ಭಾನುವಾರ, ಆಗಸ್ಟ್ 11, 2013

ನನ್ನ ಹೆಸರು ಕರಿಯ- ಕಪ್ಪು ಕಾವ್ಯದ ಕನ್ನಡಾನುವಾದ

ಏಳು ವರ್ಷಗಳ ಹಿಂದೆ ನನ್ನ ಮಗಳನ್ನು ಯಾವುದೋ ಪರೀಕ್ಷೆಯ ಕೇಂದ್ರ ಶಿವಾಜಿನಗರದ ಸರ್ಕಾರಿ ಶಾಲೆಯಲ್ಲಿ ಇದ್ದುದರಿಂದ ಅಲ್ಲಿಗೆ ಕರೆದೊಯ್ದಿದ್ದೆ. ಅವಳು ಪರೀಕ್ಷೆ ಬರೆಯುವಾಗ ಅಲ್ಲೇ ಹತ್ತಿರದ ಹಳೆಯ ಪುಸ್ತಕದ ಅಂಗಡಿಯಲ್ಲಿ ಸಿಕ್ಕ ಪುಸ್ತಕ `My name is Black- An Anthology of Black Poets'. ಅವುಗಳನ್ನು ಅನುವಾದ ಮಾಡಿ ನಾಲ್ಕೈದು ವರ್ಷಗಳೇ ಆಗಿವೆ. ಅವುಗಳನ್ನು ಎಲ್ಲೂ ಪ್ರಕಟಿಸಿಲ್ಲ. ಅವುಗಳಲ್ಲಿ ಮೊದಲ ಕಂತಾಗಿ Langston Hughesರವರ ಪದ್ಯಗಳು ಇಲ್ಲಿವೆ.




ಯಾತನೆಯೆಂದರೆ 
ಯಾತನೆಯೆಂದರೆ
ನೀನಿಷ್ಟೂ ವರ್ಷಗಳು ಯಾವುದನ್ನು
ಮನೆಯೆಂದುಕೊಂಡಿರುವೆಯೋ ಅದನ್ನು
ಕೊಳೆಗೇರಿಯೆಂದು
ನೀನು ರೇಡಿಯೋದಲ್ಲಿ ಆಲಿಸಿವುದು.

ಕಪ್ಪು ಹುಡುಗಿಯ ಹಾಡು 
ಅಲ್ಲೇ ದಕ್ಷಿಣದ ಡಿಕ್ಸಿಯಲ್ಲಿ
(ನನ್ನ ಎದೆಯೊಡೆದಿದ್ದರು)
ನನ್ನ ಕಪ್ಪು ಪ್ರಿಯಕರನನ್ನು
ಅಡ್ಡರಸ್ತೆಯ ಮರಕ್ಕೆ ನೇತು ಹಾಕಿದ್ದರು.
ಅಲ್ಲೇ ದಕ್ಷಿಣದ ಡಿಕ್ಸಿಯಲ್ಲಿ
(ಘಾಸಿಗೊಳಗಾದ ದೇಹ ಮೇಲೆ ಗಾಳಿಯಲ್ಲಿ)
ಕೇಳಿದೆ ನಾನು ಬಿಳಿಯ ದೇವದೂತ ಯೇಸುವನ್ನು
ಪ್ರಾರ್ಥನೆಯ ಉಪಯೋಗವೇನೆಂದು.
ಅಲ್ಲೇ ದಕ್ಷಿಣದ ಡಿಕ್ಸಿಯಲ್ಲಿ
(ನನ್ನ ಎದೆಯೊಡೆದಿದ್ದರು)
ಪ್ರೇಮವೆಂಬುದು ಒಣ ಬೋಳು ಮರದ
ಮೇಲಿನ ನಗ್ನ ನೆರಳು.

ಕನಸು 
ನನ್ನ ಕೈಗಳ ಚೆಲ್ಲಿ
ಜಗತ್ತಿನ ಯಾವುದೇ ಭಾಗದಲ್ಲಿ
ಗಿರಗಿರನೆ ತಿರುಗಿ ನರ್ತಿಸಬೇಕು
ಬಿಳಿಯ ಹಗಲು ಮರೆಯಾಗುವವರೆಗೆ.
ತಂಪಾದ ಸಂಜೆಯಲ್ಲಿ
ದೊಡ್ಡ ಮರದ ನೆರಳಿನಲ್ಲಿ
ವಿಶ್ರಮಿಸುವಾಗ ಕತ್ತಲು
ಸಾವಕಾಶ ಆವರಿಸಬೇಕು
ನನ್ನಂಥ ಕಪ್ಪು ಕತ್ತಲು-
ಅದೇ ನನ್ನ ಕನಸು!

ನನ್ನ ಕೈಗಳ ಚೆಲ್ಲಿ
ಸುಡುವ ಸೂರ್ಯನ ಎದುರಿಸಿ
ನರ್ತಿಸಬೇಕು! ಗಿರಗಿರನೆ ತಿರುಗಿ!
ಅವಸರದ ಹಗಲು ಮುಗಿಯುವವರೆಗೆ.
ಮುಸ್ಸಂಜೆ ವಿಶ್ರಮಿಸಬೇಕು.....
ಉದ್ದನೆ ನೀಳ ಮರ.....
ಸಂತೈಸುವಂತೆ ಕತ್ತಲು ಆವರಿಸುತ್ತದೆ
ನನ್ನಂಥಹುದೇ ಕಪ್ಪನೆ ಕತ್ತಲು.


ಪುಟ್ಟ ಕಪ್ಪು ಹುಡುಗಿ
ನಿನ್ನನ್ನು ತಾರೆಗಳಿಲ್ಲದ
ಆಗಸಕ್ಕೆ ಹೋಲಿಸಬಹುದು
ಮಿನುಗುವ ನಿನ್ನ ಕಣ್ಣುಗಳ
ರೆಪ್ಪೆ ಮುಚ್ಚಿದಲ್ಲಿ.
ನಿನ್ನನ್ನು ಕನಸಿಲ್ಲದ ಪ್ರಶಾಂತ
ನಿದ್ರೆಗೆ ಹೋಲಿಸಬಹುದು
ಗುನುಗುನಿಸುವ ನಿನ್ನ
ಹಾಡುಗಳಿಲ್ಲದಿದ್ದಲ್ಲಿ.

-ಲ್ಯಾಂಗ್ಸ್ಟನ್ ಹ್ಯೂಸ್
ಅನುವಾದ: ಡಾ.ಜೆ.ಬಾಲಕೃಷ್ಣ
j.balakrishna@gmail.com

ಕಾಮೆಂಟ್‌ಗಳಿಲ್ಲ: