ಹಸಿರು ಮರಗಳಲ್ಲಿ ಸದಾ ಸಂಗೀತ ಇದ್ದೇ ಇರುತ್ತದೆ. ಆದರೆ ಅದನ್ನು ಕೇಳಲು ನಮ್ಮ ಹೃದಯಗಳು ಸಿದ್ಧವಾಗಿರಬೇಕಷ್ಟೆ.
-ಮಿನ್ನಿ ಅಮೋನಿಯೆರ್
ಮರಗಳಿಗೂ ಮನಸ್ಸಿದೆಯೆ? ಅವುಗಳಿಗೂ ನೋವಾಗುತ್ತದೆಯೇ? ಅವು ಪರಸ್ಪರ ತಮ್ಮಲ್ಲಿ ಮಾತನಾಡಿಕೊಳ್ಳಬಲ್ಲವೆ? ಅವು ತಮ್ಮನ್ನೇ ತಾವು ಕಾಪಾಡಿಕೊಳ್ಳಬಲ್ಲವೆ?
ಇವು ಹ್ಯಾರಿಪಾಟರ್ ಅಥವಾ ಯಾವುದೋ ಯಕ್ಷಿಣಿಯ ಕತೆಯ ವಸ್ತುವಲ್ಲ. ಈಗಿನ ವಿಜ್ಞಾನಿಗಳು ಕೌತುಕದಿಂದ ಕೇಳುತ್ತಿರುವ ಪ್ರಶ್ನೆಗಳಿವು. ಇಲ್ಲಿ ಮರಗಳು ಎಂದರೆ ಇಡೀ ಸಸ್ಯರಾಶಿಯನ್ನು ಒಳಗೊಳ್ಳುತ್ತದೆ. ಮರಗಳಿಗೆ ಮನಸ್ಸಿದೆಯೋ ಇಲ್ಲವೋ ಇನ್ನೂ ಗೊತ್ತಾಗಿರದಿದ್ದರೂ ಅವು ಪರಸ್ಪರ ‘ಸಂಭಾಷಣೆ’ನಡೆಸುವುದಂತೂ ನಿಜ ಎನ್ನುತ್ತಾರೆ ವಿಜ್ಞಾನಿಗಳು. ಮರಗಳಿಗೆ ಅಪಾಯ ಒದಗಿದಲ್ಲಿ ತಮ್ಮ ‘ಸಂಭಾಷಣೆ’ಯ ಮೂಲಕ ಇನ್ನಿತರ ಮರಗಳನ್ನು ಎಚ್ಚರಿಸಬಲ್ಲವು, ಅಲ್ಲದೆ ತಮ್ಮ ಮೇಲಿನ ಆಕ್ರಮಣದ ವಿರುದ್ಧ ಮೂಕ ಪ್ರೇಕ್ಷಕರಾಗಿ ಅಸಹಾಯಕತೆಯನ್ನು ತೋರದೆ ತಮ್ಮನ್ನು ತಾವೇ ಕಾಪಾಡಿಕೊಳ್ಳು `ಅಸ್ತç’ಗಳನ್ನು ಸಹ ಬಳಸಬಲ್ಲವು! ಆದರೆ ಅವುಗಳ `ಮಾತು’ಗಳಲ್ಲಿ ಶಬ್ದಗಳೇ ಇಲ್ಲ, ಮರಗಳಿಗೆ ಅವುಗಳದೇ ಆದ ರಾಸಾಯನಿಕ ಸಂಭಾಷಣೆಯಿದೆ.
ಸಸ್ಯಗಳೂ ಸಹ ಭಾವನಾತ್ಮಕ ಜೀವಿಗಳು ಎಂಬ ಚಿಂತನೆಯನ್ನು ಮೊದಲಿಗೆ ಪ್ರತಿಪಾದಿಸಿದ ವಿಜ್ಞಾನಿ ಡಾ.ಗುಸ್ಟಾವ್ ಥಿಯೊಡೋರ್ ಫೆಕ್ನರ್. ಜರ್ಮನಿಯ ಈ ವಿಜ್ಞಾನಿ 1848ರಲ್ಲಿ ತನ್ನ `ನನ್ನಾ’
ಎಂಬ ಕೃತಿಯಲ್ಲಿ ಸಸ್ಯಗಳೂ ಸಹ ಮನುಷ್ಯ ಮತ್ತು ಇತರ ಪ್ರಾಣಿಗಳ ಹಾಗೆ ಭಾವನೆಗಳನ್ನು ಹೊಂದಿರುತ್ತವೆ ಹಾಗೂ ಮನುಷ್ಯ ಸಸ್ಯಗಳ ಬಗ್ಗೆ ಒಲವು, ಮಮತೆ ತೋರಿ ಪ್ರೀತಿಯಿಂದ ಮಾತನಾಡಿಸಿದರೆ ಅವೂ ಸಹ ಆರೋಗ್ಯಕರವಾಗಿ ಬೆಳೆಯುತ್ತವೆ ಎಂದು ಹೇಳಿದ್ದ.
ಈ ವಿಷಯದ ಬಗೆಗೆ 1900ರಲ್ಲಿ ಮೊದಲಿಗೆ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದವರು ಭಾರತೀಯ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್. ಅವರ ಪ್ರಕಾರ ಸಸ್ಯಗಳೂ ಒಂದು ರೀತಿಯ ಸೂಕ್ಷö್ಮ ಸಂವೇದಿ ನರವ್ಯವಸ್ಥೆಯನ್ನು ಹೊಂದಿದ್ದು ಪ್ರಾಣಿಗಳ ಸ್ನಾಯುಗಳಿಗೆ ಆಘಾತವಾದಾಗ ಪ್ರತಿಕ್ರಯಿಸುವಂತೆ ಸಸ್ಯಗಳೂ ಪ್ರತಿಕ್ರಯಿಸುತ್ತವೆ. ಸುಮಧುರ ಸಂಗೀತದ ವಾತಾವರಣದಲ್ಲಿ ಸಸ್ಯಗಳು ಅತ್ಯುತ್ತಮವಾಗಿ ಬೆಳೆಯುತ್ತವೆ ಎಂದೂ ಸಹ ಅವರು ಹೇಳಿದ್ದರು. ಅವರ ಪ್ರಕಾರ ಅಕ್ಕರೆಯ ಮಮತೆಯಡಿ ಬೆಳೆಯುವ ಸಸ್ಯ ಹಿಂಸೆಯಡಿ ಬೆಳೆಯುವ ಸಸ್ಯಕ್ಕಿಂತ ವಿಭಿನ್ನವಾದ `ಕಂಪನ’ಗಳನ್ನು ಹೊರಸೂಸುತ್ತದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಮೆರಿಕದ ಕ್ಲೀವ್ ಬ್ಯಾಕ್ಸ್ಟರ್ ಎಂಬಾತ ಸಸ್ಯಗಳಿಗೆ ಅತೀಂದ್ರಿಯ ಜ್ಞಾನವೂ ಇದೆಯೆಂದು ಘೋಷಿಸಿದ! ಸಿ.ಐ.ಎ.ನಲ್ಲಿ ಸುಳ್ಳು ಹೇಳುವವರನ್ನು ಪತ್ತೆಹಚ್ಚುವಂತಹ ಪಾಲಿಗ್ರಾಫ್ ಯಂತ್ರದ ತಜ್ಞನಾಗಿದ್ದ ಆತ 1966ರಲ್ಲಿ ಸರ್ ಜಗದೀಶ್ ಚಂದ್ರ ಬೋಸ್ರ ಪ್ರಯೋಗಗಳಿಂದ ಪ್ರೇರಿತನಾಗಿ ಪಾಲಿಗ್ರಾಫ್ ಯಂತ್ರವನ್ನು ಸಸ್ಯಗಳಿಗೆ ಜೋಡಿಸಿ ಅವುಗಳಲ್ಲಾಗುವ ಬದಲಾವಣೆಗಳನ್ನು ದಾಖಲಿಸುತ್ತಿದ್ದ. `ಈ ಸಸ್ಯದ ಎಲೆಗೆ ಬೆಂಕಿಕೊಟ್ಟು ಹಿಂಸಿಸಿದರೆ ಹೇಗೆ?’ ಎಂದು ಆತನ ಮನಸ್ಸಿನಲ್ಲಿ ಆಲೋಚನೆ ಬಂದಿದ್ದೇ ತಡ, ಆ ಸಸ್ಯದ ಕಂಪನಗಳಲ್ಲಿ ವೈಪರೀತ್ಯಗಳು ಕಂಡುಬAದಿತೆAದು ಆತ `ಇಂಟರ್ನ್ಯಾಶನಲ್ ಜರ್ನಲ್ ಆಫ್ ಪ್ಯಾರಾಸೈಕಾಲಜಿ’ಯಲ್ಲಿ ವರದಿಮಾಡಿದ್ದಾನೆ. ಅಂದರೆ ಸಸ್ಯಗಳು ನಮ್ಮ ಮನಸ್ಸಿನಲ್ಲಿರುವುದನ್ನೂ ತಮ್ಮ `ಅತೀಂದ್ರಿಯ’
ಶಕ್ತಿಯಿಂದ ಗ್ರಹಿಸಬಲ್ಲವು!
ಮನುಷ್ಯರಲ್ಲಿನ ಅತೀಂದ್ರಿಯ ಶಕ್ತಿಗೇ ಯಾವುದೇ ಪುರಾವೆ ಇಲ್ಲದಿರುವಾಗ ವಿಜ್ಞಾನಿಗಳು ಸಸ್ಯಗಳಲ್ಲಿನ ಅತೀಂದ್ರಿಯ ಶಕ್ತಿಯನ್ನು ಒಪ್ಪುವುದಾದರೂ ಹೇಗೆ?
ಆದರೆ ಜೀವವಿಕಾಸದ ಹಾದಿಯಲ್ಲಿ ಪ್ರತಿಯೊಂದು ಜೀವಿಯೂ- ಅದು ಸಸ್ಯ ಅಥವಾ ಪ್ರಾಣಿಯಾಗಿರಬಹುದು, ತಮ್ಮ ಬದುಕಿನ ಮೂಲಭೂತ ಉದ್ದೇಶವಾದ ತಮ್ಮ ಸಂತತಿಯನ್ನು ಮುಂದುವರಿಸಲು ಹಾಗೂ ತಮ್ಮ ಉಳಿವಿಗಾಗಿ ತಮ್ಮದೇ ಆದಂತಹ ವಿಧಾನಗಳನ್ನು ಕಂಡುಕೊAಡಿವೆ. ಅದೇ ರೀತಿ ಮರಗಳು ತಮ್ಮ ಮೇಲೆರಗುವ ಅಪಾಯಗಳನ್ನು ಗ್ರಹಿಸಬಲ್ಲವು ಹಾಗೂ ಅದನ್ನು ಇತರ ಸಜಾತೀಯ ಬಂಧುಗಳೊAದಿಗೆ ತಮ್ಮದೇ ವಿಧಾನಗಳ ಮೂಲಕ ಸಂವಹಿಸಬಲ್ಲವು.
ಮರಗಳ `ಸಂಭಾಷಣೆ’ಯ ಬಗ್ಗೆ 1979ರಲ್ಲಿ ಮೊದಲ ಬಾರಿಗೆ ವರದಿ ಮಾಡಿದ ವಿಜ್ಞಾನಿ ಅಮೆರಿಕದ ಡೇವಿ ರೋಡ್ಸ್. ಆತ ವಿಲ್ಲೋ ಮರಗಳ ಮೇಲೆ ಕಂಬಳಿ ಹುಳುಗಳು ದಾಳಿ ಮಾಡಿದಾಗ ಆ ಮರದ ಎಲೆಗಳಲ್ಲಾಗುವ ರಾಸಾಯನಿಕ ಬದಲಾವಣೆಗಳನ್ನು ಆತ ಅಭ್ಯಸಿಸುತ್ತಿದ್ದ. ವಿಲ್ಲೋ ಮರಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪಿನ ಮೇಲೆ ಕಂಬಳಿ ಹುಳುಗಳನ್ನು ಬಿಟ್ಟ. ಕೆಲವು ದಿನಗಳ ನಂತರ ಕಂಬಳಿ ಹುಳುಗಳು ಬಿಟ್ಟಿದ್ದ ವಿಲ್ಲೋ ಮರಗಳ ಎಲೆಗಳನ್ನು ಬಿಡಿಸಿ ಪ್ರಯೋಗಾಲಯದಲ್ಲಿದ್ದ ಕಂಬಳಿ ಹುಳುಗಳಿಗೆ ತಿನ್ನಿಸಿದ. ಆದರೆ ಹುಳುಗಳು ಆ ಎಲೆಗಳನ್ನು ಸರಿಯಾಗಿ ತಿನ್ನಲೇ ಇಲ್ಲ. ಆ ಹುಳುಗಳು ದಾಳಿ ಮಾಡಿದಾಗ ವಿಲ್ಲೋ ಮರಗಳು ಆ ಹುಳುಗಳು ಎಲೆಗಳನ್ನು ತಿನ್ನದಿರಲೆಂದು ಅವುಗಳಿಗೆ ಇಷ್ಟವಾಗದ ರಾಸಾಯನಿಕವೊಂದನ್ನು ಉತ್ಪಾದಿಸಿ ತಮ್ಮ ಎಲೆಗಳಲ್ಲಿ ಶೇಖರಿಸಿಕೊಂಡಿತ್ತು. ನಂತರ ಕಂಬಳಿ ಹುಳುಗಳನ್ನು ಬಿಡದ ಇನ್ನೊಂದು ಗುಂಪಿನ ವಿಲ್ಲೋ ಮರಗಳ ಎಲೆಗಳನ್ನು ಬಿಡಿಸಿ ಪ್ರಯೋಗಾಲಯದಲ್ಲಿನ ಹುಳುಗಳಿಗೆ ತಿನ್ನಿಸಿದಾಗ ಆ ಎಲೆಗಳನ್ನೂ ಸಹ ಹುಳುಗಳು ತಿನ್ನಲಿಲ್ಲ. ಆ ಎಲೆಗಳಲ್ಲೂ ಸಹ ಕಂಬಳಿ ಹುಳುಗಳಿಗೆ ಇಷ್ಟವಾಗದ ರಾಸಾಯನಿಕವಿತ್ತು. ಆ ಗುಂಪಿನ ಮರಗಳಿಗೆ ಕಂಬಳಿ ಹುಳುಗಳನ್ನು ಬಿಡದೇ ಇದ್ದರೂ ಆ ಮರಗಳು ಆ ರಾಸಾಯನಿಕವನ್ನು ಉತ್ಪಾದಿಸಿ ತಮ್ಮನ್ನು ಕಾಪಾಡಿಕೊಳ್ಳಲು ತಯಾರಿ ನಡೆಸಿತ್ತು.
ಕಂಬಳಿ ಹುಳುಗಳ ಆಕ್ರಮಣ ಮರಗಳಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಹುಳುಗಳಿಗೆ ಇಷ್ಟವಾಗದ ರಾಸಾಯನಿಕವನ್ನು ಉತ್ಪಾದಿಸಲು ಪ್ರೇರೇಪಿಸಿತ್ತು. ಆದರೆ ಹುಳುಗಳು ದಾಳಿ ನಡೆಸಿರದಿದ್ದ ಮರಗಳಿಗೆ ಅಂಥ ರಾಸಾಯನಿಕವನ್ನು ಉತ್ಪಾದಿಸಲು ಪ್ರೇರಣೆ ಏನಿತ್ತು? ಆಕ್ರಮಣಕ್ಕೊಳಗಾದ ಮರಗಳೇನಾದರೂ ಇನ್ನಿತರ ತನ್ನ `ಬಂಧು’ಗಳಿಗೆ ಅಪಾಯದ ಸಂದೇಶ ತಲುಪಿಸಿ ಎಚ್ಚೆತ್ತುಕೊಳ್ಳಲು ತಿಳಿಸಿತ್ತೆ ಎಂದು ವಿಜ್ಞಾನಿ ರೋಡ್ಸ್ಗೆ ಸಂಶಯವಾಯಿತು. ಆ ಸಂಶಯದಿAದಲೇ ಆತ ಮರಗಳ `ಸಂಭಾಷಣೆ’ಯ ಬಗ್ಗೆ ಹೆಚ್ಚಿನ ಸಂಶೋಧನೆಗೆ ತೊಡಗಿದ.
ಮರಗಳು ತಮ್ಮ ಮೇಲೆ ದಾಳಿ ನಡೆಸುವ ಶತ್ರುಗಳಿಂದ ತಪ್ಪಿಸಿಕೊಳ್ಳಲು ಹಲವಾರು ವಿಧಾನಗಳನ್ನು ಅನುಸರಿಸುತ್ತವೆ. ಶತ್ರು ದಾಳಿ ನಡೆಸಿದಾಗ ತಪ್ಪಿಸಿಕೊಳ್ಳಲು ಮರಗಳು ಓಡಲಾರವು; ಇನ್ನಿತರ ಪ್ರಾಣಿಗಳ ಹಾಗೆ ಹಲ್ಲು ತೋರಿಸಿ ಹೆದರಿಸಲಾರವು ಅಥವಾ ಮರುದಾಳಿ ನಡೆಸಲಾರವು. ಆದ್ದರಿಂದ ಶತ್ರುಗಳನ್ನು ಹಿಮ್ಮೆಟ್ಟಿಸಲು ಅವು ರಾಸಾಯನಿಕ ಅಸ್ತçಗಳನ್ನು ಹುಡುಕಿಕೊಂಡಿವೆ. ಮರಗಳು `ಆತ್ಮರಕ್ಷಣೆ’ಗೆ ನೂರಾರು ರಾಸಾಯನಿಕಗಳನ್ನು ಉತ್ಪತ್ತಿ ಮಾಡುವುದು ಕಂಡುಬAದಿದೆ. ಅಕೇಶಿಯಾ ಮರಗಳು ಕೀಟಗಳಿಗೆ ಅಜೀರ್ಣ ಉಂಟುಮಾಡುವ ಟ್ಯಾನಿನ್ ರಾಸಾಯನಿಕವನ್ನು ಉತ್ಪಾದಿಸಿದರೆ ಇನ್ನು ಕೆಲವು ನರವ್ಯವಸ್ಥೆಯನ್ನೇ ಹಾಳುಮಾಡುವಂಥ ಆಲ್ಕಲಾಯ್ಡ್ಗಳನ್ನು ಉತ್ಪಾದಿಸುತ್ತವೆ. ಟ್ಯೂರಿನ್ ವಿಶ್ವವಿದ್ಯಾನಿಲಯದ ಮತ್ತು ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯ ಜೀವಶಾಸ್ತçಜ್ಞರು ಕಂಡುಕೊAಡಿರುವAತೆ ಲೀಮಾ ಹುರುಳಿ ಗಿಡಗಳು ಉತ್ಪಾದಿಸುವ ರಾಸಾಯನಿಕವು ತನ್ನ `ಬಂಧು’ಗಳಿಗೆ ಎಚ್ಚರ ನೀಡುವುದಲ್ಲದೆ ಅದು ತನ್ನ ಮೇಲೆ ದಾಳಿ ನಡೆಸಿರುವ ಕಂಬಳಿ ಹುಳುಗಳನ್ನು ತಿನ್ನುವಂತಹ ಕಡಜಗಳನ್ನು ಆಕರ್ಷಿಸುತ್ತದೆ. ಯಾವುದಾದರೂ ಪ್ರಾಣಿ ಅಕೇಶಿಯಾ ಮರದ ಎಲೆಗಳನ್ನು ತಿನ್ನಲು ಪ್ರಾರಂಭಿಸಿದಾಕ್ಷಣ ಆ ಮರ ಟ್ಯಾನಿನ್ ರಾಸಾಯನಿಕವನ್ನು ಉತ್ಪಾದಿಸುತ್ತದೆ. ಗಾಳಿಯಲ್ಲಿ ಪಸರಿಸುವ ಅದರ `ವಾಸನೆ’ಯನ್ನು ಇತರ ಮರಗಳು `ಗ್ರಹಿಸಿ’
ಮೇಯುವ ಪ್ರಾಣಿ ಇನ್ನೂ ಬಾಯಿ ಹಾಕಿರದಿದ್ದರೂ ಮುನ್ನೆಚ್ಚರಿಕೆಯಾಗಿ ತಾನೂ ಟ್ಯಾನಿನ್ ರಾಸಾಯನಿಕವನ್ನು ಉತ್ಪಾದಿಸಿ ಆ ಪ್ರಾಣಿ ಬಾಯಿಹಾಕದಂತೆ ಮಾಡಿಕೊಂಡಿರುತ್ತದೆ. ದಕ್ಷಿಣ ಆಫ್ರಿಕಾ ವಿಜ್ಞಾನಿ ಡಬ್ಲೂö್ಯ.ವಿ.ಹೊವೆನ್ ಈ ರೀತಿಯ ಅಕೇಶಿಯಾ ವಿಷದಿಂದ ಒಂದೇ ವರ್ಷ ಮೂರು ಸಾವಿರ ಜಿಂಕೆಗಳು ಸತ್ತಿರುವುದನ್ನು ದಾಖಲಿಸಿದ್ದಾರೆ.
ಚಾರ್ಲ್ಸ್ ಡಾರ್ವಿನ್ ಸಹ ನೊಣ ಮತ್ತು ಇತರ ಸಣ್ಣ ಕೀಟಗಳನ್ನು ಕ್ಷಣಾರ್ಧದಲ್ಲಿ ತನ್ನ `ಬುಟ್ಟಿ’ಯೊಳಗೆ ಸೆರೆಹಿಡಿಯುವ ವೀನಸ್ ಫ್ಲೆöÊಟ್ರಾö್ಯಪ್ ಕೀಟಾಹಾರಿ ಸಸ್ಯದ ಬಗ್ಗೆ ಅಚ್ಚರಿಗೊಂಡಿದ್ದ ಹಾಗೂ ಅಂತಹ ಸಸ್ಯಗಳಲ್ಲಿ ಪ್ರಾಣಿಗಳಲ್ಲಿರುವಂತೆಯೇ ಕೇಂದ್ರ ನರಮಂಡಲ ವ್ಯವಸ್ಥೆ ಇರಬಹುದೆಂದು ಊಹಿಸಿದ್ದ.
1960 ಮತ್ತು 1970ರ ನಡುವೆ ಬರ್ಡೋನ್- ಸ್ಯಾಂಡರ್ಸನ್ರವರು ವೀನಸ್ ಫ್ಲೆöÊಟ್ರಾö್ಯಪ್ ಸಸ್ಯದ ಮೇಲೆ ಹಲವಾರು ಪ್ರಯೋಗಗಳನ್ನು ನಡೆಸಿದರು. ಸಸ್ಯದ ಬುಟ್ಟಿಯಂತಹ ರಚನೆಗೆ ಹಾಗೂ ಕೀಟ ಒಳಹೊಕ್ಕೊಡನೆ ಕ್ಷಣಾರ್ಧದಲ್ಲಿ ಮುಚ್ಚಿಕೊಳ್ಳುವ ಅದರ ಮುಚ್ಚಳಕ್ಕೆ ಎಲೆಕ್ಟೊçÃಡ್ಗಳನ್ನು ಸಿಕ್ಕಿಸಿ ಪ್ರಾಣಿಗಳ ನರಕೋಶಗಳು ಉತ್ಪಾದಿಸುವಂತಹ ವಿದ್ಯುತ್ ಚಟುವಟಿಕೆಯ ನರಪ್ರತಿಕ್ರಿಯೆಗಳನ್ನು ದಾಖಲಿಸಿದರು. ಆ ಪ್ರಯೋಗಗಳನ್ನು ಅದೇ ರೀತಿಯ ಇತರ ಸಸ್ಯಗಳಲ್ಲೂ ಸಹ ನಡೆಸಿ ಆ ರೀತಿಯ ವಿದ್ಯುತ್ ಚಟುವಟಿಕೆಗಳನ್ನು ದಾಖಲಿಸುವಲ್ಲಿ ಯಶಸ್ವಿಯಾದರು.
ಇತ್ತೀಚಿಗೆ ಮಿಶಿಗನ್ ಸ್ಟೇಟ್ ವಿಶ್ವವಿದ್ಯಾನಿಲಯದ ಸಂಶೋಧಕರು ಸಹ ಸಸ್ಯಗಳಲ್ಲಿ ಆದಿಮ ರೂಪದ ನರಮಂಡಲ ವ್ಯವಸ್ಥೆಯಿದೆಯೆಂದು ವರದಿಮಾಡಿದ್ದಾರೆ. ಅದರ ಮೂಲಕ ಸಸ್ಯಗಳು ನೋವನ್ನೂ ಸಹ ಗ್ರಹಿಸಬಲ್ಲವೆಂಬುದು ಅವರ ಅಭಿಪ್ರಾಯ. ಅವು ನೋವನ್ನು ಗ್ರಹಿಸುವುದಷ್ಟೇ ಅಲ್ಲ ಇತರ ಸಸ್ಯಗಳೊಂದಿಗೆ ಸಂವಹಿಸಬಲ್ಲವು ಎಂದು ಸ್ವಿಟ್ಜರ್ಲ್ಯಾಂಡಿನ ಹೆಲೆವೆಟಿಕಾ ಸಂಸ್ಥೆಯ ವಿಲಿಯಂಮ್ಸ್ ಎನ್ನುತ್ತಾರೆ. ಈ ಸಂಶೋಧನೆಗಳು ಸ್ವಿಸ್ ಸರ್ಕಾರವನ್ನು ವಿಶ್ವದಲ್ಲಿಯೇ ಮೊಟ್ಟಮೊದಲ ಸಸ್ಯ ಹಕ್ಕುಗಳ ಮಸೂದೆಯೊಂದನ್ನು ಜಾರಿಗೊಳಿಸಿದೆ. ಆ ಮಸೂದೆಯಲ್ಲಿ ಸಸ್ಯಗಳಿಗೂ ಸಹ ನೈತಿಕ ಮತ್ತು ಕಾನೂನಿನ ರಕ್ಷಣೆಯಿದೆಯೆಂದೂ ಹಾಗೂ ಸ್ವಿಸ್ ನಾಗರಿಕರು ಸಸ್ಯಗಳನ್ನು ತಮ್ಮ ಇತರ ಸಹ ನಾಗರಿಕರ ಹಾಗೆ ಗೌರವಿಸಬೇಕೆಂದು ಹೇಳಿದೆ. ಪ್ರಾಣಿಗಳು ಮಾತ್ರ `ಆತ್ಮ’
ಹೊಂದಿವೆ ಹಾಗೂ `ಜೀವಂತ’ವಾಗಿವೆ ಎಂದು ನಂಬಿರುವ ಸಸ್ಯಾಹಾರಿಗಳನ್ನು ಈ ಸಂಶೋಧನೆಗಳು ಗೊಂದಲಕ್ಕೀಡುಮಾಡುವುದರಲ್ಲಿ ಸಂಶಯವಿಲ್ಲ.
ಇಷ್ಟೆಲ್ಲಾ ಸಂಶೋಧನೆಗಳು ನಡೆದಿದ್ದರೂ ಸಸ್ಯಗಳಿಗೆ ಭಾವನೆ ಅಥವಾ ಪ್ರಜ್ಞೆ ಎಂಬುದಿದೆೆಯೆ ಎಂಬುದರ ಬಗ್ಗೆ ತಿಳಿದುಬಂದಿಲ್ಲ. ಸಸ್ಯಗಳಲ್ಲಿ ಪ್ರಾಣಿಗಳಂತಹ ಸುವ್ಯವಸ್ಥಿತ ನರವ್ಯವಸ್ಥೆ ಇಲ್ಲದಿದ್ದರೂ ಅವು ತಮ್ಮ ಪರಿಸರವನ್ನು ಗ್ರಹಿಸಿ `ಭಾವನೆ’ಗಳಂತಹ ಪ್ರತಿಕ್ರಿಯೆ ತೋರಬಲ್ಲ ಸಾಮರ್ಥ್ಯ ಹೊಂದಿವೆ ಎನ್ನುತ್ತಾರೆ ವಿಜ್ಞಾನಿಗಳು. ಉದಾಹರಣೆಗೆ ಸಸ್ಯಗಳು ತಮ್ಮ ಸುತ್ತಮುತ್ತಲಿರುವ ತಮ್ಮದೇ ಪ್ರಭೇದದ ಇತರ ಸಸ್ಯಗಳನ್ನು ಗುರುತಿಸಬಲ್ಲವು; ಪ್ರಾಣಿಗಳಂತೆ ತಮ್ಮದೇ ಪ್ರಭೇದದ ಸಂರಕ್ಷಣೆಗೆ `ನಿಸ್ವಾರ್ಥತೆ’ಯನ್ನು ತೋರಿ `ಪರೋಪಕಾರಿ’ಗಳಾಗಬಲ್ಲವು.
ಇಂಪೇಶಿಯೆನ್ಸ್ ಪ್ಯಾಲಿಡ (ಹಳದಿ ಆಭರಣ ಕಳೆ ಸಸ್ಯ) ಸಸ್ಯವು ತನ್ನ ಸುತ್ತಮುತ್ತಲೂ ಇತರ ಜಾತಿಯ ಸಸ್ಯಗಳಿದ್ದಲ್ಲಿ ಆ ಸಸ್ಯವು ಅತ್ಯಂತ ವೇಗವಾಗಿ ಬೆಳೆದು ಇತರ ಜಾತಿಯ ಗಿಡಗಳಿಗೆ ಹೆಚ್ಚು ಸೂರ್ಯನ ಬೆಳಕು ಸಿಗದಂತೆ ಮಾಡುತ್ತದೆ ಅಲ್ಲದೆ ತನ್ನ ಬೇರುಗಳನ್ನು ಆಳವಾಗಿ ಮತ್ತು ವಿಸ್ತಾರವಾಗಿ ಬೆಳೆಸಿ ಪೋಷಕಾಂಶಗಳನ್ನು ತನಗೇ ಹೆಚ್ಚು ಹೆಚ್ಚು ಸಿಗುವಂತೆ ಮಾಡಿಕೊಳ್ಳುತ್ತದೆ. ಆದರೆ ಸುತ್ತಮುತ್ತಲೂ ತನ್ನದೇ ಜಾತಿಯ ಗಿಡಗಳಿದ್ದಾಗ ಆ ಸಸ್ಯ ಈ ರೀತಿಯ ನಡವಳಿಕೆ ತೋರುವುದಿಲ್ಲ. ಆದರೆ ತನ್ನ ಸಂಪನ್ಮೂಲಗಳನ್ನೆಲ್ಲಾ ತನ್ನ ಬೇರು ಮತ್ತು ಎಲೆಗಳಲ್ಲಿ ಸಂಗ್ರಹಿಸಿಡದೆ ಆ ಸಸ್ಯ ತನ್ನ ರಚನೆಯನ್ನೇ ಕಾಂಡ ಉದ್ದವಾಗುವಂತೆ ಹಾಗೂ ಹೆಚ್ಚು ರೆಂಬೆಗಳೊಡೆಯುವAತೆ ಬದಲಿಸಿಕೊಳ್ಳುತ್ತಿತ್ತು. ಅಂದರೆ ತನ್ನಿಂದ ತನ್ನ ಜಾತಿಯ ಸಸ್ಯಗಳಿಗೆ ತೊಂದರೆಯಾಗದAತೆ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಸಹಕಾರದ ಮೂಲಕ ಆ ಸಸ್ಯ ಪ್ರಯತ್ನಿಸುತ್ತಿತ್ತು.
ಈ ಸಸ್ಯದ ಬಗ್ಗೆ ಹೆಚ್ಚು ಸಂಶೋಧನೆ ನಡೆಸಿದ ವಿಜ್ಞಾನಿಗಳಿಗೆ ಅದು ತನ್ನ ಬೇರಿನ ರಾಸಾಯನಿಕ ಸ್ರಾವಗಳ ಮೂಲಕ ಸಜಾತಿಯ ಸಸ್ಯಗಳೊಂದಿಗೆ ಸಂವಹನ ನಡೆಸುತ್ತಿತ್ತೆಂದು ಕಂಡುಕೊAಡಿದ್ದಾರೆ.
ಸೀತಾಳೆ ಅಥವಾ ಆರ್ಕಿಡ್ ಸಸ್ಯಗಳು ಈ ರೀತಿಯ ರಾಸಾಯನಿಕ ಉತ್ಪಾದನೆಯಲ್ಲಿ ಪ್ರಸಿದ್ಧವಾಗಿವೆ. ಎಲ್ಲಾ ಸಸ್ಯಗಳು ತಮ್ಮ ಹೂಗಳಲ್ಲಿ ಮಕರಂದ ಹೊಂದಿದ್ದು ಅವುಗಳ ಮೂಲಕ ಪರಾಗಸ್ಪರ್ಶಕ್ಕಾಗಿ ಕೀಟಗಳನ್ನು ಆಕರ್ಷಿಸುತ್ತವೆ. ಆದರೆ ಸೀತಾಳೆಗಳಲ್ಲಿ ಮಕರಂಧ ಇಲ್ಲದಿರುವುದರಿಂದ ಪರಾಗಸ್ಪರ್ಶಕ್ಕಾಗಿ ಅವು ಈ ರೀತಿಯ ರಾಸಾಯನಿಕಗಳ ಮೊರೆಹೋಗುತ್ತವೆ. ಅಂತಹ ಸೀತಾಳೆಗಳು ಯಾವುದಾದರೂ ಸುಮಧುರ ಹೂವಿನ ಸುವಾಸನೆಯ ರಾಸಾಯನಿಕವನ್ನು ಸ್ರವಿಸಿ ಕೀಟಗಳನ್ನು ಆಕರ್ಷಿಸಿ ತಮ್ಮ ಪರಾಗಸ್ಪರ್ಶ ಮಾಡಿಕೊಳ್ಳುತ್ತವೆ ಅಥವಾ ಕೆಲವು ಸೀತಾಳೆಗಳ ಹೂಗಳು ಕೆಲವು ಕೀಟಗಳ ಸಂಗಾತಿಗಳ ಆಕಾರದಲ್ಲಿಯೇ ಇರುವುದರಿಂದ ಕೀಟಗಳು ಅಂತಹ ಹೂಗಳೊಂದಿಗೆ `ಕೂಡಲು ಯತ್ನಿಸಿದಾಗ ಪರಾಗಸ್ಪರ್ಶವಾಗುವಂತೆ ಮಾಡಿಕೊಂಡಿರುತ್ತವೆ.
ಸಸ್ಯಗಳು ಈ ರೀತಿಯ ಪರಸ್ಪರ ಸಹಕಾರದ ನಡತೆಯನ್ನು ಜೀವವಿಕಾಸದ ಹಾದಿಯಲ್ಲಿ ಸುವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿಕೊಂಡಿವೆ ಏಕೆಂದರೆ, ಅವು ಪ್ರಾಣಿಗಳಿಗಿಂತ ಮೊದಲೇ ವಿಕಾಸಗೊಂಡಿರುವ ಜೀವಿಗಳು. ಅವು ಇತರ ಪ್ರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತಮ್ಮ ಸಂತಾನ ಮುಂದುವರಿಸಲು ಹಲವಾರು ಮಾರ್ಗಗಳನ್ನು ಕಂಡುಕೊAಡಿವೆ. ಆದರೆ ಜೀವವಿಕಾಸದ ಹಾದಿಯಲ್ಲಿ ಸಸ್ಯರಾಶಿಗೆ ಮಾನವ ಮಾರಕನಾಗಬಲ್ಲ ಎಂಬುದರ ಸುಳಿವು ಸ್ವಲ್ಪವೂ ಸಿಕ್ಕಿರಲಿಕ್ಕಿಲ್ಲ. ಆದರೆ ಇಂದು ಮಾನವ ವನಸಿರಿಯನ್ನು ನಿರ್ದಾಕ್ಷಿಣ್ಯವಾಗಿ ಕೊಳ್ಳೆ ಹೊಡೆಯುತ್ತಿದ್ದಾನೆ. ಅವನ ಮತಿಗೇಡಿತನ, ದುರಾಸೆ, ಸಮೀಪ ದೃಷ್ಟಿಯಿಂದಾಗಿ ಪ್ರಕೃತಿಯ ಸಮತೋಲನವೇ ಹಾಳಾಗುತ್ತಿದೆ. ಮರಗಳಿಗೆ ಮಾನವ ಮಾರಕನಾಗಬಲ್ಲ ಎಂಬುದರ ಸುಳಿವು ಮರಗಳಿಗೆ ಮೊದಲೇ ಸಿಕ್ಕಿದ್ದಿದ್ದರೆ ಅವು ಮಾನವನಿಂದ ಬದುಕುಳಿಯುವ ದಾರಿಯನ್ನೂ ಹುಡುಕಿಕೊಂಡಿರುತ್ತಿದ್ದುವೇನೋ!