂದ ಹೊರನಡೆದರು.
ಆ ಮರದ ಪೆಟ್ಟಿಗೆ ತೂಕವಾಗಿತ್ತು. ತನ್ನ ಬೆನ್ನ ಮೇಲೆ ಹೊತ್ತಿದ್ದ ಎರಡನೇ ವ್ಯಕ್ತಿಯ ಬೆನ್ನುಮೂಳೆಗಳು ಮುರಿಯುವಂತಾಗಿತ್ತು, ಕಾಲುಗಳು ತೂಕಕ್ಕೆ ಬಾಗುತ್ತಿದ್ದವು. ಆದರೆ ತನಗೆ ದೊರೆಯುವ ಪಾಲಿನ ದುರಾಸೆಯಿಂದ ಆತನಿಗೆ ಯಾವ ನೋವೂ ಲೆಕ್ಕಕ್ಕೆ ಬರುತ್ತಿರಲಿಲ್ಲ.
ಮನೆಯಿಂದ ಸ್ವಲ್ಪ ದೂರ ನಡೆದು ಒಂದು ಸುರಕ್ಷಿತ ಸ್ಥಳದಲ್ಲಿ ಇರಿಸಿದ ಎರಡನೆಯ ವ್ಯಕ್ತಿ, ‘ಆ ಪೆಟ್ಟಿಗೆಯಲ್ಲಿರುವುದರಲ್ಲಿ ನನಗೆಷ್ಟು ಪಾಲು ಕೊಡುತ್ತೀಯೆ?’ ಎಂದು ಮೊದಲನೆಯ ವ್ಯಕ್ತಿಯನ್ನು ಕೇಳಿದ.
‘ಕಾಲು ಭಾಗ’, ಮೊದಲನೆಯ ವ್ಯಕ್ತಿ ಹೇಳಿದ.
‘ತೀರಾ ಕಡಿಮೆಯಾಯಿತು’, ಎರಡನೆಯ ವ್ಯಕ್ತಿ ಹೇಳಿದ.
‘ನಿನಗೆ ಕೊಡುವ ಕಾಲುಭಾಗವೇ ಹೆಚ್ಚು. ಏಕೆಂದರೆ ಆ ಪೆಟ್ಟಿಗೆಯನ್ನು ಮೊದಲು ನೋಡಿದವನೇ ನಾನು’.
‘ಇರಬಹುದು. ಆ ಹೆಣಭಾರವನ್ನು ಬೆನ್ನ ಮೇಲೆ ಹೊರಕ್ಕೆ ಹೊತ್ತು ತಂದವನು ನಾನಲ್ಲವೆ?’
‘ಆಯಿತು. ಇಬ್ಬರೂ ಸಮನಾಗಿ ಹಂಚಿಕೊಳ್ಳೋಣ. ಫಿಫ್ಟಿ-ಫಿಫ್ಟಿ. ಸಂತೋಷವೆ?’
‘ಒಳ್ಳೆಯದು. ಪೆಟ್ಟಿಗೆಯನ್ನು ತೆಗಿ. ಏನಿದೆಯೋ ನೋಡೋಣ’.
ಅವರಿಬ್ಬರೂ ಪೆಟ್ಟಿಗೆಯನ್ನು ತೆರೆಯುತ್ತಿದ್ದಂತೆ ಅದರೊಳಗಿನಿಂದ ವ್ಯಕ್ತಿಯೊಬ್ಬ ಹೊರಬಂದ. ಅವನ ಕೈಯಲ್ಲಿ ಒಂದು ಚೂಪಾದ ಕತ್ತಿಯಿತ್ತು. ಅವನು ಆ ಕತ್ತಿಯಿಂದ ಇಬ್ಬರನ್ನು ಅರ್ಧರ್ಧ ಸೀಳಿದ. ಫಿಫ್ಟಿ-ಫಿಫ್ಟಿ.
ಅಜ್ಞಾನವೇ ವರದಾನ
ಪಿಸ್ತೂಲಿನ ಕುದುರೆಯನ್ನು ಮೀಟಿದ. ಗುಂಡೊಂದು ಹಾರಿತು.
ಮನೆಯ ಕಿಟಿಕಿಯಿಂದ ಇಣುಕಿ ನೋಡುತ್ತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಕುಸಿದುಬಿದ್ದ.
ಸ್ವಲ್ಪ ಸಮಯದ ನಂತರ ಮತ್ತೊಮ್ಮೆ ಕುದುರೆಯನ್ನು ಮೀಟಲಾಯಿತು. ಮತ್ತೊಂದು ಗುಂಡು ಹಾರಿತು.
ನೀರು ಕೊಂಡೊಯ್ಯುತ್ತಿದ್ದವನ ಚರ್ಮದ ಚೀಲ ತೂತಾಯಿತು. ನೀರು ಕೊಂಡೊಯ್ಯುತ್ತಿದ್ದವನು ದೊಪ್ಪೆಂದು ರಸ್ತೆಯ ಮೇಲೆ ಬಿದ್ದ. ನೀರು ಮತ್ತು ರಕ್ತ ಬೆರೆತು ರಸ್ತೆಯ ಮೇಲೆ ಹರಿಯತೊಡಗಿತು.
ಮೂರನೆಯ ಗುಂಡು ಹಸಿಗೋಡೆಗೆ ಬಡಿಯಿತು.
ನಾಲ್ಕನೆಯ ಗುಂಡು ಮುದುಕಿಯೊಬ್ಬಳ ಬೆನ್ನಿಗೆ ಬಡಿಯಿತು. ಸತ್ತು ಕೆಳಕ್ಕೆ ಬೀಳುವ ಮುನ್ನ ಆಕೆಗೆ ಕಿರುಚಲೂ ಸಾಧ್ಯವಾಗಲಿಲ್ಲ.
ಐದು ಮತ್ತು ಆರನೆಯ ಗುಂಡುಗಳು ಮತ್ತೆ ಗುರಿತಪ್ಪಿದವು. ಯಾರೂ ಸಾಯಲಿಲ್ಲ, ಯಾರಿಗೂ ಗಾಯವಾಗಲಿಲ್ಲ.
ಗುಂಡು ಹಾರಿಸುತ್ತಿದ್ದವನಿಗೆ ಸಿಟ್ಟುಬಂತು. ಇದ್ದಕ್ಕಿದ್ದಂತೆ ರಸ್ತೆಗೆ ಸಣ್ಣಮಗುವೊಂದು ಬಂದದ್ದನ್ನು ಆತ ಕಂಡ. ತನ್ನ ಪಿಸ್ತೂಲನ್ನು ಮಗುವಿನೆಡೆಗೆ ಗುರಿ ಇಟ್ಟ.
‘ಏನು ಮಾಡುತ್ತಿದ್ದೀಯೆ?’ ಆತನ ಜೊತೆಗಿದ್ದವ ಕೂಗಿದ.
‘ಏಕೆ?’ ಪಿಸ್ತೂಲಿನ ವ್ಯಕ್ತಿ ಕೇಳಿದ.
‘ನಿನ್ನ ಪಿಸ್ತೂಲಿನಲ್ಲಿದ್ದ ಗುಂಡುಗಳೆಲ್ಲಾ ಖಾಲಿಯಾಗಿವೆ’.
‘ನೀನು ಸುಮ್ಮನಿರು. ಅದು ಮಗುವಿಗೆ ಗೊತ್ತಿಲ್ಲ’.
ಸರಿಯಾದ ಕ್ರಮ
ಮೊಹಲ್ಲಾ ಒಂದರ ಮೇಲೆ ದಾಳಿನಡೆಯಿತು ಹಾಗೂ ಕೆಲ ಅಲ್ಪಸಂಖ್ಯಾತರನ್ನು ಚಾಕುವಿನಿಂದ ತಿವಿದು ಸಾಯಿಸಲಾಯಿತು. ಇತರರು ಜೀವಭಯದಿಂದ ಅಲ್ಲಿಂದ ಓಡಿಹೋದರು. ಇದನ್ನೆಲ್ಲಾ ಕಂಡ ದಂಪತಿಗಳಿಬ್ಬರು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಅವಿತುಕೊಂಡರು.
ಅವರಿಬ್ಬರೂ ಎರಡು ಹಗಲು ಮತ್ತು ಎರಡು ರಾತ್ರಿ ಕೊಲೆಗಡುಕರ ಹೆದರಿಕೆಯಿಂದ ಅಲ್ಲೇ ಅವಿತುಕೊಂಡಿದ್ದರು. ಆದರೆ ಯಾರೂ ಬರಲಿಲ್ಲ.
ಮತ್ತೆರಡು ದಿನಗಳು ಕಳೆದವು. ಅವರಲ್ಲಿನ ಹೆದರಿಕೆ ಕಡಿಮೆಯಾಯಿತು. ಆದರೆ ಹಸಿವು, ನೀರಡಿಕೆ ತೀವ್ರವಾಗಿ ಕಾಡತೊಡಗಿದವು.
ಇನ್ನೂ ನಾಲ್ಕು ದಿನಗಳು ಕಳೆದವು. ಈಗ ಅವರನ್ನು ಸಾವಿನ ಹೆದರಿಕೆ ಕಾಡುತ್ತಿರಲಿಲ್ಲ. ಅವರಿಗೆ ಬದುಕು ಅರ್ಥಹೀನ ಎನ್ನಿಸತೊಡಗಿತ್ತು. ಅವಿತುಕೊಂಡಿದ್ದ ನೆಲಮಾಳಿಗೆಯಿಂದ ಹೊರಬಂದರು.
ಮೊಹಲ್ಲಾದ ಜನರಿಗೆ ತಮ್ಮನ್ನು ಒಪ್ಪಿಸಿಕೊಂಡ ಗಂಡ, ಕ್ಷೀಣ ದನಿಯಲ್ಲಿ ಹೇಳಿದ, ‘ನಮ್ಮನ್ನು ನಿಮಗೊಪ್ಪಿಸಿಕೊಳ್ಳುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಕೊಂದುಬಿಡಿ’.
ಈ ಮಾತುಗಳು ಆ ಮೊಹಲ್ಲಾದ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಅವರು ಜೈನರಾಗಿದ್ದರು. ‘ನಮ್ಮ ಧರ್ಮದಲ್ಲಿ ಕೊಲ್ಲುವುದು ಅಪರಾಧ’ ಎಂದರು.
ಅವರೆಲ್ಲಾ ಸೇರಿ ಆ ಗಂಡ ಹೆಂಡಿರನ್ನು ಹಿಡಿದು ಮತ್ತೊಂದು ಮೊಹಲ್ಲಾದ ಜನರಿಗೆ ಸೂಕ್ತವಾಗಿ ವಿಲೇವಾರಿ ಮಾಡಲು ಒಪ್ಪಿಸಿದರು.
ಪವಾಡ
ಪೊಲೀಸರು ಲೂಟಿಯಾದ ವಸ್ತುಗಳನ್ನು ವಶಪಡಿಸಿಕೊಳ್ಳಲು ಮನೆಗಳ ಮೇಲೆ ದಾಳಿನಡೆಸುತ್ತಿದ್ದರು.
ಜನರು ತಾವು ಎಲ್ಲಿ ಸಿಕ್ಕಿಹಾಕಿಕೊಂಡುಬಿಡುತ್ತೀವೆಯೋ ಎಂದು ಹೆದರಿಕೊಂಡು ಲೂಟಿಮಾಡಿದ ವಸ್ತುಗಳನ್ನು ಕತ್ತಲಲ್ಲಿ ಹೊರಗೆ ಎಸೆಯುತ್ತಿದ್ದರು. ಅವರಲ್ಲಿ ಬುದ್ಧಿವಂತರಾದವರು ಈಗಾಗಲೇ ಅಂತಹ ವಸ್ತುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಅಡಗಿಸಿಬಿಟ್ಟಿದ್ದರು.
ಈ ರೀತಿ ಲೂಟಿಮಾಡಿದ ವ್ಯಕ್ತಿಯೊಬ್ಬ ತಾನು ಲೂಟಿಮಾಡಿದ ವಸ್ತುವನ್ನು ವಿಲೇವಾರಿಮಾಡಲು ತೋಚದೆ ಚಡಪಡಿಸುತ್ತಿದ್ದ. ಆತ ಕಿರಾಣಿ ಅಂಗಡಿಯೊಂದರಿಂದ ಎರಡು ಮೂಟೆ ಸಕ್ಕರೆ ಚೀಲಗಳನ್ನು ಕದ್ದು ತಂದಿದ್ದ. ಕೊನೆಗೆ ಬೇರೆ ದಾರಿ ತೋರದೆ ರಾತ್ರಿ ಆತ ಒಂದು ಚೀಲವನ್ನು ತನ್ನ ಮನೆಯ ಹತ್ತಿರದ ಬಾವಿಯೊಂದರೊಳಕ್ಕೆ ಎಸೆದ. ಮತ್ತೊಂದು ಚೀಲವನ್ನು ಅದೇ ರೀತಿ ಎಸೆಯಲು ಪ್ರಯತ್ನಿಸುತ್ತಿದ್ದ, ಆದರೆ ಕಾಲುಜಾರಿ ಆತ ಆ ಚೀಲದ ಸಮೇತ ಬಾವಿಯೊಳಕ್ಕೆ ಬಿದ್ದುಹೋದ.
ಆತನ ಕೂಗನ್ನು ಕೇಳಿ ಸುತ್ತಮುತ್ತಲಿನ ಜನ ಬಾವಿಯ ಬಳಿಬಂದರು. ಇಬ್ಬರು ಧೈರ್ಯವಂತರು ಹಗ್ಗದ ಸಹಾಯದಿಂದ ಬಾವಿಯೊಳಕ್ಕೆ ಇಳಿದು ಮುಳುಗುತ್ತಿದ್ದ ಆತನನ್ನು ಮೇಲಕ್ಕೆ ಎತ್ತಿತಂದರು. ಆದರೆ ಆತ ಬದುಕುಳಿಯಲಿಲ್ಲ.
ಮರುದಿನ ಎಂದಿನಂತೆ ಊರ ಜನ ಬಾವಿಯ ನೀರು ಕುಡಿದಾಗ ಅದು ಸಿಹಿಯಾಗಿತ್ತು. ಆ ದಿನ ಎಲ್ಲರೂ ಆತನ ಸಮಾಧಿಗೆ ಪೂಜೆ ಮಾಡಿ ದೀಪಗಳನ್ನು ಹೊತ್ತಿಸಿದರು.
ಜೆಲ್ಲಿ
ಬೆಳಿಗ್ಗೆ ಆರು ಗಂಟೆಯಲ್ಲಿ ಕೈಗಾಡಿಯಲ್ಲಿ ದೊಡ್ಡ ಮಂಜುಗಡ್ಡೆಯನ್ನು ತಳ್ಳಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಚಾಕುತಿವಿದು ಸಾಯಿಸಿದ್ದರು. ಏಳು ಗಂಟೆಯವರೆಗೂ ಆತನ ದೇಹ ಅದೇ ರೀತಿ ರಸ್ತೆಯಲ್ಲಿ ಬಿದ್ದಿತ್ತು. ಮಂಜುಗಡ್ಡೆಯಿಂದ ಕರಗಿದ ನೀರಹನಿಗಳು ಆತನ ದೇಹದ ಮೇಲೆ ಬೀಳುತ್ತಿತ್ತು.
ಏಳೂಕಾಲಿಗೆ ಪೊಲೀಸರು ಬಂದು ಆ ಮೃತದೇಹವನ್ನು ಕೊಂಡೊಯ್ದರು. ರಕ್ತಸಿಕ್ತವಾಗಿದ್ದ ಮಂಜುಗಡ್ಡೆಯನ್ನು ಅಲ್ಲೇ ರಸ್ತೆಯ ಮೇಲೆ ಬಿಟ್ಟುಹೋಗಿದ್ದರು.
ಅದೇ ರಸ್ತೆಯಲ್ಲಿ ಟಾಂಗಾ ಒಂದು ಹಾದುಹೋಯಿತು. ಅದರಲ್ಲಿ ಮಗುವೊಂದು ತನ್ನ ತಾಯಿಯ ಜೊತೆ ಹೋಗುತ್ತಿತ್ತು. ಮಗುವಿನ ದೃಷ್ಟಿ ರಸ್ತೆಯ ಮೇಲೆ ಬಿದ್ದಿದ್ದ ಮಂಜುಗಡ್ಡೆಯ ಮೇಲಿನ ರಕ್ತಸಿಕ್ತ ಮಾಂಸದ ತುಣುಕಿನ ಮೇಲೆ ಬಿತ್ತು. ಮಗುವಿನ ಬಾಯಿಯಲ್ಲಿ ನೀರೂರತೊಡಗಿತು.
ಆ ಮಗು ಅಮ್ಮನ ತೋಳನ್ನು ಜಗ್ಗಿ, ‘ಮಮ್ಮಿ ಅಲ್ಲಿ ನೋಡು, ಜೆಲ್ಲಿ!’ ಎಂದು ಉತ್ಸಾಹದಿಂದ ಕೂಗಿತು.
ಮೋಸದ ವ್ಯಾಪಾರ
ಇಬ್ಬರು ಗೆಳೆಯರು ಇಪ್ಪತ್ತು ಹುಡುಗಿಯರಲ್ಲಿ ಒಬ್ಬಳನ್ನು ಬಹು ಎಚ್ಚರಿಕೆಯಿಂದ ಆಯ್ಕೆಮಾಡಿಕೊಂಡರು. ಅವಳನ್ನು ನಲವತ್ತೆರಡು ರೂಪಾಯಿಗೆ ವ್ಯಾಪಾರ ಮಾಡಿ ಕರೆದುತಂದರು. ಆ ರಾತ್ರಿಗೆ ಒಬ್ಬ ಆಕೆಯನ್ನು ತನ್ನ ಮನೆಗೆ ಕರೆದೊಯ್ದ.
ಅವಳೊಂದಿಗೆ ರಾತ್ರಿ ಕಳೆದ ನಂತರ ಬೆಳಿಗ್ಗೆ ಆತ ಆಕೆಯ ಹೆಸರು ಕೇಳಿದ.
ಆಕೆ ತನ್ನ ಹೆಸರು ಹೇಳಿದಳು.
ಆ ಮನುಷ್ಯನಿಗೆ ಆಘಾತವಾಯಿತು. ‘ಆದರೆ ಅವರು ನಿನ್ನ ಹೆಸರು ಬೇರೆಯೇ ಹೇಳಿ ನೀನು ಬೇರೆ ಕೋಮಿನವಳು ಎಂದು ಹೇಳಿದರಲ್ಲ’ ಎಂದ.
‘ಅವರು ನಿನಗೆ ಸುಳ್ಳು ಹೇಳಿದ್ದಾರೆ’, ಹುಡುಗಿ ಹೇಳಿದಳು.
ಆತ ತನ್ನ ಗೆಳೆಯನ ಮನೆಗೆ ಓಡಿದ. ‘ಆ ಕಳ್ಳಸೂಳೆ ಮಕ್ಕಳು ನಮಗೆ ಮೋಸಮಾಡಿದ್ದಾರೆ!’ ಎಂದು ಅರಚಿದ. ‘ನಮ್ಮದೇ ಕೋಮಿನವಳನ್ನು ನಮಗೇ ಮಾರಾಟಮಾಡಿದ್ದಾರೆ. ಬಾ, ಹೋಗಿ ಅವಳನ್ನು ಅಲ್ಲೇ ವಾಪಸ್ಸು ಎಸೆದುಬರೋಣ’.
ಮಾನವೀಯತೆ
ಅತ್ಯಂತ ದುಸ್ತರವಾಗಿ ಗಂಡ ಮತ್ತು ಹೆಂಡತಿ ಒಂದಷ್ಟು ವಸ್ತುಗಳನ್ನು ಉಳಿಸಿಕೊಂಡಿದ್ದರು. ಆದರೆ ಅವರ ಚಿಕ್ಕ ಮಗಳ ಸುಳಿವೇ ಇರಲಿಲ್ಲ. ಇನ್ನೂ ಹಸುಗೂಸಾಗಿದ್ದ ಅವರ ಮತ್ತೊಬ್ಬ ಮಗಳು ಅವರಮ್ಮನ ಎದೆಗೇ ಆತುಕೊಂಡಿದ್ದರಿಂದ ಅವಳು ಬದುಕುಳಿದುಕೊಂಡಿದ್ದಳು. ದಂಗೆಕೋರರು ಅವರ ಎಮ್ಮೆಯನ್ನು ಹೊಡೆದುಕೊಂಡುಹೋದರು, ಆದರೆ ಅಲ್ಲೇ ಇದ್ದ ಹಸು ಅವರ ಕಣ್ಣು ತಪ್ಪಿಸಿಕೊಂಡದ್ದರಿಂದ ಅದನ್ನು ಬಿಟ್ಟುಹೋದರು. ಆದರೆ ಗಲಭೆಯಲ್ಲಿ ಅದರ ಕರು ಎಲ್ಲೋ ತಪ್ಪಿಸಿಕೊಂಡುಹೋಗಿತ್ತು.
ಗಂಡ, ಹೆಂಡತಿ, ಅವರ ಹಸುಗೂಸು ಮತ್ತು ಹಸು ಯಾರ ಕಣ್ಣಿಗೂ ಬೀಳದಂತೆ ಅವಿತುಕೊಂಡರು. ಕತ್ತಲಾಗಿತ್ತು. ಮಗು ಅಳಲು ಪ್ರಾರಂಭಿಸಿತು. ಆ ಮಗುವಿನ ಅಳು ತಮಟೆ ಹೊಡೆದಂತೆ ಶತ್ರುವಿನ ಗಮನ ಸೆಳೆಯುವ ಸಾಧ್ಯತೆಯಿತ್ತು. ಮಗುವಿನ ತಾಯಿ ತನ್ನ ಕೈಯಿಂದ ಮಗುವಿನ ಬಾಯಿಮುಚ್ಚಿ ಸುಮ್ಮನಾಗಿಸಲು ಯತ್ನಿಸಿದಳು. ಇನ್ನೂ ಎಚ್ಚರ ವಹಿಸಲು ಮಗುವಿನ ತಂದೆ ಮಗುವಿನ ಮೇಲೆ ದಪ್ಪನೆ ಹೊದಿಕೆಯೊಂದನ್ನು ಹೊದಿಸಿದ.
ಸ್ವಲ್ಪ ಸಮಯದ ನಂತರ ದೂರದಲ್ಲೆಲ್ಲೋ ಕರುವೊಂದು ಕೂಗುವುದು ಕೇಳಿಸಿತು. ಹಸು ತನ್ನ ಕಿವಿಗಳನ್ನು ನಿಮಿರಿಸಿ ಜೋರಾಗಿ ಅರಚುತ್ತಾ ಚಡಪಡಿಸತೊಡಗಿತು. ಗಂಡ ಹೆಂಡತಿ ಇಬ್ಬರೂ ಹಸುವನ್ನು ಸುಮ್ಮನಾಗಿಸಲು ಪ್ರಯತ್ನಿಸಿದರು. ಆದರೆ ಹಸು ಸುಮ್ಮನಾಗಲಿಲ್ಲ.
ಶಬ್ದ ಕೇಳಿದ ಶತ್ರುಗಳು ಅಲ್ಲಿಗೆ ಬಂದರು. ಅವರ ಕೈಯಲ್ಲಿ ಉರಿಯುವ ಕೊಳ್ಳಿಗಳಿದ್ದವು.
ಹೆಂಡತಿಗೆ ಗಂಡನ ಮೇಲೆ ವಿಪರೀತ ಸಿಟ್ಟುಬಂದಿತ್ತು. ‘ಈ ದರಿದ್ರ ಪ್ರಾಣಿಯನ್ನು ನಿನ್ನೊಂದಿಗೆ ಏಕೆ ಕರೆತಂದೆ?’ ಗಂಡನ ಮೇಲೆ ಸಿಡುಕಿದಳು.
ವಿನಯಶೀಲತೆ
ಟ್ರೈನನ್ನು ಕತ್ತಲಲ್ಲಿ ನಿಲ್ಲಿಸಲಾಯಿತು.
ಒಂದು ಕೋಮಿಗೆ ಸೇರಿದ ಪ್ರಯಾಣಿಕರನ್ನು ಪ್ರತ್ಯೇಕಿಸಿದರು. ಅವರನ್ನು ಟ್ರೈನಿನಿಂದ ಹೊರಕ್ಕೆಳೆದು ಒಬ್ಬೊಬ್ಬರನ್ನಾಗಿ ಕೊಂದರು. ಕೆಲಸ ಮುಗಿದ ನಂತರ ಅವರ ಸಹ-ಧರ್ಮೀಯರಾದ ಇತರ ಪ್ರಯಾಣಿಕರು ಹಲ್ವಾ, ಹಾಲು ಮತ್ತು ಹಣ್ಣು ವಿತರಿಸಿಕೊಂಡು ಸಂತೋಷವನ್ನು ಹಂಚಿಕೊಂಡರು.
ಟ್ರೈನು ಮತ್ತೆ ಪ್ರಯಾಣ ಆರಂಭಿಸುವ ಮುನ್ನ ಕೊಲೆಗಡುಕರ ನಾಯಕ ಎದ್ದುನಿಂತು ಪ್ರಯಾಣಿಕರನ್ನುದ್ದೇಶಿಸಿ, ‘ಸೋದರ, ಸೋದರಿಯರೇ ದಯವಿಟ್ಟು ನಮ್ಮನ್ನು ಕ್ಷಮಿಸಿ. ಈ ಟ್ರೈನು ತಡವಾಗಿ ಬರುವುದೆಂದು ನಮಗೆ ಸುದ್ದಿ ತಲುಪಿತು. ಆದುದರಿಂದ ನಾವಂದುಕೊಂಡಂತೆ ನಿಮಗೆ ಇನ್ನೂ ಹೆಚ್ಚಿನ ಮನರಂಜನೆ ನೀಡಲು ಸಾಧ್ಯವಾಗಿಲ್ಲ’.
ಮೇಲುಸ್ತುವಾರಿ
ಒಬ್ಬ ವ್ಯಕ್ತಿ ಇತರ ಕೋಮಿನ ತನ್ನ ಗೆಳೆಯನನ್ನು ತನ್ನದೇ ಕೋಮಿನವನೆಂದು ಸುಳ್ಳು ಹೇಳಿ ಸುರಕ್ಷಿತ ಸ್ಥಳಕ್ಕೆ ಹೋಗಲು ಇಬ್ಬರೂ ಮಿಲಿಟರಿ ಟ್ರಕ್‌ನಲ್ಲಿ ಹತ್ತಿಕೊಂಡರು.
ತನ್ನ ಕೋಮಿನ ಬಗ್ಗೆ ಸುಳ್ಳು ಹೇಳಿದ್ದ ಆ ಗೆಳೆಯ ದಾರಿಯಲ್ಲಿ ಆ ಸ್ಥಳದಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದಿವೆಯೇ ಎಂದು ಜೊತೆಗಿದ್ದ ಮಿಲಿಟರಿಯವರನ್ನು ಕೇಳಿದ.
‘ಅಂಥ ವಿಶೇಷವಾದದ್ದು ಏನೂ ನಡೆದಿಲ್ಲ. ಯಾವುದೋ ಮೊಹಲ್ಲಾವೊಂದರಲ್ಲಿ ನಾಯಿಯೊಂದನ್ನು ಕೊಲ್ಲಲಾಯಿತು’.
‘ಮತ್ತೇನಾದರೂ ಸುದ್ದಿಯಿದೆಯೆ?’ ಎಂದು ಕೇಳಿದ ಆತ ಹೆದರಿಕೊಂಡು.
‘ಇಲ್ಲ, ಅಂಥ ವಿಶೇಷವಾದದ್ದೇನೂ ಇಲ್ಲ. ಹತ್ತಿರದ ಕಾಲುವೆಯಲ್ಲಿ ಮೂರು ಹೆಣ್ಣು ನಾಯಿಗಳ ದೇಹತೇಲುತ್ತಿದ್ದುದನ್ನು ಕಂಡೆವು’.
ತನ್ನ ಗೆಳೆಯನ ಹೆದರಿಕೆ, ಆತಂಕವನ್ನು ಗಮನಿಸಿ ಆತನನ್ನು ಕರೆದುತಂದ ಗೆಳೆಯ ಮಿಲಿಟರಿಯವರನ್ನು ಕೇಳಿದ, ‘ಇವುಗಳ ಬಗ್ಗೆ ಮಿಲಿಟರಿಯವರು ಏನೂ ಮಾಡುತ್ತಿಲ್ಲವೆ?’
‘ಏಕೆ ಮಾಡುತ್ತಿಲ್ಲ?’ ಮಿಲಿಟರಿಯವ ಉತ್ತರಿಸಿದ. ‘ಎಲ್ಲವನ್ನೂ ಮಿಲಿಟರಿಯ ಮೇಲುಸ್ತುವಾರಿಯಲ್ಲೇ ನಡೆಸಲಾಗುತ್ತಿದೆ’.
ಬೂಟು
ದಾಂಧಲೆ ನಡೆಸುತ್ತಿದ್ದ ಗುಂಪು ಚೌಕದ ಮಧ್ಯದಲ್ಲಿನ ಸರ್ ಗಂಗಾರಾಮ್‌ರವರ ಪುತ್ಥಳಿಯ ಮೇಲೆ ದಾಳಿಮಾಡಿತು. ಕೆಲವರು ಆ ವಿಗ್ರಹವನ್ನು ಕೋಲು, ಸರಳುಗಳಿಂದ ಹೊಡೆದರು ಮತ್ತು ಕೆಲವರು ಕಲ್ಲುಗಳನ್ನು ಎಸೆದರು. ಒಬ್ಬಾತ ವಿಗ್ರಹದ ಮುಖಕ್ಕೆ ಟಾರುಬಳಿದು ಕಪ್ಪಾಗಿಸಿದ. ಮತ್ತೊಬ್ಬಾತ ಬೂಟುಗಳ ಹಾರವೊಂದನ್ನು ವಿಗ್ರಹಕ್ಕೆ ಹಾಕಿದ. ಅಷ್ಟರಲ್ಲಿ ಪೊಲೀಸರು ಅಲ್ಲಿಗೆ ಬಂದು ಗುಂಡುಹಾರಿಸತೊಡಗಿದರು. ಬೂಟಿನ ಹಾರವನ್ನು ಕೈಯಲ್ಲಿ ಹಿಡಿದಿದ್ದ ವ್ಯಕ್ತಿಗೆ ಗುಂಡುತಗುಲಿ ಆತ ಕೆಳಕ್ಕೆ ಬಿದ್ದ. ಕೂಡಲೇ ಆತನನ್ನು ಚಿಕಿತ್ಸೆಗೆ ಸರ್ ಗಂಗಾರಾಮ್ ಆಸ್ಪತ್ರೆಗೆ ಸೇರಿಸಲಾಯಿತು.
ನಿರೀಕ್ಷೆ
ಮೊದಲ ಘಟನೆ ರಸ್ತೆಯ ಕೊನೆಯಲ್ಲಿದ್ದ ಹೋಟೆಲಿನ ಮುಂದೆ ನಡೆಯಿತು. ಕೂಡಲೇ ಪೊಲೀಸೊಬ್ಬನನ್ನು ಅಲ್ಲಿಗೆ ಡ್ಯೂಟಿಗೆ ಹಾಕಲಾಯಿತು.
ಎರಡನೇ ಘಟನೆ ಆ ದಿನ ಸಂಜೆ ಅಂಗಡಿಯೊಂದರ ಬಳಿ ನಡೆಯಿತು. ಹೋಟೆಲಿನ ಬಳಿ ಇದ್ದ ಪೊಲೀಸಿನವನನ್ನು ತೆಗೆದು ಅಂಗಡಿಯ ಬಳಿ ಡ್ಯೂಟಿಗೆ ಹಾಕಲಾಯಿತು.
ಮೂರನೇ ಘಟನೆ ಮಧ್ಯರಾತ್ರಿ ಅಗಸನ ಅಂಗಡಿಯ ಬಳಿ ನಡೆಯಿತು. ಪೊಲೀಸ್ ಇನ್‌ಸ್ಪೆಕ್ಟರ್ ಪೊಲೀಸಿನವನಿಗೆ ಅಂಗಡಿಯ ಬಳಿಯಿಂದ ಹೊಸದಾಗಿ ಘಟನೆ ನಡೆದ ಸ್ಥಳಕ್ಕೆ ಬರುವಂತೆ ಆದೇಶಿಸಿದ.
ಬುದ್ಧಿವಂತನಾದ ಪೊಲೀಸ್ ಸ್ವಲ್ಪ ಆಲೋಚಿಸಿ ಇನ್‌ಸ್ಪೆಕ್ಟರ್‌ಗೆ, ‘ಸರ್, ಮುಂದೆ ಘಟನೆ ನಡೆಯುವ ಸ್ಥಳ ಯಾವುದೋ ಅಲ್ಲಿಗೆ ಮೊದಲೇ ನನ್ನನ್ನು ಡ್ಯೂಟಿಗೆ ಹಾಕಿಬಿಡಿ’ ಎಂದ.
ಘೋರ ತಪ್ಪು
ಹೊಟ್ಟೆಯನ್ನು ಸೇರಿದ ಚಾಕು ಸೀಳಿಕೊಂಡು ಕಿಬ್ಬೊಟ್ಟೆಯವರೆಗೂ ಬಂದಿತು. ಆ ಪ್ರಕ್ರಿಯೆಯಲ್ಲಿ ಪೈಜಾಮಾದ ಲಾಡಿ ಕತ್ತರಿಸಿಕೊಂಡು ಮೃತ ವ್ಯಕ್ತಿಯ ಜನನಾಂಗ ಹೊರಬಂದಿತು.
‘ಹೋ. ಎಂಥಾ ಘೋರ ತಪ್ಪಾಯಿತು! ನಮ್ಮವನನ್ನೇ ಕೊಂದುಬಿಟ್ಟೆನಲ್ಲಾ!’ ಕೊಲೆಗಡುಕ ಏದುಸಿರುಬಿಟ್ಟ.
ಅನುಕಂಪ
‘ದಮ್ಮಯ್ಯ ಎನ್ನುತ್ತೇನೆ, ನಿಮ್ಮ ಕಾಲಿಗೆ ಬೀಳುತ್ತೇನೆ. ದಯವಿಟ್ಟು ನನ್ನ ಮಗಳನ್ನು ನನ್ನ ಕಣ್ಣಮುಂದೆಯೇ ಕೊಲ್ಲಬೇಡಿ’.
‘ಆಯಿತು, ಆಯಿತು. ಅವನ ಮೇಲೆ ಕರುಣೇ ತೋರಿ ಅವನ ಕೋರಿಕೆಯನ್ನು ಮನ್ನಿಸೋಣ. ಆಕೆಯ ಬಟ್ಟೆ ಕಿತ್ತುಹಾಕಿ ಊರೆಲ್ಲಾ ಬೆತ್ತಲೆ ಓಡಿಸಿ’.
ಸಮಪಾಲು
ಆತ ತಾನಿದ್ದ ಊರು ಬಿಟ್ಟು ಬೇರೆ ಊರಿನಲ್ಲಿ ನೆಲೆಸೋಣವೆಂದು ನಿರ್ಧರಿಸಿದ್ದುದರಿಂದ ತನ್ನ ಮನೆಯ ವಸ್ತುಗಳನ್ನೆಲ್ಲಾ ಟ್ರಕ್ಕಿಗೆ ತುಂಬಿ ಪ್ರಯಾಣ ಬೆಳೆಸಿದ. ರಸ್ತೆಯಲ್ಲಿ ಗುಂಪೊಂದು ಟ್ರಕ್ಕಿಗೆ ಅಡ್ಡಹಾಕಿ ನಿಲ್ಲಿಸಿ ಅದರಲ್ಲಿದ್ದ ವಸ್ತುಗಳನ್ನು ದುರಾಸೆಯ ಕಂಗಳಿಂದ ನೋಡಿತು. ‘ನೋಡು, ಕಳ್ಳ ಒಬ್ಬನೇ ಎಷ್ಟೊಂದು ವಸ್ತುಗಳನ್ನು ಲೂಟಿಮಾಡಿ ತೆಗೆದುಕೊಂಡು ಹೋಗುತ್ತಿದ್ದಾನೆ’ ಅವರು ಹೇಳಿದರು.
‘ಲೂಟಿ ಮಾಡಿದುದಲ್ಲ’, ಅವುಗಳ ಯಜಮಾನ ಹೇಳಿದ. ‘ಅವೆಲ್ಲಾ ನನ್ನ ಸ್ವಂತ ವಸ್ತುಗಳು’.
‘ನಮಗೆ ಗೊತ್ತು, ನಮಗೆ ಗೊತ್ತು’, ಆ ಗುಂಪಿನ ಜನ ಮುಗುಳ್ನಗುತ್ತಾ ಹೇಳಿದರು.
ಗುಂಪಿನಲ್ಲಿದ್ದ ಒಬ್ಬ, ‘ಆ ವಸ್ತುಗಳನ್ನು ಲೂಟಿಮಾಡಿ! ಅವನೊಬ್ಬ ಸಾಹುಕಾರ. ಇತರರ ವಸ್ತುಗಳನ್ನು ಕದಿಯಲು ಅವನ ಟ್ರಕ್ ಬಳಸುತ್ತಾನೆ’ ಎಂದು ಅರಚಿದ.
ದೂರು
‘ಏನಪ್ಪಾ, ನೀನು ಹೀಗೆ ಮೋಸಮಾಡಬಹುದೆ? ಬ್ಲಾಕ್‌ಮಾರ್ಕೆಟ್ ರೇಟು ತಗೊಂಡು ನೀನು ಈ ರೀತಿ ಕಲಬೆರಕೆ ಪೆಟ್ರೋಲ್ ಕೊಟ್ಟಿದ್ದೀಯಲ್ಲಾ. ಅದರಿಂದ ಒಂದು ಅಂಗಡಿಯನ್ನೂ ಸುಡಲಾಗಲಿಲ್ಲ’.
ವಿಶ್ರಾಂತಿ ಬೇಕಾಗಿದೆ
‘ನೋಡು ಅವನಿನ್ನೂ ಸತ್ತಿಲ್ಲ! ಇನ್ನೂ ಉಸಿರಾಡುತ್ತಿದ್ದಾನೆ!’
‘ಇರಲಿ ಬಿಡು ಗೆಳೆಯಾ, ನನಗೂ ವಿಶ್ರಾಂತಿ ಬೇಕಾಗಿದೆ’.
ಗುರುವಾರ, ಮೇ 10, 2012
ಮುಲ್ಲಾ ನಸ್ರುದ್ದೀನ್ ಕತೆಗಳು- 4
ಮೇ, 2012ರ 'ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಲ್ಲಾ ನಸ್ರುದ್ದೀನ್ ಕತೆಗಳ ನಾಲ್ಕನೇ ಕಂತು. ಚಿತ್ರಗಳು ರಾಠೋಡ್.
ವಿದ್ವತ್ತಿನ ಸಂಕೇತ
ಆ ಊರಿನ ಒಬ್ಬ ಅನಕ್ಷರಸ್ಥ ವ್ಯಕ್ತಿಯೊಬ್ಬನಿಗೆ ಒಮ್ಮೆ ಸರ್ಕಾರದಿಂದ ಪತ್ರವೊಂದು ಬಂದಿತ್ತು. ಆತನಿಗೆ ಓದು ಬರಹ ಗೊತ್ತಿಲ್ಲದಿದ್ದುದರಿಂದ ಆ ಊರಿನ ವಿದ್ವಾಂಸನಾದ ಮುಲ್ಲಾ ನಸ್ರುದ್ದೀನನ ಬಳಿ ಆತ ಬಂದು ಆ ಪತ್ರವನ್ನು ಓದಿ ಹೇಳುವಂತೆ ಕೇಳಿಕೊಂಡ.
ಆ ಪತ್ರವನ್ನು ತೆಗೆದುಕೊಂಡು ನೋಡಿದ ಮುಲ್ಲಾನಿಗೆ ಆ ಪತ್ರದ ಭಾಷೆ ತಿಳಿದಿರಲಿಲ್ಲ. ಅದನ್ನು ಹಿಂದೆ ಮುಂದೆ ತಿರುಗಿಸಿನೋಡಿ, ‘ಕ್ಷಮಿಸು, ನನಗೆ ಈ ಪತ್ರವನ್ನು ಓದಲು ಬರುವುದಿಲ್ಲ’ ಎಂದು ಹೇಳಿದ.
ಆ ಪತ್ರದಲ್ಲಿ ಏನೋ ಮಹತ್ತರವಾದದ್ದಿರಬಹುದೆಂದು ಕುತೂಹಲದಿಂದ ಬಂದಿದ್ದ ಆ ವ್ಯಕ್ತಿಗೆ ನಿರಾಸೆಯಾಯಿತು ಜೊತೆಗೆ ಸಿಟ್ಟೂ ಸಹ ಬಂದಿತು. ‘ನೀನೆಂಥಾ ವಿದ್ವಾಂಸ! ನಾಚಿಕೆಯಾಗಬೇಕು ನಿನಗೆ ವಿದ್ವತ್ತಿನ ಸಂಕೇತವಾದ ಆ ರುಮಾಲು ಧರಿಸಿರಲು’ ಎಂದ.
ಆ ಮಾತನ್ನು ಕೇಳಿಸಿಕೊಂಡ ನಸ್ರುದ್ದೀನ್ ತನ್ನ ತಲೆಯ ಮೇಲಿದ್ದ ರುಮಾಲನ್ನು ತೆಗೆದು ಆ ವ್ಯಕ್ತಿಯ ತಲೆಯ ಮೇಲಿರಿಸಿ, ‘ತಗೋ, ಈ ರುಮಾಲು ನಿನಗೆ ಜ್ಞಾನವನ್ನು ಕೊಡುತ್ತದೆ ಎನ್ನುವುದಾದರೆ ನೀನೇ ಆ ಪತ್ರವನ್ನು ಓದಿಕೋ’ ಎಂದ.
ಕಟ್ಟಿದ ಕಲ್ಲು, ಬಿಚ್ಚಿದ ನಾಯಿ
ಮುಲ್ಲಾ ನಸ್ರುದ್ದೀನ್ ಯಾವುದೋ ಕೆಲಸದ ನಿಮಿತ್ತ ಪರ ಊರಿಗೆ ಹೋಗಬೇಕಾಯಿತು. ಆತ ಆ ಊರು ತಲುಪುವಷ್ಟರಲ್ಲಿ ಕತ್ತಲಾಗಿತ್ತು ಹಾಗೂ ಹಿಮಭರಿತ ವಿಪರೀತ ಚಳಿಯಿತ್ತು. ಆತ ಛತ್ರವೊಂದನ್ನು ಅರಸುತ್ತಿರುವಾಗ ಯಾವುದೋ ನಾಯಿ ಮುಲ್ಲಾನನ್ನು ಕಂಡು ಬೊಗಳ ತೊಡಗಿತು. ಆತ ಅದನ್ನು ಉದಾಸೀನ ಮಾಡಿ ಮುಂದೆ ಹೊರಟಂತೆ ಅದು ಬೊಗಳುತ್ತಾ ಆತನನ್ನು ಹಿಂಬಾಲಿಸುತ್ತಾ ಬಂದಿತು. ‘ಈ ನಾಯಿ ನನ್ನನ್ನು ಬಿಡುವುದಿಲ್ಲ’ ಎಂದುಕೊಂಡ ಅದನ್ನು ಓಡಿಸಲು ಮುಲ್ಲಾ ಕೆಳಗೆ ಬಿದ್ದಿದ್ದ ಕಲ್ಲೊಂದನ್ನು ಎತ್ತಿಕೊಳ್ಳಲು ಹೋದ. ಆದರೆ ಆ ಕಲ್ಲು ಥಂಡಿಯ ಹಿಮದಿಂದಾಗಿ ಮಣ್ಣಿನಲ್ಲಿ ಹೂತುಹೋಗಿ ಕೀಳಲು ಬರುತ್ತಿರಲಿಲ್ಲ. ‘ಎಂಥಾ ವಿಚಿತ್ರ ಊರಿದು! ಕಲ್ಲುಗಳನ್ನು ಕಟ್ಟಿಹಾಕಿರುತ್ತಾರೆ, ನಾಯಿಗಳನ್ನು ಬಿಚ್ಚಿ ರಸ್ತೆಗೆ ಬಿಟ್ಟಿರುತ್ತಾರೆ!’ ಎಂದು ಗೊಣಗಿದ.
ದೇವರ ಗುಲಾಮ
ಮುಲ್ಲಾ ನಸ್ರುದ್ದೀನ್ ದೇವರು ಧರ್ಮದ ಬಗ್ಗೆ ಜನರಿಗೆ ಪ್ರವಚನ ನೀಡುತ್ತ ಸಿಗುವ ಅಲ್ಪಸ್ವಲ್ಪ ಹಣದಿಂದ ಬಹಜೀವನ ಸಾಗಿಸುತ್ತಿದ್ದ. ಅವನು ಸಂಪಾದಿಸುತ್ತಿದ್ದುದು ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ಆದರೂ ತನ್ನ ಕೆಲಸದಲ್ಲಿ ಮಗ್ನನಾಗಿ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದ. ಒಂದು ದಿನ ಹೋಟೆಲೊಂದರಲ್ಲಿ ಅತಿ ಕಡಿಮೆ ಬೆಲೆಯ ರೊಟ್ಟಿ ಹಾಗೂ ಬೇಳೆ ಸಾರು ತಿನ್ನುತ್ತ ಹೋಟೆಲಿಗೆ ಬಂದು ಹೋಗುವ ಇತರರನ್ನು ಗಮನಿಸುತ್ತಿದ್ದ. ಆತ ನೋಡುತ್ತಿದ್ದಂತೆ ವೆಲ್ವೆಟ್ ರುಮಾಲು, ಬೆಳ್ಳಿಯ ಜರಿಯ ರೇಷ್ಮೆ ವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಹೋಟೆಲಿಗೆ ಪ್ರವೇಶಿಸಿ ಅತಿ ಹೆಚ್ಚು ಬೆಲೆಯ ಅತ್ಯುತ್ತಮ ಆಹಾರವನ್ನು ತರಿಸಿಕೊಂಡು ತಿನ್ನತೊಡಗಿದ. ಆತನನ್ನು ಕಂಡು ನಸ್ರುದ್ದೀನ್ ಹೋಟೆಲಿನ ಮಾಲೀಕನನ್ನು ಕರೆದು ಆ ವ್ಯಕ್ತಿ ಯಾರೆಂದು ಕೇಳಿದ. ‘ಹೋ, ಆ ವ್ಯಕ್ತಿಯೇ? ಆತ ಫೆಮಿ ಪಾಶಾನ ಗುಲಾಮ’ ಎಂದ ಹೋಟೆಲಿನ ಮಾಲೀಕ.
ನಿಟ್ಟುಸಿರು ಬಿಟ್ಟ ನಸ್ರುದ್ದೀನ್ ಆಕಾಶದೆಡೆಗೆ ನೋಡುತ್ತಾ, ‘ಹೋ ದೇವರೇ! ಅಲ್ಲಿ ನೋಡು ಫೆಮಿ ಪಾಶಾನ ಗುಲಾಮ ಹೇಗಿದ್ದಾನೆ. ಇಲ್ಲಿ ನೋಡು ನಾನು ನಿನ್ನ ಗುಲಾಮ ಹೇಗಿದ್ದೇನೆ! ಇದು ನ್ಯಾಯವೇ?’ ಎಂದು ಕೇಳಿದ.
ವ್ಯಾಪಾರ
ಒಂದು ದಿನ ಮುಲ್ಲಾ ನಸ್ರುದ್ದೀನ್ ಹೊಸ ಬಟ್ಟೆ ಕೊಳ್ಳೋಣವೆಂದು ಮಾರುಕಟ್ಟೆಯಲ್ಲಿನ ಅಂಗಡಿಯೊಂದಕ್ಕೆ ಹೋದ. ಅಲ್ಲಿ ಒಂದು ಜೊತೆ ಪೈಜಾಮ ತೊಟ್ಟು ನೋಡಿದ. ಅದು ಆತನಿಗೆ ಇಷ್ಟವಾಗಲಿಲ್ಲ. ಅದನ್ನು ಅಂಗಡಿಯಾತನಿಗೆ ಹಿಂದಿರುಗಿಸಿದ. ಅದೇ ಬೆಲೆಯ ಮತ್ತೊಂದು ಶೇರ್‌ವಾನಿ ಧರಿಸಿ ನೋಡಿದ. ಚೆನ್ನಾಗಿದೆ ಎನ್ನಿಸಿತು. ಇದೇ ಇರಲಿ ಎಂದು ಅಂಗಡಿಯಾತನಿಗೆ ಹೇಳಿ ಹೊರನಡೆದು ಮನೆಗೆ ಹೋಗಲು ತನ್ನ ಕತ್ತಯನ್ನೇರಿದ.
ಅಂಗಡಿಯ ಮಾಲೀಕ ನಸ್ರುದ್ದೀನ್‌ನ ಹಿಂದೆಯೇ ಓಡಿ ಬಂದು ಅತನನ್ನು ನಿಲ್ಲಿಸಿ, ‘ನೀವು ಶೇರ್‌ವಾನಿಯ ಹಣವನ್ನೇ ಕೊಡಲಿಲ್ಲ’ ಎಂದ.
‘ಆದರೆ ಅದರ ಬದಲಿಗೆ ಅದೇ ಬೆಲೆಯ ಪೈಜಾಮ ಕೊಟ್ಟಿದ್ದೇನಲ್ಲ’ ಎಂದ ನಸ್ರುದ್ದೀನ್.
‘ಹೌದು, ಆದರೆ ನೀವು ಅದರ ಹಣವನ್ನೂ ಕೊಟ್ಟಿಲ್ಲ’ ಎಂದ ಅಂಗಡಿಯ ಮಾಲೀಕ.
‘ಅದಕ್ಕೆ ಹಣ ಏಕೆ ಕೊಡಲಿ? ಅದನ್ನು ನಾನು ಕೊಳ್ಳಲೇ ಇಲ್ಲವಲ್ಲ. ಕೊಳ್ಳದ ವಸ್ತುವಿಗೆ ಹಣ ಕೊಡಲು ನಾನೇನು ದಡ್ಡನೆ?’ ಎಂದ ನಸ್ರುದ್ದೀನ್.
ಭೂಮಿಯ ಮಧ್ಯಬಿಂದು
ಮುಲ್ಲಾ ನಸ್ರುದ್ದೀನ್ ಎಂಥ ಪ್ರಶ್ನೆಗೂ ಉತ್ತರ ಕೊಡುತ್ತಾನೆ. ಅವನಿಗೆ ಉತ್ತರ ಕೊಡಲಿಕ್ಕಾಗದ ಕಷ್ಟಕರ ಪ್ರಶ್ನೆ ಕೇಳಿ ಅವನನ್ನು ಬೇಸ್ತು ಬೀಳಿಸಬೇಕೆಂದು ಒಂದು ದಿನ ಒಬ್ಬಾತ ಆತನ ಬಳಿಗೆ ಬಂದು, ‘ನಮ್ಮ ಭೂಮಿಯ ಮಧ್ಯಬಿಂದು ಎಲ್ಲಿದೆ ಹೇಳಬಲ್ಲೆಯಾ?’ ಎಂದು ಕೇಳಿದ.
ಆ ಪ್ರಶ್ನೆ ಕೇಳಿದಾತನ ಬಗ್ಗೆ ತಿಳಿದಿದ್ದ ನಸ್ರುದ್ದೀನ್ ಅವನಿಗೆ ತಕ್ಕ ಉತ್ತರವೇ ಕೊಡಬೇಕೆಂದು ಆಲೋಚಿಸಿ, ‘ಭೂಮಿಯ ಮಧ್ಯಬಿಂದು ನನ್ನ ಕತ್ತೆಯ ಹಿಂಗಾಲಿನ ಗೊರಸಿನ ನಡುವೆ ಇದೆ’ ಎಂದ.
‘ಇರಬಹುದು. ಆದರೆ ಆ ಬಿಂದು ಅಲ್ಲಿಯೇ ಇದೆ ಎನ್ನಲು ಪುರಾವೆ ಏನಿದೆ?’ ಎಂದ ಪ್ರಶ್ನೆ ಕೇಳಿದಾತ.
‘ನನಗೆ ಸರಿಯಾಗಿ ತಿಳಿದಿದೆ, ಅದು ಅಲ್ಲಿಯೇ ಇದೆ ಎಂದು. ನಿನಗೆ ನನ್ನ ಮಾತಿನ ಬಗ್ಗೆ ಸಂಶಯವಿದ್ದರೆ ನೀನೇ ಪರೀಕ್ಷಿಸು. ನನ್ನ ಕತ್ತೆ ಅಲ್ಲಿಯೇ ನಿಂತಿದೆ ನೋಡು’ ಎಂದು ನಸ್ರುದ್ದೀನ್.
ಕಳ್ಳನದೇನೂ ತಪ್ಪಿಲ್ಲವೆ?
ಒಂದು ದಿನ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಪತ್ನಿ ಪಕ್ಕದ ಊರಿಗೆ ಹೋಗಿದ್ದವರು ತಮ್ಮ ಮನೆಗೆ ಹಿಂದಿರುಗಿದಾಗ ತಮ್ಮ ಮನೆಯಲ್ಲಿ ಕಳ್ಳತನವಾಗಿದ್ದದ್ದು ಕಂಡು ಗಾಬರಿಯಾದರು. ಮನೆಯಲ್ಲಿದ್ದುದನ್ನೆಲ್ಲವನ್ನೂ ಕೊಂಡೊಯ್ಯಲಾಗಿತ್ತು. ಆತನ ಪತ್ನಿ ಸಿಟ್ಟಿನಿಂದ, ‘ಎಲ್ಲಾ ನಿನ್ನದೇ ತಪ್ಪು, ಮನೆಗೆ ಸರಿಯಾಗಿ ಬೀಗ ಹಾಕಿದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ’ ಎಂದು ಮುಲ್ಲಾನನ್ನು ನಿಂದಿಸಿದಳು. ಅಷ್ಟೊತ್ತಿಗಾಗಲೇ ನೆರೆಹೊರೆಯವರು ಮನೆಯ ಬಳಿ ಸೇರಿದ್ದರು. ಅವರಲ್ಲೊಬ್ಬಾತ, ‘ಬಹುಶಃ ನೀನು ಕಿಟಕಿಗಳನ್ನು ಸರಿಯಾಗಿ ಬಂದೋಬಸ್ತ್ ಮಾಡಿರಲಿಲ್ಲವೆನ್ನಿಸುತ್ತದೆ’ ಎಂದ. ಮತ್ತೊಬ್ಬಾತ, ‘ನಿನ್ನ ಮನೆಯ ಬಾಗಿಲನ್ನು ನೀನು ಗಟ್ಟಿಮುಟ್ಟಾಗಿ ಮಾಡಿಸಿರಲಿಲ್ಲವೇನೋ’ ಎಂದ.
ಎಲ್ಲರ ಮಾತನ್ನೂ ಕೇಳಿಸಿಕೊಂಡ ನಸ್ರುದ್ದೀನ್, ‘ಇದೇನಿದು? ನನ್ನ ಮನೆಯ ಕಳ್ಳತನಕ್ಕೆ ಎಲ್ಲರೂ ನನ್ನದೇ ತಪ್ಪು ಎನ್ನುತ್ತಿದ್ದೀರಾ? ಹಾಗಾದರೆ ಈ ಕಳ್ಳತನ ಮಾಡಿದ ಕಳ್ಳನದೇನೂ ತಪ್ಪಿಲ್ಲವೆ?’
ಕದಿಯಲಿ ಬಿಡು
ಮುಲ್ಲಾ ನಸ್ರುದ್ದೀನ್ ಅತ್ಯಂತ ಬಡತನದಲ್ಲಿದ್ದು ಆತನ ಬದುಕೇ ದುಸ್ತರವಾಗಿತ್ತು. ಒಂದು ದಿನ ರಾತ್ರಿ ಆತನ ಪತ್ನಿ ನಿದ್ರೆಯಲ್ಲಿದ್ದ ಮುಲ್ಲಾನನ್ನು ಎಬ್ಬಿಸಿ, ‘ಅಡುಗೆ ಮನೆಯಲ್ಲಿ ಯಾರೋ ಕಳ್ಳ ಬಂದಂತಿದೆ’ ಎಂದು ಪಿಸುಗುಟ್ಟಿದಳು.
‘ಶ್ಶ್.... ಶಬ್ದಮಾಡಬೇಡ ದಡ್ಡಿ! ಕಳ್ಳ ಬರಲಿಬಿಡು. ಬಹುಶಃ ಅವನಿಗೇನಾದರೂ ಸಿಗಬಹುದು. ಆಗ ಅವನನ್ನು ಹಿಡಿದು ಅದನ್ನು ಕಿತ್ತುಕೊಳ್ಳೋಣ!’ ಎಂದ ಮುಲ್ಲಾ ನಸ್ರುದ್ದೀನ್.
ಶುಕ್ರವಾರ, ಮೇ 04, 2012
ಮ್ಯೂಸ್ ಇಂಡಿಯಾ ಎಂಬ ಸಾಹಿತ್ಯ ಇಂಗ್ಲಿಷ್ ಇ-ಪತ್ರಿಕೆಯಲ್ಲಿ ನನ್ನ ಸಂದರ್ಶನ
ಹಲವಾರು ಲೇಖಕರು ಸೇರಿ ಪ್ರಕಟಿಸುತ್ತಿರುವ ಸಾಹಿತ್ಯ ಇಂಗ್ಲಿಷ್ ಇ-ಪತ್ರಿಕೆ ಮ್ಯೂಸ್ ಇಂಡಿಯಾ (www.museindia.com)
ಈ ಬಾರಿಯ ಮೇ-ಜೂನ್ 2012ರ ಸಂಚಿಕೆ ಸಮಕಾಲೀನ ಕನ್ನಡ ಸಾಹಿತ್ಯ http://www.museindia.com/focus.asp?id=43
ಹಾಗೂ ಉರ್ದು ಲೇಖಕ ಮಂಟೋನ ಜನ್ಮ ಶತಮಾನೋತ್ಸವ ಸ್ಮರಣೆ ಹಾಗೂ ಇತರ ಲೇಖನ, ಚರ್ಚೆಗಳನ್ನೊಳಗೊಂಡಿದೆ.http://www.museindia.com/feature.asp?id=43
ಮಂಟೋನ ನನ್ನ ಅನುವಾದದ ಕುರಿತು ನನ್ನ ಸಂದರ್ಶನ ಈ ಸಂಚಿಕೆಯಲ್ಲಿದೆ. ಸಮಯ ಸಿಕ್ಕಾಗ ಓದಿ:
Taking Manto’s writings to Kannada readers
Manto Kategalu is an anthology of 11 of the most well-known short stories of Saadat Hasan Manto by J Balakrishna. Published in 2009 by Lankesh Prakashana, Bangalore, (Price Rs 80, Pages: 107), it also contains Manto’s letters to Uncle Sam (The US). Satirical and hard-hitting, they are relevant even today, given the uneasy US-Pak relationship. Though written against the post-Partition geo-political ethos, they have a contemporary urgency and immediacy.
J Balakrishna’s translation of Manto’s immortal short stories into Kannada highlight the fact that no matter which side of the divide people found themselves in after the Partition, they were hapless victims of unmitigated human tragedy. Today, reading their translations in Kannada not only make them accessible to people in the Southern state, who were far away from the horrors of Partition, and relatively untouched by it, but it also humanises the so-called enemy. It is less easy to demonise a people when you have read about their suffering.
Though born of one of history’s most gruesome of epochs, Manto’s short stories could lead to cross-cultural conversation, and perhaps, lessen mutual mistrust and suspicion between the two divided nations – India and Pakistan.
ಮುಂದೆ ಓದಲು ಈ ಲಿಂಕ್ ಮೇಲ್ ಕ್ಲಿಕ್ ಮಾಡಿ:
ಶುಕ್ರವಾರ, ಏಪ್ರಿಲ್ 27, 2012
ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕನ್ನಡದ ಬರಹಗಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭ
25-04-2012ರಂದು ನಡೆದ ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕನ್ನಡದ ಬರಹಗಾರರಿಗೆ 2011-12ರ ಪ್ರಶಸ್ತಿ ಪ್ರದಾನ ಸಮಾರಂಭ ಕೆಲವು ಚಿತ್ರಗಳು
ಪಿ.ಇ.ಎಸ್. ಕಾಲೇಜಿನ ಸಭಾಂಗಣ
ಪುರಸ್ಕೃತ ಬರಹಗಾರರು: ಡಾ.ಜೆ.ಬಾಲಕೃಷ್ಣ, ಡಾ.ಪಿ.ನಾರಾಯಣಸ್ವಾಮಿ ಹಾಗೂ ಶ್ರೀ.ಶ್ರೀನಿಧಿ
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನಿರ್ದೇಶಕರಾದ ಡಾ.ಎಚ್.ಹೊನ್ನೇಗೌಡ, ಪಿ.ಇ.ಎಸ್. ಸಂಸ್ಥೆಯ ಪ್ರೊ.ಜಯಗೋಪಾಲ್ ಉಚ್ಚಿಲ್, ವಿಜ್ಞಾನಿ ಪ್ರೊ.ಯು.ಆರ್.ರಾವ್ ಮತ್ತು ಕುವೆಂಪು ವಿ.ವಿ.ಯ ವಿಶ್ರಾಂತ ಕುಲಪತಿಗಳಾದ ಪ್ರೊ.ಎಂ.ಆರ್. ಗಜೇಂದ್ರಗಡ
ಪ್ರಶಸ್ತಿ ಪುರಸ್ಕೃತರ ಸ್ಕ್ರೋಲ್ ಆಫ್ ಹಾನರ್
ಪ್ರೊ.ಯು.ಆರ್.ರವರಿಂದ ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪುರಸ್ಕೃತರು ಹಾಗೂ ಗಣ್ಯರು
ವಿಶೇಷ ಆಹ್ವಾನಿತರು: ಕೃ.ವಿ.ವಿ., ಬೆಂಗಳೂರಿನ ವಿಶ್ರಾಂತ ಕುಲಪತಿಗಳಾದ ಡಾ.ಆರ್.ದ್ವಾರಕೀನಾಥ್, ವಿಜ್ಞಾನ ಸಾಹಿತಿ ನಾಗೇಶ್ ಹೆಗಡೆ ಹಾಗೂ ಇತರರು.
ಶನಿವಾರ, ಏಪ್ರಿಲ್ 21, 2012
ಗುರುವಾರ, ಏಪ್ರಿಲ್ 19, 2012
ಗುರುವಾರ, ಏಪ್ರಿಲ್ 12, 2012
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ

2011-12ರ ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ಕನ್ನಡದಲ್ಲಿ ಪುಸ್ತಕವನ್ನು ಬರೆದು ಪ್ರಕಟಿಸಿರುವ ಲೇಖಕರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ (http://www.kstacademy.org) ನೀಡಲಾಗುವ ಪುರಸ್ಕಾರಕ್ಕೆ ನನ್ನ `ಮಳೆಬಿಲ್ಲ ನೆರಳು' ಕೃತಿಗೆ ವಿಜ್ಞಾನ ವಿಷಯದ ವಿಭಾಗದಲ್ಲಿ `ಶ್ರೇಷ್ಠ ಲೇಖಕರು' ಪ್ರಶಸ್ತಿಗೆ ಆಯ್ಕೆಯಾಗಿದೆಯೆಂದು ತಿಳಿಸಲು ಹರ್ಷಿಸುತ್ತೇನೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಹೀಗೇ ಇರಲಿ.
ಆ ಕೃತಿಯಲ್ಲಿನ ಕೆಲವು ಲೇಖನಗಳು ನನ್ನ ಈ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಸಮಯ ಸಿಕ್ಕಾಗ ಓದಿ ಅಭಿಪ್ರಾಯ ತಿಳಿಸಿ.
ಸೀಲಾಕ್ಯಾಂತ್ ಕಾಲವೇ ಮರೆತಿದ್ದ ಮೀನು: http://antaragange.blogspot.in/2011/05/blog-post_21.html
ಡಾಲ್ಫಿನ್: ಮಾನವನ ಬೌದ್ಧಿಕ ಸಮಜೀವಿ: http://antaragange.blogspot.in/2010/12/blog-post.html
ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ ಅಮರಕತೆ: http://antaragange.blogspot.in/2010/11/blog-post.html
ಅನ್ಯಗ್ರಹ ಜೀವಿಗಳಿವೆಯೆ?: http://antaragange.blogspot.in/2010/10/blog-post.html
`ಕಾಮ'ನಬಿಲ್ಲಿನ ಅನಾವರಣ: http://antaragange.blogspot.in/2010/05/blog-post.html
ನಿಗೂಢ ನಿಯಾಂಡರ್ತಲ್ ಮಾನವ: http://antaragange.blogspot.in/2010/01/blog-post.html
ಶುಕ್ರವಾರ, ಏಪ್ರಿಲ್ 06, 2012
ನೇತ್ರ ತಜ್ಞನ ನೀರ ಕಾಳಜಿ


ಮಾರ್ಚ್ 22 ವಿಶ್ವ ನೀರಿನ ದಿನಾಚರಣೆ. ಆ ದಿನ ಲಿವರ್ ಪೂಲ್ ನಲ್ಲಿ ನೇತ್ರ ವೈದ್ಯರಾಗಿರುವ ಡಾ.ಮಧು ಸೀತಪ್ಪನವರ `ಬಯಲು ಸೀಮೆಯ ಬಾಯಾರಿಕೆ ಹಿಂಗೀತೆ?' ಕೃತಿಯು ಚಿಕ್ಕಬಳ್ಳಾಪುರದಲ್ಲಿ ಬಿಡುಗಡೆಯಾಯಿತು. ಆ ಕೃತಿಗೆ ಲಕ್ಷ್ಮೀಪತಿ ಕೋಲಾರರವರ `ನೇತ್ರ ತಜ್ಞನ ನೀರ ಕಾಳಜಿ' ಎಂಬ ಮುನ್ನಡಿಯಿದ್ದು ಅದರ ಪಠ್ಯ ಇಲ್ಲಿದೆ:

ಲಕ್ಷ್ಮೀಪತಿ ಕೋಲಾರ
ನೀರನ್ನು ‘ನೀಲಿ ಚಿನ್ನ’ ಎಂದು ಕರೆಯುವುದರಲ್ಲೇ ಮುಂಬರುವ ದಿನಗಳಲ್ಲಿನ ಅದರ ಪ್ರಾಮುಖ್ಯತೆಯನ್ನು ನಾವು ಗುರುತಿಸಬಹುದಾಗಿದೆ. ನೀರಿಗೆ ನಿಸರ್ಗದಲ್ಲಿ ‘ಬದಲಿ’ ಎಂಬುದಿಲ್ಲ. ಸಿಹಿನೀರು ಎಂಬುದು ಈ ಭೂಮಿಯ ಮೇಲಿನ ಅತ್ಯಮೂಲ್ಯವಸ್ತುವಾಗಿದೆ. ಭೂಮಿಯಲ್ಲಿ ಆಕ್ರಮಿಸಿಕೊಂಡಿರುವ ಶೇ. ೭೦ ಭಾಗದ ನೀರಿನಲ್ಲಿ ಜಲಚರಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಜೀವಿಗಳ ಪ್ರಾಣ ಪೋಷಕವಾದ ಸಿಹಿನೀರಿನ ಪ್ರಮಾಣ ಕೇವಲ ಶೇ. ೨.೫ರಷ್ಟು ಮಾತ್ರ! ಈ ೨.೫ರಷ್ಟರ ಸಿಹಿನೀರಲ್ಲೂ ಘನರೂಪದ ಮಂಜುಗಡ್ಡೆಯೇ ಶೇ. ೯೦ ಭಾಗದಷ್ಟಿದೆ. ಭೂಮಿಯನ್ನು ಸಮತೋಲನದಲ್ಲಿಟ್ಟಿರುವ ಧ್ರುವ ಪ್ರದೇಶಗಳಲ್ಲಿನ ಮಂಜುಗಡ್ಡೆಗಳನ್ನು ಕರಗಿಸಿದರಂತೂ ಸರ್ವನಾಶ ಕಟ್ಟಿಟ್ಟ ಬುತ್ತಿ. ಹಾಗಾಗಿ ಮಂಜುಗಡ್ಡೆಗಳನ್ನು ಹೊರತುಪಡಿಸಿದರೆ ಉಳಿದ ಭೂಮಿಯ ಮೇಲಿನ ಶೇ. ೦.೨೬ರಷ್ಟರ ಸಿಹಿನೀರಿನ ಮೂಲಗಳೊಂದೇ ಮನುಷ್ಯರಾದಿಯಾಗಿ ಎಲ್ಲ ಜೀವಿಗಳ ಪಾಲಿನ ಏಕೈಕ ಜೀವದ್ರವ್ಯವಾಗಿದೆ. ಈ ಅತ್ಯಂತ ಅಲ್ಪ ಪ್ರಮಾಣದ ನೀರಿನ ಮೂಲಗಳೂ ಈಗ ಅಪಾಯದ ಸುಳಿಯಲ್ಲಿ ಸಿಲುಕಿಕೊಂಡಿವೆ! ನೈಸರ್ಗಿಕವಾದ ಫಿಕ್ಸೆಡ್ ಡಿಪಾಸಿಟ್‌ನಂತಿರುವ ಅಂತರ್ಜಲವೆಂಬುದು ಭೂಮಿಯ ಮೇಲಿರುವ ನಮ್ಮ ಬಳಕೆಗಾಗಿ ಇರುವುದಿಲ್ಲವಾದರೂ ದುರಾಸೆಯಿಂದ ಪೀಡಿತರಾದ, ಆಧುನಿಕರೆಂದು ಬೀಗುವ ಮನುಷ್ಯರಾದ ನಾವು ಬೋರ್‌ವೆಲ್‌ಗಳೆಂಬ ಯಂತ್ರಗಳ ಮೂಲಕ ಹೊರತೆಗೆದು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿರುವುದರಿಂದ ಅಂತರ್ಜಲವೇ ಬತ್ತಿ ೧೦೦೦ದಿಂದ ೨೦೦೦ ಅಡಿಗಳ ಆಳ ಮುಟ್ಟಿ ನಿಂತಿದೆ! ಹೀಗೆ ನೀರನ್ನು ಕುರಿತು ತಮ್ಮ ಅಜ್ಞಾನ, ಅಸಡ್ಡೆಗಳ ಕಾರಣದಿಂದಲೇ ಇಡೀ ಭೂಮಿಯಲ್ಲಿ ಜಲಕ್ಷಾಮವು ಸೃಷ್ಟಿಯಾಗುತ್ತಿದೆ.
ಮತ್ತೂ ದುರಂತದ ಸಂಗತಿಯೇನೆಂದರೆ, ನಮ್ಮ ಜೀವಪೋಷಕಕ್ಕೆ ಲಭ್ಯವಿರುವ ಕೇವಲ ೦.೨೬ರಷ್ಟರ ಸಿಹಿನೀರಲ್ಲೂ ಶೇ. ೭೦ ಭಾಗಕ್ಕಿಂತಲೂ ಹೆಚ್ಚಿನಂಶವು ಕೃಷಿ ಉದ್ದೇಶಗಳಿಗೇ ಬಳಕೆಯಾಗುತ್ತಿದೆ. ಉಳಿಕೆಯ ಅತ್ಯಲ್ಪವಾದ ೦.೬ ಅಥವಾ ೦.೭ರಷ್ಟು ಪ್ರಮಾಣದ ನೀರಲ್ಲಿ ಬೃಹತ್ ಕೈಗಾರಿಕೆಗಳು, ಕಟ್ಟಡ-ಅಣೆಕಟ್ಟೆಗಳ ಕೆಲಸಗಳು ತಮ್ಮ ಸಿಂಹಪಾಲನ್ನು ನಿರ್ದಾಕ್ಷಿಣ್ಯವಾಗಿ ಬಳಸುತ್ತಿವೆ. ಉಳಿದದ್ದರಲ್ಲಿ ಮನುಷ್ಯ, ಪಶುಪಕ್ಷಿ ಪ್ರಾಣಿಗಳಾದಿಯಾಗಿ ಎಲ್ಲ ಜೀವಸಂಕುಲದ ಜೀವನ್ಮರಣದ ಪ್ರಶ್ನೆಯನ್ನು ಪ್ರಕೃತಿ ಹೇಗೋ ನಿಬಾಯಿಸುತ್ತಿದೆ. ಆದ್ದರಿಂದಲೇ ನೀರನ್ನು ನೀಲಿ ಚಿನ್ನವೆಂದು ತಜ್ಞರು ಕರೆದಿರುವುದು. ಬಲ್ಲವರು ಊಹಿಸಿರುವಂತೆ ಮುಂಬರುವ ದಿನಗಳಲ್ಲಿನ ಜಾಗತಿಕ ಯುದ್ಧಗಳು ನೀರಿಗಾಗಿಯೇ ನಡೆಯುತ್ತವೆ. ಗಾಭರಿ ಹುಟ್ಟಿಸುವ ಈ ಅಂಕಿ ಅಂಶಗಳಾಚೆಗೂ ನಾವು ಚರ್ಚೆಯನ್ನು ವಿಸ್ತರಿಸಿ ನೋಡಬಹುದಾಗಿದೆ. ನಮಗೀಗ ಲಭ್ಯವಿರುವ ೦.೨೬ರಷ್ಟರ ನೀರೇ ಸಾಕಾಗುವಂತಿದೆ, ಆದರೆ ನಾವು ವಿವೇಕಯುತವಾಗಿ ಬಳಸಿದಲ್ಲಿ ಮಾತ್ರ! ನೀರನ್ನು ಅಮೂಲ್ಯವೆಂದು ಪರಿಗಣಿಸದೆ ಪೋಲು ಮಾಡುತ್ತಿರುವುದರಿಂದ, ಅಂದರೆ ಮಳೆ ನೀರು ವ್ಯರ್ಥವಾಗಿ ಹರಿದು ಮೋರಿ-ಚರಂಡಿಗಳನ್ನು ಸೇರಿ ಕಲುಷಿತಗೊಂಡು ಬಳಕೆಗೆ ಬಾರದಂತಾಗುತ್ತಿರುವುದು; ಬಳಕೆಯ ನಂತರದ ಹೆಚ್ಚುವರಿ ನದಿಗಳ ನೀರು ಸಮುದ್ರಗಳನ್ನು ಸೇರಿ ಉಪ್ಪುನೀರಾಗಿ ಪರಿವರ್ತನೆಗೊಳ್ಳುತ್ತಿರುವುದು; ಇತ್ಯಾದಿಯೊಂದೇ ಜಲಕ್ಷಾಮಕ್ಕೆ ಕಾರಣವಾಗುತ್ತಿಲ್ಲ. ಬದಲಿಗೆ ಇತಿಹಾಸವೆಂದೂ ಕಂಡು ಕೇಳರಿಯದಂತಹ ಜನಸಂಖ್ಯಾ ಬಾಹುಳ್ಯವೂ ಸಿಹಿನೀರಿನ ಮೇಲೆ ತೀವ್ರವಾದ ಒತ್ತಡವನ್ನು ಹೇರಿದೆಯೆಂಬದೂ ಗಮನಾರ್ಹ. ಇದೂ ಸಾಲದೆಂಬಂತೆ- ಗಾಯದ ಮೇಲೆ ಉಪ್ಪು ಸವರಿದಂತೆ, ಭೂಮಿಯ ಮೇಲಿನ ಸಿಹಿನೀರು ಮತ್ತು ಅಂತರ್ಜಲ ಖಾಲಿಯಾಗುತ್ತಿರುವಷ್ಟರ ಪ್ರಮಾಣದಲ್ಲಿ ಸಮುದ್ರಗಳ ಉಪ್ಪು ನೀರು ಆವಿಯಾಗಿ ಸಿಹಿನೀರಾಗಿ ಪರಿವರ್ತನೆಗೊಂಡು ಮಳೆಯ ರೂಪದಲ್ಲಿ ನಮಗೆ ಪುನರ್ ಲಭ್ಯವಾಗುತ್ತಿಲ್ಲದಿರುವುದೂ ಕೂಡ ನೀರಿನ ಸಮಸ್ಯೆ ದುಪ್ಪಟ್ಟುಗೊಂಡು ಜೀವನ್ಮರಣದ ಆತಂಕವೊಂದು ಇಂದು ನಮಗೆದುರಾಗಿದೆ. ಇಂತಹ ಆತಂಕದ ಪ್ರಶ್ನೆಗಳನ್ನೆಲ್ಲಾ ತನ್ನೆದುರಿಗಿಟ್ಟುಕೊಂಡು ನೀರಿನ ಮೂಲಕದ ಜೀವಕಾಳಜಿಯ ಹೋರಾಟವೊಂದನ್ನು ಸದ್ದಿಲ್ಲದೆ ಪ್ರಾರಂಭಿಸಿದವರು ಲಂಡನ್‌ನಲ್ಲಿ ನೇತ್ರ ತಜ್ಞರಾಗಿರುವ ಡಾ. ಮಧು ಸೀತಪ್ಪನವರು. ಮಧು ನಮ್ಮೂರಿನವರಾದ್ದರಿಂದ ನನಗೆ ಹಳೇ ಪರಿಚಯದ ಸ್ನೇಹಿತರು. ಬೆಂಗಳೂರಿಗೆ ಅವರು ಬಂದು ಭೇಟಿಯಾದಾಗಲೇ ಅಥವಾ ಅವರ ನೆನಪಾದಾಗಲೋ ನನಗೆ ‘ಅಸಾಧ್ಯವಾದದ್ದನ್ನು ಸಾಧ್ಯವಾಗಿಸಲೇಬೇಕೆಂಬ ಅಖಂಡ ಆತ್ಮವಿಶ್ವಾಸದ ವ್ಯಕ್ತಿತ್ವ’ವೊಂದರ ಸಾಮೀಪ್ಯದ ಅನುಭವವಾಗುತ್ತದೆ. ಆರು ಅಡಿಗೂ ಮಿಗಿಲು ಎತ್ತರದ ಈ ಮಧು ಎಂಬ ಮನುಷ್ಯ ಅಗಾಧವಾದ ನೆನಪಿನ ಶಕ್ತಿ, ವಿಪುಲ ಮಾಹಿತಿ ಹಾಗೂ ಅನ್ಯಜ್ಞಾನ ಶಿಸ್ತುಗಳೆಲ್ಲದರಲ್ಲೂ ಹೊಕ್ಕಾಡಿ ಬಂದ ಬಹುಶ್ರುತರಂತೆ ಗೋಚರಿಸಿ, ತನ್ನ ಆರ್ಜಿತ ಜ್ಞಾನವನ್ನೆಲ್ಲ ಸಾಮಾಜಿಕ ನ್ಯಾಯಬದ್ಧತೆಯ ಯೋಜನೆಗಳಿಗೆ ಅನ್ವಯಿಸಿ ಕಾರ್ಯಾನುಷ್ಠಾನಗೊಳಿಸಲೇಬೇಕೆಂಬ ಛಲದ ತೀವ್ರತೆಯನ್ನು ಮತ್ತು ಅದರ ಶಾಖವು ಆರದಂತೆ ಕಾಯ್ದುಕೊಳ್ಳುವ ಬಗೆಯನ್ನು ಕಂಡಾಗಲೇ ಆ ಎತ್ತರವೆಂಬುದು ಕೇವಲ ಭೌತಿಕವಾದದ್ದಲ್ಲ ಎಂದೇ ಅನಿಸುತ್ತದೆ. ಇದು ಬಹುಶಃ ಸಮಾಜಮುಖಿಯಾಗಿ ಸದಾ ಚಟುವಟಿಕೆಯಿಂದಿರುವ ಅವರ ತಾಯಿ ಶ್ರೀಮತಿ ಬಿ. ಶಾರದ ಸೀತಪ್ಪನವರ ಗುಣವೆನಿಸುತ್ತದೆ.
ಮಧು ಬಾಲ್ಯದಲ್ಲೇ ಒಬ್ಬ ಕ್ರೀಡಾಪಟುವಾಗಿ ನನ್ನ ನೆನಪಿನ ಲೋಕವನ್ನು ಪ್ರವೇಶಿಸಿದವರು. ನಮ್ಮಿಬ್ಬರ ಮನೆಗಳು ಕೂದಲೆಳೆಯ ದೂರದಲ್ಲಿದ್ದವೆಂಬುದನ್ನು ಬಿಟ್ಟರೆ ನನಗೂ ಮಧುವಿಗೂ ಆಗ ಅಂತಹ ನಿಕಟ ಸಂಪರ್ಕವೇನಿರಲಿಲ್ಲ. ನಾನಂತೂ ಆಗ ದಲಿತ ಚಳುವಳಿಯಲ್ಲಿ ಮುಳುಗಿ ಹೋಗಿದ್ದೆ. ಚಳುವಳಿಗಳಲ್ಲಿದ್ದೆವಾದ ಕಾರಣ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧವೂ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದೆವು. ಅಂತಹ ಕೆಲವು ಸಂದರ್ಭಗಳಲ್ಲಿ ಶ್ರೀಮತಿ ಬಿ. ಶಾರದ ಸೀತಪ್ಪನವರೂ ಭಾಗವಹಿಸುತ್ತಿದ್ದರಾಗಿ ಅವರ ಪರಿಚಯ ನನಗೆ ಅಲ್ಪಸ್ವಲ್ಪವಿತ್ತು. ಎಸ್.ಎಫ್.ಐ.ನಲ್ಲಿದ್ದ ಜಿ.ಸಿ.ಬಯ್ಯಾರೆಡ್ಡಿಯವರು ಮಧು ಅವರ ತಂದೆಯ ಕಡೆಯ ಸಂಬಂಧಿ ಯಾದ್ದರಿಂದಲೂ, ಸಮಾನ ಮನಸ್ಕರಾದ ನಾನು ಮತ್ತು ಬಯ್ಯಾರೆಡ್ಡಿಯವರಿಬ್ಬರೂ ವ್ಯವಸ್ಥೆಯ ವಿರೋಧೀ ಹೋರಾಟಗಳಲ್ಲಿ ತೊಡಗಿಕೊಂಡಿದ್ದೆವಾದ್ದರಿಂದಲೂ ಈ ಸಂಬಂಧ ಇನ್ನಷ್ಟು ಹತ್ತಿರವಾಯಿತು. ಕೊನೆಗೆ ಸಾಹಿತ್ಯ, ಚಳವಳಿ ಹಾಗೂ ಸಂಸ್ಕೃತಿ ಚಿಂತನೆಗಳ ಸಮಾನ ಕಾರಣಗಳಿಂದಾಗಿ ಒಗ್ಗೂಡಿದ್ದ ಕೋಲಾರದ ಪ್ರಗತಿಪರ ಮಿತ್ರರ ಬಳಗದಲ್ಲಿದ್ದ ಡಾ. ಜೆ. ಬಾಲಕೃಷ್ಣ ಅವರು ಆ ಮನೆಯ ನೆಂಟನಾದನಂತರ ನಾನೂ ಆ ಕುಟುಂಬಕ್ಕೆ ತೀರಾ ಹತ್ತಿರವಾಗುವಂತಾಯಿತು. ಅಂದಿನಿಂದಲೂ ಮಧು ಅವರೊಂದಿಗಿನ ಸ್ನೇಹ ಅಬಾಧಿತವಾಗಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲೇ ನಾವು ಆಗೀಗ ಭೇಟಿಯಾಗುತ್ತಿದ್ದುದು.
ಕಳೆದ ಕೆಲವು ವರ್ಷಗಳಿಂದಲೂ ಮಧುವಿಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೂ ಒಳಗೊಂಡಂತೆ ಇಡೀ ಈ ಬಯಲು ಸೀಮೆಯ ನಿರಂತರ ಬರಗಾಲದ ಭೀಕರ ಪರಿಸ್ಥಿತಿ, ಅಂತರ್ಜಲವು ಪಾತಾಳ ಸೇರಿ, ಫ್ಲೋರೈಡ್‌ಯುಕ್ತ ವಿಷಮಯ ನೀರು ಮಾತ್ರ ಬಳಕೆಗೆ ಸಿಗುತ್ತಿರುವುದರ ಭಯಾನಕತೆ ಹಾಗೂ ಭವಿಷ್ಯದ ದಿನಗಳ ಜಲಕ್ಷಾಮವು ದುಃಸ್ವಪ್ನವಾಗಿ ಕಾಡುತ್ತಿರುವುದನ್ನು ನಾನೂ ಸೂಕ್ಷ್ಮವಾಗಿಯೇ ಗಮನಿಸಿದ್ದೆ. ದೂರದ ಲಂಡನ್‌ನಲ್ಲಿದ್ದುಕೊಂಡೇ ಇಲ್ಲಿನ ಜಲಕ್ಷಾಮದ ಧಾವಂತದ ಹೆಜ್ಜೆ ಗುರುತುಗಳನ್ನು ಮಧು ಆತಂಕದಿಂದ ಗಮನಿಸುತ್ತಿದ್ದರು. ಬಹುಶಃ; ಇಂತಹ ಆತಂಕಗಳ ದೆಸೆಯಿಂದಾಗಿಯೇ ಅವರು ಈ ಭಾಗದ ಶಾಶ್ವತ ನೀರಾವರಿ ಹೋರಾಟಗಾರರಿಗೆ ಹತ್ತಿರವಾದಂತೆಯೇ, ಇಂಜಿನಿಯರ್ ಪರಮಶಿವಯ್ಯನವರಿಗೂ ಹತ್ತಿರವಾದಂತಿದೆ. ಪರಮಶಿವಯ್ಯನವರು ಮಲೆನಾಡಿನ ನೇತ್ರಾವತಿ ಜಲಾನಯನ ಪ್ರದೇಶದ ಶೇ. ಹತ್ತುಭಾಗದ ಪ್ರದೇಶದಲ್ಲಿನ ಮಳೆ ಕೊಯ್ಲಿನ ಮೂಲಕ, ಸಮುದ್ರಕ್ಕೆ ವ್ಯರ್ಥವಾಗಿ ಸೇರಿಹೋಗುವ ಹತ್ತು ವರ್ಷಗಳ ಸರಾಸರಿ ನೀರಿನಷ್ಟು ಪ್ರಮಾಣದ ಮಳೆನೀರನ್ನು ಮಾತ್ರ ಸಂಗ್ರಹಿಸಿ, ಅದನ್ನು ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಂತಹ ಬರಪೀಡಿತ ಜಿಲ್ಲೆಗಳ ಕೆರೆಗಳಿಗೆ ಹರಿಸುವ ಕುರಿತು ವೈಜ್ಞಾನಿಕ ವರದಿಯನ್ನು ಸಲ್ಲಿಸಿ, ಅದರ ಅನುಷ್ಠಾನಕ್ಕಾಗಿ ಪರಿತಪಿಸುತ್ತಿರುವವರು. ಹೀಗಾಗಿ ಸಹಜವಾಗಿಯೇ ಮಧು ಅವರು ಪರಮಶಿವಯ್ಯ ನವರಿಗೆ ಹತ್ತಿರದವರಾದರು, ಆಪ್ತರಾದರು. ಒಂದೆರಡು ವರ್ಷಗಳ ಹಿಂದೆಯೇ ನಾನೂ ಮಧುವಿನ ಜೊತೆ ಪರಮಶಿವಯ್ಯನವರನ್ನು ಹಲವಾರು ಬಾರಿ ಭೇಟಿಯಾಗಿ ಅವರ ವರದಿಯ ಕುರಿತು ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದೆ. ಪರಮಶಿವಯ್ಯನವರ ವರದಿಯನ್ನು ಸಹಜವಾಗಿಯೇ ಕರಾವಳಿ ಭಾಗದ ರಾಜಕೀಯ ಧುರೀಣರು, ಪರಿಸರವಾದಿಗಳು ತೀವ್ರವಾಗಿಯೇ ವಿರೋಧಿಸುತ್ತಿದ್ದರು. ಆದರೆ ಹೀಗೆ ವಿರೋಧಿಸುವವರಲ್ಲಿ ಬಹುತೇಕ ಮಂದಿ ಪರಮಶಿವಯ್ಯನವರ ವರದಿಯನ್ನು ಅಧ್ಯಯನ ಮಾಡಿದವರೂ ಅಲ್ಲ, ಕನಿಷ್ಟ ಅದರ ಸಂಕ್ಷಿಪ್ತವೂ, ನಿಖರವೂ ಆದ ಮಾಹಿತಿಯನ್ನೂ ಪಡೆದವರಲ್ಲ.

ಪರಮಶಿವಯ್ಯ
ಕರಾವಳಿ ಭಾಗದ ಜನರಿಗೆ ತಮ್ಮ ನೆಲದಲ್ಲಿ ಹರಿಯುವ ನೇತ್ರಾವತಿ ನದಿಯ ಹರಿದ ದಿಕ್ಕನ್ನೇ ಬದಲಿಸಿ ಇಡೀ ನೇತ್ರಾವತಿ ನದಿಯನ್ನೇ ಬಯಲು ಸೀಮೆಯಲ್ಲಿ ಹರಿಯುವಂತೆ ಮಾಡಿಕೊಳ್ಳುತ್ತಾರೆಂಬ ವಿಪರೀತದ ಕಲ್ಪನೆಯಿದ್ದು. ಆ ಕಾರಣಕ್ಕಾಗಿಯೇ ಅವರು ಪರಮಶಿವಯ್ಯನವರ ವರದಿಯನ್ನು ‘ನೇತ್ರಾವತಿ ನದಿ ತಿರುವು ಯೋಜನೆ’ ಎಂದೇ ತಪ್ಪು ತಪ್ಪಾಗಿ ಪ್ರಚುರಗೊಳಿಸಿ ಕರಾವಳಿ ಪ್ರದೇಶದ ಸಮುದಾಯದಲ್ಲಿ ಭಾವನಾತ್ಮಕ ವಿರೋಧದ ಬಹುದೊಡ್ಡ ಅಲೆಯನ್ನು ಹುಟ್ಟು ಹಾಕಿದರು. ಉಳಿದಂತೆ ಪರಿಸರವಾದಿಗಳ ಆತಂಕಗಳೆಲ್ಲವೂ ನಮ್ಮ ಆತಂಕಗಳು ಕೂಡ. ಆದರೆ ನೈಸರ್ಗಿಕವಾದ ಏನೊಂದನ್ನೂ ಬದಲಿಸಲೇ ಕೂಡದೆಂಬ ಹಠಮಾರಿ ನಿಲುವು ಅನೇಕ ಪರಿಸರವಾದಿಗಳಲ್ಲಿರುವುದನ್ನು ನಾನು ಗಮನಿಸಿದ್ದೇನೆ. ಅದಕ್ಕೆ ಬದಲಾಗಿ ಪರಮಶಿವಯ್ಯನವರ ವರದಿಯನ್ನು ಅನುಷ್ಠಾನಗೊಳಿಸಿದರೆ ಆಗಬಹುದಾದ ಪರಿಸರ ಹಾನಿಯನ್ನು ತಡೆಗಟ್ಟುವುದು ಹೇಗೆಂಬ ಬಗ್ಗೆ ಚಿಂತಿಸುವುದು ಹೆಚ್ಚು ಸೂಕ್ತವಾದದ್ದು. ಯಾಕೆಂದರೆ ಗುಂಡ್ಯಾ ಜಲವಿದ್ಯುತ್ ಯೋಜನೆಯಲ್ಲಿನಂತೆ ಆರು ಸಾವಿರ ಹೆಕ್ಟೇರುಗಳ ಕಾಡುನಾಶದ ಸಮಸ್ಯೆ ಇಲ್ಲಿಲ್ಲ. ಕೇವಲ ೨೯೫ ಹೆಕ್ಟೇರುಗಳಷ್ಟು ಅರಣ್ಯ ಪ್ರದೇಶವು ಮಾತ್ರ ನೇತ್ರಾವತಿ ಜಲಾನಯನ ಪ್ರದೇಶದ ಶೇ. ಹತ್ತು ಭಾಗದಲ್ಲಿನ ಮಳೆ ಕೊಯ್ಲು ಪದ್ಧತಿಯ ಮೂಲಕ ಸಂಗ್ರಹಿಸಲಾಗುವ ನೀರನ್ನು ಹರಿಸಲು ಅಗತ್ಯವಾಗುವ ಕಾಲುವೆಗಳ ನಿರ್ಮಾಣಕ್ಕಾಗಿ ಬೇಕಾಗುತ್ತದೆಂದು ಮಧು ಅವರು ತಮ್ಮ ಲೇಖನಗಳ ಉದ್ದಕ್ಕೂ ಪದೇ ಪದೇ ಪ್ರಸ್ತಾಪಿಸಿದ್ದಾರೆ. ಜೊತೆಗೆ ಅರಣ್ಯ ಪ್ರದೇಶದಲ್ಲಿ ಈ ಯೋಜನೆಗಾಗಿ ಅಣೆಕಟ್ಟು ನಿರ್ಮಿಸಬೇಕಾದ ಅಗತ್ಯವೇ ಇಲ್ಲ. ಜಲಸಂಗ್ರಹಾಗಾರವು ಕೂಡ ಅರಣ್ಯ ಪ್ರದೇಶದಲ್ಲಿರುವುದಿಲ್ಲ. ಈ ಯೋಜನೆಯ ಅನುಷ್ಠಾನದ ನಂತರವೂ ಕೂಡ ನೇತ್ರಾವತಿ ನದಿ ಎಂದಿನಂತೆಯೇ ತನ್ನ ಮಾಮೂಲು ಪಾತ್ರದಲ್ಲಿಯೇ ಹರಿಯುತ್ತದೆ. ಆದರೆ ನೇತ್ರಾವತಿ ನದಿಯ ನೀರಿನ ಗರಿಷ್ಠ ಪ್ರಮಾಣದ ಬಳಕೆಯ ನಂತರದಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ಹತ್ತು ವರ್ಷಗಳ ಸರಾಸರಿ ಪ್ರಮಾಣದ ನೀರನ್ನು ಮಾತ್ರ ಮಳೆಕೊಯ್ಲಿನ ಪದ್ಧತಿಯ ಮೂಲಕ ಸಂಗ್ರಹಿಸಿ ‘ಗಾರ್ಲೆಂಡ್ ಕೆನಾಲ್’ ಮೂಲಕ ಹರಿಸಲಾಗುವುದೆಂದು ಮಧು ಅವರು ಪರಮಶಿವಯ್ಯನವರ ವರದಿಯನ್ನಾಧರಿಸಿ ವಿವರಗಳನ್ನು ಒದಗಿಸಿದ್ದಾರೆ.
ಮಧು ಅವರು ಪರಮಶಿವಯ್ಯನವರ ವರದಿಯ ಕುರಿತಂತೆ ಎದ್ದಿರುವ ಅನುಮಾನಗಳಿಗೆಲ್ಲಾ ತಮ್ಮ ಲೇಖನಗಳ ಉದ್ದಕ್ಕೂ ಸಮರ್ಪಕ ಹಾಗೂ ಸಮರ್ಥ ರೀತಿಯ ಪರಿಹಾರಗಳನ್ನು ಕೂಡ ಸೂಚಿಸಿದ್ದಾರೆ. ಉದಾಹರಣೆಗೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊಯ್ಲು ಪದ್ಧತಿಯ ಮೂಲಕ ನೀರು ಸಂಗ್ರಹಿಸುವುದರಿಂದ ಆಗುವ ಪರಿಸರ ಹಾನಿಗಿಂತಲೂ ಹೆಚ್ಚಿನ ಪ್ರಮಾಣದ ಪರಿಸರ ಸಮತೋಲನದ ಕೆಲವು ಬಯಲು ಸೀಮೆಯ ಪ್ರದೇಶದಲ್ಲಿ ಆಗುವುದರಿಂದ ಒಟ್ಟಾರೆಯಾಗಿ ಈ ವರದಿಯು ಪರಿಸರ ವಿರೋಧಿಯಲ್ಲವೆಂದು ವಾದಿಸುತ್ತಾರೆ. ಬಯಲು ಸೀಮೆಯಲ್ಲಿನ ಸಹಸ್ರಾರು ಕೆರೆಗಳಿಗೆ ಈ ನೀರು ಹರಿಯುವುದರಿಂದ ಒಟ್ಟಾರೆ ಈ ಪ್ರದೇಶದ ಅಂತರ್ಜಲದ ಮಟ್ಟವು ಹೆಚ್ಚಿ, ಆ ಮೂಲಕ ಹಸಿರು ಕೂಡ ಕಂಗೊಳಿಸಬಲ್ಲದು. ಪ್ಲೋರೈಡ್‌ನ ಸಮಸ್ಯೆಯೂ ಪರಿಹಾರವಾಗಿ ಬಯಲು ಸೀಮೆಯ ಮಕ್ಕಳ ಹಲ್ಲು ಮತ್ತು ಮೂಳೆಗಳು ಊನಗೊಳ್ಳದೆ ಸುರಕ್ಷಿತವಾಗಿರಬಲ್ಲವು. ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವುದ ರೊಂದಿಗೆ ಕೃಷಿ ಚಟುವಟಿಕೆಗಳು ಚುರುಕಾಗಿ, ಉತ್ಪಾದನೆಯೂ ಹೆಚ್ಚಿ, ಆತ್ಮಹತೆ ಮತ್ತು ಸಾಲಗಳ ಅಡ್ಡಕತ್ತರಿಯಲ್ಲಿ ಸಿಕ್ಕಿಕೊಂಡಿರುವ ರೈತಾಪಿ ಸಮುದಾಯದ ಬದುಕಗಳೂ ಉತ್ತಮಗೊಳ್ಳುತ್ತವೆ; ಅವರು ಉಸಿರಾಡುವುಂತಾಗುತ್ತದೆಂಬುದು ಮಧು ಅವರ ಕಾಳಜಿ ವತ್ತು ನಿಲುವು.
ಮಧು ಅವರು ತಮ್ಮ ಲೇಖನಗಳಲ್ಲಿ ಮಂಡಿಸಿರುವ ಕೆಲವು ಅಂಶಗಳು ಪರಿಸರ ಕುರಿತ ಕುರುಡು ವಾದಗಳಿಗೆ ಮತ್ತು ಪರಮಶಿವಯ್ಯನವರ ವರದಿಯ ಕುರಿತ ತಪ್ಪು ಅಭಿಪ್ರಾಯಗಳಿಗೆ ಉತ್ತರವೆಂಬಂತಿರುವುದನ್ನು ಓದುಗರು ಗಮನಿಸಬಹುದಾಗಿದೆ. ಕೆಲವು ಅಂಶಗಳ ಸ್ಯಾಂಪಲ್ ಹೀಗಿವೆ: (೧) ಪ್ರತಿ ವರ್ಷ ಕನಿಷ್ಠ ೨,೫೦೦ ಟಿ.ಎಂ.ಸಿ.ಗಳಷ್ಟು ನೀರು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಂದ ಅರಬ್ಬಿ ಸಮುದ್ರಕ್ಕೆ ಹರಿದುಹೋಗುತ್ತಿದೆ. (೨) ೨೦೨೦ರ ಹೊತ್ತಿಗೆ ನಮ್ಮ ರಾಜ್ಯವೊಂದರಲ್ಲೇ ಸುಮಾರು ೨೦ ದಶಲಕ್ಷ ಜನ ನೀರಿನ ಅಭಾವದ ಕಾರಣದಿಂದಾಗಿಯೇ ಸ್ಥಳಾಂತರಗೊಳ್ಳಬೇಕಾಗುತ್ತದೆ. (೩) ಪರಮಶಿವಯ್ಯನವರ ವರದಿಯ ಪ್ರಕಾರ ಕರಾವಳಿ ಜಿಲ್ಲೆಗಳ ೨ ಲಕ್ಷ ರೈತರಿಗೂ ವರ್ಷದ ೨೪ ಗಂಟೆಗಳ ಕಾಲವೂ ನೀರು ಒದಗಿಸಬಹುದಲ್ಲದೆ, ಕುಡಿಯುವ ನೀರನ್ನೂ ಪೂರೈಸಬಹುದು. (೪) ನೇತ್ರಾವತಿ ಜಲಾನಯನ ಪ್ರದೇಶದಲ್ಲಿನ ಮಳೆಕೊಯ್ಲಿನ ಮೂಲಕ ಸಂಗ್ರಹಿಸಲಾಗುವ ನೀರನ್ನು ಗುರುತ್ವಾಕರ್ಷಣೆಯ ಮೂಲಕವೇ ಬಹುತೇಕ ಭಾಗಗಳಿಗೆ ಹರಿಸಬಹುದಾಗಿದ್ದು, ವಿದ್ಯುಚ್ಛಕ್ತಿಯ ಹೆಚ್ಚಿನ ಅಗತ್ಯವಿರುವುದಿಲ್ಲ. (೫) ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಶೇ. ೫೦ರಷ್ಟು ಒಳರೋಗಿಗಳು ಕಲುಷಿತ ನೀರಿನಿಂದ ಬರುವ ಸಾಂಕ್ರಾಮಿಕ ರೋಗಗಳನ್ನು ಹೊಂದಿರುತ್ತಾರೆ. (೬) ನಾವು ಈ ಭೂಮಿಯ ಮೇಲೆ ಲಭ್ಯವಿರುವ ಸಿಹಿನೀರಿನ ಒಟ್ಟು ಪ್ರಮಾಣದಲ್ಲಿನ ಶೇ. ೧ರಷ್ಟನ್ನು ಮಾತ್ರ ಉಪಯೋಗಿಸುತ್ತಿದ್ದು, ಉಳಿದ ನೀರು ಸಮುದ್ರಕ್ಕೆ ವ್ಯರ್ಥ ಹರಿದುಹೋಗುತ್ತಿದೆ. (೭) ನೀರಿನ ತೀವ್ರ ಅಭಾವದಿಂದ ಬೆಂಗಳೂರಿನಿಂದ ಕೇವಲ ೭೦ ಕಿ.ಮೀ.ಗಳ ದೂರದ ಪಾವಗಡದಲ್ಲಿ ನೆಲದ ಮರುಭೂಮೀಕರಣದ ಅಪಾಯವು ಈಗಾಗಲೇ ಎದುರಾಗಿದೆ. (೮) ನೇತ್ರಾವತಿ ನದಿಯ ೫೨೧ ಟಿ.ಎಂ.ಸಿ.ಯಷ್ಟು ನೀರು ಪ್ರತಿವರ್ಷ ಸಮುದ್ರದ ಪಾಲಾಗುತ್ತಿದ್ದು, ಅದರ ಪೈಕಿ ೪೨೧ ಟಿ.ಎಂ.ಸಿ.ಯಷ್ಟು ನೀರು ಮೇ-ಸೆಪ್ಟೆಂಬರ್ ತಿಂಗಳುಗಳ ನಡುವಿನ ಮಳೆಗಾಲದಲ್ಲೇ ಸಮುದ್ರದ ತೆಕ್ಕೆಗೆ ಬೀಳುತ್ತಿದೆ. ಅದರ ಪೈಕಿ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರನ್ನು ಮಾತ್ರ ಪರಮಶಿವಯ್ಯನವರು ರೂಪಿಸಿರುವ ಯೋಜನೆಯ ಮೂಲಕ ಬಯಲು ಸೀಮೆಗೆ ಹರಿಸಲು ಉದ್ದೇಶಿಸಿರುವುದು. ಆದ್ದರಿಂದ ನೇತ್ರಾವತಿ ನದಿಯ ನೀರಿಗೆ ಸಮುದ್ರದ ನೀರು ನುಗ್ಗಿ ಉಪ್ಪಿನಾಂಶ ಹೆಚ್ಚುವುದರಿಂದ ಜಲಚರಗಳ ಸಿಹಿನೀರು ಮತ್ತು ಆಹಾರಕ್ಕೆ ತೊಂದರೆಯಾಗುತ್ತದೆಂಬುದು ಕೇವಲ ಊಹೆ ಮತ್ತು ಹಾಸ್ಯಾಸ್ಪದ ವಿಚಾರವಾಗಿದೆ. ಮಳೆಗಾಲದ ನೇತ್ರಾವತಿಯ ನೀರಿನಲ್ಲಿ ಶೇ. ೧೦ ಭಾಗ ಕಡಿಮೆಯಾಗುವುದರಿಂದಲೇ ಸಮುದ್ರದ ನೀರು ನದಿಗೆ ನುಗ್ಗುವುದಾದರೆ ಬತ್ತದಂತೆ ಹರಿಯುವ ಬೇಸಿಗೆಯಲ್ಲಿನ ಕಥೆಯೇನು (೯) ೪೨ ಟಿ.ಎಂ.ಸಿ. ನೀರು ಸಮುದ್ರಕ್ಕೆ ಹರಿಯುವುದನ್ನು ತಪ್ಪಿಸಿದ ಕೂಡಲೇ ಸಮುದ್ರದ ಲವಣಾಂಶವು ಹೆಚ್ಚಿ ಮೀನುಗಾರರಿಗೆ ತೊಂದರೆಯಾಗುತ್ತದೆನ್ನು ವವರು ಅದೇ ಕರಾವಳಿ ಪ್ರದೇಶದಲ್ಲಿ ಅದೇ ಅರಬ್ಬಿ ಸಮುದ್ರಕ್ಕೆ ಪ್ರತಿವರ್ಷ ೨೧ ಸಣ್ಣ್ಣ ನದಿಗಳಿಂದ ೨೦೦೦ ಟಿ.ಎಂ.ಸಿ.ಯಷ್ಟು ಸಿಹಿ ನೀರು ಸೇರುತ್ತಿದೆಯೆಂಬುದನ್ನು ಮರೆತಿರುತ್ತಾರೆ. ಜೊತೆಗೆ ಸಮುದ್ರದ ಮೇಲೆ ಬೀಳುವ ಮಳೆಯಿಂದಾಗಿ ಸಹಸ್ರಾರು ಟಿ.ಎಂ.ಸಿ.ಗಳಷ್ಟು ಸಿಹಿನೀರು ಸಮುದ್ರಕ್ಕೆ ಬೆರೆಯುತ್ತಲೇ ಇರುತ್ತದೆಂಬೂದೂ ನಮ್ಮ ಗಮನದಲ್ಲಿರಬೇಕು. (೧೦) ೪೨ ಟಿ.ಎಂ.ಸಿ.ಗಳಷ್ಟು ಸಿಹಿನೀರಿನ ಕೊರತೆಯ ದೆಸೆಯಿಂದಾಗುವ ಏರುಪೇರನ್ನು ಸಹಿಸಿ ಸಮದೂಗಿಸಿಕೊಳ್ಳಬಲ್ಲ ಶಕ್ತಿ ಅರಬ್ಬಿ ಸಮುದ್ರ ಹಾಗೂ ಮಲೆನಾಡಿನ ಪ್ರಕೃತಿಗಿದೆ. (೧೧) ೧೯ನೇ ಶತಮಾನದ ಕೊನೆಯವರೆಗೂ ಕಾವೇರಿ ನದಿಯ ೭೦೦ ಟಿ.ಎಂ.ಸಿ. ನೀರು ಹಾಗೂ ಕೃಷ್ಣಾನದಿಯ ೨೦೬೦ ಟಿ.ಎಂ.ಸಿ. ನೀರು ಬಂಗಾಳ ಕೊಲ್ಲಿಯನ್ನು ಸೇರುತ್ತಿತ್ತು. ಆದರೆ ಈಗ ಈ ಎರಡೂ ನದಿಗಳಿಂದ ಕೇವಲ ೬೫ ಟಿ.ಎಂ.ಸಿ.ಯಷ್ಟು ನೀರು ಮಾತ್ರ ಸಮುದ್ರಕ್ಕೆ ಸೇರುತ್ತಿದೆಯೆಂದ ಮಾತ್ರಕ್ಕೆ ಪೂರ್ವ ಕರಾವಳಿಯಲ್ಲಿನ ಮೀನುಗಾರಿಕೆಯ ಉದ್ಯಮವೇ ನಿಂತುಹೋಗಿದೆಯೇ ಅಥವಾ ಮೀನುಗಾರರೆಲ್ಲರೂ ಗುಳೆಹೋಗಿದ್ದಾರೆಯೇ? ೨೬೯೫ ಟಿ.ಎಂ.ಸಿ.ಯಷ್ಟು ಸಿಹಿನೀರು ಬಂಗಾಳಕೊಲ್ಲಿಗೆ ತಪ್ಪಿದಾಗಲೇ ಅನಾಹುತಗಳೇನೂ ಸಂಭವಿಸಿಲ್ಲದಿರುವಾಗ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರು ಸಮುದ್ರಕ್ಕೆ ಕೊರತೆ ಬೀಳುವುದರಿಂದ ಏನೆಂತಹ ದೊಡ್ಡ ಪ್ರಮಾಣದ ಪ್ರಮಾದ ಎದುರಾದೀತು ಎನ್ನುವಂತಹ ತರ್ಕಗಳನ್ನು ಲೇಖಕರು ಪುಸ್ತಕದುದ್ದಕ್ಕೂ ಮಂಡಿಸಿದ್ದಾರೆ. ಇಂತಹ ವಿಪುಲ ಮಾಹಿತಿ-ಅಂಶಗಳನ್ನಾಧರಿಸಿ ಮಧು ಅವರು ಬರೆದಿರುವ ಲೇಖನಗಳೆಲ್ಲವೂ ಪರಿಸರವಾದಿಗಳು ಮತ್ತು ಬಯಲು ಸೀಮೆಯ ನೀರಾವರಿ ಹೋರಾಟಗಾರರೆಲ್ಲರಿಗೂ ಅಧ್ಯಯನ ಯೋಗ್ಯ. ಆಕರಗಳಾಗಿವೆ. ಇಷ್ಟರ ನಡುವೆಯೂ ಪರಿಸರ ಮತ್ತು ಜೀವವೈವಿಧ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಅಧ್ಯಯನಕ್ಕೊಳಪಡಿಸಿಯೇ ಹೆಜ್ಜೆ ಇಡಬೇಕೆಂಬ ವಿವೇಕವನ್ನೂ, ಸಂಯಮವನ್ನೂ ತಮ್ಮ ಬರವಣಿಗೆಯ ಉದ್ದಕ್ಕೂ ಪ್ರದರ್ಶಿಸಿದ್ದಾರೆ. ಮಧು ಪರಿಸರ ವಿರೋಧಿಯಲ್ಲವೆಂಬುದನ್ನು ಯಾರೂ ಮರೆಯುವಂತಿಯೇ ಇಲ್ಲ.
ತಮಿಳುನಾಡಿನ ಪೆರಿಯಾರ್ ಮತ್ತು ವೈಗೈ ನದಿಗಳ ಜೋಡಣೆಯನ್ನು ಮಾಡಿದ ಬ್ರಿಟಿಷ್ ಇಂಜಿನಿಯರ್ ಜಾನ್ ಪೆನ್ನಿಕುಕ್ ಅವರ ಸಾಹಸಗಾಥೆಯಂತೂ ಮನಮಿಡಿಯುವಂತಿದೆ. ತಮಿಳುನಾಡಿನ ಪಶ್ಚಿಮ ಘಟ್ಟಗಳಲ್ಲಿ ಹರಿಯುತ್ತಿದ್ದ ಪೆರಿಯಾರ್ ನದಿಯ ಸಾವಿರಾರು ಟಿ.ಎಂ.ಸಿ.ಗಳಷ್ಟು ನೀರು ಸಮುದ್ರ ಸೇರಿ ಪೋಲಾಗುವುದನ್ನು ತಪ್ಪಿಸಿದ ಪೆನ್ನಿಕುಕ್ ರಾಮನಾಡದ ಅರಸು ಹಾಗೂ ಮದ್ರಾಸಿನ ಬ್ರಿಟಿಷ್ ಪ್ರೆಸಿಡೆನ್ಸಿ ದುಬಾರಿ ಯೋಜನೆಯೆಂದು ಕೈಬಿಟ್ಟಮೇಲೂ ತನ್ನ ಸ್ವಂತ ಮನೆ ಹಾಗೂ ಹೆಂಡತಿಯ ಒಡವೆಗಳನ್ನು ಮಾರಿ ಹತ್ತುವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ಬರಪೀಡಿತವಾಗಿದ್ದ ಥೇಣಿ, ಮಧುರೈ, ಶಿವಗಂಗಾ ಹಾಗೂ ರಾಮನಾಥಪುರಂ ಜಿಲ್ಲೆಗಳಿಗೆ ಜೀವ ಹರಿಸಿದ. ಈ ಯೋಜನೆಯಿಂದ ಕಳೆದ ೧೧೬ ವರ್ಷಗಳಿಂದ ಅಲ್ಲಿನ ಪರಿಸರಕ್ಕೆ, ಬಹುವೈವಿಧ್ಯತೆಯ ಜೀವರಾಶಿಗೆ, ಸಮುದ್ರದ ಉಪ್ಪಿನಾಂಶದ ಏರಿಳಿತಕ್ಕೆ, ಮೀನುಗಾರರಿಗೆ ಯಾವ ಪ್ರಮಾಣದ ತೊಂದರೆಗಳಾಗಿವೆ ಎಂಬುದನ್ನು ಕೂಡ ಅರಿತೇ ನಾವು ಮುಂದಿನ ಹೆಜ್ಜೆ ಇಡಬಹುದೆಂಬುದು ಮಧು ಅವರ ಅಭಿಪ್ರಾಯವಾಗಿದೆ. ಈ ಯೋಜನೆಯಿಂದ ಪರಿಸರಕ್ಕಾಗುವ ಹಾನಿಯ ಹತ್ತುಪಟ್ಟು ಪರಿಸರ ಸಮತೋಲನದ ಕೆಲಸ ಬರಪೀಡಿತ ಪ್ರದೇಶಗಳಲ್ಲಿ ಆಗುವುದರ ಜೊತೆಗೆ ಲಕ್ಷಾಂತರ ಜನರ ಬದುಕೂ ಹಸನಾಗುವುದಾದಲ್ಲಿ ಇದನ್ನು ಯಾಕೆ ವಿರೋಧಿಸಬೇಕೆಂಬುದು ಮಧು ಅವರ ಅಭಿಮತವಾಗಿದೆ. ಮಧು ಅವರ ಜಲಚಿಂತನೆಗಳು ಕೇವಲ ನೇತ್ರಾವತಿ ಸುತ್ತಲೇ ಗಿರಕಿ ಹೊಡೆದಿಲ್ಲ. ಬದಲಿಗೆ ಚೀನಾದ ಪಿತೂರಿಗೆ ಬಲಿಯಾಗುತ್ತಿರುವ ಬ್ರಹ್ಮಪುತ್ರಾದಿಂದ ಹಿಡಿದು ಕಾವೇರಿ, ಕೃಷ್ಣ, ಗುಂಡ್ಯಾ ಜಲ ವಿದ್ಯುತ್ ಯೋಜನೆ, ಎತ್ತಿನಹೊಳೆ ಯೋಜನೆ, ಬೆಂಗಳೂರಿನ ನೀರಿನ ಸಮಸ್ಯೆ, ರಾಷ್ಟ್ರೀಯ ನದೀ ಜೋಡಣೆ, ಆಹಾರ ಸುರಕ್ಷತೆ, ಕೋಲಾರದಲ್ಲಿ ಪತ್ತೆಯಾಗಿರುವ ಯುರೇನಿಯಂವರೆಗೂ ಹಬ್ಬಿದೆ. ಆದರೂ ಇಡೀ ಪುಸ್ತಕ ಬಯಲು ಸೀಮೆಗೆ ನೀರುಣಿಸಿ ಜೀವ ನೀಡುವುದರತ್ತಲೇ ಹೆಚ್ಚು ಕೇಂದ್ರೀಕೃತಗೊಂಡಿರುವುದು ಇಲ್ಲಿನ ವಿಶೇಷ. ಇಲ್ಲಿನ ಲೇಖನಗಳೆಲ್ಲವೂ ಕನ್ನಡದ ದಿನಪತ್ರಿಗಳಲ್ಲಿ ಅಂಕಣ ಬರಹಗಳಾಗಿ ಪ್ರಕಟಿತಗೊಂಡಂಥವು. ಹಾಗಾಗಿ ಅಂಕಣ ಬರವಣಿಗೆಯ ಮಿತಿಗಳೂ ಇಲ್ಲಿವೆ. ಉದಾಹರಣೆಗೆ ಅನೇಕ ಅಂಶಗಳು ಪುನರಾವರ್ತಿತವಾದಂತೆ ತೋರುತ್ತವೆಯಾದರೂ ಅವು ಆಯಾ ಸಂದರ್ಭದ ಅಗತ್ಯದ ಹಿನ್ನೆಲೆಯಲ್ಲಿ ಪದೇ ಪದೇ ಪ್ರಸ್ತಾಪಿತಗೊಂಡಿರಬಹುದು. ಆದರೂ ನೀರಿನ ಕುರಿತ ವಿಚಾರಗಳನೇಕವನ್ನು ಕುತೂಹಲಕರವಾಗಿ ಮಂಡಿಸುವಾಗ ಅವು ಅಂತಹ ದೊಡ್ಡ ತೊಡಕೇನಲ್ಲವೆನಿಸುತ್ತದೆ. ಹಾಗೆ ನೋಡಿದರೆ ಇಡೀ ಪುಸ್ತಕವನ್ನು ಸಾವಧಾನದಿಂದ ಪುನರ್ ಸಂಪಾದಿಸುವ ಸಾಧ್ಯತೆಗಳೂ ಇದ್ದೇ ಇದ್ದವಾದರೂ ಕಣ್ಣೆದುರಿಗೇ ಹತ್ತಿ ಉರಿಯುವ ಸಮಸ್ಯೆಗಳ ಕುರಿತಂತೆ ಬರಹದ ಮೂಲಕ ಜನರನ್ನು ಜಾಗ್ರತಗೊಳಿಸುವ ತುರ್ತಲ್ಲಿ ಇಂತಹ ಲೋಪಗಳು ನನ್ನ ಮಟ್ಟಿಗಂತೂ ಕ್ಷಮ್ಯ ಎನಿಸುತ್ತದೆ. ಭಾಷೆಯ ಮೂಲಕದ ಪರಿಶೀಲನೆ, ಸಾಹಿತ್ಯಕ ಮೌಲ್ಯಗಳಿಗಿಂತಲೂ ವಿಚಾರಗಳೇ ಮುಖ್ಯವೆಂಬುದು ಇಲ್ಲಿನ ಲೇಖನಗಳ ಧೋರಣೆ.
ಮಧು ಎಂದಿನಿಂದ ಬರಹಗಾರರಾದರೆಂಬುದೇ ನನ್ನ ಮಟ್ಟಿಗೆ ಸೋಜಿಗದ ಸಂಗತಿ. ನಾನು ನಂಬಿರುವಂತೆ ಮೂಲಭೂತ ಅಗತ್ಯತೆಗಳಲ್ಲೊಂದಾದ ನೀರಿನ ಹೋರಾಟವೇ ಮಧು ಅವರಲ್ಲಿನ ಲೇಖಕನನ್ನು ಹೊರತಂದಿದೆ. ಇದು ನೀರಿನ ಶಕ್ತಿಯೂ ಆಗಿರುವಂತೆ ಮಧುವಿನ ಸಂಖ್ಯಾಬಲವೂ ಆಗಿರಬಲ್ಲದು. ಬಯಲು ಸೀಮೆಗೆ ನೀರು ತರಲೇಬೇಕೆಂಬ ಹಠತೊಟ್ಟಿರುವ ಮಧು ನನ್ನ ಕಣ್ಣಿಗೆ ಮತ್ತೊಬ್ಬ ಜಾನ್ ಪೆನ್ನಿಕುಕ್‌ನಂತೆಯೇ ಕಾಣಿಸುತ್ತಿದ್ದಾರೆ. ಸಾವಿರಾರು ಮೈಲಿಗಳಾಚೆಯ ಲಂಡನ್‌ನಿಂದಲೇ ತಮ್ಮ ಬರಪೀಡಿತ ತಾಯ್ನೆಲದ ಜಲದಾಹದತ್ತ ಚಿಕಿತ್ಸಕ ದೃಷ್ಟಿ ಹರಿಸಿರುವ ಮಧು ಜಲನೇತ್ರತಜ್ಞರಂತೆಯೂ, ಆಧುನಿಕ ಭಗೀರಥನಂತೆಯೂ ಕಠಿಣ ತಪದ ಹಾದಿಗಿಳಿದಂತಿದೆ. ಬಯಲು ಸೀಮೆಯ ಜಲಾಂದೋಲನಕ್ಕೆ ಕ್ರಮೇಣ ತೀವ್ರತೆಯನ್ನು ತಂದುಕೊಡುತ್ತಿರುವ ಹೋರಾಟಕ್ಕೆ ಗಟ್ಟಿ ಬುನಾದಿಯ ತಾತ್ವಿಕ ಆಯಾಮ ಕಲ್ಪಿಸುತ್ತಿರುವ ಮಧು ಅವರ ನೀರ ಹೋರಾಟ ಫಲಪ್ರದವಾಗಲೆಂದು ಎದೆ ತುಂಬಿ ಹಾರೈಸುತ್ತೇನಲ್ಲದೆ ಶಕ್ತಿಮೀರಿ ಅವರೊಂದಿಗೆ ಹೆಜ್ಜೆ ಹರಿಸಲೂ ಪ್ರಯತ್ನಿಸುತ್ತೇನೆ.
ಲಕ್ಷ್ಮೀಪತಿ ಕೋಲಾರ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)


















