Translate

ಶುಕ್ರವಾರ, ಏಪ್ರಿಲ್ 27, 2012

ಪ್ಯಾರ್ gay ಆಗ್ಬುಟ್ಟೈತೆ... ವ್ಯಂಗ್ಯಚಿತ್ರ


ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕನ್ನಡದ ಬರಹಗಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭ

25-04-2012ರಂದು ನಡೆದ ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕನ್ನಡದ ಬರಹಗಾರರಿಗೆ 2011-12ರ ಪ್ರಶಸ್ತಿ ಪ್ರದಾನ ಸಮಾರಂಭ ಕೆಲವು ಚಿತ್ರಗಳು
ಪಿ.ಇ.ಎಸ್. ಕಾಲೇಜಿನ ಸಭಾಂಗಣ 

ಪುರಸ್ಕೃತ ಬರಹಗಾರರು: ಡಾ.ಜೆ.ಬಾಲಕೃಷ್ಣ, ಡಾ.ಪಿ.ನಾರಾಯಣಸ್ವಾಮಿ ಹಾಗೂ ಶ್ರೀ.ಶ್ರೀನಿಧಿ 

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನಿರ್ದೇಶಕರಾದ ಡಾ.ಎಚ್.ಹೊನ್ನೇಗೌಡ, ಪಿ.ಇ.ಎಸ್. ಸಂಸ್ಥೆಯ ಪ್ರೊ.ಜಯಗೋಪಾಲ್ ಉಚ್ಚಿಲ್, ವಿಜ್ಞಾನಿ ಪ್ರೊ.ಯು.ಆರ್.ರಾವ್ ಮತ್ತು ಕುವೆಂಪು ವಿ.ವಿ.ಯ ವಿಶ್ರಾಂತ ಕುಲಪತಿಗಳಾದ ಪ್ರೊ.ಎಂ.ಆರ್. ಗಜೇಂದ್ರಗಡ 

ಪ್ರಶಸ್ತಿ ಪುರಸ್ಕೃತರ ಸ್ಕ್ರೋಲ್ ಆಫ್ ಹಾನರ್ 

ಪ್ರೊ.ಯು.ಆರ್.ರವರಿಂದ ಪ್ರಶಸ್ತಿ ಪ್ರದಾನ 

ಪ್ರಶಸ್ತಿ ಪುರಸ್ಕೃತರು ಹಾಗೂ ಗಣ್ಯರು 

ವಿಶೇಷ ಆಹ್ವಾನಿತರು: ಕೃ.ವಿ.ವಿ., ಬೆಂಗಳೂರಿನ ವಿಶ್ರಾಂತ ಕುಲಪತಿಗಳಾದ ಡಾ.ಆರ್.ದ್ವಾರಕೀನಾಥ್, ವಿಜ್ಞಾನ ಸಾಹಿತಿ ನಾಗೇಶ್ ಹೆಗಡೆ ಹಾಗೂ ಇತರರು. 



ಗುರುವಾರ, ಏಪ್ರಿಲ್ 12, 2012

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ



2011-12ರ ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ಕನ್ನಡದಲ್ಲಿ ಪುಸ್ತಕವನ್ನು ಬರೆದು ಪ್ರಕಟಿಸಿರುವ ಲೇಖಕರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ (http://www.kstacademy.org) ನೀಡಲಾಗುವ ಪುರಸ್ಕಾರಕ್ಕೆ ನನ್ನ `ಮಳೆಬಿಲ್ಲ ನೆರಳು' ಕೃತಿಗೆ ವಿಜ್ಞಾನ ವಿಷಯದ ವಿಭಾಗದಲ್ಲಿ `ಶ್ರೇಷ್ಠ ಲೇಖಕರು' ಪ್ರಶಸ್ತಿಗೆ ಆಯ್ಕೆಯಾಗಿದೆಯೆಂದು ತಿಳಿಸಲು ಹರ್ಷಿಸುತ್ತೇನೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಹೀಗೇ ಇರಲಿ.
ಆ ಕೃತಿಯಲ್ಲಿನ ಕೆಲವು ಲೇಖನಗಳು ನನ್ನ ಈ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಸಮಯ ಸಿಕ್ಕಾಗ ಓದಿ ಅಭಿಪ್ರಾಯ ತಿಳಿಸಿ.
ಸೀಲಾಕ್ಯಾಂತ್ ಕಾಲವೇ ಮರೆತಿದ್ದ ಮೀನು: http://antaragange.blogspot.in/2011/05/blog-post_21.html
ಡಾಲ್ಫಿನ್: ಮಾನವನ ಬೌದ್ಧಿಕ ಸಮಜೀವಿ: http://antaragange.blogspot.in/2010/12/blog-post.html
ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ ಅಮರಕತೆ: http://antaragange.blogspot.in/2010/11/blog-post.html
ಅನ್ಯಗ್ರಹ ಜೀವಿಗಳಿವೆಯೆ?: http://antaragange.blogspot.in/2010/10/blog-post.html
`ಕಾಮ'ನಬಿಲ್ಲಿನ ಅನಾವರಣ: http://antaragange.blogspot.in/2010/05/blog-post.html
ನಿಗೂಢ ನಿಯಾಂಡರ್ತಲ್ ಮಾನವ: http://antaragange.blogspot.in/2010/01/blog-post.html

ಶುಕ್ರವಾರ, ಏಪ್ರಿಲ್ 06, 2012

ನೇತ್ರ ತಜ್ಞನ ನೀರ ಕಾಳಜಿ



ಮಾರ್ಚ್ 22 ವಿಶ್ವ ನೀರಿನ ದಿನಾಚರಣೆ. ಆ ದಿನ ಲಿವರ್ ಪೂಲ್ ನಲ್ಲಿ ನೇತ್ರ ವೈದ್ಯರಾಗಿರುವ ಡಾ.ಮಧು ಸೀತಪ್ಪನವರ `ಬಯಲು ಸೀಮೆಯ ಬಾಯಾರಿಕೆ ಹಿಂಗೀತೆ?' ಕೃತಿಯು ಚಿಕ್ಕಬಳ್ಳಾಪುರದಲ್ಲಿ ಬಿಡುಗಡೆಯಾಯಿತು. ಆ ಕೃತಿಗೆ ಲಕ್ಷ್ಮೀಪತಿ ಕೋಲಾರರವರ `ನೇತ್ರ ತಜ್ಞನ ನೀರ ಕಾಳಜಿ' ಎಂಬ ಮುನ್ನಡಿಯಿದ್ದು ಅದರ ಪಠ್ಯ ಇಲ್ಲಿದೆ:




ಲಕ್ಷ್ಮೀಪತಿ ಕೋಲಾರ

ನೀರನ್ನು ‘ನೀಲಿ ಚಿನ್ನ’ ಎಂದು ಕರೆಯುವುದರಲ್ಲೇ ಮುಂಬರುವ ದಿನಗಳಲ್ಲಿನ ಅದರ ಪ್ರಾಮುಖ್ಯತೆಯನ್ನು ನಾವು ಗುರುತಿಸಬಹುದಾಗಿದೆ. ನೀರಿಗೆ ನಿಸರ್ಗದಲ್ಲಿ ‘ಬದಲಿ’ ಎಂಬುದಿಲ್ಲ. ಸಿಹಿನೀರು ಎಂಬುದು ಈ ಭೂಮಿಯ ಮೇಲಿನ ಅತ್ಯಮೂಲ್ಯವಸ್ತುವಾಗಿದೆ. ಭೂಮಿಯಲ್ಲಿ ಆಕ್ರಮಿಸಿಕೊಂಡಿರುವ ಶೇ. ೭೦ ಭಾಗದ ನೀರಿನಲ್ಲಿ ಜಲಚರಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಜೀವಿಗಳ ಪ್ರಾಣ ಪೋಷಕವಾದ ಸಿಹಿನೀರಿನ ಪ್ರಮಾಣ ಕೇವಲ ಶೇ. ೨.೫ರಷ್ಟು ಮಾತ್ರ! ಈ ೨.೫ರಷ್ಟರ ಸಿಹಿನೀರಲ್ಲೂ ಘನರೂಪದ ಮಂಜುಗಡ್ಡೆಯೇ ಶೇ. ೯೦ ಭಾಗದಷ್ಟಿದೆ. ಭೂಮಿಯನ್ನು ಸಮತೋಲನದಲ್ಲಿಟ್ಟಿರುವ ಧ್ರುವ ಪ್ರದೇಶಗಳಲ್ಲಿನ ಮಂಜುಗಡ್ಡೆಗಳನ್ನು ಕರಗಿಸಿದರಂತೂ ಸರ್ವನಾಶ ಕಟ್ಟಿಟ್ಟ ಬುತ್ತಿ. ಹಾಗಾಗಿ ಮಂಜುಗಡ್ಡೆಗಳನ್ನು ಹೊರತುಪಡಿಸಿದರೆ ಉಳಿದ ಭೂಮಿಯ ಮೇಲಿನ ಶೇ. ೦.೨೬ರಷ್ಟರ ಸಿಹಿನೀರಿನ ಮೂಲಗಳೊಂದೇ ಮನುಷ್ಯರಾದಿಯಾಗಿ ಎಲ್ಲ ಜೀವಿಗಳ ಪಾಲಿನ ಏಕೈಕ ಜೀವದ್ರವ್ಯವಾಗಿದೆ. ಈ ಅತ್ಯಂತ ಅಲ್ಪ ಪ್ರಮಾಣದ ನೀರಿನ ಮೂಲಗಳೂ ಈಗ ಅಪಾಯದ ಸುಳಿಯಲ್ಲಿ ಸಿಲುಕಿಕೊಂಡಿವೆ! ನೈಸರ್ಗಿಕವಾದ ಫಿಕ್ಸೆಡ್ ಡಿಪಾಸಿಟ್‌ನಂತಿರುವ ಅಂತರ್ಜಲವೆಂಬುದು ಭೂಮಿಯ ಮೇಲಿರುವ ನಮ್ಮ ಬಳಕೆಗಾಗಿ ಇರುವುದಿಲ್ಲವಾದರೂ ದುರಾಸೆಯಿಂದ ಪೀಡಿತರಾದ, ಆಧುನಿಕರೆಂದು ಬೀಗುವ ಮನುಷ್ಯರಾದ ನಾವು ಬೋರ್‌ವೆಲ್‌ಗಳೆಂಬ ಯಂತ್ರಗಳ ಮೂಲಕ ಹೊರತೆಗೆದು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿರುವುದರಿಂದ ಅಂತರ್ಜಲವೇ ಬತ್ತಿ ೧೦೦೦ದಿಂದ ೨೦೦೦ ಅಡಿಗಳ ಆಳ ಮುಟ್ಟಿ ನಿಂತಿದೆ! ಹೀಗೆ ನೀರನ್ನು ಕುರಿತು ತಮ್ಮ ಅಜ್ಞಾನ, ಅಸಡ್ಡೆಗಳ ಕಾರಣದಿಂದಲೇ ಇಡೀ ಭೂಮಿಯಲ್ಲಿ ಜಲಕ್ಷಾಮವು ಸೃಷ್ಟಿಯಾಗುತ್ತಿದೆ.
ಮತ್ತೂ ದುರಂತದ ಸಂಗತಿಯೇನೆಂದರೆ, ನಮ್ಮ ಜೀವಪೋಷಕಕ್ಕೆ ಲಭ್ಯವಿರುವ ಕೇವಲ ೦.೨೬ರಷ್ಟರ ಸಿಹಿನೀರಲ್ಲೂ ಶೇ. ೭೦ ಭಾಗಕ್ಕಿಂತಲೂ ಹೆಚ್ಚಿನಂಶವು ಕೃಷಿ ಉದ್ದೇಶಗಳಿಗೇ ಬಳಕೆಯಾಗುತ್ತಿದೆ. ಉಳಿಕೆಯ ಅತ್ಯಲ್ಪವಾದ ೦.೬ ಅಥವಾ ೦.೭ರಷ್ಟು ಪ್ರಮಾಣದ ನೀರಲ್ಲಿ ಬೃಹತ್ ಕೈಗಾರಿಕೆಗಳು, ಕಟ್ಟಡ-ಅಣೆಕಟ್ಟೆಗಳ ಕೆಲಸಗಳು ತಮ್ಮ ಸಿಂಹಪಾಲನ್ನು ನಿರ್ದಾಕ್ಷಿಣ್ಯವಾಗಿ ಬಳಸುತ್ತಿವೆ. ಉಳಿದದ್ದರಲ್ಲಿ ಮನುಷ್ಯ, ಪಶುಪಕ್ಷಿ ಪ್ರಾಣಿಗಳಾದಿಯಾಗಿ ಎಲ್ಲ ಜೀವಸಂಕುಲದ ಜೀವನ್ಮರಣದ ಪ್ರಶ್ನೆಯನ್ನು ಪ್ರಕೃತಿ ಹೇಗೋ ನಿಬಾಯಿಸುತ್ತಿದೆ. ಆದ್ದರಿಂದಲೇ ನೀರನ್ನು ನೀಲಿ ಚಿನ್ನವೆಂದು ತಜ್ಞರು ಕರೆದಿರುವುದು. ಬಲ್ಲವರು ಊಹಿಸಿರುವಂತೆ ಮುಂಬರುವ ದಿನಗಳಲ್ಲಿನ ಜಾಗತಿಕ ಯುದ್ಧಗಳು ನೀರಿಗಾಗಿಯೇ ನಡೆಯುತ್ತವೆ. ಗಾಭರಿ ಹುಟ್ಟಿಸುವ ಈ ಅಂಕಿ ಅಂಶಗಳಾಚೆಗೂ ನಾವು ಚರ್ಚೆಯನ್ನು ವಿಸ್ತರಿಸಿ ನೋಡಬಹುದಾಗಿದೆ. ನಮಗೀಗ ಲಭ್ಯವಿರುವ ೦.೨೬ರಷ್ಟರ ನೀರೇ ಸಾಕಾಗುವಂತಿದೆ, ಆದರೆ ನಾವು ವಿವೇಕಯುತವಾಗಿ ಬಳಸಿದಲ್ಲಿ ಮಾತ್ರ! ನೀರನ್ನು ಅಮೂಲ್ಯವೆಂದು ಪರಿಗಣಿಸದೆ ಪೋಲು ಮಾಡುತ್ತಿರುವುದರಿಂದ, ಅಂದರೆ ಮಳೆ ನೀರು ವ್ಯರ್ಥವಾಗಿ ಹರಿದು ಮೋರಿ-ಚರಂಡಿಗಳನ್ನು ಸೇರಿ ಕಲುಷಿತಗೊಂಡು ಬಳಕೆಗೆ ಬಾರದಂತಾಗುತ್ತಿರುವುದು; ಬಳಕೆಯ ನಂತರದ ಹೆಚ್ಚುವರಿ ನದಿಗಳ ನೀರು ಸಮುದ್ರಗಳನ್ನು ಸೇರಿ ಉಪ್ಪುನೀರಾಗಿ ಪರಿವರ್ತನೆಗೊಳ್ಳುತ್ತಿರುವುದು; ಇತ್ಯಾದಿಯೊಂದೇ ಜಲಕ್ಷಾಮಕ್ಕೆ ಕಾರಣವಾಗುತ್ತಿಲ್ಲ. ಬದಲಿಗೆ ಇತಿಹಾಸವೆಂದೂ ಕಂಡು ಕೇಳರಿಯದಂತಹ ಜನಸಂಖ್ಯಾ ಬಾಹುಳ್ಯವೂ ಸಿಹಿನೀರಿನ ಮೇಲೆ ತೀವ್ರವಾದ ಒತ್ತಡವನ್ನು ಹೇರಿದೆಯೆಂಬದೂ ಗಮನಾರ್ಹ. ಇದೂ ಸಾಲದೆಂಬಂತೆ- ಗಾಯದ ಮೇಲೆ ಉಪ್ಪು ಸವರಿದಂತೆ, ಭೂಮಿಯ ಮೇಲಿನ ಸಿಹಿನೀರು ಮತ್ತು ಅಂತರ್ಜಲ ಖಾಲಿಯಾಗುತ್ತಿರುವಷ್ಟರ ಪ್ರಮಾಣದಲ್ಲಿ ಸಮುದ್ರಗಳ ಉಪ್ಪು ನೀರು ಆವಿಯಾಗಿ ಸಿಹಿನೀರಾಗಿ ಪರಿವರ್ತನೆಗೊಂಡು ಮಳೆಯ ರೂಪದಲ್ಲಿ ನಮಗೆ ಪುನರ್ ಲಭ್ಯವಾಗುತ್ತಿಲ್ಲದಿರುವುದೂ ಕೂಡ ನೀರಿನ ಸಮಸ್ಯೆ ದುಪ್ಪಟ್ಟುಗೊಂಡು ಜೀವನ್ಮರಣದ ಆತಂಕವೊಂದು ಇಂದು ನಮಗೆದುರಾಗಿದೆ. ಇಂತಹ ಆತಂಕದ ಪ್ರಶ್ನೆಗಳನ್ನೆಲ್ಲಾ ತನ್ನೆದುರಿಗಿಟ್ಟುಕೊಂಡು ನೀರಿನ ಮೂಲಕದ ಜೀವಕಾಳಜಿಯ ಹೋರಾಟವೊಂದನ್ನು ಸದ್ದಿಲ್ಲದೆ ಪ್ರಾರಂಭಿಸಿದವರು ಲಂಡನ್‌ನಲ್ಲಿ ನೇತ್ರ ತಜ್ಞರಾಗಿರುವ ಡಾ. ಮಧು ಸೀತಪ್ಪನವರು. ಮಧು ನಮ್ಮೂರಿನವರಾದ್ದರಿಂದ ನನಗೆ ಹಳೇ ಪರಿಚಯದ ಸ್ನೇಹಿತರು. ಬೆಂಗಳೂರಿಗೆ ಅವರು ಬಂದು ಭೇಟಿಯಾದಾಗಲೇ ಅಥವಾ ಅವರ ನೆನಪಾದಾಗಲೋ ನನಗೆ ‘ಅಸಾಧ್ಯವಾದದ್ದನ್ನು ಸಾಧ್ಯವಾಗಿಸಲೇಬೇಕೆಂಬ ಅಖಂಡ ಆತ್ಮವಿಶ್ವಾಸದ ವ್ಯಕ್ತಿತ್ವ’ವೊಂದರ ಸಾಮೀಪ್ಯದ ಅನುಭವವಾಗುತ್ತದೆ. ಆರು ಅಡಿಗೂ ಮಿಗಿಲು ಎತ್ತರದ ಈ ಮಧು ಎಂಬ ಮನುಷ್ಯ ಅಗಾಧವಾದ ನೆನಪಿನ ಶಕ್ತಿ, ವಿಪುಲ ಮಾಹಿತಿ ಹಾಗೂ ಅನ್ಯಜ್ಞಾನ ಶಿಸ್ತುಗಳೆಲ್ಲದರಲ್ಲೂ ಹೊಕ್ಕಾಡಿ ಬಂದ ಬಹುಶ್ರುತರಂತೆ ಗೋಚರಿಸಿ, ತನ್ನ ಆರ್ಜಿತ ಜ್ಞಾನವನ್ನೆಲ್ಲ ಸಾಮಾಜಿಕ ನ್ಯಾಯಬದ್ಧತೆಯ ಯೋಜನೆಗಳಿಗೆ ಅನ್ವಯಿಸಿ ಕಾರ್ಯಾನುಷ್ಠಾನಗೊಳಿಸಲೇಬೇಕೆಂಬ ಛಲದ ತೀವ್ರತೆಯನ್ನು ಮತ್ತು ಅದರ ಶಾಖವು ಆರದಂತೆ ಕಾಯ್ದುಕೊಳ್ಳುವ ಬಗೆಯನ್ನು ಕಂಡಾಗಲೇ ಆ ಎತ್ತರವೆಂಬುದು ಕೇವಲ ಭೌತಿಕವಾದದ್ದಲ್ಲ ಎಂದೇ ಅನಿಸುತ್ತದೆ. ಇದು ಬಹುಶಃ ಸಮಾಜಮುಖಿಯಾಗಿ ಸದಾ ಚಟುವಟಿಕೆಯಿಂದಿರುವ ಅವರ ತಾಯಿ ಶ್ರೀಮತಿ ಬಿ. ಶಾರದ ಸೀತಪ್ಪನವರ ಗುಣವೆನಿಸುತ್ತದೆ.
ಮಧು ಬಾಲ್ಯದಲ್ಲೇ ಒಬ್ಬ ಕ್ರೀಡಾಪಟುವಾಗಿ ನನ್ನ ನೆನಪಿನ ಲೋಕವನ್ನು ಪ್ರವೇಶಿಸಿದವರು. ನಮ್ಮಿಬ್ಬರ ಮನೆಗಳು ಕೂದಲೆಳೆಯ ದೂರದಲ್ಲಿದ್ದವೆಂಬುದನ್ನು ಬಿಟ್ಟರೆ ನನಗೂ ಮಧುವಿಗೂ ಆಗ ಅಂತಹ ನಿಕಟ ಸಂಪರ್ಕವೇನಿರಲಿಲ್ಲ. ನಾನಂತೂ ಆಗ ದಲಿತ ಚಳುವಳಿಯಲ್ಲಿ ಮುಳುಗಿ ಹೋಗಿದ್ದೆ. ಚಳುವಳಿಗಳಲ್ಲಿದ್ದೆವಾದ ಕಾರಣ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧವೂ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದೆವು. ಅಂತಹ ಕೆಲವು ಸಂದರ್ಭಗಳಲ್ಲಿ ಶ್ರೀಮತಿ ಬಿ. ಶಾರದ ಸೀತಪ್ಪನವರೂ ಭಾಗವಹಿಸುತ್ತಿದ್ದರಾಗಿ ಅವರ ಪರಿಚಯ ನನಗೆ ಅಲ್ಪಸ್ವಲ್ಪವಿತ್ತು. ಎಸ್.ಎಫ್.ಐ.ನಲ್ಲಿದ್ದ ಜಿ.ಸಿ.ಬಯ್ಯಾರೆಡ್ಡಿಯವರು ಮಧು ಅವರ ತಂದೆಯ ಕಡೆಯ ಸಂಬಂಧಿ ಯಾದ್ದರಿಂದಲೂ, ಸಮಾನ ಮನಸ್ಕರಾದ ನಾನು ಮತ್ತು ಬಯ್ಯಾರೆಡ್ಡಿಯವರಿಬ್ಬರೂ ವ್ಯವಸ್ಥೆಯ ವಿರೋಧೀ ಹೋರಾಟಗಳಲ್ಲಿ ತೊಡಗಿಕೊಂಡಿದ್ದೆವಾದ್ದರಿಂದಲೂ ಈ ಸಂಬಂಧ ಇನ್ನಷ್ಟು ಹತ್ತಿರವಾಯಿತು. ಕೊನೆಗೆ ಸಾಹಿತ್ಯ, ಚಳವಳಿ ಹಾಗೂ ಸಂಸ್ಕೃತಿ ಚಿಂತನೆಗಳ ಸಮಾನ ಕಾರಣಗಳಿಂದಾಗಿ ಒಗ್ಗೂಡಿದ್ದ ಕೋಲಾರದ ಪ್ರಗತಿಪರ ಮಿತ್ರರ ಬಳಗದಲ್ಲಿದ್ದ ಡಾ. ಜೆ. ಬಾಲಕೃಷ್ಣ ಅವರು ಆ ಮನೆಯ ನೆಂಟನಾದನಂತರ ನಾನೂ ಆ ಕುಟುಂಬಕ್ಕೆ ತೀರಾ ಹತ್ತಿರವಾಗುವಂತಾಯಿತು. ಅಂದಿನಿಂದಲೂ ಮಧು ಅವರೊಂದಿಗಿನ ಸ್ನೇಹ ಅಬಾಧಿತವಾಗಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲೇ ನಾವು ಆಗೀಗ ಭೇಟಿಯಾಗುತ್ತಿದ್ದುದು.
ಕಳೆದ ಕೆಲವು ವರ್ಷಗಳಿಂದಲೂ ಮಧುವಿಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೂ ಒಳಗೊಂಡಂತೆ ಇಡೀ ಈ ಬಯಲು ಸೀಮೆಯ ನಿರಂತರ ಬರಗಾಲದ ಭೀಕರ ಪರಿಸ್ಥಿತಿ, ಅಂತರ್ಜಲವು ಪಾತಾಳ ಸೇರಿ, ಫ್ಲೋರೈಡ್‌ಯುಕ್ತ ವಿಷಮಯ ನೀರು ಮಾತ್ರ ಬಳಕೆಗೆ ಸಿಗುತ್ತಿರುವುದರ ಭಯಾನಕತೆ ಹಾಗೂ ಭವಿಷ್ಯದ ದಿನಗಳ ಜಲಕ್ಷಾಮವು ದುಃಸ್ವಪ್ನವಾಗಿ ಕಾಡುತ್ತಿರುವುದನ್ನು ನಾನೂ ಸೂಕ್ಷ್ಮವಾಗಿಯೇ ಗಮನಿಸಿದ್ದೆ. ದೂರದ ಲಂಡನ್‌ನಲ್ಲಿದ್ದುಕೊಂಡೇ ಇಲ್ಲಿನ ಜಲಕ್ಷಾಮದ ಧಾವಂತದ ಹೆಜ್ಜೆ ಗುರುತುಗಳನ್ನು ಮಧು ಆತಂಕದಿಂದ ಗಮನಿಸುತ್ತಿದ್ದರು. ಬಹುಶಃ; ಇಂತಹ ಆತಂಕಗಳ ದೆಸೆಯಿಂದಾಗಿಯೇ ಅವರು ಈ ಭಾಗದ ಶಾಶ್ವತ ನೀರಾವರಿ ಹೋರಾಟಗಾರರಿಗೆ ಹತ್ತಿರವಾದಂತೆಯೇ, ಇಂಜಿನಿಯರ್ ಪರಮಶಿವಯ್ಯನವರಿಗೂ ಹತ್ತಿರವಾದಂತಿದೆ. ಪರಮಶಿವಯ್ಯನವರು ಮಲೆನಾಡಿನ ನೇತ್ರಾವತಿ ಜಲಾನಯನ ಪ್ರದೇಶದ ಶೇ. ಹತ್ತುಭಾಗದ ಪ್ರದೇಶದಲ್ಲಿನ ಮಳೆ ಕೊಯ್ಲಿನ ಮೂಲಕ, ಸಮುದ್ರಕ್ಕೆ ವ್ಯರ್ಥವಾಗಿ ಸೇರಿಹೋಗುವ ಹತ್ತು ವರ್ಷಗಳ ಸರಾಸರಿ ನೀರಿನಷ್ಟು ಪ್ರಮಾಣದ ಮಳೆನೀರನ್ನು ಮಾತ್ರ ಸಂಗ್ರಹಿಸಿ, ಅದನ್ನು ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಂತಹ ಬರಪೀಡಿತ ಜಿಲ್ಲೆಗಳ ಕೆರೆಗಳಿಗೆ ಹರಿಸುವ ಕುರಿತು ವೈಜ್ಞಾನಿಕ ವರದಿಯನ್ನು ಸಲ್ಲಿಸಿ, ಅದರ ಅನುಷ್ಠಾನಕ್ಕಾಗಿ ಪರಿತಪಿಸುತ್ತಿರುವವರು. ಹೀಗಾಗಿ ಸಹಜವಾಗಿಯೇ ಮಧು ಅವರು ಪರಮಶಿವಯ್ಯ ನವರಿಗೆ ಹತ್ತಿರದವರಾದರು, ಆಪ್ತರಾದರು. ಒಂದೆರಡು ವರ್ಷಗಳ ಹಿಂದೆಯೇ ನಾನೂ ಮಧುವಿನ ಜೊತೆ ಪರಮಶಿವಯ್ಯನವರನ್ನು ಹಲವಾರು ಬಾರಿ ಭೇಟಿಯಾಗಿ ಅವರ ವರದಿಯ ಕುರಿತು ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದೆ. ಪರಮಶಿವಯ್ಯನವರ ವರದಿಯನ್ನು ಸಹಜವಾಗಿಯೇ ಕರಾವಳಿ ಭಾಗದ ರಾಜಕೀಯ ಧುರೀಣರು, ಪರಿಸರವಾದಿಗಳು ತೀವ್ರವಾಗಿಯೇ ವಿರೋಧಿಸುತ್ತಿದ್ದರು. ಆದರೆ ಹೀಗೆ ವಿರೋಧಿಸುವವರಲ್ಲಿ ಬಹುತೇಕ ಮಂದಿ ಪರಮಶಿವಯ್ಯನವರ ವರದಿಯನ್ನು ಅಧ್ಯಯನ ಮಾಡಿದವರೂ ಅಲ್ಲ, ಕನಿಷ್ಟ ಅದರ ಸಂಕ್ಷಿಪ್ತವೂ, ನಿಖರವೂ ಆದ ಮಾಹಿತಿಯನ್ನೂ ಪಡೆದವರಲ್ಲ.

ಪರಮಶಿವಯ್ಯ

ಕರಾವಳಿ ಭಾಗದ ಜನರಿಗೆ ತಮ್ಮ ನೆಲದಲ್ಲಿ ಹರಿಯುವ ನೇತ್ರಾವತಿ ನದಿಯ ಹರಿದ ದಿಕ್ಕನ್ನೇ ಬದಲಿಸಿ ಇಡೀ ನೇತ್ರಾವತಿ ನದಿಯನ್ನೇ ಬಯಲು ಸೀಮೆಯಲ್ಲಿ ಹರಿಯುವಂತೆ ಮಾಡಿಕೊಳ್ಳುತ್ತಾರೆಂಬ ವಿಪರೀತದ ಕಲ್ಪನೆಯಿದ್ದು. ಆ ಕಾರಣಕ್ಕಾಗಿಯೇ ಅವರು ಪರಮಶಿವಯ್ಯನವರ ವರದಿಯನ್ನು ‘ನೇತ್ರಾವತಿ ನದಿ ತಿರುವು ಯೋಜನೆ’ ಎಂದೇ ತಪ್ಪು ತಪ್ಪಾಗಿ ಪ್ರಚುರಗೊಳಿಸಿ ಕರಾವಳಿ ಪ್ರದೇಶದ ಸಮುದಾಯದಲ್ಲಿ ಭಾವನಾತ್ಮಕ ವಿರೋಧದ ಬಹುದೊಡ್ಡ ಅಲೆಯನ್ನು ಹುಟ್ಟು ಹಾಕಿದರು. ಉಳಿದಂತೆ ಪರಿಸರವಾದಿಗಳ ಆತಂಕಗಳೆಲ್ಲವೂ ನಮ್ಮ ಆತಂಕಗಳು ಕೂಡ. ಆದರೆ ನೈಸರ್ಗಿಕವಾದ ಏನೊಂದನ್ನೂ ಬದಲಿಸಲೇ ಕೂಡದೆಂಬ ಹಠಮಾರಿ ನಿಲುವು ಅನೇಕ ಪರಿಸರವಾದಿಗಳಲ್ಲಿರುವುದನ್ನು ನಾನು ಗಮನಿಸಿದ್ದೇನೆ. ಅದಕ್ಕೆ ಬದಲಾಗಿ ಪರಮಶಿವಯ್ಯನವರ ವರದಿಯನ್ನು ಅನುಷ್ಠಾನಗೊಳಿಸಿದರೆ ಆಗಬಹುದಾದ ಪರಿಸರ ಹಾನಿಯನ್ನು ತಡೆಗಟ್ಟುವುದು ಹೇಗೆಂಬ ಬಗ್ಗೆ ಚಿಂತಿಸುವುದು ಹೆಚ್ಚು ಸೂಕ್ತವಾದದ್ದು. ಯಾಕೆಂದರೆ ಗುಂಡ್ಯಾ ಜಲವಿದ್ಯುತ್ ಯೋಜನೆಯಲ್ಲಿನಂತೆ ಆರು ಸಾವಿರ ಹೆಕ್ಟೇರುಗಳ ಕಾಡುನಾಶದ ಸಮಸ್ಯೆ ಇಲ್ಲಿಲ್ಲ. ಕೇವಲ ೨೯೫ ಹೆಕ್ಟೇರುಗಳಷ್ಟು ಅರಣ್ಯ ಪ್ರದೇಶವು ಮಾತ್ರ ನೇತ್ರಾವತಿ ಜಲಾನಯನ ಪ್ರದೇಶದ ಶೇ. ಹತ್ತು ಭಾಗದಲ್ಲಿನ ಮಳೆ ಕೊಯ್ಲು ಪದ್ಧತಿಯ ಮೂಲಕ ಸಂಗ್ರಹಿಸಲಾಗುವ ನೀರನ್ನು ಹರಿಸಲು ಅಗತ್ಯವಾಗುವ ಕಾಲುವೆಗಳ ನಿರ್ಮಾಣಕ್ಕಾಗಿ ಬೇಕಾಗುತ್ತದೆಂದು ಮಧು ಅವರು ತಮ್ಮ ಲೇಖನಗಳ ಉದ್ದಕ್ಕೂ ಪದೇ ಪದೇ ಪ್ರಸ್ತಾಪಿಸಿದ್ದಾರೆ. ಜೊತೆಗೆ ಅರಣ್ಯ ಪ್ರದೇಶದಲ್ಲಿ ಈ ಯೋಜನೆಗಾಗಿ ಅಣೆಕಟ್ಟು ನಿರ್ಮಿಸಬೇಕಾದ ಅಗತ್ಯವೇ ಇಲ್ಲ. ಜಲಸಂಗ್ರಹಾಗಾರವು ಕೂಡ ಅರಣ್ಯ ಪ್ರದೇಶದಲ್ಲಿರುವುದಿಲ್ಲ. ಈ ಯೋಜನೆಯ ಅನುಷ್ಠಾನದ ನಂತರವೂ ಕೂಡ ನೇತ್ರಾವತಿ ನದಿ ಎಂದಿನಂತೆಯೇ ತನ್ನ ಮಾಮೂಲು ಪಾತ್ರದಲ್ಲಿಯೇ ಹರಿಯುತ್ತದೆ. ಆದರೆ ನೇತ್ರಾವತಿ ನದಿಯ ನೀರಿನ ಗರಿಷ್ಠ ಪ್ರಮಾಣದ ಬಳಕೆಯ ನಂತರದಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ಹತ್ತು ವರ್ಷಗಳ ಸರಾಸರಿ ಪ್ರಮಾಣದ ನೀರನ್ನು ಮಾತ್ರ ಮಳೆಕೊಯ್ಲಿನ ಪದ್ಧತಿಯ ಮೂಲಕ ಸಂಗ್ರಹಿಸಿ ‘ಗಾರ್ಲೆಂಡ್ ಕೆನಾಲ್’ ಮೂಲಕ ಹರಿಸಲಾಗುವುದೆಂದು ಮಧು ಅವರು ಪರಮಶಿವಯ್ಯನವರ ವರದಿಯನ್ನಾಧರಿಸಿ ವಿವರಗಳನ್ನು ಒದಗಿಸಿದ್ದಾರೆ.
ಮಧು ಅವರು ಪರಮಶಿವಯ್ಯನವರ ವರದಿಯ ಕುರಿತಂತೆ ಎದ್ದಿರುವ ಅನುಮಾನಗಳಿಗೆಲ್ಲಾ ತಮ್ಮ ಲೇಖನಗಳ ಉದ್ದಕ್ಕೂ ಸಮರ್ಪಕ ಹಾಗೂ ಸಮರ್ಥ ರೀತಿಯ ಪರಿಹಾರಗಳನ್ನು ಕೂಡ ಸೂಚಿಸಿದ್ದಾರೆ. ಉದಾಹರಣೆಗೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊಯ್ಲು ಪದ್ಧತಿಯ ಮೂಲಕ ನೀರು ಸಂಗ್ರಹಿಸುವುದರಿಂದ ಆಗುವ ಪರಿಸರ ಹಾನಿಗಿಂತಲೂ ಹೆಚ್ಚಿನ ಪ್ರಮಾಣದ ಪರಿಸರ ಸಮತೋಲನದ ಕೆಲವು ಬಯಲು ಸೀಮೆಯ ಪ್ರದೇಶದಲ್ಲಿ ಆಗುವುದರಿಂದ ಒಟ್ಟಾರೆಯಾಗಿ ಈ ವರದಿಯು ಪರಿಸರ ವಿರೋಧಿಯಲ್ಲವೆಂದು ವಾದಿಸುತ್ತಾರೆ. ಬಯಲು ಸೀಮೆಯಲ್ಲಿನ ಸಹಸ್ರಾರು ಕೆರೆಗಳಿಗೆ ಈ ನೀರು ಹರಿಯುವುದರಿಂದ ಒಟ್ಟಾರೆ ಈ ಪ್ರದೇಶದ ಅಂತರ್ಜಲದ ಮಟ್ಟವು ಹೆಚ್ಚಿ, ಆ ಮೂಲಕ ಹಸಿರು ಕೂಡ ಕಂಗೊಳಿಸಬಲ್ಲದು. ಪ್ಲೋರೈಡ್‌ನ ಸಮಸ್ಯೆಯೂ ಪರಿಹಾರವಾಗಿ ಬಯಲು ಸೀಮೆಯ ಮಕ್ಕಳ ಹಲ್ಲು ಮತ್ತು ಮೂಳೆಗಳು ಊನಗೊಳ್ಳದೆ ಸುರಕ್ಷಿತವಾಗಿರಬಲ್ಲವು. ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವುದ ರೊಂದಿಗೆ ಕೃಷಿ ಚಟುವಟಿಕೆಗಳು ಚುರುಕಾಗಿ, ಉತ್ಪಾದನೆಯೂ ಹೆಚ್ಚಿ, ಆತ್ಮಹತೆ ಮತ್ತು ಸಾಲಗಳ ಅಡ್ಡಕತ್ತರಿಯಲ್ಲಿ ಸಿಕ್ಕಿಕೊಂಡಿರುವ ರೈತಾಪಿ ಸಮುದಾಯದ ಬದುಕಗಳೂ ಉತ್ತಮಗೊಳ್ಳುತ್ತವೆ; ಅವರು ಉಸಿರಾಡುವುಂತಾಗುತ್ತದೆಂಬುದು ಮಧು ಅವರ ಕಾಳಜಿ ವತ್ತು ನಿಲುವು.
ಮಧು ಅವರು ತಮ್ಮ ಲೇಖನಗಳಲ್ಲಿ ಮಂಡಿಸಿರುವ ಕೆಲವು ಅಂಶಗಳು ಪರಿಸರ ಕುರಿತ ಕುರುಡು ವಾದಗಳಿಗೆ ಮತ್ತು ಪರಮಶಿವಯ್ಯನವರ ವರದಿಯ ಕುರಿತ ತಪ್ಪು ಅಭಿಪ್ರಾಯಗಳಿಗೆ ಉತ್ತರವೆಂಬಂತಿರುವುದನ್ನು ಓದುಗರು ಗಮನಿಸಬಹುದಾಗಿದೆ. ಕೆಲವು ಅಂಶಗಳ ಸ್ಯಾಂಪಲ್ ಹೀಗಿವೆ: (೧) ಪ್ರತಿ ವರ್ಷ ಕನಿಷ್ಠ ೨,೫೦೦ ಟಿ.ಎಂ.ಸಿ.ಗಳಷ್ಟು ನೀರು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಂದ ಅರಬ್ಬಿ ಸಮುದ್ರಕ್ಕೆ ಹರಿದುಹೋಗುತ್ತಿದೆ. (೨) ೨೦೨೦ರ ಹೊತ್ತಿಗೆ ನಮ್ಮ ರಾಜ್ಯವೊಂದರಲ್ಲೇ ಸುಮಾರು ೨೦ ದಶಲಕ್ಷ ಜನ ನೀರಿನ ಅಭಾವದ ಕಾರಣದಿಂದಾಗಿಯೇ ಸ್ಥಳಾಂತರಗೊಳ್ಳಬೇಕಾಗುತ್ತದೆ. (೩) ಪರಮಶಿವಯ್ಯನವರ ವರದಿಯ ಪ್ರಕಾರ ಕರಾವಳಿ ಜಿಲ್ಲೆಗಳ ೨ ಲಕ್ಷ ರೈತರಿಗೂ ವರ್ಷದ ೨೪ ಗಂಟೆಗಳ ಕಾಲವೂ ನೀರು ಒದಗಿಸಬಹುದಲ್ಲದೆ, ಕುಡಿಯುವ ನೀರನ್ನೂ ಪೂರೈಸಬಹುದು. (೪) ನೇತ್ರಾವತಿ ಜಲಾನಯನ ಪ್ರದೇಶದಲ್ಲಿನ ಮಳೆಕೊಯ್ಲಿನ ಮೂಲಕ ಸಂಗ್ರಹಿಸಲಾಗುವ ನೀರನ್ನು ಗುರುತ್ವಾಕರ್ಷಣೆಯ ಮೂಲಕವೇ ಬಹುತೇಕ ಭಾಗಗಳಿಗೆ ಹರಿಸಬಹುದಾಗಿದ್ದು, ವಿದ್ಯುಚ್ಛಕ್ತಿಯ ಹೆಚ್ಚಿನ ಅಗತ್ಯವಿರುವುದಿಲ್ಲ. (೫) ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಶೇ. ೫೦ರಷ್ಟು ಒಳರೋಗಿಗಳು ಕಲುಷಿತ ನೀರಿನಿಂದ ಬರುವ ಸಾಂಕ್ರಾಮಿಕ ರೋಗಗಳನ್ನು ಹೊಂದಿರುತ್ತಾರೆ. (೬) ನಾವು ಈ ಭೂಮಿಯ ಮೇಲೆ ಲಭ್ಯವಿರುವ ಸಿಹಿನೀರಿನ ಒಟ್ಟು ಪ್ರಮಾಣದಲ್ಲಿನ ಶೇ. ೧ರಷ್ಟನ್ನು ಮಾತ್ರ ಉಪಯೋಗಿಸುತ್ತಿದ್ದು, ಉಳಿದ ನೀರು ಸಮುದ್ರಕ್ಕೆ ವ್ಯರ್ಥ ಹರಿದುಹೋಗುತ್ತಿದೆ. (೭) ನೀರಿನ ತೀವ್ರ ಅಭಾವದಿಂದ ಬೆಂಗಳೂರಿನಿಂದ ಕೇವಲ ೭೦ ಕಿ.ಮೀ.ಗಳ ದೂರದ ಪಾವಗಡದಲ್ಲಿ ನೆಲದ ಮರುಭೂಮೀಕರಣದ ಅಪಾಯವು ಈಗಾಗಲೇ ಎದುರಾಗಿದೆ. (೮) ನೇತ್ರಾವತಿ ನದಿಯ ೫೨೧ ಟಿ.ಎಂ.ಸಿ.ಯಷ್ಟು ನೀರು ಪ್ರತಿವರ್ಷ ಸಮುದ್ರದ ಪಾಲಾಗುತ್ತಿದ್ದು, ಅದರ ಪೈಕಿ ೪೨೧ ಟಿ.ಎಂ.ಸಿ.ಯಷ್ಟು ನೀರು ಮೇ-ಸೆಪ್ಟೆಂಬರ್ ತಿಂಗಳುಗಳ ನಡುವಿನ ಮಳೆಗಾಲದಲ್ಲೇ ಸಮುದ್ರದ ತೆಕ್ಕೆಗೆ ಬೀಳುತ್ತಿದೆ. ಅದರ ಪೈಕಿ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರನ್ನು ಮಾತ್ರ ಪರಮಶಿವಯ್ಯನವರು ರೂಪಿಸಿರುವ ಯೋಜನೆಯ ಮೂಲಕ ಬಯಲು ಸೀಮೆಗೆ ಹರಿಸಲು ಉದ್ದೇಶಿಸಿರುವುದು. ಆದ್ದರಿಂದ ನೇತ್ರಾವತಿ ನದಿಯ ನೀರಿಗೆ ಸಮುದ್ರದ ನೀರು ನುಗ್ಗಿ ಉಪ್ಪಿನಾಂಶ ಹೆಚ್ಚುವುದರಿಂದ ಜಲಚರಗಳ ಸಿಹಿನೀರು ಮತ್ತು ಆಹಾರಕ್ಕೆ ತೊಂದರೆಯಾಗುತ್ತದೆಂಬುದು ಕೇವಲ ಊಹೆ ಮತ್ತು ಹಾಸ್ಯಾಸ್ಪದ ವಿಚಾರವಾಗಿದೆ. ಮಳೆಗಾಲದ ನೇತ್ರಾವತಿಯ ನೀರಿನಲ್ಲಿ ಶೇ. ೧೦ ಭಾಗ ಕಡಿಮೆಯಾಗುವುದರಿಂದಲೇ ಸಮುದ್ರದ ನೀರು ನದಿಗೆ ನುಗ್ಗುವುದಾದರೆ ಬತ್ತದಂತೆ ಹರಿಯುವ ಬೇಸಿಗೆಯಲ್ಲಿನ ಕಥೆಯೇನು (೯) ೪೨ ಟಿ.ಎಂ.ಸಿ. ನೀರು ಸಮುದ್ರಕ್ಕೆ ಹರಿಯುವುದನ್ನು ತಪ್ಪಿಸಿದ ಕೂಡಲೇ ಸಮುದ್ರದ ಲವಣಾಂಶವು ಹೆಚ್ಚಿ ಮೀನುಗಾರರಿಗೆ ತೊಂದರೆಯಾಗುತ್ತದೆನ್ನು ವವರು ಅದೇ ಕರಾವಳಿ ಪ್ರದೇಶದಲ್ಲಿ ಅದೇ ಅರಬ್ಬಿ ಸಮುದ್ರಕ್ಕೆ ಪ್ರತಿವರ್ಷ ೨೧ ಸಣ್ಣ್ಣ ನದಿಗಳಿಂದ ೨೦೦೦ ಟಿ.ಎಂ.ಸಿ.ಯಷ್ಟು ಸಿಹಿ ನೀರು ಸೇರುತ್ತಿದೆಯೆಂಬುದನ್ನು ಮರೆತಿರುತ್ತಾರೆ. ಜೊತೆಗೆ ಸಮುದ್ರದ ಮೇಲೆ ಬೀಳುವ ಮಳೆಯಿಂದಾಗಿ ಸಹಸ್ರಾರು ಟಿ.ಎಂ.ಸಿ.ಗಳಷ್ಟು ಸಿಹಿನೀರು ಸಮುದ್ರಕ್ಕೆ ಬೆರೆಯುತ್ತಲೇ ಇರುತ್ತದೆಂಬೂದೂ ನಮ್ಮ ಗಮನದಲ್ಲಿರಬೇಕು. (೧೦) ೪೨ ಟಿ.ಎಂ.ಸಿ.ಗಳಷ್ಟು ಸಿಹಿನೀರಿನ ಕೊರತೆಯ ದೆಸೆಯಿಂದಾಗುವ ಏರುಪೇರನ್ನು ಸಹಿಸಿ ಸಮದೂಗಿಸಿಕೊಳ್ಳಬಲ್ಲ ಶಕ್ತಿ ಅರಬ್ಬಿ ಸಮುದ್ರ ಹಾಗೂ ಮಲೆನಾಡಿನ ಪ್ರಕೃತಿಗಿದೆ. (೧೧) ೧೯ನೇ ಶತಮಾನದ ಕೊನೆಯವರೆಗೂ ಕಾವೇರಿ ನದಿಯ ೭೦೦ ಟಿ.ಎಂ.ಸಿ. ನೀರು ಹಾಗೂ ಕೃಷ್ಣಾನದಿಯ ೨೦೬೦ ಟಿ.ಎಂ.ಸಿ. ನೀರು ಬಂಗಾಳ ಕೊಲ್ಲಿಯನ್ನು ಸೇರುತ್ತಿತ್ತು. ಆದರೆ ಈಗ ಈ ಎರಡೂ ನದಿಗಳಿಂದ ಕೇವಲ ೬೫ ಟಿ.ಎಂ.ಸಿ.ಯಷ್ಟು ನೀರು ಮಾತ್ರ ಸಮುದ್ರಕ್ಕೆ ಸೇರುತ್ತಿದೆಯೆಂದ ಮಾತ್ರಕ್ಕೆ ಪೂರ್ವ ಕರಾವಳಿಯಲ್ಲಿನ ಮೀನುಗಾರಿಕೆಯ ಉದ್ಯಮವೇ ನಿಂತುಹೋಗಿದೆಯೇ ಅಥವಾ ಮೀನುಗಾರರೆಲ್ಲರೂ ಗುಳೆಹೋಗಿದ್ದಾರೆಯೇ? ೨೬೯೫ ಟಿ.ಎಂ.ಸಿ.ಯಷ್ಟು ಸಿಹಿನೀರು ಬಂಗಾಳಕೊಲ್ಲಿಗೆ ತಪ್ಪಿದಾಗಲೇ ಅನಾಹುತಗಳೇನೂ ಸಂಭವಿಸಿಲ್ಲದಿರುವಾಗ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರು ಸಮುದ್ರಕ್ಕೆ ಕೊರತೆ ಬೀಳುವುದರಿಂದ ಏನೆಂತಹ ದೊಡ್ಡ ಪ್ರಮಾಣದ ಪ್ರಮಾದ ಎದುರಾದೀತು ಎನ್ನುವಂತಹ ತರ್ಕಗಳನ್ನು ಲೇಖಕರು ಪುಸ್ತಕದುದ್ದಕ್ಕೂ ಮಂಡಿಸಿದ್ದಾರೆ. ಇಂತಹ ವಿಪುಲ ಮಾಹಿತಿ-ಅಂಶಗಳನ್ನಾಧರಿಸಿ ಮಧು ಅವರು ಬರೆದಿರುವ ಲೇಖನಗಳೆಲ್ಲವೂ ಪರಿಸರವಾದಿಗಳು ಮತ್ತು ಬಯಲು ಸೀಮೆಯ ನೀರಾವರಿ ಹೋರಾಟಗಾರರೆಲ್ಲರಿಗೂ ಅಧ್ಯಯನ ಯೋಗ್ಯ. ಆಕರಗಳಾಗಿವೆ. ಇಷ್ಟರ ನಡುವೆಯೂ ಪರಿಸರ ಮತ್ತು ಜೀವವೈವಿಧ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಅಧ್ಯಯನಕ್ಕೊಳಪಡಿಸಿಯೇ ಹೆಜ್ಜೆ ಇಡಬೇಕೆಂಬ ವಿವೇಕವನ್ನೂ, ಸಂಯಮವನ್ನೂ ತಮ್ಮ ಬರವಣಿಗೆಯ ಉದ್ದಕ್ಕೂ ಪ್ರದರ್ಶಿಸಿದ್ದಾರೆ. ಮಧು ಪರಿಸರ ವಿರೋಧಿಯಲ್ಲವೆಂಬುದನ್ನು ಯಾರೂ ಮರೆಯುವಂತಿಯೇ ಇಲ್ಲ.
ತಮಿಳುನಾಡಿನ ಪೆರಿಯಾರ್ ಮತ್ತು ವೈಗೈ ನದಿಗಳ ಜೋಡಣೆಯನ್ನು ಮಾಡಿದ ಬ್ರಿಟಿಷ್ ಇಂಜಿನಿಯರ್ ಜಾನ್ ಪೆನ್ನಿಕುಕ್ ಅವರ ಸಾಹಸಗಾಥೆಯಂತೂ ಮನಮಿಡಿಯುವಂತಿದೆ. ತಮಿಳುನಾಡಿನ ಪಶ್ಚಿಮ ಘಟ್ಟಗಳಲ್ಲಿ ಹರಿಯುತ್ತಿದ್ದ ಪೆರಿಯಾರ್ ನದಿಯ ಸಾವಿರಾರು ಟಿ.ಎಂ.ಸಿ.ಗಳಷ್ಟು ನೀರು ಸಮುದ್ರ ಸೇರಿ ಪೋಲಾಗುವುದನ್ನು ತಪ್ಪಿಸಿದ ಪೆನ್ನಿಕುಕ್ ರಾಮನಾಡದ ಅರಸು ಹಾಗೂ ಮದ್ರಾಸಿನ ಬ್ರಿಟಿಷ್ ಪ್ರೆಸಿಡೆನ್ಸಿ ದುಬಾರಿ ಯೋಜನೆಯೆಂದು ಕೈಬಿಟ್ಟಮೇಲೂ ತನ್ನ ಸ್ವಂತ ಮನೆ ಹಾಗೂ ಹೆಂಡತಿಯ ಒಡವೆಗಳನ್ನು ಮಾರಿ ಹತ್ತುವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ಬರಪೀಡಿತವಾಗಿದ್ದ ಥೇಣಿ, ಮಧುರೈ, ಶಿವಗಂಗಾ ಹಾಗೂ ರಾಮನಾಥಪುರಂ ಜಿಲ್ಲೆಗಳಿಗೆ ಜೀವ ಹರಿಸಿದ. ಈ ಯೋಜನೆಯಿಂದ ಕಳೆದ ೧೧೬ ವರ್ಷಗಳಿಂದ ಅಲ್ಲಿನ ಪರಿಸರಕ್ಕೆ, ಬಹುವೈವಿಧ್ಯತೆಯ ಜೀವರಾಶಿಗೆ, ಸಮುದ್ರದ ಉಪ್ಪಿನಾಂಶದ ಏರಿಳಿತಕ್ಕೆ, ಮೀನುಗಾರರಿಗೆ ಯಾವ ಪ್ರಮಾಣದ ತೊಂದರೆಗಳಾಗಿವೆ ಎಂಬುದನ್ನು ಕೂಡ ಅರಿತೇ ನಾವು ಮುಂದಿನ ಹೆಜ್ಜೆ ಇಡಬಹುದೆಂಬುದು ಮಧು ಅವರ ಅಭಿಪ್ರಾಯವಾಗಿದೆ. ಈ ಯೋಜನೆಯಿಂದ ಪರಿಸರಕ್ಕಾಗುವ ಹಾನಿಯ ಹತ್ತುಪಟ್ಟು ಪರಿಸರ ಸಮತೋಲನದ ಕೆಲಸ ಬರಪೀಡಿತ ಪ್ರದೇಶಗಳಲ್ಲಿ ಆಗುವುದರ ಜೊತೆಗೆ ಲಕ್ಷಾಂತರ ಜನರ ಬದುಕೂ ಹಸನಾಗುವುದಾದಲ್ಲಿ ಇದನ್ನು ಯಾಕೆ ವಿರೋಧಿಸಬೇಕೆಂಬುದು ಮಧು ಅವರ ಅಭಿಮತವಾಗಿದೆ. ಮಧು ಅವರ ಜಲಚಿಂತನೆಗಳು ಕೇವಲ ನೇತ್ರಾವತಿ ಸುತ್ತಲೇ ಗಿರಕಿ ಹೊಡೆದಿಲ್ಲ. ಬದಲಿಗೆ ಚೀನಾದ ಪಿತೂರಿಗೆ ಬಲಿಯಾಗುತ್ತಿರುವ ಬ್ರಹ್ಮಪುತ್ರಾದಿಂದ ಹಿಡಿದು ಕಾವೇರಿ, ಕೃಷ್ಣ, ಗುಂಡ್ಯಾ ಜಲ ವಿದ್ಯುತ್ ಯೋಜನೆ, ಎತ್ತಿನಹೊಳೆ ಯೋಜನೆ, ಬೆಂಗಳೂರಿನ ನೀರಿನ ಸಮಸ್ಯೆ, ರಾಷ್ಟ್ರೀಯ ನದೀ ಜೋಡಣೆ, ಆಹಾರ ಸುರಕ್ಷತೆ, ಕೋಲಾರದಲ್ಲಿ ಪತ್ತೆಯಾಗಿರುವ ಯುರೇನಿಯಂವರೆಗೂ ಹಬ್ಬಿದೆ. ಆದರೂ ಇಡೀ ಪುಸ್ತಕ ಬಯಲು ಸೀಮೆಗೆ ನೀರುಣಿಸಿ ಜೀವ ನೀಡುವುದರತ್ತಲೇ ಹೆಚ್ಚು ಕೇಂದ್ರೀಕೃತಗೊಂಡಿರುವುದು ಇಲ್ಲಿನ ವಿಶೇಷ. ಇಲ್ಲಿನ ಲೇಖನಗಳೆಲ್ಲವೂ ಕನ್ನಡದ ದಿನಪತ್ರಿಗಳಲ್ಲಿ ಅಂಕಣ ಬರಹಗಳಾಗಿ ಪ್ರಕಟಿತಗೊಂಡಂಥವು. ಹಾಗಾಗಿ ಅಂಕಣ ಬರವಣಿಗೆಯ ಮಿತಿಗಳೂ ಇಲ್ಲಿವೆ. ಉದಾಹರಣೆಗೆ ಅನೇಕ ಅಂಶಗಳು ಪುನರಾವರ್ತಿತವಾದಂತೆ ತೋರುತ್ತವೆಯಾದರೂ ಅವು ಆಯಾ ಸಂದರ್ಭದ ಅಗತ್ಯದ ಹಿನ್ನೆಲೆಯಲ್ಲಿ ಪದೇ ಪದೇ ಪ್ರಸ್ತಾಪಿತಗೊಂಡಿರಬಹುದು. ಆದರೂ ನೀರಿನ ಕುರಿತ ವಿಚಾರಗಳನೇಕವನ್ನು ಕುತೂಹಲಕರವಾಗಿ ಮಂಡಿಸುವಾಗ ಅವು ಅಂತಹ ದೊಡ್ಡ ತೊಡಕೇನಲ್ಲವೆನಿಸುತ್ತದೆ. ಹಾಗೆ ನೋಡಿದರೆ ಇಡೀ ಪುಸ್ತಕವನ್ನು ಸಾವಧಾನದಿಂದ ಪುನರ್ ಸಂಪಾದಿಸುವ ಸಾಧ್ಯತೆಗಳೂ ಇದ್ದೇ ಇದ್ದವಾದರೂ ಕಣ್ಣೆದುರಿಗೇ ಹತ್ತಿ ಉರಿಯುವ ಸಮಸ್ಯೆಗಳ ಕುರಿತಂತೆ ಬರಹದ ಮೂಲಕ ಜನರನ್ನು ಜಾಗ್ರತಗೊಳಿಸುವ ತುರ್ತಲ್ಲಿ ಇಂತಹ ಲೋಪಗಳು ನನ್ನ ಮಟ್ಟಿಗಂತೂ ಕ್ಷಮ್ಯ ಎನಿಸುತ್ತದೆ. ಭಾಷೆಯ ಮೂಲಕದ ಪರಿಶೀಲನೆ, ಸಾಹಿತ್ಯಕ ಮೌಲ್ಯಗಳಿಗಿಂತಲೂ ವಿಚಾರಗಳೇ ಮುಖ್ಯವೆಂಬುದು ಇಲ್ಲಿನ ಲೇಖನಗಳ ಧೋರಣೆ.
ಮಧು ಎಂದಿನಿಂದ ಬರಹಗಾರರಾದರೆಂಬುದೇ ನನ್ನ ಮಟ್ಟಿಗೆ ಸೋಜಿಗದ ಸಂಗತಿ. ನಾನು ನಂಬಿರುವಂತೆ ಮೂಲಭೂತ ಅಗತ್ಯತೆಗಳಲ್ಲೊಂದಾದ ನೀರಿನ ಹೋರಾಟವೇ ಮಧು ಅವರಲ್ಲಿನ ಲೇಖಕನನ್ನು ಹೊರತಂದಿದೆ. ಇದು ನೀರಿನ ಶಕ್ತಿಯೂ ಆಗಿರುವಂತೆ ಮಧುವಿನ ಸಂಖ್ಯಾಬಲವೂ ಆಗಿರಬಲ್ಲದು. ಬಯಲು ಸೀಮೆಗೆ ನೀರು ತರಲೇಬೇಕೆಂಬ ಹಠತೊಟ್ಟಿರುವ ಮಧು ನನ್ನ ಕಣ್ಣಿಗೆ ಮತ್ತೊಬ್ಬ ಜಾನ್ ಪೆನ್ನಿಕುಕ್‌ನಂತೆಯೇ ಕಾಣಿಸುತ್ತಿದ್ದಾರೆ. ಸಾವಿರಾರು ಮೈಲಿಗಳಾಚೆಯ ಲಂಡನ್‌ನಿಂದಲೇ ತಮ್ಮ ಬರಪೀಡಿತ ತಾಯ್ನೆಲದ ಜಲದಾಹದತ್ತ ಚಿಕಿತ್ಸಕ ದೃಷ್ಟಿ ಹರಿಸಿರುವ ಮಧು ಜಲನೇತ್ರತಜ್ಞರಂತೆಯೂ, ಆಧುನಿಕ ಭಗೀರಥನಂತೆಯೂ ಕಠಿಣ ತಪದ ಹಾದಿಗಿಳಿದಂತಿದೆ. ಬಯಲು ಸೀಮೆಯ ಜಲಾಂದೋಲನಕ್ಕೆ ಕ್ರಮೇಣ ತೀವ್ರತೆಯನ್ನು ತಂದುಕೊಡುತ್ತಿರುವ ಹೋರಾಟಕ್ಕೆ ಗಟ್ಟಿ ಬುನಾದಿಯ ತಾತ್ವಿಕ ಆಯಾಮ ಕಲ್ಪಿಸುತ್ತಿರುವ ಮಧು ಅವರ ನೀರ ಹೋರಾಟ ಫಲಪ್ರದವಾಗಲೆಂದು ಎದೆ ತುಂಬಿ ಹಾರೈಸುತ್ತೇನಲ್ಲದೆ ಶಕ್ತಿಮೀರಿ ಅವರೊಂದಿಗೆ ಹೆಜ್ಜೆ ಹರಿಸಲೂ ಪ್ರಯತ್ನಿಸುತ್ತೇನೆ.

ಲಕ್ಷ್ಮೀಪತಿ ಕೋಲಾರ

ಜಾನ್ ಪೆನ್ನಿಕುಕ್‌ ಮತ್ತು ಮುಳ್ಳಪೆರಿಯಾರ್ ಆಣೆಕಟ್ಟು

ಡಾ.ಮಧು ಸೀತಪ್ಪನವರ `ಬಯಲುಸೀಮೆಯ ಬಾಯಾರಿಕೆ ಹಿಂಗೀತೆ?' ಕೃತಿಯಲ್ಲಿನ ಒಂದು ಲೇಖನ


ಮಧು ಸೀತಪ್ಪ
ಬ್ರಿಟಿಷರೇ ನಮ್ಮ ದೇಶ ಬಿಟ್ಟು ತೊಲಗಿ ಎಂದು ಸ್ವಾತಂತ್ರ್ಯ ಚಳುವಳಿ ಮಾಡಿದ ಭಾರತೀಯರು ಬ್ರಿಟಿಷನೊಬ್ಬನನ್ನು ದೇವರೆಂದು ಪೂಜಿಸಲು ಸಾಧ್ಯವೆ. ಅವನ ದೇವಾಲಯವನ್ನು ಸ್ಥಾಪಿಸಿರುವುದಲ್ಲದೆ, ಆತನ ಫೋಟೊವನ್ನು ತಮ್ಮ ಮನೆಗಳ ದೇವರಮನೆಯಲ್ಲಿ ತೂಗಿ ಹಾಕಿ ಪೂಜೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಆತನ ಹೆಸರನ್ನು ಈಗಲೂ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ನಾಮಕರಣ ಮಾಡುತ್ತಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಇದು ಸತ್ಯವೇ? ಯಾರೀ ವ್ಯಕ್ತಿ? ಬನ್ನಿ ೧೯ನೇ ಶತಮಾನದ ಇತಿಹಾಸದ ಪುಟಗಳನ್ನು ತಿರುವಿ ನೋಡೋಣ. ೧೭೮೯ ರಲ್ಲಿ ರಾಮನಾಡ ರಾಜ್ಯದ ಪ್ರಧಾನಮಂತ್ರಿ ಮುತ್ತಿರುಲಪ್ಪ ಪಿಲ್ಲೈ ಪಶ್ಚಿಮಾಭಿಮುಖವಾಗಿ ಹರಿಯುವ ಪೆರಿಯಾರ್ ನದಿಯನ್ನು ಪಶ್ಚಿಮಘಟ್ಟಗಳಲ್ಲಿ ಸುರಂಗಮಾಡಿ ಪೂರ್ವಾಭಿಮುಖವಾಗಿ ಹರಿಯುವ ವೇಗೈ ನದಿಗೆ ಜೋಡಣೆ ಮಾಡಿ ಬರಪೀಡಿತ ಥೇಣಿ, ಮಧುರೈ, ಶಿವಗಂಗಾ ಮತ್ತು ರಾಮನಾಥಪುರಂ ಜಿಲ್ಲೆಗಳಿಗೆ ನೀರು ಹರಿಸುವ ಬಗ್ಗೆ ಮಹಾರಾಜ ಮುತ್ತುರ ಮಾಲಿಂಗ ಸೇತುಪತಿಯ ಮುಂದೆ ಪ್ರಸ್ತಾಪವನ್ನಿಟ್ಟ. ಆದರೆ ಮಹಾರಾಜ ಇದು ತುಂಬಾ ದುಂದು ವೆಚ್ಚದ ಯೋಜನೆ ಹಾಗು ಪಶ್ಚಿಮ ಘಟ್ಟಗಳ ಬೆಟ್ಟ ಗುಡ್ಡಗಳಲ್ಲಿ ಈ ಯೋಜನೆ ಕೈಗೊಳ್ಳಲು ನಮ್ಮ ಬಳಿ ತಂತ್ರಜ್ಞಾನವಿಲ್ಲ ಎಂದು ಯೋಜನೆಯನ್ನು ಕೈಬಿಟ್ಟರು. ೧೮೬೫ರಲ್ಲಿ ಮದ್ರಾಸ್ ಪ್ರ್ರೆಸಿಡೆನ್ಸಿಯ ಬ್ರಿಟಿಷರು ಈ ಬರಪೀಡಿತ ಜಿಲ್ಲೆಗಳ ಧಾರುಣ ಪರಿಸ್ಥಿತಿಯನ್ನು ನೋಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದರ ಬಗ್ಗೆ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಮುಖ್ಯ ಅಭಿಯಂತರರಾದ ಜಾನ್ ಪೆನ್ನಿಕುಕ್‌ರವರಿಗೆ ವಹಿಸಿದರು. ಸುಮಾರು ಹತ್ತು ವರ್ಷಗಳು ಸಾಧಕ ಭಾಧಕಗಳು ಚರ್ಚೆಯಾಗಿ ಇದು ದುಬಾರಿ ಯೋಜನೆ ಹಾಗು ಪಶ್ಚಿಮಘಟ್ಟಗಳಂತಹ ಬೆಟ್ಟಗಳಲ್ಲಿ ಅಣೆಕಟ್ಟು ಕಟ್ಟುವುದು ಅಸಾಧ್ಯವೇ ಸರಿ ಎಂಬ ನಿರ್ಣಯಕ್ಕೆ ಬರಲಾಯಿತು. ಆದರೆ ಇಂತಹ ಮಿಷನ್ ಇಂಪಾಸಿಬಲ್ ಅನ್ನು, ಪಾಸಿಬಲ್ ಮಾಡಿದ ಕೀರ್ತಿ ಜಾನ್ ಪೆನ್ನಿಕುಕ್‌ಗೆ ಸೇರಬೇಕು. ೧೮೭೭ರಲ್ಲಿ ಈ ಯೋಜನೆಯ ವೆಚ್ಚ ಸುಮಾರು ೧ ಕೋಟಿರೂಗಳೆಂದು ಅಂದಾಜು ಮಾಡಲಾಯಿತು. ಆದರೆ ಇದು ದುಬಾರಿ ಯೋಜನೆಯೆಂದು ಮದ್ರಾಸ್ ಪ್ರೆಸಿಡೆನ್ಸಿಯ ಅಕ್ಷೇಪಣೆ ಎತ್ತಿತು. ಇದಕ್ಕೆ ಜಾನ್ ಪೆನ್ನಿಕುಕ್ ಈ ಪ್ರದೇಶಗಳ ಜನರಿಗೆ ನೀರು ಅತ್ಯವಶ್ಯಕ, ಆದುದರಿಂದ ಸಂಬಳವಿಲ್ಲದೆ ಅಥವಾ ಕಡಿಮೆ ಸಂಬಳಕ್ಕೆ ಕೂಲಿ ಕಾರ್ಮಿಕರು ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ, ಆದುದರಿಂದ ಯೋಜನಾ ವೆಚ್ಚ ಶೇ.೧೦% ಕಡಿಮೆಯಾಗುತ್ತದೆ ಎಂಬ ಹೊಸ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟ. ಹೊಸ ಪ್ರಸ್ತಾವನೆಗೆ ಸರ್ಕಾರದಿಂದ ಕೂಡಲೆ ಒಪ್ಪಿಗೆ ದೊರೆಯಿತು.
ಜಾನ್ ಪೆನ್ನಿಕುಕ್

ಪೆರಿಯಾರ್ ನದಿ ನಮ್ಮ ರಾಜ್ಯದ ನೇತ್ರಾವತಿಯಂತೆ ಪಶ್ಚಿಮಘಟ್ಟಗಳಲ್ಲಿ ಹುಟ್ಟಿ ಅರಬ್ಬಿಸಮುದ್ರಕ್ಕೆ ಸೇರುತ್ತದೆ. ವೇಗೈ ನದಿ ನಮ್ಮ ರಾಜ್ಯದ ಹೇಮಾವತಿ ನದಿಯಂತೆ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುತ್ತದೆ. ಪಶ್ಚಿಮಘಟ್ಟಗಳಲ್ಲಿ ಮಳೆಗಾಲದಲ್ಲಿ ಸರಾಸರಿ ೫೦೦೦ ಮಿ.ಮೀ. ಮಳೆಯಾಗುವುದರಿಂದ ಯತೇಚ್ಛ ನೀರು ಮಳೆಗಾಲದಲ್ಲಿ ಅರಬ್ಬಿ ಸಮುದ್ರದ ಪಾಲಾಗುತ್ತಿತ್ತು. ಮಳೆಗಾಲದಲ್ಲಾಗುವ ಹೆಚ್ಚುವರಿ ನೀರನ್ನು ತೇಕಡಿ ಅರಣ್ಯ ಪ್ರದೇಶದಲ್ಲಿ ಅಣೆಕಟ್ಟು ಕಟ್ಟಿ, ಈ ತೇಕಡಿ ಸರೋವರದ ನೀರನ್ನು ಪಶ್ಚಿಮಘಟ್ಟಗಳಲ್ಲಿ ೨ ಕಿ.ಮೀ. ಉದ್ದದ ಸುರಂಗವನ್ನು ಕೊರೆದು ಪೂರ್ವಾಭಿಮುಖವಾಗಿ ಹರಿಯುವ ವೇಗೈ ನದಿಗೆ ಜೋಡಿಸಿ ಬರಪೀಡಿತ ಮಧುರೈ ಹಾಗು ಇತರ ಮೂರು ಜಿಲ್ಲೆಗಳಿಗೆ ಹರಿಸಿವುದೇ ಪೆನ್ನಿಕುಕ್‌ನ ಮುಖ್ಯ ಉದ್ದೇಶ. ಪೆರಿಯಾರ್ ನದಿ ಹಾಗು ತೇಕಡಿ ಕೇರಳದ ತಂಜಾವೂರು ರಾಜ್ಯದ ಅಧೀನದಲ್ಲಿ ಇದ್ದುದ್ದರಿಂದ ಬ್ರಿಟಿಷ್ ಪ್ರೆಸಿಡೆನ್ಸಿ ೯೯೯ ವರ್ಷಗಳ ಲೀಸ್‌ನಂತೆ ೮೦೦೦ ಎಕರೆ ತೇಕಡಿ ಅರಣ್ಯ ಪ್ರದೇಶವನ್ನು ಹಾಗು ಮುಳ್ಳಪೆರಿಯಾರ್ ಅಣೆಕಟ್ಟು ಕಟ್ಟಲು ಅನುಮತಿಯನ್ನು ತಂಜಾವೂರು ಮಹಾರಾಜರಿಂದ ಪಡೆಯಿತು. ಇತ್ತೀಚೆಗೆ ಕೇರಳ ಹಾಗು ತಮಿಳುನಾಡಿನ ನಡುವೆ ಈ ಅಣೆಕಟ್ಟು ತೀವ್ರ ವಿವಾದಕ್ಕೆ ಗುರಿಯಾಗಿತ್ತು.

ಮಧುರೈನ ಪಿ.ಡಬ್ಲ್ಯೂ.ಡಿ. ಕಚೇರಿಯ ಆವರಣದಲ್ಲಿರುವ ಜಾನ್ ಪೆನ್ನಿಕುಕ್ ಪುತ್ಥಳಿ

೧೮೮೫ರಲ್ಲಿ ಕೆಲಸ ಪ್ರಾರಂಭಿಸಿದ ಪೆನ್ನಿಕುಕ್‌ನ ಮುಂದೆ ‘ಮಿಷನ್ ಇಂಪಾಸಿಬಲ್’ ಯೋಜನೆಯನ್ನು ‘ಪಾಸಿಬಲ್’ ಮಾಡುವ ಹಟವಿತ್ತು. ಅಂದು ಸಿಮೆಂಟಿರಲಿಲ್ಲ. ಈ ಅಣೆಕಟ್ಟನ್ನು ಸುಣ್ಣದ ಕಲ್ಲು, ಸುರ್ಕಿ ಹಾಗು ಮರಳು ಮಿಶ್ರಿತ ಪುಡಿಯನ್ನು ಬಳಸಿ ಕಟ್ಟಲಾಗಿದೆ. ೮೦,೦೦೦ ಟನ್ ಸುಣ್ಣದ ಕಲ್ಲನ್ನು ಪಶ್ಚಿಮಘಟ್ಟಗಳ ಪ್ರದೇಶಕ್ಕೆ ಎತ್ತಿನ ಬಂಡಿಗಳಲ್ಲಿ ಹಾಗೂ ಹಗ್ಗಗಳ ಮೂಲಕ ಸಾಗಿಸಲಾಯಿತು. ಮಳೆಗಾಲದ ೪ ತಿಂಗಳು ಕೆಲಸಮಾಡಲಾಗುತ್ತಿರಲಿಲ್ಲ. ಮಲೇರಿಯಾ ಬೇನೆ ಈ ಪ್ರದೇಶಗಳಲ್ಲಿ ವ್ಯಾಪಕವಾಗಿತ್ತು. ಆಗ ಮಲೇರಿಯಾಕ್ಕೆ ಔಷಧವಿರಲಿಲ್ಲ. ಆದರೆ ಪಶ್ಚಿಮಘಟ್ಟಗಳಲ್ಲಿ ದೊರೆಯುವ ಭಟ್ಟಿ, ಸಾರಾಯಿಯೇ ಇದಕ್ಕೆ ಮದ್ದು. ಮಲೇರಿಯಾದಿಂದ ೪೩೯ ಜನ ಮೃತಪಟ್ಟರು, ಇದರಲ್ಲಿ ಅನೇಕ ಬ್ರಿಟಿಷ್ ಅಧಿಕಾರಿಗಳು ಸೇರಿದ್ದಾರೆ. ಸ್ಥಳೀಯ ಭಟ್ಟಿ ಸಾರಾಯಿಲ್ಲದಿದ್ದಲ್ಲಿ ಈ ಅಣೆಕಟ್ಟನ್ನು ಕಟ್ಟಲೇ ಸಾಧ್ಯವಿರುತ್ತಿರಲಿಲ್ಲ ಎಂದು ಚರಿತ್ರ ಸಂಶೋಧಕರು ದಾಖಲಿಸಿದ್ದಾರೆ.
ಅಣೆಕಟ್ಟಿನ ಅಡಿಪಾಯ ಕಟ್ಟುವ ಮೊದಲ ಹಂತದಲ್ಲೇತೀವ್ರ ಮಳೆಯಿಂದ ಎರಡುಬಾರಿ ಕೊಚ್ಚಿ ಹೋಯಿತು. ಈ ಘಟನೆಗಳು ಸಂಭವಿಸಿದ ಮೇಲೆ ಮದ್ರಾಸ್ ಪ್ರೆಸಿಡೆನ್ಸಿ ಈ ದುಬಾರಿ ಯೋಜನೆಯನ್ನು ಕೈಬಿಡಲು ನಿರ್ಧರಿಸಿತು. ಪೆನ್ನಿಕುಕ್‌ಗೆ ಈ ಪ್ರಪಂಚದಲ್ಲಿ ಹುಟ್ಟಿದ ಮೇಲೆ ಈ ‘ಮ್ಯಾನ್‌ಕೈಂಡ್‌ಗೆ’ ನಾವು ಏನೂ ಮಾಡಲಿಲ್ಲವೆಂದರೆ, ಬದುಕಿ ಏನು ಪ್ರಯೋಜನಾ? ಎಂಬುದು ಮನಸ್ಸಿನಲ್ಲೇ ಕೊರಗುತ್ತಿತ್ತು. ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ ಪೆನ್ನಿಕುಕ್ ತನ್ನ ಸ್ವಂತ ಮನೆಯನ್ನು ಹಾಗೂ ಹೆಂಡತಿಯ ಒಡವೆಗಳನ್ನು ಮಾರಿ ಹಣ ಸಂಗ್ರಹಿಸಿದ.

ಮುಳ್ಳಪೆರಿಯಾರ್ ಆಣೆಕಟ್ಟು

ಆ ಹಣದೊಂದಿಗೆ ಭಾರತಕ್ಕೆ ಹಿಂದಿರುಗಿದ ಪೆನ್ನಿಕುಕ್ ನೆನೆಗುದಿಗೆ ಬಿದ್ದಿದ್ದ ಮುಳ್ಳಪೆರಿಯಾರ್ ಯೋಜನೆಯನ್ನು ಪುನರಾರಂಭಿಸಿದ. ಇಷ್ಟೆಲ್ಲ ತೊಡಕುಗಳಿದ್ದರೂ ೧೮೮೫ರಲ್ಲಿ ಪ್ರಾರಂಭವಾದ ಕಾಮಗಾರಿ ಕೇವಲ ಹತ್ತು ವರ್ಷಗಳಲ್ಲಿ ಪೂರ್ಣಗೊಂಡಿತ್ತು. ಪ್ರಪಂಚದ ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ಕಾರ್ಯಗತವಾದ ಪಶ್ಚಿಮ-ಪೂರ್ವ ನದಿಜೋಡಣೆ ಯೋಜನೆಯೆಂದು ಹೆಗ್ಗಳಿಕೆಗೆ ಪಾತ್ರವಾಯಿತು. ‘ಮಿಷನ್ ಇಂಪಾಸಿಬಲ್’ಗೆ ‘ಹ್ಯಾಪಿ ಎಂಡಿಂಗ್’ ನೀಡಿದ ಪೆನ್ನಿಕುಕ್ ತಮಿಳುನಾಡಿನ ಬರಪೀಡಿತ ಜಿಲ್ಲೆಗಳಲ್ಲಿ ಆರಾಧ್ಯ ಧೈವವಾದ.
ಅಂದು ಪೆನ್ನಿಕುಕ್ ತನ್ನ ಪತ್ನಿಯ ಒಡವೆ ಮಾರಿ ಯೋಜನೆಯನ್ನು ಮುಂದುವರೆಸಿದ, ಆದರೆ ಇಂದು ಕೆಲವು ಅಭಿಯಂತರರು ಲೋಕಾಯಕ್ತಕ್ಕೆ ಕಾಣದಿರುವ ರೀತಿ ಒಡವೆಗಳನ್ನು ಎಲ್ಲಿ ಬಚ್ಚಿಡುವುದು ಎಂದು ಸದಾ ಯೋಚಿಸುತ್ತಿರುತ್ತಾರೆ. ಮುಖ್ಯಮಂತ್ರಿಗಳೇ, ನಾವು ನಿಮ್ಮ ಒಡವೆ ಅಥವಾ ಮನೆ ಮಾರಿ ಅಂತ ಕೇಳ್ತಾ ಇಲ್ಲ. ಬರಪೀಡಿತ ಜಿಲ್ಲೆಗಳಿಗಾಗಿರುವ ನೀರಿನ ಅಸಮತೋಲನವನ್ನು ಸರಿಪಡಿಸಲು ಇರುವ ಒಂದೇ ಮಾರ್ಗವಾದ ನೇತ್ರಾವತಿ ಯೋಜನೆಯನ್ನು ಅನುಷ್ಠಾನ ಮಾಡಿ ಎಂದು ಕೇಳುತ್ತಿದ್ದೇವೆ. ನೀವು ತಿಪಟೂರಿನಲ್ಲಿ ಭಾಷಣ ಮಾಡಿ, ‘ನಾನು ನೇತ್ರಾವತಿ ಯೋಜನೆಗೆ ಬದ್ಧ’ ಎಂದು ಹೇಳಿದ ಮರುದಿನವೇ ಶಿವಮೊಗ್ಗದಲ್ಲಿ, ‘ನಾನು ಆ ರೀತಿ ಹೇಳಿಯೇ ಇಲ್ಲ, ಪತ್ರಿಕೆಗಳಲ್ಲಿ ತಪ್ಪು ವರದಿಯಾಗಿರುವುದರಿಂದ ನನ್ನ ಮನಸ್ಸಿಗೆ ನೋವಾಗಿದೆ’ ಎಂಬ ಹೇಳಿಕೆ ನೀಡಿದ್ದೀರಾ. ನಿಮ್ಮ ಹೇಳಿಕೆಯನ್ನು ಅಲ್ಲಿಗೇ ನಿಲ್ಲಿಸಿದ್ದರೆ ಚೆನ್ನಾಗಿತ್ತು ಆದರೆ ನೀವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ನಾನು ನೇತ್ರಾವತಿ ಯೋಜನೆಗೆ ಹಿಂದೆಯೂ ವಿರೋಧಿ ಹಾಗು ಈಗಲೂ ವಿರೋಧಿ’ ಎಂದು ಹೇಳಿರುವುದು ದುರುದೃಷ್ಟಕರ. ಕುಡಿಯಲು ಶುದ್ಧ ನೀರಿಲ್ಲದೆ ಬರಪೀಡಿತ ಜಿಲ್ಲೆಗಳಲ್ಲಿ ಹಸುಗೂಸುಗಳು ಮತ್ತು ಮಕ್ಕಳು ಅಂಗವಿಕಲರಾಗುತ್ತಿರುವಾಗ ಈ ರೀತಿಯ ಸಂವೇದನಾರಹಿತ ಹೇಳಿಕೆಗಳು ಮುಖ್ಯಮಂತ್ರಿಗಳ ಪದವಿಗೆ ಘನತೆ ತರುವುದಿಲ್ಲ. ನೀವು ದಕ್ಷಿಣ ಕನ್ನಡ ಹಾಗೂ ತುಳುನಾಡಿಗೆ ಮಾತ್ರ ಮುಖ್ಯಮಂತ್ರಿಗಳೋ ಅಥವಾ ಸಮಗ್ರ ಕರ್ನಾಟಕಕ್ಕೆ ಮುಖ್ಯಮಂತ್ರಿಗಳೋ ಎಂಬ ಸಂದೇಹ ಕಂಡು ಬರುತ್ತಿದೆ. ನಿಮಗೆ ಮೊದಲಿನಿಂದಲೂ ಈ ಯೋಜನೆಗೆ ವಿರೋಧವಿದ್ದರೆ ಬಹುಶಃ ಪರಿಸರಕ್ಕಾಗುವ ಹಾನಿ, ನೀರಿನಲ್ಲಿ ಹೆಚ್ಚಾಗುವ ಉಪ್ಪಿನಾಂಶ, ಪಶಿಮಘಟ್ಟಗಳ ಬಹುವೈವಿಧ್ಯತೆಯ ಜೀವರಾಶಿಗಾಗುವ ಹಾನಿ, ಕರಾವಳಿಯ ಮೀನುಗಾರರಿಗಾಗುವ ತೊಂದರೆಗಳ ಭೀತಿ ನಿಮ್ಮನ್ನು ಕಾಡುತ್ತಿರಬಹುದು. ೧೧೬ ವರ್ಷಗಳ ಹಿಂದೆ ನೇತ್ರಾವತಿಯ ಯೋಜನೆಯಂತೆ ಪಶ್ಚಿಮಕ್ಕೆ ಹರಿಯುವ ಪೆರಿಯಾರ್ ನದಿಯ ಮಳೆಗಾಲದ ಹೆಚ್ಚುವರಿಯ ನೀರನ್ನು ಪೂರ್ವದ ವೇಗೈ ನದಿಗೆ ಜೋಡಿಸಿರುವ ಜೀವಂತ ಉದಾಹರಣೆ ಕೇರಳದ ಮುಳ್ಳಪೆರಿಯಾರ್ ಅಣೆಕಟ್ಟು. ೧೧೬ ವರ್ಷಗಳಿಂದ ಪರಿಸರಕ್ಕೆ ಅಥವಾ ಬಹುವೈವಿಧ್ಯತೆಯ ಜೀವರಾಶಿಗೆ ಅಥವಾ ನದಿಯ/ಅರಬ್ಬಿ ಸಮುದ್ರದ ಉಪ್ಪಿನಾಂಶಕ್ಕೆ ಅಥವಾ ಮೀನುಗಾರರಿಗೆ ಯಾವ ರೀತಿಯ ತೊಂದರೆಗಳಾಗಿದೆ ಎಂದು ಅರಿಯಲು ಇದು ಒಂದು ಜೀವಂತ ನಿದರ್ಶನ. ಪೆರಿಯಾರ್ ಯೋಜನೆಗೆ ೮೦೦೦ ಎಕರೆ ಅರಣ್ಯ ಪ್ರದೇಶ ಹಾಗು ಪಶ್ಚಿಮಘಟ್ಟಗಳ ಹೊಟ್ಟೆಯನ್ನು ಬಗೆದು ೨ ಕಿ.ಮೀ. ಸುರಂಗ ಕೊರೆಯಲಾಯಿತು. ಆದರೆ ಸರ್ಕಾರದ ಮುಂದಿರುವ ನೇತ್ರಾವತಿಯ ಯೋಜನೆಗೆ ಕೇವಲ ೫೦೦ ಎಕರೆಗಳು ಸಾಕು ಹಾಗೂ ಪಶ್ಚಿಮ ಘಟ್ಟಗಳ ಹೊಟ್ಟೆಯನ್ನು ಬಗೆಯುವಂತಿಲ್ಲ. ಮುಖ್ಯಮಂತ್ರಿಯ ಸ್ಥಾನದಲ್ಲಿರುವ ನೀವು ಯಾವುದೋ ಸ್ವಾಮಿಗಳ ಅಥವಾ ಧರ್ಮಾಧಿಕಾರಿಗಳ ಒತ್ತಡಕ್ಕೊ ಮಣಿದು ನಿಮ್ಮ ಹೇಳಿಕೆಯನ್ನೇ ತಿರುಚಿರುವುದು ವಿಷಾದಕರ. ಕೆಲವು ತಿಂಗಳುಗಳಿಂದ ನಿಮ್ಮ ಕುರ್ಚಿ ಒಂದೇ ಸಮನೆ ಅಲ್ಲಾಡಿ ತುಂಬಾ ಮೈ ಕೈ ನೋವಾಗಿದ್ದರೆ ನಿಮ್ಮ ಕುಟುಂಬ ಸಮೇತ ತೇಕಡಿ ಅರಣ್ಯ ಧಾಮಕ್ಕೆ ಹೋಗಿ ಬನ್ನಿ. ವಿಶ್ರಾಂತಿಯೊಂದಿಗೆ, ಮುಳ್ಳಪೆರಿಯಾರ್ ಯೋಜನೆಯನ್ನು ನೋಡಿದಂತಾಗುತ್ತದೆ.
ಡಾ.ಮಧು ಸೀತಪ್ಪ
madhuseethappa@yahoo.com

ಶುಕ್ರವಾರ, ಮಾರ್ಚ್ 30, 2012

ಲೋಕವಿರೋಧಿ ಗುರುವಿನ ಪರಿನಿರ್ವಾಣ


(ಚಿತ್ರ ಕೃಪೆ: ದಿ ಹಿಂದು)

ಡಾ.ಎಲ್.ಬಸವರಾಜು ಇಂದು ನಮ್ಮೊಂದಿಗಿಲ್ಲ. ಅವರ ಬದುಕು ಬರಹದ ಬಗೆಗೆ ಗೆಳೆಯ ಕೆ.ವೈ.ನಾರಾಯಣ ಸ್ವಾಮಿ ಬರೆದಿರುವ ಲೇಖನ ಇಲ್ಲಿದೆ:

ಲೋಕವಿರೋಧಿ ಗುರುವಿನ ಪರಿನಿರ್ವಾಣ
ಎಲ್. ಬಸವರಾಜು ಅವರು ತಮ್ಮ ತೊಂಬತ್ತಮೂರರ ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಜಿನ ಸಮಣರು ಸಲ್ಲೇಖನದ ಮೂಲಕ ಸಾವನ್ನು ದಿಟ್ಟವಾಗಿ ಆಹ್ವಾನಿಸುವ ರೀತಿಯಲ್ಲಿಯೇ ಎಲ್.ಬಿ ಅವರು ಕೂಡ ತಮ್ಮ ಸಾವನ್ನು ತಾವೇ ಆಹ್ವಾನಿಸಿಕೊಂಡರು. ಅವರು ಕಳೆದ ಎರಡು ತಿಂಗಳ ಹಿಂದೆಯಷ್ಟೆ ‘ಹಂಪೆಯ ಹರಿಹರ ಕಂಡರಿಸಿದ ಭಕ್ತಿ, ಜ್ಞಾನ, ವೈರಾಗ್ಯದ ನುಡಿಶಿಲ್ಪಗಳು’ ಎಂಬ ಪುಸ್ತಕವನ್ನು ಪ್ರಕಟಿಸಿದರು. ಅವಿಶ್ರಾಂತ ಶ್ರಮಜೀವಿಯಾಗಿದ್ದ ಅವರು ಮುಗಿಸಬೇಕಿದ್ದ ಕೆಲಸಗಳ ಪಟ್ಟಿ ಇನ್ನು ದೊಡ್ಡದಿತ್ತು. ಆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುವವರೆಗೂ ಎಲ್.ಬಿ. ವಿರಮಿಸುವುದಿಲ್ಲ ಎನ್ನುವುದು ಅವರ ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಈ ನಂಬಿಕೆಯನ್ನು ಹುಸಿಗೊಳಿಸಿ ಎಲ್. ಬಿ. ಅವರು ಲೇಖನಿಯನ್ನು ಕೆಳಗೆ ಇಟ್ಟಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ವಿವೇಕವನ್ನು ರೂಪಿಸಿದ ತೆರೆ ಮರೆಯ ಮಹಾನ್ ಪ್ರತಿಭೆಗಳಲ್ಲಿ ಎಲ್.ಬಿ ಅವರೂ ಒಬ್ಬರು. ಹುತ್ತಗಟ್ಟಿದ ಚಿತ್ತದ ರೂಪಕದಂತಿದ್ದ ಬಸವರಾಜು ಅವರು ಗುರು ಶ್ರೀ ಕುವೆಂಪು ಅವರ ವಿಚಾರ ಮತ್ತು ಬದುಕಿನಿಂದ ತೀವ್ರವಾಗಿ ಪ್ರಭಾವಿತರಾಗಿದ್ದರು. ತಮ್ಮ ಬದುಕಿನುದ್ದಕ್ಕೂ ಕುವೆಂಪು ಅವರನ್ನು, ಬದುಕಿನ ಮಾದರಿಯಾಗಿಟ್ಟುಕೊಂಡು ಬರೆದರು, ಬದುಕಿದರು. ಕುವೆಂಪು ತಮ್ಮ ವೈಚಾರಿಕ ಲೇಖನಗಳಲ್ಲಿ ಪ್ರಸ್ತಾಪಿಸುತ್ತಿದ್ದ ‘ವಿಚಾರಕ್ರಾಂತಿ’ ಮತ್ತು ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎನ್ನುವ ತತ್ವಗಳನ್ನು ತಮ್ಮ ಬಾಳಿಗೆ ಅಳವಡಿಸಿಕೊಂಡಿದ್ದರು. ಕೊನೆಯ ಉಸುರಿನವರಿಗೂ ಲೋಕವಿರೋಧಿಯಂತೆ ಬದುಕಿದ ಎಲ್.ಬಿ ಅವರು ಕುವೆಂಪು ಅವರಿಗೆ ತಕ್ಕ ಶಿಷ್ಯರಾಗಿದ್ದರು ಮತ್ತು ಲೋಕವಿರೋಧಿಗಳಿಗೆ ಗುರುವಾಗಿದ್ದರು.
ಕೋಲಾರ ಜಿಲ್ಲೆಯ (ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ) ಗೌರಿಬಿದನೂರು ತಾಲೋಕಿನ ಇಡಗೂರಿನಲ್ಲಿ ೧೯೧೯ರಲ್ಲಿ ಅತ್ಯಂತ ಬಡಕುಟುಂಬದಲ್ಲಿ ಹುಟ್ಟಿದ ಎಲ್.ಬಿ ಅವರ ಅಕ್ಷರ ಪಯಣ ಒಂದು ಯಕ್ಷಕತೆಯಂತಿದೆ. ಇಡಗೂರು, ತುಮಕೂರಿನ ಸಿದ್ಧಗಂಗೆ ಹಾಗೂ ಮೈಸೂರು ವಿ.ವಿಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು. ಆರಂಭದಲ್ಲಿ ಎಲ್.ಬಿ.ಅವರು ಕೆಲ ಕಾಲ ದಾವಣಗೆರೆಯಲ್ಲಿ ಅಧ್ಯಾಪಕ ವೃತ್ತಿಯನ್ನು ನಡೆಸಿದರು. ಆ ಕಾಲದಲ್ಲಿಯೇ ಶ್ರೀಮತಿ ವಿಶಾಲಕ್ಷಿ ಅವರೊಡನೆ ವಿವಾಹವಾದರು. ನಂತರದಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಅಧ್ಯಾಪಕರಾಗಿ ನೇಮಕಗೊಂಡು, ಮುವ್ವತೈದು ವರ್ಷಗಳಿಗೂ ಮಿಗಿಲು ಅಧ್ಯಾಪನ, ಸಂಶೋಧನೆ, ಗ್ರಂಥಸಂಪಾದನೆಯ ಕಾಯಕವನ್ನು ಕಡು ಪ್ರಾಮಾಣಿಕತೆಯಿಂದ ನಿರ್ವಹಿಸಿ ಸಾಹಿತ್ಯ ಅನುಸಂಧಾನದ ‘ಬಸವರಾಜಮಾರ್ಗ’ವನ್ನು ನಿರ್ಮಾಣ ಮಾಡಿದ್ದರು. ಎಪ್ಪತ್ತೊಂಬತ್ತರಲ್ಲಿ ನಿವೃತ್ತರಾದ ಮೇಲೆ ಶಾಪ ವಿಮೋಚಿತರಂತೆ ಕಾವ್ಯರಚನೆಯನ್ನು ಕೈಗೊಂಡು ‘ಠಾಣಾಂತರ- ಜಾಲರಿ- ಡೊಂಕುಬಾಲದ ನಾಯಕರು- ತುಳಿಯುವ ಕಾಲಿಗೆ ಬಿದ್ದೀರಾ’ ಮೊದಲಾದ ಐದು ಕವನ ಸಂಕಲನಗಳನ್ನು ಹೊರತಂದು ಅಚ್ಚರಿಯನ್ನು ಮೂಡಿಸಿದರು.
ಬಸವರಾಜು ಅವರು ಕನ್ನಡ ಪ್ರ್ರಾಚೀನ ಸಾಹಿತ್ಯವನ್ನು ಆಧುನಿಕ ಅಗತ್ಯಗಳಿಗೆ ತಕ್ಕ ಹಾಗೆ ಮೂರು ಬಗೆಯಲ್ಲಿ ಅಣಿಗೊಳಿಸಿದ್ದಾರೆ. ಅಂದರೆ ಹಳೆಗನ್ನಡ ಪಠ್ಯಗಳನ್ನು ಪ್ರಜಾಸತ್ತಾತ್ಮಕಗೊಳಿಸುವ ಕಾರ್ಯವನ್ನು ಮಾಡಿದರು. ಮೊದಲನೆಯದು, ಲಭ್ಯವಿರುವ ಪಠ್ಯಗಳನ್ನು, ಆಕರಗಳನ್ನು ಆ ಕಾಲದ ಸಾಂಸ್ಕೃತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಗ್ರಹಿಸಿ ಅರ್ಥಪೂರ್ಣ ಪಠ್ಯಗಳನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಕನ್ನಡದಲ್ಲಿ ಈ ಬಗೆಯ ಸಂಪಾದನ ಕಾರ್ಯ ವಿಪುಲವಾಗಿ ನಡೆದಿದೆ. ಆದರೆ ಈ ವಿಧಾನವು ಕೇವಲ ಸಂಶೋಧಕರಿಗೆ, ಪಂಡಿತರಿಗೆ ಮಾತ್ರ ಉಪಯುಕ್ತವಾಗಿರುವುದನ್ನ ಅರಿತ ಎಲ್.ಬಿ ಅವರು ನಂತರದಲ್ಲಿ ಹಳೆಗನ್ನಡ ಪಠ್ಯಗಳನ್ನು ಜನಬಳಕೆಗೆ ಅನುವಾಗುವಂತೆ ಗುಣನಷ್ಠಗೊಳಿಸದೆ ರೂಪಾಂತರಿಸುವ ಕಾರ್ಯವನ್ನು ಕೈಗೊಂಡರು. ಎರಡನೆಯದಾಗಿ ಹಳೆಗನ್ನಡದ ಕಾವ್ಯಗಳನ್ನು ಪದವಿಭಾಗಿಸಿ ಬರೆದು ಮುದ್ರಿಸುವ ಮಹತ್ತರಕಾರ್ಯ ಮಾಡುವ ಮೂಲಕ ಹಳೆಗನ್ನಡದ ಪಠ್ಯಗಳನ್ನು ಮೂರು ಮತ್ತು ನಾಲ್ಕನೆಯ ತಲೆಮಾರಿನ ಕನ್ನಡ ಅಧ್ಯಾಪಕರು ಸುಲಭವಾಗಿ ಓದಲು ಹಾಗೂ ಅರಿಯಲು ಅನುವಾಗುವ ಸರಳ ಪಠ್ಯಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದರಿಂದ ಹಳೆಗನ್ನಡ ಕೃತಿಗಳನ್ನು ಓದುವುದನ್ನೇ ಒಂದು ಕೌಶಲ್ಯವಾಗಿ ಪರಿಗಣಿಸಿ, ಕೆಳ ಮತ್ತು ಗ್ರಾಮಾಂತರ ಸಮಾಜದ ವಿದ್ಯಾರ್ಥಿಗಳನ್ನು ನಮ್ಮ ಶಿಕ್ಷಣ ಪದ್ದತಿಯು ಕೀಳರಿಮಗೆ ತಳ್ಳಿತ್ತು. ಟೀಕು ಮತ್ತು ತಾತ್ಪರ್ಯಗಳ ಕಂದಕವನ್ನು ದಾಟಲು ಬಸವರಾಜು ಅವರು ರೂಪಿಸಿ ಪ್ರಕಟಿಸಿದ ಈ ಬಗೆಯ ಪದವಿಭಜನೆಯ ಪಠ್ಯಗಳಿಂದಾಗಿ ಕನ್ನಡ ಬಲ್ಲವರೆಲ್ಲಾ ಹಳೆಗನ್ನಡ ಕೃತಿಗಳನ್ನು ಸ್ವತಂತ್ರವಾಗಿ ಓದುವಂತಾಗಿದೆ. ಅಲ್ಲದೆ ಐಚ್ಛಿಕ ಪದವಿ ಮತ್ತು ಸ್ನಾತಕೋತ್ತರ ಕನ್ನಡ ತರಗತಿಗಳ ಪಾಠದ ಮಟ್ಟಿಗೆ ಇದು ಕ್ರಾಂತಿಕಾರಕವಾದ ಕ್ರಿಯೆಯೇ ಆಗಿದೆ. ಮೂರನೆಯದಾಗಿ, ಕನ್ನಡದ ಮುಂಬರುವ ತಲೆಮಾರುಗಳು ಕನ್ನಡ ಸಾಹಿತ್ಯ ಚರಿತ್ರೆಯ ಸಾರ್ವಕಾಲಿಕ ಶ್ರೇಷ್ಠ ಪುಸ್ತಕಗಳಾದ ಆದಿಪುರಾಣ, ಪಂಪಭಾರತ, ಗದಾಯುದ್ಧ, ಹರಿಚ್ಚಂದ್ರಕಾವ್ಯ ಮುಂತಾದವುಗಳ ಓದಿನ ಸುಖದಿಂದ ವಂಚಿತವಾಗಬಾರದೆಂದು, ಹಳೆಗನ್ನಡದ ಎಲ್ಲಾ ಪ್ರಮುಖ ಕೃತಿಗಳನ್ನು ಸರಳ ಕಥಾರೂಪಗಳಿಗೆ ಪರಿವರ್ತಿಸುವ ಕಾರ್ಯವನ್ನು ಮಾಡಿದರು. ಈ ಕಥಾ ನಿರೂಪಣೆಗಳಿಂದಾಗಿ ಆದಿಕವಿ ಪಂಪನ ಆದಿಯಾಗಿ ದೇವನೂರ ಮಹದೇವ ಅವರ ಕುಸುಮಬಾಲೆಯವರೆಗೆ ಸಾವಿರ ವರ್ಷಗಳ ಕನ್ನಡ ಸಾಹಿತ್ಯದ ಪ್ರಮುಖ ಕೃತಿಗಳು ಮಧ್ಯವರ್ತಿಗಳ ಸಹಾಯವಿಲ್ಲದೆ ಸಾಮಾನ್ಯ ಓದುಗ ಸ್ನೇಹಿಯಾಗಿವೆ. ಇದು ಕನ್ನಡ ಸಂಸ್ಕೃತಿಗೆ ಎಲ್.ಬಿ ಅವರು ಕೊಟ್ಟಿರುವ ಬಹು ದೊಡ್ಡ ಕೊಡುಗೆಯಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಪಂಪನ ವಿಕ್ರಮಾರ್ಜುನ ವಿಜಯದ ಕಥಾನಿರೂಪಣೆಯ ಐದು ಸಾವಿರ ಪ್ರತಿಗಳು ಪ್ರಕಟವಾದ ತಿಂಗಳೊಳಗೆ ಮಾರಾಟವಾದ ದಾಖಲೆಯು ಈ ಕಥಾನಿರೂಪಣೆ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಎಲ್.ಬಿ. ಅವರ ಈ ಮಹತ್ತರ ಕಾರ್ಯವು ಹಳೆಗನ್ನಡ ಪಠ್ಯಗಳ ಮೇಲಿನ ಶತಮಾನಗಳಿಂದಲೂ ಸಾಗಿ ಬಂದಿದ್ದ ಜಾತಿಯಾಧಾರಿತ ಭೌದ್ದಿಕ ಯಾಜಮಾನ್ಯವನ್ನು ಒಡೆದು ಹಾಕುವ ಕೆಲಸ ಮಾಡಿತು. ಈ ಕೆಲಸದಿಂದ ಸಾಂಪ್ರದಾಯಿಕ ಪಂಡಿತರ ಕೆಂಗಣ್ಣಿಗೆ ಅವರು ಗುರಿಯಾಗ ಬೇಕಾಯಿತು. ಎಲ್.ಬಿ. ಅವರ ಈ ಪ್ರಯತ್ನಗಳ ಹಿಂದೆ ನಮ್ಮ ಚರಿತ್ರೆಯನ್ನು ನಾವು ನಮಗೆ ಬೇಕಾದಂತೆ ರೂಪಿಸಿಕೊಳ್ಳಬೇಕು ಎಂಬ ಕುವೆಂಪು ಅವರ ಒತ್ತಾಸೆಯಿರುವಂತೆ, ನಾವು ಚರಿತ್ರೆಯನ್ನು ಅನುಸಂಧಾನಿಸಲು ಅನುಸರಿಸಬೇಕಿರುವ ವಿನ್ಯಾಸವೊಂದು ರೂಪಗೊಂಡಿರುವುದು ಕಂಡುಬರುತ್ತದೆ. ಇದುವರೆಗೆ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಬಸವರಾಜು ಅವರು ಅಧಿಕಾರ, ಸ್ವಜನ ಪಕ್ಷಪಾತ, ಸ್ವಾರ್ಥ, ಕಪಟತನ iತ್ತು ಜಾತಿಪ್ರೇಮವನ್ನು ಕಂಡರೆ ಉರಿದು ಬೀಳುತಿದ್ದರು. ಎಲ್.ಬಿ ಅವರು ನಡೆ ನುಡಿಗಳಲ್ಲಿ ಸಾಮ್ಯತೆ ಸಾಧಿಸಿದ್ದ ಅಪರೂಪದ ಖಡಕ್ ಮನುಷ್ಯರಾಗಿದ್ದರು.
ಎಲ್.ಬಿ ಅವರಿಗೆ ನಾವು ಕೃತಜ್ಞರಾಗಿರಬೇಕಾದ ಇನ್ನೆರಡು ಸಂಗತಿಗಳೆಂದರೆ ಅಲ್ಲಮನ ವಚನಚಂದ್ರಿಕೆಯನ್ನು ಅವರು ರೂಪಿಸಿದ್ದು ಅಲ್ಲದೆ ಬುದ್ಧಚರಿತೆ ಹಾಗೂ ಸೌಂದರನಂದ ಕೃತಿಗಳನ್ನು ಕನ್ನಡಕ್ಕೆ ತಂದಿದ್ದು. ಇಂದಿಗೂ ಕಾವ್ಯಕೌತುಕವಾಗಿರುವ ಅಲ್ಲಮ ಪ್ರಭುಗಳನ್ನು ಅರಿಯಲು ತೊಡಗುವಯಾರೇ ಆಗಲಿ ವಚನಚಂದ್ರಿಕೆಯನ್ನು ಓದದೆ ಅಲ್ಲಮನ ಜೊತೆಗೆ ಸಂವಾದಿಸಲು ಸಾಧ್ಯವೆ ಇಲ್ಲ ಎನ್ನುವುದು ಅದರ ಮಹತ್ವವನ್ನು ಮನಗಾಣಿಸುತ್ತದೆ. ಇದು ಅರವತ್ತರ ದಶಕದಲ್ಲಿ ತಮ್ಮ ಡಿಲಿಟ್ ಪದವಿಗೆ ಸಿದ್ಧಪಡಿಸಿದ ಕೃತಿಯಾಗಿದೆ. ಎಲ್.ಬಿ ಅವರು ಭಾರತದ ವಿವಿಧ ಜ್ಞಾನ ಪರಂಪರೆಗಳನ್ನು ತಮ್ಮ ಅವಿರತ ಪ್ರರಿಶ್ರಮದಿಂದ ಅಭ್ಯಾಸ ಮಾಡಿ ಆ ಹಿನ್ನೆಲೆಯಲ್ಲಿ ವಚನ ಚಳುವಳಿ ಹಾಗೂ ವಚನಗಳನ್ನು ಓದುವ ಹಲವು ದಾರಿಗಳನ್ನು ಒದಗಿಸಿಕೊಟ್ಟಿದ್ದಾರೆ ಅವರು ತಾವು ಸಿದ್ಧಪಡಿಸಿದ ವೈಚಾರಿಕ ಚೌಕಟ್ಟುಗಳನ್ನು ಪ್ರಯೋಗ ಮಾಡಿಯೂ ತೋರಿಸಿದ್ದಾರೆ. ಬಸವಣ್ಣ, ಅಕ್ಕ, ಪ್ರಭುದೇವರ ಷಟ್‌ಸ್ಥಲ ವಚನಗಳು, ಸಿದ್ಧರಾಮ, ಸರ್ವಜ್ಞ, ಶಿವದಾಸ ಗೀತಾಂಜಲಿ ಮತ್ತು ಕೆಳವರ್ಗದ ವಚನಕಾರರ ವಚನಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ನಿಜ ಪಾಠಗಳನ್ನು ನಿರ್ಣಯಿಸಿ ಕೊಟ್ಟಿದ್ದಾರೆ. ಹಾಗೆಯೇ ಶೂನ್ಯ ಸಂಪಾದನೆಗಳನ್ನು ತಮ್ಮ ತೀಕ್ಷ್ಣ ವಿಶ್ಲೇಷಣೆಗಳಿಂದ ಅಧ್ಯಯನ ಮಾಡಿಸಿದ್ದ ರಾಮನ ದೀಕ್ಷಾ ಪ್ರಸಂಗ ಮುಂತಾದ ಹುಸಿ ನುಸುಳ ಪ್ರಸಂಗಗಳನ್ನು ಕೈಬಿಟ್ಟು ವಿವರಿಸಿದ್ದು ಹೊಸ ತಲೆಮಾರಿನವರಿಗೆ ವಚನ ಪ್ರಪಂಚದ ಪ್ರವೇಶಕ್ಕೆ ತೋರು ಬಾಗಿಲನಂತಿದೆ.
ಕನ್ನಡದ ವಿವೇಕ ಮತ್ತು ವೈಚಾರಿಕ ಪರಂಪರೆಯ ಮೇಲೆ ಗಾಢ ಪರಿಣಾಮ ಬೀರಿರುವ ಬುದ್ದನ ಆಲೋಚನ ಕ್ರಮಗಳು ಹೊಸ ತಲೆಮಾರಿನ ಓದುಗರಿಗೆ ದಕ್ಕಬೇಕು ಎಂಬ ಕಾರಣದಿಂದ ಅಶ್ವಘೋಷನ ಬುದ್ಧಚರಿತ ಮತ್ತು ಸೌಂದರನಂದ ಕೃತಿಗಳನ್ನು ಸಂಸ್ಕೃತ ಮತ್ತ ಇಂಗ್ಲಿಶ್ ಭಾಷೆಗಳಿಂದ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಹೀಗೆ ಎಲ್.ಬಿ. ಬಹುಶಃ ಕಳೆದ ಎಪ್ಪತ್ತು ವರ್ಷಗಳು ನಿರಂತರವಾಗಿ ತಮ್ಮ ಪ್ರಜ್ಞೆಯ ದೀಪದ ಕುಡಿ ಕರಕುಕಟ್ಟದ ಹಾಗೆ ಬೆಳಕಿನ ಪ್ರಭಾವಲಯವನ್ನು ಕಾಯ್ದುಕೊಂಡು ಬಂದವರು.
ನಾಲ್ಕು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಎಪ್ಪತೈದನೆಯ ಅಖಿಲಭಾರತ ಸಾಹಿತ್ಯ ಸಮ್ಮೇಳನ ನಡೆಯಿತು. ಬಸವರಾಜು ಅವರು ಆ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಘಾಟನೆಯ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿಗಳು, ಕರ್ನಾಟಕದ ಅತ್ಯಂತ ಬಲಿಷ್ಠ ಮಠಗಳ ಜಗದ್ಗುರುಗಳು ಉಪಸ್ಥಿತರಿದ್ದರು ಮತ್ತು ಪ್ರಬಲ ಜಾತಿಗಳ ರಾಜಕಾರಣಿಗಳು ಅವರನ್ನು ಓಲೈಸುವ ಸಾಹಿತಿಗಳು ಇದ್ದರು. ಲಕ್ಷಾಂತರ ಸಭಿಕರ ಮುಂದೆಯೆ ಎಲ್.ಬಿ. ಅವರು ಮಠಾಧಿಪತಿಗಳು ಮತ್ತು ರಾಜಕಾರಣಿಗಳು ಜನತೆಯ ಶತ್ರುಗಳು ಎಂದು ಕರೆದುದಲ್ಲದೆ ಅವರು ಹೇಗೆ ಭಾರತೀಯ ಸಂವಿಧಾನಿಕ ತತ್ವಗಳನ್ನು ಮಣ್ಣುಗೂಡಿಸುತ್ತಿದ್ದಾರೆ ಎಂದು ಜನರ ಮುಂದೆ ಬಿಡಿಸಿ ಇಟ್ಟಿದ್ದರು. ಎಲ್. ಬಿ. ಅವರ ಹೇಳಿಕೆಯಿಂದ ವೇದಿಕೆಯ ಮೇಲೆ ಬೀಗುತ್ತಿದ್ದ ರಾಜಕಾರಣಿಗಳು, ಮಹಾಸ್ವಾಮಿಗಳು ಅಘಾತಗೊಂಡಿದ್ದರು, ಏಕೆಂದರೆ ಇಂತಹ ಕೆಂಡದ ಪ್ರತಿಕ್ರಿಯೆಯನ್ನು ಅವರು ನಿರೀಕ್ಷಿಸಿರಲಿಲ್ಲ. (ಡಾ.ಎಲ್.ಬಿ. ಅವರ ಸಂಪೂರ್ಣ ಭಾಷಣವನ್ನು ನೀವು ಇಲ್ಲಿ ಓದಬಹುದು: http://www.kasapa.kar.nic.in/75sammelanaadyaksharabhashana.html) ಆದರೆ ಎಲ್.ಬಿ ಅವರನ್ನು ಬಲ್ಲ ಅವರ ಓದುಗರಿಗೆ ಅವರ ಅಸಂಖ್ಯಾತ ಶಿಷ್ಯರಿಗೆ ಬಸವರಾಜು ಅವರ ಬಂಡುಕೋರತನ ತೀರ ಸಹಜವಾದ ಪ್ರತಿಕ್ರಿಯೆಯೇ ಆಗಿತ್ತು. ಈ ಮಾತು ನಾಡಿನಾದ್ಯಂತ ವಿದ್ಯುತ್ ಸಂಚಾರವನ್ನು ಉಂಟು ಮಾಡಿತ್ತು. ಎಲ್.ಬಿ. ಅವರ ಕೋಪ ಸಾಂದರ್ಭಿಕವಾದುದ್ದು ಅಲ್ಲ ಎಂಬುದು ಅವರ ಶತ್ರುಗಳಿಗೂ ಗೊತ್ತಿರುವ ಸಂಗತಿ. ಲೋಕಕಲ್ಯಾಣ ಮತ್ತು ಜೀವಕಾರುಣ್ಯಕ್ಕೆ ಅಡ್ಡಿ ಪಡಿಸುತ್ತಿರುವ ಅಧಿಕಾರ ವ್ಯವಸ್ಥೆಗಳ ಬಗೆಗೆ ಅವರಿಗೆ ಅತೀವ ಸಿಟ್ಟಿತ್ತು. ಅರವತೈದು ವರ್ಷಗಳ ಸ್ವಾತಂತ್ರ್ಯದ ನಂತರವು ಭಾರತೀಯ ಸಮಾಜವು ಕನಿಷ್ಠ ಬಡವರ ಹಸಿವನ್ನು ಸುಧಾರಿಸದ ಸ್ಥಿತಿಯ ಬಗ್ಗೆ ಅದನ್ನು ಪರೋಕ್ಷವಾಗಿ ಬಲಗೊಳಿಸುತ್ತಿರುವ ನವಪುರೋಹಿತಶಾಹಿ ಮತ್ತು ರಾಜಕೀಯ ಅವಕಾಶವಾದಿ ನಡವಳಿಕೆಯ ಬಗೆಗೆ ಅವರು ಕನಲಿ ಹೋಗಿದ್ದರು. ಅದರ ಪರಿಣಾಮವೆಂಬಂತೆ ಕತ್ತಲ ರಾಕ್ಷಸರು ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಎಂದೂ ಯಾವುದೇ ಹುದ್ದೆ, ಆಸ್ತಿ, ಕೀರ್ತಿಗಳಿಂದ ಮಾರು ದೂರವಿದ್ದ ಕನ್ನಡದ ಜಾಗ್ರತ ಪ್ರಜ್ಞೆಯ ಪ್ರತೀಕದಂತೆ ಬಾಳುತ್ತಿದ್ದ ಎಲ್. ಬಸವರಾಜು ಒಂದು ದಿನ ಮಂಚದಿಂದ ಏಳಲು ಹೋಗಿ ಬಿದ್ದುತೊಡೆ ಮುರಿದುಕೊಂಡರು. ಅದರ ನೆಪವಾಗಿ ಹಾಸಿಗೆ ಹಿಡಿದವರಿಗೆ ತಾನು ಬದುಕಿದ್ದರೆ ಇತರರ ಹಂಗಿನಲ್ಲಿರಬೇಕು, ಇಂತಹ ಅವಲಂಬಿತ ಬದುಕು ಬೇಡವೆಂದು ತಾವೇ ಕಟುವಾಗಿ ವಿರ್ಮಶಿಸುತ್ತಿದ್ದ ವ್ಯವಸ್ಥೆಗಳನ್ನು, ಅಷ್ಟೇ ತೀವ್ರವಾಗಿ ಪ್ರೀತಿಸುತ್ತಿದ್ದ ಲೋಕವನ್ನು ತೊರೆದು ಮಣ್ಣುಗೂಡಿದ್ದಾರೆ. ಅವರು ಹಚ್ಚಿಟ್ಟ ದೀಪಗಳು ಮಾತ್ರ ತಣ್ಣಗೆ ನಮ್ಮ ಮುಂದಿನ ದಾರಿಗಳನ್ನು ಬೆಳಗುತ್ತಿವೆ. ಎಲ್.ಬಿ. ಎಂಬ ನಿತ್ಯ ಉರಿವ ಜ್ಯೋತಿಗೆ ಶರಣು.

2011ರ ಡಾ.ಎಲ್.ಬಸವರಾಜು ಪ್ರಶಸ್ತಿ- ಅಜಾತಶತ್ರು ವಿಮರ್ಶಕ ಎಚ್ಚೆಸ್ಸಾರ್‌ರವರಿಗೆ

ನಾವು ಕೆಲವು ಕೋಲಾರದ ಗೆಳೆಯರು ಸೇರಿ ರಚಿಸಿಕೊಂಡಿರುವ ಡಾ.ಎಲ್.ಬಸವರಾಜು ಪ್ರತಿಷ್ಠಾನದ 2011ರ ಪ್ರತಿಷ್ಠಿತ ಡಾ.ಎಲ್.ಬಸವರಾಜು ಪ್ರಶಸ್ತಿ ಎಚ್ಚೆಸ್ಸಾರ್‌ರವರಿಗೆ ದೊರಕಿದೆ. ಆ ಕಾರ್ಯಕ್ರಮ 10ನೇ ಮಾರ್ಚ್ 2012ರಂದು ಮೈಸೂರಿನಲ್ಲಿ ನಡೆಯಿತು. ಅದನ್ನು ನಾನು ಬ್ಲಾಗಿಸುವುದರಲ್ಲಿ ತಡವಾಗಿದೆ. ಕ್ಷಮೆ ಇರಲಿ.






ಶನಿವಾರ, ಮಾರ್ಚ್ 24, 2012

ಮುಲ್ಲಾ ನಸ್ರುದ್ದೀನ್ ಕತೆಗಳು- 3

ತಜ್ಞ
ಮುಲ್ಲಾ ನಸ್ರುದ್ದೀನ್ ಒಬ್ಬ ಪ್ರಖ್ಯಾತ ವಿದ್ವಾಂಸನಾಗಿದ್ದ. ಆತ ಆ ಊರಿನ ಸಾರ್ವಜನಿಕರು ಭಾಗವಹಿಸುವ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಿದ್ದ. ಆ ಊರಿನ ಗಣ್ಯರು ತಮ್ಮ ಪತಿ ಪತ್ನಿಯರೊಂದಿಗೆ ಅದರಲ್ಲಿ ಭಾಗವಹಿಸಿದ್ದರು. ಬಹಳ ಸಮಯವಾದರೂ ಕಾರ್ಯಕ್ರಮ ಪ್ರಾರಂಭವಾಗಲಿಲ್ಲ. ವಿಚಾರಸಂಕಿರಣದ ಆಯೋಜಕರು ನಸ್ರುದ್ದೀನ್ ಬಂದಿದ್ದುದನ್ನು ಕಂಡು ಆತನ ಬಳಿ ಬಂದರು. ಆ ದಿನದ ಪ್ರಮುಖ ಭಾಷಣಕಾರರು ಅನಿವಾರ್ಯ ಕಾರಣಗಳಿಂದಾಗಿ ಬರಲು ಸಾಧ್ಯವಾಗುತ್ತಿಲ್ಲವೆಂದೂ, ಅವರ ಬದಲಿಗೆ ನಸ್ರುದ್ದೀನ್‌ರವರನ್ನೇ ಭಾಷಣ ಮಾಡಬೇಕೆಂದು ಅವರು ಕೇಳಿಕೊಂಡರು. ಕೊಂಚ ಗಲಿಬಿಲಿಗೊಂಡ ನಸ್ರುದ್ದೀನ್, ‘ನಾನು ಭಾಷಣಕ್ಕೆ ಸಿದ್ಧವಾಗಿ ಬಂದಿಲ್ಲ. ಯಾವ ವಿಷಯದ ಬಗ್ಗೆ ಮಾತನಾಡಬೇಕು?’ ಎಂದು ಕೇಳಿದ.
‘ಇಂದಿನ ವಿಷಯ ಕಾಮ. ನೀವೇ ಅದರ ಬಗ್ಗೆ ಮಾತನಾಡಬೇಕು, ಏಕೆಂದರೆ ಇಲ್ಲಿಗೆ ಬಂದಿರುವ ಇತರರೆಲ್ಲರೂ ಗಂಡು ಹೆಂಡಿರು ಜೊತೆಯಲ್ಲಿ ಬಂದಿದ್ದಾರೆ. ಒಂಟಿಯಾಗಿ ಬಂದಿರುವವರು ನೀವೊಬ್ಬರೆ’ ಎಂದರು ಆಯೋಜಕರು. ಅವರು ಆ ರೀತಿ ಹೇಳಿದ್ದಷ್ಟೇ ಅಲ್ಲ ನಸ್ರುದ್ದೀನ್ ಸಮ್ಮತಿ ನೀಡುವ ಮೊದಲೇ ವೇದಿಕೆಯ ಮೇಲೆ ಹೋಗಿ ಬದುಕಿನಲ್ಲಿ ಬಹಳ ಮುಖ್ಯವಾದ ಕಾಮದ ಬಗ್ಗೆ ವಿದ್ವಾಂಸ ನಸ್ರುದ್ದೀನ್ ಮಾತನಾಡುತ್ತಾರೆ ಎಂದು ಘೋಷಿಸಿಯೂಬಿಟ್ಟರು. ಬೇರೆ ದಾರಿಯಿಲ್ಲದೆ ನಸ್ರುದ್ದೀನ್ ವೇದಿಕೆಗೆ ಹೋಗಿ ತಮ್ಮ ಭಾಷಣ ಆರಂಭಿಸಿದರು. ಆತನಿಗೂ ಅದು ಆಸಕ್ತಿಯ ವಿಷಯವಾಗಿದ್ದುದರಿಂದ ಆತ ಬಹಳ ಚೆನ್ನಾಗಿ ಕಾಮದ ಬಗ್ಗೆ ಒಂದು ಗಂಟೆ ಮಾತನಾಡಿದ. ಅಲ್ಲಿ ನೆರೆದಿದ್ದ ಜನರೆಲ್ಲಾ ಮೆಚ್ಚುಗೆಯಿಂದ ಚಪ್ಪಾಳೆ ತಟ್ಟಿದರು.
ಆ ದಿನ ರಾತ್ರಿ ಮನೆಗೆ ಹೋದಾಗ ನಸ್ರುದ್ದೀನ್ ಹೆಂಡತಿ ಕಾರ್ಯಕ್ರಮ ಹೇಗಾಯಿತೆಂದು ಕೇಳಿದಳು. ಅದಕ್ಕೆ ಆತ ಪ್ರಮುಖ ಭಾಷಣಕಾರ ಬಂದಿಲ್ಲದಿದ್ದ ಕಾರಣ ತಾನೇ ಭಾಷಣ ಮಾಡಬೇಕಾಯಿತೆಂದು ತಿಳಿಸಿದ. ಆತನ ಪತ್ನಿಯೂ ಕುತೂಹಲದಿಂದ, ‘ಹೌದೆ? ಯಾವ ವಿಷಯದ ಬಗ್ಗೆ ಮಾತನಾಡಿದಿರಿ?’ ಎಂದು ಕೇಳಿದಳು. ಕಾಮದ ಬಗ್ಗೆ ಎಂದು ಹೇಳಲು ನಸ್ರುದ್ದೀನನಿಗೆ ಸಂಕೋಚವಾಯಿತು. ತಕ್ಷಣ ಯೋಚಿಸಿ ‘ಕುದುರೆ ಸವಾರಿಯ ಬಗ್ಗೆ’ ಎಂದ. ‘ಕುದುರೆ ಸವಾರಿಯ ಬಗ್ಗೆ!’ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಆಕೆ, ‘ಅದರ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಹಾಗೂ ಅನುಭವವೂ ಇಲ್ಲವಲ್ಲ’ ಎಂದು ಕೇಳಿದಳು. ‘ಆದರೇನು. ನನಗೆ ತಿಳಿದಿಲ್ಲ ಎಂಬುದು ನನಗೂ ನಿನಗೂ ಗೊತ್ತು. ಆದರೆ ಅವರಿಗೆ ತಿಳಿದಿರಲಿಲ್ಲವಲ್ಲಾ’ ಎಂದು ಹೇಳಿ ಮಾತು ಮರೆಸಿದ.
ಮರುದಿನ ನಸ್ರುದ್ದೀನ್‌ನ ಪತ್ನಿ ತರಕಾರಿ ತರಲು ಮಾರುಕಟ್ಟೆಗೆ ಹೋದಾಗ ಅಲ್ಲಿ ಹಿಂದಿನ ದಿನ ನಸ್ರುದ್ದೀನನ ಭಾಷಣ ಕೇಳಿದ್ದ ಹಲವಾರು ಹೆಂಗಸರು ಸಿಕ್ಕಿ, ‘ಹೋ, ನಿನ್ನೆ ನಿನ್ನ ಗಂಡ ನೀಡಿದ ಭಾಷಣ ಅತ್ಯದ್ಭುತವಾಗಿತ್ತು. ಆತ ಆ ವಿಷಯದಲ್ಲಿ ಬಹಳ ನುರಿತವನೂ ಇರಬಹುದಲ್ಲವೆ?’ ಎಂದು ಕೇಳಿ ಆ ಹೆಂಗಸರು ಪರಸ್ಪರ ಮುಸಿಮುಸಿ ನಕ್ಕರು. ಅದಕ್ಕೆ ನಸ್ರುದ್ದೀನನ ಪತ್ನಿ, ‘ಅದರಲ್ಲಿ ಆತ ಅಂಥ ನುರಿತವನೇನಲ್ಲ. ಇದುವರೆಗೆ ಒಂದೆರಡು ಸಾರಿ ಹತ್ತಿರಬಹುದಷ್ಟೆ. ಮೊದಲನೆಯ ಸಲ ಆತನಿಗೆ ಹತ್ತಲಾಗಲೇ ಇಲ್ಲ. ಎರಡನೆಯ ಸಲ ಹತ್ತಿದ್ದವನು ಜಾರಿ ಕೆಳಕ್ಕೆ ಬಿದ್ದುಬಿಟ್ಟಿದ್ದ’ ಎಂದಳು. ಆ ಹೆಂಗಸರು ಮುಸಿನಗು ಮತ್ತಷ್ಟು ಹೆಚ್ಚಿತು.

ಅದೃಷ್ಟವಂತ
ನಸ್ರುದ್ದೀನ್ ಮತ್ತು ಆತನ ಪತ್ನಿ ಮನೆಯಲ್ಲಿ ಕೂತು ಊಟ ಮಾಡುತ್ತಿದ್ದರು. ಹಿತ್ತಲಲ್ಲಿ ಏನೋ ಸರಸರ ಸದ್ದಾಯಿತು. ಯಾರೋ ಕಳ್ಳ ಬಂದಿರಬಹುದೆಂದು ನಸ್ರುದ್ದೀನ್ ತನ್ನ ಬಂದೂಕು ತೆಗೆದುಕೊಂಡು ಕಿಟಕಿಯಿಂದ ನೋಡಿದ. ಹಿತ್ತಲ ತೋಟದಲ್ಲಿ ಬಿಳಿಯದೊಂದು ವಸ್ತು ಚಲಿಸಿದಂತಾಯಿತು. ತಕ್ಷಣ ತನ್ನ ಬಂದೂಕು ಗುರಿಯಿಟ್ಟು ಗುಂಡು ಹಾರಿಸಿದ. ನಂತರ ಅದೇನದು ನೋಡೋಣವೆಂದು ಹತ್ತಿರ ಹೋಗಿ ನೋಡಿದರೆ ಅದು ಆ ದಿನ ಬೆಳಿಗ್ಗೆ ಆತನ ಪತ್ನಿ ಒಗೆದು ಹಾಕಿದ್ದ ಆತನದೇ ಹಾಗೂ ಆತನಿಗೆ ಅತ್ಯಂತು ಪ್ರಿಯವಾಗಿದ್ದ ಬಿಳಿಯ ಅಂಗಿಯಾಗಿತ್ತು. ಅದು ಗಾಳಿಗೆ ಅಲುಗಾಡುತ್ತಿತ್ತು
ಹಾಗೂ ಬಂದೂಕಿನ ಗುಂಡೇಟಿನಿಂದ ಛಿದ್ರವಾಗಿತ್ತು. ಆತನ ಹಿಂದೆಯೇ ಓಡಿಬಂದ ಆತನ ಪತ್ನಿ ಬಂದೂಕಿನ ಗುಂಡೇಟಿನಿಂದ ಆತನ ಅಂಗಿಗಾಗಿದ್ದ ಗತಿ ನೋಡಿ, ‘ಅಯ್ಯೋ ದುರಾದೃಷ್ಟವಂತನೇ! ನಿನ್ನ ಪ್ರಿಯವಾದ ಅಂಗಿಯನ್ನು ನೀನೇ ಹಾಳುಮಾಡಿಕೊಂಡೆಯಾ!’ ಎಂದಳು. ‘ಇಲ್ಲ, ನಾನು ದುರಾದೃಷ್ಟವಂತನಲ್ಲ. ನಾನು ಈ ಭೂಮಿಯ ಮೇಲಿನ ಅತ್ಯಂತ ಅದೃಷ್ಟವಂತನೆಂದೇ ಹೇಳಬೇಕು. ಈ ದಿನ ಬೆಳಿಗ್ಗೆ ನಾನು ಈ ಬಿಳಿಯ ಅಂಗಿಯನ್ನೇ ಹಾಕಿಕೊಳ್ಳೋಣವೆಂದುಕೊಂಡಿದ್ದೆ. ಅದೃಷ್ಟವಶಾತ್ ಹಾಕಿಕೊಳ್ಳಲಿಲ್ಲ. ಹಾಕಿಕೊಂಡಿದ್ದಿದ್ದರೆ ಇಷ್ಟೊತ್ತಿಗೆ ಬಂದೂಕಿನ ಗುಂಡಿಗೆ ಬಲಿಯಾಗಿ ಇಲ್ಲಿ ಸತ್ತುಬಿದ್ದಿರಬೇಕಾಗಿತ್ತು’ ಎಂದ.

ಮಾನವಂತರು
ಮುಲ್ಲಾ ನಸ್ರುದ್ದೀನ್ ತನ್ನ ಗೆಳೆಯರಾದ ಒಬ್ಬ ಧರ್ಮಗುರು ಹಾಗೂ ಒಬ್ಬ ರಾಜಕಾರಣಿಯೊಂದಿಗೆ ಸಂಜೆ ತಮ್ಮೂರ ಕೆರೆಯ ಬಳಿ ವಾಯುವಿಹಾರಕ್ಕೆಂದು ಹೊರಟಿದ್ದರು. ಅವರಿಗೆ ತಮ್ಮ ಬಾಲ್ಯದ ದಿನಗಳ ನೆನಪಾಗಿ ಅವರಿಗೆ ಆ ಕೆರೆಯಲ್ಲಿ ಈಜೋಣವೆಂಬ ಮನಸ್ಸಾಯಿತು. ಮೂವರೂ ತಮ್ಮ ಬಟ್ಟೆಗಳನ್ನು ಕಳಚಿ ಕೆರೆಯ ನೀರಿನಲ್ಲಿ ಈಜತೊಡಗಿದರು. ಈಜಿನಲ್ಲಿ ಅದೆಷ್ಟು ಮೈಮರೆತರೆಂದರೆ ಹೊರಗೆ ಇವರನ್ನು ಗಮನಿಸುತ್ತಿದ್ದ ಕಿಡಿಗೇಡಿ ಹುಡುಗರ ಗುಂಪೊಂದು ಇವರ ಬಟ್ಟೆಗಳನ್ನು ಕದ್ದೊಯ್ದಿದ್ದು ಗಮನಕ್ಕೇ ಬರಲಿಲ್ಲ. ಸಂಜೆ ವಾಯು ವಿಹಾರಕ್ಕೆ ಬಂದಿದ್ದ ಹಲವಾರು ಜನ ಆ ಊರಿನ ಹೆಂಗಸರು, ಗಂಡಸರು ಇವರ ಸ್ನಾನವನ್ನೇ ಗಮನಿಸುತ್ತಿದ್ದರು. ಈಜು ಮುಗಿಸಿ ಮೇಲೆ ಬಂದ ಇವರಿಗೆ ತಮ್ಮ ಬಟ್ಟೆಗಳು ಇಲ್ಲದ್ದು ಗಮನಿಸಿ ತಕ್ಷಣ ಧರ್ಮಗುರು ಮತ್ತು ರಾಜಕಾರಣಿ ತಮ್ಮ ಕೈಗಳಿಂದ ತಮ್ಮ ಜನನಾಂಗಗಳನ್ನು ಮುಚ್ಚಿಕೊಂಡು ಮರೆಗೆ ಓಡಿದರು. ಆದರೆ ನಸ್ರುದ್ದೀನ್ ತನ್ನ ಜನನಾಂಗ ಮುಚ್ಚಿಕೊಳ್ಳುವ ಬದಲು ಕೈಗಳಿಂದ ತನ್ನ ಮುಖ ಮುಚ್ಚಿಕೊಂಡು ಓಡಿದ. ಅದನ್ನು ಗಮನಿಸಿದ ಆ ಊರಿನ ಒಬ್ಬಾತ,
‘ಛೀ! ನಾಚಿಕೆಯಾಗುವುದಿಲ್ಲವೆ. ಮುಖ ಮುಚ್ಚಿಕೊಂಡು ಬೆತ್ತಲೆಯಾಗಿ ಓಡುತ್ತಿರುವೆಯೆಲ್ಲಾ?’ ಎಂದು ಕೇಳಿದ.
ಅದಕ್ಕೆ ನಸ್ರುದ್ದೀನ್, ‘ಹೌದು ಮುಖ ಮುಚ್ಚಿಕೊಂಡು ಓಡುತ್ತಿದ್ದೇನೆ ಏಕೆಂದರೆ ನನ್ನ ಊರಿನ ಜನ ನನ್ನ ಮುಖವನ್ನು ಮಾತ್ರ ನೋಡಿದ್ದಾರೆ, ಹಾಗಾಗಿ ಅವರು ನನ್ನನ್ನು ಗುರುತುಹಿಡಿದುಬಿಡಬಹುದು’ ಎಂದ.

ಜಗತ್ತಿನ ಕೊನೆ
ಒಂದಷ್ಟು ಜನ ತತ್ವಜ್ಞಾನಿಗಳು ಹಾಗೂ ಜ್ಯೋತಿಷಿಗಳು ಜಗತ್ತು ಹೇಗೆ ಮತ್ತು ಎಂದು ಕೊನೆಗೊಳ್ಳುತ್ತದೆ ಎನ್ನುವುದರ ಬಗ್ಗೆ ಬಹಳಷ್ಟು ಚರ್ಚೆ, ವಾದ-ವಿವಾದ ನಡೆಸಿದರೂ ಯಾವುದೊಂದೂ ತೀರ್ಮಾನಕ್ಕೆ ಬರದಾದರು. ಕೊನೆಗೆ ವಿಷಯದ ಇತ್ಯರ್ಥಕ್ಕೆ ವಿದ್ವಾಂಸ ಮುಲ್ಲಾ ನಸ್ರುದ್ದಿನ್ ಬಳಿಗೆ ಹೋಗೋಣವೆಂದು ಅವರಲ್ಲೊಬ್ಬರು ಸೂಚಿಸಿದರು. ಎಲ್ಲರೂ ಸಮ್ಮತಿಸಿ ನಸ್ರುದ್ದಿನ್ ಬಳಿಗೆ ಹೋಗಿ, ‘ಜಗತ್ತು ಯಾವಾಗ ಕೊನೆಗೊಳ್ಳುತ್ತದೆ? ಅದರ ಬಗ್ಗೆ ನಿಮಗೆ ಏನಾದರೂ ತಿಳಿದಿದೆಯೆ?’ ಎಂದು ಕೇಳಿದರು.
‘ಹೋ ಹೌದು. ನನಗೆ ತಿಳಿದಿದೆ’ ಎಂದು ಹೇಳಿ ತನ್ನ ಗಡ್ಡ ನೀವಿಕೊಂಡ. ಎಲ್ಲರೂ ಕುತೂಹಲದಿಂದ ಆತನ ಸುತ್ತ ನಿಂತು, ‘ಹೇಳಿ, ಯಾವಾಗ ಕೊನೆಗೊಳ್ಳುತ್ತದೆ. ಅದನ್ನು ತಿಳಿಯಲು ನಾವೆಲ್ಲಾ, ಕಾತುರದಿಂದ ಕಾಯುತ್ತಿದ್ದೇವೆ’ ಎಂದರು.
ನಸ್ರುದ್ದಿನ್ ಅವರೆಡೆಗೆ ನೋಡುತ್ತಾ, ‘ಜಗತ್ತು ಕೊನೆಗೊಳ್ಳುವುದು ನಾನು ಸತ್ತಾಗ’ ಎಂದ.
‘ನೀವು ಸತ್ತಾಗ? ಅದ್ಹೇಗೆ ಸಾಧ್ಯ? ನಿಮ್ಮ ಸಾವಿಗೂ ಜಗತ್ತು ಕೊನೆಗೊಳ್ಳುವುದಕ್ಕೂ ಏನು ಸಂಬಂಧ?’ ಎಂದು ಕೇಳಿದರು ಆತನ ಮಾತಿನ ಅರ್ಥ ತಿಳಿಯಲಾಗದೆ.
ಅದಕ್ಕೆ ಮುಲ್ಲಾ, ‘ನಾನು ಸತ್ತಾಗ ಜಗತ್ತು ನನ್ನ ಪಾಲಿಗಂತೂ ಕೊನೆಗೊಳ್ಳುತ್ತದೆ. ನಿಮ್ಮ ಬಗೆಗೆ ನನಗೆ ಗೊತ್ತಿಲ್ಲ’ ಎಂದ.

ಪಂದ್ಯ
ಒಂದು ದಿನ ಸಂಜೆ ಕೊರೆಯುವ ಚಳಿಯಲ್ಲಿ ನಸ್ರುದ್ದೀನ್ ಮತ್ತು ಆತನ ಗೆಳೆಯರು ಚಹಾ ಸೇವಿಸುತ್ತಾ ಹರಟೆ ಹೊಡೆಯುತ್ತಿದ್ದರು. ಅವರಲ್ಲಿ ಎಲ್ಲರೂ ಚಳಿಯನ್ನು ತಡೆಯಲಾಗದೆ ನಡುಗುತ್ತಿದ್ದರು. ನಸ್ರುದ್ದೀನ್ ಮಾತ್ರ ತಾನು ಎಂತಹ ಚಳಿಯನ್ನು ಬೇಕಾದರೂ ತಡೆಯಬಲ್ಲೆ ಎನ್ನುತ್ತಿದ್ದ. ಅವರಲ್ಲೊಬ್ಬ, ‘ನಸ್ರುದ್ದೀನ್, ನೀನು ಇಡೀ ರಾತ್ರಿ ಇದೇ ತೊಟ್ಟ ಬಟ್ಟೆಯಲ್ಲಿ ಬೆಂಕಿ ಏನೂ ಕಾಯಿಸಿಕೊಳ್ಳದೆ ಊರ ಚೌಕದಲ್ಲಿ ಬೆಳಗಿನವರೆಗೂ ಇದ್ದರೆ ನಿನಗೆ ನಾಳೆ ಔತಣಕೂಟ ಏರ್ಪಡಿಸುತ್ತೇವೆ. ನೀನು ಸೋತಲ್ಲಿ ನಮಗೆ ಔತಣ ಏರ್ಪಡಿಸಬೇಕು. ಪಂದ್ಯ ಕಟ್ಟುವೆಯಾ?’ ಎಂದ. ನಸ್ರುದ್ದೀನ್ ಒಪ್ಪಿಕೊಂಡ.
ಆ ದಿನ ಇಡೀ ರಾತ್ರಿ ನಸ್ರುದ್ದೀನ್ ಊರ ಮಧ್ಯದ ಚೌಕದಲ್ಲಿ ತಳಿ ಸಹಿಸಿಕೊಂಡು ಬೆಳಗಿನವರೆಗೂ ಇದ್ದ. ಬೆಳಗಾದ ಕೂಡಲೇ ಪಂದ್ಯ ಕಟ್ಟಿದವನ ಮನೆಗೆ ಹೋಗಿ ತಾನು ಪಂದ್ಯದಲ್ಲಿ ಗೆದ್ದಿರುವುದಾಗಿಯೂ, ಆ ದಿನ ತನಗೆ ಔತಣ ಏರ್ಪಡಿಸಲು ಸಿದ್ಧತೆ ಮಾಡಿಕೊಳ್ಳಿ ಎಂದ. ಆದರೆ ಸೋಲನ್ನು ಒಪ್ಪಿಕೊಳ್ಳಲಾಗದ ಆ ಗೆಳೆಯ ಇತರರನ್ನೂ ಸೇರಿಸಿ, ‘ನೀನು ಪಂದ್ಯದಲ್ಲಿ ಗೆದ್ದೇ ಇಲ್ಲ. ನಾನು ಮಧ್ಯರಾತ್ರಿ ಬಂದು ನೋಡಿದೆ. ರಸ್ತೆಯ ಕೊನೆಯಲ್ಲಿನ ಮನೆಯ ಕಿಟಕಿಯಲ್ಲಿ ಒಂದು ಮೋಂಬತ್ತಿ ಉರಿಯುತ್ತಿರುವುದನ್ನು ನೋಡಿದೆ. ಅದರ ಶಾಖ ನಿನ್ನನ್ನು ಬೆಚ್ಚಗಿಟ್ಟಿದೆ. ಹಾಗಾಗಿ ನೀನು ಪಂದ್ಯದಲ್ಲಿ ಸೋತ್ತಿದ್ದೀಯ’ ಎಂದ. ರಸ್ತೆಯ ಕೊನೆಯ ಮನೆಯ ಕಿಟಕಿಯ ಹಿಂದೆ ಇದ್ದ ಮೋಂಬತ್ತಿ ತನ್ನನ್ನು ಬೆಚ್ಚಗಾಗಿಸುವಷ್ಟು ಶಾಖ ಕೊಡಲು ಸಾಧ್ಯವೇ ಇಲ್ಲ ಎಂದು ನಸ್ರುದ್ದೀನ್ ಎಷ್ಟು ವಾದಿಸಿದರೂ ಒಪ್ಪಲಿಲ್ಲ. ಆಯಿತೆಂದು ಸೋಲನ್ನು ಒಪ್ಪಿಕೊಂಡ ಆತ ಪಂದ್ಯದ ನಿಯಮದಂತೆ ಎಲ್ಲರನ್ನೂ ಆ ದಿನ ರಾತ್ರಿ ತನ್ನ ಮನೆಗೆ ಔತಣಕ್ಕೆ ಆಹ್ವಾನಿಸಿದ.
ರಾತ್ರಿ ಎಲ್ಲ ಗೆಳೆಯರೂ ಊಟಕ್ಕೆ ಬಂದರು. ಎಲ್ಲರನ್ನೂ ಆಹ್ವಾನಿಸಿ, ಅಡುಗೆ ಸಿದ್ಧವಾಗುತ್ತಿದೆಯೆಂದು ಹೇಳಿ ಎಲ್ಲರಿಗೂ ಕೂಡ್ರಲು ತಿಳಿಸಿದ. ಗೆಳೆಯರು ಅದೂ ಇದೂ ಮಾತನಾಡುತ್ತಾ ಕೂತರು. ಒಂದು ಗಂಟೆಯಾಯಿತು, ಎರಡು ಗಂಟೆಯಾಯಿತು. ನಸ್ರುದ್ದೀನ್ ಊಟದ ವಿಷಯವನ್ನೇ ಮಾತನಾಡುತ್ತಿರಲಿಲ್ಲ. ಅವರು ಕೇಳಿದರೆ, ‘ಅಡುಗೆ ಬೇಯುತ್ತಿದೆ. ಇನ್ನೇನು ಸಿದ್ಧವಾಗಿಬಿಡುತ್ತದೆ’ ಎನ್ನುತ್ತಿದ್ದ. ಕೊನೆಗೆ ಹಸಿವನ್ನು ತಾಳಲಾಗದೆ ಅವರು ಒತ್ತಾಯಿಸಿದಾಗ, ‘ನೀವೇ ಬೇಕಾದರೆ ಅಡುಗೆ ಮನೆಗೆ ಹೋಗಿ ನೋಡಿ. ಅಡುಗೆ ಬೇಯುತ್ತಿದೆ’ ಎಂದ. ಅವರು ಅಡುಗೆ ಮನೆಗೆ ಹೋಗಿ ನೋಡಿದಾಗ ಪಾತ್ರೆಯನ್ನು ಹಗ್ಗದಿಂದ ಮೇಲೆ ಕಟ್ಟಲಾಗಿತ್ತು ಹಾಗೂ ಅದರ ಕೆಳಗೆ ಆರಡಿ ಅಂತರದಲ್ಲಿ ಒಂದು ಉರಿಗಾಗಿ ಒಂದು ಮೋಂಬತ್ತಿ ಉರಿಸಲಾಗಿತ್ತು. ಆ ಗೆಳೆಯರು ಸಿಟ್ಟಾಗಿ, ಆ ಮೋಂಬತ್ತಿಯ ಉರಿಯಲ್ಲಿ ಅಡುಗೆ ಹೇಗೆ ಬೇಯಲು ಸಾಧ್ಯ?’ ಎಂದು ಕೇಳಿದರು. ಅದಕ್ಕೆ ನಸ್ರುದ್ದೀನ್, ‘ರಸ್ತೆಯ ಕೊನೆಯ ಮನೆಯ ಕಿಟಕಿಯ ಹಿಂದಿನ ಮೋಂಬತ್ತಿ ಊರ ಚೌಕದ ಮಧ್ಯದಲ್ಲಿದ್ದ ನನ್ನನ್ನು ಬೆಚ್ಚಗಿಡಬಹುದಾದಲ್ಲಿ, ಆರಡಿ ಕೆಳಗಿನ ಮೋಂಬತ್ತಿ ಅಡುಗೆಯನ್ನು ಬೇಯಿಸಬಾರದೇಕೆ?’ ಎಂದ. ಭಾರೀ ಔತಣದ ಆಸೆ ಹೊತ್ತು ಬಂದಿದ್ದ ಗೆಳೆಯರ ಬಾಯಿಂದ ಮಾತೇ ಹೊರಡಲಿಲ್ಲ.

ಗುರುವಾರ, ಫೆಬ್ರವರಿ 16, 2012

ಮುಲ್ಲಾ ನಸ್ರುದ್ದೀನ್ ಕತೆಗಳು - 2

ಯಾರ ಮಾತನ್ನು ನಂಬುತ್ತೀಯೆ?
ಒಂದು ದಿನ ಪಕ್ಕದ ಮನೆಯಾತ ನಸ್ರುದ್ದೀನ್ ಬಳಿ ಬಂದು, ‘ಈ ದಿನ ಸಂತೆಯಿಂದ ಕೆಲವು ಸಾಮಾನು ತರಬೇಕಿದೆ. ನನ್ನ ಕತ್ತೆಗೆ ಕಾಯಿಲೆಯಾಗಿದೆ. ನಿನ್ನ ಕತ್ತೆಯನ್ನು ಕೊಡುವೆಯಾ?’ ಎಂದು ಕೇಳಿದ.
ಆತನಿಗೆ ತನ್ನ ಕತ್ತೆಯನ್ನು ಕೊಡಲು ಇಷ್ಟವಿಲ್ಲದ ನಸ್ರುದ್ದೀನ್, ‘ಕ್ಷಮಿಸು ಗೆಳೆಯಾ, ನನ್ನ ಕತ್ತೆಯನ್ನು ಈಗಾಗಲೇ ಬೇರೆ ಯಾರಿಗೋ ಕೊಟ್ಟಿದ್ದೇನೆ’ ಎಂದ.
ಅಷ್ಟರಲ್ಲಿ ನಸ್ರುದ್ದೀನ್‌ನ ಮನೆಯ ಹಿತ್ತಲಲ್ಲಿದ್ದ ಕತ್ತೆ ಜೋರಾಗಿ ಕೂಗಿತು.
ಅದನ್ನು ಕೇಳಿಸಿಕೊಂಡ ಪಕ್ಕದ ಮನೆಯಾತ, ‘ಸುಳ್ಳು ಹೇಳುತ್ತಿದ್ದೀಯ ಹೋಜಾ! ನೋಡು ಕತ್ತೆ ನಿನ್ನ ಮನೆಯ ಹಿತ್ತಲಲ್ಲೇ ಇದೆ!’ ಎಂದ.
‘ನಾನು ಸುಳ್ಳು ಹೇಳುತ್ತಿದ್ದೀನೆಯೆ! ನೀನು ನನ್ನ ಮಾತನ್ನು ನಂಬುತ್ತೀಯಾ ಅಥವಾ ಆ ಕತ್ತೆಯ ಮಾತನ್ನೇ?’ ಕೇಳಿದ ನಸ್ರುದ್ದೀನ್.

***
ಚಿಕ್ಕ ಮೀನು - ದೊಡ್ಡ ಮೀನು
ಪ್ರಖ್ಯಾತ ವಿದ್ವಾಂಸನೊಬ್ಬ ನಸ್ರುದ್ದೀನ್‌ನ ಹಳ್ಳಿಯಲ್ಲಿ ಹಾದು ಹೋಗುತ್ತಿದ್ದ. ಆತನಿಗೆ ಹಸಿವಾಗಿತ್ತು. ಎದುರಿಗೆ ಸಿಕ್ಕ ನಸ್ರುದ್ದೀನ್‌ನನ್ನು ಆ ಊರಿನಲ್ಲಿ ಒಳ್ಳೆಯ ಊಟ ಸಿಗುವ ಸ್ಥಳ ಯಾವುದು ಎಂದು ಕೇಳಿದ. ನಸ್ರುದ್ದೀನ್ ತನಗೆ ತಿಳಿದಿದ್ದ ಉಪಾಹಾರ ಮಂದಿರದ ವಿಳಾಸ ತಿಳಿಸಿದ. ಆ ವಿದ್ವಾಂಸನಿಗೆ ನಸ್ರುದ್ದೀನ್ ಸಹ ಒಬ್ಬ ವಿದ್ವಾಂಸನ ಹಾಗೆ ಕಂಡು ಆತನೊಂದಿಗೆ ಬಹಳಷ್ಟು ವಿಷಯ ಚರ್ಚೆ ಮಾಡಬಹುದೆಂದು ಆತನನ್ನು ಸಹ ತನ್ನ ಜೊತೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಬಹಳ ಸಂತೋಷದಿಂದ ಒಪ್ಪಿದ ನಸ್ರುದ್ದೀನ್ ಆತನನ್ನು ಉಪಾಹಾರ ಮಂದಿರಕ್ಕೆ ಕರೆದೊಯ್ದ. ಅಲ್ಲಿ ಊಟಕ್ಕೆ ತಾಜಾ ಮೀನು ಸಿಗುತ್ತದೆ ಎಂದು ತಿಳಿದು ವಿದ್ವಾಂಸ ಎರಡು ಮೀನು ಬಡಿಸಲು ಹೇಳಿದ. ಬಡಿಸುವವ ತಟ್ಟೆಯಲ್ಲಿ ಎರಡು ಮೀನು ತಂದಾಗ ಅದರಲ್ಲಿ ಒಂದು ಸ್ವಲ್ಪ ದೊಡ್ಡದು ಮತ್ತೊಂದು ಸಣ್ಣದಿತ್ತು. ನಸ್ರುದ್ದೀನ್ ಗಬಕ್ಕನೆ ದೊಡ್ಡ ಮೀನನ್ನು ಎತ್ತಿ ತನ್ನ ತಟ್ಟೆಗೆ ಹಾಕಿಕೊಂಡ. ಅದನ್ನು ನೋಡಿದ ವಿದ್ವಾಂಸ ಮುಲ್ಲಾ ನಸ್ರುದ್ದೀನ್‌ಗೆ ಆತನ ನಡತೆಯ ಬಗ್ಗೆ ದೊಡ್ಡ ಭಾಷಣವನ್ನೇ ಮಾಡಿದ. ಆ ರೀತಿ ಯಾವುದೇ ವ್ಯಕ್ತಿ ಸ್ವಾರ್ಥಿಯಾಗಿರಬಾರದೆಂದೂ, ಆ ರೀತಿಯ ನಡತೆಯು ಎಲ್ಲ ನೈತಿಕ ಮೌಲ್ಯಗಳನ್ನು ಧಿಕ್ಕರಿಸುವುದೆಂದೂ ಹೇಳಿದ. ಆ ವಿದ್ವಾಂಸ ಬಹಳಷ್ಟು ಹೇಳಿ ತನ್ನ ಭಾಷಣ ನಿಲ್ಲಿಸಿದ. ಅದನ್ನೇ ಕಾಯುತ್ತಿದ್ದ ನಸ್ರುದ್ದೀನ್, ‘ನನ್ನ ಸ್ಥಾನದಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ?’ ಎಂದು ಕೇಳಿದ.
‘ನಾನು ನಿಸ್ವಾರ್ಥಿ, ಇತರರ ಬಗ್ಗೆ ಆಲೋಚಿಸುವವನು. ಹಾಗಾಗಿ ನಾನು ಮೊದಲು ಚಿಕ್ಕ ಮೀನೇ ತೆಗೆದುಕೊಳ್ಳುತ್ತಿದ್ದೆ’ ಎಂದ ವಿದ್ವಾಂಸ.
ಅದಕ್ಕೆ ನಸ್ರುದ್ದೀನ್, ‘ಹೌದೆ. ತೆಗೆದುಕೊಳ್ಳಿ, ನಿಮ್ಮ ಚಿಕ್ಕ ಮೀನು ಇನ್ನೂ ಇಲ್ಲೇ ಇದೆ’ ಎನ್ನುತ್ತಾ ಅದನ್ನು ತೆಗೆದು ವಿದ್ವಾಂಸನ ತಟ್ಟೆಗೆ ಹಾಕಿದ.

***

ನೋಡು ಅಲ್ಲಾಡುತ್ತಿದ್ದಾನೆ!
ನಸ್ರುದ್ದೀನ್ ತನ್ನ ಗೆಳೆಯರ ಜೊತೆ ಕೂತು ಹರಟೆ ಹೊಡೆಯುತ್ತಿದ್ದ. ಅವರ ಮಾತಿನ ವಿಷಯ ಸಾವಿನ ಕಡೆಗೆ ಹೊರಳಿತು. ಅವರಲ್ಲೊಬ್ಬ, ‘ನೀನು ಸತ್ತು ನಿನ್ನ ಹೆಣ ಶವದ ಪೆಟ್ಟಿಗೆಯಲ್ಲಿರುವಾಗ ನಿನ್ನನ್ನು ನೋಡುವ ಬಂಧು ಬಳಗದವರ ಬಾಯಿಂದ ಯಾವ ಮಾತನ್ನು ಕೇಳಲು ಬಯಸುತ್ತೀಯೆ?’ ಎಂದ.
ಅವರಲ್ಲಿ ವೈದ್ಯನಾದವನೊಬ್ಬ, ‘ಅವರು ನನ್ನನ್ನು ನೋಡುತ್ತಾ, ಆತನೊಬ್ಬ ಮಹಾನ್ ವೈದ್ಯನಾಗಿದ್ದ, ಒಳ್ಳೆಯ ವ್ಯಕ್ತಿಯಾಗಿದ್ದ’ ಎನ್ನುವುದನ್ನು ಕೇಳಲು ಬಯಸುತ್ತೇನೆ ಎಂದ.
ಮತ್ತೊಬ್ಬ ಅಧ್ಯಾಪಕನಾಗಿದ್ದವನು, ‘ಆತನೊಬ್ಬ ಒಳ್ಳೆಯ ಅಧ್ಯಾಪಕ, ಮಕ್ಕಳ ಭವಿಷ್ಯವನ್ನು ಚೆನ್ನಾಗಿ ರೂಪಿಸಿದಾತ, ಆತ ತನ್ನ ಹೆಂಡತಿಗೆ ಅದ್ಭುತ ಗಂಡನೂ ಆಗಿದ್ದ ಎಂದು ಕೇಳಲು ಬಯಸುತ್ತೇನೆ’ ಎಂದ.
ನಸ್ರುದ್ದೀನ್‌ನ ಸರದಿ ಬಂದಾಗ ಆತ, ‘ನನ್ನ ಬಂಧು ಬಳಗದವರು ನನ್ನ ಹೆಣವನ್ನು ನೋಡುತ್ತಾ ಆತ ಪುನಃ ಬದುಕಿದ್ದಾನೆ, ನೋಡು ಅಲ್ಲಾಡುತ್ತಿದ್ದಾನೆ ಎನ್ನುವುದನ್ನು ಕೇಳಲು ಬಯಸುತ್ತೇನೆ’ ಎಂದ.
***

ದೇವರೆಂಬ ಬದನೆಕಾಯಿ
ದರ್ವೇಶಿಗಳ ಗುರು ನಸ್ರುದ್ದೀನ್‌ನನ್ನು ಒಮ್ಮೆ ‘ದೇವರ ಸ್ವರೂಪ’ದ ಬಗ್ಗೆ ಮಾತನಾಡಲು ಮಸೀದಿಗೆ ಕರೆಸಲಾಯಿತು. ಅಲ್ಲಿ ಬಹಳ ವಿದ್ವಾಂಸರು ಸೇರಿದ್ದರು. ಅವರೆಲ್ಲಾ ದೇವರ ಸ್ವರೂಪದ ಬಗೆಗೆ ಸುದೀರ್ಘ ಭಾಷಣಗಳನ್ನು ಮಾಡಿದರು. ಅಲ್ಲಿ ನೆರೆದಿದ್ದ ಜನರೆಲ್ಲಾ ಅವರ ವಿದ್ವತ್ತಿಗೆ ತಲೆದೂಗಿದರು. ಕೊನೆಗೆ ನಸ್ರುದ್ದೀನ್‌ನ ಸರದಿ ಬಂತು. ನಸ್ರುದ್ದೀನ್ ಬಹಳ ಸಂಕೋಚದಿಂದಲೇ ಎದ್ದು ನಿಂತ.
‘ದೇವರೆಂದರೆ..........’ ನಸ್ರುದ್ದೀನ್‌ಗೆ ಏನು ಹೇಳಬೇಕೆಂದು ತೋಚಲಿಲ್ಲ. ಕೊನೆಗೆ ತನ್ನ ಜೇಬಿನಲ್ಲಿದ್ದ ಒಂದು ಬದನೆಕಾಯಿ ತೆಗೆದು, ‘ದೇವರೆಂದರೆ...ಈ ಬದನೆಕಾಯಿ’ ಎಂದ. ವಿದ್ವಾಂಸರು ಮತ್ತು ಅಲ್ಲಿ ನೆರೆದಿದ್ದ ಜನರೆಲ್ಲಾ ‘ಹೋ’ ಎಂದು ಉದ್ಗಾರ ತೆಗೆದರು. ನಸ್ರುದ್ದೀನ್ ದೈವ ನಿಂದನೆ ಮಾಡಿದ್ದಾನೆಂದು ತಮ್ಮ ತಮ್ಮಲ್ಲೇ ಮಾತನಾಡಿ ಕೊಳ್ಳತೊಡಗಿದರು. ಕೊನೆಗೆ ವಿದ್ವಾಂಸನೊಬ್ಬ ಎದ್ದು ನಿಂತು ಜನರನ್ನು ನಿಶ್ಶಬ್ದಗೊಳಿಸಿ ತನ್ನ ಮಾತಿನ ಅರ್ಥ ವಿವರಿಸುವಂತೆ ನಸ್ರುದ್ದೀನ್‌ನನ್ನು ಕೇಳಿದ.
ನಸ್ರುದ್ದೀನ್, ‘ಈ ದಿನ ಇಲ್ಲಿನ ವಿದ್ವಾಂಸರೆಲ್ಲಾ ತಾವು ಕಂಡಿರದುದ್ದನ್ನು ಹಾಗೂ ತಾವು ಅರ್ಥಮಾಡಿಕೊಂಡಿಲ್ಲದಿರುವುದರ ಬಗೆಗೆ ಮಾತನಾಡಿದ್ದಾರೆ. ದೇವರು ಈ ಭೂಮಿಯ ಎಲ್ಲಾ ವಸ್ತುಗಳಲ್ಲಿಯೂ ಇದ್ದಾನಲ್ಲವೆ? ನಾವೆಲ್ಲಾ ಬದನೆಕಾಯಿ ನೋಡಿದ್ದೇವಲ್ಲವೆ?’ ಎಂದು ಸಭಿಕರನ್ನು ಪ್ರಶ್ನಿಸಿದ.
ಜನರು ಹೌದೆಂದು ತಲೆಯಾಡಿಸಿದರು.
‘ಹಾಗಾದರೆ, ದೇವರೆಂದರೆ ಈ ಬದನೆಕಾಯಿ’ ಎಂದು ಹೇಳಿ ತನ್ನ ಸ್ಥಾನದಲ್ಲಿ ಹೋಗಿ ಕೂತ.
***

ಸತ್ತವನು ಯಾರು?
ಒಬ್ಬ ಸತ್ತ ವ್ಯಕ್ತಿಯನ್ನು ಅಂತ್ಯಸಂಸ್ಕಾರಕ್ಕೆಂದು ಹೊತ್ತೊಯ್ಯುತ್ತಿದ್ದರು. ಆತನ ಬಂಧುಬಳಗದ ದೊಡ್ಡ ಹಿಂಡೇ ಅದನ್ನು ಹಿಂಬಾಲಿಸುತ್ತಿತ್ತು. ಆ ಊರಿಗೆ ಹೊಸದಾಗಿ ಬಂದಿದ್ದ ವ್ಯಕ್ತಿಯೊಬ್ಬ ಅಲ್ಲೇ ಪಕ್ಕದಲ್ಲಿ ನಿಂತು ನೋಡುತ್ತಿದ್ದ ನಸ್ರುದ್ದೀನ್‌ನನ್ನು ‘ಸತ್ತಿರುವ ವ್ಯಕ್ತಿ ಯಾರು?’ ಎಂದು ಕೇಳಿದ.
ಯಾವುದೋ ಆಲೋಚನೆಯಲ್ಲಿದ್ದ ನಸ್ರುದ್ದೀನ್, ‘ಯಾರೋಪ್ಪ, ನನಗೂ ಗೊತ್ತಿಲ್ಲ. ಬಹುಶಃ ಆ ಶವಪೆಟ್ಟಿಗೆಯಲ್ಲಿರುವ ವ್ಯಕ್ತಿಯೇ ಇರಬೇಕು’ ಎಂದ.
****

ಕತ್ತೆ ಮತ್ತು ಮುಠ್ಠಾಳರು
ಮುಲ್ಲಾ ನಸ್ರುದ್ದೀನ್ ಮತ್ತು ಆತನ ಮಗ ತಮ್ಮ ಕತ್ತೆಯ ಮೇಲೆ ಕೂತು ಮಾರುಕಟ್ಟೆಗೆ ಹೋಗುತ್ತಿದ್ದರು. ಅದನ್ನು ನೋಡಿದ ಕೆಲವರು, ‘ಎಂಥಾ ಕಾಲ ಬಂತು ನೋಡಿ! ಈ ಇಬ್ಬರು ಜನ ಮೂಕ ಪ್ರಾಣಿಯ ಮೇಲೆ ಕೂತು ಹೋಗುತ್ತಿದ್ದಾರೆ. ಬಡಪಾಯಿ ಪ್ರಾಣಿ ಅವರ ತೂಕಕ್ಕೆ ಬಾಗಿಹೋಗಿದೆ!’ ಎಂದರು.
ಆ ಮಾತನ್ನು ಕೇಳಿದ ನಸ್ರುದ್ದೀನ್ ತನ್ನ ಮಗನಿಗೆ ಕತ್ತೆಯಿಂದ ಕೆಳಗಿಳಿದು ನಡೆದುಕೊಂಡು ಬರಲು ತಿಳಿಸಿದ. ಸ್ವಲ್ಪ ಮುಂದೆ ಹೋದಂತೆ ರಸ್ತೆಯ ಬದಿಯಲ್ಲಿ ನಿಂತಿದ್ದ ಕೆಲವರು, ‘ಎಂಥಾ ಕಾಲ ಬಂತು ನೋಡಿ! ಈ ಧಡಿಯ ತನ್ನ ಬಡಪಾಯಿ ಮಗನನ್ನು ನಡೆಸಿಕೊಂಡು ತಾನು ಕತ್ತೆಯ ಮೇಲೆ ಕೂತು ಹೋಗುತ್ತಿದ್ದಾನೆ!’ ಎಂದರು.
ಅದನ್ನು ಕೇಳಿಸಿಕೊಂಡ ನಸ್ರುದ್ದೀನ್ ತಾನು ಕತ್ತೆಯಿಂದ ಕೆಳಗಿಳಿದು ತನ್ನ ಮಗನನ್ನು ಕತ್ತೆಯ ಮೇಲೆ ಕೂರಿಸಿ, ತಾನು ಅವರ ಪಕ್ಕದಲ್ಲಿ ನಡೆಯುತ್ತಾ ಹೋದ. ಒಂದಷ್ಟು ದೂರ ಹೋದ ಮೇಲೆ ಒಂದು ಜನರ ಗುಂಪು ಇವರನ್ನು ಹಾದು ಹೋಯಿತು. ಅವರಲ್ಲೊಬ್ಬ, ‘ಎಂಥಾ ಕಾಲ ಬಂತು ನೋಡಿ! ವಯಸ್ಸಿನ ಹುಡುಗ ಕತ್ತೆಯ ಮೇಲೆ ಕೂತು ಹೋಗುತ್ತಿದ್ದಾನೆ, ವಯಸ್ಸಾದ ಆತನ ತಂದೆ ನಡೆದುಹೋಗುತ್ತಿದ್ದಾನೆ!’ ಎಂದ.
ಆತನ ಮಾತು ಕೇಳಿಸಿಕೊಂಡ ನಸ್ರುದ್ದೀನ್ ತನ್ನ ಮಗನನ್ನೂ ಕೆಳಕ್ಕಿಳಿಸಿ ಕತ್ತೆಯ ಹಗ್ಗ ಹಿಡಿದುಕೊಂಡು ಅದನ್ನು ಕರೆದೊಯ್ಯುತ್ತಾ ಇಬ್ಬರೂ ನಡೆದುಕೊಂಡು ಹೊರಟರು. ಎದುರಿಗೆ ಮತ್ತೊಂದು ಜನರ ಗುಂಪು ಬಂದಿತು. ಇವರನ್ನು ನೋಡಿದ ಅವರಲ್ಲೊಬ್ಬಾತ, ‘ಈ ಮುಠ್ಠಾಳರನ್ನು ನೋಡಿ! ಅವರ ಬಳಿ ಕತ್ತೆಯೊಂದಿದೆ, ಆದರೂ ನಡೆದು ಹೋಗುತ್ತಿದ್ದಾರೆ!’ ಎಂದ.
***
ಪ್ರವಚನ
ಮುಲ್ಲಾ ತನ್ನ ಹಳ್ಳಿಯ ಮಸೀದಿಯಲ್ಲಿ ಪ್ರತಿ ಶುಕ್ರವಾರ ಗ್ರಾಮಸ್ಥರಿಗೆ ಪ್ರವಚನ ನೀಡುತ್ತಿದ್ದ. ಒಂದು ದಿನ ಆತನಿಗೆ ಹೇಳಲು ಏನೂ ಇರಲಿಲ್ಲ. ಆದರೂ ಅದನ್ನು ತೋರಗೊಡದೆ ಆತ, ‘ಈ ದಿನ ನಾನು ಯಾವ ವಿಷಯದ ಬಗೆಗೆ ಮಾತನಾಡುತ್ತೇನೆ ಗೊತ್ತೆ?’ ಎಂದು ಕೇಳಿದ. ಅಲ್ಲಿ ನೆರೆದಿದ್ದ ಜನ ‘ಇಲ್ಲ’ ಎಂದರು. ‘ಹಾಗಾದರೆ ನಿಮ್ಮಂಥ ದಡ್ಡರಿಗೆ ಪ್ರವಚನ ಮಾಡುವುದರಿಂದ ಏನು ಲಾಭ? ಕಳೆದ ಒಂದು ವಾರದಲ್ಲಿ ಈ ಜಗತ್ತಿನಲ್ಲಿ ಏನೇನು ನಡೆದಿದೆ ಎನ್ನುವುದೂ ನಿಮಗೆ ತಿಳಿದಿಲ್ಲ!’ ಎಂದು ಮುನಿಸಿಕೊಂಡವನಂತೆ ಹೇಳಿ ಅಲ್ಲಿಂದ ಹೊರಟುಹೋದ.
ಮುಂದಿನ ಶುಕ್ರವಾರ ಮಸೀದಿಗೆ ಪ್ರವಚನಕ್ಕೆ ಬಂದಾಗ ಅಲ್ಲಿ ನೆರೆದಿದ್ದ ಜನರಿಗೆ ಪುನಃ ಅದೇ ಪ್ರಶ್ನೆ ಕೇಳಿದ, ‘ಈ ದಿನ ನಾನು ಯಾವ ವಿಷಯದ ಬಗೆಗೆ ಮಾತನಾಡುತ್ತೇನೆ ಗೊತ್ತೆ?’. ಕಳೆದ ವಾರ ಮುಲ್ಲಾ ಸಿಟ್ಟು ಮಾಡಿಕೊಂಡು ಹೋದದ್ದದ್ದು ಜನರಿಗೆ ನೆನಪಿದ್ದುದರಿಂದ ಯಾರೂ ‘ಇಲ್ಲ’ ಎಂದು ಹೇಳಲಿಲ್ಲ, ಬದಲಿಗೆ ‘ನಮಗೆ ತಿಳಿದಿದೆ’ ಎಂದರು. ‘ಹೌದೆ? ನಿಮಗೆ ಈಗಾಗಲೇ ಎಲ್ಲಾ ತಿಳಿದಿರುವುದರಿಂದ ನಾನು ಏನು ಹೇಳಲಿ? ನನಗೆ ಹೇಳುವುದೇನೂ ಉಳಿದಿಲ್ಲ’ ಎಂದು ಹೇಳಿ ಮುಲ್ಲಾ ನಸ್ರುದ್ದೀನ್ ಅಲ್ಲಿಂದ ಹೊರಟುಹೋದ. ಮೂರನೇ ಶುಕ್ರವಾರ ಎಂದಿನಂತೆ ಮುಲ್ಲಾ ಮಸೀದಿಗೆ ಬಂದು ಆ ವಾರವೂ ಆತ ಅದೇ ಪ್ರಶ್ನೆಯನ್ನು ಕೇಳಿದ. ಆತನ ಪ್ರವಚನ ಕೇಳಲು ಬಂದ ಜನರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಕೆಲವರು ‘ಗೊತ್ತಿಲ್ಲ’ ಎಂದರು, ಇನ್ನು ಕೆಲವರು ‘ಗೊತ್ತಿದೆ’ ಎಂದರು. ಅದನ್ನು ಕೇಳಿದ ಮುಲ್ಲಾ, ‘ಒಂದು ಕೆಲಸ ಮಾಡಿ. ಗೊತ್ತಿದೆ ಎಂದವರು ಗೊತ್ತಿಲ್ಲ ಎಂದವರಿಗೆ ತಿಳಿಸಿ ಹೇಳಿಬಿಡಿ’ ಎಂದು ಹೇಳಿ ಅಲ್ಲಿಂದ ಹೊರಟುಹೋದ.

***
ಅಸಾಮಾನ್ಯ ಶಕ್ತಿ
ಮುಲ್ಲಾ ಎಷ್ಟು ವಯಸ್ಸಾಗಿದ್ದರೂ ತನ್ನ ಶಕ್ತಿ ಏನೂ ಕುಂದಿಲ್ಲವೆಂದು ತನ್ನ ಗೆಳೆಯರ ಬಳಿ ಜಂಭಕೊಚ್ಚಿಕೊಳ್ಳುತ್ತಿದ್ದ.
‘ಅದು ಹೇಗೆ ಸಾಧ್ಯ?’ ಆತನ ಗೆಳೆಯರು ಕೇಳಿದರು.
‘ನನ್ನ ಮನೆಯ ಎದುರು ಒಂದು ದೊಡ್ಡ ಕಲ್ಲಿದೆ ನೋಡಿ. ನಾನು ಯುವಕನಾಗಿದ್ದಾಗ ಆ ಕಲ್ಲು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಈಗ ವಯಸ್ಸಾದ ಮೇಲೂ ಅದನ್ನು ಎತ್ತಲು ಸಾಧ್ಯವಾಗುತ್ತಿಲ್ಲ’ ಎಂದ ನಸ್ರುದ್ದೀನ್.

***
ಸುಳ್ಳೆಂಬ ಸತ್ಯ
ಒಂದು ದಿನ ಒಬ್ಬ ದಡ್ಡ ನಸ್ರುದ್ದೀನ್‌ನನ್ನು ಕೇಳಿದ, ‘ದೇವರು ಸತ್ಯವೆ?’
‘ಈ ಜಗತ್ತಿನಲ್ಲಿರುವುದೆಲ್ಲಾ ಸತ್ಯ’ ಹೇಳಿದ ನಸ್ರುದ್ದೀನ್.
‘ಹಾಗಾದರೆ ಸುಳ್ಳುಗಳೂ ಸಹ ಸತ್ಯವೆ?’
‘ಹೌದು, ಸುಳ್ಳುಗಳೂ ಸಹ ಸತ್ಯ’
‘ಅದು ಹೇಗೆ ಸಾಧ್ಯ?’
‘ನನಗೇನು ಗೊತ್ತು. ಅವುಗಳನ್ನು ನಾನು ಮಾಡಿಲ್ಲವಲ್ಲ!’ ಹೇಳಿದ ನಸ್ರುದ್ದೀನ್.

***
ನಂಬಿಕೆ
ಒಂದು ದಿನ ನಸ್ರುದ್ದೀನ್ ಮತ್ತು ಆತನ ಗೆಳೆಯರು ಊರಿನ ಜನಗಳಿಗೆ ಒಂದು ಸುಳ್ಳು ಹೇಳಿ ತಮಾಷೆ ಮಾಡೋಣವೆಂದು ನಿರ್ಧರಿಸಿದರು. ನಸ್ರುದ್ದೀನ್ ಊರಿನ ಜನರನ್ನೆಲ್ಲಾ ಸೇರಿಸಿ ಊರಿನ ಪಕ್ಕದಲ್ಲಿರುವ ಬೆಟ್ಟದ ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಧಿಯಿದೆ ಎಂದು ಹೇಳಿದ. ಆತನ ಮಾತನ್ನು ನಂಬಿದ ಜನರೆಲ್ಲಾ ಆ ನಿಧಿಯನ್ನು ಪಡೆಯಲು ಬೆಟ್ಟದೆಡೆಗೆ ಓಡತೊಡಗಿದರು. ನಸ್ರುದ್ದೀನ್ ಸಹ ಅವರ ಜೊತೆ ಓಡತೊಡಗಿದ. ಅದನ್ನು ನೋಡಿದ ಆತನ ಗೆಳೆಯ ‘ನೀನ್ಯಾಕೆ ಅವರ ಜೊತೆ ಓಡುತ್ತಿದ್ದೀಯೆ?’ ಎಂದು ಕೇಳಿದ್ದಕ್ಕೆ, ‘ಅಷ್ಟೊಂದು ಜನ ನನ್ನ ಮಾತನ್ನು ನಂಬಿದರಲ್ಲಾ! ಅಲ್ಲಿ ನಿಧಿ ಇರುವುದು ನಿಜವೇ ಇದ್ದರೂ ಇರಬಹುದೇನೋ!’ ಎಂದು ಹೇಳಿ ಓಡುವುದನ್ನು ಮುಂದುವರಿಸಿದ.
***
ಕುದುರೆ ಹಾಡಬಹುದೇನೋ!
ಒಂದು ದಿನ ನಸ್ರುದ್ದೀನ್ ತನ್ನ ರಾಜ್ಯದ ರಾಜಧಾನಿಗೆ ಹೋಗಿದ್ದ. ಅಲ್ಲಿ ಯಾರೊಂದಿಗೋ ಮಾತನಾಡುತ್ತಾ ಸುಲ್ತಾನನ ಬಗ್ಗೆ ಏನೋ ತಮಾಷೆಯ ಮಾತನಾಡಿದ. ಗೂಢಚಾರರಿಂದ ಸುಲ್ತಾನನಿಗೆ ಸುದ್ದಿ ತಲುಪಿ ಸೈನಿಕರು ನಸ್ರುದ್ದೀನ್‌ನನ್ನು ಬಂಧಿಸಿ ಸುಲ್ತಾನನ ಮುಂದೆ ತಂದು ನಿಲ್ಲಿಸಿದರು. ಸುಲ್ತಾನನಿಗೆ ತನ್ನ ಬಗ್ಗೆ ತಮಾಷೆಯ ಮಾತನಾಡಿದ್ದುದರಿಂದ ಮುಲ್ಲಾನ ಬಗ್ಗೆ ವಿಪರೀತ ಸಿಟ್ಟು ಬಂದಿತ್ತು. ನಸ್ರುದ್ದೀನ್ ಕ್ಷಮಾಪಣೆ ಕೇಳಿದರೂ ಅವನ ಸಿಟ್ಟು ಕಡಿಮೆಯಾಗಲಿಲ್ಲ. ಸಿಟ್ಟಿನಿಂದ ಮರುದಿನ ಬೆಳಿಗ್ಗೆ ನಸ್ರುದ್ದೀನ್‌ನ ತಲೆ ತೆಗೆಯುವಂತೆ ಆದೇಶ ನೀಡಿದ. ಮರುದಿನ ಸುಲ್ತಾನನ ಮುಂದೆ ನಸ್ರುದ್ದೀನ್ ಪುನಃ ಕ್ಷಮಾಪಣೆ ಕೋರಿ, ‘ಸುಲ್ತಾನ್ ನೀನು ನೂರು ಕಾಲ ಬಾಳು! ನಿಮಗೆ ಗೊತ್ತಿದೆ ನಾನೊಬ್ಬ ಮಹಾನ್ ಬೋಧಕ. ನಿಮ್ಮ ಸಾಮ್ರಾಜ್ಯದಲ್ಲೇ ನನ್ನನ್ನು ಸರಿಗಟ್ಟುವವರು ಯಾರೂ ಇಲ್ಲ. ನನ್ನ ಮರಣದಂಡನೆಯನ್ನು ಒಂದು ವರ್ಷ ಮುಂದೂಡಿ. ಆ ಒಂದು ವರ್ಷದೊಳಗೆ ನಾನು ನಿಮ್ಮ ಕುದುರೆಗೆ ಹಾಡಲು ಕಲಿಸುತ್ತೇನೆ’ ಎಂದ.
ಸುಲ್ತಾನನಿಗೆ ಮುಲ್ಲಾನ ಮಾತಿನಿಂದ ಆಶ್ಚರ್ಯವಾಯಿತು. ಒಂದು ದಿನ ಕಳೆದಿದ್ದುದರಿಂದ ಆತನ ಸಿಟ್ಟೂ ಸಹ ಕಡಿಮೆಯಾಗಿತ್ತು. ನಸ್ರುದ್ದೀನನ ದಾರ್ಷ್ಯ ರಂಜನೀಯವೂ ಎನ್ನಿಸಿತು. ಪರೀಕ್ಷಿಸಿಬಿಡೋಣವೆಂದು, ‘ಆಯಿತು. ನಿನಗೆ ಒಂದು ವರ್ಷ ಸಮಯ ಕೊಡುತ್ತೇನೆ. ವರ್ಷದ ಕೊನೆಯಲ್ಲಿ ನನ್ನ ಕುದುರೆಗೆ ನೀನು ಹಾಡಲು ಕಲಿಸಲಿಲ್ಲವೆಂದಲ್ಲಿ, ನೀನು ಒಂದು ವರ್ಷದ ಹಿಂದೆಯೇ ಸತ್ತುಹೋಗಿದ್ದಿದ್ದರೆ ಚೆನ್ನಾಗಿತ್ತು ಎನ್ನಿಸುವಂತೆ ಮಾಡಿಬಿಡುತ್ತೇನೆ. ಎಚ್ಚರವಿರಲಿ!’ ಎಂದ ಸುಲ್ತಾನ.
ಆ ದಿನ ನಸ್ರುದ್ದೀನ್‌ನನ್ನು ಆತನ ಗೆಳೆಯರು ಬಂಧಿಖಾನೆಯಲ್ಲಿ ಭೇಟಿಯಾದರು. ನಸ್ರುದ್ದೀನ್ ಅತ್ಯಂತ ಸಂತೋಷದಿಂದಿದ್ದ. ಅವನನ್ನು ಕಂಡ ಆತನ ಗೆಳೆಯರು, ‘ಅದ್ಹೇಗೆ ಅಷ್ಟೊಂದು ಸಂತೋಷವಾಗಿದ್ದೀಯೆ? ಸುಲ್ತಾನನ ಕುದುರೆಗೆ ನೀನು ನಿಜವಾಗಲೂ ಹಾಡು ಕಲಿಸಬಹುದೆಂಬ ನಂಬಿಕೆ ನಿನಗಿದೆಯೆ?’ ಎಂದು ಕೇಳಿದರು. ‘ಖಂಡಿತವಾಗಿಯೂ ಇಲ್ಲ. ಆದರೆ ಈಗ ಬದುಕಲು ನನ್ನ ಬಳಿ ಒಂದು ವರ್ಷವಿದೆ. ನಿನ್ನೆ ಅದೂ ಇರಲಿಲ್ಲ. ಈ ಒಂದು ವರ್ಷದ ಸಮಯದಲ್ಲಿ ಏನು ಬೇಕಾದರೂ ನಡೆಯಬಹುದು. ಸುಲ್ತಾನನಿಗೆ ಸಿಟ್ಟು ಸಂಪೂರ್ಣ ಇಳಿದುಹೋಗಿ ನನಗೆ ಕ್ಷಮಾಪಣೆ ನೀಡಿ ನನ್ನನ್ನು ಬಿಡುಗಡೆ ಮಾಡಬಹುದು ಅಥವಾ ಆತ ಯದ್ಧದಲ್ಲೋ ಅಥವಾ ಕಾಯಿಲೆಯಿಂದಲೋ ಸತ್ತುಹೋಗಬಹುದು. ಆ ನಂತರ ಬರುವ ಸುಲ್ತಾನರು ಸಂಪ್ರದಾಯದಂತೆ ಖೈದಿಗಳಿಗೆ ಕ್ಷಮಾದಾನ ಮಾಡಬಹುದು ಅಥವಾ ಸುಲ್ತಾನನ ವಿರುದ್ಧ ಇತರರು ದಂಗೆದ್ದು ಹೊಸಬರು ಸುಲ್ತಾನರಾಗಬಹುದು. ಅವರು ನನ್ನನ್ನು ಬಿಡುಗಡೆ ಮಾಡಬಹುದು ಅಥವಾ ಒಂದು ವರ್ಷದೊಳಗೆ ಸುಲ್ತಾನನ ಕುದುರೆಯೇ ಸತ್ತುಹೋಗಬಹುದು. ಆಗ ಸುಲ್ತಾನ ವಿಧಿಯಿಲ್ಲದೆ ನನ್ನನ್ನು ಬಿಡುಗಡೆ ಮಾಡಬೇಕಾಗುತ್ತದೆ. ಇದೇನೂ ಆಗುವುದಿಲ್ಲ ಎಂದಿಟ್ಟುಕೊಳ್ಳೋಣ, ಯಾರಿಗೆ ಗೊತ್ತು, ಕುದುರೆ ಹಾಡಲು ಕಲಿತೂಬಿಡಬಹುದು!’ ಎಂದ ನಸ್ರುದ್ದೀನ್.

ಸೋಮವಾರ, ಡಿಸೆಂಬರ್ 12, 2011

ಮುಲ್ಲಾ ನಸ್ರುದ್ದೀನ್ ಎಂಬ ದಡ್ಡ ವಿವೇಕಿ - ಮೊದಲ ಕಂತು

ನವೆಂಬರ್ 2011ರ `ಸಂವಾದ' ಮಾಸಪತ್ರಿಕೆಯಲ್ಲಿ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳು ಪ್ರಕಟವಾಗುತ್ತಿವೆ. ಅವನ್ನು ನೀವು ಇಲ್ಲೂ ಓದಬಹುದು. ಓದಿ `ಕಾಮೆಂಟ್' ಮಾಡಿ.


ನಿನಗೆ ವಿಶೇಷ ಜ್ಞಾನದರಿವು ಬೇಕಾದಲ್ಲಿ
ಯಾರದಾದರೂ ಮುಖ ನೋಡು:
ಆಳವಾಗಿ ನೋಡು,
ಆ ವ್ಯಕ್ತಿಯ ನಗುವಿನೊಳಗೆ,
ಜ್ಞಾನದ ಅಂತಿಮ ಸತ್ಯವಿದೆ...
-ಜಲಾಲುದ್ದೀನ್ ರೂಮಿ
ಮುಲ್ಲಾ ನಸ್ರುದ್ದೀನ್ ಅಥವಾ ನಸ್ರುದ್ದೀನ್ ಖೋಜಾ ಅಥವಾ ಬರೇ ನಸ್ರುದ್ದೀನ್ ಎನ್ನುವ ಪಾತ್ರ ಜಗತ್ತಿನಾದ್ಯಂತ ಹಲವಾರು ಸಂಸ್ಕೃತಿಗಳಲ್ಲಿ ವಿಶಿಷ್ಟ ಮನರಂಜನೆಯ ಕತೆಗಳಲ್ಲಿ ರಂಜಿಸಿದ್ದಾನೆ. ಆ ಕತೆಗಳ ಉದ್ದೇಶ ಬರೇ ಮನರಂಜನೆಯಷ್ಟೇ ಆಗಿಲ್ಲ. ಸೂಫಿ ದಾರ್ಶನಿಕರ ಬೋಧನಾ ಕತೆಗಳಲ್ಲಿಯಂತೆ ಅವುಗಳ ಒಳಾರ್ಥವೇ ಬೇರೆಯಾಗಿರುತ್ತದೆ. ಸೂಫಿಗಳಿಗೆ ಆ ವ್ಯಕ್ತಿ ಮುಖ್ಯವಲ್ಲ ಆದರೆ ಆತನ ಸಂದೇಶ ಮುಖ್ಯವಾದುದು. ನಸ್ರುದ್ದೀನ್ ಯಾರು, ಆತ ಎಲ್ಲಿ ಜೀವಿಸಿದ್ದ ಅಥವಾ ಯಾವಾಗ ಜೀವಿಸಿದ್ದ ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿಲ್ಲ ಅಥವಾ ಆತನದು ಬರೇ ಒಂದು ಕಾಲ್ಪನಿಕ ಪಾತ್ರವೇ ಎಂಬುದೂ ಸಹ ತಿಳಿದಿಲ್ಲ. ಏನೇ ಆದರೂ ಆತನದು ದೇಶ ಕಾಲಗಳನ್ನು ಮೀರಿದ ವ್ಯಕ್ತಿತ್ವ. ಆದರೂ ಜನ ಆ ವ್ಯಕ್ತಿಗೆ ಚರಿತ್ರೆಯ ಒಂದು ಹಂದರ ಒದಗಿಸಿದ್ದಾರೆ ಹಾಗೂ ಅದೇ ರೀತಿ ಒಂದು ಸಮಾಧಿಯನ್ನೂ ಸಹ ನೀಡಿದ್ದಾರೆ. ತನ್ನ ಹಲವಾರು ಕತೆಗಳಲ್ಲಿ ನಸ್ರುದ್ದೀನ್ ದಡ್ಡನಂತೆ ಕಂಡುಬರುತ್ತಾನೆ. ಆದರೆ ನಸ್ರುದ್ದೀನ್ ಒಬ್ಬ ಸೂಫಿ ಅನುಭಾವಿ, ತತ್ವಜ್ಞಾನಿ, ವಿವೇಕಿ ಮತ್ತು ಅತಿಯಾದ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿಯಾಗಿದ್ದ. ಹಲವಾರು ಸೂಫಿಗಳು ತಮ್ಮ ಅನುಭಾವದ ‘ಹುಚ್ಚುತನ’ವನ್ನು ಮುಠ್ಠಾಳತನದ ಸೋಗಿನಲ್ಲಿ ವ್ಯಕ್ತಪಡಿಸುತ್ತಾರೆ. ನಸ್ರುದ್ದೀನನೇ ಹೇಳಿಕೊಂಡಿರುವಂತೆ ಆತನೆಂದೂ ಸತ್ಯವನ್ನು ನುಡಿದೇ ಇಲ್ಲ. ಆತನ ಕತೆಗಳು ಟರ್ಕಿಯ ಗುಡ್ಡಗಾಡು ಜನರಿಂದ ಹಿಡಿದು ಆಗಿನ ಪರ್ಷಿಯಾ, ಅರೇಬಿಯಾ, ಆಫ್ರಿಕಾ, ರಷ್ಯಾ ಹಾಗೂ ‘ಸಿಲ್ಕ್ ರೂಟ್’ನ ಮೂಲಕ ಚೀನಾ ಹಾಗೂ ಭಾರತಕ್ಕೆ ಆನಂತರ ಯೂರೋಪಿಗೂ ಹರಡಿವೆ. ಸುಮಾರು ಎಂಟು ನೂರು ವರ್ಷಗಳಿಂದ ಚಾಲ್ತಿಯಲ್ಲಿರುವ ಆತನ ಕತೆಗಳು ಎಲ್ಲವೂ ಆತನವೇ ಅಲ್ಲ. ಅಲ್ಬೇನಿಯಾ, ಅರೇಬಿಕ್, ಅರ್ಮೇನಿಯ, ಬರ್ಬರ್, ಬೋಸ್ನಿಯಾ, ಬಲ್ಗೇರಿಯಾ, ಚೀನಿ, ದಾಗೇಸ್ತಾನಿ, ಗ್ರೀಕ್, ಜುಡಿಯೋ-ಅರೇಬಿಕ್, ಕುರ್ದಿಶ್, ಮಾಲ್ಟೀಸ್, ಮಾಂಡಾಯಿಕ್, ಮ್ಯಾಸಿಡೋನಿಯಾ, ಪರ್ಷಿಯಾ, ಸರ್ಬಿಯಾ, ಸಿಸಿಲಿ, ಸಿರಿಯಾ, ತಾಜಿಕಿಸ್ತಾನ್, ಟರ್ಕಿ, ಐಗುರ್ ಮತ್ತು ಉಜ್ಬೇಕಿಸ್ತಾನ್ ಸಂಸ್ಕೃತಿ ಮತ್ತು ಜನಪದದಲ್ಲಿ ನಸ್ರುದ್ದೀನ್‌ನ ಕತೆಗಳಿವೆ. ಬಹುಪಾಲು ಕತೆಗಳು ಎಲ್ಲಾ ಇಸ್ಲಾಮಿಕ್ ಮತ್ತು ಏಷಿಯಾದ ಸಂಸ್ಕೃತಿಯ ಸಮಷ್ಟಿ ಹಾಸ್ಯಪ್ರಜ್ಞೆಯ ಉತ್ಪನ್ನವಾಗಿದೆ. ನಸ್ರುದ್ದೀನ್‌ನನ್ನು ಜಗತ್ತಿನ ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸುತ್ತಾರೆ- ಟರ್ಕಿಯಲ್ಲಿ ನಸ್ರೆದ್ದೀನ್ ಹೋಕಾ, ಕಜಕಿಸ್ತಾನದಲ್ಲಿ ಕೋಜಾ ನಸ್ರೆದ್ದೀನ್, ಅಜರ್‌ಬೈಜಾನ್, ಅಫ್ಘಾನಿಸ್ತಾನ ಮತ್ತು ಇರಾನ್‌ನಲ್ಲಿ ಮೊಲ್ಲಾ ಅಥವಾ ಮುಲ್ಲಾ ನಸ್ರುದ್ದೀನ್, ಗ್ರೀಕ್‌ನಲ್ಲಿ ಖೋಡ್ಜಾ ನಸ್ರೆದ್ದೀನ್, ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಅರಬ್ ಜನಪದದಲ್ಲಿ ಆತನನ್ನು ಜುಹಾ ಎಂದು ಕರೆಯುತ್ತಾರೆ. ಆತನಿಗೆ ಜೋಹಾ, ಸಿ ಜೇಹಾ, ಗುಯ್‌ಫಾ, ಇಹಾ, ಐಗುಲೆ, ಗಹಾನ್, ನಸ್ತ್ರಾದಿನ್, ನಸ್ತ್ರಾದಿ, ಹೋಜಸ್, ಜಿಹಾ, ಮಾಲಾ, ಅಪೆಂಡಿ, ಅಫಂಡಿ, ಎಫೆಂಡಿ, ಅಫಂತಿ ಎಂಬ ಹೆಸರುಗಳೂ ಇವೆ. ಆತ ಹಲವಾರು ಸಂಸ್ಕೃತಿಗಳ ಭಾಗವೇ ಆಗಿದ್ದಾನೆ. 1996ನೇ ವರ್ಷವನ್ನು ಯುನೆಸ್ಕೋ ‘ನಸ್ರುದ್ದೀನ್ ಹೋಕಾ ವರ್ಷ’ ಎಂದು ಗುರುತಿಸಿತ್ತು.
ನಸ್ರುದ್ದೀನನ ಕತೆಗಳ ಮೊದಲ ಲಿಖಿತ ದಾಖಲೆ 1480ರ ‘ಎಬು ಅಲ್-ಖಯರ್-ಇ ರೂಮಿ-ಸಾಲ್ತುಕ್-ನಾಮೆ’ಯಲ್ಲಿದೆ. ಆ ಪುಸ್ತಕದಲ್ಲಿನ ಉಲ್ಲೇಖಗಳಂತೆ ನಸ್ರುದ್ದೀನ್ ಈಗಿನ ಟರ್ಕಿಯ ವಾಯುವ್ಯ ದಿಕ್ಕಿನಲ್ಲಿರುವ ಅಕ್ಸೆಹಿರ್‌ನ ಸೂಫಿ ಸಂತ ಸಯ್ಯದ್ ಮಹಮ್ಮದ್ ಹಯ್ರಾನಿಯವರ ದರ್ವೇಶಿಯಾಗಿದ್ದ. ಆತನ ಬಗೆಗಿನ ಉಲ್ಲೇಖಗಳು 1531ರ ಟರ್ಕಿ ಭಾಷೆಯ ಲಾಮಿ ಸೆಲೆಬಿಯವರ ಕತೆಗಳ ಪುಸ್ತಕ ‘ಲೆತಾ ಇಫ್’ನಲ್ಲಿವೆ. ಲಾಮಿ ಸೆಲೆಬಿಯವರ ಪ್ರಕಾರ ನಸ್ರುದ್ದೀನ್ 14ನೇ ಶತಮಾನದ ಸಯ್ಯದ್ ಹಂಜಾರವರ ಸಮಕಾಲೀನ. 17ನೇ ಶತಮಾನದಲ್ಲಿ ಅಕ್ಸೆಹಿರ್‌ನಲ್ಲಿದೆ ಎನ್ನಲಾಗುವ ನಸ್ರುದ್ದೀನ್‌ನ ಸಮಾಧಿಗೆ ಭೇಟಿ ನೀಡಿದ್ದ ಎವಿಲ್ಯಾ ಸೆಲೆಬೆಯವರ ಪ್ರಕಾರ ನಸ್ರುದ್ದೀನ್ ಮೊಂಗೋಲ್‌ನ ದೊರೆ ತೈಮೂರ್‌ನ ಸಮಕಾಲೀನ (1405). ನಸ್ರುದ್ದೀನ್ ಸಿವ್ರಿಹಿಸರ್ ಪ್ರದೇಶದಲ್ಲಿನ ಹೊರ್ತು ಗ್ರಾಮದಲ್ಲಿ 1208ರಲ್ಲಿ ಜನಿಸಿದ ಹಾಗೂ ತಾನು ಆನಂತರ ನೆಲೆಸಿದ್ದ ಅಕ್ಸೆಹಿರ್‌ನಲ್ಲಿ 1284ರಲ್ಲಿ ಮರಣಿಸಿದ ಎಂದು ಅಕ್ಸೆಹಿರ್‌ನ ಮಫ್ತಿಯಾಗಿದ್ದ ಹೈಸೆಯಿನ್ ಎಫೆಂದಿ (1880) ತಮ್ಮ ಮೆಕ್‌ಮುವಾ-ಎ-ಮಾರಿಫ್ನಲ್ಲಿ ಹೇಳಿದ್ದಾರೆ. ಅದರಲ್ಲಿನ ಉಲ್ಲೇಖದಂತೆ ನಸ್ರುದ್ದೀನ್ ಸಿವ್ರಿಹಿಸರ್ ಮತ್ತು ಕೋನ್ಯಾದ ಶಾಲೆಗಳಲ್ಲಿ ‘ನ್ಯಾಯಶಾಸ್ತ್ರ’ದ (ಫಿಖ್) ಶಿಕ್ಷಣ ಪಡೆದ. ಆನಂತರ ಜಲಾಲುದ್ದೀನ್ ರೂಮಿಯನ್ನು (1207-1273) ಭೇಟಿಯಾಗಿ ಆತನಿಂದ ಸೂಫಿಸಂನ ‘ದೀಕ್ಷೆ’ ಪಡೆದ. ಸಯ್ಯದ್ ಮಹಮದ್ ಹಯ್‌ರಾನಿಯವರನ್ನು ತನ್ನ ಶೇಖ್ ಆಗಿ ಸ್ವೀಕರಿಸಿ ಅವರ ಅನುಯಾಯಿಯಾದ. ಅಕ್ಸೆಹಿರ್‌ನಲ್ಲಿ ನೆಲೆಸಿ ಅಲ್ಲಿ ಮದುವೆಯಾಗಿ ತನ್ನ ದಾಂಪತ್ಯ ಜೀವನ ನಡೆಸಿದ. ಅಲ್ಲಿಯೇ ಇಮಾಮ್ ಆಗಿ ನಂತರ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸಿದ. ಅಲ್ಲಿನ ನ್ಯಾಯಾಲಯದಲ್ಲಿನ ಆತನ ನ್ಯಾಯಪಾಲನೆ ಮತ್ತು ಆತನ ಹಾಸ್ಯಪ್ರಜ್ಞೆಯಿಂದ ಆತ ಅಲ್ಲಿ ಅತ್ಯಂತ ಜನಪ್ರಿಯನಾದ. ಕೊನ್ಯಾದ ಬಳಿ ಇರುವ ಅಕ್ಸೆಹಿರ್ ನಗರದಲ್ಲಿ ಆತನ ಸಮಾಧಿಯಿದೆಯೆಂದು ಗುರುತಿಸಿದ್ದಾರೆ. ಆತನ ಸಮಾಧಿ ಇರುವ ಸ್ಥಳಕ್ಕೆ ಒಂದು ದೊಡ್ಡ ಕಬ್ಬಿಣದ ಬಾಗಿಲು ಮಾಡಿ ಅದಕ್ಕೊಂದು ಬೀಗ ಹಾಕಿದ್ದಾರೆ- ಯಾರೂ ಸಮಾಧಿಗೆ ಪ್ರವೇಶಿಸಬಾರದೆಂದು ಆ ಬೀಗವಲ್ಲ, ಏಕೆಂದರೆ ಆ ಸಮಾಧಿಗೆ ಬೀಗವಿರುವ ಬಾಗಿಲಿದ್ದರೂ ಗೋಡೆಗಳೇ ಇಲ್ಲ! ಆ ರೀತಿಯ ಬಾಗಿಲು ಇರಿಸಿರಲು ನಸ್ರುದ್ದೀನನ ಒಂದು ಕತೆಯೇ ಕಾರಣ. ನಸ್ರುದ್ದೀನ್ ಎಲ್ಲಿ ಹೋದರೂ ತನ್ನ ಮನೆಯ ಬಾಗಿಲನ್ನು ಕೊಂಡೊಯ್ಯುತ್ತಿದ್ದನಂತೆ. ಊರವರಿಗೆ ಆತನ ನಡತೆಯಿಂದ ಆಶ್ಚರ್ಯವಾಗಿ ಏಕೆಂದು ಕೇಳಿದ್ದಕ್ಕೆ ಆತ, ತಾನಿಲ್ಲದಿದ್ದಾಗ ಯಾರಾದರೂ ಮನೆಗೆ ಕಳ್ಳರು ನುಗ್ಗಬಹುದೆಂದೂ ಹಾಗೂ ಕಳ್ಳರು ಬಾಗಿಲಿನ ಮೂಲಕ ಪ್ರವೇಶಿಸುವುದರಿಂದ ಮನೆಗೆ ಬಾಗಿಲೇ ಇಲ್ಲದಿದ್ದಲ್ಲಿ ಅವರು ಹೇಗೆ ಮನೆಗೆ ನುಗ್ಗುವರು? ಎಂದು ಕೇಳಿದನಂತೆ. ಹಾಗಾಗಿ ಆತನ ಸಮಾಧಿಗೆ ದೊಡ್ಡ ಬೀಗವಿರುವ ಕಬ್ಬಿಣದ ಬಾಗಿಲು ಇಟ್ಟಿದ್ದಾರೆಯೇ ಹೊರತು ಅದಕ್ಕೆ ಗೋಡೆಗಳಿಲ್ಲ.
ನಸ್ರುದ್ದೀನನ ಕತೆಗಳು ಸೂಫಿ ಬೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟಲ್ಲದೆ ಆತನ ಕತೆಗಳು ಎಲ್ಲ ಸಂಸ್ಕೃತಿಗಳಲ್ಲೂ ಹರಡಿಹೋಗಿರುವುದರಿಂದ ಅವು ಜೆನ್ ಕತೆಗಳಲ್ಲಿ, ಕ್ರೈಸ್ತ ಕತೆಗಳಲ್ಲಿ ಮತ್ತು ಇತರ ಹಲವಾರು ಧಾರ್ಮಿಕ ಬೋಧನೆಗಳಲ್ಲೂ ಕಂಡುಬರುತ್ತವೆ. ನಸ್ರುದ್ದೀನನ ಹೆಸರು ಬಳಸಿಕೊಂಡು ಸೂಫಿ ಗುರುಗಳು ತಮ್ಮ ಶಿಷ್ಯರಿಗೆ ಬೋಧಿಸಲು ತಾವೇ ಕತೆಗಳನ್ನು ಕಟ್ಟುತ್ತಾರೆ.
ನಸ್ರುದ್ದೀನನ ಕತೆಗಳಲ್ಲಿ ಸೂಫಿ ತತ್ವದ ಅಂತರಾಳವಿದೆ. ಅವುಗಳಲ್ಲಿ ಜ್ಞಾನದ ಬಾಹ್ಯ ಢಂಬಾಚಾರದ, ಮೌಢ್ಯ ಶ್ರದ್ಧೆಯ ಲೇವಡಿಯಿದೆ. ಒಂದು ಕತೆಯಲ್ಲಿ ನಸ್ರುದ್ದೀನ್ ವ್ಯಾಕರಣ ಪಂಡಿತನೊಬ್ಬನನ್ನು ತನ್ನ ದೋಣಿಯಲ್ಲಿ ಕರೆದೊಯ್ಯುತ್ತಿರುತ್ತಾನೆ. ಹಾದಿಯಲ್ಲಿ ಮಾತಿನ ಮಧ್ಯದಲ್ಲಿ ನಸ್ರುದ್ದೀನನ ಯಾವುದೋ ದೋಷಪೂರಿತ ವ್ಯಾಕರಣದ ಮಾತನ್ನಾಡುತ್ತಾನೆ. ಆಗ ವ್ಯಾಕರಣ ಪಂಡಿತ, ‘ನೀವು ವ್ಯಾಕರಣ ಕಲಿತಿಲ್ಲವೆ?’ ಎಂದು ಕೇಳುತ್ತಾನೆ. ನಸ್ರುದ್ದೀನ್ ಇಲ್ಲವೆನ್ನುತ್ತಾನೆ. ‘ಹಾಗಾದರೆ ನಿನ್ನ ಅರ್ಧ ಬದುಕು ವ್ಯರ್ಥವಾದಂತೆ’ ಎನ್ನುತ್ತಾನೆ ಪಂಡಿತ. ಸ್ವಲ್ಪ ಹೊತ್ತಿನ ನಂತರ ಜೋರಾಗಿ ಬಿರುಗಾಳಿ ಬೀಸಿ ದೋಣಿ ಓಲಾಡತೊಡಗುತ್ತದೆ. ಆಗ ನಸ್ರುದ್ದೀನ್ ಆ ವ್ಯಾಕರಣ ಪಂಡಿತನನ್ನು ‘ನಿಮಗೆ ಈಜು ಕಲಿತಿಲ್ಲವೆ?’ ಎಂದು ಕೇಳುತ್ತಾನೆ. ಆ ಪಂಡಿತ ‘ಇಲ್ಲ, ಏಕೆ?’ ಎನ್ನುತ್ತಾನೆ. ಅದಕ್ಕೆ ನಸ್ರುದ್ದೀನ್, ‘ಹಾಗಾದರೆ ನಿಮ್ಮ ಇಡೀ ಜೀವನ ವ್ಯರ್ಥವಾದಂತೆ, ಏಕೆಂದರೆ ಇನ್ನೇನು ಈ ದೋಣಿ ಮುಳುಗುತ್ತದೆ’ ಎಂದನಂತೆ.
ಇತರ ಸೂಫಿ ಕತೆಗಳಂತೆ ಮುಲ್ಲಾ ನಸ್ರುದ್ದೀನನ ಕತೆಗಳು ಓದಿ, ನಕ್ಕು ಮರೆತುಬಿಡುವಂಥವಲ್ಲ. ಓದಿದ ನಂತರವೂ ನಮಗೇ ಅರಿವಾಗದಂತೆ ನಮ್ಮ ಮನಸ್ಸಿಗೆ ಜೋತುಬೀಳುತ್ತವೆ. ಕೂತು ಆ ಕತೆಗಳನ್ನು ಮೆಲುಕು ಹಾಕುವಾಗ ಅವು ಪ್ರತಿ ಕ್ಷಣ ನಮ್ಮೆದುರಿಗೆ ತೆರೆದಿಡುವ ಹೊಸ ಹೊಸ ಆಯಾಮಗಳು ನಮಗೇ ದಿಗ್ಭ್ರಮೆ ಹುಟ್ಟಿಸುತ್ತವೆ, ನಮಗೇ ತಿಳಿದಿರದ ಹೊಚ್ಚ ಹೊಸ ಲೋಕವೊಂದನ್ನು ಪರಿಚಯಿಸುತ್ತವೆ.

ಮುಲ್ಲಾ ನಸ್ರುದ್ದೀನ್ ಕತೆಗಳು
ಸಂಗ್ರಹ ಮತ್ತು ಅನುವಾದ: ಡಾ.ಜೆ.ಬಾಲಕೃಷ್ಣ

ರಾಜನ ಭೇಟಿ
ರಾಜಧಾನಿಗೆ ಹೋಗಿದ್ದ ನಸ್ರುದ್ದೀನ್ ತನ್ನ ಹಳ್ಳಿಗೆ ಹಿಂದಿರುಗಿದ. ಹಳ್ಳಿಯ ಜನ ಎಲ್ಲಾ ನಗರದ ಆತನ ಅನುಭವಗಳನ್ನು ಹೇಳುವಂತೆ ಅವನನ್ನು ಸುತ್ತುವರಿದರು. ‘ಈಗ ಸಧ್ಯಕ್ಕೆ, ಮಹಾರಾಜರು ನನ್ನನ್ನು ಮಾತನಾಡಿಸಿದರು ಎಂದಷ್ಟೇ ಹೇಳಬಲ್ಲೆ’ ಎಂದ ನಸ್ರುದ್ದೀನ್. ತಮ್ಮ ಹಳ್ಳಿಯ ನಸ್ರುದ್ದೀನನ್ನು ಮಹಾರಾಜ ಮಾತನಾಡಿಸಿದ್ದಾರೆ ಎಂಬ ಅದ್ಭುತ ಸುದ್ದಿಯನ್ನು ಊರಿನ ಇತರರಿಗೆ ತಿಳಿಸಲು ಅವನನ್ನು ಸುತ್ತುವರಿದ ಹಳ್ಳಿಯ ಜನರೆಲ್ಲಾ ಓಡಿದರು. ಆದರೆ ಆ ಹಳ್ಳಿಯ ಗಮಾರನೊಬ್ಬ ಮಾತ್ರ ಅಲ್ಲೇ ಇದ್ದು ಮಹಾರಾಜರು ನಸ್ರುದ್ದೀನನ್ನು ಏನೆಂದು ಮಾತನಾಡಿಸಿದರು ಎಂಬುದನ್ನು ಹೇಳುವಂತೆ ಗೋಗರೆದ. ಅವನ ಕಾಟ ತಾಳಲಾರದೆ ನಸ್ರುದ್ದೀನ್ ಕೊನೆಗೆ, ‘ಮಹಾರಾಜರು ಅಲ್ಲಿರುವ ಎಲ್ಲರಿಗೂ ಕೇಳಿಸುವಂತೆ, ಸ್ಪಷ್ಟವಾಗಿ ನನ್ನನ್ನು ಕುರಿತು- ದಾರಿಗೆ ಅಡ್ಡ ಬರಬೇಡ ತೊಲಗಾಚೆ ಕತ್ತೆ! ಎಂದರು’ ಎಂದು ಹೇಳಿದ. ಆ ಹಳ್ಳಿಯ ಗಮಾರನಿಗೆ ಮಹಾರಾಜರು ಮಾತನಾಡಿಸಿದ ವ್ಯಕ್ತಿಯನ್ನು ಕಂಡು ತಾನೇ ಮಹಾರಾಜನನ್ನು ಕಂಡ ಅನುಭವವಾಗಿ ಕೃತಾರ್ಥನಾದಂತಾಯಿತು.

ತೈಮೂರನ ಕೊಡುಗೆ -1
ತೈಮೂರನ ಸೈನ್ಯ ಇಡೀ ಮಧ್ಯ ಏಷಿಯಾವನ್ನು ಕೊಳ್ಳೆ ಹೊಡೆಯುತ್ತಿತ್ತು ಹಾಗೂ ತೈಮೂರ್ ಸ್ವತಃ ತನ್ನ ಸೈನ್ಯದೊಂದಿಗೆ ಮುಲ್ಲಾನ ಹಳ್ಳಿಯೆಡೆಗೆ ಬರುತ್ತಿದ್ದಾನೆಂಬ ವದಂತಿಗಳಿದ್ದವು. ಅದನ್ನು ಕೇಳಿದ ಮುಲ್ಲಾ ನಸ್ರುದ್ದೀನ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಮಾಡುವಾಗ ನೆರೆದಿದ್ದವರಿಗೆಲ್ಲಾ, ‘ತೈಮೂರ್ ಈ ಗ್ರಾಮಕ್ಕೆ ಕಾಲಿಡುವ ಮುನ್ನವೇ ಸತ್ತುಹೋಗಲೆಂದು ನಾವೆಲ್ಲಾ ಒಟ್ಟಿಗೆ ಪ್ರಾರ್ಥಿಸೋಣ’ ಎಂದ. ಎಲ್ಲಾ ಗ್ರಾಮಸ್ಥರು ಒಪ್ಪಿದರು. ಆಗ ಒಬ್ಬ ವ್ಯಕ್ತಿ ಗುಂಪಿನಲ್ಲಿ ಎದ್ದು ನಿಂತು, ‘ನೀನು ತೈಮೂರ್‌ನನ್ನು ನೋಡಿದ್ದೀಯಾ?’ ಎಂದು ಕೇಳಿದ. ಅದಕ್ಕೆ ನಸ್ರುದ್ದೀನ್, ‘ಇಲ್ಲಾ ನೋಡಿಲ್ಲ. ಆದರೆ ನೀನು ಯಾರೋ ಹೊಸಬನಿರುವಂತಿದೆ. ನಾನು ನಿನ್ನನ್ನೂ ಈ ಮೊದಲು ನೋಡಿಲ್ಲ’ ಎಂದ.
ಅದಕ್ಕೆ ಆ ವ್ಯಕ್ತಿ ‘ನಾನೇ ತೈಮೂರ್’ ಎಂದ.
ನಸ್ರುದ್ದೀನ್ ಹಾಗೂ ಇತರ ಗ್ರಾಮಸ್ಥರು ಆ ಮಾತಿನಿಂದ ಗಾಬರಿಯಾದರು ಹಾಗೂ ಜೀವಭಯದಿಂದ ತತ್ತರಿಸಿದರು. ಆದರೂ ಅದನ್ನು ತೋರಗೊಡದ ನಸ್ರುದ್ದೀನ್ ತನ್ನ ಮಾತು ಮುಂದುವರಿಸಿ ಗ್ರಾಮಸ್ಥರಿಗೆ, ‘ನಾವು ನಮ್ಮ ಪ್ರಾರ್ಥನೆ ಮುಂದುವರೆಸೋಣ, ಆದರೆ ಈಗ ನಾವು ನಮ್ಮ ಜನಾಜಾ (ಅಂತ್ಯಸಂಸ್ಕಾರದ ಪ್ರಾರ್ಥನೆ) ಮಾಡೋಣ.’
ಅದನ್ನು ಕೇಳಿದ ತೈಮೂರ್, ‘ಅಯ್ಯೋ ದಡ್ಡ, ನೀನು ಬದುಕಿರುವಾಗ ನೀನು ಹೇಗೆ ನಿನ್ನ ಜನಾಜಾ ಮಾಡಲು ಸಾಧ್ಯ? ಜನಾಜಾವನ್ನು ಬದುಕಿರುವವರು ಸತ್ತವರಿಗಾಗಿ ಮಾಡುವುದಲ್ಲವೆ?’ ಎಂದು ಕೇಳಿದ.
‘ಹೌದು ದೊರೆ, ಆದರೆ ಏನು ಮಾಡುವುದು? ನೀವು ಈಗಾಗಲೇ ನಮ್ಮ ಗ್ರಾಮಕ್ಕೆ ಬಂದುಬಿಟ್ಟಿದ್ದೀರಿ. ಇನ್ನು ಸ್ವಲ್ಪ ಹೊತ್ತಿನಲ್ಲಿ ನಮ್ಮ ಗ್ರಾಮದಲ್ಲಿ ನಮಗೆ ಜನಾಜಾ ಹೇಳಲು ಯಾರೂ ಬದುಕಿರುವುದಿಲ್ಲ. ಹಾಗಾಗಿ ನಮ್ಮ ಜನಾಜಾ ವ್ಯವಸ್ಥೆಯನ್ನು ನಾವೇ ಮಾಡಿಕೊಳ್ಳಬೇಕಲ್ಲವೆ’ ಎಂದ ನಸ್ರುದ್ದೀನ್.
ಅವನ ಮಾತು ಕೇಳಿದ ತೈಮೂರ್ ಮನಸಾರೆ ನಕ್ಕು ಮುಲ್ಲಾನನ್ನು ಕ್ಷಮಿಸಿ ಆ ಗ್ರಾಮಕ್ಕೆ ತೊಂದರೆ ಕೊಡಲಿಲ್ಲ ಹಾಗೂ ಅವರಿಗೆ ಆನೆಯೊಂದನ್ನು ಕೊಡುಗೆಯಾಗಿ ಕೊಟ್ಟ.

ತೈಮೂರನ ಕೊಡುಗೆ -2
ದೊರೆ ತೈಮೂರನ ಆನೆಯ ಕೊಡುಗೆ ಕೆಲದಿನಗಳಲ್ಲಿ ಆ ಗ್ರಾಮಸ್ಥರಿಗೊಂದು ತಲೆನೋವಾಯಿತು. ಆ ಆನೆ ಗ್ರಾಮಸ್ಥರ ಹೊಲಗದ್ದೆಗಳಿಗೆ ನುಗ್ಗಿ ಎಲ್ಲ ಬೆಳೆಗಳನ್ನು ತಿಂದುಹಾಕುತ್ತಿತ್ತು. ಆದರೆ ತೈಮೂರನ ಕ್ರೌರ್ಯದ ಬಗ್ಗೆ ತಿಳಿದಿದ್ದ ಜನರು ಆ ಆನೆಗೆ ಏನೂ ಮಾಡುವಂತಿರಲಿಲ್ಲ. ಎಲ್ಲರೂ ಮುಲ್ಲಾ ನಸ್ರುದ್ದೀನ್‌ನಿಂದಾಗಿಯೇ ಈ ಕೊಡುಗೆಯ ಹೊರೆ ತಮ್ಮ ಮೇಲೆ ಬಿದ್ದಿದೆಯೆಂದು ಆತನನ್ನು ಶಪಿಸಿ ಆ ಆನೆಯನ್ನು ತೈಮೂರನಿಗೇ ಹಿಂದಿರುಗಿಸುವಂತೆ ಕೇಳಿಕೊಂಡರು.
ಗ್ರಾಮಸ್ಥರ ಪಾಡು ನೋಡಿದ್ದ ನಸ್ರುದ್ದೀನ್ ಒಪ್ಪಿಕೊಂಡ, ಆದರೆ ಒಂದು ಷರತ್ತು ಹಾಕಿದ. ಆ ಷರತ್ತು ಏನೆಂದರೆ, ತೈಮೂರನ ಬಳಿ ಹೋದಾಗ ಅವನ ಬೆಂಬಲಕ್ಕೆ ಅವರೂ ಆತನ ಜೊತೆಗೆ ಬರಬೇಕೆಂದು ಹೇಳಿದ. ಗ್ರಾಮಸ್ಥರೂ ಒಪ್ಪಿಕೊಂಡರು. ನಸ್ರುದ್ದೀನ್ ಮುಂದೆ ಹೊರಟಂತೆ ಜನರು ಹಿಂದೆ ಬಂದರು. ನಸ್ರುದ್ದೀನ್ ತೈಮೂರನ ಗುಡಾರದ ಬಳಿ ಹೋದ. ತೈಮೂರ್ ಆ ದಿನ ಬಹಳ ಸಿಟ್ಟಿನಿಂದ ಇರುವಂತಿದ್ದ. ನಸ್ರುದ್ದೀನ್‌ನನ್ನು ನೋಡಿದವನೆ, ‘ಏನು ಬೇಕು?’ ಎಂದು ಅರಚಿದ. ನಿಂತಲ್ಲೇ ನಡುಗಿದ ನಸ್ರುದ್ದೀನ್ ದೈರ್ಯ ತಂದುಕೊಂಡು,
‘ಅದು... ನೀವು ಕೊಡುಗೆಯಾಗಿ ಕೊಟ್ಟಿರುವ ಆನೆ...’ ಎಂದ.
‘ಹೌದು, ಏನಾಗಿದೆ ಆನೆಗೆ? ನನ್ನ ಕೊಡುಗೆ ಚೆನ್ನಾಗಿಲ್ಲವೇನು?’ ತೈಮೂರ್ ಕೇಳಿದ.
ನಸ್ರುದ್ದೀನ್ ತಿರುಗಿ ನೋಡಿದ. ಅವನ ಹಿಂದೆ ಬಂದ ಗ್ರಾಮಸ್ಥರಲ್ಲಿ ಒಬ್ಬನೂ ಅಲ್ಲಿರಲಿಲ್ಲ. ಗ್ರಾಮಸ್ಥರು ತನಗೆ ಕೈಕೊಟ್ಟದ್ದರಿಂದ ನಸ್ರುದ್ದೀನ್‌ಗೆ ಅತೀವ ಸಿಟ್ಟು ಬಂತು. ಆ ಕ್ಷಣ ತೈಮೂರನಿಂದ ತಪ್ಪಿಸಿಕೊಳ್ಳಲು ಹಾಗೂ ಗ್ರಾಮಸ್ಥರಿಗೆ ಬುದ್ಧಿ ಕಲಿಸಲು ಒಂದೇ ಕಲ್ಲಿಗೆ ಎರಡು ಹಕ್ಕಿ ಬೀಳಿಸುವ ಉಪಾಯ ಹುಡುಕಿದ.
‘ನೀವು ಕೊಟ್ಟ ಆನೆಯ ಬಗ್ಗೆ ತೊಂದರೆಯೇನಿಲ್ಲ... ಅದು ಪಾಪ ಒಂಟಿಯಾಗಿದೆ, ಅದಕ್ಕೂ ಬೇಸರ. ಆದ್ದರಿಂದ ಅದಕ್ಕೆ ಜೊತೆಯಾಗಿ ಒಂದು ಹೆಣ್ಣಾನೆ ಕೊಡುವಿರೇನೋ ಎಂದು ಕೇಳಲು ಬಂದೆ’ ಎಂದ ನಸ್ರುದ್ದೀನ್ ತೈಮೂರನಿಗೆ ಕೈ ಮುಗಿಯುತ್ತಾ.

ಪವಾಡ
ಮತ್ತೊಂದು ಹಳ್ಳಿಗೆ ಪ್ರವಾಸ ಹೋಗಿದ್ದ ನಸ್ರುದ್ದೀನ್ ತನ್ನ ಬಳಿಯಿದ್ದ ಕುರಾನ್‌ನ ತನ್ನ ಅಚ್ಚುಮೆಚ್ಚಿನ ಪ್ರತಿಯನ್ನು ಎಲ್ಲೋ ಕಳೆದುಕೊಂಡ. ಕೆಲವು ವಾರಗಳ ನಂತರ ಮೇಕೆಯೊಂದು ಬಂದು ನಸ್ರುದ್ದೀನನ ಮನೆ ಮುಂದೆ ಬಂದು ನಿಂತಿತು. ಅದರ ಬಾಯಲ್ಲಿ ನಸ್ರುದ್ದೀನ್ ಕಳೆದುಕೊಂಡ ಕುರಾನ್ ಗ್ರಂಥವಿತ್ತು.
ನಸ್ರುದ್ದೀನ್‌ಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಮೇಕೆಯ ಬಾಯಿಯಿಂದ ಆ ಅಮೂಲ್ಯ ಗ್ರಂಥವನ್ನು ತೆಗೆದುಕೊಂಡ ನಸ್ರುದ್ದೀನ್ ತನ್ನ ತಲೆ ಮೇಲೆತ್ತಿ ಆಕಾಶದೆಡೆಗೆ ನೋಡುತ್ತಾ, ‘ಹೋ! ಎಂಥಾ ಪವಾಡ!’ ಎಂದು ಉದ್ಗರಿಸಿದ.
‘ಅದರಲ್ಲಿ ಪವಾಡವೇನಿಲ್ಲ,’ ಹೇಳಿತು ಮೇಕೆ. ‘ನೋಡು ಪುಸ್ತಕದ ಒಳರಕ್ಷಾಪುಟದ ಮೇಲೆ ನಿನ್ನ ಹೆಸರು ಬರೆದಿದೆ.’

ಯಾರೂ ಇಲ್ಲ
ದರ್ವೇಶಿ ನಸ್ರುದ್ದೀನ್ ಆ ವೈಭವೋಪೇತ ಕಾರ್ಯಕ್ರಮಕ್ಕೆ ಅದು ಪ್ರಾರಂಭವಾಗುವ ಮೊದಲೇ ಹೋಗಿ ಅಲ್ಲಿದ್ದ ಅತ್ಯಂತ ವೈಭವದ ಆಸನದ ಮೇಲೆ ಕುಳಿತುಕೊಂಡ. ಅಲ್ಲೇ ಪಕ್ಕದಲ್ಲೇ ಇದ್ದ ಸೇನಾಧಿಪತಿ ನಸ್ರುದ್ದೀನನ ಬಳಿ ಹೋಗಿ, ‘ಸ್ವಾಮಿ ಆ ಆಸನಗಳನ್ನು ಸನ್ಮಾನ್ಯ ಅತಿಥಿಗಳಿಗೆ ಕಾಯ್ದಿರಿಸಲಾಗಿದೆ’ ಎಂದ.
‘ನಾನು ಆ ಅತಿಥಿಗಳಿಗಿಂತ ಹಿರಿಯವನು’ ಎಂದ ನಸ್ರುದ್ದೀನ್ ಅತೀವ ಆತ್ಮವಿಶ್ವಾಸದಿಂದ.
‘ಹಾಗಾದರೆ ನೀವು ರಾಜತಂತ್ರಜ್ಞರೆ?’
‘ಅವರಿಗಿಂತ ಹೆಚ್ಚಿನವನು ನಾನು!’
‘ಹೌದೆ? ಹಾಗಾದರೆ ನೀವು ಮಂತ್ರಿಗಳೇ ಆಗಿರಬೇಕು?’
‘ಇಲ್ಲ, ಅದಕ್ಕಿಂತ ದೊಡ್ಡ ಹುದ್ದೆ ನನ್ನದು!’
‘ಓಹ್! ಹಾಗಾದರೆ ನೀನು ರಾಜನೇ ಆಗಿರಬೇಕು,’ ಎಂದ ಸೇನಾಧಿಪತಿ ಲೇವಡಿ ಮಾಡುವವನಂತೆ.
‘ಇಲ್ಲ, ಅದಕ್ಕಿಂತ ಹೆಚ್ಚಿನದು!’
‘ಏನು?! ನೀನು ರಾಜನಿಗಿಂತ ದೊಡ್ಡವನೆ?! ಈ ರಾಜ್ಯದಲ್ಲಿ ರಾಜನಿಗಿಂತ ದೊಡ್ಡವರು ಯಾರೂ ಇಲ್ಲ!’ ಎಂದ ಸೇನಾಧಿಪತಿ.
‘ಹಾ, ಈಗ ಸರಿಯಾಗಿ ಹೇಳಿದೆ. ನಾನೇ ಆ ಯಾರೂ ಇಲ್ಲ!’ ಎಂದ ನಸ್ರುದ್ದೀನ್.

ನೀನು ಹೇಳಿದ್ದು ಸರಿ
ಆ ಊರಿನ ನ್ಯಾಯಾಧೀಶ ತುರ್ತು ಕೆಲಸದ ಮೇಲೆ ಬೇರೆ ಊರಿಗೆ ಹೋಗಬೇಕಾಯಿತು. ಆ ದಿನಕ್ಕೆ ಮಾತ್ರ ನಸ್ರುದ್ದೀನ್‌ನನ್ನು ತಾತ್ಕಾಲಿಕವಾಗಿ ನ್ಯಾಯಾಧೀಶನ ಕಾರ್ಯ ನಿರ್ವಹಿಸುವಂತೆ ಕೋರಲಾಯಿತು. ನಸ್ರುದ್ದೀನ್ ನ್ಯಾಯಾಧೀಶರ ಕುರ್ಚಿಯ ಮೇಲೆ ಗತ್ತಿನಿಂದ ಕೂತು, ಸುತ್ತಲೂ ಆಸೀನರಾಗಿದ್ದ ಜನರನ್ನು ಒಮ್ಮೆ ಗಂಭೀರವಾಗಿ ನೋಡಿ, ಆ ದಿನದ ವಿಚಾರಣೆಯನ್ನು ಪ್ರಾರಂಭಿಸುವಂತೆ ಆದೇಶ ನೀಡಿದ.
ವಾದಿಯ ವಾದವನ್ನು ಆಲಿಸಿದ ನಂತರ ‘ನೀನು ಹೇಳಿದ್ದು ಸರಿ’ ಎಂದ ನ್ಯಾಯಾಧೀಶ ನಸ್ರುದ್ದೀನ್.
ಪ್ರತಿವಾದಿಯ ವಾದವನ್ನೂ ಆಲಿಸಿದ ನಂತರ ‘ನೀನು ಹೇಳಿದ್ದು ಸರಿ’ ಎಂದ.
ವಿಚಾರಣೆ ನೋಡುತ್ತಿದ್ದ ಜನರಲ್ಲಿ ಒಬ್ಬಾತ, ‘ಇಬ್ಬರೂ ಹೇಳಿದ್ದು ಅದು ಹೇಗೆ ಸರಿಯಾಗಲು ಸಾಧ್ಯ?’ ಎಂದು ಎದ್ದುನಿಂತು ಪ್ರಶ್ನಿಸಿದ.
‘ಹೌದು, ನೀನು ಹೇಳಿದ್ದೂ ಸರಿ’ ಎಂದ ನ್ಯಾಯಾಧೀಶ ನಸ್ರುದ್ದೀನ್.
j.balakrishna@gmail.com

ಶನಿವಾರ, ನವೆಂಬರ್ 19, 2011

`ಸ್ನಾನದ ಮನೆ’ಯೆಂಬ ಪುಷ್ಪ ನಗರಿ

10ನೇ ನವೆಂಬರ್ ಸುಧಾದಲ್ಲಿ ನನ್ನ ಲೇಖನ `ಸ್ನಾನದ ಮನೆಯೆಂಬ ಪುಷ್ಪ ನಗರಿ' ಪ್ರಕಟವಾಗಿದೆ. ಅಲ್ಲಿ ಓದಿಲ್ಲದಿದ್ದಲ್ಲಿ ಆ ಚಿತ್ರ-ಲೇಖನವನ್ನು ಇಲ್ಲಿ ಓದಬಹುದು.


ಲಂಡನ್‌ನಲ್ಲಿ ಆ ದಿನ ಉಳಿದುಕೊಂಡಿದ್ದ ನಮಗೆ ಆ ದಿನದ ಪ್ರವಾಸಕ್ಕೆ ನಮ್ಮನ್ನು ಪಿಕ್‌ಅಪ್ ಮಾಡುವ ವ್ಯವಸ್ಥೆಯಿತ್ತು. ಒಂದೊಂದು ಪ್ರದೇಶದಲ್ಲಿ ಒಂದೊಂದು ಹೋಟೆಲ್‌ನಿಂದ ಆ ವ್ಯವಸ್ಥೆ ಇದ್ದುದರಿಂದ ಲಂಡನ್ನಿನ ಯೂಸ್ಟನ್‌ನಲ್ಲಿನ ಹೋಟೆಲ್ ಐಬಿಸ್‌ನಲ್ಲಿ ಉಳಿದುಕೊಂಡಿದ್ದ ನಾವು ಹತ್ತು ಹೆಜ್ಜೆ ಪಕ್ಕದಲ್ಲೇ ಇದ್ದ ಥಿಸಲ್ ಯೂಸ್ಟನ್ ಹೋಟೆಲ್‌ಗೆ ಬಂದೆವು. ಅಲ್ಲಿಂದ ಆ ದಿನದ ಟೂರ್ ಪಿಕ್‌ಅಪ್ ವಾಹನ ಬಂದು ನಮ್ಮನ್ನು ಮತ್ತೊಂದು ಸ್ಥಳಕ್ಕೆ ಕರೆದೊಯ್ದಿತು. ಈ ಪ್ರವಾಸಗಳನ್ನು ಮತ್ತು ಹೋಟೆಲ್‌ನ ರೂಮ್‌ಗಳ ಬುಕಿಂಗ್‌ಗಳನ್ನು ಬೆಂಗಳೂರಿನಲ್ಲಿ ನನ್ನ ಮನೆಯಲ್ಲೇ ಕೂತು ಮಾಡಿದ್ದೆ. ಇಂಟರ್‌ನೆಟ್ ಮತ್ತು ಕ್ರೆಡಿಟ್ ಕಾರ್ಡ್‌ನಲ್ಲಿ ಸಾಕಷ್ಟು ಸಾಲದ ಲಿಮಿಟ್ ಇದ್ದಲ್ಲಿ ಇವೆಲ್ಲಾ ಸುಲಭವೆನ್ನಿಸಿಬಿಡುತ್ತದೆ.
ನಮ್ಮನ್ನು ಹೋಟೆಲಿನಿಂದ ಕರೆದೊಯ್ದ ಬಸ್ಸಿನ ಡ್ರೈವರ್ ಭಾರತೀಯನೇ ಇರಬಹುದೆನ್ನಿಸಿತು, ಏಕೆಂದರೆ ಅವನ ಹಣೆಯಲ್ಲಿ ಕುಂಕುಮವಿತ್ತು ಹಾಗೂ ಬಸ್ ಹತ್ತುವಾಗ ಅವನು ನಮ್ಮನ್ನು ನೋಡಿ ಮುಗುಳ್ನಕ್ಕ. ಆ ಬಸ್ ಆ ಪ್ರವಾಸದ ಕಂಪೆನಿಯ ಕೇಂದ್ರ ಸ್ಥಾನಕ್ಕೆ ಕರೆದೊಯ್ದ. ಅಲ್ಲಿ ವಿವಿಧೆಡೆಗೆ ಪ್ರವಾಸ ಹೊರಡುವವರೆಲ್ಲಾ ಆಯಾ ಟೂರ್ ಸಂಖ್ಯೆಯಿದ್ದ ಬೋರ್ಡಿನ ಹಿಂದೆ ಸಾಲುಗಟ್ಟಿ ನಿಂತಿದ್ದರು. ಬ್ರಿಟನ್ ಒಳಗೊಂಡಂತೆ ಇಡೀ ಯೂರೋಪಿನಲ್ಲೆಲ್ಲಾ ಜನ ಪ್ರತಿಯೊಂದಕ್ಕೂ ಸರತಿಯ ಸಾಲು ಕಟ್ಟಿ ನಿಲ್ಲುವುದು ಅವರ ಶಿಸ್ತು ತೋರಿಸುವಂತಿತ್ತು. ನಾವು ನಮ್ಮ ಟೂರ್ ಸಂಖ್ಯೆಯ ಸಾಲಿನಲ್ಲಿ ನಿಂತೆವು. ನಮ್ಮ ಹಿಂದೆಯೂ ಕೆಲವರು ಬಂದು ನಿಂತರು. ಸ್ವಲ್ಪ ಹೊತ್ತಿನ ನಂತರ ಮುದುಕಿಯೆನ್ನಬಹುದಾದ ಹೆಂಗಸು- ಆಕೆ ನಮ್ಮ ಆ ದಿನದ ಗೈಡ್ ಆದುದರಿಂದ ಆಕೆಯನ್ನು ‘ಗೈಡಜ್ಜಿ’ ಎಂದು ಕರೆಯಬಹುದು- ಒಂದು ಹೆಸರುಗಳಿದ್ದ ಪಟ್ಟಿ ತೆಗೆದುಕೊಂಡು ಬಂದು ಯಾರ‍್ಯಾರು ಬಂದಿದ್ದಾರೆ ಎಂದು ಗುರುತು ಹಾಕಿಕೊಳ್ಳತೊಡಗಿದಳು. ಆಕೆಗೆ ಅಷ್ಟು ವಯಸ್ಸಾಗಿದ್ದುದರಿಂದ ಆಕೆ ನಮಗೇನು ಗೈಡ್ ಮಾಡಬಹುದು, ಅದೆಷ್ಟು ಓಡಾಡಬಹುದು ಎನ್ನಿಸಿತ್ತು. ಆದರೆ ಆಕೆ ನನ್ನ ಅನಿಸಿಕೆಯನ್ನೇ ತಿರುಗಾಮುರುಗಾ ಮಾಡಿದ್ದಳು. ಆಕೆಯೊಂದಿಗೆ ವಿಂಡ್ಸರ್ ಕ್ಯಾಸಲ್‌ನಲ್ಲಿ ಬಿರಬಿರನೆ ಹೆಜ್ಜೆ ಹಾಕುವುದು ನಮಗೇ ಕಷ್ಟವಾಗುವಂತಿತ್ತು. ನಾವು ಏದುಸಿರು ಬಿಡುತ್ತಿದ್ದರೆ ಆಕೆ ಮೆಟ್ಟಿಲುಗಳನ್ನು ಸರಾಗವಾಗಿ ಹತ್ತಿಬಿಡುತ್ತಿದ್ದಳು. ಇಡೀ ದಿನ ಅಡೆ ತಡೆಯಿಲ್ಲದೆ, ಕೆಲವೊಮ್ಮೆ ಬೇಸರ ಹುಟ್ಟಿಸುವಂತೆ ಸತತವಾಗಿ ಮಾತನಾಡಿದ್ದಳು.
ಆ ದಿನದ ಮೊದಲ ಭೇಟಿ ಇದ್ದದ್ದು ವಿಂಡ್ಸರ್ ಕ್ಯಾಸಲ್‌ಗೆ. ಈಗಲೂ ಬ್ರಿಟನ್ನಿನ ರಾಣಿ ಮತ್ತು ರಾಜಕುಮಾರರು ವಾಸಿಸುವ ಅರಮನೆಯೂ ಅದಾಗಿದೆ. ಮೊದಲಿನಿಂದಲೂ ಅರಮನೆಗಳ ಬಗೆಗೆ ನನ್ನ ವಿಚಿತ್ರ ತಾತ್ಸಾರವಿದೆ. ಅರಮನೆಗಳು ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಿ ನಿರ್ಮಿಸಿದ್ದರೂ ಅವು ಸಾರ್ವಜನಿಕ ಬಳಕೆಗಾಗಿ ಇರಲಿಲ್ಲ. ಯಾರೋ ಕೆಲವರ ಸುಖ ಸಂತೋಷಕ್ಕಾಗಿ ನಿರ್ಮಿಸಿಕೊಂಡವು ಅವು ಎನ್ನುವುದರ ಜೊತೆಗೆ ಅವುಗಳ ನಿರ್ಮಾಣದ ಹಿಂದೆ ಕ್ರೌರ್ಯ, ಹಿಂಸೆ, ದುರಾಸೆ, ದಬ್ಬಾಳಿಕೆ ಮತ್ತು ಶೋಷಣೆಗಳ ಮಹಾಪೂರವೇ ಇರುತ್ತದೆ. ಹಾಗಾಗಿ ವಿಂಡ್ಸರ್ ಬಗೆಗೆ ಹೆಚ್ಚಿಗೆ ಹೇಳದೆ ನಮ್ಮ ಮುಂದಿನ ಭೇಟಿಯ ಸ್ಥಳವಾದ ‘ಸ್ನಾನದ ಮನೆ’ಗೆ ನೇರ ಹೋಗುತ್ತೇನೆ.

ಬಾತ್ ನಗರ

ಒಂದು ಸ್ನಾನದ ಮನೆಯ ಸುತ್ತಲೇ ಒಂದು ನಗರ ಬೆಳೆದಿದೆಯೆಂಬುದು ವಿಶೇಷ ಸಂಗತಿ. ಅದು ಅಂತಿಂಥ ಸ್ನಾನದ ಮನೆಯಲ್ಲಾ- ರೋಮನ್ನರು ನಿರ್ಮಿಸಿದ ಸ್ನಾನದ ಮನೆ! ಅದನ್ನು ನಿರ್ಮಿಸಿ ಎರಡು ಸಾವಿರ ವರ್ಷಗಳಾಗಿವೆ. ಅದರ ಸುತ್ತ ನಿರ್ಮಾಣಗೊಂಡ ನಗರದ ಹೆಸರು ಬಾತ್- ಅರ್ಥಾತ್ ಸ್ನಾನದ ಮನೆ. ಆ ನಗರವನ್ನು ಪುಷ್ಪ ನಗರಿಯೆಂದೂ ಸಹ ಕರೆಯಬಹುದು. ನೀವು ನಗರ ಪ್ರವೇಶಿಸುತ್ತಿರುವಂತೆ ಎಲ್ಲೆಲ್ಲೂ ಹೂಸಸಿಗಳು, ಹೂ ಬುಟ್ಟಿಗಳು ಕಾಣತೊಡಗುತ್ತವೆ. ಮನೆಗಳ ಮಚ್ಚಿನ ಮೇಲೆ ಹೂ ಸಸಿಗಳು, ಬುಟ್ಟಿಗಳಲ್ಲಿ ಹೂಗಳು- ಸ್ಥಳವಿದ್ದ ಕಡೆಯಲ್ಲೆಲ್ಲಾ ಹೂಗಳಿರುತ್ತವೆ. ನಮ್ಮ ಗೈಡಜ್ಜಿ ಹೇಳಿದಂತೆ ಪ್ರತಿವರ್ಷ ನಡೆಯುತ್ತಿದ್ದ ‘ಪುಷ್ಪ ನಗರ’ ಸ್ಪರ್ಧೆಯಲ್ಲಿ ಯಾವಾಗಲೂ ಬಾತ್ ನಗರವೇ ಬಹುಮಾನ ಪಡೆಯುತ್ತಿದ್ದುದರಿಂದ ಬೇರೆ ನಗರಗಳಿಗೂ ಬಹುಮಾನ ಸಿಗಲೆಂದು ಒಂದಷ್ಟು ವರ್ಷ ಬಾತ್ ನಗರಕ್ಕೆ ಸ್ಪರ್ಧೆಗೆ ಪ್ರವೇಶ ನೀಡದೆ ಹೊರಗಿರಿಸಿದ್ದರಂತೆ. ಖ್ಯಾತ ಇಂಗ್ಲಿಷ್ ಲೇಖಕಿ ಜೇನ್ ಆಸ್ಟೆನ್ ಸಹ ಆ ನಗರದಲ್ಲಿ 1801ರಿಂದ 1805ರವರೆಗೆ ವಾಸಿಸಿದ್ದಳಂತೆ. ಆ ಮನೆ ಈಗಲೂ ಇದ್ದು ಅದರ ಮೇಲೆ ಅದನ್ನು ತಿಳಿಸುವ ಫಲಕವನ್ನೂ ಹಾಕಿದೆ.
ಬಾತ್ ನಗರವು ಲಂಡನ್ನಿನ ಪಶ್ಚಿಮಕ್ಕೆ 156 ಕಿ.ಮೀ.ಗಳ ದೂರದಲ್ಲಿದೆ. ರಾಣಿ ಒಂದನೇ ಎಲಿಜಬೆತ್ 1590ರಲ್ಲೇ ಅದಕ್ಕೆ ನಗರದ ಸ್ಥಾನಮಾನ ನೀಡಿದ್ದಾಳೆ. ಬಾತ್ ನಗರವನ್ನು 1982ರಲ್ಲಿ ‘ವಿಶ್ವ ಪರಂಪರಾ ತಾಣ’ಗಳ ಪಟ್ಟಿಗೆ ಸೇರಿಸಲಾಗಿದೆ.
ರೋಮನ್ನರು ಕ್ರಿಸ್ತ ಶಕೆಯ ಆರಂಭದಲ್ಲಿ ನಿರ್ಮಿಸಿದ ಬಿಸಿ ನೀರ ಸ್ನಾನದ ಕೊಳ

ಆ ಸ್ಥಳದಲ್ಲಿ ಖನಿಜ ಬಿಸಿನೀರ ಬುಗ್ಗೆಯಿದೆ. ಆ ಬುಗ್ಗೆಯೇ ಆ ನಗರದ ನಿರ್ಮಾಣಕ್ಕೆ ಕಾರಣವಾಗಿದೆ. ಅದರ ಬಗೆಗಿನ ಐತಿಹ್ಯದ ಉಲ್ಲೇಖಗಳು ರೋಮನ್ನರು ಅಲ್ಲಿ ಕಾಲಿರಿಸುವ ಮೊದಲೇ ಇತ್ತು. ನೆನಪಿನ ಎಲ್ಲೆಗೂ ಹಿಂದಿನ ಕಂಚಿನ ಯುಗದಲ್ಲಿನ ಸೆಲ್ಟಿಕ್ ಜನಾಂಗದ ರಾಜನೊಬ್ಬನಿಗೆ ಬ್ಲಾದುದ್ ಎಂಬ ರಾಜಕುಮಾರನಿರುತ್ತಾನೆ (ಆ ರಾಜಕುಮಾರ ಆ ಬಿಸಿನೀರ ಬುಗ್ಗೆಗಳನ್ನು ಕಂಡುಹಿಡಿದ ವರ್ಷವನ್ನು ಕ್ರಿ.ಪೂ. 863 ಎಂದು ಬ್ಲಾದುದ್‌ನ ವಿಗ್ರಹದ ಕೆಳಗೆ 1690ರಲ್ಲಿ ರಚಿಸಿರುವ ಶಿಲಾಫಲಕ ತಿಳಿಸುತ್ತದೆ). ಆ ರಾಜಕುಮಾರನ ದುರದೃಷ್ಟವೆನ್ನುವಂತೆ ಅವನಿಗೆ ಕುಷ್ಠರೋಗ ಬರುತ್ತದೆ. ತಂದೆಯಾದ ರಾಜನೇ ತನ್ನ ಮಗನನ್ನು ಆ ಕಾರಣದಿಂದಾಗಿ ರಾಜ್ಯದಿಂದ ಬಹಿಷ್ಕರಿಸುತ್ತಾನೆ. ಹೊರಗೆ ಕಾಡಿನಲ್ಲಿರುವ ಕುಷ್ಠರೋಗಿ ರಾಜಕುಮಾರ ತನ್ನ ಜೀವನೋಪಾಯಕ್ಕೆ ಬೇರೆ ದಾರಿ ತೋಚದೆ ಹಂದಿಗಳನ್ನು ಮೇಯಿಸಿಕೊಂಡಿರುತ್ತಾನೆ. ಅವನಿಂದ ಆ ಹಂದಿಗಳಿಗೂ ಕುಷ್ಠರೋಗ ಹರಡುತ್ತದೆ. ಆ ಕಾಡಿನಲ್ಲಿ ಬಿಸಿ ಮತ್ತು ಹೊಗೆಯಾಡುವ ಕೆಸರಿರುವ ಸ್ಥಳವೊಂದಿರುತ್ತದೆ. ಆ ಹಂದಿಗಳಲ್ಲಿ ಕೆಲವು ಆ ಬಿಸಿ ಮತ್ತು ಹೊಗೆಯಾಡುವ ಕೆಸರಿನಲ್ಲಿ ಹೊರಳಾಡಿ ಅವುಗಳ ರೋಗ ವಾಸಿಯಾಗಿರುವುದನ್ನು ಕಂಡು ಅಚ್ಚರಿಗೊಳ್ಳುವ ರಾಜಕುಮಾರ ಬ್ಲಾದುದ್ ತಾನೂ ಸಹ ಆ ಕೆಸರಿನಲ್ಲಿ ಹೊರಳಾಡುತ್ತಾನೆ. ಆಶ್ಚರ್ಯವೆಂಬಂತೆ ಅವನ ಕುಷ್ಠರೋಗ ವಾಸಿಯಾಗುತ್ತದೆ. ರಾಜ್ಯಕ್ಕೆ ಹಿಂದಿರುಗುವ ಬ್ಲಾದುದ್‌ನನ್ನು ತನ್ನ ತಂದೆ ಸ್ವಾಗತಿಸುತ್ತಾನೆ ಹಾಗೂ ಆತನ ನಂತರ ಬ್ಲಾದುದ್‌ನೇ ಆ ರಾಜ್ಯದ ರಾಜನಾಗುತ್ತಾನೆ. ತನ್ನ ರೋಗ ವಾಸಿಮಾಡಿದ ಬಿಸಿ ನೀರಿನ ಕೆಸರಿರುವ ಸ್ಥಳದಲ್ಲಿ ಶಮನ ದೇವತೆ ಸುಲಿಸ್‌ಳ ಒಂದು ದೇವಾಲಯವನ್ನು ಹಾಗೂ ಅದೇ ಸ್ಥಳದಲ್ಲಿ ಒಂದು ಗ್ರಾಮವನ್ನೂ ಸಹ ನಿರ್ಮಿಸುತ್ತಾನೆ. ಅದೇ ಮುಂದೆ ಬಾತ್ ನಗರವಾಗಿದೆಯಂತೆ. ಆ ಸ್ಥಳದಲ್ಲಿ ಪುರಾತನ ಮರದ ದೇವಾಲಯದ ಅವಶೇಷಗಳೂ ದೊರೆತಿವೆ. ಆ ನಗರದಲ್ಲಿ ಈಗಲೂ ವಿಶೇಷ ಸಂದರ್ಭಗಳಲ್ಲಿ ನಗರದ ನಿರ್ಮಾಣಕ್ಕೆ ಕಾರಣನಾದ ರಾಜಕುಮಾರ ಬ್ಲಾದುದ್‌ನ ನೆನಪಿಗಾಗಿ ಊರೆಲ್ಲಾ ಹಂದಿಗಳ ಪ್ರತಿಕೃತಿಗಳನ್ನು ಇರಿಸುತ್ತಾರೆ. ರೋಮನ್ ಬಾತ್‌ನ ಕಟ್ಟಡದಲ್ಲಿ ರಾಜ ಬ್ಲಾದುದ್‌ನ ಶಿಲ್ಪವೂ ಇದೆ.

ರೋಮನ್ ಬಾತ್‌ನಲ್ಲಿನ ಬ್ಲಾದುದ್ ರಾಜನ ಶಿಲ್ಪ.

ಬಾತ್ ನಗರವು ಏಳು ಬೆಟ್ಟಗಳಿಂದ ಆವೃತವಾಗಿದ್ದು ಆ ಬೆಟ್ಟಗಳಲ್ಲಿ ಕಂಚಿನ ಮತ್ತು ಕಬ್ಬಿಣದ ಯುಗಗಳಲ್ಲಿ ಅಲ್ಲಿ ಜನರು ವಾಸಿಸುತ್ತಿದ್ದ ಹಲವಾರು ಪುರಾವೆಗಳು ದೊರೆತಿವೆ. ಹತ್ತಿರದ ಸಾಲ್ಸ್‌ಬರಿ ಬೆಟ್ಟಗಳಲ್ಲಿ ಮತ್ತು ಬಾತಾಂಪ್ಟನ್‌ನಲ್ಲಿ ಪುರಾತನ ಕೋಟೆಗಳ ಕುರುಹುಗಳಿವೆ.
ಕ್ರಿ.ಪೂ. 55ರಲ್ಲೇ ರೋಮ್‌ನ ಜೂಲಿಯಸ್ ಸೀಸರ್ ಬ್ರಿಟಿಶ್ ದ್ವೀಪಗಳ ಮೇಲೆ ಆಕ್ರಮಣ ನಡೆಸುವ ಪ್ರಯತ್ನ ನಡೆಸಿದ್ದರೂ ಅದು ಸಾಕಾರಗೊಂಡದ್ದು ಕ್ರಿ.ಪೂ. 43ರಲ್ಲಿ ಕ್ಲಾಡಿಯಸ್‌ನ ಆಕ್ರಮಣದೊಂದಿಗೆ. ಆ ಸಮಯದಲ್ಲಿ ಈಗಿನ ಉತ್ತರ ಆಫ್ರಿಕಾ, ಯೂರೋಪ್ ಹಾಗೂ ಏಷಿಯಾದ ಹಲವಾರು ಭಾಗಗಳು ರೋಮನ್ನರ ಆಳ್ವಿಕೆಯಡಿಯಿತ್ತು.
ಬ್ರಿಟಿಶ್ ದ್ವೀಪಗಳಲ್ಲಿ ಲಂಡನ್‌ನಲ್ಲಿ ಸುವ್ಯವಸ್ಥಿತ ನದಿಯಾನ ವ್ಯವಸ್ಥೆ ಇದ್ದುದರಿಂದ ಅದನ್ನು ರೋಮನ್ನರು ಕೇಂದ್ರವಾಗಿರಿಸಿಕೊಂಡರು. ಇಂತಹ ನದಿಯಾನದ ಸಂದರ್ಭಗಳಲ್ಲಿಯೇ ಅವರು ಏವಾನ್ ನದಿಯ ತಿರುವಿನಲ್ಲಿದ್ದ ಈಗಿನ ಬಾತ್‌ನ ಈ ಬಿಸಿನೀರ ಬುಗ್ಗೆಯನ್ನು ಕಂಡುಕೊಂಡಿರಬೇಕು. ಸುಲ್ ಅಥವಾ ಸುಲಿಸ್ ದೇವತೆಯ ದೇವಾಲಯವಿದ್ದ ಆ ಸ್ಥಳವನ್ನು ಅಕ್ವೇ ಸುಲಿಸ್ ಎಂಬ ಲ್ಯಾಟಿನ್ ಹೆಸರಿನಿಂದ ಕರೆದರು. ಅಲ್ಲಿ ರೋಮನ್ನರು ಸ್ಥಾಪಿಸಿದ್ದ ಮೂಲ ಸುಲಿಸ್-ಮಿನರ್ವಾ ದೇವತೆಯ ಶಿರ ಈಗಲೂ ಮ್ಯೂಸಿಯಂನಲ್ಲಿದೆ. ಬಳಲಿದ ರೋಮನ್ ಸೈನಿಕರಿಗೆ ಆ ಬಿಸಿನೀರ ಬುಗ್ಗೆಯಲ್ಲಿನ ಸ್ನಾನ ಅತ್ಯಂತ ಸಂತೋಷ ಮತ್ತು ಆರಾಮ ಕೊಡುತ್ತಿದ್ದಿರಬಹುದು. ಅಲ್ಲದೆ ರೋಮನ್ನರು ಸ್ನಾನ ಪ್ರಿಯರು. ಅವರ ಸ್ನಾನ ಸಮುದಾಯ ಸ್ನಾನದ ಮನೆಗಳಲ್ಲಿ ನಡೆಯುತ್ತಿತ್ತು ಹಾಗೂ ಅಲ್ಲಿಯೇ ಅವರ ಕಲೆ, ಸಾಹಿತ್ಯ ಮತ್ತು ರಾಜಕೀಯ ಚರ್ಚೆಗಳೂ ನಡೆಯುತ್ತಿದ್ದವು. ಅಷ್ಟೇ ಅಲ್ಲದೆ ನಿತ್ಯದ ಗೊಡ್ಡು ಹರಟೆಗಳೂ ಅಲ್ಲಿಯೇ ನಡೆಯುತ್ತಿದ್ದವು.


ದೇವಾಲಯದಲ್ಲಿದ್ದ ಸುಲಿಸ್-ಮಿನರ್ವಾ ಶಮನ ದೇವತೆಯ ಶಿರೋಭಾಗದ ಎದುರಿನ ಮತ್ತು ಪಾರ್ಶ್ವ ನೋಟ
ರೋಮನ್ನರು ಆ ಬಿಸಿನೀರ ಬುಗ್ಗೆಯ ಸುತ್ತ ಬೃಹತ್ ದೇವಾಲಯಗಳ ಮತ್ತು ಸ್ನಾನದ ಮನೆಗಳ ಸಂಕೀರ್ಣಗಳನ್ನು ನಿರ್ಮಿಸಿದರು. ಸ್ಥಳೀಯರನ್ನು ಎದುರು ಹಾಕಿಕೊಳ್ಳದಂತೆ ಅವರ ಸೆಲ್ಟಿಕ್ ದೇವತೆಯಾದ ಸುಲಿಸ್‌ಳ ಜೊತೆಯಲ್ಲಿಯೇ ತಮ್ಮ ವಿವೇಕದ ಮತ್ತು ಶಮನದ ದೇವತೆಯಾದ ಮಿನರ್ವಾಳನ್ನೂ ಸಹ ಸ್ಥಾಪಿಸಿದರು. ಅದು ಸುಲ್-ಮಿನರ್ವಾ ದೇವಾಲಯವಾಯಿತು. ಇಂದಿಗೂ ಅವರು ನಿರ್ಮಿಸಿದ ಸ್ನಾನದ ಮನೆ, ಕಟ್ಟಡಗಳ ಅವಶೇಷಗಳು, ನಾಣ್ಯಗಳು ಮುಂತಾದವುಗಳನ್ನು ಅಲ್ಲಿನ ಮ್ಯೂಸಿಯಂನಲ್ಲಿ ಕಾಣಬಹುದು. ಆ ಸ್ನಾನದ ಕೊಳಗಳಿಗೆ ನೀರುಣಿಸುತ್ತಿದ್ದ ನೀರಿನ ಕೊಳವೆ/ಕಾಲುವೆಗಳು ಇಂದಿಗೂ ಕಾರ್ಯನಿರ್ವಹಿಸುತ್ತಿವೆ.



ರೋಮನ್ನರು ನಿರ್ಮಿಸಿದ್ದ ಗಂಧಕಯುಕ್ತ ಬಿಸಿನೀರ ಬುಗ್ಗೆ ಹರಿವ ಕಾಲುವೆ ಈಗಲೂ ಕಾರ್ಯ ನಿರ್ವಹಿಸುತ್ತಿದೆ.
ರೋಮನ್ನರ ‘ಸ್ನಾನದ ಮನೆ’ ಬೃಹತ್ ಸಂಕೀರ್ಣವಾಗಿದ್ದು ಅಲ್ಲಿ ದೊಡ್ಡ ಬಿಸಿನೀರ ಸ್ನಾನದ ಕೊಳದ ಜೊತೆಗೆ ದೇವಾಲಯವಿದ್ದ ಸ್ಥಳದಲ್ಲಿ ಒಂದು ಪವಿತ್ರ ಕೊಳವಿದೆ. ಬಿಸಿನೀರ ಕೊಳದ ಪಕ್ಕದಲ್ಲಿ ಬಿಸಿನೀರ ಸ್ನಾನ ಬೇಡದವರಿಗೆ ಸ್ನಾನ ಮಾಡಲು ಮತ್ತು ಈಜಲು ವರ್ತುಲಾಕಾರದ ತಣ್ಣೀರ ಕೊಳವಿದೆ. ಅದರ ಪಕ್ಕದ ಕೋಣೆಯ ನೆಲದ ಕೆಳಭಾಗ ಟೊಳ್ಳಾಗಿದ್ದು ಆ ಟೊಳ್ಳಿನಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಬಿಸಿನೀರನ್ನು ಹರಿಸುತ್ತಿದ್ದರು. ಅದರಿಂದಾಗಿ ಆ ಕೋಣೆ ಬಿಸಿ ಹಬೆಯಿಂದಾಗಿ ಬ್ರಿಟನ್ನಿನ ಚಳಿಗೆ ಸದಾ ಬೆಚ್ಚಗಿರುತ್ತಿತ್ತು.
ದೊರಕಿರುವ ಸುಲಿಸ್-ಮಿನರ್ವಾ ಶಮನ ದೇವತೆಯ ದೇವಾಲಯದ ಅವಶೇಷಗಳು

ದೊರಕಿರುವ ಅವಶೇಷಗಳಿಂದ ಸುಲಿಸ್-ಮಿನರ್ವಾ ಶಮನ ದೇವತೆಯ ದೇವಾಲಯ ಹೀಗಿತ್ತೆಂದು ತೋರಿಸುವ ಕಂಪ್ಯೂಟರ್ ಚಿತ್ರ.

ಅಲ್ಲಿ ದೊರೆತಿರುವ ನಾಣ್ಯಗಳಿಂದ ಅಲ್ಲಿನ ಸ್ನಾನದ ಮನೆಗಳನ್ನು ನೀರೋ ಚಕ್ರವರ್ತಿಯ (ಕ್ರಿ.ಶ. 56-69) ಸಮಯದಲ್ಲಿ ನಿರ್ಮಿಸಲಾಗಿದೆಯೆಂದು ನಿರ್ಧರಿಸಲಾಗಿದೆ. ರೋಮನ್ನರು ಕ್ರಿ.ಶ. ಸುಮಾರು 410ರಲ್ಲಿ ರೋಮ್‌ನ ಆಂತರಿಕ ಸಮಸ್ಯೆಗಳಿಂದಾಗಿ ಬ್ರಿಟಿಶ್ ದ್ವೀಪಗಳಿಂದ ವಾಪಸ್ಸು ಹೊರಟರು. ರೋಮನ್ನರ ಅತ್ಯಂತ ಇಷ್ಟದ ಸ್ಥಳವಾಗಿದ್ದ ಬಾತ್ ಅವನತಿಗೀಡಾಯಿತು ಹಾಗೂ ಸೆಲ್ಟರು, ಡೇನರು ಮತ್ತು ಸ್ಯಾಕ್ಸನ್ನರ ನಡುವಿನ ಹೋರಾಟಗಳಿಂದಾಗಿ ಬ್ರಿಟನ್ ‘ಅಂಧಕಾರದ ಯುಗ’ವನ್ನು ಪ್ರವೇಶಿಸಿತು. ಸುಮಾರು ಒಂದು ಸಾವಿರ ವರ್ಷಗಳ ಕಾಲ ಅಕ್ವೇ ಸುಲಿಸ್ ಜನರ ಗಮನದಿಂದ ದೂರ ಸರಿದಿತ್ತು. ಹದಿನಾಲ್ಕು ಮತ್ತು ಹದಿನೈದನೇ ಶತಮಾನದಲ್ಲಿ ಟ್ಯೂಡರ್ ಮತ್ತು ಸ್ಟುವಾರ್ಟ್ ಅವಧಿಯಲ್ಲಿ ಬಾತ್‌ನ ಅವಶೇಷಗಳ ದುರಸ್ತಿ ಕಾರ್ಯ ನಡೆದು ಪುನಃ ಅದು ಜನಪ್ರಿಯಗೊಳ್ಳತೊಡಗಿತು. ಅಲ್ಲಿ ಸ್ನಾನ ಮಾಡಿದರೆ ಕಾಯಿಲೆಗಳು ವಾಸಿಯಾಗುವವೆಂಬ ಪ್ರಾಚೀನ ನಂಬಿಕೆಯಿಂದ ರಾಜಮನೆತನದವರೂ ಅಲ್ಲಿಗೆ ಸ್ನಾನ ಮಾಡಲು ಬರತೊಡಗಿದರು. ಮೊದಲನೇ ಜೇಮ್ಸ್‌ನ ಪತ್ನಿಯಾದ ಡೆನ್‌ಮಾರ್ಕ್‌ನ ಆನ್ ತನ್ನ ಕಾಯಿಲೆಯ ಚಿಕಿತ್ಸೆಗೆಂದು 1616ರಲ್ಲಿ ಬಾತ್‌ನಲ್ಲಿ ಸ್ನಾನಕ್ಕೆಂದು ಬಂದಿದ್ದಳು. ಎರಡನೇ ಚಾರ್ಲಸ್ ನ ವೈದ್ಯರು ಬಾತ್‌ನ ನೀರನ್ನು ಕುಡಿಯುವುದರಿಂದ ಹಾಗೂ ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಹಲವರು ಕಾಯಿಲೆಗಳು ವಾಸಿಯಾಗುವವೆಂದು ಹೇಳಿದ್ದರು. ಅವರ ಸಲಹೆಯ ಮೇರೆಗೆ ಎರಡನೇ ಜೇಮ್ಸ್‌ನ ಪತ್ನಿ ಮೊಡೇನಾದ ಮೇರಿ ತನಗೆ ಮಕ್ಕಳಿಲ್ಲದಿದ್ದುದರಿಂದ ಮಕ್ಕಳಾಗಬಹುದೆಂಬ ನಂಬಿಕೆಯಿಂದ 1687ರಲ್ಲಿ ಬಾತ್‌ಗೆ ಭೇಟಿ ನೀಡಿದ್ದಳು. ಆನಂತರ ಆಕೆ ಗರ್ಭ ಸಹ ಧರಿಸಿದಳಂತೆ! ಮರುವರ್ಷ ಅಲ್ಲಿಗೆ ಭೇಟಿ ನೀಡಿದ ಖ್ಯಾತ ಲೇಖಕ ಸ್ಯಾಮ್ಯುಯೆಲ್ ಪೆಪೀಸ್ ಅಲ್ಲಿನ ಬಿಸಿನೀರಿನ ಸ್ನಾನದ ಅನುಭವ ಅದ್ಭುತವಾಗಿತ್ತೆಂದು ವರ್ಣಿಸಿದ್ದರೂ ‘ಅಷ್ಟು ಜನ ಒಟ್ಟಿಗೇ ಸ್ನಾನ ಮಾಡುವ ಆ ನೀರು ಹೇಗೆ ಶುದ್ಧವಾಗಿರಲು ಸಾಧ್ಯ?’ ಎಂದು ಬರೆದಿದ್ದಾನೆ.
ಈಗ ಸಧ್ಯಕ್ಕೆ ರೋಮನ್ ಸ್ನಾನದ ಮನೆಗಳನ್ನು ನಾವು ನೋಡಬಹುದಷ್ಟೇ ಹೊರತು ಸ್ನಾನ ಮಾಡಲು ಸಾಧ್ಯವಿಲ್ಲ. ನೀರನ್ನು ಮುಟ್ಟಬೇಡಿ ಎಂಬ ಫಲಕಗಳಿವೆ. ‘ಮುಟ್ಟಿದರೆ ದಂಡ ಹಾಕುತ್ತಾರೆ’ ಎಂದು ನಮ್ಮ ಗೈಡಜ್ಜಿ ಹೇಳಿದ್ದಳು.
ಸುಮಾರು ಕ್ರಿ.ಶ. 675ರಲ್ಲಿ ಬಾತ್‌ಗೆ ಕ್ರೈಸ್ತ ಮತ ಪ್ರವೇಶಿಸಿತು. ರೋಮನ್ ಬಾತ್‌ನ ಎದುರುಗಡೆಯೇ ಅದ್ಭುತ ಸೇಂಟ್ ಪೀಟರ್ ಚರ್ಚ್ ಇದೆ. ಅದರ ನಿರ್ಮಾಣದಲ್ಲಿ ರೋಮನ್ ಬಾತ್‌ಗಳ ಅವಶೇಷಗಳ ವಸ್ತುಗಳನ್ನು ಬಳಸಲಾಗಿದೆ ಎನ್ನುತ್ತಾರೆ. 2009ರಲ್ಲಿ ಅದರ 1100ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ. ಅದೇ ಚರ್ಚ್‌ನಲ್ಲಿಯೇ ಕಿಂಗ್ ಆಲ್ಫ್ರೆಡ್ ದ ಗ್ರೇಟ್‌ನ ವಂಶಸ್ಥನಾದ ಎಡ್ಗರ್‌ನನ್ನು ಕ್ರಿ.ಶ. 973ರಲ್ಲಿ ಸಮಸ್ತ ಇಂಗ್ಲೆಂಡ್‌ನ ಮೊದಲ ದೊರೆಯೆಂದು ಪಟ್ಟಾಭಿಷೇಕ ಮಾಡಲಾಗಿದೆ.
ಬಾತ್ ನಗರದ ರೋಮನ್ ಸ್ನಾನದ ಮನೆಗಳು ಹಾಗೂ ಇಲ್ಲಿನ ಜಾರ್ಜಿಯನ್ ವಾಸ್ತುಶಿಲ್ಪದ ಕಟ್ಟಡಗಳು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಜಾರ್ಜಿಯನ್ ಅವಧಿಯ ಬಾತ್ ನಗರವನ್ನು ತನ್ನ ಕಾದಂಬರಿಗಳಲ್ಲಿ ಈ ನಗರದಲ್ಲಿ 1801ರಿಂದ 1806ರವರೆಗೆ ವಾಸಿಸಿದ್ದ ಖ್ಯಾತ ಲೇಖಕಿ ಜೇನ್ ಆಸ್ಟಿನ್ ವರ್ಣಿಸಿದ್ದಾಳೆ. 2010ರ ಒಲಿಂಪಿಕ್ಸ್‌ನಲ್ಲಿ ಏಕೈಕ ಚಿನ್ನದ ಪದಕ ಪಡೆದ ಬ್ರಿಟಿಶ್ ಅಥ್ಲೀಟ್ ಅಮಿ ವಿಲಿಯಮ್ಸ್ ಬಾತ್ ನಗರದವಳಾಗಿದ್ದಾಳೆ.

ಮಾಹಿತಿಗಾಗಿ:

ರೋಮನ್ನರ ಸಮುದಾಯ ಶೌಚ!

ರೋಮನ್ನರ ಸ್ನಾನವಷ್ಟೇ ಅಲ್ಲ, ಅವರ ಪಾಯಖಾನೆಗಳೂ ಸಹ ಸಮುದಾಯ ಪಾಯಖಾನೆಗಳಾಗಿರುತ್ತಿದ್ದವು! ಅಂತಹ ಪಾಯಖಾನೆಗಳು ಬಾತ್‌ನ ಅವಶೇಷಗಳಲ್ಲಿ ಸಿಕ್ಕಿರದಿದ್ದರೂ ಅವರ ಸಮುದಾಯ ಮತ್ತು ಸಾರ್ವಜನಿಕ ಪಾಯಖಾನೆಗಳು ಯೂರೋಪ್‌ನಲ್ಲಿ ಬೇಕಾದಷ್ಟು ಕಡೆ ಸಿಕ್ಕಿವೆ (ಚಿತ್ರ ನೋಡಿ).


ರೋಮ್‌ನ ಬಳಿಯ ಆಸ್ಟಿಯಾದಲ್ಲಿನ ರೋಮನ್ ಸಮುದಾಯ ಪಾಯಖಾನೆಗಳು


ರೋಮನ್ನರ ಸಮುದಾಯ ಪಾಯಖಾನೆಗಳು ಹೀಗಿದ್ದುವೆಂದು ತಿಳಿಸುವ ಕಲಾವಿದನ ಕಲ್ಪನೆಯ ಚಿತ್ರ

ಮೊದಲ ಶತಮಾನದ ರೋಮ್ ನಗರದಲ್ಲಿ ನೂರಕ್ಕೂ ಹೆಚ್ಚು ಸಾರ್ವಜನಿಕ ಪಾಯಖಾನೆಗಳು ಇದ್ದುವಂತೆ. ಅವು ಬೆಂಚುಗಳಂತಿದ್ದು ಮೇಲೆ ದೊಡ್ಡ ರಂಧ್ರವಿರುತ್ತದೆ ಹಾಗೂ ಮುಂಭಾಗ ತೆರೆದಿರುತ್ತದೆ. ಆ ಬೆಂಚುಗಳ ಕೆಳಗೆ ಹಾಗೂ ಮುಂಭಾಗದಲ್ಲಿ ನೀರು ಹರಿಯುತ್ತಿತ್ತೆಂದು ದಾಖಲೆಗಳು ತಿಳಿಸುತ್ತವೆ. ಸಾಮಾನ್ಯವಾಗಿ ರೋಮನ್ನರು ಯಾವುದೇ ಒಳ ಉಡುಪು ಧರಿಸದೇ ಮೇಲೆ ಗೌನಿನಂತಹ ಧಿರಿಸನ್ನು ಧರಿಸುತ್ತಿದ್ದುದರಿಂದ ಹಾಗೆಯೇ ಅದನ್ನು ಮೇಲಕ್ಕೆತ್ತಿ ಕೂತು ತಮ್ಮ ಶೌಚಕಾರ್ಯ ಮುಗಿಸುತ್ತಿದ್ದರು. ಮತ್ತೊಂದು ವಿಶೇಷವೆಂದರೆ ತೊಳೆದುಕೊಳ್ಳಲು ಕೋಲಿಗೆ ಸ್ಪಂಜಿನಂತಹ ವಸ್ತು ಕಟ್ಟಿದ್ದು ಅದನ್ನು ಮುಂದೆ ಹರಿಯುತ್ತಿದ್ದ ನೀರಿನಲ್ಲಿ ಅದ್ದಿ ತಾವು ಕುಳಿತಿದ್ದ ಸ್ಥಳದಲ್ಲಿಯೇ ‘ಶುಚಿ’ಗೊಳಿಸಿಕೊಂಡು ಆ ಕೋಲನ್ನು ಮತ್ತೊಬ್ಬರ ಬಳಕೆಗಾಗಿ ಅಲ್ಲಿಯೇ ಬಿಡುತ್ತಿದ್ದರಂತೆ! ರೋಮ್‌ನಲ್ಲಿದ್ದ ಪಾಯಖಾನೆಗಳ ಹಾಸುಗಳನ್ನು ಅಮೃತಶಿಲೆಯಿಂದ ನಿರ್ಮಿಸಲಾಗುತ್ತಿತ್ತು ಹಾಗೂ ಆ ಕೋಣೆಯ ಗೋಡೆಯ ಮೇಲೆ ಗ್ರೀಕ್ ಪುರಾಣದ ಕತೆಗಳನ್ನು ಹೇಳುವ ಚಿತ್ರಗಳಿರುತ್ತಿದ್ದವು. ಆ ಎಲ್ಲಾ ಶೌಚಾಲಯಗಳಲ್ಲಿ ಅತ್ಯುತ್ತಮ ಹರಿಯುವ ನೀರಿನ ವ್ಯವಸ್ಥೆ ಇದ್ದು ಅವು ಸ್ವಚ್ಛವಾಗಿರುತ್ತಿದ್ದುವಂತೆ. ಅವರ ಒಳಚರಂಡಿ ವ್ಯವಸ್ಥೆಯನ್ನು ಕ್ರಿ.ಶ. ಮೊದಲ ಶತಮಾನದಲ್ಲಿದ್ದ ಖ್ಯಾತ ರೋಮನ್ ವಿಜ್ಞಾನಿ, ಚರಿತ್ರಕಾರ ಹಾಗೂ ಲೇಖಕ ಪ್ಲೈನಿ ಮುಕ್ತವಾಗಿ ಶ್ಲಾಘಿಸಿದ್ದಾನೆ.
ಚಿತ್ರ-ಲೇಖನ:ಡಾ.ಜೆ.ಬಾಲಕೃಷ್ಣ